ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸರಿಯಾಗಿ ಅರ್ಥಮಾಡಿಕೊಳ್ಳುವುದು ಯಾಕಷ್ಟು ಪ್ರಾಮುಖ್ಯ?

ಸರಿಯಾಗಿ ಅರ್ಥಮಾಡಿಕೊಳ್ಳುವುದು ಯಾಕಷ್ಟು ಪ್ರಾಮುಖ್ಯ?

ಒಂದು ಕಾರ್ಖಾನೆಯಿಂದ ಹೊಗೆ ಹೋಗುತ್ತಿರುವುದನ್ನು ನೋಡಿದಾಗ ಒಬ್ಬ ಪುಟ್ಟ ಹುಡುಗಿಗೆ ಆ ಹೊಗೆ ಮೋಡದಂತೆ ಕಾಣಿಸಿತು. ಅಷ್ಟಕ್ಕೇ ಆಕೆ ಅದು ಮೋಡಗಳನ್ನು ಮಾಡೋ ಕಾರ್ಖಾನೆ ಎಂದು ಅಂದುಕೊಂಡಳು. ಮಕ್ಕಳು ಈ ರೀತಿ ಚಿಕ್ಕ ಪುಟ್ಟ ವಿಷಯಗಳನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳುವುದನ್ನು ಕೇಳಿ ನಮಗೆ ನಗು ಬರಬಹುದು. ಆದರೆ, ಯಾರೇ ಆಗಲಿ ಮುಖ್ಯ ವಿಷಯಗಳನ್ನು ತಪ್ಪಾಗಿ ಅರ್ಥ ಮಾಡಿಕೊಂಡರೆ ಅದು ಅವರ ಜೀವನವನ್ನೇ ತಲೆಕೆಳಗಾಗಿ ಮಾಡಿಬಿಡುತ್ತದೆ. ಉದಾಹರಣೆಗೆ, ಒಂದು ಔಷಧಿಯನ್ನು ಇನ್ಯಾವುದೋ ಔಷಧಿ ಎಂದು ತಪ್ಪಾಗಿ ಅರ್ಥಮಾಡಿಕೊಂಡರೆ ಅಪಾಯ ಖಂಡಿತ!

ಆಧ್ಯಾತ್ಮಿಕ ವಿಷಯಗಳನ್ನು ತಪ್ಪಾಗಿ ಅರ್ಥಮಾಡಿಕೊಂಡರೆ ಪರಿಣಾಮ ಇನ್ನೂ ಕೆಟ್ಟದ್ದಾಗಿರುತ್ತದೆ. ಉದಾಹರಣೆಗೆ, ಯೇಸುವಿನ ಸಮಯದಲ್ಲಿದ್ದ ಕೆಲವರು ಅವನ ಬೋಧನೆಗಳನ್ನು ತಪ್ಪಾಗಿ ಅರ್ಥಮಾಡಿಕೊಂಡರು. (ಯೋಹಾನ 6:48-68) ಸರಿಯಾಗಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವ ಬದಲಿಗೆ ಅವರು ಯೇಸುವಿನ ಎಲ್ಲಾ ಬೋಧನೆಗಳನ್ನು ತಿರಸ್ಕರಿಸಿದರು. ಇದರಿಂದ ಅವರಿಗೇ ನಷ್ಟವಾಯಿತು.

ನೀವು ಬೈಬಲ್‌ ಓದಿ ಅದು ಹೇಳುವ ಪ್ರಕಾರ ಜೀವಿಸಲು ಪ್ರಯತ್ನಿಸುತ್ತೀರಾ? ಅದು ತುಂಬ ಒಳ್ಳೇ ವಿಷಯ. ಆದರೆ ನೀವು ಓದುವ ವಿಷಯವನ್ನು ಯಾವತ್ತಾದರೂ ತಪ್ಪಾಗಿ ಅರ್ಥಮಾಡಿಕೊಳ್ಳುವ ಸಾಧ್ಯತೆ ಇದೆಯಾ? ತುಂಬ ಜನರು ಅಪಾರ್ಥ ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಜನರು ತಪ್ಪಾಗಿ ಅರ್ಥಮಾಡಿಕೊಳ್ಳುವ 3 ವಿಷಯಗಳನ್ನು ನಾವೀಗ ನೋಡೋಣ.

  • ಕೆಲವರು ‘ದೇವರಿಗೆ ಭಯಪಡಿ’ ಎಂಬ ಬೈಬಲ್‌ ನಿಯಮವನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ಭಯ ಅಂದರೆ ಗಡಗಡ ನಡುಗುವುದು ಎಂದು ಅವರು ಅರ್ಥಮಾಡಿಕೊಂಡಿದ್ದಾರೆ. (ಪ್ರಸಂಗಿ 12:13) ಆದರೆ ದೇವರಿಗೆ ತನ್ನ ಆರಾಧಕರು ಆ ರೀತಿ ಭಯಪಡುವುದು ಇಷ್ಟ ಇಲ್ಲ. ಆದ್ದರಿಂದಲೇ, “ಹೆದರಬೇಡ, ನಾನೇ ನಿನ್ನೊಂದಿಗಿದ್ದೇನೆ; ದಿಗ್ಭ್ರಮೆಗೊಳ್ಳದಿರು, ನಾನೇ ನಿನ್ನ ದೇವರು; ನಾನು ನಿನ್ನನ್ನು ಬಲಪಡಿಸುತ್ತೇನೆ; ಹೌದು, ನಿನಗೆ ಸಹಾಯಕೊಡುತ್ತೇನೆ” ಎಂದು ದೇವರೇ ಹೇಳಿದ್ದಾನೆ. (ಯೆಶಾಯ 41:10) ದೇವರಿಗೆ ಭಯಪಡುವುದು ಅಂದರೆ ಆತನನ್ನು ಪೂಜ್ಯ ಭಾವನೆಯಿಂದ ನೋಡುವುದು, ಗೌರವಿಸುವುದು ಎಂದರ್ಥ.

  • ಭೂಮಿಯನ್ನು ಬೆಂಕಿಯಿಂದ ಸುಡಲಾಗುತ್ತದೋ?

    “ಪ್ರತಿಯೊಂದು ಕಾರ್ಯಕ್ಕೂ ಕಾಲವು ಕ್ಲುಪ್ತವಾಗಿದೆ . . . ಹುಟ್ಟುವ ಸಮಯ, ಸಾಯುವ ಸಮಯ” ಎಂಬ ಬೈಬಲಿನ ಮಾತನ್ನು ಕೆಲವರು ತಪ್ಪರ್ಥ ಮಾಡಿಕೊಂಡಿದ್ದಾರೆ. ಪ್ರತಿಯೊಬ್ಬ ವ್ಯಕ್ತಿ ಸಾಯುವ ಸಮಯವನ್ನು ದೇವರು ಮೊದಲೇ ನಿರ್ಧರಿಸಿದ್ದಾನೆ ಎಂದು ಅರ್ಥಮಾಡಿಕೊಂಡಿದ್ದಾರೆ. (ಪ್ರಸಂಗಿ 3:1, 2) ಆದರೆ ಅಲ್ಲಿ, ಹುಟ್ಟು-ಸಾವುಗಳ ಬಗ್ಗೆ ತಿಳಿಸುತ್ತಾ ಸಾವು ಎಲ್ಲರಿಗೂ ಬರುತ್ತದೆ ಎಂದು ಹೇಳಲಾಗಿದೆ. ನಾವೆಷ್ಟು ಸಮಯ ಬದುಕುತ್ತೇವೆ ಅನ್ನುವುದು ಕೆಲವೊಮ್ಮೆ ನಮ್ಮ ಸ್ವಂತ ನಿರ್ಣಯಗಳ ಮೇಲೆ ಹೊಂದಿಕೊಂಡಿದೆ ಎಂದು ದೇವರ ವಾಕ್ಯ ಹೇಳುತ್ತದೆ. ಆದ್ದರಿಂದ, “ಯೆಹೋವನಿಗೆ ಭಯಪಡುವವರ ದಿನಗಳಿಗೆ ವೃದ್ಧಿ” ಎನ್ನುತ್ತದೆ ಬೈಬಲ್‌. (ಜ್ಞಾನೋಕ್ತಿ 10:27; ಕೀರ್ತನೆ 90:10; ಯೆಶಾಯ 55:3) ಅದು ಹೇಗೆ ಸಾಧ್ಯ? ದೇವರ ವಾಕ್ಯವನ್ನು ಗೌರವಿಸುವುದಾದರೆ ಕುಡಿಕತನ, ಅನೈತಿಕತೆಯಂಥ ಆರೋಗ್ಯ ಹಾಳುಮಾಡುವ ವಿಷಯಗಳಿಂದ ದೂರವಿರುತ್ತೇವೆ.—1ಕೊರಿಂಥ 6:9, 10.

  • ಆಕಾಶ ಮತ್ತು ಭೂಮಿಯು ‘ಬೆಂಕಿಗಾಗಿ ಇಡಲ್ಪಟ್ಟಿದೆ’ ಎಂಬ ಬೈಬಲಿನ ಮಾತನ್ನು ಕೆಲವರು ಅಕ್ಷರಾರ್ಥವಾಗಿ, ಭೂಮಿಯನ್ನು ದೇವರು ನಾಶ ಮಾಡುತ್ತಾನೆ ಎಂದು ಅರ್ಥ ಮಾಡಿಕೊಂಡಿದ್ದಾರೆ. (2 ಪೇತ್ರ 3:7) ಆದರೆ ದೇವರು, ಈ ಭೂಮಿಯನ್ನು ನಾಶ ಮಾಡಲು ಬಿಡುವುದಿಲ್ಲ ಎಂದು ಮಾತುಕೊಟ್ಟಿದ್ದಾನೆ. ‘ಭೂಮಿಯನ್ನು ಯುಗಯುಗಾಂತರಕ್ಕೂ ಕದಲದ ಹಾಗೆ ದೃಢವಾದ ಅಸ್ತಿವಾರದ ಮೇಲೆ ಸ್ಥಾಪಿಸಿದ್ದಾನೆ.’ (ಕೀರ್ತನೆ 104:5; ಯೆಶಾಯ 45:18) ಆದ್ದರಿಂದ ಭೂಮಿಯಲ್ಲ, ಈ ಲೋಕದ ಭ್ರಷ್ಟ ವ್ಯವಸ್ಥೆ ನಾಶವಾಗಲಿದೆ. ಅದು ಬೆಂಕಿಯಲ್ಲಿ ಸುಡುವ ಹಾಗೆ ಸಂಪೂರ್ಣವಾಗಿ ನಾಶವಾಗಲಿದೆ. ಇಲ್ಲಿ ಹೇಳಿರುವ ಆಕಾಶ ಅಥವಾ ಸ್ವರ್ಗ ಎಂಬ ಪದ ಆಕಾಶ, ನಕ್ಷತ್ರ ಮಂಡಲ ಅಥವಾ ದೇವರು ಇರುವ ಸ್ಥಳ ಅಕ್ಷರಾರ್ಥ ಕೊಡುತ್ತದೆ. ಆದರೆ, ಇವು ನಾಶವಾಗುವುದಿಲ್ಲ.

ಬೈಬಲನ್ನು ಯಾಕೆ ಕೆಲವೊಮ್ಮೆ ತಪ್ಪರ್ಥ ಮಾಡಿಕೊಳ್ಳಲಾಗಿದೆ?

ಮೇಲಿನ ಉದಾಹರಣೆಗಳಲ್ಲಿ ನೋಡಿದಂತೆ, ಜನರು ಬೈಬಲಿನಲ್ಲಿರುವ ಅನೇಕ ವಿಷಯಗಳನ್ನು ತಪ್ಪಾಗಿ ಅರ್ಥಮಾಡಿಕೊಳ್ಳುತ್ತಾರೆ. ಆದರೆ, ದೇವರು ಯಾಕೆ ಸರಿಯಾಗಿ ಅರ್ಥ ಆಗೋ ರೀತಿ ಬರಿಸಿಲ್ಲ? ‘ದೇವರು ಎಲ್ಲರಿಗಿಂತ ವಿವೇಕಿ, ಜ್ಞಾನಿ ಆಗಿದ್ದರೆ, ಎಲ್ಲರಿಗೂ ಸ್ಪಷ್ಟವಾಗಿ ಅರ್ಥವಾಗುವ ರೀತಿಯಲ್ಲಿ ಬರೆಸಬೇಕಿತ್ತಲ್ಲ? ಯಾಕೆ ಹಾಗೆ ಮಾಡಿಲ್ಲ?’ ಎಂದು ಕೆಲವರು ವಾದಿಸುತ್ತಾರೆ. ಆದರೆ ಜನರು ಬೈಬಲನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲು ಇರುವ 3 ಕಾರಣಗಳನ್ನು ಮುಂದೆ ಓದಿ.

  1. ಬೈಬಲನ್ನು ದೀನರು ಮತ್ತು ಕಲಿಯಲು ಮನಸ್ಸು ಇರುವವರು ಮಾತ್ರ ಅರ್ಥಮಾಡಿಕೊಳ್ಳುವಂತೆ ಬರೆಸಲಾಗಿದೆ. ಯೇಸು ತನ್ನ ತಂದೆಯನ್ನು ಹೀಗೆ ಸ್ತುತಿಸಿದನು: “ತಂದೆಯೇ, ಸ್ವರ್ಗ ಭೂಲೋಕಗಳ ಒಡೆಯನೇ, ನೀನು ವಿವೇಕಿಗಳಿಗೂ ಜ್ಞಾನಿಗಳಿಗೂ ಈ ವಿಷಯಗಳನ್ನು ಜಾಗರೂಕತೆಯಿಂದ ಮರೆಮಾಡಿ ಶಿಶುಗಳಿಗೆ ಪ್ರಕಟಪಡಿಸಿರುವುದರಿಂದ ನಾನು ನಿನ್ನನ್ನು ಬಹಿರಂಗವಾಗಿ ಕೊಂಡಾಡುತ್ತೇನೆ.” (ಲೂಕ 10:21) ಈ ಮಾತುಗಳಿಂದ, ಸರಿಯಾದ ಮನೋಭಾವ ಇರುವವರು ಮಾತ್ರ ಬೈಬಲನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದು ಗೊತ್ತಾಗುತ್ತದೆ. ‘ವಿವೇಕಿಗಳೂ ಜ್ಞಾನಿಗಳೂ’ ಸಾಮಾನ್ಯವಾಗಿ ಅಹಂಕಾರಿಗಳಾಗಿರುತ್ತಾರೆ. ಆದ್ದರಿಂದ ಅವರು ಹೆಚ್ಚಿನ ಸಂದರ್ಭಗಳಲ್ಲಿ ಬೈಬಲನ್ನು ತಪ್ಪಾಗಿ ಅರ್ಥಮಾಡಿಕೊಳ್ಳುತ್ತಾರೆ. ‘ಶಿಶುಗಳು’ ಅಥವಾ ಮಕ್ಕಳಲ್ಲಿರುವ ದೀನತೆ ಮತ್ತು ಕಲಿಯುವ ಮನಸ್ಸು ಯಾರಿಗಿರುತ್ತದೋ ಅಂಥವರಿಗೆ ದೇವರ ವಾಕ್ಯ ಚೆನ್ನಾಗಿ ಅರ್ಥವಾಗುತ್ತದೆ. ಇದನ್ನು ನೋಡಿದರೆ, ದೇವರು ಬೈಬಲನ್ನು ಎಷ್ಟು ಅದ್ಭುತವಾಗಿ ಬರೆಸಿದ್ದಾನೆ ಅಂತ ಗೊತ್ತಾಗುತ್ತಲ್ಲವೇ!

  2. ಬೈಬಲನ್ನು ಅರ್ಥಮಾಡಿಕೊಳ್ಳಲು ಪ್ರಾಮಾಣಿಕವಾಗಿ ದೇವರ ಸಹಾಯ ಬಯಸುವವರಿಗಾಗಿ ಇದನ್ನು ಬರೆಸಲಾಗಿದೆ. ತಾನು ಕಲಿಸಿದ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಜನರಿಗೆ ಸಹಾಯದ ಅಗತ್ಯವಿದೆ ಎಂದು ಯೇಸು ಹೇಳಿದನು. ಆ ಸಹಾಯ ಹೇಗೆ ಸಿಗುತ್ತದೆ? ಯೇಸುವೇ ಉತ್ತರಿಸಿದ್ದು: “ನನ್ನ ಹೆಸರಿನಲ್ಲಿ ತಂದೆಯು ಕಳುಹಿಸಿಕೊಡುವ ಸಹಾಯಕ, ಅಂದರೆ ಆ ಒಬ್ಬನಾದ ಪವಿತ್ರಾತ್ಮ ನಿಮಗೆ ಎಲ್ಲ ವಿಷಯಗಳನ್ನು ಬೋಧಿಸುವನು.” (ಯೋಹಾನ 14:26) ಜನರು ಬೈಬಲನ್ನು ಅರ್ಥಮಾಡಿಕೊಳ್ಳಲು ದೇವರು ಪವಿತ್ರಾತ್ಮವನ್ನು ಅಂದರೆ ತನ್ನ ಶಕ್ತಿಯನ್ನು ಕೊಟ್ಟು ಸಹಾಯ ಮಾಡುತ್ತಾನೆ. ಆದರೆ ಯಾರು ಸಹಾಯಕ್ಕಾಗಿ ದೇವರ ಕಡೆಗೆ ನೋಡುವುದಿಲ್ಲವೋ ಅವರಿಗೆ ಅದನ್ನು ಕೊಡುವುದಿಲ್ಲ. ಹಾಗಾಗಿ, ಅವರಿಗೆ ಬೈಬಲ್‌ ಹೇಳುವುದು ಏನೇನೂ ಅರ್ಥವಾಗಲ್ಲ. ಬೈಬಲನ್ನು ಅರ್ಥಮಾಡಿಕೊಳ್ಳಲು ಬಯಸುವವರಿಗೆ ಹೆಚ್ಚು ಜ್ಞಾನ ಇರುವ ಕ್ರೈಸ್ತರು ಸಹಾಯ ಮಾಡುವಂತೆ ಪವಿತ್ರಾತ್ಮವು ಪ್ರೇರೇಪಿಸುತ್ತದೆ.—ಅಪೊಸ್ತಲರ ಕಾರ್ಯಗಳು 8:26-35.

  3. ಬೈಬಲಿನ ಕೆಲವು ಭಾಗಗಳು ನಿರ್ದಿಷ್ಟ ಸಮಯಾವಧಿಯಲ್ಲೇ ಅರ್ಥವಾಗುತ್ತವೆ. ಉದಾಹರಣೆಗೆ, ಭವಿಷ್ಯದ ಬಗ್ಗೆ ಕೆಲವು ವಿಷಯಗಳನ್ನು ಬರೆದಿಡುವಂತೆ ಪ್ರವಾದಿ ದಾನಿಯೇಲನಿಗೆ ಹೇಳಲಾಯಿತು. ಒಬ್ಬ ದೇವದೂತನು ಅವನಿಗೆ, “ದಾನಿಯೇಲನೇ ನೀನು, ಅಂತ್ಯಕಾಲದ ವರೆಗೂ ಈ ಮಾತುಗಳನ್ನು ಮುಚ್ಚಿಡು . . . ಗ್ರಂಥಕ್ಕೆ ಮುದ್ರೆಹಾಕು” ಅಂದನು. ಅವನು ಬರೆದ ನಂತರ, ಶತಮಾನಗಳವರೆಗೆ ಅನೇಕರು ಬೈಬಲಿನಲ್ಲಿನ ದಾನಿಯೇಲ ಪುಸ್ತಕವನ್ನು ಓದಿದರು. ಆದರೆ ಅವರಿಗದು ಅರ್ಥವಾಗಲಿಲ್ಲ. ಅಷ್ಟೇ ಅಲ್ಲ, ಸ್ವತಃ ದಾನಿಯೇಲನಿಗೇ ತಾನು ಬರೆದ ಕೆಲವು ವಿಷಯಗಳು ಅರ್ಥವಾಗಲಿಲ್ಲ. “ನಾನು ಕೇಳಿದೆನು, ಆದರೆ ಗ್ರಹಿಸಲಿಲ್ಲ” ಎಂದು ಅವನೇ ದೀನತೆಯಿಂದ ಒಪ್ಪಿಕೊಂಡನು. ಸಮಯಾನಂತರ, ಜನರು ದಾನಿಯೇಲನು ಬರೆದ ಭವಿಷ್ಯದ ಕುರಿತ ಮಾಹಿತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಿದ್ದರು. ಆದರೆ ಅದು ಸಂಭವಿಸುವುದು ದೇವರು ನಿರ್ಧರಿಸಿದ ನಿರ್ದಿಷ್ಟ ಸಮಯದಲ್ಲೇ. ದೇವದೂತನು ಹೀಗೆ ಹೇಳಿದ್ದನು: “ದಾನಿಯೇಲನೇ, ನಿನ್ನ ದಾರಿಯಲ್ಲಿ ಹೋಗು. ಏಕೆಂದರೆ ಈ ಮಾತುಗಳು ಅಂತ್ಯ ಕಾಲದವರೆಗೂ ಮುಚ್ಚಲ್ಪಟ್ಟು ಮದ್ರೆಹಾಕಲ್ಪಟ್ಟಿವೆ.” ಹಾಗಾದರೆ, ದೇವರ ಮಾತು ಯಾರಿಗೆ ಅರ್ಥವಾಗುತ್ತದೆ? “ಯಾವ ದುಷ್ಟನೂ ಅರ್ಥಮಾಡಿಕೊಳ್ಳುವುದಿಲ್ಲ. ಆದರೆ ಬುದ್ಧಿವಂತರಾದವರು ಅರಿತುಕೊಳ್ಳುವರು.” (ದಾನಿಯೇಲ 12:4, 8-10, ಪವಿತ್ರ ಗ್ರಂಥ ಭಾಷಾಂತರ) ಆದ್ದರಿಂದ ಸರಿಯಾದ ಸಮಯ ಬರುವವರೆಗೆ ದೇವರು ಬೈಬಲಿನ ಕೆಲವು ಭಾಗಗಳ ಅರ್ಥವನ್ನು ಜನರಿಗೆ ತಿಳಿಯಪಡಿಸುವುದಿಲ್ಲ.

ಯೆಹೋವನ ಸಾಕ್ಷಿಗಳು ಯಾವಾಗಲಾದರೂ ಬೈಬಲಿನ ಕೆಲವು ವಿಷಯಗಳನ್ನು ತಪ್ಪಾಗಿ ಅರ್ಥಮಾಡಿಕೊಂಡಿದ್ದಾರಾ? ಹೌದು. ಆದರೆ ವಿಷಯಗಳನ್ನು ಸ್ಪಷ್ಟವಾಗಿ ತಿಳಿಯಪಡಿಸಲು ದೇವರು ನಿಗಧಿಪಡಿಸಿದ ಸಮಯ ಬಂದಾಗ ಸಾಕ್ಷಿಗಳು ಸಿದ್ಧಮನಸ್ಸಿನಿಂದ ತಮ್ಮ ಅರ್ಥ ವಿವರಣೆಯಲ್ಲಿ ಬದಲಾವಣೆ ಮಾಡಿಕೊಂಡರು. ಹೀಗೆ ತಾವು ಯೇಸುವಿನ ಆರಂಭದ ಶಿಷ್ಯರನ್ನು ಅನುಕರಿಸುತ್ತಿದ್ದೇವೆ ಎಂದು ಅವರು ನಂಬುತ್ತಾರೆ. ಆ ಶಿಷ್ಯರು ಯೇಸು ತಿದ್ದಿದಾಗೆಲ್ಲಾ ದೀನತೆಯಿಂದ ತಮ್ಮ ಯೋಚನಾಧಾಟಿಯನ್ನು ಸರಿಪಡಿಸಿಕೊಂಡಿದ್ದರು.—ಅಪೊಸ್ತಲರ ಕಾರ್ಯಗಳು 1:6, 7.

ಮೋಡಗಳು ಎಲ್ಲಿಂದ ಬಂದವು ಎಂಬ ಬಗ್ಗೆ ಆರಂಭದಲ್ಲಿ ತಿಳಿಸಲಾದ ಪುಟ್ಟ ಹುಡುಗಿಯ ಕಲ್ಪನೆ ಚಿಕ್ಕ ತಪ್ಪರ್ಥವಾಗಿತ್ತು. ಆದರೆ, ಬೈಬಲ್‌ ಕಲಿಸುವ ವಿಷಯಗಳು ತುಂಬ ಮುಖ್ಯ. ವೈಯಕ್ತಿಕವಾಗಿ ಬೈಬಲನ್ನು ಓದಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿರುವ ಯಾರಿಗೇ ಆಗಲಿ ಅದರಲ್ಲಿರುವ ಸಂದೇಶ ಬಹಳ ಮುಖ್ಯ. ಆದ್ದರಿಂದ ನೀವೇನು ಓದುತ್ತಿದ್ದೀರೋ ಅದನ್ನು ಅರ್ಥ ಮಾಡಿಕೊಳ್ಳಲು ಸಹಾಯ ಪಡೆದುಕೊಳ್ಳಿ. ಇದಕ್ಕಾಗಿ, ದೀನ ಮನಸ್ಸಿನ, ಬೈಬಲನ್ನು ಅರ್ಥಮಾಡಿಕೊಳ್ಳಲು ದೇವರ ಪವಿತ್ರಾತ್ಮವನ್ನು ಆತುಕೊಳ್ಳುವ ಜನರಿಗಾಗಿ ಹುಡುಕಿ. ನಮ್ಮೀ ಸಮಯದಲ್ಲಿ ಬೈಬಲನ್ನು ಹಿಂದೆಂದಿಗಿಂತಲೂ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕೆಂದು ದೇವರು ಬಯಸುತ್ತಾನೆ ಎಂದು ಅವರು ಅರ್ಥ ಮಾಡಿಕೊಂಡಿರಬೇಕು. ಸಹಾಯಕ್ಕಾಗಿ ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಲು ಅಥವಾ jw.org ವೆಬ್‌ಸೈಟ್‌ನಲ್ಲಿರುವ ಅವರ ಸಂಶೋಧನೆ ಆಧಾರಿತ ಮಾಹಿತಿಯನ್ನು ಓದಲು ಹಿಂಜರಿಯಬೇಡಿ. ‘ಬುದ್ಧಿಗಾಗಿ ಮೊರೆಯಿಟ್ಟರೆ ನೀನು ದೈವಜ್ಞಾನವನ್ನು ಪಡೆದುಕೊಳ್ಳುವಿ’ ಎನ್ನುತ್ತದೆ ಬೈಬಲ್‌.—ಜ್ಞಾನೋಕ್ತಿ 2:3-5.▪