ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮನೆಯಲ್ಲಿ ದೈವಿಕ ಭಕ್ತಿಯನ್ನು ಆಚರಣೆಗೆ ತನ್ನಿರಿ

ಮನೆಯಲ್ಲಿ ದೈವಿಕ ಭಕ್ತಿಯನ್ನು ಆಚರಣೆಗೆ ತನ್ನಿರಿ

ಅಧ್ಯಾಯ ಹದಿನೇಳು

ಮನೆಯಲ್ಲಿ ದೈವಿಕ ಭಕ್ತಿಯನ್ನು ಆಚರಣೆಗೆ ತನ್ನಿರಿ

1. ದೇವರ ವಾಕ್ಯದ ಮಾರ್ಗದರ್ಶನದ ಅನ್ವಯವು ವಿವಾಹಗಳನ್ನು ಹೇಗೆ ಪ್ರಭಾವಿಸಿದೆ?

ಯೆಹೋವನು ವಿವಾಹದ ಮೂಲಕರ್ತನಾಗಿದ್ದಾನೆ ಮತ್ತು ಆತನ ವಾಕ್ಯವು ಕುಟುಂಬಗಳಿಗೆ ಅತ್ಯುತ್ತಮವಾದ ಮಾರ್ಗದರ್ಶನವನ್ನು ಒದಗಿಸುತ್ತದೆ. ಆ ಮಾರ್ಗದರ್ಶನವನ್ನು ಅನ್ವಯಿಸಿಕೊಳ್ಳುವುದರಿಂದ ಅನೇಕರು ಯಶಸ್ವಿದಾಯಕವಾದ ವಿವಾಹ ಸಂಬಂಧಗಳನ್ನು ಬೆಳೆಸಿಕೊಂಡಿದ್ದಾರೆ. ಪ್ರಶಂಸಾರ್ಹ ವಿಷಯವೇನಂದರೆ, ಕೇವಲ ಕೂಡಿ ಜೀವಿಸುತ್ತಿದ್ದ ಕೆಲವರು ತಮ್ಮ ವಿವಾಹಗಳನ್ನು ಶಾಸನಬದ್ಧವಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಇತರರು ವಿವಾಹೇತರ ಸಂಬಂಧಗಳನ್ನು ಇಟ್ಟುಕೊಳ್ಳುವುದನ್ನು ನಿಲ್ಲಿಸಿದ್ದಾರೆ. ತಮ್ಮ ಪತ್ನಿ ಮತ್ತು ಮಕ್ಕಳನ್ನು ಮೌಖಿಕವಾಗಿಯೂ ಶಾರೀರಿಕವಾಗಿಯೂ ಅಪಪ್ರಯೋಗಿಸಿದ್ದ ಹಿಂಸಾಚಾರಿ ಪುರುಷರು, ದಯೆ ಮತ್ತು ಕೋಮಲತೆಯನ್ನು ತೋರಿಸಲು ಕಲಿತುಕೊಂಡಿದ್ದಾರೆ.

2. ಕ್ರೈಸ್ತ ಕುಟುಂಬ ಜೀವನದಲ್ಲಿ ಏನೆಲ್ಲ ಸೇರಿದೆ?

2 ಕ್ರೈಸ್ತ ಕುಟುಂಬ ಜೀವನದಲ್ಲಿ, ನಾವು ವಿವಾಹದ ಶಾಶ್ವತತೆಯನ್ನು ಹೇಗೆ ವೀಕ್ಷಿಸುತ್ತೇವೆ, ನಮ್ಮ ಕುಟುಂಬ ಜವಾಬ್ದಾರಿಗಳನ್ನು ಪೂರೈಸಲು ನಾವೇನು ಮಾಡುತ್ತೇವೆ, ಮತ್ತು ಕುಟುಂಬ ಸದಸ್ಯರೊಂದಿಗೆ ಹೇಗೆ ವರ್ತಿಸುತ್ತೇವೆ, ಇವೇ ಮುಂತಾದ ಅನೇಕ ವಿಷಯಗಳು ಸೇರಿವೆ. (ಎಫೆಸ 5:33-6:4) ಕುಟುಂಬ ಜೀವನದ ಕುರಿತು ಬೈಬಲು ಏನನ್ನುತ್ತದೆಂದು ನಮಗೆ ತಿಳಿದಿರಬಹುದಾದರೂ, ಅದನ್ನು ಅನ್ವಯಿಸಿಕೊಳ್ಳುವುದು ಇನ್ನೊಂದು ಪ್ರತ್ಯೇಕ ವಿಷಯವಾಗಿದೆ. ದೇವರ ಆಜ್ಞೆಗಳನ್ನು ಪಾಲಿಸದೆ ಅವುಗಳನ್ನು ಬದಿಗೊತ್ತಿದ ಕಾರಣ ಯೇಸು ಖಂಡಿಸಿದ ಜನರಂತೆ ನಾವಿರಲು ಬಯಸೆವು ನಿಶ್ಚಯ. ಏಕೆಂದರೆ ಧಾರ್ಮಿಕ ಭಕ್ತಿಯೊಂದೇ ಸಾಕೆಂದು ಅವರು ತಪ್ಪಾಗಿ ತರ್ಕಿಸಿದರು. (ಮತ್ತಾಯ 15:​4-9) ದೇವಭಕ್ತಿಯ ವೇಷವಿರುವವರಾಗಿದ್ದರೂ ದೇವಭಕ್ತಿಯನ್ನು ನಮ್ಮ ಸ್ವಂತ ಕುಟುಂಬದಲ್ಲಿ ಆಚರಿಸದವರು ನಾವಾಗಿರಬಯಸುವುದಿಲ್ಲ. ಬದಲಿಗೆ, “ದೊಡ್ಡ ಲಾಭ”ವಾಗಿರುವ ನಿಜವಾದ ದೈವಿಕ ಭಕ್ತಿಯನ್ನು ನಾವು ತೋರಿಲು ಬಯಸಬೇಕು.​—⁠1 ತಿಮೊಥೆಯ 5:4; 6:6; 2 ತಿಮೊಥೆಯ 3:⁠5.

ವಿವಾಹ ಎಷ್ಟು ಕಾಲ ಬಾಳುವುದು?

3. (ಎ) ಅನೇಕ ವಿವಾಹಗಳಿಗೆ ಏನು ಸಂಭವಿಸುತ್ತಿದೆ, ಆದರೆ ನಮ್ಮ ದೃಢನಿಶ್ಚಯ ಏನಾಗಿರಬೇಕು? (ಬಿ) ನಿಮ್ಮ ಬೈಬಲನ್ನು ಉಪಯೋಗಿಸುತ್ತಾ, ಈ ಪರಿಚ್ಛೇದದ ಕೆಳಗಿರುವ ಪ್ರಶ್ನೆಗಳನ್ನು ಉತ್ತರಿಸಿರಿ.

3 ಹೆಚ್ಚೆಚ್ಚಾಗಿ, ವಿವಾಹ ಬಂಧಗಳು ಸುಲಭವಾಗಿ ಒಡೆಯುವವುಗಳಾಗಿ ಪರಿಣಮಿಸುತ್ತಿವೆ. ವರ್ಷಗಳ ಕಾಲ ಒಟ್ಟಿಗಿದ್ದ ಕೆಲವು ದಂಪತಿಗಳು ವಿವಾಹ ವಿಚ್ಛೇದ ಮಾಡಿ ಇನ್ನೊಬ್ಬರನ್ನು ಮದುವೆ ಮಾಡಿಕೊಳ್ಳುತ್ತಾರೆ. ಅಲ್ಲದೆ, ಸ್ವಲ್ಪಕಾಲ ವಿವಾಹಿತರಾಗಿದ್ದು ಪ್ರತ್ಯೇಕವಾಸಿಗಳಾಗುವ ಯುವ ದಂಪತಿಗಳ ಕುರಿತು ಕೇಳುವುದು ಈಗ ಅಸಾಮಾನ್ಯವಾಗಿರುವುದಿಲ್ಲ. ಆದರೆ ಬೇರೆಯವರು ಏನೇ ಮಾಡಲಿ, ನಾವು ಯೆಹೋವನನ್ನು ಮೆಚ್ಚಿಸಲು ಬಯಸಬೇಕು. ಆದುದರಿಂದ, ವಿವಾಹದ ಶಾಶ್ವತತೆಯ ಕುರಿತು ದೇವರ ವಾಕ್ಯವು ಹೇಳುವುದನ್ನು ನೋಡಲು ಈ ಕೆಳಗಣ ಪ್ರಶ್ನೆಗಳನ್ನೂ ಶಾಸ್ತ್ರವಚನಗಳನ್ನೂ ಪರಿಗಣಿಸೋಣ.

ವಿವಾಹದ ಬಳಿಕ ಪುರುಷನೂ ಸ್ತ್ರೀಯೂ ಎಷ್ಟು ಕಾಲ ಜೊತೆಯಾಗಿ ಜೀವಿಸಬೇಕೆಂದು ನಿರೀಕ್ಷಿಸಲಾಗುತ್ತದೆ? (ಮಾರ್ಕ 10:6-9; ರೋಮಾಪುರ 7:2, 3)

ವಿವಾಹ ವಿಚ್ಛೇದಕ್ಕೆ ದೇವರ ದೃಷ್ಟಿಯಲ್ಲಿ ನ್ಯಾಯಬದ್ಧವಾಗಿರುವ ಮತ್ತು ಪುನರ್ವಿವಾಹದ ಸಾಧ್ಯತೆಯಿರುವ ಏಕಮಾತ್ರ ಆಧಾರವು ಯಾವುದು? (ಮತ್ತಾಯ 5:31, 32; 19:3-9)

ತನ್ನ ವಾಕ್ಯವು ನಿರ್ದೇಶಿಸದ ವಿವಾಹ ವಿಚ್ಛೇದಗಳ ಬಗ್ಗೆ ಯೆಹೋವನಿಗೆ ಹೇಗನಿಸುತ್ತದೆ? (ಮಲಾಕಿಯ 2:​13-16)

ವೈವಾಹಿಕ ಸಮಸ್ಯೆಗಳನ್ನು ಬಗೆಹರಿಸಲು ಪ್ರತ್ಯೇಕವಾಸವನ್ನು ಬೈಬಲು ಸಮರ್ಥಿಸುತ್ತದೊ? (1 ಕೊರಿಂಥ 7:​10-13)

ಯಾವ ಪರಿಸ್ಥಿತಿಗಳಿರುವಲ್ಲಿ ಮಾತ್ರ ಪ್ರತ್ಯೇಕವಾಸಕ್ಕೆ ಆಧಾರವಿದ್ದೀತು? (ಕೀರ್ತನೆ 11:5; ಲೂಕ 4:8; 1 ತಿಮೊಥೆಯ 5:8)

4. ಕೆಲವು ವಿವಾಹಗಳು ದೀರ್ಘಕಾಲ ಬಾಳುವುದೇಕೆ?

4 ಕೆಲವು ವಿವಾಹಗಳು ಯಶಸ್ವಿಯಾಗಿ ದೀರ್ಘಕಾಲ ಬಾಳುತ್ತವೆ. ಅದೇಕೆ? ಹುಡುಗ ಮತ್ತು ಹುಡುಗಿ ಇಬ್ಬರೂ ಪ್ರೌಢರಾಗುವ ತನಕ ಕಾಯುವುದು ಒಂದು ಮುಖ್ಯ ಸಂಗತಿಯಾದರೂ, ಒಬ್ಬನ ಅಭಿರುಚಿಗಳಲ್ಲಿ ಭಾಗಿಯಾಗಿದ್ದು ವಿಷಯಗಳನ್ನು ಬಿಚ್ಚುಮನಸ್ಸಿನಿಂದ ಚರ್ಚಿಸುವ ಸಂಗಾತಿಯನ್ನು ಕಂಡುಹಿಡಿಯುವುದೂ ಪ್ರಾಮುಖ್ಯವಾಗಿದೆ. ಆದರೆ ಇದಕ್ಕಿಂತಲೂ ಹೆಚ್ಚು ಪ್ರಾಮುಖ್ಯವಾದ ವಿಷಯವು, ಯೆಹೋವನನ್ನು ಪ್ರೀತಿಸಿ, ಸಮಸ್ಯೆಗಳನ್ನು ಬಗೆಹರಿಸಲು ಆಧಾರವಾಗಿ ಆತನ ವಾಕ್ಯವನ್ನು ಗೌರವಿಸುವ ಸಂಗಾತಿಯನ್ನು ಕಂಡುಕೊಳ್ಳುವುದೇ. (ಕೀರ್ತನೆ 119:97, 104; 2 ತಿಮೊಥೆಯ 3:16, 17) ಆಗ ಅಂತಹ ವ್ಯಕ್ತಿಯು, ವಿವಾಹದಲ್ಲಿ ಸಂಗತಿಗಳು ಸುಗಮವಾಗಿ ಸಾಗದಿರುವಲ್ಲಿ ತಾನು ಪ್ರತ್ಯೇಕವಾಸವನ್ನೊ ವಿವಾಹ ವಿಚ್ಛೇದವನ್ನೊ ಪಡೆಯಬಲ್ಲೆನು ಎಂದು ನೆನಸನು. ತನ್ನ ಸಂಗಾತಿಯ ತಪ್ಪುಗಳನ್ನು ನೆವವಾಗಿ ಮಾಡಿ ತನ್ನ ಸ್ವಂತ ಜವಾಬ್ದಾರಿಗಳಿಂದ ಅವನು ತಪ್ಪಿಸಿಕೊಳ್ಳನು. ಇದಕ್ಕೆ ಬದಲಾಗಿ, ಅವನು ಸಮಸ್ಯೆಗಳನ್ನು ನಿಭಾಯಿಸಿ ಅದಕ್ಕೆ ಕಾರ್ಯಸಾಧಕ ಪರಿಹಾರವನ್ನು ಕಂಡುಹಿಡಿಯುವನು.

5. (ಎ) ವಿವಾಹದಲ್ಲಿ ಯೆಹೋವನಿಗೆ ತೋರಿಸುವ ನಿಷ್ಠೆಯು ಹೇಗೆ ಸೇರಿದೆ? (ಬಿ) ವಿರೋಧ ಬರುವುದಾದರೂ, ಯೆಹೋವನ ಮಟ್ಟಗಳಿಗೆ ಹೊಂದಿಕೊಂಡಿರುವುದರಿಂದ ಬರಸಾಧ್ಯವಿರುವ ಪ್ರಯೋಜನಗಳಾವುವು?

5 ನಾವು ಕಷ್ಟವನ್ನು ಅನುಭವಿಸುವಲ್ಲಿ ಯೆಹೋವನ ಮಾರ್ಗಗಳನ್ನು ತ್ಯಜಿಸುತ್ತೇವೆಂದು ಸೈತಾನನು ಪ್ರತಿಪಾದಿಸುತ್ತಾನೆ. (ಯೋಬ 2:4, 5; ಜ್ಞಾನೋಕ್ತಿ 27:11) ಆದರೆ ವಿರೋಧಿಸುವ ಸಂಗಾತಿಗಳಿಂದ ಬಾಧೆಪಟ್ಟಿರುವ ಯೆಹೋವನ ಸಾಕ್ಷಿಗಳಲ್ಲಿ ಅತ್ಯಧಿಕಾಂಶ ಮಂದಿ ತಮ್ಮ ವಿವಾಹ ಪ್ರತಿಜ್ಞೆಗಳನ್ನು ತ್ಯಜಿಸಿರುವುದಿಲ್ಲ. ಅವರು ಯೆಹೋವನಿಗೆ ಮತ್ತು ಆತನ ಆಜ್ಞೆಗಳಿಗೆ ನಿಷ್ಠಾವಂತರಾಗಿಯೇ ಇದ್ದಾರೆ. (ಮತ್ತಾಯ 5:37) ಹೀಗೆ ಸಹಿಸಿಕೊಂಡು ಬಂದಿರುವ ಕೆಲವರು, ಅನೇಕ ವರುಷಗಳ ತನಕ ವಿರೋಧಿಸಿದ ಮೇಲೆಯೂ ತಮ್ಮ ಸಂಗಾತಿಯು ಯೆಹೋವನನ್ನು ಸೇವಿಸುವುದರಲ್ಲಿ ತಮ್ಮನ್ನು ಜೊತೆಗೂಡುವುದನ್ನು ನೋಡಿ ಸಂತಸವನ್ನು ಅನುಭವಿಸಿದ್ದಾರೆ! (1 ಪೇತ್ರ 3:​1, 2) ಆದರೆ ಯಾವ ಬದಲಾವಣೆಯನ್ನೂ ತೋರಿಸದ ಸಂಗಾತಿಗಳಿರುವ ಕ್ರೈಸ್ತರು ಅಥವಾ ತಾವು ಯೆಹೋವನನ್ನು ಸೇವಿಸುವ ಕಾರಣ ತಮ್ಮನ್ನು ತ್ಯಜಿಸಿದ ಸಂಗಾತಿಗಳಿರುವ ಕ್ರೈಸ್ತರು, ತಾವು ಮನೆಯಲ್ಲಿ ದೈವಿಕ ಭಕ್ತಿಯನ್ನು ತೋರಿಸಿರುವ ರುಜುವಾತನ್ನು ಕೊಟ್ಟಿರುವುದಕ್ಕಾಗಿ ಆಶೀರ್ವದಿಸಲ್ಪಡುವೆವು ಎಂಬುದನ್ನು ತಿಳಿದಿದ್ದಾರೆ.​—⁠ಕೀರ್ತನೆ 55:22; 145:16.

ಪ್ರತಿಯೊಬ್ಬನು ತನ್ನ ಪಾಲನ್ನು ಮಾಡುವುದು

6. ಯಶಸ್ವಿದಾಯಕ ವಿವಾಹವಿರಬೇಕಾದರೆ ಯಾವ ಏರ್ಪಾಡನ್ನು ಗೌರವಿಸತಕ್ಕದ್ದು?

6 ಯಶಸ್ವಿಯಾಗಿರುವ ವಿವಾಹದಲ್ಲಿ ಕೇವಲ ಜೊತೆಯಾಗಿ ಜೀವಿಸುವುದಕ್ಕಿಂತ ಹೆಚ್ಚಿನ ವಿಷಯವು ಸೇರಿದೆ. ತಲೆತನದ ವಿಷಯದಲ್ಲಿ ಯೆಹೋವನ ಏರ್ಪಾಡಿಗೆ ತೋರಿಸುವ ಗೌರವವು ಪ್ರತಿ ಸಂಗಾತಿಗಿರಬೇಕಾದ ಮೂಲಾವಶ್ಯಕತೆಯಾಗಿದೆ. ಇದು ಮನೆಯಲ್ಲಿ ಸುವ್ಯವಸ್ಥೆ ಮತ್ತು ಭದ್ರತೆಯ ಪ್ರಜ್ಞೆಗೆ ನಡೆಸುತ್ತದೆ. ನಾವು 1 ಕೊರಿಂಥ 11:3ರಲ್ಲಿ ಓದುವುದು: “ಪ್ರತಿ ಪುರುಷನಿಗೂ ಕ್ರಿಸ್ತನು ತಲೆ, ಸ್ತ್ರೀಗೆ ಪುರುಷನು ತಲೆ, ಕ್ರಿಸ್ತನಿಗೆ ದೇವರು ತಲೆ ಆಗಿದ್ದಾನೆ.”

7. ಕುಟುಂಬದಲ್ಲಿ ತಲೆತನವನ್ನು ಹೇಗೆ ವಹಿಸಿಕೊಳ್ಳಬೇಕು?

7 ಆ ವಚನವು ಪ್ರಥಮವಾಗಿ ಏನು ಹೇಳಿತೆಂಬುದನ್ನು ನೀವು ಗಮನಿಸಿದಿರೊ? ಹೌದು, ಪ್ರತಿ ಪುರುಷನಿಗೆ, ಅವನು ಯಾರಿಗೆ ಅಧೀನನಾಗಿರಬೇಕೊ ಅಂತಹ ತಲೆಯಾದ ಕ್ರಿಸ್ತನಿದ್ದಾನೆ. ಅಂದರೆ ಕ್ರಿಸ್ತನ ಗುಣಗಳನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಗಂಡನು ತಲೆತನವನ್ನು ವಹಿಸಬೇಕೆಂದು ಅರ್ಥ. ಕ್ರಿಸ್ತನು ಯೆಹೋವನಿಗೆ ಅಧೀನನಾಗಿ, ಸಭೆಯನ್ನು ಆಳವಾಗಿ ಪ್ರೀತಿಸಿ, ಅದರ ಪರಾಮರಿಕೆಯನ್ನು ಮಾಡುತ್ತಾನೆ. (1 ತಿಮೊಥೆಯ 3:15) ಅದಕ್ಕಾಗಿ ಅವನು “ತನ್ನನ್ನು ಒಪ್ಪಿಸಿಕೊಟ್ಟನು” ಕೂಡ. ಯೇಸು ಹೆಮ್ಮೆಯುಳ್ಳವನೂ ದಯಾರಹಿತನೂ ಆಗಿರದೆ, “ಸಾತ್ವಿಕನೂ ದೀನಮನಸ್ಸುಳ್ಳವನೂ” ಆಗಿದ್ದಾನೆ. ಅವನ ತಲೆತನದ ಕೆಳಗೆ ಬರುವವರಿಗೆ “ವಿಶ್ರಾಂತಿ ಸಿಕ್ಕುವದು.” ಒಬ್ಬ ಪತಿಯು ತನ್ನ ಕುಟುಂಬದೊಂದಿಗೆ ಈ ರೀತಿ ವರ್ತಿಸುವಲ್ಲಿ, ಅವನು ತನ್ನನ್ನು ಕ್ರಿಸ್ತನಿಗೆ ಅಧೀನಪಡಿಸಿಕೊಳ್ಳುತ್ತಾನೆಂದು ತೋರಿಸುತ್ತಾನೆ. ಆಗ ಕ್ರೈಸ್ತ ಪತ್ನಿಯು ತನ್ನ ಪತಿಯೊಂದಿಗೆ ಸಹಕರಿಸಿ, ಅವನ ತಲೆತನಕ್ಕೆ ಅಧೀನತೆ ತೋರಿಸುವುದನ್ನು ಪ್ರಯೋಜನಕರವೂ ವಿಶ್ರಾಂತಿದಾಯಕವೂ ಆಗಿದೆಯೆಂದು ಕಂಡುಕೊಳ್ಳುತ್ತಾಳೆ.​—⁠ಎಫೆಸ 5:25-33; ಮತ್ತಾಯ 11:28, 29; ಜ್ಞಾನೋಕ್ತಿ 31:10, 28.

8. (ಎ) ಕೆಲವು ಮನೆಗಳಲ್ಲಿ ಕ್ರೈಸ್ತ ವಿಧಾನಗಳು ಅಪೇಕ್ಷಿತ ಫಲವನ್ನು ಫಲಿಸುವುದಿಲ್ಲವೆಂಬಂತೆ ಏಕೆ ಕಂಡುಬರಬಹುದು? (ಬಿ) ಅಂತಹ ಸನ್ನಿವೇಶವನ್ನು ಎದುರಿಸುವಾಗ ನಾವೇನು ಮಾಡಬೇಕು?

8 ಆದರೂ ಸಮಸ್ಯೆಗಳು ತಲೆದೋರುವುದೇನೊ ನಿಶ್ಚಯ. ಏಕೆಂದರೆ ಕುಟುಂಬದಲ್ಲಿ ಯಾರೇ ಆಗಲಿ ಬೈಬಲ್‌ ಮೂಲತತ್ತ್ವಗಳನ್ನು ಅನ್ವಯಿಸಿಕೊಳ್ಳತೊಡಗುವ ಮೊದಲೇ, ಇತರರಿಂದ ಮಾರ್ಗದರ್ಶಿಸಲ್ಪಡುವ ವಿಷಯದಲ್ಲಿ ಒಬ್ಬನಲ್ಲಿ ತೀವ್ರವಾದ ಅಸಮಾಧಾನ ಹುಟ್ಟಿದ್ದೀತು. ಹಾಗಿರುವಾಗ, ದಯಾಭಾವದ ವಿನಂತಿ ಮತ್ತು ಪ್ರೀತಿಯಿಂದ ಮಾತಾಡುವ ವಿಧಾನವು ಸಫಲಗೊಳ್ಳದಂತೆ ಕಂಡುಬಂದೀತು. “ಕೋಪ ಕ್ರೋಧ ಕಲಹ ದೂಷಣೆ”ಗಳನ್ನು ತೊಲಗಿಸಿಬಿಡಬೇಕೆಂದು ಬೈಬಲು ಹೇಳುತ್ತದೆಂಬುದು ನಮಗೆ ತಿಳಿದದೆ. (ಎಫೆಸ 4:31) ಆದರೆ ಕೆಲವರಿಗೆ ಈ ರೀತಿಯ ಮಾತಲ್ಲದೆ ಬೇರೆ ಯಾವ ಮಾತಿನ ವಿಧವೂ ತಿಳಿಯದಿರುವಲ್ಲಿ, ಏನು ಮಾಡಸಾಧ್ಯವಿದೆ? ಯೇಸು ತನ್ನನ್ನು ಬೈದು ಬೆದರಿಸಿದವರನ್ನು ಅನುಕರಿಸದೆ, ತನ್ನ ತಂದೆಯ ಮೇಲೆ ಆತುಕೊಂಡನು. (1 ಪೇತ್ರ 2:​22, 23) ಆದುದರಿಂದ, ಮನೆಯಲ್ಲಿ ತೊಡಕಿನ ಪ್ರಸಂಗಗಳು ಎದುರಾಗುವಾಗ, ಲೋಕರೀತಿಗಳನ್ನು ಆಯ್ದುಕೊಳ್ಳುವ ಬದಲು ಸಹಾಯಕ್ಕಾಗಿ ಯೆಹೋವನಿಗೆ ಪ್ರಾರ್ಥಿಸಿ, ದೈವಿಕ ಭಕ್ತಿಯ ರುಜುವಾತನ್ನು ಕೊಡಿರಿ.​—⁠ಜ್ಞಾನೋಕ್ತಿ 3:​5-7.

9. ತಪ್ಪು ಹುಡುಕುವ ಬದಲಿಗೆ ಅನೇಕ ಕ್ರೈಸ್ತ ಗಂಡಂದಿರು ಏನು ಮಾಡಲು ಕಲಿತಿದ್ದಾರೆ?

9 ಬದಲಾವಣೆಗಳು ಸದಾ ಕ್ಷಣಮಾತ್ರದಲ್ಲಿ ಬರುವುದಿಲ್ಲವಾದರೂ, ಬೈಬಲ್‌ ಸಲಹೆಯನ್ನು ತಾಳ್ಮೆಯಿಂದಲೂ ಶ್ರದ್ಧೆಯಿಂದಲೂ ಅನ್ವಯಿಸಿಕೊಳ್ಳುವಲ್ಲಿ ಅದು ನಿಜವಾಗಿಯೂ ಕಾರ್ಯಸಾಧಕವಾಗಿದೆ. ಅನೇಕ ಗಂಡಂದಿರು, ಕ್ರಿಸ್ತನು ಸಭೆಯೊಂದಿಗೆ ವ್ಯವಹರಿಸಿದ ರೀತಿಯನ್ನು ಗಣ್ಯಮಾಡತೊಡಗಿದಾಗ ತಮ್ಮ ವಿವಾಹ ಜೀವಿತವು ಉತ್ತಮಗೊಳ್ಳತೊಡಗಿತೆಂದು ಕಂಡುಹಿಡಿದರು. ಆ ಸಭೆಯು ಪರಿಪೂರ್ಣ ಮಾನವರಿಂದ ರಚಿತವಾಗಿಲ್ಲ. ಆದರೂ, ಯೇಸು ಅದನ್ನು ಪ್ರೀತಿಸಿ, ಅದಕ್ಕೆ ಉತ್ತಮ ಮಾದರಿಯನ್ನಿಟ್ಟು, ಅದು ಉತ್ತಮಗೊಳ್ಳುವಂತೆ ಶಾಸ್ತ್ರವಚನಗಳನ್ನು ಉಪಯೋಗಿಸುತ್ತಾನೆ. ಅವನು ಸಭೆಯ ಪರವಾಗಿ ತನ್ನ ಪ್ರಾಣವನ್ನು ತೆತ್ತನು. (1 ಪೇತ್ರ 2:21) ಅವನ ಮಾದರಿಯು ಅನೇಕ ಕ್ರೈಸ್ತ ಪತಿಗಳನ್ನು, ಅವರು ಉತ್ತಮ ತಲೆತನವನ್ನು ಒದಗಿಸುವಂತೆಯೂ ವಿವಾಹದ ಉತ್ತಮಗೊಳ್ಳುವಿಕೆಗೆ ಬೇಕಾಗುವ ಪ್ರೀತಿಪೂರ್ವಕವಾದ ಸಹಾಯವನ್ನು ಕೊಡುವಂತೆಯೂ ಪ್ರೋತ್ಸಾಹಿಸಿದೆ. ಇದು ತಪ್ಪು ಹುಡುಕುವುದು ಅಥವಾ ಮಾತಾಡದಿರುವುದಕ್ಕಿಂತ ಹೆಚ್ಚು ಉತ್ತಮವಾದ ಫಲವನ್ನು ಕೊಡುತ್ತದೆ.

10. (ಎ) ಗಂಡನು ಅಥವಾ ಹೆಂಡತಿಯು​—⁠ಕ್ರೈಸ್ತರೆಂದು ಹೇಳಿಕೊಳ್ಳುವವರು ಸಹ​—⁠ಮನೆಯಲ್ಲಿರುವ ಇತರರಿಗೆ ಜೀವಿಸುವುದನ್ನು ಕಷ್ಟಕರವಾಗಿ ಹೇಗೆ ಮಾಡಬಹುದು? (ಬಿ) ಪರಿಸ್ಥಿತಿಯನ್ನು ಸುಧಾರಿಸಲು ಏನು ಮಾಡಬಹುದು?

10 ಒಬ್ಬ ಗಂಡನು ತನ್ನ ಕುಟುಂಬದ ಭಾವನಾತ್ಮಕ ಆವಶ್ಯಕತೆಗಳನ್ನು ಅಲಕ್ಷಿಸುವಲ್ಲಿ ಅಥವಾ ಬೈಬಲಿನ ಕುಟುಂಬ ಚರ್ಚೆ ಮತ್ತು ಇತರ ಚಟುವಟಿಕೆಗಳಲ್ಲಿ ಆರಂಭದ ಹೆಜ್ಜೆಯನ್ನು ತೆಗೆದುಕೊಳ್ಳದಿರುವಲ್ಲಿ ಆಗೇನು? ಅಥವಾ ಒಬ್ಬ ಹೆಂಡತಿಯು ಸಹಕರಿಸದೆ, ದೈವಿಕ ಅಧೀನತೆಯನ್ನು ತೋರಿಸಲು ನಿರಾಕರಿಸುವಲ್ಲಿ ಆಗೇನು? ಕೆಲವರು ಸಮಸ್ಯೆಗಳ ಕುರಿತು ಗೌರವಪೂರ್ಣವಾದ ಕುಟುಂಬ ಚರ್ಚೆಯನ್ನು ಮಾಡುವ ಮೂಲಕ ಉತ್ತಮ ಫಲವನ್ನು ಪಡೆಯುತ್ತಾರೆ. (ಆದಿಕಾಂಡ 21:​10-12; ಜ್ಞಾನೋಕ್ತಿ 15:22) ಆದರೆ ನಾವು ನಿರೀಕ್ಷಿಸಿದಷ್ಟು ಫಲವು ಬರದಿದ್ದರೂ, ದೇವರಾತ್ಮದ ಫಲಕ್ಕೆ ನಮ್ಮ ಜೀವನದಲ್ಲಿ ಸ್ಥಳಮಾಡಿಕೊಟ್ಟು, ಕುಟುಂಬದ ಇತರ ಸದಸ್ಯರಿಗೆ ಪ್ರೀತಿಪೂರ್ವಕವಾದ ಚಿಂತೆಯನ್ನು ತೋರಿಸುವ ಮೂಲಕ ಪ್ರತಿಯೊಬ್ಬನು ಉತ್ತಮ ಗೃಹ ಪರಿಸರಕ್ಕೆ ಸಹಾಯಮಾಡಬಲ್ಲನು. (ಗಲಾತ್ಯ 5:22) ಪ್ರಗತಿಯು, ಇತರರು ತಮ್ಮ ಭಾಗವನ್ನು ಮಾಡುವಂತೆ ಕಾಯುವುದರಿಂದಲ್ಲ, ನಮ್ಮ ಸ್ವಂತ ಭಾಗವನ್ನು ಪೂರೈಸಿ, ನಾವು ದೈವಿಕ ಭಕ್ತಿಯನ್ನು ಆಚರಿಸುತ್ತೇವೆಂದು ತೋರಿಸುವುದರಿಂದ ಬರುತ್ತದೆ.​—⁠ಕೊಲೊಸ್ಸೆ 3:​18-21.

ಉತ್ತರಗಳನ್ನು ಎಲ್ಲಿ ಕಂಡುಕೊಳ್ಳಬಲ್ಲೆವು?

11, 12. ಕುಟುಂಬ ಜೀವನವನ್ನು ಸಫಲಗೊಳಿಸಲು ಯೆಹೋವನು ಏನನ್ನು ಒದಗಿಸಿದ್ದಾನೆ?

11 ಜನರು ಕುಟುಂಬ ವಿಚಾರಗಳ ಕುರಿತಾದ ಸಲಹೆಗಾಗಿ ಹೋಗುವ ಮೂಲಗಳು ಅನೇಕ ಇವೆ. ಆದರೆ ದೇವರ ವಾಕ್ಯದಲ್ಲಿ ಅತಿ ಉತ್ಕೃಷ್ಟ ಸಲಹೆಯು ಅಡಕವಾಗಿದೆ ಎಂಬುದು ನಮಗೆ ತಿಳಿದಿದೆ. ಮತ್ತು ದೇವರು ತನ್ನ ದೃಶ್ಯ ಸಂಸ್ಥೆಯ ಮೂಲಕ ಅದನ್ನು ಅನ್ವಯಿಸಿಕೊಳ್ಳಲು ನಮಗೆ ಸಹಾಯಮಾಡುತ್ತಾನೆಂಬುದಕ್ಕೆ ನಾವು ಆಭಾರಿಗಳು. ಆ ಸಹಾಯದಿಂದ ನೀವು ಪೂರ್ಣ ಪ್ರಯೋಜನವನ್ನು ಪಡೆಯುತ್ತಿದ್ದೀರೊ?​—⁠ಕೀರ್ತನೆ 119:129, 130; ಮೀಕ 4:⁠2.

12 ಸಭಾ ಕೂಟಗಳ ಉಪಸ್ಥಿತಿಯಲ್ಲದೆ, ಕುಟುಂಬ ಬೈಬಲ್‌ ಅಧ್ಯಯನಕ್ಕಾಗಿ ನೀವು ಕ್ರಮದ ಸಮಯವನ್ನು ಬದಿಗಿರಿಸಿದ್ದೀರೊ? ಹಾಗೆ ಮಾಡುವ ಕುಟುಂಬಗಳು ಆರಾಧನೆಯಲ್ಲಿ ಐಕ್ಯದ ಕಡೆಗೆ ಸಾಗಲು ಪ್ರಯತ್ನಿಸಬಲ್ಲವು. ಆ ಕುಟುಂಬಗಳ ಸದಸ್ಯರು ದೇವರ ವಾಕ್ಯವನ್ನು ತಮ್ಮ ಸ್ವಂತ ಪರಿಸ್ಥಿತಿಗಳಿಗೆ ಹೊಂದಿಸಿಕೊಳ್ಳುವಾಗ, ಅವರ ಕುಟುಂಬ ಜೀವನವು ಸಂಪದ್ಯುಕ್ತವಾಗುತ್ತದೆ.​—⁠ಧರ್ಮೋಪದೇಶಕಾಂಡ 11:​18-21.

13. (ಎ) ನಮಗೆ ಕುಟುಂಬ ವಿಚಾರಗಳಲ್ಲಿ ಪ್ರಶ್ನೆಗಳಿರುವಲ್ಲಿ, ಬೇಕಾಗುವ ಸಹಾಯವನ್ನು ನಾವು ಅನೇಕವೇಳೆ ಎಲ್ಲಿ ಕಂಡುಕೊಳ್ಳಸಾಧ್ಯವಿದೆ? (ಬಿ) ನಾವು ಮಾಡುವ ಎಲ್ಲಾ ನಿರ್ಣಯಗಳಲ್ಲಿ ಯಾವುದು ಪ್ರತಿಬಿಂಬಿಸಲ್ಪಡಬೇಕು?

13 ಕೌಟುಂಬಿಕ ವಿಚಾರಗಳ ಕುರಿತು ನಿಮಗೆ ಪ್ರಶ್ನೆಗಳಿರಬಹುದು. ಉದಾಹರಣೆಗೆ, ಜನನ ನಿಯಂತ್ರಣದ ಕುರಿತೇನು? ಗರ್ಭಪಾತವು ಎಂದಾದರೂ ನ್ಯಾಯಸಮ್ಮತವಾಗುವುದುಂಟೊ? ಮಗನು ಆತ್ಮಿಕ ವಿಷಯಗಳಲ್ಲಿ ಆಸಕ್ತಿಯನ್ನು ತೋರಿಸದಿರುವಲ್ಲಿ, ಕುಟುಂಬದ ಆರಾಧನೆಯಲ್ಲಿ ಅವನು ಭಾಗವಹಿಸಬೇಕೆಂದು ಹೇಳುವುದರಲ್ಲಿ ನಾವು ಎಷ್ಟರ ಮಟ್ಟಿಗೆ ಮುಂದುವರಿಯಬಹುದು? ಇಂತಹ ಅನೇಕ ಪ್ರಶ್ನೆಗಳು ಯೆಹೋವನ ಸಾಕ್ಷಿಗಳ ಸಾಹಿತ್ಯಗಳಲ್ಲಿ ಚರ್ಚಿಸಲ್ಪಟ್ಟಿವೆ. ಆದುದರಿಂದ, ಇವುಗಳಿಗೆ ಉತ್ತರಗಳನ್ನು ಪಡೆಯಲು ವಿಷಯಸೂಚಿ ಮೊದಲಾದ ಬೈಬಲ್‌ ಅಧ್ಯಯನ ಸಹಾಯಕಗಳನ್ನು ಉಪಯೋಗಿಸಲು ಕಲಿಯಿರಿ. ವಿಷಯಸೂಚಿಯಲ್ಲಿ ಸೂಚಿಸಲಾಗಿರುವ ಪುಸ್ತಕಗಳು ನಿಮ್ಮಲ್ಲಿ ಇಲ್ಲವಾದರೆ, ರಾಜ್ಯ ಸಭಾಗೃಹದ ಲೈಬ್ರರಿಯಲ್ಲಿ ಅವುಗಳನ್ನು ಹುಡುಕಿರಿ. ಅಥವಾ, ನಿಮ್ಮ ಕಂಪ್ಯೂಟರ್‌ನಲ್ಲಿ ಈ ಪುಸ್ತಕಗಳನ್ನು ಪರೀಕ್ಷಿಸಬಹುದು. ಪ್ರೌಢ ಪುರುಷ ಮತ್ತು ಸ್ತ್ರೀಯರೊಂದಿಗೂ ನಿಮ್ಮ ಪ್ರಶ್ನೆಗಳನ್ನು ನೀವು ಚರ್ಚಿಸಬಲ್ಲಿರಿ. ಆದರೆ ಪ್ರತಿಯೊಂದು ಪ್ರಶ್ನೆಗೆ ಹೀಗೆ ಮಾಡಬೇಕು ಅಥವಾ ಮಾಡಬಾರದು ಎಂಬ ಉತ್ತರಗಳನ್ನು ಸದಾ ಪಡೆಯಲು ನಿರೀಕ್ಷಿಸಬೇಡಿ. ಅನೇಕವೇಳೆ ವ್ಯಕ್ತಿಪರವಾಗಿಯಾಗಲಿ ವಿವಾಹಿತ ಜೊತೆಯಾಗಿಯಾಗಲಿ, ನಿರ್ಧರಿಸುವವರು ನೀವೇ ಆಗಿರಬೇಕು. ಹೀಗೆ, ನೀವು ಬಹಿರಂಗವಾಗಿ ಮಾತ್ರವಲ್ಲ ಮನೆಯಲ್ಲಿಯೂ ದೈವಿಕ ಭಕ್ತಿಯನ್ನು ಆಚರಿಸುತ್ತೀರೆಂಬುದನ್ನು ತೋರಿಸುವ ನಿರ್ಣಯಗಳನ್ನು ಮಾಡಿರಿ.​—⁠ರೋಮಾಪುರ 14:19; ಎಫೆಸ 5:10.

ಪುನರ್ವಿಮರ್ಶೆಯ ಚರ್ಚೆ

• ವಿವಾಹ ಸಂಗಾತಿಗೆ ತೋರಿಸುವ ನಂಬಿಗಸ್ತಿಕೆಯಲ್ಲಿ ಯೆಹೋವನಿಗೆ ತೋರಿಸಬೇಕಾದ ನಿಷ್ಠೆ ಹೇಗೆ ಸೇರಿದೆ?

• ಕುಟುಂಬದ ಸಮಸ್ಯೆಗಳ ಕಾರಣ ಒತ್ತಡಕ್ಕೀಡಾಗುವಾಗ, ದೇವರಿಗೆ ಮೆಚ್ಚಿಗೆಯಾಗಿರುವುದನ್ನು ಮಾಡುವಂತೆ ನಮಗೆ ಯಾವುದು ಸಹಾಯಮಾಡುವುದು?

• ಕುಟುಂಬದಲ್ಲಿರುವ ಇತರರು ತಪ್ಪಿಬೀಳುವುದಾದರೂ, ವಿಷಯವನ್ನು ಉತ್ತಮಗೊಳಿಸಲು ನಾವೇನು ಮಾಡಬಲ್ಲೆವು?

[ಅಧ್ಯಯನ ಪ್ರಶ್ನೆಗಳು]

[ಪುಟ 155ರಲ್ಲಿರುವ ಚಿತ್ರ]

ಗಂಡನ ತಲೆತನವು ಯೇಸುವಿನ ಗುಣಗಳನ್ನು ಪ್ರತಿಬಿಂಬಿಸಬೇಕು

[ಪುಟ 157ರಲ್ಲಿರುವ ಚಿತ್ರ]

ಕುಟುಂಬದೊಂದಿಗೆ ಕ್ರಮಬದ್ಧವಾದ ಬೈಬಲ್‌ ಅಧ್ಯಯನವು ಅದನ್ನು ಐಕ್ಯಗೊಳಿಸಲು ಸಹಾಯಮಾಡುತ್ತದೆ