ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ ಒಂದು

ಕುಟುಂಬ ಸಂತೋಷದ ರಹಸ್ಯವೊಂದಿದೆಯೆ?

ಕುಟುಂಬ ಸಂತೋಷದ ರಹಸ್ಯವೊಂದಿದೆಯೆ?

1. ಮಾನವ ಸಮಾಜದಲ್ಲಿ ಪ್ರಬಲವಾದ ಕುಟುಂಬಗಳು ಪ್ರಾಮುಖ್ಯವೇಕೆ?

 ಕುಟುಂಬವು ಭೂಮಿಯ ಮೇಲಿರುವ ಅತ್ಯಂತ ಹಳೆಯ ಸಂಸ್ಥೆಯಾಗಿದ್ದು ಅದು ಮಾನವ ಸಮಾಜದಲ್ಲಿ ಒಂದು ಮಹತ್ವದ ಪಾತ್ರವನ್ನು ವಹಿಸುತ್ತದೆ. ಇತಿಹಾಸದಾದ್ಯಂತ, ಪ್ರಬಲವಾದ ಕುಟುಂಬಗಳು ಪ್ರಬಲವಾದ ಸಮಾಜಗಳನ್ನು ನಿರ್ಮಿಸಲು ಸಹಾಯ ಮಾಡಿವೆ. ಮಕ್ಕಳನ್ನು, ಪಕ್ವತೆಯ ವಯಸ್ಕರನ್ನಾಗಿ ಬೆಳೆಸಲಿಕ್ಕಾಗಿ ಕುಟುಂಬವು ಅತ್ಯುತ್ತಮವಾದ ಏರ್ಪಾಡಾಗಿದೆ.

2-5. (ಎ) ಒಂದು ಸಂತೋಷದ ಕುಟುಂಬದಲ್ಲಿ ಒಬ್ಬ ಮಗನು ಅನುಭವಿಸುವ ಭದ್ರತೆಯನ್ನು ವರ್ಣಿಸಿರಿ. (ಬಿ) ಕೆಲವು ಕುಟುಂಬಗಳಲ್ಲಿ ಯಾವ ಸಮಸ್ಯೆಗಳು ವರದಿಸಲ್ಪಡುತ್ತವೆ?

2 ಸಂತೋಷದ ಕುಟುಂಬವು ಸುರಕ್ಷಿತತ್ವ ಮತ್ತು ಭದ್ರತೆಯ ಒಂದು ಆಶ್ರಯಸ್ಥಾನ. ಆದರ್ಶಪ್ರಾಯವಾಗಿರುವ ಕುಟುಂಬವನ್ನು ಒಂದು ಕ್ಷಣ ಕಲ್ಪಿಸಿಕೊಳ್ಳಿರಿ. ಸಂಧ್ಯಾ ಭೋಜನದ ಸಮಯ, ಚಿಂತೆ ವಹಿಸುವ ಹೆತ್ತವರು ತಮ್ಮ ಮಕ್ಕಳೊಂದಿಗೆ ಕುಳಿತು ದಿನದ ಆಗುಹೋಗುಗಳನ್ನು ಚರ್ಚಿಸುತ್ತಾರೆ. ಮಕ್ಕಳು, ಶಾಲೆಯಲ್ಲಿ ನಡೆದುದರ ಕುರಿತು ತಮ್ಮ ತಂದೆತಾಯಿಗಳಿಗೆ ತಿಳಿಸುವಾಗ ಉದ್ರೇಕದಿಂದ ಹರಟುತ್ತಾರೆ. ಹಾಗೆ ಕೂಡಿ ಕಳೆದ ವಿಶ್ರಾಂತಿಕರವಾದ ಸಮಯವು ಬಾಹ್ಯ ಜಗತ್ತಿನಲ್ಲಿ ಇನ್ನೊಂದು ದಿವಸಕ್ಕಾಗಿ ಪ್ರತಿಯೊಬ್ಬರಿಗೂ ನವಚೈತನ್ಯವನ್ನುಂಟುಮಾಡುತ್ತದೆ.

3 ಸಂತೋಷದ ಕುಟುಂಬವೊಂದರಲ್ಲಿ, ಒಬ್ಬ ಮಗನು, ತಾನು ಅಸ್ವಸ್ಥನಾಗುವಾಗ ತನ್ನ ತಂದೆತಾಯಿ ತನ್ನನ್ನು ಪರಾಮರಿಸುವರೆಂದು, ಪ್ರಾಯಶಃ ರಾತ್ರಿಯೆಲ್ಲ ತನ್ನ ಹಾಸಿಗೆಯ ಬಳಿ ಸರದಿಯನ್ನು ತೆಗೆದುಕೊಳ್ಳುವರೆಂದು ತಿಳಿದಿರುತ್ತಾನೆ. ತನ್ನ ಎಳೆಯ ಜೀವನದ ಸಮಸ್ಯೆಗಳೊಂದಿಗೆ ತಾನು ತಾಯಿ ಅಥವಾ ತಂದೆಯ ಬಳಿ ಹೋಗಿ ಬುದ್ಧಿವಾದ ಮತ್ತು ಬೆಂಬಲವನ್ನು ಪಡೆಯಬಲ್ಲೆನೆಂದು ಅವನಿಗೆ ತಿಳಿದಿರುತ್ತದೆ. ಹೌದು, ಬಾಹ್ಯ ಜಗತ್ತು ಎಷ್ಟೇ ಉಪದ್ರವ ತುಂಬಿದ್ದಾಗಿರಲಿ, ಮಗನು ಸುರಕ್ಷಿತನಾಗಿರುವ ಅನಿಸಿಕೆಯಲ್ಲಿರುತ್ತಾನೆ.

4 ಮಕ್ಕಳು ಬೆಳೆದಾಗ ಸಾಮಾನ್ಯವಾಗಿ ವಿವಾಹಿತರಾಗಿ ಅವರ ಸ್ವಂತ ಕುಟುಂಬವುಳ್ಳವರಾಗುತ್ತಾರೆ. “ಒಬ್ಬನಿಗೆ ತನ್ನ ಸ್ವಂತ ಮಗುವಿರುವಾಗ ಆ ವ್ಯಕ್ತಿಯು ತನ್ನ ಹೆತ್ತವರಿಗೆ ತಾನು ಎಷ್ಟು ಋಣಿಯಾಗಿದ್ದೇನೆಂಬುದನ್ನು ಗ್ರಹಿಸಿಕೊಳ್ಳುತ್ತಾನೆ,” ಎನ್ನುತ್ತದೆ ಒಂದು ಪ್ರಾಚ್ಯ ನಾಣ್ಣುಡಿ. ಕೃತಜ್ಞತೆ ಮತ್ತು ಪ್ರೀತಿಯ ಆಳವಾದ ಭಾವನೆಯಿಂದ, ಬೆಳೆದಿರುವ ಮಕ್ಕಳು ತಮ್ಮ ಸ್ವಂತ ಕುಟುಂಬಗಳನ್ನು ಸಂತುಷ್ಟರಾಗಿಸಲು ಪ್ರಯತ್ನಿಸುತ್ತಾರೆ ಮತ್ತು ಮೊಮ್ಮಕ್ಕಳೊಂದಿಗೆ ಉಲ್ಲಾಸಿಸುವ, ಈಗ ವೃದ್ಧರಾಗುತ್ತಿರುವ ತಮ್ಮ ಹೆತ್ತವರನ್ನೂ ಅವರು ಪರಾಮರಿಸುತ್ತಾರೆ.

5 ಪ್ರಾಯಶಃ ಈ ಹಂತದಲ್ಲಿ ನೀವು ಹೀಗೆ ಯೋಚಿಸುತ್ತಿದ್ದೀರಿ: ‘ಸರಿ, ನಾನು ನನ್ನ ಕುಟುಂಬವನ್ನು ಪ್ರೀತಿಸುತ್ತೇನೆ, ಆದರೆ ಅದು ಇದೀಗ ವರ್ಣಿಸಲ್ಪಟ್ಟಂತಿಲ್ಲ. ನನ್ನ ಜೊತೆಗಾರನು ಮತ್ತು ನಾನು ವಿಭಿನ್ನ ಕಾಲಪಟ್ಟಿಗಳಲ್ಲಿ ಕೆಲಸಮಾಡುತ್ತೇವೆ ಮತ್ತು ಒಬ್ಬರನ್ನೊಬ್ಬರು ನೋಡುವುದೇ ವಿರಳ. ನಾವು ಬಹುಮಟ್ಟಿಗೆ ಹಣದ ಸಮಸ್ಯೆಗಳ ಕುರಿತಾಗಿ ಮಾತನಾಡುತ್ತೇವೆ.’ ಅಥವಾ ‘ನನ್ನ ಮಕ್ಕಳು ಮತ್ತು ಮೊಮ್ಮಕ್ಕಳು ಇನ್ನೊಂದು ಪಟ್ಟಣದಲ್ಲಿ ಜೀವಿಸುತ್ತಾರೆ ಮತ್ತು ನಾನು ಅವರನ್ನು ನೋಡಲಾಗುವುದೇ ಇಲ್ಲ’ ಎಂದು ನೀವು ಹೇಳುತ್ತೀರೊ? ಹೌದು, ಅನೇಕ ವೇಳೆ ಒಳಗೂಡಿರುವವರ ನಿಯಂತ್ರಣವನ್ನು ಮೀರುವ ಕಾರಣಗಳಿಗಾಗಿ, ಹೆಚ್ಚಿನ ಕುಟುಂಬ ಜೀವನವು ಆದರ್ಶಪ್ರಾಯವಾಗಿಲ್ಲ. ಆದರೂ, ಕೆಲವರು ಸಂತೋಷವುಳ್ಳ ಕುಟುಂಬ ಜೀವನಗಳನ್ನು ನಡೆಸುತ್ತಾರೆ. ಹೇಗೆ? ಕುಟುಂಬ ಸಂತೋಷದ ರಹಸ್ಯವೊಂದಿದೆಯೆ? ಉತ್ತರವು ಹೌದಾಗಿದೆ. ಆದರೆ ಅದಾವುದೆಂದು ಚರ್ಚಿಸುವುದಕ್ಕೆ ಮುನ್ನ ನಾವು ಒಂದು ಪ್ರಾಮುಖ್ಯವಾದ ಪ್ರಶ್ನೆಗೆ ಉತ್ತರ ಕೊಡಬೇಕು.

ಒಂದು ಕುಟುಂಬವೆಂದರೇನು?

6. ಯಾವ ತೆರದ ಕುಟುಂಬಗಳನ್ನು ಈ ಪುಸ್ತಕದಲ್ಲಿ ಚರ್ಚಿಸಲಾಗುವುದು?

6 ಪಾಶ್ಚಾತ್ಯ ದೇಶಗಳಲ್ಲಿ, ಅಧಿಕಾಂಶ ಕುಟುಂಬಗಳು ತಂದೆ, ತಾಯಿ ಮತ್ತು ಮಕ್ಕಳನ್ನು ಒಳಗೂಡಿರುತ್ತವೆ. ಅಜ್ಜಅಜ್ಜಿಯರು ತಮಗೆ ಸಾಧ್ಯವಾಗುವಷ್ಟರ ತನಕ ತಮ್ಮ ಸ್ವಂತ ಮನೆವಾರ್ತೆಗಳಲ್ಲಿ ಜೀವಿಸಬಹುದು. ಹೆಚ್ಚು ದೂರದ ಸಂಬಂಧಿಗಳೊಂದಿಗೆ ಸಂಪರ್ಕವು ಇಡಲ್ಪಡುತ್ತದಾದರೂ, ಅವರ ಕಡೆಗಿರುವ ಕರ್ತವ್ಯಗಳು ಸೀಮಿತವಾಗಿರುತ್ತವೆ. ಮೂಲಭೂತವಾಗಿ, ಈ ಪುಸ್ತಕದಲ್ಲಿ ನಾವು ಚರ್ಚಿಸುವ ಕುಟುಂಬವು ಇದೇ. ಆದರೂ, ಇತ್ತೀಚಿನ ವರುಷಗಳಲ್ಲಿ ಬೇರೆ ಕುಟುಂಬಗಳು—ಒಂಟಿ ಹೆತ್ತವರಿರುವ ಕುಟುಂಬಗಳು, ಮಲಕುಟುಂಬ, ಮತ್ತು ಯಾವುದರ ಹೆತ್ತವರು ಕಾರಣಾಂತರಗಳಿಂದ ಒಟ್ಟಿಗೆ ಜೀವಿಸುವುದಿಲ್ಲವೊ ಆ ಕುಟುಂಬ—ಹೆಚ್ಚೆಚ್ಚು ಸಾಮಾನ್ಯವಾಗಿವೆ.

7. ವಿಸ್ತರಿತ ಕುಟುಂಬವೆಂದರೇನು?

7 ಕೆಲವು ಸಂಸ್ಕೃತಿಗಳಲ್ಲಿ ವಿಸ್ತರಿತ ಕುಟುಂಬವು ಸಾಮಾನ್ಯ. ಈ ಏರ್ಪಾಡಿನಲ್ಲಿ ಸಾಧ್ಯವಿರುವಲ್ಲಿ, ಅಜ್ಜಅಜ್ಜಿಯರನ್ನು ಅವರ ಮಕ್ಕಳು ನಿಯತ ಕ್ರಮವಾಗಿ ನೋಡಿಕೊಳ್ಳುತ್ತಾರೆ ಮತ್ತು ಆಪ್ತ ಸಂಬಂಧಗಳು ಮತ್ತು ಜವಾಬ್ದಾರಿಗಳು ದೂರದ ಸಂಬಂಧಿಗಳಿಗೂ ವ್ಯಾಪಿಸುತ್ತವೆ. ದೃಷ್ಟಾಂತಕ್ಕೆ, ಕುಟುಂಬದ ಸದಸ್ಯರು ತಮ್ಮ ಸೋದರ ಸೊಸೆಯರು, ಸೋದರಳಿಯರು, ಅಥವಾ ಹೆಚ್ಚು ದೂರದ ಸಂಬಂಧಿಗಳನ್ನು ಬೆಂಬಲಿಸಿ, ಬೆಳೆಸಲು ಸಹಾಯ ಮಾಡಿ, ಅವರ ವಿದ್ಯಾಭ್ಯಾಸಕ್ಕೂ ಹಣ ತೆರಬಹುದು. ಈ ಪ್ರಕಾಶನದಲ್ಲಿ ಚರ್ಚಿಸಲ್ಪಡಲಿರುವ ಮೂಲತತ್ವಗಳು ವಿಸ್ತರಿತ ಕುಟುಂಬಗಳಿಗೆ ಸಹ ಅನ್ವಯಿಸುತ್ತವೆ.

ಒತ್ತಡದ ಕೆಳಗಿರುವ ಕುಟುಂಬ

8, 9. ಕುಟುಂಬವು ಬದಲಾಗುತ್ತಿದೆಯೆಂದು ಕೆಲವು ದೇಶಗಳ ಯಾವ ಸಮಸ್ಯೆಗಳು ತೋರಿಸುತ್ತವೆ?

8 ಇಂದು ಕುಟುಂಬವು ಬದಲಾವಣೆ ಹೊಂದುತ್ತಿದೆ. ಆದರೆ ದುಃಖಕರವಾಗಿ ಒಳಿತಿಗಾಗಿ ಅಲ್ಲ. ಒಂದು ದೃಷ್ಟಾಂತವು ಭಾರತದಲ್ಲಿ ಕಾಣಸಿಗುತ್ತದೆ. ಇಲ್ಲಿ ಒಬ್ಬ ಹೆಂಡತಿಯು ತನ್ನ ಗಂಡನ ಕುಟುಂಬದೊಂದಿಗೆ ಜೀವಿಸಿ ತನ್ನ ವಿವಾಹ ಸಂಬಂಧಿಗಳ ನಿರ್ದೇಶಕ್ಕೆ ಅನುಸಾರವಾಗಿ ಮನೆಯಲ್ಲಿ ಕೆಲಸಮಾಡಬಹುದು. ಈಗಿನ ಕಾಲದಲ್ಲಾದರೊ ಭಾರತೀಯ ಹೆಂಡತಿಯರು ಮನೆಯ ಹೊರಗೆ ಉದ್ಯೋಗವನ್ನು ಹುಡುಕುವುದು ಅಸಾಮಾನ್ಯವಲ್ಲ. ಆದರೂ ಅವರಿನ್ನೂ ಮನೆಯಲ್ಲಿ ತಮ್ಮ ಸಾಂಪ್ರದಾಯಿಕ ಪಾತ್ರಗಳನ್ನು ಪೂರೈಸಬೇಕೆಂದು ನಿರೀಕ್ಷಿಸಲಾಗುತ್ತದೆಂಬುದು ವ್ಯಕ್ತ. ಅನೇಕ ದೇಶಗಳಲ್ಲಿ ಹಾಕಲ್ಪಡುವ ಪ್ರಶ್ನೆಯು, ಕುಟುಂಬದ ಇತರ ಸದಸ್ಯರಿಗೆ ಹೋಲಿಸುವಾಗ, ಹೊರಗಣ ಉದ್ಯೋಗವಿರುವ ಒಬ್ಬ ಸ್ತ್ರೀಯು, ಮನೆಯಲ್ಲಿ ಎಷ್ಟು ಕೆಲಸವನ್ನು ಮಾಡುವಂತೆ ನಿರೀಕ್ಷಿಸಲ್ಪಡಬೇಕು? ಎಂಬುದೇ.

9 ಪ್ರಾಚ್ಯ ಸಮಾಜಗಳಲ್ಲಿ, ಪ್ರಬಲವಾದ ವಿಸ್ತರಿತ ಕುಟುಂಬ ಸಂಬಂಧಗಳು ಸಾಂಪ್ರದಾಯಿಕ. ಆದರೂ ಪಾಶ್ಚಾತ್ಯ ಶೈಲಿಯ ವ್ಯಕ್ತಿವಾದದ ಪ್ರಭಾವದಲ್ಲಿ ಮತ್ತು ಆರ್ಥಿಕ ಸಮಸ್ಯೆಗಳ ಒತ್ತಡದಲ್ಲಿ, ಸಾಂಪ್ರದಾಯಿಕ ವಿಸ್ತರಿತ ಕುಟುಂಬವು ಬಲಹೀನಗೊಳ್ಳುತ್ತಿದೆ. ಆದುದರಿಂದ ಅನೇಕರು ಕುಟುಂಬದಲ್ಲಿರುವ ವೃದ್ಧ ಸದಸ್ಯರ ಪರಾಮರಿಕೆಯನ್ನು ಒಂದು ಅವಶ್ಯ ಕರ್ತವ್ಯ ಅಥವಾ ಒಂದು ಸುಯೋಗವಾಗಿ ವೀಕ್ಷಿಸುವ ಬದಲಾಗಿ ಒಂದು ಹೊರೆಯಾಗಿ ವೀಕ್ಷಿಸುತ್ತಾರೆ. ಕೆಲವು ವೃದ್ಧ ಹೆತ್ತವರನ್ನು ಅಪಪ್ರಯೋಗಿಸಲಾಗುತ್ತದೆ. ವೃದ್ಧ ವ್ಯಕ್ತಿಗಳ ಅಪಪ್ರಯೋಗ ಮತ್ತು ಅಲಕ್ಷ್ಯವನ್ನು ಇಂದು ಅನೇಕ ದೇಶಗಳಲ್ಲಿ ಕಂಡುಕೊಳ್ಳಲಾಗುತ್ತಿದೆ ನಿಜ.

10, 11. ಕುಟುಂಬವು ಯೂರೋಪಿಯನ್‌ ದೇಶಗಳಲ್ಲಿ ಬದಲಾವಣೆಗೊಳ್ಳುತ್ತಿದೆಯೆಂದು ಯಾವ ವಾಸ್ತವಾಂಶಗಳು ತೋರಿಸುತ್ತವೆ?

10 ವಿವಾಹ ವಿಚ್ಛೇದವು ಹೆಚ್ಚೆಚ್ಚು ಸಾಮಾನ್ಯವಾಗುತ್ತ ಬರುತ್ತಿದೆ. ಸ್ಪೆಯ್ನ್‌ನಲ್ಲಿ, 20ನೆಯ ಶತಮಾನದ ಕೊನೆಯ ದಶಕದ ಆರಂಭದೊಳಗೆ, ವಿವಾಹ ವಿಚ್ಛೇದದ ಪ್ರಮಾಣವು 8 ವಿವಾಹಗಳಲ್ಲಿ 1ಕ್ಕೆ ಏರಿತು. ಕೇವಲ 25 ವರುಷಗಳ ಹಿಂದೆ ಇದ್ದ 100ರಲ್ಲಿ 1ರಿಂದ ಇದು ಒಂದು ದೊಡ್ಡ ನೆಗೆತವೇ ಸರಿ. ಯೂರೋಪ್‌ನಲ್ಲಿ ಅತ್ಯುನ್ನತ ವಿವಾಹ ವಿಚ್ಛೇದದ ಪ್ರಮಾಣ (10ರಲ್ಲಿ 4 ವಿವಾಹಗಳು ವಿಫಲಗೊಳ್ಳುತ್ತವೆ ಎಂದು ನಿರೀಕ್ಷಿಸಲಾಗುತ್ತದೆ) ಇದೆಯೆಂದು ವದಂತಿಯಿರುವ ಬ್ರಿಟನ್‌, ಒಂಟಿ ಹೆತ್ತವರ ಕುಟುಂಬಗಳ ಸಂಖ್ಯೆಯಲ್ಲಿ ಉಕ್ಕೇರುವಿಕೆಯನ್ನು ಕಂಡಿದೆ.

11 ಜರ್ಮನಿಯಲ್ಲಿ ಅನೇಕರು ಸಾಂಪ್ರದಾಯಿಕ ಕುಟುಂಬವನ್ನು ಪೂರ್ತಿಯಾಗಿ ತ್ಯಜಿಸಿ ಬಿಡುತ್ತಿರುವಂತೆ ಕಾಣುತ್ತದೆ. ಎಲ್ಲ ಜರ್ಮನ್‌ ಮನೆವಾರ್ತೆಗಳಲ್ಲಿ 35 ಪ್ರತಿಶತ, ಒಬ್ಬ ವ್ಯಕ್ತಿಯನ್ನೂ 31 ಪ್ರತಿಶತ ಬರೇ ಇಬ್ಬರನ್ನು ಒಳಗೂಡಿರುವುದನ್ನೂ 1990ಗಳು ನೋಡಿದವು. ಫ್ರೆಂಚರು ಸಹ ಕಡಮೆ ವಿವಾಹ ಮಾಡಿಕೊಳ್ಳುತ್ತಿದ್ದಾರೆ ಮತ್ತು ವಿವಾಹವಾಗುವವರು ಹೆಚ್ಚು ಬಾರಿ ಮತ್ತು ಹಿಂದಿಗಿಂತಲೂ ಬೇಗನೆ ವಿವಾಹ ವಿಚ್ಛೇದ ಮಾಡುತ್ತಾರೆ. ಹೆಚ್ಚುತ್ತಿರುವ ಸಂಖ್ಯೆಗಳು ವಿವಾಹದ ಜವಾಬ್ದಾರಿಗಳಿಲ್ಲದೆ ಒಟ್ಟುಗೂಡಿ ಜೀವಿಸಲು ಇಷ್ಟಪಡುತ್ತವೆ. ಇದಕ್ಕೆ ತುಲನೆಯಾಗುವ ಪ್ರವೃತ್ತಿಗಳನ್ನು ಲೋಕವ್ಯಾಪಕವಾಗಿ ನೋಡಲಾಗುತ್ತದೆ.

12. ಆಧುನಿಕ ಕುಟುಂಬದಲ್ಲಿನ ಬದಲಾವಣೆಗಳ ಕಾರಣ ಮಕ್ಕಳು ಹೇಗೆ ಕಷ್ಟಾನುಭವಿಸುತ್ತಾರೆ?

12 ಮಕ್ಕಳ ವಿಷಯದಲ್ಲೇನು? ಅಮೆರಿಕದಲ್ಲಿ ಮತ್ತು ಇತರ ಅನೇಕ ದೇಶಗಳಲ್ಲಿ, ದಾಂಪತ್ಯದ ಹೊರಗೆ ಹೆಚ್ಚೆಚ್ಚು ಶಿಶುಗಳು, ಕೆಲವು ಎಳೆಯರಾದ ಹದಿಹರೆಯದವರಿಗೆ ಹುಟ್ಟುತ್ತವೆ. ಅನೇಕ ಹದಿಹರೆಯದ ಹುಡುಗಿಯರಿಗೆ, ವಿಭಿನ್ನ ತಂದೆಗಳಿಂದ ಹುಟ್ಟಿದ ಅನೇಕ ಮಕ್ಕಳಿವೆ. ಲೋಕದ ಸುತ್ತಲಿನ ವರದಿಗಳು, ಲಕ್ಷಗಟ್ಟಲೆ ಮಂದಿ ಮನೆಯಿಲ್ಲದ ಮಕ್ಕಳು ಬೀದಿಗಳಲ್ಲಿ ಅಲೆದಾಡುತ್ತಿದ್ದಾರೆಂದು ತಿಳಿಸುತ್ತವೆ; ಅನೇಕರು ಅಪಪ್ರಯೋಗಿಸಲ್ಪಡುವ ಮನೆಗಳಿಂದ ಪಲಾಯನ ಮಾಡುತ್ತಿದ್ದಾರೆ ಅಥವಾ ತಮ್ಮನ್ನು ಇನ್ನೆಂದಿಗೂ ಪೋಷಿಸಸಾಧ್ಯವಿಲ್ಲದ ಮನೆಗಳಿಂದ ಹೊರದಬ್ಬಲ್ಪಡುತ್ತಾರೆ.

13. ಯಾವ ವ್ಯಾಪಕವಾದ ಸಮಸ್ಯೆಗಳು ಕುಟುಂಬಗಳಿಂದ ಸಂತೋಷವನ್ನು ಕಸಿದುಕೊಳ್ಳುತ್ತವೆ?

13 ಹೌದು, ಕುಟುಂಬವು ಉತ್ಕಟ ಸ್ಥಿತಿಯಲ್ಲಿದೆ. ಆಗಲೆ ಹೇಳಲ್ಪಟ್ಟಿರುವುದಕ್ಕೆ ಕೂಡಿಕೆಯಾಗಿ, ಹದಿಹರೆಯದವರ ದಂಗೆ, ಮಗುವಿನ ಅಪಪ್ರಯೋಗ, ವಿವಾಹಜೊತೆಯ ಬಲಾತ್ಕಾರ, ಮದ್ಯರೋಗಾವಸ್ಥೆ ಮತ್ತು ಇತರ ಧ್ವಂಸಕಾರಕ ಸಮಸ್ಯೆಗಳು ಅನೇಕ ಕುಟುಂಬಗಳಿಂದ ಸಂತೋಷವನ್ನು ಕಸಿದುಕೊಳ್ಳುತ್ತವೆ. ದೊಡ್ಡ ಸಂಖ್ಯೆಯ ಮಕ್ಕಳಿಗೆ ಮತ್ತು ವಯಸ್ಕರಿಗೆ ಕುಟುಂಬವು ನಿಶ್ಚಯವಾಗಿಯೂ ಒಂದು ಆಶ್ರಯಸ್ಥಾನವಾಗಿರುವುದಿಲ್ಲ.

14. (ಎ) ಕೆಲವರಿಗನುಸಾರ, ಕುಟುಂಬದ ಉತ್ಕಟ ಸ್ಥಿತಿಗೆ ಕಾರಣಗಳಾವುವು? (ಬಿ) ಇಂದಿನ ಲೋಕವನ್ನು ಒಂದನೆಯ ಶತಮಾನದ ನ್ಯಾಯವಾದಿಯೊಬ್ಬನು ಹೇಗೆ ವರ್ಣಿಸಿದನು ಮತ್ತು ಅವನ ಮಾತುಗಳ ನೆರವೇರಿಕೆಯು ಕುಟುಂಬ ಜೀವನದ ಮೇಲೆ ಯಾವ ಪ್ರಭಾವವನ್ನು ಬೀರಿದೆ?

14 ಕುಟುಂಬದಲ್ಲಿ ಏಕೆ ಈ ಉತ್ಕಟ ಸ್ಥಿತಿ? ಕೆಲವರು ಪ್ರಸಕ್ತ ದಿನದ ಈ ಕುಟುಂಬ ಉತ್ಕಟ ಸ್ಥಿತಿಗೆ ಕಾರಣವನ್ನು ಕೆಲಸಸ್ಥಳಕ್ಕೆ ಮಹಿಳೆಯರ ಪ್ರವೇಶದ ಮೇಲೆ ಹೊರಿಸುತ್ತಾರೆ. ಇತರರು ಇಂದಿನ ನೈತಿಕ ಕುಸಿತಕ್ಕೆ ಕೈತೋರಿಸುತ್ತಾರೆ. ಮತ್ತು ಹೆಚ್ಚಿಗೆಯ ಕಾರಣಗಳು ಉದಾಹರಿಸಲ್ಪಡುತ್ತವೆ. ಬಹುಪಾಲು ಎರಡು ಸಾವಿರ ವರ್ಷಗಳಿಗೆ ಹಿಂದೆ, “ಆದರೆ ಕಡೇ ದಿವಸಗಳಲ್ಲಿ ಕಠಿನಕಾಲಗಳು ಬರುವವೆಂಬದನ್ನು ತಿಳಿದುಕೋ. ಮನುಷ್ಯರು ಸ್ವಾರ್ಥಚಿಂತಕರೂ ಹಣದಾಸೆಯವರೂ ಬಡಾಯಿಕೊಚ್ಚುವವರೂ ಅಹಂಕಾರಿಗಳೂ ದೂಷಕರೂ ತಂದೆತಾಯಿಗಳಿಗೆ ಅವಿಧೇಯರೂ ಉಪಕಾರನೆನಸದವರೂ ದೇವಭಯವಿಲ್ಲದವರೂ ಮಮತೆಯಿಲ್ಲದವರೂ ಸಮಾಧಾನವಾಗದವರೂ ಚಾಡಿಹೇಳುವವರೂ ದಮೆಯಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೇದನ್ನು ಪ್ರೀತಿಸದವರೂ ದ್ರೋಹಿಗಳೂ ದುಡುಕಿನವರೂ ಉಬ್ಬಿಕೊಂಡವರೂ ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವರೂ . . . ಆಗಿರುವರು” ಎಂದು ಒಬ್ಬ ಪ್ರಸಿದ್ಧ ನ್ಯಾಯವಾದಿಯು ಬರೆದಾಗ, ಅನೇಕ ಒತ್ತಡಗಳು ಕುಟುಂಬವನ್ನು ಬಾಧಿಸುವವು ಎಂಬುದಾಗಿ ಮುಂತಿಳಿಸಿದನು. (2 ತಿಮೊಥೆಯ 3:1-5) ಈ ಮಾತುಗಳು ಇಂದು ನೆರವೇರುತ್ತಿರುವುದನ್ನು ಯಾವನು ಸಂಶಯಿಸುವನು? ಇಂತಹ ಪರಿಸ್ಥಿತಿಗಳಿರುವ ಒಂದು ಲೋಕದಲ್ಲಿ, ಅನೇಕ ಕುಟುಂಬಗಳು ಉತ್ಕಟ ಸ್ಥಿತಿಯಲ್ಲಿರುವುದು ಆಶ್ಚರ್ಯಕರವೊ?

ಕುಟುಂಬ ಸಂತೋಷದ ರಹಸ್ಯ

15-17. ಈ ಪುಸ್ತಕದಲ್ಲಿ, ಕುಟುಂಬ ಸಂತೋಷದ ರಹಸ್ಯವನ್ನು ಯಾವ ಪ್ರಮಾಣ ಗ್ರಂಥವು ಹಿಡಿದುಕೊಂಡಿದೆಯೆಂದು ತೋರಿಸಲಾಗುವುದು?

15 ಕುಟುಂಬದಲ್ಲಿ ಸಂತೋಷವನ್ನು ಸಾಧಿಸುವುದು ಹೇಗೆಂಬ ವಿಷಯದಲ್ಲಿ ಸಕಲ ಪಕ್ಕಗಳಿಂದಲೂ ಸಲಹೆಯು ನೀಡಲ್ಪಡುತ್ತದೆ. ಪಾಶ್ಚಾತ್ಯ ದೇಶಗಳಲ್ಲಿ ಸ್ವಸಹಾಯ ಪುಸ್ತಕಗಳ ಮತ್ತು ಪತ್ರಿಕೆಗಳ ಅನಂತ ಪ್ರವಾಹವು ಬುದ್ಧಿವಾದವನ್ನು ನೀಡುತ್ತವೆ. ಸಮಸ್ಯೆಯೇನಂದರೆ ಮಾನವ ಸಲಹೆಗಾರರು ಒಬ್ಬರಿಗೊಬ್ಬರು ವಿರೋಧವಾದ ಹೇಳಿಕೆಗಳನ್ನು ನುಡಿಯುತ್ತಾರೆ, ಮತ್ತು ಇಂದು ಜನಪ್ರಿಯವಾಗಿರುವ ಸಲಹೆಯು ನಾಳೆ ಕಾರ್ಯಸಾಧ್ಯವಲ್ಲದ್ದಾಗಿ ಕಂಡುಬಂದೀತು.

16 ಹಾಗಾದರೆ, ಭರವಸಾರ್ಹ ಕುಟುಂಬ ಮಾರ್ಗದರ್ಶನಕ್ಕಾಗಿ ನಾವೆತ್ತ ನೋಡಬಲ್ಲೆವು? ಒಳ್ಳೆಯದು, ಸುಮಾರು 1,900 ವರ್ಷಗಳ ಹಿಂದೆ ಮುಗಿಸಿದ ಒಂದು ಪುಸ್ತಕವನ್ನು ನೀವು ನೋಡುವಿರೊ? ಅಥವಾ ಇಂತಹ ಒಂದು ಪುಸ್ತಕವು ನಿರೀಕ್ಷಾರಹಿತವಾಗಿ ಚಾಲ್ತಿಯಲ್ಲಿ ಇಲ್ಲದ್ದು ಎಂದು ನಿಮಗೆ ಅನಿಸುವುದೊ? ಸತ್ಯವೇನಂದರೆ, ಕುಟುಂಬ ಸಂತೋಷದ ನಿಜ ರಹಸ್ಯವು ಇಂತಹ ಒಂದು ಮೂಲದಲ್ಲಿಯೇ ದೊರೆಯುತ್ತದೆ.

17 ಆ ಮೂಲವು ಬೈಬಲಾಗಿದೆ. ಸಕಲ ಸಾಕ್ಷ್ಯಕ್ಕನುಸಾರವಾಗಿ, ಅದು ಸ್ವತಃ ದೇವರಿಂದ ಪ್ರೇರಿಸಲ್ಪಟ್ಟಿತು. ಬೈಬಲಿನಲ್ಲಿ ನಾವು ಮುಂದಿನ ಹೇಳಿಕೆಯನ್ನು ಕಂಡುಕೊಳ್ಳುತ್ತೇವೆ: “ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ.” (2 ತಿಮೊಥೆಯ 3:16) ಈ ಪ್ರಕಾಶನದಲ್ಲಿ, ಇಂದು ಕುಟುಂಬಗಳನ್ನು ಎದುರಿಸುವ ಒತ್ತಡಗಳು ಮತ್ತು ಸಮಸ್ಯೆಗಳನ್ನು ನಿರ್ವಹಿಸುವಾಗ ‘ತಿದ್ದುಪಾಟು ಮಾಡಲು’ ಬೈಬಲು ನಿಮಗೆ ಹೇಗೆ ಸಹಾಯ ಮಾಡಬಲ್ಲದೆಂದು ಪರಿಗಣಿಸಲು ನಾವು ನಿಮ್ಮನ್ನು ಪ್ರೋತ್ಸಾಹಿಸುವೆವು.

18. ವಿವಾಹ ಸಲಹೆ ನೀಡುವಿಕೆಯಲ್ಲಿ ಬೈಬಲನ್ನು ಪ್ರಮಾಣ ಗ್ರಂಥವೆಂದು ಅಂಗೀಕರಿಸುವುದು ನ್ಯಾಯಸಮ್ಮತವೇಕೆ?

18 ಬೈಬಲು ಕುಟುಂಬಗಳನ್ನು ಸಂತೋಷದಲ್ಲಿರುವಂತೆ ಸಹಾಯ ಮಾಡಬಲ್ಲದೆಂಬ ಸಾಧ್ಯತೆಯನ್ನು ನೀವು ವಿಸರ್ಜಿಸುವ ಪ್ರವೃತ್ತಿಯುಳ್ಳವರಾದರೆ, ಇದನ್ನು ಪರ್ಯಾಲೋಚಿಸಿರಿ: ಬೈಬಲನ್ನು ಪ್ರೇರಿಸಿದಾತನು ವಿವಾಹದ ಏರ್ಪಾಡಿನ ಮೂಲಕರ್ತನು. (ಆದಿಕಾಂಡ 2:18-25) ಆತನ ಹೆಸರು ಯೆಹೋವ ಎಂದು ಬೈಬಲು ಅನ್ನುತ್ತದೆ. (ಕೀರ್ತನೆ 83:18) ಆತನು ಸೃಷ್ಟಿಕರ್ತನೂ ‘ಯಾವ ತಂದೆಯಿಂದ . . . ಪ್ರತಿ ಜನ [“ಕುಟುಂಬ,” NW]ವೂ ಹೆಸರು ತೆಗೆದುಕೊಳ್ಳುತ್ತದೋ’ ಆತನೂ ಆಗಿದ್ದಾನೆ. (ಎಫೆಸ 3:14, 15) ಮಾನವಕುಲದ ಆದಿಯಿಂದ ಯೆಹೋವನು ಕುಟುಂಬ ಜೀವನವನ್ನು ಅವಲೋಕಿಸಿದ್ದಾನೆ. ಏಳಬಲ್ಲ ಸಮಸ್ಯೆಗಳನ್ನು ಆತನು ಬಲ್ಲನು ಮತ್ತು ಅವುಗಳನ್ನು ಬಗೆಹರಿಸಲಿಕ್ಕಾಗಿ ಆತನು ಸಲಹೆಯನ್ನು ಕೊಟ್ಟಿದ್ದಾನೆ. ಇತಿಹಾಸದಾದ್ಯಂತ, ಯಾರು ಬೈಬಲಿನ ಮೂಲತತ್ವಗಳನ್ನು ತಮ್ಮ ಕುಟುಂಬ ಜೀವನದಲ್ಲಿ ಯಥಾರ್ಥವಾಗಿ ಅನ್ವಯಿಸಿದರೊ ಅವರು, ಅಧಿಕ ಸಂತೋಷವನ್ನು ಕಂಡುಕೊಂಡರು.

19-21. ವಿವಾಹದ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಬೈಬಲಿನ ಶಕ್ತಿಯನ್ನು ಯಾವ ಆಧುನಿಕ ಅನುಭವಗಳು ತೋರಿಸುತ್ತವೆ?

19 ದೃಷ್ಟಾಂತಕ್ಕೆ, ಇಂಡೊನೇಷ್ಯದ ಒಬ್ಬ ಗೃಹಿಣಿಯು ಆಂತರಿಕ ಪ್ರಚೋದನೆಯ ಜೂಜುಗಾರ್ತಿಯಾಗಿದ್ದಳು. ಅನೇಕ ವರ್ಷಗಳ ವರೆಗೆ ಆಕೆ ತನ್ನ ಮೂವರು ಮಕ್ಕಳನ್ನು ಅಸಡ್ಡೆಮಾಡಿ, ತನ್ನ ಗಂಡನೊಡನೆ ಕ್ರಮವಾಗಿ ಜಗಳಾಡುತ್ತಿದ್ದಳು. ತರುವಾಯ ಆಕೆ ಬೈಬಲನ್ನು ಅಭ್ಯಸಿಸತೊಡಗಿದಳು. ಕ್ರಮೇಣ ಆ ಸ್ತ್ರೀ ಬೈಬಲು ಹೇಳಿದ್ದನ್ನು ನಂಬುವವಳಾದಳು. ಆಕೆ ಅದರ ಸಲಹೆಯನ್ನು ಅನ್ವಯಿಸಿದಾಗ ಆಕೆ ಹೆಚ್ಚು ಉತ್ತಮ ಹೆಂಡತಿಯಾದಳು. ಬೈಬಲ್‌ ಮೂಲತತ್ವಗಳ ಮೇಲೆ ಆಧರಿಸಿದ ಆಕೆಯ ಪ್ರಯತ್ನಗಳು ಆಕೆಯ ಇಡೀ ಕುಟುಂಬಕ್ಕೆ ಸಂತೋಷವನ್ನು ತಂದಿತು.

20 ಸ್ಪೆಯ್ನ್‌ನ ಒಬ್ಬ ಗೃಹಿಣಿ ಹೇಳುವುದು: “ನಮ್ಮಲ್ಲಿ ಗಂಭೀರ ಸಮಸ್ಯೆಗಳು ಆರಂಭವಾಗಲು ತೊಡಗಿದಾಗ ನಮಗೆ ವಿವಾಹವಾಗಿ ಕೇವಲ ಒಂದು ವರುಷವಾಗಿತ್ತು.” ಆಕೆಗೂ ಆಕೆಯ ಗಂಡನಿಗೂ ಸಮಾನಾಸಕ್ತಿಗಳು ತೀರ ಕಡಮೆಯಾಗಿದ್ದವು, ಮತ್ತು ವಾದಿಸುವಾಗ ಬಿಟ್ಟರೆ ಅವರ ಮಾತುಕತೆ ಕೊಂಚವಾಗಿತ್ತು. ಒಬ್ಬ ಚಿಕ್ಕ ಮಗಳಿದ್ದರೂ, ಅವರು ಶಾಸನಬದ್ಧವಾದ ಪ್ರತ್ಯೇಕವಾಸ ಪಡೆಯಲು ನಿರ್ಣಯಿಸಿದರು. ಆದರೆ ಅದಾಗುವ ಮೊದಲು, ಬೈಬಲನ್ನು ಪರೀಕ್ಷಿಸುವಂತೆ ಅವರನ್ನು ಪ್ರೋತ್ಸಾಹಿಸಲಾಯಿತು. ವಿವಾಹಿತ ಪುರುಷರಿಗೆ ಮತ್ತು ಸ್ತ್ರೀಯರಿಗೆ ಅದು ಕೊಡುವ ಸಲಹೆಯನ್ನು ಅವರು ಅಭ್ಯಸಿಸಿ, ಅದನ್ನು ಅನ್ವಯಿಸತೊಡಗಿದರು. ಸ್ವಲ್ಪದರಲ್ಲಿ, ಅವರು ಸಮಾಧಾನದಿಂದ ಸಂವಾದಿಸಶಕ್ತರಾದರು, ಮತ್ತು ಅವರ ಚಿಕ್ಕ ಕುಟುಂಬವು ಸಂತೋಷದಿಂದ ಐಕ್ಯಗೊಂಡಿತು.

21 ಬೈಬಲು ವಯಸ್ಸಾದವರಿಗೂ ಸಹಾಯ ಮಾಡುತ್ತದೆ. ದೃಷ್ಟಾಂತಕ್ಕೆ, ಒಂದು ಜ್ಯಾಪನೀಸ್‌ ದಂಪತಿಗಳ ಅನುಭವವನ್ನು ಪರಿಗಣಿಸಿರಿ. ಗಂಡನು ಮುಂಗೋಪಿ ಮತ್ತು ಕೆಲವು ಬಾರಿ ಹಿಂಸಾಚಾರಿಯಾಗಿದ್ದನು. ಪ್ರಥಮವಾಗಿ, ಆ ದಂಪತಿಗಳ ಪುತ್ರಿಯರು, ತಮ್ಮ ಹೆತ್ತವರ ವಿರೋಧದ ಹೊರತೂ, ಬೈಬಲನ್ನು ಅಭ್ಯಸಿಸತೊಡಗಿದರು. ತರುವಾಯ ಗಂಡನು ತನ್ನ ಪುತ್ರಿಯರ ಜೊತೆಸೇರಿದರೂ, ಹೆಂಡತಿಯು ಆಕ್ಷೇಪಣೆಯನ್ನೊಡ್ಡುತ್ತ ಹೋದಳು. ಆದರೆ ವರುಷಗಳು ಗತಿಸಿದಂತೆ, ತನ್ನ ಕುಟುಂಬದ ಮೇಲೆ ಬೈಬಲ್‌ ಮೂಲತತ್ವಗಳ ಒಳ್ಳೆಯ ಪರಿಣಾಮವನ್ನು ಆಕೆ ಗಮನಿಸಿದಳು. ಆಕೆಯ ಪುತ್ರಿಯರು ಆಕೆಯ ಉತ್ತಮ ಆರೈಕೆಯನ್ನು ಮಾಡಿದರು, ಮತ್ತು ಆಕೆಯ ಗಂಡನು ಹೆಚ್ಚು ಸೌಮ್ಯಭಾವದವನಾದನು. ಇಂತಹ ಬದಲಾವಣೆಗಳು ಆ ಸ್ತ್ರೀಯು ತಾನೇ ಬೈಬಲನ್ನು ಪರೀಕ್ಷಿಸುವಂತೆ ಪ್ರಚೋದಿಸಿತು, ಮತ್ತು ಅದು ಆಕೆಯ ಮೇಲೆಯೂ ತದ್ರೀತಿಯ ಉತ್ತಮ ಪರಿಣಾಮವನ್ನು ಬೀರಿತು. ಈ ವೃದ್ಧೆಯು ಮತ್ತೆ ಮತ್ತೆ, “ನಾವು ನಿಜವಾದ ವಿವಾಹಿತ ದಂಪತಿಗಳಾದೆವು,” ಎಂದು ಹೇಳಿದಳು.

22, 23. ಸಕಲ ರಾಷ್ಟ್ರೀಯ ಹಿನ್ನೆಲೆಗಳ ಜನರು ತಮ್ಮ ಕುಟುಂಬ ಜೀವನದಲ್ಲಿ ಸಂತೋಷವನ್ನು ಕಂಡುಹಿಡಿಯಲು ಬೈಬಲು ಹೇಗೆ ಸಹಾಯ ಮಾಡುತ್ತದೆ?

22 ಕುಟುಂಬ ಸಂತೋಷದ ರಹಸ್ಯವನ್ನು ಕಲಿತಿರುವ ಅನೇಕಾನೇಕ ಜನರ ಮಧ್ಯೆ ಈ ವ್ಯಕ್ತಿಗಳಿದ್ದಾರೆ. ಅವರು ಬೈಬಲಿನ ಸಲಹೆಯನ್ನು ಅಂಗೀಕರಿಸಿ ಅದನ್ನು ಅನ್ವಯಿಸಿಕೊಂಡಿದ್ದಾರೆ. ನಿಜ, ಅವರು ಇತರರಂತೆ ಅದೇ ಹಿಂಸಾಚಾರದ, ಅನೈತಿಕ, ಆರ್ಥಿಕವಾಗಿ ಒತ್ತಡಕ್ಕೊಳಗಾದ ಲೋಕದಲ್ಲಿ ಜೀವಿಸುತ್ತಾರೆ. ಅದಲ್ಲದೆ, ಅವರು ಅಪರಿಪೂರ್ಣರಾಗಿದ್ದಾರೆ, ಆದರೆ ಅವರು ಕುಟುಂಬ ಏರ್ಪಾಡಿನ ಮೂಲಕರ್ತನ ಇಷ್ಟವನ್ನು ಮಾಡಲು ಪ್ರಯತ್ನಿಸುವುದರಲ್ಲಿ ಸಂತೋಷವನ್ನು ಕಂಡುಹಿಡಿಯುತ್ತಾರೆ. ಬೈಬಲು ಹೇಳುವಂತೆ, ಯೆಹೋವ ದೇವರು “ನೀನು ಪ್ರಯೋಜನ ಪಡೆಯುವಂತೆ ಕಲಿಸುವಾತನು, ನೀನು ನಡೆಯಬೇಕಾದ ಮಾರ್ಗದಲ್ಲಿ ಹೆಜ್ಜೆಯಿಡುವಂತೆ ಮಾಡುವಾತನು” ಆಗಿದ್ದಾನೆ.—ಯೆಶಾಯ 48:17, NW.

23 ಬೈಬಲನ್ನು ಬಹುಪಾಲು ಎರಡು ಸಾವಿರ ವರುಷಗಳ ಹಿಂದೆ ಮುಗಿಸಲಾಯಿತಾದರೂ ಅದರ ಸಲಹೆಯು ನಿಜವಾಗಿಯೂ ಸದ್ಯೋಚಿತವಾಗಿದೆ. ಅಲ್ಲದೆ, ಅದು ಸಕಲ ಜನರಿಗಾಗಿ ಬರೆಯಲ್ಪಟ್ಟಿತು. ಬೈಬಲು ಒಂದು ಅಮೆರಿಕನ್‌ ಗ್ರಂಥವಾಗಲಿ ಒಂದು ಪಾಶ್ಚಾತ್ಯ ಗ್ರಂಥವಾಗಲಿ ಆಗಿರುವುದಿಲ್ಲ. ಯೆಹೋವನು “ಒಬ್ಬನಿಂದಲೇ ಎಲ್ಲಾ ಜನಾಂಗದವರನ್ನು ಹುಟ್ಟಿಸಿ”ದನು ಮತ್ತು ಸರ್ವತ್ರ ಇರುವ ಜನರ ಪ್ರಕೃತಿಯನ್ನು ಆತನು ಬಲ್ಲನು. (ಅ. ಕೃತ್ಯಗಳು 17:26) ಬೈಬಲ್‌ ಮೂಲತತ್ವಗಳು ಎಲ್ಲರಿಗೂ ಕಾರ್ಯಸಾಧಕವಾಗುತ್ತವೆ. ಅವನ್ನು ನೀವು ಅನ್ವಯಿಸುವುದಾದರೆ, ನೀವೂ ಕುಟುಂಬ ಸಂತೋಷದ ರಹಸ್ಯವನ್ನು ತಿಳಿದವರಾಗುವಿರಿ.