ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಜೀವನವು ಯಾವ ದಿಕ್ಕಿಗೆ ಸಾಗುತ್ತಿದೆ?

ನಿಮ್ಮ ಜೀವನವು ಯಾವ ದಿಕ್ಕಿಗೆ ಸಾಗುತ್ತಿದೆ?

ನಿಮ್ಮ ಜೀವನವು ಯಾವ ದಿಕ್ಕಿಗೆ ಸಾಗುತ್ತಿದೆ?

• ಅನೇಕ ಜನರು ತಮ್ಮ ದೈನಂದಿನ ಜೀವಿತದ ಆಗುಹೋಗುಗಳಲ್ಲಿ ಎಷ್ಟರ ಮಟ್ಟಿಗೆ ಮುಳುಗಿಹೋಗಿರುತ್ತಾರೆಂದರೆ, ತಾವು ಯಾವ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎಂಬುದರ ಕುರಿತು ಅವರು ಸ್ವಲ್ಪವೂ ಯೋಚಿಸುವುದಿಲ್ಲ.

• ಮುಂದೆ ಸಂಭವಿಸಲಿಕ್ಕಿರುವ ಅದ್ಭುತಕರ ಘಟನೆಗಳ ಕುರಿತು ಬೈಬಲ್‌ ನಮ್ಮನ್ನು ಎಚ್ಚರಿಸುತ್ತದೆ. ಲೋಕವ್ಯಾಪಕವಾಗಿ ಮಾನವ ಸಂಸ್ಥೆಗಳಲ್ಲಿ ಆಗಲಿರುವ ಭಾರಿ ಬದಲಾವಣೆಯ ಕುರಿತಾಗಿಯೂ ಅದು ಎಚ್ಚರಿಕೆ ನೀಡುತ್ತದೆ. ನಾವು ಇದರಿಂದ ಪ್ರಯೋಜನ ಪಡೆಯಬೇಕಾದರೆ ಮತ್ತು ಬರಲಿರುವ ವಿಪತ್ತಿನಿಂದ ತಪ್ಪಿಸಿಕೊಳ್ಳಬೇಕಾದರೆ, ಸಕಾರಾತ್ಮಕ ಹೆಜ್ಜೆಯನ್ನು ತೆಗೆದುಕೊಳ್ಳುವುದು ತುರ್ತಿನ ಸಂಗತಿಯಾಗಿದೆ.

• ಕೆಲವು ಜನರಿಗೆ ಬೈಬಲು ಏನು ಹೇಳುತ್ತದೆ ಎಂಬುದು ಗೊತ್ತಿರುತ್ತದೆ ಮತ್ತು ಅದನ್ನು ಅನ್ವಯಿಸಿಕೊಳ್ಳಲು ಸಹ ಅವರು ಪ್ರಯತ್ನಿಸುತ್ತಾರೆ. ಆದರೆ, ಜೀವನದ ಚಿಂತೆಗಳು ತಮ್ಮನ್ನು ತಪ್ಪಾದ ದಿಕ್ಕಿನಲ್ಲಿ ಮುನ್ನಡಿಸುವಂತೆ ಅವರು ಬಿಟ್ಟುಕೊಡುತ್ತಾರೆ.

• ನಿಮ್ಮ ಜೀವನವು ಯಾವ ದಿಕ್ಕಿಗೆ ಸಾಗುತ್ತಿದೆಯೋ ಅದರಿಂದ ನೀವು ಸಂತೋಷಿತರಾಗಿದ್ದೀರೋ? ನಿಮ್ಮ ಚಟುವಟಿಕೆಗಳನ್ನು ಯೋಜಿಸುವಾಗ, ಅವು ಜೀವಿತದಲ್ಲಿನ ನಿಮ್ಮ ದೀರ್ಘಾವಧಿಯ ಗುರಿಗಳ ಮೇಲೆ ಹೇಗೆ ಪರಿಣಾಮ ಬೀರಬಲ್ಲವು ಎಂಬುದನ್ನು ಪರಿಗಣಿಸುತ್ತೀರೋ?

[ಪುಟ 9ರಲ್ಲಿರುವ ಚೌಕ/ಚಿತ್ರಗಳು]

ನಿಮಗೆ ಯಾವುದು ಅತ್ಯಂತ ಪ್ರಾಮುಖ್ಯವಾಗಿದೆ?

ಈ ಮುಂದಿನ ವಿಷಯಗಳಿಗೆ ನೀವು ಯಾವ ಆದ್ಯತೆಯನ್ನು ನೀಡುತ್ತೀರಿ? ಆದ್ಯತೆಗನುಸಾರ ಅವುಗಳನ್ನು 1ರಿಂದ 10ರ ವರೆಗಿನ ಸಂಖ್ಯೆಗಳಿಂದ ಸೂಚಿಸಿರಿ.

ಇವುಗಳಲ್ಲಿ ಹೆಚ್ಚಿನವುಗಳಿಗೆ ಜೀವನದಲ್ಲಿ ಸೂಕ್ತವಾದ ಸ್ಥಾನವಿದೆಯಾದರೂ, ನೀವು ಆಯ್ಕೆಮಾಡಬೇಕಾಗಿರುವಾಗ ಯಾವುದಕ್ಕೆ ಮೊದಲ ಸ್ಥಾನವನ್ನು ಕೊಡುವಿರಿ? ಎರಡನೆಯ ಸ್ಥಾನ ಯಾವುದಕ್ಕೆ? ಇನ್ನಿತರವುಗಳಿಗೆ ಯಾವ ಸ್ಥಾನಗಳನ್ನು ಕೊಡುವಿರಿ?

...... ವಿನೋದವಿಲಾಸ/ಮನೋರಂಜನೆ

...... ನನ್ನ ಉದ್ಯೋಗ ಅಥವಾ ನನ್ನ ವೃತ್ತಿ

...... ನನ್ನ ಆರೋಗ್ಯ

...... ಸ್ವಸಂತೋಷ

...... ನನ್ನ ಸಂಗಾತಿ

...... ನನ್ನ ಹೆತ್ತವರು

...... ನನ್ನ ಮಕ್ಕಳು

...... ಸುಂದರವಾದ ಮನೆ, ಬೆಲೆಬಾಳುವ ಉಡುಗೆತೊಡುಗೆಗಳು

...... ನಾನು ಮಾಡುವ ಪ್ರತಿಯೊಂದು ಕೆಲಸದಲ್ಲಿ ಅತ್ಯುತ್ತಮನಾಗಿರುವುದು

...... ದೇವರ ಆರಾಧನೆ

[ಪುಟ 10, 11ರಲ್ಲಿರುವ ಚೌಕ]

ನಿಮ್ಮ ಆಯ್ಕೆಗಳು ನಿಮ್ಮನ್ನು ನಿಜವಾಗಿಯೂ ಅಪೇಕ್ಷಿತ ದಿಕ್ಕಿನಲ್ಲಿ ಮುನ್ನಡಿಸುತ್ತಿವೆಯೆ?

ಈ ಪ್ರಶ್ನೆಗಳನ್ನು ಪರಿಗಣಿಸಿರಿ

ವಿನೋದವಿಲಾಸ/ಮನೋರಂಜನೆ: ನನ್ನ ಮನೋರಂಜನೆಯ ಆಯ್ಕೆಯು ನನಗೆ ಚೈತನ್ಯವನ್ನು ಉಂಟುಮಾಡುತ್ತದೋ? ನನ್ನ ಆರೋಗ್ಯಕ್ಕೆ ಅಪಾಯವನ್ನು ಒಡ್ಡಬಹುದಾದ ಅಥವಾ ಜೀವನಪರ್ಯಂತ ನನ್ನನ್ನು ಅಂಗವಿಕಲನನ್ನಾಗಿ ಮಾಡಸಾಧ್ಯವಿರುವಂಥ ಸಾಹಸಕಾರ್ಯಗಳು ಈ ಮನೋರಂಜನೆಯಲ್ಲಿ ಒಳಗೂಡಿವೆಯೋ? ಇದು ಕೆಲವು ತಾಸುಗಳ ರೋಮಾಂಚನವನ್ನು ಒಳಗೂಡಿದ್ದು, ಶಾಶ್ವತವಾದ ಮನೋವೇದನೆಯನ್ನು ತರಸಾಧ್ಯವಿರುವ ಒಂದು ರೀತಿಯ “ಮಜಾಮಾಡುವಿಕೆ”ಯಾಗಿದೆಯೋ? ನಾನು ಆಯ್ಕೆಮಾಡಿರುವ ವಿನೋದವಿಲಾಸವು ಹಿತಕರವಾಗಿರುವುದಾದರೂ, ಹೆಚ್ಚು ಪ್ರಾಮುಖ್ಯವಾಗಿರುವ ವಿಷಯಗಳಿಗಾಗಿ ವಿನಿಯೋಗಿಸಲು ಸಾಕಷ್ಟು ಸಮಯವಿಲ್ಲದಿರುವಷ್ಟರ ಮಟ್ಟಿಗೆ ನಾನು ಇದರಲ್ಲಿ ಸಮಯವನ್ನು ಕಳೆಯುತ್ತಿದ್ದೇನೋ?

ನನ್ನ ಉದ್ಯೋಗ ಅಥವಾ ನನ್ನ ವೃತ್ತಿ: ಉದ್ಯೋಗವು ಜೀವನಾವಶ್ಯಕತೆಗಳನ್ನು ಪೂರೈಸುವ ಒಂದು ಮೂಲವಾಗಿದೆಯೊ ಅಥವಾ ನಾನು ಇದಕ್ಕೆ ದಾಸನಾಗಿಬಿಟ್ಟಿದ್ದೇನೊ? ನನ್ನ ಆರೋಗ್ಯವನ್ನು ಹಾಳುಮಾಡುವಷ್ಟರ ಮಟ್ಟಿಗೆ ಇದು ನನ್ನ ಸಮಯ ಮತ್ತು ಶಕ್ತಿಯನ್ನು ಕಬಳಿಸಿಬಿಡುತ್ತಿದೆಯೊ? ನಾನು ಓವರ್‌ಟೈಮ್‌ ಕೆಲಸಮಾಡಲು ಇಷ್ಟಪಡುತ್ತೇನೊ ಅಥವಾ ನನ್ನ ಸಂಗಾತಿ ಇಲ್ಲವೆ ನನ್ನ ಮಕ್ಕಳೊಂದಿಗೆ ಸಮಯವನ್ನು ಕಳೆಯಲು ಬಯಸುತ್ತೇನೊ? ನನ್ನ ಮನಸ್ಸಾಕ್ಷಿಯು ಒಪ್ಪದಿರುವಂಥ ಅಥವಾ ಆಧ್ಯಾತ್ಮಿಕ ಅಭಿರುಚಿಗಳಿಗೆ ಸಮಯಾವಕಾಶವನ್ನು ಕೊಡದಿರುವಂಥ ಕೆಲಸವನ್ನು ಮಾಡುವಂತೆ ನನ್ನ ಧಣಿಯು ತಗಾದೆಮಾಡುವಲ್ಲಿ, ಉದ್ಯೋಗವು ಕೈಬಿಟ್ಟುಹೋಗಬಾರದೆಂಬ ಕಾರಣಕ್ಕಾಗಿ ನಾನು ಆ ಕೆಲಸವನ್ನು ಮಾಡಲೊಪ್ಪುತ್ತೇನೊ?

ನನ್ನ ಆರೋಗ್ಯ: ನನ್ನ ಆರೋಗ್ಯವನ್ನು ಕೇವಲವಾಗಿ ಎಣಿಸುತ್ತೇನೊ ಅಥವಾ ಅದನ್ನು ಹಾಳುಮಾಡಿಕೊಳ್ಳದಿರುವ ವಿಷಯದಲ್ಲಿ ಯಾವಾಗಲೂ ಜಾಗರೂಕತೆವಹಿಸುತ್ತೇನೊ? ನನ್ನ ಸಂಭಾಷಣೆಯಲ್ಲಿ ಯಾವಾಗಲೂ ಇದರ ಕುರಿತಾಗಿಯೇ ಮಾತಾಡುತ್ತೇನೊ? ನಾನು ನನ್ನ ಆರೋಗ್ಯವನ್ನು ನೋಡಿಕೊಳ್ಳುವ ವಿಧವು, ನನ್ನ ಕುಟುಂಬಕ್ಕಾಗಿರುವ ಹಿತಾಸಕ್ತಿಯನ್ನು ರುಜುಪಡಿಸುತ್ತದೊ?

ಸ್ವಸಂತೋಷ: ಇದಕ್ಕೆ ನಾನು ಆದ್ಯತೆ ನೀಡುತ್ತೇನೊ? ನನ್ನ ಸಂಗಾತಿಯ ಅಥವಾ ನನ್ನ ಕುಟುಂಬದ ಸಂತೋಷಕ್ಕಿಂತ ಇದೇ ನನಗೆ ಮುಖ್ಯವೊ? ನಾನು ಇದನ್ನು ಪಡೆದುಕೊಳ್ಳಲು ಪ್ರಯತ್ನಿಸುವ ವಿಧವು, ಸತ್ಯ ದೇವರ ಒಬ್ಬ ಆರಾಧಕನಾಗಿರುವುದರೊಂದಿಗೆ ಹೊಂದಿಕೆಯಲ್ಲಿದೆಯೊ?

ನನ್ನ ಸಂಗಾತಿ: ನನಗೆ ಇಷ್ಟಬಂದಾಗ ಮಾತ್ರ ನನ್ನ ಸಂಗಾತಿಯನ್ನು ನಾನು ಒಡನಾಡಿಯಾಗಿ ಪರಿಗಣಿಸುತ್ತೇನೊ? ನನ್ನ ಸಂಗಾತಿಯನ್ನು ಗೌರವದಿಂದ ಅಂದರೆ ವೈಯಕ್ತಿಕ ಘನತೆಗೆ ಯೋಗ್ಯವಾದ ವ್ಯಕ್ತಿಯೋಪಾದಿ ಪರಿಗಣಿಸುತ್ತೇನೊ? ದೇವರಲ್ಲಿನ ನಂಬಿಕೆಯು, ನನ್ನ ಸಂಗಾತಿಯನ್ನು ನಾನು ಪರಿಗಣಿಸುವ ವಿಧವನ್ನು ಪ್ರಭಾವಿಸುತ್ತದೊ?

ನನ್ನ ಹೆತ್ತವರು: ನಾನು ಇನ್ನೂ ಚಿಕ್ಕ ಪ್ರಾಯದವನಾಗಿರುವಲ್ಲಿ, ಗೌರವದಿಂದ ವ್ಯವಹರಿಸುವ ಮೂಲಕ, ನೇಮಿತ ಕೆಲಸಗಳನ್ನು ಮಾಡುವ ಮೂಲಕ, ಹೆತ್ತವರು ನಿಗದಿಪಡಿಸಿರುವ ಸಮಯಕ್ಕೆ ಸರಿಯಾಗಿ ಮನೆ ತಲಪುವ ಮೂಲಕ, ಅವರು ಎಚ್ಚರಿಕೆ ನೀಡುವಂಥ ಸಹವಾಸಗಳು ಹಾಗೂ ಚಟುವಟಿಕೆಗಳಿಂದ ದೂರವಿರುವ ಮೂಲಕ ನನ್ನ ಹೆತ್ತವರಿಗೆ ವಿಧೇಯನಾಗಿದ್ದೇನೊ? ಒಬ್ಬ ವಯಸ್ಕನಾಗಿರುವಲ್ಲಿ, ನನ್ನ ಹೆತ್ತವರಿಗೆ ಸೂಕ್ತವಾದ ಸಹಾಯದ ಅಗತ್ಯವಿರುವಾಗ ಅದನ್ನು ಪೂರೈಸುವ ಮೂಲಕ ಅವರ ಮಾತಿಗೆ ಗೌರವದಿಂದ ಕಿವಿಗೊಡುತ್ತೇನೊ? ನಾನು ಅವರೊಂದಿಗೆ ವ್ಯವಹರಿಸುವ ವಿಧವು ನನ್ನ ಸ್ವಂತ ಅನುಕೂಲಕ್ಕೆ ತಕ್ಕಂತಿದೆಯೊ ಅಥವಾ ದೇವರ ವಾಕ್ಯದ ಸಲಹೆಗೆ ಅನುಸಾರವಾಗಿದೆಯೊ?

ನನ್ನ ಮಕ್ಕಳು: ನನ್ನ ಮಕ್ಕಳಿಗೆ ಯೋಗ್ಯವಾದ ನೈತಿಕ ಮೌಲ್ಯಗಳನ್ನು ಕಲಿಸುವುದು ನನ್ನ ಜವಾಬ್ದಾರಿ ಎಂದು ನನಗನಿಸುತ್ತದೊ, ಅಥವಾ ಶಾಲೆಗಳು ಅದನ್ನು ಕಲಿಸಬೇಕು ಎಂದು ನಾನು ನಿರೀಕ್ಷಿಸುತ್ತೇನೊ? ನನ್ನ ಮಕ್ಕಳೊಂದಿಗೆ ನಾನು ಸಮಯವನ್ನು ಕಳೆಯುತ್ತೇನೊ, ಅಥವಾ ಆಟದ ಸಾಮಾನುಗಳು, ಟಿವಿ, ಇಲ್ಲವೆ ಒಂದು ಕಂಪ್ಯೂಟರ್‌ನೊಂದಿಗೆ ಅವರು ಸಮಯ ಕಳೆಯಬೇಕೆಂದು ನಿರೀಕ್ಷಿಸುತ್ತೇನೊ? ನನ್ನ ಮಕ್ಕಳು ದೇವರ ಕಟ್ಟಳೆಗಳನ್ನು ಅಲಕ್ಷಿಸಿದಾಗಲೆಲ್ಲಾ ನಾನು ಅವರಿಗೆ ಶಿಕ್ಷೆಯನ್ನು ನೀಡುತ್ತೇನೊ ಅಥವಾ ನನಗೆ ಕೋಪ ಬರಿಸುವಂಥ ಕೆಲಸವನ್ನು ಮಾಡಿದಾಗ ಮಾತ್ರ ಹಾಗೆ ಮಾಡುತ್ತೇನೊ?

ಸುಂದರವಾದ ಮನೆ, ಬೆಲೆಬಾಳುವ ಉಡುಗೆತೊಡುಗೆಗಳು: ನನ್ನ ಹೊರತೋರಿಕೆ ಮತ್ತು ನನ್ನ ಸೊತ್ತುಗಳ ಕಡೆಗೆ ನಾನು ತೋರಿಸುವ ಕಾಳಜಿಗೆ ಯಾವುದು ಕುಮ್ಮಕ್ಕು ನೀಡುತ್ತದೆ​—ನೆರೆಯವರ ಮೇಲೆ ಉಂಟುಮಾಡಲು ಬಯಸುವ ಪ್ರಭಾವವೊ? ನನ್ನ ಕುಟುಂಬದ ಹಿತಕ್ಷೇಮವೊ? ನಾನೊಬ್ಬ ದೇವರ ಆರಾಧಕನು ಎಂಬ ಸಂಗತಿಯೊ?

ನಾನು ಮಾಡುವ ಪ್ರತಿಯೊಂದು ಕೆಲಸದಲ್ಲಿ ಅತ್ಯುತ್ತಮನಾಗಿರುವುದು: ಎಲ್ಲವನ್ನೂ ಅತ್ಯುತ್ತಮವಾದ ರೀತಿಯಲ್ಲಿ ಮಾಡುವುದು ತುಂಬ ಪ್ರಾಮುಖ್ಯವಾದದ್ದಾಗಿದೆ ಎಂದು ನನಗನಿಸುತ್ತದೊ? ಯಾವಾಗಲೂ ನಾನೇ ಅತ್ಯುತ್ತಮನಾಗಿರಲು ಹೆಣಗಾಡುತ್ತೇನೊ? ನನಗಿಂತ ಹೆಚ್ಚು ಉತ್ತಮವಾಗಿ ಬೇರೆ ಯಾರಾದರೂ ಕಾರ್ಯನಡಿಸಿದರೆ ನನಗೆ ಕಿರಿಕಿರಿಯಾಗುತ್ತದೊ?

ದೇವರ ಆರಾಧನೆ: ನನ್ನ ಸಂಗಾತಿ, ಮಕ್ಕಳು, ಹೆತ್ತವರು, ಅಥವಾ ಧಣಿಯ ಮೆಚ್ಚಿಕೆಗಿಂತಲೂ ದೇವರ ಮೆಚ್ಚಿಕೆಯನ್ನು ಪಡೆದುಕೊಳ್ಳುವುದು ನನಗೆ ಹೆಚ್ಚು ಪ್ರಾಮುಖ್ಯವೊ? ಸಂತೃಪ್ತಿಕರವಾದ ಜೀವನ ಶೈಲಿಯನ್ನು ನಡೆಸಲು ಪ್ರಯತ್ನಿಸುತ್ತಿರುವಾಗ, ದೇವರ ಸೇವೆಯನ್ನು ಎರಡನೆಯ ಸ್ಥಾನಕ್ಕೆ ತಳ್ಳಿಬಿಡಲು ನಾನು ಮನಸ್ಸುಮಾಡುವೆನೊ?

ಬೈಬಲಿನ ಸಲಹೆಯನ್ನು ಜಾಗರೂಕತೆಯಿಂದ ಪರಿಗಣಿಸಿರಿ

ನಿಮ್ಮ ಜೀವನದಲ್ಲಿ ದೇವರಿಗೆ ಯಾವ ಸ್ಥಾನವು ಕೊಡಲ್ಪಡುತ್ತದೆ?

ಪ್ರಸಂಗಿ 12:13: “ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು; ಮನುಷ್ಯರೆಲ್ಲರ [ಕರ್ತವ್ಯವು] ಇದೇ.”

ನಿಮ್ಮನ್ನು ಹೀಗೆ ಕೇಳಿಕೊಳ್ಳಿ: ಆ ರೀತಿಯಲ್ಲಿ ನಾನು ಕಾರ್ಯನಡಿಸುತ್ತೇನೆ ಎಂಬುದನ್ನು ನನ್ನ ಜೀವಿತವು ರುಜುಪಡಿಸುತ್ತದೊ? ದೇವರ ಆಜ್ಞೆಗಳಿಗೆ ನಾನು ತೋರಿಸುವ ವಿಧೇಯತೆಯು, ಮನೆಯಲ್ಲಿ, ಕೆಲಸದ ಸ್ಥಳದಲ್ಲಿ, ಅಥವಾ ಶಾಲೆಯಲ್ಲಿ ನಾನು ಹೇಗೆ ಜವಾಬ್ದಾರಿಗಳನ್ನು ನಿರ್ವಹಿಸುತ್ತೇನೆ ಎಂಬುದನ್ನು ನಿರ್ಧರಿಸುತ್ತದೊ? ಅಥವಾ ಇನ್ನಿತರ ಅಭಿರುಚಿಗಳು ಇಲ್ಲವೆ ಜೀವನದ ಒತ್ತಡಗಳು, ನಾನು ದೇವರಿಗಾಗಿ ಸಮಯವನ್ನು ಮೀಸಲಾಗಿಡಬೇಕೊ ಇಲ್ಲವೊ ಎಂಬುದನ್ನು ನಿಶ್ಚೈಸುತ್ತವೊ?

ದೇವರೊಂದಿಗೆ ನಿಮಗೆ ಯಾವ ರೀತಿಯ ಸಂಬಂಧವಿದೆ?

ಜ್ಞಾನೋಕ್ತಿ 3:​5, 6: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.”

ಮತ್ತಾಯ 4:10: “ನಿನ್ನ ದೇವರಾಗಿರುವ ಕರ್ತನಿಗೆ [“ಯೆಹೋವನಿಗೆ,” NW] ಅಡ್ಡಬಿದ್ದು ಆತನೊಬ್ಬನನ್ನೇ ಆರಾಧಿಸಬೇಕು.”

ನಿಮ್ಮನ್ನು ಹೀಗೆ ಕೇಳಿಕೊಳ್ಳಿ: ದೇವರ ಬಗ್ಗೆ ನನಗೆ ಈ ರೀತಿಯ ಅನಿಸಿಕೆಯಾಗುತ್ತದೊ? ನನ್ನ ದೈನಂದಿನ ಚಟುವಟಿಕೆಗಳು ಹಾಗೂ ಕಷ್ಟಕರ ಸನ್ನಿವೇಶಗಳೊಂದಿಗೆ ನಾನು ವ್ಯವಹರಿಸುವ ವಿಧವು, ಇಂಥ ಭರವಸೆ ಹಾಗೂ ಭಕ್ತಿಯನ್ನು ತೋರ್ಪಡಿಸುತ್ತದೊ?

ಬೈಬಲನ್ನು ಓದುವುದು ಮತ್ತು ಅಧ್ಯಯನ ಮಾಡುವುದು ನಿಮಗೆ ಎಷ್ಟು ಪ್ರಾಮುಖ್ಯವಾದದ್ದಾಗಿದೆ?

ಯೋಹಾನ 17:3: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.”

ನಿಮ್ಮನ್ನು ಹೀಗೆ ಕೇಳಿಕೊಳ್ಳಿ: ದೇವರ ವಾಕ್ಯದ ವಾಚನಕ್ಕೆ ಮತ್ತು ಅದರ ಕುರಿತಾದ ಧ್ಯಾನಿಸುವಿಕೆಗೆ ನಾನು ಕೊಡುವ ಸ್ಥಾನವು, ನಾನು ನಿಜವಾಗಿಯೂ ಅದನ್ನು ನಂಬುತ್ತೇನೆ ಎಂಬುದನ್ನು ರುಜುಪಡಿಸುತ್ತದೊ?

ಕ್ರೈಸ್ತ ಸಭೆಯ ಕೂಟಗಳಲ್ಲಿನ ಹಾಜರಿಯು ನಿಮಗೆ ಎಷ್ಟು ಪ್ರಾಮುಖ್ಯವಾದದ್ದಾಗಿದೆ?

ಇಬ್ರಿಯ 10:​24, 25: ‘ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಒಬ್ಬರನ್ನೊಬ್ಬರು ಪ್ರೇರೇಪಿಸೋಣ. ಸಭೆಯಾಗಿ ಕೂಡಿಕೊಳ್ಳುವದನ್ನು ನಾವು ಬಿಟ್ಟುಬಿಡದೆ ಆ ದಿನವು ಸಮೀಪಿಸುತ್ತಾ ಬರುತ್ತದೆ ಎಂದು ನಾವು ನೋಡುವದರಿಂದ ಇದನ್ನು ಮತ್ತಷ್ಟು ಮಾಡೋಣ.’

ಕೀರ್ತನೆ 122:1: “ಯೆಹೋವನ ಮಂದಿರಕ್ಕೆ ಹೋಗೋಣ, ಬಾ ಎಂದು ಜನರು ನನ್ನನ್ನು ಕರೆದಾಗ ನನಗೆ ಸಂತೋಷವಾಯಿತು.”

ನಿಮ್ಮನ್ನು ಹೀಗೆ ಕೇಳಿಕೊಳ್ಳಿ: ನನ್ನ ಜೀವನ ರೀತಿಯು ದೇವರ ವಾಕ್ಯದಲ್ಲಿ ಕಂಡುಬರುವ ಈ ಮಾರ್ಗದರ್ಶನಕ್ಕೆ ಗಣ್ಯತೆಯನ್ನು ತೋರಿಸುವಂತಿದೆಯೊ? ಕಳೆದ ತಿಂಗಳಿನಲ್ಲಿ, ಬೇರೆ ವಿಷಯಗಳಿಗೆ ಆದ್ಯತೆ ನೀಡಿದ ಕಾರಣದಿಂದಾಗಿ ನಾನು ಕ್ರೈಸ್ತ ಕೂಟಗಳಿಗೆ ತಪ್ಪಿಸಿಕೊಂಡೆನೊ?

ದೇವರ ಕುರಿತು ಮತ್ತು ಆತನ ಉದ್ದೇಶದ ಕುರಿತು ಇತರರೊಂದಿಗೆ ಮಾತಾಡುವುದರಲ್ಲಿ ನೀವು ಹುರುಪಿನಿಂದ ಪಾಲ್ಗೊಳ್ಳುತ್ತೀರೊ?

ಮತ್ತಾಯ 24:14: “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ . . . ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.”

ಮತ್ತಾಯ 28:​19, 20: “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; . . . ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ.”

ಕೀರ್ತನೆ 96:2: “ಯೆಹೋವನಿಗೆ ಹಾಡಿರಿ; ಆತನ ನಾಮವನ್ನು ಕೊಂಡಾಡಿರಿ. ಆತನ ರಕ್ಷಣೆಯನ್ನು ಪ್ರತಿನಿತ್ಯವೂ ಸಾರಿಹೇಳಿರಿ.”

ನಿಮ್ಮನ್ನು ಹೀಗೆ ಕೇಳಿಕೊಳ್ಳಿ: ಈ ಚಟುವಟಿಕೆಯು ಯಾವ ಸ್ಥಾನಕ್ಕೆ ಅರ್ಹವಾಗಿದೆಯೋ ಆ ಸ್ಥಾನವನ್ನು ನನ್ನ ಜೀವನದಲ್ಲಿ ನಾನು ಇದಕ್ಕೆ ನೀಡುತ್ತಿದ್ದೇನೊ? ಈ ಚಟುವಟಿಕೆಯಲ್ಲಿ ಪಾಲ್ಗೊಳ್ಳಲಿಕ್ಕಾಗಿ ನಾನು ಮಾಡುವ ಪ್ರಯತ್ನಗಳು, ನಾವು ಜೀವಿಸುತ್ತಿರುವ ಈ ಕಾಲದ ಗಂಭೀರತೆಯ ವಿಷಯದಲ್ಲಿ ನನ್ನ ನಿಶ್ಚಿತಾಭಿಪ್ರಾಯವನ್ನು ಪ್ರತಿಬಿಂಬಿಸುತ್ತವೊ?