ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ದುರಾತ್ಮಗಳ ಸೇನೆಯ ಮೇಲೆ ಹೋರಾಡುವುದು’

‘ದುರಾತ್ಮಗಳ ಸೇನೆಯ ಮೇಲೆ ಹೋರಾಡುವುದು’

ಅಧ್ಯಾಯ ಎಂಟು

‘ದುರಾತ್ಮಗಳ ಸೇನೆಯ ಮೇಲೆ ಹೋರಾಡುವುದು’

1. ದುರಾತ್ಮಗಳ ಚಟುವಟಿಕೆಯಲ್ಲಿ ನಾವು ವಿಶೇಷವಾಗಿ ಆಸಕ್ತರಾಗಿರುವುದೇಕೆ?

ದುರಾತ್ಮಗಳಿವೆಯೆಂಬ ವಿಚಾರವನ್ನು ಅನೇಕರು ಧಿಕ್ಕರಿಸುತ್ತಾರೆ. ಆದರೆ ಇದು ತಮಾಷೆಯ ಮಾತಲ್ಲ. ಜನರು ನಂಬಲಿ, ನಂಬದಿರಲಿ, ದುರಾತ್ಮಗಳು ಅಸ್ತಿತ್ವದಲ್ಲಿವೆ ಮತ್ತು ಅವು ಎಲ್ಲರ ಮೇಲೆ ಒತ್ತಡವನ್ನು ಹಾಕಲು ಪ್ರಯತ್ನಿಸುತ್ತವೆ. ಯೆಹೋವನ ಆರಾಧಕರಿಗೂ ಇದರಿಂದ ವಿನಾಯಿತಿಯಿಲ್ಲ. ವಾಸ್ತವವೇನಂದರೆ, ಅವರೇ ಅವುಗಳ ಪ್ರಧಾನ ಗುರಿಹಲಗೆಗಳು. ಈ ನಿಜತ್ವಕ್ಕೆ ನಮ್ಮನ್ನು ಎಚ್ಚರಿಸುತ್ತಾ ಅಪೊಸ್ತಲ ಪೌಲನು ಹೇಳುವುದು: “ನಾವು ಹೋರಾಡುವದು ಮನುಷ್ಯಮಾತ್ರದವರ ಸಂಗಡವಲ್ಲ; [ಅಗೋಚರವಾದ] ರಾಜತ್ವಗಳ ಮೇಲೆಯೂ ಅಧಿಕಾರಗಳ ಮೇಲೆಯೂ ಈ ಅಂಧಕಾರದ ಲೋಕಾಧಿಪತಿಗಳ ಮೇಲೆಯೂ ಆಕಾಶ ಮಂಡಲದಲ್ಲಿರುವ ದುರಾತ್ಮಗಳ ಸೇನೆಯ ಮೇಲೆಯೂ ನಾವು ಹೋರಾಡುವವರಾಗಿದ್ದೇವೆ.” (ಎಫೆಸ 6:12) ನಮ್ಮ ದಿನಗಳಲ್ಲಿ ದುರಾತ್ಮ ಸೇನೆಗಳು ಹಾಕುವ ಒತ್ತಡವು ಪರಮಾವಧಿಗೇರಿದೆ. ಏಕೆಂದರೆ ಸೈತಾನನು ಸ್ವರ್ಗದಿಂದ ಕೆಳಗೆ ದೊಬ್ಬಲ್ಪಟ್ಟು, ತನಗಿರುವ ಕಾಲವು ಕೊಂಚವೆಂದು ತಿಳಿದವನಾಗಿ ರೋಷಾವೇಶಗೊಂಡಿದ್ದಾನೆ.​—⁠ಪ್ರಕಟನೆ 12:12.

2. ಮಾನವಾತೀತ ಆತ್ಮಗಳೊಂದಿಗೆ ಹೋರಾಡುವಾಗ ನಮಗೆ ವಿಜಯವು ಹೇಗೆ ಸಾಧ್ಯ?

2 ಮಾನವಾತೀತ ಆತ್ಮ ಸೇನೆಗಳೊಂದಿಗೆ ನಡೆಯುವ ಹೋರಾಟದಲ್ಲಿ ಜಯಹೊಂದುವುದು ಸಾಧ್ಯವೊ? ಸಾಧ್ಯ, ಆದರೆ ಯೆಹೋವನನ್ನು ಪೂರ್ಣವಾಗಿ ಅವಲಂಬಿಸುವಲ್ಲಿ ಮಾತ್ರ. ನಾವು ಆತನಿಗೆ ಕಿವಿಗೊಟ್ಟು ಆತನ ವಾಕ್ಯಕ್ಕೆ ವಿಧೇಯರಾಗಬೇಕು. ಹೀಗೆ ಮಾಡುವುದರಿಂದ, ಸೈತಾನನ ನಿಯಂತ್ರಣದೊಳಗಿರುವವರು ಅನುಭವಿಸುವ ಹೆಚ್ಚಿನ ಶಾರೀರಿಕ, ನೈತಿಕ ಮತ್ತು ಭಾವಾತ್ಮಕ ಹಾನಿಗಳಿಂದ ನಾವು ದೂರವಿರಸಾಧ್ಯವಿದೆ.​—⁠ಯಾಕೋಬ 4:⁠7.

ಆಕಾಶ ಮಂಡಲದಲ್ಲಿರುವ ಲೋಕಾಧಿಪತಿಗಳು

3. ಸೈತಾನನು ಯಾರನ್ನು ವಿಪರೀತವಾಗಿ ವಿರೋಧಿಸುತ್ತಾನೆ, ಮತ್ತು ಹೇಗೆ?

3 ಯೆಹೋವನು ಸ್ವರ್ಗದ ತನ್ನ ವೀಕ್ಷಣಾ ಸ್ಥಳದಿಂದ ನೋಡುತ್ತಾ, ಲೋಕ ಸನ್ನಿವೇಶವನ್ನು ನಮಗೆ ಸ್ಪಷ್ಟವಾಗಿ ವರ್ಣಿಸುತ್ತಾನೆ. ಆತನು ಅಪೊಸ್ತಲ ಯೋಹಾನನಿಗೆ, “ಕೆಂಪಾದ ಮಹಾ ಘಟಸರ್ಪ”ದ ಹಾಗೆ ಚಿತ್ರಿಸಲ್ಪಟ್ಟ ಸೈತಾನನ ದರ್ಶನವನ್ನು ಕೊಟ್ಟನು. ಸ್ವರ್ಗದಲ್ಲಿ 1914ರಲ್ಲಿ ದೇವರ ಮೆಸ್ಸೀಯ ರಾಜ್ಯವು ಜನಿಸಿದೊಡನೆ ಅದನ್ನು ನುಂಗಿಬಿಡಲು ಆ ಘಟಸರ್ಪನು ಸಿದ್ಧನಾಗಿದ್ದನು. ಇದರಲ್ಲಿ ವಿಫಲಗೊಂಡ ಅವನು, ಆ ರಾಜ್ಯದ ಭೂಪ್ರತಿನಿಧಿಗಳ ವಿರುದ್ಧ ವಿಪರೀತ ಭೀಕರವಾದ ವಿರೋಧದ ಸುರಿಮಳೆಯನ್ನೇ ಸುರಿಸಿದನು. (ಪ್ರಕಟನೆ 12:​3, 4, 13, 17) ಈ ಯುದ್ಧವನ್ನು ಸೈತಾನನು ಹೇಗೆ ನಡೆಸುತ್ತಾನೆ? ತನ್ನ ಸ್ವಂತ ಮಾನವ ಪ್ರತಿನಿಧಿಗಳ ಮೂಲಕವಾಗಿಯೇ.

4. ಮಾನವ ಸರಕಾರಗಳ ಶಕ್ತಿಗೆ ಮೂಲನು ಯಾರು, ಮತ್ತು ಅದು ನಮಗೆ ಹೇಗೆ ಗೊತ್ತು?

4 ಬಳಿಕ ಏಳು ತಲೆಗಳು ಮತ್ತು ಹತ್ತು ಕೊಂಬುಗಳಿದ್ದ ಕಾಡುಮೃಗವನ್ನು, ಅಂದರೆ “ಸಕಲ ಕುಲ ಪ್ರಜೆ ಭಾಷೆ ಜನಾಂಗಗಳ ಮೇಲೆ” ಅಧಿಕಾರವಿದ್ದ ಕಾಡುಮೃಗವನ್ನು ಯೋಹಾನನಿಗೆ ತೋರಿಸಲಾಯಿತು. ಆ ಮೃಗವು ಜಾಗತಿಕ ರಾಜಕೀಯ ವ್ಯವಸ್ಥೆಯನ್ನು ಪೂರ್ತಿಯಾಗಿ ಪ್ರತಿನಿಧಿಸಿತು. “ಅದಕ್ಕೆ ಘಟಸರ್ಪನು [ಪಿಶಾಚನಾದ ಸೈತಾನನು] ಶಕ್ತಿಯನ್ನೂ ಸಿಂಹಾಸನವನ್ನೂ ಮಹಾ ಅಧಿಕಾರವನ್ನೂ ಕೊಟ್ಟನು” ಎಂದು ಯೋಹಾನನಿಗೆ ಹೇಳಲಾಯಿತು. (ಪ್ರಕಟನೆ 13:1, 2, 7) ಹೌದು, ಮಾನವ ಸರಕಾರಗಳ ಶಕ್ತಿಯ ಮತ್ತು ಅಧಿಕಾರದ ಮೂಲನು ಸೈತಾನನೇ ಆಗಿದ್ದಾನೆ. ಹೀಗೆ, ಅಪೊಸ್ತಲ ಪೌಲನು ಬರೆದಂತೆ, ಮಾನವ ಸರಕಾರಗಳನ್ನು ನಿಯಂತ್ರಿಸುವ ನಿಜವಾದ ‘ಲೋಕಾಧಿಪತಿಗಳು’ “ಆಕಾಶ ಮಂಡಲದಲ್ಲಿರುವ ದುರಾತ್ಮಗಳ ಸೇನೆ”ಯೇ ಆಗಿದ್ದಾರೆ. ಯೆಹೋವನನ್ನು ಆರಾಧಿಸಲು ಬಯಸುವವರೆಲ್ಲರೂ ಇದರ ಪೂರ್ಣ ವೈಶಿಷ್ಟ್ಯವನ್ನು ಗ್ರಹಿಸುವುದು ಆವಶ್ಯಕ.​—⁠ಲೂಕ 4:​5, 6.

5. ಈಗ ರಾಜಕೀಯ ಪ್ರಭುಗಳನ್ನು ಯಾವುದಕ್ಕೆ ಒಟ್ಟುಗೂಡಿಸಲಾಗುತ್ತಿದೆ?

5 ಅನೇಕ ರಾಜಕೀಯ ಅಧಿಪತಿಗಳು ತಾವು ಧಾರ್ಮಿಕರೆಂದು ಹೇಳಿಕೊಳ್ಳುವುದಾದರೂ, ಜನಾಂಗಗಳಲ್ಲಿ ಯಾವುದೇ ಜನಾಂಗವೂ ಯೆಹೋವನ ಆಳಿಕೆಗಾಗಲಿ, ಆತನ ನೇಮಿತ ಅರಸನಾದ ಯೇಸು ಕ್ರಿಸ್ತನ ಆಳಿಕೆಗಾಗಲಿ ಅಧೀನವಾಗಿರುವುದಿಲ್ಲ. ಎಲ್ಲರೂ ತಮ್ಮ ಸ್ವಂತ ಅಧಿಕಾರವನ್ನು ಬಿಗಿಯಾಗಿ ಹಿಡಿದುಕೊಂಡಿರಲು ಹೋರಾಡುತ್ತಾರೆ. ಇಂದು, ಪ್ರಕಟನೆಯಲ್ಲಿರುವ ವೃತ್ತಾಂತವು ತೋರಿಸುವಂತೆ, “ದೆವ್ವಗಳಿಂದ ಪ್ರೇರಿತವಾದ ಅಭಿವ್ಯಕ್ತಿಗಳು” (NW) ಲೋಕದ ಪ್ರಭುಗಳನ್ನು ಅರ್ಮಗೆದೋನಿನಲ್ಲಿ ನಡೆಯುವ “ಸರ್ವಶಕ್ತನಾದ ದೇವರ ಮಹಾದಿನದಲ್ಲಾಗುವ ಯುದ್ಧಕ್ಕೆ” ಒಟ್ಟುಗೂಡಿಸುತ್ತವೆ.​—⁠ಪ್ರಕಟನೆ 16:13, 14, 16; 19:17-19.

6. ಸೈತಾನನ ವ್ಯವಸ್ಥೆಗೆ ಬೆಂಬಲ ನೀಡುವಂತೆ ನಡೆಸಲ್ಪಡುವುದರಿಂದ ದೂರವಿರಲು ಜಾಗರೂಕತೆ ಏಕೆ ಆವಶ್ಯಕ?

6 ಪ್ರತಿ ದಿನ, ಜನರ ಜೀವನಗಳು ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ಹೋರಾಟಗಳಿಂದ ಪ್ರಭಾವಿತವಾಗುವುದರಿಂದ ಇದು ಮಾನವ ಕುಟುಂಬವನ್ನು ಛಿದ್ರಗೊಳಿಸುತ್ತದೆ. ಈ ಹೋರಾಟಗಳಲ್ಲಿ, ಜನರು ಬಾಯಿಮಾತಿನ ಮೂಲಕವಾಗಿಯಾಗಲಿ ಬೇರೆ ರೀತಿಗಳಲ್ಲಾಗಲಿ, ತಾವು ಯಾವುದರ ಭಾಗವಾಗಿದ್ದಾರೊ ಆ ಜನಾಂಗ, ಕುಲ, ಭಾಷಾಗುಂಪು ಅಥವಾ ಸಾಮಾಜಿಕ ವರ್ಗದ ಪಕ್ಷಗಳನ್ನು ವಹಿಸುವುದು ಸಾಮಾನ್ಯ. ಜನರು ಒಂದು ಹೋರಾಟದಲ್ಲಿ ಪ್ರತ್ಯಕ್ಷವಾಗಿ ಸೇರಿರದಿದ್ದರೂ, ಅವರು ಅನೇಕವೇಳೆ ಒಂದು ಅಥವಾ ಇನ್ನೊಂದು ಪಕ್ಷವನ್ನು ಮೆಚ್ಚುವ ಜನರಾಗಿ ತಮ್ಮನ್ನು ತೋರಿಸಿಕೊಳ್ಳುತ್ತಾರೆ. ಆದರೆ ಅವರು ಯಾವ ವ್ಯಕ್ತಿಯನ್ನೇ ಆಗಲಿ ಯಾವ ಉದ್ದೇಶವನ್ನೇ ಆಗಲಿ ಸಮ್ಮತಿಸಿದರೂ, ಅವರು ನಿಜವಾಗಿಯೂ ತಮ್ಮ ಬೆಂಬಲವನ್ನು ಯಾರಿಗೆ ಕೊಡುತ್ತಿದ್ದಾರೆ? ಬೈಬಲು ಮುಚ್ಚುಮರೆಯಿಲ್ಲದೆ ಹೇಳುವುದು: “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ.” (1 ಯೋಹಾನ 5:19) ಹಾಗಾದರೆ, ಒಬ್ಬನು ತಾನು ಉಳಿದ ಮಾನವಕುಲದೊಂದಿಗೆ ತಪ್ಪು ದಾರಿಗೆಳೆಯಲ್ಪಡುವುದರಿಂದ ಹೇಗೆ ದೂರವಿರಬಲ್ಲನು? ದೇವರ ರಾಜ್ಯಕ್ಕೆ ಪೂರ್ಣ ಬೆಂಬಲವನ್ನು ನೀಡಿ, ಲೋಕ ಹೋರಾಟಗಳ ವಿಷಯದಲ್ಲಿ ಪೂರ್ಣ ತಾಟಸ್ಥ್ಯವನ್ನು ಕಾಪಾಡಿಕೊಳ್ಳುವ ಮೂಲಕವೇ.​—⁠ಯೋಹಾನ 17:​15, 16.

ಕೆಡುಕನ ತಂತ್ರೋಪಾಯಗಳು

7. ಸುಳ್ಳುಧರ್ಮವನ್ನು ಸೈತಾನನು ಉಪಯೋಗಿಸಿರುವುದರಲ್ಲಿ ಅವನ ಜಾಣತನವು ಹೇಗೆ ವ್ಯಕ್ತವಾಗಿದೆ?

7 ಇತಿಹಾಸದಾದ್ಯಂತ ಸೈತಾನನು ವ್ಯಕ್ತಿಗಳನ್ನು ಸತ್ಯಾರಾಧನೆಯಿಂದ ದೂರ ತೊಲಗಿಸಲು ಮೌಖಿಕ ಹಾಗೂ ಶಾರೀರಿಕ ಹಿಂಸೆಗಳನ್ನು ಉಪಯೋಗಿಸಿದ್ದಾನೆ. ಅವನು ಹೆಚ್ಚು ಕುಯುಕ್ತಿಯ ಸಾಧನಗಳನ್ನು ಅಂದರೆ ಕಪಟೋಪಾಯದ ಕ್ರಿಯೆಗಳನ್ನೂ ತಂತ್ರೋಪಾಯಗಳನ್ನೂ ಉಪಯೋಗಿಸಿದ್ದುಂಟು. ಅವನು ಜಾಣತನದಿಂದ ಮಾನವಕುಲದ ಅಧಿಕಾಂಶ ಭಾಗವನ್ನು ಸುಳ್ಳುಧರ್ಮದ ಮೂಲಕ, ತಾವು ದೇವರನ್ನು ಸೇವಿಸುತ್ತೇವೆಂದು ಅವರು ನೆನಸುವಂತೆ ಮಾಡಿ ಕತ್ತಲೆಯಲ್ಲಿ ಇಟ್ಟಿದ್ದಾನೆ. ದೇವರ ನಿಷ್ಕೃಷ್ಟ ಜ್ಞಾನದ ಮತ್ತು ಸತ್ಯದ ಮೇಲಿನ ಪ್ರೀತಿಯ ಕೊರತೆಯುಳ್ಳವರಾದ ಅವರು ರಹಸ್ಯಾರ್ಥದ ಮತ್ತು ಭಾವಾತಿರೇಕದ ಧಾರ್ಮಿಕ ಆರಾಧನೆಗಳಿಗೆ ಆಕರ್ಷಿತರಾಗಬಹುದು ಅಥವಾ ಸೂಚಕಕಾರ್ಯಗಳಿಂದ ಪ್ರಭಾವಿಸಲ್ಪಡಬಹುದು. (2 ಥೆಸಲೊನೀಕ 2:​9, 10) ಆದರೆ ಒಂದು ಕಾಲದಲ್ಲಿ ಸತ್ಯಾರಾಧನೆಯಲ್ಲಿ ಭಾಗಿಗಳಾಗುತ್ತಿದ್ದ ಕೆಲವರೂ, “ವಂಚಿಸುವ ಆತ್ಮಗಳ ನುಡಿಗಳಿಗೂ ದೆವ್ವಗಳ ಬೋಧನೆಗಳಿಗೂ ಲಕ್ಷ್ಯಕೊಟ್ಟು . . . ಭ್ರಷ್ಟರಾಗುವ”ರೆಂಬ ಎಚ್ಚರಿಕೆ ನಮಗಿದೆ. (1 ತಿಮೊಥೆಯ 4:1) ಅದು ಹೇಗೆ ಸಂಭವಿಸಬಹುದು?

8. ನಾವು ಮೊದಲು ಯೆಹೋವನನ್ನು ಆರಾಧಿಸುತ್ತಿರುವುದಾದರೂ ಸೈತಾನನು ನಮ್ಮನ್ನು ಸುಳ್ಳುಧರ್ಮಕ್ಕೆ ಹೇಗೆ ಸೆಳೆಯಬಲ್ಲನು?

8 ಸೈತಾನನು ಕುತಂತ್ರದಿಂದ ನಮ್ಮ ಬಲಹೀನತೆಗಳನ್ನು ಉಪಯೋಗಿಸುತ್ತಾನೆ. ಮಾನವ ಭಯವು ನಮ್ಮನ್ನು ಇನ್ನೂ ತಡೆದುಹಿಡಿದಿದೆಯೊ? ಹಾಗಿರುವಲ್ಲಿ, ಸುಳ್ಳು ಧಾರ್ಮಿಕ ಮೂಲದ ಆಚಾರಗಳಲ್ಲಿ ಭಾಗವಹಿಸಲು ಸಂಬಂಧಿಗಳಿಂದಲೂ ನೆರೆಯವರಿಂದಲೂ ಬರುವ ಒತ್ತಡಕ್ಕೆ ನಾವು ಬಲಿಬೀಳಬಹುದು. ನಾವು ಹೆಮ್ಮೆಪಡುವವರೊ? ಹಾಗಿರುವಲ್ಲಿ, ಯಾರಾದರೂ ಸಲಹೆ ನೀಡುವಲ್ಲಿ ಅಥವಾ ನಾವು ಸಮರ್ಥಿಸುವ ವಿಚಾರಗಳನ್ನು ಇತರರು ಒಪ್ಪದಿರುವಲ್ಲಿ ನಾವು ಕೋಪಗೊಳ್ಳಬಹುದು. (ಜ್ಞಾನೋಕ್ತಿ 15:10; 29:25; 1 ತಿಮೊಥೆಯ 6:3, 4) ಕ್ರಿಸ್ತನ ಮಾದರಿಗೆ ನಮ್ಮ ದೃಷ್ಟಿಕೋನವನ್ನು ಹೊಂದಿಸಿಕೊಳ್ಳುವ ಬದಲಿಗೆ, ಬೈಬಲನ್ನು ಕೇವಲ ಓದಿ ಒಳ್ಳೆಯ ಜೀವನವನ್ನು ನಡಿಸುವುದಷ್ಟೇ ಸಾಕು ಎಂದು ಹೇಳುತ್ತಾ ನಮ್ಮ “ಕಿವಿಗೆ ಹಿತವೆನಿಸುವ ಬೋಧನೆಯ” ಕಡೆಗೆ ಓಲುವ ಪ್ರವೃತ್ತಿ ನಮಗಿರಬಹುದು. (2 ತಿಮೊಥೆಯ 4:⁠3ಪರಿಶುದ್ಧ ಬೈಬಲ್‌ *) ನಾವು ಇನ್ನೊಂದು ಧಾರ್ಮಿಕ ಗುಂಪಿಗೆ ಸೇರಿಕೊಳ್ಳುತ್ತೇವೊ, ನಮ್ಮ ಸ್ವಂತ ಧರ್ಮಕ್ಕೇ ಅಂಟಿಕೊಂಡಿರುತ್ತೇವೊ ಎಂಬುದು ಸೈತಾನನಿಗೆ ಪ್ರಾಮುಖ್ಯವಲ್ಲ. ದೇವರು ತನ್ನ ವಾಕ್ಯ ಮತ್ತು ತನ್ನ ಸಂಸ್ಥೆಯ ಮೂಲಕ ನಡೆಸುವ ಮಾರ್ಗದಲ್ಲಿ ನಾವು ಯೆಹೋವನನ್ನು ಆರಾಧಿಸಬಾರದೆಂಬುದೇ ಅವನ ಏಕಮಾತ್ರ ಧ್ಯೇಯ.

9. ಸೈತಾನನು ತನ್ನ ಗುರಿಗಳನ್ನು ಸಾಧಿಸಲು ಸ್ವಾಭಾವಿಕ ಲೈಂಗಿಕಾಸಕ್ತಿಯನ್ನು ಕುತಂತ್ರದಿಂದ ಹೇಗೆ ಉಪಯೋಗಿಸುತ್ತಾನೆ?

9 ನಮ್ಮ ಸ್ವಾಭಾವಿಕ ಅಪೇಕ್ಷೆಗಳನ್ನು ಕೆಟ್ಟ ರೀತಿಯಲ್ಲಿ ತೃಪ್ತಿಪಡಿಸಿಕೊಳ್ಳುವಂತೆ ಸಹ ಸೈತಾನನು ಕುತಂತ್ರದಿಂದ ನಮ್ಮನ್ನು ಪ್ರೇರಿಸುತ್ತಾನೆ. ಲೈಂಗಿಕ ಅಕ್ರಮ ಸಂಬಂಧದ ಅಪೇಕ್ಷೆಯನ್ನು ಹುಟ್ಟಿಸುತ್ತಾ ಅವನು ಇದನ್ನು ಮಾಡಿದ್ದಾನೆ. ಬೈಬಲಿನ ನೈತಿಕತೆಯನ್ನು ತಳ್ಳಿಹಾಕುತ್ತಾ, ಲೋಕದಲ್ಲಿ ಅನೇಕರು ಅವಿವಾಹಿತರ ಮಧ್ಯೆ ಲೈಂಗಿಕ ಸಂಬಂಧಗಳು ನ್ಯಾಯಸಮ್ಮತವಾದ ಸುಖಾನುಭವವೆಂದು ಅಥವಾ ತಾವು ಪ್ರೌಢತೆಗೆ ಬಂದಿದ್ದೇವೆಂದು ತೋರಿಸುವ ವಿಧವೆಂದು ನೆನಸುತ್ತಾರೆ. ವಿವಾಹಿತರ ವಿಷಯದಲ್ಲಿ ಏನು? ಅನೇಕರು ವ್ಯಭಿಚಾರ ಮಾಡುತ್ತಾರೆ. ಮತ್ತು ತಮ್ಮ ವಿವಾಹದಲ್ಲಿ ಯಾವುದೇ ನೈತಿಕ ಅಪನಂಬಿಗಸ್ತಿಕೆಯಿಲ್ಲದಿದ್ದರೂ, ಅನೇಕರು ಇನ್ನೊಬ್ಬ ವ್ಯಕ್ತಿಯೊಂದಿಗೆ ಜೀವಿಸುವ ಉದ್ದೇಶದಿಂದ ವಿವಾಹ ವಿಚ್ಛೇದವನ್ನೊ ಪ್ರತ್ಯೇಕವಾಸದ ಏರ್ಪಾಡನ್ನೊ ಪಡೆದುಕೊಳ್ಳುತ್ತಾರೆ. ಸೈತಾನನ ಕಪಟೋಪಾಯದ ಮಾರ್ಗವು ಜನರು ಈಗಲೇ ಸುಖಾನುಭವವನ್ನು ಪಡೆಯುವಂತೆ ಪ್ರಭಾವಿಸಿ, ತಮಗೆ ಮತ್ತು ಇತರರಿಗೆ ಅದರಿಂದ ಬರಬಹುದಾದ ವ್ಯಾಪಕವಾದ ಪರಿಣಾಮಗಳನ್ನು ಮಾತ್ರವಲ್ಲ, ವಿಶೇಷವಾಗಿ ಯೆಹೋವನ ಮತ್ತು ಆತನ ಪುತ್ರನ ಕಡೆಗೆ ಅವರಿಗಿರುವ ಸಂಬಂಧದ ಮೇಲೆ ಬೀರುವ ಪರಿಣಾಮಗಳನ್ನೂ ಅಸಡ್ಡೆಮಾಡುವಂತೆ ಪ್ರೇರಿಸುತ್ತದೆ.​—⁠1 ಕೊರಿಂಥ 6:9, 10; ಗಲಾತ್ಯ 6:7, 8.

10. ಸೈತಾನನು ಲೈಂಗಿಕ ದುರಾಚಾರ ಮತ್ತು ಹಿಂಸಾಚಾರಗಳ ವಿಷಯದಲ್ಲಿ ನಮ್ಮ ಮನೋಭಾವವನ್ನು ಯಾವ ಮಾಧ್ಯಮಗಳ ಮುಖಾಂತರ ಉರುಳಿಸಲು ಪ್ರಯತ್ನಿಸುತ್ತಾನೆ?

10 ಇನ್ನೊಂದು ಸ್ವಾಭಾವಿಕ ಅಪೇಕ್ಷೆಯು ಮನೋರಂಜನೆಯಾಗಿದೆ. ಹಿತಕರವಾಗಿರುವಲ್ಲಿ ಅದು ನಮ್ಮನ್ನು ಶಾರೀರಿಕವಾಗಿಯೂ, ಮಾನಸಿಕವಾಗಿಯೂ, ಭಾವಪೂರಿತವಾಗಿಯೂ ಚೈತನ್ಯಗೊಳಿಸಬಲ್ಲದು. ಆದರೆ ಸೈತಾನನು ಇಂತಹ ಮನರಂಜನೆಯ ಸಮಯವನ್ನು ಚತುರೋಪಾಯದಿಂದ ನಮ್ಮ ಮನಸ್ಸನ್ನು ದೇವರಿಗೆ ವಿಮುಖವಾಗುವಂತೆ ಮಾಡಲು ಉಪಯೋಗಿಸುವಾಗ ನಮ್ಮ ಪ್ರತಿಕ್ರಿಯೆಯೇನು? ಉದಾಹರಣೆಗೆ, ಲೈಂಗಿಕ ದುರಾಚಾರ ಮತ್ತು ಹಿಂಸಾಚಾರವನ್ನು ಯೆಹೋವನು ದ್ವೇಷಿಸುತ್ತಾನೆಂಬುದು ನಮಗೆ ಗೊತ್ತು. ಆದರೆ, ಚಲನಚಿತ್ರ, ಟಿವಿ ಕಾರ್ಯಕ್ರಮ ಅಥವಾ ನಾಟಕ ಪ್ರದರ್ಶನಗಳು ಇವನ್ನು ತೋರಿಸುವಲ್ಲಿ, ನಾವು ಸುಮ್ಮನಿದ್ದು ಎಲ್ಲವನ್ನೂ ನೋಡುತ್ತಿರುತ್ತೇವೊ? ತನ್ನ ಅಧೋಲೋಕದ ಬಂಧನವು ಹತ್ತರಿಸಿದಂತೆ, ಇಂತಹ ವಿಷಯಗಳು ಹೆಚ್ಚು ಕೀಳ್ಮಟ್ಟದ್ದಾಗುವಂತೆ ಸೈತಾನನು ನೋಡಿಕೊಳ್ಳುವನೆಂಬುದನ್ನು ಮನಸ್ಸಿನಲ್ಲಿಡಿರಿ. ಏಕೆಂದರೆ, “ದುಷ್ಟರೂ ವಂಚಕರೂ ಇತರರನ್ನು ಮೋಸಮಾಡುತ್ತಾ ತಾವೇ ಮೋಸಹೋಗುತ್ತಾ ಹೆಚ್ಚಾದ ಕೆಟ್ಟತನಕ್ಕೆ ಹೋಗುವರು.” (2 ತಿಮೊಥೆಯ 3:13; ಪ್ರಕಟನೆ 20:​1-3) ಆದುದರಿಂದ, ನಾವು ಸೈತಾನನ ತಂತ್ರೋಪಾಯಗಳ ವಿಷಯದಲ್ಲಿ ಸದಾ ಎಚ್ಚರಿಕೆಯಿಂದಿರಬೇಕು.​—⁠ಆದಿಕಾಂಡ 6:13; ಕೀರ್ತನೆ 11:5; ರೋಮಾಪುರ 1:24-32.

11. ಪ್ರೇತವ್ಯವಹಾರವಾದದ ಸಂಬಂಧದಲ್ಲಿ ಸತ್ಯವನ್ನು ತಿಳಿದಿರುವಂಥ ವ್ಯಕ್ತಿಯೊಬ್ಬನು ಸಹ ಎಚ್ಚರವಾಗಿರದಿರುವಲ್ಲಿ ಯಾವ ವಿಧಗಳಲ್ಲಿ ಅದರಲ್ಲಿ ಸಿಕ್ಕಿಬೀಳಬಹುದು?

11 ಪ್ರೇತವ್ಯವಹಾರವಾದದಲ್ಲಿ ಅಂದರೆ ಕಾಲಜ್ಞಾನ ನುಡಿಯುವುದು, ಮಾಟಮಾಡುವುದು ಅಥವಾ ಮೃತರನ್ನು ಸಂಪರ್ಕಿಸುವ ಯಾವುದೇ ವಿಧದಲ್ಲಿ ಒಳಗೂಡುವವರು ಯೆಹೋವನಿಗೆ ಅಸಹ್ಯರು ಎಂದೂ ನಾವು ಬಲ್ಲೆವು. (ಧರ್ಮೋಪದೇಶಕಾಂಡ 18:​10-12) ಇದನ್ನು ಮನಸ್ಸಿನಲ್ಲಿಟ್ಟುಕೊಂಡು, ನಾವು ಅಂತಹ ಆತ್ಮಮಾಧ್ಯಮಗಳಾಗಿರುವ ವ್ಯಕ್ತಿಗಳನ್ನು ವಿಚಾರಿಸೆವು ಮಾತ್ರವಲ್ಲ, ಅವರ ದೆವ್ವಪ್ರೇರಿತ ಕೌಶಲಗಳನ್ನು ನಡೆಸುವಂತೆ ನಾವು ಅವರನ್ನು ನಮ್ಮ ಮನೆಗೆ ಸ್ವಾಗತಿಸೆವು. ಆದರೆ ಅವರು ಟಿವಿ ಪರದೆಯ ಮೇಲೊ ಇಂಟರ್ನೆಟ್‌ನಲ್ಲಿಯೊ ಕಂಡುಬರುವಲ್ಲಿ ಅವರಿಗೆ ಕಿವಿಗೊಡುವೆವೊ? ನಾವು ಮಾಂತ್ರಿಕರಿಂದ ಯಾವುದೇ ಚಿಕಿತ್ಸೆಯನ್ನು ಪಡೆದುಕೊಳ್ಳೆವಾದರೂ, ಹೊಸದಾಗಿ ಹುಟ್ಟಿದ ಮಗುವಿಗೆ ಯಾವುದೇ ಹಾನಿ ಬರಬಾರದೆಂಬ ಆಲೋಚನೆಯಿಂದ ಅದರ ಕೈಗೆ ತಾಯಿತಿಯನ್ನು ಕಟ್ಟುವೆವೊ? ವಶೀಕರಣ ವಿದ್ಯೆಯನ್ನು ಬೈಬಲು ಖಂಡಿಸುತ್ತದೆಂದು ತಿಳಿದಿದ್ದರೂ, ವಶೀಕರಿಸುವ ವ್ಯಕ್ತಿಯು ನಮ್ಮ ಮನಸ್ಸನ್ನು ನಿಯಂತ್ರಿಸುವಂತೆ ನಾವು ಬಿಡುವೆವೊ?​—⁠ಗಲಾತ್ಯ 5:​19-21.

12. (ಎ) ನಮಗೆ ತಪ್ಪೆಂದು ತಿಳಿದಿರುವ ವಿಚಾರಗಳ ಕುರಿತು ಯೋಚಿಸುವಂತೆ ಮಾಡಲು ಸಂಗೀತವನ್ನು ಹೇಗೆ ಉಪಯೋಗಿಸಲಾಗಿದೆ? (ಬಿ) ಒಬ್ಬನ ಉಡುಪು, ಕೇಶಶೈಲಿ ಅಥವಾ ವಾಕ್‌ಶೈಲಿಯು, ಯೆಹೋವನಿಗೆ ಮೆಚ್ಚಿಕೆಯಿಲ್ಲದವರ ಜೀವನ ರೀತಿಗೆ ಶ್ಲಾಘನೆಯನ್ನು ಹೇಗೆ ತೋರಿಸಬಹುದು? (ಸಿ) ಸೈತಾನನ ತಂತ್ರೋಪಾಯಗಳಿಗೆ ಬಲಿಬೀಳುವುದರಿಂದ ತಪ್ಪಿಸಿಕೊಳ್ಳಬೇಕಾದರೆ ನಮ್ಮಿಂದ ಏನು ಅಪೇಕ್ಷಿಸಲ್ಪಡುತ್ತದೆ?

12 ಜಾರತ್ವ ಮತ್ತು ಬಂಡುತನದ ಯಾವ ಸುದ್ದಿಯನ್ನೂ (ಅಶುದ್ಧವಾದ ಉದ್ದೇಶಗಳಿಂದ) ಎತ್ತಲೂ ಬಾರದೆಂದು ಬೈಬಲು ಹೇಳುತ್ತದೆ. (ಎಫೆಸ 5:​3-5) ಆದರೆ ಆ ವಿಷಯಗಳು ಮನಮೆಚ್ಚಿಸುವ ರಾಗವಿನ್ಯಾಸದಿಂದ, ಆಕರ್ಷಕವಾದ ತರಂಗಧಾಟಿಯಿಂದ ಅಥವಾ ಪಟ್ಟುಹಿಡಿದು ಬರುವ ತಾಳಗತಿಯಿಂದ ಜೊತೆಗೂಡಿರುವಾಗ ಆಗೇನು? ನಾವು ವಿವಾಹದ ಹೊರಗಣ ಲೈಂಗಿಕಾಚಾರವನ್ನು, ಸುಖಾನುಭವಕ್ಕಾಗಿ ಅಮಲೌಷಧಗಳ ಉಪಯೋಗವನ್ನು ಮತ್ತು ಇತರ ಪಾಪಕರ ಕೃತ್ಯಗಳನ್ನು ಮಹಿಮೆಪಡಿಸುವ ಗೀತಗಳ ಮಾತುಗಳನ್ನು ಪದೇ ಪದೇ ನುಡಿಯುವೆವೊ? ಅಥವಾ, ಇಂತಹ ವಿಷಯಗಳಲ್ಲಿ ಮಗ್ನರಾಗಿರುವವರ ಜೀವನರೀತಿಗಳನ್ನು ನಾವು ಅನುಕರಿಸಬಾರದೆಂದು ನಮಗೆ ತಿಳಿದಿರುವಾಗ, ಅವರ ಉಡುಗೆತೊಡುಗೆಗಳನ್ನು, ಕೇಶಶೈಲಿಯನ್ನು ಅಥವಾ ಅವರು ಮಾತಾಡುವ ವಿಧವನ್ನು ಅನುಕರಿಸಿ ನಾವು ನಮ್ಮನ್ನು ಅವರೊಂದಿಗೆ ಗುರುತಿಸಿಕೊಳ್ಳುವೆವೊ? ಮನುಷ್ಯರನ್ನು ಸೆಳೆದು ತನ್ನ ಭ್ರಷ್ಟವಾದ ಆಲೋಚನಾ ರೀತಿಗೆ ಹೊಂದಿಕೊಳ್ಳುವಂತೆ ಮಾಡಲು ಸೈತಾನನು ಎಂತಹ ವಂಚನೆಯ ವಿಧಾನಗಳನ್ನು ಉಪಯೋಗಿಸುತ್ತಾನೆ! (2 ಕೊರಿಂಥ 4:​3, 4) ಅವನ ತಂತ್ರೋಪಾಯಗಳಿಗೆ ಬಲಿಬೀಳದಿರಬೇಕಾದರೆ, ನಾವು ಲೋಕದೊಂದಿಗೆ ತೇಲಿಕೊಂಡು ಹೋಗಬಾರದು. ‘ಅಂಧಕಾರದ ಲೋಕಾಧಿಪತಿಗಳು’ ಯಾರೆಂಬುದನ್ನು ನಾವು ಮನಸ್ಸಿನಲ್ಲಿಟ್ಟುಕೊಂಡು, ಅವರ ಪ್ರಭಾವದೆದುರು ಶ್ರದ್ಧಾಪೂರ್ವಕವಾಗಿ ಹೋರಾಡಬೇಕು.​—⁠1 ಪೇತ್ರ 5:⁠8.

ವಿಜಯಿಗಳಾಗಲು ಸನ್ನದ್ಧರು

13. ನಾವು ಅಪರಿಪೂರ್ಣರಾಗಿರುವಾಗ ನಮ್ಮಲ್ಲಿ ಯಾವನಾದರೂ ಸೈತಾನನು ಆಳುತ್ತಿರುವ ಲೋಕವನ್ನು ಜಯಿಸುವುದು ಹೇಗೆ ಸಾಧ್ಯ?

13 ಯೇಸು ತನ್ನ ಮರಣಕ್ಕೆ ಮೊದಲು ಅಪೊಸ್ತಲರಿಗೆ ಹೇಳಿದ್ದು: “ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ.” (ಯೋಹಾನ 16:33) ಅವರೂ ವಿಜಯಿಗಳಾಗಿರಸಾಧ್ಯವಿತ್ತು. ಸುಮಾರು 60 ವರುಷಗಳಾದ ಮೇಲೆ ಅಪೊಸ್ತಲ ಯೋಹಾನನು ಬರೆದುದು: “ಯೇಸುವು ದೇವರ ಮಗನೆಂದು ನಂಬಿದವರೇ ಅಲ್ಲದೆ ಲೋಕವನ್ನು ಜಯಿಸುವವರು ಇನ್ನಾರಿದ್ದಾರೆ?” (1 ಯೋಹಾನ 5:5) ನಾವು ಯೇಸು ಮಾಡಿದಂತೆಯೇ, ಅವನ ಆಜ್ಞೆಗಳನ್ನು ಕೈಕೊಂಡು ದೇವರ ವಾಕ್ಯದಲ್ಲಿ ಭರವಸೆಯಿಡುವ ಮೂಲಕ ಅಂತಹ ನಂಬಿಕೆಯನ್ನು ತೋರಿಸುತ್ತೇವೆ. ನಮಗೆ ಇನ್ನೇನು ಅಗತ್ಯ? ಅವನು ಶಿರಸ್ಸಾಗಿರುವ ಸಭೆಗೆ ನಿಕಟವಾಗಿರುವುದೂ ಇದರಲ್ಲಿ ಸೇರಿದೆ. ನಾವು ಪಾಪಮಾಡಿ ತಪ್ಪಿಬೀಳುವಾಗ, ಶ್ರದ್ಧಾಪೂರ್ವಕವಾಗಿ ಪಶ್ಚಾತ್ತಾಪಪಟ್ಟು, ಕ್ರಿಸ್ತನ ಯಜ್ಞದ ಆಧಾರದ ಮೇರೆಗೆ ದೇವರಿಂದ ಕ್ಷಮೆಯನ್ನು ಯಾಚಿಸಬೇಕು. ಈ ರೀತಿಯಲ್ಲಿ, ಅಪರಿಪೂರ್ಣತೆ ಮತ್ತು ತಪ್ಪುಗಳು ನಮ್ಮಲ್ಲಿರುವುದಾದರೂ ನಾವು ಜಯಶಾಲಿಗಳಾಗಬಲ್ಲೆವು.​—⁠ಕೀರ್ತನೆ 130:​3, 4.

14. ಎಫೆಸ 6:​13-17ನ್ನು ಓದಿ, ಈ ಪರಿಚ್ಛೇದದಲ್ಲಿ ಕೊಟ್ಟಿರುವ ಪ್ರಶ್ನೆಗಳನ್ನು ಮತ್ತು ಶಾಸ್ತ್ರವಚನಗಳನ್ನು, ಆತ್ಮಿಕ ಆಯುಧಗಳಲ್ಲಿ ಪ್ರತಿಯೊಂದರಿಂದ ಬರುವ ಪ್ರಯೋಜನಗಳನ್ನು ಚರ್ಚಿಸಲು ಉಪಯೋಗಿಸಿರಿ.

14 ಜಯಹೊಂದಬೇಕಾದರೆ ನಾವು “ದೇವರು ದಯಪಾಲಿಸುವ ಸರ್ವಾಯುಧಗಳನ್ನು,” ಅವುಗಳಲ್ಲಿ ಯಾವುದನ್ನೂ ಅಸಡ್ಡೆ ಮಾಡದೆ ಧರಿಸುವುದು ಅಗತ್ಯ. ಎಫೆಸ 6:13-17ಕ್ಕೆ ನಿಮ್ಮ ಬೈಬಲನ್ನು ತೆರೆದು, ಆ ಸರ್ವಾಯುಧದ ವರ್ಣನೆಯನ್ನು ಓದಿರಿ. ಬಳಿಕ, ಈ ಕೆಳಗೆ ಕೊಡಲ್ಪಟ್ಟಿರುವ ಪ್ರಶ್ನೆಗಳಿಗೆ ಉತ್ತರ ನೀಡುತ್ತಾ, ಆ ಸರ್ವಾಯುಧದ ಪ್ರತಿಯೊಂದು ಶಸ್ತ್ರವು ಕೊಡುವ ರಕ್ಷಣೆಯಿಂದ ನೀವು ಹೇಗೆ ಪ್ರಯೋಜನ ಪಡೆಯಬಲ್ಲಿರೆಂಬುದನ್ನು ಪರಿಗಣಿಸಿರಿ.

“ಸತ್ಯವೆಂಬ ನಡುಕಟ್ಟು”

ನಮಗೆ ಸತ್ಯವು ತಿಳಿದಿರುವುದಾದರೂ ಕ್ರಮದ ಅಧ್ಯಯನ, ಬೈಬಲ್‌ ಸತ್ಯದ ಮನನ ಮತ್ತು ಕೂಟಗಳಲ್ಲಿ ಉಪಸ್ಥಿತಿಯು ನಮ್ಮನ್ನು ಸಂರಕ್ಷಿಸುವುದು ಹೇಗೆ? (1 ಕೊರಿಂಥ 10:12, 13; 2 ಕೊರಿಂಥ 13:5; ಫಿಲಿಪ್ಪಿ 4:8, 9)

“ನೀತಿಯೆಂಬ ವಜ್ರಕವಚ”

ಈ ನೀತಿಯ ಮಟ್ಟ ಯಾರದ್ದು? (ಪ್ರಕಟನೆ 15:⁠3)

ಯೆಹೋವನ ನೀತಿಯ ಮಾರ್ಗಗಳನ್ನು ಅನುಸರಿಸಲು ವಿಫಲರಾಗುವುದು ಒಬ್ಬನನ್ನು ಆತ್ಮಿಕ ಕೇಡಿಗೆ ಒಡ್ಡುವುದು ಹೇಗೆಂಬುದನ್ನು ದೃಷ್ಟಾಂತಿಸಿರಿ. (ಧರ್ಮೋಪದೇಶಕಾಂಡ 7:3, 4; 1 ಸಮುವೇಲ 15:22, 23)

‘ಸಮಾಧಾನದ ವಿಷಯವಾದ ಸುವಾರ್ತೆಯ ಕೆರಗಳನ್ನು ಮೆಟ್ಟಿಕೊಂಡಿರುವುದು’

ಶಾಂತಿಗಾಗಿರುವ ದೇವರ ಏರ್ಪಾಡುಗಳನ್ನು ಜನರಿಗೆ ತಿಳಿಸಲು ಹೋಗುವಂತೆ ನಮ್ಮ ಪಾದಗಳನ್ನು ಕಾರ್ಯಮಗ್ನವಾಗಿಟ್ಟುಕೊಳ್ಳುವುದು ನಮಗೆ ಭದ್ರತೆಯಾಗಿರುವುದು ಹೇಗೆ? (ಕೀರ್ತನೆ 73:2, 3; ರೋಮಾಪುರ 10:15; 1 ತಿಮೊಥೆಯ 5:13)

“ನಂಬಿಕೆಯೆಂಬ ಗುರಾಣಿ”

ನಮಗೆ ಸ್ಥಿರವಾಗಿ ಸ್ಥಾಪಿತವಾಗಿರುವ ನಂಬಿಕೆಯಿರುವುದಾದರೆ, ಸಂದೇಹವನ್ನೊ ಭಯವನ್ನೊ ಉಂಟುಮಾಡುವಂಥ ಉದ್ದೇಶವಿರುವ ಪ್ರಯತ್ನಗಳಿಗೆ ನಾವು ಹೇಗೆ ಪ್ರತಿವರ್ತನೆ ತೋರಿಸುವೆವು? (2 ಅರಸುಗಳು 6:15-17; 2 ತಿಮೊಥೆಯ 1:12)

“ರಕ್ಷಣೆಯೆಂಬ ಶಿರಸ್ತ್ರಾಣ”

ರಕ್ಷಣೆಯ ನಿರೀಕ್ಷೆಯು ಒಬ್ಬನನ್ನು ಅವನು ಪ್ರಾಪಂಚಿಕ ಸ್ವತ್ತುಗಳ ವಿಷಯದಲ್ಲಿ ವಿಪರೀತ ಚಿಂತಿತನಾಗುವುದರಿಂದ ದೂರವಿರಲು ಹೇಗೆ ಸಹಾಯ ನೀಡುತ್ತದೆ? (1 ತಿಮೊಥೆಯ 6:7-10, 19)

‘ಆತ್ಮದ ಕತ್ತಿ’

ನಮ್ಮ ಅಥವಾ ಇತರರ ಆತ್ಮಿಕತೆಗೆ ಎದುರಾಗಿರುವ ಸಂಗತಿಗಳೊಂದಿಗೆ ಹೋರಾಡುವಾಗ ನಾವು ಯಾವಾಗಲೂ ಯಾವುದರ ಮೇಲೆ ಆತುಕೊಳ್ಳಬೇಕು? (ಕೀರ್ತನೆ 119:98; ಜ್ಞಾನೋಕ್ತಿ 3:5, 6; ಮತ್ತಾಯ 4:3, 4)

ನಮ್ಮ ಆತ್ಮಿಕ ಯುದ್ಧೋದ್ಯಮದಲ್ಲಿ ಜಯಹೊಂದಲು ಇನ್ನಾವುದು ಮಹತ್ವವುಳ್ಳದ್ದು? ಅದನ್ನು ಎಷ್ಟು ಬಾರಿ ಉಪಯೋಗಿಸಬೇಕು? ಮತ್ತು ಯಾರ ಪರವಾಗಿ? (ಎಫೆಸ 6:​18, 19)

15. ನಾವು ಈ ಆತ್ಮಿಕ ಹೋರಾಟದಲ್ಲಿ ಹೇಗೆ ಪ್ರಬಲವಾಗಿ ಕ್ರಿಯೆಗೈಯಬಲ್ಲೆವು?

15 ಕ್ರಿಸ್ತನ ಸೈನಿಕರಾಗಿರುವ ನಾವು ಆತ್ಮಿಕ ಯುದ್ಧೋದ್ಯಮದಲ್ಲಿ ಭಾಗವಹಿಸುವ ದೊಡ್ಡ ಸೈನ್ಯವೊಂದರ ಭಾಗವಾಗಿದ್ದೇವೆ. ನಾವು ಎಚ್ಚರವಿದ್ದು, ದೇವರು ಕೊಡುವ ಸರ್ವಾಯುಧಗಳ ಸದುಪಯೋಗಮಾಡುವಲ್ಲಿ, ಈ ಯುದ್ಧದ ಮಾರಕ ಹೊಡೆತಕ್ಕೆ ಬಲಿಯಾದವರಾಗುವುದಿಲ್ಲ. ಬದಲಿಗೆ, ನಾವು ದೇವರ ಜೊತೆ ಸೇವಕರಿಗೆ ಬಲಪಡಿಸುವ ಸಹಾಯಕರಾಗಿರುವೆವು. ಸೈತಾನನು ಉಗ್ರವಾಗಿ ವಿರೋಧಿಸುವಂಥ ಸ್ವರ್ಗೀಯ ರಾಜ್ಯ, ಅಂದರೆ ದೇವರ ಮೆಸ್ಸೀಯ ರಾಜ್ಯದ ಸುವಾರ್ತೆಯನ್ನು ಹಬ್ಬಿಸುವ ಮೂಲಕ ನಾವು ಪ್ರಬಲವಾದ ಕ್ರಿಯೆಗೈಯಲು ಸಿದ್ಧರೂ, ಕಟ್ಟಾಸಕ್ತಿಯುಳ್ಳವರೂ ಆಗಿರುವೆವು.

[ಪಾದಟಿಪ್ಪಣಿ]

^ ಪ್ಯಾರ. 8 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

ಪುನರ್ವಿಮರ್ಶೆಯ ಚರ್ಚೆ

• ಲೋಕದ ಹೋರಾಟಗಳಲ್ಲಿ ಯೆಹೋವನ ಆರಾಧಕರು ಪೂರ್ಣ ತಾಟಸ್ಥ್ಯವನ್ನು ಏಕೆ ಕಾಪಾಡಿಕೊಳ್ಳುತ್ತಾರೆ?

• ಕ್ರೈಸ್ತರನ್ನು ಆತ್ಮಿಕವಾಗಿ ಹಾಳುಗೆಡವಲು ಸೈತಾನನು ಉಪಯೋಗಿಸುವ ಕೆಲವು ತಂತ್ರೋಪಾಯಗಳಾವುವು?

• ಯೆಹೋವನು ಒದಗಿಸಿರುವ ಆತ್ಮಿಕ ಸರ್ವಾಯುಧವು ನಮ್ಮ ಆತ್ಮಿಕ ಯುದ್ಧದಲ್ಲಿ ನಮ್ಮನ್ನು ಹೇಗೆ ಕಾಪಾಡುತ್ತದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 76ರಲ್ಲಿರುವ ಚಿತ್ರಗಳು]

ಜನಾಂಗಗಳು ಅರ್ಮಗೆದೋನಿಗಾಗಿ ಒಟ್ಟುಗೂಡಿಸಲ್ಪಡುತ್ತಿವೆ