ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯಾರು ಮಾತ್ರ ನಿರೀಕ್ಷೆ ಕೊಡಲು ಸಾಧ್ಯ?

ಯಾರು ಮಾತ್ರ ನಿರೀಕ್ಷೆ ಕೊಡಲು ಸಾಧ್ಯ?

ಯಾರು ಮಾತ್ರ ನಿರೀಕ್ಷೆ ಕೊಡಲು ಸಾಧ್ಯ?

ನೆನಸಿ, ನಿಮ್ಮ ವಾಚ್‌ ನಿಂತುಹೋಗಿದೆ. ರಿಪೇರಿ ಮಾಡಲಿಕ್ಕೆ ಆಗಲ್ವೇನೋ ಅನಿಸುತ್ತೆ. ವಾಚ್‌ ಸರಿಮಾಡುತ್ತೇವೆಂದು ಹೇಳುವ ನೂರಾರು ಅಡ್ವಟೈಸ್‌ಮೆಂಟ್‌ಗಳನ್ನು ನೋಡಿ ಯಾವುದನ್ನು ನಂಬಬೇಕು, ಬಿಡಬೇಕು ಅಂತ ಗೊತ್ತಾಗದೆ ನಿಮಗೆ ತಲೆ ಕೆಟ್ಟು ಹೋಗುತ್ತದೆ. ಆದ್ರೆ ಆ ವಾಚ್‌ ಕಂಡುಹಿಡಿದ ಬುದ್ಧಿವಂತ ನಿಮ್ಮ ಮನೆ ಹತ್ತಿರ ಇದ್ದಾನೆ ಅಂತ ಗೊತ್ತಾದಾಗ ಹೇಗೆ ಅನಿಸುತ್ತೆ? ಅದೂ ಅಲ್ಲದೆ ಅವನು ನಿಮ್ಮ ವಾಚ್‌ನ ಫ್ರೀಯಾಗಿ ರಿಪೇರಿ ಮಾಡಿಕೊಡಲಿಕ್ಕೆ ರೆಡಿ ಇದ್ದಾನೆಂದು ಗೊತ್ತಾದರೆ ಏನು ಮಾಡ್ತಿರಾ? ವಾಚ್‌ನ ಅವನ ಹತ್ತಿರನೇ ರಿಪೇರಿಗೆ ಕೊಡ್ತಿರಾ ಅಲ್ವಾ?

ಆ ವಾಚನ್ನು ನಿಮ್ಮಲ್ಲಿರೋ ನಿರೀಕ್ಷಿಸುವ ಸಾಮರ್ಥ್ಯಕ್ಕೆ ಹೋಲಿಸಿ. ನೀವು ನಿರೀಕ್ಷೆ ಕಳೆದುಕೊಳ್ತಿದ್ರೆ ಯಾರ ಸಹಾಯ ಪಡೆಯುತ್ತೀರಾ? ಎಷ್ಟೋ ಜನ ನಿಮ್ಮ ಸಮಸ್ಯೆಗೆ ಪರಿಹಾರ ಕೊಡುತ್ತೇವೆಂದು ಹೇಳಬಹುದು, ಸಾವಿರಾರು ಸಲಹೆಗಳನ್ನೂ ಕೊಡಬಹುದು. ಆಗ ನಿಮಗೆ ಯಾರನ್ನು ನಂಬಬೇಕು ಬಿಡಬೇಕು ಅಂತ ಗೊತ್ತಾಗದೆ ತಲೆ ಕೆಟ್ಟು ಹೋಗಬಹುದು. ಸುಮ್ಮನೆ ಅವರು-ಇವರು ಹೇಳೋದನ್ನು ಕೇಳುವುದಕ್ಕಿಂತ ನಿಮ್ಮಲ್ಲಿ ನಿರೀಕ್ಷಿಸುವ ಸಾಮರ್ಥ್ಯವನ್ನು ಇಟ್ಟ ದೇವರ ಹತ್ತಿರನೇ ಹೋಗಬಹುದಲ್ಲಾ? ಏಕೆಂದ್ರೆ “ದೇವರು ನಮ್ಮಲ್ಲಿ ಒಬ್ರಿಗೂ ದೂರವಾಗಿಲ್ಲ,” ನಮಗೆ ಸಹಾಯ ಮಾಡಲು ಸಿದ್ಧನಿದ್ದಾನೆ.—ಅಪೊಸ್ತಲರ ಕಾರ್ಯ 17:27; 1 ಪೇತ್ರ 5:7.

ನಿರೀಕ್ಷೆಯ ನಿಜಾರ್ಥ

ನಿರೀಕ್ಷೆಗೆ ವೈದ್ಯರು, ವಿಜ್ಞಾನಿಗಳು, ಮನೋವಿಜ್ಞಾನಿಗಳು ಇವತ್ತು ಕೊಡುವ ವಿವರಣೆಗಿಂತ ಬೈಬಲ್‌ ಹೆಚ್ಚು ವಿವರಣೆ ಕೊಡುತ್ತದೆ. ನಿರೀಕ್ಷೆಗೆ ಮೂಲಭಾಷೆಯಲ್ಲಿರುವ ಪದದ ಅರ್ಥ ಕಾತರದಿಂದ ಕಾಯುವುದು ಮತ್ತು ಒಳ್ಳೇದಾಗುತ್ತೆ ಅಂತ ನೆನಸುವುದು. ಇದರಲ್ಲಿ ಎರಡು ವಿಷಯ ಇದೆ. ಒಂದು ಆಸೆ, ಇನ್ನೊಂದು ಆಧಾರ. ಬೈಬಲಲ್ಲಿ ತಿಳಿಸಿರುವ ನಿರೀಕ್ಷೆ ಒಂದು ಭ್ರಮೆ ಅಲ್ಲ. ಅದು ನಿಜ ಮತ್ತು ಅದಕ್ಕೆ ಆಧಾರನೂ ಇದೆ.

ನಿರೀಕ್ಷೆ ಮತ್ತು ನಂಬಿಕೆ ಒಂದೇ ತರ. ಏಕೆಂದ್ರೆ ಎರಡಕ್ಕೂ ಆಧಾರ ಇರುತ್ತದೆ, ಕಣ್ಮುಚ್ಚಿ ನಂಬುವಂಥ ವಿಷಯ ಅಲ್ಲ. (ಇಬ್ರಿಯ 11:1) ಆದರೂ ನಂಬಿಕೆ ಮತ್ತು ನಿರೀಕ್ಷೆಗೆ ವ್ಯತ್ಯಾಸ ಇದೆ ಎಂದು ಬೈಬಲ್‌ ಹೇಳುತ್ತದೆ.—1 ಕೊರಿಂಥ 13:13.

ಇದನ್ನು ಅರ್ಥಮಾಡಿಕೊಳ್ಳಲು ಒಂದು ಉದಾಹರಣೆ ನೋಡಿ. ನೀವು ನಿಮ್ಮ ಬೆಸ್ಟ್‌ ಫ್ರೆಂಡ್‌ ಹತ್ತಿರ ಒಂದು ಸಹಾಯ ಕೇಳ್ತೀರಿ. ಅವರು ನಿಮಗೆ ಸಹಾಯ ಮಾಡೇ ಮಾಡುತ್ತಾರೆ ಎಂಬ ನಿರೀಕ್ಷೆ ನಿಮಗಿದೆ. ಆ ನಿರೀಕ್ಷೆಗೆ ಆಧಾರ ಇದೆ. ಏಕೆಂದ್ರೆ ನಿಮ್ಮ ಫ್ರೆಂಡ್‌ ಎಷ್ಟೋ ಸಲ ಉದಾರವಾಗಿ ನಿಮಗೆ ಸಹಾಯ ಮಾಡಿದ್ದಾರೆ. ಹಾಗಾಗಿ ಅವನ ಮೇಲೆ ನಿಮಗೆ ತುಂಬ ನಂಬಿಕೆ ಇದೆ. ಇಲ್ಲಿ ನಿಮ್ಮ ನಂಬಿಕೆಗೂ ನಿರೀಕ್ಷೆಗೂ ಸಂಬಂಧ ಇದೆ. ಒಂದು ಇನ್ನೊಂದರ ಮೇಲೆ ಹೊಂದಿಕೊಂಡಿದೆ. ಆದರೆ ಇವೆರಡೂ ಬೇರೆ ಬೇರೆ. ದೇವರು ನಿಮಗೆ ಸಹಾಯ ಮಾಡೇ ಮಾಡುತ್ತಾನೆ ಅಂತ ನೀವು ನಿರೀಕ್ಷೆ ಇಡಬಹುದಾ? ಖಂಡಿತ ಇಡಬಹುದು.

ನಿರೀಕ್ಷೆಗೆ ಆಧಾರ

ನಿಜ ನಿರೀಕ್ಷೆಯನ್ನು ಕೊಡಲಿಕ್ಕೆ ಆಗೋದು ಯೆಹೋವ ದೇವರಿಗೆ ಮಾತ್ರ. ಆತನು ತನ್ನ ಜನರಾದ ಇಸ್ರಾಯೇಲ್ಯರಿಗೆ ಅನೇಕ ಮಾತುಗಳನ್ನು ಕೊಟ್ಟಿದ್ದನು. ಹಾಗಾಗಿನೇ ‘ಇಸ್ರಾಯೇಲ್ಯರಿಗೆ ನಿರೀಕ್ಷೆ ಕೊಡುವವನು’ ಎಂಬ ಹೆಸರು ಆತನಿಗಿದೆ. (ಯೆರೆಮೀಯ 14:8) ಅವರ ನಿರೀಕ್ಷೆಗೆ ಆಧಾರ ಆತನೇ ಆಗಿದ್ದನು. ಆ ನಿರೀಕ್ಷೆ ಬರೀ ಆಸೆ ಹಾರೈಕೆ ಆಗಿರಲಿಲ್ಲ. ಆತನು ಅವರಿಗೆ ಕೊಟ್ಟ ಮಾತನ್ನೆಲ್ಲ ನಿಜ ಮಾಡಿದನು. ಹಾಗಾಗಿನೇ ಇಸ್ರಾಯೇಲ್ಯರ ನಾಯಕ ಯೆಹೋಶುವ ಹೀಗಂದ: “ನಿಮ್ಮ ದೇವರಾದ ಯೆಹೋವ ನಿಮಗೆ ಕೊಟ್ಟ ಮಾತಲ್ಲಿ ಒಂದೂ ಸುಳ್ಳಾಗಲಿಲ್ಲ ಅಂತ ನೀವು ... ಚೆನ್ನಾಗಿ ತಿಳ್ಕೊಂಡಿದ್ದೀರ.”—ಯೆಹೋಶುವ 23:14.

ಆ ಮಾತು ಹೇಳಿ ಸಾವಿರಾರು ವರ್ಷಗಳು ಕಳೆದರೂ ಇವತ್ತಿಗೂ ಆ ಮಾತು ನೂರಕ್ಕೆ ನೂರು ಸತ್ಯ. ಬೈಬಲ್‌ ತುಂಬ ದೇವರು ಕೊಟ್ಟಿರುವ ಮಾತುಗಳೇ ಇವೆ. ಕೊಟ್ಟ ಮಾತನ್ನು ದೇವರು ಹೇಗೆ ನಿಜ ಮಾಡಿದನು ಎಂಬ ನಿಖರ ದಾಖಲೆನೂ ಇದೆ. ಕೆಲವು ಭವಿಷ್ಯವಾಣಿಗಳನ್ನು ಈಗಾಗಲೆ ನೆರವೇರಿದೆಯೆನೋ ಅನ್ನೋ ತರ ದಾಖಲೆ ಮಾಡಲಾಗಿದೆ. ಏಕೆಂದ್ರೆ ದೇವರು ಕೊಟ್ಟ ಮಾತಿಗೆ ತಪ್ಪಲ್ಲ.

ಅದಕ್ಕೇ ಬೈಬಲನ್ನು ‘ನಿರೀಕ್ಷೆಯ ಪುಸ್ತಕ’ ಎಂದು ಹೇಳಬಹುದು. ದೇವರು ಮನುಷ್ಯರೊಟ್ಟಿಗೆ ನಡೆದುಕೊಂಡ ರೀತಿ ಬಗ್ಗೆ ನೀವು ಅಧ್ಯಯನ ಮಾಡಿದ್ರೆ ಆತನ ಮೇಲೆ ನಿರೀಕ್ಷೆ ಇಡಲು ನಿಮಗೆ ನೂರಾರು ಕಾರಣಗಳು ಸಿಗುತ್ತವೆ. ಹಾಗಾಗಿನೇ ಅಪೊಸ್ತಲ ಪೌಲ ಹೀಗೆ ಬರೆದನು: “ಹಿಂದಿನ ಕಾಲದಲ್ಲಿ ಬರೆದ ವಿಷ್ಯಗಳನ್ನೆಲ್ಲ ನಾವು ಕಲಿಬೇಕಂತ ಬರೆದ್ರು. ಈ ಪವಿತ್ರ ಬರಹಗಳು ತಾಳಿಕೊಳ್ಳೋಕೆ, ಸಾಂತ್ವನ ಪಡಿಯೋಕೆ ಸಹಾಯ ಮಾಡೋದ್ರಿಂದ ನಮಗೀಗ ನಿರೀಕ್ಷೆಯಿದೆ.”—ರೋಮನ್ನರಿಗೆ 15:4.

ದೇವರು ಕೊಡುವ ನಿರೀಕ್ಷೆ

ಒಂದಲ್ಲ ಒಂದು ದಿನ ಎಲ್ಲರೂ ಸಾಯುತ್ತಾರೆ. ನಮಗೆ ತುಂಬ ಇಷ್ಟ ಆದವರು ಸತ್ತಾಗ ಅಲ್ಲಿಗೆ ಕಥೆ ಮುಗಿದುಹೋಯಿತು ಅಂತ ಅನಿಸಬಹುದು, ನಮ್ಮ ನಿರೀಕ್ಷೆ ನುಚ್ಚುನೂರಾಗಬಹುದು. ಕೋಟಿಕೋಟಿ ಕೊಟ್ರೂ ಅವರನ್ನು ವಾಪಸ್‌ ತರಲಿಕ್ಕೆ ನಮಗೆ ಆಗಲ್ಲ. ಹಾಗಾಗಿನೇ ಬೈಬಲ್‌ ಸಾವನ್ನು “ಕೊನೇ ಶತ್ರು” ಎಂದು ಕರೆಯುತ್ತೆ. (1 ಕೊರಿಂಥ 15:26) ಈ ಸಮಯದಲ್ಲೇ ನಮಗೆ ನಿರೀಕ್ಷೆ ಬೇಕಾಗಿದೆ.

ಕೊನೇ ಶತ್ರುವಾದ ಸಾವನ್ನು ಯೆಹೋವ ದೇವರು “ನಾಶಮಾಡ್ತಾನೆ” ಎಂದು ಬೈಬಲ್‌ ಹೇಳುತ್ತೆ. ಅಷ್ಟು ಶಕ್ತಿ ದೇವರಿಗಿದೆ. ಆತನು ಸತ್ತು ಹೋದ ಅನೇಕರನ್ನು ಜೀವಂತವಾಗಿ ಎಬ್ಬಿಸಿದ್ದಾನೆ. ಇದಕ್ಕೆ 9 ಉದಾಹರಣೆಗಳು ಬೈಬಲಲ್ಲಿವೆ.

ಗಮನ ಸೆಳೆಯುವ ಒಂದು ಉದಾಹರಣೆ ಯೇಸುವಿನ ಆಪ್ತ ಸ್ನೇಹಿತ ಲಾಜರನದ್ದು. ಅವನು ಸತ್ತು ನಾಲ್ಕು ದಿನ ಆಗಿತ್ತು. ಅವನನ್ನು ಜೀವಂತವಾಗಿ ಎಬ್ಬಿಸಲು ಯೆಹೋವ ದೇವರು ತನ್ನ ಮಗ ಯೇಸುವಿಗೆ ಶಕ್ತಿ ಕೊಟ್ಟನು. ಯೇಸು ಲಾಜರನನ್ನು ಗುಟ್ಟಾಗಿ ಪುನರುತ್ಥಾನ ಮಾಡಲಿಲ್ಲ, ಎಷ್ಟೋ ಜನರ ಕಣ್ಣೆದುರಲ್ಲೇ ಮಾಡಿದ.—ಯೋಹಾನ 11:38-48, 53; 12:9, 10.

‘ಪುನರುತ್ಥಾನ ಆದವರು ವಯಸ್ಸಾಗಿ ಮತ್ತೆ ಸತ್ತುಹೋದರಲ್ಲಾ? ಹೀಗಿರಬೇಕಾದರೆ ಪುನರುತ್ಥಾನ ಮಾಡಿದ್ರಿಂದ ಏನು ಪ್ರಯೋಜನ ಆಯ್ತು?’ ಎಂದು ನಿಮಗೆ ಅನಿಸಬಹುದು. ನಿಜ ಅವರು ಸತ್ತುಹೋದರು. ಬೈಬಲಲ್ಲಿರುವ ಪುನರುತ್ಥಾನದ ಉದಾಹರಣೆಗಳು ಸತ್ತವರನ್ನು ದೇವರು ಖಂಡಿತ ಜೀವಂತವಾಗಿ ಎಬ್ಬಿಸುತ್ತಾನೆ ಎಂದು ದೃಢವಾಗಿ ನಂಬಲಿಕ್ಕೆ ಆಧಾರ ಕೊಡುತ್ತವೆ. ಸತ್ತವರು ಮತ್ತೆ ಜೀವಂತವಾಗಿ ಬರುತ್ತಾರೆ ಅನ್ನುವುದು ಮನಸ್ಸಿನ ಆಸೆ ಮಾತ್ರ ಅಲ್ಲ, ಆ ನಂಬಿಕೆಗೆ ಆಧಾರನೂ ಇದೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ನಿಜವಾದ ನಿರೀಕ್ಷೆ ನಮಗಿದೆ.

“ಸತ್ತವ್ರನ್ನ ಬದುಕಿಸೋದೂ ಅವ್ರಿಗೆ ಜೀವ ಕೊಡೋದೂ ನಾನೇ” ಎಂದು ಯೇಸು ಹೇಳಿದನು. (ಯೋಹಾನ 11:25) ಸತ್ತವರನ್ನು ಜೀವಂತವಾಗಿ ಎಬ್ಬಿಸಲು ಯೆಹೋವನು ಯೇಸುವಿಗೆ ಶಕ್ತಿಯನ್ನು ಕೊಡುತ್ತಾನೆ. ಯೇಸು ಹೀಗಂದನು: “ಒಂದು ಸಮಯ ಬರುತ್ತೆ, ಆಗ ಸಮಾಧಿಗಳಲ್ಲಿ ಇರೋರೆಲ್ಲ ಆತನ [ಕ್ರಿಸ್ತನ] ಸ್ವರ ಕೇಳಿ ಜೀವಂತ ಎದ್ದು ಬರ್ತಾರೆ.” (ಯೋಹಾನ 5:28, 29) ಸಮಾಧಿಯಲ್ಲಿ ಇರುವವರೆಲ್ಲರೂ ಜೀವಂತವಾಗಿ ಎದ್ದು ಬರುತ್ತಾರೆ ಮತ್ತು ಪರದೈಸ್‌ ಭೂಮಿಯಲ್ಲಿ ಸದಾ ಜೀವಿಸುತ್ತಾರೆ.

ಪ್ರವಾದಿ ಯೆಶಾಯ ಪುನರುತ್ಥಾನವನ್ನು ಮನಮುಟ್ಟುವ ರೀತಿಯಲ್ಲಿ ಹೀಗೆ ವರ್ಣಿಸಿದನು: “ಮೃತರಾದ ನಿನ್ನ ಜನರು ಬದುಕುವರು, ನನ್ನವರ ಹೆಣಗಳು ಜೀವದಿಂದೇಳುವವು, ಮಣ್ಣಿನಲ್ಲಿ ಪವಳಿಸಿರುವವರೇ, ಎಚ್ಚತ್ತು ಹರ್ಷಧ್ವನಿ ಗೈಯಿರಿ! [ಯೆಹೋವನೇ,] ನೀನು ಸುರಿಯುವ ಇಬ್ಬನಿಯು ಜ್ಯೋತಿರ್ಮಯವಾದದ್ದು, ಭೂಮಿಯು ಸತ್ತವರನ್ನು ಹೊರಪಡಿಸುವದು.”—ಯೆಶಾಯ 26:19, ಸತ್ಯವೇದವು.

ಈ ಮಾತು ಓದಿ ಮನಸ್ಸಿಗೆ ತುಂಬ ಸಮಾಧಾನ ಆಗುತ್ತೆ ಅಲ್ವಾ? ಗರ್ಭಿಣಿ ಹೊಟ್ಟೆಯಲ್ಲಿ ಮಗು ಸುರಕ್ಷಿತವಾಗಿ ಇರುವ ಹಾಗೆ ಸತ್ತವರು ಸುರಕ್ಷಿತ ಜಾಗದಲ್ಲಿ ಇದ್ದಾರೆ ಅಂದ್ರೆ ಸರ್ವಶಕ್ತ ದೇವರ ನೆನಪಲ್ಲಿ ಇದ್ದಾರೆ. (ಲೂಕ 20:37, 38) ಮಗು ಹುಟ್ಟಿದಾಗ ಕುಟುಂಬದವರಿಗೆ, ಬೇರೆ ಎಲ್ಲರಿಗೆ ಎಷ್ಟು ಸಂತೋಷ ಆಗುತ್ತದೋ ಅದೇ ತರ ಸತ್ತವರು ಪುನಃ ಜೀವಂತವಾಗಿ ಎದ್ದು ಬರುವಾಗ ಎಲ್ರಿಗೂ ತುಂಬ ಖುಷಿ ಆಗುತ್ತದೆ. ಒಬ್ಬರು ಸತ್ತ ಮೇಲೆ ಎಲ್ಲ ಮುಗಿಯಿತು ಅಂತಲ್ಲ. ಅವರನ್ನು ಮತ್ತೆ ನೋಡುವ ನಿರೀಕ್ಷೆ ನಮಗಿದೆ.

ನಿರೀಕ್ಷೆಯಿಂದ ನಿಮಗೆ ಸಿಗುವ ಪ್ರಯೋಜನ

ನಿರೀಕ್ಷೆ ಎಷ್ಟು ಮುಖ್ಯ ಅಂತ ಪೌಲ ಹೇಳಿದನು. ನಿರೀಕ್ಷೆ ಶಿರಸ್ತ್ರಾಣದಂತೆ ಅಂದ್ರೆ ಹೆಲ್ಮೆಟ್‌ ತರ ಇದೆ ಎಂದು ಹೇಳಿದನು. (1 ಥೆಸಲೊನೀಕ 5:8) ಹಿಂದಿನ ಕಾಲದಲ್ಲಿ ಒಬ್ಬ ಸೈನಿಕ ಯುದ್ಧಕ್ಕೆ ಹೋಗುವಾಗ ತಲೆಗೆ ಚರ್ಮದ ಟೋಪಿಯನ್ನು ಹಾಕಿಕೊಂಡು ಅದರ ಮೇಲೆ ಲೋಹದ ಶಿರಸ್ತ್ರಾಣವನ್ನು ಹಾಕಿಕೊಳ್ತಿದ್ದ. ಇದ್ರಿಂದ ಅವನ ತಲೆಗೆ ಗಾಯ ಆಗ್ತಿರಲಿಲ್ಲ. ಹೆಲ್ಮೆಟ್‌ ತಲೆಯನ್ನು ಕಾಪಾಡುವ ಹಾಗೆ ನಿರೀಕ್ಷೆ ಮನಸ್ಸನ್ನು, ಯೋಚಿಸುವ ಸಾಮರ್ಥ್ಯವನ್ನು ಕಾಪಾಡುತ್ತದೆ. ದೇವರ ಉದ್ದೇಶಕ್ಕೆ ಹೊಂದಿಕೆಯಲ್ಲಿರುವ ದೃಢ ನಿರೀಕ್ಷೆ ನಮಗಿದ್ದರೆ ಕಷ್ಟಗಳು ಬಂದ್ರೂ ನಾವು ಹೆದರಿಕೊಂಡು ಕುಗ್ಗಿ ಹೋಗಿ ಮನಶ್ಶಾಂತಿ ಹಾಳು ಮಾಡಿಕೊಳ್ಳುವುದಿಲ್ಲ. ನಮ್ಮೆಲ್ಲರಿಗೂ ಅಂಥ ನಿರೀಕ್ಷೆ ಬೇಕೇಬೇಕು ಅಲ್ವಾ?

ನಿರೀಕ್ಷೆ ಎಷ್ಟು ಮುಖ್ಯ ಅಂತ ತೋರಿಸಲು ಪೌಲ ಇನ್ನೊಂದು ಉದಾಹರಣೆ ಕೊಟ್ಟನು. ಅವನು ಹೀಗಂದ: “ಈ ನಿರೀಕ್ಷೆ ನಮ್ಮ ಜೀವನಕ್ಕೆ ಲಂಗರದ ಹಾಗಿದೆ. ಸಂಶಯಪಡದೆ ದೃಢವಾಗಿರೋಕೆ ಅದು ಸಹಾಯ ಮಾಡುತ್ತೆ.” (ಇಬ್ರಿಯ 6:19) ಈ ವಚನದಲ್ಲಿ ಪೌಲ ನಿರೀಕ್ಷೆಯನ್ನು ಲಂಗರಕ್ಕೆ ಹೋಲಿಸಿದ್ದಾನೆ. ಲಂಗರ ಎಷ್ಟು ಮುಖ್ಯ ಅಂತ ಅವನಿಗೆ ಗೊತ್ತಿತ್ತು. ಯಾಕಂದ್ರೆ ಅವನು ತುಂಬ ಸಲ ಹಡಗು ಪ್ರಯಾಣ ಮಾಡಿದ್ದ. ಚಂಡಮಾರುತ ಬಂದಾಗ ನಾವಿಕರು ನೀರಿನಲ್ಲಿ ಲಂಗರು ಹಾಕುತ್ತಾರೆ. ಲಂಗರು ಸಮುದ್ರದ ತಳಕ್ಕೆ ಹೋಗಿ ಒಂದು ಕಡೆ ಬಿಗಿಯಾಗಿ ಸಿಕ್ಕಿಕೊಂಡಾಗ ಚಂಡಮಾರುತದ ಅಬ್ಬರಕ್ಕೆ ಹಡಗು ಬಂಡೆಗಳಿಗೆ ಅಪ್ಪಳಿಸಿ ಹೊಡೆದು ಹೋಗುತ್ತಿರಲಿಲ್ಲ.

ಅದೇ ತರ ದೇವರು ಕೊಟ್ಟಿರುವ ಮಾತುಗಳು ನಮಗೆ ಎಷ್ಟೇ ಕಷ್ಟಗಳು ಇದ್ರೂ ನಿರೀಕ್ಷೆ ಕಳಕೊಳ್ಳದೆ “ದೃಢವಾಗಿರೋಕೆ” ಸಹಾಯ ಮಾಡುತ್ತದೆ. ಯುದ್ಧ, ಹಿಂಸಾಚಾರ, ದುಃಖ, ಸಾವು ಕೂಡ ಇಲ್ಲದ ಕಾಲ ಬೇಗನೆ ಬರುತ್ತೆ ಎಂದು ಯೆಹೋವ ದೇವರು ಮಾತುಕೊಟ್ಟಿದ್ದಾನೆ. (ಪುಟ 10 ರಲ್ಲಿರುವ ಚೌಕ ನೋಡಿ.) ದೇವರು ಕೊಟ್ಟ ಆ ಮಾತಿನ ಮೇಲೆ ನಂಬಿಕೆಯಿದ್ದರೆ ನಮಗೆ ಈ ಲೋಕದಿಂದ ಎಷ್ಟೇ ಒತ್ತಡ ಬಂದ್ರೂ ದೇವರ ಮಟ್ಟಗಳಿಗೆ ಅನುಸಾರ ಬದುಕುವುದನ್ನು ನಾವು ಬಿಟ್ಟುಬಿಡಲ್ಲ.

ಯೆಹೋವ ದೇವರು ನಿಮಗೂ ಆ ನಿರೀಕ್ಷೆ ಕೊಟ್ಟಿದ್ದಾನೆ. ನೀವು ಸಂತೋಷವಾಗಿ ಶಾಶ್ವತವಾಗಿ ಬದುಕಬೇಕು ಅನ್ನೋದೇ ಆತನ ಆಸೆ. “ಎಲ್ಲ ತರದ ಜನ್ರು ರಕ್ಷಣೆ ಪಡಿಬೇಕು” ಅಂತ ಆತನು ಇಷ್ಟಪಡುತ್ತಾನೆ. ನೀವು ರಕ್ಷಣೆ ಪಡೆಯಬೇಕಾದ್ರೆ “ಸತ್ಯದ ಬಗ್ಗೆ ಸರಿಯಾದ ಜ್ಞಾನ ಪಡ್ಕೊಬೇಕು.” (1 ತಿಮೊತಿ 2:4) ಈ ಪತ್ರಿಕೆಯ ಪ್ರಕಾಶಕರು ನೀವು ಬೈಬಲ್‌ ಸ್ಟಡಿ ಮಾಡಿ ಜೀವ ಕೊಡುವ ಜ್ಞಾನ ಪಡೆದುಕೊಳ್ಳಬೇಕು ಎಂದು ಪ್ರೋತ್ಸಾಹಿಸ್ತಾರೆ. ದೇವರು ಕೊಡುವ ನಿರೀಕ್ಷೆ ಈ ಲೋಕ ಕೊಡುವ ನಿರೀಕ್ಷೆಗಿಂತ ತುಂಬ ಶ್ರೇಷ್ಠ.

ಈ ನಿರೀಕ್ಷೆ ನಿಮಗಿದ್ರೆ ನೀವು ಯಾವತ್ತೂ ಧೈರ್ಯ ಕಳೆದುಕೊಳ್ಳಲ್ಲ. ಏಕೆಂದ್ರೆ ನೀವಿಟ್ಟಿರುವ ಒಳ್ಳೇ ಗುರಿಗಳನ್ನು ಮುಟ್ಟಲು ದೇವರು ಸಹಾಯ ಮಾಡ್ತಾನೆ. (2 ಕೊರಿಂ. 4:7; ಫಿಲಿ. 4:13) ಈ ತರ ನಿರೀಕ್ಷೆ ಯಾರಿಗೆ ತಾನೇ ಬೇಡ. ಈ ನಿರೀಕ್ಷೆ ನಂಬಿಕೆ ಕಳಕೊಳ್ಳದೇ ಇರಲು ಸಹಾಯ ಮಾಡುತ್ತೆ. ಹಾಗಾಗಿ ಆ ನಿರೀಕ್ಷೆಯನ್ನು ಬಿಡಬೇಡಿ.

[ಪುಟ 11 ರಲ್ಲಿರುವ ಚೌಕ/ಚಿತ್ರ]

ನಿರೀಕ್ಷೆಯಿಂದ ಇರಲು ಕಾರಣಗಳು

ನಿರೀಕ್ಷೆಯಿಂದ ಇರಲು ನಮಗೆ ಸಹಾಯ ಮಾಡುವ ವಚನಗಳು:

ನಾವು ಮುಂದೆ ಖುಷಿಯಾಗಿ ಇರುತ್ತೇವೆ ಎಂದು ದೇವರು ಮಾತುಕೊಟ್ಟಿದ್ದಾನೆ.

ಇಡೀ ಭೂಮಿ ಸುಂದರ ತೋಟದಂತೆ ಆಗ್ತದೆ. ಎಲ್ಲರೂ ಖುಷಿಯಾಗಿ ಒಂದೇ ಕುಟುಂಬದ ತರ ಜೀವನ ಮಾಡ್ತಾರೆ ಅಂತ ಬೈಬಲ್‌ ಹೇಳುತ್ತದೆ.—ಕೀರ್ತನೆ 37:11, 29; ಯೆಶಾಯ 25:8; ಪ್ರಕಟನೆ 21:3, 4.

ದೇವರು ಯಾವತ್ತೂ ಸುಳ್ಳು ಹೇಳಲ್ಲ.

ಯೆಹೋವನು ಪವಿತ್ರ ಅಂದ್ರೆ ಪರಿಶುದ್ಧ ದೇವರು. ಹಾಗಾಗಿ ಆತನು ಯಾವತ್ತೂ ಸುಳ್ಳು ಹೇಳಲ್ಲ. ಎಲ್ಲ ತರದ ಸುಳ್ಳನ್ನು ಆತನು ದ್ವೇಷಿಸುತ್ತಾನೆ.—ಜ್ಞಾನೋಕ್ತಿ 6:16-19; ಯೆಶಾಯ 6:2, 3; ತೀತ 1:2; ಇಬ್ರಿಯ 6:18.

ದೇವರಿಗೆ ಅಪಾರ ಶಕ್ತಿಯಿದೆ.

ಯೆಹೋವ ಒಬ್ಬನೇ ಸರ್ವಶಕ್ತ ದೇವರು. ಆತನು ಹೇಳಿದ್ದನ್ನು ಮಾಡೇ ಮಾಡುತ್ತಾನೆ. ಅದನ್ನು ತಡೆಯಲು ಯಾರಿಂದನೂ ಯಾವುದರಿಂದನೂ ಆಗಲ್ಲ.—ವಿಮೋಚನಕಾಂಡ 15:11; ಯೆಶಾಯ 40:25, 26.

ನಾವು ಶಾಶ್ವತವಾಗಿ ಬದುಕಬೇಕು ಅನ್ನೋದೇ ದೇವರ ಇಷ್ಟ.

ಯೋಹಾನ 3:16; 1 ತಿಮೊತಿ 2:3, 4.

ದೇವರು ನಮ್ಮನ್ನು ನಂಬುತ್ತಾನೆ.

ದೇವರು ನಮ್ಮಲ್ಲಿ ಯಾವಾಗಲೂ ತಪ್ಪನ್ನೇ ಹುಡುಕುತ್ತಾ ಇರಲ್ಲ. ಆತನು ನಮ್ಮಲ್ಲಿರುವ ಒಳ್ಳೇ ಗುಣಗಳನ್ನು, ಸರಿಯಾದದ್ದನ್ನು ಮಾಡಲು ನಾವು ಹಾಕುವ ಪ್ರಯತ್ನಗಳನ್ನು ಗಮನಿಸ್ತಾನೆ. (ಕೀರ್ತನೆ 103:12-14; 130:3; ಇಬ್ರಿಯ 6:10) ಯಾವುದು ಸರಿನೋ ಅದನ್ನು ನಾವು ಮಾಡ್ತೀವಿ ಅನ್ನೋ ನಂಬಿಕೆ ಆತನಿಗಿದೆ. ನಾವು ಸರಿಯಾದದ್ದನ್ನು ಮಾಡಿದಾಗ ಆತನಿಗೆ ತುಂಬ ಖುಷಿ ಆಗುತ್ತೆ.—ಜ್ಞಾನೋಕ್ತಿ 27:11.

ದೇವರಿಗೆ ಇಷ್ಟ ಆಗುವಂಥ ಗುರಿಗಳನ್ನು ಇಟ್ರೆ ಅವುಗಳನ್ನು ಮುಟ್ಟಲಿಕ್ಕೆ ಆತನು ನಮಗೆ ಸಹಾಯ ಮಾಡ್ತಾನೆ.

ನಮಗೆ ಸಹಾಯ ಮಾಡಲಿಕ್ಕೆ ಯಾರೂ ಇಲ್ಲ ಅಂತ ನಾವು ಅಂದುಕೊಳ್ಳಬಾರದು. ಏಕೆಂದ್ರೆ ದೇವರು ನಮಗೆ ಉದಾರವಾಗಿ ಪವಿತ್ರಶಕ್ತಿಯನ್ನು ಕೊಟ್ಟು ಸಹಾಯ ಮಾಡುತ್ತಾನೆ.—ಫಿಲಿಪ್ಪಿ 4:13.

ನಾವು ದೇವರಲ್ಲಿ ಭರವಸೆಯಿಟ್ಟರೆ ಯಾವತ್ತೂ ನಿರಾಶೆ ಆಗಲ್ಲ.

ನಾವು ದೇವರನ್ನು ಪೂರ್ತಿ ನಂಬಬಹುದು. ಆತನ ಮೇಲೆ ಭರವಸೆ ಇಟ್ರೆ ಆತನು ನಮಗೆ ನಿರಾಶೆ ಮಾಡಲ್ಲ.—ಕೀರ್ತನೆ 25:3.

[ಪುಟ 12 ರಲ್ಲಿರುವ ಚಿತ್ರ]

ಹೆಲ್ಮೆಟ್‌ ತಲೆಯನ್ನು ಕಾಪಾಡುವ ಹಾಗೆ ನಿರೀಕ್ಷೆ ಮನಸ್ಸನ್ನು ಕಾಪಾಡುತ್ತೆ

[ಪುಟ 12 ರಲ್ಲಿರುವ ಚಿತ್ರ]

ನಿರೀಕ್ಷೆ ಲಂಗರದಂತೆ ಇದೆ, ಅದು ದೃಢವಾಗಿರೋಕೆ ಸಹಾಯ ಮಾಡುತ್ತೆ

[ಕೃಪೆ]

Courtesy René Seindal/Su concessione del Museo Archeologico Regionale A. Salinas di Palermo