“ಅಪಾಯಕಾರಿ ಆಟಗಳು”—ಅದನ್ನ ಆಡೋದು ಸರೀನಾ?
ಬೈಬಲಿನ ದೃಷ್ಟಿಕೋನ
“ಅಪಾಯಕಾರಿ ಆಟಗಳು”—ಅದನ್ನ ಆಡೋದು ಸರೀನಾ?
“ಆಟಗಳನ್ನ ಕೂತು ನೋಡೋದಕ್ಕಿಂತ ತಾವೇ ಅದನ್ನ ಆಡಬೇಕು ಅಂತ ಜನ ಅಂದುಕೊಳ್ತಾರೆ. ಹಾಗಾಗಿ ಅವರು ಪ್ಯಾರಚೂಟ್ ಮೂಲಕ ವಿಮಾನಗಳಿಂದ ಹಾರೋದು, ದೊಡ್ಡ ದೊಡ್ಡ ಬೆಟ್ಟಗಳಿಂದ ಹಗ್ಗಗಳ ಮೂಲಕ ಇಳಿಯೋದು, ಜಲಪಾತದಲ್ಲಿ ದೋಣಿಯನ್ನ ನಡೆಸೋದು ಮತ್ತು ದೊಡ್ಡ ಶಾರ್ಕ್‌ಗಳ ಜೊತೆ ಈಜೋದನ್ನ ತಾವೇ ಮಾಡಿ ನೋಡಬೇಕು ಅಂತ ಸಾಹಸಕ್ಕೆ ಇಳಿದಿದ್ದಾರೆ.”—ದ ವಿಲ್ಲೋ ಗ್ಲೆನ್ ರೆಸಿಡೆಂಟ್ ನ್ಯೂಸ್‌ಪೇಪರ್.
ಜನರಿಗೆ ಆಟದ ಮೇಲೆ ಎಷ್ಟು ಆಸಕ್ತಿಯಿದೆ ಅಂತ ಇದರಿಂದ ಗೊತ್ತಾಗುತ್ತೆ. ಸ್ಕೈಡೈವಿಂಗ್, ಐಸ್ ಕ್ಲೈಂಬಿಂಗ್, ಪಾರಾಗ್ಲೈಡಿಂಗ್ ಮತ್ತು ಬೇಸ್ ಜಂಪಿಂಗ್ a ಅನ್ನೋ ಆಟಗಳು ಹೆಚ್ಚು ಜನಪ್ರೀಯವಾಗಿರೋದರಿಂದ ಅಪಾಯಗಳಿದ್ದರೂ ಇದನ್ನ ಆಡೋದ್ರಲ್ಲಿ ಸಿಗೋ ಮಜಾನೇ ಬೇರೆ ಅಂತ ನೆನಸಿ ಇದನ್ನ ಆಡೋಕೆ ಜನ ಮುಗಿಬೀಳ್ತಿದ್ದಾರೆ. ಎತ್ತರವಾದ ಪರ್ವತಗಳನ್ನ ಹತ್ತೋಕೆ, ಕಡಿದಾದ ಬಂಡೆಗಳ ಮೇಲೆ ಏರೋಕೆ, ತುಂಬ ದೂರಕ್ಕೆ ಜಿಗಿಯೋಕೆ, ಸ್ನೋಬೋರ್ಡ್‌ಗಳನ್ನ, ಮೌಂಟೇನ್ ಬೈಕ್‌ಗಳನ್ನ, ಸ್ಕೇಟ್ ಬೋರ್ಡ್‌ಗಳನ್ನ, ಇನ್‌ಲೈನ್ ಸ್ಕೇಟ್‌ಗಳನ್ನ ಉಪಯೋಗಿಸಿ ತಮ್ಮಿಂದ ಮಾಡೋಕಾಗದೆ ಇರೋ ಸಾಹಸವನ್ನ ಮಾಡೋಕೆ ಹೊರಟಿದ್ದಾರೆ. ಟೈಮ್ ಮ್ಯಾಗಜಿನ್ ಹೇಳುವುದು: “ಸಾಹಸ ತುಂಬಿದ ಆಟಗಳಲ್ಲಿ ಪಾಲ್ಗೊಳ್ಳೋದ್ರಿಂದ ಹೆಚ್ಚು ಅಪಾಯ ಬರೋ ಸಾಧ್ಯತೆ ಇದೆ. ಇಂಥ ಆಟಗಳು ತುಂಬ ಜನಪ್ರಿಯವಾಗಿರೋದರಿಂದ ಲಕ್ಷಾಂತರ ಜನರು ತಮ್ಮ ಜೀವವನ್ನೇ ಪಣಕ್ಕಿಟ್ಟು ಇಂಥ ಆಟಗಳನ್ನ ಆಡೋಕೆ ಆಸೆಪಡ್ತಾರೆ. ವಾರಾಂತ್ಯದಲ್ಲಿ ಆಟ ಆಡುವವರು ಅಥವಾ ಇಂಥ ಆಟಗಳನ್ನೇ ತಮ್ಮ ಜೀವನಾಧಾರವಾಗಿ ಇಟ್ಟುಕೊಂಡಿರುವವರು ತಮ್ಮ ಕೈಯಲ್ಲಿ ಇದೆಲ್ಲಾ ಆಗಲ್ಲ ಅಂತ ಗೊತ್ತಿದ್ರೂ ಜನರ ಮೆಚ್ಚಿಗೆ ಗಳಿಸೋಕೆ ಈ ಆಟಗಳನ್ನ ಆಡ್ತಾರೆ.”
ಇಂಥ ಆಟಗಳು ತುಂಬ ಜನಪ್ರಿಯ ಆಗ್ತಿರೋದ್ರಿಂದ ಮತ್ತು ಜನ್ರು ಸಾಮಾನ್ಯವಾಗಿ ಆಡೋ ಆಟಗಳನ್ನ ಅಪಾಯಕಾರಿ ರೀತಿಯಲ್ಲಿ ಆಡೋದ್ರಿಂದ ಹೆಚ್ಚಿನವರಿಗೆ ಅಪಾಯಗಳು ಆಗ್ತಿದೆ. 1997ರಲ್ಲಿ ಅಮೇರಿಕಾದ ತುರ್ತು ಚಿಕಿತ್ಸೆ ಕೊಠಡಿಯಲ್ಲಿ ಸ್ಕೇಟ್ ಬೋರ್ಡ್, ಸ್ನೋಬೋರ್ಡ್ ಮತ್ತು ಪರ್ವತಗಳನ್ನ ಹತ್ತಿ ಅಪಾಯಕ್ಕೆ ಒಳಗಾದವರ ಸಂಖ್ಯೆ ಶೇಕಡಾ 33ರಷ್ಟು, 31ರಷ್ಟು ಮತ್ತು 20ರಷ್ಟು ಜಾಸ್ತಿ ಆಯಿತು. ಇನ್ನೂ ಕೆಲವರು ಈ ತರದ ಬೇರೆ ಕ್ರೀಡೆಗಳನ್ನ ಆಡಿ ತಮ್ಮ ಪ್ರಾಣವನ್ನೇ ಕಳ್ಕೊಂಡಿದ್ದಾರೆ. ಇಂಥ ಆಟಗಳನ್ನ ಇಷ್ಟಪಡುವವರಿಗೆ ಇದು ಅಪಾಯಕಾರಿ ಅಂತ ಚೆನ್ನಾಗಿ ಗೊತ್ತು. ಹಿಮ ಪರ್ವತಗಳಲ್ಲಿ ಅಪಾಯಕಾರಿ ಸ್ಕೀಯಿಂಗ್ ಮಾಡೋ ಒಬ್ಬ ಸ್ತ್ರೀ ಹೇಳಿದ್ದು: “ಪ್ರತಿಸಲ ಈ ಆಟ ಆಡುವಾಗ ಸಾವಿನ ಜೊತೆ ಆಟ ಆಡಿದ ಹಾಗಿರುತ್ತೆ.” ಒಬ್ಬ ವೃತ್ತಿಪರ ಸ್ನೋಬೋರ್ಡರ್ ಹೀಗೆ ಹೇಳ್ತಾನೆ: “ನಿಮಗೆ ಯಾವ ಗಾಯಗಳೂ ಆಗಿಲ್ಲಾಂದ್ರೆ ನೀವು ಆಟದಲ್ಲಿ ಸಾಕಷ್ಟು ಪ್ರಯತ್ನ ಹಾಕ್ತಿಲ್ಲ ಅಂತರ್ಥ.”
ಈ ಎಲ್ಲ ವಿಷಯಗಳನ್ನ ಗಮನಿಸಿದ ಮೇಲೆ ಅಪಾಯಕಾರಿ ಆಟಗಳನ್ನ ಆಡೋದ್ರ ಬಗ್ಗೆ ಒಬ್ಬ ಕ್ರೈಸ್ತನ ಮನೋಭಾವ ಏನಾಗಿರಬೇಕು? ಇಂಥ ಅಪಾಯಕಾರಿ ಆಟಗಳನ್ನ ಆಡಬೇಕಾ ಬೇಡ್ವಾ ಅಂತ ತೀರ್ಮಾನ ಮಾಡೋಕೆ ಬೈಬಲ್ ಹೇಗೆ ಸಹಾಯ ಮಾಡುತ್ತೆ? ಯೆಹೋವ ದೇವರು ಜೀವವನ್ನ ಎಷ್ಟು ಅಮೂಲ್ಯವಾಗಿ ನೋಡ್ತಾರೆ ಅಂತ ತಿಳ್ಕೊಂಡರೆ ಈ ಪ್ರಶ್ನೆಗಳಿಗೆ ಉತ್ತರ ಸಿಗುತ್ತೆ.
ಯೆಹೋವನಿಗೆ ಜೀವ ಅಮೂಲ್ಯ!
ಯೆಹೋವ ದೇವರೇ “ಜೀವದ ಮೂಲ” ಅಂತ ಬೈಬಲ್ ಹೇಳುತ್ತೆ. (ಕೀರ್ತನೆ 36:9) ಆತನು ನಮ್ಮನ್ನು ಸೃಷ್ಟಿ ಮಾಡಿದ್ದಷ್ಟೇ ಅಲ್ಲ ನಾವು ಖುಷಿಯಾಗಿರೋಕೆ ಬೇಕಾಗಿರೋದನ್ನೆಲ್ಲ ಕೊಟ್ಟಿದ್ದಾನೆ. (ಕೀರ್ತನೆ 139:14; ಅಪೊಸ್ತಲರ ಕಾರ್ಯ 14:16, 17; 17:24-28) ಇದರಿಂದ ನಾವೂ ನಮ್ಮ ಜೀವವನ್ನು ತುಂಬ ಅಮೂಲ್ಯವಾಗಿ ನೋಡಬೇಕು ಅಂತ ಯೆಹೋವ ಬಯಸ್ತಾನೆ ಅಂತ ಗೊತ್ತಾಗುತ್ತೆ. ಅಷ್ಟೇ ಅಲ್ಲ ಇಸ್ರಾಯೇಲ್ಯರಿಗೆ ಕೊಟ್ಟ ನೀತಿ ನಿಯಮಗಳಿಂದ ಜೀವ ಆತನಿಗೆ ಎಷ್ಟು ಅಮೂಲ್ಯ ಅಂತ ಅರ್ಥಮಾಡಿಕೊಳ್ಳಬಹುದು.
ನಿಯಮ ಪುಸ್ತಕದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿನೂ ಇನ್ನೊಬ್ಬನ ಜೀವವನ್ನ ಅಮೂಲ್ಯವಾಗಿ ನೋಡಬೇಕಿತ್ತು. ಒಂದುವೇಳೆ ಅಮೂಲ್ಯವಾಗಿ ನೋಡದೆ ಯಾರಾದರೂ ಜೀವ ಕಳಕೊಂಡರೆ ಇದೆಲ್ಲಾ ಆಗೋಕೆ ಯಾರು ಕಾರಣನೋ ಅವನ ಮೇಲೆ ಕೊಲೆ ಅಪರಾಧ ಬರುತ್ತಿತ್ತು. ಉದಾಹರಣೆಗೆ ಒಬ್ಬ ಹೊಸ ಮನೆ ಕಟ್ಟಿದ್ರೆ ಮನೆ ಮಾಳಿಗೆ ಸುತ್ತ ಒಂದು ಸಣ್ಣ ಗೋಡೆ ಕಟ್ಟಬೇಕಿತ್ತು. ಇಲ್ಲಾಂದ್ರೆ ಆ ಮನೆ ಮಾಳಿಗೆಯಿಂದ ಯಾರಾದ್ರೂ ಬಿದ್ದು ಸತ್ತುಹೋಗೋ ಸಾಧ್ಯತೆ ಇತ್ತು. ಆಗ ಆ ಕೊಲೆ ಅಪರಾಧ ಮನೆ ಯಜಮಾನನ ಮೇಲೆ ಬರುತಿತ್ತು. (ಧರ್ಮೋಪದೇಶಕಾಂಡ 22:8) ಒಂದು ಹೋರಿ ಯಾರನ್ನಾದ್ರೂ ಗುದ್ದಿ ಕೊಂದ್ರೆ ಅದರ ಯಜಮಾನನಿಗೆ ಶಿಕ್ಷೆ ಕೊಡಬಾರದಿತ್ತು. ಆದ್ರೆ ಆ ಹೋರಿಗೆ ಮುಂಚಿಂದಾನೇ ಗುದ್ದೋ ಸ್ವಭಾವ ಇದ್ದು ಯಜಮಾನನಿಗೆ ಇದ್ರ ಬಗ್ಗೆ ಎಚ್ಚರಿಕೆ ಕೊಟ್ಟಿದ್ರೂ ಅವನು ಅದನ್ನ ಕಟ್ಟಿ ಹಾಕದಿದ್ದ ಕಾರಣ ಆ ಹೋರಿ ಯಾರನ್ನಾದ್ರೂ ಗುದ್ದಿ ಕೊಂದ್ರೆ ಆ ಕೊಲೆ ಅಪರಾಧಕ್ಕೆ ಯಜಮಾನನನ್ನ ಸಾಯಿಸಬೇಕಿತ್ತು. (ವಿಮೋಚನಕಾಂಡ 21:28, 29) ಯೆಹೋವನಿಗೆ ಜೀವ ಅಮೂಲ್ಯವಾಗಿರೋದ್ರಿಂದ ಈ ನಿಯಮಗಳನ್ನು ಇಸ್ರಾಯೇಲ್ಯರಿಗೆ ಕೊಟ್ಟನು. ಜನರು ಕೂಡ ಅದನ್ನ ಅಮೂಲ್ಯವಾಗಿ ನೋಡಬೇಕು ಅಂತ ಇಷ್ಟಪಡ್ತಾನೆ.
ನಾವು ನಮ್ಮ ಅಥವಾ ಬೇರೆಯವರ ಜೀವವನ್ನ ಪಣಕ್ಕಿಟ್ಟು ಯಾವ ಕೆಲಸವನ್ನೂ ಮಾಡಬಾರದು ಅಂತ ನಂಬಿಗಸ್ತ ಸೇವಕರು ಅರ್ಥಮಾಡಿಕೊಂಡಿದ್ದರು. ಫಿಲಿಷ್ಟಿಯ ಸೈನಿಕರು ಬೆತ್ಲೆಹೇಮನ್ನು ವಶಮಾಡಿಕೊಂಡಿದ್ರ ಬಗ್ಗೆ ಬೈಬಲಿನಲ್ಲಿದೆ. ಆ ಸಂದರ್ಭದಲ್ಲಿ ದಾವೀದ ಭದ್ರ ಕೋಟೆಯಲ್ಲಿ ಅಡಗಿಕೊಂಡಿದ್ದ. ಆಗ ‘ಬೆತ್ಲೆಹೇಮ್‌ನಲ್ಲಿರೋ ಬಾವಿಯಿಂದ ನೀರು ಕುಡಿಯೋಕೆ ಇಷ್ಟಪಡ್ತೀನಿ’ ಅಂತ ಹೇಳಿದ. ಇದನ್ನ ಅವನ ಮೂವರು ವೀರ ಸೈನಿಕರು ಕೇಳಿಸಿಕೊಂಡು ಫಿಲಿಷ್ಟಿಯರ ಪಾಳೆಯಕ್ಕೆ ನುಗ್ಗಿ ಬೆತ್ಲೆಹೇಮಿನ ಬಾವಿ ನೀರನ್ನ ದಾವೀದನಿಗೆ ತಂದ್ಕೊಟ್ರು. ಆಗ ದಾವೀದ ಏನು ಮಾಡಿದ? ಅವನು ಆ ನೀರನ್ನ ಕುಡಿಯದೆ ನೆಲಕ್ಕೆ ಸುರಿದುಬಿಟ್ಟ. ಆಮೇಲೆ ಅವನು, “ಈ ನೀರು ಕುಡಿಯೋ ಯೋಚ್ನೆನೂ ಮಾಡಕ್ಕಾಗಲ್ಲ. ಕುಡಿದ್ರೆ ಅದು ನನ್ನ ದೇವರ ದೃಷ್ಟಿಯಲ್ಲಿ ತಪ್ಪಾಗುತ್ತೆ. ತಮ್ಮ ಜೀವವನ್ನೇ ಪಣಕ್ಕಿಟ್ಟ ಈ ಗಂಡಸ್ರ ರಕ್ತವನ್ನ ನಾನು ಹೇಗೆ ಕುಡಿಲಿ? ಯಾಕಂದ್ರೆ ಅವರು ತಮ್ಮ ಜೀವವನ್ನೇ ಅಪಾಯಕ್ಕೊಡ್ಡಿ ಈ ನೀರು ತಂದಿದ್ದಾರೆ” ಅಂದ. (1 ಪೂರ್ವಕಾಲವೃತ್ತಾಂತ 11:17-19) ದಾವೀದ ಅವನ ಆಸೆ ತೀರಿಸಿಕೊಳ್ಳೋಕೆ ಬೇರೆಯವರ ಜೀವವನ್ನ ಪಣಕ್ಕಿಡಬಾರದು ಅಂತ ಅರ್ಥಮಾಡಿಕೊಂಡಿದ್ದ.
ಯೇಸು ಕೂಡ ಜೀವವನ್ನ ತುಂಬ ಅಮೂಲ್ಯವಾಗಿ ನೋಡ್ತಿದ್ದ. ಒಮ್ಮೆ ಸೈತಾನ, ಯೇಸುವನ್ನ ದೇವಾಲಯದ ಗೋಡೆಯ ಮೇಲೆ ನಿಲ್ಲಿಸಿ ನೀನು ದೇವರ ಮಗನಾಗಿದ್ರೆ ಕೆಳಕ್ಕೆ ಜಿಗಿ ನಿನ್ನನ್ನ ಕಾಪಾಡೋಕೆ ದೇವದೂತರು ಬರುತ್ತಾರೆ ಅಂತ ಹೇಳಿದ. ಆಗ ಯೇಸು ಅವನಿಗೆ, “ನೀನು ನಿನ್ನ ದೇವರಾದ ಯೆಹೋವನನ್ನ ಪರೀಕ್ಷಿಸಬಾರದು” ಅಂದ. (ಮತ್ತಾಯ 4:5-7) ಜೀವವನ್ನ ಅನಾವಶ್ಯಕವಾಗಿ ಪಣಕ್ಕಿಡೋದು ಯೆಹೋವನಿಗೆ ಇಷ್ಟ ಇಲ್ಲ ಅಂತ ದಾವೀದ ಮತ್ತು ಯೇಸು ಅರ್ಥಮಾಡಿಕೊಂಡಿದ್ದರು.
ಈ ಉದಾಹರಣೆಗಳನ್ನ ನೋಡಿದ ಮೇಲೆ ಅಪಾಯಕಾರಿ ಆಟ ಯಾವುದು ಅಂತ ಹೇಗೆ ಕಂಡುಹಿಡಿಯೋದು ಅನ್ನೋ ಪ್ರಶ್ನೆ ನಿಮಗೆ ಬಂದಿರಬಹುದು. ನಾವು ಆಡೋ ಎಲ್ಲ ಆಟವನ್ನ ಸರಿಯಾದ ರೀತಿಯಲ್ಲಿ ಆಡಿದ್ರೆ ಅದರಲ್ಲಿ ಅಪಾಯವಿಲ್ಲ. ಆದ್ರೆ ಅತಿರೇಕಕ್ಕೆ ಹೋದ್ರೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ ನಾವು ಹೇಗೆ ಆಡಬೇಕು ಅಂತ ತೀರ್ಮಾನ ಮಾಡಬೇಕು.
ಜೀವಕ್ಕಿಂತ ಆಟನೇ ಮುಖ್ಯನಾ?
ಒಂದು ಆಟ ಆಡೋ ಮುಂಚೆ ಅದನ್ನ ಆಡಬೇಕಾ ಬೇಡ್ವಾ ಅಂತ ಕೂತು ಯೋಚನೆ ಮಾಡಬೇಕು. ಉದಾಹರಣೆಗೆ ನಾವು ಹೀಗೆ ಕೇಳಿಕೊಳ್ಳಬಹುದು: ಈ ಆಟ ಆಡಿ ಎಷ್ಟು ಜನರಿಗೆ ಹಾನಿಯಾಗಿದೆ? ಈ ಆಟ ಆಡೋಕೆ ಬೇಕಾದ ಟ್ರೈನಿಂಗ್ ನನಗೆ ಸಿಕ್ಕಿದೆಯಾ? ಅಪಾಯ ಆಗದೇ ಇರೋಕೆ ಬೇಕಾದ ಸುರಕ್ಷತಾ ವಸ್ತುಗಳು ನನ್ನ ಹತ್ತಿರ ಇದೆಯಾ? ಒಂದುವೇಳೆ ನಾನು ಬಿದ್ರೆ, ಹಾರುವಾಗ ಎಡವಟ್ಟಾದ್ರೆ ಅಥವಾ ನನ್ನ ಹತ್ತಿರ ಇರೋ ಸುರಕ್ಷತಾ ವಸ್ತುಗಳು ಕೈಕೊಟ್ರೆ ಏನಾಗಬಹುದು? ಇದರಿಂದ ನನಗೆ ಚಿಕ್ಕಪುಟ್ಟ ಗಾಯವಾಗುತ್ತಾ, ಗಂಭೀರ ಗಾಯವಾಗುತ್ತಾ ಅಥವಾ ಪ್ರಾಣನೇ ಕಳಕೊಳ್ತೀನಾ?
ಒಬ್ಬ ಕ್ರೈಸ್ತ ಆಟದ ಹೆಸರಲ್ಲಿ ತನ್ನ ಜೀವವನ್ನೇ ಪಣಕ್ಕೊಡ್ಡಿದ್ರೆ ಯೆಹೋವನ ಜೊತೆಗಿರೋ ಸಂಬಂಧ ಮತ್ತು ಸಭೆಯಲ್ಲಿರೋ ಸೇವಾ ಸುಯೋಗಗಳನ್ನ ಕಳಕೊಳ್ಳುತ್ತಾನೆ. (1 ತಿಮೊತಿ 3:2, 8-10; 4:12; ತೀತ 2:6-8) ಹಾಗಾಗಿ ಒಬ್ಬ ಕ್ರೈಸ್ತ ಯಾವುದೇ ಆಟ ಆಡೋ ಮುಂಚೆ ಜೀವವನ್ನ ಯೆಹೋವ ಅಮೂಲ್ಯವಾಗಿ ನೋಡ್ತಾನೆ ಅನ್ನೋದನ್ನ ನೆನಪಿಟ್ಟುಕೊಳ್ಳೋದು ಒಳ್ಳೇದು.
[ಪಾದಟಿಪ್ಪಣಿ]
a ಇಲ್ಲಿ ಹೇಳಿರೋ ಬೇಸ್ (BASE) ಅನ್ನೋ ಪದದಲ್ಲಿ ಕಟ್ಟಡಗಳು, ಆಂಟೆನಾ, ದೊಡ್ಡ ಸೇತುವೆಗಳು ಮತ್ತು ಕಡಿದಾದ ಬಂಡೆಗಳು ಸೇರಿವೆ. ಇವುಗಳ ಮೇಲಿಂದ ಪ್ಯಾರಚೂಟ್ ಹಾಕೊಂಡು ಧುಮುಕೋದು ತುಂಬ ಅಪಾಯಕಾರಿ. ಅದಕ್ಕೆ ಅಮೇರಿಕಾದಲ್ಲಿರೋ ನ್ಯಾಷನಲ್ ಪಾರ್ಕ್ ಸರ್ವೀಸ್‌ನವರು ಇದನ್ನ ನಿಷೇಧಿಸಿದ್ದಾರೆ.