ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ದಿನಗಳಲ್ಲಿ ಆರಾಧನೆಯಲ್ಲಿ ಐಕ್ಯತೆ—ಇದರ ಅರ್ಥವೇನು?

ನಮ್ಮ ದಿನಗಳಲ್ಲಿ ಆರಾಧನೆಯಲ್ಲಿ ಐಕ್ಯತೆ—ಇದರ ಅರ್ಥವೇನು?

ಅಧ್ಯಾಯ ಒಂದು

ನಮ್ಮ ದಿನಗಳಲ್ಲಿ ಆರಾಧನೆಯಲ್ಲಿ ಐಕ್ಯತೆ—ಇದರ ಅರ್ಥವೇನು?

1, 2. (ಎ) ನಮ್ಮ ದಿನಗಳಲ್ಲಿ ರೋಮಾಂಚಕವಾದ ಯಾವ ಚಳುವಳಿ ನಡೆಯುತ್ತಿದೆ? (ಬಿ) ಪ್ರಾಮಾಣಿಕ ಹೃದಯದ ವ್ಯಕ್ತಿಗಳಿಗೆ ಯಾವ ಅದ್ಭುತಕರವಾದ ನಿರೀಕ್ಷೆಯಿದೆ?

ಭೂಮಂಡಲದಲ್ಲೆಲ್ಲ ಆರಾಧನೆಯ ಐಕ್ಯತೆಗೋಸ್ಕರ ರೋಮಾಂಚಕವಾದ ಚಳುವಳಿಯೊಂದು ನಡೆಯುತ್ತಿದೆ. ಇದು ಸಕಲ ಜನಾಂಗ, ಕುಲ, ಭಾಷೆಗಳಿಂದ ಲಕ್ಷೋಪಲಕ್ಷ ಜನರನ್ನು ಐಕ್ಯಗೊಳಿಸುತ್ತಿದೆ. ಪ್ರತಿ ವರುಷ, ಹೆಚ್ಚೆಚ್ಚು ಜನರು ಒಟ್ಟುಗೂಡಿಸಲ್ಪಡುತ್ತಿದ್ದಾರೆ. ಇವರನ್ನು ಬೈಬಲ್‌ ಗ್ರಂಥವು ಯೆಹೋವನ “ಸಾಕ್ಷಿಗಳು” ಎಂದು ಗುರುತಿಸುತ್ತಾ “ಮಹಾ ಸಮೂಹ” ಎಂದು ಕರೆಯುತ್ತದೆ. ಇವರು “ಹಗಲಿರುಳು . . . ಸೇವೆಮಾಡುತ್ತಾ ಇದ್ದಾರೆ.” (ಯೆಶಾಯ 43:​10-12; ಪ್ರಕಟನೆ 7:​9-15) ಅವರು ಹಾಗೆ ಸೇವೆಮಾಡುವುದೇಕೆ? ಏಕೆಂದರೆ, ಅವರು ಯೆಹೋವನು ಒಬ್ಬನೇ ಸತ್ಯ ದೇವರೆಂದು ತಿಳಿದಿದ್ದಾರೆ. ಇದು ಅವರು ತಮ್ಮ ಜೀವನವನ್ನು ಆತನ ನೀತಿಯ ಮಟ್ಟಗಳಿಗೆ ಹೊಂದಿಸಿಕೊಳ್ಳುವಂತೆ ಪ್ರಚೋದಿಸುತ್ತದೆ. ನಾವು ಈಗಿನ ದುಷ್ಟ ಲೋಕದ “ಕಡೇ ದಿವಸಗಳಲ್ಲಿ” ಜೀವಿಸುತ್ತಿದ್ದೇವೆಂದೂ, ಈ ಲೋಕವನ್ನು ದೇವರು ಬೇಗನೇ ನಾಶಗೊಳಿಸುವನೆಂದೂ, ಮತ್ತು ಆತನು ಇದನ್ನು ತೊಲಗಿಸಿ, ಪರದೈಸಾಗಿರುವ ನೂತನ ಲೋಕವೊಂದರಿಂದ ಸ್ಥಳಾಂತರಿಸುವನೆಂದೂ ಅವರು ಕಲಿತಿದ್ದಾರೆ.​—⁠2 ತಿಮೊಥೆಯ 3:​1-5, 13; 2 ಪೇತ್ರ 3:​10-13.

2 ದೇವರ ವಾಕ್ಯವು ವಚನ ಕೊಡುವುದು: “ಇನ್ನು ಸ್ವಲ್ಪಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು; . . . ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.” (ಕೀರ್ತನೆ 37:10, 11) “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.” (ಕೀರ್ತನೆ 37:29) “[ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.”​—⁠ಪ್ರಕಟನೆ 21:⁠4.

3. ಆರಾಧನೆಯಲ್ಲಿ ನಿಜ ಐಕ್ಯವನ್ನು ಹೇಗೆ ಸಾಧಿಸಲಾಗುತ್ತಿದೆ?

3 ಇಂದು ಸತ್ಯಾರಾಧನೆಯಲ್ಲಿ ಐಕ್ಯಗೊಳ್ಳುತ್ತಿರುವ ಜನರು ಆ ನೂತನ ಲೋಕದ ಪ್ರಥಮ ನಿವಾಸಿಗಳಾಗಿದ್ದಾರೆ. ಅವರು ದೇವರ ಚಿತ್ತವೇನೆಂಬುದನ್ನು ಕಲಿತು ಅದನ್ನು ತಮ್ಮಿಂದ ಸಾಧ್ಯವಾದಷ್ಟರ ಮಟ್ಟಿಗೆ ಮಾಡುತ್ತಿದ್ದಾರೆ. ಇದರ ಪ್ರಮುಖತೆಯನ್ನು ತೋರಿಸುತ್ತಾ, ಯೇಸು ಹೇಳಿದ್ದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.” (ಯೋಹಾನ 17:3) ಅಪೊಸ್ತಲ ಯೋಹಾನನು ಬರೆದುದು: “ಲೋಕವೂ ಅದರ ಆಶೆಯೂ ಗತಿಸಿ ಹೋಗುತ್ತವೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.”​—⁠1 ಯೋಹಾನ 2:17.

ಅದರ ನಿಜಾರ್ಥ

4. (ಎ) ನಮ್ಮ ದಿನಗಳ ಐಕ್ಯಾರಾಧನೆಯಲ್ಲಿ ಅಷ್ಟೊಂದು ಜನರ ಕೂಡಿಬರುವಿಕೆಯ ನಿಜಾರ್ಥವೇನು? (ಬಿ) ಈ ಒಟ್ಟುಗೂಡಿಸುವಿಕೆಯನ್ನು ಬೈಬಲು ಹೇಗೆ ವರ್ಣಿಸುತ್ತದೆ?

4 ನಮ್ಮ ದಿನಗಳಲ್ಲಿ ಐಕ್ಯಾರಾಧನೆಗೆ ಅಷ್ಟೊಂದು ಜನರನ್ನು ಕೂಡಿಸುವುದರ ನಿಜಾರ್ಥವೇನು? ನಾವು ಈ ದುಷ್ಟ ಲೋಕದ ಅಂತ್ಯಕ್ಕೆ ಅತಿ ಹತ್ತಿರವಾಗಿದ್ದೇವೆಂಬುದಕ್ಕೆ ಮತ್ತು ಅದರ ಬೆನ್ನಿಗೆ ನೂತನ ಲೋಕವು ಆರಂಭಗೊಳ್ಳಲಿದೆ ಎಂಬುದಕ್ಕೆ ಇದು ನಿಜ ರುಜುವಾತಾಗಿದೆ. ಈ ಮಹತ್ವಪೂರ್ಣವಾದ ಒಟ್ಟುಗೂಡಿಸುವಿಕೆಯನ್ನು ಮುಂತಿಳಿಸಿರುವ ಬೈಬಲ್‌ ಪ್ರವಾದನೆಗಳ ನೆರವೇರಿಕೆಗೆ ನಾವು ಪ್ರತ್ಯಕ್ಷ ಸಾಕ್ಷಿಗಳಾಗಿದ್ದೇವೆ. ಇಂತಹ ಒಂದು ಪ್ರವಾದನೆಯು ಹೇಳುವುದು: “ಅಂತ್ಯಕಾಲದಲ್ಲಿ [ಈ ಕಡೇ ದಿವಸಗಳಲ್ಲಿ] ಯೆಹೋವನ ಮಂದಿರದ ಬೆಟ್ಟವು [ಆತನ ಉನ್ನತಕ್ಕೇರಿಸಲ್ಪಟ್ಟ ಸತ್ಯಾರಾಧನೆಯು] ಎಲ್ಲಾ ಗುಡ್ಡಬೆಟ್ಟಗಳಿಗಿಂತ [ಬೇರೆ ಯಾವುದೇ ವಿಧದ ಆರಾಧನೆಗಿಂತ] ಉನ್ನತೋನ್ನತವಾಗಿ ಬೆಳೆದು ನೆಲೆಗೊಳ್ಳುವದು; ಆಗ ಜನಾಂಗಗಳು ಅದರ ಕಡೆಗೆ ಪ್ರವಾಹಗಳಂತೆ ಬರುವವು. ಹೊರಟುಬಂದ ಬಹು ದೇಶಗಳವರು​—⁠ಬನ್ನಿರಿ, ಯೆಹೋವನ ಪರ್ವತಕ್ಕೆ, ಯಾಕೋಬ್ಯರ ದೇವರ ಮಂದಿರಕ್ಕೆ ಹೋಗೋಣ! ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆಮಾಡುವನು, ನಾವು ಆತನ ದಾರಿಗಳಲ್ಲಿ ನಡೆಯುವೆವು ಎಂದು ಹೇಳುವರು.”​—⁠ಮೀಕ 4:1, 2; ಕೀರ್ತನೆ 37:34.

5, 6. (ಎ) ಜನಾಂಗಗಳವರು ಯೆಹೋವನ ಕಡೆಗೆ ತಿರುಗುತ್ತಿದ್ದಾರೆಂಬುದು ಹೇಗೆ ನಿಜವಾಗಿದೆ? (ಬಿ) ನಾವು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು?

5 ಯೆಹೋವನ ಆತ್ಮಿಕಾಲಯದಲ್ಲಿ ಇಡೀ ಜನಾಂಗಗಳೇ ಬಂದು ತಮ್ಮನ್ನು ಪ್ರಸ್ತುತಪಡಿಸಿಕೊಳ್ಳುವುದಿಲ್ಲವೆಂಬುದು ನಿಜವಾದರೂ, ಎಲ್ಲಾ ಜನಾಂಗಗಳಿಂದ ಲಕ್ಷಾಂತರ ಜನರು ಹಾಗೆ ಮಾಡುತ್ತಿದ್ದಾರೆ. ಅವರು ಯೆಹೋವ ದೇವರ ಪ್ರೀತಿಪೂರ್ವಕ ಉದ್ದೇಶ ಹಾಗೂ ಆತನ ಆಕರ್ಷಕ ವ್ಯಕ್ತಿತ್ವದ ಕುರಿತು ಕಲಿಯುವಾಗ, ಅವರ ಹೃದಯಗಳು ಆಳವಾಗಿ ಪ್ರಚೋದಿಸಲ್ಪಡುತ್ತವೆ. ಆಗ ಅವರು ದೇವರು ತಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆಂದು ದೈನ್ಯದಿಂದ ತಿಳಿಯಲು ಬಯಸುತ್ತಾರೆ. ಅವರ ಪ್ರಾರ್ಥನೆಯು, “ನಿನ್ನ ಚಿತ್ತದಂತೆ ನಡಕೊಳ್ಳುವದನ್ನು ನನಗೆ ಕಲಿಸು; ನನ್ನ ದೇವರು ನೀನಲ್ಲವೋ?” ಎಂದು ಹೇಳಿದ ಕೀರ್ತನೆಗಾರನ ಪ್ರಾರ್ಥನೆಯಂತಿರುತ್ತದೆ.​—⁠ಕೀರ್ತನೆ 143:10.

6 ಯೆಹೋವನು ಈಗ ಐಕ್ಯಗೊಂಡಿರುವ ಆರಾಧನೆಯಲ್ಲಿ ಒಟ್ಟುಸೇರಿಸುತ್ತಿರುವ ಮಹಾ ಸಮೂಹದ ಮಧ್ಯೆ ನೀವು ನಿಮ್ಮನ್ನು ಕಂಡುಕೊಳ್ಳುತ್ತೀರೊ? ಆತನ ವಾಕ್ಯದಿಂದ ನೀವು ಪಡೆದಿರುವ ಉಪದೇಶಕ್ಕೆ ನಿಮ್ಮ ಪ್ರತಿಕ್ರಿಯೆಯು, ಯೆಹೋವನೇ ಇದರ ಮೂಲನೆಂಬುದನ್ನು ನೀವು ನಿಜವಾಗಿಯೂ ಮಾನ್ಯಮಾಡುತ್ತೀರೆಂದು ತೋರಿಸುತ್ತದೆಯೆ? ನೀವು “ಆತನ ದಾರಿಗಳಲ್ಲಿ” ಎಷ್ಟರ ಮಟ್ಟಿಗೆ ನಡೆಯುವಿರಿ?

ಅದು ಸಾಧಿಸಲ್ಪಡುವ ವಿಧ

7. (ಎ) ಅಂತಿಮವಾಗಿ ಈ ಆರಾಧನಾ ಐಕ್ಯವು ಎಷ್ಟರ ಮಟ್ಟಿಗೆ ಸಾಧಿಸಲ್ಪಡುವುದು? (ಬಿ) ಈಗಲೇ ಯೆಹೋವನ ಆರಾಧಕರಾಗುವುದು ತುರ್ತಿನದ್ದೇಕೆ, ಮತ್ತು ಇತರರು ಹಾಗೆ ಆಗುವಂತೆ ನಾವು ಹೇಗೆ ಸಹಾಯಮಾಡಬಲ್ಲೆವು?

7 ಬುದ್ಧಿಶಕ್ತಿಯಿರುವ ಸಕಲ ಜೀವಿಗಳು ಸತ್ಯಾರಾಧನೆಯಲ್ಲಿ ಐಕ್ಯರಾಗಬೇಕೆಂಬುದು ಯೆಹೋವನ ಉದ್ದೇಶವಾಗಿದೆ. ಜೀವಿಸುತ್ತಿರುವವರೆಲ್ಲರೂ ಒಬ್ಬನೇ ಸತ್ಯ ದೇವರನ್ನು ಆರಾಧಿಸಲಿರುವ ದಿನಕ್ಕಾಗಿ ನಾವೆಷ್ಟು ಹಾರೈಸುತ್ತಿದ್ದೇವೆ! (ಕೀರ್ತನೆ 103:​19-22) ಆದರೆ ಅದು ಸಾಧ್ಯವಾಗುವದಕ್ಕೆ ಮುಂಚಿತವಾಗಿ, ತನ್ನ ನೀತಿಯ ಚಿತ್ತವನ್ನು ಮಾಡಲು ನಿರಾಕರಿಸುವವರನ್ನು ಯೆಹೋವನು ನಿರ್ಮೂಲ ಮಾಡಬೇಕು. ಆದರೆ ಆತನು ಕೃಪೆಯಿಂದ, ಎಲ್ಲೆಡೆಯೂ ಇರುವ ಜನರು ತಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳುವ ಸದವಕಾಶ ಸಿಗಬೇಕೆಂಬ ಕಾರಣದಿಂದ, ತಾನು ಏನು ಮಾಡಲಿದ್ದೇನೆ ಎಂಬುದರ ಬಗ್ಗೆ ಮುನ್ನೆಚ್ಚರಿಕೆಯನ್ನು ಕೊಡುತ್ತಾನೆ. (ಯೆಶಾಯ 55:​6, 7) ಹೀಗೆ ನಮ್ಮ ದಿನಗಳಲ್ಲಿ, “ಸಕಲ ಜನಾಂಗ ಕುಲ ಪ್ರಜೆಗಳವರಿಗೂ ಸಕಲ ಭಾಷೆಗಳನ್ನಾಡುವವರಿಗೂ” ಈ ತುರ್ತಿನ ಮನವಿಯನ್ನು ಮಾಡಲಾಗುತ್ತಿದೆ. ಅದೇನಂದರೆ: “ನೀವೆಲ್ಲರು ದೇವರಿಗೆ ಭಯಪಟ್ಟು ಆತನನ್ನು ಘನಪಡಿಸಿರಿ, ಆತನು ನ್ಯಾಯತೀರ್ಪುಮಾಡುವ ಗಳಿಗೆಯು ಬಂದಿದೆ. ಭೂಲೋಕ ಪರಲೋಕಗಳನ್ನೂ ಸಮುದ್ರವನ್ನೂ ನೀರಿನ ಬುಗ್ಗೆಗಳನ್ನೂ ಉಂಟುಮಾಡಿದಾತನಿಗೆ ನಮಸ್ಕಾರಮಾಡಿರಿ.” (ಪ್ರಕಟನೆ 14:6, 7) ಆ ಆಮಂತ್ರಣವನ್ನು ನೀವು ಸ್ವೀಕರಿಸಿದ್ದೀರೊ? ಹಾಗಿರುವಲ್ಲಿ, ಇನ್ನೂ ಇತರರು ಸತ್ಯ ದೇವರನ್ನು ತಿಳಿದು ಆರಾಧಿಸುವಂತೆ ಅವರನ್ನು ಆಮಂತ್ರಿಸುವ ಸುಯೋಗ ನಿಮ್ಮದಾಗಿದೆ.

8. ಬೈಬಲಿನ ಪ್ರಾಥಮಿಕ ಬೋಧನೆಗಳನ್ನು ಕಲಿತಾದ ಮೇಲೆ, ಇನ್ನೂ ಹೆಚ್ಚಿನ ಯಾವ ಪ್ರಗತಿಯನ್ನು ಮಾಡಲು ಶ್ರದ್ಧಾಪೂರ್ವಕವಾಗಿ ನೀವು ಪ್ರಯತ್ನಿಸಬೇಕು?

8 ಯೆಹೋವನನ್ನು ನಂಬುತ್ತೇವೆಂದು ಹೇಳಿ, ಬಳಿಕ ತಮ್ಮ ಸ್ವಂತ ಅಭಿರುಚಿಗಳನ್ನು ಹುಡುಕುವವರಿಂದ ಆರಾಧನೆಯನ್ನು ಪಡೆಯುವುದು ಆತನ ಉದ್ದೇಶವಾಗಿರುವುದಿಲ್ಲ. ಜನರು ದೇವರ “ಚಿತ್ತದ . . . ತಿಳುವಳಿಕೆಯಿಂದ ತುಂಬಿಕೊಂಡು” ಅದನ್ನು ತಮ್ಮ ಜೀವಿತಗಳಲ್ಲಿ ತೋರಿಸಬೇಕೆಂಬುದು ಆತನ ಬಯಕೆಯಾಗಿದೆ. (ಕೊಲೊಸ್ಸೆ 1:​9, 10) ಆದಕಾರಣ, ಬೈಬಲಿನ ಪ್ರಾಥಮಿಕ ಬೋಧನೆಗಳನ್ನು ಕಲಿತಿರುವ ಕೃತಜ್ಞತಾಭಾವದ ಜನರು ಕ್ರೈಸ್ತ ಪ್ರೌಢತೆಗೆ ಮುಂದುವರಿಯಲು ಅಪೇಕ್ಷಿಸುತ್ತಾರೆ. ಯೆಹೋವನನ್ನು ಹೆಚ್ಚು ಆತ್ಮೀಯವಾಗಿ ತಿಳಿದುಕೊಳ್ಳುವುದು, ಆತನ ವಾಕ್ಯದ ತಿಳಿವಳಿಕೆಯನ್ನು ವಿಸ್ತರಿಸಿ ಆಳವಾಗಿಸುವುದು ಮತ್ತು ಅವುಗಳನ್ನು ತಮ್ಮ ಜೀವಿತಗಳಲ್ಲಿ ಹೆಚ್ಚು ಪೂರ್ಣವಾಗಿ ಅನ್ವಯಿಸಿಕೊಳ್ಳುವುದು ಅವರ ಬಯಕೆಯಾಗಿದೆ. ಅವರು ನಮ್ಮ ಸ್ವರ್ಗೀಯ ಪಿತನ ಗುಣಗಳನ್ನು ಪ್ರತಿಬಿಂಬಿಸಿ, ವಿಷಯಗಳನ್ನು ಆತನ ದೃಷ್ಟಿಕೋನದಿಂದ ವೀಕ್ಷಿಸಲು ಹಾರೈಸುತ್ತಾರೆ. ಈ ಕಾರಣದಿಂದ, ಆತನು ನಮ್ಮ ದಿನಗಳಲ್ಲಿ ಈ ಭೂಮಿಯಲ್ಲಿ ಮಾಡುವಂತೆ ಏರ್ಪಡಿಸಿರುವ ಜೀವರಕ್ಷಕ ಕೆಲಸದಲ್ಲಿ ಭಾಗವಹಿಸುವ ವಿಧಗಳನ್ನು ಅವರು ಹುಡುಕುವಂತೆ ಇದು ಅವರನ್ನು ಪ್ರೇರಿಸುತ್ತದೆ. ಇದು ನಿಮ್ಮ ಅಪೇಕ್ಷೆಯೂ ಆಗಿದೆಯೆ?​—⁠ಮಾರ್ಕ 13:10; ಇಬ್ರಿಯ 5:​12-6:⁠3.

9. ನಿಜ ಐಕ್ಯವನ್ನು ಸಾಧಿಸುವುದು ಈಗ ಯಾವ ವಿಧಗಳಲ್ಲಿ ಸಾಧ್ಯ?

9 ಯೆಹೋವನನ್ನು ಸೇವಿಸುವವರು ಐಕ್ಯರಾದ ಜನರಾಗಿರಬೇಕೆಂದು ಬೈಬಲು ತೋರಿಸುತ್ತದೆ. (ಎಫೆಸ 4:​1-3) ನಾವು ಇಂದು ವಿಭಜಿತವಾದ ಲೋಕದಲ್ಲಿ ಜೀವಿಸುತ್ತಿದ್ದೇವಾದರೂ, ನಮ್ಮ ಸ್ವಂತ ಅಪರಿಪೂರ್ಣತೆಗಳ ವಿರುದ್ಧ ಹೋರಾಡುತ್ತಿದ್ದೇವಾದರೂ, ಈ ಐಕ್ಯವು ಈಗ ಅಸ್ತಿತ್ವದಲ್ಲಿರತಕ್ಕದ್ದು. ತನ್ನ ಶಿಷ್ಯರೆಲ್ಲರೂ ನಿಜ ಐಕ್ಯವನ್ನು ಅನುಭೋಗಿಸುತ್ತಾ, ಒಂದಾಗಿರಬೇಕೆಂದು ಯೇಸು ಶ್ರದ್ಧಾಪೂರ್ವಕವಾಗಿ ಪ್ರಾರ್ಥಿಸಿದನು. ಇದು ಏನನ್ನು ಅರ್ಥೈಸುವುದು? ಪ್ರಥಮವಾಗಿ, ಅವರಿಗೆ ಯೆಹೋವನೊಂದಿಗೂ ಆತನ ಪುತ್ರನೊಂದಿಗೂ ಉತ್ತಮವಾದ ಸಂಬಂಧವಿರುತ್ತದೆ. ಮತ್ತು ಎರಡನೆಯದಾಗಿ, ಅವರು ತಮ್ಮೊಳಗೆ ಪರಸ್ಪರವಾಗಿ ಐಕ್ಯತೆಯಿಂದಿರುತ್ತಾರೆ. (ಯೋಹಾನ 17:​20, 21) ಇದನ್ನು ಸಾಧಿಸುವ ಉದ್ದೇಶದಿಂದ, ಕ್ರೈಸ್ತ ಸಭೆಯು ಯೆಹೋವನು ತನ್ನ ಜನರಿಗೆ ಬೋಧಿಸುವ ಸಂಸ್ಥೆಯಾಗಿ ಕಾರ್ಯನಡಿಸುತ್ತದೆ.

ಐಕ್ಯವನ್ನು ಸಾಧಿಸಲು ನೆರವಾಗುವ ಸಂಗತಿಗಳಾವುವು?

10. (ಎ) ನಮಗೆ ಸಂಬಂಧಿಸುವ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಹಿಡಿಯಲು ನಾವು ವ್ಯಕ್ತಿಪರವಾಗಿ ಬೈಬಲನ್ನು ಉಪಯೋಗಿಸುವಲ್ಲಿ ಯಾವ ಗುಣಗಳನ್ನು ವರ್ಧಿಸಿಕೊಳ್ಳುತ್ತೇವೆ? (ಬಿ) ಈ ಪರಿಚ್ಛೇದದಲ್ಲಿ ಕೊಡಲ್ಪಟ್ಟಿರುವ ಪ್ರಶ್ನೆಗಳನ್ನು ಉತ್ತರಿಸುವ ಮೂಲಕ ಕ್ರೈಸ್ತ ಐಕ್ಯಕ್ಕೆ ನೆರವಾಗುವ ಸಂಗತಿಗಳನ್ನು ವಿಶ್ಲೇಷಿಸಿರಿ.

10 ಆರಾಧನೆಯ ಐಕ್ಯಕ್ಕೆ ನೆರವಾಗುವ ಏಳು ಮುಖ್ಯ ಸಂಗತಿಗಳನ್ನು ಈ ಕೆಳಗೆ ಕೊಡಲಾಗಿದೆ. ಅದರ ಜೊತೆಯಲ್ಲಿರುವ ಪ್ರಶ್ನೆಗಳನ್ನು ನೀವು ಉತ್ತರಿಸುವಾಗ, ಪ್ರತಿಯೊಂದು ಅಂಶವು ಯೆಹೋವನೊಂದಿಗೆ ಮತ್ತು ಜೊತೆ ಕ್ರೈಸ್ತರೊಂದಿಗೆ ನಿಮಗಿರುವ ಸಂಬಂಧವನ್ನು ಹೇಗೆ ಪ್ರಭಾವಿಸುತ್ತದೆಂಬುದರ ಬಗ್ಗೆ ಯೋಚಿಸಿರಿ. ಈ ಅಂಶಗಳ ಬಗ್ಗೆ ತರ್ಕಿಸಿ, ಉಲ್ಲೇಖಿಸಿರುವ ಆದರೆ ಉದ್ಧರಿಸದ ಶಾಸ್ತ್ರವಚನಗಳನ್ನು ತೆರೆದು ನೋಡುವುದು, ನಮಗೆಲ್ಲರಿಗೂ ಅಗತ್ಯವಿರುವ ಗುಣಗಳಾದ ದೈವಿಕ ವಿವೇಕ, ಯೋಚನಾ ಸಾಮರ್ಥ್ಯ ಮತ್ತು ವಿವೇಚನಾ ಶಕ್ತಿಯ ವರ್ಧನೆಗೆ ಸಹಾಯಮಾಡುವುದು. (ಜ್ಞಾನೋಕ್ತಿ 5:​1, 2; ಫಿಲಿಪ್ಪಿ 1:​9-11) ಈ ಸಂಗತಿಗಳನ್ನು ಒಮ್ಮೆಗೆ ಒಂದರಂತೆ ಪರಿಗಣಿಸಿರಿ.

(1) ಒಳ್ಳೇದು ಮತ್ತು ಕೆಟ್ಟದ್ದು ಯಾವುದೆಂಬುದರ ಮಟ್ಟವನ್ನು ನಿರ್ಣಯಿಸಲು ಯೆಹೋವನಿಗಿರುವ ಹಕ್ಕನ್ನು ನಾವು ಒಪ್ಪಿಕೊಳ್ಳುತ್ತೇವೆ. “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಿಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.”​—⁠ಜ್ಞಾನೋಕ್ತಿ 3:5, 6.

ನಿರ್ಣಯಗಳನ್ನು ಮಾಡುವಾಗ ನಾವು ಯೆಹೋವನ ಸಲಹೆ ಮತ್ತು ಮಾರ್ಗದರ್ಶನವನ್ನು ಏಕೆ ಹುಡುಕಬೇಕು? (ಕೀರ್ತನೆ 146:​3-5; ಯೆಶಾಯ 48:17)

(2) ನಮ್ಮನ್ನು ಮಾರ್ಗದರ್ಶಿಸಲು ನಮಗೆ ದೇವರ ವಾಕ್ಯವಿದೆ. “ನೀವು ದೇವರ ವಾಕ್ಯವನ್ನು ನಮ್ಮಿಂದ ಕೇಳಿದಾಗ ಅದನ್ನು ಮನುಷ್ಯರ ವಾಕ್ಯವೆಂದೆಣಿಸದೆ ದೇವರ ವಾಕ್ಯವೆಂದೇ ತಿಳಿದು” ಅಂಗೀಕರಿಸಿದಿರಿ. “ಅದು ನಿಜವಾಗಿ ದೇವರ ವಾಕ್ಯವೇ; ಅದು ನಂಬುವವರಾದ ನಿಮ್ಮೊಳಗೆ ಬಲವಾಗಿ ಕೆಲಸ ನಡಿಸುತ್ತದೆ.”​—⁠1 ಥೆಸಲೊನೀಕ 2:13.

ನಮಗೆ ಸರಿ ಎಂದು “ಅನಿಸುವ” ವಿಷಯಗಳನ್ನು ಮಾಡುವುದರಲ್ಲಿ ಯಾವ ಅಪಾಯವಿದೆ? (ಜ್ಞಾನೋಕ್ತಿ 14:12; ಯೆರೆಮೀಯ 10:​23, 24; 17:⁠9)

ಒಂದು ವಿಷಯದ ಬಗ್ಗೆ ಬೈಬಲ್‌ ಯಾವ ಸಲಹೆಯನ್ನು ಕೊಡುತ್ತದೆಂದು ನಮಗೆ ತಿಳಿಯದಿರುವಲ್ಲಿ ನಾವೇನು ಮಾಡಬೇಕು? (ಜ್ಞಾನೋಕ್ತಿ 2:​3-5; 2 ತಿಮೊಥೆಯ 3:​16, 17.)

(3) ಒಂದೇ ಆತ್ಮಿಕ ಭೋಜನ ಕಾರ್ಯಕ್ರಮದಿಂದ ನಾವೆಲ್ಲರೂ ಪ್ರಯೋಜನ ಪಡೆಯುತ್ತೇವೆ. “ನಿನ್ನ ಮಕ್ಕಳೆಲ್ಲರೂ ಯೆಹೋವನಿಂದ ಶಿಕ್ಷಿತರಾಗಿರುವರು, ಅವರಿಗೆ ಅಧಿಕ ಸುಕ್ಷೇಮವಾಗುವದು.” (ಯೆಶಾಯ 54:13) “ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಒಬ್ಬರನ್ನೊಬ್ಬರು ಪ್ರೇರೇಪಿಸೋಣ. ಸಭೆಯಾಗಿ ಕೂಡಿಕೊಳ್ಳುವದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟು ಬಿಡದೆ ಒಬ್ಬರನ್ನೊಬ್ಬರು ಎಚ್ಚರಿಸೋಣ. ಕರ್ತನ ಪ್ರತ್ಯಕ್ಷತೆಯ ದಿನವು ಸಮೀಪಿಸುತ್ತಾ ಬರುತ್ತದೆ ಎಂದು ನೀವು ನೋಡುವದರಿಂದ ಇದನ್ನು ಮತ್ತಷ್ಟು ಮಾಡಿರಿ.”​—⁠ಇಬ್ರಿಯ 10:24, 25.

ಆತ್ಮಿಕ ಭೋಜನಕ್ಕಾಗಿ ಯೆಹೋವನು ಮಾಡಿರುವ ಏರ್ಪಾಡುಗಳ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವವರಿಗೆ ಯಾವ ಪ್ರತಿಫಲಗಳು ದೊರೆಯುತ್ತವೆ? (ಯೆಶಾಯ 65:13, 14)

(4) ನಮ್ಮ ನಾಯಕನು ಯೇಸು ಕ್ರಿಸ್ತನೇ ಹೊರತು ಯಾವ ಮಾನವನೂ ಅಲ್ಲ. “ನೀವು ಬೋಧಕರನ್ನಿಸಿಕೊಳ್ಳಬೇಡಿರಿ; ಒಬ್ಬನೇ ನಿಮ್ಮ ಬೋಧಕನು, ನೀವೆಲ್ಲರು ಸಹೋದರರು. ಇದಲ್ಲದೆ ಭೂಲೋಕದಲ್ಲಿ ಯಾರನ್ನೂ ನಮ್ಮ ತಂದೆ ಎಂದು ಕರೆಯಬೇಡಿರಿ; ಪರಲೋಕದಲ್ಲಿರುವಾತನೊಬ್ಬನೇ ನಿಮಗೆ ತಂದೆ. ಮತ್ತು ಗುರುಗಳು [“ನಾಯಕರು,” NW] ಅನ್ನಿಸಿಕೊಳ್ಳಬೇಡಿರಿ; ಕ್ರಿಸ್ತನೊಬ್ಬನೇ ನಿಮಗೆ ಗುರುವು [“ನಾಯಕನು,” NW].”​—⁠ಮತ್ತಾಯ 23:8-10.

ನಾನು ಇತರರಿಗಿಂತ ಶ್ರೇಷ್ಠನೆಂದು ನಮ್ಮಲ್ಲಿ ಯಾರಾದರೂ ನೆನಸಬೇಕೊ? (ರೋಮಾಪುರ 3:​23, 24; 12:⁠3)

(5) ಮಾನವಕುಲಕ್ಕಿರುವ ಏಕಮಾತ್ರ ನಿರೀಕ್ಷೆಯು ದೇವರ ರಾಜ್ಯ ಸರಕಾರವೆಂದು ತಿಳಿದು ನಾವು ಅದಕ್ಕಾಗಿ ಕಾಯುತ್ತೇವೆ. “ಆದದರಿಂದ ನೀವು ಹೀಗೆ ಪ್ರಾರ್ಥನೆಮಾಡತಕ್ಕದ್ದು​—⁠ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ. ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ. ಹೀಗಿರುವದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ.”​—⁠ಮತ್ತಾಯ 6:9, 10, 33.

‘ಮೊದಲು ದೇವರ ರಾಜ್ಯಕ್ಕಾಗಿ ತವಕಪಡುವುದು’ ನಮ್ಮ ಐಕ್ಯವನ್ನು ಕಾಪಾಡಲು ಹೇಗೆ ಸಹಾಯಮಾಡುತ್ತದೆ? (ಮೀಕ 4:3; 1 ಯೋಹಾನ 3:​10-12)

(6) ಪವಿತ್ರಾತ್ಮವು ಯೆಹೋವನ ಆರಾಧಕರಲ್ಲಿ ಕ್ರೈಸ್ತ ಐಕ್ಯಕ್ಕೆ ಪ್ರಾಮುಖ್ಯವಾದ ಗುಣಗಳನ್ನು ಉತ್ಪಾದಿಸುತ್ತದೆ. “ದೇವರಾತ್ಮನಿಂದ ಉಂಟಾಗುವ ಫಲವೇನಂದರೆ​—⁠ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ದಯೆ ಉಪಕಾರ ನಂಬಿಕೆ ಸಾಧುತ್ವ ಶಮೆದಮೆ ಇಂಥವುಗಳೇ.”​—⁠ಗಲಾತ್ಯ 5:22, 23.

ದೇವರಾತ್ಮವು ನಮ್ಮಲ್ಲಿ ಫಲಗಳನ್ನು ಉತ್ಪಾದಿಸಬೇಕಾದರೆ ನಾವೇನು ಮಾಡತಕ್ಕದ್ದು? (ಅ. ಕೃತ್ಯಗಳು 5:32)

ದೇವರಾತ್ಮವನ್ನು ಪಡೆದವರಾಗಿರುವುದು, ಜೊತೆ ಕ್ರೈಸ್ತರೊಂದಿಗಿನ ನಮ್ಮ ಸಂಬಂಧವನ್ನು ಹೇಗೆ ಪ್ರಭಾವಿಸುತ್ತದೆ? (ಯೋಹಾನ 13:35; 1 ಯೋಹಾನ 4:​8, 20, 21)

(7) ಯೆಹೋವನ ಸತ್ಯಾರಾಧಕರೆಲ್ಲರೂ ಆತನ ರಾಜ್ಯದ ಸುವಾರ್ತೆಯನ್ನು ಸಾರುವುದರಲ್ಲಿ ಭಾಗವಹಿಸುತ್ತಾರೆ. “ಇದಲ್ಲದೆ ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.”​—⁠ಮತ್ತಾಯ 24:14.

ಈ ಸಾರುವ ಚಟುವಟಿಕೆಯಲ್ಲಿ ಪೂರ್ಣವಾಗಿ ಭಾಗವಹಿಸಲು ಮನಸ್ಸುಮಾಡುವಂತೆ ನಮ್ಮನ್ನು ಯಾವುದು ಪ್ರಚೋದಿಸಬೇಕು? (ಮತ್ತಾಯ 22:​37-39; ರೋಮಾಪುರ 10:10)

11. ನಾವು ಬೈಬಲ್‌ ಸತ್ಯವನ್ನು ನಮ್ಮ ಜೀವನಗಳಿಗೆ ಅನ್ವಯಿಸಿಕೊಳ್ಳುವಾಗ, ಆಗುವ ಪರಿಣಾಮವೇನು?

11 ಯೆಹೋವನನ್ನು ಐಕ್ಯದಿಂದ ಆರಾಧಿಸುವುದು ನಮ್ಮನ್ನು ಆತನ ಸಮೀಪಕ್ಕೆ ಕರೆತಂದು, ಜೊತೆ ವಿಶ್ವಾಸಿಗಳೊಂದಿಗೆ ನವಚೈತನ್ಯದ ಸಹವಾಸವನ್ನು ಅನುಭವಿಸುವಂತೆ ಮಾಡುವುದು. “ಆಹಾ, ಸಹೋದರರು ಒಂದಾಗಿರುವದು ಎಷ್ಟೋ ಒಳ್ಳೇದು, ಎಷ್ಟೋ ರಮ್ಯವಾದದ್ದು!” ಎನ್ನುತ್ತದೆ ಕೀರ್ತನೆ 133:⁠1. ಲೋಕದ ಸ್ವಾರ್ಥಭಾವ, ಅನೈತಿಕತೆ ಮತ್ತು ಹಿಂಸಾಚಾರದಿಂದ ದೂರವಿದ್ದು, ಯೆಹೋವನನ್ನು ನಿಜವಾಗಿಯೂ ಪ್ರೀತಿಸಿ, ಆತನ ನಿಯಮಗಳಿಗೆ ವಿಧೇಯರಾಗುವವರೊಂದಿಗೆ ಕೂಡಿಬರುವುದು ಅದೆಷ್ಟು ಚೈತನ್ಯದಾಯಕ!

ವಿಭಾಜಕ ಪ್ರಭಾವದಿಂದ ದೂರ ಸರಿಯಿರಿ

12. ನಾವು ಸ್ವತಂತ್ರ ಮನೋಭಾವದಿಂದ ದೂರವಿರುವುದು ಏಕೆ ಅಗತ್ಯ?

12 ನಮ್ಮ ಅಮೂಲ್ಯವಾದ ಭೌಗೋಳಿಕ ಐಕ್ಯವನ್ನು ನಾವು ಹಾಳುಮಾಡಲು ಬಯಸದಿದ್ದರೆ, ನಾವು ವಿಭಾಜಕ ಪ್ರಭಾವಗಳಿಂದ ದೂರವಿರಬೇಕು. ಇವುಗಳಲ್ಲಿ ಒಂದು, ದೇವರಿಂದ ಮತ್ತು ಆತನ ನಿಯಮಗಳಿಂದ ಸ್ವತಂತ್ರರು ಎಂಬ ಮನೋಭಾವವಾಗಿದೆ. ಆದರೆ ಅದರ ಮೂಲನಾಗಿರುವ ಪಿಶಾಚನಾದ ಸೈತಾನನನ್ನು ಬಯಲುಪಡಿಸುವ ಮೂಲಕ ನಾವು ಈ ಮನೋಭಾವದಿಂದ ದೂರವಿರುವಂತೆ ಯೆಹೋವನು ಸಹಾಯಮಾಡುತ್ತಾನೆ. (2 ಕೊರಿಂಥ 4:​4; ಪ್ರಕಟನೆ 12:⁠9) ಆದಾಮಹವ್ವರು ದೇವರು ಹೇಳಿದ್ದನ್ನು ಅಲಕ್ಷಿಸುವಂತೆ ಮತ್ತು ದೇವರ ಚಿತ್ತಕ್ಕೆ ಪ್ರತಿಕೂಲವಾದ ನಿರ್ಣಯಗಳನ್ನು ಮಾಡುವಂತೆ ಪ್ರಭಾವಿಸಿದವನು ಸೈತಾನನೇ. ಇದರ ಪರಿಣಾಮವು ಅವರಿಗೂ ನಮಗೂ ವಿಪತ್ತನ್ನು ತಂದೊಡ್ಡಿತು. (ಆದಿಕಾಂಡ 3:​1-6, 17-19) ಈ ಲೋಕವು ದೇವರಿಂದ ಮತ್ತು ಆತನ ನಿಯಮಗಳಿಂದ ಸ್ವತಂತ್ರವಾಗಬೇಕೆಂಬ ಮನೋಭಾವದಿಂದ ಪೂರ್ತಿ ನೆನೆದು ಹೋಗಿದೆ. ಆದಕಾರಣ, ಈ ಮನೋಭಾವವನ್ನು ನಾವು ನಮ್ಮಲ್ಲಿಯೇ ನಿಗ್ರಹಿಸಬೇಕು.

13. ನಾವು ದೇವರ ನೀತಿಯ ನೂತನ ಲೋಕದ ಜೀವಿತಕ್ಕಾಗಿ ಯಥಾರ್ಥತೆಯಿಂದ ಸಿದ್ಧರಾಗುತ್ತಿದ್ದೇವೆಂಬುದನ್ನು ಯಾವುದು ತೋರಿಸುವುದು?

13 ಉದಾಹರಣೆಗೆ, ಈಗಿನ ದುಷ್ಟ ಲೋಕವನ್ನು ತೆಗೆದು “ನೀತಿಯು ವಾಸವಾಗಿರುವ” ನೂತನಾಕಾಶ ಮತ್ತು ನೂತನಭೂಮಿಯಿಂದ ಸ್ಥಳಾಂತರಿಸುವ ಯೆಹೋವನ ರೋಮಾಂಚಕ ವಾಗ್ದಾನದ ಕುರಿತು ಯೋಚಿಸಿರಿ. (2 ಪೇತ್ರ 3:13) ಇದು ನಮ್ಮನ್ನು, ನೀತಿಯು ವಾಸವಾಗಿರುವ ಆ ಸಮಯದಲ್ಲಿ ಜೀವಿಸಲು ಸಿದ್ಧರಾಗಿರುವಂತೆ ಪ್ರಚೋದಿಸಬಾರದೊ? ಬೈಬಲಿನ ಈ ಸ್ಪಷ್ಟವಾದ ಸಲಹೆಗೆ ನಾವು ಕಿವಿಗೊಡಬೇಕೆಂದೇ ಇದರ ಅರ್ಥ: “ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ. ಯಾವನಾದರೂ ಲೋಕವನ್ನು ಪ್ರೀತಿಸಿದರೆ ತಂದೆಯ ಮೇಲಣ ಪ್ರೀತಿಯು ಅವನಲ್ಲಿಲ್ಲ.” (1 ಯೋಹಾನ 2:15) ಆದುದರಿಂದ ಈ ಲೋಕದ ಪ್ರಧಾನ ಮನೋಭಾವದಿಂದ​—⁠ಅದರ ಸ್ವತಂತ್ರ ಮನೋಭಾವ, ಅದರ ವಿಪರೀತವಾದ ಸ್ವಚಿಂತೆ, ಅದರ ಅನೈತಿಕತೆ ಮತ್ತು ಹಿಂಸಾಚಾರಗಳಿಂದ ನಾವು ದೂರವಿರುತ್ತೇವೆ. ನಮ್ಮ ಅಪರಿಪೂರ್ಣ ಪ್ರಕೃತಿಯ ಕಾರಣ ನಮ್ಮ ಪ್ರವೃತ್ತಿಯು ಇದಕ್ಕೆ ವ್ಯತಿರಿಕ್ತವಾಗಿರಬಹುದಾದರೂ, ಯೆಹೋವನ ಮಾತಿಗೆ ಕಿವಿಗೊಡುವುದನ್ನು ಮತ್ತು ಹೃದಯದಿಂದ ಆತನಿಗೆ ವಿಧೇಯರಾಗುವುದನ್ನು ನಾವು ರೂಢಿಮಾಡಿಕೊಳ್ಳುತ್ತೇವೆ. ನಮ್ಮ ಇಡೀ ಜೀವನಮಾರ್ಗವೇ, ನಮ್ಮ ಯೋಚನೆಗಳೂ ಪ್ರಚೋದನೆಗಳೂ ದೇವರ ಚಿತ್ತಾಭಿಮುಖವಾಗಿರುವುದರ ರುಜುವಾತನ್ನು ಕೊಡುತ್ತದೆ.​—⁠ಕೀರ್ತನೆ 40:⁠8.

14. (ಎ) ಯೆಹೋವನ ಮಾರ್ಗಗಳ ಬಗ್ಗೆ ಕಲಿಯುವ ಮತ್ತು ಅವನ್ನು ನಮ್ಮ ಜೀವಿತಗಳಲ್ಲಿ ಅನುಸರಿಸುವ ಅವಕಾಶವನ್ನು ಈಗ ಸದುಪಯೋಗಿಸಿಕೊಳ್ಳುವುದು ಏಕೆ ಪ್ರಾಮುಖ್ಯ? (ಬಿ) ಈ ಪರಿಚ್ಛೇದದಲ್ಲಿ ಉಲ್ಲೇಖಿಸಿರುವ ವಚನಗಳು ನಮಗೆ ವೈಯಕ್ತಿಕವಾಗಿ ಯಾವ ಅರ್ಥದಲ್ಲಿವೆ?

14 ಈ ದುಷ್ಟ ವ್ಯವಸ್ಥೆಯನ್ನೂ ಅದರ ಮಾರ್ಗಗಳನ್ನು ಇಷ್ಟಪಡುವವರನ್ನೂ ನಿರ್ಮೂಲಮಾಡುವ ನಿಯಮಿತ ಸಮಯವು ಯೆಹೋವನಿಗೆ ಬರುವಾಗ, ಆತನು ವಿಳಂಬಿಸನು. ಈ ಲೋಕಕ್ಕೆ ಇನ್ನೂ ಅಂಟಿಕೊಂಡಿರುವಾಗ ದೇವರ ಚಿತ್ತವನ್ನು ಅರೆಹೃದಯದಿಂದ ಮಾಡುತ್ತಿರುವವರನ್ನು ಸೇರಿಸಿಕೊಳ್ಳಲಿಕ್ಕಾಗಿ ಆತನು ಆ ಸಮಯವನ್ನು ಮುಂದಕ್ಕೆ ಹಾಕನು ಅಥವಾ ತನ್ನ ಮಟ್ಟಗಳನ್ನು ಬದಲಾಯಿಸನು. ಆದುದರಿಂದ, ಕ್ರಮವನ್ನು ಕೈಕೊಳ್ಳುವ ಸಮಯವು ಇದೇ ಆಗಿದೆ! (ಲೂಕ 13:​23, 24; 17:32; 21:​34-36) ಹೀಗಿರುವುದರಿಂದ, ಈ ಅಮೂಲ್ಯವಾದ ಅವಕಾಶವನ್ನು ಮಹಾ ಸಮೂಹದವರು ಸದುಪಯೋಗಿಸಿಕೊಂಡು, ಯೆಹೋವನು ತನ್ನ ವಾಕ್ಯ ಮತ್ತು ಸಂಸ್ಥೆಯ ಮೂಲಕ ಕೊಡುವ ಮಾಹಿತಿಯನ್ನು ತವಕದಿಂದ ಹುಡುಕಿ, ನೂತನ ಲೋಕಾಭಿಮುಖವಾಗಿ ಆತನ ದಾರಿಗಳಲ್ಲಿ ಐಕ್ಯದಿಂದ ನಡೆಯುವುದನ್ನು ನೋಡುವುದು ಎಷ್ಟೊಂದು ಹೃದಯೋಲ್ಲಾಸವನ್ನು ಉಂಟುಮಾಡುತ್ತದೆ! ಮತ್ತು ನಾವು ಯೆಹೋವನ ಕುರಿತು ಎಷ್ಟು ಹೆಚ್ಚಾಗಿ ಕಲಿತುಕೊಳ್ಳುತ್ತೇವೊ, ಅಷ್ಟು ಹೆಚ್ಚಾಗಿ ನಾವು ಆತನನ್ನು ಪ್ರೀತಿಸುವೆವು, ಆತನನ್ನು ಸೇವಿಸಲು ಮನಸ್ಸು ಮಾಡುವೆವು.

ಪುನರ್ವಿಮರ್ಶೆಯ ಚರ್ಚೆ

• ಆರಾಧನೆಯ ಸಂಬಂಧದಲ್ಲಿ ಯೆಹೋವನ ಉದ್ದೇಶವೇನು?

• ಪ್ರಾಥಮಿಕ ಬೈಬಲ್‌ ಬೋಧನೆಗಳನ್ನು ಕಲಿತ ಬಳಿಕ, ಯಾವ ಹೆಚ್ಚಿನ ಪ್ರಗತಿಯನ್ನು ಮಾಡಲು ನಾವು ಶ್ರದ್ಧಾಪೂರ್ವಕವಾಗಿ ಪ್ರಯತ್ನಿಸಬೇಕು?

• ಯೆಹೋವನ ಇತರ ಆರಾಧಕರೊಂದಿಗೆ ಐಕ್ಯವಾಗಿರಲು ನಾವು ವೈಯಕ್ತಿಕವಾಗಿ ಏನು ಮಾಡಬಲ್ಲೆವು?

[ಅಧ್ಯಯನ ಪ್ರಶ್ನೆಗಳು]

[ಪುಟ 4ರಲ್ಲಿರುವ ಚಿತ್ರ]

‘ದೀನರು ದೇಶವನ್ನು ಅನುಭವಿಸುವರು ಮತ್ತು ಮಹಾಸೌಖ್ಯದಿಂದ ಆನಂದಿಸುವರು’