ಮಾಹಿತಿ ಇರುವಲ್ಲಿ ಹೋಗಲು

ಯೇಸು ದೇವರಾ?

ಯೇಸು ದೇವರಾ?

ಕ್ರೈಸ್ತರ ಮುಖ್ಯ ಬೋಧನೆ ತ್ರಿಯೇಕ ಅಂತ ತುಂಬ ಜನ ನೆನಸುತ್ತಾರೆ. ತಂದೆ, ಮಗ ಮತ್ತು ಪವಿತ್ರಶಕ್ತಿ ಈ ಮೂವರು ಸೇರಿ ಒಂದೇ ದೇವರು ಅಂತ ಈ ಬೋಧನೆ ಕಲಿಸುತ್ತೆ. ತ್ರಿಯೇಕದ ಬಗ್ಗೆ ಕರ್ದಿನಲ್‌ ಜಾನ್‌ ಒ ಕೊನರ್‌ ಹೇಳಿದ್ದು ಏನಂದ್ರೆ: “ಇದು ಒಂದು ಬಿಡಿಸಲಾಗದ ಕಗ್ಗಂಟು. ಇದನ್ನ ನಮ್ಮ ಕೈಯಲ್ಲಿ ಅರ್ಥಮಾಡಿಕೊಳ್ಳೋಕೆ ಆಗಲ್ಲ.” ತ್ರಿಯೇಕವನ್ನ ಅರ್ಥ ಮಾಡಿಕೊಳ್ಳೋಕೆ ಯಾಕಷ್ಟು ಕಷ್ಟ?

ಅದಕ್ಕೊಂದು ಕಾರಣ ದ ಇಲಸ್ಟ್ರೇಟೆಡ್‌ ಬೈಬಲ್‌ ಡಿಕ್ಷನೆರಿ ಕೊಡುತ್ತೆ. ಇದರ ಪ್ರಕಾರ “ತ್ರಿಯೇಕ, ಬೈಬಲಿನ ಬೋಧನೆ ಅಲ್ಲ ಮತ್ತು ಇದರ ಬಗ್ಗೆ ತಿಳಿಸುವ ಒಂದು ವಚನನೂ ಬೈಬಲಿನಲ್ಲಿ ಇಲ್ಲ.” ಹಾಗಿದ್ರೂ ತ್ರಿಯೇಕ ಬೋಧನೆಯನ್ನ ಬೆಂಬಲಿಸುವವರು ಈ ಬೋಧನೆ ಬೈಬಲ್‌ ಆಧಾರಿತವಾಗಿದೆ ಅನ್ನೋ ತಮ್ಮ ವಾದ ಸರಿ ಅಂತ ರುಜುಪಡಿಸಲಿಕ್ಕೆ ಶತಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೋಸ್ಕರ ವಚನಗಳನ್ನ ತಿರುಚುತ್ತಿದ್ದಾರೆ.

ತ್ರಿಯೇಕ ಬೋಧನೆ ಸರಿನಾ?

ತ್ರಿಯೇಕವನ್ನ ಬೆಂಬಸಿಸುವವರು ‘ತಾವು ಹೇಳಿದ್ದೇ ಸರಿ’ ಅಂತ ಸಾಬೀತು ಮಾಡಕ್ಕೆ ಸಾಮಾನ್ಯವಾಗಿ ಯೋಹಾನ 1:1ನ್ನ ತಪ್ಪಾಗಿ ಬಳಸುತ್ತಾರೆ. ಸತ್ಯವೇದವು ಬೈಬಲಿನಲ್ಲಿ ಈ ವಚನ ಹೀಗಿದೆ: “ಆದಿಯಲ್ಲಿ ವಾಕ್ಯವಿತ್ತು; ಆ ವಾಕ್ಯವು ದೇವರ [ಗ್ರೀಕ್‌, ಟೊನ್‌ ಥಿ-ಯೋನ್‌] ಬಳಿಯಲ್ಲಿತ್ತು; ಆ ವಾಕ್ಯವು ದೇವರಾಗಿತ್ತು [ಥಿ-ಯೋಸ್‌].” ಥಿ-ಯೋಸ್‌ (ದೇವರು) ಅನ್ನೋ ಗ್ರೀಕ್‌ ಪದವನ್ನ ಈ ವಚನದಲ್ಲಿ ಎರಡು ವಿಧದಲ್ಲಿ ಬಳಸಲಾಗಿದೆ. ಈ ವಚನದಲ್ಲಿ ಮೊದಲು ಬಳಸಲಾಗಿರುವ ಥಿ-ಯೋನ್‌ ಮುಂದೆ ಟೊನ್‌ (ದ) ಅನ್ನೋ ಒಂದು ವಿಧದ ಗ್ರೀಕ್‌ ನಿರ್ದೇಶಕ ಗುಣವಾಚಿ (ಡೆಫಿನೈಟ್‌ ಆರ್ಟಿಕಲ್‌) ಇದೆ. ಇಲ್ಲಿ ಥಿ-ಯೋನ್‌ ಅನ್ನೋ ಪದ ಸರ್ವಶಕ್ತ ದೇವರನ್ನ ಸೂಚಿಸುತ್ತೆ. ಇದಾದ ಮೇಲೆ ಬರುವ ಥಿ-ಯೋಸ್‌ ಅನ್ನೋ ಪದದ ಮುಂದೆ ನಿರ್ದೇಶಕ ಗುಣವಾಚಿ ಇಲ್ಲ. ಹಾಗಾದ್ರೆ ಈ ಪದದ ಮುಂದೆ ನಿರ್ದೇಶಕ ಗುಣವಾಚಿಯನ್ನ ಬೇಕಂತಾನೇ ಹಾಕಲಿಲ್ಲವಾ?

ತ್ರಿಯೇಕ ಬೋಧನೆಯನ್ನ ಅರ್ಥಮಾಡಿಕೊಳ್ಳೋಕೆ ಯಾಕಷ್ಟು ಕಷ್ಟ?

ಯೋಹಾನನ ಪುಸ್ತಕವನ್ನ ಕೊಯಿನೆಯಲ್ಲಿ ಅಥವಾ ಸಾಮಾನ್ಯ ಗ್ರೀಕ್‌ನಲ್ಲಿ ಬರೆಯಲಾಗಿತ್ತು. ಈ ಭಾಷೆಯಲ್ಲಿ ನಿರ್ದೇಶಕ ಗುಣವಾಚಿಯನ್ನ ಬಳಸಕ್ಕೆ ನಿರ್ದಿಷ್ಟ ನಿಯಮಗಳಿವೆ. ಬೈಬಲ್‌ ಪಂಡಿತನಾದ ಎ. ಟಿ. ರಾಬರ್ಟ್‌ಸನ್‌ ಹೀಗೆ ಹೇಳುತ್ತಾರೆ: “ಕರ್ತೃ ಮತ್ತು ಕರ್ತೃ ಏನಾಗಿದೆ ಅಂತ ಸೂಚಿಸುವ ಪದದ ಮುಂದೆ ನಿರ್ದೇಶಕ ಗುಣವಾಚಿ ಇದ್ದರೆ ಆ ಎರಡೂ ಪದಗಳು ಒಂದೇ ಅಥವಾ ಅವೆರಡನ್ನೂ ಅದಲುಬದಲು ಮಾಡಬಹುದು.” ಇದನ್ನ ಅರ್ಥಮಾಡಿಸಕ್ಕೆ ರಾಬರ್ಟ್‌ಸನ್‌ ಮತ್ತಾಯ 13:38ನ್ನ ಬಳಸುತ್ತಾರೆ. ಅಲ್ಲಿ ಹೀಗೆ ಹೇಳುತ್ತೆ: “ಹೊಲ [ಗ್ರೀಕ್‌, ಹೊ ಆಗ್ರೋಸ್‌] ಅಂದ್ರೆ ಈ ಲೋಕ [ಗ್ರೀಕ್‌, ಹೊ ಕೊಸ್‌ಮೋಸ್‌].” ಇಲ್ಲಿ ಬಳಸಲಾಗಿರುವ ಲೋಕ ಮತ್ತು ಹೊಲಕ್ಕೆ ಹೊ ಅನ್ನೋ ಗ್ರೀಕ್‌ ನಿರ್ದೇಶಕ ಗುಣವಾಚಿಯನ್ನ ಬಳಸಿರೋದ್ರಿಂದ ಹೊಲ ಮತ್ತು ಲೋಕ ಒಂದೇ ಅಂತ ಗೊತ್ತಾಗುತ್ತೆ. ಅಂದರೆ ಹೊಲನೇ ಲೋಕ, ಲೋಕನೇ ಹೊಲ.

ಕರ್ತೃವಿಗೆ ನಿರ್ದೇಶಕ ಗುಣವಾಚಿ ಇದ್ದು ಕರ್ತೃ ಏನಾಗಿದೆ ಅಂತ ಸೂಚಿಸುವ ಪದಕ್ಕೆ ನಿರ್ದೇಶಕ ಗುಣವಾಚಿ ಇಲ್ಲದಿದ್ದರೆ, ಅಂದರೆ ಯೋಹಾನ 1:1ರಲ್ಲಿ ಇರೋ ತರ ಇದ್ದರೆ ಏನಾಗುತ್ತೆ? ಜೇಮ್ಸ್‌ ಅಲೆನ್‌ ಹ್ಯುವೆಟ್‌ ಅನ್ನೋ ಪಂಡಿತ ಹೀಗೆ ಹೇಳುತ್ತಾರೆ: ‘ಈ ರೀತಿಯ ವಾಕ್ಯರಚನೆಯಲ್ಲಿ ಕರ್ತೃ ಮತ್ತು ಕರ್ತೃ ಏನಾಗಿದೆ ಅಂತ ಸೂಚಿಸುವ ಪದ, ಇವೆರಡೂ ಒಂದೇ ಆಗಿರೋದಿಲ್ಲ ಮತ್ತು ಅದನ್ನ ಅದಲುಬದಲು ಮಾಡಕ್ಕೆ ಸಾಧ್ಯನೇ ಇಲ್ಲ.’

ಇದಕ್ಕೆ ಉದಾಹರಣೆ ಕೊಡಲಿಕ್ಕಾಗಿ ಹ್ಯುವೆಟ್‌ 1 ಯೋಹಾನ 1:5 ಬಳಸುತ್ತಾರೆ. ಅದರಲ್ಲಿ “ದೇವರು ಬೆಳಕಾಗಿದ್ದಾನೆ” (ಸತ್ಯವೇದವು) ಅಂತಿದೆ. ಈ ವಚನದಲ್ಲಿ “ದೇವರು” ಅನ್ನೋ ಪದಕ್ಕೆ ಹೊ ಥಿಯೋಸ್‌ ಅಂತ ಬಳಸಲಾಗಿದೆ. ಈ ಪದದ ಮುಂದೆ ಹೊ ಅನ್ನೋ ಗ್ರೀಕ್‌ ನಿರ್ದೇಶಕ ಗುಣವಾಚಿಯನ್ನ ಬಳಸಲಾಗಿದೆ. ಆದರೆ “ಬೆಳಕು” ಅಂತ ಬಳಸಲಾಗಿರುವ ಫೋಸ್‌ ಮುಂದೆ ಯಾವುದೇ ರೀತಿಯ ನಿರ್ದೇಶಕ ಗುಣವಾಚಿಯನ್ನ ಬಳಸಲಾಗಿಲ್ಲ. ಹ್ಯುವೆಟ್‌ ಹೀಗೆ ಹೇಳುತ್ತಾರೆ: “ದೇವರು ಬೆಳಕಾಗಿದ್ದಾನೆ ಅಂತ . . . ನಾವು ಯಾವಾಗಲೂ ಹೇಳಬಹುದು, ಆದರೆ ಬೆಳಕು ದೇವರಾಗಿದೆ ಅಂತ ಯಾವಾಗಲೂ ಹೇಳಕ್ಕಾಗಲ್ಲ.” ಇದೇ ರೀತಿಯ ಉದಾಹರಣೆಗಳನ್ನ ಯೋಹಾನ 4:24 ಮತ್ತು 1 ಯೋಹಾನ 4:16ರಲ್ಲಿ ನೋಡಬಹುದು. ಯೋಹಾನ 4:24ರಲ್ಲಿ “ದೇವರು ಆತ್ಮಸ್ವರೂಪನು” (ಸತ್ಯವೇದವು) ಅಂತಿದೆ ಮತ್ತು 1 ಯೋಹಾನ 4:16ರಲ್ಲಿ “ದೇವರು ಪ್ರೀತಿಯಾಗಿದ್ದಾನೆ” ಅಂತಿದೆ. ಈ ಎರಡೂ ವಚನಗಳಲ್ಲಿ ಕರ್ತೃವಿಗೆ ನಿರ್ದೇಶಕ ಗುಣವಾಚಿ ಇದೆ. ಆದರೆ ಕರ್ತೃ ಏನಾಗಿದೆ ಅಂತ ಹೇಳುವ ಪದದ ಮುಂದೆ, ಅಂದರೆ “ಆತ್ಮ” ಮತ್ತು “ಪ್ರೀತಿ” ಮುಂದೆ ನಿರ್ದೇಶಕ ಗುಣವಾಚಿ ಇಲ್ಲ. ಹಾಗಾಗಿ ಕರ್ತೃ ಮತ್ತು ಕರ್ತೃ ಏನಾಗಿದೆ ಅಂತ ಸೂಚಿಸುವ ಪದ, ಇವೆರಡೂ ಒಂದೇ ಆಗಿರೋದಿಲ್ಲ. ಈ ವಚನಗಳಲ್ಲಿ “ಆತ್ಮ ದೇವರಾಗಿದೆ” ಅಥವಾ “ಪ್ರೀತಿ ದೇವರಾಗಿದೆ” ಅಂತ ಹೇಳೋದಿಲ್ಲ.

“ವಾಕ್ಯ” ಅಂದರೆ ಯಾರು?

ಯೋಹಾನ 1:1ರ ಬಗ್ಗೆ ಅನೇಕ ಗ್ರೀಕ್‌ ಪಂಡಿತರು ಮತ್ತು ಬೈಬಲ್‌ ಭಾಷಾಂತರಗಾರರು “ವಾಕ್ಯ” ಬಗ್ಗೆ ಹೀಗೆ ಹೇಳುತ್ತಾರೆ: “ಆ ವಚನದಲ್ಲಿ ವಾಕ್ಯ ಯಾರು ಅಂತ ಹೇಳುತ್ತಿಲ್ಲ, ಬದಲಿಗೆ ವಾಕ್ಯ ಎಂಥವನಾಗಿದ್ದಾನೆ ಅಂತ ಹೇಳುತ್ತಿದೆ.” ಬೈಬಲ್‌ ಭಾಷಾಂತರಗಾರನಾದ ವಿಲ್ಯಮ್‌ ಬಾರ್ಕ್ಲೆ ಹೀಗೆ ಹೇಳುತ್ತಾರೆ: ‘[ಅಪೊಸ್ತಲ ಯೋಹಾನ] ಥಿಯೋಸ್‌ ಪದದ ಮುಂದೆ ನಿರ್ದೇಶಕ ಗುಣವಾಚಿಯನ್ನ ಬಳಸಿಲ್ಲ. ಹಾಗಾಗಿ ವಾಕ್ಯ ಸರ್ವಶಕ್ತ ದೇವರು ಅಂತ ಯೋಹಾನ ಇಲ್ಲಿ ಹೇಳುತ್ತಿಲ್ಲ’ ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತೆ. ಇನ್ನೂ ಸರಳವಾಗಿ ಹೇಳೋದಾದ್ರೆ ಯೇಸುನೇ ಸರ್ವಶಕ್ತ ದೇವರು ಅಂತ ಯೋಹಾನ ಹೇಳಿಲ್ಲ. ಪಂಡಿತನಾದ ಜೇಸನ್‌ ಡೇವಿಡ್‌ ಬೀಡನ್‌ ಇದೇ ತರ ಹೇಳುತ್ತಾರೆ: ‘ಗ್ರೀಕ್‌ ಭಾಷೆಯಲ್ಲಿ ಥಿಯೋಸ್‌ ಪದದ ಮುಂದೆ ನಿರ್ದೇಶಕ ಗುಣವಾಚಿ ಇಲ್ಲಾಂದರೆ ಅದು “ದೇವರ ತರ ಇರೋ ಒಬ್ಬನ” ಬಗ್ಗೆ ಮಾತಾಡುತ್ತಿದೆ ಅಂತ ಜನರು ಅರ್ಥಮಾಡಿಕೊಳ್ಳುತ್ತಾರೆ. ಒಂದುವೇಳೆ ಥಿಯೋಸ್‌ ಅನ್ನೋ ಪದದ ಮುಂದೆ ಹೊ ಅನ್ನೋ ನಿರ್ದೇಶಕ ಗುಣವಾಚಿಯನ್ನ ಬಳಸಿದ್ರೆ ಇದು ಸರ್ವಶಕ್ತ ದೇವರ ಬಗ್ಗೆ ಮಾತಾಡುತ್ತಿದೆ ಅಂತ ಜನರು ಅರ್ಥಮಾಡಿಕೊಳ್ಳುತ್ತಾರೆ.’ ಬೀಡನ್‌ ಇನ್ನೂ ಹೇಳೋದು: “ಯೋಹಾನ 1:1ರಲ್ಲಿರುವ ‘ವಾಕ್ಯ’ ಒಬ್ಬನೇ ಒಬ್ಬ ಸರ್ವಶಕ್ತ ದೇವರ ಬಗ್ಗೆ ಅಲ್ಲ ಬದಲಿಗೆ ದೇವರ ತರ ಇರುವವನ ಬಗ್ಗೆ ಹೇಳುತ್ತಿದೆ.” ಅಮೆರಿಕನ್‌ ಸ್ಟಾಂಡರ್ಡ್‌ ವರ್ಷನ್‌ ಬೈಬಲಿಗೋಸ್ಕರ ಕೆಲಸ ಮಾಡಿದ ಜೋಸಫ್‌ ಹೆನ್ರಿ ಥಾಯರ್‌ ಹೀಗೆ ಹೇಳುತ್ತಾರೆ: “ಲೊಗೋಸ್‌ [ಅಥವಾ ವಾಕ್ಯ] ಒಬ್ಬ ದೇವರ ತರ ಇದ್ದಾನೆ, ಬದಲಿಗೆ ಸರ್ವಶಕ್ತ ದೇವರಲ್ಲ.”

ಯೇಸು ತನ್ನ ಮತ್ತು ತನ್ನ ತಂದೆಯ ಮಧ್ಯೆ ಇರುವ ವ್ಯತ್ಯಾಸವನ್ನ ಸ್ಪಷ್ಟವಾಗಿ ತಿಳಿಸಿದನು

ಹಾಗಾದ್ರೆ ಸರ್ವಶಕ್ತ ದೇವರು ಯಾರು ಅನ್ನೋದು “ಒಂದು ನಿಗೂಢ ರಹಸ್ಯನಾ”? ಯೇಸುವಿಗೆ ಖಂಡಿತ ಹಾಗೆ ಅನಿಸಲಿಲ್ಲ. ಯಾಕಂದ್ರೆ ಆತನು ತನ್ನ ತಂದೆಗೆ ಪ್ರಾರ್ಥನೆ ಮಾಡುತ್ತಿರುವಾಗ ತನಗೂ ಮತ್ತು ತನ್ನ ತಂದೆಗೂ ಇರುವ ವ್ಯತ್ಯಾಸವನ್ನ ಸ್ಪಷ್ಟವಾಗಿ ತಿಳಿಸಿದ್ದನು: “ಶಾಶ್ವತ ಜೀವ ಸಿಗಬೇಕಾದ್ರೆ ಒಬ್ಬನೇ ಸತ್ಯ ದೇವರಾಗಿರೋ ನಿನ್ನನ್ನ ಮತ್ತು ನೀನು ಕಳಿಸ್ಕೊಟ್ಟ ಯೇಸು ಕ್ರಿಸ್ತನನ್ನ ತಿಳ್ಕೊಳ್ಳಲೇಬೇಕು.” (ಯೋಹಾನ 17:3) ನಾವು ಯೇಸುವನ್ನ ಮತ್ತು ಬೈಬಲ್‌ ಏನನ್ನ ಕಲಿಸುತ್ತೋ ಅದನ್ನ ನಂಬೋದಾದ್ರೆ ನಾವು ಆತನನ್ನ ಗೌರವಿಸ್ತೀವಿ ಮತ್ತು ಆತನು ಸರ್ವಶಕ್ತ ದೇವರ ಮಗ ಅಂತ ಒಪ್ಪಿಕೊಳ್ಳುತ್ತೀವಿ. ಅಷ್ಟೇ ಅಲ್ಲ ನಾವು ‘ಒಬ್ಬನೇ ಸತ್ಯ ದೇವರಾಗಿರುವ’ ಯೆಹೋವನನ್ನು ಮಾತ್ರ ಆರಾಧಿಸ್ತೀವಿ.