ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಿಂಹಾಸನದ ಮುಂದೆ ಇರುವ ಮಹಾ ಸಮೂಹ

ಯೆಹೋವನ ಸಿಂಹಾಸನದ ಮುಂದೆ ಇರುವ ಮಹಾ ಸಮೂಹ

ಅಧ್ಯಾಯ ಹದಿಮೂರು

ಯೆಹೋವನ ಸಿಂಹಾಸನದ ಮುಂದೆ ಇರುವ ಮಹಾ ಸಮೂಹ

1. (ಎ) ಕ್ರೈಸ್ತರಿಗಿಂತ ಪೂರ್ವದಲ್ಲಿದ್ದ ದೇವರ ಸೇವಕರಾಗಲಿ, 1,44,000 ಮಂದಿಯಾಗಲಿ ಬಹುಮಾನವನ್ನು ಪಡೆಯುವ ಮೊದಲು ಅವರಿಗೆ ಯಾವ ಅನುಭವವಾಗಲೇಬೇಕು? (ಬಿ) ಈ ಸಮಯದಲ್ಲಿ ಜೀವಿಸುವ “ಮಹಾ ಸಮೂಹ”ಕ್ಕೆ ಯಾವ ಸಾಧ್ಯತೆ ಇದೆ?

ಹೇಬೆಲನಿಂದ ಹಿಡಿದು ಸ್ನಾನಿಕ ಯೋಹಾನನ ವರೆಗಿನ ದೇವರ ನಂಬಿಗಸ್ತ ಸೇವಕರು ತಮ್ಮ ಜೀವಿತಗಳಲ್ಲಿ ದೇವರ ಚಿತ್ತವನ್ನು ಪ್ರಥಮವಾಗಿಟ್ಟರು. ಆದರೂ, ಅವರೆಲ್ಲರೂ ಮರಣಹೊಂದಿ, ದೇವರ ನೂತನ ಲೋಕದಲ್ಲಿ ಭೂಮಿಯ ಮೇಲೆ ಜೀವಿಸಲಿಕ್ಕಾಗಿರುವ ಪುನರುತ್ಥಾನಕ್ಕಾಗಿ ಕಾಯುತ್ತಿದ್ದಾರೆ. ದೇವರ ಸ್ವರ್ಗೀಯ ರಾಜ್ಯದಲ್ಲಿ ಕ್ರಿಸ್ತನೊಂದಿಗೆ ಆಳುವ 1,44,000 ಮಂದಿಯೂ ಬಹುಮಾನವನ್ನು ಪಡೆಯುವ ಮೊದಲು ಸಾಯಲೇಬೇಕು. ಆದರೂ, ಈ ಅಂತ್ಯಕಾಲದಲ್ಲಿ ಸರ್ವ ಜನಾಂಗಗಳಿಂದ ಬಂದಿರುವ ಒಂದು “ಮಹಾ ಸಮೂಹವು” ಮರಣವನ್ನು ಅನುಭವಿಸದೆ ಭೂಮಿಯ ಮೇಲೆ ನಿತ್ಯವಾಗಿ ಜೀವಿಸುವ ಪ್ರತೀಕ್ಷೆಯುಳ್ಳದ್ದಾಗಿರುವುದೆಂದು ಪ್ರಕಟನೆ 7:9 ತೋರಿಸುತ್ತದೆ. ನೀವು ಅದರ ಭಾಗವಾಗಿದ್ದೀರೊ?

ಮಹಾ ಸಮೂಹವನ್ನು ಗುರುತಿಸುವುದು

2. ಪ್ರಕಟನೆ 7:9ರ ಮಹಾ ಸಮೂಹದ ಗುರುತಿಸುವಿಕೆಯ ಸಂಬಂಧದಲ್ಲಿ ಸ್ಪಷ್ಟವಾದ ತಿಳಿವಳಿಕೆಗೆ ಯಾವುದು ನಡೆಸಿತು?

2 ಇಸವಿ 1923ರಲ್ಲಿ, ಮತ್ತಾಯ 25:​31-46ರಲ್ಲಿರುವ ಯೇಸುವಿನ ಸಾಮ್ಯದಲ್ಲಿ ದಾಖಲಿಸಲ್ಪಟ್ಟಿರುವ ‘ಕುರಿಗಳು’ ಮತ್ತು ಯೋಹಾನ 10:16ರಲ್ಲಿ ಅವನು ಸೂಚಿಸಿರುವ “ಬೇರೆ ಕುರಿಗಳು” ಭೂಮಿಯ ಮೇಲೆ ನಿತ್ಯಕ್ಕೂ ಜೀವಿಸಲಿರುವ ಜನರಾಗಿದ್ದಾರೆ ಎಂದು ಯೆಹೋವನ ಸೇವಕರು ಗ್ರಹಿಸಿದರು. ಯೆಹೆಜ್ಕೇಲ 9:​1-11ರಲ್ಲಿ ವರ್ಣಿಸಿರುವಂತೆ, ಇವರು ಹಣೆಯ ಮೇಲೆ ಗುರುತುಮಾಡಲ್ಪಟ್ಟಿರುವವರೂ ಭೂನಿರೀಕ್ಷೆಯಿರುವವರೂ ಆಗಿದ್ದಾರೆ ಎಂದು 1931ರಲ್ಲಿ ತಿಳಿದುಬಂತು. ಬಳಿಕ 1935ರಲ್ಲಿ, ಈ ಮಹಾ ಸಮೂಹವು, ಯೇಸು ಹೇಳಿದ ಬೇರೆ ಕುರಿ ವರ್ಗದ ಭಾಗವಾಗಿದೆಯೆಂದು ತಿಳಿದುಬಂತು. ಇಂದು ಈ ಅನುಗ್ರಹಪಾತ್ರ ಮಹಾ ಸಮೂಹದಲ್ಲಿ ಲಕ್ಷಾಂತರ ಜನರಿದ್ದಾರೆ.

3. ‘ಸಿಂಹಾಸನದ ಮುಂದೆ ನಿಂತಿರುವ’ ಎಂಬ ಪದಗಳು ಒಂದು ಸ್ವರ್ಗೀಯ ವರ್ಗವನ್ನು ಏಕೆ ಸೂಚಿಸುವುದಿಲ್ಲ?

3ಪ್ರಕಟನೆ 7:9ರಲ್ಲಿ, ಮಹಾ ಸಮೂಹವು ಸ್ವರ್ಗದಲ್ಲಿರುವಂತೆ ಕಂಡುಬರುವುದಿಲ್ಲ. ದೇವರ ‘ಸಿಂಹಾಸನದ ಮುಂದೆ ನಿಂತಿರುವ’ ಅವರು ಸ್ವರ್ಗದಲ್ಲಿ ಇರಬೇಕೆಂದಿರುವುದಿಲ್ಲ. ಅವರು ದೇವರ ದೃಷ್ಟಿಗೆ ಗೋಚರವಾಗಿರುತ್ತಾರೆ ಅಷ್ಟೆ. (ಕೀರ್ತನೆ 11:⁠4) “ಯಾರಿಂದಲೂ ಎಣಿಸಲಾಗದಂಥ” ಮಹಾ ಸಮೂಹವು ಸ್ವರ್ಗೀಯ ವರ್ಗವಲ್ಲವೆಂಬ ನಿಜತ್ವವು, ಅದರ ಅನಿರ್ದಿಷ್ಟ ಸಂಖ್ಯೆಯನ್ನು ಪ್ರಕಟನೆ 7:​4-8 ಮತ್ತು ಪ್ರಕಟನೆ 14:​1-4ರಲ್ಲಿ ಏನು ಬರೆಯಲ್ಪಟ್ಟಿದೆಯೊ ಅದರೊಂದಿಗೆ ಹೋಲಿಸುವಾಗ ಸುವ್ಯಕ್ತವಾಗುತ್ತದೆ. ಅಲ್ಲಿ ಭೂಮಿಯಿಂದ ಸ್ವರ್ಗಕ್ಕೆ ತೆಗೆದುಕೊಳ್ಳಲ್ಪಟ್ಟವರ ಸಂಖ್ಯೆ 1,44,000 ಎಂದು ತೋರಿಸಲಾಗಿದೆ.

4. (ಎ) ಮಹಾ ಸಮೂಹವು ಪಾರಾಗಿ ಬರುವ “ಮಹಾ ಸಂಕಟ” ಏನಾಗಿದೆ? (ಬಿ) ಪ್ರಕಟನೆ 7:​11, 12ರಲ್ಲಿ ತಿಳಿಸಿರುವಂತೆ, ಯಾರು ಮಹಾ ಸಮೂಹವನ್ನು ಅವಲೋಕಿಸುತ್ತಾರೆ ಮತ್ತು ಅವರೊಂದಿಗೆ ಆರಾಧನೆಯಲ್ಲಿ ಭಾಗವಹಿಸುತ್ತಾರೆ?

4 ಈ ಮಹಾ ಸಮೂಹದ ವಿಷಯದಲ್ಲಿ ಪ್ರಕಟನೆ 7:​14, ತಿಳಿಸುವುದು: “ಇವರು ಆ ಮಹಾ ಹಿಂಸೆಯನ್ನು [“ಮಹಾ ಸಂಕಟವನ್ನು,” NW] ಅನುಭವಿಸಿ ಬಂದವರು.” ಇವರು ಮಾನವ ಇತಿಹಾಸದಲ್ಲಿ ಅನುಭವಿಸಲ್ಪಟ್ಟಿರುವುದರಲ್ಲಿ ಅತ್ಯಂತ ಕಠಿನ ಸಂಕಟವನ್ನು ಪಾರಾಗುತ್ತಾರೆ. (ಮತ್ತಾಯ 24:21) ಇವರು ತಮ್ಮ ರಕ್ಷಣೆಗಾಗಿ ದೇವರಿಗೂ ಕ್ರಿಸ್ತನಿಗೂ ತಾವು ಕೃತಜ್ಞರಾಗಿದ್ದೇವೆಂದು ಹೇಳುವಾಗ, ಸ್ವರ್ಗದ ಸಕಲ ನಂಬಿಗಸ್ತ ಜೀವಿಗಳು ಅವರೊಂದಿಗೆ, “ಆಮೆನ್‌. ಸ್ತೋತ್ರವೂ ಪ್ರಭಾವವೂ ಜ್ಞಾನವೂ ಕೃತಜ್ಞತಾಸ್ತುತಿಯೂ ಮಾನವೂ ಬಲವೂ ಶಕ್ತಿಯೂ ನಮ್ಮ ದೇವರಿಗೆ ಯುಗಯುಗಾಂತರಗಳಲ್ಲಿಯೂ ಇರಲಿ, ಆಮೆನ್‌” ಎಂದು ಹೇಳುವುದರಲ್ಲಿ ಜೊತೆಗೂಡುತ್ತಾರೆ.​—⁠ಪ್ರಕಟನೆ 7:11, 12.

ಪಾರಾಗಲು ಅರ್ಹರಾಗುವುದು

5. ಆ ಮಹಾ ಸಮೂಹದ ಭಾಗವಾಗಲು ಏನು ಅಗತ್ಯವೆಂಬುದನ್ನು ನಾವು ಹೇಗೆ ನಿರ್ಧರಿಸಬಲ್ಲೆವು?

5 ಆ ಮಹಾ ಸಂಕಟದಿಂದ ಮಹಾ ಸಮೂಹದ ಪಾರಾಗುವಿಕೆಯು ಯೆಹೋವನ ನೀತಿಯ ಮಟ್ಟಗಳಿಗೆ ಹೊಂದಿಕೆಯಲ್ಲಿ ನಡೆಯುತ್ತದೆ. ಬದುಕಿ ಉಳಿಯುವವರನ್ನು ಗುರುತಿಸುವ ಗುಣಲಕ್ಷಣಗಳನ್ನು ಬೈಬಲು ಸ್ಪಷ್ಟವಾಗಿ ಚರ್ಚಿಸುತ್ತದೆ. ಹೀಗೆ, ಪಾರಾಗಲು ಅರ್ಹರೆಂದು ರುಜುಪಡಿಸಬೇಕೆಂಬ ಉದ್ದೇಶದೊಂದಿಗೆ ನೀತಿಪ್ರಿಯರು ಈಗಲೇ ಕ್ರಮವನ್ನು ಕೈಕೊಳ್ಳಲು ಸಾಧ್ಯವಿದೆ. ಇವರು ಏನು ಮಾಡತಕ್ಕದ್ದು?

6. ಮಹಾ ಸಮೂಹವನ್ನು ಕುರಿಗಳಿಗೆ ಯೋಗ್ಯವಾಗಿಯೇ ಏಕೆ ಹೋಲಿಸಬಹುದು?

6 ಕುರಿಗಳು ಸಾಧು ಸ್ವಭಾವದವುಗಳು ಮತ್ತು ಅಧೀನ ಭಾವದವುಗಳು. ಆದುದರಿಂದ, ಸ್ವರ್ಗೀಯ ವರ್ಗಕ್ಕೆ ಸೇರಿರದ ಬೇರೆ ಕುರಿಗಳು ತನಗಿವೆಯೆಂದು ಯೇಸು ಹೇಳಿದಾಗ, ಭೂಮಿಯ ಮೇಲೆ ನಿತ್ಯವಾಗಿ ಜೀವಿಸಲು ಮಾತ್ರ ಬಯಸುವುದಲ್ಲದೆ ಅವನ ಬೋಧನೆಗಳಿಗೆ ಅಧೀನರಾಗುವ ಜನರನ್ನೂ ಅರ್ಥೈಸುತ್ತಾ ಅವನಂದದ್ದು: “ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ; ನಾನು ಅವುಗಳನ್ನು ಬಲ್ಲೆನು; ಅವು ನನ್ನ ಹಿಂದೆ ಬರುತ್ತವೆ.” (ಯೋಹಾನ 10:16, 27) ಇವರು ಯೇಸು ಹೇಳುವುದನ್ನು ನಿಜವಾಗಿಯೂ ಆಲಿಸಿ, ಅದನ್ನು ವಿಧೇಯತೆಯಿಂದ ಅನುಸರಿಸುವ ಮತ್ತು ಅವನ ಶಿಷ್ಯರಾಗುವ ಜನರಾಗಿದ್ದಾರೆ.

7. ಯೇಸುವಿನ ಹಿಂಬಾಲಕರು ಯಾವ ಗುಣಗಳನ್ನು ಬೆಳೆಸಿಕೊಳ್ಳುವುದು ಅಗತ್ಯ?

7 ಯೇಸುವಿನ ಹಿಂಬಾಲಕರಲ್ಲಿ ಪ್ರತಿಯೊಬ್ಬರು ಇನ್ನಾವ ಗುಣಗಳನ್ನು ಬೆಳೆಸಿಕೊಳ್ಳುವುದು ಅಗತ್ಯ? ದೇವರ ವಾಕ್ಯವು ಉತ್ತರ ಕೊಡುವುದು: “ನೀವು ನಿಮ್ಮ ಹಿಂದಿನ ನಡತೆಯನ್ನು ಅನುಸರಿಸದೆ ಪೂರ್ವಸ್ವಭಾವವನ್ನು ತೆಗೆದುಹಾಕಿಬಿಡಬೇಕು; . . . ನೀವು ನಿಮ್ಮ ಅಂತರ್ಯದಲ್ಲಿ ಹೊಸಬರಾಗಿ ನೂತನಸ್ವಭಾವವನ್ನು ಧರಿಸಿಕೊಳ್ಳಿರಿ. ಆ ಸ್ವಭಾವವು ದೇವರ ಹೋಲಿಕೆಯ ಮೇರೆಗೆ ಸತ್ಯಾನುಗುಣವಾದ ನೀತಿಯುಳ್ಳದ್ದಾಗಿಯೂ ದೇವಭಯವುಳ್ಳದ್ದಾಗಿಯೂ ನಿರ್ಮಿಸಲ್ಪಟ್ಟಿದೆ.” (ಎಫೆಸ 4:​22-24) ಅವರು ದೇವರ ಸೇವಕರ ಐಕ್ಯವನ್ನು ವರ್ಧಿಸುವ, “ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ದಯೆ ಉಪಕಾರ ನಂಬಿಕೆ ಸಾಧುತ್ವ ಶಮೆದಮೆ”ಗಳಂಥ ಗುಣಗಳನ್ನು ಬೆಳೆಸಿಕೊಳ್ಳುತ್ತಾರೆ.​—⁠ಗಲಾತ್ಯ 5:​22, 23.

8. ಮಹಾ ಸಮೂಹದವರು ಅಭಿಷಿಕ್ತ ಉಳಿಕೆಯವರನ್ನು ಬೆಂಬಲಿಸುವಾಗ ಏನನ್ನು ಎದುರಿಸುವರು?

8 ಈ ಮಹಾ ಸಮೂಹದವರು, ಸಾರುವ ಕಾರ್ಯದಲ್ಲಿ ನಾಯಕತ್ವವನ್ನು ವಹಿಸುವ ಸ್ವರ್ಗೀಯ ನಿರೀಕ್ಷೆಗಳಿರುವ ಅಲ್ಪ ಸಂಖ್ಯಾತರಿಗೆ ಬೆಂಬಲ ನೀಡುತ್ತಾರೆ. (ಮತ್ತಾಯ 24:14; 25:40) ಕಡೇ ದಿವಸಗಳ ಆರಂಭದಲ್ಲಿ, ಕ್ರಿಸ್ತ ಯೇಸುವೂ ಅವನ ದೂತರೂ ಸೈತಾನನನ್ನೂ ಅವನ ದೆವ್ವಗಳನ್ನೂ ಸ್ವರ್ಗದಿಂದ ದೊಬ್ಬಿರುವುದರಿಂದ ತಮಗೆ ವಿರೋಧ ಬರುತ್ತದೆಂದು ತಿಳಿದಿರುವುದಾದರೂ, ಈ ಬೇರೆ ಕುರಿಗಳು ಇಂತಹ ಬೆಂಬಲವನ್ನು ಕೊಡುತ್ತಾರೆ. ಆ ದೊಬ್ಬುವಿಕೆಯ ಪರಿಣಾಮವು, ‘ಭೂಮಿಗೆ ದುರ್ಗತಿ’ಯಾಗಿರುವುದು. ಏಕೆಂದರೆ, “ಸೈತಾನನು ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾ ರೌದ್ರವುಳ್ಳವನಾಗಿ ನಿಮ್ಮ ಕಡೆಗೆ ಇಳಿದುಬಂದಿದ್ದಾನೆ.” (ಪ್ರಕಟನೆ 12:​7-12) ಹೀಗೆ ಸೈತಾನನು, ಈ ವ್ಯವಸ್ಥೆಯ ಅಂತ್ಯವು ಸಮೀಪಿಸುವಾಗ, ದೇವರ ಸೇವಕರಿಗೆ ತಾನು ತೋರಿಸುವ ವಿರೋಧವನ್ನು ಹೆಚ್ಚಿಸುತ್ತಾನೆ.

9. ದೇವರ ಸೇವಕರು ಸುವಾರ್ತೆಯನ್ನು ಸಾರುವುದರಲ್ಲಿ ಎಷ್ಟು ಜಯವನ್ನು ಗಳಿಸಿದ್ದಾರೆ, ಮತ್ತು ಏಕೆ?

9 ಕಠಿನ ಹಿಂಸೆಯ ಎದುರಿನಲ್ಲೂ, ಸಾರುವ ಕೆಲಸವು ಮುಂದುವರಿಯುತ್ತಿದೆ. Iನೆಯ ಲೋಕ ಯುದ್ಧದ ಅಂತ್ಯದಲ್ಲಿದ್ದ ಕೇವಲ ಕೆಲವೇ ಸಾವಿರ ರಾಜ್ಯ ಪ್ರಚಾರಕರು ಈಗ ಲಕ್ಷಾಂತರ ಸಂಖ್ಯೆಗೆ ತಲಪಿದ್ದಾರೆ. ಏಕೆಂದರೆ ಯೆಹೋವನು ವಚನಕೊಟ್ಟದ್ದು: “ನಿನ್ನನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು.” (ಯೆಶಾಯ 54:17) ಯೆಹೂದಿ ಉಚ್ಚ ನ್ಯಾಯಾಲಯದ ಒಬ್ಬ ಸದಸ್ಯನೂ ದೇವರ ಕೆಲಸವನ್ನು ಸೋಲಿಸಸಾಧ್ಯವಿರುವುದಿಲ್ಲ ಎಂಬುದನ್ನು ಒಪ್ಪಿಕೊಂಡನು. ಒಂದನೆಯ ಶತಮಾನದ ಶಿಷ್ಯರ ಬಗ್ಗೆ ಅವನು ಫರಿಸಾಯರಿಗೆ ಹೇಳಿದ್ದು: “ನೀವು ಆ ಮನುಷ್ಯರ ಗೊಡವೆಗೆ ಹೋಗಬೇಡಿರಿ, ಅವರನ್ನು ಬಿಡಿರಿ; ಯಾಕಂದರೆ ಈ ಯೋಚನೆಯು ಅಥವಾ ಈ ಕೆಲಸವು ಮನುಷ್ಯರಿಂದಾಗಿದ್ದರೆ ತಾನೇ ಕೆಡುವದು; ಅದು ದೇವರಿಂದಾಗಿದ್ದರೆ ಅದನ್ನು ಕೆಡಿಸುವದಕ್ಕೆ ನಿಮ್ಮಿಂದ ಆಗುವದಿಲ್ಲ. ನೀವು ಒಂದು ವೇಳೆ ದೇವರ ಮೇಲೆ ಯುದ್ಧಮಾಡುವವರಾಗಿ ಕಾಣಿಸಿಕೊಂಡೀರಿ.”​—⁠ಅ. ಕೃತ್ಯಗಳು 5:38, 39.

10. (ಎ) ಮಹಾ ಸಮೂಹದವರಿಗಿರುವ ಆ “ಗುರುತು” ಏನನ್ನು ಅರ್ಥೈಸುತ್ತದೆ? (ಬಿ) ‘ಪರಲೋಕದಿಂದ ಬಂದ ಶಬ್ದ’ಕ್ಕೆ ದೇವರ ಸೇವಕರು ವಿಧೇಯರಾಗುವುದು ಹೇಗೆ?

10 ಆ ಮಹಾ ಸಮೂಹದವರನ್ನು ಬದುಕಿ ಉಳಿಯಲು ಗುರುತಿಸಲ್ಪಟ್ಟವರೆಂಬಂತೆ ಚಿತ್ರಿಸಲಾಗಿದೆ. (ಯೆಹೆಜ್ಕೇಲ 9:​4-6) ಆ “ಗುರುತು” ಅವರು ಯೆಹೋವನಿಗೆ ಸಮರ್ಪಿತರು, ಯೇಸುವಿನ ಶಿಷ್ಯರಾಗಿ ದೀಕ್ಷಾಸ್ನಾನ ಹೊಂದಿರುವವರು ಮತ್ತು ಕ್ರಿಸ್ತಸದೃಶ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಪ್ರಯತ್ನಿಸುವವರು ಎಂಬುದರ ಸಾಕ್ಷ್ಯವಾಗಿದೆ. ಅವರು ಸೈತಾನನ ಸುಳ್ಳುಧರ್ಮದ ಲೋಕವ್ಯಾಪಕ ಸಾಮ್ರಾಜ್ಯದ ಕುರಿತು “ನನ್ನ ಪ್ರಜೆಗಳೇ, ಅವಳನ್ನು ಬಿಟ್ಟುಬನ್ನಿರಿ; ನೀವು ಅವಳ ಪಾಪಗಳಲ್ಲಿ ಪಾಲುಗಾರರಾಗಬಾರದು; ಅವಳಿಗಾಗುವ ಉಪದ್ರವಗಳಿಗೆ ಗುರಿಯಾಗಬಾರದು” ಎಂಬ ‘ಪರಲೋಕದಿಂದ ಬಂದ ಶಬ್ದ’ಕ್ಕೆ ವಿಧೇಯರಾಗುತ್ತಾರೆ.​—⁠ಪ್ರಕಟನೆ 18:1-5.

11. ಈ ಮಹಾ ಸಮೂಹದವರು ತಾವು ಯೆಹೋವನ ಸೇವಕರೆಂಬುದನ್ನು ಯಾವ ಮುಖ್ಯವಾದ ರೀತಿಯಲ್ಲಿ ತೋರಿಸುತ್ತಾರೆ?

11 ಅಲ್ಲದೆ, ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.” (ಯೋಹಾನ 13:35) ಇದಕ್ಕೆ ವ್ಯತಿರಿಕ್ತವಾಗಿ, ಲೋಕದ ಧರ್ಮಗಳ ಸದಸ್ಯರು ಇತರ ಸದಸ್ಯರನ್ನು ಯುದ್ಧದಲ್ಲಿ ಹತಿಸುತ್ತಾರೆ; ಅನೇಕವೇಳೆ ಕೇವಲ ಅವರು ಭಿನ್ನವಾದ ರಾಷ್ಟ್ರದವರು ಎಂಬ ಕಾರಣಕ್ಕಾಗಿ! ದೇವರ ವಾಕ್ಯವು ಹೇಳುವುದು: “ಇವರು ದೇವರ ಮಕ್ಕಳೆಂಬದೂ ಅವರು ಸೈತಾನನ ಮಕ್ಕಳೆಂಬದೂ ಇದರಿಂದ ವ್ಯಕ್ತವಾಗುತ್ತದೆ. ನೀತಿಯನ್ನು ಅನುಸರಿಸದವನೂ ತನ್ನ ಸಹೋದರರನ್ನು ಪ್ರೀತಿಸದವನೂ ದೇವರಿಂದ ಹುಟ್ಟಿದವರಲ್ಲ. ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬದೇ . . . ಕೇಳಿದ ವಾಕ್ಯವಾಗಿದೆ. ಕೆಡುಕನಿಂದ ಹುಟ್ಟಿ ತನ್ನ ತಮ್ಮನನ್ನು ಕೊಂದು ಹಾಕಿದ ಕಾಯಿನನಂತೆ ನಾವು ಇರಬಾರದು.”​—⁠1 ಯೋಹಾನ 3:10-12.

12. ಮಹಾ ಸಂಕಟದಲ್ಲಿ ಯೆಹೋವನು ಪ್ರಯೋಜನವಿಲ್ಲದ ಫಲಗಳನ್ನು ಫಲಿಸುವ ಧಾರ್ಮಿಕ ‘ಮರಗಳಿಗೆ’ ಏನು ಮಾಡುವನು?

12 ಯೇಸು ಹೇಳಿದ್ದು: “ಒಳ್ಳೇ ಮರಗಳೆಲ್ಲಾ ಒಳ್ಳೇ ಫಲವನ್ನು ಕೊಡುವವು; ಹುಳುಕು ಮರವು ಕೆಟ್ಟ ಫಲವನ್ನು ಕೊಡುವದು. ಒಳ್ಳೇ ಮರವು ಕೆಟ್ಟ ಫಲವನ್ನು ಕೊಡಲಾರದು; ಹುಳುಕು ಮರವು ಒಳ್ಳೇ ಫಲವನ್ನು ಕೊಡಲಾರದು. ಒಳ್ಳೇ ಫಲವನ್ನು ಕೊಡದ ಎಲ್ಲಾ ಮರಗಳನ್ನು ಕಡಿದು ಬೆಂಕಿಯಲ್ಲಿ ಹಾಕುತ್ತಾರೆ. ಹೀಗಿರಲಾಗಿ ಅವರ ಫಲಗಳಿಂದ ಅವರನ್ನು ತಿಳಿದುಕೊಳ್ಳುವಿರಿ.” (ಮತ್ತಾಯ 7:17-20) ಈ ಲೋಕದ ಧರ್ಮಗಳು ಉತ್ಪತ್ತಿಸಿರುವ ಫಲವು, ಅವು ಹುಳುಕು ‘ಮರಗಳು’ ಆಗಿವೆ ಮತ್ತು ಬೇಗನೆ ಮಹಾ ಸಂಕಟದಲ್ಲಿ ಯೆಹೋವನಿಂದ ನಾಶಗೊಳ್ಳಲಿವೆ ಎಂಬುದನ್ನು ಗುರುತಿಸುತ್ತದೆ.​—⁠ಪ್ರಕಟನೆ 17:16.

13. ಮಹಾ ಸಮೂಹದವರು ಐಕ್ಯದಿಂದ ಯೆಹೋವನ ‘ಸಿಂಹಾಸನದ ಮುಂದೆ ನಿಂತಿ’ದ್ದಾರೆಂಬುದನ್ನು ಹೇಗೆ ತೋರಿಸುತ್ತಾರೆ?

13 ಮಹಾ ಸಮೂಹವು ಬದುಕಿ ಉಳಿಯುವಂತೆ ನಡೆಸುವ ಸಂಗತಿಗಳಿಗೆ ಪ್ರಕಟನೆ 7:​9-15 ಗಮನವನ್ನು ಸೆಳೆಯುತ್ತದೆ. ಅವರು ಐಕ್ಯದಿಂದ ಯೆಹೋವನ ‘ಸಿಂಹಾಸನದ ಮುಂದೆ ನಿಂತು’ ಆತನ ವಿಶ್ವ ಪರಮಾಧಿಕಾರವನ್ನು ಸಮರ್ಥಿಸುತ್ತಾರೆಂದು ಅದು ತೋರಿಸುತ್ತದೆ. ಅವರು “ಯಜ್ಞದ ಕುರಿಯಾದಾತನ ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದು ಶುಭ್ರಮಾಡಿದ್ದಾರೆ.” ಅಂದರೆ ಅವರು ಯೇಸುವಿನ ಪಾಪ ಪರಿಹಾರಕ ಯಜ್ಞವನ್ನು ಅಂಗೀಕರಿಸುತ್ತಾರೆ. (ಯೋಹಾನ 1:29) ಅವರು ದೇವರಿಗೆ ತಮ್ಮನ್ನು ಸಮರ್ಪಿಸಿಕೊಂಡು ಅದನ್ನು ನೀರಿನ ನಿಮಜ್ಜನದ ಮೂಲಕ ಸೂಚಿಸಿದ್ದಾರೆ. ಆದಕಾರಣ ಅವರು ದೇವರ ಮುಂದೆ, ಬಿಳೀ ನಿಲುವಂಗಿಗಳಿಂದ ಸೂಚಿಸಲ್ಪಡುವ ಶುದ್ಧ ನಿಲುವನ್ನು ಅನುಭವಿಸುತ್ತಿದ್ದು, “ಹಗಲಿರುಳು ಆತನ ಸೇವೆಮಾಡುತ್ತಾ ಇದ್ದಾರೆ.” ಇಲ್ಲಿ ವರ್ಣಿಸಲಾಗಿರುವ ವಿಷಯಕ್ಕೆ ನೀವು ನಿಮ್ಮ ಜೀವಿತವನ್ನು ಹೆಚ್ಚು ಪೂರ್ಣವಾಗಿ ಹೊಂದಿಸಿಕೊಳ್ಳುವಂತೆ ಮಾಡುವ ಮಾರ್ಗಗಳಿವೆಯೆ?

ಈಗ ದೊರೆಯುವ ಪ್ರಯೋಜನಗಳು

14. ಯೆಹೋವನ ಸೇವಕರಿಗೆ ಈಗಲೂ ದೊರೆಯುವ ಅದ್ವಿತೀಯವಾದ ಕೆಲವು ಪ್ರಯೋಜನಗಳಾವುವು?

14 ಯೆಹೋವನನ್ನು ಸೇವಿಸುವವರು ಈಗಲೂ ಅನುಭವಿಸುತ್ತಿರುವ ಅದ್ವಿತೀಯ ಪ್ರಯೋಜನಗಳನ್ನು ನೀವು ಪ್ರಾಯಶಃ ನೋಡಿರುತ್ತೀರಿ. ದೃಷ್ಟಾಂತಕ್ಕಾಗಿ, ಯೆಹೋವನ ನೀತಿಯ ಉದ್ದೇಶಗಳ ಬಗ್ಗೆ ನೀವು ಕಲಿತುಕೊಂಡಾಗ, ಭವಿಷ್ಯತ್ತಿಗಾಗಿ ಉಜ್ವಲವಾದ ನಿರೀಕ್ಷೆಯೊಂದಿದೆ ಎಂದು ನಿಮಗೆ ತಿಳಿದುಬಂತು. ಆದಕಾರಣ ಈಗ ನಿಮಗೆ ಜೀವಿತದಲ್ಲಿ, ಭೂಪರದೈಸಿನಲ್ಲಿ ನಿತ್ಯಜೀವದ ಸಂತೋಷಕರವಾದ ಪ್ರತೀಕ್ಷೆಯೊಂದಿಗೆ ಸತ್ಯ ದೇವರನ್ನು ಸೇವಿಸುವ ಒಂದು ನಿಜವಾದ ಉದ್ದೇಶವಿದೆ. ಹೌದು, ಅರಸನಾದ ಯೇಸು ಕ್ರಿಸ್ತನು ಮಹಾ ಸಮೂಹವನ್ನು “ಜೀವಜಲದ ಒರತೆಗಳ ಬಳಿಗೆ ನಡಿಸುತ್ತಾನೆ.”​—⁠ಪ್ರಕಟನೆ 7:17.

15. ರಾಜಕೀಯ ಮತ್ತು ನೈತಿಕ ವಿಷಯಗಳ ಸಂಬಂಧದಲ್ಲಿ ಬೈಬಲ್‌ ಮೂಲತತ್ತ್ವಗಳಿಗೆ ಅಂಟಿಕೊಂಡಿರುವುದರಿಂದ ಯೆಹೋವನ ಸಾಕ್ಷಿಗಳು ಹೇಗೆ ಪ್ರಯೋಜನ ಪಡೆಯುತ್ತಾರೆ?

15 ಮಹಾ ಸಮೂಹದವರು ಅನುಭವಿಸುವ ಒಂದು ಅದ್ಭುತಕರವಾದ ಪ್ರಯೋಜನವು, ಭೂಮ್ಯಾದ್ಯಂತ ಯೆಹೋವನ ಸೇವಕರ ನಡುವೆ ಕಂಡುಬರುವ ಪ್ರೀತಿ, ಐಕ್ಯ ಮತ್ತು ಸಾಮರಸ್ಯವೇ. ನಾವು ಒಂದೇ ಆತ್ಮಿಕ ಆಹಾರದಲ್ಲಿ ಭಾಗಿಗಳಾಗುವುದರಿಂದ, ನಾವು ದೇವರ ವಾಕ್ಯದಲ್ಲಿ ಕಂಡುಬರುವ ಏಕಪ್ರಕಾರದ ನಿಯಮ ಮತ್ತು ಮೂಲತತ್ತ್ವಗಳನ್ನು ಪಾಲಿಸುತ್ತೇವೆ. ರಾಜಕೀಯ ಮತ್ತು ರಾಷ್ಟ್ರೀಯ ಭಾವನೆಗಳಿಂದ ನಾವು ವಿಭಾಗಿಸಲ್ಪಡದಿರುವುದು ಈ ಕಾರಣದಿಂದಲೇ. ಅಲ್ಲದೆ, ದೇವರು ತನ್ನ ಜನರಿಂದ ಅಪೇಕ್ಷಿಸುವ ಉನ್ನತ ನೈತಿಕ ಮಟ್ಟಗಳನ್ನು ನಾವು ಕಾಪಾಡಿಕೊಳ್ಳುತ್ತೇವೆ. (1 ಕೊರಿಂಥ 6:​9-11) ಹೀಗೆ, ಲೋಕದಲ್ಲಿರುವ ಕಲಹ, ಅನೈಕ್ಯ ಮತ್ತು ಅನೈತಿಕತೆಯನ್ನು ಅನುಭವಿಸುವ ಬದಲಾಗಿ, ಯೆಹೋವನ ಜನರು ಆತ್ಮಿಕ ಪರದೈಸವೆಂದು ಕರೆಯಬಹುದಾದ ಪರಿಸ್ಥಿತಿಯಲ್ಲಿ ಸಂತೋಷಿಸುತ್ತಾರೆ. ಇದನ್ನು ಯೆಶಾಯ 65:​13, 14 ಹೇಗೆ ವರ್ಣಿಸುತ್ತದೆಂಬುದನ್ನು ಗಮನಿಸಿರಿ.

16. ಜೀವನದಲ್ಲಿ ಸಾಮಾನ್ಯವಾಗಿರುವ ಸಮಸ್ಯೆಗಳ ಎದುರಿನಲ್ಲಿಯೂ, ಮಹಾ ಸಮೂಹದವರಿಗೆ ಯಾವ ನಿರೀಕ್ಷೆಯಿದೆ?

16 ಯೆಹೋವನ ಮಾನವ ಸೇವಕರು ಪರಿಪೂರ್ಣರಲ್ಲವೆಂಬುದು ನಿಜ. ಈ ಲೋಕ ಜೀವನದ ತಾಪತ್ರಯಾನುಭವ ಅಥವಾ ಜನಾಂಗಗಳ ಯುದ್ಧಗಳಲ್ಲಿ ನಿರ್ದೋಷಿಗಳಾಗಿದ್ದರೂ ಅದಕ್ಕೆ ಬಲಿಯಾಗುವಂತಹ ಸಾಮಾನ್ಯ ಸಮಸ್ಯೆಗಳು ಅವರಿಗೂ ತಟ್ಟುತ್ತವೆ. ರೋಗ, ಕಷ್ಟಾನುಭವ ಮತ್ತು ಮರಣವನ್ನು ಅವರೂ ಎದುರಿಸುತ್ತಾರೆ. ಆದರೆ ನೂತನ ಲೋಕದಲ್ಲಿ ದೇವರು “ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ” ಎಂಬ ನಂಬಿಕೆ ಅವರಿಗಿದೆ.​—⁠ಪ್ರಕಟನೆ 21:⁠4.

17. ನಮಗೆ ಈಗ ಏನೇ ಸಂಭವಿಸಲಿ, ಸತ್ಯ ದೇವರನ್ನು ಆರಾಧಿಸುವವರಿಗೆ ಯಾವ ಅದ್ಭುತಕರವಾದ ಭವಿಷ್ಯತ್ತು ಕಾದಿದೆ?

17 ವೃದ್ಧಾಪ್ಯ, ರೋಗ, ಅಪಘಾತ ಅಥವಾ ಹಿಂಸೆಯ ಕಾರಣ ನೀವು ಈಗ ಜೀವವನ್ನು ಕಳೆದುಕೊಳ್ಳಬೇಕಾದರೂ, ಪರದೈಸಿನ ಜೀವನಕ್ಕೆ ಯೆಹೋವನು ನಿಮ್ಮನ್ನು ಪುನರುತ್ಥಾನಗೊಳಿಸುವನು. (ಅ. ಕೃತ್ಯಗಳು 24:15) ಆಗ ಕ್ರಿಸ್ತನ ಸಹಸ್ರ ವರುಷಗಳ ಆಳಿಕೆಯಲ್ಲಿ ಆತ್ಮಿಕ ಔತಣದಲ್ಲಿ ಆನಂದಿಸುತ್ತಾ ನೀವು ಮುಂದುವರಿಯುವಿರಿ. ದೇವರ ಉದ್ದೇಶಗಳು ಮಹಿಮಾಭರಿತವಾಗಿ ನೆರವೇರುವುದನ್ನು ನೀವು ನೋಡುವಾಗ, ದೇವರ ಕಡೆಗೆ ನಿಮಗಿರುವ ಪ್ರೀತಿಯು ಇನ್ನೂ ಆಳವಾಗುವುದು. ಮತ್ತು ಆಗ ಯೆಹೋವನು ಒದಗಿಸಲಿರುವ ಭೌತಿಕ ಆಶೀರ್ವಾದಗಳು ಆತನ ಕಡೆಗೆ ನಿಮಗಿರುವ ಪ್ರೀತಿಯನ್ನು ಇನ್ನೂ ಹೆಚ್ಚು ಗಾಢಗೊಳಿಸುವವು. (ಯೆಶಾಯ 25:​6-9) ದೇವಜನರಿಗೆ ಎಷ್ಟು ಅದ್ಭುತಕರವಾದ ಭವಿಷ್ಯತ್ತು ಕಾದಿದೆ!

ಪುನರ್ವಿಮರ್ಶೆಯ ಚರ್ಚೆ

• ಬೈಬಲು ಮಹಾ ಸಮೂಹವನ್ನು ಯಾವ ಅಸಾಮಾನ್ಯವಾದ ಸಂಭವದೊಂದಿಗೆ ಜೊತೆಗೂಡಿಸುತ್ತದೆ?

• ಆ ದೈವಾನುಗ್ರಹಪಾತ್ರ ಮಹಾ ಸಮೂಹದಲ್ಲಿ ನಿಜವಾಗಿಯೂ ಇರುವ ಅಪೇಕ್ಷೆ ನಮಗಿರುವುದಾದರೆ, ನಾವು ಈಗ ಏನು ಮಾಡತಕ್ಕದ್ದು?

• ಮಹಾ ಸಮೂಹವು ಈಗ ಅನುಭವಿಸುತ್ತಿರುವ ಮತ್ತು ದೇವರ ನೂತನ ಲೋಕದಲ್ಲಿ ಅನುಭವಿಸಲಿರುವ ಆಶೀರ್ವಾದಗಳು ನಿಮಗೆಷ್ಟು ಪ್ರಾಮುಖ್ಯವಾಗಿವೆ?

[ಅಧ್ಯಯನ ಪ್ರಶ್ನೆಗಳು]

[ಪುಟ 123ರಲ್ಲಿರುವ ಚಿತ್ರ]

ಮಹಾ ಸಮೂಹದಲ್ಲಿರುವ ಲಕ್ಷಾಂತರ ಜನರು ಸತ್ಯ ದೇವರನ್ನು ಐಕ್ಯದಿಂದ ಆರಾಧಿಸುತ್ತಾರೆ