ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನನ್ನು ಒಬ್ಬನೇ ಸತ್ಯ ದೇವರಾಗಿ ಕೊಂಡಾಡಿರಿ

ಯೆಹೋವನನ್ನು ಒಬ್ಬನೇ ಸತ್ಯ ದೇವರಾಗಿ ಕೊಂಡಾಡಿರಿ

ಅಧ್ಯಾಯ ಎರಡು

ಯೆಹೋವನನ್ನು ಒಬ್ಬನೇ ಸತ್ಯ ದೇವರಾಗಿ ಕೊಂಡಾಡಿರಿ

1. ಒಬ್ಬನೇ ಸತ್ಯ ದೇವರು ಯಾರು?

ಅನೇಕರು ದೇವರುಗಳೆಂದು ವೀಕ್ಷಿಸಲ್ಪಡುವುದಾದರೂ, “ನಮಗಾದರೋ ಒಬ್ಬನೇ ದೇವರಿದ್ದಾನೆ; ಆತನು ತಂದೆಯೆಂಬಾತನೇ” ಎನ್ನುತ್ತದೆ ಬೈಬಲು. (1 ಕೊರಿಂಥ 8:5, 6) ಆ “ಒಬ್ಬನೇ ದೇವರು” ಯೆಹೋವನಾಗಿದ್ದು, ಆತನು ಸಮಸ್ತವನ್ನೂ ಸೃಷ್ಟಿಸಿದಾತನಾಗಿದ್ದಾನೆ. (ಧರ್ಮೋಪದೇಶಕಾಂಡ 6:4; ಪ್ರಕಟನೆ 4:11) ಯೇಸು ಆತನನ್ನು, ‘ನನ್ನ ದೇವರೂ ನಿಮ್ಮ ದೇವರೂ ಆಗಿರುವಾತನು’ ಎಂದು ಹೇಳಿ ಸೂಚಿಸಿದನು. (ಯೋಹಾನ 20:17) ಅದಕ್ಕೆ ಮುಂಚಿತವಾಗಿ, “ಯೆಹೋವನೊಬ್ಬನೇ ದೇವರು, ಬೇರೆ ದೇವರೇ ಇಲ್ಲ” ಎಂದು ಹೇಳಿದ್ದ ಮೋಶೆಯ ಮಾತುಗಳನ್ನು ಅವನು ಒಪ್ಪಿಕೊಂಡನು. (ಧರ್ಮೋಪದೇಶಕಾಂಡ 4:35) ಆರಾಧಿಸಲ್ಪಡುವ ಯಾವುದೇ ವಸ್ತುವಿಗಿಂತಲೂ, ಅದು ವಿಗ್ರಹವಾಗಿರಲಿ, ದೈವೀಕರಿಸಲ್ಪಟ್ಟ ಮಾನವರಾಗಿರಲಿ, ಅಥವಾ “ಈ ಪ್ರಪಂಚದ ದೇವರು” ಆಗಿರುವ ಸೈತಾನನಾಗಿರಲಿ, ಯೆಹೋವನು ಎಷ್ಟೋ ಶ್ರೇಷ್ಠನಾಗಿದ್ದಾನೆ. (2 ಕೊರಿಂಥ 4:​3, 4) ಇವೆಲ್ಲಾ ವಿಷಯಗಳಿಗೆ ವೈದೃಶ್ಯವಾಗಿ ಯೆಹೋವನು, ಯೇಸು ಕ್ರಿಸ್ತನು ಸಂಬೋಧಿಸಿದಂತೆ ‘ಒಬ್ಬನೇ ಸತ್ಯ ದೇವರು’ ಆಗಿದ್ದಾನೆ.​—⁠ಯೋಹಾನ 17:⁠3.

2. ದೇವರ ಕುರಿತು ನಾವು ಕಲಿತಂತೆ, ನಮ್ಮ ಜೀವಿತಗಳು ಹೇಗೆ ಪ್ರಭಾವಿಸಲ್ಪಡಬೇಕು?

2 ಯೆಹೋವನ ಹೃದಯೋಲ್ಲಾಸಪಡಿಸುವ ಗುಣಗಳ ಬಗ್ಗೆ ಹಾಗೂ ಆತನು ಇದುವರೆಗೆ ಮಾಡಿರುವ ಮತ್ತು ಇನ್ನೂ ಮಾಡಲಿರುವ ವಿಷಯಗಳಿಗೆ ಕೃತಜ್ಞರಾಗಿರುವ ಜನರು ಆತನ ಕಡೆಗೆ ಆಕರ್ಷಿಸಲ್ಪಡುತ್ತಾರೆ. ಯೆಹೋವನಿಗಾಗಿರುವ ಅವರ ಪ್ರೀತಿಯು ಬೆಳೆದಂತೆ ಆತನನ್ನು ಕೊಂಡಾಡುವಂತೆ ಅವರು ಪ್ರೇರಿಸಲ್ಪಡುತ್ತಾರೆ. ಹೇಗೆ? ಒಂದು ವಿಧವು, ಆತನ ಕುರಿತು ಇತರರಿಗೆ ತಿಳಿಸುವುದರ ಮೂಲಕವೇ. “ಬಾಯಿಂದ ಅರಿಕೆಮಾಡುವದರ ಮೂಲಕ ರಕ್ಷಣೆಯಾಗುತ್ತದೆ,” ಎನ್ನುತ್ತದೆ ರೋಮಾಪುರ 10:10. ಇನ್ನೊಂದು ವಿಧವು, ನಡೆನುಡಿಗಳಲ್ಲಿ ಆತನನ್ನು ಅನುಸರಿಸುವುದರ ಮೂಲಕವೇ. “ದೇವರ ಪ್ರಿಯರಾದ ಮಕ್ಕಳಿಗೆ ತಕ್ಕ ಹಾಗೆ ಆತನನ್ನು ಅನುಸರಿಸುವವರಾಗಿರಿ” ಎನ್ನುತ್ತದೆ ಎಫೆಸ 5:⁠1. ಇದನ್ನು ಹೆಚ್ಚು ಪೂರ್ಣವಾಗಿ ಮಾಡಬೇಕಾದರೆ, ಆತನು ನಿಜವಾಗಿಯೂ ಯಾವ ಗುಣಗಳುಳ್ಳಾತನು ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ.

3. ದೇವರ ಮುಖ್ಯ ಗುಣಗಳಾವುವು?

3 ದೇವರ ಎದ್ದುಕಾಣುವ ಗುಣಗಳನ್ನು ಗುರುತಿಸಲಿಕ್ಕಾಗಿ ಬೈಬಲಿನಲ್ಲಿ ಅನೇಕ ಹೇಳಿಕೆಗಳಿವೆ. ಆತನ ನಾಲ್ಕು ಮುಖ್ಯ ಗುಣಗಳು, ವಿವೇಕ, ನ್ಯಾಯ, ಶಕ್ತಿ ಮತ್ತು ಪ್ರೀತಿಯಾಗಿವೆ. ‘ಆತನಲ್ಲಿ ವಿವೇಕ ಇದೆ.’ (ಯೋಬ 12:​13, NW) “ಆತನು ನಡಿಸುವದೆಲ್ಲಾ ನ್ಯಾಯ.” (ಓರೆ ಅಕ್ಷರಗಳು ನಮ್ಮವು.) (ಧರ್ಮೋಪದೇಶಕಾಂಡ 32:⁠4) ‘ಆತನು ಮಹಾಶಕ್ತನು.’ (ಯೆಶಾಯ 40:26) “ದೇವರು ಪ್ರೀತಿಸ್ವರೂಪಿ.” (ಓರೆ ಅಕ್ಷರಗಳು ನಮ್ಮವು.) (1 ಯೋಹಾನ 4:⁠8) ಆದರೂ, ದೇವರ ಈ ನಾಲ್ಕು ಮುಖ್ಯ ಗುಣಗಳಲ್ಲಿ ಎದ್ದುಕಾಣುವ, ಅಂದರೆ ಆತನು ಯಾವ ರೀತಿಯ ದೇವರೆಂಬುದನ್ನು ಇತರ ಗುಣಗಳಿಗಿಂತ ಹೆಚ್ಚು ಬಾರಿ ಗುರುತಿಸುವ ಗುಣವು ಯಾವುದು?

“ದೇವರು ಪ್ರೀತಿಸ್ವರೂಪಿ”

4. ದೇವರ ಗುಣಗಳಲ್ಲಿ ಯಾವ ಗುಣವು ವಿಶ್ವವನ್ನೂ ಅದರಲ್ಲಿರುವ ಸಮಸ್ತ ಜೀವಿಗಳನ್ನೂ ಸೃಷ್ಟಿಸುವಂತೆ ಆತನನ್ನು ಪ್ರಚೋದಿಸಿತು?

4 ವಿಶ್ವವನ್ನು ಮತ್ತು ಆತ್ಮಜೀವಿಗಳನ್ನು ಹಾಗೂ ಮಾನವ ಜೀವಿಗಳನ್ನು ಸೃಷ್ಟಿಸುವಂತೆ ಯೆಹೋವನನ್ನು ಯಾವುದು ಪ್ರಚೋದಿಸಿತೆಂಬುದನ್ನು ಪರಿಗಣಿಸಿರಿ. ಅದು ಆತನ ವಿವೇಕ ಅಥವಾ ಶಕ್ತಿ ಆಗಿತ್ತೊ? ಅಲ್ಲ, ಏಕೆಂದರೆ ದೇವರು ಅವನ್ನು ಉಪಯೋಗಿಸಿದರೂ ಅವು ಪ್ರೇರಕ ಶಕ್ತಿಗಳಾಗಿರಲಿಲ್ಲ. ಮತ್ತು ಆತನ ನ್ಯಾಯವು ಜೀವವರವನ್ನು ಆತನು ಇತರರಿಗೆ ಕೊಡುವಂತೆ ಅಗತ್ಯಗೊಳಿಸಲಿಲ್ಲ. ಇದಕ್ಕೆ ಬದಲಾಗಿ, ಬುದ್ಧಿಶಕ್ತಿಯ ವ್ಯಕ್ತಿಯಾಗಿ ಆತನಲ್ಲಿದ್ದ ಆನಂದವನ್ನು ಇತರರೊಂದಿಗೆ ಹಂಚಿಕೊಳ್ಳುವಂತೆ ಆತನನ್ನು ಪ್ರೇರಿಸಿದ್ದು ಆತನ ಮಹಾ ಪ್ರೀತಿಯೇ. ವಿಧೇಯ ಮಾನವಕುಲವು ಪರದೈಸಿನಲ್ಲಿ ಅನಂತವಾಗಿ ಜೀವಿಸಬೇಕೆಂಬ ಆತನ ಉದ್ದೇಶವನ್ನು ಪ್ರೇರಿಸಿದ್ದು ಈ ಪ್ರೀತಿಯೇ. (ಆದಿಕಾಂಡ 1:28; 2:15) ಆದಾಮನ ಪಾಪವು ಮಾನವಕುಲದ ಮೇಲೆ ತಂದಿದ್ದ ದಂಡನೆಯನ್ನು ತೊಲಗಿಸಲಿಕ್ಕಾಗಿ ಏರ್ಪಾಡನ್ನು ಮಾಡುವಂತೆ ಈ ಪ್ರೀತಿಯೇ ಆತನನ್ನು ಪ್ರಚೋದಿಸಿತು.

5. ಬೈಬಲಿಗೆ ಅನುಸಾರವಾಗಿ ಯೆಹೋವನು ಯಾವ ಗುಣದ ವ್ಯಕ್ತೀಕರಣವಾಗಿದ್ದಾನೆ, ಮತ್ತು ಏಕೆ?

5 ಹೀಗೆ, ದೇವರ ಗುಣಗಳಲ್ಲೆಲ್ಲ ಅತ್ಯಂತ ಎದ್ದುಕಾಣುವ ಗುಣವು ಪ್ರೀತಿಯಾಗಿದೆ. ಇದು ಆತನ ಸಾರಸರ್ವಸ್ವ ಅಥವಾ ಪ್ರಕೃತಿಯಾಗಿದೆ. ವಿವೇಕ, ನ್ಯಾಯ ಮತ್ತು ಶಕ್ತಿ ಎಂಬ ಗುಣಗಳು ಪ್ರಾಮುಖ್ಯವೆಂಬುದು ನಿಜವಾದರೂ, ಯೆಹೋವನು ಅವುಗಳ ಸ್ವರೂಪದಲ್ಲಿದ್ದಾನೆ ಎಂದು ಬೈಬಲು ಹೇಳುವುದಿಲ್ಲ. ಆದರೆ ಆತನು ಪ್ರೀತಿಸ್ವರೂಪಿಯಾಗಿದ್ದಾನೆ ಎಂದು ಬೈಬಲು ಖಂಡಿತ ಹೇಳುತ್ತದೆ. ಹೌದು, ಯೆಹೋವನು ಪ್ರೀತಿಯ ವ್ಯಕ್ತೀಕರಣವಾಗಿದ್ದಾನೆ. ಈ ಪ್ರೀತಿಯು ಮೂಲತತ್ತ್ವದಿಂದ ನಿರ್ದೇಶಿಸಲ್ಪಡುತ್ತದೆಯೆ ಹೊರತು ಭಾವಪೂರ್ಣತೆಯಿಂದಲ್ಲ. ದೇವರ ಪ್ರೀತಿಯನ್ನು ಸತ್ಯ ಮತ್ತು ನೀತಿಯ ಮೂಲತತ್ತ್ವಗಳು ನಿರ್ದೇಶಿಸುತ್ತವೆ. ಯೆಹೋವ ದೇವರು ತಾನೇ ಉದಾಹರಿಸಿರುವ ಈ ಪ್ರೀತಿ ಅತ್ಯುಚ್ಚ ರೂಪದ್ದಾಗಿದೆ. ಇಂತಹ ಪ್ರೀತಿಯು ಪೂರ್ತಿ ನಿಸ್ವಾರ್ಥತೆಯ ಅಭಿವ್ಯಕ್ತಿಯಾಗಿದ್ದು, ಯಾವಾಗಲೂ ಕ್ರಿಯೆಗಳ ಸ್ಪಷ್ಟವಾದ ರುಜುವಾತಿನಿಂದ ತೋರಿಸಲ್ಪಡುತ್ತದೆ.

6. ದೇವರು ನಮಗಿಂತ ಶ್ರೇಷ್ಠನಾಗಿರುವುದಾದರೂ, ನಾವು ಆತನನ್ನು ಅನುಕರಿಸುವಂತೆ ಯಾವುದು ಸಾಧ್ಯಗೊಳಿಸುತ್ತದೆ?

6 ನಾವು ಇಂತಹ ಒಬ್ಬ ದೇವರನ್ನು ಅನುಕರಿಸುವಂತೆ ನಮ್ಮನ್ನು ಶಕ್ತರನ್ನಾಗಿ ಮಾಡುವುದು ಪ್ರೀತಿಯ ಈ ಅದ್ಭುತಕರವಾದ ಗುಣವೇ. ನಾವು ಕೆಳಮಟ್ಟದ, ಅಪರಿಪೂರ್ಣ, ದೋಷಪ್ರವೃತ್ತಿಯ ಮಾನವರಾಗಿರುವುದರಿಂದ ಇದನ್ನು ನಾವು ಜಯಪ್ರದವಾಗಿ ಅನುಕರಿಸಲಾರೆವೆಂದು ನೆನಸಬಹುದು. ಆದರೆ ಯೆಹೋವನ ಮಹಾ ಪ್ರೀತಿಯ ಇನ್ನೊಂದು ಮಾದರಿಯು ಇಲ್ಲಿದೆ: ನಮ್ಮ ಇತಿಮಿತಿಗಳನ್ನು ಆತನು ಬಲ್ಲವನಾಗಿರುವುದರಿಂದ ಆತನು ನಮ್ಮಿಂದ ಪರಿಪೂರ್ಣತೆಯನ್ನು ಬಯಸುವುದಿಲ್ಲ. ನಾವು ಈಗ ಪರಿಪೂರ್ಣತೆಯಿಂದ ತುಂಬ ದೂರದಲ್ಲಿದ್ದೇವೆಂಬುದನ್ನು ಆತನು ಬಲ್ಲನು. (ಕೀರ್ತನೆ 51:⁠5) ಆದುದರಿಂದಲೇ, ಕೀರ್ತನೆ 130:​3, 4 ಹೇಳುವುದು: “ಕರ್ತನೇ, ಯಾಹುವೇ, ನೀನು ಪಾಪಗಳನ್ನು ಎಣಿಸುವದಾದರೆ ನಿನ್ನ ಮುಂದೆ ಯಾರು ನಿಂತಾರು? ನೀನು ಪಾಪವನ್ನು ಕ್ಷಮಿಸುವವನು.” ಹೌದು, ಯೆಹೋವನು “ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು.” (ವಿಮೋಚನಕಾಂಡ 34:6) “ಕರ್ತನೇ [“ಯೆಹೋವನೇ,” NW], ನೀನು ಒಳ್ಳೆಯವನೂ ಕ್ಷಮಿಸುವವನೂ . . . ಆಗಿದ್ದೀಯಲ್ಲಾ.” (ಕೀರ್ತನೆ 86:5) ಇದು ಎಷ್ಟು ಸಾಂತ್ವನದಾಯಕ! ಈ ಅದ್ಭುತಕರ ದೇವರನ್ನು ಸೇವಿಸಿ, ಆತನ ಪ್ರೀತಿಯ ಕೃಪಾಪೂರ್ಣ ಪರಾಮರಿಕೆಯನ್ನು ಅನುಭವಿಸುವುದು ಅದೆಷ್ಟು ಚೈತನ್ಯದಾಯಕ!

7. ಯೆಹೋವನ ಪ್ರೀತಿಯನ್ನು ಆತನ ಸೃಷ್ಟಿಕಾರ್ಯಗಳಲ್ಲಿ ಹೇಗೆ ನೋಡಸಾಧ್ಯವಿದೆ?

7 ಯೆಹೋವನ ಪ್ರೀತಿಯನ್ನು ಆತನ ಸೃಷ್ಟಿಕಾರ್ಯಗಳಲ್ಲೂ ನೋಡಸಾಧ್ಯವಿದೆ. ನಮ್ಮ ಸುಖಾನುಭವಕ್ಕಾಗಿ ಆತನು ಕೊಟ್ಟಿರುವ ಸುಂದರವಾದ ಪರ್ವತಗಳು, ವನಗಳು, ಸರೋವರಗಳು ಮತ್ತು ಸಾಗರಗಳಂತಹ ಅನೇಕಾನೇಕ ಉತ್ತಮ ವಿಷಯಗಳ ಬಗ್ಗೆ ಯೋಚಿಸಿರಿ. ನಮ್ಮ ರಸನೇಂದ್ರಿಯಕ್ಕೆ ಹರ್ಷವನ್ನು ತರುವಂತಹ ಮತ್ತು ನಮ್ಮನ್ನು ಪೋಷಿಸುವಂತಹ ಆಹಾರದ ಆಶ್ಚರ್ಯಕರವಾದ ವೈವಿಧ್ಯವನ್ನು ಆತನು ನಮಗೆ ಒದಗಿಸಿದ್ದಾನೆ. ಅಲ್ಲದೆ, ಯೆಹೋವನು ನಮಗೆ ಸುಂದರವೂ ಸುಗಂಧಯುಕ್ತವೂ ಆದ ಹೂವುಗಳ ವಿಸ್ತಾರವಾದ ಶ್ರೇಣಿಯನ್ನು ಹಾಗೂ ವಿಸ್ಮಯಗೊಳಿಸುವ ಪ್ರಾಣಿಸೃಷ್ಟಿಯನ್ನು ಒದಗಿಸಿದ್ದಾನೆ. ಮನುಷ್ಯರಿಗೆ ಆಹ್ಲಾದವನ್ನು ಕೊಡುವ ವಸ್ತುಗಳನ್ನು ಆತನು ಮಾಡಬೇಕೆಂದಿರಲಿಲ್ಲವಾದರೂ, ಆತನು ಹಾಗೆ ಮಾಡಿರುತ್ತಾನೆ. ನಿಜ, ಈ ದುಷ್ಟ ಲೋಕದಲ್ಲಿ ಈಗಿನ ಅಪರಿಪೂರ್ಣ ಪರಿಸ್ಥಿತಿಗಳಲ್ಲಿ ಜೀವಿಸುತ್ತಿರುವಾಗ ನಾವು ಆತನ ಸೃಷ್ಟಿಯನ್ನು ಪೂರ್ಣವಾಗಿ ಆನಂದಿಸಲಾರೆವು. (ರೋಮಾಪುರ 8:22) ಆದರೆ ಯೆಹೋವನು ಪರದೈಸಿನಲ್ಲಿ ನಮಗೆ ಒದಗಿಸಲಿರುವ ವಿಷಯಗಳ ಕುರಿತು ತುಸು ಯೋಚಿಸಿರಿ! “ನೀನು ಕೈದೆರೆದು ಎಲ್ಲಾ ಜೀವಿಗಳ [ಯೋಗ್ಯವಾದ] ಇಷ್ಟವನ್ನು ನೆರವೇರಿಸುತ್ತೀ,” ಎಂಬ ಆಶ್ವಾಸನೆಯನ್ನು ಕೀರ್ತನೆಗಾರನು ಕೊಡುತ್ತಾನೆ.​—⁠ಕೀರ್ತನೆ 145:16.

8. ದೇವರು ನಮಗೆ ತೋರಿಸಿದ ಪ್ರೀತಿಯ ಅತಿ ಎದ್ದುಕಾಣುವ ಮಾದರಿಯು ಯಾವುದು?

8 ಮಾನವಕುಲಕ್ಕೆ ಯೆಹೋವನು ತೋರಿಸಿದ ಪ್ರೀತಿಯ ಅತಿ ಎದ್ದುಕಾಣುವ ಮಾದರಿಯು ಯಾವುದು? ಬೈಬಲು ಹೇಳುವುದು: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” (ಯೋಹಾನ 3:16) ಮನುಷ್ಯನ ಒಳ್ಳೇತನದ ಕಾರಣ ಯೆಹೋವನು ಇದನ್ನು ಮಾಡಿದನೊ? ರೋಮಾಪುರ 5:8 ಉತ್ತರಿಸುವುದು: “ಆದರೆ ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನಮಗೋಸ್ಕರ ಪ್ರಾಣಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ಸಿದ್ಧಾಂತಪಡಿಸಿದ್ದಾನೆ.” ಹೌದು, ದೇವರು ತನ್ನ ಪರಿಪೂರ್ಣ ಮಗನನ್ನು, ಪಾಪ ಮತ್ತು ಮರಣದ ದಂಡನೆಯಿಂದ ನಮ್ಮನ್ನು ವಿಮೋಚಿಸಲಿಕ್ಕಾಗಿ ಆ ಮಗನು ತನ್ನ ಪ್ರಾಣವನ್ನು ವಿಮೋಚನಾ ಯಜ್ಞವಾಗಿ ಕೊಡುವ ಸಲುವಾಗಿ ಕಳುಹಿಸಿದನು. (ಮತ್ತಾಯ 20:28) ಇದು, ದೇವರನ್ನು ಪ್ರೀತಿಸುವವರಿಗೆ ನಿತ್ಯಜೀವವನ್ನು ಪಡೆಯುವ ದಾರಿಯನ್ನು ತೆರೆಯಿತು. ಕೃತಜ್ಞತೆ ತೋರಿಸಬೇಕಾದ ಸಂಗತಿಯೇನಂದರೆ, ದೇವರ ಪ್ರೀತಿಯು ಆತನ ಚಿತ್ತವನ್ನು ಮಾಡಬಯಸುವ ಸಕಲರನ್ನು ಆವರಿಸುತ್ತದೆ. ಏಕೆಂದರೆ ಬೈಬಲು ಹೇಳುವುದು: “ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆ.”​—⁠ಅ. ಕೃತ್ಯಗಳು 10:34, 35.

9. ಯೆಹೋವನು ತನ್ನ ಪುತ್ರನನ್ನು ನಮಗೆ ವಿಮೋಚನಾ ಯಜ್ಞವಾಗಿ ಕೊಟ್ಟಿದ್ದಾನೆಂಬ ನಿಜತ್ವವು ನಮ್ಮನ್ನು ಹೇಗೆ ಪ್ರಭಾವಿಸಬೇಕು?

9 ಯೆಹೋವನು ತನ್ನ ಪುತ್ರನನ್ನು ನಮಗೆ ವಿಮೋಚನಾ ಯಜ್ಞವಾಗಿ ಕೊಟ್ಟಿರುವ ನಿಜತ್ವವು, ನಾವು ಈಗ ನಮ್ಮ ಜೀವಿತಗಳನ್ನು ಉಪಯೋಗಿಸಬೇಕಾದ ವಿಧವನ್ನು ಹೇಗೆ ಪ್ರಭಾವಿಸಬೇಕು? ಇದು ಸತ್ಯ ದೇವರಾದ ಯೆಹೋವನಿಗಾಗಿರುವ ನಮ್ಮ ಪ್ರೀತಿಯನ್ನು ಇನ್ನಷ್ಟು ಆಳಗೊಳಿಸಬೇಕು. ಅದೇ ಸಮಯದಲ್ಲಿ, ದೇವರನ್ನು ಪ್ರತಿನಿಧಿಸುವ ಯೇಸುವಿಗೆ ನಾವು ಕಿವಿಗೊಡಬಯಸುವಂತೆ ಇದು ಮಾಡಬೇಕು. “ಜೀವಿಸುವವರು ಇನ್ನು ಮೇಲೆ ತಮಗಾಗಿ ಜೀವಿಸದೆ ತಮಗೋಸ್ಕರ ಸತ್ತು ಎದ್ದು ಬಂದಾತನಿಗಾಗಿ ಜೀವಿಸಬೇಕೆಂತಲೇ [ಯೇಸು] ಎಲ್ಲರಿಗೋಸ್ಕರ ಸತ್ತನು.” (2 ಕೊರಿಂಥ 5:15) ಯೇಸುವಿನ ಹೆಜ್ಜೆಜಾಡಿನಲ್ಲಿ ನಡೆಯುವುದು ಆಹ್ಲಾದಕರವೇ ಸರಿ, ಏಕೆಂದರೆ ಅವನು ಯೆಹೋವನ ಪ್ರೀತಿ ಮತ್ತು ಕನಿಕರವನ್ನು ಅನುಕರಿಸುವುದರಲ್ಲಿ ಉತ್ತಮ ಮಾದರಿಯಾಗಿದ್ದನು! ಯೇಸು ನಮ್ರರಿಗೆ ಏನು ಹೇಳಿದನೊ ಅದರಿಂದ ಇದು ತಿಳಿದುಬರುತ್ತದೆ: “ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುವೆನು. ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ; ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿಸಿಕ್ಕುವದು. ಯಾಕಂದರೆ ನನ್ನ ನೊಗವು ಮೃದುವಾದದ್ದು; ನನ್ನ ಹೊರೆಯು ಹೌರವಾದದ್ದು.”​—⁠ಮತ್ತಾಯ 11:28-30.

ಇತರರಿಗೆ ಪ್ರೀತಿಯನ್ನು ತೋರಿಸುವುದು

10. ನಾವು ಜೊತೆ ಕ್ರೈಸ್ತರಿಗೆ ಪ್ರೀತಿಯನ್ನು ತೋರಿಸಬಲ್ಲ ಕೆಲವು ವಿಧಗಳಾವುವು?

10 ಯೆಹೋವನೂ ಯೇಸುವೂ ನಮಗೆ ತೋರಿಸಿರುವಂಥ ರೀತಿಯ ಪ್ರೀತಿಯನ್ನು ನಾವು ಜೊತೆ ಕ್ರೈಸ್ತರಿಗೆ ಹೇಗೆ ತೋರಿಸಬಲ್ಲೆವು? ನಾವು ಇದನ್ನು ಮಾಡಬಲ್ಲ ಅನೇಕ ವಿಧಗಳನ್ನು ಗಮನಿಸಿ: “ಪ್ರೀತಿ ಬಹು ತಾಳ್ಮೆಯುಳ್ಳದ್ದು, ಪ್ರೀತಿ ದಯೆ ತೋರಿಸುವದು. ಪ್ರೀತಿಯು ಹೊಟ್ಟೆಕಿಚ್ಚುಪಡುವದಿಲ್ಲ, ಹೊಗಳಿಕೊಳ್ಳುವದಿಲ್ಲ; ಉಬ್ಬಿಕೊಳ್ಳುವದಿಲ್ಲ; ಮರ್ಯಾದೆಗೆಟ್ಟು ನಡೆಯುವದಿಲ್ಲ, ಸ್ವಪ್ರಯೋಜನವನ್ನು ಚಿಂತಿಸುವದಿಲ್ಲ, ಸಿಟ್ಟುಗೊಳ್ಳುವದಿಲ್ಲ, ಅಪಕಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವದಿಲ್ಲ; ಅನ್ಯಾಯವನ್ನು ನೋಡಿ ಸಂತೋಷಪಡದೆ ಸತ್ಯಕ್ಕೆ ಜಯವಾಗುವಲ್ಲಿ ಸಂತೋಷಪಡುತ್ತದೆ; ಎಲ್ಲವನ್ನೂ ಅಡಗಿಸಿಕೊಳ್ಳುತ್ತದೆ, ಎಲ್ಲವನ್ನೂ ನಂಬುತ್ತದೆ, ಎಲ್ಲವನ್ನೂ ನಿರೀಕ್ಷಿಸುತ್ತದೆ, ಎಲ್ಲವನ್ನೂ ಸಹಿಸಿಕೊಳ್ಳುತ್ತದೆ. ಪ್ರೀತಿಯು ಎಂದಿಗೂ ಬಿದ್ದುಹೋಗುವದಿಲ್ಲ.”​—⁠1 ಕೊರಿಂಥ 13:4-8; 1 ಯೋಹಾನ 3:14-18; 4:7-12.

11. ನಾವು ಇನ್ನಾರಿಗೆಲ್ಲ ಪ್ರೀತಿ ತೋರಿಸಬೇಕು, ಮತ್ತು ಹೇಗೆ?

11 ನಾವು ಬೇರೆ ಯಾರಿಗೆಲ್ಲ ಪ್ರೀತಿಯನ್ನು ತೋರಿಸಬೇಕು ಮತ್ತು ಹೇಗೆ? ಯೇಸು ಹೇಳಿದ್ದು: “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ [“ಪವಿತ್ರಾತ್ಮದ,” NW] ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ.” (ಮತ್ತಾಯ 28:19, 20) ಇನ್ನೂ ಜೊತೆ ಕ್ರೈಸ್ತರಾಗಿಲ್ಲದವರೊಂದಿಗೆ ಬರಲಿರುವ ದೇವರ ಪರದೈಸ ನೂತನ ಲೋಕದ ಸುವಾರ್ತೆಯನ್ನು ಹಂಚಿಕೊಳ್ಳುವುದು ಇದರಲ್ಲಿ ಸೇರಿದೆ. ನಮ್ಮದೇ ಆದ ನಂಬಿಕೆಗಳುಳ್ಳವರಿಗೆ ಮಾತ್ರ ನಮ್ಮ ಪ್ರೀತಿಯು ಸೀಮಿತವಾಗಿರಬಾರದೆಂಬುದನ್ನು ಯೇಸು ಹೀಗೆ ಹೇಳುತ್ತಾ ಸ್ಪಷ್ಟವಾಗಿ ತಿಳಿಸಿದನು: “ನಿಮಗೆ ಪ್ರೀತಿ ತೋರಿಸುವವರನ್ನೇ ನೀವು ಪ್ರೀತಿಸಿದರೆ ಫಲವೇನು? ಭ್ರಷ್ಟರೂ ಹಾಗೆ ಮಾಡುವದಿಲ್ಲವೇ. ನಿಮ್ಮ ಸಹೋದರರಿಗೆ ಮಾತ್ರ ನೀವು ಮರ್ಯಾದೆಕೊಟ್ಟರೆ ಏನು ಹೆಚ್ಚು ಮಾಡಿದ ಹಾಗಾಯಿತು? ಅನ್ಯಜನಗಳು ಸಹ ಹಾಗೆ ಮಾಡುವದಿಲ್ಲವೇ.”​—⁠ಮತ್ತಾಯ 5:46, 47; 24:14; ಗಲಾತ್ಯ 6:10.

“ಯೆಹೋವನ ಹೆಸರಿನಲ್ಲಿ” ನಡೆಯುವುದು

12. ದೇವರ ಹೆಸರು ಏಕೆ ಆತನಿಗೆ ಮಾತ್ರ ಅನ್ವಯಿಸಬಲ್ಲದು?

12 ಸತ್ಯ ದೇವರನ್ನು ಕೊಂಡಾಡುವ ಇನ್ನೊಂದು ಪ್ರಮುಖಾಂಶವು, ಯೆಹೋವ ಎಂಬ ಆತನ ಅದ್ವಿತೀಯ ನಾಮವನ್ನು ತಿಳಿದುಕೊಂಡು, ಅದನ್ನು ಉಪಯೋಗಿಸಿ, ಅದರ ಕುರಿತು ಇತರರಿಗೆ ಬೋಧಿಸುವುದೇ ಆಗಿದೆ. ಕೀರ್ತನೆಗಾರನು ಈ ಹೃತ್ಪೂರ್ವಕವಾದ ಅಪೇಕ್ಷೆಯನ್ನು ವ್ಯಕ್ತಪಡಿಸಿದನು: “ಆಗ ಯೆಹೋವನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನೆಂದು ಗ್ರಹಿಸುವರು.” (ಕೀರ್ತನೆ 83:18) ಯೆಹೋವನ ಹೆಸರಿನ ಅರ್ಥವು, “ಆತನು ಆಗುವಂತೆ ಮಾಡುತ್ತಾನೆ” ಎಂದಾಗಿದೆ. ಆತನು ಮಹಾನ್‌ ಉದ್ದೇಶಗಳಿರುವವನೂ ಅವುಗಳನ್ನು ಯಾವಾಗಲೂ ಪೂರೈಸುವವನೂ ಆಗಿದ್ದಾನೆ. ಮತ್ತು ಒಬ್ಬನೇ ಸತ್ಯ ದೇವರು ಆ ಹೆಸರನ್ನು ಯೋಗ್ಯವಾಗಿಯೇ ಧರಿಸಬಲ್ಲನು, ಏಕೆಂದರೆ ತಮ್ಮ ಪ್ರಯತ್ನಗಳು ಸಫಲಗೊಳ್ಳುವವೆಂಬ ಖಾತರಿ ಯಾವ ಮನುಷ್ಯನಿಗೂ ಇರಸಾಧ್ಯವಿಲ್ಲ. (ಯಾಕೋಬ 4:​13, 14) ತನ್ನಿಂದ ಹೊರಡುವ ಮಾತುಗಳು, “ನನ್ನ ಇಷ್ಟಾರ್ಥವನ್ನು ನೆರವೇರಿಸಿ” ಹಿಂದಿರುಗುವವು ಎಂದು ಯೆಹೋವನೊಬ್ಬನೇ ಹೇಳಬಲ್ಲನು. (ಯೆಶಾಯ 55:11) ದೇವರ ಹೆಸರನ್ನು ಪ್ರಥಮ ಬಾರಿ ತಮ್ಮ ಬೈಬಲುಗಳಲ್ಲಿ ಕಂಡುಕೊಳ್ಳುವಾಗ ಮತ್ತು ಅದರ ಅರ್ಥವನ್ನು ತಿಳಿದುಕೊಳ್ಳುವಾಗ ಅನೇಕರು ರೋಮಾಂಚನಗೊಳ್ಳುತ್ತಾರೆ. (ವಿಮೋಚನಕಾಂಡ 6:⁠3) ಆದರೆ ಅವರು ‘ದೇವರಾದ ಯೆಹೋವನ ಹೆಸರಿನಲ್ಲಿ ಯುಗಯುಗಾಂತರಗಳಲ್ಲಿ ನಡೆಯುವಲ್ಲಿ’ ಮಾತ್ರ ಈ ಜ್ಞಾನದಿಂದ ಪ್ರಯೋಜನ ಪಡೆಯುವರು.​—⁠ಮೀಕ 4:⁠5.

13. ಯೆಹೋವನ ಹೆಸರನ್ನು ತಿಳಿದುಕೊಳ್ಳುವುದರಲ್ಲಿ ಮತ್ತು ಆತನ ಹೆಸರಿನಲ್ಲಿ ನಡೆಯುವುದರಲ್ಲಿ ಏನೆಲ್ಲ ಸೇರಿದೆ?

13 ದೇವರ ಹೆಸರಿನ ಸಂಬಂಧದಲ್ಲಿ ಕೀರ್ತನೆ 9:10 ಹೇಳುವುದು: “ನಿನ್ನ ನಾಮಮಹಿಮೆಯನ್ನು ಬಲ್ಲವರು ನಿನ್ನಲ್ಲಿ ಭರವಸವಿಡುವರು.” ಯೆಹೋವನ ಹೆಸರನ್ನು ಕೇವಲ ತಿಳಿದುಕೊಳ್ಳುವುದಕ್ಕಿಂತ ಹೆಚ್ಚು ವಿಷಯಗಳು ಇದರಲ್ಲಿ ಸೇರಿವೆ. ಏಕೆಂದರೆ ಆತನ ಹೆಸರಿನ ಪರಿಚಯವುಳ್ಳವರು ಸ್ವಯಂಚಾಲಕವಾಗಿ ಆತನಲ್ಲಿ ಭರವಸೆಯಿಡುವುದಿಲ್ಲ. ದೇವರ ಹೆಸರನ್ನು ತಿಳಿಯುವುದೆಂದರೆ, ಯೆಹೋವನು ಯಾವ ರೀತಿಯ ದೇವರೆಂಬುದನ್ನು ಮಾನ್ಯಮಾಡಿ, ಆತನ ಅಧಿಕಾರವನ್ನು ಗೌರವಿಸಿ, ಆತನ ಆಜ್ಞೆಗಳಿಗೆ ವಿಧೇಯತೆ ತೋರಿಸಿ, ಸಕಲ ವಿಷಯಗಳಲ್ಲಿ ಆತನಲ್ಲಿ ಭರವಸೆಯಿಡುವುದೆಂದರ್ಥ. (ಜ್ಞಾನೋಕ್ತಿ 3:​5, 6) ಅದೇ ರೀತಿಯಲ್ಲಿ ಯೆಹೋವನ ಹೆಸರಿನಲ್ಲಿ ನಡೆಯುವುದು, ಆತನಿಗೆ ಸಮರ್ಪಿತರಾಗಿದ್ದು, ಆತನ ಆರಾಧಕರಲ್ಲಿ ಒಬ್ಬರಾಗಿ ಆತನನ್ನು ಪ್ರತಿನಿಧಿಸಿ, ನಮ್ಮ ಜೀವನವನ್ನು ದೇವರ ಚಿತ್ತಕ್ಕೆ ಹೊಂದಿಕೆಯಾಗಿ ನಿಜವಾಗಿಯೂ ಉಪಯೋಗಿಸುವುದನ್ನು ಸೂಚಿಸುತ್ತದೆ. (ಲೂಕ 10:27) ನೀವು ಹಾಗೆ ಮಾಡುತ್ತಿದ್ದೀರೊ?

14. ನಾವು ಯೆಹೋವನನ್ನು ನಿತ್ಯವೂ ಸೇವಿಸಲಿರುವುದಾದರೆ, ಕರ್ತವ್ಯಪ್ರಜ್ಞೆಯಲ್ಲದೆ ಇನ್ನೇನು ಅಗತ್ಯ?

14 ನಾವು ಯೆಹೋವನನ್ನು ಅನಂತವಾಗಿ ಸೇವಿಸಲಿರುವುದಾದರೆ, ಕರ್ತವ್ಯಪ್ರಜ್ಞೆಗಿಂತ ಹೆಚ್ಚಿನದ್ದು ನಮ್ಮನ್ನು ಪ್ರಚೋದಿಸಬೇಕು. ಅನೇಕ ವರ್ಷಕಾಲ ಯೆಹೋವನನ್ನು ಸೇವಿಸುತ್ತಿದ್ದ ತಿಮೊಥೆಯನಿಗೆ, “ನೀನು ದೇವಭಕ್ತಿಯ ವಿಷಯದಲ್ಲಿ ಸಾಧನೆಮಾಡಿಕೋ” ಎಂದು ಹೇಳಿ ಅಪೊಸ್ತಲ ಪೌಲನು ಪ್ರೋತ್ಸಾಹಿಸಿದನು. (1 ತಿಮೊಥೆಯ 4:7) ಭಕ್ತಿಯು ಕೃತಜ್ಞತೆ ತುಂಬಿದ ಹೃದಯದಿಂದ ಹೊರಹೊಮ್ಮುತ್ತದೆ ಮತ್ತು ಆ ಭಕ್ತಿಯು ಯಾರಿಗೆ ಸಲ್ಲಿಸಲ್ಪಡುತ್ತದೊ ಆ ವ್ಯಕ್ತಿಯ ಕಡೆಗೆ ಹೋಗುತ್ತದೆ. ‘ದೇವಭಕ್ತಿಯು’ ಯೆಹೋವನಿಗೆ ಸ್ವತಃ ಅಗಾಧವಾದ ಪೂಜ್ಯಭಾವನೆಯನ್ನು ತೋರಿಸುತ್ತದೆ. ಆತನಿಗಾಗಿ ಮತ್ತು ಆತನ ಮಾರ್ಗಗಳಿಗಾಗಿರುವ ಅಪಾರವಾದ ಗೌರವದಿಂದಾಗಿ, ಅದು ಆತನಿಗೆ ಪ್ರೀತಿಪೂರ್ಣ ಅಂಟಿಕೆಯನ್ನು ತೋರಿಸುತ್ತದೆ. ಎಲ್ಲರೂ ಆತನ ನಾಮವನ್ನು ಉಚ್ಚ ಗೌರವದಿಂದ ಕಾಣುವಂತೆ ಮಾಡುವ ಅಪೇಕ್ಷೆಯನ್ನು ಇದು ನಮ್ಮಲ್ಲಿ ಹುಟ್ಟಿಸುತ್ತದೆ. ಒಬ್ಬನೇ ಸತ್ಯ ದೇವರಾದ ಯೆಹೋವನ ಹೆಸರಿನಲ್ಲಿ ಸದಾಕಾಲ ನಡೆಯಬೇಕಾದರೆ ನಾವು ನಮ್ಮ ಜೀವಿತಗಳಲ್ಲಿ ದೇವಭಕ್ತಿಯನ್ನು ವರ್ಧಿಸತಕ್ಕದ್ದು.​—⁠ಕೀರ್ತನೆ 37:​4; 2 ಪೇತ್ರ 3:11.

15. ನಾವು ದೇವರಿಗೆ ನಮ್ಮ ಏಕೈಕವಾದ ಭಕ್ತಿಯನ್ನು ಹೇಗೆ ತೋರಿಸಬಲ್ಲೆವು?

15 ಯೆಹೋವನನ್ನು ಸ್ವೀಕಾರಯೋಗ್ಯವಾಗಿ ಸೇವಿಸಲು, ನಾವು ಆತನಿಗೆ ಅವಿಭಾಜ್ಯವಾದ ಆರಾಧನೆಯನ್ನು ಸಲ್ಲಿಸಬೇಕು. ಏಕೆಂದರೆ ಆತನು, “ಏಕೈಕ ಭಕ್ತಿಯನ್ನು ಕಡ್ಡಾಯವಾಗಿ ಬಯಸುವ ದೇವರು.” (ವಿಮೋಚನಕಾಂಡ 20:⁠5, NW) ನಾವು ದೇವರನ್ನು ಪ್ರೀತಿಸುತ್ತಾ, ಅದೇ ಸಮಯದಲ್ಲಿ ಸೈತಾನನು ದೇವರಾಗಿರುವ ಈ ದುಷ್ಟ ಲೋಕವನ್ನೂ ಪ್ರೀತಿಸಲಾರೆವು. (ಯಾಕೋಬ 4:4; 1 ಯೋಹಾನ 2:​15-17) ನಮ್ಮಲ್ಲಿ ಪ್ರತಿಯೊಬ್ಬರೂ ಯಾವ ವಿಧದ ವ್ಯಕ್ತಿಯಾಗಿರಲು ಪ್ರಯತ್ನಿಸುತ್ತಿದ್ದೇವೆಂಬುದು ಯೆಹೋವನಿಗೆ ನಿಷ್ಕೃಷ್ಟವಾಗಿ ತಿಳಿದಿದೆ. (ಯೆರೆಮೀಯ 17:10) ನಾವು ನಿಜವಾಗಿಯೂ ನೀತಿಯನ್ನು ಪ್ರೀತಿಸುವುದಾದರೆ, ಆತನು ಅದನ್ನು ನೋಡಿ, ನಮ್ಮ ದೈನಂದಿನ ಪರೀಕ್ಷೆಗಳನ್ನು ತಾಳಿಕೊಳ್ಳುವಂತೆ ಸಹಾಯ ನೀಡುವನು. ತನ್ನ ಬಲಾಢ್ಯವಾದ ಪವಿತ್ರಾತ್ಮದಿಂದ ನಮಗೆ ಬೆಂಬಲ ನೀಡುತ್ತಾ, ಈ ಲೋಕದಲ್ಲಿ ವ್ಯಾಪಕವಾಗಿ ಹಬ್ಬಿರುವ ದುಷ್ಟತನದ ಮೇಲೆ ನಾವು ಜಯಗಳಿಸುವಂತೆ ಆತನು ಸಾಧ್ಯಮಾಡುವನು. (2 ಕೊರಿಂಥ 4:⁠7) ಪರದೈಸಾಗಲಿರುವ ಭೂಮಿಯಲ್ಲಿ ನಿತ್ಯಜೀವದ ಬಲವಾದ ನಿರೀಕ್ಷೆಯನ್ನು ಕಾಪಾಡಿಕೊಳ್ಳುವಂತೆ ಸಹ ಆತನು ಸಹಾಯಮಾಡುವನು. ಅದೆಷ್ಟು ಮಹಿಮಾಭರಿವಾದ ಪ್ರತೀಕ್ಷೆ! ನಾವಿದಕ್ಕೆ ಆಳವಾಗಿ ಕೃತಜ್ಞರಾಗಿದ್ದು, ಸತ್ಯ ದೇವರಾಗಿರುವ ಮತ್ತು ನಿತ್ಯಜೀವವನ್ನು ಸಾಧ್ಯವಾಗಿಸುವ ಯೆಹೋವನನ್ನು ಸ್ವಇಷ್ಟದಿಂದ ಸೇವಿಸಬೇಕು.

16. ಇತರ ಲಕ್ಷಾಂತರ ಜನರೊಂದಿಗೆ ನೀವು ಏನನ್ನು ಮಾಡಬಯಸಬೇಕು?

16 ಭೂವ್ಯಾಪಕವಾಗಿ ಲಕ್ಷಾಂತರ ಜನರು, “ನನ್ನೊಡನೆ ಯೆಹೋವನನ್ನು ಕೊಂಡಾಡಿರಿ; ನಾವು ಒಟ್ಟಾಗಿ ಆತನ ಹೆಸರನ್ನು ಘನಪಡಿಸೋಣ” ಎಂದು ಬರೆದ ಕೀರ್ತನೆಗಾರನ ಆಮಂತ್ರಣವನ್ನು ಸಂತೋಷದಿಂದ ಸ್ವೀಕರಿಸಿದ್ದಾರೆ. (ಕೀರ್ತನೆ 34:3) ಹೀಗೆ ಮಾಡುತ್ತಿರುವ ಎಲ್ಲಾ ಜನಾಂಗಗಳ ಹೆಚ್ಚುತ್ತಿರುವ ಸಮೂಹಗಳಲ್ಲಿ ನೀವೂ ಒಬ್ಬರಾಗುವಂತೆ ಯೆಹೋವನು ನಿಮಗೆ ಆಮಂತ್ರಣವನ್ನು ನೀಡುತ್ತಾನೆ.

ಪುನರ್ವಿಮರ್ಶೆಯ ಚರ್ಚೆ

• ಯೆಹೋವನು ಯಾವ ರೀತಿಯ ವ್ಯಕ್ತಿಯಾಗಿದ್ದಾನೆ? ಆತನ ಗುಣಗಳ ಸ್ಪಷ್ಟವಾದ ತಿಳಿವಳಿಕೆಯನ್ನು ಪಡೆಯುವುದರಿಂದ ನಾವು ಹೇಗೆ ಪ್ರಯೋಜನ ಪಡೆಯುತ್ತೇವೆ?

• ದೇವರ ಕುರಿತಾದ ಸತ್ಯವನ್ನು ಇತರರು ಕಲಿಯುವಂತೆ ನಾವು ಹೇಗೆ ಸಹಾಯಮಾಡಬಲ್ಲೆವು?

• ಯೆಹೋವನ ಹೆಸರನ್ನು ತಿಳಿಯುವುದರಲ್ಲಿ ಮತ್ತು ಆತನ ಹೆಸರಿನಲ್ಲಿ ನಡೆಯುವುದರಲ್ಲಿ ಏನೆಲ್ಲ ಸೇರಿದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 14ರಲ್ಲಿರುವ ಚಿತ್ರಗಳು]

ಯೆಹೋವನು ತನ್ನ ಮಹಾ ಪ್ರೀತಿಯಿಂದ, ‘ತನ್ನ ಕೈದೆರೆದು ಎಲ್ಲಾ ಜೀವಿಗಳ ಇಷ್ಟವನ್ನು ನೆರವೇರಿಸುವನು’