ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಉದ್ದೇಶವು ಮಹಿಮಾನ್ವಿತ ಯಶಸ್ಸನ್ನು ಪಡೆಯುತ್ತದೆ

ಯೆಹೋವನ ಉದ್ದೇಶವು ಮಹಿಮಾನ್ವಿತ ಯಶಸ್ಸನ್ನು ಪಡೆಯುತ್ತದೆ

ಅಧ್ಯಾಯ ಇಪ್ಪತ್ತೊಂದು

ಯೆಹೋವನ ಉದ್ದೇಶವು ಮಹಿಮಾನ್ವಿತ ಯಶಸ್ಸನ್ನು ಪಡೆಯುತ್ತದೆ

1, 2. (ಎ) ತನ್ನ ಬುದ್ಧಿಶಕ್ತಿಯುಳ್ಳ ಜೀವಿಗಳ ಸಂಬಂಧದಲ್ಲಿ ಯೆಹೋವನ ಉದ್ದೇಶವೇನಾಗಿದೆ? (ಬಿ) ದೇವರ ಆರಾಧಕರ ಐಕ್ಯ ಕುಟುಂಬದಲ್ಲಿ ಯಾರಿದ್ದರು?

ಬುದ್ಧಿಶಕ್ತಿಯುಳ್ಳ ಸಕಲ ಜೀವಿಗಳು ಒಬ್ಬನೇ ಸತ್ಯ ದೇವರನ್ನು ಐಕ್ಯದಿಂದ ಆರಾಧಿಸುವುದು ಮತ್ತು ಅವರೆಲ್ಲರೂ ದೇವರ ಮಕ್ಕಳಾಗಿ ಮಹಿಮಾನ್ವಿತ ಸ್ವಾತಂತ್ರ್ಯವನ್ನು ಹೊಂದುವುದು​—⁠ಇದೇ ಯೆಹೋವನ ಪ್ರೀತಿಯ ಉದ್ದೇಶವಾಗಿದೆ. ಮತ್ತು ನೀತಿಪ್ರಿಯರು ಶ್ರದ್ಧಾಪೂರ್ವಕವಾಗಿ ಅಪೇಕ್ಷಿಸುವುದೂ ಇದನ್ನೇ.

2 ಯೆಹೋವನು ತನ್ನ ಸೃಷ್ಟಿಕಾರ್ಯವನ್ನು ಆರಂಭಿಸಿದಾಗ ತನ್ನ ಮಹಾ ಉದ್ದೇಶವನ್ನು ನೆರವೇರಿಸತೊಡಗಿದನು. ಆತನ ಪ್ರಥಮ ಸೃಷ್ಟಿಯು ಒಬ್ಬ ಮಗನಾಗಿದ್ದನು. ಇವನು ಪುನರುತ್ಥಾನದ ನಂತರ, “ದೇವರ ಪ್ರಭಾವದ ಪ್ರಕಾಶವೂ ಆತನ ತತ್ವದ ಮೂರ್ತಿಯೂ” ಆಗಿದ್ದಾನೆ. (ಇಬ್ರಿಯ 1:​1-3) ಈ ಪುತ್ರನನ್ನು ದೇವರೊಬ್ಬನೇ ಸೃಷ್ಟಿಸಿದ ಕಾರಣ ಅವನು ಅದ್ವಿತೀಯನಾಗಿದ್ದನು. ಏಕೆಂದರೆ, ಆ ಬಳಿಕ ಅಸ್ತಿತ್ವಕ್ಕೆ ಬರುವವರೆಲ್ಲರೂ, ಅಂದರೆ ಪ್ರಥಮವಾಗಿ ಸ್ವರ್ಗದ ದೇವದೂತರು, ತದನಂತರ ಭೂಮಿಯ ಮನುಷ್ಯರು ಈ ಮಗನ ಮುಖಾಂತರ ಉಂಟಾಗಲಿದ್ದರು. (ಯೋಬ 38:7; ಲೂಕ 3:38) ಇವರೆಲ್ಲರೂ ಒಂದು ಸಾರ್ವತ್ರಿಕ ಕುಟುಂಬವಾಗಿದ್ದರು. ಇವರೆಲ್ಲರಿಗೂ ಯೆಹೋವನು ದೇವರೂ, ವಿಶ್ವ ಪರಮಾಧಿಕಾರಿಯೂ ಮತ್ತು ಅವರ ಪ್ರೀತಿಪೂರ್ಣ ತಂದೆಯೂ ಆಗಿದ್ದನು.

3. (ಎ) ನಮ್ಮ ಪ್ರಥಮ ಹೆತ್ತವರಿಂದ ನಾವು ಯಾವುದನ್ನು ಬಾಧ್ಯತೆಯಾಗಿ ಪಡೆದಿದ್ದೇವೆ? (ಬಿ) ಯೆಹೋವನು ಆದಾಮನ ಸಂತತಿಗೆ ಯಾವ ಪ್ರೀತಿಪೂರ್ಣ ಏರ್ಪಾಡನ್ನು ಮಾಡಿದನು?

3 ನಮ್ಮ ಪ್ರಥಮ ಮಾನವ ಹೆತ್ತವರು ಇಚ್ಛಾಪೂರ್ವಕವಾದ ಪಾಪಿಗಳಾಗಿ ಮರಣಶಿಕ್ಷಾಪಾತ್ರರಾದಾಗ, ಅವರನ್ನು ದೇವರು ಏದೆನಿನಿಂದ ಹೊರಡಿಸಿಬಿಟ್ಟು, ಅವರು ತನ್ನವರಲ್ಲವೆಂದು ಅವರನ್ನು ತ್ಯಜಿಸಿದನು. ಆಗ ಅವರು ಇನ್ನೆಂದಿಗೂ ಆತನ ಸಾರ್ವತ್ರಿಕ ಕುಟುಂಬದ ಭಾಗವಾಗಿ ಉಳಿಯಲಿಲ್ಲ. (ಆದಿಕಾಂಡ 3:22-24; ಧರ್ಮೋಪದೇಶಕಾಂಡ 32:4, 5) ನಾವೆಲ್ಲರೂ ಅವರ ವಂಶಜರಾಗಿರುವುದರಿಂದ, ಪಾಪ ಪ್ರವೃತ್ತಿಗಳುಳ್ಳವರಾಗಿ ಹುಟ್ಟಿದ್ದೇವೆ. ಆದರೆ ಆದಾಮಹವ್ವರ ಸಂತತಿಯಲ್ಲಿ ಕೆಲವರಾದರೂ ನೀತಿಪ್ರಿಯರಾಗಿ ಇರುವರೆಂಬುದನ್ನು ಯೆಹೋವನು ತಿಳಿದಿದ್ದನು. ಆದಕಾರಣ, “ದೇವರ ಮಕ್ಕಳ ಮಹಿಮೆಯುಳ್ಳ ಸ್ವಾತಂತ್ರ್ಯ”ವನ್ನು ಅವರು ಪಡೆಯುವಂತೆ ಆತನು ಪ್ರೀತಿಯಿಂದ ಒಂದು ಏರ್ಪಾಡನ್ನು ಮಾಡಿದನು.​—⁠ರೋಮಾಪುರ 8:​20, 21, NW.

ಇಸ್ರಾಯೇಲು ಅನುಗ್ರಹದ ಸ್ಥಾನವನ್ನು ಕಳೆದುಕೊಳ್ಳುತ್ತದೆ

4. ಯೆಹೋವನು ಪುರಾತನ ಇಸ್ರಾಯೇಲಿಗೆ ಯಾವ ಸದವಕಾಶವನ್ನು ಒದಗಿಸಿದನು?

4 ಆದಾಮನ ಸೃಷ್ಟಿಯಾಗಿ ಸುಮಾರು 2,500 ವರುಷಗಳ ಬಳಿಕ, ಯೆಹೋವನು ಕೆಲವು ಮಾನವರಿಗೆ ತನ್ನೊಂದಿಗೆ ವಿಶೇಷ ಸಂಬಂಧಕ್ಕೆ ಬರುವ ಅವಕಾಶವನ್ನು ಒದಗಿಸಿದನು. ಆತನು ಪುರಾತನ ಕಾಲದ ಇಸ್ರಾಯೇಲನ್ನು ತನ್ನ ಜನರಾಗಿ ಆಯ್ದುಕೊಂಡು ಅವರಿಗೆ ತನ್ನ ಧರ್ಮಶಾಸ್ತ್ರವನ್ನು ಕೊಟ್ಟನು. (ಆದಿಕಾಂಡ 12:​1, 2) ಆತನು ಅವರನ್ನು ಒಂದು ಜನಾಂಗವಾಗಿ ರಚಿಸಿ, ಅವರನ್ನು ತನ್ನ ಉದ್ದೇಶದ ಸಂಬಂಧದಲ್ಲಿ ಉಪಯೋಗಿಸಿದನು. (ಧರ್ಮೋಪದೇಶಕಾಂಡ 14:1, 2; ಯೆಶಾಯ 43:1) ಆದರೂ, ಅವರಿನ್ನೂ ಪಾಪ ಮತ್ತು ಮರಣಗಳ ದಾಸತ್ವದಲ್ಲಿದ್ದುದರಿಂದ, ಆದಾಮಹವ್ವರಿಗೆ ಆದಿಯಲ್ಲಿದ್ದ ಮಹಿಮೆಯುಳ್ಳ ಸ್ವಾತಂತ್ರ್ಯವನ್ನು ಅವರು ಅನುಭವಿಸಲಿಲ್ಲ.

5. ದೇವರೊಂದಿಗೆ ಇಸ್ರಾಯೇಲ್ಯರಿಗಿದ್ದ ವಿಶೇಷ ನಿಲುವನ್ನು ಅವರು ಕಳೆದುಕೊಂಡದ್ದು ಹೇಗೆ?

5 ಆದರೂ, ಇಸ್ರಾಯೇಲ್ಯರು ದೇವರೊಂದಿಗೆ ಅನುಗ್ರಹದ ನಿಲುವಿನಲ್ಲಿದ್ದರು. ಯೆಹೋವನನ್ನು ತಮ್ಮ ತಂದೆಯಾಗಿ ಸನ್ಮಾನಿಸುವ ಮತ್ತು ಆತನ ಉದ್ದೇಶಗಳಿಗೆ ಹೊಂದಿಕೆಯಾಗಿ ಕಾರ್ಯನಡೆಸುವ ಜವಾಬ್ದಾರಿಯೂ ಅವರಿಗಿತ್ತು. ಅವರಿಗಿದ್ದ ಆ ಕರ್ತವ್ಯವನ್ನು ನೆರವೇರಿಸುವ ಪ್ರಮುಖತೆಯನ್ನು ಯೇಸು ಒತ್ತಿಹೇಳಿದನು. (ಮತ್ತಾಯ 5:​43-48) ಆದರೂ, ಇಸ್ರಾಯೇಲ್‌ ಜನಾಂಗವು ಇದನ್ನು ಮಾಡುವುದರಲ್ಲಿ ತಪ್ಪಿಹೋಯಿತು. ಆ ಯೆಹೂದ್ಯರು, “ನಮಗೆ ಒಬ್ಬನೇ ತಂದೆ, ಆತನು ದೇವರೇ” ಎಂದು ಹೇಳಿಕೊಂಡರೂ, ಅವರ ಕ್ರಿಯೆಗಳು ಹಾಗೂ ಅವರು ತೋರಿಸಿದ ಮನೋಭಾವವು ಅಂತಹ ವಾದವನ್ನು ಸುಳ್ಳಾಗಿಸಿತೆಂದು ಯೇಸು ಹೇಳಿದನು. (ಯೋಹಾನ 8:​41, 44, 47) ಸಾ.ಶ. 33ರಲ್ಲಿ, ಧರ್ಮಶಾಸ್ತ್ರವನ್ನು ದೇವರು ಕೊನೆಗಾಣಿಸಿದನು, ಮತ್ತು ಆತನೊಂದಿಗೆ ಇಸ್ರಾಯೇಲಿಗಿದ್ದ ವಿಶೇಷ ಸಂಬಂಧವು ಕೊನೆಗೊಂಡಿತು. ಅಂದರೆ ಜನರು ಇನ್ನು ಮುಂದೆ ದೇವರೊಂದಿಗೆ ಅನುಗ್ರಹದ ಸಂಬಂಧವನ್ನು ಎಂದಿಗೂ ಅನುಭವಿಸರೆಂದು ಇದರ ಅರ್ಥವೊ?

“ಸ್ವರ್ಗದಲ್ಲಿನ ವಸ್ತುಗಳನ್ನು” ಒಟ್ಟುಗೂಡಿಸುವುದು

6. ಎಫೆಸ 1:​9, 10ರಲ್ಲಿ ಪೌಲನು ಹೇಳಿದ “ಆಡಳಿತ”ದ ಉದ್ದೇಶವೇನು?

6 ಮನುಷ್ಯರಲ್ಲಿ ಕೆಲವರು ದೇವರೊಂದಿಗೆ ವಿಶೇಷ ಸಂಬಂಧವನ್ನು ಅನುಭವಿಸಶಕ್ತರೆಂದು ಅಪೊಸ್ತಲ ಪೌಲನು ಹೇಳಿದನು. ಉದಾಹರಣೆಗೆ, ಯಾವುದರ ಮೂಲಕ ನಂಬಿಕೆಯನ್ನಿಡುವವರು ಯೆಹೋವನ ಮನೆವಾರ್ತೆಯ ಸದಸ್ಯರಾಗಬಹುದೊ ಆ ಏರ್ಪಾಡಿನ ಕುರಿತು ಪೌಲನು ಬರೆದುದು: “ಹೇಗಂದರೆ [ದೇವರು] ನಮಗೆ ತನ್ನ ಚಿತ್ತದ ಪವಿತ್ರ ರಹಸ್ಯವನ್ನು ತಿಳಿಯಪಡಿಸಿದನು. ಆತನು ತನ್ನ ಮನಸ್ಸಂತೋಷಾನುಸಾರವಾಗಿ ತನ್ನಲ್ಲಿ, ನಿಯಮಿತ ಸಮಯದ ಪೂರ್ಣಾವಧಿಯಲ್ಲಿ ಒಂದು ಆಡಳಿತಕ್ಕಾಗಿ ಉದ್ದೇಶಿಸಿದನು. ಅದೇನಂದರೆ, ಸಕಲ ವಸ್ತುಗಳನ್ನು, ಅಂದರೆ ಸ್ವರ್ಗದಲ್ಲಿನ ವಸ್ತುಗಳನ್ನು ಮತ್ತು ಭೂಮಿಯಲ್ಲಿನ ವಸ್ತುಗಳನ್ನು, ಪುನಃ ಕ್ರಿಸ್ತನಲ್ಲಿ, ಹೌದು ಅವನಲ್ಲಿ ಒಟ್ಟುಗೂಡಿಸುವುದೇ.” (ಎಫೆಸ 1:​9, 10, NW) ಈ “ಆಡಳಿತ”ವು ಯೇಸು ಕ್ರಿಸ್ತನಲ್ಲಿ ಕೇಂದ್ರೀಕರಿಸಿರುತ್ತದೆ. ಅವನ ಮೂಲಕ ಜನರು ದೇವರ ಮುಂದೆ ಅಂಗೀಕೃತ ಸ್ಥಾನಕ್ಕೆ ತರಲ್ಪಡುತ್ತಾರೆ. ಅವರಲ್ಲಿ ಒಂದು ಪರಿಮಿತ ಸಂಖ್ಯೆಗೆ ಸ್ವರ್ಗದಲ್ಲಿರುವ ಪ್ರತೀಕ್ಷೆಯಿರುತ್ತದೆ. ಆದರೆ ಎಷ್ಟೋ ಹೆಚ್ಚು ಮಂದಿ ಈ ಭೂಮಿಯ ಮೇಲೆ ನಿತ್ಯಕ್ಕೂ ಜೀವಿಸುವರು.

7. ‘ಸ್ವರ್ಗದಲ್ಲಿನ ವಸ್ತುಗಳು’ ಅಂದರೆ ಯಾರು?

7 ಪ್ರಥಮವಾಗಿ, ಸಾ.ಶ. 33ರ ಪಂಚಾಶತ್ತಮದಿಂದ ಆರಂಭಿಸಿ, ‘ಸ್ವರ್ಗದಲ್ಲಿನ ವಸ್ತುಗಳಿಗೆ’ ಅಂದರೆ ಸ್ವರ್ಗೀಯ ರಾಜ್ಯದಲ್ಲಿ ಕ್ರಿಸ್ತನೊಂದಿಗೆ ಜೊತೆ ಬಾಧ್ಯಸ್ಥರಾಗಲಿರುವವರಿಗೆ ಗಮನ ಕೊಡಲಾಯಿತು. ಯೇಸುವಿನ ಯಜ್ಞದ ಮೌಲ್ಯದಲ್ಲಿ ಅವರಿಗಿರುವ ನಂಬಿಕೆಯ ಆಧಾರದ ಮೇರೆಗೆ ಅವರನ್ನು ನೀತಿವಂತರೆಂದು ನಿರ್ಣಯಿಸಲಾಯಿತು. (ರೋಮಾಪುರ 5:​1, 2) ಸಕಾಲದಲ್ಲಿ, ಯೆಹೂದ್ಯರೂ ಅನ್ಯರೂ ಇದರಲ್ಲಿ ಸೇರಿಸಲ್ಪಟ್ಟಾಗ, ಈ “ಸ್ವರ್ಗದಲ್ಲಿನ ವಸ್ತುಗಳ” ಸಂಖ್ಯೆಯು 1,44,000ವಾಗುವುದು. (ಗಲಾತ್ಯ 3:26-29; ಪ್ರಕಟನೆ 14:1) ಇವರಲ್ಲಿ ಉಳಿಕೆಯವರು ಮಾತ್ರ ಇನ್ನೂ ಭೂಮಿಯಲ್ಲಿದ್ದಾರೆ.

“ಭೂಮಿಯಲ್ಲಿನ ವಸ್ತುಗಳನ್ನು” ಒಟ್ಟುಗೂಡಿಸುವುದು

8. ‘ಭೂಮಿಯಲ್ಲಿನ ವಸ್ತುಗಳು’ ಅಂದರೆ ಯಾರು, ಮತ್ತು ಯೆಹೋವನೊಂದಿಗೆ ಅವರಿಗೆ ಯಾವ ಸಂಬಂಧವಿದೆ?

8 ಅದೇ ಆಡಳಿತವು “ಭೂಮಿಯಲ್ಲಿನ ವಸ್ತುಗಳನ್ನು” ಸಹ ಒಟ್ಟುಗೂಡಿಸುತ್ತಿದೆ. ಭೂಮಿಯ ಮೇಲೆ ನಿತ್ಯಜೀವದ ಪ್ರತೀಕ್ಷೆಯುಳ್ಳವರಾಗಿರುವ ಲಕ್ಷಾಂತರ ಜನರು ಈಗ ಒಟ್ಟುಗೂಡಿಸಲ್ಪಡುತ್ತಿದ್ದಾರೆ. ಇವರು ರಾಜ್ಯ ಬಾಧ್ಯಸ್ಥರಲ್ಲಿ ಉಳಿಕೆಯವರೊಂದಿಗೆ ಐಕ್ಯದಿಂದಿದ್ದು, ಯೆಹೋವನ ಹೆಸರನ್ನು ಘನಪಡಿಸಿ ಆತನ ಆರಾಧನೆಯನ್ನು ಉನ್ನತಕ್ಕೇರಿಸುತ್ತಾರೆ. (ಯೆಶಾಯ 2:2, 3; ಚೆಫನ್ಯ 3:9) ಇವರೂ ಯೆಹೋವನನ್ನು “ತಂದೆ” ಎಂದು ಸಂಬೋಧಿಸುತ್ತಾರೆ, ಏಕೆಂದರೆ ಜೀವದ ಬುಗ್ಗೆ ಆತನೆಂಬುದನ್ನು ಅವರು ಮಾನ್ಯಮಾಡುತ್ತಾರೆ. ಮತ್ತು ಯೇಸುವಿನ ಸುರಿಸಲ್ಪಟ್ಟ ರಕ್ತದಲ್ಲಿ ಅವರಿಗಿರುವ ನಂಬಿಕೆಯ ಆಧಾರದ ಮೇರೆಗೆ, ಅವರು ಆತನ ಮುಂದೆ ಅಂಗೀಕೃತ ನಿಲುವಿನಲ್ಲಿ ಆನಂದಿಸುತ್ತಾರೆ. (ಪ್ರಕಟನೆ 7:​9, 14) ಆದರೆ ಅವರು ಇನ್ನೂ ಅಪರಿಪೂರ್ಣರಾಗಿರುವುದರಿಂದ, ಅವರು ದೇವರ ಮಕ್ಕಳೆಂಬ ಒಪ್ಪಿಗೆಯನ್ನು ಪಡೆಯುವ ಸಮಯವು ಇನ್ನೂ ಮುಂದಿದೆ.

9. ರೋಮಾಪುರ 8:21 ಮಾನವಕುಲಕ್ಕೆ ಯಾವ ವಾಗ್ದಾನವನ್ನು ಎತ್ತಿ ಹಿಡಿಯುತ್ತದೆ?

9 ಭೂನಿರೀಕ್ಷೆಗಳಿರುವ ಇವರು, ಮಾನವ ಸೃಷ್ಟಿಯು “ನಾಶದ ವಶದಿಂದ ಬಿಡುಗಡೆ” ಆಗುವ ಸಮಯಕ್ಕಾಗಿ ಹಂಬಲದಿಂದ ಕಾಯುತ್ತಿದ್ದಾರೆ. (ರೋಮಾಪುರ 8:21) ಆ ಸ್ವಾತಂತ್ರ್ಯವು, ಕ್ರಿಸ್ತನೂ ಅವನ ಸ್ವರ್ಗೀಯ ಸೈನ್ಯಗಳೂ ಅರ್ಮಗೆದೋನ್‌ ಪರಾಕಾಷ್ಠೆಯ ಮೂಲಕ ಮಹಾ ಸಂಕಟಕ್ಕೆ ಅಂತ್ಯವನ್ನು ತರುವಾಗ ಆರಂಭಗೊಳ್ಳುವುದು. ಸೈತಾನನ ಇಡೀ ದುಷ್ಟ ವಿಷಯಗಳ ವ್ಯವಸ್ಥೆಯು ನಾಶಗೊಳ್ಳುವುದೆಂದೂ, ಅದರ ನಂತರ ರಾಜ್ಯಾಧಿಕಾರದಲ್ಲಿ ಕ್ರಿಸ್ತನ ಸಹಸ್ರ ವರುಷಗಳ ಆಳಿಕೆಯ ಕಾರಣವಾಗಿ ಆಶೀರ್ವಾದಗಳು ಬರುವವೆಂದೂ ಇದರ ಅರ್ಥವಾಗಿರುವುದು.​—⁠ಪ್ರಕಟನೆ 19:17-21; 20:⁠6.

10. ಯೆಹೋವನ ಸೇವಕರು ಯಾವ ಸ್ತುತಿಗೀತವನ್ನು ಹಾಡುವರು?

10 ಭೂಮಿಯಲ್ಲಿರುವ ಯೆಹೋವನ ಸೇವಕರು ಸ್ವರ್ಗದಲ್ಲಿರುವ ಸೇವಕರ ಭಾವಾಭಿಪ್ರಾಯವನ್ನು ಪ್ರತಿಧ್ವನಿಸಲು ಅವರೊಂದಿಗೆ ಐಕ್ಯರಾಗುವುದು ಎಷ್ಟೊಂದು ಉತ್ತೇಜಕವಾಗಿರುವುದು! ಸ್ವರ್ಗದಲ್ಲಿರುವವರು ಹರ್ಷದಿಂದ ಘೋಷಿಸುವುದು: “ದೇವರಾದ ಕರ್ತನೇ [“ಯೆಹೋವನೇ,” NW], ಸರ್ವಶಕ್ತನೇ, ನಿನ್ನ ಕೃತ್ಯಗಳು ಮಹತ್ತಾದವುಗಳೂ ಆಶ್ಚರ್ಯಕರವಾದವುಗಳೂ ಆಗಿವೆ; ಸರ್ವಜನಾಂಗಗಳ ಅರಸನೇ, ನಿನ್ನ ಮಾರ್ಗಗಳು ನ್ಯಾಯವೂ ಸತ್ಯವೂ ಆಗಿವೆ; ಕರ್ತನೇ [“ಯೆಹೋವನೇ,” NW], ನಿನ್ನ ನಾಮಕ್ಕೆ ಭಯಪಡದವರೂ ಅದನ್ನು ಘನವಾದದ್ದೆಂದು ಒಪ್ಪಿಕೊಳ್ಳದವರೂ ಯಾರಾದರೂ ಇದ್ದಾರೇ? ನೀನೊಬ್ಬನೇ ಪರಿಶುದ್ಧನು; ನಿನ್ನ ನೀತಿಯುಳ್ಳ ಕೃತ್ಯಗಳು ಪ್ರಕಾಶಕ್ಕೆ ಬಂದದರಿಂದ ಎಲ್ಲಾ ಜನಾಂಗಗಳು ಬಂದು ನಿನ್ನ ಸನ್ನಿಧಾನದಲ್ಲಿ ನಮಸ್ಕಾರ ಮಾಡುವರು [“ಆರಾಧಿಸುವರು,” NW].” (ಪ್ರಕಟನೆ 15:3, 4) ಹೌದು, ಯೆಹೋವನ ಸರ್ವ ಸೇವಕರು ಒಬ್ಬನೇ ಸತ್ಯ ದೇವರ ಆರಾಧನೆಯಲ್ಲಿ ಐಕ್ಯರಾಗುವರು. ಮೃತರು ಪುನರುತ್ಥಾನ ಹೊಂದಿದಾಗ, ಯೆಹೋವನ ಸ್ತುತಿಗೆ ತಮ್ಮ ಸ್ವರವನ್ನು ಜೊತೆಗೂಡಿಸುವ ಸಂದರ್ಭವನ್ನು ಅವರಿಗೂ ಕೊಡಲಾಗುವುದು.​—⁠ಅ. ಕೃತ್ಯಗಳು 24:15.

ಆಶ್ಚರ್ಯಕರವಾದ ಬಿಡುಗಡೆ ಮುಂದಿದೆ

11. ಮಹಾ ಸಂಕಟವನ್ನು ಪಾರಾಗಿ ಉಳಿಯುವವರು ಯಾವ ಆಶ್ಚರ್ಯಕರವಾದ ಸ್ವಾತಂತ್ರ್ಯವನ್ನು ಅನುಭವಿಸುವರು?

11 ಅರ್ಮಗೆದೋನ್‌ ಪರಾಕಾಷ್ಠೆಯಿರುವ ಮಹಾ ಸಂಕಟವು ಭೂಮಿಯಿಂದ ದುಷ್ಟತನವನ್ನು ತೊಲಗಿಸಿ ಶುಚಿ ಮಾಡಿದ ಬಳಿಕ, ಸೈತಾನನು “ಈ ಪ್ರಪಂಚದ ದೇವರು” ಆಗಿರುವುದಿಲ್ಲ. ಆಗ ಯೆಹೋವನ ಆರಾಧಕರಿಗೆ ಸೈತಾನನ ದುಷ್ಟ ಪ್ರಭಾವದೊಂದಿಗೆ ಹೆಣಗಾಡಬೇಕೆಂದಿರುವುದಿಲ್ಲ. (2 ಕೊರಿಂಥ 4:4; ಪ್ರಕಟನೆ 20:1, 2) ಆ ಬಳಿಕ ಸುಳ್ಳುಧರ್ಮವು ಎಂದಿಗೂ ಯೆಹೋವನನ್ನು ತಪ್ಪಾಗಿ ಪ್ರತಿನಿಧಿಸಿ, ಮಾನವ ಸಮಾಜದಲ್ಲಿ ವಿಭಾಜಕ ಪ್ರಭಾವವಾಗಿ ಕಾರ್ಯನಡಿಸದು. ಸತ್ಯ ದೇವರ ಸೇವಕರು ಮಾನವ ಅಧಿಕಾರಿಗಳಿಂದ ಅನ್ಯಾಯವನ್ನೂ ಶೋಷಣೆಯನ್ನೂ ಇನ್ನು ಮುಂದೆ ಅನುಭವಿಸರು. ಎಷ್ಟು ಆಶ್ಚರ್ಯಕರವಾದ ಸ್ವಾತಂತ್ರ್ಯವು ಆಗ ಅನುಭವಿಸಲ್ಪಡುವುದು!

12. ಎಲ್ಲರನ್ನೂ ಪಾಪ ಮತ್ತು ಅದರ ಪರಿಣಾಮಗಳಿಂದ ಹೇಗೆ ಸ್ವತಂತ್ರಗೊಳಿಸಲಾಗುವುದು?

12 “[ಯಜ್ಞಕ್ಕೆ] ದೇವರು ನೇಮಿಸಿದ ಕುರಿ, ಲೋಕದ ಪಾಪವನ್ನು ನಿವಾರಣೆ ಮಾಡುವವನು” ಆಗಿರುವ ಯೇಸು, ಮಾನವಕುಲದ ಪಾಪಗಳನ್ನು ರದ್ದುಮಾಡಲು ತನ್ನ ಯಜ್ಞದ ಮೌಲ್ಯವನ್ನು ಅನ್ವಯಿಸುವನು. (ಯೋಹಾನ 1:29) ಯೇಸು ಭೂಮಿಯಲ್ಲಿದ್ದು ಒಬ್ಬನ ಪಾಪಗಳನ್ನು ಕ್ಷಮಿಸಿದಾಗ, ಅದರ ರುಜುವಾತಾಗಿ ಹಾಗೆ ಕ್ಷಮಿಸಲ್ಪಟ್ಟವನನ್ನು ಗುಣಪಡಿಸಿದನು. (ಮತ್ತಾಯ 9:1-7; 15:30, 31) ಅದೇ ರೀತಿಯಲ್ಲಿ ಕ್ರಿಸ್ತ ಯೇಸು ದೇವರ ರಾಜ್ಯದ ಸ್ವರ್ಗೀಯ ಅರಸನೋಪಾದಿ, ಕುರುಡರು, ಮೂಕರು, ಕಿವುಡರು, ಶಾರೀರಿಕವಾಗಿ ಅಂಗವಿಕಲರಾಗಿರುವವರು, ಮಾನಸಿಕವಾಗಿ ಸಂಕಟಪಡುತ್ತಿರುವವರು ಮತ್ತು ಬೇರೆ ಯಾವುದೇ ಕಾಯಿಲೆ ಇರುವವರನ್ನೂ ಅದ್ಭುತಕರವಾಗಿ ವಾಸಿಮಾಡುವನು. (ಪ್ರಕಟನೆ 21:​3, 4) ಎಲ್ಲಾ ವಿಧೇಯರ “ಪಾಪದ ನಿಯಮ”ವು ರದ್ದುಮಾಡಲ್ಪಡುವುದು. ಹೀಗೆ ಅವರ ಯೋಚನೆಗಳು ಮತ್ತು ಕ್ರಿಯೆಗಳು ಅವರಿಗೂ ದೇವರಿಗೂ ಸಂತೋಷವನ್ನು ತರುವಂಥವುಗಳಾಗಿರುವವು. (ರೋಮಾಪುರ 7:​21-23) ಹೀಗೆ ಸಹಸ್ರಮಾನವು ಮುಗಿಯುವುದರೊಳಗೆ ಅವರೆಲ್ಲರೂ ಮಾನವ ಪರಿಪೂರ್ಣತೆಗೆ ತರಲ್ಪಟ್ಟಿರುವರು, ಒಬ್ಬನೇ ಸತ್ಯ ದೇವರ ‘ಸ್ವರೂಪದಲ್ಲಿ ಆತನ ಹೋಲಿಕೆಗೆ ಸರಿಯಾಗಿ’ ಇರುವವರಾಗಿರುವರು.​—⁠ಆದಿಕಾಂಡ 1:26.

13. ಸಾವಿರ ವರ್ಷಗಳ ಆಳ್ವಿಕೆಯ ಅಂತ್ಯದಲ್ಲಿ ಕ್ರಿಸ್ತನು ಯಾವ ಕಾರ್ಯವನ್ನು ಕೈಕೊಳ್ಳುವನು, ಮತ್ತು ಯಾವ ಪರಿಣಾಮದೊಂದಿಗೆ?

13 ಕ್ರಿಸ್ತನು ಮಾನವರನ್ನು ಪರಿಪೂರ್ಣತೆಗೆ ತಲಪಿಸಿದ ಮೇಲೆ, ಈ ಕೆಲಸಕ್ಕಾಗಿ ತನಗೆ ಕೊಡಲ್ಪಟ್ಟಿದ್ದ ಅಧಿಕಾರವನ್ನು ತಂದೆಗೆ ಹಿಂದಿರುಗಿಸುವನು: “ಆತನು ಬೇರೆ ಎಲ್ಲಾ ದೊರೆತನವನ್ನೂ ಎಲ್ಲಾ ಅಧಿಕಾರವನ್ನೂ ಬಲವನ್ನೂ ನಿವೃತ್ತಿಮಾಡಿ ತಂದೆಯಾಗಿರುವ ದೇವರಿಗೆ ರಾಜ್ಯವನ್ನು ಒಪ್ಪಿಸಿಕೊಡುವನು. ಏಕೆಂದರೆ ದೇವರು ಎಲ್ಲಾ ವಿರೋಧಿಗಳನ್ನು ಅವನ ಪಾದಗಳ ಕೆಳಗೆ ಹಾಕುವ ತನಕ ಅವನು ರಾಜನೋಪಾದಿ ಆಳ್ವಿಕೆ ನಡಿಸುವುದು ಅವಶ್ಯ.” (1 ಕೊರಿಂಥ 15:24, 25, NW) ಆ ರಾಜ್ಯದ ಸಾವಿರ ವರ್ಷಗಳ ಆಳ್ವಿಕೆಯು ಅದರ ಉದ್ದೇಶವನ್ನು ಪೂರ್ಣವಾಗಿ ಪೂರೈಸಿರುವುದು. ಆ ಮೇಲೆ, ಯೆಹೋವನ ಮತ್ತು ಮಾನವರ ಮಧ್ಯೆ ಒಂದು ಉಪಾಂಗ ಸರಕಾರದ ಆವಶ್ಯಕತೆ ಇರದು. ಆಗ ಪಾಪ ಮತ್ತು ಮರಣಗಳು ಪೂರ್ತಿಯಾಗಿ ತೊಲಗಿಸಲ್ಪಟ್ಟಿರುವುದರಿಂದ, ಯೇಸು ವಿಮೋಚಕನಾಗಿರುವ ಆವಶ್ಯಕತೆಯು ಮುಗಿದುಹೋಗುತ್ತದೆ. ಬೈಬಲು ತಿಳಿಸುವುದು: “ಸಮಸ್ತವೂ ಆತನಿಗೆ ಅಧೀನವಾದ ಮೇಲೆ ಮಗನು ಸಮಸ್ತವನ್ನೂ ತನಗೆ ಅಧೀನಮಾಡಿಕೊಟ್ಟಾತನಿಗೆ ತಾನೇ ಅಧೀನನಾಗುವನು; ಹೀಗೆ ದೇವರು ಸಮಸ್ತರಲ್ಲಿಯೂ ಸಮಸ್ತವೂ ಆಗುವನು.”​—⁠1 ಕೊರಿಂಥ 15:28.

14. ಪರಿಪೂರ್ಣತೆಗೆ ತಲಪಿರುವ ಮಾನವರನ್ನೆಲ್ಲ ಯಾವುದಕ್ಕೆ ಒಳಪಡಿಸಲಾಗುವುದು, ಮತ್ತು ಏಕೆ?

14 ಇದನ್ನು ಹಿಂಬಾಲಿಸುತ್ತಾ, ಪರಿಪೂರ್ಣರಾಗಿರುವ ಮಾನವರಿಗೆ, ಒಬ್ಬನೇ ಸತ್ಯ ದೇವರನ್ನು ನಿತ್ಯಕ್ಕೂ ಸೇವಿಸುವುದು ಅವರ ಆಯ್ಕೆಯಾಗಿದೆ ಎಂಬುದನ್ನು ವ್ಯಕ್ತಪಡಿಸುವ ಸಂದರ್ಭವು ಕೊಡಲ್ಪಡುವುದು. ಹೀಗಿರುವುದರಿಂದ, ಅವರನ್ನು ತನ್ನ ಮಕ್ಕಳಾಗಿ ಆಯ್ದುಕೊಳ್ಳುವ ಮೊದಲು, ಯೆಹೋವನು ಪರಿಪೂರ್ಣತೆಗೆ ತಲಪಿರುವ ಮಾನವರನ್ನೆಲ್ಲ ಒಂದು ಅಂತಿಮ ಪರೀಕ್ಷೆಗೆ ಒಳಪಡಿಸುವನು. ಸೈತಾನನು ಮತ್ತು ಅವನ ದೆವ್ವಗಳು ಅಧೋಲೋಕದಿಂದ ಬಿಡಿಸಲ್ಪಡುವವು. ಆದರೆ ಇದು ಯೆಹೋವನನ್ನು ನಿಜವಾಗಿಯೂ ಪ್ರೀತಿಸುವವರಿಗೆ ಯಾವುದೇ ಶಾಶ್ವತ ಹಾನಿಯನ್ನು ತರದು. ಆದರೆ ಯಾರು ದ್ರೋಹಿಗಳಾಗಿ ತಾವು ಯೆಹೋವನಿಗೆ ಅವಿಧೇಯರಾಗುವಂತೆ ನಡೆಸಲ್ಪಡಲು ಬಿಡುತ್ತಾರೊ ಅಂಥವರು, ಆ ಆದಿ ದಂಗೆಕೋರನೊಂದಿಗೆ ಮತ್ತು ಅವನ ದೆವ್ವಗಳೊಂದಿಗೆ ಸದಾಕಾಲಕ್ಕೂ ನಾಶಗೊಳಿಸಲ್ಪಡುವರು.​—⁠ಪ್ರಕಟನೆ 20:7-10.

15. ಯೆಹೋವನ ಬುದ್ಧಿಶಕ್ತಿಯುಳ್ಳ ಸಕಲ ಜೀವಿಗಳ ಮಧ್ಯೆ ಇನ್ನೊಮ್ಮೆ ಯಾವ ಸ್ಥಿತಿಯು ನೆಲೆಸಿರುವುದು?

15 ಬಳಿಕ, ದೇವರ ಪರಮಾಧಿಕಾರವನ್ನು ಆ ಅಂತಿಮ ಪರೀಕ್ಷೆಯಲ್ಲಿ ಸಮರ್ಥಿಸಿದ ಸಕಲ ಪರಿಪೂರ್ಣ ಮಾನವರನ್ನು ಯೆಹೋವನು ತನ್ನ ಮಕ್ಕಳಾಗಿ ಆಯ್ದುಕೊಳ್ಳುವನು. ಆ ಸಮಯ ಮೊದಲ್ಗೊಂಡು, ಅವರು ದೇವರ ಸಾರ್ವತ್ರಿಕ ಕುಟುಂಬದ ಭಾಗವಾಗಿ, ದೇವರ ಮಕ್ಕಳ ಮಹಿಮಾನ್ವಿತ ಸ್ವಾತಂತ್ರ್ಯವನ್ನು ಪೂರ್ಣವಾಗಿ ಅನುಭೋಗಿಸುವರು. ಆಗ ಪರಲೋಕ ಮತ್ತು ಭೂಮಿಯಲ್ಲಿರುವ ಬುದ್ಧಿಶಕ್ತಿಯುಳ್ಳ ಸಕಲ ಜೀವಿಗಳು ಒಬ್ಬನೇ ಸತ್ಯ ದೇವರಾಗಿರುವ ಆತನನ್ನು ಆರಾಧಿಸುವುದರಲ್ಲಿ ಐಕ್ಯಗೊಳ್ಳುವರು. ಆಗ ಯೆಹೋವನ ಉದ್ದೇಶವು ಮಹಿಮಾನ್ವಿತವಾಗಿ ಯಶಸ್ಸನ್ನು ಪಡೆದಿರುವುದು! ಆ ಸಂತುಷ್ಟ, ಅನಂತ, ಸಾರ್ವತ್ರಿಕ ಕುಟುಂಬದ ಭಾಗವಾಗುವ ಅಪೇಕ್ಷೆ ನಿಮಗಿದೆಯೆ? ಇರುವಲ್ಲಿ, ಬೈಬಲು 1 ಯೋಹಾನ 2:17ರಲ್ಲಿ ಏನು ಹೇಳುತ್ತದೊ ಅದಕ್ಕೆ ಕಿವಿಗೊಡುವಂತೆ ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ: “ಲೋಕವೂ ಅದರ ಆಶೆಯೂ ಗತಿಸಿ ಹೋಗುತ್ತವೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.”

ಪುನರ್ವಿಮರ್ಶೆಯ ಚರ್ಚೆ

• ಏದೆನಿನಲ್ಲಿ ನಡೆದ ದಂಗೆಯ ಮೊದಲು, ಯೆಹೋವನ ಆರಾಧಕರೆಲ್ಲರಿಗೆ ಆತನೊಂದಿಗೆ ಯಾವ ಸಂಬಂಧವಿತ್ತು?

• ದೇವರ ಸೇವಕರಾಗಿರುವವರ ಮೇಲೆ ಯಾವ ಜವಾಬ್ದಾರಿ ನೆಲೆಸಿರುತ್ತದೆ?

• ಇನ್ನೂ ದೇವರ ಮಕ್ಕಳಾಗಲಿರುವವರು ಯಾರು, ಮತ್ತು ಐಕ್ಯಾರಾಧನೆಯ ವಿಷಯದಲ್ಲಿರುವ ಯೆಹೋವನ ಉದ್ದೇಶಕ್ಕೆ ಇದು ಹೇಗೆ ಸಂಬಂಧಿಸಿದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 190ರಲ್ಲಿರುವ ಚಿತ್ರ]

ವಿಧೇಯ ಮಾನವರು ಭೌಗೋಳಿಕ ಪರದೈಸಿನಲ್ಲಿ ಜೀವನವನ್ನು ಆನಂದಿಸುವರು