ಮಾಹಿತಿ ಇರುವಲ್ಲಿ ಹೋಗಲು

ಬದುಕು ಬದಲಾದ ವಿಧ

ಬದುಕು ಬದಲಾದ ವಿಧ

ಯೆಹೋವನ ಸಾಕ್ಷಿಗಳನ್ನ ವಿರೋಧಿಸುತ್ತಿದ್ದ, ಅನೇಕ ಹೆಂಡತಿಯರಿದ್ದ ಒಬ್ಬ ವ್ಯಕ್ತಿ ಹೇಗೆ ಯೆಹೋವನ ಸಾಕ್ಷಿಯಾದ? ಪೆಂಟಕೋಸ್ಟ್‌ ಚರ್ಚಿಗೆ ಹೋಗ್ತಿದ್ದ ಒಬ್ಬ ಪಾಸ್ಟರ್‌, ಸತ್ಯ ಕಲಿತು ತನ್ನ ನಂಬಿಕೆನ ಬದಲಾಯಿಸಿಕೊಳ್ಳೋದಕ್ಕೆ ಏನು ಕಾರಣ? ಕೀಳರಿಮೆಯಿಂದ ಬಳಲುತ್ತಿದ್ದ, ಅಪ್ಪ ಅಮ್ಮನ ಪ್ರೀತಿ ಸಿಗದೇ ಇದ್ದ ಒಬ್ಬ ಸ್ತ್ರೀ ಹೇಗೆ ಯೆಹೋವನಿಗೆ ಹತ್ರ ಆದಳು? ಹೆವೀ ಮೆಟಲ್‌ ಸಂಗೀತದ ಹುಚ್ಚಿದ್ದ ಒಬ್ಬ ವ್ಯಕ್ತಿ ಹೇಗೆ ಯೆಹೋವನ ಸಾಕ್ಷಿಯಾದ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳ್ಕೊಳ್ಳೋಕೆ ಈ ಲೇಖನ ಓದಿ.

“ನಾನೊಬ್ಬ ಒಳ್ಳೇ ಗಂಡನಾದೆ.”—ರಿಗಬರ್‌ ಹೊಯತ್ತಾ

  • ಜನನ: 1941

  • ದೇಶ: ಬೆನಿನ್‌

  • ಹಿಂದೆ: ಬಹುಪತ್ನಿತ್ವವಾದಿ, ಯೆಹೋವನ ಸಾಕ್ಷಿಗಳ ಕಡು ವಿರೋಧಿ

ಹಿನ್ನೆಲೆ:

ನಾನು ಬೆನಿನ್‌ನ ಕೊಟೊನೋ ಅನ್ನೋ ಒಂದು ದೊಡ್ಡ ಸಿಟಿಯಲ್ಲಿ ಬೆಳೆದೆ. ನಾನು ಕ್ಯಾತೊಲಿಕ್‌ ಧರ್ಮದವನಾಗಿದ್ರೂ ಚರ್ಚಿಗೆ ಕ್ರಮವಾಗಿ ಹೋಗ್ತಿರಲಿಲ್ಲ. ನಮ್ಮ ಸುತ್ತ ಮುತ್ತ ಇದ್ದ ತುಂಬಾ ಕ್ಯಾತೊಲಿಕ್‌ ಜನರಿಗೆ ಅನೇಕ ಹೆಂಡತಿಯರಿದ್ರು. ನಾವಿರೋ ಜಾಗದಲ್ಲಿ ಇದು ಸರ್ವೇ ಸಾಮಾನ್ಯವಾಗಿತ್ತು. ಅಲ್ಲಿನ ಸರ್ಕಾರನೂ ಆಗ ಅದನ್ನು ಒಪ್ಪಿಕೊಳ್ತಿತ್ತು. ಅದಕ್ಕೆ ನಾನೂ ನಾಲ್ಕು ಸ್ತ್ರೀಯರನ್ನ ಮದುವೆ ಆದೆ.

1970ರ ದಶಕದಲ್ಲಿ ನಮ್ಮ ದೇಶದಲ್ಲಿ ಒಂದು ಕ್ರಾಂತಿ ಶುರುವಾಯ್ತು. ಇದ್ರಿಂದ ನಮ್ಮ ದೇಶಕ್ಕೆ ಒಳ್ಳೇದಾಗುತ್ತೆ ಅಂತ ನಾನು ಅಂದ್ಕೊಂಡೆ. ಅದಕ್ಕೆ ಆ ಕ್ರಾಂತಿಗೆ ನನ್ನ ಪೂರ್ತಿ ಬೆಂಬಲ ಕೊಟ್ಟೆ, ಅಷ್ಟೇ ಅಲ್ಲ ರಾಜಕೀಯ ವಿಷಯಗಳಲ್ಲೂ ಕೈ ಜೋಡಿಸಿದೆ. ಆದ್ರೆ ಯೆಹೋವನ ಸಾಕ್ಷಿಗಳು ರಾಜಕೀಯ ವಿಷಯಗಳಲ್ಲಿ ತಟಸ್ಥರಾಗಿದ್ದರಿಂದ ಕ್ರಾಂತಿಕಾರಿಗಳಿಗೆ ಅವರನ್ನ ಕಂಡ್ರೆ ಆಗ್ತಿರಲಿಲ್ಲ. ಅವರಿಗೆ ತುಂಬಾ ಹಿಂಸೆ ಮಾಡ್ತಿದ್ರು. ಈ ರೀತಿ ಹಿಂಸೆ ಕೊಟ್ಟವರಲ್ಲಿ ನಾನೂ ಒಬ್ಬ. 1975ರಲ್ಲಿ ಯೆಹೋವನ ಸಾಕ್ಷಿಗಳ ಮಿಷನರಿಗಳನ್ನು ದೇಶದಿಂದನೇ ಹೊರಗೆ ಹಾಕಿದ್ರು. ಇನ್ಯಾವತ್ತೂ ಇವ್ರು ನಮ್ಮ ದೇಶಕ್ಕೆ ಕಾಲೇ ಇಡಲ್ಲ ಅಂತ ನಾನು ಅಂದ್ಕೊಂಡಿದ್ದೆ.

ನನ್ನ ಬದುಕನ್ನೇ ಬದಲಾಯಿಸಿತು ಬೈಬಲ್‌:

ನಮ್ಮ ದೇಶದಲ್ಲಿ ನಡೀತಿದ್ದ ಕ್ರಾಂತಿ 1990ರಲ್ಲಿ ಕೊನೆ ಆಯ್ತು. ನಂಗೆ ತುಂಬಾ ಆಶ್ಚರ್ಯ ಆಗಿದ್ದು ಏನಂದ್ರೆ ದೇಶದಿಂದ ಹೊರಗೆ ಹೋಗಿದ್ದ ಸಾಕ್ಷಿ ಮಿಷನರಿಗಳು ಮತ್ತೆ ವಾಪಸ್ಸು ಬರೋಕೆ ಶುರು ಮಾಡಿದ್ರು. ಆಗ ನಂಗೆ, ದೇವರು ಖಂಡಿತ ಇವ್ರು ಜೊತೆ ಇದ್ದಾರೆ ಅಂತ ಅನಿಸ್ತು. ಅದೇ ಸಮಯದಲ್ಲಿ ನಾನು ಹೊಸ ಕೆಲ್ಸಕ್ಕೆ ಸೇರಿಕೊಂಡೆ. ನನ್ನ ಜೊತೆ ಕೆಲ್ಸ ಮಾಡ್ತಿದ್ದ ಒಬ್ಬ ವ್ಯಕ್ತಿ ಯೆಹೋವನ ಸಾಕ್ಷಿ ಆಗಿದ್ದ. ಅವನು ಬೈಬಲಿನಲ್ಲಿರೋ ವಿಷ್ಯಗಳನ್ನ ನನ್ನ ಜೊತೆ ಹಂಚಿಕೊಳ್ಳೋಕೆ ಶುರು ಮಾಡ್ದ. ಯೆಹೋವ ದೇವರಲ್ಲಿ ಪ್ರೀತಿ, ನ್ಯಾಯ ಇದೆ ಅಂತ ತೋರಿಸೋ ಎಷ್ಟೋ ವಚನಗಳನ್ನ ಬೈಬಲಿಂದ ತೋರಿಸಿದ. (ಧರ್ಮೋಪದೇಶಕಾಂಡ 32:4; 1 ಯೋಹಾನ 4:8) ಆ ಗುಣಗಳು ಎಷ್ಟು ಇಷ್ಟ ಆಯ್ತು ಅಂದ್ರೆ, ಯೆಹೋವನ ಬಗ್ಗೆ ಕಲಿಬೇಕು ಅನ್ನೋ ಆಸೆ ನನ್ನಲ್ಲಿ ಚಿಗುರೊಡೆಯಿತು. ಅದಕ್ಕೆ ನಾನು ಬೈಬಲ್‌ ಕಲಿಯೋಕೆ ಶುರು ಮಾಡ್ದೆ.

ಹೋಗ್ತಾ ಹೋಗ್ತಾ ನಾನು ಕೂಟಗಳಿಗೆ ಹೋಗೋಕೂ ಶುರು ಮಾಡ್ದೆ. ಅಲ್ಲಿ ಸಾಕ್ಷಿಗಳು ಬೇಧಭಾವ ಮಾಡ್ತಿರಲಿಲ್ಲ, ಎಲ್ಲರನ್ನೂ ಒಂದೇ ತರ ನೋಡ್ತಿದ್ರು. ಈ ಪ್ರೀತಿ ನನ್ನ ಮನಮುಟ್ಟಿತು. ಸಾಕ್ಷಿಗಳ ಜೊತೆ ಜಾಸ್ತಿ ಸಹವಾಸ ಮಾಡಿದಷ್ಟು ಇವರೇ ಯೇಸುವಿನ ನಿಜವಾದ ಶಿಷ್ಯರು ಅಂತ ಬೇಗ ಅರ್ಥ ಆಯ್ತು.—ಯೋಹಾನ 13:35.

ನಾನು ಯೆಹೋವನ ಸೇವೆಮಾಡಬೇಕು ಅಂದ್ರೆ ಕ್ಯಾತೋಲಿಕ್‌ ಚರ್ಚ್‌ ಬಿಡಬೇಕು ಅಂತ ನಂಗೆ ಗೊತ್ತಿತ್ತು. ಆದ್ರೆ ಅದನ್ನ ಮಾಡೋದು ಹೇಳಿದಷ್ಟು ಸುಲಭ ಆಗಿರಲಿಲ್ಲ. ಯಾಕಂದ್ರೆ ಯಾರು ಏನು ಅಂದ್ಕೊತಾರೋ ಅನ್ನೋ ಭಯ ನನ್ನಲ್ಲಿತ್ತು. ಇದಾಗಿ ತುಂಬಾ ಸಮಯ ಆದ ಮೇಲೆ ಯೆಹೋವನ ಸಹಾಯದಿಂದ ಅಂತೂ ಇಂತೂ ಚರ್ಚ್‌ಗೆ ಹೋಗೋದನ್ನ ಬಿಟ್ಟೆ.

ಚರ್ಚನ್ನೇನೋ ತುಂಬಾ ಸುಲಭವಾಗಿ ಬಿಟ್ಟುಬಿಟ್ಟೆ. ಆದ್ರೆ ನಂಗೆ ಇನ್ನೊಂದು ಬದಲಾವಣೆ ಮಾಡ್ಕೊಳ್ಳೋಕೆ ತುಂಬಾ ಕಷ್ಟ ಆಯ್ತು. ಬೈಬಲ್‌ ಕಲಿವಾಗ ಹೆಚ್ಚು ಹೆಂಡತಿಯರನ್ನ ಮಾಡಿಕೊಳ್ಳೋದು ಯೆಹೋವನಿಗೆ ಇಷ್ಟ ಇಲ್ಲ ಅಂತ ಗೊತ್ತಾಯ್ತು. (ಆದಿಕಾಂಡ 2:18-24; ಮತ್ತಾಯ 19:4-6) ಬೈಬಲ್‌ ನಿಯಮಕ್ಕನುಸಾರ ನನ್ನ ಮೊದಲನೇ ಮದುವೆನಾ ಮಾತ್ರ ದೇವರು ಒಪ್ತಾನೆ ಅಂತ ಅರ್ಥ ಆಯ್ತು. ಅದಕ್ಕೆ ನಾನು ನನ್ನ ಮೊದಲನೇ ಹೆಂಡತಿ ಜೊತೆ ಕಾನೂನಿನ ಪ್ರಕಾರ ಮದ್ವೆ ಆದೆ, ಬೇರೆ ಹೆಂಡತಿಯರನ್ನ ಬಿಟ್ಟುಬಿಟ್ಟೆ. ಆದ್ರೆ ಅವ್ರಿಗೆ ತಮ್ಮ ಜೀವನ ನಡಿಸೋಕೆ ಏನು ಬೇಕೋ ಅದಕ್ಕೆ ಬೇಕಾದ ಏರ್ಪಾಡುಗಳನ್ನ ಮಾಡಿದೆ. ಹೋಗ್ತಾ ಹೋಗ್ತಾ ನಾನು ಮದ್ವೆ ಆಗಿದ್ದ ಇಬ್ಬರು ಸ್ತ್ರೀಯರು ಸತ್ಯ ಕಲಿತು ಯೆಹೋವನ ಸಾಕ್ಷಿಗಳಾದ್ರು.

ಸಿಕ್ಕಿದ ಪ್ರಯೋಜನಗಳು:

ಈಗಲೂ ನನ್ನ ಹೆಂಡತಿ ಕ್ಯಾತೋಲಿಕ್‌ ಚರ್ಚಿಗೆ ಹೋಗ್ತಿರೋದಾದ್ರೂ ಯೆಹೋವ ದೇವರನ್ನು ಆರಾಧನೆ ಮಾಡಬೇಕು ಅನ್ನೋ ನನ್ನ ನಿರ್ಧಾರನ ಗೌರವಿಸ್ತಾಳೆ. ಈಗ ನಾನು ಒಬ್ಬ ಒಳ್ಳೇ ಗಂಡನಾಗಿದ್ದೀನಿ ಅಂತ ಒಪ್ಕೊತಾಳೆ. ನಂಗೂ ಅದೇ ತರ ಅನ್ಸುತ್ತೆ.

ರಾಜಕೀಯದ ಮೂಲಕ ಜನರ ಸಮಸ್ಯೆಗಳನ್ನ ಬಗೆಹರಿಸಬಹುದು ಅಂತ ನಾನು ಅಂದ್ಕೊಂಡಿದ್ದೆ. ಆದ್ರೆ ಅದು ವ್ಯರ್ಥ ಅಂತ ಗೊತ್ತಾಯ್ತು. ಮನುಷ್ಯರಿಗಿರೋ ಎಲ್ಲಾ ಸಮಸ್ಯೆಗಳನ್ನ ದೇವರ ಸರ್ಕಾರ ಮಾತ್ರ ತೆಗೆದುಹಾಕುತ್ತೆ ಅಂತ ಮನದಟ್ಟಾಯ್ತು. (ಮತ್ತಾಯ 6:9, 10) ಯೆಹೋವ ದೇವರು ಪ್ರೀತಿ ತೋರಿಸಿ ನಂಗೆ ಒಳ್ಳೇ ಜೀವನ ಮಾಡೋದಕ್ಕೆ ಸಹಾಯ ಮಾಡಿದ್ದಾರೆ. ಅದಕ್ಕೆ ಎಷ್ಟು ಕೃತಜ್ಞತೆ ಹೇಳಿದ್ರೂ ಸಾಕಾಗಲ್ಲ.

“ನಂಗೆ ಬದಲಾವಣೆ ಮಾಡಿಕೊಳ್ಳೋದು ಅಷ್ಟು ಸುಲಭ ಆಗಿರಲಿಲ್ಲ.”—ಅಲೆಕ್ಸ್‌ ಲೆಮೊಸ್‌ ಸಿಲ್ವಾ

  • ಜನನ: 1977

  • ದೇಶ: ಬ್ರೆಜಿಲ್‌

  • ಹಿಂದೆ: ಪೆಂಟಕೋಸ್ಟ್‌ ಪಾಸ್ಟರ್‌

ಹಿನ್ನೆಲೆ:

ನಾನು ಹುಟ್ಟಿ ಬೆಳೆದಿದ್ದು ಇಟು ಅನ್ನೋ ಹಳ್ಳಿಯಲ್ಲಿ. ಇದು ಸಾವೋ ಪೌಲೋ ರಾಜ್ಯದಲ್ಲಿರೋ ಒಂದು ಪುಟ್ಟ ಹಳ್ಳಿ. ಆ ಊರು ಹಿಂಸೆ ಮತ್ತು ಅಪರಾಧಗಳಿಗೆ ಹೆಸರುವಾಸಿಯಾಗಿತ್ತು.

ಇದ್ರಲ್ಲಿ ನಾನೇನೂ ಕಮ್ಮಿ ಇರಲಿಲ್ಲ. ಕ್ರೂರಿಯಾಗಿದ್ದೆ, ಅನೈತಿಕ ಜೀವನ ನಡೆಸ್ತಿದ್ದೆ, ಸಾಲದು ಅಂತ ಡ್ರಗ್ಸ್‌ ಮಾರ್ತಿದ್ದೆ. ನಾನು ಹೀಗೇ ಇದ್ದರೆ ಒಂದಲ್ಲ ಒಂದು ದಿನ ಜೈಲಿಗೆ ಹೋಗ್ತೀನಿ ಇಲ್ಲ, ಸಮಾಧಿ ಸೇರ್ತೀನಿ ಅಂತ ನಂಗೆ ಅರ್ಥ ಆಯ್ತು. ಅದಕ್ಕೆ ನಾನು ಈ ಕೆಲ್ಸನಾ ಬಿಟ್ಟುಬಿಟ್ಟೆ. ಆಮೇಲೆ ಪೆಂಟಕೋಸ್ಟ್‌ ಚರ್ಚಿಗೆ ಸೇರಿಕೊಂಡೆ, ಕೊನೆಗೆ ಪಾಸ್ಟರ್‌ ಆದೆ.

ಈಗಲಾದ್ರೂ ನಾನು ಜನರ ಸೇವೆ ಮಾಡಬಹುದು ಅಂದ್ಕೊಂಡೆ. ಅದಕ್ಕೆ ಧಾರ್ಮಿಕ ಕಾರ್ಯಕ್ರಮನ ರೆಡಿಯೋ ಮೂಲಕ ಪ್ರಸಾರ ಮಾಡ್ತಿದ್ದೆ. ಇದ್ರಿಂದ ನಾನು ತುಂಬಾ ಬೇಗ ಹೆಸರುವಾಸಿಯಾದೆ. ಹೋಗ್ತಾ ಹೋಗ್ತಾ ನಂಗೆ ಒಂದು ವಿಷಯ ಅರ್ಥ ಆಯ್ತು. ಅದೇನಂದ್ರೆ ಚರ್ಚ್‌ ಅದರ ಸದಸ್ಯರ ಬಗ್ಗೆ ಸ್ವಲ್ಪನೂ ತಲೆಕೆಡಿಸಿಕೊಳ್ಳೋದಿಲ್ಲ, ದೇವರಿಗೆ ಅಷ್ಟಾಗಿ ಗೌರವನೂ ಕೊಡಲ್ಲ. ಚರ್ಚಿನ ಮುಖ್ಯ ಉದ್ದೇಶನೇ ಹಣ ಮಾಡೋದಾಗಿತ್ತು. ಅದಕ್ಕೆ ನಾನು ಚರ್ಚಿಗೆ ರಾಜಿನಾಮೆ ಕೊಟ್ಟುಬಿಟ್ಟೆ.

ನನ್ನ ಬದುಕನ್ನೇ ಬದಲಾಯಿಸಿತು ಬೈಬಲ್‌:

ಆಮೇಲೆ ನಾನು ಯೆಹೋವನ ಸಾಕ್ಷಿಗಳ ಜೊತೆ ಬೈಬಲ್‌ ಕಲಿಯೋಕೆ ಶುರು ಮಾಡ್ದೆ. ಇವ್ರು ಬೇರೆ ಧರ್ಮದವರಿಗಿಂತ ತುಂಬಾ ಭಿನ್ನರಾಗಿದ್ದಾರೆ ಅಂತ ನಂಗೆ ಅರ್ಥ ಆಯ್ತು. ಅವ್ರಲ್ಲಿ ನಂಗೆ ಎರಡು ವಿಷ್ಯ ತುಂಬಾ ಇಷ್ಟ ಆಯ್ತು. ಮೊದಲನೇದು, ಅವ್ರು ಬೇರೆಯವರನ್ನ ಪ್ರೀತಿಸಬೇಕು, ದೇವರನ್ನು ಪ್ರೀತಿಸಬೇಕು ಅಂತ ಬರೀ ಹೇಳ್ತಾ ಇರಲಿಲ್ಲ, ಮಾಡ್ತಿದ್ರು. ಎರಡನೇದು, ಅವರು ರಾಜಕೀಯ ವಿಷಯಗಳಲ್ಲಿ, ಯುದ್ಧಗಳಲ್ಲಿ ಭಾಗವಹಿಸ್ತಿರಲಿಲ್ಲ. (ಯೆಶಾಯ 2:4) ಈ ಎರಡು ವಿಷಯಗಳು ಇದೇ ಸತ್ಯ ಧರ್ಮ, ಶಾಶ್ವತ ಜೀವಕ್ಕೆ ನಡೆಸೋ ದಾರಿನೂ ಇದೇ ಅಂತ ಅರ್ಥಮಾಡ್ಕೊಳ್ಳೋಕೆ ಸಹಾಯ ಮಾಡ್ತು.—ಮತ್ತಾಯ 7:13, 14.

ಯೆಹೋವನಿಗೆ ಇಷ್ಟ ಆಗೋ ತರ ಇರಬೇಕಂದ್ರೆ ನಾನು ನನ್ನ ಜೀವನದಲ್ಲಿ ತುಂಬಾ ಬದಲಾವಣೆಗಳನ್ನು ಮಾಡ್ಕೊಬೇಕಿತ್ತು. ನಾನು ದೀನತೆ ಬೆಳೆಸಿಕೊಳ್ಳಬೇಕಿತ್ತು, ನನ್ನ ಕುಟುಂಬನಾ ಚೆನ್ನಾಗಿ ನೋಡ್ಕೊಬೇಕಿತ್ತು. ಮೊದ ಮೊದಲು ಕಷ್ಟ ಆದ್ರೂ ಯೆಹೋವ ದೇವರ ಸಹಾಯದಿಂದ ಈ ಎಲ್ಲಾ ಬದಲಾವಣೆಗಳನ್ನ ಮಾಡ್ಕೊಂಡೆ. ನನ್ನ ಹೆಂಡತಿ ನನಗಿಂತ ಮೊದಲೇ ಬೈಬಲ್‌ ಕಲಿಯೋಕೆ ಶುರು ಮಾಡಿದ್ದಳು. ನಾನು ಬದಲಾವಣೆ ಮಾಡ್ಕೊಳ್ಳೋದನ್ನ ನೋಡಿ ಅವಳಿಗೆ ಎಷ್ಟು ಖುಷಿ ಆಯ್ತು ಅಂದ್ರೆ ಅವಳು ತುಂಬಾ ಬೇಗ ಪ್ರಗತಿ ಮಾಡಿದಳು. ಇದಾಗಿ ಸ್ವಲ್ಪದರಲ್ಲೇ ನಾವಿಬ್ಬರೂ ಯೆಹೋವನ ಸಾಕ್ಷಿಗಳಾಗಬೇಕು ಅಂತ ನಿರ್ಧಾರ ಮಾಡಿದ್ವಿ. ಒಂದೇ ದಿನ ದೀಕ್ಷಾಸ್ನಾನನೂ ತಗೊಂಡ್ವಿ.

ಸಿಕ್ಕಿದ ಪ್ರಯೋಜನಗಳು:

ನಾವು ಕುಟುಂಬವಾಗಿ ತುಂಬಾ ಖುಷಿ ಖುಷಿಯಾಗಿದ್ದೀವಿ. ನಾವು, ನಮ್ಮ ಮೂರು ಮಕ್ಕಳಿಗೆ ಸತ್ಯ ಕಲಿಸಿದ್ದೀವಿ, ಯೆಹೋವನೊಟ್ಟಿಗೆ ಒಳ್ಳೇ ಸ್ನೇಹ ಸಂಬಂಧ ಕಾಪಾಡಿಕೊಳ್ಳೋಕೆ ಸಹಾಯ ಮಾಡಿದ್ದೀವಿ. ಯೆಹೋವನು ಬೈಬಲ್‌ ಸತ್ಯನ ತಿಳಿಸಿ ನನ್ನನ್ನ ಆತನ ಕಡೆ ಸೆಳೆದಿರೋದಕ್ಕೆ ತುಂಬಾ ಥ್ಯಾಂಕ್ಸ್‌ ಹೇಳ್ತೀನಿ. ಬೈಬಲ್‌ ಎಂಥವರನ್ನ ಬೇಕಾದ್ರೂ ಬದಲಾಯಿಸುತ್ತೆ! ಅದಕ್ಕೆ ಜೀವಂತ ಸಾಕ್ಷಿ ನಾನೇ.

“ನಾನೀಗ ಖುಷಿಯಾಗಿದ್ದೀನಿ, ಒಳ್ಳೇ ಮನಸ್ಸಾಕ್ಷಿನೂ ಇದೆ.”—ವಿಕ್ಟೋರಿಯ ಟೊಂಗ್‌

  • ಜನನ: 1957

  • ದೇಶ: ಆಸ್ಟ್ರೇಲಿಯ

  • ಹಿಂದೆ: ಕಹಿ ಬಾಲ್ಯದ ದಿನಗಳು

ಹಿನ್ನೆಲೆ:

ನ್ಯೂ ಸೌತ್‌ ವೇಲ್ಸ್‌ನ ನ್ಯೂಕಾಸ್ಟಲ್‌ ಎಂಬಲ್ಲಿ ನಾನು ಹುಟ್ಟಿ ಬೆಳೆದೆ. ನಮ್ಮ ಅಪ್ಪ ಅಮ್ಮಗೆ ಏಳು ಜನ ಮಕ್ಕಳು. ಅದ್ರಲ್ಲಿ ನಾನೇ ದೊಡ್ಡವಳು. ಅಪ್ಪ ಕಂಠಪೂರ್ತಿ ಕುಡಿತಿದ್ರು, ಅಮ್ಮ ಬಾಯಿಗೆ ಬಂದ ಹಾಗೆ ಬಯ್ತಿದ್ರು. ಸಾಲದೂ ಅಂತ ಹಿಗ್ಗಾ ಮುಗ್ಗಾ ಹೊಡೀತಿದ್ರು. ಅಮ್ಮ ಯಾವಾಗಲೂ ನಂಗೆ, ‘ನೀನು ತುಂಬಾ ಕೆಟ್ಟವಳು ನಿನ್ನನ್ನ ನರಕದಲ್ಲಿ ಹಾಕಿ ಸುಡ್ತಾರೆ’ ಅಂತ ಬಯ್ತಿದ್ರು. ಈ ಮಾತುಗಳು ನನ್ನ ಮನಸ್ಸಲ್ಲಿ ಮಾಸಿ ಹೋಗದ ಗಾಯ ಮಾಡ್ತು.

ಅಮ್ಮ ಕೆಲವು ಸಲ ನಂಗೆ ಎಷ್ಟು ಹೊಡೀತಿದ್ರೂ ಅಂದ್ರೆ ಆ ನೋವಿಂದ ಸ್ಕೂಲಿಗೆ ಹೋಗೋಕೆ ಆಗ್ತಿರಲಿಲ್ಲ. ನಂಗೆ 11 ವರ್ಷ ಆದಾಗ ಅಧಿಕಾರಿಗಳು ನನ್ನನ್ನ ಸರ್ಕಾರಿ ಸಂಘ ಸಂಸ್ಥೆಗೆ ಸೇರಿಸಿದ್ರು, ಆಮೇಲೆ ಕಾನ್ವೆಂಟಿಗೆ ಹಾಕಿದ್ರು. 14ನೇ ವಯಸ್ಸಿನಲ್ಲಿ ನಾನು ಕಾನ್ವೆಂಟಿಂದ ಓಡಿ ಹೋಗಿಬಿಟ್ಟೆ. ಮನೆಗೆ ವಾಪಸ್ಸು ಹೋಗೋಕೆ ಮನಸ್ಸು ಒಪ್ಪಲಿಲ್ಲ, ಅದಕ್ಕೆ ಸಿಡ್ನಿಯ ಕೀಂಗ್ಸ್‌ ಕ್ರಾಸ್‌ನ ಬೀದಿಗಳಲ್ಲಿ ದಿನಗಳನ್ನ ದೂಡೋಕೆ ಶುರು ಮಾಡ್ದೆ.

ಈ ರೀತಿ ಬೀದಿ ಪಾಲಾದ ಮೇಲೆ ಕುಡಿಯೋಕೆ, ಡ್ರಗ್ಸ್‌ ತಗೊಳೋಕೆ, ಅಶ್ಲೀಲ ಸಾಹಿತ್ಯಗಳನ್ನು ನೋಡೋಕೆ ಶುರು ಮಾಡ್ದೆ. ವೇಶ್ಯಾವಾಟಿಕೆಯಲ್ಲೂ ತೊಡಗಿಸಿಕೊಂಡೆ. ಒಂದು ಸಲ, ನನ್ನ ಜೀವನದಲ್ಲಿ ಭಯಾನಕ ಘಟನೆ ನಡೀತು. ನಾನು ಒಬ್ಬ ನೈಟ್‌ ಕ್ಲಬ್‌ ಮಾಲೀಕನ ಅಪಾರ್ಟ್‌ಮೆಂಟನಲ್ಲಿ ಇದ್ದೆ. ಒಂದಿನ ಸಂಜೆ ಅವನನ್ನ ನೋಡೋಕೆ ಯಾರೋ ಇಬ್ರು ವ್ಯಕ್ತಿಗಳು ಬಂದ್ರು. ಆಗ ಅವನು ನಂಗೆ, ನೀನು ಬೆಡ್‌ರೂಮ್‌ ಒಳಗೆ ಹೋಗು ಅಂದ. ಆದ್ರೆ ಅವ್ರು ಏನು ಮಾತಾಡ್ತಿದ್ರೋ ಅದು ನಂಗೆ ಕೇಳಿಸ್ತಿತ್ತು. ಆ ಮಾಲೀಕ ನನ್ನನ್ನ ಅವ್ರಿಗೆ ಮಾರೋಕೆ ಪ್ಲಾನ್‌ ಮಾಡ್ತಿದ್ದ. ಸರಕು ಸಾಗಣೆ ಮಾಡ್ತಿದ್ದ ಹಡಗಲ್ಲಿ ಬಚ್ಚಿಟ್ಟು ಜಪಾನಿನ ಒಂದು ಬಾರ್‌ನಲ್ಲಿ ಕೆಲ್ಸ ಮಾಡೋಕೆ ಮಾರಬೇಕು ಅಂತ ಪ್ಲಾನ್‌ ಮಾಡ್ತಿದ್ರು. ಇದನ್ನ ಕೇಳಿ ನಂಗೆ ಎಷ್ಟು ಭಯ ಆಯ್ತು ಅಂದ್ರೆ ನಾನು ಬಾಲ್ಕನಿಯಿಂದ ಹಾರಿ ಜೀವ ಉಳಿಸಿಕೊಳ್ಳೋದಕ್ಕೆ ಓಡಿ ಹೋಗಿಬಿಟ್ಟೆ.

ಇದಾದ ಮೇಲೆ ನಂಗೆ, ಸಿಡ್ನಿನ ಸುತ್ತಾಡಿ ನೋಡೋಕೆ ಬಂದ ಒಬ್ಬ ವ್ಯಕ್ತಿ ಸಿಕ್ಕಿದ. ಅವನ ಹತ್ರ ನಾನು ನನ್ನ ಕಣ್ಮೀರಿನ ಕಥೆನಾ ಹೇಳಿಕೊಂಡೆ. ಅವನು ನನ್ನ ಕಥೆ ಕೇಳಿ ಏನಾದ್ರೂ ದುಡ್ಡುಕಾಸಿನ ಸಹಾಯ ಮಾಡಬಹುದು ಅಂತ ಅಂದ್ಕೊಂಡಿದ್ದೆ. ಆದ್ರೆ ನನ್ನನ್ನ ಅವನ ಮನೆಗೆ ಕರಕೊಂಡು ಹೋದ, ಊಟ ಕೊಟ್ಟ, ಉಳ್ಕೊಳ್ಳೋಕೆ ಜಾಗನೂ ಕೊಟ್ಟ. ಹೀಗೆ ದಿನಗಳು ಕಳೀತಾ ಕಳೀತಾ ಒಂದು ವರ್ಷ ಆದ ಮೇಲೆ ನಾವಿಬ್ರೂ ಮದ್ವೆ ಆದ್ವಿ.

ನನ್ನ ಬದುಕನ್ನೇ ಬದಲಾಯಿಸಿತು ಬೈಬಲ್‌:

ಯೆಹೋವನ ಸಾಕ್ಷಿಗಳ ಜೊತೆ ನಾನು ಬೈಬಲ್‌ ಕಲಿಯೋಕೆ ಮನಸ್ಸು ಮಾಡ್ದೆ. ಆಗ ನಂಗೆ ಕೆಲವು ಸಲ ಸಮಾಧಾನ ಆಗ್ತಿತ್ತು, ಇನ್ನೂ ಕೆಲವು ಸಲ ಕೋಪ ಬರ್ತಿತ್ತು. ಯಾಕಂದ್ರೆ ನಾವು ಅನುಭವಿಸೋ ಎಲ್ಲಾ ಕೆಟ್ಟ ವಿಷ್ಯಗಳಿಗೆ ಸೈತಾನ ಕಾರಣ ಅಂತ ಗೊತ್ತಾದಾಗ ತುಂಬಾ ಕೋಪ ಬರ್ತಿತ್ತು. ನಮಗೆ ಬರೋ ಕಷ್ಟಗಳಿಗೆಲ್ಲಾ ದೇವರೇ ಕಾರಣ ಅಂತ ಮುಂಚೆ ಕಲ್ತಿದ್ದೆ. ಆದ್ರೆ ನಾವು ಮಾಡೋ ತಪ್ಪುಗಳಿಗೆ ದೇವರು ನಮ್ಮನ್ನ ನರಕದಲ್ಲಿ ಹಾಕಿ ಶಿಕ್ಷೆ ಕೊಡಲ್ಲ ಅಂತ ಗೊತ್ತಾದಾಗ ಮನಸ್ಸಿಗೆ ನೆಮ್ಮದಿಯಾಯ್ತು. ಯಾಕಂದ್ರೆ ನನ್ನನ್ನ ನರಕದಲ್ಲಿ ಹಾಕಿ ಸುಟ್ಟು ಹಾಕ್ತಾರೆ ಅನ್ನೋ ಭಯ ನನ್ನನ್ನ ಕಾಡ್ತಿತ್ತು.

ಯೆಹೋವನ ಸಾಕ್ಷಿಗಳು ನಂಗೆ ಯಾಕೆ ಇಷ್ಟ ಆದ್ರು ಅಂದ್ರೆ, ಅವ್ರು ಏನೇ ತೀರ್ಮಾನ ಮಾಡೋವಾಗಲೂ ಬೈಬಲ್‌ ಆಧಾರಿತವಾಗಿ ಮಾಡ್ತಿದ್ರು. ಏನನ್ನ ನಂಬ್ತಿದ್ರೋ ಅದೇ ತರ ನಡ್ಕೊತಿದ್ರು. ನಾನು ಅಷ್ಟು ಸುಲಭವಾಗಿ ಯಾವ ವಿಷ್ಯನೂ ಒಪ್ಕೊತಿರಲಿಲ್ಲ. ಕೆಲವು ಸಲ ಅವ್ರಿಗೆ ಬೇಜಾರಾಗೋ ತರ ಮಾತಾಡಿಬಿಡ್ತಿದ್ದೆ, ನಡ್ಕೊಬಿಡ್ತಿದ್ದೆ. ಆದ್ರೂ ಅವರು ನನ್ನನ್ನ ಪ್ರೀತಿ, ಗೌರವದಿಂದ ನೋಡ್ಕೊತಿದ್ರು.

ಕೀಳರಿಮೆ ಅನ್ನೋದು ನನ್ನನ್ನ ಕಿತ್ತು ತಿಂತಿತ್ತು. ನಾನು ಯಾವುದಕ್ಕೂ ಲಾಯಕ್ಕಿಲ್ಲ ಅಂದ್ಕೊತಿದ್ದೆ, ನನ್ನ ನಾನೇ ದ್ವೇಷಿಸ್ತಿದ್ದೆ. ಈ ಹೋರಾಟದಿಂದ ಹೊರಗೆ ಬರೋಕೆ ತುಂಬ ಕಷ್ಟಪಡ್ತಿದ್ದೆ. ದೀಕ್ಷಾಸ್ನಾನ ಪಡೆದು ವರ್ಷಗಳೇ ಉರುಳಿದ್ರೂ ನಾನು ಈ ಭಾವನೆ ವಿರುದ್ಧ ಹೋರಾಡ್ತಾನೇ ಇದ್ದೆ. ಯೆಹೋವ ದೇವರ ಮೇಲೆ ನಂಗೆ ಬೆಟ್ಟದಷ್ಟು ಪ್ರೀತಿ ಇದೆ ಅಂತ ನಂಗೆ ಗೊತ್ತಿತ್ತು. ಆದ್ರೆ ನನ್ನಂಥವಳನ್ನ ಯೆಹೋವ ಯಾವತ್ತೂ ಪ್ರೀತಿ ಮಾಡಲ್ಲ ಅನ್ನೋ ತಪ್ಪು ಕಲ್ಪನೆ ನನ್ನ ಮನಸ್ಸಲ್ಲಿ ಮನೆ ಮಾಡಿತ್ತು.

ಕೊನೆಗೂ ನಾನು ದೀಕ್ಷಾಸ್ನಾನ ಆಗಿ 15 ವರ್ಷ ಆದಮೇಲೆ ನನ್ನ ಯೋಚ್ನೆನ ಬದಲಾಯಿಸಿಕೊಂಡೆ. ರಾಜ್ಯ ಸಭಾಗೃಹದಲ್ಲಿ ಒಬ್ಬ ಭಾಷಣಗಾರ ಯಾಕೋಬ 1:23, 24ನೇ ವಚನ ತೋರಿಸಿದ್ರು. ಅದರಲ್ಲಿ ದೇವರ ವಾಕ್ಯ ಕನ್ನಡಿ ತರ, ದೇವರು ನಮ್ಮನ್ನ ಹೇಗೆ ನೋಡ್ತಾರೋ ಅದೇ ರೀತಿ ನಾವೂ ನೋಡಬೇಕು ಅಂತ ವಿವರಿಸಿದ್ರು. ಯೆಹೋವ ದೇವರು ನಾನು ಅಂದ್ಕೊಂಡಿದ್ದ ತರ ನನ್ನನ್ನ ಕೀಳಾಗಿ ನೋಡಲ್ಲ, ನನ್ನಲ್ಲಿರೋ ಒಳ್ಳೇದನ್ನ ನೋಡ್ತಾನೆ ಅನ್ನೋದು ನಂಗೆ ಗೊತ್ತಾಯ್ತು. ಮೊದಮೊದಲು ಈ ವಿಷ್ಯನಾ ಒಪ್ಕೊಳ್ಳೋಕೆ ತುಂಬಾ ಕಷ್ಟ ಆಯ್ತು. ಯಾಕಂದ್ರೆ ನನ್ನಂಥವಳನ್ನ ಯೆಹೋವ ಪ್ರೀತಿಸೋಕೆ ಸಾಧ್ಯನೇ ಇಲ್ಲ ಅಂತ ನಾನು ಅಂದ್ಕೊಂಡಿದ್ದೆ.

ಸ್ವಲ್ಪ ದಿನ ಆದ ಮೇಲೆ ನಾನು ಒಂದು ವಚನ ಓದಿದೆ. ಅದು ನನ್ನ ಜೀವನನೇ ಬದಲಾಯಿಸಿಬಿಡ್ತು. ಅದೇ ಯೆಶಾಯ 1:18. ಅಲ್ಲಿ ಯೆಹೋವ ಹೀಗೆ ಹೇಳಿದ್ದಾರೆ: “ಬನ್ನಿ, ನಾವೀಗ ನಮ್ಮ ಮಧ್ಯ ಇರೋ ವಿಷ್ಯಗಳನ್ನ ಇತ್ಯರ್ಥ ಮಾಡ್ಕೊಳ್ಳೋಣ, ನಿಮ್ಮ ಪಾಪಗಳು ಕಡುಗೆಂಪಾಗಿದ್ರೂ ಅವನ್ನ ಹಿಮದ ತರ ಬೆಳ್ಳಗೆ ಮಾಡ್ತೀನಿ.” ಇದನ್ನ ಓದಿದ ಮೇಲೆ, ಯೆಹೋವ ನನ್ನ ಹತ್ರ ಈ ರೀತಿ ಹೇಳಿದ ತರ ಇತ್ತು: “ಬಾ ವಿಕ್ಕಿ, ನಮ್ಮ ಮಧ್ಯೆ ಇರೋ ಸಮಸ್ಯೆನಾ ಇತ್ಯರ್ಥ ಮಾಡ್ಕೊಳ್ಳೋಣ. ನಂಗೆ ನಿನ್ನ ಬಗ್ಗೆ ಚೆನ್ನಾಗಿ ಗೊತ್ತು. ನೀನು ಮಾಡಿರೋ ತಪ್ಪು ಪಾಪಗಳೆಲ್ಲಾ ಗೊತ್ತು. ನಿನ್ನ ಹೃದಯ ಎಂಥದ್ದು ಅಂತಾನೂ ಗೊತ್ತು. ನಾನು ನಿನ್ನನ್ನು ತುಂಬಾ ಪ್ರೀತಿಸ್ತೀನಿ.”

ಆವತ್ತು ರಾತ್ರಿ ನಂಗೆ ನಿದ್ದೆ ಮಾಡೋಕೆ ಆಗಲಿಲ್ಲ. ಯೆಹೋವ ನನ್ನನ್ನ ಪ್ರೀತಿಸ್ತಾರಾ ಅನ್ನೋ ಅನುಮಾನ ಇನ್ನೂ ಕಾಡ್ತಾನೇ ಇತ್ತು. ಆಗ ನಾನು ಯೇಸುವಿನ ಬಿಡುಗಡೆ ಬೆಲೆ ಬಗ್ಗೆ ಯೋಚ್ನೆ ಮಾಡ್ದೆ. ಯೆಹೋವ ಎಷ್ಟೊಂದು ವರ್ಷಗಳಿಂದ ನನ್ನ ಜೊತೆ ತಾಳ್ಮೆಯಿಂದ ಇದ್ದಾರೆ ಪ್ರೀತಿಯಿಂದ ನಡ್ಕೊತಿದ್ದಾರೆ. ಒಂದುವೇಳೆ ಈ ಸಂಶಯದ ಹುತ್ತವನ್ನ ಹಾಗೇ ಇಟ್ಕೊಂಡ್ರೆ ಯೆಹೋವ ದೇವರಿಗೆ, ‘ನಿನ್ನ ಪ್ರೀತಿ ನನ್ನ ಹೃದಯವನ್ನು ಮುಟ್ಟೊಷ್ಟು ದೊಡ್ಡದಾಗಿಲ್ಲ, ನನ್ನ ಪಾಪನ ತೊಳೆಯೋಕೆ ನಿನ್ನ ಮಗನ ಬಲಿದಾನ ಸಾಕಾಗೋದಿಲ್ಲ’ ಅಂತ ಹೇಳಿದ ತರ ಇರ್ತಿತ್ತು. ಅಷ್ಟೇ ಅಲ್ಲ ಈ ಬಿಡುಗಡೆ ಬೆಲೆ ಯಾವ ಪ್ರಯೋಜ್ನಕ್ಕೂ ಬರೋದಿಲ್ಲ ಅಂತ ಯೆಹೋವನ ಕಡೆ ವಾಪಸ್ಸು ಎಸೆಯೋ ತರ ಇರ್ತಿತ್ತು. ಯೆಹೋವ ಕೊಟ್ಟಿರೋ ಈ ಅಮೂಲ್ಯ ಉಡುಗೊರೆ ಬಗ್ಗೆ ಯೋಚ್ನೆ ಮಾಡಿದ್ರಿಂದ ಖಂಡಿತ ಯೆಹೋವ ನನ್ನನ್ನ ಪ್ರೀತಿಸ್ತಾರೆ ಅನ್ನೋ ಸತ್ಯ ಮನದಟ್ಟಾಯ್ತು.

ಸಿಕ್ಕಿದ ಪ್ರಯೋಜನಗಳು:

ನಾನೀಗ ಖುಷಿ ಖುಷಿಯಾಗಿದ್ದೀನಿ. ಒಳ್ಳೇ ಮನಸಾಕ್ಷಿನೂ ಇದೆ. ಅಲ್ಲದೇ ನನ್ನ ಮದ್ವೆ ಜೀವನನೂ ಚೆನ್ನಾಗಿದೆ. ಈಗ ನಾನು ನನ್ನ ಅನುಭವನ ಉಪಯೋಗಿಸಿ ಬೇರೆವ್ರಿಗೆ ಸಹಾಯ ಮಾಡ್ತಿದ್ದೀನಿ. ಇದು ನಂಗೆ ಖುಷಿ ಕೊಡ್ತಿದೆ. ನಾನು ಮುಂಚೆಗಿಂತ ಯೆಹೋವನಿಗೆ ಇನ್ನೂ ಹತ್ರ ಆಗಿದ್ದೀನಿ ಅನಿಸ್ತಿದೆ.

“ಇದು ನನ್ನ ಪ್ರಾರ್ಥನೆಗೆ ಸಿಕ್ಕಿದ ಉತ್ರ ಆಗಿತ್ತು.”—ಸರ್ಗೆ ಬೊಟಾನ್‌ಕಿನ್‌

  • ಜನನ: 1974

  • ದೇಶ: ರಷ್ಯಾ

  • ಹಿಂದೆ: ಹೆವಿ ಮೆಟಲ್‌ ಸಂಗೀತದ ಹುಚ್ಚು

ಹಿನ್ನೆಲೆ:

ನಾನು ಹುಟ್ಟಿದ್ದು, ವಾಟ್‌ಕಿನ್‌ಸ್ಕ್‌. ಇದು ಪ್ಯೊಟೊರಿ ಲೀಚ್‌ ಚಿಕ್ವಾಸ್ಕಿ ಅನ್ನೋ ಪ್ರಸಿದ್ಧ ಸಂಗೀತ ಸಂಯೋಜಕನ ಹುಟ್ಟೂರು. ನಮ್ಮದು ಬಡ ಕುಟುಂಬ. ಅಪ್ಪ ತುಂಬಾ ಒಳ್ಳೇವ್ರು. ಅವ್ರಲ್ಲಿ ತುಂಬಾ ಒಳ್ಳೇ ಗುಣಗಳಿತ್ತು. ಆದ್ರೆ ಅವ್ರು ಜಾಸ್ತಿ ಕುಡಿತಿದ್ರಿಂದ ಅವ್ರ ಒಳ್ಳೇತನ ಮರೆಯಾಗ್ತಿತ್ತು. ಮನೆಲಿ ಶಾಂತಿ ಸಮಾಧಾನನೇ ಇರಲಿಲ್ಲ.

ನಾನು ಓದೋದರಲ್ಲಿ ಅಷ್ಟಕಷ್ಟೇ. ವರ್ಷಗಳು ಉರುಳುತ್ತಾ ಹೋದಂತೆ ನನ್ನಲ್ಲಿ ಕೀಳರಿಮೆ ಜಾಸ್ತಿ ಆಯ್ತು. ನಾನು ಯಾವುದಕ್ಕೂ ಪ್ರಯೋಜ್ನಕ್ಕಿಲ್ಲ ಅನ್ನೋ ನೋವು ನನ್ನನ್ನ ಕಿತ್ತು ತಿಂತಿತ್ತು. ಯಾವ ವಿಷ್ಯದಲ್ಲೂ ಮುಂದೆಕ್‌ ಬರ್ತಿರಲಿಲ್ಲ, ಹಿಂದೇಟು ಹಾಕ್ತಿದ್ದೆ. ಬೇರೆಯವರನ್ನೂ ನಂಬ್ತಿರಲಿಲ್ಲ. ಅದಕ್ಕೆ ಸ್ಕೂಲಿಗೆ ಹೋಗೋಕೆ ನಂಗೆ ತುಂಬಾ ಕಷ್ಟ ಆಗ್ತಿತ್ತು. ನಾನು ಒಬ್ಬನೇ ಇದ್ದಾಗ ಚೆನ್ನಾಗಿ ಮಾತಾಡ್ತಿದ್ದೆ. ಆದ್ರೆ ಬೇರೆವ್ರು ಮುಂದೆ ಇದ್ದಾಗ ನಾಲಿಗೆನೇ ಹೊರಳ್ತಿರಲಿಲ್ಲ. ಕೆಲವು ಸಲ ಚಿಕ್ಕಪುಟ್ಟ ವಿಷ್ಯಗಳನ್ನೂ ನನ್ನ ಕೈಲಿ ಹೇಳೋಕಾಗ್ತಿರಲಿಲ್ಲ. ಅದಕ್ಕೆ ನನ್ನ ಹೈಸ್ಕೂಲ್‌ ರಿಪೋರ್ಟ್‌ ಕಾರ್ಡಲ್ಲಿ “ಪದ ಜ್ಞಾನ ಕಡಿಮೆ, ಅನಿಸಿಕೆಗಳನ್ನು ವ್ಯಕ್ತಪಡಿಸೋದ್ರಲ್ಲಿ ಹಿಂದುಳಿದಿದ್ದಾನೆ” ಅಂತ ಬರೆದುಬಿಟ್ಟಿದ್ರು. ಇದನ್ನ ನೋಡ್ದಾಗಂತೂ ನನ್ನ ಮನಸ್ಸು ನುಚ್ಚು ನೂರಾಯ್ತು. ನನ್ನ ಮೇಲೆ ನಂಗಿದ್ದ ಅಲ್ಪಸ್ವಲ್ಪ ನಂಬಿಕೆನೂ ಮಣ್ಣುಪಾಲಾಯ್ತು. ಆಗ ನಿಜಕ್ಕೂ ನನ್ನ ಜೀವನಕ್ಕೆ ಒಂದು ಅರ್ಥ ಇದ್ಯಾ ಅನ್ನೋ ಪ್ರಶ್ನೆ ಕಾಡೋಕೆ ಶುರು ಆಯ್ತು.

ನಾನು ಹದಿವಯಸ್ಸಿನಲ್ಲೇ ಕುಡಿಯೋ ಚಟ ಹತ್ತಿಸಿಕೊಂಡೆ. ಮೊದ ಮೊದಲು ಕುಡಿವಾಗ ಖುಷಿ ಅನಿಸ್ತಿತ್ತು, ಆದ್ರೆ ಯಾವಾಗ ಜಾಸ್ತಿ ಕುಡಿಯೋಕೆ ಶುರು ಮಾಡಿದ್ನೋ ಆಗ ಮನಸ್ಸಾಕ್ಷಿ ಚುಚ್ಚೋಕೆ ಶುರು ಮಾಡ್ತು. ಜೀವನಕ್ಕೆ ಅರ್ಥನೇ ಇಲ್ಲ ಅನಿಸ್ತು. ನಾನು ಕೆಲವು ಸಲ ಎಷ್ಟು ಕುಗ್ಗಿ ಹೋಗ್ತಿದ್ದೆ ಅಂದ್ರೆ ತುಂಬಾ ದಿನಗಳ ವರೆಗೆ ಮನೆಯಿಂದ ಆಚೆನೇ ಬರ್ತಿರಲಿಲ್ಲ, ಆತ್ಮಹತ್ಯೆ ಮಾಡ್ಕೊಬೇಕು ಅನ್ನೋ ಯೋಚ್ನೆನೂ ಬರ್ತಿತ್ತು.

ನಂಗೆ 20 ವರ್ಷ ಇದ್ದಾಗ ನನ್ನ ಮನಸ್ಸಿಗೆ ಖುಷಿ ಕೊಡೋ ವಿಷ್ಯ ಸಿಕ್ತು. ಅದೇ ಹೆವೀ ಮೆಟಲ್‌ ಮ್ಯೂಸಿಕ್‌. ಆ ಮ್ಯೂಸಿಕ್‌ ಕೇಳೋವಾಗ ಏನೋ ಒಂಥರಾ ಬಲ ಸಿಕ್ತಿತ್ತು. ಅದಕ್ಕೆ ಆ ತರ ಮ್ಯೂಸಿಕ್‌ ಕೇಳರೋನ್ನ ಹುಡಿಕ್ದೆ. ಉದ್ದ ಕೂದಲು ಬಿಟ್ಟೆ, ಕಿವಿ ಚುಚ್ಚಿಕೊಂಡೆ, ನಾನು ತುಂಬಾ ಇಷ್ಟಪಡ್ತಿದ್ದ ಸಂಗೀತಗಾರರ ತರನೇ ಬಟ್ಟೆ ಹಾಕೋಕೆ ಶುರು ಮಾಡ್ದೆ. ಆದ್ರೆ ಇದ್ರಿಂದ ಸಿಕ್ಕದ ನೆಮ್ಮದಿ ಒಂದೆರಡು ದಿನಕ್ಕಷ್ಟೇ. ಆಮೇಲೆ ನನ್ನ ಕೋಪ ತಾಪ ಜಾಸ್ತಿ ಆಯ್ತು, ಯಾವಾಗಲೂ ಮನೆವ್ರ ಜೊತೆ ಜಗಳ ಆಡ್ತಿದ್ದೆ.

ಮನಸ್ಸಿಗೆ ಖುಷಿ ನೆಮ್ಮದಿ ಸಿಗುತ್ತೆ ಅಂತ ಮ್ಯೂಸಿಕ್‌ ಮೊರೆ ಹೋದೆ. ಆದ್ರೆ ಆಗಿದ್ದೇ ಬೇರೆ. ಸಂಗೀತ ಕೇಳ್ತಾ ಕೇಳ್ತಾ ನಾನು ನಾನಾಗೇ ಇರಲಿಲ್ಲ. ಯಾರನ್ನ ಇಷ್ಟಪಡ್ತಿದ್ನೋ ಆ ಸಂಗೀತಗಾರರು ತೆರೆಯ ಹಿಂದೆ ಕೆಟ್ಟ ಕೆಲ್ಸಗಳನ್ನ ಮಾಡ್ತಿದ್ದಾರೆ ಅಂತ ಗೊತ್ತಾದಾಗ ‘ಅಯ್ಯೋ ಮೋಸ ಹೋದನಲ್ಲಾ’ ಅಂತ ಬೇಜಾರಾಯ್ತು.

ಒಂದು ಸಲ ಅಂತೂ ಏನೇ ಆದ್ರೂ ಆತ್ಮಹತ್ಯೆ ಮಾಡ್ಕೊಬೇಕು ಅಂತ ತೀರ್ಮಾನ ಮಾಡಿಬಿಟ್ಟೆ. ಆದ್ರೆ ನನ್ನನ್ನ ತಡೆದಿದ್ದು ನಮ್ಮ ಅಮ್ಮನ ಪ್ರೀತಿ. ಅಮ್ಮ ನನ್ನ ತುಂಬಾ ಪ್ರೀತಿ ಮಾಡ್ತಿದ್ರು. ನಂಗೋಸ್ಕರ ಎಷ್ಟೊಂದು ತ್ಯಾಗ ಮಾಡಿದ್ರು. ಈ ಕಡೆ ಬದುಕೋಕೂ ಆಗದೇ ಸಾಯೋಕೂ ಆಗದೇ ನಾನು ತುಂಬಾ ಕಷ್ಟ ಪಡ್ತಿದ್ದೆ.

ಈ ರೀತಿ ಗೊಂದಲದಲ್ಲಿದ್ದ ನಾನು, ನೆಮ್ಮದಿಗೋಸ್ಕರ ಕ್ಲಾಸಿಕಲ್‌ ರಷ್ಯನ್‌ ಸಾಹಿತ್ಯ ಓದೋಕೆ ಶುರು ಮಾಡ್ದೆ. ಅದರಲ್ಲಿ ಒಂದು ಕತೆ ಇತ್ತು. ಆ ಕತೆಯ ಹೀರೋ ಚರ್ಚಿನಲ್ಲಿ ಸೇವೆ ಮಾಡ್ತಿದ್ದ. ಇದನ್ನ ಓದಿದ ಮೇಲೆ ನಾನೂ ಬೇರೆವ್ರಿಗೋಸ್ಕರ, ದೇವರಿಗೋಸ್ಕರ ಏನಾದ್ರೂ ಮಾಡಬೇಕು ಅನ್ನೋ ಆಸೆ ಚಿಗುರೊಡೆಯಿತು. ಪ್ರಾರ್ಥನೆ ಮಾಡಿ ನನ್ನ ಮನಸ್ಸಲ್ಲಿ ಇರೋದನ್ನೆಲ್ಲಾ ದೇವರ ಹತ್ರ ಹೇಳಿಕೊಂಡೆ. ಈ ತರ ನಾನು ಯಾವತ್ತೂ ಮಾಡಿರಲಿಲ್ಲ. ಸಂತೋಷವಾಗಿ ನೆಮ್ಮದಿಯಿಂದ ಇರೋಕೆ ದಾರಿ ತೋರಿಸಪ್ಪಾ ಅಂತ ಬೇಡಿಕೊಂಡೆ. ಆ ಪ್ರಾರ್ಥನೆ ಮಾಡಿದ ಮೇಲೆ ನನ್ನ ಮನಸ್ಸಿಗೆ ಒಂಥರ ನೆಮ್ಮದಿ ಅನಿಸ್ತು. ಇದಕ್ಕಿಂತ ಆಶ್ಚರ್ಯದ ವಿಷಯ ಏನಂದ್ರೆ ಇದಾಗಿ ಎರಡು ಗಂಟೆ ಆದ ಮೇಲೆ ಯೆಹೋವನ ಸಾಕ್ಷಿಗಳು ನಮ್ಮ ಮನೆ ಬಾಗಿಲು ಬಡಿದ್ರು. ನಾನು ಅವ್ರೊಟ್ಟಿಗೆ ಬೈಬಲ್‌ ಕಲಿಯೋಕೆ ಶುರು ಮಾಡ್ದೆ. ಇದು ನಿಜಕ್ಕೂ ನನ್ನ ಪ್ರಾರ್ಥನೆಗೆ ಸಿಕ್ಕಿದ ಉತ್ರ ಆಗಿತ್ತು. ಆವತ್ತಿಂದ ನನ್ನ ಜೀವನದ ಪುಟಗಳಲ್ಲಿ ಖುಷಿ ಅನ್ನೋ ಹೊಸ ಅಧ್ಯಾಯ ಶುರು ಆಯ್ತು.

ನನ್ನ ಬದುಕನ್ನೇ ಬದಲಾಯಿಸಿತು ಬೈಬಲ್‌:

ನನ್ನ ಜೀವನದಲ್ಲಿ ಬದಲಾವಣೆ ಮಾಡ್ಕೊಳ್ಳೋಕೆ ತುಂಬಾ ಕಷ್ಟ ಆಯ್ತು. ಹೆವೀ ಮೆಟಲ್‌ ಸಂಗೀತಕ್ಕೆ ಸಂಬಂಧಪಟ್ಟ ಎಲ್ಲಾ ವಸ್ತುಗಳನ್ನ ನಾನು ಬಿಸಾಡಿಬಿಟ್ಟೆ. ಆದ್ರೆ ಆ ಸಂಗೀತದ ಹುಚ್ಟು ನನ್ನ ಬಿಟ್ಟು ಹೋಗಿರಲಿಲ್ಲ. ದಾರಿಲಿ ಹೋಗೋವಾಗ ಆ ಮ್ಯೂಸಿಕ್‌ ನನ್‌ ಕಿವಿಗೆ ಬಿದ್ರೆ, ಹಿಂದೆ ಆದ ಕಹಿ ನೆನಪುಗಳೆಲ್ಲ ನನ್ನ ಕಣ್ಮುಂದೆ ಬರ್ತಿತ್ತು. ಸಿಹಿಯಾದ ನನ್ನ ಜೀವನದಲ್ಲಿ ಆ ಕಹಿ ನೆನಪುಗಳು ಬರೋದು ನಂಗೆ ಇಷ್ಟ ಇರಲಿಲ್ಲ. ಅದಕ್ಕೆ ಅಂಥಾ ಜಾಗಗಳಿಗೆ ಹೋಗ್ತಿರಲಿಲ್ಲ. ಇಷ್ಟೆಲ್ಲಾ ಪ್ರಯತ್ನ ಹಾಕಿದ್ರೂ ಕೆಲವು ಸಲ ಆ ಕಹಿ ನೆನಪುಗಳು ನನ್ನ ಮನಸ್ಸಿಗೆ ಬಂದುಬಿಡ್ತಿದ್ವು. ಆಗ ನಾನು ಯೆಹೋವನ ಹತ್ರ ಬಿಡದೆ ಪ್ರಾರ್ಥನೆ ಮಾಡ್ತಿದ್ದೆ. ಈ ರೀತಿ ಮಾಡಿದ್ರಿಂದ ‘ತಿಳುವಳಿಕೆಗೂ ಮೀರಿದ ಶಾಂತಿಯನ್ನ ದೇವರು ನಂಗೆ ಕೊಟ್ರು.’—ಫಿಲಿಪ್ಪಿ 4:7.

ನಾನು ಬೈಬಲ್‌ ಕಲಿಯೋಕೆ ಶುರು ಮಾಡಿದ ಮೇಲೆ ಕ್ರೈಸ್ತರು ತಮ್ಮ ನಂಬಿಕೆಗಳನ್ನ ಬೇರೆಯವರ ಹತ್ರ ಹಂಚಿಕೊಳ್ಳಬಹುದು ಅಂತ ತಿಳ್ಕೊಂಡೆ. (ಮತ್ತಾಯ 28:19, 20) ಇದನ್ನಂತೂ ನನ್ನ ಕೈಲಿ ಮಾಡೋಕಾಗೋದೇ ಇಲ್ಲ ಅಂದ್ಕೊಂಡೆ. ಆದ್ರೆ ನಾನು ಬೈಬಲಿಂದ ಏನು ಕಲಿತಿದ್ನೊ ಆ ವಿಷ್ಯಗಳಿಂದ ನಂಗೆ ನೆಮ್ಮದಿ, ಖುಷಿ ಸಿಗ್ತಿತ್ತು. ಈ ಖುಷಿ ಬೇರೆಯವರಿಗೂ ಸಿಗಬೇಕು ಅನ್ನೋ ಆಸೆ ನನ್ನಲ್ಲಿತ್ತು. ಅದಕ್ಕೆ ನಂಗೆ ಭಯ ಆದ್ರೂ ನಾನು ಏನು ಕಲಿತಿದ್ನೋ ಅದನ್ನ ಬೇರೆವ್ರ ಹತ್ರ ಹೇಳಿಕೊಳ್ಳೋಕೆ ಶುರು ಮಾಡ್ದೆ. ಇದ್ರಿಂದ ನಂಗೇ ಒಳ್ಳೇದಾಯ್ತು. ಬೇರೆವ್ರ ಹತ್ರ ಬೈಬಲ್‌ ಬಗ್ಗೆ ಮಾತಾಡಿದ್ರಿಂದ ನನ್ನಲ್ಲಿರೋ ಆತ್ಮವಿಶ್ವಾಸ ಜಾಸ್ತಿ ಆಯ್ತು. ನಾನು ಕಲಿತಿದ್ದ ವಿಷ್ಯಗಳು ಸತ್ಯ ಅನ್ನೋ ನನ್ನ ನಂಬಿಕೆ ಇನ್ನೂ ಬಲ ಆಯ್ತು.

ಸಿಕ್ಕಿದ ಪ್ರಯೋಜನಗಳು:

ಈಗ ನನ್ನ ಮದ್ವೆ ಜೀವನ ತುಂಬಾ ಚೆನ್ನಾಗಿದೆ. ನಾನು ತುಂಬಾ ಜನರಿಗೆ ಬೈಬಲ್‌ ಸತ್ಯನಾ ಕಲಿಸಿದ್ದೀನಿ. ಅದ್ರಲ್ಲಿ ಅಮ್ಮ ಮತ್ತೆ ತಂಗೀನೂ ಸೇರಿದ್ದಾರೆ. ಯೆಹೋವ ದೇವರ ಬಗ್ಗೆ ಕಲಿಯೋಕೆ ನಾನು ಜನರಿಗೆ ಸಹಾಯ ಮಾಡ್ತಿರೋದ್ರಿಂದ ನನ್ನ ಜೀವನಕ್ಕೆ ಅರ್ಥ ಸಿಕ್ಕಿದೆ, ಸಾರ್ಥಕತೆ ಇದೆ.