ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದುಷ್ಟತ್ವವನ್ನು ದೇವರು ಅನುಮತಿಸಿರುವುದರಿಂದ ನಾವೇನು ಕಲಿತುಕೊಳ್ಳುತ್ತೇವೆ?

ದುಷ್ಟತ್ವವನ್ನು ದೇವರು ಅನುಮತಿಸಿರುವುದರಿಂದ ನಾವೇನು ಕಲಿತುಕೊಳ್ಳುತ್ತೇವೆ?

ಅಧ್ಯಾಯ ಏಳು

ದುಷ್ಟತ್ವವನ್ನು ದೇವರು ಅನುಮತಿಸಿರುವುದರಿಂದ ನಾವೇನು ಕಲಿತುಕೊಳ್ಳುತ್ತೇವೆ?

1, 2. (ಎ) ಯೆಹೋವನು ಏದೆನಿನಲ್ಲಿ ದಂಗೆಕೋರರನ್ನು ಕೂಡಲೆ ಹತಿಸಿದ್ದನಾದರೆ, ಅದು ನಮ್ಮನ್ನು ಹೇಗೆ ಬಾಧಿಸುತ್ತಿತ್ತು? (ಬಿ) ಯೆಹೋವನು ನಮಗೆ ಯಾವ ಪ್ರೀತಿಪೂರ್ವಕವಾದ ಏರ್ಪಾಡು ಲಭಿಸುವಂತೆ ಮಾಡಿದ್ದಾನೆ?

“ನಾನು ಜೀವಿಸಿರುವ ಕಾಲವು ಸ್ವಲ್ಪವಾಗಿಯೂ ದುಃಖಕರವಾಗಿಯೂ ಇತ್ತು,” ಎಂದು ಮೂಲಪಿತನಾದ ಯಾಕೋಬನು ಹೇಳಿದನು. (ಆದಿಕಾಂಡ 47:9) ಅದೇ ರೀತಿ, ಮನುಷ್ಯನು “ಅಲ್ಪಾಯುಷ್ಯನಾಗಿಯೂ ಕಳವಳದಿಂದ ತುಂಬಿದವನಾಗಿಯೂ ಇರುವನು” ಎಂದು ಯೋಬನು ಹೇಳಿದನು. (ಯೋಬ 14:1) ಅವರಂತೆಯೇ ನಮ್ಮಲ್ಲಿ ಹೆಚ್ಚಿನವರು ಕಷ್ಟ, ಅನ್ಯಾಯ ಮತ್ತು ದುರಂತಗಳನ್ನೂ ಅನುಭವಿಸಿರುತ್ತೇವೆ. ಆದರೂ, ಈ ಲೋಕದಲ್ಲಿ ನಾವು ಹುಟ್ಟಿರುವುದು, ದೇವರ ಕಡೆಯಿಂದ ಯಾವುದೇ ಅನ್ಯಾಯವನ್ನು ಸೂಚಿಸುವುದಿಲ್ಲ. ಹೌದು, ಆದಾಮಹವ್ವರಿಗೆ ಆದಿಯಲ್ಲಿದ್ದ ತನುಮನಗಳ ಪರಿಪೂರ್ಣತೆಯಾಗಲಿ ಪರದೈಸಿನ ಬೀಡಾಗಲಿ ನಮಗಿರುವುದಿಲ್ಲವೆಂಬುದು ನಿಜ. ಆದರೆ, ಅವರು ದಂಗೆಯೆದ್ದಾಗ ಯೆಹೋವನು ಅವರನ್ನು ಒಡನೆ ಹತಿಸಿದ್ದಾದರೆ ಏನಾಗುತ್ತಿತ್ತು? ರೋಗ, ದುಃಖ ಅಥವಾ ಮರಣವು ಆಗ ಇಲ್ಲದೆ ಹೋಗುತ್ತಿದ್ದರೂ ಮಾನವಕುಲವೂ ಇಲ್ಲದೆ ಹೋಗುತ್ತಿತ್ತು. ನಾವು ಹುಟ್ಟುತ್ತಲೇ ಇರಲಿಲ್ಲ. ದೇವರು ಕರುಣಾಪೂರ್ವಕವಾಗಿ, ಆದಾಮಹವ್ವರು ಮಕ್ಕಳನ್ನು ಹುಟ್ಟಿಸುವಂತೆ ಸಮಯವನ್ನು ಕೊಟ್ಟನು; ಮಕ್ಕಳು ಅಪರಿಪೂರ್ಣತೆಯನ್ನು ಬಾಧ್ಯತೆಯಾಗಿ ಪಡೆದರೂ ಅವರು ಹುಟ್ಟುವಂತೆ ದೇವರು ಕಾಲಾವಕಾಶವನ್ನು ಕೊಟ್ಟನು. ಮತ್ತು ಆದಾಮನು ಕಳೆದುಕೊಂಡದ್ದನ್ನು, ಅಂದರೆ ಪರದೈಸ ಭೂಮಿಯಲ್ಲಿ ನಿತ್ಯಜೀವವನ್ನು ನಮಗೆ ಹಿಂದೆ ಕೊಡುವ ಏರ್ಪಾಡನ್ನು ಯೆಹೋವನು ಕ್ರಿಸ್ತನ ಮೂಲಕ ಮಾಡಿದನು.​—⁠ಯೋಹಾನ 10:10; ರೋಮಾಪುರ 5:12.

2 ನೂತನ ಲೋಕದಲ್ಲಿ, ಪರದೈಸ ಸದೃಶ ಪರಿಸರದಲ್ಲಿ, ರೋಗ, ದುಃಖ, ಬೇನೆ ಮತ್ತು ಮರಣ ಹಾಗೂ ದುಷ್ಟರು ಇಲ್ಲದಿರುವ ಸ್ಥಳದಲ್ಲಿ ನಿತ್ಯಜೀವಕ್ಕಾಗಿ ಎದುರುನೋಡಲು ಶಕ್ತರಾಗುವುದು ಅದೆಷ್ಟು ಪ್ರೋತ್ಸಾಹನೀಯ! (ಜ್ಞಾನೋಕ್ತಿ 2:21, 22; ಪ್ರಕಟನೆ 21:4, 5) ಆದರೆ ನಮಗೂ ಯೆಹೋವನಿಗೂ ನಮ್ಮ ವ್ಯಕ್ತಿಪರವಾದ ರಕ್ಷಣೆಯು ಅತಿ ಮುಖ್ಯವಾಗಿದೆಯಾದರೂ, ಅದಕ್ಕಿಂತಲೂ ಹೆಚ್ಚು ವಿಶೇಷತೆಯಿರುವ ಮತ್ತು ಅದಕ್ಕೆ ಸಂಬಂಧಿಸಿರುವ ಇನ್ನೊಂದು ವಿಷಯವನ್ನು ನಾವು ಬೈಬಲ್‌ ದಾಖಲೆಯಿಂದ ಕಲಿತುಕೊಳ್ಳುತ್ತೇವೆ.

ಆತನ ಮಹಾ ಹೆಸರಿಗೋಸ್ಕರ

3. ಭೂಮಿ ಮತ್ತು ಮಾನವಕುಲದ ಕಡೆಗಿದ್ದ ದೇವರ ಉದ್ದೇಶದ ನೆರವೇರಿಕೆಯ ಸಂಬಂಧದಲ್ಲಿ ಯಾವುದು ಒಳಗೂಡಿದೆ?

3 ಭೂಮಿಯ ಮತ್ತು ಮಾನವಕುಲದ ಕುರಿತಾದ ದೇವರ ಉದ್ದೇಶದ ನೆರವೇರಿಕೆಯಲ್ಲಿ ಆತನ ಹೆಸರು ಒಳಗೊಂಡಿದೆ. ಯೆಹೋವ ಎಂಬ ಆ ಹೆಸರಿನ ಅರ್ಥವು, “ಆತನು ಆಗುವಂತೆ ಮಾಡುತ್ತಾನೆ” ಎಂದಾಗಿದೆ. ಆದಕಾರಣ, ಆತನ ನಾಮವು, ವಿಶ್ವ ಪರಮಾಧಿಕಾರಿಯೂ ಉದ್ದೇಶಿಸುವಾತನೂ ಸತ್ಯದ ದೇವರೂ ಆದ ಆತನ ಕೀರ್ತಿಯನ್ನು ಸಾಕಾರಗೊಳಿಸುತ್ತದೆ. ಯೆಹೋವನ ಸರ್ವೋನ್ನತ ಸ್ಥಾನದ ಕಾರಣ, ಆತನ ನಾಮ ಮತ್ತು ಅದರಲ್ಲಿ ಸೇರಿರುವ ವಿಷಯಗಳಿಗೆ ಯೋಗ್ಯ ಗೌರವವನ್ನು ಕೊಡಬೇಕೆಂದೂ ಎಲ್ಲರೂ ಆತನಿಗೆ ವಿಧೇಯರಾಗಬೇಕೆಂದೂ, ಇಡೀ ವಿಶ್ವದ ಶಾಂತಿ ಮತ್ತು ಅದರಲ್ಲಿರುವ ಸಕಲರ ಹಿತವು ಅವಶ್ಯಪಡಿಸುತ್ತದೆ.

4. ಭೂಮಿಯ ಕಡೆಗಿದ್ದ ಯೆಹೋವನ ಉದ್ದೇಶದಲ್ಲಿ ಏನು ಒಳಗೊಂಡಿತ್ತು?

4 ಆದಾಮಹವ್ವರನ್ನು ಸೃಷ್ಟಿಸಿದ ಮೇಲೆ, ಅವರು ಪೂರೈಸುವಂತೆ ಯೆಹೋವನು ಅವರಿಗೆ ಒಂದು ನೇಮಕವನ್ನು ಕೊಟ್ಟನು. ಭೂಮಿಯನ್ನು ವಶಪಡಿಸಿಕೊಳ್ಳುವುದು ಮತ್ತು ಹೀಗೆ ಪರದೈಸಿನ ಮೇರೆಗಳನ್ನು ವಿಸ್ತರಿಸುವುದು ಎಂಬುದು ಮಾತ್ರ ಆತನ ಉದ್ದೇಶವೆಂದು ದೇವರು ಹೇಳದೆ, ಅವರ ಸಂತತಿಯಿಂದ ಭೂಮಿಯನ್ನು ತುಂಬಿಸಬೇಕೆಂದೂ ಹೇಳಿದನು. (ಆದಿಕಾಂಡ 1:28) ಅವರ ಪಾಪದ ಕಾರಣ ಈ ಉದ್ದೇಶವು ಭಂಗಗೊಳ್ಳಲಿತ್ತೊ? ಆತನು ಭೂಮಿಯ ಮತ್ತು ಮಾನವರ ಕಡೆಗಿನ ತನ್ನ ಉದ್ದೇಶವನ್ನು ನೆರವೇರಿಸದೆ ಹೋಗುವಲ್ಲಿ, ಸರ್ವಶಕ್ತನಾದ ಯೆಹೋವನ ಹೆಸರಿಗೆ ಅದೆಷ್ಟು ಕಳಂಕವನ್ನು ತರಲಿತ್ತು!

5. (ಎ) ಪ್ರಥಮ ಮಾನವರು ಒಳ್ಳೇದರ ಮತ್ತು ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ತಿನ್ನುವಲ್ಲಿ ಅವರು ಯಾವಾಗ ಸಾಯಲಿದ್ದರು? (ಬಿ) ಯೆಹೋವನು ಭೂಮಿಯ ಕಡೆಗೆ ತನ್ನ ಉದ್ದೇಶವನ್ನು ಗೌರವಿಸಿದಾಗ, ಆದಿಕಾಂಡ 2:17ರ ತನ್ನ ಮಾತುಗಳನ್ನು ಹೇಗೆ ನೆರವೇರಿಸಿದನು?

5 ಯೆಹೋವನು ಆದಾಮಹವ್ವರಿಗೆ, ಅವರು ಅವಿಧೇಯರಾಗಿ ಒಳ್ಳೇದರ ಮತ್ತು ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ತಿನ್ನುವುದಾದರೆ, ಅವರು ತಿಂದ “ದಿನ”ವೇ ಸಾಯುವರೆಂದು ಎಚ್ಚರಿಸಿದ್ದನು. (ಆದಿಕಾಂಡ 2:17) ತನ್ನ ವಚನಕ್ಕನುಸಾರ ಯೆಹೋವನು, ಅವರು ಪಾಪಮಾಡಿದ ದಿನವೇ ಅವರನ್ನು ಅಪರಾಧಿಗಳೆಂದು ನಿರೂಪಿಸಿ, ಮರಣದಂಡನೆಯನ್ನು ವಿಧಿಸಿದನು. ದೇವರ ದೃಷ್ಟಿಯಲ್ಲಿ ಆದಾಮಹವ್ವರು ಅದೇ ದಿನ ಸತ್ತುಹೋದರು. ಆದರೆ ಭೂಮಿಯ ಕಡೆಗೆ ತನಗಿದ್ದ ಉದ್ದೇಶವನ್ನು ಸಾಧಿಸಲು, ಅವರು ಶಾರೀರಿಕವಾಗಿ ಸಾಯುವ ಮೊದಲು ಒಂದು ಕುಟುಂಬವನ್ನು ಹುಟ್ಟಿಸುವಂತೆ ಯೆಹೋವನು ಅವಕಾಶವನ್ನು ಕೊಟ್ಟನು. ಆದರೂ, 1,000 ವರುಷಗಳನ್ನು ದೇವರು ಒಂದು ದಿನವಾಗಿ ಕಾಣಸಾಧ್ಯವಿರುವುದರಿಂದ, ಆದಾಮನ ಜೀವವು 930 ವರ್ಷ ಪ್ರಾಯದಲ್ಲಿ ಅಂತ್ಯಗೊಂಡಾಗ, ಅದು ಒಂದೇ “ದಿನ”ದ ಒಳಗಾಗಿತ್ತು. (2 ಪೇತ್ರ 3:8; ಆದಿಕಾಂಡ 5:3-5) ಹೀಗೆ, ಶಿಕ್ಷೆಯು ಯಾವಾಗ ಜಾರಿಗೆ ತರಲ್ಪಡುವುದು ಎಂಬ ವಿಷಯದಲ್ಲಿ ಯೆಹೋವನ ಸತ್ಯತೆಯು ಸಮರ್ಥಿಸಲ್ಪಟ್ಟಿತು. ಮತ್ತು ಅವರು ಸತ್ತ ಕಾರಣ ಭೂಮಿಯ ಕಡೆಗಿದ್ದ ಆತನ ಉದ್ದೇಶವು ವ್ಯರ್ಥವಾಗಲಿಲ್ಲ. ಆದರೆ ಸ್ವಲ್ಪಕಾಲದ ವರೆಗೆ ದುಷ್ಟರನ್ನೂ ಸೇರಿಸಿ ಅಪರಿಪೂರ್ಣ ಮಾನವರನ್ನು ಜೀವಿಸುವಂತೆ ಬಿಡಲಾಗಿದೆ.

6, 7. (ಎ) ವಿಮೋಚನಕಾಂಡ 9:​15, 16 ತಿಳಿಸುವಂತೆ, ಯೆಹೋವನು ದುಷ್ಟರನ್ನು ಸ್ವಲ್ಪ ಕಾಲ ಇರುವಂತೆ ಅನುಮತಿಸಿರುವುದೇಕೆ? (ಬಿ) ಫರೋಹನಿಗೆ ಯೆಹೋವನ ಶಕ್ತಿಯು ಹೇಗೆ ತೋರಿಸಲ್ಪಟ್ಟಿತು, ಮತ್ತು ಆತನ ಹೆಸರು ಪ್ರಸಿದ್ಧವಾದದ್ದು ಹೇಗೆ? (ಸಿ) ಈಗಿನ ದುಷ್ಟ ವ್ಯವಸ್ಥೆಯು ಅಂತ್ಯಗೊಳ್ಳುವಾಗ ಅದರ ಪರಿಣಾಮವೇನಾಗುವುದು?

6 ಮೋಶೆಯ ದಿನಗಳಲ್ಲಿ ಯೆಹೋವನು ಐಗುಪ್ತದ ಅರಸನಿಗೆ ಹೇಳಿದ ಮಾತುಗಳು, ದುಷ್ಟತ್ವವು ಮುಂದುವರಿಯುವಂತೆ ದೇವರು ಏಕೆ ಅನುಮತಿಸಿದ್ದಾನೆಂಬುದನ್ನು ಇನ್ನೂ ಸ್ಪಷ್ಟವಾಗಿ ಸೂಚಿಸುತ್ತವೆ. ಫರೋಹನು ಇಸ್ರಾಯೇಲ್ಯರನ್ನು ಐಗುಪ್ತದಿಂದ ಹೊರಟುಹೋಗಲು ಬಿಡದಿದ್ದಾಗ, ಯೆಹೋವನು ಅವನನ್ನು ಕೂಡಲೇ ಹತಿಸಲಿಲ್ಲ. ಯೆಹೋವನ ಶಕ್ತಿಯನ್ನು ಆಶ್ಚರ್ಯಕರವಾದ ರೀತಿಯಲ್ಲಿ ತೋರಿಸುತ್ತಾ, ದೇಶದ ಮೇಲೆ ಹತ್ತು ಬಾಧೆಗಳು ತರಲ್ಪಟ್ಟವು. ಏಳನೆಯ ವ್ಯಾಧಿಯ ಕುರಿತು ಎಚ್ಚರಿಸಿದಾಗ, ಫರೋಹನನ್ನೂ ಅವನ ಜನರನ್ನೂ ತಾನು ಸುಲಭವಾಗಿ ಭೂಮಿಯಿಂದ ಅಳಿಸಿಬಿಡಬಹುದಾಗಿತ್ತೆಂದೂ, “ಆದರೆ ನಾನು ನಿನ್ನಲ್ಲಿ ನನ್ನ ಶಕ್ತಿಯನ್ನು ತೋರಿಸಿ ನನ್ನ ಹೆಸರನ್ನು ಲೋಕದಲ್ಲೆಲ್ಲಾ ಪ್ರಸಿದ್ಧಿಪಡಿಸಬೇಕೆಂಬ ಉದ್ದೇಶದಿಂದಲೇ ನಿನ್ನನ್ನು ಸಾಯಿಸದೆ ಉಳಿಸಿದೆನು” ಎಂದೂ ಯೆಹೋವನು ಫರೋಹನಿಗೆ ಹೇಳಿದನು.​—⁠ವಿಮೋಚನಕಾಂಡ 9:15, 16.

7 ಯೆಹೋವನು ಇಸ್ರಾಯೇಲ್ಯರನ್ನು ಬಿಡುಗಡೆ ಮಾಡಿದಾಗ, ಆತನ ಹೆಸರು ವ್ಯಾಪಕವಾಗಿ ಪ್ರಸಿದ್ಧವಾದುದು ನಿಶ್ಚಯ. (ಯೆಹೋಶುವ 2:1, 9-11) ಇಂದು, 3,500 ವರುಷಗಳಾನಂತರ, ಆತನು ಆಗ ಏನು ಮಾಡಿದ್ದನೊ ಅದು ಮರೆತುಹೋಗಿರುವುದಿಲ್ಲ. ಆಗ ಯೆಹೋವನ ವೈಯಕ್ತಿಕ ನಾಮವು ಪ್ರಕಟಿಸಲ್ಪಟ್ಟಿತು ಮಾತ್ರವಲ್ಲ ಆ ನಾಮಧಾರಿಯ ಕುರಿತಾದ ಸತ್ಯವೂ ಪ್ರಕಟಿಸಲ್ಪಟ್ಟಿತು. ಇದು ಯೆಹೋವನು ತನ್ನ ಮಾತಿನಂತೆ ನಡೆಯುವಾತನೆಂಬ ಮತ್ತು ತನ್ನ ಸೇವಕರ ಪರವಾಗಿ ಕ್ರಮಕೈಕೊಳ್ಳುವಾತನೆಂಬ ಕೀರ್ತಿಯನ್ನು ಸ್ಥಾಪಿಸಿತು. (ಯೆಹೋಶುವ 23:14) ಆತನಲ್ಲಿರುವ ಸರ್ವಶಕ್ತಿಯ ಕಾರಣ ಯಾವುದೂ ಆತನ ಉದ್ದೇಶವನ್ನು ತಡೆದುಹಿಡಿಯದೆಂದು ತೋರಿಸಿತು. (ಯೆಶಾಯ 14:24, 27) ಆದುದರಿಂದ ಆತನು ಬೇಗನೆ ಸೈತಾನನ ಇಡೀ ದುಷ್ಟ ವ್ಯವಸ್ಥೆಯನ್ನು ನಾಶಗೊಳಿಸುವ ಮೂಲಕ ತನ್ನ ನಂಬಿಗಸ್ತ ಸೇವಕರ ಪರವಾಗಿ ಕ್ರಮಕೈಕೊಳ್ಳುವನೆಂಬ ಭರವಸೆಯು ನಮಗಿರಬಲ್ಲದು. ಸರ್ವಶಕ್ತಿಯ ಪ್ರದರ್ಶನ ಮತ್ತು ಅದು ಯೆಹೋವನ ನಾಮಕ್ಕೆ ತರುವ ಮಹಿಮೆಯು ಎಂದಿಗೂ ಮರೆಯಲಾಗದ ವಿಷಯವಾಗಿರುವುದು. ಇದರ ಪ್ರಯೋಜನಗಳಿಗೊ ಅಂತ್ಯವಿಲ್ಲ.​—⁠ಯೆಹೆಜ್ಕೇಲ 38:23; ಪ್ರಕಟನೆ 19:1, 2.

‘ಆಹಾ, ದೇವರ ವಿವೇಕವು ಎಷ್ಟೋ ಅಗಾಧ!’

8. ಪೌಲನು ಯಾವ ಸಂಗತಿಗಳನ್ನು ನಾವು ಪರಿಗಣಿಸುವಂತೆ ಪ್ರೋತ್ಸಾಹಿಸುತ್ತಾನೆ?

8 ರೋಮಾಪುರದವರಿಗೆ ಬರೆದ ಪತ್ರದಲ್ಲಿ ಅಪೊಸ್ತಲ ಪೌಲನು, “ದೇವರಲ್ಲಿ ಅನ್ಯಾಯ ಉಂಟೋ?” ಎಂದು ಪ್ರಶ್ನಿಸುತ್ತಾನೆ. ಬಳಿಕ ಅವನು, “ಎಂದಿಗೂ ಇಲ್ಲ,” ಎಂಬ ದೃಢಾಭಿಪ್ರಾಯದ ಉತ್ತರವನ್ನು ಕೊಡುತ್ತಾನೆ. ಬಳಿಕ ಅವನು ದೇವರ ಕರುಣೆಯನ್ನು ಒತ್ತಿಹೇಳಿ, ಫರೋಹನನ್ನು ಇನ್ನೂ ಸ್ವಲ್ಪಕಾಲ ಉಳಿಸುವ ವಿಷಯವಾಗಿ ಯೆಹೋವನು ಏನು ಹೇಳಿದನೊ ಅದಕ್ಕೆ ಸೂಚಿಸುತ್ತಾನೆ. ಮನುಷ್ಯರಾದ ನಾವು ಕುಂಬಾರನ ಕೈಯಲ್ಲಿರುವ ಜೇಡಿಮಣ್ಣಿನಂತೆ ಇದ್ದೇವೆಂದೂ ಪೌಲನು ತೋರಿಸುತ್ತಾನೆ. ಆ ಮೇಲೆ ಅವನು ಹೇಳುವುದು: “ಆದರೆ ದೇವರು ತನ್ನ ಕೋಪವನ್ನು ತೋರಿಸಿ ತನ್ನ ಶಕ್ತಿಯನ್ನು ಪ್ರಸಿದ್ಧಿಪಡಿಸಬೇಕೆಂದಿದ್ದರೂ ಹಾಗೆ ಮಾಡದೆ ತನ್ನ ಕೋಪಕ್ಕೆ ಗುರಿಯಾದ ನಾಶನಪಾತ್ರರನ್ನು ಬಹು ಸೈರಣೆಯಿಂದ ಸೈರಿಸಿಕೊಂಡಿದ್ದಾನೆ. ಮತ್ತು ಪ್ರಭಾವಹೊಂದುವದಕ್ಕೆ ತಾನು ಮುಂದಾಗಿ ಸಿದ್ಧಮಾಡಿದ ಕರುಣಾಪಾತ್ರರಲ್ಲಿ ತನ್ನ ಮಹಿಮಾತಿಶಯವನ್ನು ತೋರ್ಪಡಿಸಿದ್ದಾನೆ. ಆತನು ಕರುಣಿಸಿದ ನಮ್ಮನ್ನು ಯೆಹೂದ್ಯರೊಳಗಿಂದ ಮಾತ್ರ ಕರೆಯದೆ ಹೋಶೇಯನ ಗ್ರಂಥದ ವಚನದಲ್ಲಿ ತಾನು ಸೂಚಿಸಿದಂತೆ ಅನ್ಯಜನರೊಳಗಿಂದ ಸಹ ಕರೆದನು.”​—⁠ರೋಮಾಪುರ 9:14-24.

9. (ಎ) ‘ಕೋಪಕ್ಕೆ ಗುರಿಯಾದ ನಾಶನಪಾತ್ರರು’ ಯಾರು? (ಬಿ) ತನ್ನ ವಿರೋಧಿಗಳ ಎದುರಿನಲ್ಲಿಯೂ ಯೆಹೋವನು ಮಹಾ ಸೈರಣೆಯನ್ನು ತೋರಿಸಿರುವುದೇಕೆ, ಮತ್ತು ಇದರ ಅಂತ್ಯ ಪರಿಣಾಮವು ಆತನನ್ನು ಪ್ರೀತಿಸುವವರ ಹಿತಕ್ಕಾಗಿರುವುದು ಹೇಗೆ?

9 ಏದೆನಿನ ದಂಗೆಯಿಂದ ಹಿಡಿದು, ಯೆಹೋವನನ್ನೂ ಆತನ ನಿಯಮಗಳನ್ನೂ ವಿರೋಧಿಸಿರುವವರು ‘ಕೋಪಕ್ಕೆ ಗುರಿಯಾದ ನಾಶನಪಾತ್ರರು.’ ಅಂದಿನಿಂದ ಹಿಡಿದು ಎಲ್ಲಾ ಸಮಯಗಳಲ್ಲಿ ಯೆಹೋವನು ಸೈರಣೆಯನ್ನು ತೋರಿಸುತ್ತಾ ಬಂದಿದ್ದಾನೆ. ದುಷ್ಟರು ಆತನ ಮಾರ್ಗಗಳನ್ನು ಮೂದಲಿಸಿ, ಆತನ ಸೇವಕರನ್ನು ಹಿಂಸಿಸಿ, ಆತನ ಮಗನನ್ನು ಕೊಂದದ್ದೂ ನಿಜ. ಆದರೆ ಯೆಹೋವನು ಮಹಾ ಸೈರಣೆಯನ್ನು ತೋರಿಸುತ್ತಾ, ಸಕಲ ಸೃಷ್ಟಿಯು ದೇವರ ವಿರುದ್ಧವಾಗಿ ಎದ್ದ ದಂಗೆಯ ಮತ್ತು ಆತನನ್ನು ತ್ಯಜಿಸಿರುವ ಮಾನವಾಳಿಕೆಯ ವಿಪತ್ಕಾರಕ ಪರಿಣಾಮಗಳನ್ನು ನೋಡುವಂತೆ ಸಾಕಷ್ಟು ಸಮಯವನ್ನು ಅನುಮತಿಸಿದ್ದಾನೆ. ಅದೇ ಸಮಯದಲ್ಲಿ, ಯೇಸುವಿನ ಮರಣವು ವಿಧೇಯ ಮಾನವಕುಲವನ್ನು ವಿಮೋಚಿಸುವ ಮತ್ತು “ಸೈತಾನನ ಕೆಲಸಗಳನ್ನು ಲಯಮಾಡುವ” ಮಾಧ್ಯಮವನ್ನು ಒದಗಿಸಿತು.​—⁠1 ಯೋಹಾನ 3:8; ಇಬ್ರಿಯ 2:14, 15.

10. ಯೆಹೋವನು ದುಷ್ಟರನ್ನು ಕಳೆದ 1,900 ವರುಷ ಕಾಲ ಸೈರಿಸಿಕೊಂಡಿರುವುದೇಕೆ?

10 ಯೇಸುವಿಗೆ ಪುನರುತ್ಥಾನವಾಗಿ 1,900ಕ್ಕೂ ಹೆಚ್ಚು ವರುಷಗಳಲ್ಲಿ, ಯೆಹೋವನು “ಕೋಪಕ್ಕೆ ಗುರಿಯಾದ” ಜನರನ್ನು ನಾಶನಕ್ಕೆ ಒಳಪಡಿಸದೆ ಹೆಚ್ಚು ಸೈರಿಸಿಕೊಂಡಿದ್ದಾನೆ. ಏಕೆ? ಒಂದು ಕಾರಣವೇನಂದರೆ, ಯೇಸು ಕ್ರಿಸ್ತನೊಂದಿಗೆ ಆತನ ಸ್ವರ್ಗೀಯ ರಾಜ್ಯದಲ್ಲಿ ಜೊತೆಗೂಡಲಿರುವವರನ್ನು ಆತನು ಸಿದ್ಧಪಡಿಸುತ್ತಿದ್ದುದರಿಂದಲೇ. ಇವರ ಸಂಖ್ಯೆಯು 1,44,000 ಮತ್ತು ಇವರೇ ಅಪೊಸ್ತಲ ಪೌಲನು ಹೇಳಿರುವ ‘ಕರುಣಾಪಾತ್ರರು’ ಆಗಿದ್ದಾರೆ. ಪ್ರಥಮವಾಗಿ, ಈ ಸ್ವರ್ಗೀಯ ವರ್ಗಕ್ಕೆ ಸೇರಲು ಯೆಹೂದ್ಯರಿಗೆ ಕರೆ ಕೊಡಲಾಯಿತು. ತರುವಾಯ, ದೇವರು ಅನ್ಯಜನಾಂಗಗಳ ಜನರಿಗೆ ಕರೆ ಕೊಟ್ಟನು. ಯೆಹೋವನು ತನ್ನನ್ನು ಸೇವಿಸಲು ಇವರಲ್ಲಿ ಯಾರನ್ನೂ ನಿರ್ಬಂಧಿಸಲಿಲ್ಲ. ಆದರೆ ಅವರಲ್ಲಿ ಯಾರು ಕೃತಜ್ಞತೆಯಿಂದ ತನ್ನ ಪ್ರೀತಿಯ ಏರ್ಪಾಡುಗಳಿಗೆ ಓಗೊಟ್ಟರೊ, ಅವರಲ್ಲಿ ಕೆಲವರಿಗೆ ಸ್ವರ್ಗೀಯ ರಾಜ್ಯದಲ್ಲಿ ತನ್ನ ಪುತ್ರನೊಂದಿಗೆ ಜೊತೆ ರಾಜರಾಗುವ ಸದವಕಾಶವನ್ನು ಒದಗಿಸಿದನು. ಆ ಸ್ವರ್ಗೀಯ ವರ್ಗದ ಸಿದ್ಧತೆಯು ಈಗ ಹೆಚ್ಚುಕಡಮೆ ಮುಗಿದಿದೆ.​—⁠ಲೂಕ 22:29; ಪ್ರಕಟನೆ 14:1-4.

11. (ಎ) ಯೆಹೋವನ ಸೈರಣೆಯಿಂದ ಈಗ ಯಾವ ಗುಂಪು ಪ್ರಯೋಜನ ಪಡೆಯುತ್ತಿದೆ? (ಬಿ) ಮೃತರಿಗೆ ಹೇಗೆ ಪ್ರಯೋಜನ ದೊರೆಯುವುದು?

11 ಆದರೆ ಭೂಮಿಯ ಮೇಲೆ ನಿವಾಸಿಗಳನ್ನು ಹೊಂದಿರುವ ಪ್ರತೀಕ್ಷೆಗಳ ಕುರಿತಾಗಿ ಏನು? ಯೆಹೋವನ ಸೈರಣೆಯು ಸರ್ವ ಜನಾಂಗಗಳಿಂದ “ಮಹಾ ಸಮೂಹ”ವೊಂದು ಒಟ್ಟುಗೂಡಿಸಲ್ಪಡುವುದನ್ನೂ ಸಾಧ್ಯಗೊಳಿಸಿದೆ. ಈಗ ಅವರ ಸಂಖ್ಯೆ ದಶಲಕ್ಷಗಳಿಗೆ ಮುಟ್ಟಿದೆ. ಈ ಭೂವರ್ಗದವರು ಈ ವ್ಯವಸ್ಥೆಯ ಅಂತ್ಯವನ್ನು ಪಾರಾಗಿ ಪರದೈಸ ಭೂಮಿಯ ಮೇಲೆ ನಿತ್ಯಜೀವದ ಪ್ರತೀಕ್ಷೆಯುಳ್ಳವರಾಗಿರುವರೆಂದು ಯೆಹೋವನು ವಚನಕೊಟ್ಟಿದ್ದಾನೆ. (ಪ್ರಕಟನೆ 7:9, 10; ಕೀರ್ತನೆ 37:29; ಯೋಹಾನ 10:16) ದೇವರ ಸೂಕ್ತವಾದ ಸಮಯದಲ್ಲಿ, ಮೃತರಾಗಿರುವವರು ದೊಡ್ಡ ಸಂಖ್ಯೆಯಲ್ಲಿ ಪುನರುತ್ಥಾನಗೊಳಿಸಲ್ಪಡುವಾಗ, ಅವರಿಗೆ ಸ್ವರ್ಗೀಯ ರಾಜ್ಯದ ಭೂಪ್ರಜೆಗಳಾಗುವ ಅವಕಾಶವು ಕೊಡಲ್ಪಡುವುದು. ದೇವರ ವಾಕ್ಯವು ಅಪೊಸ್ತಲರ ಕೃತ್ಯಗಳು 24:15ರಲ್ಲಿ ಮುಂತಿಳಿಸುವುದು: “ಇದಲ್ಲದೆ ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವದು.”​—⁠ಯೋಹಾನ 5:28, 29.

12. (ಎ) ದುಷ್ಟತ್ವದ ವಿಷಯದಲ್ಲಿ ಯೆಹೋವನು ತೋರಿಸಿರುವ ಸೈರಣೆಯಿಂದ ನಾವೇನು ಕಲಿಯುತ್ತೇವೆ? (ಬಿ) ಯೆಹೋವನು ಈ ವಿಷಯಗಳನ್ನು ನಿರ್ವಹಿಸಿರುವ ವಿಧದ ಕುರಿತು ನಿಮಗೆ ಹೇಗನಿಸುತ್ತದೆ?

12 ಇದರಲ್ಲಿ ಯಾವ ಅನ್ಯಾಯವಾದರೂ ಇದೆಯೆ? ಇಲ್ಲ, ಏಕೆಂದರೆ ದುಷ್ಟರ ಅಥವಾ “ಕೋಪಕ್ಕೆ ಗುರಿಯಾದ”ವರ ನಾಶನವನ್ನು ತಡೆದುಹಿಡಿದಿರುವ ಕಾರಣ ದೇವರು ತನ್ನ ಉದ್ದೇಶಕ್ಕೆ ಹೊಂದಿಕೆಯಲ್ಲಿ ಇತರರಿಗೆ ಕನಿಕರವನ್ನು ತೋರಿಸುತ್ತಿದ್ದಾನೆ. ಆತನು ಎಷ್ಟು ಕೃಪಾಪೂರ್ಣನೆಂದೂ ಪ್ರೀತಿಪೂರ್ಣನೆಂದೂ ಇದು ತೋರಿಸುತ್ತದೆ. ಅಲ್ಲದೆ, ಆತನ ಉದ್ದೇಶಗಳು ವಿಕಾಸಗೊಳ್ಳುವುದನ್ನು ಅವಲೋಕಿಸುವ ಸಮಯವು ನಮಗಿರುವುದರಿಂದ, ನಾವು ಯೆಹೋವನ ಕುರಿತು ಧಾರಾಳವಾಗಿ ಕಲಿತುಕೊಳ್ಳುತ್ತೇವೆ. ಬೆಳಕಿಗೆ ಬಂದಿರುವ ಆತನ ವ್ಯಕ್ತಿತ್ವದ ವಿವಿಧ ಭಾಗಗಳಾದ ಆತನ ನ್ಯಾಯ, ಆತನ ಕರುಣೆ, ಆತನ ದೀರ್ಘಶಾಂತಿ ಮತ್ತು ಆತನ ಬಹುರೂಪದ ವಿವೇಕವನ್ನು ನೋಡಿ ನಾವು ಆಶ್ಚರ್ಯಚಕಿತರಾಗುತ್ತೇವೆ. ವಿಶ್ವ ಪರಮಾಧಿಕಾರದ ಅಂದರೆ ಆತನ ಆಳುವ ಹಕ್ಕಿನ ಪ್ರಶ್ನೆಯನ್ನು ಯೆಹೋವನು ವಿವೇಕದಿಂದ ನಿರ್ವಹಿಸಿರುವ ವಿಷಯವು, ಆತನು ಆಳುವ ವಿಧಾನವೇ ಅತ್ಯುತ್ತಮ ವಿಧಾನವೆಂಬ ನಿಜತ್ವಕ್ಕೆ ನಿತ್ಯಸಾಕ್ಷಿಯಾಗಿ ನಿಲ್ಲುವುದು. ನಾವು ಅಪೊಸ್ತಲ ಪೌಲನೊಂದಿಗೆ ಹೀಗೆನ್ನುತ್ತೇವೆ: “ಆಹಾ, ದೇವರ ಐಶ್ವರ್ಯವೂ ಜ್ಞಾನವೂ ವಿವೇಕವೂ ಎಷ್ಟೋ ಆಗಾಧ! ಆತನ ತೀರ್ಮಾನಗಳು ಪರಿಶೋಧನೆಗೆ ಎಷ್ಟೋ ಅಗಮ್ಯ! ಆತನ ಮಾರ್ಗಗಳು ಕಂಡುಹಿಡಿಯುವದಕ್ಕೆ ಎಷ್ಟೋ ಅಸಾಧ್ಯ!”​—⁠ರೋಮಾಪುರ 11:33.

ನಮ್ಮ ಭಕ್ತಿಯನ್ನು ತೋರಿಸಲು ನಮಗಿರುವ ಸಂದರ್ಭ

13. ನಾವು ವೈಯಕ್ತಿಕ ಕಷ್ಟಗಳನ್ನು ಅನುಭವಿಸುವಾಗ, ನಮಗೆ ಯಾವ ಅವಕಾಶವು ನೀಡಲ್ಪಡುತ್ತದೆ, ಮತ್ತು ನಾವು ವಿವೇಕದಿಂದ ಪ್ರತಿವರ್ತಿಸುವಂತೆ ನಮಗೆ ಯಾವುದು ಸಹಾಯಮಾಡುವುದು?

13 ದೇವರ ಸೇವಕರಲ್ಲಿ ಅನೇಕರು ವ್ಯಕ್ತಿಪರವಾದ ಕಷ್ಟಾನುಭವಗಳು ಒಳಗೂಡಿರುವ ಸನ್ನಿವೇಶಗಳಲ್ಲಿದ್ದಾರೆ. ದೇವರು ದುಷ್ಟರನ್ನು ಇನ್ನೂ ಹತಿಸದೆ ಇದ್ದು, ಮಾನವಕುಲಕ್ಕಾಗಿ ಮುಂತಿಳಿಲ್ಪಟ್ಟ ಪುನಸ್ಸ್ಥಾಪನೆಯನ್ನು ತರದೆ ಇರುವ ಕಾರಣ ದೇವಜನರ ಕಷ್ಟಾನುಭವಗಳು ಮುಂದುವರಿಯುತ್ತಿವೆ. ಇದು ನಮ್ಮ ಮನಸ್ಸನ್ನು ಕಹಿಯಾಗಿಸಬೇಕೊ? ಅಥವಾ ಇಂತಹ ಸನ್ನಿವೇಶಗಳು, ಸೈತಾನನನ್ನು ಸುಳ್ಳುಗಾರನಾಗಿ ರುಜುಪಡಿಸುವ ಸಂದರ್ಭವನ್ನು ನಮಗೆ ಕೊಡುತ್ತವೆಂದು ನಾವು ವೀಕ್ಷಿಸಬೇಕೊ? ನಾವು ಈ ಕೆಳಗಿನ ಕೇಳಿಕೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳುವಲ್ಲಿ, ನಾವು ವಿಷಯಗಳನ್ನು ಹೀಗೆ ವೀಕ್ಷಿಸಲು ನಮಗೆ ಬಲ ದೊರೆಯಸಾಧ್ಯವಿದೆ: “ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಮನಸ್ಸನ್ನು ಸಂತೋಷಪಡಿಸು; ಹಾಗಾದರೆ, ನನ್ನನ್ನು ದೂರುವವನಿಗೆ ನಾನು ಉತ್ತರ ಕೊಡಲಾಗುವದು.” (ಜ್ಞಾನೋಕ್ತಿ 27:11) ಯೆಹೋವನನ್ನು ಮೂದಲಿಸುವ ಸೈತಾನನು, ಜನರಿಗೆ ಪ್ರಾಪಂಚಿಕ ಸ್ವತ್ತುಗಳ ನಷ್ಟದ ಅಥವಾ ಶಾರೀರಿಕ ಸಂಕಟಗಳ ಅನುಭವವಾಗುವಲ್ಲಿ, ಅವರು ದೇವರನ್ನು ದೂರುವರು, ಹೌದು ಶಪಿಸಲೂ ಹಿಂಜರಿಯರು ಎಂದು ಆರೋಪ ಹೊರಿಸಿದನು. (ಯೋಬ 1:9-11; 2:4, 5) ಆದರೆ ಕಷ್ಟಾನುಭವಗಳ ಎದುರಿನಲ್ಲಿಯೂ ನಾವು ಆತನಿಗೆ ನಿಷ್ಠೆಯನ್ನು ತೋರಿಸುವಲ್ಲಿ, ಸೈತಾನನ ಅಪವಾದವು ನಮ್ಮ ಸಂಬಂಧದಲ್ಲಿ ಸುಳ್ಳಾಗಿದೆ ಎಂದು ರುಜುಪಡಿಸಿ, ಯೆಹೋವನ ಮನಸ್ಸಿಗೆ ಸಂತೋಷವನ್ನು ತರುವೆವು.

14. ನಾವು ಪರೀಕ್ಷೆಗಳನ್ನು ಅನುಭವಿಸುತ್ತಿರುವಾಗ ಯೆಹೋವನಲ್ಲಿ ಭರವಸೆಯನ್ನಿಡುವಲ್ಲಿ, ನಮಗೆ ಯಾವ ಪ್ರಯೋಜನಗಳು ಬರಸಾಧ್ಯವಿದೆ?

14 ನಾವು ಪರೀಕ್ಷೆಗಳನ್ನು ಅನುಭವಿಸುತ್ತಿರುವಾಗ ಯೆಹೋವನ ಮೇಲೆ ಭರವಸವಿಡುವಲ್ಲಿ, ಅಮೂಲ್ಯ ಗುಣಗಳನ್ನು ಬೆಳೆಸಿಕೊಳ್ಳಬಲ್ಲೆವು. ದೃಷ್ಟಾಂತಕ್ಕೆ, ಯೇಸು ಅನುಭವಿಸಿದ ಬಾಧೆಗಳ ಫಲವಾಗಿ, ಹಿಂದೆಂದೂ ಕಲಿತುಕೊಂಡಿದ್ದಿರದ ರೀತಿಯಲ್ಲಿ ಅವನು “ವಿಧೇಯತೆಯನ್ನು ಕಲಿತುಕೊಂಡನು.” ನಾವು ಸಹ ನಮ್ಮ ಪರೀಕ್ಷೆಗಳಿಂದ ಪಾಠವನ್ನು ಕಲಿಯಸಾಧ್ಯವಿದೆ, ಮತ್ತು ಇದರ ಮೂಲಕ ನಾವು ದೀರ್ಘಶಾಂತಿ, ತಾಳ್ಮೆ ಹಾಗೂ ಯೆಹೋವನ ನೀತಿಯ ಮಾರ್ಗಗಳಿಗಾಗಿ ಆಳವಾದ ಗಣ್ಯತೆಯನ್ನು ಬೆಳೆಸಿಕೊಳ್ಳಸಾಧ್ಯವಿದೆ.​—⁠ಇಬ್ರಿಯ 5:8, 9; 12:11; ಯಾಕೋಬ 1:2-4.

15. ನಾವು ತಾಳ್ಮೆಯಿಂದ ಕಷ್ಟಗಳನ್ನು ಸಹಿಸುವಾಗ, ಇತರರು ಹೇಗೆ ಪ್ರಯೋಜನ ಪಡೆಯಬಹುದು?

15 ನಾವು ಏನು ಮಾಡುತ್ತೇವೊ ಅದನ್ನು ಜನರು ನಿಕಟವಾಗಿ ಗಮನಿಸುವರು. ನೀತಿಯನ್ನು ನಾವು ಪ್ರೀತಿಸುವ ಕಾರಣ ನಾವು ಅನುಭವಿಸುತ್ತಿರುವ ಸಂಗತಿಗಳನ್ನು ನೋಡಿ, ಇಂದು ಸತ್ಯ ಕ್ರೈಸ್ತರು ಯಾರೆಂಬುದನ್ನು ಅವರಲ್ಲಿ ಕೆಲವರು ತಕ್ಕ ಕಾಲದಲ್ಲಿ ತಿಳಿದುಕೊಳ್ಳಬಹುದು. ಮತ್ತು ನಮ್ಮೊಂದಿಗೆ ಆರಾಧನೆಯಲ್ಲಿ ಐಕ್ಯರಾಗುವ ಮೂಲಕ ಅವರು ನಿತ್ಯಜೀವದ ಆಶೀರ್ವಾದಗಳ ಸಾಲಿನಲ್ಲಿ ನಿಲ್ಲಶಕ್ತರಾಗುವರು. (ಮತ್ತಾಯ 25:​34-36, 40, 46) ಯೆಹೋವನೂ ಆತನ ಪುತ್ರನೂ ಜನರು ಈ ಸದವಕಾಶವನ್ನು ಪಡೆದುಕೊಳ್ಳಬೇಕೆಂದು ಬಯಸುತ್ತಾರೆ.

16. ವ್ಯಕ್ತಿಪರವಾದ ಕಷ್ಟಗಳನ್ನು ನಾವು ವೀಕ್ಷಿಸುವ ರೀತಿಯು ಐಕ್ಯದ ವಿಷಯಕ್ಕೆ ಸಂಬಂಧಿಸಿರುವುದು ಹೇಗೆ?

16 ಕಷ್ಟಕರ ಸನ್ನಿವೇಶಗಳನ್ನೂ ಯೆಹೋವನಿಗೆ ಭಕ್ತಿಯನ್ನು ತೋರಿಸುವ ಸಂದರ್ಭಗಳಾಗಿ ಹಾಗೂ ಆತನ ಚಿತ್ತವನ್ನು ನೆರವೇರಿಸುವುದರಲ್ಲಿ ಪಾಲಿಗರಾಗುವ ಸಂದರ್ಭಗಳಾಗಿ ವೀಕ್ಷಿಸುವುದು ಎಷ್ಟು ಪ್ರಶಂಸನೀಯ! ನಾವು ಹಾಗೆ ಮಾಡುವಲ್ಲಿ, ನಾವು ದೇವರ ಮತ್ತು ಕ್ರಿಸ್ತನೊಂದಿಗಿನ ಐಕ್ಯದ ಕಡೆಗೆ ಸಾಗುತ್ತಿದ್ದೇವೆಂಬುದಕ್ಕೆ ನಿಶ್ಚಯವಾಗಿಯೂ ರುಜುವಾತನ್ನು ಕೊಡಬಲ್ಲೆವು. ಎಲ್ಲಾ ಸತ್ಯ ಕ್ರೈಸ್ತರ ಪರವಾಗಿ ಯೇಸು ಯೆಹೋವನಿಗೆ ಪ್ರಾರ್ಥಿಸುತ್ತಾ ಹೇಳಿದ್ದು: “ಆದರೆ ಇವರಿಗೋಸ್ಕರ [ತನ್ನೊಟ್ಟಿಗೇ ಇದ್ದ ಶಿಷ್ಯರಿಗೋಸ್ಕರ] ಮಾತ್ರವಲ್ಲದೆ ಇವರ ವಾಕ್ಯದಿಂದ ನನ್ನನ್ನು ನಂಬುವವರಿಗೋಸ್ಕರ ಸಹ ಕೇಳಿಕೊಳ್ಳುತ್ತೇನೆ. ನೀನು ನನ್ನನ್ನು ಕಳುಹಿಸಿಕೊಟ್ಟಿದ್ದೀ ಎಂದು ಲೋಕವು ನಂಬುವದಕ್ಕಾಗಿ ಅವರೆಲ್ಲರೂ ಒಂದಾಗಿರಬೇಕೆಂತಲೂ ತಂದೆಯೇ, ನೀನು ನನ್ನಲ್ಲಿಯೂ ನಾನು ನಿನ್ನಲ್ಲಿಯೂ ಇರುವ ಪ್ರಕಾರ ಅವರೂ ನಮ್ಮಲ್ಲಿ ಇರಬೇಕೆಂತಲೂ ಕೇಳಿಕೊಳ್ಳುತ್ತೇನೆ.”​—⁠ಯೋಹಾನ 17:20, 21.

17. ನಾವು ದೇವರಿಗೆ ನಿಷ್ಠಾವಂತರಾಗಿರುವಲ್ಲಿ ನಮಗೆ ಯಾವ ಭರವಸೆ ಇರಬಲ್ಲದು?

17 ನಾವು ಯೆಹೋವನಿಗೆ ನಿಷ್ಠರಾಗಿರುವಲ್ಲಿ, ಆತನು ನಮಗೆ ಉದಾರವಾದ ಪ್ರತಿಫಲವನ್ನು ಕೊಡುವನು. ಆತನ ವಾಕ್ಯವು ಹೇಳುವುದು: “ಸ್ಥಿರಚಿತ್ತರಾಗಿಯೂ ನಿಶ್ಚಲರಾಗಿಯೂ ಇರ್ರಿ. ನೀವು ಕರ್ತನ ಸೇವೆಯಲ್ಲಿ ಪಡುವ ಪ್ರಯಾಸವು ನಿಷ್ಫಲವಾಗುವದಿಲ್ಲವೆಂದು ತಿಳಿದು ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕ್ತಿಯಿಂದ ಮಾಡುವವರಾಗಿರಿ.” (1 ಕೊರಿಂಥ 15:58) ಅದು ಇನ್ನೂ ಹೇಳುವುದು: “ಈ ಕೆಲಸವನ್ನೂ ಇದರಲ್ಲಿ ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ.” (ಇಬ್ರಿಯ 6:10) ಯಾಕೋಬ 5:11 ಹೇಳುವುದು: “ತಾಳಿಕೊಂಡಿರುವವರನ್ನು ಧನ್ಯರೆಂದು ಹೇಳುತ್ತೇವಲ್ಲವೇ. ನೀವು ಯೋಬನಲ್ಲಿದ್ದ ತಾಳ್ಮೆಯ ವಿಷಯವಾಗಿ ಕೇಳಿ ಕರ್ತನು [“ಯೆಹೋವನು,” NW] ಅವನಿಗೆ ಅಂತ್ಯದಲ್ಲಿ ಮಾಡಿದ್ದನ್ನು ನೋಡಿ ಕರ್ತನು [“ಯೆಹೋವನು,” NW] ಕರುಣಾಸಾಗರನೂ ದಯಾಳುವೂ ಆಗಿದ್ದಾನೆಂದು ತಿಳಿದಿದ್ದೀರಷ್ಟೆ.” ಯೋಬನಿಗೆ ಯಾವ ಪ್ರತಿಫಲ ದೊರಕಿತು? “ಯೆಹೋವನು ಯೋಬನ ಮೊದಲನೆಯ ಸ್ಥಿತಿಗಿಂತಲೂ ಅವನ ಕಡೆಯ ಸ್ಥಿತಿಯನ್ನು . . . ಹೆಚ್ಚಾಗಿ ಆಶೀರ್ವದಿಸಿದನು.” (ಯೋಬ 42:10-16) ಹೌದು, ಯೆಹೋವನು, “ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ.” (ಇಬ್ರಿಯ 11:6) ಮತ್ತು ನಾವು ಎದುರುನೋಡಬಹುದಾದ ಪ್ರತಿಫಲವು​—⁠ಭೂಪರದೈಸಿನಲ್ಲಿ ನಿತ್ಯಜೀವ​—⁠ಅದೆಂತಹ ಮಹತ್ವದ ಪ್ರತಿಫಲವಾಗಿರುವುದು!

18. ನಮಗೆ ಇರಬಹುದಾದ ವೇದನೆ ತುಂಬಿದ ಸ್ಮರಣೆಗಳಿಗೆ ಕ್ರಮೇಣ ಏನಾಗುವುದು?

18 ದೇವರ ರಾಜ್ಯದ ಆಳಿಕೆಯು ಮಾನವ ಕುಟುಂಬದ ಮೇಲೆ ಸಾವಿರಾರು ವರುಷಗಳಿಂದ ಬಂದಿರುವ ಸಕಲ ಹಾನಿಯನ್ನು ಸರಿಪಡಿಸುವುದು. ಆಗ ಬರಲಿರುವ ಸಂತೋಷಗಳು, ನಾವೀಗ ಅನುಭವಿಸುತ್ತಿರುವ ಯಾವುದೇ ಕಷ್ಟಾನುಭವವನ್ನು ಅತಿ ಕನಿಷ್ಠವಾದುದಾಗಿ ಮಾಡುವವು. ನಮ್ಮ ಹಿಂದಿನ ಕಷ್ಟಾನುಭವಗಳ ಅಹಿತಕರ ಸ್ಮರಣೆಯಿಂದ ನಾವು ತೊಂದರೆಗೊಳಗಾಗೆವು. ನೂತನ ಲೋಕದಲ್ಲಿ ಜನರ ದಿನನಿತ್ಯದ ಜೀವನಗಳನ್ನು ತುಂಬಿಕೊಂಡಿರುವ ಆತ್ಮೋನ್ನತಿಯನ್ನು ಮಾಡುವ ಆಲೋಚನೆಗಳು ಮತ್ತು ಕೆಲಸಗಳು ಕ್ರಮೇಣ ನಮ್ಮ ವೇದನೆ ತುಂಬಿದ ಸ್ಮರಣೆಗಳನ್ನು ಅಳಿಸಿಬಿಡುವವು. ಯೆಹೋವನು ತಿಳಿಯಪಡಿಸುವುದು: “ಇಗೋ, ನೂತನಾಕಾಶಮಂಡಲವನ್ನೂ [ಮಾನವಕುಲದ ಮೇಲೆ ಒಂದು ಹೊಸ ಸ್ವರ್ಗೀಯ ರಾಜ್ಯ ಸರಕಾರವನ್ನೂ] ನೂತನ ಭೂಮಂಡಲವನ್ನೂ [ಒಂದು ನೀತಿಯ ಮಾನವ ಸಮಾಜವನ್ನೂ] ಸೃಷ್ಟಿಸುವೆನು; ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು, ಅದು ನೆನಪಿಗೆ ಬಾರದು, ನಾನು ಮಾಡುವ ಸೃಷ್ಟಿಕಾರ್ಯದಲ್ಲಿಯೇ ಹರ್ಷಗೊಂಡು ಸದಾ ಉಲ್ಲಾಸಿಸಿರಿ.” ಹೌದು, ಯೆಹೋವನ ನೂತನ ಲೋಕದಲ್ಲಿ, ನೀತಿವಂತರು ಹೀಗೆ ಹೇಳಶಕ್ತರಾಗುವರು: “ಭೂಲೋಕವೆಲ್ಲಾ ಶಾಂತವಾಗಿ ವಿಶ್ರಾಂತಿಗೊಂಡಿದೆ, [ಜನರು] ಹರ್ಷಧ್ವನಿಗೈಯುತ್ತಾರೆ.”​—⁠ಯೆಶಾಯ 14:7; 65:17, 18.

ಪುನರ್ವಿಮರ್ಶೆಯ ಚರ್ಚೆ

• ಕೆಟ್ಟದ್ದನ್ನು ಅನುಮತಿಸಿದರೂ, ಯೆಹೋವನು ತನ್ನ ಸ್ವಂತ ನಾಮಕ್ಕೆ ಮಹಾ ಗೌರವವನ್ನು ಸರಿಯಾಗಿ ತೋರಿಸಿರುವುದು ಹೇಗೆ?

• ದೇವರು “ಕೋಪಕ್ಕೆ ಗುರಿಯಾದ”ವರನ್ನು ಸೈರಿಸಿಕೊಂಡ ವಿಷಯವು, ಆತನ ಕರುಣೆಯು ನಮ್ಮ ವರೆಗೂ ಚಾಚುವಂತೆ ಸಾಧ್ಯಮಾಡಿದ್ದು ಹೇಗೆ?

• ವೈಯಕ್ತಿಕ ಕಷ್ಟಾನುಭವವಿರುವ ಸ್ಥಿತಿಗತಿಗಳಲ್ಲಿ ನಾವು ಏನನ್ನು ಗಮನಿಸಲು ಪ್ರಯತ್ನಿಸಬೇಕು?

[ಅಧ್ಯಯನ ಪ್ರಶ್ನೆಗಳು]

[ಪುಟ 67ರಲ್ಲಿರುವ ಚಿತ್ರಗಳು]

ಯೆಹೋವನು “ಯೋಬನ ಮೊದಲನೆಯ ಸ್ಥಿತಿಗಿಂತಲೂ ಅವನ ಕಡೆಯ ಸ್ಥಿತಿಯನ್ನು . . . ಹೆಚ್ಚಾಗಿ ಆಶೀರ್ವದಿಸಿದನು”