ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬದುಕು ಬದಲಾದ ವಿಧ

ನನ್ನ ಜೀವನವನ್ನ ನನ್ನ ಇಷ್ಟದಂತೆ ನಡೆಸ್ತಿದ್ದೆ

ನನ್ನ ಜೀವನವನ್ನ ನನ್ನ ಇಷ್ಟದಂತೆ ನಡೆಸ್ತಿದ್ದೆ
  • ಜನನ: 1951

  • ದೇಶ: ಜರ್ಮನಿ

  • ಹಿಂದೆ: ಅತಿಯಾದ ಸ್ವಾಭಿಮಾನ, ನಂಗೆ ಇಷ್ಟಬಂದ ಹಾಗೆ ಇರುತ್ತಿದ್ದೆ

ಹಿನ್ನೆಲೆ:

ನಾನು ಮತ್ತು ನನ್ನ ಕುಟುಂಬ ಪೂರ್ವ ಜರ್ಮನಿಯಲ್ಲಿರೋ ಲೈಪ್‌ಸಿಗ್‌ ಹತ್ತಿರ ಇದ್ವಿ. ಇದು ಚೆಕ್‌ ಮತ್ತು ಪೊಲಿಶ್‌ ಗಡಿಪ್ರದೇಶದಲ್ಲಿ ಇದೆ. ಅಪ್ಪನಿಗೆ ಹೊರದೇಶದಲ್ಲಿ ಕೆಲಸ ಇದ್ದಿದ್ದರಿಂದ, ನನಗೆ ಆರು ವರ್ಷ ಇದ್ದಾಗ ನಾವು ಬ್ರಸಿಲ್‌ಗೆ ಆಮೇಲೆ ಈಕ್ವಡಾರ್‌ಗೆ ಹೋದ್ವಿ.

ನನಗೆ 14 ವರ್ಷ ಇದ್ದಾಗ ನನ್ನನ್ನ ಜರ್ಮನಿಯಲ್ಲಿರೋ ಬೋರ್ಡಿಂಗ್‌ ಸ್ಕೂಲಿಗೆ ಸೇರಿಸಿದರು. ಅಪ್ಪ-ಅಮ್ಮ ದಕ್ಷಿಣ ಅಮೇರಿಕದಲ್ಲಿ ಇದ್ದರು. ಅದು ಇಲ್ಲಿಂದ ತುಂಬ ದೂರ ಇತ್ತು. ಹಾಗಾಗಿ ನನ್ನ ಕೆಲಸವನ್ನೆಲ್ಲ ನಾನೇ ನೋಡಿಕೊಳ್ಳಬೇಕಾಯಿತು. ನನ್ನ ಇಷ್ಟ ಬಂದ ಹಾಗೆ ನಾನಿರುತ್ತಿದ್ದೆ. ಅದಕ್ಕೆ ಬೇರೆಯವರು ನನ್ನ ಬಗ್ಗೆ ಏನು ಯೋಚನೆ ಮಾಡ್ತಾರೆ ಅಂತ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.

ನನಗೆ 17 ವರ್ಷ ಇದ್ದಾಗ ಅಪ್ಪಅಮ್ಮ ಜರ್ಮನಿಗೆ ವಾಪಸ್‌ ಬಂದರು. ಮೊದಲು ನಾನು ಅವರ ಜೊತೆನೇ ಇದ್ದೆ. ನನ್ನಿಷ್ಟ ಬಂದ ಹಾಗೆ ಜೀವನ ಮಾಡೋಕೆ ಬಯಸಿದ್ದರಿಂದ ಅಪ್ಪಅಮ್ಮ ಜೊತೆ ಜೀವನ ಮಾಡೋಕೆ ಕಷ್ಟ ಆಗ್ತಿತ್ತು. ಅದಕ್ಕೆ 18 ವರ್ಷ ಆದಾಗ ಮನೆ ಬಿಟ್ಟು ಹೋದೆ.

ಈ ಜೀವನದ ಉದ್ದೇಶ ಏನಂತ ಯಾವಾಗಲೂ ಹುಡುಕುತ್ತಾ ಇದ್ದೆ. ಜನರ ಜೀವನ ರೀತಿಯನ್ನ ಗಮನಿಸಿದೆ, ತುಂಬ ಸಂಘಟನೆಗಳಿಗೂ ಹೋದೆ. ಮನುಷ್ಯ ಭೂಮಿಯನ್ನ ನಾಶ ಮಾಡುವುದಕ್ಕಿಂತ ಮುಂಚೆ, ಇಡೀ ಭೂಮಿಯನ್ನು ಸುತ್ತಾಡಬೇಕು ಅನ್ನೋದೇ ನನ್ನ ಆಸೆಯಾಗಿತ್ತು. ಹೀಗೆ ಮಾಡಿದ್ರೆ ನನ್‌ ಜೀವನ ಸಾರ್ಥಕ ಅಂದುಕೊಳ್ಳುತ್ತಿದ್ದೆ.

ನಾನು ಜರ್ಮನಿಯಿಂದ ಹೊರಟೆ, ಒಂದು ಬೈಕ್‌ ತಗೊಂಡೆ. ಆಮೇಲೆ ಆಫ್ರಿಕಾಗೆ ಹೋದೆ. ಅಲ್ಲಿ ಹೋಗಿ ಸ್ವಲ್ಪದರಲ್ಲೇ ನನ್ನ ಬೈಕ್‌ ರಿಪೇರಿ ಮಾಡೋಕೆ ಯೂರೋಪಿಗೆ ವಾಪಸ್‌ ಬರಬೇಕಾಯಿತು. ಪೋರ್ಚುಗಲ್‌ನಲ್ಲಿ ಒಂದಿನ ಬೀಚಲ್ಲಿ ಕೂತಿದ್ದಾಗ ಬೈಕನ್ನ ಮಾರಿ ಒಂದು ಬೋಟನ್ನ ತಗೊಂಡ್ರೆ ಹೇಗೆ ಅಂತ ಯೋಚಿಸಿದೆ.

ಅಟ್ಲಾಂಟಿಕ್‌ ಸಾಗರದಲ್ಲಿ ಪ್ರಯಾಣ ಮಾಡಬೇಕು ಅಂತ ನನ್ನ ತರನೇ ಆಸೆ ಇಟ್ಕೊಂಡಿದ್ದ ಗುಂಪಿನ ಜೊತೆ ಸೇರಿಕೊಂಡೆ. ಅಲ್ಲಿ ನಾನು ಲೋರಿ ಅನ್ನೋ ಹುಡುಗಿಯನ್ನ ನೋಡಿದೆ. ಮೊದಲು ನಾವು ಕೆರೀಬಿಯನ್‌ ದ್ವೀಪಗಳಿಗೆ ಹೋದ್ವಿ. ಸ್ವಲ್ಪ ಸಮಯ ಪೊರ್ಟೋ ರಿಕೊದಲ್ಲಿದ್ದು ವಾಪಸ್‌ ಯುರೋಪಿಗೆ ಹೋದ್ವಿ. ನಾವು ಒಂದು ಬೋಟನ್ನು ತಗೊಂಡು ಅದರಲ್ಲೇ ಉಳಿದುಕೊಳ್ಳೋ ತರ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಅಂದುಕೊಂಡ್ವಿ. ಅದಕ್ಕೋಸ್ಕರ ಮೂರು ತಿಂಗಳು ಹುಡುಕಿದ್ವಿ. ಆದ್ರೆ ಜರ್ಮನ್‌ ಮಿಲಿಟರಿಗೆ ಸೇರಿಕೊಳ್ಳೋಕೆ ಅವಕಾಶ ಸಿಕ್ಕಿದಾಗ ನಾನಲ್ಲಿ ಸೇರಿಕೊಂಡೆ.

15 ತಿಂಗಳು ಜರ್ಮನ್‌ ನೇವಿಯಲ್ಲಿ (ಹಡಗು ಪಡೆಯಲ್ಲಿ) ಕೆಲಸ ಮಾಡಿದೆ. ಆ ಸಮಯದಲ್ಲೇ ನಂಗೂ ಲೋರಿಗೂ ಮದುವೆಯಾಗಿದ್ದು. ಆಗ ನಾವು ಅಂದುಕೊಂಡಿರೋ ಹಾಗೆನೇ ಪ್ರಯಾಣ ಮುಂದುವರಿಸೋಕೆ ಬೇಕಾದ ತಯಾರಿಯನ್ನ ಮಾಡಿದ್ವಿ. ಮಿಲಿಟರಿಗೆ ಸೇರಿಕೊಳ್ಳೋದಕ್ಕಿಂತ ಮುಂಚೆನೇ ನಾವೊಂದು ಚಿಕ್ಕ ಹಡಗನ್ನ ತಗೊಂಡಿದ್ವಿ. ಮಿಲಿಟರಿಯಲ್ಲಿ ಇರುವಾಗಲೇ ಆ ಹಡಗಿನಲ್ಲಿ ಉಳಿದುಕೊಳ್ಳೋಕೆ ಸಾಧ್ಯ ಆಗೋ ತರ ಬೇಕಾದ ಬದಲಾವಣೆಗಳನ್ನ ಅದರಲ್ಲಿ ಮಾಡಿದ್ವಿ. ಅದರಲ್ಲೇ ಉಳಿದುಕೊಂಡು ಸುಂದರವಾದ ಭೂಮಿಯನ್ನ ಸುತ್ತಾಡಬೇಕು ಅಂದುಕೊಂಡ್ವಿ. ನನ್ನ ಮಿಲಿಟರಿ ಸೇವೆ ಮುಗೀತು. ಹಡಗಿನ ಕೆಲಸ ಇನ್ನೇನು ಪೂರ್ತಿ ಆಗುವಷ್ಟರಲ್ಲಿ ಯೆಹೋವನ ಸಾಕ್ಷಿಗಳ ಭೇಟಿಯಾಯಿತು. ಅವರ ಜೊತೆ ಬೈಬಲ್‌ ಕಲಿಯೋಕೆ ಶುರು ಮಾಡಿದ್ವಿ.

ಬದುಕನ್ನೇ ಬದಲಾಯಿಸಿತು ಬೈಬಲ್‌:

ನನ್ನ ಜೀವನದಲ್ಲಿ ಬದಲಾವಣೆ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ ಅಂತ ಅನಿಸುತ್ತಿತ್ತು. ಯಾಕಂದ್ರೆ ನನ್ನ ಜೊತೆ ಇದ್ದವಳನ್ನೇ ಮದುವೆಯಾದೆ ಮತ್ತು ಸಿಗರೇಟ್‌ ಸೇದುವುದನ್ನ ಈಗಾಗಲೇ ಬಿಟ್ಟುಬಿಟ್ಟಿದ್ದೆ. (ಎಫೆಸ 5:5) ಇಡೀ ಲೋಕವನ್ನ ಸುತ್ತುವುದರಿಂದ ಯೆಹೋವನ ಅದ್ಭುತ ಸೃಷ್ಟಿಗಳನ್ನ ನೋಡೋಕ್ಕಾಗುತ್ತೆ. ಹಾಗಾಗಿ ಅದರಲ್ಲಿ ತಪ್ಪೇನಿಲ್ಲ. ಅದು ಒಳ್ಳೆ ವಿಷಯನೇ ಅಲ್ವಾ ಅಂತ ಅಂದುಕೊಳ್ಳುತ್ತಿದ್ದೆ.

ಆದರೆ ನಿಜ ಹೇಳಬೇಕಂದ್ರೆ ನನ್ನ ವ್ಯಕ್ತಿತ್ವದಲ್ಲಿ ತುಂಬ ಬದಲಾವಣೆಗಳನ್ನ ಮಾಡಿಕೊಳ್ಳಬೇಕಿತ್ತು. ನನ್ನಲ್ಲಿ ಅತಿಯಾದ ಸ್ವಾಭಿಮಾನ ಇತ್ತು. ನನ್ನ ಜೀವನವನ್ನ ನನ್ನಿಷ್ಟದಂತೆ ನಡೆಸುತ್ತಿದ್ದೆ. ನನ್ನ ಸಾಧನೆ ಸಾಮರ್ಥ್ಯದ ಬಗ್ಗೆ ತುಂಬ ಹೆಮ್ಮೆಪಡುತ್ತಿದ್ದೆ.

ಒಂದಿನ ನಾನು ಯೇಸು ಕೊಟ್ಟಿದ್ದ ಬೆಟ್ಟದ ಭಾಷಣವನ್ನ (ಮತ್ತಾಯ ಅಧ್ಯಾಯ 5-7 ನ್ನ) ಓದುತ್ತಿದ್ದೆ. ಯೇಸು ಇಲ್ಲಿ ಯಾವ ಖುಷಿಯ ಬಗ್ಗೆ ಮಾತಾಡುತ್ತಿದ್ದಾನೆ ಅಂತ ಮೊದಲು ನನಗೆ ಅರ್ಥ ಆಗಲಿಲ್ಲ. ಉದಾಹರಣೆಗೆ ಹಸಿದಿರುವವರು, ಬಾಯಾರಿದವರು ಖುಷಿಯಾಗಿ ಇರ್ತಾರೆ ಅಂತ ಯೇಸು ಹೇಳಿದ್ದಾನೆ. (ಮತ್ತಾಯ 5:6) ಅಂಥ ವ್ಯಕ್ತಿ ಹೇಗೆ ಖುಷಿಯಾಗಿರೋಕೆ ಸಾಧ್ಯ ಅಂತ ನಾನು ಯೋಚಿಸುತ್ತಿದ್ದೆ. ಬೈಬಲನ್ನ ಕಲಿಯುತ್ತಾ ಹೋದ ಹಾಗೆ ಯೇಸು ಹೇಳಿದ ಮಾತಿನ ಅರ್ಥ ಏನಂತ ನನಗೆ ಗೊತ್ತಾಯ್ತು. ನಮಗೆ ಆಧ್ಯಾತ್ಮಿಕ ವಿಷಯದ ಅಗತ್ಯ ಇದೆ ಅಂತ ಮೊದಲು ದೀನತೆಯಿಂದ ಒಪ್ಪಿಕೊಳ್ಳಬೇಕು. ಆಗಲೇ ಅದನ್ನ ಪೂರೈಸೋಕೆ ಆಗೋದು. ಯೇಸು ಅದನ್ನೇ ಹೇಳಿದ್ದಾನೆ: “ದೇವರ ಮಾರ್ಗದರ್ಶನ ಬೇಕು ಅಂತ ಅರ್ಥ ಮಾಡಿಕೊಳ್ಳುವವರು ಖುಷಿಯಾಗಿರುತ್ತಾರೆ.”—ಮತ್ತಾಯ 5:3.

ಜರ್ಮನಿಯಲ್ಲಿ ನಾವು ಬೈಬಲ್‌ ಅಧ್ಯಯನ ಶುರುಮಾಡಿದ ಮೇಲೆ ನಾವಿಬ್ಬರೂ ಫ್ರಾನ್ಸಿಗೆ ಹೋದ್ವಿ. ಅಲ್ಲಿಂದ ಇಟಲಿಗೆ ಹೋದ್ವಿ. ಆದರೆ ಹೋದಲ್ಲೆಲ್ಲ ಯೆಹೋವನ ಸಾಕ್ಷಿಗಳು ನಮಗೆ ಸಿಕ್ಕಿದ್ರು. ಅವರು ಒಬ್ಬರಿಗೊಬ್ಬರಿಗೆ ತೋರಿಸ್ತಾ ಇರೋ ಪ್ರೀತಿ ಅವರ ಮಧ್ಯೆ ಇರೋ ಐಕ್ಯತೆ ನೋಡಿ ನನಗೆ ತುಂಬ ಇಷ್ಟ ಆಯ್ತು. ಯೆಹೋವನ ಸಾಕ್ಷಿಗಳು ಎಲ್ಲೇ ಇದ್ದರೂ ಒಂದೇ ತರ ಇರ್ತಾರೆ ಅಂತ ನನಗೆ ಅರ್ಥ ಆಯ್ತು. (ಯೋಹಾನ 13:34, 35) ಆಮೇಲೆ ನಾವಿಬ್ರು ದೀಕ್ಷಾಸ್ನಾನ ತಗೊಂಡು ಯೆಹೋವನ ಸಾಕ್ಷಿಗಳಾದ್ವಿ.

ದೀಕ್ಷಾಸ್ನಾನ ಆದ ಮೇಲೆ ನನ್ನ ವ್ಯಕ್ತಿತ್ವದಲ್ಲಿ ಬದಲಾವಣೆಗಳನ್ನ ಮಾಡ್ಕೊಳಕ್ಕೆ ಶುರು ಮಾಡಿದೆ. ನಾನು ಮತ್ತೆ ನನ್ನ ಹೆಂಡತಿ ಆಫ್ರಿಕಾದ ತೀರಪ್ರದೇಶಕ್ಕೆ ಹೋದ್ವಿ. ಆಮೇಲೆ ಅಲ್ಲಿಂದ ಅಟ್ಲಾಂಟಿಕ್‌ ಸಾಗರವನ್ನ ದಾಟಿ ಅಮೆರಿಕಕ್ಕೆ ಹೋದ್ವಿ. ಆ ಸಮುದ್ರದ ಮಧ್ಯದಲ್ಲಿ ನಮ್ಮಿಬ್ಬರನ್ನು ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ಎಲ್ಲಿ ನೋಡಿದರೂ ಬರಿ ನೀರೇ ಇತ್ತು. ದೇವರ ಈ ಅದ್ಭುತ ಸೃಷ್ಟಿಯ ಮುಂದೆ ನಾನು ಏನೇನೂ ಅಲ್ಲ ಅಂತ ನನಗಾಗ ಗೊತ್ತಾಯ್ತು. ಸಮುದ್ರದ ಮಧ್ಯದಲ್ಲಿ ನನಗೆ ಮಾಡೋಕೆ ಬೇರೆ ಯಾವ ಕೆಲಸನೂ ಇರಲಿಲ್ಲ. ಹಾಗಾಗಿ ಬೈಬಲ್‌ ಓದೋಕೆ ತುಂಬ ಸಮಯ ಸಿಗುತ್ತಿತ್ತು. ನಾನು ಯೇಸುವಿನ ಜೀವನ ಚರಿತ್ರೆ ಓದಿದೆ. ನನಗಿಂತ ಎಷ್ಟೋ ಒಳ್ಳೆ ಸಾಮರ್ಥ್ಯ ಯೇಸುಗಿದೆ ಮತ್ತು ಅವನು ಪರಿಪೂರ್ಣ ವ್ಯಕ್ತಿಯಾಗಿದ್ದರೂ ಯಾವತ್ತೂ ಜನರ ಗಮನ ತನ್ನ ಕಡೆ ಸೆಳೆಯಬೇಕು ಅಂತ ನೆನೆಸಲಿಲ್ಲ. ಯೇಸು ಯಾವತ್ತೂ ತನ್ನ ಜೀವನವನ್ನ ಅವನ ಇಷ್ಟದಂತೆ ನಡೆಸದೆ, ತಂದೆಗೆ ಇಷ್ಟ ಆಗೋ ತರಾನೇ ನಡೆಸುತ್ತಿದ್ದ.

ನಾನು ದೇವರ ಆಳ್ವಿಕೆಗೆ ಮೊದಲ ಸ್ಥಾನ ಕೊಡಬೇಕು ಅಂತ ಅರ್ಥ ಮಾಡಿಕೊಂಡೆ

ಯೇಸುವಿನ ಜೀವನದ ಬಗ್ಗೆ ಧ್ಯಾನಿಸಿದಾಗ ನನಗೆ ಇಷ್ಟ ಬಂದಿರೋ ವಿಷಯಗಳನ್ನ ಮಾಡೋದಕ್ಕಿಂತ ದೇವರ ಆಳ್ವಿಕೆಗೆ ಮೊದಲ ಸ್ಥಾನ ಕೊಡಬೇಕು ಅಂತ ಅರ್ಥ ಮಾಡಿಕೊಂಡೆ. (ಮತ್ತಾಯ 6:33) ಕೊನೆಗೂ ನಾನು ಮತ್ತು ನನ್ನ ಹೆಂಡತಿ ಅಮೆರಿಕ ತಲುಪಿದ್ವಿ. ಅಲ್ಲೇ ಇದ್ದು ಯೆಹೋವನ ಸೇವೆ ಮಾಡಬೇಕು ಅಂತ ತೀರ್ಮಾನ ಮಾಡಿದ್ವಿ.

ಸಿಕ್ಕಿದ ಪ್ರಯೋಜನಗಳು:

ಮನಸ್ಸಿಗೆ ಬಂದ ಹಾಗೆ ಜೀವನ ಮಾಡುತ್ತಿದ್ದರಿಂದ ನನ್ನ ಜೀವನಕ್ಕೆ ಒಂದು ಉದ್ದೇಶನೇ ಇರಲಿಲ್ಲ. ಆದರೆ ಈಗ ನನ್ನನ್ನ ಮಾರ್ಗದರ್ಶಿಸೋಕೆ ಯೆಹೋವನಿದ್ದಾನೆ. ಆತನು ಕೊಡುವ ವಿವೇಕ ಸರಿ ದಾರಿ ತೋರಿಸುತ್ತೆ. (ಯೆಶಾಯ 48:17, 18) ಈಗ ನನ್ನ ಜೀವನಕ್ಕೆ ಒಂದು ಉದ್ದೇಶ ಇದೆ. ಅದೇನಂದ್ರೆ ಯೆಹೋವನನ್ನ ಆರಾಧಿಸುವುದು ಮತ್ತು ಆತನ ಬಗ್ಗೆ ಬೇರೆಯವರಿಗೆ ಕಲಿಸುವುದು.

ಬೈಬಲ್‌ ತತ್ವವನ್ನ ನಮ್ಮ ಜೀವನದಲ್ಲಿ ಅನ್ವಯಿಸಿದ್ದರಿಂದ ನಮ್ಮ ಮದುವೆ ಜೀವನ ಈಗ ಚೆನ್ನಾಗಿದೆ. ಅಷ್ಟೇ ಅಲ್ಲ ನಮಗೀಗ ಮುದ್ದಾದ ಮಗಳಿದ್ದಾಳೆ. ಅವಳು ಸತ್ಯ ದೇವರು ಯಾರು ಅಂತ ತಿಳಿದುಕೊಂಡು ಆತನನ್ನ ಪ್ರೀತಿಸುತ್ತಿದ್ದಾಳೆ, ಆರಾಧಿಸುತ್ತಿದ್ದಾಳೆ.

ಹಾಗಂತ ನಮ್ಮ ಜೀವನದಲ್ಲಿ ಸಮಸ್ಯೆನೇ ಬಂದಿಲ್ಲ ಅಂತೇನಿಲ್ಲ. ಅದನ್ನೆಲ್ಲ ಯೆಹೋವನ ಸಹಾಯದಿಂದ ಜಯಿಸಿದ್ದೀವಿ. ಏನೇ ಆದರೂ ಆತನ ಮೇಲೆ ನಂಬಿಕೆ ಇಟ್ಟು ಮುಂದೆಮುಂದೆ ಹೋಗೋಕೆ ದೃಢತೀರ್ಮಾನ ಮಾಡಿದ್ದೀವಿ.—ಜ್ಞಾನೋಕ್ತಿ 3:5, 6.