ಮಾಹಿತಿ ಇರುವಲ್ಲಿ ಹೋಗಲು

ಎಚ್ಚರ! ನೀವು ಮಿತಿಮೀರಿ ಕುಡಿಯೋ ಸಾಧ್ಯತೆ ಇದೆ

ಎಚ್ಚರ! ನೀವು ಮಿತಿಮೀರಿ ಕುಡಿಯೋ ಸಾಧ್ಯತೆ ಇದೆ

ಎಚ್ಚರ! ನೀವು ಮಿತಿಮೀರಿ ಕುಡಿಯೋ ಸಾಧ್ಯತೆ ಇದೆ

ಕುಡಿಕತನದಿಂದ ಟೋನಿ ಅನ್ನೋ ಒಬ್ಬ ವ್ಯಕ್ತಿ ಜೀವನದಲ್ಲಿ ತುಂಬ ಸಮಸ್ಯೆಗಳನ್ನ ಅನುಭವಿಸಬೇಕಾಯ್ತು. ನಾನು ಮಿತಿಮೀರಿ ಕುಡಿತೀನಿ ಅನ್ನೋದನ್ನ ಅವನು ಒಪ್ಪಿಕೊಳ್ತಿರಲಿಲ್ಲ. ಯಾಕಂದ್ರೆ ಅವನು ಅತಿಯಾಗಿ ಕುಡಿದರೂ ಕುಡಿದಿದ್ದಾನೆ ಅಂತ ಯಾರಿಗೂ ಗೊತ್ತಾಗದೆ ಇರೋ ತರ ನಡ್ಕೊಳ್ತಿದ್ದ. ಹಾಗಾಗಿ ನಾನು ಮಿತವಾಗಿನೇ ಕುಡಿತಾ ಇದ್ದೀನಿ ಅಂತ ಅಂದ್ಕೊಳ್ತಿದ್ದ. ಆದ್ರೆ ಅವನು ಅಂದುಕೊಂಡಿದ್ದು ನಿಜಾನಾ?

ಟೋನಿ ತುಂಬ ಕುಡಿತ್ತಿದ್ದ. ಅದಕ್ಕೆ ಅವನಿಗೆ ಸರಿಯಾಗಿ ಯೋಚನೆ ಮಾಡೋಕೆ ಆಗ್ತಿರಲಿಲ್ಲ. ಯಾಕಂದ್ರೆ ಅವನ ಭಾವನೆ, ನಡತೆಯನ್ನ ನಿಯಂತ್ರಿಸೋ ಮೆದುಳು ಸರಿಯಾಗಿ ಕೆಲಸ ಮಾಡ್ತಿರಲಿಲ್ಲ. ಅತಿಯಾಗಿ ಕುಡಿಯೋದ್ರಿಂದಾನೇ ಈ ಸಮಸ್ಯೆ ಆಗ್ತಿರೋದು ಅಂತ ಅವನಿಗೆ ಅರ್ಥನೇ ಆಗ್ತಿರಲಿಲ್ಲ.

ಅತಿಯಾಗಿ ಕುಡಿಯೋ ಚಟವನ್ನ ಮುಂದುವರಿಸೋಕೆ ಮತ್ತು ತನಗೆ ಏನೂ ಆಗಲ್ಲ ಅಂತ ತೋರಿಸ್ಕೊಳ್ಳೋಕೆ ಅವನು ನೆಪ ಕೊಡುತ್ತಿದ್ದ. ಆ್ಯಲೆನ್‌ ಅನ್ನೋ ವ್ಯಕ್ತಿ ಕೂಡ ಮೊದಲು ಹೀಗೇ ಮಾಡ್ತಿದ್ದ. ತಾನು ಅತಿಯಾಗಿ ಕುಡಿದಿದ್ದರೂ ಜಾಸ್ತಿ ಕುಡಿದಿದ್ದೀನಿ ಅಂತ ಒಪ್ಕೊಳ್ತಿರಲಿಲ್ಲ. “ನಾನು ಕುಡಿಯೋ ವಿಷಯ ಬೇರೆಯವ್ರಿಂದ ಮುಚ್ಚಿಡ್ತಿದ್ದೆ. ಮಿತಿಮೀರಿ ಕುಡಿಯೋಕೆ ನೂರೆಂಟು ಕಾರಣ ಕೊಡ್ತಿದ್ದೆ. ಯಾಕಂದ್ರೆ ಅದನ್ನ ಬಿಡೋಕೆ ನಂಗೆ ಇಷ್ಟನೇ ಇರಲಿಲ್ಲ.” ಟೋನಿ ಮತ್ತು ಆ್ಯಲೆನ್‌ ತುಂಬ ಕುಡಿತ್ತಾರೆ ಅಂತ ಬೇರೆಯವ್ರಿಗೆ ಗೊತ್ತಿತ್ತು. ಆದ್ರೆ ಅವರು ಮಾತ್ರ ಅದನ್ನ ಒಪ್ಕೊಳ್ತಿರಲಿಲ್ಲ. ಅವರಿಬ್ರೂ ಕುಡಿಯೋದನ್ನ ಕಡಿಮೆ ಮಾಡಬೇಕಿತ್ತು. ಅದಕ್ಕೆ ಅವರೇನು ಮಾಡಬೇಕಿತ್ತು?

ಬದಲಾಗೋಕೆ ಮನಸ್ಸು ಮಾಡಿ!

ಯೇಸು ಮತ್ತಾಯ 5:29ರಲ್ಲಿ ಹೀಗಂದ: “ಹಾಗಾಗಿ ನಿನ್ನ ಬಲಗಣ್ಣು ನಿನ್ನಿಂದ ಪಾಪ ಮಾಡಿಸಿದ್ರೆ ಅದನ್ನ ಕಿತ್ತು ಬಿಸಾಡು. ನಿನ್ನ ಇಡೀ ದೇಹ ಸಂಪೂರ್ಣವಾಗಿ ನಾಶ ಆಗೋದಕ್ಕಿಂತ ನಿನ್ನ ಒಂದು ಅಂಗನ ಕಳ್ಕೊಳ್ಳೋದೇ ಒಳ್ಳೇದು.” ಮುಂಚೆ ಅತಿಯಾಗಿ ಕುಡಿತ್ತಿದ್ದವರು ಈ ಮಾತನ್ನ ಪಾಲಿಸಿ ಈಗ ಬದಲಾಗಿದ್ದಾರೆ.

ಯೇಸುವಿನ ಈ ಮಾತಿನ ಅರ್ಥ ನಮ್ಮ ದೇಹಕ್ಕೆ ಹಾನಿ ಮಾಡ್ಕೊಬೇಕು ಅಂತಲ್ಲ. ಬದಲಿಗೆ ಅವನು ಇಲ್ಲಿ ಒಂದು ರೂಪಕ ಅಲಂಕಾರ ಬಳಸಿ ಮಾತಾಡ್ತಿದ್ದಾನೆ. ಯೆಹೋವನ ಜೊತೆ ನಮಗಿರೋ ಸಂಬಂಧವನ್ನ ಹಾಳು ಮಾಡೋ ಯಾವುದೇ ವಿಷಯ ಇದ್ದರೂ ಅದನ್ನ ಬೇರು ಸಮೇತ ಕಿತ್ತು ಹಾಕಬೇಕು ಅನ್ನೋದು ಆ ಮಾತಿನ ಅರ್ಥ ಆಗಿತ್ತು. ಬದಲಾವಣೆ ಮಾಡ್ಕೊಳ್ಳೋದು ಸುಲಭ ಅಲ್ಲ. ಆದ್ರೆ ಕುಡುಕರಾಗದೇ ಇರಲಿಕ್ಕೆ ಇದು ನಮಗೆ ಸಹಾಯಮಾಡುತ್ತೆ. ಒಂದುವೇಳೆ ‘ನೀವು ಜಾಸ್ತಿ ಕುಡಿತಿದ್ದೀರ’ ಅಂತ ಯಾರಾದ್ರೂ ನಿಮಗೆ ಹೇಳಿದರೆ ಕುಡಿಯೋದನ್ನ ಕಡಿಮೆ ಮಾಡಬೇಕು. a ಅದನ್ನ ಮಾಡೋಕೆ ಆಗ್ತಿಲ್ಲ ಅಂದ್ರೆ ಆ ಅಭ್ಯಾಸವನ್ನ ಬಿಟ್ಟುಬಿಡೊದೇ ಒಳ್ಳೇದು. ಕಷ್ಟ ಆದ್ರೂ ಇದನ್ನ ಮಾಡಿದ್ರೆ ನಿಮ್ಮ ಜೀವ ಉಳಿಯುತ್ತೆ ಅನ್ನೋದನ್ನ ಮರೀಬೇಡಿ.

ನೀವು ಕುಡುಕರಲ್ಲ ಅಂದ್ರೂ ಅವಕಾಶ ಸಿಕ್ಕಿದರೆ ಜಾಸ್ತಿ ಕುಡಿದುಬಿಡ್ತೀರಾ? ಹಾಗಾದ್ರೆ ಅತಿಯಾಗಿ ಕುಡಿದೇ ಇರೋಕೆ ಏನೆಲ್ಲ ಮಾಡಬಹುದು?

ಎಲ್ಲಿಂದ ಸಹಾಯ ಸಿಗುತ್ತೆ?

1. ಮನಸಾರೆ ಪದೇಪದೇ ಪ್ರಾರ್ಥನೆ ಮಾಡಿದರೆ ಯೆಹೋವ ಖಂಡಿತ ಅದನ್ನ ಕೇಳಿ ಉತ್ತರ ಕೊಡ್ತಾನೆ ಅಂತ ನಂಬಿ. ಯೆಹೋವ ದೇವರಿಗೆ ಇಷ್ಟ ಆಗಿರೋದನ್ನ ಮಾಡಬೇಕು ಅಂತ ಆಸೆಪಡೋ ಪ್ರತಿಯೊಬ್ಬರು ಬೈಬಲಲ್ಲಿರೋ ಈ ಸಲಹೆಯನ್ನ ಪಾಲಿಸಬೇಕು. “ಯಾವಾಗ್ಲೂ ದೇವರಿಗೆ ಪ್ರಾರ್ಥಿಸಿ. ಪ್ರತಿಯೊಂದು ವಿಷ್ಯದಲ್ಲೂ ಮಾರ್ಗದರ್ಶನೆಗಾಗಿ ಕೇಳ್ಕೊಳ್ಳಿ, ಅಂಗಲಾಚಿ ಬೇಡಿ, ಯಾವಾಗ್ಲೂ ಆತನಿಗೆ ಧನ್ಯವಾದ ಹೇಳಿ. ಆಗ ನಿಮ್ಮ ತಿಳುವಳಿಕೆಗೂ ಮೀರಿದ ಶಾಂತಿಯನ್ನ ದೇವರು ನಿಮಗೆ ಕೊಡ್ತಾನೆ. ಈ ರೀತಿ ಆತನು ಕ್ರಿಸ್ತ ಯೇಸುವಿನ ಮೂಲಕ ನಿಮ್ಮ ಹೃದಯನ, ಯೋಚ್ನೆನ ಕಾಯ್ತಾನೆ.” (ಫಿಲಿಪ್ಪಿ 4:6, 7) ದೇವರು ಕೊಡೋ ಈ ಶಾಂತಿಯನ್ನ ಪಡ್ಕೊಳ್ಳೋಕೆ ಏನು ಮಾಡಬೇಕು?

ಕುಡಿಯೋ ವಿಷಯದಲ್ಲಿ ನಿಮಗೆ ನಿಯಂತ್ರಣ ಇಲ್ಲದಿದ್ರೆ ಅದನ್ನ ಒಪ್ಪಿಕೊಳ್ಳಿ. ಕುಡಿಕತನದಿಂದ ಹೊರಗೆ ಬರೋಕೆ ನೀವು ಏನು ಮಾಡಬೇಕು ಅಂತ ಅಂದುಕೊಂಡಿದ್ದೀರೋ ಅದನ್ನೆಲ್ಲ ಯೆಹೋವನ ಹತ್ತಿರ ಹೇಳಿ. ಆತನು ನೀವು ಹಾಕೋ ಪ್ರಯತ್ನವನ್ನೆಲ್ಲ ಖಂಡಿತ ಆಶೀರ್ವದಿಸ್ತಾನೆ. ಇದ್ರಿಂದ ಮುಂದೆ ಬರೋ ದೊಡ್ಡ ಸಮಸ್ಯೆಗಳಿಂದ ತಪ್ಪಿಸ್ಕೊಳ್ಳೋಕೆ ಆಗುತ್ತೆ. “ತನ್ನ ಅಪರಾಧಗಳನ್ನ ಮುಚ್ಚಿಡುವವನಿಗೆ ಒಳ್ಳೇದಾಗಲ್ಲ, ಅದನ್ನ ಒಪ್ಕೊಂಡು ಮತ್ತೆ ಮಾಡದೆ ಇರುವವನಿಗೆ ಕರುಣೆ ಸಿಗುತ್ತೆ.” (ಜ್ಞಾನೋಕ್ತಿ 28:13) ಯೇಸು ನಮಗೆ ಹೀಗೆ ಪ್ರಾರ್ಥನೆ ಮಾಡೋಕೆ ಹೇಳಿದನು. “ಕಷ್ಟ ಬಂದಾಗ ಸೋತು ಹೋಗದ ಹಾಗೆ ಕಾಪಾಡು. ಸೈತಾನನಿಂದ ನಮ್ಮನ್ನ ರಕ್ಷಿಸು.” (ಮತ್ತಾಯ 6:13) ನೀವು ಮಾಡಿರೋ ಪ್ರಾರ್ಥನೆಗೆ ತಕ್ಕಂತೆ ನಡ್ಕೊಳ್ಳೋಕೆ ಏನು ಮಾಡಬೇಕು? ನಿಮ್ಮ ಪ್ರಾರ್ಥನೆಗೆ ಎಲ್ಲಿ ಉತ್ತರ ಸಿಗುತ್ತೆ?

2. ಬೈಬಲ್‌ ನಿಮಗೆ ಸಹಾಯ ಮಾಡುತ್ತೆ. “ಪವಿತ್ರ ಗ್ರಂಥಕ್ಕೆ ಜೀವ ಇದೆ, ತುಂಬಾ ಶಕ್ತಿ ಇದೆ.  . . ಹೃದಯದ ಆಲೋಚನೆ ಉದ್ದೇಶಗಳನ್ನ ಬಯಲು ಮಾಡೋ ಸಾಮರ್ಥ್ಯ ಅದಕ್ಕಿದೆ.” (ಇಬ್ರಿಯ 4:12) ಹಿಂದೆ ಕುಡುಕರಾಗಿದ್ದವರು ಬೈಬಲನ್ನ ಪ್ರತಿದಿನ ಓದಿ ಧ್ಯಾನಿಸಿದ್ರಿಂದ ಪ್ರಯೋಜನ ಪಡ್ಕೊಂಡಿದ್ದಾರೆ. ದೇವರ ಮೇಲೆ ಭಯಭಕ್ತಿಯಿದ್ದ ಒಬ್ಬ ಕೀರ್ತನೆಗಾರ ಹೀಗೆ ಹೇಳ್ತಾನೆ: “ಕೆಟ್ಟವನ ಮಾತು ಕೇಳದೆ  . . ಇರೋನು ಸಂತೋಷವಾಗಿ ಇರ್ತಾನೆ. ಅವನು ಯೆಹೋವನ ನಿಯಮಗಳನ್ನ ಪಾಲಿಸೋದ್ರಲ್ಲಿ ಖುಷಿಪಡ್ತಾನೆ, ಆತನ ನಿಯಮ ಪುಸ್ತಕವನ್ನ ಹಗಲೂರಾತ್ರಿ ಓದುತ್ತಾನೆ.”—ಕೀರ್ತನೆ 1:1-3.

ಯೆಹೋವನ ಸಾಕ್ಷಿಗಳ ಜೊತೆ ಬೈಬಲ್‌ ಕಲಿತಿದ್ದಕ್ಕೆ ಆ್ಯಲೆನ್‌ಗೆ ಕುಡಿಯೋ ಚಟವನ್ನ ಬಿಡೋಕೆ ಆಯ್ತು. ಅದರ ಬಗ್ಗೆ ಅವನು ಹೇಳೋದು: “ಬೈಬಲನ್ನ ಕಲಿತು ಅದ್ರಲ್ಲಿರೋ ತತ್ವಗಳನ್ನ ಪಾಲಿಸಿದ್ರಿಂದ ಕುಡಿಯೋದನ್ನ ಬಿಡೋಕೆ ಸಹಾಯ ಆಯ್ತು. ಇಲ್ಲ ಅಂದಿದ್ರೆ ಇಷ್ಟೊತ್ತಿಗೆ ನಾನು ಸತ್ತು ಹೋಗಿರುತ್ತಿದ್ದೆ.”

3. ಸ್ವನಿಯಂತ್ರಣ ಬೆಳೆಸಿಕೊಳ್ಳಿ. ಒಂದನೇ ಶತಮಾನದ ಕೆಲವು ಕ್ರೈಸ್ತರು ಕುಡುಕರಾಗಿದ್ದರು, ಅವರನ್ನ ‘ನಮ್ಮ ದೇವರ ಪವಿತ್ರಶಕ್ತಿ’ ತೊಳೆದು ಶುದ್ಧ ಮಾಡಿತು ಅಂತ ಬೈಬಲ್‌ ಹೇಳುತ್ತೆ. (1 ಕೊರಿಂಥ 6:9-11) ಅವರು ಹೇಗೆ ಬದಲಾದ್ರು? ಅತಿಯಾಗಿ ಕುಡಿದೇ ಇರೋ ತರ ಸ್ವನಿಯಂತ್ರಣವನ್ನ ಬೆಳೆಸ್ಕೊಂಡ್ರು. ಇದು ದೇವರ ಪವಿತ್ರಶಕ್ತಿಯಿಂದ ಸಿಗೋ ಒಂದು ಗುಣ. “ಅಷ್ಟೇ ಅಲ್ಲ, ಅಮಲೇರೋ ತನಕ ಮದ್ಯ ಕುಡಿಬೇಡಿ. ಅದು ಕೆಟ್ಟ ಜೀವನ ನಡಿಸೋ ತರ ಮಾಡುತ್ತೆ. ಆದ್ರೆ ಪವಿತ್ರಶಕ್ತಿಯಿಂದ ತುಂಬ್ಕೊಳ್ಳಿ” ಅಂತ ಬೈಬಲ್‌ ಹೇಳುತ್ತೆ. (ಎಫೆಸ 5:18; ಗಲಾತ್ಯ 5:21-23) “ಸ್ವರ್ಗದಲ್ಲಿರೋ ನಿಮ್ಮ ತಂದೆ ತನ್ನ ಹತ್ರ ಕೇಳುವವರಿಗೆ ಹೆಚ್ಚು ಪವಿತ್ರಶಕ್ತಿ” ಕೊಡ್ತಾನೆ ಅಂತ ಯೇಸು ಕ್ರಿಸ್ತ ಹೇಳಿದ್ದಾನೆ. ಹಾಗಾಗಿ ಪವಿತ್ರಶಕ್ತಿಗೋಸ್ಕರ “ಕೇಳ್ತಾ ಇರಿ, ದೇವರು ಕೊಡ್ತಾನೆ.”—ಲೂಕ 11:9, 13.

ಯೆಹೋವ ದೇವರನ್ನ ಖುಷಿಪಡಿಸಬೇಕು ಅಂತ ಅಂದ್ಕೊಳ್ಳೋರು ಸ್ವನಿಯಂತ್ರಣವನ್ನ ಬೆಳೆಸ್ಕೊಳ್ತಾರೆ. ಅದಕ್ಕೋಸ್ಕರ ಬೈಬಲನ್ನ ಓದಿ ಧ್ಯಾನಿಸ್ತಾರೆ, ಮನಸಾರೆ ಪ್ರಾರ್ಥಿಸ್ತಾರೆ. ಒಂದುವೇಳೆ ಈ ಗುಣ ಬೆಳೆಸ್ಕೊಳ್ಳೋಕೆ ನಿಮ್ಮಿಂದ ಆಗಲ್ಲ ಅಂತ ಅನಿಸಿದ್ರೆ ಪ್ರಯತ್ನ ಬಿಡಬೇಡಿ. ಯಾಕಂದ್ರೆ ಬೈಬಲಲ್ಲಿ ಹೀಗಿದೆ: “ಪವಿತ್ರಶಕ್ತಿಯನ್ನ ಬಿತ್ತುವವನು ಪವಿತ್ರಶಕ್ತಿಯಿಂದ ಶಾಶ್ವತ ಜೀವವನ್ನ ಕೊಯ್ತಾನೆ. ಹಾಗಾಗಿ ಒಳ್ಳೇದು ಮಾಡೋದನ್ನ ಬಿಡೋದು ಬೇಡ. ನಾವು ಸುಸ್ತಾಗದೆ ಇದ್ರೆ ತಕ್ಕ ಸಮಯಕ್ಕೆ ಫಲ ಕೊಯ್ತೀವಿ.”—ಗಲಾತ್ಯ 6:8, 9.

4. ಒಳ್ಳೇ ಸ್ನೇಹಿತರನ್ನ ಮಾಡಿಕೊಳ್ಳಿ. “ವಿವೇಕಿ ಜೊತೆ ಸಹವಾಸ ಮಾಡುವವನು ವಿವೇಕಿ ಆಗ್ತಾನೆ, ಮೂರ್ಖನ ಜೊತೆ ಸೇರುವವನು ಹಾಳಾಗಿ ಹೋಗ್ತಾನೆ.” (ಜ್ಞಾನೋಕ್ತಿ 13:20) ನೀವು ಅತಿಯಾಗಿ ಕುಡಿಯೋದನ್ನ ನಿಲ್ಲಿಸೋಕೆ ಮಾಡಿರೋ ದೃಢತೀರ್ಮಾನದ ಬಗ್ಗೆ ನಿಮ್ಮ ಸ್ನೇಹಿತರ ಹತ್ತಿರ ಹೇಳಿ. ಆದ್ರೆ “ಕಂಠಪೂರ್ತಿ ಕುಡಿಯೋದು, ಕುಡಿದು ಕುಪ್ಪಳಿಸೋದು, ಕುಡಿಯೋದ್ರಲ್ಲಿ ಪೈಪೋಟಿ” ಮಾಡೋದನ್ನ ನಿಲ್ಲಿಸಿದ್ದೀರ ಅಂತ ಗೊತ್ತಾದಾಗ ಕೆಲವು ಸ್ನೇಹಿತರು “ನಿಮ್ಮ ಬಗ್ಗೆ ಕೆಟ್ಟಕೆಟ್ಟದಾಗಿ ಮಾತಾಡ್ತಾರೆ” ಅಂತ ಬೈಬಲ್‌ ಮುಂಚೆನೇ ಎಚ್ಚರಿಕೆ ಕೊಟ್ಟಿತ್ತು. (1 ಪೇತ್ರ 4:3, 4) ಅತಿಯಾಗಿ ಕುಡಿಯೋಕೆ ಪ್ರೋತ್ಸಾಹಿಸೋ ಸ್ನೇಹಿತರಿಂದ ದೂರ ಇರಿ.

5. ಒಂದು ಮಿತಿ ಇಡಿ. “ಈ ಲೋಕ ನಿಮ್ಮನ್ನ ರೂಪಿಸೋಕೆ ಬಿಡಬೇಡಿ. ಬದಲಿಗೆ ದೇವರು ನಿಮ್ಮ ಯೋಚಿಸೋ ವಿಧಾನವನ್ನ ಬದಲಾಯಿಸೋಕೆ ಬಿಟ್ಟುಕೊಡಿ. ಆಗ ದೇವರು ಇಷ್ಟಪಡೋ ವಿಷ್ಯಗಳು ಯಾವಾಗ್ಲೂ ಒಳ್ಳೇದಾಗಿ, ಪರಿಪೂರ್ಣವಾಗಿ, ಸರಿಯಾಗಿ ಇರುತ್ತೆ ಅಂತ ಪರೀಕ್ಷಿಸಿ ಅರ್ಥ ಮಾಡ್ಕೊಳ್ತೀರ.” (ರೋಮನ್ನರಿಗೆ 12:2) ಕುಡಿಯೋ ವಿಷಯದಲ್ಲಿ ತೀರ್ಮಾನ ಮಾಡೋಕೆ ದೇವರ ವಾಕ್ಯ ಸಹಾಯ ಮಾಡುತ್ತೆ. ಈ ವಿಷಯದಲ್ಲಿ ಯೆಹೋವನನ್ನ ಆರಾಧಿಸದೆ ಇರುವವರ ಮಾತನ್ನ ಕೇಳಬೇಡಿ. ಬೈಬಲ್‌ ಹೇಳೋ ಪ್ರಕಾರ ನೀವು ತೀರ್ಮಾನ ಮಾಡಿದ್ರೆ ಯೆಹೋವನಿಗೆ ತುಂಬ ಖುಷಿಯಾಗುತ್ತೆ. ಹಾಗಾದ್ರೆ ಕುಡಿಯೋ ವಿಷಯದಲ್ಲಿ ಮಿತಿ ಇಡೋದು ಹೇಗೆ?

ನಿಮಗೆ ಸರಿಯಾಗಿ ಯೋಚನೆ ಮಾಡೋಕೆ ಆಗ್ತಿಲ್ಲ ಅಂದ್ರೆ ನೀವು ಅತಿಯಾಗಿ ಕುಡಿದಿದ್ದೀರಿ ಅಂತರ್ಥ. ಅದಕ್ಕೇ ಅತಿಯಾಗಿ ಕುಡಿಬೇಡಿ. ‘ನನಗೇನೂ ಆಗಲ್ಲ’ ಅಂತ ನೆನಸಿ ಜಾಸ್ತಿ ಮಿತಿ ಇಟ್ಕೊಬೇಡಿ. ಬದಲಿಗೆ ಕಮ್ಮಿ ಮಿತಿಯನ್ನ ಇಟ್ಟುಕೊಳ್ಳಿ. ಇಲ್ಲಾಂದ್ರೆ ನೀವು ಕಂಠಪೂರ್ತಿ ಕುಡಿದು ತೂರಾಡೋ ಸಾಧ್ಯತೆ ಇದೆ. ಎಷ್ಟು ಕುಡಿದ್ರೆ ನಿಜವಾಗ್ಲೂ ನೀವು ನಿಯಂತ್ರಣದಲ್ಲಿ ಇರ್ತೀರ ಅಂತ ಸರಿಯಾಗಿ ಯೋಚಿಸಿ ತೀರ್ಮಾನ ಮಾಡಿ.

6. ಬೇಡ ಅಂತ ಹೇಳಕ್ಕೆ ಕಲಿಯಿರಿ. “ನಿಮ್ಮ ಮಾತು ಹೌದು ಅಂದ್ರೆ ಹೌದು, ಇಲ್ಲ ಅಂದ್ರೆ ಇಲ್ಲ ಅಂತಿರಲಿ.” (ಮತ್ತಾಯ 5:37) ನೀವು ಅಂದ್ಕೊಂಡಿದ್ದಕ್ಕಿಂತ ಜಾಸ್ತಿ ಕುಡಿಯೋಕೆ ಯಾರಾದ್ರೂ ನಿಮಗೆ ಒತ್ತಾಯ ಮಾಡೋದಾದ್ರೆ ಪ್ರೀತಿಯಿಂದ ಬೇಡ ಅಂತ ಹೇಳಿ. “ನಿಮ್ಮ ಮಾತು ಯಾವಾಗ್ಲೂ ಮೃದುವಾಗಿ, ಮಧುರವಾಗಿ ಇರಲಿ. ಆಗ ಯಾರಿಗೆ ಹೇಗೆ ಉತ್ತರ ಕೊಡಬೇಕು ಅಂತ ನಿಮಗೆ ಗೊತ್ತಾಗುತ್ತೆ.”—ಕೊಲೊಸ್ಸೆ 4:6.

7. ಸಹಾಯಕ್ಕಾಗಿ ಕೇಳಿ. ಯೆಹೋವನನ್ನ ಪ್ರೀತಿಸೋ ಸ್ನೇಹಿತರು ಮತ್ತು ಕುಟುಂಬದವರು ನಿಮಗಿದ್ರೆ ಅವರು ಮಿತವಾಗಿ ಕುಡಿಬೇಕು ಅನ್ನೋ ನಿಮ್ಮ ತೀರ್ಮಾನವನ್ನ ಗೌರವಿಸ್ತಾರೆ. ಜಾಸ್ತಿ ಕುಡಿದೇ ಇರೋಕೆ ಅವರ ಹತ್ರ ಸಹಾಯ ಕೇಳಿ. “ಒಬ್ಬನಿಗಿಂತ ಇಬ್ರು ಉತ್ತಮ. ಅವ್ರ ಪರಿಶ್ರಮಕ್ಕೆ ಒಳ್ಳೇ ಪ್ರತಿಫಲ ಸಿಗುತ್ತೆ. ಒಬ್ಬ ಬಿದ್ರೆ ಏಳೋಕೆ ಇನ್ನೊಬ್ಬ ಸಹಾಯ ಮಾಡ್ತಾನೆ.” (ಪ್ರಸಂಗಿ 4:9, 10; ಯಾಕೋಬ 5:14, 16) ಅಮೆರಿಕದಲ್ಲಿರೋ ದ ನ್ಯಾಷನಲ್‌ ಇನ್ಸ್‌ಟಿಟ್ಯೂಟ್‌ ಆನ್‌ ಆಲ್ಕೊಹಾಲ್‌ ಅಬ್ಯುಸ್‌ ಆ್ಯಂಡ್‌ ಆಲ್ಕೊಹಾಲಿಸಂ ಹೀಗೆ ಹೇಳುತ್ತೆ: “ಮಿತಿಮೀರಿ ಕುಡಿಯುವವರಿಗೆ ಅದನ್ನ ಕಡಿಮೆ ಮಾಡೋದು ತುಂಬ ಕಷ್ಟ. ಅದಕ್ಕೆ ಕುಡಿಯೋದನ್ನ ಕಡಿಮೆ ಮಾಡೋಕೆ ಕುಟುಂಬದವರ ಮತ್ತು ಸ್ನೇಹಿತರ ಸಹಾಯ ಕೇಳಿ.”

8. ತೀರ್ಮಾನಕ್ಕೆ ತಕ್ಕಂತೆ ನಡೆದುಕೊಳ್ಳಿ. “ದೇವರ ಮಾತಿನ ಪ್ರಕಾರ ನಡೀರಿ. ಬರೀ ಕೇಳಿ ಅದನ್ನ ಬಿಟ್ಟುಬಿಟ್ರೆ ತಪ್ಪಾದ ಯೋಚ್ನೆಗಳಿಂದ ನಿಮ್ಮನ್ನೇ ನೀವು ಮೋಸ ಮಾಡ್ಕೊಳ್ತಾ ಇದ್ದೀರ. ಆದ್ರೆ ಸ್ವತಂತ್ರ ಕೊಡೋ ಪರಿಪೂರ್ಣ ನಿಯಮವನ್ನ ಚೆನ್ನಾಗಿ ನೋಡಿ ಅದ್ರ ಪ್ರಕಾರ ನಡಿಯುವವನು ಸುಮ್ನೆ ಕೇಳಿ ಮರೆತುಹೋಗಲ್ಲ, ಅದ್ರ ಪ್ರಕಾರ ನಡಿತಾನೆ. ಅದು ಅವನಿಗೆ ಖುಷಿ ತರುತ್ತೆ.”—ಯಾಕೋಬ 1:22, 25.

ಈ ಚಟದಿಂದ ಹೊರಬರೋದು ಹೇಗೆ?

ಅತಿಯಾಗಿ ಕುಡಿಯೋರೆಲ್ಲ ಕುಡಿಯೋ ಚಟಕ್ಕೆ ಬೀಳದೇ ಇರಬಹುದು. ಆದ್ರೆ ಕೆಲವರು ಆಗಾಗ ಅತಿಯಾಗಿ ಕುಡಿತಾ ಕುಡಿತಾ ಆ ಚಟಕ್ಕೆ ಬಿದ್ದುಬಿಡ್ತಾರೆ. ಇಂಥ ವ್ಯಕ್ತಿಗಳು ಕುಡಿಯೋದನ್ನ ಇದ್ದಕ್ಕಿದ್ದ ಹಾಗೆ ನಿಲ್ಲಿಸಿದಾಗ ಅವರಿಗೆ ತುಂಬ ಆರೋಗ್ಯ ಸಮಸ್ಯೆಗಳಾಗುತ್ತೆ. ಅಂಥವರಿಗೆ ದೃಢನಿರ್ಧಾರ ಮತ್ತು ಬೈಬಲಿನ ಸಹಾಯ ಮಾತ್ರ ಸಾಕಾಗಲ್ಲ. ಈ ಚಟದಿಂದ ಹೊರಬರೋಕೆ ಡಾಕ್ಟರ್‌ ಸಹಾಯನೂ ಬೇಕಾಗುತ್ತೆ. “ನಾನು ಕುಡಿಯೋದನ್ನ ಬಿಟ್ಟಾಗ ನನ್ನ ದೇಹದಲ್ಲಾದ ನೋವು, ಸಂಕಟವನ್ನ ಮಾತಲ್ಲಿ ಹೇಳಕ್ಕಾಗಲ್ಲ. ಆಗ ನನಗೆ ಈ ಅಭ್ಯಾಸವನ್ನ ಬಿಟ್ಟುಬಿಡೋಕೆ ಬೈಬಲ್‌ ಕಲಿಯೋದ್ರ ಜೊತೆಗೆ ಡಾಕ್ಟರ್‌ ಸಹಾಯನೂ ಪಡ್ಕೊಬೇಕು ಅಂತ ಗೊತ್ತಾಯ್ತು” ಅಂತ ಆ್ಯಲೆನ್‌ ಹೇಳ್ತಾನೆ.

ಕುಡಿತದ ಚಟದಿಂದ ದೂರ ಇದ್ದು ದೇವರ ಜೊತೆ ಒಳ್ಳೇ ಸಂಬಂಧ ಬೆಳೆಸ್ಕೊಳ್ಳೋಕೆ ಕೆಲವರಿಗೆ ಚಿಕಿತ್ಸೆನೂ ಬೇಕಾಗಬಹುದು. b ಕೆಲವರು ದಿಢೀರ್‌ ಅಂತ ಕುಡಿಯೋದನ್ನ ನಿಲ್ಲಿಸಿದರೆ ಅವರ ಆರೋಗ್ಯ ಹಾಳಾಗುತ್ತೆ. ಇದರಿಂದಾಗಿ ಆಸ್ಪತ್ರೆಯಲ್ಲಿ ಅಡ್ಮಿಟ್‌ ಆಗೋ ಸಂದರ್ಭನೂ ಬರಬಹುದು. ಇನ್ನೂ ಕೆಲವರಿಗೆ ಔಷಧಿಗಳನ್ನ ತಗೊಂಡ್ರೆ ಸಾಕು ಕುಡಿಯೋ ಆಸೆ ನಿಯಂತ್ರಿಸೋಕೆ ಆಗುತ್ತೆ. ಹಾಗಾಗಿ ಯೇಸು ಹೀಗಂದನು: “ಆರೋಗ್ಯವಾಗಿ ಇರೋರಿಗೆ ವೈದ್ಯ ಬೇಕಾಗಿಲ್ಲ, ರೋಗಿಗಳಿಗೆ ಬೇಕು.”—ಮಾರ್ಕ 2:17.

ದೇವರ ಮಾತು ಕೇಳಿದರೆ ಒಳ್ಳೇದಾಗುತ್ತೆ

ಮದ್ಯವನ್ನ ಮಿತವಾಗಿ ಬಳಸಬಹುದು ಅಂತ ಬೈಬಲ್‌ ಹೇಳುತ್ತೆ. ಈಗಲೂ ಮುಂದಕ್ಕೂ ನಾವು ಖುಷಿಯಾಗಿ ಇರಬೇಕು ಅನ್ನೋದೇ ಯೆಹೋವನ ಬಯಕೆ. ಅದಕ್ಕೆ ಈ ನಿಯಮವನ್ನ ಕೊಟ್ಟಿದ್ದಾನೆ. ಕುಡಿಯೋದನ್ನ ಬಿಟ್ಟು 24 ವರ್ಷ ಆದ ಮೇಲೆ ಆ್ಯಲೆನ್‌ ಹೀಗೆ ಹೇಳ್ತಾನೆ: ಯೆಹೋವನಿಗೆ ಎಷ್ಟು ಥ್ಯಾಂಕ್ಸ್‌ ಹೇಳಿದರೂ ಸಾಕಾಗಲ್ಲ. ಯಾಕಂದ್ರೆ ಯೆಹೋವ ದೇವರ ಬಗ್ಗೆ ಕಲಿಯೋದಕ್ಕಿಂತ ಮುಂಚೆ ನಾನು ಬದಲಾಗ್ತೀನಿ ಅಂತ ಕನಸು-ಮನಸಲ್ಲೂ ಅಂದ್ಕೊಂಡಿರಲಿಲ್ಲ. ಆದ್ರೆ ನಾನೀಗ ಬದಲಾಗೋಕೆ ಕಾರಣ ಯೆಹೋವ ದೇವರೇ.

ನಿಮಗೆ ಕುಡಿಯೋ ಚಟ ಇದೆಯಾ? ಹಾಗಾದ್ರೆ ಈ ಚಟದಿಂದ ಹೊರಗೆ ಬರೋಕೆ ಆಗೋದೇ ಇಲ್ಲ ಅಂತ ತೀರ್ಮಾನಿಸಿ ಕೈ ಚೆಲ್ಲಿ ಕೂರಬೇಡಿ. ಆ್ಯಲೆನ್‌ ತರ ಕುಡಿಯೋದನ್ನ ಬಿಡೋಕೆ ಆಗೋದೇ ಇಲ್ಲ ಅಂತ ನಿಮಗೂ ಅನಿಸಬಹುದು. ಆದ್ರೆ ನೆನಪಿಡಿ, ಅವನ ತರಾನೇ ತುಂಬ ಜನ ಕುಡುಕರಾಗಿದ್ದರು. ಆದ್ರೆ ಈಗ ಕೆಲವರು ಕುಡಿಯೋದನ್ನ ಕಮ್ಮಿ ಮಾಡಿದ್ದಾರೆ, ಇನ್ನು ಕೆಲವರು ಕುಡಿಯೋದನ್ನೇ ಬಿಟ್ಟುಬಿಟ್ಟಿದ್ದಾರೆ. ಅವರು ಬದಲಾಗಿರೋದಕ್ಕೆ ತುಂಬ ಖುಷಿಪಡ್ತಿದ್ದಾರೆ. ನೀವು ಬದಲಾದರೆ ನಿಮಗೂ ಖುಷಿ ಆಗುತ್ತೆ.

ನೀವು ಸ್ವಲ್ಪ ಕುಡಿಯೋ ಆಯ್ಕೆ ಮಾಡಿದ್ರೂ ಅಥವಾ ಕುಡಿಯೋದನ್ನೇ ಬಿಟ್ಟುಬಿಟ್ರೂ ದೇವರು ನಿಮ್ಮನ್ನ ಪ್ರೀತಿಸ್ತಾನೆ. ಅದಕ್ಕೆ ಆತನು ಹೀಗೆ ಹೇಳ್ತಾನೆ: “ನೀನು ನನ್ನ ಆಜ್ಞೆಗಳಿಗೆ ಗಮನಕೊಟ್ರೆ ಎಷ್ಟೋ ಚೆನ್ನಾಗಿರುತ್ತೆ! ನಿನ್ನ ಶಾಂತಿ ನದಿ ತರನೂ ನಿನ್ನ ನೀತಿ ಸಮುದ್ರದ ಅಲೆಗಳ ತರನೂ ಇರುತ್ತೆ.”—ಯೆಶಾಯ 48:18.

[ಪಾದಟಿಪ್ಪಣಿಗಳು]

b ಅನೇಕ ಆಸ್ಪತ್ರೆಗಳಲ್ಲಿ, ಪುನರ್ವಸತಿ (ರಿಹ್ಯಾಬಿಲಿಟೇಶನ್‌) ಕೇಂದ್ರಗಳಲ್ಲಿ ಈ ಚಟವನ್ನ ಬಿಡಿಸೋಕೆ ಚಿಕಿತ್ಸೆಯನ್ನ ಕೊಡಲಾಗುತ್ತೆ. ಈ ಕಾವಲಿನಬುರುಜು ನಿರ್ದಿಷ್ಟ ರೀತಿಯ ಚಿಕಿತ್ಸೆಯನ್ನೇ ಪಡಿಬೇಕು ಅಂತ ಹೇಳ್ತಿಲ್ಲ. ಒಬ್ಬ ವ್ಯಕ್ತಿ ಯಾವುದೇ ಚಿಕಿತ್ಸೆ ಆಯ್ಕೆ ಮಾಡಿದ್ರೂ ಅದು ವೈಯಕ್ತಿಕ ನಿರ್ಣಯ ಆಗಿರಬೇಕು ಮತ್ತು ಯಾವುದೇ ಬೈಬಲ್‌ ತತ್ವಕ್ಕೆ ವಿರುದ್ಧವಾಗಿರಬಾರದು.

[ಚೌಕ/​ಚಿತ್ರ]

 ಕುಡಿತದ ಕಪಿಮುಷ್ಟಿಯಲ್ಲಿ ಇದ್ದೀನಾ?

ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ:

• ಮುಂಚೆಗಿಂತ ಈಗ ನಾನು ಜಾಸ್ತಿ ಕುಡಿತಿದ್ದೀನಾ?

• ಇತ್ತೀಚಿಗೆ ನಾನು ತುಂಬ ಸಲ ಕುಡಿತಿದ್ದೀನಾ?

• ನಾನು ಮುಂಚೆಗಿಂತ ಜಾಸ್ತಿ ಅಮಲೇರಿಸೋ ಮದ್ಯವನ್ನ ಕುಡಿತಿದ್ದೀನಾ?

• ಟೆನ್ಶನ್‌ ಆದಾಗ ಅಥವಾ ಸಮಸ್ಯೆಯಿಂದ ಮುಕ್ತಿ ಸಿಗೋಕೆ ಕುಡೀತೀನಾ?

• ‘ನಾನು ಜಾಸ್ತಿ ಕುಡೀತಿದ್ದೀನಿ’ ಅಂತ ನನ್ನ ಫ್ರೆಂಡ್ಸ್‌ ಅಥವಾ ಕುಟುಂಬದವರು ಹೇಳಿದ್ದಾರಾ?

• ಕುಡಿಯೋದ್ರಿಂದ ನನಗೆ ಮನೆಯಲ್ಲಿ, ಕೆಲಸದ ಜಾಗದಲ್ಲಿ, ಪ್ರಯಾಣ ಮಾಡುವಾಗ ತೊಂದರೆ ಆಗಿದ್ಯಾ?

• ಒಂದು ವಾರ ಕುಡಿದೇ ಇರೋಕೆ ನನ್ನಿಂದ ಆಗುತ್ತಾ?

• ಬೇರೆಯವರು ಕುಡಿದೇ ಇದ್ದಾಗ ನಂಗೆ ಕಷ್ಟ ಆಗುತ್ತಾ?

• ನಾನು ಎಷ್ಟು ಕುಡಿತೀನಿ ಅಂತ ಬೇರೆಯವರು ಹತ್ತಿರ ಹೇಳೋಕೆ ನನಗೆ ಮುಜುಗರ ಆಗುತ್ತಾ?

ಈ ಪ್ರಶ್ನೆಗಳಲ್ಲಿ ಒಂದು ಅಥವಾ ಎರಡು ಪ್ರಶ್ನೆಗೆ ನಿಮ್ಮ ಉತ್ತರ ಹೌದು ಅಂತಾಗಿದ್ದರೆ, ಕುಡಿತದ ವಿಷಯದಲ್ಲಿ ನೀವು ಜಾಗ್ರತೆ ವಹಿಸಬೇಕು ಅಂತರ್ಥ.

[ಚೌಕ/​ಚಿತ್ರ]

ಕುಡಿಯೋದ್ರ ಬಗ್ಗೆ ಸರಿಯಾದ ತೀರ್ಮಾನ ತೆಗೆದುಕೊಳ್ಳಿ

ಕುಡಿಯೋ ಮುಂಚೆ ನಿಮ್ಮನ್ನೇ ಈ ಪ್ರಶ್ನೆ ಕೇಳಿಕೊಳ್ಳಿ:

ನಾನು ಕುಡಿಬೇಕಾ ಅಥವಾ ಕುಡಿಬಾರದಾ?

ಟಿಪ್ಸ್‌: ಮಿತವಾಗಿ ಕುಡಿಯೋಕೆ ಆಗದಿರುವವನು ಕುಡಿಲೇಬಾರದು.

ನಾನು ಎಷ್ಟು ಕುಡಿಬೇಕು?

ಟಿಪ್ಸ್‌: ಕುಡಿದ ಮೇಲೆ ಸರಿಯಾಗಿ ಯೋಚನೆ ಮಾಡೋಕೆ ಆಗಲ್ಲ. ಅದಕ್ಕೆ ಕುಡಿಯೋ ಮುಂಚೆನೇ ಎಷ್ಟು ಕುಡಿಬೇಕು ಅಂತ ತೀರ್ಮಾನಿಸಿ.

ನಾನು ಯಾವಾಗ ಕುಡಿಬಾರದು?

ಟಿಪ್ಸ್‌: ಗಾಡಿ ಓಡಿಸೋ ಮುಂಚೆ, ಗಮನಕೊಟ್ಟು ಮಾಡಬೇಕಾದ ಕೆಲಸವನ್ನ ಮಾಡೋ ಮುಂಚೆ, ಆರಾಧನೆಗೆ ಸಂಬಂಧಪಟ್ಟ ವಿಷಯಗಳನ್ನ ಮಾಡೋ ಮುಂಚೆ, ಗರ್ಭಿಣಿ ಆಗಿರುವಾಗ, ಕೆಲವು ಮಾತ್ರೆಗಳನ್ನ ತೆಗೆದುಕೊಳ್ಳುವಾಗ ಕುಡಿದೇ ಇರೋದು ಒಳ್ಳೇದು.

ನಾನು ಎಲ್ಲಿ ಕುಡಿಬಾರದು?

ಟಿಪ್ಸ್‌: ಕುಡಿದು ಕುಪ್ಪಳಿಸೋ ಜಾಗದಲ್ಲಿ, ಕೆಟ್ಟ ಕೆಲಸ ನಡೆಯೋ ಜಾಗದಲ್ಲಿ ಕುಡಿಬೇಡಿ. ಯಾರಿಗೂ ಗೊತ್ತಾಗಬಾರದು ಅಂತ ಕದ್ದುಮುಚ್ಚಿ ಕುಡಿಬೇಡಿ. ಕುಡಿಯೋದನ್ನ ಇಷ್ಟಪಡದಿರುವವರ ಮುಂದೆ ಕುಡಿಬೇಡಿ.

ನಾನು ಯಾರ ಜೊತೆ ಕುಡೀಲಿ?

ಟಿಪ್ಸ್‌: ಅತಿಯಾಗಿ ಕುಡಿಯವವರ ಜೊತೆ ಕುಡಿಬೇಡಿ. ಮಿತವಾಗಿ ಕುಡಿಯೋ ಫ್ರೆಂಡ್ಸ್‌ ಅಥವಾ ಕುಟುಂಬದವರ ಜೊತೆ ಕುಡಿರಿ.

[ಚೌಕ/​ಚಿತ್ರ]

ಕುಡುಕನಾಗಿದ್ದ ವ್ಯಕ್ತಿಗೆ ದೇವರ ವಾಕ್ಯ ಸಹಾಯ ಮಾಡಿತು

ಥಾಯ್ಲೆಂಡ್‌ನಲ್ಲಿರೋ ಸುಪಾಟ್‌ ಅನ್ನೋ ವ್ಯಕ್ತಿ ತುಂಬ ಕುಡಿತಿದ್ದ. ಮೊದಲು ಸಾಯಂಕಾಲ ಮಾತ್ರ ಕುಡಿತಿದ್ದ. ಆಮೇಲೆ ಬೆಳಿಗ್ಗೆ ಮತ್ತೆ ಮಧ್ಯಾಹ್ನ ಕುಡಿಯೋಕೆ ಶುರುಮಾಡಿದ. ಹೀಗೆ ಮೂರು ಹೊತ್ತೂ ಕುಡಿತಿದ್ದ. ಎಷ್ಟೋ ಸಲ ಮತ್ತೇರಲಿ ಅಂತ ಕುಡಿತಿದ್ದ. ಆದ್ರೆ ಯೆಹೋವನ ಸಾಕ್ಷಿಗಳ ಜೊತೆ ಬೈಬಲ್‌ ಕಲಿಯೋಕೆ ಶುರುಮಾಡಿದ ಮೇಲೆ ಕುಡಿಕತನ ತಪ್ಪು ಅಂತ ಅವನು ತಿಳ್ಕೊಂಡು ಅದನ್ನ ನಿಲ್ಲಿಸಿದ. ಸ್ವಲ್ಪ ಸಮಯ ಆದ ಮೇಲೆ ಹಳೇ ಚಾಳಿ ಮತ್ತೆ ಶುರುವಾಯ್ತು. ಇದ್ರಿಂದ ಅವನ ಕುಟುಂಬದವರಿಗೂ ತುಂಬ ಬೇಜಾರಾಯ್ತು.

ಆದ್ರೆ ಸುಪಾಟ್‌ಗೆ ಯೆಹೋವನ ಮೇಲೆ ಇನ್ನೂ ಪ್ರೀತಿ ಇತ್ತು. ದೇವರಿಗೆ ಇಷ್ಟ ಆಗೋ ತರ ಆರಾಧಿಸಬೇಕು ಅನ್ನೋ ಆಸೆನೂ ಇತ್ತು. ಈ ಚಟದಿಂದ ಹೊರಗೆ ಬರೋಕೆ ಸುಪಾಟ್‌ನ ಫ್ರೆಂಡ್ಸ್‌ ಸಹಾಯ ಮಾಡಿದ್ರು. ಅಷ್ಟೇ ಅಲ್ಲ, ಅವನ ಹೆಂಡತಿ ಮಕ್ಕಳ ಹತ್ತಿರನೂ ’ಸುಪಾಟ್‌ ಜೊತೆ ಹೆಚ್ಚು ಸಮಯ ಕಳೆಯಿರಿ ಮತ್ತು ಸಹಾಯ ಮಾಡೋದನ್ನ ಮುಂದುವರಿಸಿ’ ಅಂತ ಅವನ ಫ್ರೆಂಡ್ಸ್‌ ಹೇಳಿದರು. 1 ಕೊರಿಂಥ 6:10ರಲ್ಲಿ ಹೇಳಿರೋ “ಕುಡುಕರು . . . ದೇವರ ಆಳ್ವಿಕೆಯಲ್ಲಿ ಇರಲ್ಲ” ಅನ್ನೋ ಮಾತಿನಿಂದಾಗಿ ತಾನು ಬದಲಾಗಲೇಬೇಕು ಅಂತ ಸುಪಾಟ್‌ಗೆ ಅನಿಸಿತು. ಹಾಗಾಗಿ ಅವನು ಅತಿಯಾಗಿ ಕುಡಿಯೋದನ್ನ ನಿಲ್ಲಿಸೋಕೆ ತನ್ನ ಕೈಯಲ್ಲಿ ಏನಾಗುತ್ತೋ ಅದನ್ನೆಲ್ಲ ಮಾಡಿದ.

ಕುಡಿಯೋದನ್ನೇ ಬಿಟ್ಟುಬಿಡಬೇಕು ಅಂತ ಅವನು ದೃಢತೀರ್ಮಾನ ಮಾಡಿದ. ದೇವರ ವಾಕ್ಯ, ಪವಿತ್ರಶಕ್ತಿ, ಕುಟುಂಬದವರ ಮತ್ತು ಸಭೆಯವರ ಸಹಾಯದಿಂದ ಸುಪಾಟ್‌ಗೆ ಕುಡಿಯೋ ಚಟದಿಂದ ಹೊರಗೆ ಬರೋಕೆ ಆಯ್ತು. ಕೊನೆಗೆ ಅವನು ದೀಕ್ಷಾಸ್ನಾನ ತಗೊಂಡಾಗ ಅವನ ಕುಟುಂಬದವರಿಗೆ ತುಂಬ ಖುಷಿ ಆಯ್ತು. ಸುಪಾಟ್‌ಗೆ ಈಗ ದೇವರ ಜೊತೆ ಒಳ್ಳೇ ಸಂಬಂಧ ಇದೆ ಮತ್ತು ಬೇರೆಯವರೂ ಅದನ್ನ ಬೆಳೆಸ್ಕೊಳ್ಳೋಕೆ ಸಹಾಯ ಮಾಡ್ತಿದ್ದಾನೆ.