ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಲಹೆಗೆ ಕಿವಿಗೊಡಿರಿ, ಶಿಸ್ತನ್ನು ಅಂಗೀಕರಿಸಿರಿ

ಸಲಹೆಗೆ ಕಿವಿಗೊಡಿರಿ, ಶಿಸ್ತನ್ನು ಅಂಗೀಕರಿಸಿರಿ

ಅಧ್ಯಾಯ ಹದಿನೈದು

ಸಲಹೆಗೆ ಕಿವಿಗೊಡಿರಿ, ಶಿಸ್ತನ್ನು ಅಂಗೀಕರಿಸಿರಿ

1. (ಎ) ನಮಗೆಲ್ಲರಿಗೆ ಸಲಹೆ ಶಿಸ್ತುಗಳು ಅಗತ್ಯವಿರುವುದೇಕೆ? (ಬಿ) ನಾವು ಯಾವ ಪ್ರಶ್ನೆಯನ್ನು ಪರಿಗಣಿಸುವುದು ಆವಶ್ಯಕ?

“ಅನೇಕ ವಿಷಯಗಳಲ್ಲಿ ನಾವೆಲ್ಲರೂ ತಪ್ಪುವದುಂಟು,” ಎನ್ನುತ್ತದೆ ಬೈಬಲು ಯಾಕೋಬ 3:2ರಲ್ಲಿ. ದೇವರ ವಾಕ್ಯವು ನಾವು ಯಾವ ವಿಧದ ವ್ಯಕ್ತಿಯಾಗಿರಬೇಕೆಂದು ಹೇಳುತ್ತದೊ ಅದರಿಂದ ನಾವು ತಪ್ಪಿಹೋಗಿರುವ ಅನೇಕ ಸಂದರ್ಭಗಳು ನಮ್ಮ ಮನಸ್ಸಿಗೆ ಬರಬಹುದು. ಹೀಗಿರುವುದರಿಂದ, “ಸಲಹೆಗೆ ಕಿವಿಗೊಟ್ಟು ಶಿಸ್ತನ್ನು ಅಂಗೀಕರಿಸು. ಆಗ ನಿನ್ನ ಭವಿಷ್ಯತ್ತಿನಲ್ಲಿ ನೀನು ವಿವೇಕಿಯಾಗಿ ಪರಿಣಮಿಸುವಿ,” ಎಂದು ಬೈಬಲ್‌ ಹೇಳುವುದನ್ನು ನ್ಯಾಯವೆಂದು ನಾವು ಒಪ್ಪಿಕೊಳ್ಳುತ್ತೇವೆ. (ಜ್ಞಾನೋಕ್ತಿ 19:​20, NW) ನಾವು ಬೈಬಲ್‌ ಬೋಧನೆಗಳೊಂದಿಗೆ ನಮ್ಮ ಜೀವಿತಗಳನ್ನು ಹೊಂದಿಸಿಕೊಳ್ಳಲು ಈಗಾಗಲೇ ಸಂಗತಿಗಳನ್ನು ಕ್ರಮಪಡಿಸಿಕೊಂಡಿದ್ದೇವೆಂಬುದು ನಿಸ್ಸಂಶಯ. ಆದರೆ ಜೊತೆ ಕ್ರೈಸ್ತನೊಬ್ಬನು ಒಂದು ನಿರ್ದಿಷ್ಟ ವಿಷಯದಲ್ಲಿ ಸಲಹೆ ಕೊಡುವಾಗ ನಾವು ಹೇಗೆ ಪ್ರತಿವರ್ತಿಸುತ್ತೇವೆ?

2. ನಮಗೆ ವ್ಯಕ್ತಿಪರವಾದ ಸಲಹೆ ದೊರೆಯುವಾಗ ನಾವೇನು ಮಾಡಬೇಕು?

2 ಕೆಲವರು ತಾವೇ ಸರಿಯೆಂದು ಹೇಳುವ, ಅಥವಾ ಸನ್ನಿವೇಶದ ಗಂಭೀರತೆಯನ್ನು ಕಡಿಮೆಗೊಳಿಸುವ ಇಲ್ಲವೆ ಬೇರೆಯವರ ಮೇಲೆ ದೂರುಹೊರಿಸುವ ಪ್ರತಿವರ್ತನೆಯನ್ನು ತೋರಿಸಲು ಪ್ರಯತ್ನಿಸುತ್ತಾರೆ. ಆದರೆ ಸಲಹೆಗೆ ಕಿವಿಗೊಟ್ಟು ಅದನ್ನು ಅನ್ವಯಿಸಿಕೊಳ್ಳುವುದು ಉತ್ತಮ. (ಇಬ್ರಿಯ 12:11) ಬೇರೆಯವರು ಪರಿಪೂರ್ಣರಾಗಿರಬೇಕೆಂದು ಯಾರೂ ಬಯಸಬಾರದೆಂಬುದು ನಿಜ. ಕ್ಷುಲ್ಲಕ ವಿಷಯಗಳ ಮೇಲೆ ಅಥವಾ ಬೈಬಲು ಯಾವುದನ್ನು ವ್ಯಕ್ತಿಪರ ಆಯ್ಕೆಯ ವಿಷಯಗಳಾಗಿ ಬಿಡುತ್ತದೊ ಅದರ ವಿಷಯದಲ್ಲಿ ಸದಾ ಬುದ್ಧಿಹೇಳಬಾರದೆಂಬುದೂ ನಿಜ. ಇದಲ್ಲದೆ, ಸಲಹೆ ನೀಡುವವನು ಎಲ್ಲಾ ನಿಜತ್ವಗಳನ್ನು ಗಮನಿಸದೆ ಸಲಹೆ ನೀಡುತ್ತಿರುವಲ್ಲಿ, ಇದನ್ನು ಗೌರವದಿಂದ ಅವನ ಗಮನಕ್ಕೆ ತರಬಹುದಾಗಿದೆ. ಆದರೆ ಮುಂದಿನ ಚರ್ಚೆಯಲ್ಲಿ, ಕೊಡಲ್ಪಟ್ಟಿರುವ ಸಲಹೆ ಅಥವಾ ಶಿಸ್ತು ಯೋಗ್ಯವಾಗಿದೆ, ಬೈಬಲಾಧಾರಿತವಾಗಿದೆ ಎಂದು ನಾವು ನೆನಸೋಣ. ಒಬ್ಬನು ಇದಕ್ಕೆ ಯಾವ ಪ್ರತಿಕ್ರಿಯೆಯನ್ನು ತೋರಿಸಬೇಕು?

ಬುದ್ಧಿವಾದ ಸ್ವೀಕರಣೆಗೆ ಮಾದರಿಗಳು

3, 4. (ಎ) ಸಲಹೆ ಮತ್ತು ಶಿಸ್ತಿನ ವಿಷಯದಲ್ಲಿ ಯೋಗ್ಯ ವೀಕ್ಷಣವನ್ನು ಬೆಳೆಸಿಕೊಳ್ಳಲು ಸಹಾಯಕ್ಕಾಗಿ ಬೈಬಲಿನಲ್ಲಿ ಏನು ಅಡಕವಾಗಿದೆ? (ಬಿ) ರಾಜ ಸೌಲನು ಸಲಹೆಗೆ ಹೇಗೆ ಪ್ರತಿಕ್ರಿಯಿಸಿದನು, ಮತ್ತು ಪರಿಣಾಮವೇನಾಯಿತು?

3 ಅಗತ್ಯವಿರುವ ಸಲಹೆಯನ್ನು ಪಡೆದ ವ್ಯಕ್ತಿಗಳ ವಾಸ್ತವ ಜೀವನಾನುಭವಗಳು ದೇವರ ವಾಕ್ಯದಲ್ಲಿ ಅಡಕವಾಗಿವೆ. ಕೆಲವೊಮ್ಮೆ, ಆ ಸಲಹೆಯ ಜೊತೆಯಲ್ಲಿ ಶಿಸ್ತೂ ಅವರಿಗೆ ದೊರೆಯಿತು. ಇಂಥವರಲ್ಲಿ ಒಬ್ಬನು ಇಸ್ರಾಯೇಲಿನ ಅರಸನಾದ ಸೌಲನು. ಅಮಾಲೇಕ್ಯ ಜನಾಂಗದ ಸಂಬಂಧದಲ್ಲಿ ಅವನು ಯೆಹೋವನಿಗೆ ವಿಧೇಯನಾಗಲು ತಪ್ಪಿಹೋದನು. ಅಮಾಲೇಕ್ಯರು ದೇವರ ಸೇವಕರನ್ನು ವಿರೋಧಿಸಿದ್ದುದರಿಂದ, ಅಮಾಲೇಕ್ಯರನ್ನಾಗಲಿ ಅವರ ಜಾನುವಾರುಗಳನ್ನಾಗಲಿ ಉಳಿಸಬಾರದೆಂಬುದು ಯೆಹೋವನ ತೀರ್ಪಾಗಿತ್ತು. ಆದರೆ ರಾಜ ಸೌಲನು ಅವರ ರಾಜನನ್ನೂ ಜಾನುವಾರುಗಳಲ್ಲಿ ಉತ್ತಮವಾದವುಗಳನ್ನೂ ಉಳಿಸಿದನು.​—⁠1 ಸಮುವೇಲ 15:​1-11.

4 ಸೌಲನ ಪಾಪಖಂಡನೆಗಾಗಿ ಯೆಹೋವನು ಪ್ರವಾದಿಯಾದ ಸಮುವೇಲನನ್ನು ಕಳುಹಿಸಿದನು. ಆಗ ಸೌಲನ ಪ್ರತಿಕ್ರಿಯೆಯೇನಾಗಿತ್ತು? ತಾನು ಅಮಾಲೇಕ್ಯರನ್ನು ಸೋಲಿಸಿದ್ದೇನೆ ಆದರೆ ಅರಸನನ್ನು ಮಾತ್ರ ಉಳಿಸಿದ್ದೇನೆ ಎಂದು ಅವನು ವಾದಿಸಿದನು. ಆದರೆ ಇದು ಯೆಹೋವನ ಆಜ್ಞೆಗೆ ಪ್ರತಿಕೂಲವಾಗಿತ್ತು. (1 ಸಮುವೇಲ 15:20) ಆಗ ಸೌಲನು, ಜಾನುವಾರುಗಳನ್ನು ಉಳಿಸಿದವರು ತನ್ನ ಜನರೆಂದು ಅವರ ಮೇಲೆ ದೂರು ಹೊರಿಸಲು ಪ್ರಯತ್ನಿಸಿದನು. “ಜನರಿಗೆ ಹೆದರಿ ಅವರ ಮಾತನ್ನು ಕೇಳಿದೆನು” ಎಂದನವನು. (1 ಸಮುವೇಲ 15:24) ತನ್ನ ಹೆಮ್ಮೆಯ ವಿಷಯದಲ್ಲಿ ಅವನು ಹೆಚ್ಚು ಚಿಂತಿತನಾಗಿರುವಂತೆ ಕಂಡಿತು, ಏಕೆಂದರೆ ಜನರ ಮುಂದೆ ತನ್ನ ಮಾನವನ್ನು ಉಳಿಸುವಂತೆ ಅವನು ಸಮುವೇಲನನ್ನು ಕೇಳಿಕೊಂಡನು. (1 ಸಮುವೇಲ 15:30) ಕೊನೆಗೆ, ಯೆಹೋವನು ರಾಜನಾದ ಸೌಲನನ್ನು ತಳ್ಳಿಹಾಕಿದನು.​—⁠1 ಸಮುವೇಲ 16:⁠1.

5. ಸಲಹೆಯನ್ನು ತಳ್ಳಿಹಾಕಿದಾಗ ರಾಜ ಉಜ್ಜೀಯನಿಗೆ ಏನು ಸಂಭವಿಸಿತು?

5 ಯೆಹೂದದ ರಾಜ ಉಜ್ಜೀಯನು, “ತನ್ನ ದೇವರಾದ ಯೆಹೋವನಿಗೆ ದ್ರೋಹಿಯಾಗಿ ಧೂಪವೇದಿಯ ಮೇಲೆ ತಾನೇ ಧೂಪಹಾಕಬೇಕೆಂದು ಯೆಹೋವನ ಆಲಯದೊಳಕ್ಕೆ ಹೋದನು.” (2 ಪೂರ್ವಕಾಲವೃತ್ತಾಂತ 26:16) ಆದರೆ ನ್ಯಾಯಬದ್ಧವಾಗಿ ಯಾಜಕರು ಮಾತ್ರ ಧೂಪವನ್ನು ಹಾಕಬೇಕಾಗಿತ್ತು. ಮಹಾಯಾಜಕನು ಉಜ್ಜೀಯನನ್ನು ತಡೆಯಲು ಪ್ರಯತ್ನಿಸಿದಾಗ, ಅವನು ಕೋಪಿಸಿಕೊಂಡನು. ಆಗ ಏನಾಯಿತು? ‘ಅವನ ಹಣೆಯಲ್ಲಿ ಕುಷ್ಠಹುಟ್ಟಿತು. ಯೆಹೋವನು ಅವನನ್ನು ಬಾಧಿಸಿದ್ದನು. ಉಜ್ಜೀಯನು ಜೀವದಿಂದಿರುವ ವರೆಗೂ ಕುಷ್ಠರೋಗಿಯಾಗಿದ್ದನು’ ಎಂದು ಬೈಬಲು ಹೇಳುತ್ತದೆ.​—⁠2 ಪೂರ್ವಕಾಲವೃತ್ತಾಂತ 26:​19-21.

6. (ಎ) ಸೌಲ ಮತ್ತು ಉಜ್ಜೀಯರು ಸಲಹೆಯನ್ನು ವಿರೋಧಿಸಿದ್ದೇಕೆ? (ಬಿ) ಸಲಹೆಯನ್ನು ವಿರೋಧಿಸುವುದು ಇಂದು ಏಕೆ ದೊಡ್ಡದಾದ ಸಮಸ್ಯೆಯಾಗಿದೆ?

6 ಸಲಹೆಯನ್ನು ಅಂಗೀಕರಿಸಲು ಸೌಲ ಮತ್ತು ಉಜ್ಜೀಯರಿಗೆ ಕಷ್ಟವಾದದ್ದೇಕೆ? ಮೂಲ ಸಮಸ್ಯೆಯು ಹೆಮ್ಮೆಯಾಗಿತ್ತು, ಅವರು ತಾವೇ ಶ್ರೇಷ್ಠರೆಂದೆಣಿಸಿಕೊಂಡರು. ಈ ಗುಣದ ಕಾರಣ ಅನೇಕರು ತಮ್ಮ ಮೇಲೆ ವ್ಯಥೆಯನ್ನು ತಂದುಕೊಳ್ಳುತ್ತಾರೆ. ಸಲಹೆಯನ್ನು ಒಪ್ಪಿಕೊಳ್ಳುವುದು ತಮ್ಮಲ್ಲಿ ಯಾವುದೊ ಕುಂದುಕೊರತೆಯಿದೆಯೆಂದು ಸೂಚಿಸುತ್ತದೆಂದು ಅಥವಾ ತಮ್ಮ ಮಾನಕ್ಕೆ ಕುಂದನ್ನು ತರುತ್ತದೆಂದು ಅವರು ಎಣಿಸುವಂತೆ ತೋರುತ್ತದೆ. ಆದರೆ ಹೆಮ್ಮೆಯು ಒಂದು ಬಲಹೀನತೆಯಾಗಿದೆ. ಹೆಮ್ಮೆಯು ಒಬ್ಬನ ಯೋಚನೆಯನ್ನು ಮೊಬ್ಬಾಗಿಸುವುದರಿಂದ, ಯೆಹೋವನು ತನ್ನ ವಾಕ್ಯ ಮತ್ತು ಸಂಸ್ಥೆಯಿಂದ ಕೊಡುವ ಸಹಾಯವನ್ನು ಅವನು ವಿರೋಧಿಸುವ ಪ್ರವೃತ್ತಿಯನ್ನು ತೋರಿಸುತ್ತಾನೆ. ಆದುದರಿಂದ, ಯೆಹೋವನು ಎಚ್ಚರಿಸುವುದು: “ಗರ್ವದಿಂದ ಭಂಗ; ಉಬ್ಬಿನಿಂದ ದೊಬ್ಬು.”​—⁠ಜ್ಞಾನೋಕ್ತಿ 16:18; ರೋಮಾಪುರ 12:⁠3.

ಸಲಹೆಯನ್ನು ಅಂಗೀಕರಿಸುವುದು

7. ಮೋಶೆಯು ಸಲಹೆಗೆ ತೋರಿಸಿದ ಪ್ರತಿಕ್ರಿಯೆಯಿಂದ ನಾವು ಯಾವ ಸಕಾರಾತ್ಮಕ ಪಾಠಗಳನ್ನು ಕಲಿಯಬಲ್ಲೆವು?

7 ಸಲಹೆಯನ್ನು ಅಂಗೀಕರಿಸಿದವರ ಉತ್ತಮ ಮಾದರಿಗಳೂ ಶಾಸ್ತ್ರದಲ್ಲಿವೆ. ಮತ್ತು ಇವುಗಳಿಂದ ನಾವು ಪಾಠಗಳನ್ನು ಕಲಿಯಬಲ್ಲೆವು. ಮೋಶೆಯನ್ನು ತೆಗೆದುಕೊಳ್ಳಿರಿ. ಅವನಿಗಿದ್ದ ಭಾರೀ ಜವಾಬ್ದಾರಿಯನ್ನು ನಿಭಾಯಿಸುವ ವಿಧದ ಕುರಿತು ಅವನ ಮಾವನು ಸಲಹೆ ಕೊಟ್ಟನು. ಮೋಶೆ ಅದಕ್ಕೆ ಕಿವಿಗೊಟ್ಟು ಒಡನೆ ಅದನ್ನು ಕಾರ್ಯರೂಪಕ್ಕೆ ಹಾಕಿದನು. (ವಿಮೋಚನಕಾಂಡ 18:​13-24) ಮೋಶೆಗೆ ಮಹಾ ಅಧಿಕಾರವಿದ್ದರೂ, ಅವನು ಆ ಸಲಹೆಯನ್ನು ಅಂಗೀಕರಿಸಿದ್ದೇಕೆ? ಅವನು ಸೌಮ್ಯಭಾವದವನು ಆಗಿದ್ದುದರಿಂದಲೇ. “ಆ ಮೋಶೆ ಭೂಮಿಯ ಮೇಲಿರುವ ಎಲ್ಲಾ ಮನುಷ್ಯರಿಗಿಂತಲೂ ಬಹುಸಾತ್ವಿಕನು [“ಅತಿ ಸೌಮ್ಯನು,” NW].” (ಅರಣ್ಯಕಾಂಡ 12:3) ಇಂತಹ ಸೌಮ್ಯತೆ ಎಷ್ಟು ಪ್ರಾಮುಖ್ಯ? ಚೆಫನ್ಯ 2:3 (NW) ತಿಳಿಸುವಂತೆ, ಸೌಮ್ಯತೆ ನಮಗೆ ಜೀವವಾಗಿ ಪರಿಣಮಿಸುತ್ತದೆ.

8. (ಎ) ದಾವೀದನು ಯಾವ ಪಾಪಗಳನ್ನು ಮಾಡಿದನು? (ಬಿ) ನಾತಾನನ ಖಂಡನೆಗೆ ದಾವೀದನ ಪ್ರತಿಕ್ರಿಯೆ ಏನಾಗಿತ್ತು? (ಸಿ) ದಾವೀದನ ಪಾಪದ ಪರಿಣಾಮಗಳೇನಾಗಿದ್ದವು?

8 ದಾವೀದ ರಾಜನು ಬತ್ಷೆಬೆಯೊಂದಿಗೆ ವ್ಯಭಿಚಾರ ಮಾಡಿ, ಅದನ್ನು ಮುಚ್ಚಿಡಲಿಕ್ಕಾಗಿ ಆಕೆಯ ಗಂಡನನ್ನು ಕೊಲ್ಲಿಸಿದನು. ಆಗ ಯೆಹೋವನು ಅವನನ್ನು ಖಂಡಿಸಲಿಕ್ಕಾಗಿ ಪ್ರವಾದಿ ನಾತಾನನನ್ನು ಕಳುಹಿಸಿದನು. ಆಗ ದಾವೀದನು ಪಶ್ಚಾತ್ತಾಪಪಟ್ಟು, “ನಾನು ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದ್ದೇನೆ” ಎಂದು ಹೇಳುತ್ತಾ ಒಡನೆ ಅದನ್ನು ಒಪ್ಪಿಕೊಂಡನು. (2 ಸಮುವೇಲ 12:13) ದೇವರು ಅವನ ಪಶ್ಚಾತ್ತಾಪವನ್ನು ಅಂಗೀಕರಿಸಿದರೂ, ಅವನ ಪಾಪದ ಪರಿಣಾಮವನ್ನು ಅವನು ಅನುಭವಿಸಲೇ ಬೇಕಾಯಿತು. “ಕತ್ತಿಯು [ಅವನ] ಮನೆಯನ್ನು ಬಿಟ್ಟುಹೋಗುವದಿಲ್ಲ” ಎಂದೂ, ಅವನ ಹೆಂಡತಿಯರನ್ನು ತೆಗೆದು “ಇನ್ನೊಬ್ಬನಿಗೆ” ಕೊಡುವೆನೆಂದೂ, ಆ ವ್ಯಭಿಚಾರದಿಂದ ಹುಟ್ಟಿದ ಗಂಡುಮಗು “ಸತ್ತೇಹೋಗುವುದು” ಎಂದೂ ಯೆಹೋವನು ಅವನಿಗೆ ಹೇಳಿದನು.​—⁠2 ಸಮುವೇಲ 12:10, 11, 14.

9. ನಮಗೆ ಸಲಹೆ ಅಥವಾ ಶಿಸ್ತು ದೊರೆಯುವಲ್ಲಿ ನಾವೇನನ್ನು ಮರೆಯದಿರಬೇಕು?

9 ಸ್ವಸ್ಥವಾದ ಸಲಹೆಗೆ ಕಿವಿಗೊಡುವುದರ ಪ್ರಯೋಜನ ದಾವೀದನಿಗೆ ತಿಳಿದಿತ್ತು. ಕೆಲವೊಮ್ಮೆ, ಆ ಸಲಹೆ ಯಾರ ಮೂಲಕ ಕೊಡಲ್ಪಟ್ಟಿತೊ ಆ ವ್ಯಕ್ತಿಗಾಗಿ ಅವನು ದೇವರಿಗೆ ಉಪಕಾರ ಹೇಳಿದನು. (1 ಸಮುವೇಲ 25:​32-35) ನಾವು ಹಾಗಿದ್ದೇವೊ? ಹಾಗಿರುವಲ್ಲಿ, ವಿಷಾದವನ್ನು ಉಂಟುಮಾಡುವಂಥ ಅನೇಕ ವಿಷಯಗಳನ್ನು ನುಡಿಯುವುದರಿಂದಲೂ ಮಾಡುವುದರಿಂದಲೂ ನಾವು ರಕ್ಷಿಸಲ್ಪಡುವೆವು. ಆದರೆ ನಾವು ಸಲಹೆಯನ್ನು ಇಲ್ಲವೆ ಶಿಸ್ತನ್ನೂ ಪಡೆದುಕೊಳ್ಳುವ ಸ್ಥಿತಿಗತಿಗಳಿಗೆ ಒಳಗಾಗುವುದಾದರೆ ಆಗೇನು? ಇದು ನಮ್ಮ ನಿತ್ಯಹಿತಕ್ಕಾಗಿ ಯೆಹೋವನು ತೋರಿಸುವ ಪ್ರೀತಿಯ ರುಜುವಾತೆಂಬುದನ್ನು ನಾವೆಂದಿಗೂ ಮರೆಯದಿರೋಣ.​—⁠ಜ್ಞಾನೋಕ್ತಿ 3:11, 12; 4:13.

ಬೆಳೆಸಿಕೊಳ್ಳಬೇಕಾದ ಅಮೂಲ್ಯ ಗುಣಗಳು

10. ರಾಜ್ಯವನ್ನು ಪ್ರವೇಶಿಸಲಿರುವವರಿಗೆ ಯಾವ ಗುಣವು ಅಗತ್ಯವೆಂದು ಯೇಸು ತೋರಿಸಿದನು?

10 ಯೆಹೋವನೊಂದಿಗೆ ಮತ್ತು ನಮ್ಮ ಕ್ರೈಸ್ತ ಸಹೋದರರೊಂದಿಗೆ ಸುಸಂಬಂಧವಿರಬೇಕಾದರೆ, ನಾವು ಕೆಲವು ಗುಣಗಳನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಇವುಗಳಲ್ಲಿ ಒಂದನ್ನು, ಯೇಸು ತನ್ನ ಶಿಷ್ಯರ ಮಧ್ಯೆ ಒಂದು ಮಗುವನ್ನು ನಿಲ್ಲಿಸಿ, “ನೀವು ತಿರುಗಿಕೊಂಡು ಚಿಕ್ಕ ಮಕ್ಕಳಂತೆ ಆಗದೆ ಹೋದರೆ ನೀವು ಪರಲೋಕರಾಜ್ಯದಲ್ಲಿ ಸೇರುವದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಹೀಗಿರುವದರಿಂದ ಯಾವನು ಈ ಚಿಕ್ಕ ಮಗುವಿನಂತೆ ತನ್ನನ್ನು ತಗ್ಗಿಸಿಕೊಳ್ಳುತ್ತಾನೋ, ಅವನೇ ಪರಲೋಕರಾಜ್ಯದಲ್ಲಿ ಹೆಚ್ಚಿನವನು,” ಎಂದು ಹೇಳಿದಾಗ ತೋರಿಸಿದನು. (ಮತ್ತಾಯ 18:3, 4) ಯೇಸುವಿನ ಶಿಷ್ಯರು ತಮ್ಮ ಮಧ್ಯೆ ಯಾರು ಹೆಚ್ಚಿನವರು ಎಂದು ವಿವಾದ ಮಾಡುತ್ತಿದ್ದುದರಿಂದ ಅವರು ನಮ್ರಭಾವವನ್ನು ಬೆಳೆಸಿಕೊಳ್ಳುವುದು ಆವಶ್ಯಕವಾಗಿತ್ತು.​—⁠ಲೂಕ 22:​24-27.

11. (ಎ) ನಾವು ಯಾರ ಮುಂದೆ ನಮ್ರರಾಗಿರಬೇಕು, ಮತ್ತು ಏಕೆ? (ಬಿ) ನಾವು ನಮ್ರರಾಗಿರುವಲ್ಲಿ, ಸಲಹೆಗೆ ಹೇಗೆ ಪ್ರತಿಕ್ರಿಯೆ ತೋರಿಸುವೆವು?

11 ಅಪೊಸ್ತಲ ಪೇತ್ರನು ಬರೆದುದು: “ನೀವೆಲ್ಲರೂ ದೀನಮನಸ್ಸೆಂಬ ವಸ್ತ್ರದಿಂದ ಸೊಂಟಾಕಟ್ಟಿಕೊಂಡು ಒಬ್ಬರಿಗೊಬ್ಬರು ಸೇವೆಮಾಡಿರಿ. ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ. ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ.” (1 ಪೇತ್ರ 5:5) ದೇವರ ಮುಂದೆ ನಮ್ರರಾಗಿರಬೇಕೆಂದು ನಮಗೆ ತಿಳಿದದೆ, ಆದರೆ ನಾವು ಜೊತೆ ವಿಶ್ವಾಸಿಗಳೊಂದಿಗೂ ನಮ್ರರಾಗಿರಬೇಕೆಂದು ಈ ವಚನವು ತೋರಿಸುತ್ತದೆ. ನಾವು ಹಾಗಿರುವಲ್ಲಿ, ಇತರರು ನಮಗೆ ನೀಡುವ ಯೋಗ್ಯವಾದ ಸೂಚನೆಗಳನ್ನು ನಾವು ತಾತ್ಸಾರ ಮಾಡದೆ ಅವರಿಂದ ಕಲಿತುಕೊಳ್ಳುವೆವು.​—⁠ಜ್ಞಾನೋಕ್ತಿ 12:15.

12. (ಎ) ನಮ್ರತೆಗೆ ನಿಕಟವಾಗಿ ಸಂಬಂಧವಿರುವ ಮುಖ್ಯ ಗುಣವು ಯಾವುದು? (ಬಿ) ನಮ್ಮ ವರ್ತನೆ ಇತರರ ಮೇಲೆ ಬೀರುವ ಪ್ರಭಾವದ ಕುರಿತು ನಾವು ಏಕೆ ಚಿಂತಿತರಾಗಿರಬೇಕು?

12 ನಮ್ರತೆಗೆ ನಿಕಟವಾಗಿ ಸಂಬಂಧವಿರುವ ಇನ್ನೊಂದು ಗುಣವು ಪರಹಿತ ಚಿಂತನೆಯೇ. ಅಪೊಸ್ತಲ ಪೌಲನು ಬರೆದುದು: “ಪ್ರತಿಯೊಬ್ಬನು ತನ್ನ ಹಿತವನ್ನು ಚಿಂತಿಸದೆ ಪರಹಿತವನ್ನು ಚಿಂತಿಸಲಿ. . . . ಹೀಗಿರಲಾಗಿ ನೀವು ಉಂಡರೂ ಕುಡಿದರೂ ಇನ್ನೇನು ಮಾಡಿದರೂ ಎಲ್ಲವನ್ನೂ ದೇವರ ಘನತೆಗಾಗಿ ಮಾಡಿರಿ. ಯೆಹೂದ್ಯರಿಗಾಗಲಿ ಗ್ರೀಕರಿಗಾಗಲಿ ದೇವರ ಸಭೆಗಾಗಲಿ ವಿಘ್ನವಾಗಬೇಡಿರಿ.” (1 ಕೊರಿಂಥ 10:24-33) ಆದರೆ ನಮ್ಮ ಸ್ವಂತ ಇಷ್ಟಗಳನ್ನೆಲ್ಲಾ ತ್ಯಜಿಸಿಬಿಡಬೇಕೆಂದು ಪೌಲನು ಹೇಳಲಿಲ್ಲ. ಬದಲಿಗೆ, ನಾವು ಮಾಡುವ ಯಾವುದೇ ಕೆಲಸವು, ಇನ್ನೊಬ್ಬನ ಮನಸ್ಸಾಕ್ಷಿಯು ತಪ್ಪೆಂದು ಹೇಳುವುದನ್ನು ಅವನು ಮಾಡಲು ಧೈರ್ಯಪಡುವಂತೆ ಮಾಡಬಾರದೆಂದು ಅವನು ನಮ್ಮನ್ನು ಪ್ರೋತ್ಸಾಹಿಸಿದನು.

13. ಶಾಸ್ತ್ರೀಯ ಸಲಹೆಯನ್ನು ಅನ್ವಯಿಸಿಕೊಳ್ಳುವುದನ್ನು ನಾವು ಅಭ್ಯಾಸಿಸುತ್ತೇವೊ ಇಲ್ಲವೊ ಎಂಬುದನ್ನು ಯಾವ ಉದಾಹರಣೆಯು ತೋರಿಸಬಹುದು?

13 ನೀವು ಇತರರ ಹಿತವನ್ನು ನಿಮ್ಮ ಸ್ವಂತ ಹಿತಕ್ಕಿಂತ ಮುಂದಿಡುತ್ತೀರೊ? ನಾವೆಲ್ಲರೂ ಹಾಗೆ ಮಾಡಲು ಕಲಿಯಬೇಕು. ಇದನ್ನು ಮಾಡಬಹುದಾದ ಅನೇಕ ವಿಧಗಳಿವೆ. ಉಡುಪು ಮತ್ತು ಕೇಶಶೈಲಿಯನ್ನು ಉದಾಹರಣೆಯಾಗಿ ತೆಗೆದುಕೊಳ್ಳಿ. ಈ ವಿಷಯಗಳಲ್ಲಿ, ಶಾಸ್ತ್ರವು ಯಾವುದು ಮರ್ಯಾದೆಯುಳ್ಳದ್ದೂ ನೀಟಾದದ್ದೂ ಶುದ್ಧವೂ ಆಗಿದೆಯೆಂದು ಹೇಳುತ್ತದೊ ಅದರ ಮಿತಿಯೊಳಗೇ ಇರುವ ವೈಯಕ್ತಿಕ ಅಭಿರುಚಿಯು ಒಳಗೂಡಿದೆ. ಆದರೆ ನಿಮ್ಮ ಸಮಾಜದ ಜನರ ಹಿನ್ನೆಲೆಯ ಕಾರಣ, ನಿಮ್ಮ ಉಡುಪು ಮತ್ತು ಕೇಶಶೈಲಿಯ ರೀತಿಯು ಜನರು ರಾಜ್ಯ ಸಂದೇಶಕ್ಕೆ ಕಿವಿಗೊಡದಂತೆ ಮಾಡುತ್ತದೆಂದು ನಿಮಗೆ ತಿಳಿದುಬರುವಲ್ಲಿ, ನೀವು ಬೇಕಾದ ಹೊಂದಾಣಿಕೆಯನ್ನು ಮಾಡುವಿರೊ? ನಮ್ಮ ಸ್ವಂತ ಮೆಚ್ಚಿಕೆಗಳಿಗಿಂತ ಇನ್ನೊಬ್ಬನು ನಿತ್ಯಜೀವವನ್ನು ಪಡೆಯುವಂತೆ ಸಹಾಯಮಾಡುವುದು ಹೆಚ್ಚು ಪ್ರಾಮುಖ್ಯವೆಂಬುದು ನಿಶ್ಚಯ.

14. ನಮ್ರತೆಯನ್ನು ಬೆಳೆಸಿಕೊಂಡು ಪರರ ವಿಷಯದಲ್ಲಿ ಚಿಂತಿಸುವುದು ಪ್ರಾಮುಖ್ಯವೇಕೆ?

14 ನಮ್ರತೆಯನ್ನೂ ಪರರ ಚಿಂತೆಯನ್ನೂ ತೋರಿಸುವುದರಲ್ಲಿ ಯೇಸು ಮಾದರಿಯನ್ನಿಟ್ಟು, ತನ್ನ ಶಿಷ್ಯರ ಪಾದಗಳನ್ನೂ ತೊಳೆದನು. (ಯೋಹಾನ 13:​12-15) ಅವನ ಕುರಿತು ದೇವರ ವಾಕ್ಯವು ಹೇಳುವುದು: “ಕ್ರಿಸ್ತ ಯೇಸುವಿನಲ್ಲಿದ್ದಂಥ ಮನಸ್ಸು ನಿಮ್ಮಲ್ಲಿಯೂ ಇರಲಿ. ಆತನು ದೇವಸ್ವರೂಪನಾಗಿದ್ದರೂ ದೇವರಿಗೆ ಸರಿಸಮಾನನಾಗಿರುವದೆಂಬ ಅಮೂಲ್ಯ ಪದವಿಯನ್ನು ಬಿಡಲೊಲ್ಲೆನು ಎಂದೆಣಿಸದೆ ತನ್ನನ್ನು ಬರಿದು ಮಾಡಿಕೊಂಡು ದಾಸನ ರೂಪವನ್ನು ಧರಿಸಿಕೊಂಡು ಮನುಷ್ಯರಿಗೆ ಸದೃಶನಾದನು. ಹೀಗೆ ಆತನು ಆಕಾರದಲ್ಲಿ ಮನುಷ್ಯನಾಗಿ ಕಾಣಿಸಿಕೊಂಡಿದ್ದಾಗ ತನ್ನನ್ನು ತಗ್ಗಿಸಿಕೊಂಡು ಮರಣವನ್ನು . . . ಹೊಂದುವಷ್ಟು ವಿಧೇಯನಾದನು.”​—⁠ಫಿಲಿಪ್ಪಿ 2:5-8; ರೋಮಾಪುರ 15:2, 3.

ಯೆಹೋವನ ಶಿಸ್ತನ್ನು ತಿರಸ್ಕರಿಸಬೇಡಿ

15. (ಎ) ದೇವರು ಮೆಚ್ಚುವ ವ್ಯಕ್ತಿತ್ವವಿರುವಂತೆ, ಯಾವ ಬದಲಾವಣೆಗಳನ್ನು ನಾವು ಮಾಡುವುದು ಅಗತ್ಯ? (ಬಿ) ನಮಗೆಲ್ಲರಿಗೆ ಯೆಹೋವನು ಯಾವ ಮಾಧ್ಯಮದ ಮೂಲಕ ಸಲಹೆಯನ್ನೂ ಶಿಸ್ತನ್ನೂ ಒದಗಿಸಿದ್ದಾನೆ?

15 ನಾವೆಲ್ಲರೂ ಪಾಪಿಗಳಾಗಿರುವುದರಿಂದ, ನಾವು ನಮ್ಮ ದೇವರ ವ್ಯಕ್ತಿತ್ವವನ್ನು ಪ್ರತಿಬಿಂಬಿಸಬೇಕಾದರೆ, ನಮ್ಮ ಮನೋಭಾವ ಮತ್ತು ವರ್ತನೆಗಳಲ್ಲಿ ಬದಲಾವಣೆಗಳನ್ನು ಮಾಡುವುದು ಅಗತ್ಯ. ನಾವು “ನೂತನ ವ್ಯಕ್ತಿತ್ವವನ್ನು” ಧರಿಸಿಕೊಳ್ಳುವುದೂ ಅಗತ್ಯ. (ಕೊಲೊಸ್ಸೆ 3:​5-14, NW) ಸಲಹೆ ಶಿಸ್ತುಗಳು, ಹೊಂದಾಣಿಕೆ ಮಾಡಬೇಕಾಗಿರುವ ಕ್ಷೇತ್ರಗಳನ್ನು ನಾವು ಗುರುತಿಸುವಂತೆಯೂ ಅಂಥ ಹೊಂದಾಣಿಕೆಗಳನ್ನು ಹೇಗೆ ಮಾಡುವುದೆಂಬುದನ್ನು ನೋಡುವಂತೆಯೂ ನಮಗೆ ಸಹಾಯಮಾಡುತ್ತವೆ. ನಮಗೆ ಅಗತ್ಯವಿರುವ ಶಿಕ್ಷಣದ ಮೂಲವು ಬೈಬಲು ತಾನೇ ಆಗಿದೆ. (2 ತಿಮೊಥೆಯ 3:​16, 17) ಯೆಹೋವನ ಸಂಸ್ಥೆಯು ಒದಗಿಸುವ ಬೈಬಲ್‌ ಸಾಹಿತ್ಯ ಮತ್ತು ಕೂಟಗಳು ನಾವು ದೇವರ ವಾಕ್ಯವನ್ನು ಅನ್ವಯಿಸಿಕೊಳ್ಳುವಂತೆ ಸಹಾಯಮಾಡುತ್ತವೆ. ಆದುದರಿಂದ, ನಾವು ಒಂದು ಸಲಹೆಯನ್ನು ಈ ಮೊದಲೇ ಕೇಳಿರುವುದಾದರೂ, ಅದು ನಮಗೆ ಅಗತ್ಯವೆಂದು ಗುರುತಿಸಿ, ನಮ್ಮನ್ನು ಸುಧಾರಿಸಿಕೊಳ್ಳಲು ಪ್ರಯತ್ನಿಸುವೆವೊ?

16. ನಮ್ಮಲ್ಲಿ ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ಯೆಹೋವನು ಯಾವ ಸಹಾಯವನ್ನು ಒದಗಿಸುತ್ತಾನೆ?

16 ನಮ್ಮ ವಿಷಯದಲ್ಲಿ ಪ್ರೀತಿಯ ಚಿಂತೆಯನ್ನು ವಹಿಸುತ್ತಾ, ಯೆಹೋವನು ನಮ್ಮ ಸಮಸ್ಯೆಗಳಲ್ಲಿ ನಮಗೆ ಸಹಾಯ ನೀಡುತ್ತಾನೆ. ಮನೆ ಬೈಬಲ್‌ ಅಧ್ಯಯನಗಳ ಮೂಲಕ ಲಕ್ಷಾಂತರ ಜನರಿಗೆ ಸಹಾಯ ದೊರೆತಿದೆ. ವ್ಯಥೆಯನ್ನು ತರುವ ನಡತೆಗಳಿಂದ ತಮ್ಮ ಮಕ್ಕಳನ್ನು ರಕ್ಷಿಸಲು ಹೆತ್ತವರು ಅವರಿಗೆ ಸಲಹೆ ಮತ್ತು ಶಿಸ್ತನ್ನು ನೀಡುತ್ತಾರೆ. (ಜ್ಞಾನೋಕ್ತಿ 6:​20-23) ಸಭೆಯೊಳಗೆ, ಕೆಲವರು ಅನೇಕವೇಳೆ ಕ್ಷೇತ್ರದ ಚಟುವಟಿಕೆಯಲ್ಲಿ ತಮ್ಮ ಪ್ರಯತ್ನಗಳನ್ನು ಉತ್ತಮಗೊಳಿಸಲು ಅನುಭವಸ್ಥ ಶುಶ್ರೂಷಕರಿಂದ ಸಲಹೆ ಸೂಚನೆಗಳನ್ನು ಕೇಳುತ್ತಾರೆ. ಹಿರಿಯರು ಆಗಾಗ ಪರಸ್ಪರವಾಗಿ ಇಲ್ಲವೆ ಶುಶ್ರೂಷೆಯಲ್ಲಿ ನುರಿತ ಕ್ರೈಸ್ತರಿಂದ ಸಲಹೆಯನ್ನು ಕೇಳಬಹುದು. ಇಂತಹ ಸಹಾಯವನ್ನು ಅಗತ್ಯವಿರುವವರಿಗೆ ನೀಡಲು ಆತ್ಮಿಕ ಅರ್ಹತೆಗಳುಳ್ಳವರು ಬೈಬಲನ್ನು ಉಪಯೋಗಿಸುತ್ತಾರೆ ಮತ್ತು ಅದನ್ನು ಶಾಂತಭಾವದಿಂದ ಮಾಡುತ್ತಾರೆ. ನೀವು ಸಲಹೆಯನ್ನು ನೀಡುವಲ್ಲಿ, ‘ನೀವಾದರೋ ದುಷ್ಪ್ರೇರಣೆಗೆ ಒಳಗಾಗದಂತೆ ನಿಮ್ಮ ವಿಷಯದಲ್ಲಿ ಎಚ್ಚರಿಕೆಯಾಗಿರ’ಬೇಕೆಂಬುದನ್ನು ನೆನಪಿನಲ್ಲಿಡಿರಿ. (ಗಲಾತ್ಯ 6:⁠1, 2) ಹೌದು, ಒಬ್ಬನೇ ಸತ್ಯ ದೇವರನ್ನು ಐಕ್ಯವಾಗಿ ಆರಾಧಿಸಲು ನಮಗೆಲ್ಲರಿಗೂ ಸಲಹೆ ಮತ್ತು ಶಿಸ್ತಿನ ಅಗತ್ಯವಿದೆ.

ಪುನರ್ವಿಮರ್ಶೆಯ ಚರ್ಚೆ

• ನಾವು ಎಲ್ಲೆಲ್ಲಿ ವೈಯಕ್ತಿಕ ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕೊ ಅವನ್ನು ನಾವು ಕಂಡುಕೊಳ್ಳುವಂತೆ ಯೆಹೋವನು ಪ್ರೀತಿಯಿಂದ ಹೇಗೆ ಸಹಾಯಮಾಡುತ್ತಾನೆ?

• ಅಗತ್ಯವಿರುವ ಸಲಹೆಯನ್ನು ಅಂಗೀಕರಿಸಲು ಅನೇಕರಿಗೆ ಕಷ್ಟವಾಗುವುದೇಕೆ, ಮತ್ತು ಇದೆಷ್ಟು ಗಂಭೀರವಾದ ವಿಷಯವಾಗಿದೆ?

• ಸಲಹೆಯನ್ನು ಅಂಗೀಕರಿಸಲು ಯಾವ ಅಮೂಲ್ಯ ಗುಣಗಳು ನಮಗೆ ಸಹಾಯಮಾಡುವವು, ಮತ್ತು ಇವುಗಳಲ್ಲಿ ಯೇಸು ಮಾದರಿಯನ್ನಿಟ್ಟದ್ದು ಹೇಗೆ?

[ಅಧ್ಯಯನ ಪ್ರಶ್ನೆಗಳು]

[ಪುಟ 142ರಲ್ಲಿರುವ ಚಿತ್ರ]

ಉಜ್ಜೀಯನು ಸಲಹೆಯನ್ನು ತಿರಸ್ಕರಿಸಿದಾಗ ಕುಷ್ಠರೋಗಕ್ಕೆ ಬಲಿಯಾದನು

[ಪುಟ 142ರಲ್ಲಿರುವ ಚಿತ್ರ]

ಮೋಶೆಯು ಇತ್ರೋವನ ಸಲಹೆಯಿಂದ ಪ್ರಯೋಜನ ಹೊಂದಿದನು