ಮಾಹಿತಿ ಇರುವಲ್ಲಿ ಹೋಗಲು

ಒಂದು ಭದ್ರವಾದ ಭವಿಷ್ಯತ್ತು ನೀವದನ್ನು ಕಂಡುಕೊಳ್ಳುವ ವಿಧ

ಒಂದು ಭದ್ರವಾದ ಭವಿಷ್ಯತ್ತು ನೀವದನ್ನು ಕಂಡುಕೊಳ್ಳುವ ವಿಧ

ಒಂದು ಭದ್ರವಾದ ಭವಿಷ್ಯತ್ತು ನೀವದನ್ನು ಕಂಡುಕೊಳ್ಳುವ ವಿಧ

1. ನಿಮಗೂ ನಿಮ್ಮ ಪ್ರಿಯ ಜನರಿಗೂ ಯಾವ ರೀತಿಯ ಭದ್ರತೆಯನ್ನು ನೀವು ಬಯಸುವಿರಿ?

ಎಲ್ಲಾ ವಿಧದ ಜನರಿಗೆ ಭದ್ರತೆಗಾಗಿ ನಿಜ ಅಪೇಕ್ಷೆಯು ಇರುತ್ತದೆ. ನಿಶ್ಚಯವಾಗಿಯೂ ನೀವು ನಿಮಗೂ ನಿಮ್ಮ ಪ್ರಿಯ ಜನರಿಗೂ ಬಯಸುವಂಥಾದ್ದು ಅದೇ ಆಗಿದೆ. ಹೆಚ್ಚಿನ ಜನರಿಗೆ ಕೇವಲ ಒಂದು ಒಳ್ಳೇ ಪರಿಸ್ಥಿತಿಗಳ ವಾಗ್ದಾನವು ಒಂದು ಅನಿರ್ದಿಷ್ಟ ಭವಿಷ್ಯತ್ಕಾಲದಲ್ಲಿ ಬರುವುದಕ್ಕಿಂತ ಹೆಚ್ಚಿನದ್ದು ಬೇಕಾಗಿದೆ. ಈಗಾಗಲೇ ನಮ್ಮನ್ನು ಜೀವಿತದ ಜರೂರಿಯ ಸಮಸ್ಯೆಗಳು ಎದುರಿಸಿರುತ್ತವೆ. ಈಗ ಮತ್ತು ಬರಲಿರುವ ವರ್ಷಗಳಲ್ಲಿ ನಿಜ ಭದ್ರತೆಯನ್ನು ಒದಗಿಸುತ್ತಾ ಹೋಗುವ ಒಂದು ವಿಷಯವು ನಮಗೆ ಬೇಕಾಗಿದೆ. ಅಂಥ ಭದ್ರತೆಯು ಶಕ್ಯವೋ?

2. (ಎ) ಭದ್ರತೆಯ ಕುರಿತು ಯೆಶಾಯ 32:17, 18 ರಲ್ಲಿ ಬೈಬಲು ಏನನ್ನುತ್ತದೆ? (ಬಿ) ಅಂಥ ಪರಿಸ್ಥಿತಿಯು ನಿಮಗೆ ಇಷ್ಟವೆನಿಸುತ್ತದೋ?

2 ಅದು ಶಕ್ಯವೆಂದು ನಂಬುವವರಾದ ಸಕಲ ಕುಲಗಳ ಜನರು ಭೂಮಿಯ ಎಲ್ಲಾ ಭಾಗಗಳಲ್ಲಿ ಜೀವಿಸುತ್ತಿದ್ದಾರೆ. ಅವರಿಗೆ ಆಸಕ್ತಿಯಿರುವ ಭದ್ರತೆಯನ್ನು ದೇವರ ಪ್ರೇರಿತ ಪ್ರವಾದಿಯೊಬ್ಬನು ಬಹಳ ಕಾಲದ ಹಿಂದೆ ವರ್ಣಿಸುತ್ತಾ ಬರೆದದ್ದು: “ಧರ್ಮದಿಂದ ಸಮಾಧಾನವು ಫಲಿಸುವುದು, ಶಾಂತಿ ನಿರ್ಭಯಗಳು ಧರ್ಮದ ನಿತ್ಯ ಪರಿಣಾಮವಾಗಿರುವವು. ನನ್ನ ಜನರು ಸಮಾಧಾನದ ನಿವಾಸದಲ್ಲಿಯೂ ನಿರ್ಭಯ ನಿಲಯಗಳಲ್ಲಿಯೂ ನೆಮ್ಮದಿಯ ಆಶ್ರಯಗಳಲ್ಲಿಯೂ ನೆಲೆಗೊಳ್ಳುವರು.” (ಯೆಶಾಯ 32:17, 18) * ಭೂಮಿಯ ಎಲ್ಲಾ ಭಾಗಗಳಲ್ಲಿರುವ ನೂರಾರು ಸಾವಿರಾರು ಜನರು ಇಂದಿನ ಲೋಕದ ಸಂಕ್ಷೋಭೆಯ ಮಧ್ಯೆಯೂ ಶಾಂತಿಭರಿತ ಭದ್ರತೆಯಲ್ಲಿ ಈಗಾಗಲೇ ಆನಂದಿಸ ತೊಡಗಿದ್ದಾರೆ, ಮತ್ತು ಇದಕ್ಕಿಂತಲೂ ಭವ್ಯವಾದ ಭವಿಷ್ಯತ್ತಿಗಾಗಿ ಮುನ್ನೋಡುತ್ತಿರಲು ಅವರಿಗೆ ಕಾರಣವಿದೆ. ಅವರೊಂದಿಗೆ ನೀವು ಸಹ ಅಂಥ ಪ್ರಯೋಜನಗಳಲ್ಲಿ ಪಾಲುಗಾರರಾಗಬಹುದು.

3. ಮಾನವಕುಲಕ್ಕೆ ಭದ್ರತೆಯಾಗಿ ಪರಿಣಮಿಸುವ ಬೇರೇನನ್ನಾದರೂ ಬೈಬಲು ವಾಗ್ದಾನಿಸುತ್ತದೋ? (ಪ್ರಕಟನೆ 21:4, 5)

3 ಈ ಜನರು ‘ಅವರನ್ನು ಯಾರೂ ಹೆದರಿಸದೆ ಇರುವ’ ಸಮಯಕ್ಕಾಗಿ—ಅಂದರೆ ದುಷ್ಕೃತ್ಯವು ಅಂತ್ಯಗೊಳ್ಳಲಿರುವ ಹಾಗೂ ವ್ಯಕ್ತಿಗೂ ಅವನ ಆಸ್ತಿಪಾಸ್ತಿಗೂ ಉಂಟಾಗುವ ಹಾನಿಯು ಕೊನೆಗೊಳ್ಳಲಿರುವ ಅತಿ ಸಮೀಪದ ಒಂದು ಕಾಲಕ್ಕಾಗಿ ಎದುರು ನೋಡುತ್ತಿದ್ದಾರೆ. (ಮೀಕ 4:4) ಈಗ ಜೀವಿಸುವ ಅನೇಕ ಜನರು ಇನ್ನು ಮೇಲೆ ಹಸಿವೆ ಇಲ್ಲದಿರುವಂಥ ದಿನವನ್ನು ಕಾಣಲಿರುವರೆಂದು ನಂಬುವುದಕ್ಕೆ ಅವರಿಗೆ ಸಕಾರಣವಿದೆ, ಯಾಕಂದರೆ “ಭೂಮಿಯಲ್ಲೆಲ್ಲಾ ಬೆಳೆಯು ಸಮೃದ್ಧಿಯಾಗ”ಲಿರುವುದು. (ಕೀರ್ತನೆ 72:16) ಮತ್ತು ‘ದೇವರು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವುದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವುದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು’ ಎಂಬ ವಾಗ್ದಾನದ ನೆರವೇರಿಕೆಯನ್ನು ತಾವಾಗಿಯೇ ಕಣ್ಣಾರೆ ಕಾಣುವುದಕ್ಕಾಗಿ ಅವರು ಮುನ್ನೋಡುತ್ತಾರೆ. (ಪ್ರಕಟನೆ 21:3, 4) ಅಂಥ ಸಂಗತಿಗಳು ನಿಜವಾಗಿಯೂ ಸಂಭವಿಸುತ್ತವೆಂದು ಅವರು ಅಷ್ಟು ನಿಶ್ಚಯತೆಯಿಂದಿರುವುದೇಕೆ? ಏಕೆಂದರೆ ಈ ವಾಗ್ದಾನಗಳು ದೇವರ ಸ್ವಂತ ವಾಕ್ಯವಾದ ಬೈಬಲಿನಲ್ಲಿ ಕಂಡುಬರುವುದರಿಂದಲೇ.

4. ಬರೆಯಲಿಕ್ಕಾಗಿ ಮನುಷ್ಯರು ಉಪಯೋಗಿಸಲ್ಪಟ್ಟರೂ, ಬೈಬಲಿನಲ್ಲಿ ಬರೆಯಲ್ಪಟ್ಟ ವಿಷಯಗಳು ನಿಜವಾಗಿ ದೇವರಿಂದ ಬಂದವುಗಳೇಕೆ? (2 ತಿಮೊಥೆಯ 3:16, 17)

4 ನಮ್ಮ ಭವಿಷ್ಯತ್ತಿನ ಕುರಿತು ಬೈಬಲು ಏನನ್ನುತ್ತದೋ ಅದು ಕೇವಲ ಇತಿಹಾಸದ ಪ್ರವೃತ್ತಿಗಳನ್ನು ಅರ್ಥ ವಿವರಿಸುವ ಮನುಷ್ಯ ಪ್ರಯತ್ನಗಳ ಫಲಿತಾಂಶವಲ್ಲ. ಬರೆಯಲಿಕ್ಕೆ ಮನುಷ್ಯರನ್ನು ಉಪಯೋಗಿಸಲಾಗಿತ್ತು, ಆದರೆ ಅವರ ಮನಸ್ಸುಗಳು ದೇವರಾತ್ಮದಿಂದ ಮಾರ್ಗದರ್ಶಿಸಲ್ಪಟ್ಟವು. ಹೀಗೆ ಸಂದೇಶವು ದೇವರಿಂದ ಬಂದದ್ದಾಗಿದೆ. ಅದರಲ್ಲಿ ಅಡಕವಾಗಿರುವ ವಿಷಯಗಳ ಮೂಲದ ಕುರಿತು ಬೈಬಲು ತಾನೇ ಅಂದದ್ದು: “ಶಾಸ್ತ್ರದಲ್ಲಿರುವ ಯಾವ ಪ್ರವಾದನಾ ವಾಕ್ಯವೂ ಕೇವಲ ಮಾನುಷ ಬುದ್ಧಿಯಿಂದ ವಿವರಿಸತಕ್ಕಂಥದಲ್ಲವೆಂಬದನ್ನು ಮುಖ್ಯವಾಗಿ ತಿಳಿದುಕೊಳ್ಳಿರಿ. ಯಾಕಂದರೆ ಯಾವ ಪ್ರವಾದನೆಯೂ ಎಂದೂ ಮನುಷ್ಯರ ಚಿತ್ತದಿಂದ ಉಂಟಾಗಲ್ಲಿಲ; ಮನುಷ್ಯರು ಪವಿತ್ರಾತ್ಮ ಪ್ರೇರಿತರಾಗಿ ದೇವರಿಂದ ಹೊಂದಿದ್ದನ್ನೇ ಮಾತಾಡಿದರು.” (2 ಪೇತ್ರ 1:20, 21) ಇದನ್ನು ದೇವರು ಹೇಗೆ ಮಾಡಶಕ್ತನೆಂದು ತಿಳಿಯಲು ನಮಗಿಂದು ಕಷ್ಟವಾಗಬಾರದು. ಅಂತರಾಳದಲ್ಲಿ ಸಂಚರಿಸುವ ಮನುಷ್ಯರು ಸಹ ಭೂಮಿಗೆ ಸಂದೇಶಗಳನ್ನು ಕಳುಹಿಸ ಶಕ್ತರಾಗಿದ್ದಾರೆ ಮತ್ತು ಅವು ಗಮನಾರ್ಹ ಸ್ಪಷ್ಟತೆಯೊಂದಿಗೆ ಕರ್ಣಗ್ರಾಹಕವಾಗಿವೆ. ಹೀಗಿರಲಾಗಿ ಪರಲೋಕದಲ್ಲಿರುವ ದೇವರು ಇದಕ್ಕಿಂತಲೂ ಎಷ್ಟೋ ಶ್ರೇಷ್ಠ ರೀತಿಯಲ್ಲಿ ತನ್ನೊಂದಿಗೆ ಹೊಂದಿಕೆಯಲ್ಲಿರುವ ನಂಬಿಗಸ್ತ ಪುರುಷರಿಗೆ ಸಂದೇಶಗಳನ್ನು ರವಾನಿಸಲು ಶಕ್ತನಾಗಿಲ್ಲವೇ? ನಿಶ್ಚಯವಾಗಿಯೂ ಶಕ್ತನು! ಹಾಗಾದರೆ, ಸಕಾರಣವಾಗಿಯೇ ಒಂದು ಭದ್ರ ಭವಿಷ್ಯತ್ತನ್ನು ನೀವು ಹೇಗೆ ಕಂಡುಕೊಳ್ಳಬಹುದೆಂಬದರ ಕುರಿತು ಬೈಬಲು ಏನನ್ನುತ್ತದೋ ಅದನ್ನು ಪರೀಕ್ಷಿಸಲು ನಾವು ನಿಮ್ಮನ್ನು ಆಮಂತ್ರಿಸುತ್ತೇವೆ.

ನಿಜ ಸಹಾಯವನ್ನೆಲ್ಲಿ ಕಂಡುಕೊಳ್ಳಸಾಧ್ಯವಿದೆ

5. ಹಣ ಮತ್ತು ಇತರ ಲೌಕಿಕ ಸೊತ್ತುಗಳ ಕಡೆಗೆ ಯಾವ ವಾಸ್ತವಿಕ ನೋಟವನ್ನು ತೆಗೆದುಕೊಳ್ಳುವಂತೆ ಬೈಬಲು ನಮ್ಮನ್ನು ಉತ್ತೇಜಿಸುತ್ತದೆ? (ಪ್ರಸಂಗಿ 7:12)

5 ಜೀವಿತದ ಕಡೆಗೆ ವಾಸ್ತವಿಕವಾಗಿ ನೋಡುವಂತೆ ಬೈಬಲು ನಮಗೆ ಸಹಾಯ ಮಾಡುತ್ತದೆ. ನಮ್ಮ ನಿತ್ಯ ಹಿತಚಿಂತನೆಯ ನೋಟದೊಂದಿಗೆ, ಯಾವುದು ನೆಲೆನಿಲ್ಲುವುದೋ ಅದರ ಮೇಲೆ ನಮ್ಮ ಭರವಸವನ್ನಿಡುವಂತೆ ಅದು ನಮ್ಮನ್ನು ಉತ್ತೇಜಿಸುತ್ತದೆ. ಇಂದು ಮಿಲ್ಯಾಂತರ ಜನರು ತಮ್ಮ ಭರವಸವನ್ನು ಪ್ರಾಪಂಚಿಕ ಸೊತ್ತುಗಳ ಮೇಲಿಡುತ್ತಾರೆ. ಹಣ ಮತ್ತು ಇತರ ಲೌಕಿಕ ಸೊತ್ತುಗಳ ಉಪಯುಕ್ತತೆಯನ್ನು ಬೈಬಲು ಅಂಗೀಕರಿಸುತ್ತದೆ, ಆದರೂ ಅವು ಜೀವಿತದಲ್ಲಿ ದೊಡ್ಡ ವಿಷಯಗಳಲ್ಲ ಎಂದು ತೋರಿಸುತ್ತದೆ. “ಒಬ್ಬನಿಗೆ ಎಷ್ಟು ಆಸ್ತಿ ಇದ್ದರೂ ಅದು ಅವನಿಗೆ ಜೀವಾಧಾರವಾಗುವದಿಲ್ಲ” ಎಂಬ ಅಲ್ಲಗಳೆಯಲಾಗದ ಸತ್ಯತೆಯನ್ನು ಅದು ತಿಳಿಸಿದೆ. (ಲೂಕ 12:15) ಸೊತ್ತುಗಳು ತಮ್ಮ ಬೆಲೆಯನ್ನು ಕಳಕೊಳ್ಳಬಹುದು. ಅವು ಕದಿಯಲ್ಪಡಬಲ್ಲವು ಅಥವಾ ನಶಿಸಿ ಹೋಗಬಲ್ಲವು. ಒಡೆಯನ ಜೀವವು ಸಹ ಅವನ ಹಣವನ್ನು ಕದ್ದುಕೊಳ್ಳ ಪ್ರಯತ್ನಿಸುವ ಯಾವನಾದರೊಬ್ಬನಿಂದ ಅಪಾಯಕ್ಕೆ ಒಳಗಾಗಬಹುದು. ನಿಜ ಭದ್ರತೆಯು ಬೇರೆ ಎಲ್ಲಿಯೋ ನೆಲೆಸಿರಬೇಕು. ಆದರೆ ಎಲ್ಲಿ?

6. ಮಾನವ ಮುಖಂಡರು ಏನನ್ನು ವಾಗ್ದಾನಿಸುತ್ತಾರೋ ಅದರ ಸುತ್ತಲೂ ಭವಿಷ್ಯತ್ತಿಗಾಗಿ ನಮ್ಮೆಲ್ಲಾ ನಿರೀಕ್ಷೆಗಳನ್ನು ಕಟ್ಟುವುದು ನ್ಯಾಯಸಮ್ಮತವಲ್ಲವೇಕೆ?

6 ಮಾನವ ಮುಖಂಡರ ವಾಗ್ದಾನದ ಸುತ್ತಲೂ ಭವಿಷ್ಯತ್ತಿಗಾಗಿ ತಮ್ಮೆಲ್ಲಾ ನಿರೀಕ್ಷೆಗಳನ್ನು ಕಟ್ಟುವ ಜನರು ಇದ್ದಾರೆ. ಆದರೆ ನೀವು ಹಾಗೆ ಮಾಡಬೇಕೋ? ಮುಖಂಡರು ವೈಯಕ್ತಿಕವಾಗಿ ಪ್ರಾಮಾಣಿಕರೋ ಅಥವಾ ಸಮರ್ಥರೋ ಎಂಬ ವಿಷಯದಲ್ಲಿ ಪ್ರಶ್ನೆಯನ್ನೆಬ್ಬಿಸದೇ, ಅವರೆಲ್ಲರೂ ಮರ್ತ್ಯರು ಎಂಬ ಜ್ಞಾಪಕವನ್ನು ನಮಗೀಯುವ ಮೂಲಕ ಬೈಬಲು ವಿಷಯದ ತಿರುಳನ್ನೇ ಪ್ರವೇಶಿಸಿದೆ. ವಿವೇಕದಿಂದ ಅದು ಎಚ್ಚರಿಸಿದ್ದು: “ಪ್ರಭುಗಳಲ್ಲಿ ಭರವಸವಿಡಬೇಡಿರಿ; ಮಾನವನನ್ನು ನೆಚ್ಚಬೇಡಿರಿ, ಅವನು ಸಹಾಯ ಮಾಡಶಕ್ತನಲ್ಲ; ಅವನ ಉಸಿರು ಹೋಗಲು ಮಣ್ಣಿಗೆ ಸೇರುತ್ತಾನೆ. ಅವನ ಸಂಕಲ್ಪಗಳೆಲ್ಲಾ ಅದೇ ದಿನದಲ್ಲಿ ಹಾಳಾಗುವವು.” (ಕೀರ್ತನೆ 146:3, 4) ಹೀಗೆ, ಮಾನವ ಮುಖಂಡರು ಮನುಷ್ಯ ಕುಲದ ಒಂದಂಶದ ಕಾರ್ಯಾದಿಗಳ ಮೇಲೆ ಪ್ರಭಾವ ಬೀರುವುದು ಹೆಚ್ಚೆಂದರೆ ಹಲವು ವರ್ಷಗಳ ವರೆಗೆ ಮಾತ್ರ. ದೀರ್ಘ ಕಾಲದ ಭದ್ರತೆಯ ಸಂಬಂಧದಲ್ಲಿ, ಅವರದನ್ನು ತಮಗಾಗಿಯೂ ಒದಗಿಸ ಶಕ್ತರಲ್ಲವೆಂದ ಮೇಲೆ ನಿಮಗೂ ಕೊಡಶಕ್ತರಲ್ಲ.

7. (ಎ) ದೀರ್ಘಕಾಲದ ಭದ್ರತೆಯನ್ನು ನಮಗೊದಗಿಸಲು ಯಾರು ನಿಜವಾಗಿ ಶಕ್ತನಾಗಿದ್ದಾನೆ ಮತ್ತು ಏಕೆ? (ಅ. ಕೃತ್ಯಗಳು 17:28) (ಬಿ) ಆ ಭದ್ರತೆಯನ್ನು ನಾವು ಆನಂದಿಸಲಿರುವುದಾದರೆ ನಮಗೆ ಏನು ಅಗತ್ಯವಿದೆ?

7 ಆದರೆ ಅದನ್ನು ಕೊಡಶಕ್ತನಾದ ಒಬ್ಬಾತನು ಇದ್ದಾನೆ. ಆತನು ಭೂಪರಲೋಕಗಳ ನಿರ್ಮಾಣಿಕನಾಗಿದ್ದಾನೆ. ಈ ಭೂಮಿಯು ರಚಿಸಲ್ಪಡುವ ಮುಂಚಿತವಾಗಿಯೇ ಆತನು ಅಸ್ತಿತ್ವದಲ್ಲಿದ್ದನು; ಮತ್ತು ಈ ಇಪ್ಪತ್ತನೇ ಶತಮಾನವು ದಾಟಿ ಬಹಳ ಕಾಲ ಗತಿಸಿದ ಮೇಲೆಯೂ ಆತನು ಇರುವನು. ಕೀರ್ತನೆ 90:2 ಆತನಿಗೆ ಹೇಳುವ ಪ್ರಕಾರ: “ಯುಗ ಯುಗಾಂತರಗಳಲ್ಲಿಯೂ ನೀನೇ ದೇವರು.” ಆತನು ಜೀವದ ಮೂಲನೂ ಸಜೀವ ವಸ್ತುಗಳನ್ನು ಪೋಷಿಸುವುದಕ್ಕೆ ಭೂಮಿಗೆ ಸಾಮರ್ಥ್ಯವನ್ನಿತಾತ್ತನೂ ಆಗಿದ್ದಾನೆ. ಹೀಗೆ, ನಮ್ಮ ಸದ್ಯದ ಸುಕ್ಷೇಮ ಮತ್ತು ಭವಿಷ್ಯತ್ತಿಗಾಗಿ ನಮ್ಮ ಪ್ರತೀಕ್ಷೆಗಳು ಆತನ ಮೇಲೆ ಹೊಂದಿಕೊಂಡಿವೆ. ಆದುದರಿಂದ ಯಾವುದೇ ನಿಜ ಭದ್ರತೆಯನ್ನು ನಾವು ಆನಂದಿಸಲಿರುವುದಾದರೆ ಆತನೊಂದಿಗೆ ಒಂದು ಸುಸಂಬಂಧವನ್ನಿಡುವ ಅಗತ್ಯವು ನಮಗಿದೆ.

8. (ಎ) ಯಾವ ವಿಧದ ಜನರನ್ನು ದೇವರು ಅಪೇಕ್ಷಿಸುತ್ತಾನೆ? (ಬಿ) ಆದುದರಿಂದ ಆ ಅಗತ್ಯತೆಯನ್ನು ಮುಟ್ಟುವುದಕ್ಕಾಗಿ ನಾವು ವೈಯಕ್ತಿಕವಾಗಿ ಏನನ್ನು ಮಾಡಲು ಸಿದ್ಧರಿರಬೇಕು? (ಮತ್ತಾಯ 7:21-23)

8 ಹಾಗಾದರೆ ಒಬ್ಬನ ಜೀವಿತದಲ್ಲಿ ಬೇಕಾಗಿರುವಂಥಾದ್ದು ಯಾವುದಾದರೂ ಒಂದು ಧರ್ಮ ಎಂದಿದರ ಅರ್ಥವೋ? ಇಂಥ ತೀರ್ಮಾನವನ್ನು ಮಾಡುವುದು ತಪ್ಪಾಗಿರುವುದು. ಯಾರಿಗೆ ದೇವರು ತನ್ನೊಂದಿಗೆ ಒಂದು ಮೆಚ್ಚಿಕೆಯ ಸಂಬಂಧವನ್ನು ದಯಪಾಲಿಸುತ್ತಾನೋ ಅವರು ಒಂದು ನಿರ್ದಿಷ್ಟ ವಿಧದ ಜನರಾಗಿರುತ್ತಾರೆ. ಯಾವ ವಿಧದವರು? ಬೈಬಲು ಅವರನ್ನು ಈ ರೀತಿಯಲ್ಲಿ ವಿವರಿಸುತ್ತದೆ: “ಸತ್ಯಾರಾಧಕರು ತಂದೆಯನ್ನು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸುವ ಕಾಲ ಬರುತ್ತದೆ. ತಂದೆಯು ತನ್ನನ್ನು ಆರಾಧಿಸುವವರು ಇಂಥವರೇ ಆಗಿರಬೇಕೆಂದು ಅಪೇಕ್ಷಿಸುತ್ತಾನಲ್ಲವೇ. ದೇವರು ಆತ್ಮಸ್ವರೂಪನು; ಆತನನ್ನು ಆರಾಧಿಸುವವರು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸಬೇಕು.” (ಯೋಹಾನ 4:23, 24) ನೀವು ದೇವರನ್ನು ‘ಸತ್ಯದಿಂದ’ ಆರಾಧಿಸುವ ಒಬ್ಬ ವ್ಯಕ್ತಿಯೋ? “ಸತ್ಯತೆಯು ದೇವರಿಂದ” ಏನು ತಿಳಿಸಲ್ಪಟ್ಟಿದೆಯೋ ಅದರೊಂದಿಗೆ ಪೂರ್ಣ ಸಹಮತದಿಂದಿದೆಯೋ ಇಲ್ಲವೋ ಎಂದು ನೋಡುವುದಕ್ಕಾಗಿ ನಿಮ್ಮ ನಂಬಿಕೆಗಳನ್ನು ದೇವರ ವಾಕ್ಯದ ಬೆಳಕಿನಲ್ಲಿ ನೀವು ಪರೀಕ್ಷಿಸಿದ್ದೀರೋ? (ಕೀರ್ತನೆ 31:5, NW) ಅದನ್ನು ಮಾಡುವುದಕ್ಕೆ ನಿಮಗೆ ಮನಸ್ಸಿದೆಯೋ? ಸತ್ಯಕ್ಕೆ ಹೊಂದಿಕೆಯಲ್ಲಿಲ್ಲದ ಬೋಧನೆಗಳೂ, ಪದ್ಧತಿಗಳೂ ಯಾವನಿಗಾದರೂ ಬಾಳುವ ಪ್ರಯೋಜನವನ್ನು ತರಲಾರವು. ವಿಷಯಗಳು ನಿಜವಾಗಿ ಏನಾಗಿವೆಯೋ ಅದನ್ನು ಅಸಡ್ಡೆಮಾಡುವಂತೆ ಅವು ಕಾರಣವಾಗಿವೆ; ಅವು ಜನರನ್ನು ತಪ್ಪಾದ ಮಾರ್ಗದಲ್ಲಿ ನಡಿಸುತ್ತವೆ. ಒಬ್ಬ ವ್ಯಕ್ತಿಯು ನಿಜವಾಗಿ ಸತ್ಯವನ್ನು ತಿಳಿಯ ಬಯಸಿದರೆ ಮಾತ್ರವೇ ಮತ್ತು ಸತ್ಯದೊಂದಿಗೆ ಹೊಂದಿಕೆಯಲ್ಲಿ ತನ್ನ ಜೀವಿತವನ್ನು ತರುವುದಕ್ಕಾಗಿ ಅವಶ್ಯವಾದ ಬದಲಾವಣೆಗಳನ್ನು ಮಾಡಲು ಸಿದ್ಧನಾಗಿದ್ದರೆ ಮಾತ್ರ ನಿಜ ಭದ್ರತೆಯೊಂದಿಗೆ ಬರುವ ಸಂತೃಪ್ತಿಯನ್ನು ಅನುಭವಿಸುವನು. ಅತಿ ಮಹತ್ವದ ಸತ್ಯತೆಗಳಲ್ಲೊಂದರಲ್ಲಿ ಸ್ವತಃ ದೇವರ ಪರಿಚಯವು ಒಳಗೂಡಿರುತ್ತದೆ.

9, 10. (ಎ) ದೇವರ ವೈಯಕ್ತಿಕ ಹೆಸರು ಏನು? (ಬಿ) ದೇವರ ಹೆಸರೇನೆಂದು ಮಿತ್ರನೊಬ್ಬನಿಗೆ ರುಜು ಪಡಿಸುವುದಕ್ಕೆ ಯಾವ ಶಾಸ್ತ್ರ ವಚನವನ್ನು ನೀವು ಉಪಯೋಗಿಸುವಿರಿ? (ಸಿ) ಕೆಲವು ಭಾಷಾಂತರಕಾರರು ಆ ಹೆಸರನ್ನು ಮರೆಮಾಡಲು ಪ್ರಯತ್ನಿಸಿರುವುದು ಹೇಗೆ? (ಕೀರ್ತನೆ 110:1, AV)

9 ಆತನ ವೈಯಕ್ತಿಕ ಹೆಸರು ನಿಮಗೆ ತಿಳಿದಿದೆಯೇ? ಅದು “ದೇವರು” ಅಥವಾ “ಕರ್ತನು” ಅಲ್ಲ. ಅವು ಪದವಿಗಳಾಗಿವೆ. ಹೇಗೆ “ಶ್ರೀ” ಮತ್ತು “ಅರಸ” ಎಂಬುದು ಪದವಿಗಳೋ ಹಾಗೆಯೇ. ಆದರೂ ಬೈಬಲಿನ ಆತರೈಜ್ಡ್‌ ವರ್ಷನ್‌ (ಸಾ.ಶ. 1611 ರಲ್ಲಿ ತರ್ಜುಮೆಯಾಯಿತು) ಗನುಸಾರವಾಗಿ ಕೀರ್ತನೆ 83:18 ಅನ್ನುವುದು: “ಯೆಹೋವ ನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲೆಲ್ಲಾ ಸರ್ಮೋನ್ನತನು.” ಅದು ಮನುಷ್ಯರು ದೇವರಿಗೆ ಕೊಟ್ಟಂಥ ಒಂದು ಹೆಸರಲ್ಲ. ಬೈಬಲಿನ ರಿವೈಸ್ಡ್‌ ವರ್ಷನ್‌ (ಸಾ.ಶ. 1901 ರಲ್ಲಿ ಪ್ರಕಟವಾದ ಅಮೆರಿಕನ್‌ ಸ್ಟ್ಯಾಂಡರ್ಡ್‌ ಅಡಿಷನ್‌) ನಲ್ಲಿ ತೋರಿಸಲ್ಪಟ್ಟ ಪ್ರಕಾರ ದೇವರು ತನ್ನ ಪರವಾಗಿ ಮಾತಾಡುವಾಗ ಅಂದದ್ದು: “ನಾನೇ ಯೆಹೋವನು; ಇದೇ ನನ್ನ ನಾಮವು.” (ಯೆಶಾಯ 42:8) ಮೂಲ ಹೀಬ್ರು ಶಾಸ್ತ್ರಗ್ರಂಥದ ಕೆಲವು ಭಾಷಾಂತರಗಳು ಆ ಹೆಸರನ್ನು “ಯಾಹ್ವೇ” ಎಂದು ತರ್ಜುಮೆ ಮಾಡಿವೆ, ಬೇರೆಯವು ಕೇವಲ “ಕರ್ತನು” (LORD) ಶಬ್ದವನ್ನುಪಯೋಗಿಸಿವೆ, ಆದರೆ ಈ ವಿಶಿಷ್ಟ ಸಂದರ್ಭಗಳಲ್ಲಿ ಅವರು ಸಾಮಾನ್ಯವಾಗಿ ಅದನ್ನು ಇಲ್ಲಿ ತೋರಿಸಿರುವ ಪ್ರಕಾರ, ದೊಡ್ಡಕ್ಷರವಾದ “L” ನ್ನು ದೊಡ್ಡದಾಗಿಯೂ ಉಳಿದವುಗಳನ್ನು ಚಿಕ್ಕ ದೊಡ್ಡಕ್ಷರಗಳಾಗಿಯೂ ಮುದ್ರಿಸುತ್ತಾರೆ, ಹೀಗೆ ಮೂಲ ಭಾಷಾ ವಚನದಲ್ಲಿ ತಮ್ಮ ಭಾಷಾಂತರದಲ್ಲಿ ತಿಳಿಸಲ್ಪಟ್ಟದ್ದಕ್ಕಿಂತ ಹೆಚ್ಚಿನ ವಿಷಯವಿದೆಂಬದು ಸೂಚಿಸಲ್ಪಟ್ಟಿದೆ.

10 ದೃಷ್ಟಾಂತಕ್ಕಾಗಿ, ನಿಮ್ಮ ಸ್ವಂತ ಬೈಬಲಿನಲ್ಲಿ ಕೀರ್ತನೆ 8:9 ನ್ನು ಯಾಕೆ ತೆರೆದು ನೋಡಬಾರದು? ಕಾಮನ್‌ ಬೈಬಲ್‌ (ಕ್ಯಾತೊಲಿಕ್‌ ಮತ್ತು ಪ್ರಾಟೆಸ್ಟಂಟ್‌ ವೇದಾಂತಿಗಳಿಂದ ಅನುಮೋದಿಸಲ್ಪಟ್ಟು 1973ರಲ್ಲಿ ಪ್ರಕಟವಾಯಿತು) ನಲ್ಲಿ ಅದು ಹೀಗೆ ಓದಲ್ಪಡುತ್ತದೆ: “ಕರ್ತನೇ, (LORD) ನಮ್ಮ ಕರ್ತನೇ, (Lord) ನಿನ್ನ ನಾಮವು ಭೂಲೋಕದಲೆಲ್ಲಾ ಎಷ್ಟೋ ಮಹಿಮೆಯುಳ್ಳದ್ದು.” ಈ ಒಂದೇ ವಚನದಲ್ಲಿ “Lord” ಎಂಬ ಇಂಗ್ಲಿಷ್‌ ಶಬ್ದದ ಎರಡು ಸಂಭವಗಳನ್ನು ಎರಡು ಭಿನ್ನವಾದ ಮುದ್ರಾಕ್ಷರಗಳಿಂದ ಬರೆಯಲ್ಪಟ್ಟಿರುವುದನ್ನು ಗಮನಿಸಿರಿ. ಮೊದಲನೆ ಸಂದರ್ಭದಲ್ಲಿ ದೊಡ್ಡಕ್ಷರ “L”ನ ನಂತರ ಚಿಕ್ಕ ದೊಡ್ಡಕ್ಷರಗಳು ಉಪಯೋಗಿಸಲ್ಪಟ್ಟಿವೆ; ಆದರೆ ಎರಡನೇ ಬಾರಿ ಅದೇ ಶಬ್ದವು ಗೋಚರಿಸುವಾಗ ಮೊದಲನೆ ಅಕ್ಷರವು ದೊಡ್ಡಕ್ಷರವಾಗಿಯೂ ಮತ್ತು ಉಳಿದವುಗಳು ಚಿಕ್ಕಕ್ಷರಗಳಲ್ಲಿಯೂ ಮುದ್ರಿಸಲ್ಪಟ್ಟಿವೆ. (ಕ್ಯಾತೊಲಿಕ್‌ ನ್ಯೂ ಅಮೆರಿಕನ್‌ ಬೈಬಲ್‌ ನಲ್ಲಿ ಇದು ಕೀರ್ತನೆ 8:10ರಲ್ಲಿ ಕಂಡುಬರುತ್ತದೆ. *) ಆದರೂ ಬೇರೆ ಭಾಷಾಂತರಗಳಾದರೋ, ಏನನ್ನಾದರೂ ಮರೆಮಾಡಲು ಪ್ರಯತ್ನಿಸದೆ, ಆ ವಚನವನ್ನು “ನಮ್ಮ ಕರ್ತನಾದ ಯೆಹೋವನೇ, ನಿನ್ನ ನಾಮವು ಭೂಲೋಕದಲೆಲ್ಲಾ ಎಷ್ಟೋ ಮಹಿಮೆಯುಳ್ಳದ್ದು!” ಎಂದು ತರ್ಜುಮೆ ಮಾಡಿವೆ.

11. (ಎ) ದೇವರ ಹೆಸರನ್ನು ತಿಳಿಯುವುದು ಮತ್ತು ಉಪಯೋಗಿಸುವುದು ನಿಜವಾಗಿ ಮಹತ್ವವುಳ್ಳದ್ದೋ? (ಅ. ಕೃತ್ಯಗಳು 15:14) (ಬಿ) ನಾವು ಯೆಹೋವನನ್ನು ಪ್ರೀತಿಸುವುದಾದರೆ, ವೈಯಕ್ತಿಕವಾಗಿ ಹೇಗೆ ನಾವು ಆ ಹೆಸರನ್ನು ಉಪಯೋಗಿಸುವೆವು? (ಯೆಶಾಯ 43:10)

11 ಕೆಲವು ಭಾಷಾಂತರಕಾರರು ನೆನಸಬಹುದೇನಂದರೆ ದೇವರಿಗಾಗಿ ಒಂದು ವೈಯಕ್ತಿಕ ನಾಮವನ್ನುಪಯೋಗಿಸದೆ ಇರುವ ಮೂಲಕ ತಾವು ಬೈಬಲನ್ನು ಹೆಚ್ಚು ಜನರಿಗೆ ಸ್ವೀಕರಣೀಯವಾಗಿ ಮಾಡುತ್ತೇವೆ. ಆದರೆ ಮೂಲ ಭಾಷಾ ಗ್ರಂಥದಲ್ಲಿ ಬೇರೆ ಯಾವುದೇ ಭಾಷೆಗಿಂತ ಎಷ್ಟೋ ಹೆಚ್ಚು ಬಾರಿ ಗೋಚರಿಸುವ ಆ ಹೆಸರನ್ನು ಅವರು ಬಚ್ಚಿಡಲು ಪ್ರಯತ್ನಿಸುವಾಗ ತರ್ಜುಮೆಗಾರರೋಪಾದಿ ಅವರು ಪ್ರಾಮಾಣಿಕರಾಗಿರುತ್ತಾರೋ? ತನ್ನ ಹೆಸರನ್ನು ಜನರು ತಿಳಿಯುವಂತೆ ಸತ್ಯ ದೇವರು ಬಯಸುತ್ತಾನೆ. ಪ್ರಾಚೀನ ಐಗುಪ್ತದ ಅರಸನೊಬ್ಬನಿಗೆ ದೇವರು ಅವನನ್ನು ಆ ತನಕ ಉಳಿಸಿದ್ದೇಕೆಂದು ತಿಳಿಯಪಡಿಸಲು ತನ್ನ ಸೇವಕನಾದ ಮೋಶೆಗೆ ಹೇಳಿದ್ದಾಗ ಆತನು ಇದನ್ನು ಸ್ಪಷ್ಟಪಡಿಸಿದನು. ಅದೇಕೆ? “ನಾನು ನಿನ್ನಲ್ಲಿ ಶಕ್ತಿಯನ್ನು ತೋರಿಸಿ ನನ್ನ ಹೆಸರನ್ನು ಲೋಕದಲ್ಲೆಲ್ಲಾ ಪ್ರಸಿದ್ಧಿ ಪಡಿಸಬೇಕೆಂಬ ಉದ್ದೇಶದಿಂದಲೇ ನಿನ್ನನ್ನು ಸಾಯಿಸದೆ ಉಳಿಸಿದೆನು” ಎಂದನು ದೇವರು. (ವಿಮೋಚನಕಾಂಡ 9:16) ದೇವರ ಹೆಸರನ್ನು ಉಪಯೋಗಿಸುವುದು ನಮಗೆ ಮಹತ್ವವುಳ್ಳದ್ದಾಗಿದೆ, ನಾವು ಗೌರವಪೂರ್ವಕವಾಗಿಯೇ ಹಾಗೆ ಮಾಡುತ್ತೇವೆ. ಮತ್ತು ಸತ್ಯ ಪ್ರೇಮಿಗಳು ನಾವಾಗಿರುವುದಾದರೆ ಒಬ್ಬನೇ ಸತ್ಯದೇವರಾದ ಯೆಹೋವನ ಆರಾಧಕರಾಗಿ ನಮ್ಮನ್ನು ಪರಿಚಯಪಡಿಸಲು ಶಂಕಿಸಲಾರೆವು.

12. ಆರಾಧನೆಯಲ್ಲಿ ವಿಗ್ರಹಗಳನ್ನುಪಯೋಗಿಸುವುದನ್ನು ದೇವರು ಯಾವ ನೋಟದಲ್ಲಿ ನೋಡುತ್ತಾನೆ? (ಕೀರ್ತನೆ 115:3-8; ಧರ್ಮೋಪದೇಶಕಾಂಡ 7:25)

12 ಆದರೂ ದೇವರ ಹೆಸರನ್ನು ಆತನು ಮೆಚ್ಚದ ಯಾವುದಾದರೊಂದಿಗೆ ಜತೆಗೂಡಿಸದಂತೆ ನಾವು ಎಚ್ಚರದಿಂದಿರಬೇಕು. “ದೇವರು ಆತ್ಮಸ್ವರೂಪನು, ಆತನನ್ನು ಆರಾಧಿಸುವವರು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸಬೇಕು” ಎಂಬುದನ್ನು ಜ್ಞಾಪಕದಲ್ಲಿಡಿರಿ. (ಯೋಹಾನ 4:24) “ದೇವರು ಆತ್ಮಸ್ವರೂಪನು” ಎಂಬ ನಿಜತ್ವವನ್ನು ನಾವು ಗಣ್ಯ ಮಾಡುವುದಾದರೆ, ಮತ್ತು “ಆತ್ಮ”ದಿಂದ ಅಂದರೆ ಆತ್ಮಿಕ ರೀತಿಗಳಲ್ಲಿ ನಾವಾತನನ್ನು ಆರಾಧಿಸುವುದಾದರೆ, ದೇವರನ್ನು ಪ್ರತಿನಿಧಿಸಲಿಕ್ಕೆ ಭೌತಿಕ ವಸ್ತುಗಳನ್ನು ನಾವು ಉಪಯೋಗಿಸಲಾರೆವು. ಯೋಹಾನ 1:18 ಕ್ಕನುಸಾರವಾಗಿ ‘ದೇವರನ್ನು ಯಾರೂ ಎಂದೂ ಕಂಡಿಲ್ಲ’ ವಾದುದರಿಂದ ಆತನನ್ನು ಪ್ರತಿನಿಧಿಸುವ ಯಾವುದೇ ಚಿತ್ರವನ್ನಾಗಲಿ ವಿಗ್ರಹವನ್ನಾಗಲಿ ಮಾಡಸಾಧ್ಯವಿಲ್ಲ. ನೋಡಲು ಯಾ ಆಲಿಸಲು ಯಾ ಮಾತಾಡಲು ಶಕ್ತವಿಲ್ಲದ ಹಾಗೂ ತನ್ನ ಆರಾಧಕರ ಸಹಾಯಕ್ಕಾಗಿ ಒಂದು ಕೈಬೆರಳನ್ನೆತ್ತಲೂ ಶಕ್ಯವಿಲ್ಲದ ವಿಗ್ರಹವೊಂದು ಜೀವಸ್ವರೂಪನಾದ ದೇವರನ್ನೆಂದೂ ಪ್ರತಿನಿಧಿಸಲಾರದು. ನಿಶ್ಚಯವಾಗಿ, ಕೆಲವು ವಿಗ್ರಹಗಳು ದೇವರನ್ನು ತಾನೇ ಪ್ರತಿನಿಧಿಸುವುದಕ್ಕಾಗಿ ಇರುವುದಿಲ್ಲ, ಆದರೂ ಪ್ರಶ್ನೆಯೇನಂದರೆ ಅವು ಧಾರ್ಮಿಕ ಭಕ್ತಿಯ ಸಾಧನಗಳಾಗಿವೆಯೋ? ದೇವರು ದಶಾಜ್ಞೆಗಳನ್ನು ಕೊಟ್ಟಾಗ, ಅಂಥ ಉದ್ದೇಶಕ್ಕಾಗಿ ಯಾವ ಮೂರ್ತಿಗಳನ್ನಾದರೂ ಮಾಡಬಾರದೆಂದು ವಿಶಿಷ್ಟವಾಗಿ ತಿಳಿಸಿದ್ದನು. ಆತನು ಆಜ್ಞಾಪಿಸಿದ್ದು: “ಯಾವ ಮೂರ್ತಿಯನ್ನೂ ಮಾಡಿಕೊಳ್ಳಬಾರದು . . . ಯಾವದರ ರೂಪವನ್ನೂ ಮಾಡಿಕೊಳ್ಳಬಾರದು. ಅವುಗಳಿಗೆ ಅಡ್ಡ ಬೀಳಲೂಬಾರದು ಪೂಜೆ ಮಾಡಲೂಬಾರದು.” (ವಿಮೋಚನಕಾಂಡ 20:4, 5, ಕ್ಯಾತೊಲಿಕ್‌ ಜೆರೂಸಲೇಮ್‌ ಬೈಬಲ್‌) ಯೆಹೋವನು ಮೆಚ್ಚದೆ ಇರುವ ವಸ್ತುಗಳನ್ನು ನಾವು ಉಪಯೋಗಿಸುವ ಬದಲಿಗೆ, ಸತ್ಯದ ಮೇಲಣ ಪ್ರೇಮವು ದೇವರು ನಿಜವಾಗಿಯೂ ಏನಾಗಿದ್ದನೋ ಅದನ್ನು ತಿಳಿಯುವಂತೆ ನಮಗೆ ಸಹಾಯ ಮಾಡುವುದು.

13. (ಎ) ಯೆಹೋವನು ಯಾವ ರೀತಿಯ ದೇವರಾಗಿದ್ದಾನೆ? (ಬಿ) ಆತನ ಗುಣಗಳಲ್ಲಿ ಯಾವುವು ನಿಮಗೆ ವಿಶೇಷವಾಗಿ ಇಷ್ಟವೆನಿಸುತ್ತವೆ?

13 ಆತನ ಗುಣಗಳು ಎಂಥವುಗಳೆಂದರೆ ನೀತಿಯನ್ನು ಪ್ರೀತಿಸುವ ಪ್ರತಿಯೊಬ್ಬನ ಆತ್ಮ ವಿಶ್ವಾಸವನ್ನು ಅವು ಗಳಿಸ ಶಕ್ತವಾಗಿವೆ. ಯಾವನೇ ಮಾನವನಿಗಿಂತ ಎಷ್ಟೋ ಮಿಗಿಲಾದ ಸರ್ವಶಕ್ತತೆ ಮತ್ತು ವಿವೇಕವೆಂಬಂಥ ಆತನ ಕೆಲವು ಗುಣಗಳು ಆತನ ಭೌತಿಕ ಸೃಷ್ಟಿ ಕ್ರಿಯೆಗಳಿಂದ ಸ್ಪಷ್ಟವಾಗಿ ತೋರಿಬರುತ್ತವೆ. ಸೂರ್ಯಾಸ್ತಮಾನಗಳ ಸೌಂದರ್ಯ, ಪಕ್ಷಿಗಳ ಮಧುರಗಾನ, ಪುಷ್ಪಗಳ ಸುವಾಸನೆ ಮತ್ತು ನೀವು ಆನಂದಿಸುವ ಅನೇಕ ರುಚಿಗಳೆಲ್ಲವೂ ಮಾನವ ಕುಲಕ್ಕಾಗಿರುವ ದೇವರ ಪ್ರೀತಿಯನ್ನು ಪ್ರತಿಬಿಂಬಿಸುತ್ತವೆಂದು ನೀವು ಒಪ್ಪುವದಿಲ್ಲವೋ? ಆದರೆ ಬೈಬಲು ಇದಕ್ಕಿಂತಲೂ ಆಚೇಕಡೆ ಹೋಗಿ, ದೇವರ ಕುರಿತಾಗಿ ನಮಗೆ ಹೆಚ್ಚನ್ನು ತಿಳಿಸಿದೆ. ಯಾವುದು ಯೋಗ್ಯವೋ ಅದನ್ನು ಯೆಹೋವನು ಎತ್ತಿ ಹಿಡಿಯುತ್ತಾನೆಂತಲೂ, ಆದರೆ ಆತನು ಕೃಪಾಳುವೂ ಕರುಣಾಳುವೂ ಆಗಿದ್ದಾನೆ ಎಂದು ಅದು ಪ್ರಕಟಿಸುತ್ತದೆ. ಅದು ಆತನನ್ನು ಈ ರೀತಿಯಲ್ಲಿ ವರ್ಣಿಸಿದೆ: “ಯೆಹೋವ, ಯೆಹೋವ, ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘ ಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು; ಸಾವಿರಾರು ತಲೆಗಳ ವರೆಗೂ ದಯೆ ತೋರಿಸುವವನು; ದೋಷಾಪರಾಧ ಪಾಪಗಳನ್ನು ಕ್ಷಮಿಸುವವನು: ಆದರೂ ಶಿಕ್ಷಿಸದೆ ಬಿಡದವನು.” (ವಿಮೋಚನಕಾಂಡ 34:6, 7) ಮತ್ತು ಪ್ರಾಚೀನ ಇಸ್ರಾಯೇಲ್‌ ಜನಾಂಗದೊಂದಿಗೆ ಅನೇಕ ಶತಮಾನಗಳ ತನಕ ದೇವರು ವ್ಯವಹರಿಸಿದ್ದರ ಕುರಿತು ಬೈಬಲು ತಿಳಿಸಿರುತ್ತದೆ, ಆ ವ್ಯವಹಾರಗಳು ಸುಸ್ಪಷ್ಟವಾಗಿ ಆ ಗುಣಗಳನ್ನು ಪ್ರದರ್ಶಿಸಿದ್ದವು. “ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಕೆಯಾಗಿದ್ದಾರೆ” ಎಂಬದನ್ನೂ ಆ ಲಿಖಿತ ದಾಖಲೆಯು ರುಜುಪಡಿಸುತ್ತದೆ. (ಅ. ಕೃತ್ಯಗಳು 10:34, 35) ಎಲ್ಲಾ ರೀತಿಯ ಜನರು ತನ್ನೊಂದಿಗೆ ಒಂದು ಸುಸಂಬಂಧದಲ್ಲಿ ಆನಂದಿಸುವಂತೆ ಆತನು ಬಯಸುತ್ತಾನೆ, ಮತ್ತು ಇದು ಸಾಧ್ಯವಾಗುವಂತೆ ಆತನು ದಯೆಯಿಂದ ಒದಗಿಸುವಿಕೆಗಳನ್ನು ಮಾಡಿದ್ದಾನೆ.

14. ವ್ಯಕ್ತಿಯೊಬ್ಬನು ನಿಜವಾಗಿ ತನ್ನ ಭರವಸವನ್ನು ಯೆಹೋವನಲ್ಲಿ ಇಡುವಾಗ ಅವನ ಜೀವಿತದ ಮೇಲೆ ಹೇಗೆ ಪರಿಣಾಮವಾಗುತ್ತದೆ? (ಜ್ಞಾನೋಕ್ತಿ 3:5, 6)

14 ಸತ್ಯ ದೇವರ ಅನೇಕ ಪ್ರಶಂಸನೀಯ ಗುಣಗಳಿಗಾಗಿ ಒಬ್ಬ ವ್ಯಕ್ತಿಯು ಗಣ್ಯತೆಯನ್ನು ಬೆಳೆಸುವಾಗ ಏನು ಸಂಭವಿಸುತ್ತದೆ? ದೇವರ “ಹೆಸರು” ಅವನಿಗಾಗಿ ಅರ್ಥವತಾಗ್ತಿ ಬೆಳೆಯುತ್ತದೆ. ಅವನು ತನ್ನ ಭರವಸವನ್ನು ಯೆಹೋವನಲ್ಲಿ ಇಡುತ್ತಾನೆ, ದೇವರ ಮಾರ್ಗದಲ್ಲಿ ವಿಷಯಗಳನ್ನು ಮಾಡುತ್ತಾನೆ, ಫಲಿತಾಂಶವಾಗಿ ಭದ್ರತೆಯನ್ನು ಅನುಭವಿಸುತ್ತಾನೆ. ಅದು ಜ್ಞಾನೋಕ್ತಿ 18:10 ಹೇಳುವ ಹಾಗೆಯೇ ಇದೆ: “ಯೆಹೋವನ ನಾಮವು ಬಲವಾದ ಬುರುಜು; ಶಿಷ್ಟನು ಅದರೊಳಗೆ ಓಡಿಹೋಗಿ ಭದ್ರವಾಗಿರುವನು.”

15. (ಎ) ನಮ್ಮ ಭವಿಷ್ಯತ್ತು ಯೆಹೋವನ ಮೇಲೆ ಆಧಾರಿಸಿರುತ್ತದೆ ಏಕೆ? (ಬಿ) ಪ್ರತಿಯೊಬ್ಬ ವ್ಯಕ್ತಿಯನ್ನು ಯಾವ ಗಂಭೀರವಾದ ನಿರ್ಣಯವು ಎದುರಿಸಿರುತ್ತದೆ? (ಧರ್ಮೋಪದೇಶಕಾಂಡ 30:19, 20)

15 ಆ ಭದ್ರತೆಯಲ್ಲಿ ಭವಿಷ್ಯತ್ತಿಗಾಗಿರುವ ಒಬ್ಬನ ಪ್ರತೀಕ್ಷೆಗಳೂ ಸೇರಿರುತ್ತವೆ. ನಿಜವಾಗಿಯೂ ಯೆಹೋವನ ಮೇಲೆಯೇ ಮಾನವರೆಲ್ಲರ ಭವಿಷ್ಯತ್ತು ಆಧಾರಿಸಿರುತ್ತದೆ. ಏಕೆ? ಏಕೆಂದರೆ ಈ ಭೂಮಿಯು ಆತನ ಸೃಷ್ಟಿಕ್ರಿಯೆಯಾಗಿದೆ ಮತ್ತು ಅದರಲ್ಲಿ ಜೀವಿಸುವವರೆಲ್ಲರು ಜೀವ ಪೋಷಣೆಗಾಗಿ ಆತನ ಒದಗಿಸುವಿಕೆಯ ಮೇಲೆ ಹೊಂದಿಕೊಂಡಿರುತ್ತಾರೆ. ತನ್ನ ಜನರಿಗಾಗಿ ಸುರಕ್ಷಿತವಾದ, ಸಂತೋಷವುಳ್ಳ ಜೀವಿತ ಪರಿಸ್ಥಿತಿಗಳನ್ನು ಕೊಡುವ ತನ್ನ ಉದ್ದೇಶವನ್ನು ಆತನು ಬೈಬಲಿನಲ್ಲಿ ತಿಳಿಸಿರುತ್ತಾನೆ. ತನ್ನ ಉದ್ದೇಶವನ್ನು ಪೂರೈಸುವುದರಿಂದ ಸರ್ವಶಕ್ತನಾದ ದೇವರನ್ನು ಭೂಪರಲೋಕಗಳಲ್ಲಿರುವ ಯಾವುದೂ ತಡೆಯ ಶಕ್ತವಲ್ಲ. ಆದರೂ ಆ ಉದ್ದೇಶವು ನಮ್ಮ ಇಚ್ಛಾ ಸ್ವಾತಂತ್ರ್ಯವನ್ನು ನಮ್ಮಿಂದ ಅಪಹರಿಸುವುದಿಲ್ಲ. ವಿಷಯದ ಮೇಲೆ ಯಾವ ಹೇಳಿಕೆಗೂ ಅವಕಾಶ ಕೊಡದೆ ನಮ್ಮ ಪ್ರತಿಯೊಬ್ಬನ ಅದೃಷ್ಟವನ್ನು ಅದು ನಿರ್ಣಯಿಸುವುದಿಲ್ಲ. ಆದರೆ ಒಂದು ಗಂಭೀರವಾದ ನಿರ್ಣಯವನ್ನು ನಮ್ಮ ಮುಂದಿಡುತ್ತದೆ: ಯೆಹೋವನು ನಮಗಾಗಿ ಮಾಡಿರುವ, ಮತ್ತು ಭವಿಷ್ಯತ್ತಿನಲ್ಲಿ ಇನ್ನೂ ಮಾಡಲಿರುವ ಎಲ್ಲವುಗಳಿಗಾಗಿ ಗಣ್ಯತೆಯು, ಆತನ ಚಿತ್ತಕ್ಕೆ ಹೊಂದಿಕೆಯಲ್ಲಿ ನಮ್ಮ ಜೀವಿತವನ್ನು ತರುವಂತೆ ನಮ್ಮನ್ನು ಪ್ರೇರಿಸುತ್ತದೋ? ಒಬ್ಬನು ನಂಬದೆ ಇರುವಿಕೆಯು ಯೆಹೋವನು ಸತ್ಯದೇವರೆಂಬ ನಿಜತ್ವವನ್ನೇನೂ ಬದಲಾಯಿಸುವುದಿಲ್ಲ, ಇಲ್ಲವೇ ಆತನ ಉದ್ದೇಶವನ್ನೂ ಮಾರ್ಪಡಿಸುವುದಿಲ್ಲ. ಆದರೆ ಆ ಪ್ರೀತಿಯ ಉದ್ದೇಶದಿಂದ ಒಬ್ಬನು ವೈಯಕ್ತಿಕವಾಗಿ ಪ್ರಯೋಜನ ಹೊಂದುವನೋ ಇಲ್ಲವೋ ಎಂಬದನ್ನು ಅದು ನಿರ್ಧರಿಸ ಸಾಧ್ಯವಿದೆ. ಕಾರ್ಯತಃ ಅದು ಜೀವ ಮರಣಗಳ ನಡುವಣ ಆಯ್ಕೆಯಾಗಿದೆ.

ಅಭದ್ರತೆಯು ಮಾನವ ಜೀವಿತವನ್ನು ಕೆಡಿಸುವ ಕಾರಣ

16. ಇಂದು ಜೀವಿತವನ್ನು ಅಭದ್ರವಾಗಿ ಮಾಡುವ ಕೆಲವು ವಿಷಯಗಳು ಯಾವುವು?

16 ಯೆಹೋವನ ಉದ್ದೇಶವು ನಿಜ ಭದ್ರತೆಯಲ್ಲಿ ಕೊನೆಗೊಳ್ಳುವುದು ಹೇಗೆಂಬದನ್ನು ಗಣ್ಯ ಮಾಡುವುದಕ್ಕಾಗಿ, ಇಂದು ಜೀವಿತವನ್ನು ಅಭದ್ರವನ್ನಾಗಿ ಮಾಡುವ ಕೆಲವು ವಿಷಯಗಳನ್ನು ನಾವು ಪ್ರಥಮವಾಗಿ ಜ್ಞಾಪಕಕ್ಕೆ ತರುವುದು ಉಪಯುಕ್ತವಾಗಿದೆ. ಅವುಗಳಲ್ಲಿ ಪ್ರೀತಿಯ ಕೊರತೆ, ನಿಯಮಕ್ಕೆ ಅಮಾನ್ಯತೆ, ಇತರರ ಸೊತ್ತುಗಳ ಕಡೆಗೆ ಮನ್ನಣೆಯಿಲ್ಲದಿರುವಿಕೆ, ಮತ್ತು ಸ್ವಾರ್ಥ ಸಾಧನೆಗಾಗಿ ಸುಳ್ಳಾಡುವುದು ಮತ್ತು ಬಲಾತ್ಕಾರವನ್ನುಪಯೋಗಿಸುವುದೇ ಮುಂತಾದವುಗಳು ಸೇರಿರುತ್ತವೆ. ಅಷ್ಟುಮಾತ್ರವಲ್ಲ, ಅನಾರೋಗ್ಯವನ್ನು ಹಾಗೂ ಜನರು ಇಂದೋ ಮುಂದೋ ಸಾಯಲಿದ್ದಾರೆಂಬ ಮನವರಿಕೆಯನ್ನು ನಾವು ಅಸಡ್ಡೆ ಮಾಡಸಾಧ್ಯವಿಲ್ಲ. ವೈಯಕ್ತಿಕ ಅನುಭವ ಮತ್ತು ಅವಲೋಕನೆ ಎರಡರಿಂದಲೂ ಈ ವಿಷಯಗಳು ಮಾನವ ಜೀವಿತದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂದು ನಮಗೆ ತಿಳಿದದೆ. ಆದರೆ ಅದೆಲ್ಲವೂ ಸಂಭವಿಸಿದ್ದು ಹೇಗೆ? ಉತ್ತರವು ಬೈಬಲಿನಲ್ಲಿ ಕಂಡುಬರುತ್ತದೆ.

17. ಆರಂಭದಲ್ಲಿ ಆದಾಮ ಹವ್ವರಿಂದ ಆನಂದಿಸಲ್ಪಟ್ಟ ಭದ್ರತೆಗೆ ಯಾವುದು ನೆರವಾಗಿತ್ತು? (ಆದಿಕಾಂಡ 1:31; 2:8, 15)

17 ಯೆಹೋವ ದೇವರು ನಮ್ಮ ಪ್ರಥಮ ಮಾನವ ಹೆತ್ತವರಾದ ಆದಾಮ ಹವ್ವರನ್ನು ನಿರ್ಮಿಸಿದಾಗ ಆತನ ಕ್ರಿಯೆಯು ಅತಿ ಒಳ್ಳೇದಾಗಿತ್ತು ಎಂದು ಬೈಬಲಿನ ಮೊತ್ತ ಮೊದಲನೇ ಪುಸ್ತಕವು ನಮಗೆ ತಿಳಿಸುತ್ತದೆ. ಅನಾರೋಗ್ಯವನ್ನು ತರುವ ಯಾವುದೇ ನ್ಯೂನತೆಯು ಅವರ ರಚನೆಯಲ್ಲಿರಲಿಲ್ಲ; ಅವರ ಮುಂದೆ ನಿತ್ಯವಾಗಿ ಜೀವಿಸುವ ಪ್ರತೀಕ್ಷೆಯು ಇತ್ತು. ಪ್ರೀತಿಯಿಂದಲೇ ದೇವರು ಅವರಿಗೆ ಏದೆನಿನಲ್ಲಿ ಒಂದು ಉದ್ಯಾನವನವನ್ನು, ಒಂದು ಪರದೈಸವನ್ನು ಬೀಡಾಗಿ ಕೊಟ್ಟಿದ್ದನು. ಔದಾರ್ಯದಿಂದ ಆತನು ಅವರ ಉದ್ಯಾನ ಮನೆಯಲ್ಲಿ ಅವರ ಪೋಷಣೆಗಾಗಿ ಬೀಜವುಳ್ಳ ಎಲ್ಲಾ ಪೈರುಗಳನ್ನೂ ಹಣ್ಣಿನ ಮರಗಳನ್ನೂ ಹೇರಳವಾಗಿ ಒದಗಿಸಿದನು. ಮೀನುಗಳು, ಪಕ್ಷಿಗಳು ಮತ್ತು ಎಲ್ಲಾ ಪಶುಗಳ ಮೇಲೆ ದೊರೆತನ ಮಾಡುವಂತೆ ಮತ್ತು ತಾನು ಯಾವುದರಲ್ಲಿ ಅವರನ್ನಿಟ್ಟನೋ ಆ ಇಡೀ ಭೂಗೋಲವು ಪರದೈಸವಾಗುವ ತನಕ ಭೂಮಿಯನ್ನು ಕೃಷಿ ಮಾಡಿ ಅದನ್ನು ತಮ್ಮ ಸಂತತಿಯಿಂದ ತುಂಬಿಸುವಂತೆ ಆಜ್ಞೆಯನ್ನು ಕೊಟ್ಟ ಮೂಲಕ ಆತನು ಅವರ ಜೀವಿತವನ್ನು ಉದ್ದೇಶದಿಂದಲೂ ತುಂಬಿಸಿದನು. ಅಂಥ ಪರಿಸ್ಥಿತಿಗಳಲ್ಲಿ ಭದ್ರತೆಯ ಭಾವವು ಸಹಜವಾಗಿಯೇ ಇರುವುದು. ಆದರೆ ಆ ಭದ್ರತೆಯಲ್ಲಿ ಅವರು ಮುಂದರಿಯಬೇಕಾದರೆ ಯಾವುದೋ ಒಂದು ವಿಷಯವು ಅವರಿಂದ ಕೇಳಿಕೊಳ್ಳಲ್ಪಟ್ಟಿತ್ತು.

18. (ಎ) ಭದ್ರತೆಯಲ್ಲಿ ಮುಂದರಿಯಬೇಕಾಗಿದ್ದರೆ ಆದಾಮ ಹವ್ವರಿಂದ ಏನನ್ನು ಕೇಳಿಕೊಳ್ಳಲಾಗಿತ್ತು? (ಬಿ) ಯೆಹೋವನು ಅವರ ವಿಧೇಯತೆಯನ್ನು ಪರೀಕ್ಷಿಸಿದ್ದು ಹೇಗೆ, ಮತ್ತು ಇದು ಒಂದು ಮಹತ್ವದ ವಿಷಯವಾಗಿತ್ತು ಏಕೆ? (ಲೂಕ 16:10)

18 ದೇವರ ಸಂಬಂಧದಲ್ಲಿ ತಮ್ಮ ಸ್ಥಾನವೇನೆಂಬದನ್ನು ಮನಗಾಣುವ ಅಗತ್ಯವು ಅವರಿಗಿತ್ತು. ಭೂಮಿಯೂ ಅದರಲ್ಲಿರುವ ಎಲ್ಲವೂ ಅದರ ನಿರ್ಮಾಣಿಕನಿಗೆ ಸೇರಿದವುಗಳಾಗಿದ್ದವು. ಆದುದರಿಂದ ಅವು ಹೇಗೆ ಉಪಯೋಗಿಸಲ್ಪಡಬೇಕು ಎಂದು ನಿರ್ಣಯಿಸುವ ಹಕ್ಕು ಆತನಿಗಿತ್ತು. ಜೀವವು ತಾನೇ ಒಂದು ಶರ್ತಕ್ಕೊಳ್ಳಪಟ್ಟ ದಾನವಾಗಿತ್ತು; ಅಂದರೆ ಆದಾಮ ಹವ್ವರು ತಮ್ಮ ಸ್ವರ್ಗೀಯ ತಂದೆಗೆ ಪ್ರೀತಿಯುಕ್ತ ವಿಧೇಯತೆಯ ಅವಶ್ಯಕತೆಯನ್ನು ಮುಟ್ಟುತ್ತಾ ಮುಂದರಿಯುವ ಷರತ್ತಿನ ಮೇಲೆ ಅವರದನ್ನು ಆನಂದಿಸುತ್ತಾ ಇರುವ ಶಕ್ಯತೆ ಇತ್ತು. ಈ ಆವಶ್ಯಕತೆಯ ಗಂಭೀರತೆಯನ್ನು ಒತ್ತಿಹೇಳುವದಕ್ಕಾಗಿ ಯೆಹೋವನು ಮನುಷ್ಯನಿಗೆ ಈ ಆಜ್ಞೆಯನ್ನಿತ್ತನು: “ನೀನು ತೋಟದಲ್ಲಿರುವ ಎಲ್ಲಾ ಮರಗಳ ಹಣ್ಣನ್ನು ಯಥೇಚ್ಛವಾಗಿ ತಿನ್ನಬಹುದು; ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ಮಾತ್ರ ತಿನ್ನಬಾರದು; ತಿಂದ ದಿನ ಸತ್ತೇ ಹೋಗುವಿ.” (ಆದಿಕಾಂಡ 2:16, 17) ದೇವರನ್ನು ಅರಸನಾಗಿ ಮನುಷ್ಯನು ಸ್ವೀಕರಿಸಿದ್ದಾನೆಂಬದು ವಿಧೇಯತೆಯಿಂದ ಪ್ರದರ್ಶಿಸಲ್ಪಡುವುದು; ಅವಿಧೇಯತೆಯು ದೇವರ ಪರಿಪೂರ್ಣ ಚಿತ್ತವನ್ನು ನಿರಾಕರಿಸುವ ಅರ್ಥದಲ್ಲಿರುವುದು. ಈ ನಿಯಮದಲ್ಲಿ ಯಾವ ಕಷ್ಟವೂ ಒಳಗೂಡಿರಲಿಲ್ಲ; ಅದು ಮನುಷ್ಯನಿಂದ ಅವನಿಗೆ ಬೇಕಾದ ಯಾವುದೇ ವಸ್ತುವನ್ನು ಅಪಹರಿಸಲಿಲ್ಲ, ಬದಲಾಗಿ ಪರಿಣಾಮಕಾರಿಯಾಗಿದ್ದರೂ ಸುಲಭವಾದ ಹಾಗೂ ಅವನು ಜೀವಿಸಿದ್ದ ಪರಿಸ್ಥಿತಿಗಳಿಗೆ ತಕ್ಕದಾಗಿದ್ದ ಒಂದು ಪರೀಕ್ಷೆಯನ್ನು ಅದು ಅವನ ಮುಂದಿರಿಸಿತು. ಅದು ಆದಾಮನಿಗೆ ಮತ್ತು ಅವನ ಪತ್ನಿಯಾದ ಹವ್ವಳಿಗೆ ತಮ್ಮ ಸ್ವರ್ಗೀಯ ತಂದೆಗಾಗಿ ಪ್ರೀತಿಯನ್ನು ಪ್ರದರ್ಶಿಸುವುದಕ್ಕೆ ಸಂದರ್ಭವನ್ನಿತಿತ್ತು.

19. (ಎ) ಅಭದ್ರತೆಯನ್ನುಂಟುಮಾಡುವ ಯಾವ ವಿಷಯಗಳು ಮೊದಲಾಗಿ ಆದಾಮ ಹವ್ವರ ಪಾಪದ ಸಂಬಂಧದಲ್ಲಿ ಮತ್ತು ಅನಂತರ ಪ್ರತ್ಯಕ್ಷವಾಗಿ ತೋರಿಬಂದವು? (ಬಿ) ರೋಮಾಪುರದವರಿಗೆ 5:12 ರಲ್ಲಿ ವಿವರಿಸಲ್ಪಟ್ಟ ಮೇರೆಗೆ ಆದಾಮನ ಸಂತತಿಯೆಲ್ಲವು ಪರಿಣಾಮಕ್ಕೊಳಗಾದದ್ದು ಹೇಗೆ?

19 ಆದರೆ ಅವರು ಅನುತ್ತೀರ್ಣಗೊಂಡರೆಂದು ಬೈಬಲಿನ ದಾಖಲೆಯು ಆದಿಕಾಂಡ ಮೂರನೇ ಅಧ್ಯಾಯದಲ್ಲಿ ತಿಳಿಸುತ್ತದೆ. ದೇವರು “ಎಲ್ಲೆ ಹಾಕಿದ್ದ” ಮರದ ಹಣ್ಣನ್ನು ಬುದ್ಧಿಪೂರ್ವಕವಾಗಿ ಅವರು ತಿಂದರು. ಮಾನವ ಜೊತೆಯಿಂದ ಹಿಂದೆ ಆನಂದಿಸಲ್ಪಟ್ಟಿದ್ದ ಭದ್ರತೆಯು ಭಗ್ನಗೊಂಡಿತು. ಯಾವ ವಿಷಯಗಳು ಇಂದು ಅಭದ್ರತೆಗೆ ಕಾರಣವಾಗಿವೆಯೋ ಅವೇ ಅಲ್ಲಿ ಆಗ ಮೊತ್ತಮೊದಲಾಗಿ ಅಸ್ತಿತ್ವಕ್ಕೆ ಬಂದವು. ದೇವರ ಕಡೆಗೆ ಪ್ರೀತಿಯ ಕೊರತೆಯು ಅಲ್ಲಿತ್ತು, ಆತನ ನಿಯಮಕ್ಕೆ ಅಮಾನ್ಯತೆಯಿತ್ತು ಮತ್ತು ಆತನ ಸೊತ್ತಿಗೆ ಮನ್ನಣೆಯಿರಲಿಲ್ಲ. ಇದನ್ನು ನೆಚ್ಚದ ದೇವರು ಆದಾಮ ಹವ್ವರನ್ನು ಏದೆನಿನಿಂದ ಹೊರಗೆ ಹಾಕಿದನು. ಪರದೈಸದ ಹೊರಗೆ, ಅವರ ಸಂತತಿಯವರಲ್ಲಿ ಅನೇಕರು, ಅವರ ಸ್ವಂತ ಪುತ್ರನಾದ ಕಾಯಿನನೂ ಸೇರಿ, ಬಲಾತ್ಕಾರ ಕೃತ್ಯವನ್ನೆಸಗಿದ ಮೂಲಕ ಇನ್ನಷ್ಟು ಅಧೋಗತಿಗಿಳಿದರು. ಬುದ್ಧಿಪೂರ್ವಕವಾಗಿ ದೇವರ ನಿಯಮವನ್ನು ಅಸಡ್ಡೆ ಮಾಡದವರು ಸಹ ತಮ್ಮ ಸ್ವಂತ ದೇಹಗಳಲ್ಲಿ ಪಾಪದ ಬಾಧ್ಯತೆಯ ಪರಿಣಾಮಗಳನ್ನು ಅನುಭವಿಸಿದರು. ರೋಮಾಪುರದವರಿಗೆ 5:12 ವಿವರಿಸುವ ಮೇರೆಗೆ: “ಒಬ್ಬ ಮನುಷ್ಯ [ಆದಾಮ] ನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು; ಎಲ್ಲರು ಪಾಪ ಮಾಡಿದ್ದರಿಂದ ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು.”

20. (ಎ) ಏದೆನಿನಲ್ಲಿ ದಂಗೆಯು ಆರಂಭಗೊಂಡದ್ದು ಯಾರ ಮೂಲಕವಾಗಿ? (ಪ್ರಕಟನೆ 12:9) (ಬಿ) ಅವನು ಪಿಶಾಚನಾದ ಸೈತಾನನಾದದ್ದು ಹೇಗೆ? (ಯಾಕೋಬ 1:14, 15)

20 ಆದರೂ ಆ ದಂಗೆಯ ಕಡೆಗಿನ ಮೊದಲನೆ ಪ್ರೇರಣೆಯು ಆದಾಮನಿಂದಾಗಲಿ ಅವನ ಪತ್ನಿಯಿಂದಾಗಲಿ ಆರಂಭಿಸಲಿಲ್ಲ ಎಂಬದನ್ನು ಗಮನದಲ್ಲಿಡಬೇಕು. ಒಂದು “ಸರ್ಪ”ವು ಹವ್ವಳೊಂದಿಗೆ ಮಾತನಾಡಿತೆಂದೂ ದೇವರ ನಿಯಮವನ್ನು ಉಲ್ಲಂಘಿಸುವಂತೆ ಮೋಸದಿಂದ ಸೆಳೆಯಿತೆಂದೂ ಬೈಬಲು ತಿಳಿಸುತ್ತದೆ. ನಿಶ್ಚಯವಾಗಿ ಒಂದು ಅಕ್ಷರಾರ್ಥ ಸರ್ಪವು ಮಾತಾಡಶಕ್ತವಾಗಿಲ್ಲ; ಮತ್ತು ಆ ಸರ್ಪನ ಹಿಂದಿದ್ದ ಶಕ್ತಿಯು ಒಬ್ಬ ಅದೃಶ್ಯ ಆತ್ಮಿಕ ವ್ಯಕ್ತಿಯೆಂಬದಾಗಿ ಬೈಬಲು ನಂತರ ಗುರುತಿಸಿಯದೆ. ಈ ಆತ್ಮಿಕ ವ್ಯಕ್ತಿಯು ಕೆಡುಕನಾಗಿ ನಿರ್ಮಿಸಲ್ಪಟ್ಟಿರಲಿಲ್ಲ. ಆದರೆ ಮನುಷ್ಯರಲ್ಲಿ ಹೇಗೋ ಹಾಗೆಯೇ ಈ ಆತ್ಮಿಕ ದೇವಪುತ್ರನಲ್ಲಿ ಇಚ್ಛಾ ಸ್ವಾತಂತ್ರ್ಯವಿತ್ತು, ತಾನು ತನ್ನ ಮನೋಸಾಮರ್ಥ್ಯಗಳನ್ನು ಹೇಗೆ ಉಪಯೋಗಿಸುವೆನೆಂದು ಆಯ್ಕೆ ಮಾಡುವ ಶಕ್ತಿಯಿತ್ತು. ದುರಾಶೆಗಳನ್ನು ಮನಸ್ಸಿನೊಳಗೆ ತಂದುಕೊಂಡ ಮೂಲಕ ಅವನು ಹೆಮ್ಮೆಯನ್ನು ವಿಕಾಸಿಸಿದನು; ಇತರ ಜೀವಿಗಳು ತನ್ನನ್ನು ದೇವರಾಗಿ ಆರಾಧಿಸುವಂತೆ ಅವನು ಬಯಸಿದನು. ತನ್ನ ಉದ್ದೇಶದ ಪೂರೈಕೆಗಾಗಿ ಅವನು ಬೆನ್ನಟ್ಟಿದ ಆ ಮಾರ್ಗದಿಂದಾಗಿ ಅವನು ತನ್ನನ್ನು ದೇವರ ವಿರೋಧಕನಾಗಿ, ಒಬ್ಬ ಸೈತಾನ ನನ್ನಾಗಿ, ಮತ್ತು ನಿಂದಕನಾಗಿ, ಒಬ್ಬ ಪಿಶಾಚ ನನ್ನಾಗಿ ಮಾಡಿಕೊಂಡನು.

21. (ಎ) ಹವ್ವಳೊಂದಿಗೆ ಮಾತಾಡುವಾಗ ಸೈತಾನನು ಯಾವ ವಾದಗಳನ್ನು ಮಾಡಿದನು? (ಬಿ) ಸೈತಾನನು ಏನಂದನೋ ಅದನ್ನು ಮಾಡಿದ ಮೂಲಕ ಆಕೆ ತನ್ನ ಪರಿಸ್ಥಿತಿಯನ್ನು ಸುಧಾರಿಸಲಿಲ್ಲವೇಕೆ?

21 ಅವನು ಹವ್ವಳನ್ನು ಗೋಚರಿಸಿದನು, ಮೊದಲು ಪ್ರಶ್ನೆಗಳನ್ನು ಹಾಕಿದನು ಮತ್ತು ನಂತರ ಹವ್ವಳಿಗೆ ಹೀಗೆ ಹೇಳಿದ ಮೂಲಕ ದೇವರಿಗೆ ನೇರವಾಗಿ ಪ್ರತಿರೋಧಿಸಿದನು: “ನೀವು [ನಿಷೇಧಿತ ಹಣ್ಣನ್ನು ತಿಂದರೆ] ಹೇಗೂ ಸಾಯುವುದಿಲ್ಲ. ನೀವು ಇದರ ಹಣ್ಣನ್ನು ತಿಂದಾಗಲೇ ನಿಮ್ಮ ಕಣ್ಣುಗಳು ತೆರೆಯುವವು; ನೀವು ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿತವರಾಗುವಿರಿ; ಇದು ದೇವರಿಗೆ ಚೆನ್ನಾಗಿ ಗೊತ್ತುಂಟು.” (ಆದಿಕಾಂಡ 3:1-5) ಆ ಸ್ತ್ರೀಗೆ ಇದು ತನಗಿದದ್ದಕ್ಕಿಂತ ಏನೋ ಒಂದು ಉತ್ತಮ ವಿಷಯವಾಗಿ ತೋರಿಬಂತು. ಆದರೆ ಅದನ್ನು ನಂಬಿದ ಮೂಲಕ, ಅವಳು ನಿಜವಾಗಿ ಹೆಚ್ಚಿನ ಭದ್ರತೆಯನ್ನು ಹೊಂದಿದಳೋ? ಈ ಪಾಪದಲ್ಲಿ ಅವಳೊಂದಿಗೆ ಜತೆಗೂಡಿದ ಮೂಲಕ ಅವಳ ಗಂಡನು ತನ್ನ ಪಾಡನ್ನು ಸುಧಾರಿಸಿಕೊಂಡನೋ? ಇಲ್ಲ; ಯಾಕಂದರೆ ಅದೆಲ್ಲವು ಸುಳ್ಳಾಗಿತ್ತು. ಅವರು ಸತ್ತಾಗ ಇದು ನಿರ್ವಿವಾದವಾಗಿ ಸ್ಥಿರಗೊಳಿಸಲ್ಪಟ್ಟಿತು ಮತ್ತು ಈ ದಿನಗಳ ತನಕವೂ ಮನುಷ್ಯರು ಸಾಯುತ್ತಾ ಇದ್ದಾರೆ.

22. (ಎ) ಏದೆನಿನಲ್ಲಿ ಯಾವ ಪ್ರಾಮುಖ್ಯ ಪ್ರಶ್ನೆಗಳು ಎಬ್ಬಿಸಲ್ಪಟ್ಟವು, ಮತ್ತು ಇವು ಸೃಷ್ಟಿಯೆಲ್ಲಾದರ ಭದ್ರತೆಯ ಮೇಲೆ ಹೇಗೆ ಪರಿಣಾಮ ಬೀರಿದವು? (ಬಿ) ಯೋಬನ ದಿನಗಳಲ್ಲಿ ಯಾವ ಹೆಚ್ಚಿನ ಆರೋಪವು ಮಾಡಲ್ಪಟ್ಟಿತು, ಮತ್ತು ಅದೇನನ್ನು ಸೂಚಿಸಿತು? (ಯೋಬ 1:7-12; 2:1-5)

22 ಅಲ್ಲಿ ಏದೆನಿನಲ್ಲಿ ಪ್ರಾಮುಖ್ಯ ಪ್ರಶ್ನೆಗಳು ಎಬ್ಬಿಸಲ್ಪಟ್ಟವು, ಮತ್ತು ಅವು ಎಲ್ಲಾ ಸೃಷ್ಟಿಯ ಭದ್ರತೆಯ ಮೇಲೆ ಪರಿಣಾಮ ಬೀರಿವೆ. ದೇವರ ಸತ್ಯತೆಯು ಆಹ್ವಾನಕ್ಕೆ ಕರೆಯಲ್ಪಟ್ಟಿತು, ಮತ್ತು ಇದು ಆತನ ಆಡಳಿತೆಯ ನ್ಯಾಯಯುಕ್ತತೆ ಮತ್ತು ನೀತಿಯುಕ್ತತೆಯನ್ನು ಸಂದೇಹಕ್ಕೆ ಒಳಪಡಿಸಿತು. ಒಳ್ಳೇದು ಯಾವುದು ಕೆಟ್ಟದ್ದು ಯಾವುದು ಎಂಬದರ ಕುರಿತು ಮನುಷ್ಯನು ತನ್ನ ಸ್ವಂತ ನಿರ್ಣಯಗಳನ್ನು ಮಾಡುವುದು ಎಷ್ಟೋ ಒಳ್ಳೆಯದೆಂದೂ ಅವನು ತನ್ನ ಸ್ವಂತ ಮಟ್ಟಗಳನ್ನು ನಿರ್ಮಿಸಿಕೊಂಡು ತನ್ನನ್ನು ತಾನೇ ಆಳಶಕ್ತನೆಂದೂ ಅದು ಸೂಚಿಸಿತು. ಸೈತಾನನ ದಂಗೆ ಮತ್ತು ಮೊದಲನೆ ಮಾನವ ಜೊತೆ ದೇವರಿಗೆ ಕರ್ತವ್ಯನಿಷ್ಠೆಯಲ್ಲಿ ತಪ್ಪುವಿಕೆಯು ದೇವರ ಇತರ ಬುದ್ಧಿಶಕ್ತಿಯುಳ್ಳ ಸೃಷ್ಟಿಜೀವಿಗಳಾದರೋ ಏನು ಮಾಡ್ಯಾರು ಎಂಬ ಪ್ರಶ್ನೆಯನ್ನು ಎಬ್ಬಿಸಿತು. ದೇವರಿಗೆ ಕರ್ತವ್ಯನಿಷ್ಠರಾಗಿ ಉಳಿಯುವವರು ಯಾರಾದರೂ ಇದ್ದರೋ? ಕಾಲಾನಂತರ, ದೇವರನ್ನು ಸೇವಿಸಿದವರು ಸ್ವಾರ್ಥ ಲಾಭಗಳಿಗಾಗಿ ಮಾತ್ರವೇ ಹಾಗೆ ಮಾಡಿದರಲ್ಲದೆ ಪ್ರೀತಿಯಿಂದಲ್ಲ ಎಂದು ಯೋಬನೆಂಬ ಮನುಷ್ಯನ ದಿನಗಳಲ್ಲಿ ಸೈತಾನನು ಆರೋಪವನ್ನೆಬ್ಬಿಸಿದನು. “ಯೋಬನು ದೇವರಲ್ಲಿ ಭಯಭಕ್ತಿಯನ್ನು ಲಾಭವಿಲ್ಲದೆ ಇಟ್ಟಿದ್ದಾನೋ?” ಎಂದು ಸೈತಾನನು ವಾದಿಸಿದನು. (ಯೋಬ 1:9) ದೇವರ ವಿರೋಧಕನಾದ ತಾನು ಅವರನ್ನು ಪರೀಕ್ಷಿಸುವಂತೆ ಬಿಡಲ್ಪಟ್ಟಲ್ಲಿ ಯೆಹೋವನ ಆಳಿಕೆಗೆ ಯಾರೊಬ್ಬನೂ ಕರ್ತವ್ಯನಿಷ್ಠನಾಗಿ ಉಳಿಯಲಾರನೆಂದು ಅವನು ಸೂಚಿಸಿದನು. ಈ ಪ್ರಶ್ನೆಗಳು ಇತ್ಯರ್ಥಗೊಳಿಸಲ್ಪಡುವ ತನಕ ಮಾನವಕುಲವು ಪುನಃ ಎಂದೂ ಪೂರ್ಣ ಭದ್ರತೆಯಲ್ಲಿ ಆನಂದಿಸಲಾರದು. ಆದರೂ ಈ ಪ್ರಶ್ನೆಗಳು ನೀತಿಯನ್ನು ಪ್ರೀತಿಸುವವರೆಲ್ಲರಿಗೆ ಪೂರ್ಣ ತೃಪ್ತಿಕರವಾಗಿ ಇತ್ಯರ್ಥಗೊಳಿಸಲ್ಪಡಸಾಧ್ಯವಿದೆ ಎಂದು ಯೆಹೋವನಿಗೆ ತಿಳಿದಿತ್ತು, ಮತ್ತು ಆ ನೋಟದಲ್ಲಿ ಆತನು ಒದಗಿಸುವಿಕೆಗಳನ್ನು ಮಾಡಿದನು.

ಒಂದು ಭದ್ರವಾದ ಭವಿಷ್ಯತ್ತನ್ನು ಶಕ್ಯವನ್ನಾಗಿ ಮಾಡುವ ಒದಗಿಸುವಿಕೆಗಳು

23. (ಎ) ನಮ್ಮ ಮೊದಲನೆಯ ಹೆತ್ತವರ ಮೇಲೆ ಶಿಕ್ಷೆಯನ್ನು ವಿಧಿಸಿದಾಗ, ಯೆಹೋವನು ನಮಗಾಗಿ ಏನನ್ನು ಶಕ್ಯವನ್ನಾಗಿ ಮಾಡಿದನು? (2 ಪೇತ್ರ 3:9) (ಬಿ) ಮಾನವಕುಲದ ಭವಿಷ್ಯತ್ತಿಗಾಗಿ ಯೆಹೋವನ ಒದಗಿಸುವಿಕೆಯು ಯಾರ ಸುತ್ತಲೂ ಕೇಂದ್ರೀಕರಿಸಿದೆ?

23 ದೇವರ ವಿರುದ್ಧವಾಗಿ ದಂಗೆಯೆದದ್ದಕ್ಕಾಗಿ ನಮ್ಮ ಮೊದಲನೆ ಹೆತ್ತವರ ಮೇಲೆ ಶಿಕ್ಷೆಯು ವಿಧಿಸಲ್ಪಟ್ಟಾಗ, ಯೆಹೋವ ದೇವರು ಅವರ ಇನ್ನೂ ಹುಟ್ಟದ ಸಂತತಿಯನ್ನು ಮರೆತು ಬಿಡಲಿಲ್ಲ. ನಾವು ಪ್ರತಿಯೊಬ್ಬರು ದೈವಿಕ ಆಳಿಕೆಯ ಕೆಳಗೆ ಜೀವಿಸಲು ಬಯಸುತ್ತೇವೋ ಇಲ್ಲವೋ ಎಂಬುದನ್ನು ನಮಗಾಗಿ ನಾವೇ ಆರಿಸಿಕೊಳ್ಳುವುದಕ್ಕೆ ಸಾಧ್ಯವಾಗುವ ಒಂದು ಉದ್ದೇಶವನ್ನು ಆತನು ಪ್ರೀತಿಯಿಂದ ರಚಿಸಿದನು. ಆ ಉದ್ದೇಶವು ದೇವರ ಕುಮಾರನಾದ ಯೇಸು ಕ್ರಿಸ್ತನ ಸುತ್ತಲೂ ಕೇಂದ್ರೀಕರಿಸಿರುತ್ತದೆ.

24. (ಎ) ಮನುಷ್ಯನಾಗಿ ಬರುವ ಮುಂಚೆ ಯೇಸುವಿಗೆ ಯಾವ ರೀತಿಯ ಜೀವಿತವಿತ್ತು? (ಬಿ) ನಾವಾತನನ್ನು ದೇವರೆಂದಾಗಲಿ ದೇವರಿಗೆ ಸಮಾನನೆಂದಾಗಲಿ ಮಾತಾಡಬಾರದೇಕೆ? (ಯೋಹಾನ 17:3)

24 ಈ ಪುತ್ರನು ಸ್ವರ್ಗೀಯ ಕ್ಷೇತ್ರದಲ್ಲಿ ಯೆಹೋವನ ಸೃಷ್ಟಿಯ ಅತಿ ಪ್ರಥಮ ವ್ಯಕ್ತಿಯಾಗಿದ್ದನು. “ಭೂಪರಲೋಕಗಳಲ್ಲಿರುವ ದೃಶ್ಯಾದೃಶ್ಯವಾದವುಗಳೆಲ್ಲವೂ ಆತನ ಮೂಲಕ ಸೃಷ್ಟಿಸಲ್ಪಟ್ಟವು.” ಎಂದು ಬೈಬಲು ನಮಗೆ ತಿಳಿಸುತ್ತದೆ. (ಕೊಲೊಸ್ಸೆ 1:15-17) ಆದರೆ ದೇವರು ನೇಮಿಸಿದ ಸಮಯದಲ್ಲಿ, ಆತನ ಪುತ್ರನು ತನ್ನ ಸ್ವರ್ಗೀಯ ಮಹಿಮೆಯನ್ನು ಹಿಂದೆಬಿಟ್ಟು ಭೂಮಿಯ ಮೇಲೆ ಮನುಷ್ಯನಾಗಿ ಅದ್ಭುತಕರವಾಗಿ ಜನಿಸಿದನು. ಈ ಜನನದ ಕುರಿತು ಮುಂಚಿತವಾಗಿ ಪ್ರಕಟಿಸುವಂತೆ ಕಳುಹಿಸಲ್ಪಟ್ಟ ದೂತ ಗಬ್ರಿಯೇಲನು, ಹುಟ್ಟಲಿರುವ ಮಗುವು ದೇವರು ಎಂಬದಾಗಿ ಹೇಳಲಿಲ್ಲ. ಬದಲಿಗೆ, ಅದನ್ನು “ದೇವರ ಮಗ”ನ ಜನನವಾಗಿ ಪ್ರಕಟಿಸಿದನು. (ಲೂಕ 1:35) ಯೇಸು ತಾನೇ ತನ್ನನ್ನು ದೇವರೆಂಬದಾಗಿ ಹೇಳಿಕೊಳ್ಳಲಿಲ್ಲ. ತನಗಾಗಿ ಆರಾಧನೆಯನ್ನು ಹವಣಿಸಿದ ಸೈತಾನನಂತೆ ಅವನು ವರ್ತಿಸಲಿಲ್ಲ. ಸತ್ಯ ಪೂರ್ವಕವಾಗಿ ಆತನಂದದ್ದು: “ತಂದೆಯು ನನಗಿಂತ ದೊಡ್ಡವನು.” (ಯೋಹಾನ 14:28) ಸತ್ಯ ಸ್ವರೂಪನಾದ ದೇವರೊಂದಿಗೆ ಒಂದು ಯೋಗ್ಯ ಸಂಬಂಧದಲ್ಲಿ ಆನಂದಿಸಬೇಕಾದರೆ, ನಾವಾತನ ಪುತ್ರನನ್ನು ದೇವರೆಂದಾಗಲಿ ದೇವರಿಗೆ ಸಮಾನನೆಂದಾಗಲಿ ಮಾತಾಡುತ್ತಾ ಒಂದು ಭಿನ್ನವಾದ ಸ್ಥಾನವನ್ನು ಆತನಿಗೀಯಬಾರದು.

25. ಭೂಮಿಯಲ್ಲಿ ಮನುಷ್ಯನಾಗಿದ್ದಾಗ ಯೇಸು ಮಹಾ ಒತ್ತಡದ ಕೆಳಗೆ ತನ್ನ ಯಥಾರ್ಥತೆಯನ್ನು ರುಜುಪಡಿಸಿದ ಮೂಲಕ ಏನು ಪೂರೈಸಲ್ಪಟ್ಟಿತು?

25 ಇಲ್ಲಿ ಭೂಮಿಯ ಮೇಲೆ ಹಿಂದೆಂದೂ ಅನುಭವಿಸದಿದ್ದಂಥ ಅನುಭವಗಳನ್ನು ಯೇಸುವು ಅನುಭವಿಸಿದನು. ಪರಲೋಕದಲ್ಲಿರುವಾಗ ತನ್ನ ತಂದೆಯ ಚಿತ್ತವನ್ನು ಮಾಡುವುದರಲ್ಲಿ ಅವನು ದೋಷವಿಲ್ಲದವನಾಗಿದ್ದನು. ಆದರೆ ಭೂಮಿಯಲ್ಲಿ ಮನುಷ್ಯನಾಗಿರುವಾಗ ವಿಶೇಷವಾಗಿ ವೇದನೆಗೂ ಅಪಾತ್ರ ಅಪಮಾನಕ್ಕೂ ಅವನು ಗುರಿಯಾದರೆ, ತನ್ನ ಕರ್ತವ್ಯನಿಷ್ಠೆಯನ್ನು ರುಜುಪಡಿಸುತ್ತಾ ಮುಂದರಿಯುವನೋ? ಪರೀಕ್ಷೆಯ ಕೆಳಗೆ ಯಾರೊಬ್ಬನೂ, ದೇವರ ಈ ಪ್ರಧಾನ ಪುತ್ರನು ಸಹ, ನಂಬಿಗಸ್ತರಾಗಿ ಉಳಿಯದಿರುವಂತೆ ರುಜುಪಡಿಸಲು ಸೈತಾನನು ನಿರ್ಧಾರವನ್ನು ಮಾಡಿದ್ದನು. ಆದರೆ ಯೇಸುವು ದೇವರ ವಾಕ್ಯಕ್ಕೆ ಕರ್ತವ್ಯನಿಷ್ಠೆಯಿಂದ ಅಂಟಿಕೊಂಡನು, ತನ್ನ ಮಾರ್ಗದರ್ಶಿಯಾಗಿ ಅದರ ಮೇಲೆ ಆತುಕೊಂಡನು, ಶೋಧನೆಗಳನ್ನು ಎದುರಿಸುವುದರಲ್ಲಿ ಅದನ್ನು ಉಲ್ಲೇಖಿಸಿದನು. ಕೆಟ್ಟದ್ದನ್ನು ಮಾಡಲು ಒತ್ತಡವು ಬಂದಾಗ ಆತನು ದೃಢತೆಯಿಂದ ತಿರಸ್ಕರಿಸುತ್ತಾ ಅಂದದ್ದು: “ಸೈತಾನನೇ, ನೀನು ತೊಲಗಿಹೋಗು. ನಿನ್ನ ದೇವರಾಗಿರುವ ಯೆಹೋವನಿಗೆ ಅಡ್ಡಬಿದ್ದು ಆತನೊಬ್ಬನನ್ನೇ ಆರಾಧಿಸಬೇಕು ಎಂಬದಾಗಿ ಬರೆದದೆ.” (ಮತ್ತಾಯ 4:10) ಮರಣದ ತನಕವೂ ಯೇಸುವು ಆಳುವವನಾದ ಯೆಹೋವನಿಗೆ ತನ್ನ ಕರ್ತವ್ಯನಿಷ್ಠೆಯನ್ನು ಕಾಪಾಡಿಕೊಂಡನು, ಮತ್ತು ಆದಾಮನು ಎದುರಿಸಿದ್ದ ಯಾವುದೇ ಪರೀಕ್ಷೆಗಿಂತಲೂ ಅತ್ಯಂತ ತೀಕ್ಷೈ ಪರೀಕ್ಷೆಗಳ ಕೆಳಗೆ ಆತನದನ್ನು ಮಾಡಿದನು. ಈ ರೀತಿಯಲ್ಲಿ ಯೇಸುವು ಸೈತಾನನಿಂದ ಮಾಡಲ್ಪಟ್ಟ ಸುಳ್ಳಾರೋಪಗಳಿಂದ ತನ್ನ ತಂದೆಯ ಹೆಸರನ್ನು ಸ್ಫುಟಗೊಳಿಸಿದನು. ತನ್ನ ಮಾದರಿಯ ಮೂಲಕ, ಶೋಧನೆಗಳನ್ನು ಜಯಿಸುವುದು ಹೇಗೆಂದೂ ಮತ್ತು ಯೆಹೋವನ ಆಡಳಿತೆಯ ಕರ್ತವ್ಯನಿಷ್ಠ ಪ್ರತಿಪಾದಕರು ನಾವಾಗಿದ್ದೇವೆಂಬದನ್ನು ಪ್ರದರ್ಶಿಸುವುದು ಹೇಗೆಂದೂ ಯೇಸು ನಮಗೆ ತೋರಿಸಿಕೊಟ್ಟನು.

26. ಪರಿಪೂರ್ಣ ಮನುಷ್ಯನಾದ ಯೇಸುವಿನ ಮರಣದಿಂದ ಬೇರೇನು ಲಭಿಸಿದೆ, ಮತ್ತು ಅದು ನಮಗೆ ಏನನ್ನು ಸಂಭಾವ್ಯವಾಗಿ ಮಾಡುತ್ತದೆ? (1 ತಿಮೊಥೆಯ 2:3-6)

26 ಆದರೂ ದೇವರ ಕುಮಾರನಿಂದ ನಮಗಾಗಿ ಒದಗಿಸಲ್ಪಟ್ಟದ್ದು ಕೇವಲ ಒಂದು ಒಳ್ಳೇ ಮಾದರಿ ಮಾತ್ರವೇ ಅಲ್ಲ. “ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡುಕೊಡುವದಕ್ಕೂ” ಆತನು ಬಂದನು ಎಂದು ಯೇಸು ತಾನೇ ವಿವರಿಸಿದ್ದನು. (ಮಾರ್ಕ 10:45) ಮಾನವಕುಲವು ಪಾಪದಿಂದಲೂ, ಪಾಪದ ಫಲವಾದ ಅನಾರೋಗ್ಯ ಮತ್ತು ಮರಣದಿಂದಲೂ ಎಂದಾದರೂ ಬಿಡುಗಡೆ ಹೊಂದಲಿಕ್ಕಿರುವುದಾದರೆ ಅದು ಅತ್ಯಾವಶ್ಯಕವಾಗಿತ್ತು. ಆದಾಮನಿಂದ ಕಳೆದುಕೊಳ್ಳಲ್ಪಟ್ಟ ಸಂಪೂರ್ಣ ಮಾನವ ಜೀವದೊಂದಿಗೆ ಅನುರೂಪವಾಗುವುದಕ್ಕೆ, ದೇವರ ನಿಯಮಕ್ಕನುಸಾರ, ಪರಿಪೂರ್ಣ ಮಾನವ ಜೀವವೇ ವಿಮೋಚನಾ ಬೆಲೆಯಾಗಿತ್ತು. ಆದಾಮನ ಸಂತತಿಯವನಾದ ಯಾವನೇ ಅಸಂಪೂರ್ಣ ವ್ಯಕ್ತಿಯು ಅದನ್ನೊದಗಿಸ ಶಕ್ತನಿರಲಿಲ್ಲ. ಪ್ರೀತಿಯಿಂದ ಯೆಹೋವನು ತಾನೇ ಆ ಒದಗಿಸುವಿಕೆಯನ್ನು ಮಾಡಿದನು. ಆತನು ತನ್ನ ಸ್ವಂತ ಪುತ್ರನನ್ನು ಭೂಮಿಗೆ ಕಳುಹಿಸಿದನು. ಅನಂತರ, ಯೇಸುವಿನ ಮರಣವನ್ನು ಹಿಂಬಾಲಿಸಿ, ಅವನನ್ನು ಪುನಃ ಜೀವಿತನಾಗಿ ದೇವರು ಎಬ್ಬಿಸಿದನು, ಆದರೆ ಈಗ ಆತ್ಮ ವ್ಯಕ್ತಿಯಾಗಿ, ಮತ್ತು ಆತನು ಮಾನವಕುಲದ ಪರವಾಗಿ ಯಜ್ಞವಾಗಿ ಕೊಟ್ಟ ಮನುಷ್ಯ ಜೀವದ ಬೆಲೆಯನ್ನು ದೇವರು ಸ್ವೀಕರಿಸಿದನು. ಇದು ನಮಗೆ ಆದಾಮನು ಏನನ್ನು ಕಳೆದುಕೊಂಡನೋ ಅದನ್ನು ಪುನಃ ಸಂಪಾದಿಸುವ ಸಂದರ್ಭವನ್ನು ತೆರೆಯಿತು. ಬೈಬಲು ವಿವರಿಸುವ ಪ್ರಕಾರವೇ: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯ ಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” (ಯೋಹಾನ 3:16) ನಾವು ದೇವಕುಮಾರನಲ್ಲಿ ಕೇವಲ ನಂಬಿಕೆಯನ್ನಿಟ್ಟವರಾಗಿ, ಆತನು ಕಲಿಸಿದ್ದನ್ನು ಕಲಿತು, ಅದರೊಂದಿಗೆ ಪೂರ್ಣ ಹೊಂದಿಕೆಯಲ್ಲಿ ಜೀವಿಸುವುದಾದರೆ ಎಂಥ ಆಶ್ಚರ್ಯಕರ ಪ್ರತೀಕ್ಷೆಗಳು ನಮಗೆ ಸಂಭವನೀಯವಾಗುತ್ತವೆ!

27. (ಎ) ಯೇಸುವು ರಾಜಕೀಯ ವ್ಯವಹಾರಗಳಲ್ಲಿ ಒಳಗೂಡಿರಲಿಲ್ಲವೇಕೆ? (ಯೋಹಾನ 18:36) (ಬಿ) ಸರಕಾರಗಳ ಕಡೆಗೆ ಯಾವ ಮನೋಭಾವವಿಡುವಂತೆ ಯೇಸು ತನ್ನ ಹಿಂಬಾಲಕರಿಗೆ ಕಲಿಸಿದನು? (ಮತ್ತಾಯ 22:17-21)

27 ಅಂಥ ನಂಬಿಕೆಯಲ್ಲಿ ಯೆಹೋವನು ತನ್ನ ಕುಮಾರನಿಗೆ ಸರಕಾರದಲ್ಲಿ ಕೊಟ್ಟಿರುವ ಪಾತ್ರಕ್ಕೆ ಗಣ್ಯತೆಯೂ ಸೇರಿರುತ್ತದೆ. ಯೇಸುವು ತನ್ನ ದಿನಗಳ ರಾಜಕೀಯ ಕಾರ್ಯಾದಿಗಳಲ್ಲಿ ಒಳಗೂಡಿರಲಿಲ್ಲ; ಯಾವ ಮಾನವ ಸರಕಾರವಾದರೂ ಯೆಹೋವನ ಆಡಳಿತೆಯನ್ನು ಎತ್ತಿ ಹಿಡಿದಿಲ್ಲವೆಂದು ಆತನಿಗೆ ತಿಳಿದಿತ್ತು. ದೇವರಲ್ಲಿ ನಂಬಿಕೆಯ ಕುರಿತು ಅಂಥ ಅಧಿಪತಿಗಳು ಏನನ್ನೇ ಹೇಳಲಿ, ಯಾವುದು ಒಳ್ಳೇದು ಯಾವುದು ಕೆಟ್ಟದ್ದೆಂಬ ವಿಷಯದಲ್ಲಿ ಅವರೆಲ್ಲರೂ ತಮ್ಮ ಸ್ವಂತ ಮಟ್ಟಗಳನ್ನು ಸ್ಥಾಪಿಸಿರುತ್ತಾರೆ. ಹೀಗೆ, ಅವರದನ್ನು ಅಂಗೀಕರಿಸಲಿ, ಇಲ್ಲದಿರಲಿ, ಅವರೆಲ್ಲರೂ ದೇವರ ವಿರೋಧಿಯಾದ ಪಿಶಾಚನಾದ ಸೈತಾನನ ಮಾರ್ಗವನ್ನು ಹಿಂಬಾಲಿಸುತ್ತಿದ್ದಾರೆ, ಬೈಬಲು ಅವನನ್ನೇ “ಇಹಲೋಕಾಧಿಪತಿ” ಯೆಂದು ಗುರುತಿಸಿದೆ. (ಯೋಹಾನ 14:30) ದೇವರು ಎಷ್ಟರ ತನಕ ಮಾನವ ಸರಕಾರಗಳನ್ನು ಇರುವಂತೆ ಬಿಡುತ್ತಾನೋ ಆ ತನಕ ತಮ್ಮ ತೆರಿಗೆಗಳನ್ನು ಸಲ್ಲಿಸುವಂತೆಯೂ ನಿಯಮಪಾಲಕರಾಗಿ ಇರುವಂತೆಯೂ ಯೇಸು ತನ್ನ ಶಿಷ್ಯರಿಗೆ ಕಲಿಸಿದನು. ಆದರೆ ಪರಲೋಕದಿಂದ ಕಾರ್ಯಭಾರ ನಡಿಸುತ್ತಾ ಭೂಮಿಯ ಮಾನವರೆಲ್ಲರ ಮೇಲೆ ಅಧಿಕಾರ ನಡಿಸಲಿರುವ ಒಂದು ನಿಜವಾದ ನೀತಿಯ ಸರಕಾರವಾದ ದೇವರ ರಾಜ್ಯದ ಮೂಲಕ ಮಾತ್ರವೇ ಭದ್ರತೆಯ ಭವಿಷ್ಯತ್ತಿನ ಏಕ ಮಾತ್ರ ನಿರೀಕ್ಷೆಯಿದೆಂದು ಆತನು ಸ್ಪಷ್ಟಪಡಿಸಿದನು. ಆದುದರಿಂದ ಅವರು ದೇವರಿಗೆ ಹೀಗೆಂದು ಪ್ರಾರ್ಥಿಸಲು ಆತನು ಕಲಿಸಿದನು: “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.” ಬೈಬಲಿನಲ್ಲಿ ತಿಳಿಸಿರುವ ಪ್ರಕಾರ ಆ ರಾಜ್ಯದ ನಿಯಮಗಳಿಗೆ ಹೊಂದಿಕೆಯಲ್ಲಿ ಜೀವಿಸುವಂತೆ ಯೇಸು ಅವರನ್ನು ಉತ್ತೇಜಿಸಿದನು. ಮತ್ತು “ಈ ರಾಜ್ಯದ ಸುವಾರ್ತೆಯನ್ನು” ಎಲ್ಲಾ ಕಡೆಗಳಲ್ಲಿರುವ ಜನರಿಗೆ ಸಾರುವಂತೆ ಆತನು ಅವರಿಗೆ ಆಜ್ಞೆಯನ್ನಿತ್ತನು.—ಮತ್ತಾಯ 6:10; 24:14.

28. ದೇವರ ರಾಜ್ಯವೆಂದರೇನು, ಮತ್ತು ಅದಕ್ಕಾಗಿ ನಾವು ನಮ್ಮ ಗಣ್ಯತೆಯನ್ನು ಹೇಗೆ ತೋರಿಸಬಹುದು? (ಮತ್ತಾಯ 6:33)

28 ಆ ರಾಜ್ಯವು ಆತನ ಚಿತ್ತವನ್ನು ನೆರವೇರಿಸಲಿರುವ ಯೆಹೋವನ ಕಾರ್ಯಭಾರಿಯಾಗಿದೆ. ಅದು ಬುದ್ಧಿಶಕ್ತಿಯ ಸೃಷ್ಟಿ ಜೀವಿಗಳನ್ನೆಲ್ಲಾ ಯೆಹೋವನ ಪ್ರಭುತ್ವದ ಕೆಳಗೆ ಪುನಃ ಒಂದುಗೂಡಿಸುವುದು. ಆ ಸ್ವರ್ಗೀಯ ಸರಕಾರದ ಸದಸ್ಯತನದಲ್ಲಿ ಯೆಹೋವನ ಸಾರ್ವಭೌಮತ್ವಕ್ಕೆ, ಆತನ ಆಡಳಿತೆಗೆ ತಮ್ಮ ಕರ್ತವ್ಯನಿಷ್ಠ ಬೆಂಬಲವನ್ನು ರುಜುಪಡಿಸಿದವರಾದ ಈ ಭೂಮಿಯಿಂದ ತೆಗೆದುಕೊಳ್ಳಲ್ಪಟ್ಟ ವ್ಯಕ್ತಿಗಳೂ ಇರುವರು. ಅವರು “ಚಿಕ್ಕ ಹಿಂಡು” ಎಂದು ಕರೆಯಲ್ಪಟ್ಟಿದ್ದಾರೆ. (ಲೂಕ 12:32) ಅವರು “ಭೂಲೋಕದಿಂದ ಕೊಂಡುಕೊಳ್ಳಲ್ಪಟ್ಟ ಲಕ್ಷದ ನಾಲ್ವತ್ತುನಾಲ್ಕು ಸಾವಿರ” ಮಂದಿಗೆ ಪರಿಮಿತಿಗೊಳಿಸಲ್ಪಟ್ಟಿದ್ದಾರೆಂದು ಬೈಬಲಿನ ಕೊನೆಯ ಪುಸ್ತಕವು ತಿಳಿಸುತ್ತದೆ. (ಪ್ರಕಟನೆ 14:1, 3) ರಾಜ್ಯಾಧಿಕಾರವು ಯಾರಿಗೆ ಒಪ್ಪಿಸಲ್ಪಟ್ಟಿದೆಯೋ ಅದರ ಪ್ರಧಾನ ವ್ಯಕ್ತಿಯಾದರೋ ದೇವರ ಸ್ವಂತ ಕುಮಾರನಾದ ಯೇಸು ಕ್ರಿಸ್ತನಾಗಿದ್ದಾನೆ. ದೈವಿಕ ಪ್ರವಾದನೆಯ ನೆರವೇರಿಕೆಯಲ್ಲಿ, “ಸಕಲಜನಾಂಗ ಕುಲಭಾಷೆಗಳವರು ಅವನನ್ನು ಸೇವಿಸಲೆಂದು ದೊರೆತನವೂ ಘನತೆಯೂ ರಾಜ್ಯವೂ” ಯಾರಿಗೆ ಯೆಹೋವನಿಂದ ಕೊಡಲ್ಪಟ್ಟಿತೋ ಅವನು ಆತನಾಗಿದ್ದಾನೆ. (ದಾನಿಯೇಲ 7:13, 14) ಆ ದೈವಿಕ ಏರ್ಪಾಡಿನೊಂದಿಗೆ ಪೂರ್ಣ ಹೊಂದಿಕೆಯಲ್ಲಿ ಜೀವಿಸುವುದು ನಮ್ಮಲ್ಲಿ ಪ್ರತಿಯೊಬ್ಬರಿಗೆ ಅತ್ಯಾವಶ್ಯಕವಾಗಿದೆ. ಯಾರು ಹಾಗೆ ಮಾಡಲು ನಿರಾಕರಿಸುತ್ತಾರೋ ಅವರು ಇತರರ ಭದ್ರತೆಯನ್ನು ಕೆಡಿಸಲು ಸದಾ ಬಿಡಲ್ಪಡಲಾರರು.

29. (ಎ) ಎಷ್ಟು ಕಾಲದಿಂದ ಮನುಷ್ಯ ಆಡಳಿತೆಯು ನಡಿಯುತ್ತಾ ಇದೆ, ಮತ್ತು ಅದೀಗ ಹೆಚ್ಚು ಕಾಲ ಉಳಿಯಲಾರದೇಕೆ? (ಯೆರೆಮೀಯ 17:5) (ಬಿ) ಇದು ಸೈತಾನನಿಗೆ ಯಾವ ಅರ್ಥದಲ್ಲಿರುವುದು? (ಸಿ) ಮಾನವ ಸರಕಾರಗಳಿಗೆ ಏನು ಸಂಭವಿಸಲಿರುವುದು? (ಡಿ) ದುಷ್ಟ ಜನರಿಗೆ ಏನಾಗಲಿರುವುದು? (ಇ) ಯೆಹೋವನ ಆಡಳಿತೆಯ ಕಡೆಗೆ ಉದಾಸೀನದಿಂದಿರುವವರಿಗೆ ಏನು ಸಂಭವಿಸುವುದು? (2 ಥೆಸಲೊನೀಕ 1:6-9)

29 ಏದೆನಿನಲ್ಲಾದ ಆ ದಂಗೆಯಂದಿನಿಂದ ಮನುಷ್ಯಾಡಳಿತೆಯ ಫಲವನ್ನುಣ್ಣುವುದಕ್ಕೆ ಮಾನವರಿಗೆ ಸುಮಾರು ಆರು ಸಾವಿರ ವರ್ಷಗಳು ದೊರೆತಿರುತ್ತವೆ. ಅದು ಆಪತ್ಕಾರಕವಾಗಿತ್ತು. ಯಥೋಚಿತವಾಗಿಯೇ, ದೇವರು ತನ್ನ ತೀರ್ಪನ್ನು ನಿರ್ವಹಿಸಲಿರುವ ಕಾಲಾವಧಿಯೂ ಇದೇ ಸಂತತಿಯಲ್ಲಿ ಎಂಬದಾಗಿ ಬೈಬಲು ಎತ್ತಿ ಹೇಳಿದೆ. ಇದು ಮಾನವಕುಲದ ಮುಖ್ಯ ಶತ್ರುವಾದ ಪಿಶಾಚನಾದ ಸೈತಾನನಿಗೆ ಯಾವ ಅರ್ಥದಲ್ಲಿರುವುದು? ಅವನೂ ಅವನ ದೆವ್ವಗಳೂ “ಅಧೋಲೋಕಕ್ಕೆ ದೊಬ್ಬಲ್ಪಟ್ಟು” ಪೂರ್ಣ ಚಟುವಟಿಕೆ ಹೀನರಾಗಿ ಮಾಡಲ್ಪಡುವರು. (ಪ್ರಕಟನೆ 20:1-3) ದೇವರ ತೀರ್ಪಿನ ನಿರ್ವಹಣೆಯು ಮಾನವ ಸರಕಾರಗಳಿಗೆ ಯಾವ ಅರ್ಥದಲ್ಲಿರುವುದು? “ರಾಜ್ಯವು  . .  [ಮನುಷ್ಯರ] ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮ ಮಾಡಿ ಶಾಶ್ವತವಾಗಿ ನಿಲ್ಲುವದು.” (ದಾನಿಯೇಲ 2:44) ಸುಳ್ಳುಗಾರರಿಗೂ ಕಳ್ಳರಿಗೂ ಬಲಾತ್ಕಾರ ಕೃತ್ಯ ನಡಿಸುವವರಿಗೂ ಅದು ಯಾವ ಅರ್ಥದಲ್ಲಿರುವುದು? “ದುಷ್ಟನು ಕಾಣಿಸದೆ ಹೋಗುವನು. ಅವನಿದ್ದ ಸ್ಥಳದಲ್ಲಿ ಎಷ್ಟು ವಿಚಾರಿಸಿದರೂ ಅವನು ಸಿಕ್ಕುವದೇ ಇಲ್ಲ.” (ಕೀರ್ತನೆ 37:10) ಯೆಹೋವನ ಆಡಳಿತೆಯನ್ನು ಉದಾಸೀನತೆಯಿಂದ ದುರ್ಲಕ್ಷ್ಯ ಮಾಡುವವರಿಗೆ ಅದು ಯಾವ ಅರ್ಥದಲ್ಲಿದೆ? ನೋಹನ ದಿನಗಳಲ್ಲಿ “ಪ್ರಳಯದ ನೀರು ಬಂದು ಎಲ್ಲರನ್ನು ಬಡುಕೊಂಡು ಹೋಗುವ ತನಕ ಏನೂ ತಿಳಿಯದೆ ಇದ್ದರು,” ಅಂತೆಯೇ ದೇವರು ತೀರ್ಪನ್ನು ನಿರ್ವಹಿಸುವುದಕ್ಕಾಗಿ ತನ್ನ ಪುತ್ರನನ್ನು ಉಪಯೋಗಿಸುವ ಈ ಸಮಯದಲ್ಲೂ ಇರುವುದು.—ಮತ್ತಾಯ 24:39.

30 ಆದರೆ ಯಾರು ಯೆಹೋವನ ಆಡಳಿತೆಯ ಕರ್ತವ್ಯನಿಷ್ಠ ಬೆಂಬಲಿಗರಾಗಿದ್ದಾರೆಂದು ರುಜು ಪಡಿಸುತ್ತಾರೋ ಅವರಿಗೆ ಇವೆಲ್ಲವೂ ಯಾವ ಅರ್ಥದಲ್ಲಿರುವುದು? ದೇವರ ನೀತಿಯ ನೂತನ ವ್ಯವಸ್ಥೆಯೊಳಗೆ ವಿಮೋಚನೆಯ ಅರ್ಥದಲ್ಲಿರುವುದು. ಇದು ಜೀವಿತದ ಮೇಲೆ ಬೀರುವ ಪರಿಣಾಮದ ಕುರಿತಾದ ಒಂದು ದೃಷ್ಟಾಂತವು ಪ್ರಾಚೀನ ಇಸ್ರಾಯೇಲ್‌ ಜನಾಂಗದೊಂದಿಗೆ ದೇವರ ವ್ಯವಹಾರಗಳಲ್ಲಿ ಒದಗಿಸಲ್ಪಟ್ಟಿದೆ. ದೇವರು ಮೋಶೆಗೆ ಏನನ್ನುವಂತೆ ಆಜ್ಞಾಪಿಸಿದ್ದನೋ ಅದೇ ಅಲ್ಲಿ ಸಂಭವಿಸಿತ್ತು: “ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವಾಸ್ತ್ಯವಾಗಿ ಕೊಡುವ ಆ ದೇಶದಲ್ಲಿ ಮನೆಮಾಡಿಕೊಂಡಿರುವಾಗ ನಿಮ್ಮ ಸುತ್ತಲು ಶತ್ರುಗಳು ಯಾರೂ ಇಲ್ಲದಂತೆ ಯೆಹೋವನು ಮಾಡಿದ್ದರಿಂದ ನೀವು ನಿರ್ಭಯವಾಗಿ” ಇರುವಿರಿ. (ಧರ್ಮೋಪದೇಶಕಾಂಡ 12:10) ಅರಸನಾದ ಸೊಲೊಮೋನನ ಆಳಿಕೆಯ ಕಾಲದಲ್ಲಿದ್ದ ಪರಿಸ್ಥಿತಿಯ ಕುರಿತು ಬರೆಯಲ್ಪಟ್ಟದ್ದು: “ದಾನ್‌ ಪಟ್ಟಣ [ದೂರದ ಉತ್ತರಕ್ಕೆ] ಮೊದಲುಗೊಂಡು ಬೇರ್ಷೆಬ [ದಕ್ಷಿಣದಲ್ಲಿ]ದ ವರೆಗಿರುವ ಸಮಸ್ತ ಇಸ್ರಾಯೇಲ್ಯರೂ ಯೆಹೂದ್ಯರೂ ತಮ್ಮತಮ್ಮ ದ್ರಾಕ್ಷಾಲತೆ, ಅಂಜೂರಗಿಡ ಇವುಗಳ ನೆರಳಿನಲ್ಲಿ ವಾಸಿಸುತ್ತಾ ಸುರಕ್ಷಿತರಾಗಿದ್ದರು.” (1 ಅರಸುಗಳು 4:25) ದೇವರ ನಿಯಮಕ್ಕೆ ಹೊಂದಿಕೆಯಲ್ಲಿ, ಪ್ರತಿಯೊಂದು ಕುಟುಂಬಕ್ಕೆ ವಾಸಿಸುವುದಕ್ಕಾಗಿಯೂ ವ್ಯವಸಾಯ ಮಾಡುವುದಕ್ಕಾಗಿಯೂ ಅದರ ಸ್ವಂತ ಜಮೀನು ಇತ್ತು. ದೇವರ ನಿಯಮಕ್ಕೆ ವಿಧೇಯತೆಯು ಆತನ ಆಶೀರ್ವಾದದಲ್ಲಿ ಪರಿಣಮಿಸಿತು, ಮತ್ತು ಆತನು ವಾಗ್ದಾನಿಸಿದ ಪ್ರಕಾರವೇ “ಮುಂಗಾರು ಹಿಂಗಾರು ಮಳೆ”ಯೂ ಅದರಲ್ಲಿ ಸೇರಿತ್ತು. (ಧರ್ಮೋಪದೇಶಕಾಂಡ 11:13-15) ಹೀಗೆ ಆರ್ಥಿಕ ಭದ್ರತೆಯೂ ಅಲ್ಲಿತ್ತು.

31. ಕೀರ್ತನೆ 72 ರಲ್ಲಿ ವರ್ಣಿಸಲ್ಪಟ್ಟ ಪ್ರಕಾರ ಭದ್ರತೆಗೆ ನೆರವಾಗುವ ಯಾವ ಪರಿಸ್ಥಿತಿಗಳು ದೇವರ ರಾಜ್ಯದ ಕೆಳಗೆ ಭೂಮಿಯಲ್ಲೆಲ್ಲೂ ನೆಲೆಸುವವು?

31 ಇದು ಬೈಬಲಿನಲ್ಲಿ ದಾಖಲೆಯಾಗಿರುವುದು ಕೇವಲ ಚಾರಿತ್ರಿಕ ವರದಿಯನ್ನಿಡುವುದಕ್ಕಾಗಿ ಅಲ್ಲ ಬದಲಾಗಿ ನಮ್ಮ ಪ್ರೋತ್ಸಾಹನೆಗಾಗಿಯೇ. ಯಾರನ್ನು ಸಮಸ್ತ ಭೂಮಿಗೆ ಅರಸನಾಗಿ ಯೆಹೋವನು ನೇಮಿಸಿದ್ದಾನೋ ಆ ಕರ್ತನಾದ ಯೇಸು ಕ್ರಿಸ್ತನು ದೇವರ ವಾಕ್ಯದಲ್ಲಿ “ಸೊಲೊಮೋನನಿಗಿಂತಲೂ ಹೆಚ್ಚಿನವನು” ಎಂದು ಕರೆಯಲ್ಪಟ್ಟಿದ್ದಾನೆ. (ಲೂಕ 11:31) ಕ್ರಿಸ್ತನ ಆಳಿಕೆಯ ಕೆಳಗೆ, ಸೊಲೊಮೋನನ ಆಳಿಕೆಯಲ್ಲಿ ಯೆಹೂದ ಇಸ್ರಾಯೇಲಲ್ಲಿ ನೆಲೆಸಿದ್ದ ಪರಿಸ್ಥಿತಿಗಿಂತಲೂ ಉತ್ತಮವಾದದ್ದು ಇಡೀ ಭೂಲೋಕಕ್ಕೆ ವಿಸ್ತರಿಸಲಿರುವುದು. ಆ ಆಶೀರ್ವಾದಗಳನ್ನು ಕೀರ್ತನೆ 72 ಈ ರೀತಿಯಲ್ಲಿ ಅಂದವಾಗಿ ವರ್ಣಿಸಿದೆ: “ಅವನ ದಿವಸಗಳಲ್ಲಿ ನೀತಿಯು ವೃದ್ಧಿಯಾಗಲಿ; ಚಂದ್ರನಿರುವ ವರೆಗೂ ಪರಿಪೂರ್ಣ ಸೌಭಾಗ್ಯವಿರಲಿ. ಅವನು ಸಮುದ್ರದಿಂದ ಸಮುದ್ರದ ವರೆಗೂ ಯೂಫ್ರೇಟೀಸ್‌ ನದಿಯಿಂದ ಭೂಮಿಯ ಕಟ್ಟಕಡೆಯ ವರೆಗೂ ಆಳಲಿ. ಕುಯುಕ್ತಿ ಬಲಾತ್ಕಾರಗಳಿಗೆ ತಪ್ಪಿಸಿ ಅವರನ್ನು ಕಾಯುವನು; ಅವರ ಜೀವವು ಅವನ ದೃಷ್ಟಿಯಲ್ಲಿ ಅಮೂಲ್ಯವಾಗಿರುವುದು. ದೇಶದಲ್ಲಿ ಬೆಟ್ಟಗಳ ಮೇಲೆಲ್ಲಾ ಬೆಳೆಯು ಸಮೃದ್ಧಿಯಾಗಲಿ.” (ಕೀರ್ತನೆ 72:7, 8, 14, 16) ಆಗ ನೆಲೆಸಲಿರುವ ಪರಿಸ್ಥಿತಿಯು ಯೇಸುವು ರಾಜ್ಯಾಧಿಕಾರದಲ್ಲಿ ಬರುವಾಗ ಜ್ಞಾಪಿಸಲ್ಪಡಲು ವಿನಂತಿಸಿದ್ದ ಒಬ್ಬ ಮನುಷ್ಯನಿಗೆ ಯೇಸು ಕ್ರಿಸ್ತನಿಂದ ಏನೆಂದು ವರ್ಣಿಸಲ್ಪಟ್ಟಿತ್ತೋ ಅದರಂತಿರುವುದು. ಯೇಸು ಅವನಿಗಂದದ್ದು: “ನೀನು ನನ್ನ ಸಂಗಡ ಪರದೈಸದಲ್ಲಿರುವಿ.”—ಲೂಕ 23:43.

32. (ಎ) ಈ ಮಹಾ ಒದಗಿಸುವಿಕೆಗಳಿಂದ ಮೃತರು ಸಹ ಪ್ರಯೋಜನ ಹೊಂದಶಕ್ತರಾಗಿರುವುದು ಹೇಗೆ? (ಬಿ) ಪುನರುತ್ಥಾನಗೊಂಡವರು ಎಲ್ಲಿಂದ ಮರಳಿ ಬರುವರು? (ಯೆಹೆಜ್ಕೇಲ 18:4; ಯೋಬ 14:13)

32 ಆದಾಮನಿಂದ ಪಾಪವನ್ನು ಬಾಧ್ಯತೆಯಾಗಿ ಹೊಂದಿದರಿಂದಾಗಿ ಈ ಮೊದಲೇ ಮೃತರಾದವರು ಸಹ ಆಗ ಮರೆತುಬಿಡಲ್ಪಡರು. ಅವರು ಕೂಡ ದೇವರ ಪುತ್ರನ ವಿಮೋಚನಾ ಯಜ್ಞದಿಂದ ಆವರಿಸಲ್ಪಟ್ಟಿದ್ದಾರೆ. ಉತ್ತೇಜನಪೂರ್ವಕವಾಗಿ ಬೈಬಲು ಅನ್ನುವುದು: “ಇದಲ್ಲದೆ ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವದು.” (ಅ. ಕೃತ್ಯಗಳು 24:15) ಇದರ ಅರ್ಥವೇನು? “ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯು ಉಂಟಷ್ಟೆ; ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ” ಎಂದು ಬೈಬಲನ್ನುತ್ತದೆ. (ಪ್ರಸಂಗಿ 9:5) ಅವರು ಸಮಾಧಿಯಲ್ಲಿ ಜೀವರಹಿತ ಸ್ಥಿತಿಯಲ್ಲಿದ್ದಾರೆ. ಹಾಗಾದರೆ ಪುನರುತ್ಥಾನವೆಂದರೆ ಜೀವಿತಕ್ಕೆ ಪುನಃ ಮರಳುವುದೇ ಆಗಿದೆ. ಯೇಸು ಕ್ರಿಸ್ತನೊಂದಿಗೆ ಸ್ವರ್ಗೀಯ ಜೀವಿತದಲ್ಲಿ ಪಾಲುಗಾರರಾಗುವ “ಚಿಕ್ಕ ಹಿಂಡಿ” ನವರನ್ನು ಬಿಟ್ಟು ಬೇರೆ ಎಲ್ಲರು ಮಾನವ ರೂಪದಲ್ಲಿ ಎಬ್ಬಿಸಲ್ಪಡುವರು, ಅವರ ಮುಂದೆ ಇದೇ ಭೂಮಿಯಲ್ಲಿ ನಿತ್ಯವಾಗಿ ಜೀವಿಸುವ ಪ್ರತೀಕ್ಷೆ ಇರುವುದು.

33. (ಎ) ಯಾವುದರ ಮೂಲಕವಾಗಿ ಅನಾರೋಗ್ಯ ಮತ್ತು ಮರಣವು ತೆಗೆದುಹಾಕಲ್ಪಡುವುದು? (ಮಾರ್ಕ 2:1-12) (ಬಿ) ಒಂದು ಭದ್ರ ಭವಿಷ್ಯತ್ತಿಗಾಗಿ ಯೆಹೋವನು ಮಾಡಿರುವ ಈ ಒದಗಿಸುವಿಕೆಗಳಿಂದ ಪ್ರಯೋಜನ ಹೊಂದಲು ನೀವು ವೈಯಕ್ತಿಕವಾಗಿ ಬಯಸುತ್ತೀರೋ?

33 ಮಾನವ ಕುಟುಂಬಕ್ಕಾಗಿ ಇದೊಂದು ಪುನಃ ಸ್ಥಾಪನೆಯ ಸಮಯವಾಗಿರುವುದು. ನಂಬಿಕೆಯನ್ನಿಡುವ ಎಲ್ಲರಿಗೆ ಯೇಸುವಿನ ಯಜ್ಞಾರ್ಪಣೆಯ ಬೆಲೆಯನ್ನು ಅನ್ವಯಿಸುವ ಮೂಲಕ ಸ್ವರ್ಗೀಯ ರಾಜ್ಯದ ಮಾರ್ಗದರ್ಶನದ ಕೆಳಗೆ ಪಾಪದ ಕುರುಹುಗಳೆಲ್ಲವು ಮತ್ತು ಅದರ ಪರಿಣಾಮಗಳೆಲ್ಲವು ತೆಗೆದು ಹಾಕಲ್ಪಡುವುವು. ಇದು ಮಾನವಕುಲಕ್ಕೆ ಯಾವ ಅರ್ಥದಲ್ಲಿರುವದೆಂದು ಯೇಸು ಭೂಮಿಯಲ್ಲಿದ್ದಾಗ ಪ್ರದರ್ಶಿಸಲ್ಪಟ್ಟಿತ್ತು. ಆತನು ಎಲ್ಲಾ ತರದ ರೋಗಗಳನ್ನು ವಾಸಿ ಮಾಡಿದ್ದನು, ಕುರುಡರಿಗೆ ಕಣ್ಣುಗಳನ್ನೂ ಕುಂಟರಿಗೆ ಕಾಲುಗಳನ್ನೂ ಕೊರಟ್ಟನು. ದೇವರ ಹೊಸ ವ್ಯವಸ್ಥೆಯಲ್ಲಿ ಅಂಥ ಆಶೀರ್ವಾದಗಳನ್ನು ಅನುಭವಿಸುವ ಜನರಿಂದ ಈ ಭೂಮಿಯು ತುಂಬಿರುವುದು. ದೈವಿಕ ವಾಗ್ದಾನವು ಹೀಗಿದೆ: “ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.” (ಪ್ರಕಟನೆ 21:4) ಹೌದು, ಜೀವಿತವನ್ನು ಅಭದ್ರಗೊಳಿಸಿರುವ ಎಲ್ಲಾ ವಿಷಯಗಳು ಇಲ್ಲದೆ ಹೋಗುವುವು. ಅದು ಎಂಥಾ ಒಂದು ಮಹಾ ಪ್ರತೀಕ್ಷೆಯು!

34. ಈಗಲೇ ಆನಂದಿಸ ಸಾಧ್ಯವಿರುವ ಯಾವುದೇ ನಿಜ ಭದ್ರತೆಯು ಅಲ್ಲಿದೆಯೋ?

34 ಆದರೆ ಭದ್ರತೆಯಾಗಿ ಪರಿಣಮಿಸುವ ವಿಷಯಗಳೆಲ್ಲವು ಭವಿಷ್ಯತ್ತಿಗಾಗಿ ಕಾದಿರಿಸಲ್ಪಟ್ಟಿಲ್ಲ. ಹೆಚ್ಚನ್ನು ನಾವೀಗಲೇ ಆನಂದಿಸ ಸಾಧ್ಯವಿದೆ.

ಈಗ ಆನಂದಿಸಶಕ್ತವಾದ ಭದ್ರತೆಯು

35. ಇಲ್ಲಿ ತಿಳಿಸಲ್ಪಟ್ಟ ಯಾವ ವಿಷಯಗಳು ವೈಯಕ್ತಿಕ ಭದ್ರತೆಯಾಗಿ ಪರಿಣಮಿಸಲಿರುವುವು?

35 ಒಬ್ಬನು ಜೀವಿತದಲ್ಲಿ ಎದುರಿಸಬೇಕಾದ ಬೇರೆ ಯಾವ ಪರಿಸ್ಥಿತಿಗಳೇ ಇರಲಿ, ಯಾವನಿಗೆ ಅನುದಿನದ ಆಹಾರ ಮತ್ತು ಸಾಕಷ್ಟು ಬಟ್ಟೆ ತಪ್ಪದೆ ದೊರೆಯುತ್ತದೋ ಅವನಲ್ಲಿ ಭದ್ರತೆಯು ಹೆಚ್ಚು ಮಟ್ಟದಲ್ಲಿದೆ ಎಂದು ಹೆಚ್ಚಿನ ಜನರು ಒಪ್ಪುವರು. ಇದಕ್ಕೆ ಕೂಡಿಸಿಯೋ ಎಂಬಂತೆ, ಅವನು ಪ್ರಾಮುಖ್ಯವಾಗಿ ಯಾವ ಜನರೊಂದಿಗೆ ಜತೆಗೂಡುತ್ತಾನೋ ಅವರಲ್ಲಿ ಒಬ್ಬರಿಗೊಬ್ಬರಿಗಾಗಿ ನಿಜ ಪ್ರೀತಿಯಿರುವುದಾದರೆ ಅದು ಆ ಭದ್ರತೆಗೆ ಇನ್ನೊಂದು ಪರಿಮಾಣವನ್ನು ಕೂಡಿಸುತ್ತದೆ. ಮತ್ತು ಭವಿಷ್ಯತ್ತಿನಲ್ಲಿ ಏನು ಕಾದಿದೆ ಎಂದವನಿಗೆ ತಿಳಿದಿದ್ದರೆ ಅದು ಸಹ ಯಾವುದೇ ಅನಿಶ್ಚಿತ ಭಾವವನ್ನು ಕಡಿಮೆಗೊಳಿಸಲು ಸಹಾಯ ಮಾಡುವುದು. ಆದರೆ ಅಧಿಕ ಸಂಖ್ಯಾತ ಜನರು ಭದ್ರತೆಯ ಅಂಥ ಭಾವದಲ್ಲಿ ಆನಂದಿಸುವುದಿಲ್ಲ. ಹೀಗಿರಲಾಗಿ ದೇವರ ವಾಕ್ಯದಲ್ಲಿ ಕೊಡಲ್ಪಟ್ಟ ಭದ್ರತೆಯ ವಾಗ್ದಾನಗಳು ಕೇವಲ ಭವಿಷ್ಯತ್ತಿನಲ್ಲಿ ಮಾತ್ರವೇ ನೆರವೇರುವವು ಎಂದಿದರ ಅರ್ಥವೋ? ಅಥವಾ ಆ ವಾಗ್ದಾನಗಳಲ್ಲಿ ನಂಬಿಕೆಯನ್ನಿಡುವ ಮತ್ತು ಅವಕ್ಕೆ ಹೊಂದಿಕೆಯಲ್ಲಿ ಜೀವಿಸುವ ಮೂಲಕ ಜನರು ಈಗಲೂ ಭದ್ರತೆಯನ್ನು ಕಂಡುಕೊಳ್ಳಶಕ್ತರೋ? ಒಂದು ಏಕೀಕೃತ ರೀತಿಯಲ್ಲಿ ಈಗ ಹಾಗೆ ಮಾಡುತ್ತಿರುವ ಜನರು ಇದ್ದರೋ?

36. (ಎ) ಈಗ ಅನುದಿನದ ಆಹಾರ ಮತ್ತು ಬಟ್ಟೆಯನ್ನು ತಾನು ಒದಗಿಸುವನೆಂದು ದೇವರು ಹೇಳಿದ್ದು ಯಾವ ಪರಿಸ್ಥಿತಿಗಳ ಕೆಳಗೆ? (ಬಿ) ಅಂಥ ಭದ್ರತೆಯಲ್ಲಿ ಯಾರು ಆನಂದಿಸುತ್ತಿದ್ದಾರೆ, ಮತ್ತು ಅವರಿಗೆ ಈ ಒದಗಿಸುವಿಕೆಗಳು ದೊರೆಯುವುದು ಹೇಗೆ? (ಎಫೆಸ 4:28)

36 ಯೆಹೋವನ ಸಾಕ್ಷಿಗಳೆಂದು ಕರೆಯಲ್ಪಡುವ ಆ ಕ್ರೈಸ್ತರು ದೇವರ ವಾಕ್ಯವಾದ ಬೈಬಲನ್ನು ಸತ್ಯವೆಂದು ಕಂಡುಕೊಂಡಿದ್ದಾರೆ ಮತ್ತು ಅದನ್ನು ತಮ್ಮ ಜೀವಿತದಲ್ಲಿ ಕಾರ್ಯರೂಪಕ್ಕೆ ಹಾಕಿರುವ ಮೂಲಕ ಈಗಾಗಲೇ ಅತ್ಯುತ್ತಮ ಪ್ರಯೋಜನಗಳನ್ನು ಅನುಭವಿಸಿರುತ್ತಾರೆ. ಆ ಪ್ರಯೋಜನಗಳು ಒಬ್ಬನು ತನ್ನ ನಿತ್ಯ ಜೀವಿತದಲ್ಲಿ ಆತ್ಮಿಕ ವಿಷಯಗಳಿಗೆ ಯೋಗ್ಯ ಮಹತ್ವವನ್ನು ಕೊಡುವ ಮೂಲಕವಾಗಿ ಬರುತ್ತವೆ. ನಿಶ್ಚಯವಾಗಿ ಭೂಮಿಯಲ್ಲಿರುವ ಪ್ರತಿಯೊಬ್ಬರು, ಆತ್ಮಿಕ ಪ್ರವೃತ್ತಿಯವರಾಗಿರಲಿ ಇಲ್ಲದಿರಲಿ, ಭೂಮಿಯು ಏನನ್ನು ಉತ್ಪಾದಿಸುತ್ತದೋ ಅದರಿಂದ ಪ್ರಯೋಜನ ಹೊಂದ ಶಕ್ತರಾಗಿದ್ದಾರೆ. ಆದರೆ ಯಾರು ದೇವರ ಸೇವೆಯನ್ನು ಪ್ರಥಮವಾಗಿಡುತ್ತಾರೋ ಅವರ ಹಿತಚಿಂತನೆಯಲ್ಲಿ ದೇವರು ವಿಶೇಷ ಆಸಕ್ತಿಯನ್ನು ತೆಗೆದುಕೊಳ್ಳುತ್ತಾನೆಂದು ಬೈಬಲು ತೋರಿಸುತ್ತದೆ. ತನ್ನ ಶಿಷ್ಯರ ನಂಬಿಕೆಯನ್ನು ಬಲಪಡಿಸಲು ಯೇಸು ಅಂದದ್ದು: “ಹೀಗಿರುವದರಿಂದ—ಏನು ಊಟಮಾಡಬೇಕು, ಏನು ಕುಡಿಯಬೇಕು, ಏನು ಹೊದ್ದುಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ. ಇವೆಲ್ಲವುಗಳಿಗಾಗಿ ಅಜ್ಞಾನಿಗಳು ತವಕಪಡುತ್ತಾರೆ. ಇದೆಲ್ಲಾ ನಿಮಗೆ ಬೇಕಾಗಿದೆ ಎಂದು ಪರಲೋಕದಲ್ಲಿರುವ ನಿಮ್ಮ ತಂದೆಗೆ ತಿಳಿದದೆಯಷ್ಟೆ. ಹೀಗಿರುವದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು.” (ಮತ್ತಾಯ 6:31-33) ಆದರೆ ಶಾರೀರಿಕ ರೀತಿಯಲ್ಲಿ ಒಬ್ಬನ ಪರಾಮರಿಕೆಗೆ ಬೇಕಾದ ವಿಷಯಗಳಾದ ಈ “ಅವೆಲ್ಲವು” ಅವರಿಗೆ ದೊರಕುವುದು ಹೇಗೆ? ಕ್ರೈಸ್ತ ಸಭೆಯು ಅವರನ್ನು ಆರ್ಥಿಕ ರೀತಿಯಲ್ಲಿ ಪರಾಮರಿಕೆ ಮಾಡುವುದಿಲ್ಲ. ಬದಲಾಗಿ, ಅವರೆಲ್ಲರೂ ಸಿದ್ಧ ಮನಸ್ಸಿನ ಕೆಲಸಗಾರರಾಗಿರುತ್ತಾರೆ. ಮತ್ತು ಜನರು ನಿಜವಾಗಿ ಯೆಹೋವನ ರಾಜ್ಯವನ್ನೂ ಆತನ ನೀತಿಯನ್ನೂ ತಮ್ಮ ಜೀವಿತದಲ್ಲಿ ಮೊದಲಾಗಿಡುವುದಾದರೆ, ಜೀವಿತದ ಆವಶ್ಯಕತೆಗಳನ್ನು ಪಡಕೊಳ್ಳುವ ಅವರ ಪ್ರಯತ್ನಗಳನ್ನು ದೇವರು ಆಶೀರ್ವದಿಸುತ್ತಾನೆ. “ನಮ್ಮ ಅನುದಿನದ ಆಹಾರವನ್ನು ಈ ಹೊತ್ತೂ ದಯಪಾಲಿಸು” ವುದಕ್ಕಾಗಿ ಅವರು ಮಾಡುವ ಪ್ರಾರ್ಥನೆಯನ್ನು ಆತನು ಉತ್ತರಿಸುತ್ತಾನೆ. (ಮತ್ತಾಯ 6:11) ಸದ್ಯದ ಲೋಕವು ಅಸ್ತಿತ್ವದಲ್ಲಿರುವಾಗ ಪ್ರಾಪಂಚಿಕ ಐಶ್ವರ್ಯವನ್ನು ತನ್ನ ಸೇವಕರಿಗೆ ಯೆಹೋವನು ವಾಗ್ದಾನಿಸುವುದಿಲ್ಲ, ಆದರೆ ಅವರಿಗೆ ನಿಜವಾಗಿ ಯಾವುದು ಅಗತ್ಯವೋ ಅವು ದೊರೆಯುವುದೆಂಬ ಆಶ್ವಾಸನೆಯನ್ನು ಆತನು ಅವರಿಗಿತ್ತಿದ್ದಾನೆ. ಮತ್ತು ಅದು ಅವರಿಗೆ ಸಿಗುವಂತೆ ನೋಡಿಕೊಳ್ಳಲು ಅಧಿಕ ಶಕ್ತನಾದ ವ್ಯಕ್ತಿಯು ಬೇರೊಬ್ಬನಿಲ್ಲ.

37. (ಎ) ಯಾವ ರೀತಿಯ ನಡವಳಿಕೆ ಮತ್ತು ಮನೋವೃತ್ತಿಗಳು ಅಭದ್ರತೆಯನ್ನು ಹುಟ್ಟಿಸುತ್ತವೆ? (ಬಿ) ಆ ರೀತಿಯ ಜನರಲ್ಲಿ ಮೂಲತಃ ಯಾವ ಗುಣದ ಕೊರತೆಯಿದೆ? (ಸಿ) ಅಂಥ ಪ್ರೀತಿಯು ಎಲ್ಲಿ ಕಂಡುಬರುವುದೆಂದು ಯೇಸು ಹೇಳಿದ್ದಾನೆ?

37 ಲೌಕಿಕ ಅವಶ್ಯಕತೆಗಳ ಈ ಮಹಾ ಪೂರೈಕೆಗಾರನು ಈಗ ಭದ್ರತೆಗೆ ಬೇಕಾದ ಇನ್ನೊಂದು ಮಹತ್ವದ ವಿಷಯವನ್ನೂ ದೊರಕುವಂತೆ ಮಾಡಿದ್ದಾನೆ. ಒಬ್ಬ ವ್ಯಕ್ತಿಗೆ ಲೌಕಿಕ ಅವಶ್ಯಕತೆಗಳು ದೊರೆತರೂ ಅವನ ಸಹವಾಸಿಗಳಾದ ಜನರಲ್ಲಿ ಅವನ ಕಡೆಗೆ ಯಾವ ನಿಜಾಸಕ್ತಿಯು ಇಲ್ಲದಿದ್ದರೆ ಸಂತೃಪ್ತಿ ಮತ್ತು ಭದ್ರತೆಯ ಭಾವವು ಅವನಿಗಿರಲಾರದೆಂಬದನ್ನು ನೀವು ಚೆನ್ನಾಗಿ ಗಣ್ಯ ಮಾಡಬಲ್ಲಿರಿ. ಜನರು ಸುಳ್ಳಾಡುವಾಗ ಮತ್ತು ಮೋಸ ಮಾಡುವಾಗ; ಇತರರ ಭಾವನೆಗಳಿಗೆ ಲೇಶವೂ ಪರಿವೆಯಿಲ್ಲದೆ ತಮ್ಮ ನಾಲಿಗೆಯನ್ನುಪಯೋಗಿಸುವಾಗ; ಲೌಕಿಕ ಸೊತ್ತುಗಳ ಆಧಾರದಿಂದ ಬಣ್ಣ ಯಾ ಜನಾಂಗ ಮೂಲದ ಆಧಾರದಿಂದ ಜನರಿಗೆ ತೀರ್ಪು ಮಾಡುವಾಗ; ಮತ್ತು ಗುಪ್ತವಾದ ಸ್ವಾರ್ಥ ಹೇತುಗಳಿಂದ ಪ್ರೇರಿಸಲ್ಪಟ್ಟು “ದಯೆ ತೋರಿಸು” ವಾಗ ಅಭದ್ರತೆಯು ಹುಟ್ಟುತ್ತದೆ. ಆ ರೀತಿಯ ಜನರಲ್ಲಿರುವ ಹೆಚ್ಚಿನ ಕೊರತೆಯೆಂದರೆ ಪ್ರೀತಿಯೇ—ಇತರ ಜನರ ಕಡೆಗಿನ ಶುದ್ಧವೂ ನಿಸ್ವಾರ್ಥವೂ ಆದ ಗಮನವೇ. ಅಂಥ ಪ್ರೀತಿಯು—ಕೇವಲ ಕೆಲವೇ ವ್ಯಕ್ತಿಗಳ ನಡುವೆ ಅಲ್ಲ—ಒಂದು ಇಡೀ ಸಮಾಜದ ಜನರಲ್ಲಿ ಪ್ರಧಾನ ಗುಣವಾಗಿ ಕಂಡುಬರ ಸಾಧ್ಯವೋ? ಅದು ಸಾಧ್ಯವಿದೆ ಎಂಬದಾಗಿ ಯೇಸು ಕ್ರಿಸ್ತನು ನಮಗೆ ಆಶ್ವಾಸನೆಯನ್ನಿತ್ತಿದ್ದಾನೆ. ಆತನಂದದ್ದು: “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.” ಮತ್ತು ನಮ್ಮ ದಿನಗಳಲ್ಲಿ ಅಂಥ ಜನರು ಇಲ್ಲಿರುವರೆಂದು ಆತನಿಗೆ ತಿಳಿದಿತ್ತು ಯಾಕಂದರೆ ಆತನು ತನ್ನ ಶಿಷ್ಯರಿಗೆ ಅಂದದ್ದು: “ನೋಡಿರಿ, ನಾನು ಯುಗದ ಸಮಾಪ್ತಿಯ ವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ.”—ಯೋಹಾನ 13:35; ಮತ್ತಾಯ 28:20.

38. ಅಂಥ ಪ್ರೀತಿಯು ಯಾರಲ್ಲಿದೆಯೋ ಅವರನ್ನು ಗುರುತಿಸಲು ಬೈಬಲು ನಮಗೆ ಸಹಾಯ ಮಾಡುವುದು ಹೇಗೆ? (1 ಯೋಹಾನ 4:20, 21)

38 ನಿಮ್ಮ ಸಹವಾಸಿಗಳಲ್ಲಿ ಈ ಗುಣದ ಕೊರತೆಯಿದೆ ಎಂದು ನಿಮಗೆ ಕಂಡುಬಂದರೆ ಬೇರೊಂದು ಕಡೆಗೆ ನೀವು ದೃಷ್ಟಿಯಿಡುವ ಅಗತ್ಯವಿದೆ. 1 ಯೋಹಾನ 4:8 ರಲ್ಲಿ ಬೈಬಲು ಬೇಕಾದ ಮಾರ್ಗದರ್ಶನವನ್ನೊದಗಿಸುತ್ತಾ ಅಂದದ್ದು: “ಪ್ರೀತಿಯಿಲ್ಲದವನು ದೇವರನ್ನು ಬಲ್ಲವನಲ್ಲ, ಯಾಕಂದರೆ ದೇವರು ಪ್ರೀತಿಸ್ವರೂಪಿಯು” ಆದುದರಿಂದ ಯಾರು “ದೇವರನ್ನು ಬಲ್ಲರೋ” ಆ ಜನರಲ್ಲಿ ಅಂಥ ಪ್ರೀತಿಯ ಕಂಡುಬರ ಸಾಧ್ಯವಿದೆ. ಧಾರ್ಮಿಕಭಾವದ ಎಲ್ಲಾ ಜನರಲ್ಲಿ ನೀವದನ್ನು ಕಾಣುವಿರಿ ಎಂದು ಖಂಡಿತವಾಗಿಯೂ ಇದರ ಅರ್ಥವಲ್ಲ; ವಿಷಯವು ಹಾಗಿಲ್ಲವೆಂಬದು ನಿಮಗೆ ಗೊತ್ತಿದೆ. ಆದರೆ ಒಬ್ಬನೇ ಸತ್ಯದೇವರಾದ ಯೆಹೋವನನ್ನು ಯಾರು ಬಲ್ಲರೋ ಮತ್ತು ಯಾರು ಆ ಹೆಸರನ್ನು ಗೌರವದಿಂದ ಉಪಚರಿಸಿ ಆತನ ಚಿತ್ತಕ್ಕನುಸಾರ ತಮ್ಮ ಜೀವಿತಗಳನ್ನು ಹೊಂದಿಸಿಕೊಳ್ಳಲು ಪ್ರಾಮಾಣಿಕತೆಯಿಂದ ಪ್ರಯತ್ನಿಸುತ್ತಾರೋ ಅವರಲ್ಲಿ ನೀವದನ್ನು ಕಾಣುವಿರಿ. ಅಂತಹ ಸಹವಾಸದಿಂದಾಗುವ ಪ್ರಯೋಜನಗಳು ಸ್ಫುಟವಾಗಿವೆ.

39. ಅಂಥ ಜನರೊಂದಿಗೆ ಕೇವಲ ಇರುವುದು ಮಾತ್ರವಲ್ಲದೆ, ತನ್ನ ಭದ್ರತೆಗೆ ಮತ್ತು ಜೀವಿತದ ತನ್ನ ಆನಂದಕ್ಕೆ ನೆರವಾಗುವ ಬೇರೇನನ್ನು ಒಬ್ಬ ವ್ಯಕ್ತಿಯು ಮಾಡಸಾಧ್ಯವಿದೆ?

39 ಒಬ್ಬ ವ್ಯಕ್ತಿಯು ಈ ರೀತಿಯಲ್ಲಿ ಈ ಲೋಕದ ನಿಯಮರಾಹಿತ್ಯ ನಡವಳಿಕೆಯ ಫಲಿತಾಂಶಗಳ ಕಡೆಗೆ ಅಬಾಧಿತನಾಗಿ ಇರಲಾರನು ಎಂಬದು ನಿಶ್ಚಯ. ಆದರೂ ಅವನು ವೈಯಕ್ತಿಕವಾಗಿ ದೇವರ ಮೇಲೆ ತನ್ನ ಸ್ವಂತ ಅವಲಂಬನೆಯನ್ನು ಅಂಗೀಕರಿಸುವಾಗ ಮತ್ತು ಬೈಬಲಿನಲ್ಲಿ ತಿಳಿಸುವ ಪ್ರಕಾರ ಸರಿ ತಪ್ಪುಗಳ ದೇವರ ಮಟ್ಟವನ್ನು ಪೂರ್ಣವಾಗಿ ಸ್ವೀಕರಿಸುವಾಗ, ಅವನು ಅತಿಯಾಗಿ ಪ್ರಯೋಜನ ಹೊಂದುವನು. ಹೃದಯವೇದನೆ ಮತ್ತು ದುಃಖಕರವಾಗಿ ಮಾತ್ರವೇ ಪರಿಣಮಿಸುವ ಚಟುವಟಿಕೆಗಳಲ್ಲಿ ಒಳಗೂಡುವ ವಿರುದ್ಧವಾಗಿ ಅವನಿಗೆ ಸುರಕ್ಷೆಯು ದೊರೆಯುತ್ತದೆ. ಜ್ಞಾನೋಕ್ತಿ 1:33 ತಿಳಿಸುವ ಪ್ರಕಾರ: “ನನ್ನ ಮಾತಿಗೆ [ಅಂದರೆ, ದೈವಿಕ ವಿವೇಕಕ್ಕೆ] ಕಿವಿಗೊಡುವವನಾದರೋ ಸ್ವಸ್ಥನಾಗಿರುತ್ತಾ ಯಾವ ಕೇಡಿಗೂ ಭಯಪಡದೆ ಸುರಕ್ಷಿತನಾಗಿರುವನು.” ಅವನು ತನ್ನ ಜೀವವನ್ನು ನಿರ್ಮಾಣಿಕನ ಚಿತ್ತಕ್ಕೆ ಹೊಂದಿಕೆಯಲ್ಲಿ ಉಪಯೋಗಿಸುವುದಾದರೆ ಅದು ನಿಜ ಅರ್ಥದಿಂದ ತುಂಬುವುದು. ಅನೇಕ ಜನರಂತೆ ಆಶಾಭಂಗವನ್ನು ಅನುಭವಿಸುವ ಬದಲಾಗಿ—ಮಾನವಕುಲದ ಒಂದೇ ನಿಜ ಪರಿಹಾರ ಮಾರ್ಗವಾದ ದೇವರ ರಾಜ್ಯದ ಕುರಿತು ಇತರರಿಗೆ ಕಲಿಸಲು ಸಹಾಯ ಮಾಡುವುದರಿಂದ ಬರುವ ಆನಂದದಲ್ಲಿ ಪಾಲುಗಾರನಾಗಬಲ್ಲನು. ಯೇಸು ಕ್ರಿಸ್ತನು ಅಂಥ ಒಂದು ಕಾರ್ಯವನ್ನು ಮುನ್ಸೂಚಿಸುತ್ತಾ ಅಂದದ್ದು: “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.”—ಮತ್ತಾಯ 24:14.

40. ಯೆಹೋವನ ಸಾಕ್ಷಿಗಳು ಭವಿಷ್ಯತ್ತಿನ ಕುರಿತು ಯಾವ ಭಾವವನ್ನು ತಾಳುತ್ತಾರೆ, ಮತ್ತು ಏಕೆ? (ಲೂಕ 21:28-32)

40 ಸಾರುವ ಈ ಚಟುವಟಿಕೆಯಲ್ಲಿ ಭಾಗವಹಿಸುವವರು ಭವಿಷ್ಯತ್ತಿನ ಕಡೆಗೆ ದೃಷ್ಟಿಯಿಡುವಾಗ, ಅವರು ಭಯದಿಂದ ತುಂಬುವುದಿಲ್ಲ. ಬೈಬಲನ್ನು ಅಭ್ಯಾಸ ಮಾಡಿರುವುದರಿಂದಲೂ ಅದೇನನ್ನುತ್ತದೋ ಅದರಲ್ಲಿ ನಂಬಿಕೆಯನ್ನಿಟ್ಟಿರುವುದರಿಂದಲೂ ಭವಿಷ್ಯತ್ತಿನಲ್ಲೇನು ಕಾದಿದೆ ಎಂದವರಿಗೆ ತಿಳಿದದೆ. ಲೋಕದ ಕಾರ್ಯಾದಿಗಳ ಪ್ರತಿಯೊಂದು ಅಹಿತಕರ ಬದಲಾವಣೆಯಿಂದ ಆಶಾಭಂಗವನ್ನು ಪಡೆಯುವ ಬದಲಿಗೆ, ಈ ವಿಷಯಗಳ ವ್ಯವಸ್ಥೆಯ ಅಂತ್ಯದ ಕುರಿತಾದ ಬೈಬಲ್‌ ಪ್ರವಾದನೆಗಳ ನೆರವೇರಿಕೆಯನ್ನು ಅವರು ಈ ಸಂಗತಿಗಳಲ್ಲಿ ಕಾಣುತ್ತಾರೆ. ಬೇಗನೇ, ಈ ಸಂತತಿಯಲ್ಲಿ ತನ್ನ ನ್ಯಾಯಯುಕ್ತ ಪ್ರಭುತ್ವವನ್ನು ಧಿಕ್ಕರಿಸುತ್ತಾ ಮುಂದರಿಯುವವರನ್ನು ಮತ್ತು ತಮ್ಮ ನೆರೆಯವರ ಜೀವಿತಾನಂದವನ್ನು ಹಾಳುಗೆಡಹಲು ಹಟ ಹಿಡಿದಿರುವವರೆಲ್ಲರನ್ನು ದೇವರು ನಾಶಗೊಳಿಸಲಿದ್ದಾನೆ ಎಂದವರಿಗೆ ತಿಳಿದದೆ. ಅವರು ಭರವಸವುಳ್ಳವರಾಗಿ 2 ಪೇತ್ರ 3:13 ರಲ್ಲಿ ತಿಳಿಸಿರುವ ನಿರೀಕ್ಷೆಯ ನೆರವೇರಿಕೆಯ ಕಡೆಗೆ ಮುನ್ನೋಡುತ್ತಲಿರುವರು, ಅದನ್ನುವುದು: “ಆದರೆ ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಎದುರು ನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವುದು.”

41, 42. (ಎ) ಹೀಗೆ, ಯೆಹೋವನ ಸಾಕ್ಷಿಗಳು ಒಂದು ತೊಂದರೆಯುಕ್ತ ಲೋಕದಲ್ಲಿ ಜೀವಿಸುತ್ತಿದ್ದಾಗ್ಯೂ ಈಗಾಗಲೇ ಒಂದು ಹೆಚ್ಚುಮಟ್ಟದ ಭದ್ರತೆಯನ್ನು ಅನುಭವಿಸುತ್ತಿರುವುದೇಕೆ? (ಬಿ) ಯೆಹೋವನ ಸಾಕ್ಷಿಗಳಿಂದ ಆನಂದಿಸಲ್ಪಡುತ್ತಿರುವ ಭದ್ರತೆಯು ನೀವೂ ಬಯಸುವ ಒಂದು ವಿಷಯವಾಗಿದೆಯೇ?

41 “ತಂದೆಯನ್ನು ಆತ್ಮದಿಂದಲೂ ಸತ್ಯದಿಂದಲೂ” ಆರಾಧಿಸುವವರಾದ ಯೆಹೋವ ದೇವರ ಕ್ರೈಸ್ತ ಆರಾಧಕರಿಂದ ಇಂದೀಗಲೇ ಆ ರೀತಿಯ ಭದ್ರತೆಯು ಆನಂದಿಸಲ್ಪಡುತ್ತಿದೆ. ಅದು ಯೆಹೋವನ ನೀತಿಯ ಮಟ್ಟಗಳಿಗೆ ತಮ್ಮನ್ನು ಅಧೀನ ಪಡಿಸುವುದರಿಂದಲೂ ಅವನ್ನು ತಮ್ಮ ಜೀವಿತದಲ್ಲಿ ಕಾರ್ಯರೂಪಕ್ಕೆ ಹಾಕುವುದರಿಂದಲೂ ಫಲಿಸಿದೆ. ಯೆಶಾಯ 32:17, 18 ರಲ್ಲಿ ಮುಂತಿಳಿಸಲ್ಪಟ್ಟ ಪ್ರಕಾರ: “ಧರ್ಮದಿಂದ ಸಮಾಧಾನವು ಫಲಿಸುವುದು, ಶಾಂತಿ ನಿರ್ಭಯಗಳು ಧರ್ಮದ ನಿತ್ಯ ಪರಿಣಾಮವಾಗಿರುವವು. ನನ್ನ ಜನರು ಸಮಾಧಾನ ನಿವಾಸದಲ್ಲಿಯೂ ನಿರ್ಭಯ ನಿಲಯಗಳಲ್ಲಿಯೂ ನೆಮ್ಮದಿಯ ಆಶ್ರಯಗಳಲ್ಲಿಯೂ ನೆಲೆಗೊಳ್ಳುವರು.” ಅವರು ಯೆಹೋವನ ಸಾರ್ವಭೌಮತೆಯ ಕರ್ತವ್ಯನಿಷ್ಠ ಬೆಂಬಲಿಗರಾಗಿದ್ದಾರೆ. ಅವರು ಸರಿ ತಪ್ಪುಗಳ ತಮ್ಮ ಸ್ವಂತ ಮಟ್ಟಗಳನ್ನು ಸ್ಥಾಪಿಸುವುದಿಲ್ಲ. ಲೋಕದ ಸಮಸ್ಯೆಗಳನ್ನು ತಾವಾಗಿಯೇ ಪರಿಹರಿಸಲು ಅವರು ಪ್ರಯತ್ನಿಸುವುದಿಲ್ಲ. ಕೃತಜ್ಞತಾ ಪೂರ್ವಕವಾಗಿ ಅವರು ಯೆಹೋವನು ಒದಗಿಸಿರುವ ಪ್ರೀತಿಯ ಒದಗಿಸುವಿಕೆಯಾದ ಯೇಸು ಕ್ರಿಸ್ತನ ಕೈಕೆಳಗಿನ ದೇವರ ರಾಜ್ಯವನ್ನು ಸ್ವೀಕರಿಸುತ್ತಾರೆ ಮತ್ತು ಬೆಂಬಲಿಸುತ್ತಾರೆ.

42 ಅವರು ಆನಂದಿಸುತ್ತಿರುವ ಭದ್ರತೆಯಲ್ಲಿ ನೀವು ಪಾಲುಗಾರರಾಗಲು ಬಯಸುತ್ತೀರೋ? ನಿಮಗದು ಸಾಧ್ಯವಿದೆ.

ಆ ಕುರಿತು ನೀವೇನು ಮಾಡಸಾಧ್ಯವಿದೆ

43. ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹಕ್ಕೆ ಹೋಗುವ ಮೂಲಕ ನೀವು ಸ್ವತಃ ಏನನ್ನು ಕಾಣಲು ಶಕ್ತರಾಗುವಿರಿ?

43 ಅದಕ್ಕಾಗಿ ಒಂದು ಮೊತ್ತ ಮೊದಲಿನ ಹೆಜ್ಜೆ ಯಾವುದೆಂದರೆ ಅಂಥ ಭದ್ರತೆಯಲ್ಲಿ ಆನಂದಿಸುವ ಜನರೊಂದಿಗೆ ಜತೆಗೂಡುವುದೇ. ಈ ರೀತಿಯಲ್ಲಿ ನೀವು ನಿಜವಾಗಿ ಇದಕ್ಕಾಗಿಯೇ ಹುಡುಕುತ್ತಿದ್ದೀರೋ ಇಲ್ಲವೋ ಎಂಬದನ್ನು ನೀವಾಗಿಯೇ ಕಾಣಸಾಧ್ಯವಿದೆ. ನಿಮ್ಮ ಕ್ಷೇತ್ರದಲ್ಲಿರುವ ಅವರ ರಾಜ್ಯ ಸಭಾಗೃಹಗಳ ಕೂಟಗಳಿಗೆ ನೀವು ಬರುವಂತೆ ಯೆಹೋವನ ಸಾಕ್ಷಿಗಳು ನಿಮ್ಮನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತಾರೆ. ಅವರ ಕೂಟಗಳು ಸಂಸ್ಕಾರಗಳಿಂದ ತುಂಬಿಲ್ಲವೆಂಬದು ನಿಮಗೆ ತಿಳಿದು ಬರುವುದು, ಯಾವ ಕಾಣಿಕೆ ಪೆಟ್ಟಿಗೆಗಳೂ ಅಲ್ಲಿ ದಾಟಿಸಲ್ಪಡುವುದಿಲ್ಲ. ಬದಲಾಗಿ, ದೇವರ ವಾಕ್ಯದ ಅರ್ಥಭರಿತ ಚರ್ಚೆ ಮತ್ತು ಅದನ್ನು ನಮ್ಮ ಜೀವಿತಕ್ಕೆ ಅನ್ವಯಿಸುವ ವಿಧಾನವು ಅಲ್ಲಿ ತೋರಿಸಲ್ಪಡುತ್ತದೆ. ಬೈಬಲು ಬುದ್ಧಿವಾದವನ್ನಿತ್ತದ್ದು: “ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯ ಮಾಡಬೇಕೆಂತಲೂ ಒಬ್ಬರನ್ನೊಬ್ಬರು ಪ್ರೇರೇಪಿಸೋಣ. ಸಭೆಯಾಗಿ ಕೂಡಿಕೊಳ್ಳುವದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟುಬಿಡದೆ ಒಬ್ಬರನ್ನೊಬ್ಬರು ಎಚ್ಚರಿಸೋಣ.” (ಇಬ್ರಿಯ 10:24, 25) ಇದೇ ಭಾವವನ್ನು ರಾಜ್ಯ ಸಭಾಗೃಹಗಳಲ್ಲಿ ನೀವು ಕಂಡುಕೊಳ್ಳುವಿರಿ.

44. (ಎ) ರಾಜ್ಯ ಸಭಾಗೃಹದಲ್ಲಿ ಇತರರ ಜೀವಿತದಲ್ಲಿ ನೀವು ಕಾಣುವ ಭದ್ರತೆಯಲ್ಲಿ ವೈಯಕ್ತಿಕವಾಗಿ ಆನಂದಿಸಬೇಕಾದರೆ ನಿಮಗೆ ಯಾವುದು ಅಗತ್ಯವಿದೆ? (ಬಿ) ಅಂಥ ಸಂಬಂಧವನ್ನು ನಮ್ಮಲ್ಲಿ ಯಾರೂ ಹಗುರವೆಂದೆಣಿಸಬಾರದೇಕೆ, ಆದರೆ ಅದನ್ನು ಹೇಗೆ ಪಡಕೊಳ್ಳಸಾಧ್ಯವಿದೆ?

44 ಅಂಥ ಕೂಟಗಳನ್ನು ಹಾಜರಾಗುವ ಮೂಲಕ ಇತರರು ಆನಂದಿಸುತ್ತಿರುವ ಭದ್ರತೆಯನ್ನು ಕಾಣಲು ನೀವು ಶಕ್ತರಾಗುವಿರಿ, ಮತ್ತು ಆ ಸಹವಾಸದಲ್ಲಿ ನೀವು ನಿಸ್ಸಂದೇಹವಾಗಿ ಆನಂದಿಸುವಿರಿ. ಆದರೆ ವೈಯಕ್ತಿಕವಾಗಿ ಅಂಥ ಭದ್ರತೆಯು ನಿಮಗಿರಬೇಕಾದರೆ ಒಂದು ಹೆಚ್ಚಿನ ವಿಷಯದ ಅಗತ್ಯವಿದೆ. ನಿಮಗಿರುವ ಮಹತ್ತಾದ ಅಗತ್ಯವು ಯೆಹೋವ ದೇವರೊಂದಿಗೆ ಒಂದು ಮೆಚ್ಚಿಕೆಯ ಸಂಬಂಧವೇ. ಆತನೊಬ್ಬನಲ್ಲಿಯೇ ನಿಮ್ಮ ಸದ್ಯದ ಸುಕ್ಷೇಮವೂ ಭವಿಷ್ಯತ್ತಿನ ಪ್ರತೀಕ್ಷೆಗಳೆಲ್ಲವೂ ಆಧಾರಿಸಿರುತ್ತವೆ. ಅಂಥ ಒಂದು ಸಂಬಂಧವು ಹಗುರವಾದ ವಿಷಯವೆಂದು ನಮ್ಮಲ್ಲಿ ಯಾರೂ ಭಾವಿಸಬಾರದು. ನಾವು ಅದರೊಂದಿಗೆ ಹುಟ್ಟಿರುವುದಿಲ್ಲ. ನಾವೆಲ್ಲರೂ ಪಾಪಿಯಾದ ಆದಾಮನ ಸಂತತಿಯವರು, ಆದುದರಿಂದ ದೇವರಿಂದ ದೂರ ತೊಲಗಿರುವ ಒಂದು ಮಾನವ ಕುಟುಂಬದೊಳಗೆ ಜನಿಸಿರುತ್ತೇವೆ. ಯೆಹೋವನ ಮೆಚ್ಚಿಕೆಯನ್ನು ಸಂಪಾದಿಸಬೇಕಾದರೆ ಆತನೊಂದಿಗೆ ಸಂಧಾನವಾಗುವ ಅಗತ್ಯವಿದೆ, ಮತ್ತು ಇದು ತನ್ನ ಕುಮಾರನ ಯಜ್ಞದ ಮೂಲಕ ಆತನು ಮಾಡಿರುವ ಪ್ರೀತಿಯ ಒದಗಿಸುವಿಕೆಯ ಮೇಲಿಡುವ ನಂಬಿಕೆಯ ಆಧಾರದಲ್ಲಿ ಮಾತ್ರವೇ ಸಾಧ್ಯವಾಗುವುದು. ಯೇಸು ತಾನೇ ಅಂದ ಪ್ರಕಾರ: “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ. ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರುವದಿಲ್ಲ.”—ಯೋಹಾನ 14:6.

45. (ಎ) ಜೀವಿತದ ಕುರಿತು ಮತ್ತು ನಮ್ಮ ಜೀವಿತವು ಉಪಯೋಗಿಸಲ್ಪಡುವ ವಿಧದ ಕುರಿತು ಮೊತ್ತ ಮೊದಲಾಗಿ ನಾವೇನನ್ನು ಗಣ್ಯ ಮಾಡುವ ಅಗತ್ಯವಿದೆ? (ಪ್ರಕಟನೆ 4:11) (ಬಿ) ಯೆಹೋವನನ್ನು ಮೆಚ್ಚಿಸಬೇಕಾದರೆ ನಾವು ವೈಯಕ್ತಿಕವಾಗಿ ಅವನ ವಿಷಯಗಳಲ್ಲಿ ಯಾವ ಭಾವ ತಾಳಬೇಕು? (ಸಿ) ನೀರಿನ ದೀಕ್ಷಾಸ್ನಾನವು ಯಾಕೆ ಮಹತ್ವವುಳ್ಳದ್ದು, ಮತ್ತು ವ್ಯಕ್ತಿಯೊಬ್ಬನು ದೀಕ್ಷಾಸ್ನಾನಕ್ಕೆ ಸಿದ್ಧನಾಗುವ ಮುಂಚೆ ಯಾವುದು ಅವಶ್ಯವಾಗಿದೆ? (ಮತ್ತಾಯ 28:18, 19)

45 ನಮ್ಮ ಜೀವಿತಕ್ಕಾಗಿ ನಾವು ದೇವರಿಗೆ ಋಣಬದ್ಧರಾಗಿದ್ದೇವೆಂದೂ ಮತ್ತು ದೇವರಿಗೆ ವಿಧೇಯತೆಯಲ್ಲಿ ನಮ್ಮ ಜೀವಿತವನ್ನುಪಯೋಗಿಸುವುದರಲ್ಲಿ ಯಾವುದೇ ಲೋಪವು ಕೆಟ್ಟದ್ದೆಂದೂ ನಾವು ಗಣ್ಯ ಮಾಡುವ ಅಗತ್ಯವಿದೆ. ದೇವರ ಚಿತ್ತಕ್ಕನುಸಾರವಾಗಿ ನಮ್ಮ ಜೀವಿತವನ್ನುಪಯೋಗಿಸಲು ಹಿಂದೆ ಯಾವುದೇ ರೀತಿಯಲ್ಲಿ ತಪ್ಪಿದ್ದಕ್ಕಾಗಿ ಪ್ರಾಮಾಣಿಕತೆಯಿಂದ ದುಃಖಪಟ್ಟರೆ ಆ ತಪ್ಪಾದ ಮಾರ್ಗವನ್ನು ತಿರಸ್ಕರಿಸಿ, ತಿರುಗಿಕೊಂಡು, ದೇವರ ಚಿತ್ತಕ್ಕೆ ಹೊಂದಿಕೆಯಲ್ಲಿ ನಮ್ಮ ಜೀವಿತವನ್ನು ತರುವೆವು. ಇದರಲ್ಲಿ ಯೇಸು ತನ್ನ ಶಿಷ್ಯರಿಗೆ ಏನು ಮಾಡಬೇಕೆಂದು ಹೇಳಿದ್ದನೋ ಅದು ಅಂದರೆ ‘ತಾವಾಗಿಯೇ ನಿರಾಕರಿಸಿ’ ಕೊಳ್ಳುವುದೂ ಸೇರಿದೆ. (ಮತ್ತಾಯ 16:24) ಯಾರು ಇದನ್ನು ಮಾಡುತ್ತಾನೋ ಅವನು ದೇವರ ಚಿತ್ತಕ್ಕೆ ಯಾವ ಪರಿವೆಯೂ ಇಲ್ಲದೆ ಸ್ವಂತ ಸ್ವಾರ್ಥಾಭಿಲಾಷೆಗಳ ತೃಪ್ತಿಗಾಗಿ ಜೀವಿಸುವ “ಹಕ್ಕು” ತನಗೆ ಇದೆ ಎಂದು ವಾದಿಸಲಾರನು. ಬದಲಾಗಿ ಆತನ ಪುತ್ರನಿಂದ ಮಾರ್ಗದರ್ಶಿಸಲ್ಪಟ್ಟ ಪ್ರಕಾರ ದೇವರ ಚಿತ್ತವನ್ನು ಮಾಡುವುದಕ್ಕೆ ತನ್ನನ್ನು ಪೂರ್ಣವಾಗಿ ಒಪ್ಪಿಸಿ ಕೊಡುತ್ತಾನೆ. ಮತ್ತು ಅವನು ಇದು ಸರಿ ಎಂದು ತಿಳಿದಿರುವುದರಿಂದ ಮತ್ತು ಯೆಹೋವನು ಮಾಡುವುದೆಲ್ಲದಕ್ಕೆ ಒಂದು ಒಳ್ಳೆಯ ಹಾಗೂ ನೀತಿಯ ಉದ್ದೇಶವಿದೆ ಎಂದು ತಿಳಿದಿರುವದರಿಂದ ಅದನ್ನು ಮಾಡುತ್ತಾನೆ, ಮತ್ತು ನಾವು ನೀತಿಯನ್ನು ಪ್ರೀತಿಸುವುದಾದರೆ ಆತನು ಮಾಡುವ ವಿಷಯಗಳು ನಮಗೆ ಆಶೀರ್ವಾದವಾಗಿ ಪರಿಣಮಿಸುವವು. ಅವನು ನಿಜವಾಗಿಯೂ ಯೆಹೋವನನ್ನು ‘ತನ್ನ ಪೂರ್ಣ ಹೃದಯದಿಂದ, ಮನಸ್ಸಿನಿಂದ, ಆತ್ಮದಿಂದ ಮತ್ತು ಶಕ್ತಿಯಿಂದ’ ಪ್ರೀತಿಸುವವನಾಗಿದ್ದಾನೆ. (ಮಾರ್ಕ 12:29, 30) ಅಂಥ ಒಂದು ಒಪ್ಪಿಸುವಿಕೆಯನ್ನು ತನ್ನ ಸ್ವಂತ ಹೃದಯದಲ್ಲಿ ಮಾಡಿದ ಮೇಲೆ, ಬಹಿರಂಗ ನೀರಿನ ದೀಕ್ಷಾಸ್ನಾನಕ್ಕಾಗಿ ತನ್ನನ್ನು ನೀಡಿಕೊಳ್ಳಲು ಅವನು ಸಿದ್ಧನಾಗಿದ್ದಾನೆ. ಯೇಸು ಕ್ರಿಸ್ತನ ಅನುಕರಣೆಯಲ್ಲಿ ಮತ್ತು ಆತನು ತನ್ನ ಶಿಷ್ಯರಿಗೆ ಕೊಟ್ಟ ಸೂಚನೆಗಳಿಗೆ ವಿಧೇಯತೆಯಲ್ಲಿ ಅವನದನ್ನು ಮಾಡುವನು. ದೇವರ ವಾಕ್ಯದಲ್ಲಿ ತಿಳಿಸಲ್ಪಟ್ಟ ಪ್ರಕಾರ ಈ ರೀತಿಯಲ್ಲಿ ಮಾತ್ರವೇ, ಒಬ್ಬನು ಸತ್ಯದೇವರೊಂದಿಗೆ ಮೆಚ್ಚಿಕೆಯ ಸಂಬಂಧದೊಳಗೆ ಬರುವನು ಮತ್ತು ಆತನ ಸೇವಕರು ಆನಂದಿಸುವ ಭದ್ರತೆಯಲ್ಲಿ ಪಾಲುಗಾರನಾಗುವನು.

46. ಯೆಹೋವನು ನಮ್ಮ ಅರಸನಾಗಿರುವುದನ್ನು ನಾವು ನಿಜವಾಗಿಯೂ ಬಯಸುತ್ತೇವೆಂದು ಪ್ರದರ್ಶಿಸುವುದು ಹೇಗೆ?

46 ತದನಂತರ, ನೀವು ನಿಜವಾಗಿಯೂ ಸೈತಾನನಿಂದ ಪ್ರತಿಪಾದಿಸಲ್ಪಟ್ಟ ಸ್ವತಂತ್ರ ಮಾರ್ಗವನ್ನು ತಿರಸ್ಕರಿಸಿದ್ದೀರೆಂದೂ ಸರಿ ತಪ್ಪುಗಳ ನಿಮ್ಮ ಸ್ವಂತ ಮಟ್ಟಗಳನ್ನು ಇಟ್ಟಿರುವುದಿಲ್ಲವೆಂದೂ ಯೆಹೋವನನ್ನು ನಿಮ್ಮ ಅರಸನಾಗಿರಲು ನೀವು ನಿಜವಾಗಿ ಬಯಸುತ್ತೀರೆಂದೂ ಪ್ರದರ್ಶಿಸುತ್ತಾ ಮುಂದುವರಿಯುವುದು ಅತ್ಯಾವಶ್ಯಕವು. ಜ್ಞಾನೋಕ್ತಿ 3:5, 6 ರಲ್ಲಿ ತಿಳಿಸಲ್ಪಟ್ಟ ಪ್ರಕಾರ ಮಾಡುವ ಅಗತ್ಯವು ನಿಮಗಿದೆ: “ಸ್ವಬುದ್ಧಿಯನ್ನೇ ಆಧಾರ ಮಾಡಿಕೊಳ್ಳದೆ ಪೂರ್ಣ ಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು. ಆತನೇ ನಿನ್ನ ಮಾರ್ಗಗಳನ್ನು ಸರಾಗ ಮಾಡುವನು.” ಹೌದು, ಆತನು ನಿಮ್ಮ ಮಾರ್ಗಗಳನ್ನು ನಿಜವೂ ನಿತ್ಯವೂ ಆಗಿರುವ ಭದ್ರತೆಯ ದಾರಿಯಲ್ಲಿ ನಡಿಸುವನು.

47. ಯೆಹೋವನ ಪ್ರೀತಿಯುಳ್ಳ ಒದಗಿಸುವಿಕೆಗಳನ್ನು ನಿಜವಾಗಿಯೂ ಸ್ವೀಕರಿಸುವವರಿಗೆ ಯಾವ ಭದ್ರತೆಯು ಬರುವುದು?

47 ಮಾನವಕುಲಕ್ಕಾಗಿ ಯೆಹೋವನು ಮಾಡಿರುವ ಪ್ರೀತಿಯುಳ್ಳ ಒದಗಿಸುವಿಕೆಗಳನ್ನು ನಿಜವಾಗಿಯೂ ಸ್ವೀಕರಿಸುವವರೆಲ್ಲರಿಗೆ ಎಂಥಾ ಮಹಾ ಆಶೀರ್ವಾದಗಳು ಬರಲಿವೆ! ಆತನ ಆಡಳಿತೆಯ ಕೆಳಗೆ ದೃಢವಾದ ಸ್ಥಾನವನ್ನು ತೆಗೆದುಕೊಳ್ಳುವ ಮೂಲಕ ಅವರಿಗೆ ಈಗ ಸುರಕ್ಷೆಯು ದೊರೆತಿದೆ, ಮತ್ತು ಭವಿಷ್ಯತ್ತಿನ ದೃಢವಾದ ನಿರೀಕ್ಷೆಗಳು ಅವರಿಗಿವೆ. ಯೆಹೋವನ ಕೃಪೆ ಸತ್ಯತೆಗಳ ಕಾರಣದಿಂದಾಗಿ ಅವರು ಆತನ ಕುಮಾರನಾದ ಯೇಸು ಕ್ರಿಸ್ತನ ಕೈಯಲ್ಲಿರುವ ದೇವರ ರಾಜ್ಯದ ಕೆಳಗೆ ಮಾನವಕುಲಕ್ಕೆ ಬರಲಿರುವ ಪೂರ್ಣ ಸಂತೃಪ್ತಿಕರವಾದ ಭದ್ರತೆಯಲ್ಲಿ ಪಾಲುಗಾರರಾಗುವರು.

[ಪಾದಟಿಪ್ಪಣಿಗಳು]

^ ಪ್ಯಾರ. 2 ಬೇರೆ ರೀತಿಯಲ್ಲಿ ಸೂಚಿಸಲ್ಪಡದಿರುವಲ್ಲಿ ಈ ಪ್ರಕಾಶನದಲ್ಲಿರುವ ಶಾಸ್ತ್ರ ವಚನದ ಉಲ್ಲೇಖಗಳನ್ನು ಆಧುನಿಕ ಭಾಷೆಯ ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ಆಫ್‌ ದಿ ಹೋಲೀ ಸ್ಕ್ರಿಪ್ಚರ್ಸ್‌ ಇದರಿಂದ ಭಾಷಾಂತರಿಸಿ ಬರೆಯಲಾಗಿದೆ. ಹಲವಾರು ಉಲ್ಲೇಖಗಳನ್ನು ಬಿ.ಎಫ್‌.ಬಿ.ಎಸ್‌.ನವರ 1865 ಕನ್ನಡ ಸತ್ಯವೇದದಿಂದ ತೆಗೆಯಲಾಗಿದೆ.

^ ಪ್ಯಾರ. 10 ನ್ಯೂ ಇಂಗ್ಲಿಷ್‌ ಬೈಬಲ್‌ ನಲ್ಲಿ ಭಾಷಾಂತರಕಾರರಿಂದ ಉಪಯೋಗಿಸಲ್ಪಟ್ಟ ಈ ಕಲ್ಪನೆಯನ್ನು ಕೀರ್ತನೆ 135:5 ಮತ್ತು ನೆಹೆಮೀಯ 10:29 ರಲ್ಲಿ ಚೆನ್ನಾಗಿ ಕಾಣಬಹುದು.

[ಅಧ್ಯಯನ ಪ್ರಶ್ನೆಗಳು]

30. ಯೆಹೋವನ ಆಳಿಕೆಯ ಕರ್ತವ್ಯನಿಷ್ಠ ಬೆಂಬಲಿಗರಿಗೆ ಇವೆಲ್ಲವು ಯಾವ ಅರ್ಥದಲ್ಲಿರುವುದು? (ಪ್ರಕಟನೆ 7:9, 10, 13, 14)

[ಪುಟ 4ರಲ್ಲಿರುವ ಚಿತ್ರ]

ಈಗ ಜೀವಿಸುವ ಅನೇಕ ಜನರು ಇನ್ನು ಮೇಲೆ ಹಸಿವೆ ಇಲ್ಲದಿರುವಂಥ ದಿನವನ್ನು ಕಾಣಲಿರುವರು

[ಪುಟ 7ರಲ್ಲಿರುವ ಚಿತ್ರ]

ಭವಿಷ್ಯತ್ತಿಗಾಗಿರುವ ನಮ್ಮ ಪ್ರತೀಕ್ಷೆಗಳು ಭೂ ಪರಲೋಕಗಳನ್ನು ನಿರ್ಮಿಸಿದಾತನ ಮೇಲೆ ಅವಲಂಬಿಸಿರುತ್ತವೆ

[ಪುಟ 13ರಲ್ಲಿರುವ ಚಿತ್ರ]

ನಮ್ಮ ಪ್ರಥಮ ಹೆತ್ತವರ ಕುರಿತಾದ ಬೈಬಲಿನ ದಾಖಲೆಯು ಇಂದು ಅಭದ್ರತೆಯು ಮಾನವ ಜೀವಿತವನ್ನೇಕೆ ಕೆಡಿಸುತ್ತವೆಂಬದನ್ನು ತೋರಿಸುತ್ತದೆ

[ಪುಟ 22ರಲ್ಲಿರುವ ಚಿತ್ರ]

ದೇವರ ರಾಜ್ಯದ ಕೆಳಗೆ ದುಷ್ಕೃತ್ಯವು ಅಂತ್ಯಗೊಳ್ಳುವುದು, ವ್ಯಕ್ತಿಗೂ ಅವನ ಆಸ್ತಿಪಾಸ್ತಿಗೂ ಉಂಟಾಗುವ ಹಾನಿ ಕೊನೆಗೊಳ್ಳುವುದು

[ಪುಟ 24ರಲ್ಲಿರುವ ಚಿತ್ರ]

ಅನಾರೋಗ್ಯ ಮತ್ತು ಮರಣವು ತೆಗೆದು ಹಾಕಲ್ಪಡುವುದೆಂದು ದೇವರ ವಾಕ್ಯವು ವಾಗ್ದಾನಿಸುತ್ತದೆ—ಹೌದು, ಮೃತರಾದ ಪ್ರಿಯ ಜನರು ಸಹ ಪುನಃ ಜೀವಿಸಲು ಎಬ್ಬಿಸಲ್ಪಡುವರು