ಮಾಹಿತಿ ಇರುವಲ್ಲಿ ಹೋಗಲು

ಈ ಲೋಕವು ಪಾರಾಗುವುದೋ?

ಈ ಲೋಕವು ಪಾರಾಗುವುದೋ?

ಈ ಲೋಕವು ಪಾರಾಗುವುದೋ?

ಲೋಕದ ಅಂತ್ಯದ ಬಗ್ಗೆ ಬೇರೆ ಯಾವ ಸಂತತಿಯೂ ಇಷ್ಟೊಂದು ಮಾತನ್ನು ಕೇಳಿರುವುದಿಲ್ಲ. ಈ ಲೋಕವು ಒಂದು ನ್ಯೂಕ್ಲಿಯರ್‌ ಸರ್ವನಾಶದಲ್ಲಿ ಅಂತ್ಯಗೊಳ್ಳುವುದೆಂದು ಅನೇಕರು ಭಯಪಡುತ್ತಾರೆ. ಈ ಲೋಕವನ್ನು ಮಾಲಿನ್ಯವು ನಾಶಮಾಡುವುದೆಂದು ಇನ್ನಿತರರು ಯೋಚಿಸುತ್ತಾರೆ. ಆರ್ಥಿಕ ಅವ್ಯವಸ್ಥೆಯು ಮಾನವಕುಲದ ಅಧಿಕಾಂಶ ಜನರನ್ನು ಪರಸ್ಪರ ವಿರುದ್ಧವಾಗಿ ನಿಲ್ಲಿಸುವುದೆಂದು ಇನ್ನೂ ಕೆಲವರು ಚಿಂತಿಸುತ್ತಾರೆ.

ಈ ಲೋಕವು ನಿಜವಾಗಿಯೂ ಅಂತ್ಯಗೊಳ್ಳಬಲ್ಲದೋ? ಹಾಗಾದರೆ, ಅದು ಏನನ್ನು ಅರ್ಥೈಸುತ್ತದೆ? ಹಿಂದೆಂದಾದರೂ ಒಂದು ಲೋಕವು ಅಂತ್ಯಗೊಂಡಿತ್ತೋ?

ಒಂದು ಲೋಕ ಅಂತ್ಯಗೊಳ್ಳುತ್ತದೆ—ಇನ್ನೊಂದು ಸ್ಥಾನಭರ್ತಿಮಾಡುತ್ತದೆ

ಹೌದು, ಒಂದು ಲೋಕವು ಅಂತ್ಯಗೊಂಡಿತ್ತು. ನೋಹನ ದಿನಗಳಲ್ಲಿ ಅತಿ ದುಷ್ಟವಾಗಿ ಪರಿಣಮಿಸಿದ ಲೋಕವನ್ನು ಗಮನಿಸಿರಿ. ಬೈಬಲ್‌ ವಿವರಿಸುವುದು: “ಆ ನೀರುಗಳಿಂದಲೇ ಆ ಕಾಲದಲ್ಲಿದ್ದ ಲೋಕವು ಜಲಪ್ರಲಯದಲ್ಲಿ ನಾಶವಾಯಿತು.” ಬೈಬಲ್‌ ಮತ್ತೆ ಹೇಳುವುದು: “[ದೇವರು] ಭಕ್ತಿಹೀನರಾದ ಪುರಾತನರ ಲೋಕವನ್ನು ಸುಮ್ಮನೆ ಬಿಡದೆ ಅವರ ಮೇಲೆ ಜಲಪ್ರಲಯವನ್ನು ಬರಮಾಡಿದನು; ಆದರೆ ಸುನೀತಿಯನ್ನು ಸಾರುವವನಾಗಿದ್ದ ನೋಹನನ್ನೂ ಅವನೊಂದಿಗೆ ಬೇರೆ ಏಳು ಮಂದಿಯನ್ನೂ ಉಳಿಸಿದನು.”—2 ಪೇತ್ರ 2:5; 3:6.

ಆ ಲೋಕದ ಅಂತ್ಯವು ಏನನ್ನು ಅರ್ಥೈಸಿತು ಮತ್ತು ಏನನ್ನು ಅರ್ಥೈಸಲಿಲ್ಲವೆಂಬುದನ್ನು ಗಮನಿಸಿರಿ. ಮಾನವವರ್ಗದ ಅಂತ್ಯವನ್ನು ಅದು ಅರ್ಥೈಸಲಿಲ್ಲ. ನೋಹ ಮತ್ತು ಆತನ ಕುಟುಂಬದವರು ಜಾಗತಿಕ ಪ್ರಳಯವನ್ನು ಪಾರಾದರು. ಹಾಗೆಯೇ ಈ ಭೂಗ್ರಹ ಮತ್ತು ಸುಂದರ ತಾರಾಮಯ ಆಕಾಶವು ಕೂಡ. ಆವಾಗ ನಾಶವಾದದ್ದು “ಭಕ್ತಿಹೀನರಾದ ಪುರಾತನರ ಲೋಕವು”, ದುಷ್ಟ ವಿಷಯಗಳ ಒಂದು ವ್ಯವಸ್ಥೆಯು.

ಕೊನೆಗೆ, ನೋಹನ ಸಂತಾನವು ಹೆಚ್ಚಾದಂತೆ, ಇನ್ನೊಂದು ಲೋಕವು ವಿಕಾಸಗೊಂಡಿತು. ಆ ಎರಡನೆಯ ಲೋಕವು, ಅಥವಾ ವಿಷಯಗಳ ವ್ಯವಸ್ಥೆಯು, ನಮ್ಮ ದಿನದ ವರೆಗೆ ಅಸ್ತಿತ್ವದಲ್ಲಿದೆ. ಇದರ ಇತಿಹಾಸವು ಯುದ್ಧ, ಪಾತಕ, ಹಾಗೂ ಹಿಂಸಾಚಾರದಿಂದ ತುಂಬಿದೆ. ಈ ಲೋಕಕ್ಕೆ ಏನು ಸಂಭವಿಸುವುದು? ಅದು ಪಾರಾಗುವುದೋ?

ಈ ಲೋಕದ ಭವಿಷ್ಯ

ನೋಹನ ದಿನದಲ್ಲಿ ಲೋಕವು ನಾಶನವನ್ನು ಅನುಭವಿಸಿತೆಂದು ಹೇಳಿದ ಅನಂತರ ಬೈಬಲ್‌ ದಾಖಲೆಯು ಮುಂದುವರಿಸುವುದು: “ಆದರೆ ಈಗಿರುವ ಭೂಮ್ಯಾಕಾಶಗಳು ಅದೇ ವಾಕ್ಯದ ಬಲದಿಂದ ಬೆಂಕಿಯ ಮೂಲಕ ನಾಶವಾಗುವದಕ್ಕೆ ಇಡಲ್ಪಟ್ಟಿವೆ.” (2 ಪೇತ್ರ 3:7) ಸತ್ಯವಾಗಿ, ಇನ್ನೊಬ್ಬ ಬೈಬಲ್‌ ಬರಹಗಾರನು ವಿವರಿಸುವಂತೆ: “[ಇಂದು ಅಸ್ತಿತ್ವದಲ್ಲಿರುವ] ಲೋಕವೂ  . . ಗತಿಸಿ ಹೋಗು”ತ್ತದೆ.—1 ಯೋಹಾನ 2:17.

ನೋಹನ ದಿನದಲ್ಲಿ ಹೇಗೆ ಅವು ಗತಿಸಿ ಹೋಗಲಿಲ್ಲವೋ ಹಾಗೆಯೇ ಅಕ್ಷರಾರ್ಥವಾದ ಭೂಮಿ ಅಥವಾ ತಾರಾಮಯ ಆಕಾಶವು ಗತಿಸಿ ಹೋಗುವ ಅರ್ಥವನ್ನು ಬೈಬಲ್‌ ಕೊಡುವುದಿಲ್ಲ. (ಕೀರ್ತನೆ 104:5) ಆದರೆ, ಈ ಲೋಕ, ಅದರ “ಆಕಾಶ” ದೊಂದಿಗೆ, ಯಾ ಸೈತಾನನ ಪ್ರಭಾವದ ಕೆಳಗಿರುವ ಸರಕಾರೀ ಅಧಿಕಾರಿಗಳೊಂದಿಗೆ, ಮತ್ತು ಅದರ “ಭೂಮಿ,” ಯಾ ಮಾನವ ಸಮಾಜ, ಬೆಂಕಿಯಲ್ಲಿಯೋ ಎಂಬಂತೆ ನಾಶವಾಗುವುದು. (ಯೋಹಾನ 14:30; 2 ಕೊರಿಂಥ 4:4) ಈ ಲೋಕ, ಯಾ ವಿಷಯಗಳ ವ್ಯವಸ್ಥೆಯು, ಪ್ರಳಯದ ಮುಂಚೆ ಇದ್ದ ಲೋಕದಷ್ಟೇ ನಿಶ್ಚಯವಾಗಿ ಅಳಿದು ಹೋಗುವುದು. ಯೇಸು ಕ್ರಿಸ್ತನು ಕೂಡ “ನೋಹನ ದಿನಗಳಲ್ಲಿ” ಇದ್ದ ಪರಿಸ್ಥಿತಿಯ ಬಗ್ಗೆ, ಈ ಲೋಕದ ಅಂತ್ಯದ ಮುಂಚೆ ಏನು ಸಂಭವಿಸಲಿದೆ ಎಂಬುದಕ್ಕೆ ಒಂದು ಉದಾಹರಣೆಯಾಗಿ ಮಾತಾಡಿದನು.—ಮತ್ತಾಯ 24:37-39.

ಗಮನಾರ್ಹವಾಗಿ, ಯೇಸು ನೋಹನ ದಿನಗಳ ಕುರಿತು ಮಾತಾಡಿದಾಗ, ಅದು ಆತನ ಅಪೊಸ್ತಲರ, “ನಿನ್ನ ಬರೋಣಕ್ಕೂ, ಲೋಕದ ಅಂತ್ಯಕ್ಕೂ ಸೂಚನೆಯೇನು?” ಎಂಬ ಪ್ರಶ್ನೆಗೆ ಉತ್ತರವಾಗಿತ್ತು. (ಮತ್ತಾಯ 24:3, ಕಿಂಗ್‌ ಜೇಮ್ಸ್‌ ವರ್ಷನ್‌) ಮತ್ತು ಈ ಲೋಕವು ಅಂತ್ಯಗೊಳ್ಳುವುದೆಂದು ಯೇಸುವಿನ ಹಿಂಬಾಲಕರಿಗೆ ಗೊತ್ತಿತ್ತು. ಈ ಪ್ರತೀಕ್ಷೆಯು ಅವರನ್ನು ಭಯಪಡಿಸಿತೋ?

ಇದಕ್ಕೆ ತದ್ವಿರುದ್ಧವಾಗಿ, ಯೇಸು ಲೋಕದ ಅಂತ್ಯದ ಮುಂಚೆ ಸಂಭವಿಸಲಿರುವ ಘಟನೆಗಳನ್ನು ವರ್ಣಿಸಿದಾಗ, ಅವನು ಹರ್ಷಿಸಲು ಅವರನ್ನು ಪ್ರೋತ್ಸಾಹಿಸಿದನು, ‘ಯಾಕಂದರೆ ಅವರ ಬಿಡುಗಡೆಯು ಸಮೀಪವಾಗಿತ್ತು.’ (ಲೂಕ 21:28) ಹೌದು, ಸೈತಾನ ಹಾಗೂ ಅವನ ದುಷ್ಟ ವಿಷಯ ವ್ಯವಸ್ಥೆಯಿಂದ ಶಾಂತಿಭರಿತ ಹೊಸ ಲೋಕದೊಳಗೆ ಬಿಡುಗಡೆ!—2 ಪೇತ್ರ 3:13.

ಆದರೆ ಈ ಲೋಕವು ಯಾವಾಗ ಅಂತ್ಯಗೊಳ್ಳುವುದು? ಆತನ “ಬರೋಣ, ಮತ್ತು ಲೋಕದ ಅಂತ್ಯ”ಕ್ಕೆ ಯಾವ “ಸೂಚನೆ” ಯನ್ನು ಯೇಸು ಕೊಟ್ಟನು?

“ಸೂಚನೆ”

“ಬರೋಣ” ಎಂದು ಇಲ್ಲಿ ಭಾಷಾಂತರ ಮಾಡಲಾದ ಗ್ರೀಕ್‌ ಪದವು ಪ-ರೂ’ಸೀ’ಯ, ಮತ್ತು ಅದರರ್ಥ “ಸಾನ್ನಿಧ್ಯ”, ಅಂದರೆ, ನಿಜವಾಗಿಯೂ ಉಪಸ್ಥಿತನಾಗಿರುವುದು. ಆದುದರಿಂದ “ಸೂಚನೆಯನ್ನು” ಕಂಡಾಗ, ಯೇಸು  ಬೇಗನೆ ಬರಲಿದ್ದಾನೆ ಎಂದಲ್ಲ, ಬದಲಾಗಿ ಈಗಾಗಲೇ ಹಿಂದಿರುಗಿದ್ದು, ಉಪಸ್ಥಿತನಾಗಿದ್ದಾನೆಂದು ಅರ್ಥ. ಆತನು ಪರಲೋಕದ ಅರಸನಾಗಿ ಅದೃಶ್ಯವಾಗಿ ಆಳಲಾರಂಭಿಸಿದ್ದಾನೆಂದೂ, ಆತನ ವೈರಿಗಳಿಗೆ ಬೇಗನೆ ಅಂತ್ಯ ತರುವನೆಂದೂ ಅದು ಅರ್ಥೈಸುತ್ತದೆ.—ಪ್ರಕಟನೆ 12:7-12; ಕೀರ್ತನೆ 110:1, 2.

ಯೇಸು “ಸೂಚನೆ” ಯಾಗಿ ಕೇವಲ ಒಂದು ಘಟನೆಯನ್ನು ಕೊಡಲಿಲ್ಲ. ಆತನು ಅನೇಕ ಲೋಕ ಘಟನೆಗಳನ್ನು ಮತ್ತು ಪರಿಸ್ಥಿತಿಗಳನ್ನು ವರ್ಣಿಸಿದನು. ಬೈಬಲ್‌ ಬರಹಗಾರರು “ಕಡೇ ದಿವಸಗಳು” ಎಂದು ಕರೆದಂತಹ ಸಮಯದಲ್ಲಿ ಇವೆಲ್ಲವು ಸಂಭವಿಸುವುವು. (2 ತಿಮೊಥೆಯ 3:1-5; 2 ಪೇತ್ರ 3:3, 4) “ಕಡೇ ದಿವಸ” ಗಳನ್ನು ಗುರುತಿಸುವುದೆಂದು ಯೇಸು ಮುಂತಿಳಿಸಿದ ಕೆಲವೊಂದು ವಿಷಯಗಳನ್ನು ಪರಿಗಣಿಸಿರಿ.

“ಜನಕ್ಕೆ ವಿರೋಧವಾಗಿ ಜನವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು.” (ಮತ್ತಾಯ 24:7) ಆಧುನಿಕ ಸಮಯಗಳ ಯುದ್ಧವು ಹಿಂದೆಂದೂ ಆಗದ ರೀತಿಯಲ್ಲಿ ದೊಡ್ಡ ಗಾತ್ರದ್ದಾಗಿರುತ್ತದೆ. ಒಬ್ಬ ಇತಿಹಾಸಗಾರನು ಗಮನಿಸಿದ್ದು: “[1914 ರಲ್ಲಿ ಆರಂಭಿಸಿದ] ಪ್ರಥಮ ಜಾಗತಿಕ ಯುದ್ಧವು ಪ್ರಥಮ ‘ಸಂಪೂರ್ಣ’ ಯುದ್ಧವಾಗಿತ್ತು.” ಆದರೂ, ಎರಡನೆಯ ಜಾಗತಿಕ ಯುದ್ಧವು ಇನ್ನೂ ಹೆಚ್ಚು ನಾಶಕರವಾಗಿತ್ತು. ಮತ್ತು ಯುದ್ಧವು ಭೂಮಿಯನ್ನು ಧ್ವಂಸಗೊಳಿಸುತ್ತಾ ಇದೆ. ಹೌದು, ಯೇಸುವಿನ ಮಾತುಗಳು ಒಂದು ನಾಟಕೀಯ ರೂಪದಲ್ಲಿ ನೆರವೇರಿಕೆಯನ್ನು ಪಡೆದಿವೆ!

“ಅಲ್ಲಲ್ಲಿ ಬರಗಳು ಬರುವವು.” (ಮತ್ತಾಯ 24:7) ಜಾಗತಿಕ ಯುದ್ಧ Iನ್ನು ಹಿಂಬಾಲಿಸಿ ಇತಿಹಾಸದಲ್ಲೇ ಬಹುಶಃ ಅತಿ ದೊಡ್ಡದಾದ ಕ್ಷಾಮವು ಬಂತು. ಜಾಗತಿಕ ಯುದ್ಧ II ನ್ನು ಕೂಡ ಭಯಂಕರವಾದ ಕ್ಷಾಮವು ಹಿಂಬಾಲಿಸಿತು. ಭೂಮಿಯ ಜನಸಂಖ್ಯೆಯ ಐದರಲ್ಲಿ ಒಂದು ಅಂಶವನ್ನು ನ್ಯೂನ ಪೋಷಣೆಯ ಉಪದ್ರವವು ತಟ್ಟುತ್ತಾ, ಪ್ರತಿ ವರ್ಷ ಸುಮಾರು 1 ಕೋಟಿ 40 ಲಕ್ಷ ಮಕ್ಕಳನ್ನು ಕೊಲ್ಲುತ್ತದೆ. ನಿಜವಾಗಿಯೂ, “ಬರಗಳು” ಇಲ್ಲಿ ಇದ್ದವು!

“ಮಹಾ ಭೂಕಂಪಗಳಾಗುವವು.” (ಲೂಕ 21:11) ಸರಾಸರಿಯಾಗಿ, ಹಿಂದಿನ ಶತಮಾನಗಳಲ್ಲಿ ಸತ್ತವರಿಗಿಂತ ಹತ್ತು ಪಟ್ಟು ಹೆಚ್ಚಿನವರು 1914 ರಿಂದ ಪ್ರತಿ ವರ್ಷ ಭೂಕಂಪಗಳಲ್ಲಿ ಸತ್ತಿದ್ದಾರೆ. ಕೇವಲ ಕೆಲವು ಮುಖ್ಯ ಭೂಕಂಪಗಳನ್ನು ಗಮನಿಸಿರಿ: 1920, ಚೀನಾ, 2,00,000 ಜನ ಸತ್ತರು; 1923, ಜಪಾನ್‌, 99,300 ಗಾಯಗೊಂಡರು ಮತ್ತು ಸತ್ತರು; 1939, ಟರ್ಕಿ, 32,700 ಸತ್ತರು; 1970, ಪೆರು, 66,800 ಸತ್ತರು; ಮತ್ತು 1976, ಚೀನಾ, ಸುಮಾರು 2,40,000 (ಯಾ, ಕೆಲವು ವಾರ್ತಾ ಮೂಲಗಳಿಗನುಸಾರ ಸುಮಾರು, 8,00,000) ಗಾಯಗೊಂಡರು ಯಾ ಸತ್ತರು. ನಿಶ್ಚಯವಾಗಿ, “ಮಹಾ ಭೂಕಂಪಗಳು”!

“ಒಂದರ ಮೇಲೆ ಇನ್ನೊಂದು ಸ್ಥಳದಲ್ಲಿ ಅಂಟುರೋಗಗಳು.” (ಲೂಕ 21:11, NW) ಜಾಗತಿಕ ಯುದ್ಧ Iರ ಹಿಂದೆಯೇ, ಸುಮಾರು 2 ಕೋಟಿ 10 ಲಕ್ಷ ಜನರು ಸ್ಪ್ಯಾನಿಶ್‌ ಫ್ಲೂನಿಂದ ಮರಣ ಹೊಂದಿದರು. ಸೈಎನ್ಸ್‌ ಡೈಜೆಸ್ಟ್‌ ವರದಿಮಾಡಿದ್ದು: “ಇತಿಹಾಸದಲ್ಲಿಯೇ ಇಷ್ಟು ಕಠೋರವಾದ, ಇಷ್ಟು ಕ್ಷಿಪ್ರವಾದ ಮರಣದ ಭೇಟಿ ಆಗಿದ್ದದ್ದಿಲ್ಲ.” ಅಂದಿನಿಂದ, ಹೃದ್ರೋಗ, ಕ್ಯಾನ್ಸರ್‌, ಏಯ್ಡ್ಸ್‌, ಮತ್ತು ಅನೇಕ ಇತರ ವ್ಯಾಧಿಗಳು ನೂರಾರು ಕೋಟಿ ಜನರನ್ನು ಕೊಂದಿವೆ.

“ಅಧರ್ಮವು ಹೆಚ್ಚಾಗುವದು.” (ಮತ್ತಾಯ 24:12) 1914 ರಿಂದ ನಮ್ಮ ಲೋಕವು ಪಾತಕ ಮತ್ತು ಹಿಂಸಾಚಾರದ್ದೆಂದು ಪ್ರಸಿದ್ಧವಾಗಿದೆ. ಅನೇಕ ಸ್ಥಳಗಳಲ್ಲಿ ದಾರಿಯ ಮೇಲೆ ಹಗಲಿನಲ್ಲೂ ಯಾರೂ ಸುರಕ್ಷೆಯನ್ನು ಅನುಭವಿಸುವುದಿಲ್ಲ. ರಾತ್ರಿಯಲ್ಲಿ ಜನರು ಬೀಗಹಾಕಿದ ಹಾಗೂ ತಡೆಗಟ್ಟಿರುವ ಬಾಗಿಲುಗಳ ಹಿಂದೆ, ಹೊರಗೆ ಹೋಗಲು ಹೆದರುತ್ತಾ ತಮ್ಮ ಮನೆಗಳಲ್ಲಿ ಇರುತ್ತಾರೆ.

ಅನೇಕ ಬೇರೆ ವಿಷಯಗಳು ಕಡೇ ದಿವಸಗಳಲ್ಲಿ ಸಂಭವಿಸಲಿವೆ ಎಂದು ಮುಂತಿಳಿಸಲಾಗಿತ್ತು, ಮತ್ತು ಅವುಗಳೆಲ್ಲವು ನೆರವೇರುತ್ತಾ ಇವೆ. ಇದರ ಅರ್ಥ ಲೋಕದ ಅಂತ್ಯವು ಹತ್ತಿರವಾಗಿದೆ. ಆದರೆ, ಸಂತೋಷಕರವಾಗಿಯೇ, ಪಾರಾಗುವವರಿರುವರು. “ಲೋಕವೂ . . . ಗತಿಸಿ ಹೋಗು” ತ್ತದೆ ಎಂದು ಹೇಳಿದ ಮೇಲೆ, ಬೈಬಲ್‌ ಹೀಗೆ ವಾಗ್ದಾನಿಸುತ್ತದೆ: “ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.”—1 ಯೋಹಾನ 2:17.

ಆದುದರಿಂದ ನಾವು ದೇವರ ಚಿತ್ತವೇನೆಂದು ಕಲಿಯಬೇಕು ಮತ್ತು ಅದನ್ನು ಮಾಡಬೇಕು. ಆಗ ನಾವು ಈ ಲೋಕದ ಅಂತ್ಯವನ್ನು ಪಾರಾಗಿ ದೇವರ ಹೊಸ ಲೋಕದ ಆಶೀರ್ವಾದಗಳಲ್ಲಿ ನಿರಂತರವಾಗಿ ಆನಂದಿಸಬಹುದು. ಆ ಸಮಯದ ಕುರಿತು ಬೈಬಲ್‌ ವಾಗ್ದಾನಿಸುವುದು: “ದೇವರು . . . [ಜನಾಂಗಗಳ] ಕಣ್ಣೀರನ್ನೆಲ್ಲಾ ಒರಸಿಬಿಡುವನು, ಮತ್ತು ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ.”—ಪ್ರಕಟನೆ 21:3, 4.

ಬೇರೆ ರೀತಿಯಲ್ಲಿ ಸೂಚಿಸಲ್ಪಡದಿರುವಲ್ಲಿ, ಉಪಯೋಗಿಸಲ್ಪಟ್ಟ ಬೈಬಲ್‌ ಭಾಷಾಂತರವು ‘ಇಂಡಿಯಾ ಸಿಲೋನ್‌ ದೇಶಗಳ ಸತ್ಯವೇದ ಸಂಘದ ಕನ್ನಡ ಬೈಬಲ್‌’ ಆಗಿದೆ.

[ಪುಟ 6ರಲ್ಲಿರುವ ಚಿತ್ರ ಕೃಪೆ]

Photo Credits: Airplane: USAF photo. Child: WHO photo by W. Cutting. Earth quake: Y. Ishiyama, Hokkaido University, Japan.