ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ ಒಂಬತ್ತು

ಒಂಟಿ ಹೆತ್ತವರ ಕುಟುಂಬಗಳು ಯಶಸ್ವಿಯಾಗಬಲ್ಲವು!

ಒಂಟಿ ಹೆತ್ತವರ ಕುಟುಂಬಗಳು ಯಶಸ್ವಿಯಾಗಬಲ್ಲವು!

1-3. ಒಂಟಿ ಹೆತ್ತವರ ಕುಟುಂಬಗಳ ಸಂಖ್ಯೆಯಲ್ಲಿ ಬೆಳವಣಿಗೆಗೆ ಯಾವುದು ನೆರವಾಗಿದೆ, ಮತ್ತು ಒಳಗೂಡಿರುವವರು ಹೇಗೆ ಬಾಧಿತರಾಗುತ್ತಾರೆ?

 ಒಂಟಿ ಹೆತ್ತವರ ಕುಟುಂಬಗಳು ಅಮೆರಿಕದಲ್ಲಿ, “ಅತ್ಯಂತ ತ್ವರಿತಗತಿಯಲ್ಲಿ ಬೆಳೆಯುತ್ತಿರುವ ಕುಟುಂಬ ಶೈಲಿ” ಎಂಬುದಾಗಿ ಕರೆಯಲ್ಪಟ್ಟಿವೆ. ಬೇರೆ ಅನೇಕ ದೇಶಗಳಲ್ಲಿಯೂ ಸನ್ನಿವೇಶವು ತದ್ರೂಪದಲ್ಲಿದೆ. ಅತಿ ಹೆಚ್ಚಿನ ಸಂಖ್ಯೆಯ ವಿವಾಹ ವಿಚ್ಛೇದಗಳು, ಪರಿತ್ಯಾಗಗಳು, ಪ್ರತ್ಯೇಕವಾಸಗಳು, ಮತ್ತು ಜಾರಜ ಜನನಗಳು ಲಕ್ಷಾಂತರ ಹೆತ್ತವರಿಗೆ ಮತ್ತು ಮಕ್ಕಳಿಗೆ ಬಹುವ್ಯಾಪನೆಯ ಪರಿಣಾಮಗಳನ್ನು ತಂದಿರುತ್ತವೆ.

2 “ನಾನು ಎರಡು ಮಕ್ಕಳಿರುವ 28 ವಯಸ್ಸಿನ ವಿಧವೆ,” ಎಂದು ಬರೆದಳು ಒಬ್ಬ ಒಂಟಿ ತಾಯಿ. “ನಾನು ತುಂಬ ಖಿನ್ನಳಾಗಿದ್ದೇನೆ, ಯಾಕಂದರೆ ನನ್ನ ಮಕ್ಕಳನ್ನು ಒಬ್ಬ ತಂದೆಯ ಹೊರತು ಬೆಳೆಸಲು ನಾನು ಬಯಸುವುದಿಲ್ಲ. ನನ್ನ ಕುರಿತಾಗಿ ಯಾರೂ ಚಿಂತಿಸುವುದೂ ಇಲ್ಲವೆಂಬಂತೆ ತೋರುತ್ತದೆ. ನಾನು ಆಗಾಗ ಅಳುವುದನ್ನು ನನ್ನ ಮಕ್ಕಳು ನೋಡುತ್ತಾರೆ ಮತ್ತು ಅದು ಅವರನ್ನು ಬಾಧಿಸುತ್ತದೆ.” ಕೋಪ, ದೋಷಿಭಾವನೆ, ಮತ್ತು ಏಕಾಂತತೆಯಂತಹ ಭಾವನೆಗಳೊಂದಿಗೆ ಹೋರಾಡುವುದಲ್ಲದೆ, ಹೆಚ್ಚಿನ ಒಂಟಿ ಹೆತ್ತವರು ಮನೆಯ ಹೊರಗಿನ ಉದ್ಯೋಗವನ್ನು ಇಟ್ಟುಕೊಂಡಿರುವುದು ಮತ್ತು ಗೃಹ ಕರ್ತವ್ಯಗಳ ನಿರ್ವಹಣೆ—ಇವೆರಡರ ಪಂಥಾಹ್ವಾನವನ್ನು ಎದುರಿಸುತ್ತಾರೆ. ಒಬ್ಬರು ಹೇಳಿದ್ದು: “ಹೆತ್ತವರಾಗಿರುವುದು ಒಬ್ಬ ಚೆಂಡಾಡಿಸುವವನಂತಿದೆ. ಆರು ತಿಂಗಳುಗಳ ಪರಿಪಾಠದ ಅನಂತರ, ನಾಲ್ಕು ಚೆಂಡುಗಳನ್ನು ಒಮ್ಮೆಲೇ ಆಡಿಸಲು ನೀವು ಕೊನೆಗೆ ಶಕ್ತರಾಗುತ್ತೀರಿ. ಆದರೆ ನೀವದನ್ನು ಮಾಡಶಕ್ತರಾದೊಡನೆ, ಯಾರಾದರೊಬ್ಬರು ಒಂದು ಹೊಸ ಚೆಂಡನ್ನು ನಿಮ್ಮೆಡೆಗೆ ಎಸೆಯುತ್ತಾರೆ!”

3 ಒಂಟಿ ಹೆತ್ತವರ ಕುಟುಂಬಗಳಲ್ಲಿ ಎಳೆಯರಿಗೆ ಆಗಾಗ ಅವರ ಸ್ವಂತ ಹೋರಾಟಗಳಿರುತ್ತವೆ. ಹೆತ್ತವರಲ್ಲೊಬ್ಬರ ಥಟ್ಟನೆಯ ಅಗಲಿಕೆ ಅಥವಾ ಮರಣವನ್ನು ಅನುಸರಿಸಿ, ಅವರಿಗೆ ತೀವ್ರ ಭಾವಾವೇಶಗಳೊಂದಿಗೆ ಹೆಣಗಾಡಲಿರಬಹುದು. ಹೆತ್ತವರೊಬ್ಬರ ಅನುಪಸ್ಥಿತಿಯು ಅನೇಕ ಯುವ ಜನರ ಮೇಲೆ ಒಂದು ಗಾಢವಾದ ನಕಾರಾತ್ಮಕ ಪರಿಣಾಮವನ್ನು ಬೀರುವಂತೆ ತೋರುತ್ತದೆ.

4. ಯೆಹೋವನು ಒಂಟಿ ಹೆತ್ತವರ ಕುಟುಂಬಗಳ ಕುರಿತು ಚಿಂತಿತನೆಂದು ನಮಗೆ ತಿಳಿದಿರುವುದು ಹೇಗೆ?

4 ಒಂಟಿ ಹೆತ್ತವರ ಕುಟುಂಬಗಳು ಬೈಬಲಿನ ಕಾಲಗಳಲ್ಲಿ ಅಸ್ತಿತ್ವದಲ್ಲಿದ್ದವು. ಶಾಸ್ತ್ರಗಳು ಪದೇ ಪದೇ “ಪಿತೃವಿಹೀನ ಬಾಲಕ” ಮತ್ತು “ವಿಧವೆ”ಯ ಕುರಿತು ತಿಳಿಸುತ್ತವೆ. (ವಿಮೋಚನಕಾಂಡ 22:22, NW; ಧರ್ಮೋಪದೇಶಕಾಂಡ 24:19-21; ಯೋಬ 31:16-22) ಯೆಹೋವ ದೇವರು ಅವರ ದಶೆಯ ಕುರಿತು ಅಸಡ್ಡೆಯಿಂದಿರಲಿಲ್ಲ. ಕೀರ್ತನೆಗಾರನು ದೇವರನ್ನು “ಪಿತೃವಿಹೀನ ಬಾಲಕರಿಗೆ ಪಿತನೂ ವಿಧವೆಯರಿಗೆ ನ್ಯಾಯಾಧೀಶನೂ” ಎಂದು ಕರೆದನು. (ಕೀರ್ತನೆ 68:5, NW) ಇಂದಿನ ಒಂಟಿ ಹೆತ್ತವರ ಕುಟುಂಬಗಳಿಗಾಗಿಯೂ ಯೆಹೋವನಿಗೆ ಅದೇ ರೀತಿಯ ಚಿಂತೆ ಇದೆ ಖಂಡಿತ! ಅವರು ಯಶಸ್ವಿಯಾಗಲಿಕ್ಕೆ ನೆರವಾಗಬಲ್ಲ ಮೂಲತತ್ವಗಳನ್ನು ಆತನ ವಾಕ್ಯವು ನಿಶ್ಚಯವಾಗಿಯೂ ನೀಡುತ್ತದೆ.

ಮನೆವಾರ್ತೆಯ ದಿನಚರಿಯಲ್ಲಿ ನಿಪುಣತೆ ಪಡೆಯುವುದು

5. ಒಂಟಿ ಹೆತ್ತವರಿಗೆ ಆರಂಭದಲ್ಲಿ ಯಾವ ಸಮಸ್ಯೆಯನ್ನು ಎದುರಿಸಲಿಕ್ಕಿದೆ?

5 ಒಂದು ಮನೆಯನ್ನು ನಿರ್ವಹಿಸುವ ಕೆಲಸವನ್ನು ಪರಿಗಣಿಸಿರಿ. “ಮನೆಯಲ್ಲಿ ಒಬ್ಬ ಪುರುಷನಿದ್ದಿದ್ದರೆ ಒಳ್ಳೆಯದಿತ್ತೆಂದು ನೀವು ಆಶಿಸುವ ಸಂದರ್ಭಗಳು ಅನೇಕ,” ಎಂದು ಒಪ್ಪಿಕೊಳ್ಳುತ್ತಾಳೆ ಒಬ್ಬ ವಿಚ್ಛೇದಿತ ಸ್ತ್ರೀ, “ಉದಾಹರಣೆಗಾಗಿ, ನಿಮ್ಮ ಕಾರು ಸಮಸ್ಯೆಯಿದೆಯೆಂಬ ಸದ್ದುಗಳನ್ನು ಮಾಡಲಾರಂಭಿಸುತ್ತದಾದರೂ, ಅವು ಎಲ್ಲಿಂದ ಹೊರಡುತ್ತವೆಂಬುದು ನಿಮಗೆ ತಿಳಿಯದಿರುವಾಗ.” ತದ್ರೀತಿ, ಇತ್ತೀಚೆಗೆ ವಿಚ್ಛೇದಪಡೆದ ಅಥವಾ ವಿಧುರರಾದ ಪುರುಷರು ತಾವೀಗ ನಿರ್ವಹಿಸಬೇಕಾದ ಬಹುಸಂಖ್ಯೆಯ ಮನೆವಾರ್ತೆಯ ಕೆಲಸಗಳಿಂದ ಕಂಗಾಲಾಗಬಹುದು. ಮಕ್ಕಳಿಗೊ, ಗೃಹಕೃತ್ಯದ ಕ್ರಮಗೆಡಿಸುವಿಕೆಯು ಅಸ್ಥಿರತೆ ಮತ್ತು ಅಭದ್ರತೆಯ ಅನಿಸಿಕೆಗಳಿಗೆ ಕೂಡಿಸುತ್ತದೆ.

ಮಕ್ಕಳೇ, ನಿಮ್ಮ ಒಂಟಿ ಹೆತ್ತವರೊಂದಿಗೆ ಸಹಕರಿಸಿರಿ

6, 7. (ಎ) ಜ್ಞಾನೋಕ್ತಿಗಳ “ಸಮರ್ಥೆಯಾದ ಹೆಂಡತಿ”ಯಿಂದ ಯಾವ ಉತ್ತಮ ಮಾದರಿಯು ಇಡಲ್ಪಟ್ಟಿತು? (ಬಿ) ಗೃಹಕೃತ್ಯದ ಜವಾಬ್ದಾರಿಗಳ ಕುರಿತಾಗಿ ಶ್ರದ್ಧೆಯಿಂದಿರುವುದು ಒಂಟಿ ಹೆತ್ತವರ ಮನೆಗಳಲ್ಲಿ ಹೇಗೆ ಸಹಾಯಕರವಾಗಿದೆ?

6 ಯಾವುದು ಸಹಾಯ ಮಾಡಬಲ್ಲದು? ಜ್ಞಾನೋಕ್ತಿ 31:10-31 (NW)ರಲ್ಲಿ ವರ್ಣಿಸಲ್ಪಟ್ಟಿರುವ “ಸಮರ್ಥೆಯಾದ ಹೆಂಡತಿ”ಯಿಂದ ಇಡಲ್ಪಟ್ಟ ಮಾದರಿಯನ್ನು ಗಮನಿಸಿರಿ. ಅವಳ ಕಾರ್ಯನಿರ್ವಹಣೆಯ ವ್ಯಾಪ್ತಿಯು ಗಮನಾರ್ಹ—ಖರೀದಿಸುವುದು, ಮಾರುವುದು, ಹೊಲಿಯುವುದು, ಅಡಿಗೆ ಮಾಡುವುದು, ಸ್ಥಿರಾಸ್ಥಿಯಲ್ಲಿ ಹಣಹಾಕುವುದು, ಕೃಷಿಗಾರಿಕೆ, ಮತ್ತು ಒಂದು ವ್ಯಾಪಾರವನ್ನು ನಿರ್ವಹಿಸುವುದು. ಅವಳ ರಹಸ್ಯ? ಅವಳು ಹೊತ್ತುಮೀರಿ ಕೆಲಸಮಾಡುತ್ತಾ, ತನ್ನ ದಿನಚರಿಯನ್ನು ಆರಂಭಿಸಲು ಹೊತ್ತಿಗೆ ಮೊದಲು ಏಳುತ್ತಾ ಇದ್ದ ಶ್ರಮಶೀಲೆಯಾಗಿದ್ದಳು. ಮತ್ತು ಕೆಲವು ಕೆಲಸಗಳನ್ನು ವಹಿಸಿಕೊಡುತ್ತಲೂ ಮತ್ತು ಬೇರೆಯವುಗಳನ್ನು ತನ್ನ ಸ್ವಂತ ಹಸ್ತಗಳಿಂದ ಮಾಡುತ್ತಲೂ ಸುವ್ಯವಸ್ಥಿತಳಾಗಿದ್ದಳಾಕೆ. ಅವಳು ಸ್ತುತಿಪಾತ್ರಳಾದುದರಲ್ಲಿ ಆಶ್ಚರ್ಯವೇನೂ ಇಲ್ಲ!

7 ನೀವೊಬ್ಬ ಒಂಟಿ ಹೆತ್ತವರಾಗಿರುವಲ್ಲಿ, ನಿಮ್ಮ ಗೃಹಕೃತ್ಯದ ಜವಾಬ್ದಾರಿಗಳ ಕುರಿತು ಶುದ್ಧಾಂತಃಕರಣವುಳ್ಳವರಾಗಿರಿ. ಅಂತಹ ಕೆಲಸದಲ್ಲಿ ಸಂತೃಪ್ತಿಯನ್ನು ಕಂಡುಕೊಳ್ಳಿರಿ, ಯಾಕಂದರೆ ಇದು ನಿಮ್ಮ ಮಕ್ಕಳ ಸಂತೋಷಕ್ಕೆ ಕೂಡಿಸಲು ಹೆಚ್ಚನ್ನು ಮಾಡುತ್ತದೆ. ಆದರೂ, ಯೋಗ್ಯ ಯೋಜನೆ ಮತ್ತು ವ್ಯವಸ್ಥಾಪನೆಯು ಅತ್ಯಾವಶ್ಯಕವಾಗಿದೆ. ಬೈಬಲು ಅನ್ನುವುದು: “ಶ್ರಮಶೀಲನ ಯೋಜನೆಗಳು ನಿಶ್ಚಯವಾಗಿಯೂ ಪ್ರಯೋಜನಕ್ಕೆ ಅನುಕೂಲವಾಗುತ್ತವೆ.” (ಜ್ಞಾನೋಕ್ತಿ 21:5, NW) ಒಬ್ಬ ಒಂಟಿ ತಂದೆಯು ಒಪ್ಪಿಕೊಂಡದ್ದು: “ಹಸಿವೆಯಾಗುವ ತನಕ ಊಟದ ಕುರಿತು ಯೋಚಿಸದಿರುವುದು ನನ್ನ ಪ್ರವೃತ್ತಿ.” ಆದರೆ ಅವಸರದಿಂದ ಅಣಿಗೊಳಿಸಿದ ಊಟಗಳಿಗಿಂತ ಮೊದಲೇ ಯೋಜಿಸಲ್ಪಟ್ಟವುಗಳು ಹೆಚ್ಚು ಪೋಷಕವೂ ರುಚಿಕರವೂ ಆಗಿರುತ್ತವೆ. ಮನೆವಾರ್ತೆಯ ಹೊಸ ಕೌಶಲಗಳಲ್ಲಿ ನಿಮ್ಮ ಕೈಗಳನ್ನುಪಯೋಗಿಸಲು ನಿಮಗೆ ಕಲಿಯಬೇಕಾದೀತು. ಬಲ್ಲವರಾದ ಸ್ನೇಹಿತರನ್ನು, ಕೈಪಿಡಿಗಳನ್ನು, ಮತ್ತು ಸಹಾಯಕಾರಿ ಕಸಬುದಾರರನ್ನು ಸಂಪರ್ಕಿಸುವ ಮೂಲಕ ಕೆಲವು ಒಂಟಿ ತಾಯಂದಿರು ಬಣ್ಣಬಳಿಯುವಿಕೆ, ಕೊಳಾಯಿ ದುರಸ್ತು, ಮತ್ತು ಸಾಮಾನ್ಯವಾದ ವಾಹನ ದುರಸ್ತುಗಳನ್ನು ಮಾಡಲು ಶಕ್ತರಾಗಿದ್ದಾರೆ.

8. ಒಂಟಿ ಹೆತ್ತವರ ಮಕ್ಕಳು ಮನೆಯಲ್ಲಿ ಹೇಗೆ ಸಹಾಯ ಮಾಡಬಲ್ಲರು?

8 ಸಹಾಯ ಮಾಡಲು ಮಕ್ಕಳನ್ನು ಕೇಳುವುದು ಉಚಿತವೊ? ಒಬ್ಬ ಒಂಟಿ ತಾಯಿ ವಿವೇಚಿಸಿದ್ದು: “ಮಕ್ಕಳಿಗೆ ಸುಲಭವಾಗಿ ಮಾಡುವ ಮೂಲಕ ಇನ್ನೊಬ್ಬ ಹೆತ್ತವನ ಅನುಪಸ್ಥಿತಿಯನ್ನು ಸರಿದೂಗಿಸಲು ನೀವು ಬಯಸುತ್ತೀರಿ.” ಅದನ್ನು ಅರ್ಥಮಾಡಿಕೊಳ್ಳಬಹುದಾದರೂ, ಪ್ರಾಯಶಃ ಅದು ಯಾವಾಗಲೂ ಮಗುವಿನ ಉತ್ತಮ ಹಿತಾಸಕ್ತಿಯಲ್ಲಿರುವುದಿಲ್ಲ. ಬೈಬಲಿನ ಕಾಲಗಳ ದೈವಭಯವುಳ್ಳ ಯುವಕರು ಸೂಕ್ತವಾದ ಮನೆಗೆಲಸಗಳಿಗೆ ನೇಮಿತರಾಗಿದ್ದರು. (ಆದಿಕಾಂಡ 37:2; ಪರಮ ಗೀತ 1:6) ಹೀಗೆ ನಿಮ್ಮ ಮಕ್ಕಳ ಮೇಲೆ ಮಿತಿಮೀರಿ ಭಾರಹೊರಿಸದಿರುವಂತೆ ಜಾಗ್ರತೆವಹಿಸಿದರೂ, ಪಾತ್ರೆಗಳನ್ನು ತೊಳೆಯುವುದು ಮತ್ತು ತಮ್ಮ ಕೋಣೆಯನ್ನು ಶುಚಿಯಾಗಿಡುವಂತಹ ಕೆಲಸಗಳನ್ನು ಅವರಿಗೆ ನೇಮಿಸುವುದು ನಿಮಗೆ ವಿವೇಕದ್ದಾಗಿರುವುದು. ಕೆಲವು ಮನೆಗೆಲಸಗಳನ್ನು ಒಟ್ಟುಗೂಡಿ ಯಾಕೆ ಮಾಡಬಾರದು? ಇದು ಅತಿ ಆನಂದಕರವಾಗಿರಬಲ್ಲದು.

ಜೀವನೋಪಾಯವನ್ನು ನಿರ್ವಹಿಸುವ ಪಂಥಾಹ್ವಾನ

9. ಒಂಟಿ ತಾಯಂದಿರು ಅನೇಕ ವೇಳೆ ಹಣಕಾಸಿನ ಕಷ್ಟಗಳನ್ನು ಎದುರಿಸುತ್ತಾರೆ ಏಕೆ?

9 ಅನೇಕ ಒಂಟಿ ಹೆತ್ತವರು ತಮ್ಮ ಹಣಕಾಸಿನ ಅಗತ್ಯಗಳನ್ನು ನಿರ್ವಹಿಸುವುದನ್ನು ಕಷ್ಟಕರವಾದದ್ದಾಗಿ ಕಂಡುಕೊಳ್ಳುತ್ತಾರೆ, ಮತ್ತು ಅವಿವಾಹಿತ ಯುವ ತಾಯಂದಿರಿಗೆ ಇದು ಸಾಮಾನ್ಯವಾಗಿ ವಿಶೇಷವಾಗಿ ಕಷ್ಟಕರ. * ಸಾರ್ವಜನಿಕ ಜನಹಿತ ಸಹಾಯವು ಲಭ್ಯವಿರುವ ದೇಶಗಳಲ್ಲಿ, ಕಡಿಮೆ ಪಕ್ಷ ತಮಗೆ ಉದ್ಯೋಗವು ಸಿಗುವ ತನಕ, ಅವರು ಅದರ ಉಪಯೋಗವನ್ನು ಮಾಡುವುದು ವಿವೇಕದ್ದಾಗಿರಬಹುದು. ಅವಶ್ಯವಿರುವಲ್ಲಿ ಅಂತಹ ಒದಗಿಸುವಿಕೆಗಳನ್ನು ಉಪಯೋಗಿಸುವಂತೆ ಬೈಬಲು ಕ್ರೈಸ್ತರನ್ನು ಅನುಮತಿಸುತ್ತದೆ. (ರೋಮಾಪುರ 13:1, 6) ವಿಧವೆಯರು ಮತ್ತು ವಿವಾಹ ವಿಚ್ಛೇದಿತ ಸ್ತ್ರೀಯರು ತದ್ರೀತಿಯ ಪಂಥಾಹ್ವಾನಗಳನ್ನು ಎದುರಿಸುತ್ತಾರೆ. ವರ್ಷಗಳ ತನಕ ಗೃಹಕೃತ್ಯಗಳನ್ನು ನಡಿಸುತ್ತಾ ಇದ್ದು ಹೊರಗೆ ಉದ್ಯೋಗದ ಮಾರುಕಟ್ಟೆಯನ್ನು ಮರುಪ್ರವೇಶಿಸಲು ಒತ್ತಾಯಿಸಲ್ಪಡುವ ಅನೇಕರು, ಹೆಚ್ಚಾಗಿ ಕಡಿಮೆ ವೇತನದ ಕೆಲಸವನ್ನು ಮಾತ್ರ ಕಂಡುಕೊಳ್ಳಬಲ್ಲರು. ಕೆಲವರು ತಮ್ಮನ್ನು ಕೆಲಸತರಬೇತಿನ ಕಾರ್ಯಕ್ರಮಗಳಿಗೆ, ಇಲ್ಲವೆ ಅಲ್ಪಾವಧಿಯ ಶಾಲಾಪಾಠಗಳಿಗೆ ನಮೂದಿಸಿಕೊಳ್ಳುವ ಮೂಲಕ ತಮ್ಮ ದಶೆಯನ್ನು ಸುಧಾರಿಸಶಕ್ತರಾಗುತ್ತಾರೆ.

10. ಐಹಿಕ ಉದ್ಯೋಗವನ್ನು ತಾನು ಏಕೆ ಹುಡುಕಲೇಬೇಕೆಂಬುದನ್ನು ಒಂಟಿ ತಾಯಿ ತನ್ನ ಮಕ್ಕಳಿಗೆ ಹೇಗೆ ವಿವರಿಸಬಲ್ಲಳು?

10 ನೀವು ಉದ್ಯೋಗವನ್ನು ಹುಡುಕುವಾಗ, ನಿಮ್ಮ ಮಕ್ಕಳು ಅಸಂತೋಷಿತರಾದರೆ ಆಶ್ಚರ್ಯಪಡಬೇಡಿ, ಮತ್ತು ದೋಷಿಭಾವನೆಯನ್ನು ಹೊಂದಬೇಡಿ. ಬದಲಿಗೆ, ನೀವು ಏಕೆ ಕೆಲಸ ಮಾಡಬೇಕೆಂಬುದನ್ನು ಅವರಿಗೆ ವಿವರಿಸಿರಿ, ಮತ್ತು ಅವರಿಗಾಗಿ ಒದಗಿಸುವುದನ್ನು ಯೆಹೋವನು ನಿಮ್ಮಿಂದ ಅವಶ್ಯಪಡುತ್ತಾನೆಂದು ಅವರು ತಿಳಿದುಕೊಳ್ಳುವಂತೆ ಸಹಾಯ ಮಾಡಿರಿ. (1 ತಿಮೊಥೆಯ 5:8) ಸಕಾಲದಲ್ಲಿ, ಹೆಚ್ಚಿನ ಮಕ್ಕಳು ಹೊಂದಿಕೊಳ್ಳುತ್ತಾರೆ. ಆದರೂ, ನಿಮ್ಮ ಕಾರ್ಯಮಗ್ನ ವೇಳಾಪಟ್ಟಿಯು ಅನುಮತಿಸುವ ಪ್ರಕಾರ ಅವರೊಂದಿಗೆ ಆದಷ್ಟು ಹೆಚ್ಚು ಸಮಯವನ್ನು ಕಳೆಯುವಂತೆ ಪ್ರಯತ್ನಿಸಿರಿ. ಅಂತಹ ಪ್ರೀತಿಯ ಗಮನವು ಕುಟುಂಬವು ಅನುಭವಿಸಬಹುದಾದ ಯಾವುದೇ ಹಣಕಾಸಿನ ಪರಿಮಿತಿಗಳ ಹೊಡೆತವನ್ನು ಕಡಿಮೆಗೊಳಿಸಲು ಸಹ ನೆರವಾಗಬಲ್ಲದು.—ಜ್ಞಾನೋಕ್ತಿ 15:16, 17.

ಯಾರು ಯಾರನ್ನು ಪರಾಮರಿಸುತ್ತಿದ್ದಾರೆ?

ಸಭೆಯು, “ವಿಧವೆ”ಯರನ್ನು ಮತ್ತು “ಪಿತೃವಿಹೀನ ಬಾಲಕರನ್ನು” ಅಲಕ್ಷಿಸುವುದಿಲ್ಲ

11, 12. ಒಂಟಿ ಹೆತ್ತವರು ಯಾವ ಮೇರೆಗಳನ್ನು ಕಾಪಾಡಿಕೊಳ್ಳಬೇಕು, ಮತ್ತು ಅವರು ಅದನ್ನು ಹೇಗೆ ಮಾಡಬಲ್ಲರು?

11 ಒಂಟಿ ಹೆತ್ತವರು ತಮ್ಮ ಮಕ್ಕಳಿಗೆ ವಿಶೇಷವಾಗಿ ಆಪ್ತ ಸಂಬಂಧದಲ್ಲಿರುವುದು ಸ್ವಾಭಾವಿಕ, ಆದರೂ ಹೆತ್ತವರು ಮತ್ತು ಮಕ್ಕಳ ನಡುವಣ ದೈವನೇಮಿತ ಮೇರೆಗಳು ಮುರಿಯಲ್ಪಡದಂತೆ ಜಾಗ್ರತೆವಹಿಸಬೇಕು. ಉದಾಹರಣೆಗಾಗಿ, ಒಂಟಿ ತಾಯಿಯು ತನ್ನ ಮಗನು, ಕುಟುಂಬದ ತಲೆಯ ಜವಾಬ್ದಾರಿಗಳನ್ನು ವಹಿಸುವಂತೆ ಅಪೇಕ್ಷಿಸುವಲ್ಲಿ ಅಥವಾ ತನ್ನ ಮಗಳನ್ನು ಭರವಸಾರ್ಹ ಸ್ನೇಹಿತೆಯಂತೆ ನೋಡಿ ಆಂತರ್ಯದ ಸಮಸ್ಯೆಗಳಿಂದ ಹುಡುಗಿಯ ಮೇಲೆ ಭಾರಹೊರಿಸುವಲ್ಲಿ, ಗಂಭೀರವಾದ ಸಮಸ್ಯೆಗಳು ಏಳಬಲ್ಲವು. ಹಾಗೆ ಮಾಡುವುದು ಅಯುಕ್ತವೂ, ಒತ್ತಡಭರಿತವೂ ಆಗಿದೆ, ಮತ್ತು ಪ್ರಾಯಶಃ ಅದು ಮಗುವನ್ನು ಕಂಗೆಡಿಸೀತು.

12 ಹೆತ್ತವರೋಪಾದಿ, ನೀವು ನಿಮ್ಮ ಮಕ್ಕಳನ್ನು ಪರಾಮರಿಸುವಿರಿ—ವಿಪರ್ಯಯವಾಗಿ ಅಲ್ಲ ಎಂಬ ಆಶ್ವಾಸನೆಯನ್ನು ನಿಮ್ಮ ಮಕ್ಕಳಿಗೆ ಕೊಡಿರಿ. (ಹೋಲಿಸಿ 2 ಕೊರಿಂಥ 12:14.) ಕೆಲವೊಮ್ಮೆ, ಸ್ವಲ್ಪ ಬುದ್ಧಿವಾದ ಅಥವಾ ಬೆಂಬಲವು ನಿಮಗೆ ಬೇಕಾದೀತು. ಅದನ್ನು ಕ್ರೈಸ್ತ ಹಿರಿಯರಿಂದ ಅಥವಾ ಪಕ್ವತೆಯುಳ್ಳ ಕ್ರೈಸ್ತ ಸ್ತ್ರೀಯರಿಂದ ಕೋರಿರಿ, ನಿಮ್ಮ ಚಿಕ್ಕ ಮಕ್ಕಳಿಂದಲ್ಲ.—ತೀತ 2:3.

ಶಿಸ್ತನ್ನು ಕಾಪಾಡಿಕೊಳ್ಳುವುದು

13. ಶಿಸ್ತಿನ ಸಂಬಂಧದಲ್ಲಿ ಒಬ್ಬ ಒಂಟಿ ತಾಯಿಯು ಯಾವ ಸಮಸ್ಯೆಯನ್ನು ಎದುರಿಸಬಹುದು?

13 ಒಬ್ಬ ಪುರುಷನನ್ನು ಶಿಸ್ತುಪಾಲಕನೋಪಾದಿ ಗಂಭೀರವಾಗಿ ಪರಿಗಣಿಸಲಿಕ್ಕೆ ಹೆಚ್ಚು ಕಷ್ಟವಿರಲಿಕ್ಕಿಲ್ಲ, ಆದರೆ ಸ್ತ್ರೀಗೆ ಈ ವಿಷಯದಲ್ಲಿ ಸಮಸ್ಯೆಗಳಿದ್ದಾವು. ಒಬ್ಬ ಒಂಟಿ ತಾಯಿಯು ಹೇಳುವುದು: “ನನ್ನ ಗಂಡುಮಕ್ಕಳಿಗೆ ಗಂಡಸರ ಮೈಕಟ್ಟು ಮತ್ತು ಗಂಡಸರ ಸ್ವರಗಳಿವೆ. ಕೆಲವು ಸಲ ತುಲನಾತ್ಮಕವಾಗಿ ಅನಿಶ್ಚಿತತೆ ಅಥವಾ ನಿರ್ಬಲತೆಯ ಭಾವವುಳ್ಳವಳಾಗಿ ತೋರಿಬರದಿರುವುದು ತುಂಬ ಕಷ್ಟ.” ಅಷ್ಟಲ್ಲದೆ, ಪ್ರಿಯ ಸಂಗಾತಿಯೊಬ್ಬನ ಮರಣಕ್ಕಾಗಿ ನೀವಿನ್ನೂ ಶೋಕಿಸುತ್ತಿರಬಹುದು, ಅಥವಾ ವೈವಾಹಿಕ ಒಡೆತಕ್ಕಾಗಿ ಪ್ರಾಯಶಃ ದೋಷಿಭಾವನೆ ಅಥವಾ ಕೋಪ ನಿಮಗಿದ್ದೀತು. ಪಾಲಿಗ ಸಂರಕ್ಷಣೆಯಿರುವಲ್ಲಿ, ನಿಮ್ಮ ಮಗು ನಿಮ್ಮ ಮುಂಚಿನ ಸಂಗಾತಿಯೊಂದಿಗೆ ಇರಲು ಇಷ್ಟಪಡುತ್ತದೆಂದು ನೀವು ಹೆದರಬಹುದು. ಸಮತೆಯ ಶಿಸ್ತನ್ನು ಕೊಡಲು ಇಂತಹ ಸನ್ನಿವೇಶಗಳು ಕಷ್ಟಕರವಾಗಿ ಮಾಡಬಲ್ಲವು.

14. ಶಿಸ್ತಿನ ಕುರಿತ ಒಂದು ಸಮತೆಯ ನೋಟವನ್ನು ಒಂಟಿ ಹೆತ್ತವರು ಹೇಗೆ ಕಾಪಾಡಬಲ್ಲರು?

14 “ಶಿಕ್ಷಿಸದೆ ಬಿಟ್ಟ ಹುಡುಗನು ತಾಯಿಯ ಮಾನವನ್ನು ಕಳೆಯುವನು,” ಎಂದು ಬೈಬಲು ಹೇಳುತ್ತದೆ. (ಜ್ಞಾನೋಕ್ತಿ 29:15) ಕುಟುಂಬ ನಿಯಮಗಳನ್ನು ಮಾಡುವುದಕ್ಕೆ ಮತ್ತು ಜಾರಿಗೆ ತರುವುದಕ್ಕೆ ಯೆಹೋವ ದೇವರ ಬೆಂಬಲ ನಿಮಗಿದೆ, ಆದುದರಿಂದ ದೋಷಿಭಾವನೆ, ಮರುಕ, ಅಥವಾ ಭಯಕ್ಕೆ ಆಸ್ಪದಕೊಡಬೇಡಿರಿ. (ಜ್ಞಾನೋಕ್ತಿ 1:8) ಬೈಬಲ್‌ ಮೂಲತತ್ವಗಳನ್ನೇ ಎಂದೂ ಅನುದಾನ ಮಾಡಿಕೊಳ್ಳಬೇಡಿ. (ಜ್ಞಾನೋಕ್ತಿ 13:24) ನ್ಯಾಯಸಮ್ಮತರೂ, ಹೊಂದಿಕೆಯುಳ್ಳವರೂ, ದೃಢತೆಯುಳ್ಳವರೂ ಆಗಿರಲು ಪ್ರಯತ್ನಿಸಿರಿ. ಸಕಾಲದಲ್ಲಿ, ಹೆಚ್ಚಿನ ಮಕ್ಕಳು ಪ್ರತಿಕ್ರಿಯೆ ತೋರಿಸುವರು. ಆದರೂ, ಮಕ್ಕಳ ಭಾವನೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಲು ನೀವು ಬಯಸುವಿರಿ. ಒಬ್ಬ ಒಂಟಿ ತಂದೆಯು ಹೇಳುವುದು: “ತಮ್ಮ ತಾಯಿಯನ್ನು ಕಳೆದುಕೊಂಡ ಧಕ್ಕೆಯ ಕಾರಣ ನನ್ನ ಶಿಸ್ತನ್ನು ತಿಳಿವಳಿಕೆಯೊಂದಿಗೆ ಮೃದುಮಾಡಬೇಕಿತ್ತು. ಪ್ರತಿಯೊಂದು ಅವಕಾಶದಲ್ಲಿ ನಾನು ಅವರೊಂದಿಗೆ ಮಾತನಾಡುತ್ತೇನೆ. ಸಂಜೆಯ ಊಟವನ್ನು ತಯಾರಿಸುವಾಗ ‘ಆಪ್ತತೆಯ ಕ್ಷಣಗಳು’ ನಮಗೆ ದೊರೆಯುತ್ತವೆ. ಅವರು ನಿಜವಾಗಿ ತಮ್ಮ ಆಂತರ್ಯದ ವಿಷಯಗಳನ್ನು ನನಗೆ ತಿಳಿಯಪಡಿಸುವುದು ಆಗಲೇ.”

15. ವಿಚ್ಛೇದಿತ ಹೆತ್ತವರೊಬ್ಬರು ಮಾಜಿ ಸಂಗಾತಿಯ ಕುರಿತು ಮಾತಾಡುವಾಗ ಏನನ್ನು ವರ್ಜಿಸಬೇಕು?

15 ನೀವು ವಿವಾಹ ವಿಚ್ಛೇದಿತರಾಗಿದ್ದರೆ, ನಿಮ್ಮ ಹಿಂದಿನ ಸಂಗಾತಿಯ ಗೌರವವನ್ನು ಕುಂದಿಸುವುದರಿಂದ ಯಾವ ಒಳಿತೂ ಸಾಧಿಸಲ್ಪಡುವುದಿಲ್ಲ. ಹೆತ್ತವರ ಕಾದಾಟವು ಮಕ್ಕಳಿಗೆ ವೇದನೆಯನ್ನು ತರುತ್ತದೆ ಮತ್ತು ಅದು ಕಟ್ಟಕಡೆಗೆ ನಿಮ್ಮಿಬ್ಬರೆಡೆಗೂ ಅವರಿಗಿರುವ ಗೌರವವನ್ನು ಕುಂದಿಸುವುದು. ಆದಕಾರಣ, “ನಿನ್ನ ತಂದೆಯಂತೆಯೇ ನೀನು!” ಎಂಬಂತಹ ಮನನೋಯುವ ಟೀಕೆಗಳನ್ನು ಮಾಡುವುದನ್ನು ವರ್ಜಿಸಿರಿ. ನಿಮ್ಮ ಮಾಜಿ ಸಂಗಾತಿಯು ನಿಮಗೆಷ್ಟೇ ನೋವನ್ನು ಉಂಟುಮಾಡಿರಲಿ, ಅವನು ಅಥವಾ ಅವಳು ಇನ್ನೂ ನಿಮ್ಮ ಮಗುವಿನ ಹೆತ್ತವರಲ್ಲೊಬ್ಬರು, ಮತ್ತು ಅದಕ್ಕೆ ಹೆತ್ತವರಿಬ್ಬರ ಪ್ರೀತಿ, ಗಮನ, ಮತ್ತು ಶಿಸ್ತಿನ ಅಗತ್ಯವಿದೆ. *

16. ಒಂಟಿ ಹೆತ್ತವರೊಬ್ಬರ ಮನೆಯಲ್ಲಿ ಯಾವ ಆತ್ಮಿಕ ಏರ್ಪಾಡುಗಳು ಶಿಸ್ತಿನ ಒಂದು ಕ್ರಮವಾದ ಭಾಗವಾಗಿರಬೇಕು?

16 ಹಿಂದಿನ ಅಧ್ಯಾಯಗಳಲ್ಲಿ ಚರ್ಚಿಸಿರುವಂತೆ, ಶಿಸ್ತಿನಲ್ಲಿ ತರಬೇತು ಮತ್ತು ಉಪದೇಶವು ಒಳಗೂಡುತ್ತದೆ, ಕೇವಲ ಶಿಕ್ಷೆಯಲ್ಲ. ಆತ್ಮಿಕ ಶಿಕ್ಷಣದ ಒಂದು ಒಳ್ಳೇ ಕಾರ್ಯಕ್ರಮದ ಮೂಲಕ ಅನೇಕ ಸಮಸ್ಯೆಗಳು ತೊಲಗಿಸಲ್ಪಡಬಲ್ಲವು. (ಫಿಲಿಪ್ಪಿ 3:16) ಕ್ರೈಸ್ತ ಕೂಟಗಳಲ್ಲಿ ಕ್ರಮವಾದ ಉಪಸ್ಥಿತಿಯು ಅತ್ಯಾವಶ್ಯಕ. (ಇಬ್ರಿಯ 10:24, 25) ಅದೇ ರೀತಿ ಸಾಪ್ತಾಹಿಕ ಕುಟುಂಬ ಬೈಬಲಧ್ಯಯನವು ಸಹ. ಅಂತಹ ಒಂದು ಅಧ್ಯಯನವನ್ನು ಕ್ರಮವಾಗಿ ನಡಸುತ್ತಾ ಇರುವುದು ಸುಲಭವಲ್ಲ ನಿಜ. “ದಿನದ ಕೆಲಸದ ಅನಂತರ ನೀವು ನಿಜವಾಗಿ ವಿಶ್ರಮಿಸಬಯಸುತ್ತೀರಿ,” ಎನ್ನುತ್ತಾಳೆ ಒಬ್ಬ ಶುದ್ಧಾಂತಃಕರಣದ ತಾಯಿ. “ಆದರೆ ಅದು ಅವಶ್ಯವಾಗಿ ಮಾಡಬೇಕಾದ ಒಂದು ವಿಷಯವೆಂದು ತಿಳಿದವಳಾಗಿ, ನನ್ನ ಮಗಳೊಂದಿಗೆ ಅಭ್ಯಸಿಸಲು ನಾನು ನನ್ನನ್ನು ಮಾನಸಿಕವಾಗಿ ತಯಾರಿಸಿಕೊಳ್ಳುತ್ತೇನೆ. ನಮ್ಮ ಕುಟುಂಬ ಅಭ್ಯಾಸದಲ್ಲಿ ಅವಳು ನಿಜವಾಗಿ ಆನಂದಿಸುತ್ತಾಳೆ!”

17. ಪೌಲನ ಸಂಗಡಿಗನಾದ ತಿಮೊಥೆಯನ ಉತ್ತಮ ಪಾಲನೆಯಿಂದ ನಾವೇನನ್ನು ಕಲಿಯಬಲ್ಲೆವು?

17 ಅಪೊಸ್ತಲ ಪೌಲನ ಸಂಗಡಿಗನಾದ ತಿಮೊಥೆಯನಿಗೆ ಅವನ ತಾಯಿ ಮತ್ತು ಅಜ್ಜಿಯಿಂದ ಬೈಬಲ್‌ ಮೂಲತತ್ವಗಳ ತರಬೇತು ನೀಡಲ್ಪಟ್ಟಿತೆಂಬುದು ಸ್ಪಷ್ಟ—ಅವನ ತಂದೆಯಿಂದ ಅಲ್ಲವೆಂಬುದು ವ್ಯಕ್ತ. ಆದರೂ ತಿಮೊಥೆಯನು ಎಂತಹ ಗಮನಾರ್ಹನಾದ ಒಬ್ಬ ಕ್ರೈಸ್ತನಾದನು! (ಅ. ಕೃತ್ಯಗಳು 16:1, 2; 2 ತಿಮೊಥೆಯ 1:5; 3:14, 15) ತದ್ರೀತಿಯಲ್ಲಿ ನೀವು ಸಹ ನಿಮ್ಮ ಮಕ್ಕಳನ್ನು “ಯೆಹೋವನ ಶಿಸ್ತಿನಲ್ಲಿ ಮತ್ತು ಮಾನಸಿಕ ಕ್ರಮಪಡಿಸುವಿಕೆಯಲ್ಲಿ” ಬೆಳೆಸಲು ಪ್ರಯಾಸಪಡುವಾಗ ಶುಭಕರವಾದ ಪರಿಣಾಮಗಳನ್ನು ನಿರೀಕ್ಷಿಸಬಲ್ಲಿರಿ.ಎಫೆಸ 6:4, NW.

ಏಕಾಂತತೆಯ ವಿರುದ್ಧ ಹೋರಾಟವನ್ನು ಜಯಿಸುವುದು

18, 19. (ಎ) ಒಂಟಿ ಹೆತ್ತವರೊಬ್ಬರಿಗೆ ಏಕಾಂತತೆಯು ಹೇಗೆ ಕಾಣಿಸಿಕೊಳ್ಳಬಲ್ಲದು? (ಬಿ) ಶರೀರದಾಶೆಗಳನ್ನು ನಿಯಂತ್ರಿಸಲು ಸಹಾಯಕ್ಕಾಗಿ ಯಾವ ಸಲಹೆಯು ಕೊಡಲ್ಪಡುತ್ತದೆ?

18 ಒಂಟಿ ಹೆತ್ತವರಲ್ಲೊಬ್ಬರು ನಿಡುಸುಯ್ದು ಹೇಳಿದ್ದು: “ನಾನು ಮನೆಗೆ ಬಂದು ಆ ನಾಲ್ಕು ಗೋಡೆಗಳನ್ನು ಕಾಣುವಾಗ, ಮತ್ತು ವಿಶೇಷವಾಗಿ ಮಕ್ಕಳು ಮಲಗಿದ ಬಳಿಕ, ಏಕಾಂತತೆಯು ನಿಜವಾಗಿ ನನ್ನನ್ನು ಮುತ್ತುತ್ತದೆ.” ಹೌದು, ಏಕಾಂತತೆಯು ಒಂಟಿ ಹೆತ್ತವನು ಆಗಾಗ ಎದುರಿಸುವ ಅತ್ಯಂತ ದೊಡ್ಡ ಸಮಸ್ಯೆಯಾಗಿದೆ. ವಿವಾಹದ ಹಾರ್ದಿಕವಾದ ಸಾಹಚರ್ಯ ಮತ್ತು ಆಪ್ತತೆಗಳಿಗಾಗಿ ಹಾತೊರೆಯುವುದು ಸ್ವಾಭಾವಿಕ. ಆದರೆ ಯಾವುದೇ ಬೆಲೆಯನ್ನು ಕೊಟ್ಟಾದರೂ ವ್ಯಕ್ತಿಯೊಬ್ಬನು ಈ ಸಮಸ್ಯೆಯನ್ನು ನೀಗಿಸಲು ಪ್ರಯತ್ನಿಸಬೇಕೊ? ಅಪೊಸ್ತಲ ಪೌಲನ ದಿನದಲ್ಲಿ, ಕೆಲವು ಯುವ ವಿಧವೆಯರು “ತಮ್ಮ ಲೈಂಗಿಕ ಅಭಿಲಾಷೆಗಳು ಅವರ ಮತ್ತು ಕ್ರಿಸ್ತನ ನಡುವೆ ಬರುವಂತೆ” ಬಿಟ್ಟುಕೊಟ್ಟರು. (1 ತಿಮೊಥೆಯ 5:11, 12, NW) ಶರೀರದಾಶೆಗಳು ಆತ್ಮಿಕ ಅಭಿರುಚಿಗಳನ್ನು ಮಬ್ಬುಗೊಳಿಸುವಂತೆ ಅನುಮತಿಸುವುದು ಹಾನಿಕರವಾಗಿರುವುದು.—1 ತಿಮೊಥೆಯ 5:6.

19 ಒಬ್ಬ ಕ್ರೈಸ್ತ ಪುರುಷನು ಹೇಳಿದ್ದು: “ಲೈಂಗಿಕ ಪ್ರಚೋದನೆಗಳು ಬಹು ಪ್ರಬಲವಾಗಿರುತ್ತವೆ, ಆದರೆ ನೀವು ಅವನ್ನು ನಿಯಂತ್ರಣದಲ್ಲಿಡಸಾಧ್ಯವಿದೆ. ಒಂದು ಯೋಚನೆಯು ನಿಮ್ಮ ಮನಸ್ಸಿಗೆ ಬರುವಾಗ, ನೀವು ಅದರಲ್ಲೇ ತಲ್ಲೀನರಾಗಬಾರದು. ನೀವು ಅದನ್ನು ತೊಡೆದುಹಾಕಲೇಬೇಕು. ನಿಮ್ಮ ಮಗುವಿನ ಕುರಿತು ಯೋಚಿಸುವುದು ಸಹ ಸಹಾಯಕಾರಿ.” ದೇವರ ವಾಕ್ಯವು ಸಲಹೆ ನೀಡುವುದು: ‘ಕಾಮಾಭಿಲಾಷೆಯ ಸಂಬಂಧದಲ್ಲಿ ನಿಮ್ಮ ಶರೀರದ ಅಂಗಗಳನ್ನು ಕುಗ್ಗಿಸಿರಿ.’ (ಕೊಲೊಸ್ಸೆ 3:5) ಆಹಾರಕ್ಕಾಗಿ ನಿಮ್ಮ ರುಚಿಯನ್ನು ಕುಗ್ಗಿಸಲು ನೀವು ಪ್ರಯತ್ನಿಸುತ್ತಿದ್ದುದಾದರೆ, ರಸವತ್ತಾದ ಆಹಾರಗಳ ಚಿತ್ರಗಳನ್ನು ತೋರಿಸುವ ಪತ್ರಿಕೆಗಳನ್ನು ಓದುವಿರೋ, ಅಥವಾ ಸದಾ ಆಹಾರದ ಕುರಿತು ಮಾತಾಡುವ ಜನರ ಸಹವಾಸ ಮಾಡುವಿರೊ? ಇಲ್ಲ! ಶರೀರದಾಶೆಗಳ ಸಂಬಂಧದಲ್ಲಿಯೂ ಅದೇ ನಿಜವಾಗಿದೆ.

20. (ಎ) ಅವಿಶ್ವಾಸಿಗಳೊಂದಿಗೆ ಪ್ರಣಯ ಯಾಚಿಸುವವರಿಗಾಗಿ ಯಾವ ಅಪಾಯವು ಹೊಂಚುಕಾಯುತ್ತದೆ? (ಬಿ) ಒಂಟಿ ಜನರು ಒಂದನೆಯ ಶತಕದಲ್ಲಿಯೂ ಇಂದೂ ಹೇಗೆ ಏಕಾಂತತೆಯನ್ನು ಹೋರಾಡಿದ್ದಾರೆ?

20 ಕೆಲವು ಕ್ರೈಸ್ತರು ಅವಿಶ್ವಾಸಿಗಳೊಂದಿಗೆ ಪ್ರಣಯಯಾಚನೆಗಳಲ್ಲಿ ಪ್ರವೇಶಿಸಿದ್ದಾರೆ. (1 ಕೊರಿಂಥ 7:39) ಅದು ಅವರ ಸಮಸ್ಯೆಯನ್ನು ಪರಿಹರಿಸಿತೋ? ಇಲ್ಲ. ಒಬ್ಬ ವಿಚ್ಛೇದಿತ ಕ್ರೈಸ್ತ ಸ್ತ್ರೀಯು ಎಚ್ಚರಿಸಿದ್ದು: “ಅವಿವಾಹಿತರಾಗಿರುವುದಕ್ಕಿಂತ ಹೆಚ್ಚು ಕೆಟ್ಟದಾದ ಒಂದು ಸಂಗತಿಯಿದೆ. ಅದು ತಪ್ಪಾದ ವ್ಯಕ್ತಿಯನ್ನು ವಿವಾಹವಾಗಿರುವುದೇ!” ಒಂದನೆಯ ಶತಮಾನದ ಕ್ರೈಸ್ತ ವಿಧವೆಯರಿಗೆ ಏಕಾಂತತೆಯ ಸರದಿಗಳಿದ್ದವು ನಿಸ್ಸಂಶಯ, ಆದರೆ ಬುದ್ಧಿವಂತೆಯರು ‘ಅಪರಿಚಿತರಿಗೆ ಅತಿಥಿಸತ್ಕಾರ ಮಾಡುತ್ತಾ, ದೇವಜನರ ಪಾದಗಳನ್ನು ತೊಳೆಯುತ್ತಾ, ಸಂಕಟದಲ್ಲಿ ಬಿದ್ದವರನ್ನು ಉಪಶಮನಮಾಡುತ್ತಾ’ ಕಾರ್ಯಮಗ್ನರಾಗಿರಿಸಿಕೊಂಡರು. (1 ತಿಮೊಥೆಯ 5:10) ದೈವಭಯವುಳ್ಳ ಸಂಗಾತಿಯನ್ನು ಕಂಡುಕೊಳ್ಳಲು ಅನೇಕ ವರ್ಷಗಳಿಂದ ಕಾದಿರುವ ನಂಬಿಗಸ್ತ ಕ್ರೈಸ್ತರು ಇಂದು ತದ್ರೀತಿಯಲ್ಲಿ ಕಾರ್ಯಮಗ್ನರಾಗಿದ್ದಾರೆ. ಒಬ್ಬ 68 ವರ್ಷ ವಯಸ್ಸಿನ ಕ್ರೈಸ್ತ ವಿಧವೆಯು, ಏಕಾಂತತೆಯ ಅನಿಸಿಕೆಯಾದಾಗೆಲ್ಲಾ ಬೇರೆ ವಿಧವೆಯರನ್ನು ಭೇಟಿಮಾಡತೊಡಗಿದಳು. ಅವಳಂದದ್ದು: “ಈ ಭೇಟಿಗಳನ್ನು ಮಾಡುತ್ತಾ, ನನ್ನ ಮನೆಗೆಲಸಗಳನ್ನು ನೋಡಿಕೊಳ್ಳುತ್ತಾ, ನನ್ನ ಆತ್ಮಿಕತೆಯನ್ನು ಪರಾಮರಿಸುತ್ತಾ ಇರುವ ಮೂಲಕ ನನಗೆ ಏಕಾಕಿಯಾಗಿರಲು ಸಮಯವೇ ಇಲ್ಲವೆಂದು ನಾನು ಕಂಡುಕೊಳ್ಳುತ್ತೇನೆ.” ದೇವರ ರಾಜ್ಯದ ಕುರಿತು ಇತರರಿಗೆ ಕಲಿಸುವುದು ಒಂದು ವಿಶೇಷವಾಗಿ ಲಾಭದಾಯಕವಾದ ಸತ್ಕಾರ್ಯವಾಗಿದೆ.—ಮತ್ತಾಯ 28:19, 20.

21. ಪ್ರಾರ್ಥನೆ ಮತ್ತು ಸುಸಹವಾಸವು ಏಕಾಂತತೆಯನ್ನು ನೀಗಿಸಲು ಯಾವ ರೀತಿಯಲ್ಲಿ ನೆರವಾಗಬಲ್ಲದು?

21 ಏಕಾಂತತೆಗೆ ಅದ್ಭುತ ಚಿಕಿತ್ಸೆಯಿಲ್ಲವೆಂಬುದು ಒಪ್ಪತಕ್ಕದ್ದೇ. ಆದರೆ ಅದನ್ನು ಯೆಹೋವನಿಂದ ಬರುವ ಶಕ್ತಿಯಿಂದ ತಾಳಿಕೊಳ್ಳಲು ಸಾಧ್ಯವಿದೆ. ಒಬ್ಬ ಕ್ರೈಸ್ತನು “ಹಗಲಿರುಳು ವಿಜ್ಞಾಪನೆಯಲ್ಲಿಯೂ ಪ್ರಾರ್ಥನೆಗಳಲ್ಲಿಯೂ” ಪಟ್ಟುಹಿಡಿಯುವಾಗ ಅಂತಹ ಬಲವು ಬರುತ್ತದೆ. (1 ತಿಮೊಥೆಯ 5:5) ವಿಜ್ಞಾಪನೆಗಳು ಶ್ರದ್ಧಾಪೂರ್ವಕವಾದ ಬೇಡಿಕೆಗಳಾಗಿವೆ, ಹೌದು, ಪ್ರಾಯಶಃ ಬಲವಾದ ಕೂಗು ಮತ್ತು ಕಣ್ಣೀರಿನೊಂದಿಗೆ ಸಹಾಯಕ್ಕಾಗಿ ಮಾಡುವ ಬೇಡಿಕೆಯಾಗಿದೆ. (ಹೋಲಿಸಿ ಇಬ್ರಿಯ 5:7.) ಯೆಹೋವನಿಗೆ ನಿಮ್ಮ ಆಂತರ್ಯವನ್ನು “ಹಗಲಿರುಳು” ಹೊಯ್ದುಕೊಳ್ಳುವುದು ನಿಜವಾಗಿ ಸಹಾಯವಾಗಿರಬಲ್ಲದು. ಅದಲ್ಲದೆ, ಹಿತಕರವಾದ ಸಹವಾಸವು ಏಕಾಂತತೆಯ ಶೂನ್ಯತೆಯನ್ನು ತುಂಬಿಸಲು ಹೆಚ್ಚನ್ನು ಮಾಡಬಲ್ಲದು. ಒಳ್ಳೇ ಸಹವಾಸದ ಮೂಲಕ ಜ್ಞಾನೋಕ್ತಿ 12:25 (NW)ರಲ್ಲಿ ವರ್ಣಿಸಲಾದ ಪ್ರೋತ್ಸಾಹನೆಯ “ಸುನುಡಿ”ಯನ್ನು ಒಬ್ಬನು ಪಡೆಯಬಲ್ಲನು.

22. ಏಕಾಂತತೆಯು ಆಗಿಂದಾಗ್ಗೆ ಉದಯಿಸುವಾಗ ಯಾವ ಪರಿಗಣನೆಗಳು ಸಹಾಯವಾಗುವವು?

22 ಏಕಾಂತತೆಯ ಅನಿಸಿಕೆಗಳು ಆಗಿಂದಾಗ್ಗೆ ಉದಯಿಸುವುದಾದರೆ—ಹಾಗಾಗುವುದು ಸಂಭವನೀಯ—ಜೀವನದಲ್ಲಿ ಯಾರೊಬ್ಬನೂ ಸಮಸ್ಯೆಯಿಂದ ಮುಕ್ತನಲ್ಲವೆಂಬುದನ್ನು ನೆನಪಿಡಿರಿ. “ನಿಮ್ಮ ಸಹೋದರರ ಸಮಸ್ತ ಒಡನಾಟವು” ಒಂದಲ್ಲ ಒಂದು ರೀತಿಯಲ್ಲಿ ಕಷ್ಟಾನುಭವಿಸುತ್ತಿದೆ ಎಂಬುದು ನಿಶ್ಚಯ. (1 ಪೇತ್ರ 5:9, NW) ಗತವಿಷಯಗಳ ಕುರಿತಾಗಿ ಗಮನವಿಡುತ್ತಿರುವುದನ್ನು ವರ್ಜಿಸಿರಿ. (ಪ್ರಸಂಗಿ 7:10) ನೀವು ಅನುಭವಿಸುತ್ತಿರುವ ಪ್ರಯೋಜನಗಳನ್ನು ಪರಾಮರ್ಶಿಸಿರಿ. ಎಲ್ಲದಕ್ಕಿಂತ ಹೆಚ್ಚಾಗಿ, ನಿಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಮತ್ತು ಯೆಹೋವನ ಹೃದಯವನ್ನು ಸಂತೋಷಪಡಿಸಲು ದೃಢನಿಶ್ಚಯದಿಂದಿರ್ರಿ.—ಜ್ಞಾನೋಕ್ತಿ 27:11.

ಇತರರು ಸಹಾಯ ಮಾಡಬಲ್ಲ ವಿಧ

23. ಸಭೆಯಲ್ಲಿರುವ ಒಂಟಿ ಹೆತ್ತವರ ಕಡೆಗೆ ಜೊತೆ ಕ್ರೈಸ್ತರಿಗೆ ಯಾವ ಜವಾಬ್ದಾರಿಯಿದೆ?

23 ಜೊತೆ ಕ್ರೈಸ್ತರ ಬೆಂಬಲ ಮತ್ತು ಸಹಾಯವು ಅಮೂಲ್ಯವಾಗಿದೆ. ಯಾಕೋಬ 1:27 ಹೇಳುವುದು: “ಸಂಕಟದಲ್ಲಿ ಬಿದ್ದ ದಿಕ್ಕಿಲ್ಲದವರನ್ನೂ [“ಅನಾಥರನ್ನೂ,” NW] ವಿಧವೆಯರನ್ನೂ ಪರಾಮರಿಸಿ ತನಗೆ ಪ್ರಪಂಚದ ದೋಷವು ಹತ್ತದಂತೆ ನೋಡಿಕೊಂಡಿರುವದೇ ತಂದೆಯಾದ ದೇವರ ಸನ್ನಿಧಾನದಲ್ಲಿ ಶುದ್ಧವೂ ನಿರ್ಮಲವೂ ಆಗಿರುವ ಭಕ್ತಿ.” ಹೌದು, ಒಂಟಿ ಹೆತ್ತವರ ಕುಟುಂಬಗಳಿಗೆ ನೆರವಾಗುವುದು ಕ್ರೈಸ್ತರ ಹಂಗಾಗಿದೆ. ಇದನ್ನು ಮಾಡಬಹುದಾದ ಕೆಲವು ಪ್ರಾಯೋಗಿಕ ವಿಧಾನಗಳು ಯಾವುವು?

24. ಕೊರತೆಯುಳ್ಳ ಒಂಟಿ ಹೆತ್ತವರ ಕುಟುಂಬಗಳಿಗೆ ಯಾವ ವಿಧಗಳಲ್ಲಿ ಸಹಾಯ ನೀಡಲ್ಪಡಬಹುದು?

24 ಪ್ರಾಪಂಚಿಕ ಸಹಾಯವನ್ನು ನೀಡಸಾಧ್ಯವಿದೆ. ಬೈಬಲು ಅನ್ನುವುದು: “ಈ ಲೋಕದ ಸಂಪತ್ತುಳ್ಳ ಯಾವನಾದರೂ ಕೊರತೆಯಲ್ಲಿ ಬಿದ್ದಿರುವ ತನ್ನ ಸಹೋದರನನ್ನು ನೋಡಿ ಕರುಣಿಸದೆ ಬಿಟ್ಟರೆ ದೇವರ ಪ್ರೀತಿಯು ಅವನಲ್ಲಿ ನೆಲೆಗೊಂಡಿರುವದುಂಟೇ?” (1 ಯೋಹಾನ 3:17) “ನೋಡಿ” ಎಂಬುದರ ಮೂಲ ಗ್ರೀಕ್‌ ಪದಕ್ಕೆ, ಗುರಿಯಿಲ್ಲದ ಒಂದು ನೋಟವಲ್ಲ, ಬುದ್ಧಿಪೂರ್ವಕ ನೆಟ್ಟನೋಟ ಎಂಬರ್ಥವಿದೆ. ದಯೆಯುಳ್ಳ ಕ್ರೈಸ್ತನೊಬ್ಬನು ಒಂದು ಕುಟುಂಬದ ಪರಿಸ್ಥಿತಿಗಳನ್ನು ಮತ್ತು ಅಗತ್ಯಗಳನ್ನು ಮುಂಚಿತವಾಗಿ ತಿಳಿದಿರುವವನಾಗಬಹುದೆಂದು ಇದು ಸೂಚಿಸುತ್ತದೆ. ಪ್ರಾಯಶಃ ಅವರಿಗೆ ಹಣದ ಅಗತ್ಯವಿರಬಹುದು. ಕೆಲವರಿಗೆ ಮನೆವಾರ್ತೆಯ ದುರಸ್ತುಗಳಿಗಾಗಿ ಸಹಾಯ ಬೇಕಾಗಬಹುದು. ಅಥವಾ ಒಂದು ಊಟಕ್ಕಾಗಿ ಇಲ್ಲವೇ ಸಾಮಾಜಿಕ ಗೋಷ್ಠಿಗಾಗಿ ಕೇವಲ ಆಮಂತ್ರಿಸಲ್ಪಡುವುದನ್ನು ಅವರು ಗಣ್ಯಮಾಡಾರು.

25. ಒಂಟಿ ಹೆತ್ತವರೆಡೆಗೆ ಜೊತೆ ಕ್ರೈಸ್ತರು ಹೇಗೆ ಕನಿಕರವನ್ನು ತೋರಿಸಬಹುದು?

25 ಇದಕ್ಕೆ ಕೂಡಿಸಿ, 1 ಪೇತ್ರ 3:8 (NW) ಹೇಳುವುದು: “ನೀವೆಲ್ಲರೂ ಸಹಾನುಭೂತಿಯನ್ನು ತೋರಿಸುತ್ತಾ, ಸಹೋದರಿಕೆಯ ಮಮತೆಯುಳ್ಳವರಾಗಿರುತ್ತಾ, ಕೋಮಲವಾದ ಅನುಕಂಪವುಳ್ಳವರಾಗಿರುತ್ತಾ, ಸಮಾನಮನಸ್ಕರಾಗಿರಿ.” ಆರು ಮಕ್ಕಳ ಒಬ್ಬ ಒಂಟಿ ಹೆತ್ತವಳು ಹೇಳಿದ್ದು: “ಅದನ್ನು ಸಹಿಸುವುದು ಕಷ್ಟಕರ ಮತ್ತು ಕೆಲವು ಸಲ ನಾನು ಬಹಳ ಕುಗ್ಗಿಹೋಗುತ್ತೇನೆ. ಆದರೂ, ಕೆಲವೊಮ್ಮೆ ಸಹೋದರರಲ್ಲಿ ಅಥವಾ ಸಹೋದರಿಯರಲ್ಲಿ ಒಬ್ಬರು, ‘ಜೋನ್‌, ನೀನು ಒಳ್ಳೇ ಕೆಲಸ ಮಾಡುತ್ತಿದ್ದೀ, ಅದು ಸಾರ್ಥಕವಾಗಲಿದೆ,’ ಎಂದು ಹೇಳುತ್ತಾರೆ. ಇತರರು ನಿಮ್ಮ ಕುರಿತು ಯೋಚಿಸುತ್ತಿದ್ದಾರೆ ಮತ್ತು ಅವರಿಗೆ ಚಿಂತೆಯಿದೆ ಎಂದು ತಿಳಿಯುವುದು ತಾನೇ ಎಷ್ಟೊ ಸಹಾಯಕರ.” ಒಬ್ಬ ಪುರುಷನೊಂದಿಗೆ ಚರ್ಚಿಸಲು ತೊಡಕಾಗಿರಬಹುದಾದ ಸಮಸ್ಯೆಗಳು ಅವರಿಗಿರುವಾಗ, ವಯಸ್ಕ ಕ್ರೈಸ್ತ ಸ್ತ್ರೀಯರು ಒಂಟಿ ಹೆತ್ತವರಾದ ಯುವ ಸ್ತ್ರೀಯರಿಗೆ ಕಿವಿಗೊಡುತ್ತಾ, ಅವರಿಗೆ ಸಹಾಯ ನೀಡುವುದರಲ್ಲಿ ವಿಶೇಷವಾಗಿ ಪರಿಣಾಮಕಾರಿಗಳಾಗಿರಬಹುದು.

26. ಪಿತೃವಿಹೀನ ಮಕ್ಕಳಿಗೆ ಪಕ್ವತೆಯುಳ್ಳ ಕ್ರೈಸ್ತ ಪುರುಷರು ಹೇಗೆ ಸಹಾಯ ನೀಡಬಲ್ಲರು?

26 ಕ್ರೈಸ್ತ ಪುರುಷರು ಬೇರೆ ವಿಧಗಳಲ್ಲಿ ಸಹಾಯ ಕೊಡಬಲ್ಲರು. ನೀತಿವಂತನಾದ ಯೋಬನು ಹೇಳಿದ್ದು: “ಅಂಗಲಾಚುವ ಬಡವನನ್ನೂ ಸಹಾಯಕನಿಲ್ಲದ ಅನಾಥನನ್ನೂ ರಕ್ಷಿಸುವವನಾಗಿದ್ದೆನು.” (ಯೋಬ 29:12) ತದ್ರೀತಿಯಲ್ಲಿ, ಇಂದು ಕೆಲವು ಕ್ರೈಸ್ತ ಪುರುಷರು ತಂದೆಯಿಲ್ಲದ ಮಕ್ಕಳಲ್ಲಿ ಹಿತಕರವಾದ ಆಸಕ್ತಿಯನ್ನು ತೆಗೆದುಕೊಂಡು, ಯಾವ ಗುಪ್ತ ಹೇತುಗಳೂ ಇಲ್ಲದವರಾಗಿ “ಶುದ್ಧ ಹೃದಯ”ದಿಂದ ಹುಟ್ಟಿದ ನಿಜ “ಪ್ರೀತಿ”ಯನ್ನು ತೋರಿಸುತ್ತಾರೆ. (1 ತಿಮೊಥೆಯ 1:5) ತಮ್ಮ ಸ್ವಂತ ಕುಟುಂಬಗಳನ್ನು ಅಸಡ್ಡೆಮಾಡದೆ, ಅವರು ಅಂತಹ ಎಳೆಯರೊಂದಿಗೆ ಕ್ರೈಸ್ತ ಶುಶ್ರೂಷೆಯಲ್ಲಿ ಸೇವೆಮಾಡಲು ಆಗಿಂದಾಗ್ಗೆ ಏರ್ಪಡಿಸಬಹುದು ಮತ್ತು ಕುಟುಂಬದ ಬೈಬಲಧ್ಯಯನದಲ್ಲಿ ಅಥವಾ ವಿನೋದದಲ್ಲಿ ಪಾಲಿಗರಾಗಲೂ ಆಮಂತ್ರಿಸಬಹುದು. ಅಂತಹ ದಯಾಪರತೆಯು ತಂದೆಯಿಲ್ಲದ ಮಗುವನ್ನು ಓರೆಯಾದ ಮಾರ್ಗದಿಂದ ರಕ್ಷಿಸಬಲ್ಲದು ನಿಶ್ಚಯ.

27. ಯಾವ ಬೆಂಬಲದ ಕುರಿತು ಒಂಟಿ ಹೆತ್ತವರು ಆಶ್ವಾಸನೆಯಿಂದಿರಬಲ್ಲರು?

27 ನಿಶ್ಚಯವಾಗಿಯೂ ಕಟ್ಟಕಡೆಗೆ, ಒಂಟಿ ಹೆತ್ತವರಿಗೆ ‘ತಮ್ಮ ಸ್ವಂತ ಹೊರೆಯನ್ನು’ ಹೊತ್ತುಕೊಳ್ಳಲೇಬೇಕಾಗಿದೆ. (ಗಲಾತ್ಯ 6:5) ಆದರೂ ಅವರು, ಕ್ರೈಸ್ತ ಸಹೋದರ ಮತ್ತು ಸಹೋದರಿಯರ ಮತ್ತು ಸ್ವತಃ ಯೆಹೋವ ದೇವರ ಪ್ರೀತಿಯನ್ನು ಪಡೆಯಬಲ್ಲರು. ಬೈಬಲು ಅವನ ಕುರಿತು ಹೇಳುವುದು: “ಆತನು ಪಿತೃವಿಹೀನ ಬಾಲಕನಿಗೂ ವಿಧವೆಗೂ ನೆಮ್ಮದಿಯನ್ನೇ ಕೊಡುತ್ತಾನೆ.” (ಕೀರ್ತನೆ 146:9, NW) ಆತನ ಪ್ರೀತಿಯ ಬೆಂಬಲದಿಂದ, ಒಂಟಿ ಹೆತ್ತವರ ಕುಟುಂಬಗಳು ಯಶಸ್ವಿಯಾಗಬಲ್ಲವು!

^ ಅನೈತಿಕ ನಡತೆಯಿಂದಾಗಿ ಒಬ್ಬ ಯುವ ಕ್ರೈಸ್ತಳು ಗರ್ಭಿಣಿಯಾಗುವಲ್ಲಿ, ಕ್ರೈಸ್ತ ಸಭೆಯು ನಿಶ್ಚಯವಾಗಿಯೂ ಅವಳ ತಪ್ಪನ್ನು ಮನ್ನಿಸುವುದಿಲ್ಲ. ಆದರೆ ಅವಳು ಪಶ್ಚಾತ್ತಾಪಪಡುವಲ್ಲಿ, ಸಭಾ ಹಿರಿಯರು ಮತ್ತು ಸಭೆಯಲ್ಲಿರುವ ಇತರರು ಅವಳಿಗೆ ಸಹಾಯ ನೀಡಲು ಬಯಸಬಹುದು.

^ ಅಪಪ್ರಯೋಗಿಸುವ ಹೆತ್ತವನೊಬ್ಬನಿಂದ ಸಂರಕ್ಷಿಸಲ್ಪಡುವ ಅಗತ್ಯವಿರಬಹುದಾದ ಒಂದು ಮಗುವಿನ ಸನ್ನಿವೇಶಗಳಿಗೆ ನಾವು ಸೂಚಿಸುತ್ತಿಲ್ಲ. ಅಲ್ಲದೆ, ಪ್ರಾಯಶಃ ಮಕ್ಕಳು ನಿಮ್ಮನ್ನು ಬಿಟ್ಟುಹೋಗುವಂತೆ ಒತ್ತಾಯಿಸುವ ನೋಟದಲ್ಲಿ, ಆ ಇನ್ನೊಬ್ಬ ಹೆತ್ತವರು ನಿಮ್ಮ ಅಧಿಕಾರವನ್ನು ನಿರ್ಬಲಗೊಳಿಸಲು ಪ್ರಯತ್ನಿಸುವಲ್ಲಿ, ಪರಿಸ್ಥಿತಿಯನ್ನು ನಿರ್ವಹಿಸುವುದರ ಕುರಿತಾದ ಬುದ್ಧಿವಾದಕ್ಕಾಗಿ, ಕ್ರೈಸ್ತ ಸಭೆಯ ಹಿರಿಯರಂತಹ ಅನುಭವಸ್ಥ ಸ್ನೇಹಿತರೊಂದಿಗೆ ಮಾತನಾಡುವುದು ಸೂಕ್ತವಾಗಿದ್ದೀತು.