“ಎಲ್ಲಕ್ಕೂ ಮಿಗಿಲಾಗಿ, ಒಬ್ಬರಿಗೊಬ್ಬರು ತೀವ್ರವಾದ ಪ್ರೀತಿಯುಳ್ಳವರಾಗಿರಿ”
“ಎಲ್ಲಕ್ಕೂ ಮಿಗಿಲಾಗಿ, ಒಬ್ಬರಿಗೊಬ್ಬರು ತೀವ್ರವಾದ ಪ್ರೀತಿಯುಳ್ಳವರಾಗಿರಿ”
“ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ; . . . ಎಲ್ಲಕ್ಕೂ ಮಿಗಿಲಾಗಿ, ಒಬ್ಬರಿಗೊಬ್ಬರು ತೀವ್ರವಾದ ಪ್ರೀತಿಯುಳ್ಳವರಾಗಿರಿ.”—1 ಪೇತ್ರ 4:7, 8, NW.
ತನ್ನ ಅಪೊಸ್ತಲರೊಂದಿಗೆ ಕಳೆಯಲಿಕ್ಕಿರುವ ಕೊನೆಯ ಕೆಲವು ತಾಸುಗಳು ತುಂಬ ಅಮೂಲ್ಯವಾಗಿವೆ ಎಂಬುದು ಯೇಸುವಿಗೆ ಗೊತ್ತಿತ್ತು. ಅವರಿಗೆ ಮುಂದೆ ಏನು ಕಾದಿದೆ ಎಂಬುದು ಅವನಿಗೆ ತಿಳಿದಿತ್ತು. ಅವರಿಗೆ ಒಂದು ಮಹಾನ್ ಕೆಲಸವನ್ನು ಪೂರೈಸಲಿಕ್ಕಿತ್ತಾದರೂ, ಯೇಸುವಿನಂತೆಯೇ ಅವರು ಸಹ ದ್ವೇಷ ಮತ್ತು ಹಿಂಸೆಗೆ ಒಳಗಾಗಲಿದ್ದರು. (ಯೋಹಾನ 15:18-20) ಆ ಅಂತಿಮ ರಾತ್ರಿಯಂದು ಅವನು ಒಂದಕ್ಕಿಂತಲೂ ಹೆಚ್ಚು ಬಾರಿ ಅವರಿಗೆ ‘ಒಬ್ಬರನ್ನೊಬ್ಬರು ಪ್ರೀತಿಸುವ’ ಆವಶ್ಯಕತೆಯ ಕುರಿತು ನೆನಪು ಹುಟ್ಟಿಸಿದನು.—ಯೋಹಾನ 13:34, 35; 15:12, 13, 17.
2 ಆ ರಾತ್ರಿ ಅಲ್ಲಿ ಹಾಜರಿದ್ದ ಅಪೊಸ್ತಲ ಪೇತ್ರನು ಯೇಸುವಿನ ಮಾತುಗಳ ಪ್ರಮುಖತೆಯನ್ನು ಮನಗಂಡನು. ವರ್ಷಗಳಾನಂತರ, ಯೆರೂಸಲೇಮಿನ ನಾಶನಕ್ಕೆ ಸ್ವಲ್ಪ ಮುಂಚೆ ತನ್ನ ಬರವಣಿಗೆಯಲ್ಲಿ ಪೇತ್ರನು ಪ್ರೀತಿಯ ಪ್ರಮುಖತೆಯನ್ನು ಒತ್ತಿಹೇಳಿದನು. ಅವನು ಕ್ರೈಸ್ತರಿಗೆ ಸಲಹೆ ನೀಡಿದ್ದು: “ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ; . . . ಎಲ್ಲಕ್ಕೂ ಮಿಗಿಲಾಗಿ, ಒಬ್ಬರಿಗೊಬ್ಬರು ತೀವ್ರವಾದ ಪ್ರೀತಿಯುಳ್ಳವರಾಗಿರಿ.” (1 ಪೇತ್ರ 4:7, 8, NW) ಸದ್ಯದ ಈ ವಿಷಯಗಳ ವ್ಯವಸ್ಥೆಯ “ಕಡೇ ದಿವಸಗಳಲ್ಲಿ” ಜೀವಿಸುತ್ತಿರುವವರಿಗೆ ಪೇತ್ರನ ಮಾತುಗಳು ತುಂಬ ಅರ್ಥಭರಿತವಾದವುಗಳಾಗಿವೆ. (2 ತಿಮೊಥೆಯ 3:1) “ತೀವ್ರವಾದ ಪ್ರೀತಿ” ಎಂದರೇನು? ಇತರರ ಕಡೆಗೆ ನಮಗೆ ಇಂಥ ಪ್ರೀತಿಯಿರುವುದು ಏಕೆ ಪ್ರಾಮುಖ್ಯವಾದದ್ದಾಗಿದೆ? ಮತ್ತು ನಮಗೆ ಇಂಥ ಪ್ರೀತಿಯಿದೆ ಎಂಬುದನ್ನು ನಾವು ಹೇಗೆ ರುಜುಪಡಿಸಬಲ್ಲೆವು?
“ತೀವ್ರವಾದ ಪ್ರೀತಿ” ಎಂದರೇನು?
3 ಪ್ರೀತಿಯು ತಾನಾಗಿಯೇ ಉದ್ಭವಿಸಬೇಕಾದ ಒಂದು ಭಾವನೆಯಾಗಿದೆ ಎಂದು ಅನೇಕರು ನೆನಸುತ್ತಾರೆ. ಆದರೆ ಪೇತ್ರನು ಯಾವುದೋ ಒಂದು ವಿಧದ ಪ್ರೀತಿಯ ಕುರಿತು ಮಾತಾಡಲಿಲ್ಲ; ಅತ್ಯಂತ ಶ್ರೇಷ್ಠ ರೀತಿಯ ಪ್ರೀತಿಯ ಕುರಿತು ಮಾತಾಡಿದನು. ಒಂದನೆಯ ಪೇತ್ರ 4:8ರಲ್ಲಿರುವ “ಪ್ರೀತಿ” ಎಂಬ ಪದವು, ಆಘಾಪೀ ಎಂಬ ಗ್ರೀಕ್ ಶಬ್ದದ ಭಾಷಾಂತರವಾಗಿದೆ. ಈ ಪದವು, ಮೂಲತತ್ತ್ವಗಳಿಂದ ಮಾರ್ಗದರ್ಶಿಸಲ್ಪಡುವ ಅಥವಾ ನಿಯಂತ್ರಿಸಲ್ಪಡುವ ನಿಸ್ವಾರ್ಥ ಪ್ರೀತಿಯನ್ನು ಸೂಚಿಸುತ್ತದೆ. ಪರಾಮರ್ಶೆಯ ಕೃತಿಯೊಂದಕ್ಕನುಸಾರ, ಈ ರೀತಿಯ ಪ್ರೀತಿಯನ್ನು ನಿಯಂತ್ರಿಸಸಾಧ್ಯವಿದೆ, ಏಕೆಂದರೆ ಪ್ರಧಾನವಾಗಿ ಇದೊಂದು ಭಾವಾವೇಶವಾಗಿರದೆ, ಒಬ್ಬ ವ್ಯಕ್ತಿಯು ಒಂದು ನಿರ್ದಿಷ್ಟ ರೀತಿಯಲ್ಲಿ ವರ್ತಿಸುವಂತೆ ನಡೆಸುವ ಭಾವನಿರ್ಣಯವಾಗಿದೆ. ಸ್ವಾರ್ಥಭಾವವನ್ನೇ ತೋರಿಸುವ ಪ್ರವೃತ್ತಿಯನ್ನು ನಾವು ಬಾಧ್ಯತೆಯಾಗಿ ಪಡೆದಿರುವುದರಿಂದ, ಪರಸ್ಪರ ಪ್ರೀತಿಯನ್ನು ತೋರಿಸಲು ಅಂದರೆ ದೈವಿಕ ಮೂಲತತ್ತ್ವಗಳು ಮಾರ್ಗದರ್ಶಿಸುವಂಥ ವಿಧಗಳಲ್ಲಿ ಅದನ್ನು ತೋರಿಸಲು ನಮಗೆ ಮರುಜ್ಞಾಪನಗಳ ಅಗತ್ಯವಿದೆ.—ಆದಿಕಾಂಡ 8:21; ರೋಮಾಪುರ 5:12.
4 ಆದರೆ ಕೇವಲ ಕರ್ತವ್ಯಪ್ರಜ್ಞೆಯಿಂದ ನಾವು ಒಬ್ಬರು ಇನ್ನೊಬ್ಬರನ್ನು ಪ್ರೀತಿಸಬೇಕು ಎಂಬುದು ಇದರ ಅರ್ಥವಲ್ಲ. ಆಘಾಪೀ ಪ್ರೀತಿಯು ಆದರಣೆಯಿಲ್ಲದ್ದೂ ಅಥವಾ ಭಾವರಹಿತವಾದದ್ದೇನೂ ಅಲ್ಲ. ನಮ್ಮನಮ್ಮೊಳಗೆ ನಾವು ‘ತೀವ್ರವಾದ [ಅಕ್ಷರಾರ್ಥವಾಗಿ, “ಎಲ್ಲೆಯನ್ನು ಮೀರಿದ”] ಪ್ರೀತಿಯನ್ನು’ ಹೊಂದಿರಬೇಕು ಎಂದು ಪೇತ್ರನು ಹೇಳಿದನು. * (ಕಿಂಗ್‌ಡಮ್ ಇಂಟರ್‌ಲಿನಿಯರ್) ಆದರೂ, ಇಂಥ ಪ್ರೀತಿಯು ಪ್ರಯತ್ನವನ್ನು ಅಗತ್ಯಪಡಿಸುತ್ತದೆ. “ತೀವ್ರ” ಎಂದು ತರ್ಜುಮೆಮಾಡಲ್ಪಟ್ಟಿರುವ ಗ್ರೀಕ್ ಪದದ ಕುರಿತು ಒಬ್ಬ ವಿದ್ವಾಂಸನು ಹೇಳುವುದು: “ಇದು, ಓಟದ ಕೊನೆಯನ್ನು ತಲಪುವಾಗ ಒಬ್ಬ ಕ್ರೀಡಾಪಟುವು ತನ್ನಲ್ಲಿ ಉಳಿದಿರುವ ಅಲ್ಪಸ್ವಲ್ಪ ಬಲವನ್ನು ಉಪಯೋಗಿಸಿ ಅತ್ಯಂತ ಪ್ರಬಲವಾದ ರೀತಿಯಲ್ಲಿ ತನ್ನ ಮಾಂಸಖಂಡಗಳನ್ನು ಮುಂಚಾಚುವಂಥ ಚಿತ್ರಣವನ್ನು ನೀಡುತ್ತದೆ.”
5 ಹಾಗಾದರೆ, ನಮ್ಮ ಪ್ರೀತಿಯು ಯಾವುದು ಅನುಕೂಲಕರವಾಗಿದೆಯೋ ಅದನ್ನು ಮಾಡುವುದಕ್ಕೆ ಮಾತ್ರ ಸೀಮಿತವಾಗಿರಬಾರದು ಅಥವಾ ಆಯ್ದ ಕೆಲವರಿಗೆ ಮಾತ್ರ ತೋರಿಸಲ್ಪಡುವಂಥದ್ದಾಗಿರಬಾರದು. ಪ್ರೀತಿಯನ್ನು ತೋರಿಸುವುದು ತುಂಬ ಕಷ್ಟಕರವಾಗಿರಬಹುದಾದ ಸಂದರ್ಭಗಳಲ್ಲಿಯೂ ಅದನ್ನು ತೋರಿಸುವಂತೆ ಕ್ರೈಸ್ತ ಪ್ರೀತಿಯು ಅಗತ್ಯಪಡಿಸುತ್ತದೆ. (2 ಕೊರಿಂಥ 6:11-13) ಒಬ್ಬ ಕ್ರೀಡಾಪಟುವು ತನ್ನ ಕೌಶಲಗಳನ್ನು ಉತ್ತಮಗೊಳಿಸಲಿಕ್ಕಾಗಿ ತರಬೇತಿಯನ್ನು ಪಡೆದುಕೊಂಡು ಅದನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುವಂತೆಯೇ, ನಾವು ಈ ರೀತಿಯ ಪ್ರೀತಿಯನ್ನು ಬೆಳೆಸಿಕೊಳ್ಳುವ ಹಾಗೂ ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂಬುದಂತೂ ಸುಸ್ಪಷ್ಟ. ನಮ್ಮನಮ್ಮೊಳಗೆ ಇಂಥ ಪ್ರೀತಿಯಿರುವುದು ಅತ್ಯಾವಶ್ಯಕ. ಏಕೆ? ಕಡಿಮೆಪಕ್ಷ ಮೂರು ಕಾರಣಗಳಿಗಾಗಿ.
ನಾವು ಏಕೆ ಒಬ್ಬರನ್ನೊಬ್ಬರು ಪ್ರೀತಿಸಬೇಕು?
6 ಮೊದಲನೆಯ ಕಾರಣವೇನೆಂದರೆ, “ಪ್ರೀತಿಯು ದೇವರಿಂದಾಗಿದೆ.” (1 ಯೋಹಾನ 4:7) ಈ ಅಪೇಕ್ಷಣೀಯ ಗುಣದ ಮೂಲನಾಗಿರುವ ಯೆಹೋವನೇ ನಮ್ಮನ್ನು ಮೊದಲು ಪ್ರೀತಿಸಿದನು. ಅಪೊಸ್ತಲ ಯೋಹಾನನು ಹೇಳುವುದು: “ದೇವರು ತನ್ನ ಒಬ್ಬನೇ ಮಗನನ್ನು ನಾವು ಆತನ ಮೂಲಕ ಜೀವಿಸುವದಕ್ಕಾಗಿ [“ಜೀವವನ್ನು ಪಡೆಯಲಿಕ್ಕಾಗಿ,” NW] ಲೋಕಕ್ಕೆ ಕಳುಹಿಸಿಕೊಟ್ಟದರಲ್ಲಿಯೇ ದೇವರ ಪ್ರೀತಿಯು ನಮ್ಮಲ್ಲಿ ಪ್ರತ್ಯಕ್ಷವಾಗಿದೆ.” (1 ಯೋಹಾನ 4:9) ದೇವಕುಮಾರನು ಒಬ್ಬ ಮಾನವನಾಗಿ ಪರಿಣಮಿಸುವ ಮೂಲಕ, ತನ್ನ ಶುಶ್ರೂಷೆಯನ್ನು ಪೂರೈಸುವ ಮೂಲಕ, ಮತ್ತು ಯಾತನಾ ಕಂಬದ ಮೇಲೆ ಮರಣವನ್ನಪ್ಪುವ ಮೂಲಕ ಲೋಕಕ್ಕೆ ‘ಕಳುಹಿಸಿಕೊಡಲ್ಪಟ್ಟನು’; ನಾವೆಲ್ಲರೂ “ಜೀವವನ್ನು ಪಡೆಯ”ಸಾಧ್ಯವಾಗುವಂತೆ ಇದೆಲ್ಲವೂ ಸಂಭವಿಸಿತು. ದೇವರ ಪ್ರೀತಿಯ ಈ ಶ್ರೇಷ್ಠ ಅಭಿವ್ಯಕ್ತಿಗೆ ನಾವು ಹೇಗೆ ಪ್ರತಿಕ್ರಿಯಿಸಬೇಕು? ಯೋಹಾನನು ಹೇಳುವುದು: “ದೇವರು ನಮ್ಮನ್ನು ಹೀಗೆ ಪ್ರೀತಿಸಿದ ಮೇಲೆ ನಾವು ಒಬ್ಬರನ್ನೊಬ್ಬರು ಪ್ರೀತಿಸುವ ಹಂಗಿನಲ್ಲಿದ್ದೇವೆ.” (1 ಯೋಹಾನ 4:11) “ದೇವರು ನಮ್ಮನ್ನು ಹೀಗೆ ಪ್ರೀತಿಸಿದ ಮೇಲೆ”—ಕೇವಲ ನಿನ್ನನ್ನು ಎಂದಲ್ಲ ಬದಲಾಗಿ ನಮ್ಮನ್ನು ಎಂದು ಯೋಹಾನನು ಬರೆದಿರುವುದನ್ನು ಗಮನಿಸಿರಿ. (ಓರೆ ಅಕ್ಷರಗಳು ನಮ್ಮವು.) ಹಾಗಾದರೆ ಒಂದು ಅಂಶವಂತೂ ಸ್ಪಷ್ಟ: ದೇವರು ನಮ್ಮ ಜೊತೆ ಆರಾಧಕರನ್ನು ಪ್ರೀತಿಸುವುದಾದರೆ, ನಾವು ಸಹ ಅವರನ್ನು ಪ್ರೀತಿಸುವ ಹಂಗಿನಲ್ಲಿದ್ದೇವೆ.
7 ಎರಡನೆಯದಾಗಿ, “ಎಲ್ಲವುಗಳ ಅಂತ್ಯವು ಹತ್ತಿರವಾಗಿ”ರುವುದರಿಂದ, ಅಗತ್ಯದಲ್ಲಿರುವ ನಮ್ಮ ಸಹೋದರರಿಗೆ ಸಹಾಯವನ್ನು ನೀಡಲಿಕ್ಕೋಸ್ಕರ ನಾವು ಈಗ ಪರಸ್ಪರ ಇನ್ನಷ್ಟು ಹೆಚ್ಚು ಪ್ರೀತಿಸುವುದು ವಿಶೇಷವಾಗಿ ಅತ್ಯಾವಶ್ಯಕವಾಗಿದೆ. (1 ಪೇತ್ರ 4:7) ನಾವು ‘ಕಠಿನಕಾಲಗಳಲ್ಲಿ’ ಜೀವಿಸುತ್ತಿದ್ದೇವೆ. (2 ತಿಮೊಥೆಯ 3:1) ಲೋಕದ ಪರಿಸ್ಥಿತಿಗಳು, ನೈಸರ್ಗಿಕ ವಿಪತ್ತುಗಳು, ಮತ್ತು ವಿರೋಧವು ನಮ್ಮ ಮೇಲೆ ಸಂಕಷ್ಟಗಳನ್ನು ತರುತ್ತದೆ. ಪರೀಕ್ಷೆಗೊಳಪಡಿಸುವಂಥ ಸನ್ನಿವೇಶಗಳ ಕೆಳಗೆ ನಾವು ಒಬ್ಬರು ಇನ್ನೊಬ್ಬರಿಗೆ ಇನ್ನಷ್ಟು ಸಮೀಪವಾಗುವ ಅಗತ್ಯವಿದೆ. ತೀವ್ರವಾದ ಪ್ರೀತಿಯು ನಮ್ಮನ್ನು ಐಕ್ಯಗೊಳಿಸುವುದು ಮತ್ತು ‘ಒಬ್ಬರು ಇನ್ನೊಬ್ಬರ ಹಿತವನ್ನು ಚಿಂತಿಸುವಂತೆ’ ನಮ್ಮನ್ನು ಪ್ರಚೋದಿಸುವುದು.—1 ಕೊರಿಂಥ 12:24-26.
8 ಮೂರನೆಯದಾಗಿ, ನಮ್ಮನ್ನು ಶೋಷಣೆಗೊಳಪಡಿಸುವಂತೆ ನಾವು ‘ಸೈತಾನನಿಗೆ ಅವಕಾಶಕೊಡಲು’ ಬಯಸದಿರುವುದರಿಂದಲೂ ನಾವು ಪರಸ್ಪರ ಪ್ರೀತಿಸುವ ಅಗತ್ಯವಿದೆ. (ಎಫೆಸ 4:27) ನಮ್ಮನ್ನು ಎಡವಿಬೀಳಿಸಲಿಕ್ಕಾಗಿ ಸೈತಾನನು, ಜೊತೆ ವಿಶ್ವಾಸಿಗಳ ಅಪರಿಪೂರ್ಣತೆಗಳನ್ನು ಅಂದರೆ ಅವರ ಕುಂದುಕೊರತೆಗಳು, ಲೋಪದೋಷಗಳು, ಮತ್ತು ತಪ್ಪುಗಳನ್ನು ಉಪಯೋಗಿಸಲು ಸದಾ ಜಾಗೃತನಾಗಿರುತ್ತಾನೆ. ಜೊತೆ ವಿಶ್ವಾಸಿಗಳ ಒಂದು ಅವಿಚಾರಭರಿತ ಹೇಳಿಕೆ ಅಥವಾ ನಿರ್ದಯ ಕೃತ್ಯವು ನಮ್ಮನ್ನು ಸಭೆಗೆ ಹೋಗದಿರುವಂತೆ ಮಾಡುತ್ತದೋ? (ಜ್ಞಾನೋಕ್ತಿ 12:18) ಒಂದುವೇಳೆ ನಮ್ಮಲ್ಲಿ ಪರಸ್ಪರರಿಗಾಗಿ ತೀವ್ರವಾದ ಪ್ರೀತಿಯಿರುವಲ್ಲಿ ನಾವು ಖಂಡಿತವಾಗಿಯೂ ಹೀಗೆ ಮಾಡುವುದಿಲ್ಲ! ಇಂಥ ಪ್ರೀತಿಯು ನಾವು ಶಾಂತಿಯನ್ನು ಕಾಪಾಡಿಕೊಳ್ಳಲು ಮತ್ತು ‘ಒಂದೇ ಮನಸ್ಸಿನಿಂದ’ ಐಕ್ಯವಾಗಿ ದೇವರ ಸೇವೆಮಾಡಲು ಸಹಾಯಮಾಡುತ್ತದೆ.—ಚೆಫನ್ಯ 3:9.
ನೀವು ಇತರರನ್ನು ಪ್ರೀತಿಸುತ್ತೀರಿ ಎಂಬುದನ್ನು ತೋರಿಸುವ ವಿಧ
9ಪ್ರೀತಿಯು ಮೊದಲಾಗಿ ಮನೆಯಲ್ಲಿ ತೋರಿಸಲ್ಪಡಬೇಕು. ಒಬ್ಬರು ಇನ್ನೊಬ್ಬರಿಗೆ ತೋರಿಸುವ ಪ್ರೀತಿಯಿಂದಲೇ ತನ್ನ ನಿಜ ಹಿಂಬಾಲಕರು ಗುರುತಿಸಲ್ಪಡುವರು ಎಂದು ಯೇಸು ಹೇಳಿದನು. (ಯೋಹಾನ 13:34, 35) ಪ್ರೀತಿಯು ಸಭೆಯಲ್ಲಿ ಮಾತ್ರವಲ್ಲ ಕುಟುಂಬದಲ್ಲಿ, ಅಂದರೆ ವಿವಾಹ ಸಂಗಾತಿಗಳ ನಡುವೆ ಮತ್ತು ಹೆತ್ತವರು ಹಾಗೂ ಮಕ್ಕಳ ನಡುವೆಯೂ ಸುವ್ಯಕ್ತವಾಗಬೇಕು. ಕುಟುಂಬದ ಸದಸ್ಯರಿಗಾಗಿ ಕೇವಲ ಪ್ರೀತಿಯ ಅನಿಸಿಕೆ ಆಗುವುದಷ್ಟೇ ಸಾಕಾಗುವುದಿಲ್ಲ; ನಾವು ಅದನ್ನು ಸಕಾರಾತ್ಮಕ ವಿಧಗಳಲ್ಲಿ ವ್ಯಕ್ತಪಡಿಸುವ ಅಗತ್ಯವಿದೆ.
10 ವಿವಾಹ ಸಂಗಾತಿಗಳು ಪರಸ್ಪರರಿಗಾಗಿ ಹೇಗೆ ಪ್ರೀತಿಯನ್ನು ತೋರಿಸಸಾಧ್ಯವಿದೆ? ತನ್ನ ಹೆಂಡತಿಯನ್ನು ನಿಜವಾಗಿಯೂ ಪ್ರೀತಿಸುವಂಥ ಒಬ್ಬ ಗಂಡನು, ಎಲ್ಲರ ಮುಂದೆ ಮತ್ತು ಖಾಸಗಿ ಜೀವನದಲ್ಲಿಯೂ ತಾನು ಅವಳನ್ನು ತುಂಬ ಪ್ರೀತಿಸುತ್ತೇನೆ ಎಂಬುದನ್ನು ತನ್ನ ನಡೆನುಡಿಯಲ್ಲಿ ತೋರ್ಪಡಿಸುತ್ತಾನೆ. ಅವಳ ವೈಯಕ್ತಿಕ ಘನತೆಯನ್ನು ಗೌರವಿಸುತ್ತಾನೆ ಮತ್ತು ಅವಳ ಆಲೋಚನೆಗಳು, ದೃಷ್ಟಿಕೋನಗಳು, ಹಾಗೂ ಭಾವನೆಗಳಿಗೆ ಪರಿಗಣನೆ ತೋರಿಸುತ್ತಾನೆ. (1 ಪೇತ್ರ 3:7) ತನಗಿಂತಲೂ ಹೆಚ್ಚಾಗಿ ಅವಳ ಅಭಿರುಚಿಗಳಿಗೆ ಆದ್ಯತೆ ನೀಡುತ್ತಾನೆ, ಮತ್ತು ಅವಳ ಭೌತಿಕ, ಆಧ್ಯಾತ್ಮಿಕ, ಹಾಗೂ ಭಾವನಾತ್ಮಕ ಆವಶ್ಯಕತೆಗಳನ್ನು ಪೂರೈಸಲು ತನ್ನಿಂದಾದುದೆಲ್ಲವನ್ನೂ ಮಾಡುತ್ತಾನೆ. (ಎಫೆಸ 5:25, 28) ತನ್ನ ಗಂಡನನ್ನು ನಿಜವಾಗಿಯೂ ಪ್ರೀತಿಸುವಂಥ ಒಬ್ಬ ಹೆಂಡತಿಯು, ಅವನು ಕೆಲವೊಮ್ಮೆ ತನ್ನ ನಿರೀಕ್ಷಣೆಗಳಿಗೆ ತಕ್ಕಂತೆ ನಡೆಯದಿರುವಾಗಲೂ ಅವನೊಂದಿಗೆ ‘ಭಯಭಕ್ತಿಯಿಂದ ನಡೆದುಕೊಳ್ಳುತ್ತಾಳೆ.’ (ಎಫೆಸ 5:22, 23) ಅನುಚಿತ ಬೇಡಿಕೆಗಳನ್ನು ಮಾಡದಿರುವ ಮೂಲಕ ಅವಳು ತನ್ನ ಸಂಗಾತಿಗೆ ಬೆಂಬಲಾತ್ಮಕವಾಗಿರುತ್ತಾಳೆ ಮತ್ತು ಅಧೀನಳಾಗಿರುತ್ತಾಳೆ, ಹಾಗೂ ಆಧ್ಯಾತ್ಮಿಕ ವಿಷಯಗಳ ಮೇಲೆ ಗಮನವನ್ನು ಕೇಂದ್ರೀಕರಿಸುವುದರಲ್ಲಿ ಅವನೊಂದಿಗೆ ಸಹಕರಿಸುತ್ತಾಳೆ.—ಆದಿಕಾಂಡ 2:18; ಮತ್ತಾಯ 6:33.
11 ಹೆತ್ತವರೇ, ನಿಮ್ಮ ಮಕ್ಕಳಿಗೆ ಹೇಗೆ ಪ್ರೀತಿಯನ್ನು ತೋರಿಸಬಲ್ಲಿರಿ? ಅವರಿಗಾಗಿ ಭೌತಿಕ ಒದಗಿಸುವಿಕೆಯನ್ನು ಮಾಡಲಿಕ್ಕಾಗಿ ನೀವು ಮನಃಪೂರ್ವಕವಾಗಿ ಶ್ರಮಿಸುವುದು ತಾನೇ ನಿಮ್ಮ ಪ್ರೀತಿಯ ಪುರಾವೆಯಾಗಿದೆ. (1 ತಿಮೊಥೆಯ 5:8) ಆದರೆ ಮಕ್ಕಳಿಗೆ ಆಹಾರ, ಬಟ್ಟೆ, ಮತ್ತು ವಸತಿಗಿಂತಲೂ ಹೆಚ್ಚಿನದ್ದು ಅವಶ್ಯವಾಗಿದೆ. ಅವರು ಸತ್ಯ ದೇವರನ್ನು ಪ್ರೀತಿಸುವ ಮತ್ತು ಆತನ ಸೇವೆಮಾಡುವ ವ್ಯಕ್ತಿಗಳಾಗಿ ಬೆಳೆಯಬೇಕಾದರೆ, ಅವರಿಗೆ ಆಧ್ಯಾತ್ಮಿಕ ತರಬೇತಿಯ ಅಗತ್ಯವಿದೆ. (ಜ್ಞಾನೋಕ್ತಿ 22:6) ಇದರ ಅರ್ಥ, ಕುಟುಂಬವಾಗಿ ಕೂಡಿ ಬೈಬಲ್ ಅಧ್ಯಯನ ಮಾಡಲಿಕ್ಕಾಗಿ ಸಮಯವನ್ನು ಬದಿಗಿರಿಸುವುದು, ಶುಶ್ರೂಷೆಯಲ್ಲಿ ಪಾಲ್ಗೊಳ್ಳುವುದು, ಮತ್ತು ಕ್ರೈಸ್ತ ಕೂಟಗಳಿಗೆ ಹಾಜರಾಗುವುದೇ ಆಗಿದೆ. (ಧರ್ಮೋಪದೇಶಕಾಂಡ 6:4-7) ಕ್ರಮವಾಗಿ ಈ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕಾದರೆ, ವಿಶೇಷವಾಗಿ ಈ ಕ್ಲಿಷ್ಟ ಸಮಯಗಳಲ್ಲಿ ಸಾಕಷ್ಟು ತ್ಯಾಗದ ಅಗತ್ಯವಿದೆ. ನಿಮ್ಮ ಮಕ್ಕಳ ಆಧ್ಯಾತ್ಮಿಕ ಆವಶ್ಯಕತೆಗಳ ಕುರಿತು ನೀವು ತೋರಿಸುವ ಚಿಂತೆ ಹಾಗೂ ನಿಮ್ಮಿಂದ ಮಾಡಲ್ಪಡುವ ಪ್ರಯತ್ನಗಳು ಪ್ರೀತಿಯ ಅಭಿವ್ಯಕ್ತಿಯಾಗಿವೆ, ಏಕೆಂದರೆ ಅವರ ನಿತ್ಯ ಹಿತಕ್ಷೇಮದಲ್ಲಿ ನೀವು ಆಸಕ್ತರಾಗಿದ್ದೀರಿ ಎಂಬುದನ್ನು ಈ ಮೂಲಕ ತೋರಿಸುತ್ತೀರಿ.—ಯೋಹಾನ 17:3.
12 ತಮ್ಮ ಮಕ್ಕಳ ಭಾವನಾತ್ಮಕ ಆವಶ್ಯಕತೆಗಳನ್ನು ಪೂರೈಸುವ ಮೂಲಕವೂ ಹೆತ್ತವರು ಪ್ರೀತಿಯನ್ನು ತೋರಿಸುವುದು ಅತ್ಯಾವಶ್ಯಕವಾಗಿದೆ. ಮಕ್ಕಳ ಮನಸ್ಸು ತುಂಬ ದುರ್ಬಲ; ಅವರ ಕೋಮಲ ಹೃದಯಗಳಿಗೆ ನಿಮ್ಮ ಪ್ರೀತಿಯ ಪುನರಾಶ್ವಾಸನೆಯ ಅಗತ್ಯವಿದೆ. ನೀವು ಅವರನ್ನು ಪ್ರೀತಿಸುತ್ತೀರಿ ಎಂಬುದನ್ನು ಅವರಿಗೆ ಹೇಳಿರಿ, ಮತ್ತು ಅವರಿಗೆ ಮಮತೆಯ ಹೊಳೆಯನ್ನೇ ಹರಿಸಿ, ಏಕೆಂದರೆ ಇಂಥ ಅಭಿವ್ಯಕ್ತಿಗಳು ತಾವು ಪ್ರೀತಿಗೆ ಅರ್ಹರು ಮತ್ತು ಪ್ರೀತಿಸಲ್ಪಡಲು ಯೋಗ್ಯರು ಎಂಬ ಭರವಸೆಯನ್ನು ಅವರಲ್ಲಿ ಮೂಡಿಸುತ್ತವೆ. ಅವರನ್ನು ಹೃತ್ಪೂರ್ವಕವಾಗಿ ಮತ್ತು ಪ್ರಾಮಾಣಿಕವಾಗಿ ಪ್ರಶಂಸಿಸಿರಿ, ಏಕೆಂದರೆ ಇದು ನೀವು ಅವರ ಪ್ರಯತ್ನಗಳನ್ನು ಗಮನಿಸುತ್ತೀರಿ ಹಾಗೂ ಅಮೂಲ್ಯವಾಗಿ ಪರಿಗಣಿಸುತ್ತೀರಿ ಎಂಬುದನ್ನು ಅವರು ಮನಗಾಣುವಂತೆ ಮಾಡುತ್ತದೆ. ಪ್ರೀತಿಯಿಂದ ಅವರಿಗೆ ಶಿಸ್ತನ್ನು ನೀಡಿರಿ; ಏಕೆಂದರೆ ಇಂಥ ತಿದ್ದುಪಾಟು, ಅವರು ಯಾವ ರೀತಿಯ ವ್ಯಕ್ತಿಗಳಾಗುತ್ತಿದ್ದಾರೆ ಎಂಬ ವಿಷಯದಲ್ಲಿ ನೀವು ನಿಜವಾಗಿಯೂ ಆಸಕ್ತಿ ವಹಿಸುತ್ತೀರಿ ಎಂಬುದನ್ನು ಅವರಿಗೆ ತಿಳಿಯಪಡಿಸುತ್ತದೆ. (ಎಫೆಸ 6:4) ಪ್ರೀತಿಯ ಈ ಎಲ್ಲಾ ಹಿತಕರ ಅಭಿವ್ಯಕ್ತಿಗಳು, ಈ ಕಡೇ ದಿವಸಗಳ ಒತ್ತಡಗಳನ್ನು ಎದುರಿಸಲು ಸುಸಜ್ಜಿತವಾಗಿರುವಂಥ ಒಂದು ಸಂತೋಷಭರಿತ, ಆಪ್ತ ಕುಟುಂಬವನ್ನು ಕಟ್ಟಲು ಸಹಾಯಮಾಡುತ್ತವೆ.
13ಪ್ರೀತಿಯು ಇತರರ ಕುಂದುಕೊರತೆಗಳನ್ನು ಗಂಭೀರವಾಗಿ ಪರಿಗಣಿಸದಿರುವಂತೆ ನಮ್ಮನ್ನು ಪ್ರಚೋದಿಸುತ್ತದೆ. “ಒಬ್ಬರಿಗೊಬ್ಬರು ತೀವ್ರವಾದ ಪ್ರೀತಿಯುಳ್ಳವರಾಗಿರಿ” ಎಂದು ಪೇತ್ರನು ತನ್ನ ವಾಚಕರಿಗೆ ಬುದ್ಧಿಹೇಳುತ್ತಿರುವಾಗ, ಇದು ಏಕೆ ಪ್ರಾಮುಖ್ಯವಾಗಿದೆ ಎಂಬ ಕಾರಣವನ್ನೂ ಅವನು ಕೊಟ್ಟನು ಎಂಬುದನ್ನು ಜ್ಞಾಪಿಸಿಕೊಳ್ಳಿರಿ. ಅದೇನೆಂದರೆ, “ಪ್ರೀತಿಯು ಬಹು ಪಾಪಗಳನ್ನು ಮುಚ್ಚುತ್ತದೆ.” (1 ಪೇತ್ರ 4:8) ಪಾಪಗಳನ್ನು ‘ಮುಚ್ಚುವುದು,’ ಗಂಭೀರವಾದ ಪಾಪಗಳನ್ನು ‘ಮುಚ್ಚಿಹಾಕುವುದನ್ನು’ ಅರ್ಥೈಸುವುದಿಲ್ಲ. ಗಂಭೀರವಾದ ಪಾಪಗಳಂಥ ವಿಚಾರವನ್ನು ಸಭೆಯಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವವರಿಗೆ ತಿಳಿಸಬೇಕು ಮತ್ತು ಅವರು ಈ ವಿಚಾರವನ್ನು ನಿರ್ವಹಿಸಬೇಕು. (ಯಾಜಕಕಾಂಡ 5:1; ಜ್ಞಾನೋಕ್ತಿ 29:24) ಗಂಭೀರವಾದ ಪಾಪಗಳನ್ನು ಮಾಡುವವರು ಮುಗ್ಧ ಜನರನ್ನು ನೋಯಿಸುತ್ತಾ ಅಥವಾ ಅವರನ್ನು ಬಲಿಪಶುಗಳನ್ನಾಗಿ ಮಾಡುತ್ತಾ ಮುಂದುವರಿಯುವಂತೆ ಅನುಮತಿಸುವುದು ಅತ್ಯಂತ ಪ್ರೀತಿರಹಿತ ಹಾಗೂ ಅಶಾಸ್ತ್ರೀಯ ಕೃತ್ಯವಾಗಿರುವುದು.—1 ಕೊರಿಂಥ 5:9-13.
14 ಹೆಚ್ಚಿನ ವಿದ್ಯಮಾನಗಳಲ್ಲಿ, ಜೊತೆ ವಿಶ್ವಾಸಿಗಳ ದೋಷಗಳು ಮತ್ತು ತಪ್ಪುಗಳು ಸಾಮಾನ್ಯವಾಗಿ ಸಣ್ಣಪುಟ್ಟವುಗಳಾಗಿರುತ್ತವೆ. ಕೆಲವೊಮ್ಮೆ ನಾವೆಲ್ಲರೂ ನಡೆನುಡಿಗಳಲ್ಲಿ ತಪ್ಪಿಬೀಳುತ್ತೇವೆ, ಹಾಗೂ ಒಬ್ಬರು ಇನ್ನೊಬ್ಬರಿಗೆ ನಿರಾಶೆಯನ್ನು ಅಥವಾ ನೋವನ್ನು ಸಹ ಉಂಟುಮಾಡುತ್ತೇವೆ. (ಯಾಕೋಬ 3:2) ಹೀಗಿರುವಾಗ, ನಾವು ಇತರರ ಕುಂದುಕೊರತೆಗಳನ್ನು ಆದಷ್ಟು ಬೇಗನೆ ಎಲ್ಲರಿಗೂ ಪ್ರಚಾರಮಾಡಿಬಿಡುತ್ತೇವೊ? ಹೀಗೆ ಮಾಡುವುದು ಸಭೆಯಲ್ಲಿನ ತಿಕ್ಕಾಟಕ್ಕೆ ದಾರಿಮಾಡಿಕೊಡುತ್ತದೇ ಹೊರತು ಮತ್ತೇನನ್ನೂ ಸಾಧಿಸುವುದಿಲ್ಲ. (ಎಫೆಸ 4:1-3) ಒಂದುವೇಳೆ ನಾವು ಪ್ರೀತಿಯಿಂದ ನಿಯಂತ್ರಿಸಲ್ಪಡುವಲ್ಲಿ, ಒಬ್ಬ ಜೊತೆ ಆರಾಧಕನ “ಒಂದು ತಪ್ಪನ್ನು” ನಾವು “ಬಯಲು”ಪಡಿಸುವುದಿಲ್ಲ. (ಕೀರ್ತನೆ 50:20, NW) ಗಾರೆ ಹಾಗೂ ಪೆಯಿಂಟ್ ಒಂದು ಗೋಡೆಯ ಮೇಲಿನ ತೂತುಗಳು ಮತ್ತು ಗುರುತುಗಳನ್ನು ಹೇಗೆ ಮುಚ್ಚಿಹಾಕುತ್ತವೋ ಹಾಗೆಯೇ ಪ್ರೀತಿಯು ಇತರರ ಅಪರಿಪೂರ್ಣತೆಗಳನ್ನು ಮುಚ್ಚಿಹಾಕುತ್ತದೆ.—ಜ್ಞಾನೋಕ್ತಿ 17:9.
15ಪ್ರೀತಿಯು, ಯಾರು ನಿಜವಾಗಿಯೂ ಅಗತ್ಯದಲ್ಲಿದ್ದಾರೋ ಅವರಿಗೆ ಸಹಾಯಮಾಡುವಂತೆ ನಮ್ಮನ್ನು ಪ್ರಚೋದಿಸುವುದು. ಕಡೇ ದಿವಸಗಳಲ್ಲಿನ ಪರಿಸ್ಥಿತಿಗಳು ದಿನೇ ದಿನೇ ಹದಗೆಡುತ್ತಾ ಹೋದಂತೆ, ಅನೇಕವೇಳೆ ನಮ್ಮ ಜೊತೆ ವಿಶ್ವಾಸಿಗಳಿಗೆ ಪ್ರಾಪಂಚಿಕ ಅಥವಾ ಭೌತಿಕ ಸಹಾಯದ ಅಗತ್ಯವು ಉಂಟಾಗಬಹುದು. (1 ಯೋಹಾನ 3:17, 18) ಉದಾಹರಣೆಗೆ, ನಮ್ಮ ಸಭೆಯ ಸದಸ್ಯರೊಬ್ಬರು ಗುರುತರವಾದ ಆರ್ಥಿಕ ತೊಂದರೆಯನ್ನು ಅಥವಾ ಉದ್ಯೋಗನಷ್ಟವನ್ನು ಅನುಭವಿಸುತ್ತಿದ್ದಾರೋ? ಹಾಗಿರುವಲ್ಲಿ, ನಮ್ಮ ಸನ್ನಿವೇಶಗಳು ಅನುಮತಿಸುವಷ್ಟರ ಮಟ್ಟಿಗೆ ನಾವು ಹಣಕಾಸಿನ ಸಹಾಯವನ್ನು ಮಾಡಲು ಮುಂದೆ ಬರಬಹುದು. (ಜ್ಞಾನೋಕ್ತಿ 3:27, 28; ಯಾಕೋಬ 2:14-17) ಒಬ್ಬ ವೃದ್ಧ ವಿಧವೆಯ ಮನೆಯನ್ನು ರಿಪೇರಿಮಾಡುವ ಅಗತ್ಯವಿದೆಯೋ? ಈ ಕೆಲಸದಲ್ಲಿ ಸಹಾಯಮಾಡಲಿಕ್ಕಾಗಿ ನಾವು ಸೂಕ್ತವಾದ ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳಬಹುದು.—ಯಾಕೋಬ 1:27.
1 ಪೇತ್ರ 2:17, NW) ಆದುದರಿಂದ, ಪ್ರಥಮ ಶತಮಾನದ ಸಭೆಯಂತೆ, ಸಹಾಯವನ್ನು ಒದಗಿಸಲಿಕ್ಕಾಗಿ ಸಂಘಟಿಸಲ್ಪಟ್ಟಿರುವ ಪರಿಹಾರ ಪ್ರಯತ್ನಗಳನ್ನು ಬೆಂಬಲಿಸಲು ನಾವು ಯಾವಾಗಲೂ ತವಕಪಡುತ್ತೇವೆ. (ಅ. ಕೃತ್ಯಗಳು 11:27-30; ರೋಮಾಪುರ 15:26) ಈ ಎಲ್ಲಾ ವಿಧಗಳಲ್ಲಿ ನಾವು ಪ್ರೀತಿಯನ್ನು ತೋರಿಸುವಾಗ, ಈ ಕಡೇ ದಿವಸಗಳಲ್ಲಿ ನಮ್ಮನ್ನು ಐಕ್ಯಗೊಳಿಸುವಂಥ ಬಂಧವನ್ನು ನಾವು ಇನ್ನಷ್ಟು ಬಲಗೊಳಿಸುತ್ತೇವೆ.—ಕೊಲೊಸ್ಸೆ 3:14.
16 ನಾವು ಇತರರಿಗೆ ಪ್ರೀತಿಯನ್ನು ತೋರಿಸುವುದು, ನಮ್ಮ ಆಸುಪಾಸಿನಲ್ಲಿ ಜೀವಿಸುತ್ತಿರಬಹುದಾದಂಥವರಿಗೆ ಮಾತ್ರ ಸೀಮಿತವಾಗಿರಬಾರದು. ಕೆಲವೊಮ್ಮೆ ಬೇರೆ ದೇಶಗಳಲ್ಲಿ ಚಂಡಮಾರುತಗಳು, ಭೂಕಂಪಗಳು, ಅಥವಾ ಆಂತರಿಕ ಗಲಭೆಗೆ ತುತ್ತಾಗಿರುವ ದೇವರ ಸೇವಕರ ಕುರಿತಾದ ವರದಿಗಳನ್ನು ನಾವು ಕೇಳಿಸಿಕೊಳ್ಳಬಹುದು. ಅವರು ಆಹಾರ, ಬಟ್ಟೆ, ಮತ್ತು ಇತರ ವಸ್ತುಗಳ ಕೊರತೆಯಿಂದ ಕಷ್ಟಾನುಭವಿಸುತ್ತಿರಬಹುದು. ಅವರು ಬೇರೊಂದು ಜನಾಂಗ ಅಥವಾ ಕುಲಸಂಬಂಧಿತ ಗುಂಪಿಗೆ ಸೇರಿದವರಾಗಿರುವುದಾದರೂ ಪರವಾಗಿಲ್ಲ. ನಾವು ‘ಸಹೋದರರ ಪೂರ್ಣ ಬಳಗವನ್ನು ಪ್ರೀತಿಸುತ್ತೇವೆ.’ (17ಪ್ರೀತಿಯು ದೇವರ ರಾಜ್ಯದ ಸುವಾರ್ತೆಯನ್ನು ಇತರರೊಂದಿಗೆ ಹಂಚಿಕೊಳ್ಳುವಂತೆ ನಮ್ಮನ್ನು ಪ್ರಚೋದಿಸುತ್ತದೆ. ಯೇಸುವಿನ ಉದಾಹರಣೆಯನ್ನು ಪರಿಗಣಿಸಿರಿ. ಅವನು ಏಕೆ ಸಾರಿದನು ಮತ್ತು ಬೋಧಿಸಿದನು? ಜನರ ಗುಂಪುಗಳ ಕರುಣಾಜನಕ ಆಧ್ಯಾತ್ಮಿಕ ಪರಿಸ್ಥಿತಿಗಳನ್ನು ನೋಡಿ ಅವನು ‘ಕನಿಕರಪಟ್ಟನು.’ (ಮಾರ್ಕ 6:34) ಸುಳ್ಳು ಧಾರ್ಮಿಕ ಕುರುಬರಿಂದ ಜನರು ನಿರ್ಲಕ್ಷಿಸಲ್ಪಟ್ಟಿದ್ದರು ಮತ್ತು ತಪ್ಪುದಾರಿಯಲ್ಲಿ ನಡೆಸಲ್ಪಟ್ಟಿದ್ದರು. ವಾಸ್ತವದಲ್ಲಿ ಈ ಕುರುಬರು ಜನರಿಗೆ ಆಧ್ಯಾತ್ಮಿಕ ಸತ್ಯಗಳನ್ನು ಕಲಿಸಬೇಕಾಗಿತ್ತು ಮತ್ತು ಅವರಲ್ಲಿ ನಿರೀಕ್ಷೆಯನ್ನು ತುಂಬಿಸಬೇಕಾಗಿತ್ತು. ಹೀಗೆ, ಹೃತ್ಪೂರ್ವಕ ಪ್ರೀತಿ ಮತ್ತು ಸಹಾನುಭೂತಿಯಿಂದ ಪ್ರಚೋದಿತನಾದ ಯೇಸು “ದೇವರ ರಾಜ್ಯದ ಸುವಾರ್ತೆಯ” ಮೂಲಕ ಜನರಿಗೆ ಸಾಂತ್ವನ ನೀಡಿದನು.—ಲೂಕ 4:16-21, 43.
18 ಇಂದು ಸಹ ಅನೇಕ ಜನರು ಆಧ್ಯಾತ್ಮಿಕವಾಗಿ ನಿರ್ಲಕ್ಷಿಸಲ್ಪಟ್ಟಿದ್ದಾರೆ, ತಪ್ಪುದಾರಿಯಲ್ಲಿ ನಡೆಸಲ್ಪಟ್ಟಿದ್ದಾರೆ ಮತ್ತು ನಿರೀಕ್ಷೆಯಿಲ್ಲದವರಾಗಿದ್ದಾರೆ. ಇಷ್ಟರ ತನಕ ಸತ್ಯ ದೇವರ ಕುರಿತು ತಿಳಿದುಕೊಂಡಿರದಂಥ ಜನರ ಆಧ್ಯಾತ್ಮಿಕ ಆವಶ್ಯಕತೆಗಳ ವಿಷಯದಲ್ಲಿ ಯೇಸುವಿನಂತೆ ನಾವೂ ಶೀಘ್ರ ಸಂವೇದಿಗಳಾಗಿರುವಲ್ಲಿ, ಪ್ರೀತಿ ಮತ್ತು ಸಹಾನುಭೂತಿಯಿಂದ ನಾವು ಅವರೊಂದಿಗೆ ದೇವರ ರಾಜ್ಯದ ಸುವಾರ್ತೆಯನ್ನು ಹಂಚಿಕೊಳ್ಳುವಂತೆ ಪ್ರಚೋದಿಸಲ್ಪಡುವೆವು. (ಮತ್ತಾಯ 6:9, 10; 24:14) ಉಳಿದಿರುವಂಥ ಸ್ವಲ್ಪ ಕಾಲಾವಧಿಯನ್ನು ಪರಿಗಣಿಸುವಾಗ, ಈ ಜೀವರಕ್ಷಕ ಸಂದೇಶವನ್ನು ಸಾರುವುದು ಈ ಮುಂಚೆ ಎಂದೂ ಇಷ್ಟು ತುರ್ತಿನದ್ದಾಗಿರಲಿಲ್ಲ.—1 ತಿಮೊಥೆಯ 4:16.
“ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ”
19 ಒಬ್ಬರಿಗೊಬ್ಬರು ಪ್ರೀತಿಯುಳ್ಳವರಾಗಿರಬೇಕು ಎಂಬ ತನ್ನ ಸಲಹೆಗೆ ಮುನ್ನುಡಿಯಾಗಿ ಪೇತ್ರನು ಈ ಮಾತುಗಳನ್ನು ನುಡಿದನು ಎಂಬುದು ನಿಮಗೆ ನೆನಪಿರಲಿ: “ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ.” (1 ಪೇತ್ರ 4:7) ಅತಿ ಬೇಗನೆ ಈ ದುಷ್ಟ ಲೋಕವು ಇಲ್ಲವಾಗುವುದು ಮತ್ತು ದೇವರ ನೀತಿಯ ನೂತನ ಲೋಕವು ಅಸ್ತಿತ್ವಕ್ಕೆ ಬರುವುದು. (2 ಪೇತ್ರ 3:13) ಹೀಗಿರುವುದರಿಂದ, ಇದು ಉದಾಸೀನ ಮನೋಭಾವವನ್ನು ತಾಳುವ ಸಮಯವಲ್ಲ. ಯೇಸು ನಮಗೆ ಹೀಗೆ ಎಚ್ಚರಿಕೆಯನ್ನಿತ್ತನು: “ನಿಮ್ಮ ವಿಷಯದಲ್ಲಿ ಜಾಗರೂಕರಾಗಿರ್ರಿ. ಅತಿಭೋಜನದ ಮದಡಿನಿಂದಲೂ ಅಮಲಿನಿಂದಲೂ ಪ್ರಪಂಚದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗಿರಲಾಗಿ ಆ ದಿವಸವು ನಿಮ್ಮ ಮೇಲೆ ಉರ್ಲಿನಂತೆ ಫಕ್ಕನೆ ಬಂದೀತು.”—ಲೂಕ 21:34, 35.
20 ಆದುದರಿಂದ, ಕಾಲಪ್ರವಾಹದಲ್ಲಿ ನಾವೆಲ್ಲರೂ ಎಲ್ಲಿದ್ದೇವೆ ಎಂಬ ವಿಷಯದಲ್ಲಿ ಜಾಗರೂಕರಾಗಿದ್ದು, ‘ಎಚ್ಚರಿಕೆಯಿಂದಿರೋಣ.’ (ಮತ್ತಾಯ 24:42, NW) ನಮ್ಮನ್ನು ಅಪಕರ್ಷಿಸಸಾಧ್ಯವಿರುವ ಸೈತಾನನ ಯಾವುದೇ ಪ್ರಲೋಭನೆಗಳ ವಿರುದ್ಧ ನಮ್ಮನ್ನು ಜಾಗ್ರತೆಯಿಂದ ಕಾಪಾಡಿಕೊಳ್ಳೋಣ. ಈ ಭಾವರಹಿತ, ಪ್ರೀತಿರಹಿತ ಲೋಕವು, ಇತರರಿಗಾಗಿರುವ ನಮ್ಮ ಪ್ರೀತಿಯನ್ನು ತೋರಿಸುವುದರಿಂದ ನಮ್ಮನ್ನು ಎಂದಿಗೂ ತಡೆಗಟ್ಟುವಂತೆ ಬಿಡದಿರೋಣ. ಎಲ್ಲಕ್ಕಿಂತಲೂ ಮಿಗಿಲಾಗಿ, ಸತ್ಯ ದೇವರಾಗಿರುವ ಯೆಹೋವನಿಗೆ ನಾವು ಇನ್ನಷ್ಟು ಹತ್ತಿರವಾಗೋಣ; ಆತನ ಮೆಸ್ಸೀಯ ರಾಜ್ಯವು ಅತಿ ಬೇಗನೆ ಈ ಭೂಮಿಯ ಕಡೆಗೆ ಆತನಿಗಿರುವ ಮಹಿಮಾನ್ವಿತ ಉದ್ದೇಶವನ್ನು ಪೂರೈಸಲಿದೆ.—ಪ್ರಕಟನೆ 21:4, 5.
[ಪಾದಟಿಪ್ಪಣಿ]
^ ಪ್ಯಾರ. 7 ಒಂದನೆಯ ಪೇತ್ರ 4:8ರಲ್ಲಿ, ನಾವು ಒಬ್ಬರು ಇನ್ನೊಬ್ಬರನ್ನು “ಯಥಾರ್ಥವಾಗಿ,” “ಆಳವಾಗಿ,” ಅಥವಾ “ಶ್ರದ್ಧಾಪೂರ್ವಕವಾಗಿ” ಪ್ರೀತಿಸಬೇಕು ಎಂದು ಇತರ ಬೈಬಲ್ ಭಾಷಾಂತರಗಳು ಹೇಳುತ್ತವೆ.
ಅಧ್ಯಯನದ ಪ್ರಶ್ನೆಗಳು
• ತನ್ನ ಶಿಷ್ಯರನ್ನು ಬಿಟ್ಟುಹೋಗಲಿಕ್ಕಿದ್ದಾಗ ಯೇಸು ಯಾವ ಸಲಹೆಯನ್ನು ಅವರಿಗೆ ನೀಡಿದನು, ಮತ್ತು ಪೇತ್ರನು ಆ ಮಾತುಗಳ ಪ್ರಮುಖತೆಯನ್ನು ಮನಗಂಡನು ಎಂಬುದನ್ನು ಯಾವುದು ತೋರಿಸುತ್ತದೆ? (ಪ್ಯಾರ. 1-2)
• “ತೀವ್ರವಾದ ಪ್ರೀತಿ” ಎಂದರೇನು? (ಪ್ಯಾರ. 3-5)
• ನಾವು ಏಕೆ ಒಬ್ಬರನ್ನೊಬ್ಬರು ಪ್ರೀತಿಸಬೇಕು? (ಪ್ಯಾರ. 6-8)
• ನೀವು ಇತರರನ್ನು ಪ್ರೀತಿಸುತ್ತೀರಿ ಎಂಬುದನ್ನು ಹೇಗೆ ತೋರಿಸಸಾಧ್ಯವಿದೆ? (ಪ್ಯಾರ. 9-18)
• ಇದು ಏಕೆ ಉದಾಸೀನ ಮನೋಭಾವವನ್ನು ತಾಳುವ ಸಮಯವಲ್ಲ, ಮತ್ತು ನಾವು ಏನನ್ನು ಮಾಡುವ ನಿರ್ಧಾರವನ್ನು ಮಾಡತಕ್ಕದ್ದು?(ಪ್ಯಾರ. 19-20)
[ಪುಟ 29ರಲ್ಲಿರುವ ಚಿತ್ರ]
ಆಪ್ತವಾದ ಕುಟುಂಬವು, ಈ ಕಡೇ ದಿವಸಗಳ ಒತ್ತಡವನ್ನು ತಾಳಿಕೊಳ್ಳಲು ಹೆಚ್ಚು ಉತ್ತಮವಾಗಿ ಸಿದ್ಧವಾಗಿರುತ್ತದೆ
[ಪುಟ 30ರಲ್ಲಿರುವ ಚಿತ್ರ]
ಯಾರು ನಿಜವಾಗಿಯೂ ಅಗತ್ಯದಲ್ಲಿದ್ದಾರೋ ಅವರಿಗೆ ಸಹಾಯಮಾಡುವಂತೆ ಪ್ರೀತಿಯು ನಮ್ಮನ್ನು ಪ್ರಚೋದಿಸುತ್ತದೆ
[ಪುಟ 31ರಲ್ಲಿರುವ ಚಿತ್ರ]
ದೇವರ ರಾಜ್ಯದ ಸುವಾರ್ತೆಯನ್ನು ಇತರರೊಂದಿಗೆ ಹಂಚಿಕೊಳ್ಳುವುದು ಪ್ರೀತಿಯ ಕೃತ್ಯವಾಗಿದೆ