ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ದೀಕ್ಷಾಸ್ನಾನದ ಅರ್ಥ

ನಿಮ್ಮ ದೀಕ್ಷಾಸ್ನಾನದ ಅರ್ಥ

ಅಧ್ಯಾಯ ಹನ್ನೆರಡು

ನಿಮ್ಮ ದೀಕ್ಷಾಸ್ನಾನದ ಅರ್ಥ

1. ನೀರಿನ ದೀಕ್ಷಾಸ್ನಾನವು ನಮ್ಮಲ್ಲಿ ಪ್ರತಿಯೊಬ್ಬನಿಗೆ ವೈಯಕ್ತಿಕ ಆಸಕ್ತಿಯದ್ದಾಗಿರಬೇಕು ಏಕೆ?

ಸಾಮಾನ್ಯ ಶಕ 29ರಲ್ಲಿ ಯೇಸು, ಸ್ನಾನಿಕನಾದ ಯೋಹಾನನಿಂದ ಯೊರ್ದನ್‌ ಹೊಳೆಯಲ್ಲಿ ಮುಳುಗಿಸಲ್ಪಟ್ಟು ದೀಕ್ಷಾಸ್ನಾನ ಹೊಂದಿದನು. ಇದನ್ನು ಯೆಹೋವನು ತಾನೇ ವೀಕ್ಷಿಸಿ ತನ್ನ ಒಪ್ಪಿಗೆಯನ್ನು ವ್ಯಕ್ತಪಡಿಸಿದನು. (ಮತ್ತಾಯ 3:​16, 17) ಹೀಗೆ ಯೇಸು ತನ್ನ ಶಿಷ್ಯರು ಅನುಸರಿಸಬೇಕಾದ ಒಂದು ಮಾದರಿಯನ್ನಿಟ್ಟನು. ಇದಾಗಿ ಮೂರೂವರೆ ವರುಷಗಳ ಬಳಿಕ ಯೇಸು ತನ್ನ ಶಿಷ್ಯರಿಗೆ ಈ ಅಪ್ಪಣೆಯನ್ನು ಕೊಟ್ಟನು: “ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟಿದೆ. ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ [“ಪವಿತ್ರಾತ್ಮದ,” NW] ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ.” (ಮತ್ತಾಯ 28:18, 19) ಇಲ್ಲಿ ಯೇಸು ಕೊಟ್ಟ ನಿರ್ದೇಶನಕ್ಕನುಸಾರ ನಿಮಗೆ ದೀಕ್ಷಾಸ್ನಾನವಾಗಿದೆಯೆ? ಆಗಿಲ್ಲವಾದರೆ, ಹಾಗೆ ಮಾಡಿಸಿಕೊಳ್ಳಲು ನೀವು ಸಿದ್ಧರಾಗುತ್ತಿದ್ದೀರೊ?

2. ದೀಕ್ಷಾಸ್ನಾನದ ಸಂಬಂಧದಲ್ಲಿ, ಯಾವ ಪ್ರಶ್ನೆಗಳಿಗೆ ಉತ್ತರದ ಅಗತ್ಯವಿದೆ?

2 ನಿಮಗೆ ದೀಕ್ಷಾಸ್ನಾನವಾಗಿರಲಿ ಇಲ್ಲದಿರಲಿ, ಯೆಹೋವನನ್ನು ಸೇವಿಸಿ ಆತನ ನೀತಿಯುಳ್ಳ ನೂತನ ಲೋಕದಲ್ಲಿ ಜೀವಿಸಬಯಸುವ ಪ್ರತಿಯೊಬ್ಬನಿಗೆ ದೀಕ್ಷಾಸ್ನಾನದ ವಿಷಯದಲ್ಲಿ ಸ್ಪಷ್ಟವಾದ ತಿಳಿವಳಿಕೆ ಪ್ರಾಮುಖ್ಯವಾಗಿದೆ. ಮತ್ತು ಉತ್ತರಕ್ಕೆ ಅರ್ಹವಾದ ಪ್ರಶ್ನೆಗಳಲ್ಲಿ ಇವು ಸೇರಿವೆ: ಇಂದಿನ ಕ್ರೈಸ್ತ ದೀಕ್ಷಾಸ್ನಾನಕ್ಕೂ ಯೇಸುವಿನ ದೀಕ್ಷಾಸ್ನಾನಕ್ಕೂ ಒಂದೇ ಅರ್ಥವಿದೆಯೆ? “ತಂದೆಯ, ಮಗನ, ಪವಿತ್ರಾತ್ಮದ ಹೆಸರಿನಲ್ಲಿ” ದೀಕ್ಷಾಸ್ನಾನ ಹೊಂದುವುದೆಂದರೇನು? ಕ್ರೈಸ್ತ ನೀರಿನ ದೀಕ್ಷಾಸ್ನಾನವು ಯಾವುದನ್ನು ಸೂಚಿಸುತ್ತದೊ ಅದಕ್ಕನುಸಾರವಾಗಿ ಜೀವಿಸುವುದರಲ್ಲಿ ಏನು ಒಳಗೂಡಿದೆ?

ಯೋಹಾನನು ಕೊಟ್ಟ ದೀಕ್ಷಾಸ್ನಾನಗಳು

3. ಯೋಹಾನನ ದೀಕ್ಷಾಸ್ನಾನ ಯಾರಿಗೆ ಸೀಮಿತವಾಗಿತ್ತು?

3 ಯೇಸು ದೀಕ್ಷಾಸ್ನಾನ ಹೊಂದುವುದಕ್ಕೆ ಆರು ತಿಂಗಳು ಮುಂಚಿತವಾಗಿ, ಯೋಹಾನನು ಯೂದಾಯದ ಅಡವಿಯಲ್ಲಿ, “ಪರಲೋಕರಾಜ್ಯವು ಸಮೀಪವಾಯಿತು; ದೇವರ ಕಡೆಗೆ ತಿರುಗಿಕೊಳ್ಳಿರಿ” ಎಂದು ಸಾರತೊಡಗಿದನು. (ಮತ್ತಾಯ 3:​1, 2) ಯೋಹಾನನು ಹೇಳಿದ್ದನ್ನು ಜನರು ಕೇಳಿ ಅದನ್ನು ಮನಸ್ಸಿಗೆ ತೆಗೆದುಕೊಂಡರು. ಅವರು ತಮ್ಮ ಪಾಪಗಳನ್ನು ಬಹಿರಂಗವಾಗಿ ಅರಿಕೆಮಾಡಿ, ಪಶ್ಚಾತ್ತಾಪಪಟ್ಟು, ಯೊರ್ದನ್‌ ಹೊಳೆಯಲ್ಲಿ ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಯೋಹಾನನ ಬಳಿಗೆ ಬಂದರು. ಈ ದೀಕ್ಷಾಸ್ನಾನವು ಕೇವಲ ಯೆಹೂದ್ಯರಿಗಾಗಿತ್ತು.​—⁠ಲೂಕ 1:13-16; ಅ. ಕೃತ್ಯಗಳು 13:23, 24.

4. ಒಂದನೆಯ ಶತಮಾನದ ಯೆಹೂದ್ಯರಿಗೆ ಪಶ್ಚಾತ್ತಾಪವು ಏಕೆ ಜರೂರಿಯದ್ದಾಗಿತ್ತು?

4 ಆ ಯೆಹೂದ್ಯರಿಗೆ ಪಶ್ಚಾತ್ತಾಪವು ಅತಿ ಜರೂರಿಯದ್ದಾಗಿತ್ತು. ಸಾ.ಶ.ಪೂ. 1513ರಲ್ಲಿ ಅವರ ಪೂರ್ವಜರು ಯೆಹೋವ ದೇವರೊಂದಿಗೆ ಒಂದು ರಾಷ್ಟ್ರೀಯ ಒಡಂಬಡಿಕೆಗೆ, ಒಂದು ವಿಧಿವಿಹಿತವಾದ, ಗಂಭೀರವಾದ ಒಪ್ಪಂದಕ್ಕೆ ಒಳಪಟ್ಟಿದ್ದರು. ಆದರೆ ಘೋರವಾದ ಪಾಪಗಳನ್ನು ಮಾಡುತ್ತಾ, ಅವರು ಆ ಒಡಂಬಡಿಕೆಯ ಪ್ರಕಾರ ತಮಗಿದ್ದ ಜವಾಬ್ದಾರಿಗಳನ್ನು ವಹಿಸಿಕೊಳ್ಳದೆ ಇದ್ದ ಕಾರಣ ಅವರು ಅದರಿಂದ ಖಂಡಿಸಲ್ಪಟ್ಟರು. ಯೇಸು ಪ್ರತ್ಯಕ್ಷವಾದ ಸಮಯದಷ್ಟಕ್ಕೆ ಅವರ ಸನ್ನಿವೇಶವು ಗಂಡಾಂತರದಲ್ಲಿತ್ತು. ಮಲಾಕಿಯನು ಮುಂತಿಳಿಸಿದ್ದ, “ಯೆಹೋವನ ಆಗಮನದ ಭಯಂಕರವಾದ ಮಹಾದಿನವು” ಬರುವುದರಲ್ಲಿತ್ತು. ಸಾ.ಶ. 70ರಲ್ಲಿ ರೋಮನ್‌ ಸೈನ್ಯಗಳು ಯೆರೂಸಲೇಮನ್ನು, ಅದರ ದೇವಾಲಯವನ್ನು ಮತ್ತು ಹತ್ತು ಲಕ್ಷಗಳಿಗೂ ಹೆಚ್ಚು ಮಂದಿ ಯೆಹೂದ್ಯರನ್ನು ನಾಶಗೊಳಿಸಿದಾಗ ಆ “ದಿನವು” ಬಂತು. ಆ ನಾಶನಕ್ಕೆ ಮೊದಲು ‘ಸಿದ್ಧವಾದ ಜನವನ್ನು ಯೆಹೋವನಿಗೆ ಒದಗಿಸಲಿಕ್ಕಾಗಿ’ ಸತ್ಯಾರಾಧನೆಯ ವಿಷಯದಲ್ಲಿ ಅತ್ಯಾಸಕ್ತನಾಗಿದ್ದ ಸ್ನಾನಿಕನಾದ ಯೋಹಾನನನ್ನು ಮುಂಚಿತವಾಗಿ ಕಳುಹಿಸಲಾಗಿತ್ತು. ಅವರು ಮೋಶೆಯ ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿ ಮಾಡಿದ್ದ ಪಾಪಗಳಿಗಾಗಿ ಪಶ್ಚಾತ್ತಾಪಪಡಬೇಕಾಗಿತ್ತು ಮಾತ್ರವಲ್ಲ, ಯೆಹೋವನು ಅವರ ಬಳಿಗೆ ಕಳುಹಿಸಲಿದ್ದ ದೇವಕುಮಾರನಾದ ಯೇಸುವನ್ನೂ ಅಂಗೀಕರಿಸಬೇಕಾಗಿತ್ತು.​—⁠ಮಲಾಕಿಯ 4:4-6; ಲೂಕ 1:17; ಅ. ಕೃತ್ಯಗಳು 19:⁠4.

5. (ಎ) ಯೇಸು ದೀಕ್ಷಾಸ್ನಾನ ಹೊಂದಲು ಬಂದಾಗ, ಯೋಹಾನನು ಅದರ ವಿಷಯದಲ್ಲಿ ಪ್ರಶ್ನಿಸಿದ್ದೇಕೆ? (ಬಿ) ಯೇಸುವಿನ ದೀಕ್ಷಾಸ್ನಾನವು ಏನನ್ನು ಸಂಕೇತಿಸಿತು?

5 ಯೋಹಾನನ ಬಳಿಗೆ ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಬಂದವರಲ್ಲಿ ಯೇಸುವೂ ಒಬ್ಬನಾಗಿದ್ದನು. ಆದರೆ ಏಕೆ? ಅರಿಕೆ ಮಾಡಲು ಯೇಸುವಿನಲ್ಲಿ ಪಾಪಗಳಿರಲಿಲ್ಲವೆಂದು ತಿಳಿದಿದ್ದ ಯೋಹಾನನು, “ನಾನು ನಿನ್ನಿಂದ ಸ್ನಾನ ಮಾಡಿಸಿಕೊಳ್ಳತಕ್ಕವನಾಗಿರುವಲ್ಲಿ ನೀನು ನನ್ನ ಬಳಿಗೆ ಬರುವದೇನು” ಎಂದು ಕೇಳಿದನು. ಆದರೆ ಯೇಸುವಿನ ದೀಕ್ಷಾಸ್ನಾನವು ಬೇರೊಂದು ವಿಷಯದ ಸಂಕೇತವಾಗಿತ್ತು. ಆದಕಾರಣ ಯೇಸು, “ಸದ್ಯಕ್ಕೆ ಒಪ್ಪಿಕೋ; ಹೀಗೆ ನಾವು ಎಲ್ಲಾ ಧರ್ಮವನ್ನು ನೆರವೇರಿಸತಕ್ಕದ್ದಾಗಿದೆ” ಎಂದು ಉತ್ತರಕೊಟ್ಟನು. (ಮತ್ತಾಯ 3:​13-15) ಯೇಸು ಪಾಪರಹಿತನಾಗಿದ್ದುದರಿಂದ, ಅವನ ದೀಕ್ಷಾಸ್ನಾನವು ಪಾಪಕ್ಕಾಗಿ ಪಡುವ ಪಶ್ಚಾತ್ತಾಪವನ್ನು ಸಂಕೇತಿಸಲಿಲ್ಲ. ಅಲ್ಲದೆ, ಯೆಹೋವನಿಗೆ ಈಗಾಗಲೇ ಸಮರ್ಪಿಸಲ್ಪಟ್ಟಿದ್ದ ಒಂದು ಜನಾಂಗದ ಸದಸ್ಯನಾಗಿದ್ದುದರಿಂದ, ಅವನು ತನ್ನನ್ನು ದೇವರಿಗೆ ಸಮರ್ಪಿಸಿಕೊಳ್ಳುವ ಆವಶ್ಯಕತೆಯೂ ಇರಲಿಲ್ಲ. ಅವನ 30ನೇ ವಯಸ್ಸಿನ ದೀಕ್ಷಾಸ್ನಾನವು ಅವನಿಗೆ ಮಾತ್ರ ಅನ್ವಯಿಸುವ ಅದ್ವಿತೀಯ ದೀಕ್ಷಾಸ್ನಾನವಾಗಿದ್ದು, ತನ್ನ ಸ್ವರ್ಗೀಯ ಪಿತನಿಗೆ, ಆತನ ಇನ್ನೂ ಹೆಚ್ಚಿನ ಚಿತ್ತವನ್ನು ಮಾಡಲಿಕ್ಕಾಗಿ ತನ್ನನ್ನು ಸಮರ್ಪಿಸಿಕೊಳ್ಳುವುದನ್ನು ಸಂಕೇತಿಸಿತು.

6. ತನಗಾಗಿದ್ದ ದೇವರ ಚಿತ್ತವನ್ನು ಮಾಡುವುದರಲ್ಲಿ ಯೇಸು ಎಷ್ಟು ಗಂಭೀರತೆಯನ್ನು ತೋರಿಸಿದನು?

6 ಕ್ರಿಸ್ತ ಯೇಸುವಿಗಾಗಿದ್ದ ದೇವರ ಚಿತ್ತದಲ್ಲಿ ರಾಜ್ಯದ ಸಂಬಂಧದಲ್ಲಿ ಮಾಡಬೇಕಾಗಿದ್ದ ಚಟುವಟಿಕೆಗಳೂ ಸೇರಿದ್ದವು. (ಲೂಕ 8:⁠1) ಅಲ್ಲದೆ, ವಿಮೋಚನಾ ಯಜ್ಞವಾಗಿ ಮತ್ತು ಒಂದು ಹೊಸ ಒಡಂಬಡಿಕೆಗೆ ಆಧಾರವಾಗಿ ಅವನ ಪರಿಪೂರ್ಣ ಮಾನವ ಜೀವದ ಯಜ್ಞವೂ ಅದರಲ್ಲಿ ಸೇರಿತ್ತು. (ಮತ್ತಾಯ 20:28; 26:26-28; ಇಬ್ರಿಯ 10:5-10) ತನ್ನ ನೀರಿನ ದೀಕ್ಷಾಸ್ನಾನವು ಏನನ್ನು ಸಂಕೇತಿಸಿತೊ ಅದನ್ನು ಯೇಸು ಅತಿ ಗಂಭೀರವಾದುದಾಗಿ ವೀಕ್ಷಿಸಿದನು. ತನ್ನ ಗಮನವು ಬೇರೆ ಅಭಿರುಚಿಗಳ ಕಡೆಗೆ ಅಪಕರ್ಷಿಸಲ್ಪಡುವಂತೆ ಅವನು ಬಿಡಲಿಲ್ಲ. ತನ್ನ ಭೂಜೀವನದ ಕೊನೆಯ ವರೆಗೂ ಅವನು ದೇವರ ಚಿತ್ತವನ್ನು ನಂಬಿಗಸ್ತಿಕೆಯಿಂದ ನೆರವೇರಿಸುತ್ತಾ, ದೇವರ ರಾಜ್ಯದ ಸಾರುವಿಕೆಯನ್ನು ತನ್ನ ಮುಖ್ಯ ಕೆಲಸವಾಗಿ ಮಾಡಿದನು.​—⁠ಯೋಹಾನ 4:⁠34.

ಕ್ರೈಸ್ತ ಶಿಷ್ಯರ ನೀರಿನ ದೀಕ್ಷಾಸ್ನಾನ

7. ಸಾ.ಶ. 33ರ ಪಂಚಾಶತ್ತಮದಿಂದ ಹಿಡಿದು, ದೀಕ್ಷಾಸ್ನಾನದ ವಿಷಯದಲ್ಲಿ ಕ್ರೈಸ್ತರು ಏನು ಮಾಡಬೇಕೆಂದು ಹೇಳಲಾಯಿತು?

7 ಯೇಸುವಿನ ಪ್ರಥಮ ಶಿಷ್ಯರಿಗೆ ಯೋಹಾನನು ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸಿ, ಬಳಿಕ ಸ್ವರ್ಗರಾಜ್ಯದ ಭಾವೀ ಸದಸ್ಯರಾಗಿ ಅವರನ್ನು ಯೇಸುವಿನ ಬಳಿಗೆ ನಡೆಸಿದನು. (ಯೋಹಾನ 3:​25-30) ಬಳಿಕ, ಯೇಸುವಿನ ನಿರ್ದೇಶನದ ಕೆಳಗೆ ಈ ಶಿಷ್ಯರೂ ಕೆಲವರಿಗೆ ದೀಕ್ಷಾಸ್ನಾನ ಕೊಟ್ಟರು ಮತ್ತು ಈ ದೀಕ್ಷಾಸ್ನಾನಗಳಿಗೆ ಯೋಹಾನನು ಕೊಡುತ್ತಿದ್ದ ದೀಕ್ಷಾಸ್ನಾನದ ಸೂಚಿತಾರ್ಥವೇ ಇತ್ತು. (ಯೋಹಾನ 4:​1, 2) ಆದರೆ, ಸಾ.ಶ. 33ರ ಪಂಚಾಶತ್ತಮದಿಂದ ಹಿಡಿದು ಅವರು “ತಂದೆಯ, ಮಗನ, ಪವಿತ್ರಾತ್ಮದ ಹೆಸರಿನಲ್ಲಿ” ದೀಕ್ಷಾಸ್ನಾನ ಮಾಡಿಸುವ ಆಜ್ಞೆಯನ್ನು ನೆರವೇರಿಸಲು ತೊಡಗಿದರು. (ಮತ್ತಾಯ 28:​19, NW) ಅದರ ಅರ್ಥವನ್ನು ಪುನರ್ವಿಮರ್ಶಿಸುವುದು ಅತಿ ಪ್ರಯೋಜನಕರವೆಂದು ನೀವು ಕಂಡುಕೊಳ್ಳುವಿರಿ.

8. “ತಂದೆಯ . . . ಹೆಸರಿನಲ್ಲಿ” ದೀಕ್ಷಾಸ್ನಾನ ಹೊಂದುವುದರ ಅರ್ಥವೇನು?

8 “ತಂದೆಯ . . . ಹೆಸರಿನಲ್ಲಿ” ದೀಕ್ಷಾಸ್ನಾನ ಮಾಡಿಸುವುದು ಎಂಬುದರ ಅರ್ಥವೇನು? ಆ ಅರ್ಥವು, ಆತನ ನಾಮ, ಸ್ಥಾನ, ಅಧಿಕಾರ, ಉದ್ದೇಶ ಮತ್ತು ನಿಯಮಗಳನ್ನು ಅಂಗೀಕರಿಸುವುದು ಎಂದಾಗಿದೆ. ಇದರಲ್ಲಿ ಏನೆಲ್ಲ ಒಳಗೂಡಿದೆ ಎಂಬುದನ್ನು ಪರಿಗಣಿಸಿರಿ. (1) ಆ ನಾಮದ ಕುರಿತು, ಕೀರ್ತನೆ 83:18 ಹೇಳುವುದು: “ಯೆಹೋವನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನು.” (2) ಆತನ ಸ್ಥಾನದ ಬಗ್ಗೆ, 2 ಅರಸುಗಳು 19:15(NW) ತಿಳಿಸುವುದು: “ಯೆಹೋವನೇ, . . . ಸತ್ಯ ದೇವರು ನೀನೊಬ್ಬನೇ.” (3) ಆತನ ಅಧಿಕಾರದ ಕುರಿತು ಪ್ರಕಟನೆ 4:11 ಹೇಳುವುದು: “ಕರ್ತನೇ [“ಯೆಹೋವನೇ,” NW] ನಮ್ಮ ದೇವರೇ, ನೀನು ಪ್ರಭಾವ ಮಾನ ಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ; ಸಮಸ್ತವನ್ನು ಸೃಷ್ಟಿಸಿದಾತನು ನೀನೇ; ಎಲ್ಲವು ನಿನ್ನ ಚಿತ್ತದಿಂದಲೇ ಇದ್ದವು, ನಿನ್ನ ಚಿತ್ತದಿಂದಲೇ ನಿರ್ಮಿತವಾದವು.” (4) ಯೆಹೋವನು ಜೀವದಾತನೆಂಬುದನ್ನೂ, “ರಕ್ಷಣೆಯು ಯೆಹೋವನಿಂದಲೇ” ಆಗಿರುವುದರಿಂದ ಪಾಪ ಮತ್ತು ಮರಣಗಳಿಂದ ನಮ್ಮನ್ನು ರಕ್ಷಿಸಲು ಉದ್ದೇಶಿಸಿರುವವನು ಆತನೆಂದೂ ನಾವು ಒಪ್ಪಿಕೊಳ್ಳಬೇಕು. (ಕೀರ್ತನೆ 3:8; 36:9) (5) “ಯೆಹೋವನು ನಮ್ಮ ನ್ಯಾಯಾಧಿಪತಿ, ಯೆಹೋವನು ನಮಗೆ ಧರ್ಮವಿಧಾಯಕ, ಯೆಹೋವನು ನಮ್ಮ ರಾಜ” ಆಗಿರುವುದರಿಂದ ನಾವು ಯೆಹೋವನೇ ಪರಮ ನಿಯಮದಾತನೆಂದು ಅಂಗೀಕರಿಸುವುದು ಅಗತ್ಯ. (ಯೆಶಾಯ 33:22) ಆತನು ಈ ಮೇಲಿನ ಸಕಲ ಸ್ಥಾನಗಳನ್ನು ಹೊಂದಿರುವುದರಿಂದ, “ನಿನ್ನ ದೇವರಾಗಿರುವ ಕರ್ತನನ್ನು [“ಯೆಹೋವನನ್ನು,” NW] ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಬುದ್ಧಿಯಿಂದಲೂ ಪ್ರೀತಿಸಬೇಕು” ಎಂದು ನಮ್ಮನ್ನು ಪ್ರೋತ್ಸಾಹಿಸಲಾಗಿದೆ.​—⁠ಮತ್ತಾಯ 22:⁠37.

9. “ಮಗನ . . . ಹೆಸರಿನಲ್ಲಿ” ದೀಕ್ಷಾಸ್ನಾನ ಹೊಂದುವುದರ ಅರ್ಥವೇನು?

9 “ಮಗನ . . . ಹೆಸರಿನಲ್ಲಿ” ದೀಕ್ಷಾಸ್ನಾನವೆಂದರೇನು? ಯೇಸು ಕ್ರಿಸ್ತನ ಹೆಸರು, ಸ್ಥಾನ, ಮತ್ತು ಅಧಿಕಾರವನ್ನು ಒಪ್ಪಿಕೊಳ್ಳಬೇಕೆಂದು ಇದರ ಅರ್ಥ. ಅವನ ಹೆಸರಾದ ಯೇಸು ಎಂಬುದು “ಯೆಹೋವನು ರಕ್ಷಣೆಯಾಗಿದ್ದಾನೆ” ಎಂಬ ಅರ್ಥವನ್ನು ಕೊಡುತ್ತದೆ. ಅವನು ದೇವರ ಏಕಜಾತ ಪುತ್ರನು, ಅಂದರೆ ದೇವರ ಪ್ರಥಮ ಸೃಷ್ಟಿಯಾಗಿರುವುದರಿಂದಲೇ ಅವನಿಗೆ ಆ ಸ್ಥಾನಮಾನವು ದೊರೆಯುತ್ತದೆ. (ಮತ್ತಾಯ 16:​16; ಕೊಲೊಸ್ಸೆ 1:​15, 16) ಈ ಮಗನ ಕುರಿತು ಯೋಹಾನ 3:16 ಹೇಳುವುದು: “ದೇವರು ಲೋಕದ [ವಿಮೋಚಿಸಬಲ್ಲ ಮಾನವಕುಲದ] ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” ಯೇಸು ಮರಣಪರ್ಯಂತ ನಂಬಿಗಸ್ತನಾಗಿದ್ದುದರಿಂದ ದೇವರು ಅವನನ್ನು ಸತ್ತವರೊಳಗಿಂದ ಪುನರುತ್ಥಾನಗೊಳಿಸಿ ಅವನಿಗೆ ಇನ್ನೂ ಹೆಚ್ಚಿನ ಅಧಿಕಾರವನ್ನು ಕೊಟ್ಟನು. ಅಪೊಸ್ತಲ ಪೌಲನಿಗನುಸಾರ, ದೇವರು ಯೇಸುವನ್ನು ವಿಶ್ವದಲ್ಲೇ “ಅತ್ಯುನ್ನತ ಸ್ಥಾನಕ್ಕೆ,” ಅಂದರೆ ಯೆಹೋವನಿಗೆ ತಾನೇ ದ್ವಿತೀಯನಾಗಿರುವ ಸ್ಥಾನಕ್ಕೆ ಏರಿಸಿದನು. ಈ ಕಾರಣದಿಂದಲೇ, ಎಲ್ಲರೂ “ಯೇಸುವಿನ ಹೆಸರಿನಲ್ಲಿ ಅಡ್ಡಬಿದ್ದು ಯೇಸು ಕ್ರಿಸ್ತನನ್ನು ಒಡೆಯನೆಂದು ಪ್ರತಿಜ್ಞೆಮಾಡಿ ತಂದೆಯಾದ ದೇವರಿಗೆ ಘನವನ್ನು ಸಲ್ಲಿಸುವರು.” (ಫಿಲಿಪ್ಪಿ 2:​9-11) ಅಂದರೆ ಯೆಹೋವನಿಂದಲೇ ಬರುವ ಯೇಸುವಿನ ಆಜ್ಞೆಗಳಿಗೆ ನಾವು ವಿಧೇಯರಾಗಬೇಕೆಂಬುದೇ ಇದರ ಅರ್ಥ.​—⁠ಯೋಹಾನ 15:⁠10.

10. “ಪವಿತ್ರಾತ್ಮದ ಹೆಸರಿನಲ್ಲಿ” ದೀಕ್ಷಾಸ್ನಾನ ಹೊಂದುವುದರ ಅರ್ಥವೇನು?

10 ಹಾಗಾದರೆ “ಪವಿತ್ರಾತ್ಮದ ಹೆಸರಿನಲ್ಲಿ” ದೀಕ್ಷಾಸ್ನಾನ ಹೊಂದುವುದರ ಅರ್ಥವೇನು? ಪವಿತ್ರಾತ್ಮದ ಪಾತ್ರ ಮತ್ತು ಕಾರ್ಯವನ್ನು ಒಪ್ಪಿಕೊಳ್ಳುವುದು ಎಂದು ಇದರ ಅರ್ಥ. ಮತ್ತು ಪವಿತ್ರಾತ್ಮವೆಂದರೇನು? ಅದು ಯಾವುದರ ಮೂಲಕ ಯೆಹೋವನು ತನ್ನ ಉದ್ದೇಶಗಳನ್ನು ಸಾಧಿಸುತ್ತಾನೊ ಆ ಕಾರ್ಯಕಾರಿ ಶಕ್ತಿಯಾಗಿದೆ. ಯೇಸು ತನ್ನ ಹಿಂಬಾಲಕರಿಗೆ ಹೇಳಿದ್ದು: “ಆಗ ನಾನು ತಂದೆಯನ್ನು ಕೇಳಿಕೊಳ್ಳುವೆನು; ಆತನು ನಿಮಗೆ ಬೇರೊಬ್ಬ ಸಹಾಯಕನನ್ನು ಸದಾಕಾಲ ನಿಮ್ಮ ಸಂಗಡ ಇರುವದಕ್ಕೆ ಕೊಡುವನು. ಆ ಸಹಾಯಕನು ಯಾರಂದರೆ ಸತ್ಯದ ಆತ್ಮನೇ [“ಆತ್ಮವೇ,” NW].” (ಯೋಹಾನ 14:​16, 17) ಇದರಿಂದ ಅವರಿಗೆ ಯಾವ ಸಾಮರ್ಥ್ಯ ದೊರೆಯುವುದು? ಯೇಸು ಮುಂದುವರಿಸಿ ಹೇಳಿದ್ದು: “ಆದರೆ ಪವಿತ್ರಾತ್ಮ ನಿಮ್ಮ ಮೇಲೆ ಬರಲು ನೀವು ಬಲವನ್ನು ಹೊಂದಿ ಯೆರೂಸಲೇಮಿನಲ್ಲಿಯೂ ಎಲ್ಲಾ ಯೂದಾಯ ಸಮಾರ್ಯ ಸೀಮೆಗಳಲ್ಲಿಯೂ ಭೂಲೋಕದ ಕಟ್ಟಕಡೆಯ ವರೆಗೂ ಸಾಕ್ಷಿಗಳಾಗಿರಬೇಕು.” (ಅ. ಕೃತ್ಯಗಳು 1:8) ಈ ಪವಿತ್ರಾತ್ಮದ ಮೂಲಕ ಯೆಹೋವನು ಬೈಬಲಿನ ಬರೆವಣಿಗೆಯನ್ನೂ ಪ್ರೇರಿಸಿದನು: “ಯಾವ ಪ್ರವಾದನೆಯೂ ಎಂದೂ ಮನುಷ್ಯರ ಚಿತ್ತದಿಂದ ಉಂಟಾಗಲಿಲ್ಲ; ಮನುಷ್ಯರು ಪವಿತ್ರಾತ್ಮ ಪ್ರೇರಿತರಾಗಿ ದೇವರಿಂದ ಹೊಂದಿದ್ದನ್ನೇ ಮಾತಾಡಿದರು.” (2 ಪೇತ್ರ 1:21) ಹೀಗೆ ನಾವು ಬೈಬಲನ್ನು ಅಧ್ಯಯನ ಮಾಡುವಾಗ ಪವಿತ್ರಾತ್ಮದ ಪಾತ್ರವನ್ನು ಒಪ್ಪಿಕೊಳ್ಳುತ್ತೇವೆ. ನಾವು ಪವಿತ್ರಾತ್ಮವನ್ನು ಒಪ್ಪಿಕೊಳ್ಳುವ ಇನ್ನೊಂದು ವಿಧವು, “ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ದಯೆ ಉಪಕಾರ ನಂಬಿಕೆ ಸಾಧುತ್ವ ಶಮೆದಮೆ”​—⁠ಇಂತಹ ‘ಆತ್ಮದ ಫಲ’ಗಳನ್ನು ಫಲಿಸುವಂತಾಗಲು ಸಹಾಯಕ್ಕಾಗಿ ಯೆಹೋವನನ್ನು ಕೇಳುವುದೇ ಆಗಿದೆ.​—⁠ಗಲಾತ್ಯ 5:​22, 23.

11. (ಎ) ನಮ್ಮ ದಿನಗಳಲ್ಲಿ ದೀಕ್ಷಾಸ್ನಾನದ ನಿಜ ಸೂಚಕಾರ್ಥವೇನು? (ಬಿ) ದೀಕ್ಷಾಸ್ನಾನವು ಸಾಯುವುದು ಮತ್ತು ಪುನಃ ಎಬ್ಬಿಸಲ್ಪಡುವಂತಿರುವುದು ಹೇಗೆ?

11 ಯೇಸುವಿನ ಆಜ್ಞಾನುಸಾರ ದೀಕ್ಷಾಸ್ನಾನ ಪಡೆದವರಲ್ಲಿ ಪ್ರಥಮರು, ಸಾ.ಶ. 33 ಮೊದಲ್ಗೊಂಡು ಹಾಗೆ ಮಾಡಿದ ಯೆಹೂದ್ಯರೂ ಯೆಹೂದಿ ಮತಾಂತರಿಗಳೂ ಆಗಿದ್ದರು. ಆ ಬಳಿಕ ಸ್ವಲ್ಪದರಲ್ಲಿ, ಕ್ರೈಸ್ತ ಶಿಷ್ಯರಾಗುವ ಸದವಕಾಶವು ಸಮಾರ್ಯದವರಿಗೂ ಕೊಡಲ್ಪಟ್ಟಿತು. ಬಳಿಕ, ಸಾ.ಶ. 36ರಲ್ಲಿ, ಈ ಕರೆಯು ಸುನ್ನತಿಯಾಗದಿದ್ದ ಯೆಹೂದ್ಯೇತರರನ್ನು ಆವರಿಸಿತು. ಸಮಾರ್ಯದವರೂ ಯೆಹೂದ್ಯೇತರರೂ ದೀಕ್ಷಾಸ್ನಾನ ಹೊಂದುವ ಮೊದಲು, ಅವರು ಯೆಹೋವನನ್ನು ಆತನ ಪುತ್ರನ ಶಿಷ್ಯರಾಗಿ ಸೇವಿಸಲು ವೈಯಕ್ತಿಕ ಸಮರ್ಪಣೆಯನ್ನು ಮಾಡಿಕೊಳ್ಳಬೇಕಾಗಿತ್ತು. ಇಂದಿನ ವರೆಗೂ ಇದು ಕ್ರೈಸ್ತ ನೀರಿನ ದೀಕ್ಷಾಸ್ನಾನದ ಸೂಚಕಾರ್ಥವಾಗಿ ಮುಂದುವರಿಯುತ್ತಿದೆ. ದೀಕ್ಷಾಸ್ನಾನವು ಸಂಕೇತಾರ್ಥಕ ಹೂಳಿಡುವಿಕೆಯಾಗಿರುವುದರಿಂದ, ನೀರಿನಲ್ಲಿ ಪೂರ್ತಿಯಾದ ನಿಮಜ್ಜನವು ಈ ವೈಯಕ್ತಿಕ ಸಮರ್ಪಣೆಯ ಸಮಂಜಸವಾದ ಸಂಕೇತವಾಗಿದೆ. ದೀಕ್ಷಾಸ್ನಾನದ ನೀರಿನೊಳಗೆ ನೀವು ಮುಳುಗಿಸಲ್ಪಡುವುದು, ನಿಮ್ಮ ಪೂರ್ವದ ಜೀವನಪಥಕ್ಕೆ ನೀವು ಸತ್ತಿರುವುದನ್ನು ಪ್ರತಿನಿಧಿಸುತ್ತದೆ. ಆ ನೀರಿನಿಂದ ನೀವು ಎಬ್ಬಿಸಲ್ಪಡುವುದು, ದೇವರ ಚಿತ್ತವನ್ನು ಮಾಡಲು ನಿಮ್ಮನ್ನು ಜೀವಂತಗೊಳಿಸಲಾಗಿದೆ ಎಂಬುದನ್ನು ಸೂಚಿಸುತ್ತದೆ. ಈ ‘ಒಂದೇ ಸ್ನಾನದೀಕ್ಷೆ’ ಸತ್ಯ ಕ್ರೈಸ್ತರಾಗುವ ಎಲ್ಲರಿಗೆ ಅನ್ವಯಿಸುತ್ತದೆ. ದೀಕ್ಷಾಸ್ನಾನ ಹೊಂದಿದಾಗ ಅವರು ಯೆಹೋವನ ಕ್ರೈಸ್ತ ಸಾಕ್ಷಿಗಳಾಗುತ್ತಾರೆ, ದೇವರ ನೇಮಿತ ಶುಶ್ರೂಷಕರಾಗುತ್ತಾರೆ.​—⁠ಎಫೆಸ 4:5; 2 ಕೊರಿಂಥ 6:3, 4.

12. ಕ್ರೈಸ್ತ ನೀರಿನ ದೀಕ್ಷಾಸ್ನಾನವು ಯಾವುದಕ್ಕೆ ಅನುರೂಪವಾಗಿದೆ, ಮತ್ತು ಹೇಗೆ?

12 ಇಂತಹ ದೀಕ್ಷಾಸ್ನಾನಕ್ಕೆ ದೇವರ ದೃಷ್ಟಿಯಲ್ಲಿ ಮಹಾ ಪರಿಹಾರಕ ಮೌಲ್ಯವಿದೆ. ಉದಾಹರಣೆಗೆ, ನೋಹನೂ ಅವನ ಕುಟುಂಬವೂ ಜಲಪ್ರಳಯದಲ್ಲಿ ಪಾರಾಗಲು ಕಟ್ಟಿದ ನಾವೆಯ ಕುರಿತು ಮಾತಾಡಿದ ಬಳಿಕ, ಅಪೊಸ್ತಲ ಪೇತ್ರನು ಬರೆದುದು: “ಆ ನೀರಿಗೆ ಅನುರೂಪವಾದ ದೀಕ್ಷಾಸ್ನಾನವು ಯೇಸು ಕ್ರಿಸ್ತನ ಪುನರುತ್ಥಾನದ ಮೂಲಕ ಈಗ ನಮ್ಮನ್ನು ರಕ್ಷಿಸುತ್ತದೆ; ಅದು ಮೈಕೊಳೆಯನ್ನು ಹೋಗಲಾಡಿಸುವಂಥದಲ್ಲ, ಒಳ್ಳೇ ಮನಸ್ಸಾಕ್ಷಿ ಬೇಕೆಂದು ದೇವರಿಗೆ ವಿಜ್ಞಾಪಿಸಿಕೊಳ್ಳುವಂಥದೇ.” (ಓರೆ ಅಕ್ಷರಗಳು ನಮ್ಮವು.) (1 ಪೇತ್ರ 3:21) ಆ ನಾವೆಯು, ನೋಹನು ದೇವರು ಕೊಟ್ಟಿದ್ದ ಕೆಲಸವನ್ನು ನಂಬಿಗಸ್ತಿಕೆಯಿಂದ ಮಾಡಿದ್ದನು ಎಂಬುದರ ಪ್ರತ್ಯಕ್ಷ ಪುರಾವೆಯಾಗಿತ್ತು. ಆ ನಾವೆಯ ಕೆಲಸವು ಮುಗಿದ ಬಳಿಕ “ಆ ಕಾಲದಲ್ಲಿದ್ದ ಲೋಕವು ಜಲಪ್ರಲಯದಲ್ಲಿ ನಾಶವಾಯಿತು.” (2 ಪೇತ್ರ 3:6) ಆದರೆ ನೋಹನೂ ಅವನ ಕುಟುಂಬವೂ ಆಗಿದ್ದ, “ಎಂಟೇ ಜನರು ಸೇರಿ ನೀರಿನ ಮೂಲಕ ರಕ್ಷಣೆಹೊಂದಿದರು.”​—⁠1 ಪೇತ್ರ 3:⁠20.

13. ನೀರಿನ ದೀಕ್ಷಾಸ್ನಾನದ ಮೂಲಕ ಒಬ್ಬ ಕ್ರೈಸ್ತನು ಯಾವುದರಿಂದ ರಕ್ಷಿಸಲ್ಪಡುತ್ತಾನೆ?

13 ಇಂದು ಪುನರುತ್ಥಿತ ಕ್ರಿಸ್ತನಲ್ಲಿಟ್ಟ ನಂಬಿಕೆಯ ಆಧಾರದ ಮೇರೆಗೆ ಯೆಹೋವನಿಗೆ ತಮ್ಮನ್ನು ಸಮರ್ಪಿಸಿಕೊಳ್ಳುವವರು, ಆ ಸಮರ್ಪಣೆಯ ಸಂಕೇತವಾಗಿ ದೀಕ್ಷಾಸ್ನಾನ ಹೊಂದುತ್ತಾರೆ. ಅವರು ನಮ್ಮ ದಿನಗಳಿಗಾಗಿರುವ ದೇವರ ಚಿತ್ತವನ್ನು ಮಾಡಲು ತೊಡಗಿ ಹೀಗೆ ಈಗಿನ ದುಷ್ಟ ಲೋಕದಿಂದ ರಕ್ಷಿಸಲ್ಪಡುತ್ತಾರೆ. (ಗಲಾತ್ಯ 1:​3, 4) ಅವರು ಈಗಿನ ದುಷ್ಟ ವಿಷಯಗಳ ವ್ಯವಸ್ಥೆಯೊಂದಿಗೆ ನಾಶನಾಭಿಮುಖವಾಗಿ ಹೋಗುವುದಿಲ್ಲ. ಅವರು ಈ ನಾಶನದಿಂದ ರಕ್ಷಿಸಲ್ಪಡುತ್ತಾರೆ ಮತ್ತು ದೇವರು ಅವರಿಗೆ ಒಂದು ಒಳ್ಳೆಯ ಮನಸ್ಸಾಕ್ಷಿಯನ್ನು ಕೊಡುತ್ತಾನೆ. ಅಪೊಸ್ತಲ ಯೋಹಾನನು ದೇವರ ಸೇವಕರಿಗೆ ಆಶ್ವಾಸನೆ ಕೊಡುವುದು: “ಲೋಕವೂ ಅದರ ಆಶೆಯೂ ಗತಿಸಿ ಹೋಗುತ್ತವೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.”​—⁠1 ಯೋಹಾನ 2:⁠17.

ನಮ್ಮ ಜವಾಬ್ದಾರಿಗಳಿಗನುಸಾರ ಬದುಕುವುದು

14. ದೀಕ್ಷಾಸ್ನಾನವು ತಾನೇ ರಕ್ಷಣೆಯ ಖಾತರಿಯಾಗಿರುವುದಿಲ್ಲವೇಕೆ?

14 ಆದರೆ ದೀಕ್ಷಾಸ್ನಾನವೇ ನಮ್ಮ ರಕ್ಷಣೆಯ ಖಾತರಿಯನ್ನು ಕೊಡುತ್ತದೆಂದು ತೀರ್ಮಾನಿಸುವುದು ತಪ್ಪು. ಒಬ್ಬನು ತನ್ನನ್ನು ಯೆಹೋವನಿಗೆ ಯೇಸು ಕ್ರಿಸ್ತನ ಮೂಲಕ ನಿಜವಾಗಿಯೂ ಸಮರ್ಪಿಸಿಕೊಂಡಿದ್ದು, ಆ ಬಳಿಕ ದೇವರ ಚಿತ್ತವನ್ನು ನೆರವೇರಿಸಿ ಅಂತ್ಯದ ತನಕ ನಂಬಿಗಸ್ತನಾಗಿರುವಲ್ಲಿ ಮಾತ್ರ ಅದಕ್ಕೆ ಬೆಲೆಯಿದೆ. “ಕಡೇ ವರೆಗೂ ತಾಳುವವನು ರಕ್ಷಣೆಹೊಂದುವನು.”​—⁠ಮತ್ತಾಯ 24:⁠13.

15. (ಎ) ಸ್ನಾತ ಕ್ರೈಸ್ತರಿಗೆ ಇಂದು ಇರುವ ದೇವರ ಚಿತ್ತವೇನು? (ಬಿ) ನಮ್ಮ ಜೀವಿತಗಳಲ್ಲಿ ಕ್ರೈಸ್ತ ಶಿಷ್ಯತ್ವವು ಎಷ್ಟು ಪ್ರಾಮುಖ್ಯವಾಗಿರಬೇಕು?

15 ಯೇಸುವಿಗಾಗಿದ್ದ ದೇವರ ಚಿತ್ತದಲ್ಲಿ, ಅವನು ಮನುಷ್ಯನಾಗಿ ತನ್ನ ಜೀವಿತವನ್ನು ಹೇಗೆ ಉಪಯೋಗಿಸುವನು ಎಂಬ ವಿಷಯವೂ ಒಳಗೂಡಿತ್ತು. ಅವನು ತನ್ನ ಜೀವವನ್ನು ಮರಣದಲ್ಲಿ ಯಜ್ಞವಾಗಿ ಅರ್ಪಿಸಬೇಕಾಗಿತ್ತು. ನಮ್ಮ ವಿಷಯದಲ್ಲಾದರೊ, ನಾವು ನಮ್ಮ ದೇಹಗಳನ್ನು ದೇವರಿಗೆ ಅರ್ಪಿಸಬೇಕಾಗಿದೆ ಮತ್ತು ದೇವರ ಚಿತ್ತವನ್ನು ಮಾಡುತ್ತಾ ನಾವು ಸ್ವತ್ಯಾಗದ ಜೀವನವನ್ನು ಮುಂದುವರಿಸಬೇಕಾಗಿದೆ. (ರೋಮಾಪುರ 12:​1, 2) ಆದರೆ ನಾವು ಕೆಲವೊಮ್ಮೆ ಕೂಡ, ಬೇಕುಬೇಕೆಂದು ಲೋಕದವರಂತೆ ನಡೆದರೆ ಅಥವಾ ಸ್ವಾರ್ಥದ ಬೆನ್ನಟ್ಟುವಿಕೆಗಳ ಸುತ್ತಲೂ ನಮ್ಮ ಜೀವನವನ್ನು ಕಟ್ಟಿ, ದೇವರಿಗೆ ಕೇವಲ ನಾಮಮಾತ್ರದ ಸೇವೆಯನ್ನು ಸಲ್ಲಿಸುವುದಾದರೆ, ನಾವು ದೇವರ ಚಿತ್ತವನ್ನು ಖಂಡಿತವಾಗಿಯೂ ಮಾಡುವವರಾಗಿರುವುದಿಲ್ಲ. (1 ಪೇತ್ರ 4:1-3; 1 ಯೋಹಾನ 2:15, 16) ನಿತ್ಯಜೀವವನ್ನು ಪಡೆಯಬೇಕಾದರೆ ಒಬ್ಬನು ಏನು ಮಾಡಬೇಕೆಂದು ಯೆಹೂದ್ಯನೊಬ್ಬನು ಪ್ರಶ್ನಿಸಿದಾಗ, ನೈತಿಕವಾಗಿ ನಿರ್ಮಲವಾಗಿ ಜೀವಿಸುವ ಪ್ರಾಧಾನ್ಯವನ್ನು ಯೇಸು ಒಪ್ಪಿಕೊಂಡನು. ಆದರೆ ಆ ಬಳಿಕ ಅದಕ್ಕಿಂತ ಉತ್ತಮವಾದ ಒಂದು ವಿಷಯಕ್ಕೆ, ಕ್ರೈಸ್ತ ಶಿಷ್ಯನಾಗುವುದರ, ಕ್ರಿಸ್ತನ ಹಿಂಬಾಲಕನಾಗುವುದರ ಅಗತ್ಯಕ್ಕೆ ಅವನು ಸೂಚಿಸಿದನು. ಅದು ಜೀವನದ ಮುಖ್ಯ ವಿಷಯವಾಗಿರಬೇಕು. ಪ್ರಾಪಂಚಿಕ ಬೆನ್ನಟ್ಟುವಿಕೆಗಳ ಅನಂತರದ ದ್ವಿತೀಯ ಸ್ಥಾನದಲ್ಲಿ ಅದು ಬರಬಾರದು.​—⁠ಮತ್ತಾಯ 19:​16-21.

16. (ಎ) ರಾಜ್ಯದ ಸಂಬಂಧದಲ್ಲಿ ಎಲ್ಲಾ ಕ್ರೈಸ್ತರಿಗೆ ಯಾವ ಜವಾಬ್ದಾರಿಯಿದೆ? (ಬಿ) ಪುಟಗಳು 116 ಮತ್ತು 117ರಲ್ಲಿ ಚಿತ್ರಿಸಿರುವಂತೆ, ರಾಜ್ಯ ಸೇವೆಯನ್ನು ಮಾಡುವ ಕೆಲವು ಪರಿಣಾಮಕಾರಿ ವಿಧಗಳಾವುವು? (ಸಿ) ಸಾಕ್ಷಿಕಾರ್ಯದಲ್ಲಿ ನಮ್ಮ ಪೂರ್ಣ ಹೃದಯದ ಭಾಗವಹಿಸುವಿಕೆಯು ಯಾವುದರ ಪುರಾವೆಯನ್ನು ಕೊಡುತ್ತದೆ?

16 ಯೇಸುವಿಗಾಗಿದ್ದ ದೇವರ ಚಿತ್ತದಲ್ಲಿ ದೇವರ ರಾಜ್ಯದ ಸಂಬಂಧವಾದ ಮಹತ್ವದ ಕಾರ್ಯವು ಒಳಗೂಡಿತ್ತು ಎಂಬುದನ್ನು ಪುನಃ ಒತ್ತಿಹೇಳಬೇಕಾಗುತ್ತದೆ. ಯೇಸು ರಾಜನಾಗಿ ಅಭಿಷೇಕಿಸಲ್ಪಟ್ಟಿದ್ದನು. ಆದರೆ ಭೂಮಿಯಲ್ಲಿದ್ದಾಗ, ಅವನು ರಾಜ್ಯದ ವಿಷಯದಲ್ಲಿ ಹುರುಪಿನ ಸಾಕ್ಷಿಯನ್ನೂ ಕೊಟ್ಟನು. ನಮಗೂ ಅಂತಹದ್ದೇ ಸಾಕ್ಷಿಕಾರ್ಯವನ್ನು ಮಾಡಲಿಕ್ಕಿದೆ, ಮತ್ತು ಅದರಲ್ಲಿ ಪೂರ್ಣ ಹೃದಯದಿಂದ ಭಾಗವಹಿಸಲು ನಮಗೆ ಸಕಾರಣಗಳಿವೆ. ಹಾಗೆ ಮಾಡುವುದರಿಂದ ನಾವು ಯೆಹೋವನ ಪರಮಾಧಿಕಾರಕ್ಕೆ ಕೃತಜ್ಞತೆಯನ್ನೂ ಜೊತೆ ಮಾನವರಿಗೆ ಪ್ರೀತಿಯನ್ನೂ ತೋರಿಸುತ್ತೇವೆ. (ಮತ್ತಾಯ 22:​36-40) ರಾಜ್ಯ ಘೋಷಕರಾಗಿರುವ ಎಲ್ಲಾ ಜೊತೆ ಆರಾಧಕರೊಂದಿಗೆ ನಾವು ಲೋಕವ್ಯಾಪಕವಾಗಿ ಐಕ್ಯವಾಗಿದ್ದೇವೆಂದೂ ನಾವು ತೋರಿಸುತ್ತೇವೆ. ಹೀಗೆ, ಭೌಗೋಳಿಕ ಐಕ್ಯದಲ್ಲಿ ಜೊತೆಗೂಡುತ್ತಾ, ಆ ರಾಜ್ಯದ ಭೂಕ್ಷೇತ್ರದಲ್ಲಿ ದೊರೆಯುವ ನಿತ್ಯಜೀವದ ಗುರಿಯ ಕಡೆಗೆ ನಾವು ಮುಂದೆ ಸಾಗುತ್ತೇವೆ.

ಪುನರ್ವಿಮರ್ಶೆಯ ಚರ್ಚೆ

• ಯೇಸುವಿನ ದೀಕ್ಷಾಸ್ನಾನ ಮತ್ತು ಇಂದಿನ ನೀರಿನ ದೀಕ್ಷಾಸ್ನಾನದ ಮಧ್ಯೆ ಯಾವ ಹೋಲಿಕೆಗಳೂ ವ್ಯತ್ಯಾಸಗಳೂ ಇವೆ?

• “ತಂದೆಯ, ಮಗನ, ಪವಿತ್ರಾತ್ಮದ ಹೆಸರಿನಲ್ಲಿ” ದೀಕ್ಷಾಸ್ನಾನ ಹೊಂದುವುದರ ಅರ್ಥವೇನು?

• ಕ್ರೈಸ್ತ ನೀರಿನ ದೀಕ್ಷಾಸ್ನಾನದ ಜವಾಬ್ದಾರಿಗಳಿಗನುಸಾರ ಜೀವಿಸುವುದರಲ್ಲಿ ಏನು ಒಳಗೂಡಿದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 116, 117ರಲ್ಲಿರುವ ಚಿತ್ರಗಳು]

ರಾಜ್ಯವನ್ನು ಘೋಷಿಸುವ ಕೆಲವು ವಿಧಗಳು

ಮನೆಯಿಂದ ಮನೆಗೆ

ಸಂಬಂಧಿಕರಿಗೆ

ಸಹೋದ್ಯೋಗಿಗಳಿಗೆ

ಸಹಪಾಠಿಗಳಿಗೆ

ಬೀದಿಗಳಲ್ಲಿ

ಆಸಕ್ತರನ್ನು ಭೇಟಿ ಮಾಡಲು ಪುನಃ ಹೋಗುವುದು

ಮನೆ ಬೈಬಲ್‌ ಅಧ್ಯಯನಗಳಲ್ಲಿ