ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪುನರುತ್ಥಾನದ ನಿರೀಕ್ಷೆಗಿರುವ ಶಕ್ತಿ

ಪುನರುತ್ಥಾನದ ನಿರೀಕ್ಷೆಗಿರುವ ಶಕ್ತಿ

ಅಧ್ಯಾಯ ಒಂಬತ್ತು

ಪುನರುತ್ಥಾನದ ನಿರೀಕ್ಷೆಗಿರುವ ಶಕ್ತಿ

1. ಪುನರುತ್ಥಾನದ ನಿರೀಕ್ಷೆಯಿಲ್ಲದಿರುವಲ್ಲಿ, ಮೃತರಿಗೆ ಯಾವ ಪ್ರತೀಕ್ಷೆಯಿರುವುದು?

ನೀವು ಪ್ರಿಯರನ್ನು ಮರಣದಲ್ಲಿ ಕಳೆದುಕೊಂಡಿದ್ದೀರೊ? ಪುನರುತ್ಥಾನವು ಇಲ್ಲದಿರುವಲ್ಲಿ ಅವರನ್ನು ಪುನಃ ಕಾಣುವ ನಿರೀಕ್ಷೆಯೇ ಇರುವುದಿಲ್ಲ. ಅವರು ಸದಾ ಬೈಬಲು ವರ್ಣಿಸುವಂತಹ ಈ ಸ್ಥಿತಿಯಲ್ಲಿರುವರು: “ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ; . . . ನೀನು ಸೇರಬೇಕಾದ ಪಾತಾಳದಲ್ಲಿ [ಸಮಾಧಿಯಲ್ಲಿ] ಯಾವ ಕೆಲಸವೂ ಯುಕ್ತಿಯೂ ತಿಳುವಳಿಕೆಯೂ ಜ್ಞಾನವೂ ಇರುವದಿಲ್ಲ.”​—⁠ಪ್ರಸಂಗಿ 9:5, 10.

2. ಪುನರುತ್ಥಾನದ ಮೂಲಕ ಯಾವ ಆಶ್ಚರ್ಯಕರವಾದ ಪ್ರತೀಕ್ಷೆಯನ್ನು ಸಾಧ್ಯಗೊಳಿಸಲಾಗಿದೆ?

2 ಆದರೆ ಯೆಹೋವನು ಕರುಣಾಪೂರ್ವಕವಾಗಿ ಪುನರುತ್ಥಾನದ ಏರ್ಪಾಡಿನ ಮೂಲಕ, ಮೃತರಾಗಿರುವ ಅಗಣಿತ ಜನರಿಗೆ ಅವರು ಮೃತಾವಸ್ಥೆಯಿಂದ ಹಿಂದಿರುಗಿ ಬಂದು ನಿತ್ಯಜೀವವನ್ನು ಅನುಭವಿಸುವ ಅಮೂಲ್ಯ ಸಂದರ್ಭವನ್ನು ತೆರೆದಿದ್ದಾನೆ. ಇದರ ಅರ್ಥ, ಒಂದು ದಿನ ದೇವರ ನೂತನ ಲೋಕದಲ್ಲಿ, ನೀವು ಮರಣದಲ್ಲಿ ನಿದ್ರೆ ಹೋಗಿರುವ ಪ್ರಿಯರೊಂದಿಗೆ ಪುನರ್ಮಿಲನವಾಗುವ ಹಾರ್ದಿಕ ನಿರೀಕ್ಷೆ ನಿಮಗಿರಬಲ್ಲದೆಂದೇ.​—⁠ಮಾರ್ಕ 5:35, 41, 42; ಅ. ಕೃತ್ಯಗಳು 9:36-41.

3. (ಎ) ಯೆಹೋವನ ಉದ್ದೇಶವನ್ನು ಸಾಧಿಸುವುದರಲ್ಲಿ ಪುನರುತ್ಥಾನದ ನಿರೀಕ್ಷೆಯು ಯಾವ ವಿಧಗಳಲ್ಲಿ ಪ್ರಾಮುಖ್ಯವಾಗಿ ಪರಿಣಮಿಸಿದೆ? (ಬಿ) ಪುನರುತ್ಥಾನದ ನಿರೀಕ್ಷೆಯು ವಿಶೇಷವಾಗಿ ಯಾವಾಗ ನಮಗೆ ಶಕ್ತಿಯ ಒಂದು ಮೂಲವಾಗಿರುತ್ತದೆ?

3 ಈ ಪುನರುತ್ಥಾನ ನಿರೀಕ್ಷೆಯ ಕಾರಣ ನಮಗೆ ವಿಕೃತವಾದ ಮರಣಭಯವಿರಬೇಕೆಂದಿರುವುದಿಲ್ಲ. ಯೆಹೋವನು ತನ್ನ ನಂಬಿಗಸ್ತ ಸೇವಕರಿಗೆ ಶಾಶ್ವತ ಹಾನಿಯಾಗದಂತೆ, “ಒಬ್ಬ ಮನುಷ್ಯನು ಪ್ರಾಣವನ್ನು ಉಳಿಸಿಕೊಳ್ಳುವದಕ್ಕೋಸ್ಕರ ತನ್ನ ಸರ್ವಸ್ವವನ್ನೂ ಕೊಡುವನು” ಎಂಬ ಸೈತಾನನ ದ್ವೇಷಪೂರ್ಣವಾದ ಆರೋಪವನ್ನು ರುಜುಪಡಿಸಲು ಅವನು ವಿಪರೀತವಾಗಿ ಪ್ರಯತ್ನಿಸುವಂತೆ ಬಿಡಲು ಸಮರ್ಥನಾಗಿದ್ದಾನೆ. (ಯೋಬ 2:4) ಯೇಸು ಮರಣದ ವರೆಗೂ ದೇವರಿಗೆ ನಂಬಿಗಸ್ತನಾಗಿದ್ದುದರಿಂದ ದೇವರು ಅವನನ್ನು ಸ್ವರ್ಗೀಯ ಜೀವನಕ್ಕೆ ಪುನರುತ್ಥಾನಗೊಳಿಸಿದನು. ಹೀಗೆ ಯೇಸು ತನ್ನ ಪರಿಪೂರ್ಣ ಮಾನವ ಯಜ್ಞದ ಮೌಲ್ಯವನ್ನು ತನ್ನ ತಂದೆಯ ಸ್ವರ್ಗೀಯ ಸಿಂಹಾಸನದ ಮುಂದೆ ಅರ್ಪಿಸಿ ನಮಗೆ ಜೀವರಕ್ಷಕ ಪ್ರಯೋಜನವನ್ನು ತರಲು ಶಕ್ತನಾದನು. ಈ ಪುನರುತ್ಥಾನದ ಮೂಲಕ, ಕ್ರಿಸ್ತನ ಜೊತೆ ಬಾಧ್ಯಸ್ಥರಾದ ‘ಚಿಕ್ಕ ಹಿಂಡಿನ’ ವರ್ಗಕ್ಕೂ ಅವನ ಸ್ವರ್ಗೀಯ ರಾಜ್ಯದಲ್ಲಿ ಅವನೊಂದಿಗೆ ಐಕ್ಯರಾಗುವ ನಿರೀಕ್ಷೆಯಿದೆ. (ಲೂಕ 12:32) ಬೇರೆಯವರಿಗೆ, ಭೂಪರದೈಸಿನಲ್ಲಿ ನಿತ್ಯಜೀವಕ್ಕೆ ಪುನರುತ್ಥಾನವಾಗುವ ನಿರೀಕ್ಷೆಯಿದೆ. (ಕೀರ್ತನೆ 37:​11, 29) ಎಲ್ಲಾ ಕ್ರೈಸ್ತರೂ ಮರಣಕ್ಕೆ ಮುಖಾಮುಖಿಯಾಗಿಸುವಂಥ ಪರೀಕ್ಷೆಗಳನ್ನು ಅನುಭವಿಸುವಾಗ, ಈ ಪುನರುತ್ಥಾನದ ನಿರೀಕ್ಷೆಯು ತಮಗೆ “ಬಲಾಧಿಕ್ಯ”ವನ್ನು ಕೊಡುತ್ತದೆಂದು ಕಂಡುಕೊಳ್ಳುತ್ತಾರೆ.​—⁠2 ಕೊರಿಂಥ 4:⁠7.

ಕ್ರೈಸ್ತ ನಂಬಿಕೆಗೆ ತಳಹದಿಯಾಗಿರಲು ಕಾರಣ

4. (ಎ) ಪುನರುತ್ಥಾನ ನಂಬಿಕೆಯು ಯಾವ ಅರ್ಥದಲ್ಲಿ “ಪ್ರಥಮಬೋಧನೆ” ಆಗಿದೆ? (ಬಿ) ಸಾಮಾನ್ಯ ಜಗತ್ತಿಗೆ ಪುನರುತ್ಥಾನವು ಏನನ್ನು ಅರ್ಥೈಸುತ್ತದೆ?

4ಇಬ್ರಿಯ 6:​1, 2ರಲ್ಲಿ ತಿಳಿಸಲ್ಪಟ್ಟಿರುವಂತೆ, ಪುನರುತ್ಥಾನವು “ಪ್ರಥಮಬೋಧನೆ” ಆಗಿದೆ. ಇದು ನಂಬಿಕೆಯ ತಳಹದಿಯಾಗಿದೆ. ಇದಿಲ್ಲದಿರುವಲ್ಲಿ ನಾವು ಎಂದಿಗೂ ಪ್ರೌಢ ಕ್ರೈಸ್ತರಾಗೆವು. (1 ಕೊರಿಂಥ 15:​16-19) ಆದರೂ, ಬೈಬಲಿನ ಪುನರುತ್ಥಾನದ ಬೋಧನೆಯು ಸಾಮಾನ್ಯವಾಗಿ ಲೋಕದ ಆಲೋಚನೆಗೆ ವಿಚಿತ್ರವಾಗಿದೆ. ಆತ್ಮಿಕವಾಗಿ ಕೊರತೆಯುಳ್ಳವರಾಗಿರುವುದರಿಂದ ಹೆಚ್ಚೆಚ್ಚು ಜನರು ಈ ಜೀವವೇ ವಾಸ್ತವ ಜೀವವೆಂದೆಣಿಸುತ್ತಾರೆ. ಆದಕಾರಣ ಅವರು ಸುಖಾನುಭವವನ್ನು ಬೆನ್ನಟ್ಟುತ್ತಾ ಜೀವಿಸುತ್ತಾರೆ. ಇನ್ನು ಸಾಂಪ್ರದಾಯಿಕ ಧರ್ಮಾನುಯಾಯಿಗಳು, ಕ್ರೈಸ್ತಪ್ರಪಂಚದ ಒಳಗಿರಲಿ, ಹೊರಗಿರಲಿ, ತಮ್ಮೊಳಗೆ ಅಮರವಾದ ಒಂದು ಆತ್ಮವಿದೆ ಎಂದೆಣಿಸುತ್ತಾರೆ. ಆದರೆ ಆ ನಂಬಿಕೆಯು ಬೈಬಲಿನ ಪುನರುತ್ಥಾನದ ಬೋಧನೆಗೆ ಹೊಂದಿಕೆಯಲ್ಲಿಲ್ಲ, ಏಕೆಂದರೆ, ಮಾನವರಲ್ಲಿ ಮರಣಾನಂತರ ಜೀವಿಸುವ ಒಂದು ಆತ್ಮವಿರುವಲ್ಲಿ ಪುನರುತ್ಥಾನದ ಅಗತ್ಯವಾದರೂ ಏನಿದೆ? ಈ ಎರಡು ನಂಬಿಕೆಗಳನ್ನು ಒಂದುಗೂಡಿಸುವ ಪ್ರಯತ್ನವು ನಿರೀಕ್ಷೆಯನ್ನು ಹುಟ್ಟಿಸುವ ಬದಲಿಗೆ ಹೆಚ್ಚು ಗೊಂದಲಕ್ಕೆ ಕಾರಣವಾಗುತ್ತದೆ. ಹಾಗಾದರೆ ಸತ್ಯವನ್ನು ತಿಳಿಯಬಯಸುವ ಪ್ರಾಮಾಣಿಕ ಹೃದಯಿಗಳಿಗೆ ನಾವು ಹೇಗೆ ಸಹಾಯ ನೀಡಬಲ್ಲೆವು?

5. (ಎ) ಒಬ್ಬನು ಪುನರುತ್ಥಾನದ ನಂಬಿಕೆಯನ್ನು ಅರ್ಥಮಾಡಿಕೊಳ್ಳುವ ಮೊದಲು, ಅವನು ಏನು ತಿಳಿಯಬೇಕಾಗಿದೆ? (ಬಿ) ಮೃತರ ಸ್ಥಿತಿಯನ್ನು ವಿವರಿಸಲು ನೀವು ಯಾವ ಶಾಸ್ತ್ರವಚನಗಳನ್ನು ಉಪಯೋಗಿಸುವಿರಿ? (ಸಿ) ಯಾವನಾದರೂ ಸತ್ಯವನ್ನು ಮೊಬ್ಬಾಗಿಸುತ್ತದೆ ಎಂದು ತೋರುವ ಬೈಬಲ್‌ ಭಾಷಾಂತರವನ್ನು ಉಪಯೋಗಿಸುವಲ್ಲಿ ಏನು ಮಾಡಸಾಧ್ಯವಿದೆ?

5 ಪುನರುತ್ಥಾನವು ಎಂತಹ ಅದ್ಭುತಕರವಾದ ಏರ್ಪಾಡೆಂದು ಇಂತಹ ಜನರಿಗೆ ತಿಳಿಯಸಾಧ್ಯವಾಗುವ ಮುಂಚಿತವಾಗಿ, ಅವರಿಗೆ ಮೃತಾವಸ್ಥೆಯ ಸರಿಯಾದ ತಿಳಿವಳಿಕೆಯು ಇರುವ ಅಗತ್ಯವಿದೆ. ಅನೇಕವೇಳೆ, ಬೈಬಲ್‌ ಸತ್ಯಕ್ಕಾಗಿ ಹಸಿದಿರುವಂಥ ಒಬ್ಬ ವ್ಯಕ್ತಿಗೆ ವಿಷಯವನ್ನು ಸ್ಪಷ್ಟಪಡಿಸಲು ಕೇವಲ ಕೆಲವೇ ಶಾಸ್ತ್ರವಚನಗಳು ಸಾಕಾಗುತ್ತವೆ. (ಕೀರ್ತನೆ 146:3, 4; ಪ್ರಸಂಗಿ 9:​5, 10) ಆದರೂ, ಕೆಲವು ಆಧುನಿಕ ಬೈಬಲ್‌ ಭಾಷಾಂತರಗಳು ಮತ್ತು ಬೈಬಲಿನ ಸರಳಾನುವಾದದ ಸಂಚಿಕೆಗಳು, ಮಾನವರಲ್ಲಿ ಒಂದು ಅಮರ ಆತ್ಮ ಇರುತ್ತದೆ ಎಂದು ಸೂಚಿಸುವ ಮೂಲಕ, ಇದರ ಕುರಿತಾದ ಸತ್ಯವನ್ನು ಮರೆಮಾಡುತ್ತವೆ. ಆದುದರಿಂದ, ಬೈಬಲಿನ ಮೂಲ ಭಾಷೆಗಳಲ್ಲಿ ಉಪಯೋಗಿಸಿರುವ ಅಭಿವ್ಯಕ್ತಿಗಳನ್ನು ಚರ್ಚಿಸುವುದು ಅಗತ್ಯವಾದ ವಿಷಯವಾಗಿರಬಹುದು.

6. ಪ್ರಾಣವು ಏನೆಂದು ಒಬ್ಬನು ತಿಳಿಯುವಂತೆ ನೀವು ಹೇಗೆ ಸಹಾಯಮಾಡಬಲ್ಲಿರಿ?

6 ಇದನ್ನು ಮಾಡುವುದರಲ್ಲಿ ನೂತನ ಲೋಕ ಭಾಷಾಂತರ * ಬೈಬಲು ಬಹಳ ಉಪಯುಕ್ತವಾಗಿದೆ. ಏಕೆಂದರೆ ಅದು ಹೀಬ್ರು ಪದವಾದ ನೀಫೆಶ್‌ ಅನ್ನು ಮತ್ತು ಅದಕ್ಕೆ ಸಮಾನವಾದ ಗ್ರೀಕ್‌ ಪದ ಸೀಕೀ ಅನ್ನು ಸುಸಂಗತವಾಗಿ “ಪ್ರಾಣ” ಎಂದು ಉಪಯೋಗಿಸುತ್ತದೆ. ಈ ಭಾಷಾಂತರದ ಪರಿಶಿಷ್ಟದಲ್ಲಿ ಈ ಪದಗಳು ಕಂಡುಬರುವ ಅನೇಕ ವಚನಗಳ ಪಟ್ಟಿಯಿದೆ. ಅನೇಕ ಇತರ ಬೈಬಲ್‌ ಭಾಷಾಂತರಗಳು ಇದನ್ನು ಸುಸಂಗತವಾಗಿ ಭಾಷಾಂತರಿಸದೆ, ಅವೇ ಮೂಲಪದಗಳನ್ನು “ಪ್ರಾಣ” ಎಂದು ಮಾತ್ರವಲ್ಲ, “ಸೃಷ್ಟಿ,” “ಜೀವಿ,” “ವ್ಯಕ್ತಿ,” ಮತ್ತು “ಜೀವ” ಎಂದೂ “ನನ್ನ ನೀಫೆಶ್‌” ಎಂಬುದನ್ನು “ನಾನು” ಎಂದೂ “ನಿನ್ನ ನೀಫೆಶ್‌” ಎಂಬುದನ್ನು “ನೀನು” ಎಂದೂ ಭಾಷಾಂತರಿಸಿವೆ. ಇತರ ಬೈಬಲ್‌ ಭಾಷಾಂತರಗಳನ್ನು ನೂತನ ಲೋಕ ಭಾಷಾಂತರ ಬೈಬಲಿನೊಂದಿಗೆ ಸರಿಹೋಲಿಸುವಲ್ಲಿ, ಒಬ್ಬ ಯಥಾರ್ಥ ವಿದ್ಯಾರ್ಥಿಯು “ಪ್ರಾಣ” ಎಂದು ಭಾಷಾಂತರಿಸಿರುವ ಮೂಲಭಾಷಾಪದಗಳು ಜನರಿಗೂ ಪ್ರಾಣಿಗಳಿಗೂ ಏಕರೀತಿಯಲ್ಲಿ ಸೂಚಿತವಾಗಿವೆಯೆಂಬುದನ್ನು ತಿಳಿಯುವಂತೆ ಸಹಾಯಮಾಡುವುದು. ಆದರೆ ಈ ಪದಗಳು, ಪ್ರಾಣವು ಅದೃಶ್ಯವಾದ, ಮರಣದಲ್ಲಿ ದೇಹವನ್ನು ಬಿಟ್ಟುಹೋಗುವ ಸ್ಪರ್ಶ ಗೋಚರವಾಗದ ವಸ್ತುವಾಗಿದೆ ಮತ್ತು ಅದಕ್ಕೆ ಬೇರೆಲ್ಲಿಯೊ ಮುಂದುವರಿಯುವ ಪ್ರಜ್ಞೆಯ ಅಸ್ತಿತ್ವವಿದೆಯೆಂಬ ಯಾವುದೇ ವಿಚಾರವನ್ನು ಅರ್ಥೈಸುವುದಿಲ್ಲ.

7. ಷೀಓಲ್‌, ಹೇಡೀಸ್‌, ಮತ್ತು ಗಿಹೆನದಲ್ಲಿರುವವರ ಸ್ಥಿತಿಯನ್ನು ನೀವು ಹೇಗೆ ವಿವರಿಸುವಿರಿ?

7 ಹೀಬ್ರು ಪದವಾದ ಷಆಲ್‌ ಅನ್ನು “ಷೀಓಲ್‌” ಎಂದು ಲಿಪ್ಯಂತರ ಮಾಡಿ ಬರೆಯುವುದರಲ್ಲಿ ಮತ್ತು ಗ್ರೀಕ್‌ ಪದವಾದ ಆದೀಸ್‌ ಅನ್ನು “ಹೇಡೀಸ್‌” ಎಂದು ಭಾಷಾಂತರಿಸುವುದರಲ್ಲಿ ಮತ್ತು ಯೀಎನ ಎಂಬ ಗ್ರೀಕ್‌ ಪದವನ್ನು “ಗಿಹೆನ” ಎಂದು ಲಿಪ್ಯಂತರ ಮಾಡಿರುವುದರಲ್ಲಿಯೂ ನೂತನ ಲೋಕ ಭಾಷಾಂತರ ಬೈಬಲು ಸುಸಂಗತವಾಗಿದೆ. “ಷೀಓಲ್‌” ಎಂಬುದು “ಹೇಡೀಸ್‌”ನ ಸಮಾನಾರ್ಥಕ ಪದವಾಗಿದೆ. (ಕೀರ್ತನೆ 16:10; ಅ. ಕೃತ್ಯಗಳು 2:27) ಈ ಷೀಓಲ್‌ ಮತ್ತು ಹೇಡೀಸ್‌ ಇವೆರಡೂ ಮಾನವಕುಲದ ಸಾಮಾನ್ಯ ಸಮಾಧಿಯನ್ನು ಸೂಚಿಸುತ್ತಿದ್ದು, ಇವು ಜೀವದೊಂದಿಗಲ್ಲ, ಮರಣದೊಂದಿಗೆ ಜೊತೆಗೂಡಿವೆಯೆಂಬುದನ್ನು ಬೈಬಲ್‌ ಸ್ಪಷ್ಟಪಡಿಸುತ್ತದೆ. (ಕೀರ್ತನೆ 89:48; ಪ್ರಕಟನೆ 20:13) ಈ ಶಾಸ್ತ್ರವಚನಗಳು ಸಾಮಾನ್ಯ ಸಮಾಧಿಯಿಂದ ಪುನರುತ್ಥಾನದ ಮೂಲಕ ಹೊರಬರುವ ಪ್ರತೀಕ್ಷೆಯನ್ನೂ ಎತ್ತಿಹಿಡಿಯುತ್ತವೆ. (ಯೋಬ 14:13; ಅ. ಕೃತ್ಯಗಳು 2:31) ಇದಕ್ಕೆ ವ್ಯತಿರಿಕ್ತವಾಗಿ, ಗಿಹೆನಕ್ಕೆ ಹೋಗುವವರಿಗೆ ಯಾವುದೇ ಭಾವೀ ಜೀವನದ ನಿರೀಕ್ಷೆಯು ಎತ್ತಿಹಿಡಿಯಲ್ಪಟ್ಟಿರುವುದಿಲ್ಲ. ಮತ್ತು ಅಲ್ಲಿ ಪ್ರಾಣಕ್ಕೆ ಪ್ರಜ್ಞಾವಂತ ಅಸ್ತಿತ್ವವಿರುವುದೆಂದೂ ಹೇಳಲಾಗಿರುವುದಿಲ್ಲ.​—⁠ಮತ್ತಾಯ 10:⁠28.

8. ಪುನರುತ್ಥಾನದ ಬಗ್ಗೆ ಸರಿಯಾದ ತಿಳಿವಳಿಕೆಯು ಒಬ್ಬನ ಮನೋಭಾವ ಮತ್ತು ಕ್ರಿಯೆಗಳನ್ನು ಹೇಗೆ ಪ್ರಭಾವಿಸಬಲ್ಲದು?

8 ಈ ಸಂಗತಿಗಳನ್ನು ಮೊದಲು ಸ್ಪಷ್ಟಪಡಿಸುವಲ್ಲಿ, ಒಬ್ಬನಿಗೆ ಪುನರುತ್ಥಾನವು ಯಾವ ಅರ್ಥದಲ್ಲಿರುವುದೆಂದು ತಿಳಿಯುವಂತೆ ಅವನಿಗೆ ಸಹಾಯಮಾಡಸಾಧ್ಯವಾಗುವುದು. ಅಂತಹ ಅದ್ಭುತಕರವಾದ ಏರ್ಪಾಡನ್ನು ಮಾಡುವುದರಲ್ಲಿ ಯೆಹೋವನಿಗಿರುವ ಪ್ರೀತಿಗೆ ಅವನು ಕೃತಜ್ಞತೆಯನ್ನು ತೋರಿಸಲಾರಂಭಿಸಬಲ್ಲನು. ಮರಣದಲ್ಲಿ ಪ್ರಿಯರನ್ನು ಕಳೆದುಕೊಂಡಿರುವವರ ಶೋಕವನ್ನು, ದೇವರ ನೂತನ ಲೋಕದಲ್ಲಿ ನಡೆಯಲಿರುವ ಪುನರ್ಮಿಲನದ ಹರ್ಷಕರವಾದ ನಿರೀಕ್ಷೆಯು ಶಮನಮಾಡಬಲ್ಲದು. ಈ ವಿಷಯಗಳನ್ನು ತಿಳಿದುಕೊಳ್ಳುವುದು, ಕ್ರಿಸ್ತನ ಮರಣದ ಅರ್ಥವನ್ನು ತಿಳಿದುಕೊಳ್ಳುವ ವಿಷಯಕ್ಕೂ ಮಹತ್ವದ್ದಾಗಿರುವುದು. ಯೇಸು ಕ್ರಿಸ್ತನ ಪುನರುತ್ಥಾನವು ಕ್ರೈಸ್ತ ನಂಬಿಕೆಗೆ ತಳಹದಿಯೆಂದೂ ಅದು ಇತರರ ಪುನರುತ್ಥಾನಕ್ಕೆ ದಾರಿ ತೆರೆಯುತ್ತದೆಂದೂ ಪ್ರಥಮ ಶತಮಾನದ ಕ್ರೈಸ್ತರು ಗ್ರಹಿಸಿದರು. ಅವರು ಹುರುಪಿನಿಂದ ಯೇಸುವಿನ ಪುನರುತ್ಥಾನದ ಮತ್ತು ಅದು ನೀಡುವ ನಿರೀಕ್ಷೆಯ ಕುರಿತು ಸಾರಿದರು. ಹಾಗೆಯೇ, ಇಂದು ಪುನರುತ್ಥಾದ ನಿರೀಕ್ಷೆಯನ್ನು ತಿಳಿದುಕೊಂಡು ಕೃತಜ್ಞತೆ ತೋರಿಸುವವರು ಈ ಅಮೂಲ್ಯ ಸತ್ಯದಲ್ಲಿ ಇತರರೊಂದಿಗೆ ಪಾಲಿಗರಾಗಲು ಹಾತೊರೆಯುತ್ತಾರೆ.​—ಅ. ಕೃತ್ಯಗಳು 5:​30-32; 10:​42, 43.

‘ಹೇಡೀಸ್‌ನ ಬೀಗದಕೈ’ಯನ್ನು ಉಪಯೋಗಿಸುವುದು

9. ಯೇಸು ಪ್ರಥಮವಾಗಿ ‘ಮರಣ ಮತ್ತು ಹೇಡೀಸ್‌ನ ಬೀಗದಕೈಗಳನ್ನು’ ಹೇಗೆ ಉಪಯೋಗಿಸುತ್ತಾನೆ?

9 ಸ್ವರ್ಗೀಯ ರಾಜ್ಯದಲ್ಲಿ ಕ್ರಿಸ್ತನೊಂದಿಗೆ ಜೊತೆಗೂಡಲಿರುವವರು ಕ್ರಮೇಣ ಸಾಯಲೇ ಬೇಕು. ಆದರೆ ಯೇಸು ಅವರಿಗೆ ಕೊಟ್ಟ ಆಶ್ವಾಸನೆ ಅವರಿಗೆ ಚೆನ್ನಾಗಿ ತಿಳಿದದೆ: “ಸತ್ತವನಾದೆನು, ಮತ್ತು ಇಗೋ ಯುಗಯುಗಾಂತರಗಳಲ್ಲಿಯೂ ಬದುಕುವವನಾಗಿದ್ದೇನೆ; ಮರಣದ ಮತ್ತು ಪಾತಾಳದ [“ಹೇಡೀಸ್‌,” NW] ಬೀಗದಕೈಗಳು ನನ್ನಲ್ಲಿ ಅವೆ.” (ಪ್ರಕಟನೆ 1:18) ಅದರ ಅರ್ಥವೇನು? ಅವನು ತನ್ನ ಸ್ವಂತ ಅನುಭವಕ್ಕೆ ಗಮನ ಸೆಳೆಯುತ್ತಿದ್ದನು. ಅವನೂ ಸತ್ತಿದ್ದನು. ಆದರೆ ದೇವರು ಅವನನ್ನು ಹೇಡೀಸ್‌ನಲ್ಲಿ ಬಿಟ್ಟಿರಲಿಲ್ಲ. ಮೂರನೆಯ ದಿನದಲ್ಲಿ, ಯೆಹೋವನು ತಾನೇ ಅವನನ್ನು ಆತ್ಮಜೀವಿತಕ್ಕೆ ಎಬ್ಬಿಸಿ ಅವನಿಗೆ ಅಮರತ್ವವನ್ನು ದಯಪಾಲಿಸಿದನು. (ಅ. ಕೃತ್ಯಗಳು 2:​32, 33; 10:​40, 41ಎ) ಇದಕ್ಕೆ ಕೂಡಿಸಿ, ದೇವರು ಅವನಿಗೆ ‘ಮರಣದ ಮತ್ತು ಹೇಡೀಸ್‌ನ ಬೀಗದಕೈಗಳನ್ನು,’ ಅವನು ಮಾನವಕುಲದ ಸಾಮಾನ್ಯ ಸಮಾಧಿಯಿಂದಲೂ ಆದಾಮನ ಪಾಪದ ಪರಿಣಾಮಗಳಿಂದಲೂ ಇತರರನ್ನು ಬಿಡಿಸುವ ಸಲುವಾಗಿ ಕೊಟ್ಟನು. ಯೇಸುವಿನ ಬಳಿ ಆ ಬೀಗದಕೈಗಳು ಇರುವ ಕಾರಣವೇ, ಅವನು ತನ್ನ ನಂಬಿಗಸ್ತ ಹಿಂಬಾಲಕರನ್ನು ಮರಣದಿಂದ ಎಬ್ಬಿಸಲು ಶಕ್ತನಾಗಿದ್ದಾನೆ. ಅವನು ಪ್ರಥಮವಾಗಿ, ತನ್ನ ಸಭೆಯ ಆತ್ಮಾಭಿಷಿಕ್ತ ಸದಸ್ಯರನ್ನು ಎಬ್ಬಿಸಿ, ಅವನ ತಂದೆಯು ಅವನಿಗೆ ಕೊಟ್ಟಂತೆಯೇ ಇವನೂ ಅವರಿಗೆ ಸ್ವರ್ಗದಲ್ಲಿ ಅಮರ ಜೀವನವೆಂಬ ಅಮೂಲ್ಯ ಉಡುಗೊರೆಯನ್ನು ಕೊಡುತ್ತಾನೆ.​—⁠ರೋಮಾಪುರ 6:5; ಫಿಲಿಪ್ಪಿ 3:20, 21.

10. ನಂಬಿಗಸ್ತರಾಗಿರುವ ಅಭಿಷಿಕ್ತ ಕ್ರೈಸ್ತರ ಪುನರುತ್ಥಾನವು ಯಾವಾಗ ಸಂಭವಿಸುತ್ತದೆ?

10 ನಂಬಿಗಸ್ತರಾದ ಅಭಿಷಿಕ್ತ ಕ್ರೈಸ್ತರು ಆ ಸ್ವರ್ಗೀಯ ಪುನರುತ್ಥಾನದ ಅನುಭವವನ್ನು ಯಾವಾಗ ಪಡೆಯುವರು? ಈ ಪುನರುತ್ಥಾನವು ಈಗಾಗಲೇ ಆರಂಭವಾಗಿರುತ್ತದೆಂದು ಬೈಬಲು ಸೂಚಿಸುತ್ತದೆ. ಅಪೊಸ್ತಲ ಪೌಲನು, ಇವರು ‘ಕ್ರಿಸ್ತನ ಸಾನ್ನಿಧ್ಯದ ಸಮಯದಲ್ಲಿ’ ಅಂದರೆ 1914ರಲ್ಲಿ ಆರಂಭವಾದ ಸಾನ್ನಿಧ್ಯದ ಸಮಯದಲ್ಲಿ ಎಬ್ಬಿಸಲ್ಪಡುವರು ಎಂದು ಹೇಳಿದನು. (1 ಕೊರಿಂಥ 15:23) ಈ ನಂಬಿಗಸ್ತ ಅಭಿಷಿಕ್ತರು ತಮ್ಮ ಭೂಯಾತ್ರೆಯನ್ನು ಈಗ ಕ್ರಿಸ್ತನ ಸಾನ್ನಿಧ್ಯದ ಸಮಯದಲ್ಲಿ ಮುಗಿಸುವಲ್ಲಿ, ಅವರಿಗೆ ತಮ್ಮ ಕರ್ತನು ಹಿಂದಿರುಗಿ ಬರುವ ತನಕ ಮರಣದಲ್ಲಿ ಕಾಯಬೇಕೆಂದಿರುವುದಿಲ್ಲ. ಅವರು ಸತ್ತೊಡನೆ, “ಒಂದು ಕ್ಷಣದಲ್ಲೇ ರೆಪ್ಪೆಬಡಿಯುವಷ್ಟರೊಳಗಾಗಿ ಮಾರ್ಪ”ಟ್ಟು ಆತ್ಮದಲ್ಲಿ ಎಬ್ಬಿಸಲ್ಪಡುತ್ತಾರೆ. ಅವರು ಮಾಡಿರುವ ಸತ್ಕಾರ್ಯಗಳು ‘ಅವರೊಡನೆ ಬರುವುದರಿಂದ’ ಅವರ ಸಂತೋಷವು ಎಷ್ಟೋ ಅಪಾರ!​—⁠1 ಕೊರಿಂಥ 15:51, 52; ಪ್ರಕಟನೆ 14:⁠13.

11. ಜನರಿಗೆ ಸಾಮಾನ್ಯವಾಗಿ ಯಾವ ಪುನರುತ್ಥಾನವಿರುವುದು, ಮತ್ತು ಅದು ಯಾವಾಗ ಆರಂಭವಾಗುವುದು?

11 ಆದರೆ, ರಾಜ್ಯ ಬಾಧ್ಯಸ್ಥರು ಸ್ವರ್ಗೀಯ ಜೀವಿತಕ್ಕೆ ಪುನರುತ್ಥಾನಗೊಳಿಸಲ್ಪಡುವುದೇ ಏಕಮಾತ್ರ ಪುನರುತ್ಥಾನವಾಗಿರುವುದಿಲ್ಲ. ಪ್ರಕಟನೆ 20:6ರಲ್ಲಿ ಇದನ್ನು “ಪ್ರಥಮ ಪುನರುತ್ಥಾನ” ಎಂದು ಕರೆದಿರುವುದು, ಇದನ್ನು ಅನುಸರಿಸಿ ಇನ್ನೊಂದು ಪುನರುತ್ಥಾನವು ಬರಲೇ ಬೇಕೆಂಬುದನ್ನು ಸೂಚಿಸುತ್ತದೆ. ಈ ಎರಡನೆಯ ಪುನರುತ್ಥಾನದ ಪ್ರಯೋಜನವನ್ನು ಪಡೆಯುವವರಿಗೆ ಭೂಪರದೈಸಿನಲ್ಲಿ ನಿತ್ಯಜೀವದ ಸಂತೋಷಕರ ಪ್ರತೀಕ್ಷೆಯಿರುವುದು. ಅದು ಯಾವಾಗ ಸಂಭವಿಸುವುದು? ಪ್ರಕಟನೆ ಪುಸ್ತಕವು ತೋರಿಸುವುದೇನಂದರೆ, ಆಳುವ ಅಧಿಕಾರಿವರ್ಗವು ಸೇರಿರುವ ಈಗಿನ ದುಷ್ಟ ವಿಷಯಗಳ ವ್ಯವಸ್ಥೆಯೆಂಬ “ಭೂಮ್ಯಾಕಾಶಗಳು” ತೊಲಗಿಸಲ್ಪಟ್ಟ ಮೇಲೆ ಅದು ಸಂಭವಿಸುವುದು. ಈ ಹಳೇ ವ್ಯವಸ್ಥೆಯ ಆ ಅಂತ್ಯವು ಅತಿ ಸಮೀಪವಿದೆ. ಆ ಬಳಿಕ, ದೇವರ ನಿರ್ಧಾರಿತ ಸಮಯದಲ್ಲಿ ಭೂಪುನರುತ್ಥಾನವು ಆರಂಭಗೊಳ್ಳುವುದು.​—⁠ಪ್ರಕಟನೆ 20:​11, 12.

12. ಭೂಜೀವಿತಕ್ಕೆ ಎಬ್ಬಿಸಲ್ಪಡುವ ನಂಬಿಗಸ್ತರಲ್ಲಿ ಯಾರೆಲ್ಲ ಇರುವರು, ಮತ್ತು ಅದೇಕೆ ರೋಮಾಂಚಕ ಪ್ರತೀಕ್ಷೆಯಾಗಿದೆ?

12 ಆ ಭೂಪುನರುತ್ಥಾನದಲ್ಲಿ ಯಾರೆಲ್ಲ ಸೇರಿರುವರು? ಯೆಹೋವನ ಅತಿ ಆದಿಕಾಲಗಳ ನಂಬಿಗಸ್ತ ಸೇವಕರು ಅದರಲ್ಲಿರುವರು. ಈ ಸ್ತ್ರೀಪುರುಷರು ಪುನರುತ್ಥಾನದಲ್ಲಿ ತಮಗಿದ್ದ ಬಲವಾದ ನಂಬಿಕೆಯ ಕಾರಣ “ಬಿಡುಗಡೆ ಬೇಡವೆಂದು” ಹೇಳಿ ಸತ್ತರು. ಅಂದರೆ ಹಿಂಸಾತ್ಮಕವಾದ, ಅಕಾಲಿಕ ಮರಣದಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಅವರಿಗೆ ದೇವರ ಕಡೆಗಿದ್ದ ಸಮಗ್ರತೆಯನ್ನು ಅವರು ರಾಜಿಮಾಡಿಕೊಳ್ಳಲಿಲ್ಲವೆಂದರ್ಥ. ಅವರನ್ನು ವೈಯಕ್ತಿಕವಾಗಿ ಪರಿಚಯಮಾಡಿಕೊಂಡು, ಬೈಬಲಿನಲ್ಲಿ ಸಂಕ್ಷಿಪ್ತವಾಗಿ ಮಾತ್ರ ಕೊಟ್ಟಿರುವ ವರದಿಗಳ ವಿವರಗಳನ್ನು ಅವರ ಸ್ವಂತ ಬಾಯಿಂದಲೇ ಕೇಳುವುದು ಎಷ್ಟು ಸಂತೋಷಕರವಾಗಿರುವುದು! ಭೂಜೀವಿತಕ್ಕೆ ಪುನರುತ್ಥಾನಗೊಳ್ಳುವವರಲ್ಲಿ, ಯೆಹೋವನ ಪ್ರಥಮ ನಂಬಿಗಸ್ತ ಸಾಕ್ಷಿಯಾಗಿದ್ದ ಹೇಬೆಲನಿರುವನು; ಜಲಪ್ರಳಯಕ್ಕೆ ಮೊದಲಾಗಿ ದೇವರ ಎಚ್ಚರಿಕೆಯ ಸಂದೇಶವನ್ನು ನಿರ್ಭಯದಿಂದ ಸಾರಿಹೇಳಿದ ಹನೋಕ ಮತ್ತು ನೋಹರು ಇರುವರು; ದೇವದೂತರನ್ನು ಸತ್ಕರಿಸಿದ ಅಬ್ರಹಾಮನೂ ಸಾರಳೂ ಇರುವರು; ಸೀನಾಯಿ ಪರ್ವತದಲ್ಲಿ ಯಾರ ಮೂಲಕ ಧರ್ಮಶಾಸ್ತ್ರವು ಕೊಡಲ್ಪಟ್ಟಿತೊ ಆ ಮೋಶೆಯೂ ಇರುವನು; ಯೆರೂಸಲೇಮಿನ ಸಾ.ಶ.ಪೂ. 607ರ ನಾಶನವನ್ನು ನೋಡಿದ ಯೆರೆಮೀಯನಂತಹ ಧೈರ್ಯಶೀಲ ಪ್ರವಾದಿಗಳು ಮತ್ತು ದೇವರು ತಾನೇ ಯೇಸುವನ್ನು ತನ್ನ ಪುತ್ರನೆಂದು ಕರೆಯುವುದನ್ನು ಕೇಳಿಸಿಕೊಂಡ ಸ್ನಾನಿಕ ಯೋಹಾನನೂ ಸೇರಿರುವನು. ಇದಕ್ಕೆ ಕೂಡಿಸಿ, ಈ ದುಷ್ಟ ವಿಷಯಗಳ ವ್ಯವಸ್ಥೆಯ ಕೊನೆಯ ದಿನಗಳಲ್ಲಿ ನಿಷ್ಠಾವಂತರಾಗಿ ಸತ್ತಿರುವ ಅನೇಕ ಸ್ತ್ರೀಪುರುಷರು ಇದರಲ್ಲಿ ಸೇರಿರುವರು.​—⁠ಇಬ್ರಿಯ 11:4-38; ಮತ್ತಾಯ 11:⁠11.

13, 14. (ಎ) ಹೇಡೀಸ್‌ಗೂ ಅದರಲ್ಲಿರುವ ಮೃತರಿಗೂ ಏನು ಸಂಭವಿಸುವುದು? (ಬಿ) ಆ ಪುನರುತ್ಥಾನದಲ್ಲಿ ಯಾರೆಲ್ಲ ಇರುವರು, ಮತ್ತು ಏಕೆ?

13 ತಕ್ಕ ಕಾಲದಲ್ಲಿ, ದೇವರ ನಂಬಿಗಸ್ತ ಸೇವಕರಲ್ಲದೆ ಇತರರನ್ನೂ ಸತ್ತವರೊಳಗಿಂದ ಎಬ್ಬಿಸಲಾಗಿ, ಮಾನವಕುಲದ ಸಾಮಾನ್ಯ ಸಮಾಧಿಯಲ್ಲಿ ಯಾರೂ ಇಲ್ಲದಿರುವರು. ಆ ಸಮಾಧಿಯು ಎಷ್ಟರ ಮಟ್ಟಿಗೆ ಖಾಲಿಯಾಗುವುದೆಂಬುದನ್ನು ಯೇಸುವು ‘ಹೇಡೀಸ್‌ನ ಬೀಗದಕೈಗಳನ್ನು’ ಮಾನವಕುಲದ ಪರವಾಗಿ ಉಪಯೋಗಿಸುವುದರಲ್ಲಿ ಕಂಡುಬರುತ್ತದೆ. ಅಪೊಸ್ತಲ ಯೋಹಾನನಿಗೆ ಕೊಡಲ್ಟಟ್ಟ ಒಂದು ದರ್ಶನದಲ್ಲಿ ಇದು ತೋರಿಸಲ್ಪಟ್ಟಿದೆ. ಅಲ್ಲಿ ಹೇಡೀಸ್‌ ‘ಬೆಂಕಿಯ ಕೆರೆಗೆ ದೊಬ್ಬಲ್ಪಟ್ಟದ್ದನ್ನು’ ಯೋಹಾನನು ಕಾಣುತ್ತಾನೆ. (ಪ್ರಕಟನೆ 20:14) ಅದರ ಅರ್ಥವೇನು? ಮಾನವಕುಲದ ಸಾಮಾನ್ಯ ಸಮಾಧಿಯಾದ ಹೇಡೀಸ್‌ ಪೂರ್ತಿಯಾಗಿ ನಾಶಗೊಳ್ಳುತ್ತದೆಂದೇ ಅದರ ಅರ್ಥ. ಅದು ಮೃತರಿಂದ ಪೂರ್ತಿ ಬರಿದಾಗುತ್ತದೆ. ಏಕೆಂದರೆ ಯೆಹೋವನ ನಂಬಿಗಸ್ತ ಆರಾಧಕರೆಲ್ಲರನ್ನು ಯೇಸು ಪುನರುತ್ಥಾನಗೊಳಿಸುವನಲ್ಲದೆ, ಅನೀತಿವಂತರನ್ನೂ ಅವನು ಕರುಣೆಯಿಂದ ಹಿಂದೆ ತರುತ್ತಾನೆ. “ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನ” ಆಗುವುದೆಂದು ದೇವರ ವಾಕ್ಯವು ನಮಗೆ ಭರವಸೆ ಕೊಡುತ್ತದೆ.​—⁠ಅ. ಕೃತ್ಯಗಳು 24:15.

14 ಈ ಅನೀತಿವಂತರಲ್ಲಿ ಯಾವನೂ ಕೇವಲ ಪುನಃ ಮರಣದ ತೀರ್ಪನ್ನು ಪಡೆದುಕೊಳ್ಳಲಿಕ್ಕಾಗಿ ಎಬ್ಬಿಸಲ್ಪಡುವುದಿಲ್ಲ. ದೇವರ ರಾಜ್ಯದ ಕೆಳಗೆ ಬರಲಿರುವ ನೀತಿಯ ಪರಿಸರದಲ್ಲಿ, ಅವರು ತಮ್ಮ ಜೀವಿತಗಳನ್ನು ಯೆಹೋವನ ಮಾರ್ಗಗಳಿಗೆ ಹೊಂದಿಸಿಕೊಳ್ಳಲು ಸಹಾಯವು ಅವರಿಗೆ ಕೊಡಲ್ಪಡುವುದು. “ಜೀವಬಾಧ್ಯರ ಪಟ್ಟಿ” ತೆರೆಯಲ್ಪಡುವುದೆಂದು ಆ ದರ್ಶನವು ತೋರಿಸಿತು. ಆದುದರಿಂದ, ತಮ್ಮ ಹೆಸರುಗಳನ್ನು ಅದರಲ್ಲಿ ಬರೆಸಿಕೊಳ್ಳುವ ಅವಕಾಶ ಅವರಿಗಿರುವುದು. ಪುನರುತ್ಥಾನದ ತರುವಾಯ “ಅವರವರ ಕೃತ್ಯಗಳ ಪ್ರಕಾರ” ಅವರಿಗೆ ತೀರ್ಪಾಗುವುದು. (ಪ್ರಕಟನೆ 20:​12, 13) ಹೀಗೆ, ಅಂತಿಮ ಪರಿಣಾಮದ ದೆಸೆಯಿಂದ ವೀಕ್ಷಿಸುವಾಗ, ಅವರದ್ದು “ಜೀವಕ್ಕಾಗಿ [ಆಗುವ] ಪುನರುತ್ಥಾನ”ವಾಗಿ ಪರಿಣಮಿಸಸಾಧ್ಯವಿದೆ. ಅದು, “[ದಂಡನಾತ್ಮಕ] ತೀರ್ಪಿಗಾಗಿ” ತಪ್ಪಿಸಲಾಗದಂತೆ ಆಗುವ ಪುನರುತ್ಥಾನವಾಗಿರುವುದಿಲ್ಲ.​—⁠ಯೋಹಾನ 5:​28, 29.

15. (ಎ) ಯಾರಿಗೆ ಪುನರುತ್ಥಾನವಿರದು? (ಬಿ) ಪುನರುತ್ಥಾನದ ಕುರಿತಾದ ಜ್ಞಾನವು ನಮ್ಮನ್ನು ಹೇಗೆ ಪ್ರಭಾವಿಸಬೇಕು?

15 ಆದರೂ, ಇಷ್ಟರ ವರೆಗೆ ಜೀವಿಸಿರುವ ಮತ್ತು ಸತ್ತಿರುವ ಎಲ್ಲರಿಗೂ ಪುನರುತ್ಥಾನವಾಗದು. ಕೆಲವರು ಕ್ಷಮಾಪಣೆಯೇ ಸಾಧ್ಯವಿಲ್ಲದ ತಪ್ಪುಗಳನ್ನು ಮಾಡಿದ್ದಾರೆ. ಅವರು ಹೇಡೀಸ್‌ನಲ್ಲಿಲ್ಲ, ಗಿಹೆನದಲ್ಲಿದ್ದಾರೆ, ಅಲ್ಲಿ ನಿತ್ಯನಾಶನವನ್ನು ಅನುಭವಿಸುತ್ತಾರೆ. ಇವರಲ್ಲಿ, ನಿಕಟವಿರುವ “ಮಹಾ ಸಂಕಟ”ದಲ್ಲಿ ಯಾರು ಹತಿಸಲ್ಪಡುವರೊ ಅವರೂ ಸೇರಿರುವರು. (ಮತ್ತಾಯ 12:31, 32; 23:33; 24:21, 22; 25:41, 46; 2 ಥೆಸಲೊನೀಕ 1:6-9) ಹೀಗೆ, ಮೃತರನ್ನು ಹೇಡೀಸ್‌ನಿಂದ ಬಿಡುಗಡೆ ಮಾಡುವುದರಲ್ಲಿ ಯೆಹೋವನ ಅತಿಶಯ ಕರುಣೆಯು ಕಂಡುಬರುತ್ತದಾದರೂ, ನಾವು ಈಗ ಜೀವಿಸುವ ವಿಧದ ಕುರಿತು ಅಲಕ್ಷ್ಯಭಾವವನ್ನು ತೋರಿಸಲು ಈ ಪುನರುತ್ಥಾನದ ನಿರೀಕ್ಷೆಯು ಯಾವುದೇ ಆಧಾರವನ್ನು ಕೊಡುವುದಿಲ್ಲ. ಯೆಹೋವನ ಪರಮಾಧಿಕಾರಕ್ಕೆ ವಿರುದ್ಧವಾಗಿ ಬೇಕುಬೇಕೆಂದು ದಂಗೆಯೇಳುವವರಿಗೆ ಪುನರುತ್ಥಾನವು ಅಸಾಧ್ಯ. ಈ ಜ್ಞಾನವು, ನಾವು ದೇವರ ಈ ಅಪಾತ್ರ ದಯೆಯನ್ನು ಆತನ ಚಿತ್ತಾನುಸಾರ ಜೀವಿಸುವ ಮೂಲಕ ತೀರ ಬೆಲೆಯುಳ್ಳದ್ದಾಗಿ ಎಣಿಸುವಂತೆ ನಮ್ಮನ್ನು ಪ್ರಚೋದಿಸಬೇಕು.

ಪುನರುತ್ಥಾನದ ನಿರೀಕ್ಷೆಯಿಂದ ಬಲಹೊಂದುವುದು

16. ಪುನರುತ್ಥಾನದ ನಿರೀಕ್ಷೆಯು ಮಹಾ ಶಕ್ತಿಯ ಮೂಲವಾಗಿರಸಾಧ್ಯವಿರುವುದು ಹೇಗೆ?

16 ನಮ್ಮಲ್ಲಿ ಯಾರು ಪುನರುತ್ಥಾನದ ನಿರೀಕ್ಷೆಯಲ್ಲಿ ನಂಬಿಕೆಯನ್ನಿಟ್ಟಿದ್ದೇವೊ ಅವರು, ಅದರಿಂದ ಮಹಾ ಶಕ್ತಿಯನ್ನು ಪಡೆದುಕೊಳ್ಳುತ್ತೇವೆ. ಈ ಸಮಯದಲ್ಲಿ, ನಾವು ನಮ್ಮ ಜೀವಾಂತ್ಯವನ್ನು ಸಮೀಪಿಸುವಾಗ, ಯಾವುದೇ ವೈದ್ಯಕೀಯ ವಿಧಾನವನ್ನು ಉಪಯೋಗಿಸಿಯೂ ಆ ಮರಣವನ್ನು ಅನಿಶ್ಚಿತವಾಗಿ ಮುಂದೂಡಲು ಸಾಧ್ಯವಿಲ್ಲವೆಂಬುದು ನಮಗೆ ಗೊತ್ತು. (ಪ್ರಸಂಗಿ 8:⁠8) ನಾವು ಯೆಹೋವನನ್ನು ಆತನ ಸಂಸ್ಥೆಯೊಂದಿಗೆ ನಿಷ್ಠೆಯಿಂದ ಸೇವಿಸಿರುವಲ್ಲಿ, ಪೂರ್ಣ ಭರವಸೆಯಿಂದ ನಾವು ಭವಿಷ್ಯವನ್ನು ಮುನ್ನೋಡಬಲ್ಲೆವು. ದೇವರ ತಕ್ಕ ಸಮಯದಲ್ಲಿ, ಪುನರುತ್ಥಾನದ ಮೂಲಕ ನಾವು ಪುನಃ ಜೀವಿಸುವೆವು ಎಂಬುದು ನಮಗೆ ತಿಳಿದದೆ. ಮತ್ತು ಅದೆಂತಹ ಜೀವನವಾಗಿರುವುದು! ಅಪೊಸ್ತಲ ಪೌಲನು ಅದನ್ನು, “ವಾಸ್ತವವಾದ ಜೀವ” ಎಂದು ಕರೆದನು.​—⁠1 ತಿಮೊಥೆಯ 6:​18, 19; ಇಬ್ರಿಯ 6:10-12.

17. ಯೆಹೋವನಿಗೆ ಸಮಗ್ರತೆಯನ್ನು ಕಾಪಾಡಿಕೊಳ್ಳಲು ನಮಗೆ ಯಾವುದು ಸಹಾಯಮಾಡಬಲ್ಲದು?

17 ಪುನರುತ್ಥಾನವಿದೆ ಎಂಬುದನ್ನು ಮತ್ತು ಅದರ ಮೂಲನಾದಾತನನ್ನು ತಿಳಿದುಕೊಂಡಿರುವುದು, ನಾವು ನಂಬಿಕೆಯಲ್ಲಿ ಬಲವಾಗಿರುವಂತೆ ಸಾಧ್ಯಮಾಡುತ್ತದೆ. ಇದು ಹಿಂಸಾತ್ಮಕ ವ್ಯಕ್ತಿಗಳಿಂದ ನಮಗೆ ಮರಣದ ಬೆದರಿಕೆ ಬರುವಾಗಲೂ ನಾವು ದೇವರಿಗೆ ನಿಷ್ಠಾವಂತರಾಗಿರುವಂತೆ ನಮ್ಮನ್ನು ಬಲಪಡಿಸುತ್ತದೆ. ಸೈತಾನನು ದೀರ್ಘಕಾಲದಿಂದ ಅಕಾಲ ಮೃತ್ಯುವಿನ ಭಯವನ್ನು ಜನರನ್ನು ದಾಸತ್ವದಲ್ಲಿಟ್ಟುಕೊಳ್ಳಲಿಕ್ಕಾಗಿ ಉಪಯೋಗಿಸಿರುತ್ತಾನೆ. ಆದರೆ ಯೇಸುವಿಗೆ ಅಂತಹ ಭಯವಿರಲಿಲ್ಲ. ಅವನು ಯೆಹೋವನಿಗೆ ಮರಣದ ತನಕವೂ ನಂಬಿಗಸ್ತನಾಗಿದ್ದನು. ಯೇಸು ತನ್ನ ವಿಮೋಚನಾ ಯಜ್ಞದ ಮೂಲಕ ಇತರರನ್ನು ಅಂತಹ ಭಯದಿಂದ ಬಿಡುಗಡೆ ಮಾಡುವ ಮಾಧ್ಯಮವನ್ನು ಒದಗಿಸಿದನು.​—⁠ಇಬ್ರಿಯ 2:​14, 15.

18. ಯೆಹೋವನ ಸೇವಕರು ಸಮಗ್ರತೆಯ ಅಷ್ಟು ಗಮನಾರ್ಹವಾದ ದಾಖಲೆಯನ್ನು ಇಡುವಂತೆ ಯಾವುದು ಸಹಾಯಮಾಡಿದೆ?

18 ಕ್ರಿಸ್ತನ ಯಜ್ಞದ ಏರ್ಪಾಡಿನಲ್ಲಿ ಮತ್ತು ಪುನರುತ್ಥಾನದಲ್ಲಿ ತಮಗಿರುವ ನಂಬಿಕೆಯ ಪರಿಣಾಮವಾಗಿ, ಯೆಹೋವನ ಸೇವಕರು ಸಮಗ್ರತೆ ಪಾಲಿಸುವವರೆಂಬ ಗಮನಾರ್ಹವಾದ ಒಂದು ದಾಖಲೆಯನ್ನೇ ಇಟ್ಟಿದ್ದಾರೆ. ಒತ್ತಡಕ್ಕೆ ಒಳಗಾದಾಗ, ತಮಗೆ ಯೆಹೋವನ ಮೇಲಿರುವ ಪ್ರೀತಿಗಿಂತ ಹೆಚ್ಚಾಗಿ ತಮ್ಮ ‘ಪ್ರಾಣದ ಮೇಲಣ ಪ್ರೀತಿ ಇರುವುದಿಲ್ಲ’ ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. (ಪ್ರಕಟನೆ 12:11) ವಿವೇಕಿಗಳಾಗಿರುತ್ತಾ, ತಮ್ಮ ಸದ್ಯದ ಜೀವವನ್ನು ಉಳಿಸಲು ಪ್ರಯತ್ನಿಸುವಾಗ ಅವರು ಕ್ರೈಸ್ತ ಮೂಲತತ್ತ್ವಗಳನ್ನು ತ್ಯಜಿಸುವುದಿಲ್ಲ. (ಲೂಕ 9:​24, 25) ಈಗ ಯೆಹೋವನ ಪರಮಾಧಿಕಾರವನ್ನು ನಿಷ್ಠೆಯಿಂದ ಸಮರ್ಥಿಸುವ ಕಾರಣ ಸದ್ಯದ ಜೀವವನ್ನು ಕಳೆದುಕೊಂಡರೂ, ಆತನು ಅವರಿಗೆ ಪುನರುತ್ಥಾನದ ಮೂಲಕ ಪ್ರತಿಫಲವನ್ನು ಕೊಡುವನೆಂದು ಅವರಿಗೆ ತಿಳಿದದೆ. ಇದೇ ರೀತಿಯ ನಂಬಿಕೆ ನಿಮಗಿದೆಯೆ? ನೀವು ಯೆಹೋವನನ್ನು ನಿಜವಾಗಿಯೂ ಪ್ರೀತಿಸುವಲ್ಲಿ ಮತ್ತು ಪುನರುತ್ಥಾನದ ನಿರೀಕ್ಷೆಯ ಅರ್ಥವನ್ನು ನೀವು ನಿಜವಾಗಿಯೂ ತಿಳಿದುಕೊಳ್ಳುವಲ್ಲಿ ಅಂತಹ ನಂಬಿಕೆ ನಿಮಗಿರುವುದು.

[ಪಾದಟಿಪ್ಪಣಿ]

^ ಪ್ಯಾರ. 6 ಕನ್ನಡದಲ್ಲಿ ಲಭ್ಯವಿಲ್ಲ.

ಪುನರ್ವಿಮರ್ಶೆಯ ಚರ್ಚೆ

• ಒಬ್ಬನು ಪುನರುತ್ಥಾನವನ್ನು ಬೆಲೆಯುಳ್ಳದ್ದಾಗಿ ನೋಡುವ ಮೊದಲು ಮೃತರ ಸ್ಥಿತಿಯ ಬಗ್ಗೆ ಅವನಿಗೆ ತಿಳಿವಳಿಕೆಯು ಏಕೆ ಅಗತ್ಯ?

• ಸತ್ತವರೊಳಗಿಂದ ಯಾರು ಹಿಂದಿರುಗಿ ಬರುವರು, ಮತ್ತು ಈ ಜ್ಞಾನವು ನಮ್ಮನ್ನು ಹೇಗೆ ಪ್ರಭಾವಿಸಬೇಕು?

• ಪುನರುತ್ಥಾನದ ನಿರೀಕ್ಷೆಯು ನಮ್ಮನ್ನು ಹೇಗೆ ಬಲಪಡಿಸುತ್ತದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 84, 85ರಲ್ಲಿರುವ ಚಿತ್ರ]

ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವುದೆಂದು ಯೆಹೋವನು ವಾಗ್ದಾನಿಸುತ್ತಾನೆ