ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿರೀಕ್ಷೆ ಏಕೆ ಬೇಕು?

ನಿರೀಕ್ಷೆ ಏಕೆ ಬೇಕು?

ನಿರೀಕ್ಷೆ ಏಕೆ ಬೇಕು?

ಕ್ಯಾನ್ಸರ್‌ನಿಂದ ನರಳುತ್ತಿದ್ದ ಡಾನ್ಯೆಲ್‌ನ ಆಸೆ ನುಚ್ಚುನೂರು ಆಗದೇ ಇದ್ದಿದ್ರೆ ಏನಾಗುತ್ತಿತ್ತು? ಅವನು ಇವತ್ತಿನ ವರೆಗೂ ಬದುಕುತ್ತಿದ್ದನಾ? ರೋಗವನ್ನು ಜಯಿಸಿ ಸಾವಿಗೆ ಸಡ್ಡು ಹೊಡೆದು ಧೀರನಾಗುತ್ತಿದ್ದನಾ? ಹೀಗಾಗಿದ್ರೆ ‘ಆರೋಗ್ಯಕ್ಕೆ ಆಶಾಭಾವನೇ ಆಧಾರ’ ಎಂದು ವಾದಿಸುವವರು ಕೂಡ ನಂಬುತ್ತಿರಲಿಲ್ಲ. ಒಟ್ಟಿನಲ್ಲಿ ಎಲ್ಲದಕ್ಕೂ ಮದ್ದು ನಿರೀಕ್ಷೆ ಎಂದು ಹೇಳಲಿಕ್ಕೆ ಆಗಲ್ಲ.

ದ ಕೊಲಂಬಿಯ ಬ್ರಾಡ್‌ಕಾಸ್ಟಿಂಗ್‌ ಸಿಸ್ಟಮ್‌ ನ್ಯೂಸ್‌ ಚಾನಲ್‌ನಲ್ಲಿ ಡಾಕ್ಟರ್‌ ನೇತನ್‌ ಚರ್ನಿ ಜೊತೆ ಒಂದು ಸಂದರ್ಶನ ನಡೆಯಿತು. ತುಂಬ ಹುಷಾರಿಲ್ಲದ ರೋಗಿಗೆ ಅತಿಯಾದ ನಿರೀಕ್ಷೆ ಕೊಡುವುದು ಸರಿಯಲ್ಲ ಅಂತ ಡಾಕ್ಟರ್‌ ಚರ್ನಿ ಆ ಸಂದರ್ಶನದಲ್ಲಿ ಎಚ್ಚರಿಸಿದರು. “ಕೆಲವು ಗಂಡಂದಿರು ಹೆಂಡತಿಯರಿಗೆ, ‘ನೀನು ಧ್ಯಾನ ಮಾಡ್ತಿಲ್ಲ, ಸಕಾರಾತ್ಮಕವಾಗಿ ಯೋಚಿಸ್ತಿಲ್ಲ’ ಎಂದು ಬಾಯಿಗೆ ಬಂದ ಹಾಗೆ ಬೈಯುತ್ತಾರೆ. ಏಕೆಂದ್ರೆ ಸಕಾರಾತ್ಮಕವಾಗಿ ಯೋಚಿಸಿದರೆ ಕ್ಯಾನ್ಸರ್‌ ಗಡ್ಡೆ ಬೆಳೆಯುವುದನ್ನು ಕೂಡ ತಡೆಯಬಹುದು ಎಂಬ ಭ್ರಮೆ ಅವರಿಗಿದೆ. ರೋಗಿಯ ಆರೋಗ್ಯ ಇನ್ನೂ ಹಾಳಾದರೆ, ‘ನೀನು ಗಟ್ಟಿಮನಸ್ಸು ಮಾಡಿ ಎಲ್ಲ ಸರಿಯಾಗುತ್ತೆ ಅಂತ ಯೋಚನೆ ಮಾಡ್ಲಿಲ್ಲ, ಅದಕ್ಕೇ ಇವತ್ತು ನಿನಗೆ ಈ ಗತಿ’ ಎಂದು ಹೇಳಿ ತಪ್ಪನ್ನೆಲ್ಲ ರೋಗಿಯ ಮೇಲೆ ಹೊರಿಸುತ್ತಾರೆ, ಇದು ಸರಿಯಲ್ಲ” ಎಂದು ಡಾಕ್ಟರ್‌ ಚರ್ನಿ ಹೇಳಿದರು.

ಜೀವವನ್ನೇ ಬಲಿ ತೆಗೆದುಕೊಳ್ಳುವ ರೋಗ ಇರುವವರು ಪ್ರತಿ ಕ್ಷಣ ನರಳಿ ನರಳಿ ಸುಸ್ತಾಗಿ ಹೋಗಿರುತ್ತಾರೆ. ಅವರ ಮೇಲೆ ಪ್ರೀತಿ ಇದ್ರೆ ಮನಸ್ಸಿಗೆ ನೋವಾಗುವ ತರ ಮಾತಾಡಿ ಖಂಡಿತ ನಾವು ಅವರ ನೋವನ್ನು ಜಾಸ್ತಿ ಮಾಡಲ್ಲ. ಹಾಗಾದ್ರೆ ಆಶಾಭಾವದಿಂದ ಪ್ರಯೋಜನ ಇಲ್ಲವಾ?

ಖಂಡಿತ ಇದೆ. ಉದಾಹರಣೆಗೆ ಡಾಕ್ಟರ್‌ ಚರ್ನಿ ನೋವು ನಿವಾರಣೆಯ ತಜ್ಞರು. ರೋಗಿ ರೋಗದೊಟ್ಟಿಗೆ ಹೋರಾಡಬೇಕು, ಅವನ ಆಯಸ್ಸನ್ನು ಜಾಸ್ತಿ ಮಾಡಬೇಕು ಅಂತ ಆ ಡಾಕ್ಟರ್‌ ನೆನಸುವುದಿಲ್ಲ. ರೋಗಿ ಇದ್ದಷ್ಟು ದಿನ ಆದಷ್ಟು ಆರಾಮವಾಗಿ ಖುಷಿಯಾಗಿ ಇರುವ ಹಾಗೆ ನೋಡಿಕೊಳ್ಳುತ್ತಾರೆ. ಇವರ ಹಾಗೆ ಎಷ್ಟೋ ಡಾಕ್ಟರ್‌ಗಳು ಕಾಯಿಲೆ ಜಾಸ್ತಿಯಾಗಿದ್ದರೂ ರೋಗಿಯ ಮನಸ್ಸು ಖುಷಿಖುಷಿಯಾಗಿ ಇರಲಿಕ್ಕೆ ಚಿಕಿತ್ಸೆ ಕೊಡುವುದೇ ಬೆಸ್ಟ್‌ ಎಂದು ದೃಢವಾಗಿ ನಂಬುತ್ತಾರೆ. ನಿರೀಕ್ಷೆ ಇದ್ರೆ ಮನಸ್ಸು ಉಲ್ಲಾಸವಾಗಿ ಇರುತ್ತೆ, ಅದ್ರಿಂದ ತುಂಬ ಪ್ರಯೋಜನನೂ ಇದೆ ಅನ್ನುವುದಕ್ಕೆ ತುಂಬ ಆಧಾರಗಳಿವೆ.

ನಿರೀಕ್ಷೆಯ ಪ್ರಯೋಜನ

“ನಿರೀಕ್ಷೆ ಒಂದು ಪರಿಣಾಮಕಾರಿ ಮದ್ದು” ಎನ್ನುತ್ತಾರೆ ವೈದ್ಯಕೀಯ ಪತ್ರಕರ್ತ ಡಾಕ್ಟರ್‌ W. ಗಿಫಾರ್ಡ್‌ ಜೋನ್ಸ್‌. ಮಾರಣಾಂತಿಕ ರೋಗ ಇರುವವರಿಗೆ ಭಾವನಾತ್ಮಕ ಬೆಂಬಲ ಕೊಡುವುದು ಎಷ್ಟು ಮುಖ್ಯ ಎಂದು ತಿಳಿದುಕೊಳ್ಳಲು ನಡೆಸಿದ ಬೇರೆಬೇರೆ ಅಧ್ಯಯನಗಳನ್ನು ಡಾ. ಜೋನ್ಸ್‌ ಪರಿಶೀಲಿಸಿದರು. ಆ ರೀತಿ ಬೆಂಬಲ ಕೊಟ್ರೆ ರೋಗಿಗಳು ಕುಗ್ಗಿ ಹೋಗದೆ ಸಕಾರಾತ್ಮಕವಾಗಿ ಯೋಚಿಸಬಹುದು. ಭಾವನಾತ್ಮಕ ಬೆಂಬಲ ಪಡೆದ ರೋಗಿಗಳು ಜಾಸ್ತಿ ದಿನ ಬದುಕಿದರು ಎಂದು 1989 ರಲ್ಲಿ ನಡೆಸಿದ ಒಂದು ಅಧ್ಯಯನ ತೋರಿಸಿತು. ಆದ್ರೆ ಇತ್ತೀಚಿಗೆ ನಡೆಸಿದ ಸಂಶೋಧನೆ ಅದನ್ನು ಪೂರ್ತಿ ಒಪ್ಪುವುದಿಲ್ಲ. ಒಟ್ಟಿನಲ್ಲಿ ಭಾವನಾತ್ಮಕ ಬೆಂಬಲ ಪಡೆಯದ ರೋಗಿಗಳಿಗಿಂತ ಅಂಥ ಬೆಂಬಲ ಪಡೆದ ರೋಗಿಗಳು ಖಿನ್ನತೆಗೆ ಒಳಗಾಗೋದು ಕಡಿಮೆ, ನೋವು ಅನುಭವಿಸೋದು ಕೂಡ ಕಡಿಮೆ ಎಂದು ಅಧ್ಯಯನಗಳಿಂದ ಸಾಬೀತಾಗಿದೆ.

ಪಾಸಿಟಿವ್‌ ಮತ್ತು ನೆಗೆಟಿವ್‌ ಯೋಚನೆ ಹೃದಯದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂದು ಇನ್ನೊಂದು ಅಧ್ಯಯನ ತೋರಿಸುತ್ತದೆ. ಜೀವನದ ಬಗ್ಗೆ ನೆಗೆಟಿವ್‌ ಯೋಚನೆ ಇದೆಯಾ ಪಾಸಿಟಿವ್‌ ಯೋಚನೆ ಇದೆಯಾ ಅಂತ ತಿಳಿಯಲು 1,300ಕ್ಕಿಂತ ಹೆಚ್ಚು ಗಂಡಸರನ್ನು ಪರೀಕ್ಷೆಗೆ ಒಳಪಡಿಸಲಾಯಿತು. 10 ವರ್ಷ ಆದಮೇಲೆ ಆ ಪರಿಶೀಲನೆ ಮಾಡಿದವರಲ್ಲಿ 12% ಗಂಡಸರು ಹೃದಯ ರೋಗದಿಂದ ನರಳುತ್ತಿದ್ದರು ಅಂತ ಗೊತ್ತಾಯಿತು. ಅವರಲ್ಲಿ ಪಾಸಿಟಿವ್‌ ಆಗಿ ಯೋಚನೆ ಮಾಡುವವರಿಗಿಂತ ನೆಗೆಟಿವ್‌ ಆಗಿ ಯೋಚನೆ ಮಾಡುವವರೇ ಜಾಸ್ತಿ ಇದ್ದರು, ಅಂದ್ರೆ ಇಬ್ಬರಿಗೆ ನೆಗೆಟಿವ್‌ ಯೋಚನೆ ಇದ್ರೆ ಒಬ್ಬರಿಗಷ್ಟೇ ಪಾಸಿಟಿವ್‌ ಯೋಚನೆ ಇತ್ತು. ಹಾವರ್ಡ್‌ ಸ್ಕೂಲ್‌ ಆಫ್‌ ಪಬ್ಲಿಕ್‌ ಹೆಲ್ತ್‌ನಲ್ಲಿ ಆರೋಗ್ಯ ಮತ್ತು ಸಾಮಾಜಿಕ ವರ್ತನೆಯ ಅಸಿಸ್ಟೆಂಟ್‌ ಪ್ರೊಫೆಸರ್‌ ಲಾರಾ ಕುಬ್‌ಜಾ಼ನ್‌ಸ್ಕಿ ಏನು ಹೇಳ್ತಾರೆ ನೋಡಿ: “ಪಾಸಿಟಿವ್‌ ಆಗಿ ಯೋಚನೆ ಮಾಡುವುದು ಆರೋಗ್ಯಕ್ಕೆ ಒಳ್ಳೇದು ಅಂತ ಕೆಲವರ ಅಭಿಪ್ರಾಯ. ಇದು ಸರಿ ಅಂತ ಹೃದ್ರೋಗದ ವೈದ್ಯಕೀಯ ಕ್ಷೇತ್ರದಲ್ಲಿ ಮೊದಲನೇ ಸಲ ಸಾಬೀತಾಗಿರುವುದು ಆ ಅಧ್ಯಯನದಿಂದಲೇ.”

ಆಪರೇಷನ್‌ ಆದ ಮೇಲೆ ‘ನನ್ನ ಆರೋಗ್ಯ ಹಾಳಾಯ್ತು’ ಅಂತ ಕೊರಗುವವರ ಆರೋಗ್ಯ ಇನ್ನೂ ಹಾಳಾಗಿದೆ, ಆದರೆ ‘ನಾನು ಚೆನ್ನಾಗಿ ಆಗ್ತಿದ್ದೀನಿ’ ಎಂದು ನೆನಸುವವರು ಬೇಗ ಚೇತರಿಸಿಕೊಂಡಿದ್ದಾರೆ ಎಂದು ಕೆಲವು ಅಧ್ಯಯನಗಳು ತೋರಿಸುತ್ತವೆ. ಸಕಾರಾತ್ಮಕವಾಗಿ ಯೋಚಿಸಿದರೆ ಆಯಸ್ಸು ಕೂಡ ಜಾಸ್ತಿ ಆಗುತ್ತದೆ. ವೃದ್ಧರು ತಮಗೆ ವಯಸ್ಸಾಗುತ್ತಾ ಇರುವುದನ್ನು ಪಾಸಿಟಿವ್‌ ಆಗಿ ತಗೊಂಡಾಗ ಏನಾಯ್ತು, ನೆಗೆಟಿವ್‌ ಆಗಿ ತಗೊಂಡಾಗ ಏನಾಯ್ತು ಅಂತ ತಿಳಿಯಲು ಒಂದು ಅಧ್ಯಯನ ನಡೆಸಲಾಯಿತು. ವಯಸ್ಸಾದವರಿಗೆ ವಿವೇಕ, ಅನುಭವ ಜಾಸ್ತಿ ಎಂಬ ಮೆಸೇಜುಗಳು ಕಂಪ್ಯೂಟರ್‌ ಸ್ಕ್ರೀನ್‌ ಮೇಲೆ ಆಗಾಗ ಕಾಣಿಸಿಕೊಂಡಾಗ ಅವರಲ್ಲಿದ್ದ ಬಲ ಜಾಸ್ತಿ ಆಯಿತು, ಚುರುಕಾಗಿ ನಡೆಯುತ್ತಿದ್ದರು. ಇದ್ರಿಂದ ಸಿಕ್ಕಿದ ಪ್ರಯೋಜನ 12 ವಾರ ವ್ಯಾಯಾಮದಿಂದ ಸಿಗುವ ಪ್ರಯೋಜನಕ್ಕೆ ಸಮವಾಗಿತ್ತು.

ಆಶಾಭಾವ, ನಿರೀಕ್ಷೆ, ಸಕಾರಾತ್ಮಕ ಮನೋಭಾವ ಇಂಥ ಭಾವನೆಗಳು ಯಾಕೆ ಆರೋಗ್ಯಕ್ಕೆ ಒಳ್ಳೇದು? ಇದಕ್ಕೆ ಸರಿಯಾದ ಉತ್ತರ ಕೊಡಲು ವಿಜ್ಞಾನಿಗಳಿಗೆ ಡಾಕ್ಟರ್‌ಗಳಿಗೆ ಆಗ್ತಿಲ್ಲ. ಯಾಕೆಂದ್ರೆ ಅವರಿಗೆ ಮನುಷ್ಯರ ಮನಸ್ಸು ಮತ್ತು ದೇಹದ ಬಗ್ಗೆ ಇನ್ನೂ ಅರ್ಥ ಆಗಿಲ್ಲ. ಆ ವಿಷಯದ ಬಗ್ಗೆ ಅಧ್ಯಯನ ಮಾಡುವವರು ಅನುಭವ, ಜ್ಞಾನ, ಮಾಹಿತಿ ಮೇಲೆ ಆಧರಿಸಿ ಊಹಾಪೋಹ ಮಾಡಬಹುದು. ಉದಾಹರಣೆಗೆ, ನರವಿಜ್ಞಾನದ ಪ್ರೊಫೆಸರ್‌ ಹೀಗೆ ಹೇಳುತ್ತಾರೆ: “ಖುಷಿಯಾಗಿ, ನಿರೀಕ್ಷೆಯಿಂದ ಇರುವುದು ಒಳ್ಳೇದು. ಖುಷಿಖುಷಿಯಾಗಿ ಇರುವವರಿಗೆ ಒತ್ತಡ ತುಂಬ ಕಡಿಮೆ, ಆರೋಗ್ಯವೂ ಚೆನ್ನಾಗಿರುತ್ತೆ. ಆರೋಗ್ಯವಾಗಿರಲು ಮಾಡುವ ವಿಷಯಗಳಲ್ಲಿ ನಿರೀಕ್ಷೆಯಿಂದ ಇರುವುದು ಕೂಡ ಒಂದು.”

ಈ ವಿಷಯ ಕೆಲವು ವೈದ್ಯರು, ಮನಶಾಸ್ತ್ರಜ್ಞರು ಮತ್ತು ವಿಜ್ಞಾನಿಗಳಿಗೆ ಹೊಸದು ಅಂತ ಅನಿಸಬಹುದು. ಆದರೆ ಬೈಬಲ್‌ ವಿದ್ಯಾರ್ಥಿಗಳಿಗೆ ಇದು ಹೊಸದಲ್ಲ. ಏಕೆಂದ್ರೆ ಹತ್ತಿರತ್ತಿರ 3,000 ವರ್ಷಗಳ ಹಿಂದೆ ತುಂಬ ವಿವೇಕವಿದ್ದ ರಾಜ ಸೊಲೊಮೋನ ಹೀಗೆ ಬರೆದಿದ್ದಾನೆ: “ಹರ್ಷಹೃದಯ ಒಳ್ಳೇ ಮದ್ದು, ಕುಗ್ಗಿದ ಮನಸ್ಸು ಒಬ್ಬನ ಶಕ್ತಿಯನ್ನೆಲ್ಲಾ ಹೀರಿಹಾಕುತ್ತೆ.” (ಜ್ಞಾನೋಕ್ತಿ 17:22) ಗಮನಿಸಿ, ಈ ವಚನ ಹರ್ಷಹೃದಯ ಕಾಯಿಲೆಯನ್ನು ಗುಣಮಾಡುತ್ತದೆ ಎಂದು ಹೇಳ್ತಿಲ್ಲ, ಬದಲಿಗೆ ಹರ್ಷಹೃದಯ ಒಂದು ಒಳ್ಳೇ ಮದ್ದು ತರ ಇದೆ ಎಂದು ಹೇಳ್ತಿದೆ.

ನಿರೀಕ್ಷೆ ಮದ್ದಾದರೆ ಯಾವ ಡಾಕ್ಟರ್‌ ತಾನೇ ಅದನ್ನು ಶಿಫಾರಸ್ಸು ಮಾಡುವುದಿಲ್ಲ? ಅಲ್ಲದೆ ನಿರೀಕ್ಷೆಯಿಂದ ಬರೀ ಒಳ್ಳೇ ಆರೋಗ್ಯ ಮಾತ್ರ ಅಲ್ಲ ಬೇರೆ ಪ್ರಯೋಜನಗಳು ಸಹ ಸಿಗುತ್ತವೆ.

ನಿಮ್ಮ ಮೇಲೆ ಆಶಾವಾದ, ನಿರಾಶಾವಾದ ಬೀರುವ ಪ್ರಭಾವ

ಆಶಾವಾದಿಗಳು ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸುವುದರಿಂದ ತುಂಬ ಪ್ರಯೋಜನ ಪಡೆದಿದ್ದಾರೆ ಮತ್ತು ಓದು, ಕೆಲಸ, ಆಟ ಎಲ್ಲದರಲ್ಲೂ ಅವರು ಎತ್ತಿದ ಕೈ ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ. ಮಹಿಳಾ ಅಥ್ಲೆಟಿಕ್‌ ತಂಡದ ಬಗ್ಗೆ ನಡೆಸಿದ ಒಂದು ಅಧ್ಯಯವನ್ನು ಗಮನಿಸಿ. ಕೋಚ್‌ಗಳು ಆ ತಂಡದಲ್ಲಿದ್ದ ಮಹಿಳೆಯರ ಸಾಮರ್ಥ್ಯಗಳ ಬಗ್ಗೆ ಪೂರ್ತಿ ವಿವರ ಕೊಟ್ಟರು. ಅದೇ ಸಮಯದಲ್ಲಿ ಆ ಮಹಿಳೆಯರು ಎಷ್ಟರ ಮಟ್ಟಿಗೆ ಆಶಾವಾದಿಗಳಾಗಿ ಇದ್ದಾರೆಂದು ಸರ್ವೆ ಮಾಡಲಾಯಿತು. ಕೋಚ್‌ಗಳು ಕೊಟ್ಟ ಮಾಹಿತಿಗಿಂತಲೂ ಆ ಮಹಿಳೆಯರಲ್ಲಿದ್ದ ಸಕಾರಾತ್ಮಕ ಮನೋಭಾವದಿಂದಲೇ ಅವರು ಚೆನ್ನಾಗಿ ಆಡುತ್ತಾರಾ ಇಲ್ಲವಾ ಎಂದು ಹೇಳಲಿಕ್ಕೆ ಆಯಿತು. ನಿರೀಕ್ಷೆಗೆ ಯಾಕೆ ಇಷ್ಟೊಂದು ಶಕ್ತಿ ಇದೆ?

ನಿರಾಶಾವಾದದ ಬಗ್ಗೆ ಅಧ್ಯಯನ ಮಾಡಿದಾಗ ತುಂಬ ವಿಷಯ ಗೊತ್ತಾಗಿದೆ. 1960 ರ ದಶಕದಲ್ಲಿ ಪ್ರಾಣಿಗಳ ನಡವಳಿಕೆ ಬಗ್ಗೆ ಪ್ರಯೋಗಗಳನ್ನು ನಡೆಸಲಾಯಿತು. ಆಗ ಸಿಕ್ಕಿದ ಅನಿರೀಕ್ಷಿತ ಫಲಿತಾಂಶದಿಂದ ಸಂಶೋಧಕರು “ಕಲಿತ ನಿರಾಶಾಭಾವ” ಎಂಬ ಹೊಸ ಪದ ಕಂಡುಹಿಡಿದರು. ಈ ತರದ ರೋಗ ಮನುಷ್ಯರಿಗೂ ಬರುತ್ತದೆಂದು ಅವರು ಕಂಡುಹಿಡಿದರು. ಇದನ್ನು ಕಂಡುಹಿಡಿಯಲಿಕ್ಕಾಗಿ ಅವರು ಒಂದು ಗುಂಪಿನಲ್ಲಿ ಇರುವವರಿಗೆ ಕಿರಿಕಿರಿ ಶಬ್ದ ಜೋರಾಗಿ ಕೇಳಿಸುವಾಗ ಹಾಗೆ ಮಾಡಿದರು. ಆಮೇಲೆ ಆ ಶಬ್ದವನ್ನು ನಿಲ್ಲಿಸಲು ಯಾವ ಯಾವ ಬಟನ್‌ಗಳನ್ನು ಒತ್ತಬೇಕೆಂದು ಹೇಳಿಕೊಟ್ಟರು. ಅವರು ಅದೇ ತರ ಮಾಡಿ ಆ ಶಬ್ದ ನಿಲ್ಲಿಸಿದರು.

ಇನ್ನೊಂದು ಗುಂಪಲ್ಲಿ ಇರುವವರಿಗೂ ಅದನ್ನೇ ಹೇಳಿಕೊಟ್ಟರು. ಆದ್ರೆ ಅವರು ಆ ಬಟನ್‌ಗಳನ್ನು ಒತ್ತಿದ್ರೂ ಶಬ್ದ ನಿಲ್ಲಲಿಲ್ಲ. ಆಗ ಆ ಗುಂಪಲ್ಲಿ ಹೆಚ್ಚಿನವರು ಕುಗ್ಗಿ ಹೋಗಿ ನಿರಾಶಾಭಾವವನ್ನು ಬೆಳೆಸಿಕೊಂಡರು. ಅದೇ ದಿನ ಬೇರೆ ಬೇರೆ ಪರೀಕ್ಷೆ ಕೊಟ್ಟಾಗಲೂ ಅವರು ಅದನ್ನು ಮಾಡಲೇ ಇಲ್ಲ. ‘ಏನು ಮಾಡಿದ್ರೂ ಅಷ್ಟೇ, ಏನೂ ಬದಲಾಗಲ್ಲ’ ಎಂದು ನಂಬಿದರು. ಆದ್ರೆ ಅದೇ ಗುಂಪಲ್ಲಿದ್ದ ಕೆಲವು ಆಶಾವಾದಿಗಳು ಅಂಥ ನಿರಾಶಾಭಾವನೆಯನ್ನು ಬೆಳೆಸಿಕೊಳ್ಳಲಿಲ್ಲ.

ಆರಂಭದಲ್ಲಿ ತಿಳಿಸಲಾದ ಕೆಲವು ಪ್ರಯೋಗಗಳನ್ನು ಮಾಡಿದವರಲ್ಲಿ ಡಾಕ್ಟರ್‌ ಮಾರ್ಟಿನ್‌ ಸೆಲಿಗ್ಮಾನ್‌ ಒಬ್ಬ. ಆ ಪ್ರಯೋಗಗಳಿಂದ ಅವನಿಗೆ ಆಶಾಭಾವ ನಿರಾಶಾಭಾವದ ಬಗ್ಗೆ ಅಧ್ಯಯನ ನಡೆಸುವುದನ್ನೇ ವೃತ್ತಿಯಾಗಿ ಮಾಡಿಕೊಳ್ಳಲು ಸ್ಫೂರ್ತಿ ಸಿಕ್ಕಿತು. ನಿಸ್ಸಹಾಯಕರು ಎಂಬ ಭಾವನೆ ಇರುವವರಲ್ಲಿ ಎಂಥ ಯೋಚನೆ ಇರುತ್ತದೆ, ಹೇಗೆ ನಡೆದುಕೊಳ್ತಾರೆ ಎಂದು ಡಾ. ಸೆಲಿಗ್ಮಾನ್‌ ಸೂಕ್ಷ್ಮವಾಗಿ ಪರಿಶೀಲಿಸಿದನು. ಅಂಥ ನಕಾರಾತ್ಮಕ ಯೋಚನೆಗಳಿದ್ದಾಗ ದಿನನಿತ್ಯದ ಕೆಲಸಗಳನ್ನು ಮಾಡಲಿಕ್ಕೂ ಕಷ್ಟ ಆಗುತ್ತೆ ಅಥವಾ ಮಾಡಲಿಕ್ಕೆ ಆಗೋದೇ ಇಲ್ಲ. ನಕಾರಾತ್ಮಕ ಯೋಚನೆ ಮತ್ತು ಅದರ ಪರಿಣಾಮದ ಬಗ್ಗೆ ಡಾ. ಸೆಲಿಗ್ಮಾನ್‌ ಚುಟುಕಾಗಿ ಹೀಗನ್ನುತ್ತಾನೆ: “ನಿರಾಶಾವಾದಿಗಳ ತರ ಯಾವಾಗಲೂ ‘ಕೆಟ್ಟದಕ್ಕೆ ನಾನೇ ಕಾರಣ’ ಅಂತ ನೆನಸಿದರೆ, ‘ಇದು ಬದಲಾಗೋದೇ ಇಲ್ಲ’ ಅಂತ ಅಂದುಕೊಂಡ್ರೆ ಇನ್ನೂ ಕೆಟ್ಟದ್ದೇ ಆಗುತ್ತೆ, ನಾವು ಮಾಡುವ ಕೆಲಸಗಳೆಲ್ಲಾ ಹಾಳಾಗುತ್ತೆ ಎಂದು ನನ್ನ 25 ವರ್ಷಗಳ ಅಧ್ಯಯನ ಮನವರಿಕೆ ಮಾಡಿದೆ.”

ಈಗಾಗಲೇ ತಿಳಿಸಿದಂತೆ ಇಂಥ ವಿಚಾರಗಳು ಇವತ್ತು ಕೆಲವರಿಗೆ ಹೊಸದು. ಆದರೆ ಬೈಬಲ್‌ ವಿದ್ಯಾರ್ಥಿಗಳಿಗೆ ಅದು ಹೊಸದಲ್ಲ. ಏಕೆಂದ್ರೆ ಬೈಬಲಲ್ಲಿ ಈ ನಾಣ್ಣುಡಿ ಇದೆ: “ಕಷ್ಟ ಬಂದಾಗ ಧೈರ್ಯ ಕಳ್ಕೊಂಡ್ರೆ ಇರೋ ಬಲನೂ ಹೋಗುತ್ತೆ.” (ಜ್ಞಾನೋಕ್ತಿ 24:10) ನಿರಾಶೆ ಆದಾಗ, ನಕಾರಾತ್ಮಕ ಯೋಚನೆಗಳು ಬಂದಾಗ ನಮ್ಮಿಂದ ಏನೂ ಮಾಡಲಿಕ್ಕೆ ಆಗಲ್ಲ ಎಂದು ಬೈಬಲ್‌ ಸ್ಪಷ್ಟವಾಗಿ ತಿಳಿಸುತ್ತದೆ. ನಕಾರಾತ್ಮಕ ಯೋಚನೆಗಳನ್ನು ಹೊಡೆದೋಡಿಸಲು, ಸಕಾರಾತ್ಮಕವಾಗಿ ಯೋಚಿಸಲು, ನಿರೀಕ್ಷೆಯಿಂದ ಜೀವಿಸಲು ಏನು ಮಾಡಬೇಕು?

[ಪುಟ 4, 5 ರಲ್ಲಿರುವ ಚಿತ್ರ]

ನಿರೀಕ್ಷೆಯಿಂದ ಖಂಡಿತ ಪ್ರಯೋಜನ ಇದೆ