ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾವೆಲ್ಲರೂ ಎದುರಿಸಲೇಬೇಕಾದ ವಿವಾದಾಂಶ

ನಾವೆಲ್ಲರೂ ಎದುರಿಸಲೇಬೇಕಾದ ವಿವಾದಾಂಶ

ಅಧ್ಯಾಯ ಆರು

ನಾವೆಲ್ಲರೂ ಎದುರಿಸಲೇಬೇಕಾದ ವಿವಾದಾಂಶ

1, 2. (ಎ) ಸೈತಾನನು ಏದೆನಿನಲ್ಲಿ ಯಾವ ವಿವಾದಾಂಶವನ್ನು ಎಬ್ಬಿಸಿದನು? (ಬಿ) ಅವನು ಏನು ಹೇಳಿದನೊ ಅದರಿಂದ ಆ ವಿವಾದಾಂಶವು ಹೇಗೆ ಸೂಚಿತವಾಗಿದೆ?

ಮಾನವಕುಲವು ಇದುವರೆಗೆ ಎದುರಿಸಿರುವುದರಲ್ಲೇ ಅತಿ ಪ್ರಾಮುಖ್ಯವಾದ ಒಂದು ವಿವಾದಾಂಶದಲ್ಲಿ ನೀವು ಒಳಗೂಡಿದ್ದೀರಿ. ಇದರಲ್ಲಿ ನೀವು ಆಯ್ದುಕೊಳ್ಳುವ ಸ್ಥಾನವು ನಿಮ್ಮ ಅನಂತ ಭವಿಷ್ಯವನ್ನು ನಿರ್ಣಯಿಸುವುದು. ಏದೆನಿನಲ್ಲಿ ದಂಗೆಯು ಆರಂಭವಾದಾಗ ಈ ವಿವಾದಾಂಶವು ಎಬ್ಬಿಸಲ್ಪಟ್ಟಿತು. ಆ ಸಂದರ್ಭದಲ್ಲಿ ಸೈತಾನನು ಹವ್ವಳನ್ನು, “ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ನೀವು ತಿನ್ನಬಾರದೆಂದು ದೇವರು ಅಪ್ಪಣೆ ಕೊಟ್ಟಿರುವದು ನಿಜವೋ?” ಎಂದು ಕೇಳಿದನು. ಆಗ ಹವ್ವಳು ದೇವರು ಅಪ್ಪಣೆ ಕೊಟ್ಟಿದ್ದ ಒಂದು ಮರದ ವಿಷಯದಲ್ಲಿ, “ಇದನ್ನು ತಿನ್ನಲೂ ಕೂಡದು, . . . ತಿಂದರೆ ಸಾಯುವಿರಿ” ಎಂದು ಹೇಳಿದ್ದಾನೆಂದು ತಿಳಿಸಿದಳು. ಆಗ ಸೈತಾನನು, ಯೆಹೋವನು ಸುಳ್ಳು ಹೇಳಿದ್ದಾನೆಂದು ನೇರವಾಗಿ ಆರೋಪಿಸಿ, ಹವ್ವಳ ಅಥವಾ ಆದಾಮನ ಜೀವವು, ದೇವರಿಗೆ ತೋರಿಸಲ್ಪಡುವ ವಿಧೇಯತೆಯ ಮೇಲೆ ಹೊಂದಿಕೊಂಡಿಲ್ಲವೆಂದು ಹೇಳಿದನು. ದೇವರು ತಾನು ಸೃಷ್ಟಿಸಿದವರಿಂದ ಒಳ್ಳೆಯದಾದ ವಿಷಯವನ್ನು ಅಂದರೆ ತಮ್ಮ ಸ್ವಂತ ಮಟ್ಟಗಳನ್ನು ಆಯ್ದುಕೊಳ್ಳುವ ಸಾಮರ್ಥ್ಯವನ್ನು ತಡೆದುಹಿಡಿದಿದ್ದಾನೆ ಎಂದು ಅವನು ವಾದಿಸಿದನು. ಸೈತಾನನು ಹೇಳಿದ್ದು: “ನೀವು ಇದರ ಹಣ್ಣನ್ನು ತಿಂದಾಗಲೇ ನಿಮ್ಮ ಕಣ್ಣುಗಳು ತೆರೆಯುವವು; ನೀವು ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿತವರಾಗುವಿರಿ; ಇದು ದೇವರಿಗೆ ಚೆನ್ನಾಗಿ ಗೊತ್ತುಂಟು.”​—⁠ಆದಿಕಾಂಡ 3:1-5.

2 ಕಾರ್ಯತಃ ಸೈತಾನನು ಇಲ್ಲಿ ಹೇಳಿದ್ದೇನಂದರೆ, ಮನುಷ್ಯರು ದೇವರ ನಿಯಮಗಳಿಗೆ ವಿಧೇಯರಾಗುವ ಬದಲಿಗೆ ತಮ್ಮ ಸ್ವಂತ ನಿರ್ಣಯಗಳನ್ನು ಮಾಡುವಲ್ಲಿ ಅವರಿಗೆ ಮೇಲಾಗುವುದು. ಹೀಗೆ ಅವನು ದೇವರು ಆಳಿಕೆ ನಡೆಸುವಂಥ ವಿಧದ ಕುರಿತು ಸವಾಲೊಡ್ಡಿದನು. ಇದು ದೇವರ ವಿಶ್ವ ಪರಮಾಧಿಕಾರವೆಂಬ ವಿವಾದವನ್ನು, ಅಂದರೆ ಆತನಿಗೆ ಆಳುವ ಹಕ್ಕು ಇದೆಯೊ ಇಲ್ಲವೊ ಎಂಬ ಸರ್ವಪ್ರಾಮುಖ್ಯವಾದ ವಿವಾದವನ್ನು ಎಬ್ಬಿಸಿತು. ಪ್ರಶ್ನೆಯು ಇದಾಗಿತ್ತು: ಮಾನವರಿಗೆ ಯಾವುದು ಹೆಚ್ಚು ಉತ್ತಮವಾಗಿದೆ, ಯೆಹೋವನು ಆಳುವ ರೀತಿಯೊ ಇಲ್ಲವೆ ಆತನ ಅಧಿಕಾರಕ್ಕೆ ಅಧೀನವಾಗಿರದ ಆಳಿಕೆಯೊ? ಯೆಹೋವನು ಆಗಲೇ ಆದಾಮಹವ್ವರನ್ನು ಹತಿಸಿಬಿಡಬಹುದಿತ್ತು ನಿಜ, ಆದರೆ ಅದು ವಿಶ್ವ ಪರಮಾಧಿಕಾರದ ವಿವಾದಾಂಶವನ್ನು ತೃಪ್ತಿಕರವಾಗಿ ಬಗೆಹರಿಸುತ್ತಿರಲಿಲ್ಲ. ಮಾನವ ಸಮಾಜವನ್ನು ಸಾಕಷ್ಟು ದೀರ್ಘಕಾಲ ವಿಕಾಸಗೊಳ್ಳಲು ಬಿಡುವಲ್ಲಿ ಮಾತ್ರ, ತನ್ನಿಂದ ಮತ್ತು ತನ್ನ ನಿಯಮಗಳಿಂದ ಸ್ವತಂತ್ರವಾಗಿರುವ ಸಂಗತಿಯು ಏನನ್ನು ಉಂಟುಮಾಡುವುದೆಂದು ದೇವರು ತೋರಿಸಶಕ್ತನಾಗುವನು.

3. ಯಾವ ದ್ವಿತೀಯ ವಿವಾದಾಂಶವನ್ನು ಸೈತಾನನು ಎಬ್ಬಿಸಿದನು?

3 ಯೆಹೋವನ ಆಳುವ ಹಕ್ಕಿನ ಮೇಲೆ ಸೈತಾನನು ಮಾಡಿದ ಆಕ್ರಮಣವು ಏದೆನಿನಲ್ಲಿ ನಡೆದ ಸಂಗತಿಯಲ್ಲಿ ಅಂತ್ಯಗೊಳ್ಳಲಿಲ್ಲ. ಯೆಹೋವನ ಕಡೆಗೆ ಇತರರು ತೋರಿಸುವ ನಿಷ್ಠೆಯ ಮೇಲೂ ಅವನು ಸಂಶಯವನ್ನು ಬಿತ್ತಿದನು. ಹೀಗೆ ಇದು ಒತ್ತಾಗಿ ಸಂಬಂಧಿಸಿದ ದ್ವಿತೀಯ ವಿವಾದಾಂಶವಾಗಿ ಪರಿಣಮಿಸಿತು. ಅವನ ಈ ಸವಾಲು ಆದಾಮಹವ್ವರ ಸಂತತಿಯನ್ನು ಮತ್ತು ದೇವರ ಎಲ್ಲಾ ಆತ್ಮಪುತ್ರರನ್ನು ಮಾತ್ರವಲ್ಲ, ಯೆಹೋವನ ಅತಿ ಪ್ರಿಯ ಜ್ಯೇಷ್ಠಪುತ್ರನನ್ನೂ ಒಳಗೂಡಿತ್ತು. ಉದಾಹರಣೆಗೆ, ಯೋಬನ ದಿನಗಳಲ್ಲಿ ಯೆಹೋವನನ್ನು ಸೇವಿಸುತ್ತಿದ್ದವರು, ದೇವರ ಮತ್ತು ಆತನ ಆಳಿಕೆಯ ವಿಧದ ಮೇಲಿನ ಪ್ರೀತಿಯಿಂದ ಆತನನ್ನು ಸೇವಿಸುತ್ತಿಲ್ಲವೆಂದೂ ಅವರು ಸ್ವಾರ್ಥ ಕಾರಣಗಳಿಗಾಗಿಯೇ ಸೇವಿಸುತ್ತಾರೆಂದೂ ಅವನು ವಾಗ್ವಾದಿಸಿದನು. ಮತ್ತು ಕಷ್ಟಾನುಭವಿಸುವಾಗ, ಅವರೆಲ್ಲರೂ ಸ್ವಾರ್ಥದಾಶೆಗಳಿಗೆ ಬಲಿಬೀಳುವರೆಂದು ಅವನು ವಾದಿಸಿದನು.​—⁠ಯೋಬ 2:​1-6; ಪ್ರಕಟನೆ 12:10.

ಇತಿಹಾಸವು ಏನನ್ನು ರುಜುಪಡಿಸಿದೆ?

4, 5. ಮನುಷ್ಯನು ಸರಿಯಾದ ಕಡೆಗೆ ಹೆಜ್ಜೆಯನ್ನಿಡಲಾರನೆಂಬುದರ ವಿಷಯದಲ್ಲಿ ಇತಿಹಾಸವು ಏನನ್ನು ರುಜುಪಡಿಸಿದೆ?

4 ಪರಮಾಧಿಕಾರದ ವಿವಾದಾಂಶದಲ್ಲಿ ಒಂದು ಮಹತ್ವದ ವಿಷಯ ಇದಾಗಿದೆ: ತನ್ನ ಆಳಿಕೆಯಿಂದ ಸ್ವತಂತ್ರರಾಗಿ ಜೀವಿಸಿ ಜಯಹೊಂದುವಂತೆ ಯೆಹೋವನು ಮಾನವರನ್ನು ಸೃಷ್ಟಿಸಲಿಲ್ಲ. ಅವರ ಪ್ರಯೋಜನಾರ್ಥವಾಗಿ, ಅವರು ಆತನ ನೀತಿನಿಯಮಗಳಿಗೆ ಹೊಂದಿಕೊಳ್ಳುವಂತೆ ಆತನು ಅವರನ್ನು ನಿರ್ಮಿಸಿದನು. ಪ್ರವಾದಿಯಾದ ಯೆರೆಮೀಯನು ಒಪ್ಪಿಕೊಂಡದ್ದು: “ಯೆಹೋವನೇ, ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು. ಯೆಹೋವನೇ, ನನ್ನನ್ನು ಶಿಕ್ಷಿಸು.” (ಯೆರೆಮೀಯ 10:23, 24) ಈ ಕಾರಣದಿಂದ ದೇವರ ವಾಕ್ಯವು ಪ್ರೋತ್ಸಾಹಿಸುವುದು: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಿಸವಿಡು.” (ಜ್ಞಾನೋಕ್ತಿ 3:5) ಮಾನವ ಸಂತತಿಯವರು ಬದುಕಿ ಉಳಿಯಬೇಕಾದರೆ ಅವರು ತನ್ನ ಭೌತಿಕ ನಿಯಮಗಳಿಗೆ ಅಧೀನರಾಗಿರಬೇಕೆಂದು ದೇವರು ಏರ್ಪಡಿಸಿದಂತೆಯೇ, ನೈತಿಕ ನಿಮಯಗಳನ್ನೂ ಕೊಟ್ಟನು. ಈ ನಿಯಮಗಳಿಗೆ ವಿಧೇಯರಾಗುವಲ್ಲಿ ಒಂದು ಏಕಾಭಿಪ್ರಾಯದ ಸಮಾಜವು ಫಲಿಸಲಿತ್ತು.

5 ಮಾನವ ಕುಟುಂಬವು ದೇವರ ಆಳಿಕೆಯ ಹೊರಗೆ ತನ್ನನ್ನು ನಡೆಸಿಕೊಳ್ಳುವಲ್ಲಿ ಅದು ಎಂದಿಗೂ ಜಯಹೊಂದದು ಎಂಬ ವಿಷಯವು ದೇವರಿಗೆ ಸ್ಪಷ್ಟವಾಗಿ ತಿಳಿದಿತ್ತು. ಇಂದು ಮಾನವರು ದೇವರ ಆಳಿಕೆಯಿಂದ ಸ್ವತಂತ್ರರಾಗಿರುವ ವ್ಯರ್ಥ ಪ್ರಯತ್ನದಲ್ಲಿ ವಿವಿಧ ರಾಜಕೀಯ, ಆರ್ಥಿಕ ಮತ್ತು ಧಾರ್ಮಿಕ ವ್ಯವಸ್ಥೆಗಳನ್ನು ಮಾಡಿರುತ್ತಾರೆ. ಈ ಭಿನ್ನಭೇದಗಳು ಜನರನ್ನು ಸತತವಾದ ಬಿಕ್ಕಟ್ಟುಗಳಿಗೆ ನಡೆಸಿ, ಹಿಂಸಾಚಾರ, ಯುದ್ಧ ಮತ್ತು ಮರಣವನ್ನು ಫಲಿಸುವಂತೆ ಮಾಡಿವೆ. “ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಅವನಿಗೆ ಹಾನಿಯನ್ನುಂಟು”ಮಾಡಿರುತ್ತಾನೆ. (ಪ್ರಸಂಗಿ 8:9) ಮಾನವ ಇತಿಹಾಸದಾದ್ಯಂತ ಇದೇ ನಡೆಯುತ್ತಾ ಬಂದಿದೆ. ದೇವರ ವಾಕ್ಯದಲ್ಲಿ ಮುಂತಿಳಿಸಿರುವಂತೆ, ದುಷ್ಟರೂ ವಂಚಕರೂ “ಹೆಚ್ಚಾದ ಕೆಟ್ಟತನಕ್ಕೆ” ಮುಂದುವರಿಯುತ್ತಿದ್ದಾರೆ. (2 ತಿಮೊಥೆಯ 3:13) ಮತ್ತು ವೈಜ್ಞಾನಿಕ ಹಾಗೂ ಉದ್ಯಮಗಳ ಸಾಧನೆಯಲ್ಲಿ ಉನ್ನತ ಸ್ಥಿತಿಯನ್ನು ತಲಪಿದ 20ನೆಯ ಶತಮಾನವು ಹಿಂದೆಂದಿಗಿಂತಲೂ ಹೆಚ್ಚು ದುಷ್ಪರಿಣಾಮದ ವಿಪತ್ತುಗಳನ್ನು ಅನುಭವಿಸಿದೆ. ಯೆರೆಮೀಯ 10:23ರ ಮಾತುಗಳಲ್ಲಿ, ಮನುಷ್ಯರು ಸರಿಯಾದ ಕಡೆಗೆ ಹೆಜ್ಜೆಯನ್ನಿಡಲಾರರು ಎಂಬ ವಾಸ್ತವಾಂಶವು ಸರಿಯೆಂಬುದಕ್ಕೆ ಧಾರಾಳವಾದ ರುಜುವಾತಿದೆ.

6. ಮಾನವರು ತನ್ನಿಂದ ಸ್ವತಂತ್ರರಾಗಿರುವ ವಿಷಯವನ್ನು ದೇವರು ಬೇಗನೇ ಹೇಗೆ ಪರಿಹರಿಸುವನು?

6 ದೇವರಿಂದ ಸ್ವತಂತ್ರರಾಗಿರುವುದರ ದುರಂತಕರವಾದ ಮತ್ತು ದೀರ್ಘಾವಧಿಯ ದುಷ್ಪರಿಣಾಮಗಳು, ಮಾನವಾಳಿಕೆಯು ಎಂದಿಗೂ ಸಫಲಹೊಂದದೆಂಬುದನ್ನು ಪೂರ್ಣವಾಗಿ ರುಜುಪಡಿಸಿದೆ. ಸಂತೋಷ, ಐಕ್ಯ, ಆರೋಗ್ಯ ಮತ್ತು ಜೀವ​—⁠ಇವುಗಳಿಗಿರುವ ಒಂದೇ ಮಾರ್ಗವು ದೇವರ ಆಳಿಕೆಯಾಗಿದೆ. ಮತ್ತು ಸ್ವತಂತ್ರವಾದ ಮಾನವಾಳಿಕೆಯ ಕಡೆಗೆ ಯೆಹೋವನು ತೋರಿಸಿರುವ ಸೈರಣೆಯು ಕೊನೆಗೊಳ್ಳುತ್ತಾ ಇದೆಯೆಂದು ದೇವರ ವಾಕ್ಯವು ತೋರಿಸುತ್ತದೆ. (ಮತ್ತಾಯ 24:3-14; 2 ತಿಮೊಥೆಯ 3:1-5) ಆತನು ಶೀಘ್ರವೇ ತನ್ನ ಆಳಿಕೆಯನ್ನು ಭೂಮಿಯಲ್ಲಿ ಸ್ಥಾಪಿಸಲಿಕ್ಕಾಗಿ ಮಾನವ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಲಿದ್ದಾನೆ. ಬೈಬಲ್‌ ಪ್ರವಾದನೆಯು ಹೇಳುವುದು: “ಆ ರಾಜರ ಕಾಲದಲ್ಲಿ [ಈಗಿನ ಮಾನವ ಆಳಿಕೆಗಳು] ಪರಲೋಕದೇವರು ಒಂದು ರಾಜ್ಯವನ್ನು [ಪರಲೋಕದಲ್ಲಿ] ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು [ಭೂಮಿಯನ್ನು ಮಾನವರು ಇನ್ನೆಂದಿಗೂ ಆಳರು], ಆ [ಈಗ ಇರುವ] ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.”​—⁠ದಾನಿಯೇಲ 2:44.

ದೇವರ ನೂತನ ಲೋಕಕ್ಕೆ ಪಾರಾಗುವುದು

7. ದೇವರಾಳಿಕೆಯು ಮಾನವಾಳಿಕೆಯನ್ನು ಅಂತ್ಯಗೊಳಿಸುವಾಗ ಯಾರು ಪಾರಾಗಿ ಉಳಿಯುವರು?

7 ದೇವರಾಳಿಕೆಯು ಮಾನವಾಳಿಕೆಯನ್ನು ಅಂತ್ಯಗೊಳಿಸುವಾಗ, ಯಾರು ಪಾರಾಗಿ ಉಳಿಯುವರು? ಬೈಬಲ್‌ ಉತ್ತರ ಕೊಡುವುದು: “ಯಥಾರ್ಥವಂತರು [ದೇವರ ಆಳುವ ಹಕ್ಕನ್ನು ಸಮರ್ಥಿಸುವವರು] ದೇಶದಲ್ಲಿ ಸ್ವತಂತ್ರರಾಗಿರುವರು, ನಿರ್ದೋಷಿಗಳು ಅದರಲ್ಲಿ ನೆಲೆಯಾಗಿರುವರು. ದುಷ್ಟರಾದರೋ [ದೇವರ ಆಳುವ ಹಕ್ಕನ್ನು ಸಮರ್ಥಿಸದಿರುವವರು] ದೇಶದೊಳಗಿಂದ ಕೀಳಲ್ಪಡುವರು.” (ಜ್ಞಾನೋಕ್ತಿ 2:21, 22) ಅದೇ ರೀತಿ, ಕೀರ್ತನೆಗಾರನು ಹೇಳಿದ್ದು: “ಇನ್ನು ಸ್ವಲ್ಪಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು; . . . ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.”​—⁠ಕೀರ್ತನೆ 37:10, 29.

8. ದೇವರು ತನ್ನ ಪರಮಾಧಿಕಾರವನ್ನು ಪೂರ್ಣವಾಗಿ ಹೇಗೆ ನಿರ್ದೋಷೀಕರಿಸುವನು?

8 ಸೈತಾನನ ವ್ಯವಸ್ಥೆಯು ನಾಶಗೊಂಡಾಗ, ದೇವರು ತನ್ನ ನೂತನ ಲೋಕವನ್ನು ಒಳತರುವನು. ಅದು ಮಾನವಕುಲವನ್ನು ಸಾವಿರಾರು ವರ್ಷಕಾಲ ಬಿಗಿಯಾಗಿ ಹಿಡಿದುಕೊಂಡಿದ್ದ ಧ್ವಂಸಕಾರಕ ಹಿಂಸಾಚಾರ, ಯುದ್ಧ, ಬಡತನ, ಕಷ್ಟಾನುಭವ, ರೋಗ ಮತ್ತು ಮರಣವನ್ನು ಪೂರ್ತಿಯಾಗಿ ತೊಲಗಿಸಿಬಿಡುವುದು. ವಿಧೇಯ ಮಾನವಕುಲಕ್ಕಾಗಿ ಕಾದಿರುವ ಆಶೀರ್ವಾದಗಳನ್ನು ಬೈಬಲು ಸೊಗಸಾಗಿ ವರ್ಣಿಸುತ್ತದೆ: “[ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.” (ಪ್ರಕಟನೆ 21:3, 4) ಕ್ರಿಸ್ತನು ಆಳುವ ತನ್ನ ಸ್ವರ್ಗೀಯ ರಾಜ್ಯ ಸರಕಾರದ ಮೂಲಕ, ದೇವರು ತಾನೇ ನಮ್ಮ ಪರಮಾಧಿಕಾರಿಯಾಗಲು, ಅಂದರೆ ನಮ್ಮ ಅರಸನಾಗಿರಲು ಆತನಿಗಿರುವ ಹಕ್ಕಿನ ಮೇಲೆ ಬಂದಿರುವ ಆರೋಪವನ್ನು ಪೂರ್ಣವಾಗಿ ನಿರ್ದೋಷೀಕರಿಸುವನು (ಸಮರ್ಥಿಸುವನು ಅಥವಾ ರುಜುಪಡಿಸುವನು).​—⁠ರೋಮಾಪುರ 16:20; 2 ಪೇತ್ರ 3:10-13; ಪ್ರಕಟನೆ 20:1-6.

ವಿವಾದದ ಸಂಬಂಧದಲ್ಲಿ ಅವರ ಪ್ರತಿವರ್ತನೆ

9. (ಎ) ಯೆಹೋವನಿಗೆ ನಿಷ್ಠರಾಗಿದ್ದವರು ಆತನ ಮಾತುಗಳನ್ನು ಹೇಗೆ ವೀಕ್ಷಿಸಿದ್ದಾರೆ? (ಬಿ) ನೋಹನು ತನ್ನ ನಿಷ್ಠೆಯನ್ನು ಹೇಗೆ ರುಜುಪಡಿಸಿದನು, ಮತ್ತು ಅವನ ಮಾದರಿಯಿಂದ ನಾವು ಹೇಗೆ ಪ್ರಯೋಜನ ಹೊಂದಬಲ್ಲೆವು?

9 ಯೆಹೋವನ ಪರಮಾಧಿಕಾರಕ್ಕೆ ತಮ್ಮ ನಿಷ್ಠೆಯನ್ನು ತೋರಿಸಿಕೊಟ್ಟಿರುವ ನಂಬಿಗಸ್ತರಾದ ಸ್ತ್ರೀಪುರುಷರು ಇತಿಹಾಸದಾದ್ಯಂತ ಇದ್ದರು. ಆತನಿಗೆ ಕಿವಿಗೊಟ್ಟು, ಆತನಿಗೆ ವಿಧೇಯರಾಗುವುದರ ಮೇಲೆ ತಮ್ಮ ಜೀವಗಳು ಹೊಂದಿಕೊಂಡಿವೆಯೆಂಬುದು ಅವರಿಗೆ ತಿಳಿದಿತ್ತು. ಇಂಥವರಲ್ಲಿ ಒಬ್ಬನು ನೋಹನು. ದೇವರು ನೋಹನಿಗೆ, “ಎಲ್ಲಾ ದೇಹಿಗಳಿಗೂ ಅಂತ್ಯವನ್ನು ತೀರ್ಮಾನಿಸಿದ್ದೇನೆ; . . . ನೀನು . . . ನಾವೆಯನ್ನು ಮಾಡಿಕೋ,” ಎಂದು ಹೇಳಿದನು. ನೋಹನು ಯೆಹೋವನ ನಿರ್ದೇಶನಕ್ಕೆ ಅಧೀನನಾದನು. ಇತರ ಜನರಿಗೆ ಎಚ್ಚರಿಕೆ ಕೊಡಲ್ಪಟ್ಟರೂ, ಅವರು ವಿಚಿತ್ರವಾದ ಯಾವ ಸಂಗತಿಯೂ ನಡೆಯುವುದಿಲ್ಲವೊ ಎಂಬಂತೆ ತಮ್ಮ ಜೀವನದ ಆಗುಹೋಗುಗಳಲ್ಲಿ ಮುಂದುವರಿದರು. ಆದರೆ ನೋಹನು ಒಂದು ಬೃಹದಾಕಾರದ ನಾವೆಯನ್ನು ಕಟ್ಟಿ, ಯೆಹೋವನ ನೀತಿಯ ಮಾರ್ಗಗಳ ಕುರಿತು ಇತರರಿಗೆ ಸಾರುವುದರಲ್ಲಿ ಮಗ್ನನಾಗಿದ್ದನು. ಆ ದಾಖಲೆಯು ಮುಂದುವರಿಸಿ ಹೇಳುವುದು: “ದೇವರು ಅಪ್ಪಣೆಕೊಟ್ಟ ಪ್ರಕಾರವೇ ನೋಹನು ಮಾಡಿದನು.”​—⁠ಆದಿಕಾಂಡ 6:13-22; ಇಬ್ರಿಯ 11:7; 2 ಪೇತ್ರ 2:⁠5.

10. (ಎ) ಅಬ್ರಹಾಮನೂ ಸಾರಳೂ ಯೆಹೋವನ ಪರಮಾಧಿಕಾರವನ್ನು ಸಮರ್ಥಿಸಿದ್ದು ಹೇಗೆ? (ಬಿ) ಅಬ್ರಹಾಮ ಮತ್ತು ಸಾರಳ ಮಾದರಿಯಿಂದ ನಾವು ಯಾವ ವಿಧದಲ್ಲಿ ಪ್ರಯೋಜನ ಹೊಂದಬಲ್ಲೆವು?

10 ಅಬ್ರಹಾಮನೂ ಸಾರಳೂ ಯೆಹೋವನು ಆಜ್ಞಾಪಿಸುವುದನ್ನೆಲ್ಲಾ ಮಾಡುತ್ತಾ ಆತನ ಪರಮಾಧಿಕಾರವನ್ನು ಎತ್ತಿಹಿಡಿಯುವುದರಲ್ಲಿ ಉತ್ತಮ ಮಾದರಿಗಳಾಗಿದ್ದರು. ಅವರು ಕಲ್ದೀಯರ ಸಮೃದ್ಧ ನಗರವಾಗಿದ್ದ ಊರ್‌ನಲ್ಲಿ ಜೀವಿಸುತ್ತಿದ್ದರು. ಆದರೆ ಅವನಿಗೆ ಪರಿಚಯವಿಲ್ಲದ ಇನ್ನೊಂದು ದೇಶಕ್ಕೆ ಹೋಗುವಂತೆ ಯೆಹೋವನು ಅಬ್ರಹಾಮನಿಗೆ ಹೇಳಿದಾಗ, “ಯೆಹೋವನು ಹೇಳಿದ ಮೇರೆಗೆ ಅಬ್ರಹಾಮನು ಹೊರಟುಹೋದನು.” ಮನೆ ಹಾಗೂ ಬಂಧುಮಿತ್ರರಿದ್ದ ಸಾರಳಿಗೆ ಸುಖಕರವಾದ ಜೀವನರೀತಿಯಿತ್ತೆಂಬುದರಲ್ಲಿ ಸಂದೇಹವಿಲ್ಲ. ಆದರೂ, ಆಕೆ ಯೆಹೋವನಿಗೂ ತನ್ನ ಗಂಡನಿಗೂ ಅಧೀನತೆ ತೋರಿಸಿ, ಕಾನಾನ್‌ ದೇಶದಲ್ಲಿ ಕಾದಿದ್ದ ಸ್ಥಿತಿಗತಿಯ ತಿಳಿವಳಿಕೆ ಇಲ್ಲದಿದ್ದರೂ ಆ ದೇಶಕ್ಕೆ ಹೊರಟುಹೋದಳು.​—⁠ಆದಿಕಾಂಡ 11:31-12:4; ಅ. ಕೃತ್ಯಗಳು 7:2-4.

11. (ಎ) ಯಾವ ಸ್ಥಿತಿಗತಿಗಳಲ್ಲಿ ಮೋಶೆಯು ಯೆಹೋವನ ಪರಮಾಧಿಕಾರವನ್ನು ಸಮರ್ಥಿಸಿದನು? (ಬಿ) ಮೋಶೆಯ ಮಾದರಿಯು ನಮಗೆ ಹೇಗೆ ಪ್ರಯೋಜನವನ್ನು ತಂದೀತು?

11 ಯೆಹೋವನ ಪರಮಾಧಿಕಾರವನ್ನು ಸಮರ್ಥಿಸಿದವರಲ್ಲಿ ಮೋಶೆಯೂ ಒಬ್ಬನಾಗಿದ್ದಾನೆ. ಅವನು ಇದನ್ನು ಅತಿ ಕಷ್ಟಕರವಾದ ಪರಿಸ್ಥಿತಿಗಳಿರುವಾಗ, ಐಗುಪ್ತದ ಫರೋಹನ ಮುಂದೆ ಮುಖಾಮುಖಿಯಾಗಿ ಮಾತಾಡುತ್ತಾ ಮಾಡಿದನು. ಮೋಶೆ ಆತ್ಮವಿಶ್ವಾಸವುಳ್ಳವನಾಗಿದ್ದನೆಂದು ಇದರ ಅರ್ಥವಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಅವನಿಗೆ ತನ್ನ ವಾಕ್‌ಸಾಮರ್ಥ್ಯದ ವಿಷಯದಲ್ಲಿ ಸಂಶಯವಿತ್ತು. ಆದರೆ ಅವನು ಯೆಹೋವನಿಗೆ ವಿಧೇಯನಾದನು. ಯೆಹೋವನ ಬೆಂಬಲದಿಂದಲೂ ತನ್ನ ಅಣ್ಣನ ಸಹಾಯದಿಂದಲೂ ಅವನು ಮೊಂಡನಾದ ಫರೋಹನಿಗೆ ಯೆಹೋವನ ಮಾತುಗಳನ್ನು ಪದೇ ಪದೇ ತಿಳಿಯಪಡಿಸಿದನು. ಇಸ್ರಾಯೇಲ್ಯರಲ್ಲಿ ಕೆಲವರೂ ಮೋಶೆಯನ್ನು ಕಠಿನವಾಗಿ ಟೀಕಿಸಿದರು. ಆದರೂ ಮೋಶೆಯು ನಿಷ್ಠೆಯಿಂದ, ಯೆಹೋವನು ಆಜ್ಞಾಪಿಸಿದ್ದೆಲ್ಲವನ್ನೂ ಮಾಡಿದನು. ಮತ್ತು ಹೀಗೆ, ಅವನ ಮೂಲಕ ಇಸ್ರಾಯೇಲನ್ನು ಐಗುಪ್ತದಿಂದ ವಿಮೋಚಿಸಲಾಯಿತು.​—⁠ವಿಮೋಚನಕಾಂಡ 7:6; 12:50, 51; ಇಬ್ರಿಯ 11:24-27.

12. (ಎ) ಯೆಹೋವನಿಗೆ ತೋರಿಸುವ ನಿಷ್ಠೆಯಲ್ಲಿ, ದೇವರು ಬರವಣಿಗೆಯಲ್ಲಿ ಕೊಟ್ಟಿರುವುದಕ್ಕಿಂತಲೂ ಹೆಚ್ಚು ವಿಷಯಗಳು ಅಡಕವಾಗಿವೆ ಎಂಬುದನ್ನು ಯಾವುದು ತೋರಿಸುತ್ತದೆ? (ಬಿ) ಈ ರೀತಿಯ ನಿಷ್ಠೆಗೆ ಕೃತಜ್ಞತೆಯು ನಾವು 1 ಯೋಹಾನ 2:15ನ್ನು ಅನ್ವಯಿಸುವಂತೆ ಹೇಗೆ ಸಹಾಯಮಾಡೀತು?

12 ಯೆಹೋವನಿಗೆ ನಿಷ್ಠೆ ತೋರಿಸಿದವರು, ದೇವರು ಬರವಣಿಗೆಯಲ್ಲಿ ಕೊಟ್ಟಿರುವ ಆವಶ್ಯಕತೆಗಳಿಗೆ ವಿಧೇಯರಾದರೆ ಸಾಕೆಂದು ತರ್ಕಿಸಲಿಲ್ಲ. ಪೋಟೀಫರನ ಹೆಂಡತಿಯು ತನ್ನೊಂದಿಗೆ ವ್ಯಭಿಚಾರ ಸಂಬಂಧವನ್ನಿಟ್ಟುಕೊಳ್ಳುವಂತೆ ಯೋಸೇಫನನ್ನು ಪ್ರೇರಿಸಿದಾಗ, ವ್ಯಭಿಚಾರವು ನಿಷಿದ್ಧವೆಂಬ ಯಾವ ಲಿಖಿತ ಆಜ್ಞೆಯನ್ನೂ ದೇವರು ಕೊಟ್ಟಿರಲಿಲ್ಲ. ಆದರೂ, ಯೆಹೋವನು ಏದೆನಿನಲ್ಲಿ ಸ್ಥಾಪಿಸಿದ್ದ ವಿವಾಹದ ಏರ್ಪಾಡು ಯೋಸೇಫನಿಗೆ ತಿಳಿದಿತ್ತು. ಇನ್ನೊಬ್ಬನ ಹೆಂಡತಿಯೊಂದಿಗೆ ಲೈಂಗಿಕ ಸಂಬಂಧವು ಯೆಹೋವನ ಮನಸ್ಸನ್ನು ನೋಯಿಸುತ್ತದೆಂದು ಅವನಿಗೆ ಗೊತ್ತಿತ್ತು. ತಾನು ಎಷ್ಟರ ಮಟ್ಟಿಗೆ ಐಗುಪ್ತ್ಯರಂತೆ ಮುಂದುವರಿಯಲು ದೇವರು ಬಿಡುತ್ತಾನೊ ಎಂಬುದನ್ನು ಪರೀಕ್ಷಿಸಲು ಯೋಸೇಫನಿಗೆ ಮನಸ್ಸಿರಲಿಲ್ಲ. ದೇವರು ಮನುಷ್ಯರೊಂದಿಗೆ ವ್ಯವಹರಿಸಿರುವ ವಿಧಗಳನ್ನು ಮನನಮಾಡುತ್ತಾ ಅವನು ಯೆಹೋವನ ಮಾರ್ಗಗಳನ್ನು ಸಮರ್ಥಿಸಿ, ಬಳಿಕ ದೇವರ ಚಿತ್ತವು ಏನೆಂದು ಅವನು ವಿವೇಚಿಸಿ ತಿಳಿದನೊ ಅದನ್ನು ಶುದ್ಧಾಂತಃಕರಣದಿಂದ ಅನ್ವಯಿಸಿದನು.​—⁠ಆದಿಕಾಂಡ 39:7-12; ಕೀರ್ತನೆ 77:11, 12.

13. (ಎ) ಯೋಬನ ಸಂಬಂಧದಲ್ಲಿ ಮತ್ತು (ಬಿ) ಮೂವರು ಇಬ್ರಿಯರ ವಿಷಯದಲ್ಲಿ ಪಿಶಾಚನು ಸುಳ್ಳುಗಾರನಾಗಿ ಪರಿಣಮಿಸಿದ್ದು ಹೇಗೆ?

13 ಯೆಹೋವನನ್ನು ನಿಜವಾಗಿಯೂ ತಿಳಿದಿರುವವರು, ಕಠಿನವಾದ ಪರೀಕ್ಷೆಗೊಳಗಾಗುವುದಾದರೂ ಅವನಿಗೆ ಬೆನ್ನುಹಾಕುವುದಿಲ್ಲ. ಯಾರ ಕುರಿತು ಯೆಹೋವನು ಮೆಚ್ಚಿ ಮಾತಾಡಿದ್ದನೊ ಆ ಯೋಬನು ತನ್ನ ಅನೇಕ ಸೊತ್ತುಗಳನ್ನು ಅಥವಾ ಆರೋಗ್ಯವನ್ನು ಕಳೆದುಕೊಳ್ಳುವಲ್ಲಿ, ಅವನೂ ದೇವರನ್ನು ತ್ಯಜಿಸಿಬಿಡುವನೆಂದು ಸೈತಾನನು ಆರೋಪ ಹೊರಿಸಿದನು. ಆದರೆ, ಆ ವಿಪತ್ತುಗಳು ತನ್ನ ಮೇಲೆ ಏಕೆ ಬಂದವೆಂದು ಯೋಬನಿಗೆ ತಿಳಿದಿರದಿದ್ದರೂ, ಅವನು ಪಿಶಾಚನನ್ನು ಸುಳ್ಳುಗಾರನೆಂದು ರುಜುಪಡಿಸಿದನು. (ಯೋಬ 2:​9, 10) ಶತಮಾನಗಳು ಕಳೆದ ಬಳಿಕ, ತನ್ನ ಆರೋಪವನ್ನು ಇನ್ನೂ ಸರಿಯೆಂದು ಹೇಳಲು ಪ್ರಯತ್ನಿಸುತ್ತಾ ಸೈತಾನನು, ಮೂವರು ಯುವ ಇಬ್ರಿಯರು ರಾಜನು ನಿಲ್ಲಿಸಿದ್ದ ವಿಗ್ರಹಕ್ಕೆ ಅಡ್ಡಬಿದ್ದು ಅದನ್ನು ಆರಾಧಿಸದಿದ್ದಲ್ಲಿ, ಅವರನ್ನು ಬೆಂಕಿಯ ಕುಲುಮೆಯಲ್ಲಿ ಹಾಕುವಂತೆ ಕೋಪಾವೇಶಗೊಂಡಿದ್ದ ಬಾಬೆಲಿನ ರಾಜನನ್ನು ಪ್ರೇರಿಸಿದನು. ರಾಜನ ಆಜ್ಞೆಗೆ ವಿಧೇಯತೆ ಮತ್ತು ವಿಗ್ರಹಾರಾಧನೆಯ ವಿಷಯದಲ್ಲಿರುವ ಯೆಹೋವನ ಆಜ್ಞೆಗೆ ವಿಧೇಯತೆಯಲ್ಲಿ ಒಂದನ್ನು ಆರಿಸಿಕೊಳ್ಳುವಂತೆ ನಿರ್ಬಂಧಕ್ಕೊಳಗಾದ ಇವರು, ಸ್ಥಿರತೆಯಿಂದ ತಾವು ಯೆಹೋವನನ್ನು ಸೇವಿಸುವವರೆಂದೂ ಆತನೇ ತಮ್ಮ ಶ್ರೇಷ್ಠ ಪರಮಾಧಿಕಾರಿಯೆಂದೂ ತಿಳಿಯಪಡಿಸಿದರು. ತಮ್ಮ ಸದ್ಯದ ಜೀವನಕ್ಕಿಂತ ಅವರಿಗೆ ಯೆಹೋವನಿಗೆ ನಂಬಿಗಸ್ತರಾಗಿರುವುದು ಹೆಚ್ಚು ಅಮೂಲ್ಯವಾಗಿತ್ತು!​—⁠ದಾನಿಯೇಲ 3:​14-18.

14. ಅಪರಿಪೂರ್ಣ ಮಾನವರಾದ ನಾವು ಯೆಹೋವನಿಗೆ ನಿಜವಾಗಿಯೂ ನಿಷ್ಠೆಯುಳ್ಳವರೆಂದು ತೋರಿಸುವುದು ಹೇಗೆ ಸಾಧ್ಯ?

14 ಇಂತಹ ಮಾದರಿಗಳಿಂದ, ಒಬ್ಬನು ಯೆಹೋವನಿಗೆ ನಿಷ್ಠೆ ತೋರಿಸಬೇಕಾದರೆ ಅವನು ಪರಿಪೂರ್ಣನಾಗಿರಬೇಕು ಇಲ್ಲವೆ ಅವನು ಇದರಲ್ಲಿ ತಪ್ಪುವುದಾದರೆ ಅಂಥವನು ಪೂರ್ತಿ ವಿಫಲನು ಎಂದು ತೀರ್ಮಾನಿಸಬೇಕೊ? ನಿಶ್ಚಯವಾಗಿಯೂ ಇಲ್ಲ! ಕೆಲವು ಬಾರಿ ಮೋಶೆಯು ತಪ್ಪಿಬಿದ್ದನೆಂದು ಬೈಬಲು ಹೇಳುತ್ತದೆ. ಆಗ ಯೆಹೋವನಿಗೆ ಅಸಮಾಧಾನವಾಯಿತಾದರೂ ಆತನು ಮೋಶೆಯನ್ನು ತಳ್ಳಿಬಿಡಲಿಲ್ಲ. ಯೇಸು ಕ್ರಿಸ್ತನ ಅಪೊಸ್ತಲರಲ್ಲಿಯೂ ಬಲಹೀನತೆಗಳಿದ್ದವು. ಹೀಗೆ, ನಮ್ಮ ಅಪರಿಪೂರ್ಣತೆಯ ಬಾಧ್ಯತೆಯನ್ನು ಯೆಹೋವನು ಲೆಕ್ಕಕ್ಕೆ ತೆಗೆದುಕೊಂಡು, ಅದೇ ಸಮಯದಲ್ಲಿ ನಾವು ಆತನ ಚಿತ್ತವನ್ನು ಯಾವುದೇ ವಿಧದಲ್ಲಿ ಉದ್ದೇಶಪೂರ್ವಕವಾಗಿ ಅಸಡ್ಡೆ ಮಾಡದಿರುವಲ್ಲಿ ಆತನು ಸಂತೋಷಿಸುತ್ತಾನೆ. ನಾವು ಬಲಹೀನತೆಯ ಕಾರಣ ಪಾಪದಲ್ಲಿ ಸಿಕ್ಕಿಬೀಳುವುದಾದರೆ, ಅದನ್ನು ರೂಢಿಯಾಗಿ ಮಾಡುತ್ತಾ ಮುಂದುವರಿಯದೆ, ಯಥಾರ್ಥವಾಗಿ ಪಶ್ಚಾತ್ತಾಪ ಪಡುವುದು ಪ್ರಾಮುಖ್ಯ. ಈ ವಿಧದಲ್ಲಿ, ಯೆಹೋವನು ಯಾವುದನ್ನು ಒಳ್ಳೆಯದೆಂದು ಹೇಳುತ್ತಾನೊ ಅದನ್ನು ಪ್ರೀತಿಸುತ್ತೇವೆಂದೂ, ಯಾವುದನ್ನು ಕೆಟ್ಟದ್ದೆಂದು ತಿಳಿಯಪಡಿಸುತ್ತಾನೊ ಅದನ್ನು ದ್ವೇಷಿಸುತ್ತೇವೆಂದೂ ನಾವು ತೋರಿಸುತ್ತೇವೆ. ಯೇಸುವಿನ ಯಜ್ಞದ ಪಾಪನಿವಾರಕ ಮೌಲ್ಯದಲ್ಲಿ ನಮಗಿರುವ ನಂಬಿಕೆಯ ಆಧಾರದ ಮೇರೆಗೆ, ನಾವು ದೇವರ ಮುಂದೆ ಶುದ್ಧವಾದ ನಿಲುವನ್ನು ಅನುಭವಿಸಬಲ್ಲೆವು.​—⁠ಆಮೋಸ 5:15; ಅ. ಕೃತ್ಯಗಳು 3:19; ಇಬ್ರಿಯ 9:14.

15. (ಎ) ಸರ್ವ ಮಾನವರಲ್ಲಿ ಯಾರು ಮಾತ್ರ ದೇವರಿಗೆ ತನ್ನ ಸಂಪೂರ್ಣ ಸಮಗ್ರತೆಯನ್ನು ಕಾಪಾಡಿಕೊಂಡನು ಮತ್ತು ಇದು ಏನನ್ನು ರುಜುಪಡಿಸಿತು? (ಬಿ) ಯೇಸು ಏನು ಮಾಡಿದನೊ ಅದರಿಂದ ನಮಗೆ ಹೇಗೆ ಸಹಾಯ ದೊರೆಯುತ್ತದೆ?

15 ಆದರೂ, ಯೆಹೋವನ ಪರಮಾಧಿಕಾರಕ್ಕೆ ಮಾನವರು ಸಂಪೂರ್ಣ ವಿಧೇಯತೆಯನ್ನು ತೋರಿಸುವುದು ಎಂದಿಗೂ ಸಾಧ್ಯವಿಲ್ಲವೆಂದು ಹೇಳಸಾಧ್ಯವಿದೆಯೊ? ಇದಕ್ಕೆ ಉತ್ತರವು ಸುಮಾರು 4,000 ವರ್ಷಗಳ ವರೆಗೆ “ಪವಿತ್ರ ರಹಸ್ಯ”ದ ಹಾಗಿತ್ತು. (1 ತಿಮೊಥೆಯ 3:​16, NW) ಆದಾಮನು, ಪರಿಪೂರ್ಣನಾಗಿ ಸೃಷ್ಟಿಸಲ್ಪಟ್ಟಿದ್ದರೂ, ಅವನು ದೇವಭಕ್ತಿಯ ಪರಿಪೂರ್ಣ ಮಾದರಿಯನ್ನಿಡಲಿಲ್ಲ. ಹಾಗಿರುವಲ್ಲಿ, ಯಾರು ತಾನೇ ಇಡಬಲ್ಲನು? ಅವನ ಪಾಪಪೂರ್ಣ ಸಂತತಿಯವರಾರೂ ಇಡರೆಂಬುದು ನಿಶ್ಚಯ. ಹಾಗೆ ಇಡಲು ಶಕ್ತನಾಗಿದ್ದ ಒಬ್ಬನೇ ಮನುಷ್ಯನು ಯೇಸು ಕ್ರಿಸ್ತನು. (ಇಬ್ರಿಯ 4:15) ಯೇಸು ಏನನ್ನು ಸಾಧಿಸಿದನೊ ಅದು, ಹೆಚ್ಚು ಅನುಕೂಲ ಪರಿಸ್ಥಿತಿಗಳಲ್ಲಿ ಜೀವಿಸುತ್ತಿದ್ದ ಆದಾಮನು, ಅಪೇಕ್ಷೆ ಇರುತ್ತಿದ್ದಲ್ಲಿ ಪರಿಪೂರ್ಣ ಸಮಗ್ರತೆಯನ್ನು ಕಾಪಾಡಿಕೊಳ್ಳಸಾಧ್ಯವಿತ್ತು ಎಂಬುದನ್ನು ರುಜುಪಡಿಸಿತು. ದೋಷವು ದೇವರ ಸೃಷ್ಟಿಕಾರ್ಯದಲ್ಲಿರಲಿಲ್ಲ. ಆದಕಾರಣ, ದೈವಿಕ ನಿಯಮಕ್ಕೆ ವಿಧೇಯತೆಯನ್ನು ತೋರಿಸುವುದು ಮಾತ್ರವಲ್ಲ, ವಿಶ್ವ ಪರಮಾಧಿಕಾರಿಯಾದ ಯೆಹೋವನಿಗೆ ನಮ್ಮ ವ್ಯಕ್ತಿಪರವಾದ ಭಕ್ತಿಯನ್ನು ತೋರಿಸುವುದರಲ್ಲಿ ನಾವು ಅನುಕರಿಸಲು ಬಯಸುವುದು ಯೇಸು ಕ್ರಿಸ್ತನ ಮಾದರಿಯನ್ನೇ.​—⁠ಧರ್ಮೋಪದೇಶಕಾಂಡ 32:​4, 5.

ನಮ್ಮ ವೈಯಕ್ತಿಕ ಉತ್ತರವೇನು?

16. ಯೆಹೋವನ ಪರಮಾಧಿಕಾರಕ್ಕೆ ನಾವು ತೋರಿಸುವ ಮನೋಭಾವದ ಕುರಿತು ನಾವು ಏಕೆ ಸದಾ ಎಚ್ಚರವಾಗಿರಬೇಕು?

16 ಇಂದು ನಮ್ಮಲ್ಲಿ ಪ್ರತಿಯೊಬ್ಬನಿಗೂ ವಿಶ್ವ ಪರಮಾಧಿಕಾರದ ವಿವಾದಾಂಶವನ್ನು ಎದುರಿಸಲಿಕ್ಕಿದೆ. ನಾವು ಯೆಹೋವನ ಪಕ್ಷದಲ್ಲಿದ್ದೇವೆಂದು ಬಹಿರಂಗವಾಗಿ ಹೇಳಿರುವುದಾದರೆ, ಸೈತಾನನು ನಮ್ಮನ್ನು ತನ್ನ ಗುರಿಹಲಗೆಯಾಗಿ ಮಾಡುತ್ತಾನೆ. ಅವನು ಸಕಲ ದಿಕ್ಕುಗಳಿಂದಲೂ ಒತ್ತಡವನ್ನು ತರುತ್ತಾನೆ. ತನ್ನ ದುಷ್ಟ ವಿಷಯಗಳ ವ್ಯವಸ್ಥೆಯು ಅಂತ್ಯಗೊಳ್ಳುವ ತನಕವೂ ಅವನು ಹಾಗೆ ಮಾಡುತ್ತಾ ಹೋಗುವನು. ಆದಕಾರಣ, ನಾವು ಸದಾ ಎಚ್ಚರವಾಗಿರಬೇಕು. (1 ಪೇತ್ರ 5:⁠8) ಯೆಹೋವನ ಪರಮಾಧಿಕಾರದ ಈ ಪರಮ ವಿವಾದಾಂಶದಲ್ಲಿ ಮತ್ತು ಪರೀಕ್ಷೆಯ ಸಮಯದಲ್ಲಿ ನಾವು ದೇವರಿಗೆ ತೋರಿಸುವ ಸಮಗ್ರತೆಯೆಂಬ ದ್ವಿತೀಯ ವಿವಾದಾಂಶದಲ್ಲಿ ನಮ್ಮ ನಿಲುವನ್ನು ನಮ್ಮ ನಡತೆಯು ತೋರಿಸುತ್ತದೆ. ಈ ಲೋಕದಲ್ಲಿ ನಿಷ್ಠೆಯಿಲ್ಲದ ನಡತೆಯು ಸಾಮಾನ್ಯವಾಗಿರುವುದರಿಂದ, ಅದು ಅಮುಖ್ಯವೆಂದು ನಾವು ನೆನಸುವುದು ನಮಗೆ ಹಾನಿಕರ. ಸಮಗ್ರತೆಯನ್ನು ಕಾಪಾಡಿಕೊಳ್ಳುವುದು, ಯೆಹೋವನ ನೀತಿಯ ಮಟ್ಟಗಳನ್ನು ನಮ್ಮ ಜೀವನದ ಪ್ರತಿಯೊಂದು ವಿಷಯಗಳಲ್ಲಿ ಅನ್ವಯಿಸುವಂತೆ ಕೇಳಿಕೊಳ್ಳುತ್ತದೆ.

17. ಸುಳ್ಳು ಹೇಳುವುದು ಮತ್ತು ಕಳ್ಳತನದ ಮೂಲದ ವಿಷಯದಲ್ಲಿ ಯಾವ ಸಂಗತಿಯು ನಾವು ಅದನ್ನು ತ್ಯಜಿಸುವಂತೆ ಮಾಡಬೇಕು?

17 ದೃಷ್ಟಾಂತಕ್ಕೆ, ‘ಸುಳ್ಳಿಗೆ ಮೂಲಪುರುಷನು’ ಆಗಿರುವ ಸೈತಾನನನ್ನು ನಾವು ಅನುಕರಿಸಬಾರದು. (ಯೋಹಾನ 8:44) ನಮ್ಮ ಎಲ್ಲಾ ವ್ಯವಹಾರಗಳಲ್ಲಿ ನಾವು ಸತ್ಯವಂತರಾಗಿರಬೇಕು. ಸೈತಾನನ ವ್ಯವಸ್ಥೆಯಲ್ಲಿ ಯುವ ಜನರು ತಮ್ಮ ಹೆತ್ತವರೊಂದಿಗೆ ಅನೇಕವೇಳೆ ಸತ್ಯವನ್ನಾಡುವುದಿಲ್ಲ. ಆದರೆ ಕ್ರೈಸ್ತ ಯುವ ಜನರು ಇದನ್ನು ತ್ಯಜಿಸಿ, ಹೀಗೆ ದೇವಜನರು ಪರೀಕ್ಷೆ ಬರುವಲ್ಲಿ ಸಮಗ್ರತೆಯನ್ನು ಬಿಟ್ಟುಬಿಡುತ್ತಾರೆಂಬ ಸೈತಾನನ ಆರೋಪವನ್ನು ಸುಳ್ಳೆಂದು ರುಜುಪಡಿಸುತ್ತಾರೆ. (ಯೋಬ 1:9-11; ಜ್ಞಾನೋಕ್ತಿ 6:16-19) ಇದಲ್ಲದೆ, ಒಬ್ಬನು ‘ಸುಳ್ಳಿಗೆ ಮೂಲಪುರುಷನು’ ಆಗಿರುವವನ ಪಕ್ಷದವನೆಂದು ಮತ್ತು ಸತ್ಯ ದೇವರ ಪಕ್ಷದವನಲ್ಲವೆಂದು ತೋರಿಸುವ ವ್ಯಾಪಾರ ಪದ್ಧತಿಗಳಿವೆ. ಇಂತಹ ವ್ಯಾಪಾರ ಪದ್ಧತಿಗಳನ್ನು ನಾವು ಬಿಟ್ಟುಬಿಡುತ್ತೇವೆ. (ಮೀಕ 6:​11, 12) ಅಷ್ಟುಮಾತ್ರವಲ್ಲ, ಒಬ್ಬನಿಗೆ ಅಗತ್ಯವಿರುವಾಗಲೂ ಇಲ್ಲವೆ ಅವನು ಯಾರಿಂದ ಕದಿಯುತ್ತಾನೊ ಆ ವ್ಯಕ್ತಿಯು ಹಣವಂತನಾಗಿರುವಾಗಲೂ ಕಳ್ಳತನ ಮಾಡುವುದು ಎಂದಿಗೂ ಸರಿಯಲ್ಲ. (ಜ್ಞಾನೋಕ್ತಿ 6:30, 31; 1 ಪೇತ್ರ 4:15) ನಾವು ಎಲ್ಲಿ ಜೀವಿಸುತ್ತಿದ್ದೇವೊ ಅಲ್ಲಿ ಕಳ್ಳತನವು ಸಾಮಾನ್ಯವಾಗಿರುವಾಗಲೂ ಇಲ್ಲವೆ ಕದ್ದಿರುವ ವಸ್ತು ಚಿಕ್ಕದಾಗಿರುವಾಗಲೂ, ಅದು ದೇವರ ನಿಯಮಗಳಿಗೆ ವಿರುದ್ಧವಾಗಿದೆ.​—⁠ಲೂಕ 16:10; ರೋಮಾಪುರ 12:2; ಎಫೆಸ 4:28.

18. (ಎ) ಕ್ರಿಸ್ತನ ಸಹಸ್ರ ವರುಷಗಳ ಆಳಿಕೆಯ ಅಂತ್ಯದಲ್ಲಿ, ಸರ್ವ ಮಾನವಕುಲದ ಮೇಲೆ ಯಾವ ಪರೀಕ್ಷೆ ಬರುವುದು? (ಬಿ) ನಾವು ಈಗ ಯಾವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು?

18 ಕ್ರಿಸ್ತನ ಸಹಸ್ರ ವರುಷಗಳ ಆಳಿಕೆಯಲ್ಲಿ, ಸೈತಾನನೂ ಅವನ ದೆವ್ವಗಳೂ ಅಧೋಲೋಕದಲ್ಲಿರುವುದರಿಂದ ಅವರು ಮಾನವಕುಲವನ್ನು ಪ್ರಭಾವಿಸಲಾರರು. ಅದೆಷ್ಟು ಉಪಶಮನವನ್ನು ತರಲಿರುವುದು! ಆದರೆ ಆ ಸಹಸ್ರ ವರುಷಗಳಾನಂತರ, ಅವರನ್ನು ಸ್ವಲ್ಪ ಸಮಯದ ವರೆಗೆ ಬಿಡುಗಡೆ ಮಾಡಲಾಗುವುದು. ಆಗ ಸೈತಾನನೂ ಅವನ ಹಿಂಬಾಲಕರೂ, ದೇವರಲ್ಲಿ ಸಮಗ್ರತೆಯನ್ನು ಕಾಪಾಡಿಕೊಳ್ಳುವ ಆ ಪುನಸ್ಸ್ಥಾಪಿತ ಮಾನವಕುಲದವರ ಮೇಲೆ ಒತ್ತಡವನ್ನು ತರುವರು. (ಪ್ರಕಟನೆ 20:​7-10) ಆ ಸಮಯದಲ್ಲಿ ಜೀವಿಸುವುದು ನಮ್ಮ ಸದವಕಾಶವಾಗಿರುವಲ್ಲಿ, ಯೆಹೋವನ ವಿಶ್ವ ಪರಮಾಧಿಕಾರದ ವಿವಾದಾಂಶದ ಕುರಿತು ನಾವು ಹೇಗೆ ಪ್ರತಿವರ್ತನೆ ತೋರಿಸುವೆವು? ಆಗ ಸರ್ವ ಮಾನವಕುಲವು ಪರಿಪೂರ್ಣ ಸ್ಥಿತಿಯಲ್ಲಿರುವುದರಿಂದ, ನಂಬಿಕೆದ್ರೋಹದ ಯಾವುದೇ ವರ್ತನೆಯು ನಿತ್ಯನಾಶನದಲ್ಲಿ ಅಂತ್ಯಗೊಳ್ಳುವುದು. ಆದುದರಿಂದ, ಯೆಹೋವನು ತನ್ನ ವಾಕ್ಯದ ಮೂಲಕವಾಗಲಿ, ತನ್ನ ಸಂಸ್ಥೆಯ ಮೂಲಕವಾಗಲಿ ಕೊಡುವ ಯಾವುದೇ ನಿರ್ದೇಶನಕ್ಕೆ ಸಕಾರಾತ್ಮಕವಾಗಿ ಪ್ರತಿವರ್ತಿಸುವ ಅಭ್ಯಾಸವನ್ನು ಈಗಲೇ ಬೆಳೆಸಿಕೊಳ್ಳುವುದು ಅದೆಷ್ಟು ಮಹತ್ವಪೂರ್ಣವಾಗಿದೆ! ಹಾಗೆ ಮಾಡುವಲ್ಲಿ, ವಿಶ್ವ ಪರಮಾಧಿಕಾರಿಯಾಗಿರುವ ಆತನಿಗೆ ನಾವು ಶುದ್ಧ ಭಕ್ತಿಯನ್ನು ತೋರಿಸುತ್ತೇವೆ.

ಪುನರ್ವಿಮರ್ಶೆಯ ಚರ್ಚೆ

• ನಾವೆಲ್ಲರೂ ಎದುರಿಸಬೇಕಾದ ಮಹಾ ವಿವಾದಾಂಶವು ಯಾವುದು? ಅದರಲ್ಲಿ ನಾವು ಒಳಗೂಡಿರುವುದು ಹೇಗೆ?

• ಪುರಾತನ ಕಾಲದಲ್ಲಿ ಸ್ತ್ರೀಪುರುಷರು ಯೆಹೋವನಿಗೆ ತಮ್ಮ ಸಮಗ್ರತೆಯನ್ನು ತೋರ್ಪಡಿಸಿದ ರೀತಿಯಲ್ಲಿ ಯಾವ ವಿಷಯವು ಗಮನಾರ್ಹವಾದದ್ದಾಗಿದೆ?

• ನಾವು ಪ್ರತಿದಿನ ನಮ್ಮ ನಡತೆಯಿಂದ ಯೆಹೋವನನ್ನು ಗೌರವಿಸುವುದು ಏಕೆ ಮಹತ್ವವುಳ್ಳದ್ದಾಗಿದೆ?

[ಅಧ್ಯಯನ ಪ್ರಶ್ನೆಗಳು]