ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗಮನ ಕೊಡುವಿಕೆಯು ಅವರ ಜೀವಗಳನ್ನು ಕಾಪಾಡಿತು

ಗಮನ ಕೊಡುವಿಕೆಯು ಅವರ ಜೀವಗಳನ್ನು ಕಾಪಾಡಿತು

ಗಮನ ಕೊಡುವಿಕೆಯು ಅವರ ಜೀವಗಳನ್ನು ಕಾಪಾಡಿತು

ಯೇಸು ಕ್ರಿಸ್ತನು ಯೆರೂಸಲೇಮಿನ ಕೇಂದ್ರವಾಗಿದ್ದ ಯೆಹೂದಿ ವಿಷಯಗಳ ವ್ಯವಸ್ಥೆಯ ಅಂತ್ಯದ ಕುರಿತು ಮುಂಚಿತವಾಗಿಯೇ ಎಚ್ಚರಿಕೆಯನ್ನು ನೀಡಿದನು. ಇದು ಯಾವಾಗ ಸಂಭವಿಸುತ್ತದೆ ಎಂಬ ತಾರೀಖನ್ನು ಅವನು ತಿಳಿಸಲಿಲ್ಲ. ಆದರೆ ಆ ವಿನಾಶಕ್ಕೆ ಮುನ್ನಡಿಸುವಂಥ ಘಟನೆಗಳನ್ನು ಅವನು ವರ್ಣಿಸಿದನು. ಎಚ್ಚರಿಕೆಯಿಂದಿರುವಂತೆ ಮತ್ತು ಅಪಾಯದ ಕ್ಷೇತ್ರದಿಂದ ಪಲಾಯನಗೈಯುವಂತೆ ಅವನು ತನ್ನ ಶಿಷ್ಯರನ್ನು ಪ್ರೋತ್ಸಾಹಿಸಿದನು.

ಯೇಸು ಮುಂತಿಳಿಸಿದ್ದು: “ದಂಡುಗಳು ಯೆರೂಸಲೇಮ್‌ ಪಟ್ಟಣಕ್ಕೆ ಮುತ್ತಿಗೆ ಹಾಕಿರುವದನ್ನು ನೀವು ಕಾಣುವಾಗ ಅದು ಹಾಳಾಗುವ ಕಾಲ ಸಮೀಪವಾಯಿತೆಂದು ತಿಳುಕೊಳ್ಳಿರಿ.” ಮುಂದುವರಿಸುತ್ತಾ ಅವನಂದದ್ದು: “ಹಾಳುಮಾಡುವ ಅಸಹ್ಯವಸ್ತುವು ಪವಿತ್ರಸ್ಥಾನದಲ್ಲಿ ನಿಂತಿರುವದನ್ನು ನೀವು ಕಾಣುವಾಗ . . . ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿಹೋಗಲಿ.” ಭೌತಿಕ ಸೊತ್ತುಗಳನ್ನು ಸಂರಕ್ಷಿಸಲಿಕ್ಕಾಗಿ ಹಿಂದಿರುಗಿ ಹೋಗದಿರುವಂತೆ ಯೇಸು ತನ್ನ ಶಿಷ್ಯರನ್ನು ಉತ್ತೇಜಿಸಿದನು. ಅವರು ತಮ್ಮ ಜೀವಗಳನ್ನು ಕಾಪಾಡಿಕೊಳ್ಳಬೇಕಾದರೆ ಪಲಾಯನಗೈಯುವ ಜರೂರಿಯಿತ್ತು.​—ಲೂಕ 21:20, 21; ಮತ್ತಾಯ 24:15, 16.

ದೀರ್ಘಕಾಲದ ದಂಗೆಯನ್ನು ಅಡಗಿಸಲಿಕ್ಕಾಗಿ, ಸಾ.ಶ. 66ರಲ್ಲಿ ಸೆಸ್ಟಿಯಸ್‌ ಗ್ಯಾಲಸನು ಯೆರೂಸಲೇಮಿನ ವಿರುದ್ಧ ರೋಮನ್‌ ಸೈನ್ಯದ ನಾಯಕನಾಗಿ ಬಂದನು. ಅವನು ಪಟ್ಟಣವನ್ನು ಪ್ರವೇಶಿಸಿ ದೇವಾಲಯಕ್ಕೆ ಮುತ್ತಿಗೆಯನ್ನೂ ಹಾಕಿದನು. ಪಟ್ಟಣದಾದ್ಯಂತ ವಿಪರೀತ ಗಲಭೆಯುಂಟಾಯಿತು. ಎಚ್ಚರಿಕೆಯಿಂದಿದ್ದವರು ಗಂಡಾಂತರವು ಸಮೀಪಿಸಿದೆ ಎಂಬುದನ್ನು ಮನಗಂಡರು. ಆದರೆ ಅಲ್ಲಿಂದ ಪಲಾಯನಗೈಯಸಾಧ್ಯವಿತ್ತೋ? ಅನಿರೀಕ್ಷಿತವಾಗಿ ಸೆಸ್ಟಿಯಸ್‌ ಗ್ಯಾಲಸನು ತನ್ನ ಸೈನ್ಯವನ್ನು ಹಿಂದೆ ಕರೆಸಿಕೊಂಡನು. ಯೆಹೂದಿ ಬಂಡಾಯಗಾರರು ಅವರನ್ನು ಬೆನ್ನಟ್ಟಿದರು. ಯೆರೂಸಲೇಮ್‌ ಹಾಗೂ ಯೂದಾಯದಿಂದ ಪಲಾಯನಗೈಯಲು ಇದೇ ಸೂಕ್ತವಾದ ಸಮಯವಾಗಿತ್ತು!

ಅದರ ನಂತರದ ವರ್ಷ, ವೆಸ್‌ಪೇಸಿಯನ್‌ ಮತ್ತು ಅವನ ಮಗನಾದ ಟೈಟಸನ ನೇತೃತ್ವದ ಕೆಳಗೆ ರೋಮನ್‌ ಸೈನ್ಯವು ಪುನಃ ಹಿಂದಿರುಗಿ ಬಂತು. ಆಗ ಇಡೀ ದೇಶವು ಯುದ್ಧದಲ್ಲಿ ಮುಳುಗಿತು. ಸಾ.ಶ. 70ರ ಆರಂಭದಲ್ಲಿ ರೋಮನ್ನರು ಯೆರೂಸಲೇಮಿನ ಸುತ್ತಲೂ ಮೊನಚಾದ ತುದಿಗಳಿದ್ದ ಕಂಬಗಳಿಂದ ರಕ್ಷಣಾವರಣವನ್ನು ಕಟ್ಟಿದರು. ತಪ್ಪಿಸಿಕೊಳ್ಳುವ ಯಾವ ಮಾರ್ಗವೂ ಇರಲಿಲ್ಲ. (ಲೂಕ 19:​43, 44) ಪಟ್ಟಣದೊಳಗಿದ್ದ ಒಳಪಂಗಡಗಳು ಪರಸ್ಪರ ಹತ್ಯೆಗೈದವು. ಉಳಿದ ಜನರು ರೋಮನ್ನರಿಂದ ಕೊಲ್ಲಲ್ಪಟ್ಟರು ಅಥವಾ ಬಂದಿಗಳಾಗಿ ಕರೆದೊಯ್ಯಲ್ಪಟ್ಟರು. ಆ ಪಟ್ಟಣವೂ ಅದರ ದೇವಾಲಯವೂ ಸಂಪೂರ್ಣವಾಗಿ ನಾಶಪಡಿಸಲ್ಪಟ್ಟಿತು. ಪ್ರಥಮ ಶತಮಾನದ ಯೆಹೂದಿ ಇತಿಹಾಸಗಾರನಾದ ಜೋಸೀಫಸನಿಗನುಸಾರ, ಹತ್ತು ಲಕ್ಷಕ್ಕಿಂತಲೂ ಹೆಚ್ಚು ಮಂದಿ ಯೆಹೂದ್ಯರು ಕಷ್ಟಾನುಭವಿಸಿ ಮರಣಪಟ್ಟರು. ಅಂದಿನಿಂದ ಆ ದೇವಾಲಯವು ಎಂದೂ ಪುನಃ ನಿರ್ಮಿಸಲ್ಪಡಲಿಲ್ಲ.

ಒಂದುವೇಳೆ ಕ್ರೈಸ್ತರು ಸಾ.ಶ. 70ರಲ್ಲಿಯೂ ಯೆರೂಸಲೇಮಿನಲ್ಲೇ ಇರುತ್ತಿದ್ದರೆ, ಅವರು ಕೊಲ್ಲಲ್ಪಡುತ್ತಿದ್ದರು ಅಥವಾ ಅಲ್ಲಿದ್ದ ಎಲ್ಲರೊಂದಿಗೆ ದಾಸತ್ವಕ್ಕೆ ಒಳಗಾಗುತ್ತಿದ್ದರು. ಆದರೆ ಕ್ರೈಸ್ತರು ದೈವಿಕ ಎಚ್ಚರಿಕೆಗೆ ಗಮನ ಕೊಟ್ಟರು ಮತ್ತು ಯೆರೂಸಲೇಮ್‌ ಹಾಗೂ ಯೂದಾಯದಿಂದ ಯೊರ್ದನ್‌ ಹೊಳೆಯ ಪೂರ್ವಕ್ಕಿದ್ದ ಬೆಟ್ಟಗಳಿಗೆ ಪಲಾಯನಗೈದರು ಎಂದು ಪುರಾತನ ಇತಿಹಾಸಗಾರರು ವರದಿಸುತ್ತಾರೆ. ಇನ್ನಿತರರು ಪೆರಿಯ ಪ್ರಾಂತದಲ್ಲಿದ್ದ ಪೆಲಕ್ಕೆ ಹೋಗಿ ನೆಲೆಸಿದರು. ಅವರು ಯೂದಾಯವನ್ನು ತೊರೆದು ಬಂದಿದ್ದರು, ಪುನಃ ಅಲ್ಲಿಗೆ ಹಿಂದಿರುಗಲಿಲ್ಲ. ಯೇಸುವಿನ ಎಚ್ಚರಿಕೆಗೆ ಗಮನ ಕೊಟ್ಟದ್ದು ಅವರ ಜೀವಗಳನ್ನು ಕಾಪಾಡಿತ್ತು.

ಪ್ರಖ್ಯಾತ ಮೂಲಗಳಿಂದ ಬರುವ ಎಚ್ಚರಿಕೆಗಳನ್ನು ನೀವು ಗಂಭೀರವಾಗಿ ತೆಗೆದುಕೊಳ್ಳುತ್ತೀರೊ?

ಎಂದಿಗೂ ಸಂಭವಿಸಿರದಂಥ ಅನೇಕಾನೇಕ ಎಚ್ಚರಿಕೆಗಳ ಕುರಿತು ಕೇಳಿಸಿಕೊಂಡಿರುವ ಅನೇಕರು ಎಲ್ಲಾ ಎಚ್ಚರಿಕೆಗಳನ್ನು ಕ್ಷುಲ್ಲಕವಾಗಿ ಕಾಣುತ್ತಾರೆ. ಆದರೆ ಎಚ್ಚರಿಕೆಗಳಿಗೆ ಗಮನ ಕೊಡುವುದು ನಿಮ್ಮ ಜೀವವನ್ನು ಕಾಪಾಡಬಹುದು.

ಇಸವಿ 1975ರಲ್ಲಿ, ಒಂದು ಭೂಕಂಪವು ಸಂಭವಿಸಲಿದೆ ಎಂದು ಚೀನಾದಲ್ಲಿ ಎಚ್ಚರಿಕೆಗಳನ್ನು ಕೊಡಲಾಗಿತ್ತು. ಅಧಿಕಾರಿಗಳು ಕಾರ್ಯೋನ್ಮುಖರಾದರು. ಜನರೂ ಪ್ರತಿಕ್ರಿಯಿಸಿದರು. ಸಾವಿರಾರು ಜನರು ಕಾಪಾಡಲ್ಪಟ್ಟರು.

ಇಸವಿ 1991ರಲ್ಲಿ, ಫಿಲಿಪ್ಪೀನ್ಸ್‌ನ ಪೀನಟೂಬೊ ಪರ್ವತದ ಇಳಿಜಾರು ಪ್ರದೇಶಗಳಲ್ಲಿದ್ದ ಹಳ್ಳಿಗರು, ಆ ಪರ್ವತವು ಹೊಗೆ ಮತ್ತು ಬೂದಿಯನ್ನು ಹೊರಸೂಸುತ್ತಿದೆಯೆಂದು ವರದಿಸಿದರು. ಸುಮಾರು ಎರಡು ತಿಂಗಳುಗಳ ವರೆಗೆ ಈ ಸನ್ನಿವೇಶವನ್ನು ಕ್ರಮವಾಗಿ ಪರೀಕ್ಷಿಸಿದ ಬಳಿಕ, ಜ್ವಾಲಾಮುಖಿಶಾಸ್ತ್ರ ಮತ್ತು ಭೂಕಂಪಶಾಸ್ತ್ರದ ಫಿಲಿಪ್ಪೀನ್‌ ಸಂಸ್ಥೆಯು ಸಮೀಪಿಸುತ್ತಿರುವ ಅಪಾಯದ ಕುರಿತು ಎಚ್ಚರಿಕೆಯನ್ನು ನೀಡಿತು. ಆ ಕೂಡಲೆ ಹತ್ತಾರು ಸಾವಿರ ಮಂದಿ ಆ ಕ್ಷೇತ್ರದಿಂದ ಸುರಕ್ಷಿತ ತಾಣಕ್ಕೆ ಸ್ಥಳಾಂತರಿಸಲ್ಪಟ್ಟರು. ಜೂನ್‌ 15ರ ಆರಂಭದಲ್ಲಿ, ಭಾರಿ ದೊಡ್ಡ ಸ್ಫೋಟದೊಂದಿಗೆ ಎರಡು ಘನ ಮೈಲುಗಳಿಗಿಂತಲೂ ಹೆಚ್ಚಿನ ಧೂಳಿನಂಥ ಪದಾರ್ಥವು ಆಕಾಶದೆತ್ತರಕ್ಕೆ ಎಸೆಯಲ್ಪಟ್ಟು, ನಂತರ ಗ್ರಾಮಾಂತರ ಪ್ರದೇಶದಲ್ಲಿ ಕೆಳಗೆ ಶೇಖರವಾಯಿತು. ಗಮನ ಕೊಡುವಿಕೆಯು ಸಾವಿರಾರು ಜನರ ಜೀವಗಳನ್ನು ಕಾಪಾಡಿತು.

ಸದ್ಯದ ವಿಷಯಗಳ ವ್ಯವಸ್ಥೆಯ ಅಂತ್ಯದ ಕುರಿತು ಬೈಬಲ್‌ ಎಚ್ಚರಿಸುತ್ತದೆ. ಈಗ ನಾವು ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆ. ಅಂತ್ಯವು ಸಮೀಪಿಸಿದಂತೆ, ನೀವು ಎಚ್ಚರಿಕೆಯಿಂದಿರುತ್ತೀರೋ? ಅಪಾಯದ ಕ್ಷೇತ್ರದಿಂದ ದೂರ ಉಳಿಯಲಿಕ್ಕಾಗಿ ನೀವು ಕಾರ್ಯೋನ್ಮುಖರಾಗಿದ್ದೀರೋ? ನೀವು ತುರ್ತುಪ್ರಜ್ಞೆಯಿಂದ ಇದನ್ನೇ ಮಾಡಲಿಕ್ಕಾಗಿ ಇತರರಿಗೂ ಎಚ್ಚರಿಕೆ ನೀಡುತ್ತಿದ್ದೀರೋ?

[ಪುಟ 20ರಲ್ಲಿರುವ ಚಿತ್ರ]

ಪೀನಟೂಬೊ ಪರ್ವತವು ಜ್ವಾಲಾಮುಖಿಯ ಬೂದಿಯನ್ನು ಹೊರಸೂಸಿದಾಗ, ಎಚ್ಚರಿಕೆಗೆ ಗಮನ ಕೊಟ್ಟದ್ದರಿಂದ ಅನೇಕರ ಜೀವಗಳು ಕಾಪಾಡಲ್ಪಟ್ಟವು

[ಪುಟ 21ರಲ್ಲಿರುವ ಚಿತ್ರ]

ಸಾ.ಶ. 70ರಲ್ಲಿ ಯೆರೂಸಲೇಮ್‌ ನಾಶಪಡಿಸಲ್ಪಟ್ಟಾಗ, ಯೇಸುವಿನ ಎಚ್ಚರಿಕೆಗೆ ಗಮನ ಕೊಟ್ಟ ಅನೇಕ ಕ್ರೈಸ್ತರ ಜೀವಗಳು ಉಳಿಸಲ್ಪಟ್ಟವು