ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ ಹದಿನಾಲ್ಕು

ಜೊತೆಯಾಗಿ ವಯಸ್ಸಾದವರಾಗುತ್ತಾ ಹೋಗುವುದು

ಜೊತೆಯಾಗಿ ವಯಸ್ಸಾದವರಾಗುತ್ತಾ ಹೋಗುವುದು

1, 2. (ಎ) ವಯಸ್ಸಾಗುತ್ತಾ ಹೋದಂತೆ ಯಾವ ಬದಲಾವಣೆಗಳು ಸಂಭವಿಸುತ್ತವೆ? (ಬಿ) ಬೈಬಲಿನ ಸಮಯಗಳ ದೇವಭಕ್ತ ಪುರುಷರು ಮುಪ್ಪಿನಲ್ಲಿ ಹೇಗೆ ಸಂತೃಪ್ತಿಯನ್ನು ಕಂಡುಕೊಂಡರು?

 ನಮಗೆ ವಯಸ್ಸಾಗುತ್ತಾ ಹೋದಂತೆ, ಅನೇಕ ಬದಲಾವಣೆಗಳು ಸಂಭವಿಸುತ್ತವೆ. ಶಾರೀರಿಕ ಬಲಹೀನತೆಗಳು ನಮ್ಮ ಓಜಸ್ಸನ್ನು ಹೀರಿಹಾಕುತ್ತವೆ. ಕನ್ನಡಿಯಲ್ಲಿನ ಒಂದು ನೋಟವು, ಹೊಸ ಸುಕ್ಕುಗಳನ್ನು ಮತ್ತು ತಲೆಗೂದಲಿನ ಕ್ರಮೇಣ ಬಣ್ಣ ನಷ್ಟವನ್ನು—ಹಾಗೂ ಕೂದಲು ನಷ್ಟವನ್ನೂ ಹೊರಗೆಡಹುತ್ತದೆ. ನಾವು ತುಸು ಸ್ಮರಣಶಕ್ತಿಯ ನಷ್ಟವನ್ನೂ ಅನುಭವಿಸಬಹುದು. ಮಕ್ಕಳು ವಿವಾಹವಾಗುವಾಗ ಮತ್ತು ಪುನಃ ಮೊಮ್ಮಕ್ಕಳು ಆಗಮಿಸುವಾಗ ಹೊಸ ಸಂಬಂಧಗಳು ವಿಕಸಿಸುತ್ತವೆ. ಕೆಲವರಿಗಾದರೋ ಐಹಿಕ ಉದ್ಯೋಗದಿಂದ ನಿವೃತ್ತಿಯು ಒಂದು ಭಿನ್ನವಾದ ಜೀವನ ಕ್ರಮದಲ್ಲಿ ಫಲಿಸುತ್ತದೆ.

2 ವಾಸ್ತವವಾಗಿ, ಮುಪ್ಪಿನ ವರ್ಷಗಳು ಕಷ್ಟಕರವಾಗಿರಬಲ್ಲವು. (ಪ್ರಸಂಗಿ 12:1-8) ಆದರೂ, ಬೈಬಲಿನ ಸಮಯಗಳಲ್ಲಿನ ದೇವರ ಸೇವಕರನ್ನು ಪರಿಗಣಿಸಿರಿ. ಅವರು ಕಟ್ಟಕಡೆಗೆ ಸಾವನ್ನಪ್ಪಿದರೂ, ವೃದ್ಧಾಪ್ಯದಲ್ಲಿ ಅವರಿಗೆ ಮಹಾ ಸಂತೃಪ್ತಿಯನ್ನು ತಂದ ವಿವೇಕ ಮತ್ತು ತಿಳಿವಳಿಕೆ ಇವೆರಡನ್ನೂ ಅವರು ಗಳಿಸಿಕೊಂಡರು. (ಆದಿಕಾಂಡ 25:8; 35:29; ಯೋಬ 12:12; 42:17) ಸಂತೋಷದಿಂದ ವಯಸ್ಸಾಗುತ್ತಾ ಹೋಗುವುದರಲ್ಲಿ ಅವರು ಯಶಸ್ವಿಗಳಾದದ್ದು ಹೇಗೆ? ನಿಶ್ಚಯವಾಗಿ, ನಾವಿಂದು ಬೈಬಲಿನಲ್ಲಿ ದಾಖಲೆಯಾಗಿರುವುದೆಂದು ಕಾಣುವ ಮೂಲತತ್ವಗಳಿಗೆ ಅವರು ಹೊಂದಿಕೆಯಲ್ಲಿ ಜೀವಿಸಿದುದರಿಂದಲೆ.—ಕೀರ್ತನೆ 119:105; 2 ತಿಮೊಥೆಯ 3:16, 17.

3. ವಯಸ್ಸಾದ ಪುರುಷರಿಗೆ ಮತ್ತು ಸ್ತ್ರೀಯರಿಗೆ ಪೌಲನು ಯಾವ ಸಲಹೆಯನ್ನಿತ್ತನು?

3 ತೀತನಿಗೆ ಬರೆದ ತನ್ನ ಪತ್ರದಲ್ಲಿ, ವಯಸ್ಸಾಗುತ್ತಾ ಬರುತ್ತಿರುವವರಿಗೆ ಸ್ವಸ್ಥವಾದ ಮಾರ್ಗದರ್ಶನವನ್ನು ಅಪೊಸ್ತಲ ಪೌಲನು ನೀಡಿದ್ದಾನೆ. ಅವನು ಬರೆದುದು: “ವೃದ್ಧ ಪುರುಷರು ಮಿತಸ್ವಭಾವಿಗಳೂ ಗಂಭೀರ ಬುದ್ಧಿಯವರೂ ಸ್ವಸ್ಥಮನಸ್ಕರೂ, ನಂಬಿಕೆಯಲ್ಲಿ, ಪ್ರೀತಿಯಲ್ಲಿ ಮತ್ತು ಸಹನೆಯಲ್ಲಿ ಸ್ವಸ್ಥರೂ ಆಗಿರಲಿ. ತದ್ರೀತಿ ವೃದ್ಧ ಸ್ತ್ರೀಯರು ವರ್ತನೆಯಲ್ಲಿ ಪೂಜ್ಯತೆಯುಳ್ಳವರೂ ಚಾಡಿಹೇಳದಿರುವವರೂ ಆಗಿರಬೇಕಲ್ಲದೆ, ಬಹಳ ದ್ರಾಕ್ಷಾಮದ್ಯಕ್ಕೆ ಅಡಿಯಾಳುಗಳಾಗಿರದೆ ಒಳ್ಳೆಯದರ ಶಿಕ್ಷಕಿಯರಾಗಿರಲಿ.” (ತೀತ 2:2, 3, NW) ಈ ಮಾತುಗಳನ್ನು ಲಕ್ಷಿಸುವುದರಿಂದ ವಯಸ್ಸಾಗುತ್ತಾ ಬರುವ ಪಂಥಾಹ್ವಾನಗಳನ್ನು ಎದುರಿಸಲಿಕ್ಕೆ ನಿಮಗೆ ಸಹಾಯವಾಗಬಲ್ಲದು.

ನಿಮ್ಮ ಮಕ್ಕಳ ಸ್ವಾವಲಂಬನೆಗೆ ಹೊಂದಿಸಿಕೊಳ್ಳಿರಿ

4, 5. ಅನೇಕ ಹೆತ್ತವರು ತಮ್ಮ ಮಕ್ಕಳು ಮನೆಬಿಟ್ಟು ಹೋಗುವಾಗ ಹೇಗೆ ಪ್ರತಿಕ್ರಿಯಿಸುತ್ತಾರೆ, ಮತ್ತು ಕೆಲವರು ಹೊಸ ಸನ್ನಿವೇಶಕ್ಕೆ ಹೇಗೆ ಹೊಂದಿಸಿಕೊಳ್ಳುತ್ತಾರೆ?

4 ಪಾತ್ರಗಳ ಬದಲಾವಣೆಯು ಹೊಂದಿಸಿಕೊಳ್ಳುವಿಕೆಯನ್ನು ಕೇಳಿಕೊಳ್ಳುತ್ತದೆ. ವಯಸ್ಕ ಮಕ್ಕಳು ವಿವಾಹವಾಗಿ ಮನೆಯನ್ನು ಬಿಟ್ಟುಹೋಗುವಾಗ ಇದೆಷ್ಟು ನಿಜವಾಗಿ ಪರಿಣಮಿಸುತ್ತದೆ! ಹೆಚ್ಚಿನ ಹೆತ್ತವರಿಗಾದರೋ ತಾವು ವೃದ್ಧರಾಗುತ್ತಿದ್ದೇವೆಂಬುದಕ್ಕೆ ಇದು ಪ್ರಥಮ ಮರುಜ್ಞಾಪನವಾಗಿದೆ. ತಮ್ಮ ಮಕ್ಕಳು ಪ್ರಾಪ್ತ ವಯಸ್ಕರಾದುದಕ್ಕಾಗಿ ಅವರು ಆನಂದಿಸುತ್ತಾರಾದರೂ, ತಮ್ಮ ಮಕ್ಕಳನ್ನು ಸ್ವಾವಲಂಬನೆಗಾಗಿ ತಯಾರಿಸಲು ತಾವು ಕೈಲಾದುದೆಲ್ಲವನ್ನು ಮಾಡಿದ್ದೇವೊ ಇಲ್ಲವೊ ಎಂಬುದರ ಕುರಿತು ಹೆತ್ತವರು ಆಗಾಗ ಚಿಂತಿಸುತ್ತಾರೆ. ಮತ್ತು ಮನೆಯಲ್ಲಿ ಅವರ ಅನುಪಸ್ಥಿತಿಯ ಅನಿಸಿಕೆಯೂ ಅವರಿಗಾಗಬಹುದು.

5 ಮಕ್ಕಳು ಮನೆಬಿಟ್ಟು ಹೋದಮೇಲೂ ಹೆತ್ತವರು ತಮ್ಮ ಮಕ್ಕಳ ಹಿತಚಿಂತನೆಯಲ್ಲಿ ಆಸಕ್ತರಾಗಿ ಮುಂದುವರಿಯುವುದು ಗ್ರಾಹ್ಯವೇ. “ಅವರು ಕ್ಷೇಮವಾಗಿದ್ದಾರೆಂಬ ಆಶ್ವಾಸನೆಗಾಗಿ ಅವರಿಂದ ಆಗಿಂದಾಗ್ಗೆ ಸುದ್ದಿ ಕೇಳುವ ಸಾಧ್ಯತೆ ನನಗಿದ್ದರೆ ಅದು ನನ್ನನ್ನು ಆನಂದಪಡಿಸುವುದು,” ಎಂದು ಹೇಳಿದಳು ಒಬ್ಬ ತಾಯಿ. ಒಬ್ಬ ತಂದೆಯು ಹೇಳುವುದು: “ನಮ್ಮ ಮಗಳು ಮನೆಬಿಟ್ಟು ಹೋದಾಗ, ಅದು ಅತಿ ಕಷ್ಟದ ಸಮಯವಾಗಿತ್ತು. ಅದು ನಮ್ಮ ಕುಟುಂಬದಲ್ಲಿ ಬಹಳ ದೊಡ್ಡ ತೆರಪನ್ನು ಬಿಟ್ಟುಹೋಯಿತು, ಯಾಕಂದರೆ ನಾವು ಯಾವಾಗಲೂ ಎಲ್ಲವನ್ನೂ ಒಂದುಗೂಡಿ ನಡೆಸುತ್ತಿದ್ದೆವು.” ತಮ್ಮ ಮಕ್ಕಳ ಅನುಪಸ್ಥಿತಿಯನ್ನು ಈ ಹೆತ್ತವರು ಹೇಗೆ ನಿಭಾಯಿಸಿದ್ದಾರೆ? ಅನೇಕ ವಿದ್ಯಮಾನಗಳಲ್ಲಿ, ಬೇರೆ ಜನರ ಕಡೆಗೆ ಚಿಂತನೆಯನ್ನು ತೋರಿಸುತ್ತಾ ಅವರಿಗೆ ಸಹಾಯ ಮಾಡುವ ಮೂಲಕವೇ.

6. ಕುಟುಂಬ ಸಂಬಂಧಗಳನ್ನು ಅದರ ಯೋಗ್ಯ ನೋಟದಲ್ಲಿಡಲು ಯಾವುದು ಸಹಾಯ ಮಾಡುತ್ತದೆ?

6 ಮಕ್ಕಳು ವಿವಾಹವಾಗುವಾಗ, ಹೆತ್ತವರ ಪಾತ್ರವು ಬದಲಾಗುತ್ತದೆ. ಆದಿಕಾಂಡ 2:24 ಹೇಳುವುದು: “ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರೂ ಒಂದೇ ಶರೀರವಾಗಿರುವರು.” (ಓರೆಅಕ್ಷರಗಳು ನಮ್ಮವು.) ತಲೆತನದ ದೈವಿಕ ಮೂಲತತ್ವಗಳ ಒಂದು ಗ್ರಹಿಕೆ, ಮತ್ತು ಒಳ್ಳೆಯ ಕ್ರಮವು ವಿಷಯಗಳನ್ನು ಯೋಗ್ಯ ನೋಟದಲ್ಲಿಡಲು ಹೆತ್ತವರಿಗೆ ನೆರವಾಗುವುದು.—1 ಕೊರಿಂಥ 11:3; 14:33, 40.

7. ಒಬ್ಬ ತಂದೆಯು ತನ್ನ ಪುತ್ರಿಯರು ವಿವಾಹವಾಗಿ ಮನೆಬಿಟ್ಟಾಗ ಯಾವ ಉತ್ತಮ ಮನೋಭಾವವನ್ನು ಬೆಳೆಸಿಕೊಂಡನು?

7 ಒಬ್ಬ ದಂಪತಿಗಳ ಇಬ್ಬರು ಪುತ್ರಿಯರು ವಿವಾಹವಾಗಿ ದೂರಹೋದ ಮೇಲೆ, ದಂಪತಿಗಳಿಗೆ ತಮ್ಮ ಜೀವನದಲ್ಲಿ ಶೂನ್ಯತೆಯ ಅನಿಸಿಕೆಯಾಯಿತು. ಮೊದಮೊದಲು ಗಂಡನು ತನ್ನ ಅಳಿಯಂದಿರನ್ನು ತೀವ್ರ ಅಸಮಾಧಾನದಿಂದ ನೋಡಿದನು. ಆದರೆ ತಲೆತನದ ಮೂಲತತ್ವದ ಮೇಲೆ ಅವನು ಯೋಚಿಸಿದಂತೆ, ತನ್ನ ಪುತ್ರಿಯರ ಗಂಡಂದಿರು ಅವರವರ ಮನೆವಾರ್ತೆಗಳಿಗೆ ಈಗ ಜವಾಬ್ದಾರರಾಗಿದ್ದಾರೆಂಬುದನ್ನು ಗ್ರಹಿಸಿಕೊಂಡನು. ಆದುದರಿಂದ, ಅವನ ಪುತ್ರಿಯರು ಬುದ್ಧಿವಾದಕ್ಕಾಗಿ ಕೇಳಿದಾಗ, ಅವರ ಗಂಡಂದಿರು ಏನು ಯೋಚಿಸಿದರೆಂದು ಅವನು ಕೇಳಿದನು, ಮತ್ತು ಅನಂತರ ತಾನು ಆದಷ್ಟು ಬೆಂಬಲವನ್ನು ಕೊಡಲು ನಿಶ್ಚೈಸಿದನು. ಅವನ ಅಳಿಯಂದಿರು ಈಗ ಅವನನ್ನು ಒಬ್ಬ ಸ್ನೇಹಿತನೋಪಾದಿ ವೀಕ್ಷಿಸಿ ಅವನ ಸಲಹೆಯನ್ನು ಸ್ವಾಗತಿಸುತ್ತಾರೆ.

8, 9. ಕೆಲವು ಹೆತ್ತವರು ತಮ್ಮ ಬೆಳೆದ ಮಕ್ಕಳ ಸ್ವಾವಲಂಬನೆಗೆ ಹೇಗೆ ಹೊಂದಿಕೊಂಡಿದ್ದಾರೆ?

8 ನವವಿವಾಹಿತರು, ಅಶಾಸ್ತ್ರೀಯವಾದದ್ದೇನನ್ನೂ ಮಾಡದಿದ್ದರೂ, ಹೆತ್ತವರು ಅತ್ಯುತ್ತಮವೆಂದೆಣಿಸುವ ಸಂಗತಿಯನ್ನು ಮಾಡದೆ ಹೋದರೆ ಆಗೇನು? “ಯೆಹೋವನ ದೃಷ್ಟಿಕೋನವನ್ನು ಕಾಣುವಂತೆ ನಾವು ಯಾವಾಗಲೂ ಅವರಿಗೆ ಸಹಾಯ ಮಾಡುತ್ತೇವೆ,” ಎಂದು ವಿವರಿಸುತ್ತಾರೆ ವಿವಾಹಿತ ಮಕ್ಕಳಿರುವ ಒಬ್ಬ ದಂಪತಿಗಳು, “ಆದರೆ ಅವರ ನಿರ್ಣಯಗಳಲ್ಲೊಂದನ್ನು ನಾವು ಒಪ್ಪದಿದ್ದರೆ, ಅದನ್ನು ಸ್ವೀಕರಿಸಿ ಅವರಿಗೆ ನಮ್ಮ ಬೆಂಬಲವನ್ನೂ ಉತ್ತೇಜನವನ್ನೂ ನೀಡುತ್ತೇವೆ.”

9 ಏಷಿಯಾದ ಕೆಲವು ದೇಶಗಳಲ್ಲಿ, ತಮ್ಮ ಪುತ್ರರ ಸ್ವಾವಲಂಬನೆಯನ್ನು ಸ್ವೀಕರಿಸಲು ಕೆಲವು ತಾಯಂದಿರಿಗೆ ವಿಶೇಷವಾಗಿ ಕಷ್ಟಕರವಾಗಿ ಕಾಣುತ್ತದೆ. ಆದರೂ ಅವರು ಕ್ರಿಸ್ತೀಯ ಕ್ರಮವನ್ನು ಮತ್ತು ತಲೆತನವನ್ನು ಗೌರವಿಸುವುದಾದರೆ, ತಮ್ಮ ಸೊಸೆಯಂದಿರೊಂದಿಗೆ ಘರ್ಷಣೆಯು ಬಹಳಷ್ಟು ಕಡಿಮೆಯಾಗುವುದನ್ನು ಕಾಣುತ್ತಾರೆ. ಕುಟುಂಬ ಗೃಹದಿಂದ ಪುತ್ರರ ನಿರ್ಗಮನವು “ಸದಾ ವೃದ್ಧಿಯಾಗುತ್ತಿರುವ ಕೃತಜ್ಞತೆಯ ಮೂಲ”ವಾಗಿರುತ್ತದೆ ಎಂದು ಒಬ್ಬ ಕ್ರೈಸ್ತ ಸ್ತ್ರೀಯು ಕಂಡುಕೊಳ್ಳುತ್ತಾಳೆ. ತಮ್ಮ ಹೊಸ ಮನೆವಾರ್ತೆಗಳನ್ನು ನಿಭಾಯಿಸುವ ಅವರ ಕುಶಲತೆಯನ್ನು ಕಾಣುವುದು ಅವಳನ್ನು ಪುಳಕಿತಗೊಳಿಸುತ್ತದೆ. ಪ್ರತಿಯಾಗಿ ಇದು, ಅವಳೂ ಅವಳ ಗಂಡನೂ ವಯಸ್ಸಾಗುತ್ತಾ ಬರುವಾಗ ಹೊರಬೇಕಾಗಿರುವ ಶಾರೀರಿಕ ಮತ್ತು ಮಾನಸಿಕ ಭಾರದ ಹಗುರಗೊಳಿಸುವಿಕೆಯ ಅರ್ಥದಲ್ಲಿರುವಂತಾಗಿದೆ.

ನಿಮ್ಮ ವಿವಾಹ ಬಂಧವನ್ನು ಮರುಚೇತರಿಸುವುದು

10, 11. ನಡುಪ್ರಾಯದ ಕೆಲವು ಪಾಶಗಳನ್ನು ವರ್ಜಿಸಲು ಯಾವ ಶಾಸ್ತ್ರೀಯ ಸಲಹೆಯು ಜನರಿಗೆ ಸಹಾಯ ಮಾಡುವುದು?

10 ನಡು ಪ್ರಾಯವನ್ನು ತಲಪುವುದನ್ನು ಜನರು ಅನೇಕ ವಿಧಗಳಲ್ಲಿ ಪ್ರತಿಕ್ರಿಯಿಸುತ್ತಾರೆ. ಕೆಲವು ಪುರುಷರು ಯುವಕರಾಗಿ ತೋರಿಬರುವ ಪ್ರಯತ್ನದಲ್ಲಿ ವಿಭಿನ್ನವಾಗಿ ಉಡುಪನ್ನು ಉಡುತ್ತಾರೆ. ಅನೇಕ ಹೆಂಗಸರು ಋತುಬಂಧವು ತರುವಂತಹ ಬದಲಾವಣೆಗಳ ಕುರಿತು ಚಿಂತಿಸುತ್ತಾರೆ. ಶೋಚನೀಯವಾಗಿ, ಕೆಲವು ನಡುಪ್ರಾಯದ ವ್ಯಕ್ತಿಗಳು, ವಿರುದ್ಧ ಲಿಂಗದ ಯುವ ಸದಸ್ಯರೊಂದಿಗೆ ಲಲ್ಲೆಹೊಡೆಯುವ ಮೂಲಕ ತಮ್ಮ ಸಂಗಾತಿಗಳನ್ನು ತೀವ್ರ ಅಸಮಾಧಾನಕ್ಕೆ ಮತ್ತು ಈರ್ಷ್ಯೆಗೆ ಪ್ರಚೋದಿಸುತ್ತಾರೆ. ದೈವಭಕ್ತಿಯ ಹಿರಿಯ ಪುರುಷರಾದರೊ “ಸ್ವಸ್ಥಚಿತ್ತರಾಗಿ” ಇದ್ದು, ಅಯುಕ್ತವಾದ ಅಭಿಲಾಷೆಗಳನ್ನು ನಿಗ್ರಹಿಸುತ್ತಾರೆ. (1 ಪೇತ್ರ 4:7) ತದ್ರೀತಿ ಪಕ್ವತೆಯ ಸ್ತ್ರೀಯರು, ತಮ್ಮ ಗಂಡಂದಿರಿಗಾಗಿರುವ ಪ್ರೀತಿಯಿಂದಾಗಿ ಮತ್ತು ಯೆಹೋವನನ್ನು ಮೆಚ್ಚಿಸುವ ಅಪೇಕ್ಷೆಯಿಂದಾಗಿ ತಮ್ಮ ವಿವಾಹಗಳ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಕಾರ್ಯನಡಿಸುತ್ತಾರೆ.

11 “ಜೀವಮಾನದಲ್ಲೆಲ್ಲಾ ಅವನಿಗೆ ಅಹಿತವನ್ನು ಮಾಡದೆ ಹಿತವನ್ನೇ ಮಾಡುತ್ತಾ” ತನ್ನ ಗಂಡನಿಗಾಗಿ ಪ್ರತಿಫಲವನ್ನೀಯುವ “ಗುಣವತಿ [“ಸಮರ್ಥೆ,” NW]ಯಾದ ಸತಿ”ಯ ಸ್ತುತಿಯನ್ನು ಅರಸನಾದ ಲೆಮೂವೇಲನು ಪ್ರೇರಿತನಾಗಿ ದಾಖಲಿಸಿದನು. ನಡು ವಯಸ್ಸಿನಲ್ಲಿ ಅನುಭವಿಸುವ ಯಾವುದೇ ಮಾನಸಿಕ ಕ್ಷೋಭೆಯನ್ನು ನಿಭಾಯಿಸಲು ತನ್ನ ಹೆಂಡತಿಯು ಹೇಗೆ ಪರಿಶ್ರಮಿಸುತ್ತಾಳೆಂಬುದನ್ನು ಗಣ್ಯಮಾಡಲು ಒಬ್ಬ ಕ್ರೈಸ್ತ ಗಂಡನು ತಪ್ಪಲಾರನು. ಅವನ ಪ್ರೀತಿಯು ಆಕೆಯನ್ನು “ಕೊಂಡಾಡು”ವುದಕ್ಕೆ ಅವನನ್ನು ಪ್ರೇರೇಪಿಸುವುದು. (ಓರೆಅಕ್ಷರಗಳು ನಮ್ಮವು.)—ಜ್ಞಾನೋಕ್ತಿ 31:10, 12, 28.

12. ವರ್ಷಗಳು ಸಂದಂತೆ ದಂಪತಿಗಳು ಹೇಗೆ ಒಂದುಗೂಡಿ ಒತ್ತಾಗಿ ಬೆಳೆಯಬಲ್ಲರು?

12 ಮಕ್ಕಳ ಪಾಲನೆ ಪೋಷಣೆಯ ಕಾರ್ಯಮಗ್ನ ವರ್ಷಗಳಲ್ಲಿ, ನಿಮ್ಮ ಮಕ್ಕಳ ಅಗತ್ಯಗಳನ್ನು ನೋಡಿಕೊಳ್ಳಲು ನೀವಿಬ್ಬರೂ ಸಂತೋಷದಿಂದ ನಿಮ್ಮ ವೈಯಕ್ತಿಕ ಅಪೇಕ್ಷೆಗಳನ್ನು ಬದಿಗೊತ್ತಿರಬಹುದು. ಅವರ ನಿರ್ಗಮನದ ಬಳಿಕ ನಿಮ್ಮ ವಿವಾಹಿತ ಜೀವನಕ್ಕೆ ಪುನಃ ಕೇಂದ್ರೀಕರಿಸುವ ಸಮಯವು ಅದಾಗಿದೆ. “ನನ್ನ ಪುತ್ರಿಯರು ಮನೆಬಿಟ್ಟಾಗ,” ಒಬ್ಬ ಗಂಡನು ಹೇಳುವುದು, “ನಾನು ನನ್ನ ಹೆಂಡತಿಯೊಂದಿಗೆ ತಿರುಗೊಮ್ಮೆ ಪ್ರಣಯಾಚರಣೆ ಆರಂಭಿಸಿದೆ.” ಮತ್ತೊಬ್ಬ ಗಂಡನು ಹೇಳುವುದು: “ನಾವು ಪರಸ್ಪರ ಆರೋಗ್ಯಕ್ಕೆ ಗಮನಕೊಡುತ್ತೇವೆ ಮತ್ತು ವ್ಯಾಯಾಮ ಮಾಡುವ ಅಗತ್ಯವನ್ನು ಒಬ್ಬರಿಗೊಬ್ಬರು ನೆನಪಿಸುತ್ತೇವೆ.” ಒಂಟಿತನ ಭಾಸವಾಗದಂತೆ ಅವನೂ ಅವನ ಹೆಂಡತಿಯೂ ಸಭೆಯ ಇತರ ಸದಸ್ಯರಿಗೆ ಅತಿಥಿಸತ್ಕಾರ ತೋರಿಸುತ್ತಾರೆ. ಹೌದು, ಇತರರಲ್ಲಿ ಆಸಕ್ತಿಯನ್ನು ತೋರಿಸುವುದು, ಆಶೀರ್ವಾದಗಳನ್ನು ತರುತ್ತದೆ. ಅಷ್ಟಲ್ಲದೆ, ಅದು ಯೆಹೋವನನ್ನು ಮೆಚ್ಚಿಸುತ್ತದೆ.—ಫಿಲಿಪ್ಪಿ 2:4; ಇಬ್ರಿಯ 13:2, 16.

13. ಒಬ್ಬ ದಂಪತಿಗಳು ಒಟ್ಟಾಗಿ ಹೆಚ್ಚು ಮುಪ್ಪಿಗೆ ಬೆಳೆಯುವಾಗ, ಬಿಚ್ಚುಮನ ಮತ್ತು ಪ್ರಾಮಾಣಿಕತೆಯು ಯಾವ ಪಾತ್ರವನ್ನು ವಹಿಸುತ್ತವೆ?

13 ನಿಮ್ಮ ಮತ್ತು ನಿಮ್ಮ ಜೊತೆಗಾರರ ಮಧ್ಯೆ ಒಂದು ಸಂವಾದದ ತೆರಪು ವಿಕಸಿಸುವಂತೆ ಬಿಡಬೇಡಿರಿ. ಮುಚ್ಚುಮರೆಯಿಲ್ಲದೆ ಮಾತನಾಡಿರಿ. (ಜ್ಞಾನೋಕ್ತಿ 17:27) “ಒಬ್ಬರನ್ನೊಬ್ಬರು ಲಕ್ಷಿಸುವ ಮೂಲಕ ಮತ್ತು ಪರಿಗಣನೆಯಿಂದಿರುವ ಮೂಲಕ ನಾವು ಪರಸ್ಪರ ಸಾಮರಸ್ಯವನ್ನು ಆಳಗೊಳಿಸುತ್ತೇವೆ,” ಎಂದು ಹೇಳುತ್ತಾನೆ ಒಬ್ಬ ಗಂಡ. ಅವನ ಹೆಂಡತಿಯು ಒಪ್ಪುತ್ತಾ ಹೇಳುವುದು: “ನಮಗೆ ಹೆಚ್ಚು ವಯಸ್ಸಾದ ಹಾಗೆ, ಒಂದುಗೂಡಿ ಚಹಾ ಕುಡಿಯುವುದರಲ್ಲಿ, ಸಂಭಾಷಿಸುವುದರಲ್ಲಿ, ಮತ್ತು ಒಬ್ಬರೊಂದಿಗೊಬ್ಬರು ಸಹಕರಿಸುವುದರಲ್ಲಿ ನಾವು ಆನಂದಿಸಲು ತೊಡಗಿದ್ದೇವೆ.” ನಿಮ್ಮ ಬಿಚ್ಚು ಮನಸ್ಸು ಮತ್ತು ಯಥಾರ್ಥತೆಯು ನಿಮ್ಮ ವಿವಾಹ ಬಂಧವನ್ನು ಬಿಗಿಮಾಡಲು ಸಹಾಯ ಮಾಡುತ್ತದೆ, ವಿವಾಹ ಭಂಜಕನಾದ ಸೈತಾನನ ಆಕ್ರಮಣಗಳನ್ನು ಮುರಿಯುವಂತೆ ಮಾಡುವ ದೃಢತೆಯನ್ನು ಅದಕ್ಕೆ ಕೊಡುತ್ತದೆ.

ನಿಮ್ಮ ಮೊಮ್ಮಕ್ಕಳಲ್ಲಿ ಆನಂದಿಸಿರಿ

14. ತಿಮೊಥೆಯನು ಒಬ್ಬ ಕ್ರೈಸ್ತನಾಗಿ ಬೆಳೆಯುವುದರಲ್ಲಿ ಅವನ ಅಜ್ಜಿಯು ಯಾವ ಪಾತ್ರವಹಿಸಿದಳೆಂಬುದು ಸ್ಫುಟ?

14 ಮೊಮ್ಮಕ್ಕಳು ವೃದ್ಧರ “ಕಿರೀಟ”ವಾಗಿದ್ದಾರೆ. (ಜ್ಞಾನೋಕ್ತಿ 17:6) ಮೊಮ್ಮಕ್ಕಳ ಸಾಹಚರ್ಯವು ನಿಜವಾಗಿಯೂ ಉಲ್ಲಾಸಕರ—ಸಜೀವಭರಿತ ಮತ್ತು ಚೈತನ್ಯಕರ—ವಾಗಿರಬಲ್ಲದು. ತನ್ನ ಮಗಳಾದ ಯೂನೀಕೆಯ ಜೊತೆಗೂಡಿಕೊಂಡು, ಶಿಶುವಾಗಿದ್ದ ತನ್ನ ಮೊಮ್ಮಗ ತಿಮೊಥೆಯನೊಂದಿಗೆ ತನ್ನ ನಂಬಿಕೆಗಳನ್ನು ಹಂಚಿಕೊಂಡ ಒಬ್ಬ ಅಜ್ಜಿಯಾದ ಲೋವಿಯ ಕುರಿತಾಗಿ ಬೈಬಲು ಸದಭಿಪ್ರಾಯದಿಂದ ಮಾತಾಡುತ್ತದೆ. ತನ್ನ ತಾಯಿ ಮತ್ತು ತನ್ನ ಅಜ್ಜಿ ಇಬ್ಬರೂ ಬೈಬಲ್‌ ಸತ್ಯವನ್ನು ಅಮೂಲ್ಯವೆಂದೆಣಿಸಿದರೆಂಬ ಅರಿವಿನೊಂದಿಗೆ ಈ ಬಾಲಕನು ಬೆಳೆದನು.—2 ತಿಮೊಥೆಯ 1:5; 3:14, 15.

15. ಮೊಮ್ಮಕ್ಕಳ ಸಂಬಂಧದಲ್ಲಿ ಅಜ್ಜಅಜ್ಜಿಯರು ಯಾವ ಬೆಲೆಯುಳ್ಳ ಸಹಾಯವನ್ನು ಕೊಡಬಲ್ಲರು, ಆದರೆ ಅವರು ಏನನ್ನು ವರ್ಜಿಸಬೇಕು?

15 ಹೀಗಿರುವಾಗ ಅಜ್ಜಅಜ್ಜಿಯರು ಒಂದು ಅತ್ಯಂತ ಬೆಲೆಯುಳ್ಳ ಸಹಾಯವನ್ನು ಕೊಡಸಾಧ್ಯವಿರುವ ಒಂದು ವಿಶೇಷ ಕ್ಷೇತ್ರವು ಇಲ್ಲಿದೆ. ಅಜ್ಜಅಜ್ಜಿಯರೇ, ಯೆಹೋವನ ಉದ್ದೇಶಗಳ ನಿಮ್ಮ ಜ್ಞಾನವನ್ನು ಈಗಾಗಲೇ ನೀವು ನಿಮ್ಮ ಮಕ್ಕಳೊಂದಿಗೆ ಹಂಚಿಕೊಂಡಿದ್ದೀರಿ. ತಿರುಗಿ ಈಗ ಇನ್ನೊಂದು ಸಂತತಿಯೊಂದಿಗೆ ನೀವು ಅದೇ ರೀತಿ ಮಾಡಬಲ್ಲಿರಿ! ಹೆಚ್ಚಿನ ಎಳೆಯ ಮಕ್ಕಳು ತಮ್ಮ ಅಜ್ಜಅಜ್ಜಿಯರು ವಿವರಿಸುವ ಬೈಬಲ್‌ ಕಥೆಗಳನ್ನು ಕೇಳಲು ರೋಮಾಂಚಗೊಳ್ಳುತ್ತಾರೆ. ನಿಶ್ಚಯವಾಗಿಯೂ, ತನ್ನ ಮಕ್ಕಳಲ್ಲಿ ಬೈಬಲ್‌ ಸತ್ಯತೆಗಳನ್ನು ಬೇರೂರಿಸುವುದಕ್ಕೆ ತಂದೆಗಿರುವ ಜವಾಬ್ದಾರಿಯನ್ನು ನೀವು ತೆಗೆದುಕೊಳ್ಳುವುದಿಲ್ಲ. (ಧರ್ಮೋಪದೇಶಕಾಂಡ 6:7) ಬದಲಿಗೆ ಅದಕ್ಕೆ ಭರ್ತಿಮಾಡುತ್ತೀರಿ. ನಿಮ್ಮ ಪ್ರಾರ್ಥನೆಯು ಆ ಕೀರ್ತನೆಗಾರನಂತಹದ್ದಾಗಿರಲಿ: “ದೇವರೇ, ನಾನು ನರೆಯ ಮುದುಕನಾದಾಗಲೂ ಕೈಬಿಡಬೇಡ; ಆಗ ಮುಂದಿನ ತಲೆಯವರಿಗೆ ನಿನ್ನ ಭುಜಬಲವನ್ನು ಸಾರುವೆನು, ತಲತಲಾಂತರದವರಿಗೆಲ್ಲಾ ನಿನ್ನ ಪ್ರತಾಪವನ್ನು ಪ್ರಕಟಿಸುವೆನು.”—ಕೀರ್ತನೆ 71:18; 78:5, 6.

16. ತಮ್ಮ ಕುಟುಂಬದಲ್ಲಿ ಬೆಳೆಯುತ್ತಿರುವ ಮನಸ್ತಾಪದ ಕಾರಣವಾಗುವುದನ್ನು ಅಜ್ಜಅಜ್ಜಿಯರು ಹೇಗೆ ತಡೆಯಬಲ್ಲರು?

16 ಶೋಚನೀಯವಾಗಿ, ಕೆಲವು ಅಜ್ಜಅಜ್ಜಿಯರು ಎಳೆಯರನ್ನು ಎಷ್ಟು ಮುದ್ದಿಸುತ್ತಾರೆಂದರೆ, ಅಜ್ಜಅಜ್ಜಿಯರು ಮತ್ತು ಅವರ ಬೆಳೆದ ಮಕ್ಕಳ ನಡುವೆ ಬಿಗುಪುಗಳು ವಿಕಸಿಸುತ್ತವೆ. ಆದರೂ, ನಿಮ್ಮ ಪ್ರಾಮಾಣಿಕ ದಯೆಯು, ಪ್ರಾಯಶಃ ನಿಮ್ಮ ಮೊಮ್ಮಕ್ಕಳಿಗೆ, ತಮ್ಮ ಹೆತ್ತವರಿಗೆ ತಿಳಿಸಲು ಒಲ್ಲದ ವಿಷಯಗಳನ್ನು ನಿಮಗೆ ಗುಟ್ಟಿನಲ್ಲಿ ಹೇಳಿಬಿಡುವುದನ್ನು ಸುಲಭವನ್ನಾಗಿ ಮಾಡಬಹುದು. ತಮ್ಮ ಲೋಲುಪ ಅಜ್ಜಅಜ್ಜಿಯರು ತಮ್ಮ ಹೆತ್ತವರ ವಿರುದ್ಧ ತಮ್ಮ ಪಕ್ಷವಹಿಸುವರೆಂದು ಕೆಲವು ಸಲ ಎಳೆಯರು ನಿರೀಕ್ಷಿಸುತ್ತಾರೆ. ಆಗ ಏನು? ವಿವೇಕವನ್ನುಪಯೋಗಿಸಿರಿ, ಮತ್ತು ನಿಮ್ಮ ಮೊಮ್ಮಕ್ಕಳು ತಮ್ಮ ಹೆತ್ತವರೊಂದಿಗೆ ಮುಚ್ಚುಮರೆಯಿಲ್ಲದೆ ಇರುವಂತೆ ಪ್ರೋತ್ಸಾಹಿಸಿರಿ. ಇದು ಯೆಹೋವನನ್ನು ಮೆಚ್ಚಿಸುತ್ತದೆಂದು ನೀವು ವಿವರಿಸಸಾಧ್ಯವಿದೆ. (ಎಫೆಸ 6:1-3) ಅವಶ್ಯವಿದ್ದರೆ, ನೀವಾಗಿಯೇ ಅವರ ಹೆತ್ತವರೊಂದಿಗೆ ಮುಂಚಿತವಾಗಿ ಮಾತನಾಡುವ ಮೂಲಕ ಎಳೆಯರು ಅವರನ್ನು ಸಮೀಪಿಸುವಂತೆ ದಾರಿಸಿದ್ಧಮಾಡಿಕೊಳ್ಳಲು ನೀಡಿಕೊಳ್ಳಬಹುದು. ವರುಷಗಳುದ್ದಕ್ಕೂ ನೀವು ಕಲಿತಿರುವ ವಿಷಯಗಳ ಕುರಿತು ನಿಮ್ಮ ಮೊಮ್ಮಕ್ಕಳಿಗೆ ಮುಚ್ಚುಮರೆಯಿಲ್ಲದೆ ತಿಳಿಸಿರಿ. ನಿಮ್ಮ ಪ್ರಾಮಾಣಿಕತೆ ಮತ್ತು ನಿಷ್ಕಪಟತೆಯು ಅವರಿಗೆ ಪ್ರಯೋಜನಕರವಾಗಿರಸಾಧ್ಯ.

ವಯಸ್ಸಾದಂತೆ ಹೊಂದಿಸಿಕೊಳ್ಳಿರಿ

17. ವೃದ್ಧರಾಗುತ್ತಿರುವ ಕ್ರೈಸ್ತರು ಕೀರ್ತನೆಗಾರನ ಯಾವ ದೃಢನಿಶ್ಚಯವನ್ನು ಅನುಕರಿಸಬೇಕು?

17 ವಯಸ್ಸು ಸಂದಷ್ಟಕ್ಕೆ ನೀವು ಹಿಂದೆ ಮಾಡಿದುದೆಲ್ಲವನ್ನು ಅಥವಾ ಮಾಡಬಯಸುವುದೆಲ್ಲವನ್ನು ಮಾಡಲಾರಿರೆಂದು ಕಂಡುಕೊಳ್ಳುವಿರಿ. ಮುಪ್ಪಿನ ಕಾರ್ಯಗತಿಯನ್ನು ಒಬ್ಬನು ಸ್ವೀಕರಿಸುವುದೂ ಅದರೊಂದಿಗೆ ವ್ಯವಹರಿಸುವವನಾಗುವುದೂ ಹೇಗೆ? ನಿಮ್ಮ ಮನಸ್ಸಿನಲ್ಲಿ ನೀವು 30 ವರ್ಷ ವಯಸ್ಸಿನವರೆಂಬ ಭಾವನೆ ನಿಮಗಾಗಬಹುದು, ಆದರೆ ಕನ್ನಡಿಯಲ್ಲಿನ ಒಂದು ನಸುನೋಟವು, ವಿಭಿನ್ನವಾದ ವಾಸ್ತವಿಕತೆಯನ್ನು ಹೊರಗೆಡಹುತ್ತದೆ. ಧೈರ್ಯಗೆಡದಿರ್ರಿ. ಕೀರ್ತನೆಗಾರನು ಯೆಹೋವನಿಗೆ ವಿಜ್ಞಾಪಿಸಿದ್ದು: “ವೃದ್ಧಾಪ್ಯದಲ್ಲಿ ನನ್ನನ್ನು ಧಿಕ್ಕರಿಸಬೇಡ; ನನ್ನ ಬಲವು ಕುಂದಿದಾಗ ಕೈಬಿಡಬೇಡ.” ಕೀರ್ತನೆಗಾರನನ್ನು ಅನುಕರಿಸುವುದನ್ನು ನಿಮ್ಮ ನಿರ್ಧಾರವನ್ನಾಗಿ ಮಾಡಿರಿ. ಅವನಂದದ್ದು: “ನಾನಂತೂ ನಿರೀಕ್ಷಿಸಿಕೊಂಡೇ ಇರುವೆನು; ನಿನ್ನನ್ನು ಅಧಿಕಾಧಿಕವಾಗಿ ಹೊಗಳುತ್ತಿರುವೆನು.”—ಕೀರ್ತನೆ 71:9, 14.

18. ಒಬ್ಬ ಪಕ್ವತೆಯ ಕ್ರೈಸ್ತನು ಉದ್ಯೋಗ ನಿವೃತ್ತಿಯ ಅಮೂಲ್ಯ ಉಪಯೋಗವನ್ನು ಹೇಗೆ ಮಾಡಬಲ್ಲನು?

18 ಅನೇಕರು ಐಹಿಕ ಉದ್ಯೋಗದಿಂದ ನಿವೃತ್ತಿಪಡೆದ ಮೇಲೆ ಯೆಹೋವನಿಗೆ ತಮ್ಮ ಸ್ತುತಿಯನ್ನು ಹೆಚ್ಚಿಸಲು ಮೊದಲೇ ಸಿದ್ಧತೆಯನ್ನು ಮಾಡಿದ್ದಾರೆ. “ನಮ್ಮ ಮಗಳು ಶಾಲೆಬಿಟ್ಟಾಗ ನಾನು ಏನು ಮಾಡುವೆನೆಂದು ಮುಂಚೆಯೇ ಯೋಜಿಸಿಟ್ಟಿದ್ದೆ,” ಎಂದು ವಿವರಿಸುತ್ತಾನೆ, ಈಗ ನಿವೃತ್ತಿ ಹೊಂದಿರುವ ಒಬ್ಬ ತಂದೆ. “ಪೂರ್ಣ ಸಮಯದ ಸಾರುವ ಶುಶ್ರೂಷೆಯನ್ನು ಆರಂಭಿಸುವೆನೆಂದು ನಾನು ನಿಶ್ಚಯಿಸಿದೆ, ಯೆಹೋವನನ್ನು ಹೆಚ್ಚು ಪೂರ್ಣವಾಗಿ ಸೇವಿಸಲು ಮುಕ್ತನಾಗಿರುವಂತೆ ನಾನು ನನ್ನ ವ್ಯಾಪಾರವನ್ನು ಮಾರಿಬಿಟ್ಟೆ. ನಾನು ದೇವರ ನಿರ್ದೇಶನಕ್ಕಾಗಿ ಪ್ರಾರ್ಥಿಸಿದೆ.” ನಿವೃತ್ತಿಹೊಂದುವ ವಯಸ್ಸನ್ನು ನೀವು ಸಮೀಪಿಸುತ್ತಿದ್ದೀರಾದರೆ, ನಮ್ಮ ಮಹಾ ನಿರ್ಮಾಣಿಕನ ಘೋಷಣೆಯಿಂದ ಸಾಂತ್ವನವನ್ನು ಪಡೆದುಕೊಳ್ಳಿರಿ: “ನಿಮ್ಮ ಮುಪ್ಪಿನ ತನಕ ನಾನೇ ಆಧಾರ, ನರೆಬಂದಾಗಲೂ ನಿಮ್ಮನ್ನು ಹೊತ್ತು ಸಹಿಸುವೆನು.”—ಯೆಶಾಯ 46:4.

19. ವಯಸ್ಸಾಗುತ್ತಾ ಬರುತ್ತಿರುವವರಿಗೆ ಯಾವ ಸಲಹೆಯನ್ನು ನೀಡಲಾಗಿದೆ?

19 ಐಹಿಕ ಉದ್ಯೋಗದಿಂದ ನಿವೃತ್ತಿಯ ಸ್ಥಿತಿಗೆ ಹೊಂದಿಸಿಕೊಳ್ಳುವುದು ಸುಲಭವಾಗದೆ ಇದ್ದೀತು. ವಯಸ್ಸಾದ ಪುರುಷರು “ಮಿತ ಸ್ವಭಾವಿ”ಗಳಾಗಿರಬೇಕೆಂದು ಪೌಲನು ಸಲಹೆ ನೀಡಿದನು. ಇದು ಸಾಮಾನ್ಯ ನಿಗ್ರಹವನ್ನು ಕೇಳಿಕೊಳ್ಳುತ್ತದೆ, ಆರಾಮದ ಜೀವನವನ್ನು ಹುಡುಕುವ ಪ್ರವೃತ್ತಿಗೆ ಆಸ್ಪದಕೊಡುವುದನ್ನಲ್ಲ. ನಿವೃತ್ತಿಯ ಅನಂತರ ಮುಂಚಿಗಿಂತಲೂ ಹೆಚ್ಚಾಗಿ ಕ್ರಮಬದ್ಧತೆ ಮತ್ತು ಸ್ವಶಿಸ್ತಿನ ಒಂದು ಅಗತ್ಯವು ಇದ್ದೀತು. ಆದುದರಿಂದ, ಕಾರ್ಯಮಗ್ನರಾಗಿರ್ರಿ, “ಕರ್ತನ ಸೇವೆಯಲ್ಲಿ ಪಡುವ ಪ್ರಯಾಸವು ನಿಷ್ಫಲವಾಗುವದಿಲ್ಲವೆಂದು ತಿಳಿದು ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕ್ತಿಯಿಂದ ಮಾಡುವವರಾಗಿರಿ.” (1 ಕೊರಿಂಥ 15:58) ಇತರರಿಗೆ ಸಹಾಯ ಮಾಡುವುದಕ್ಕಾಗಿ ನಿಮ್ಮ ಚಟುವಟಿಕೆಗಳನ್ನು ವಿಶಾಲಗೊಳಿಸಿರಿ. (2 ಕೊರಿಂಥ 6:13) ವೃದ್ಧಾಪ್ಯಕ್ಕೆ ಹೊಂದಿಕೆಯಾದ ಗತಿಯಲ್ಲಿ ಸುವಾರ್ತೆಯನ್ನು ಹುರುಪಿನಿಂದ ಸಾರುವ ಮೂಲಕ ಅನೇಕ ಕ್ರೈಸ್ತರು ಇದನ್ನು ಮಾಡುತ್ತಾರೆ. ನೀವು ಹೆಚ್ಚು ಮುಪ್ಪಿನವರಾಗುತ್ತಾ ಹೋದಷ್ಟಕ್ಕೆ, “ನಂಬಿಕೆಯಲ್ಲಿ, ಪ್ರೀತಿಯಲ್ಲಿ ಮತ್ತು ಸಹನೆಯಲ್ಲಿ ಸ್ವಸ್ಥ”ರಾಗಿರಿ.—ತೀತ 2:2, NW.

ನಿಮ್ಮ ಜೊತೆಗಾರರ ನಷ್ಟವನ್ನು ನಿಭಾಯಿಸುವುದು

20, 21. (ಎ) ಸದ್ಯದ ವಿಷಯಗಳ ವ್ಯವಸ್ಥೆಯಲ್ಲಿ, ವಿವಾಹಿತ ದಂಪತಿಗಳನ್ನು ಕಟ್ಟಕಡೆಗೆ ಯಾವುದು ಪ್ರತ್ಯೇಕಿಸಲೇಬೇಕು? (ಬಿ) ಅನ್ನಳು ವಿಯೋಗಿಗಳಾದ ಜೊತೆಗಾರರಿಗೆ ಒಂದು ಉತ್ತಮ ಮಾದರಿಯನ್ನು ಹೇಗೆ ಒದಗಿಸುತ್ತಾಳೆ?

20 ಸದ್ಯದ ವಿಷಯಗಳ ವ್ಯವಸ್ಥೆಯಲ್ಲಿ ವಿವಾಹಿತ ದಂಪತಿಗಳು ಕಟ್ಟಕಡೆಗೆ ಮರಣದಲ್ಲಿ ಪ್ರತ್ಯೇಕಿಸಲ್ಪಡುತ್ತಾರೆಂಬುದು ದುಃಖಕರ, ಆದರೆ ಸತ್ಯಸಂಗತಿಯಾಗಿದೆ. ತಮ್ಮ ಪ್ರಿಯರು ಈಗ ನಿದ್ರಿಸುತ್ತಿದ್ದಾರೆಂದು, ವಿಯೋಗಿಗಳಾದ ಕ್ರೈಸ್ತ ಜೊತೆಗಾರರಿಗೆ ತಿಳಿದಿದೆ ಮತ್ತು ತಾವು ಅವರನ್ನು ಪುನಃ ನೋಡುವೆವೆಂಬ ಭರವಸೆ ಅವರಿಗಿದೆ. (ಯೋಹಾನ 11:11, 25) ಆದರೆ ಆ ನಷ್ಟವು, ಇನ್ನೂ ದುಃಖಕರವಾಗಿದೆ. ಬದುಕಿರುವ ವ್ಯಕ್ತಿಯು ಅದರೊಂದಿಗೆ ಹೇಗೆ ವ್ಯವಹರಿಸಬಲ್ಲನು? *

21 ಒಬ್ಬ ನಿರ್ದಿಷ್ಟ ಬೈಬಲ್‌ ವ್ಯಕ್ತಿಯು ಮಾಡಿದ ವಿಷಯವನ್ನು ಮನಸ್ಸಿನಲ್ಲಿಡುವುದು ಸಹಾಯಕರ. ಅನ್ನಳು, ವಿವಾಹವಾದ ಏಳು ವರ್ಷಗಳಲ್ಲೇ ವಿಧವೆಯಾದಳು, ಮತ್ತು ನಾವು ಅವಳ ಕುರಿತು ಓದುವಾಗ, ಅವಳು 84 ವರ್ಷ ವಯಸ್ಸಿನವಳಾಗಿದ್ದಳು. ತನ್ನ ಗಂಡನನ್ನು ಕಳೆದುಕೊಂಡಾಗ ಅವಳು ದುಃಖಪಟ್ಟಳೆಂಬುದು ನಮಗೆ ಖಚಿತವಾಗಿರಬಲ್ಲದು. ಅವಳು ನಿಭಾಯಿಸಿದ್ದು ಹೇಗೆ? ಅವಳು ಹಗಲಿರುಳು ಆಲಯದಲ್ಲಿ ಯೆಹೋವ ದೇವರಿಗೆ ಪವಿತ್ರ ಸೇವೆಯನ್ನು ಸಲ್ಲಿಸಿದಳು. (ಲೂಕ 2:36-38) ಅನ್ನಳ ಪ್ರಾರ್ಥನಾಪೂರ್ವಕ ಸೇವೆಯ ಜೀವಿತವು, ವಿಧವೆಯಾಗಿ ಆಕೆ ಅನುಭವಿಸಿದ ದುಃಖ ಅಥವಾ ಒಂಟಿತನಕ್ಕೆ ಒಂದು ಮಹಾ ಸಿದ್ಧೌಷಧವಾಗಿತ್ತೆಂಬುದು ನಿಸ್ಸಂಶಯ.

22. ಕೆಲವು ವಿಧವೆಯರು ಮತ್ತು ವಿಧುರರು ಏಕಾಂತತೆಯನ್ನು ಹೇಗೆ ನಿಭಾಯಿಸಿದ್ದಾರೆ?

22 “ಮಾತನಾಡಲು ಯಾರೂ ಜೊತೆಗಾರರು ಇರದಿರುವುದು ನನ್ನ ದೊಡ್ಡ ಪಂಥಾಹ್ವಾನ,” ಎಂದು, ಹತ್ತು ವರ್ಷದ ಹಿಂದೆ ವಿಧವೆಯಾದ 72 ವರ್ಷ ವಯಸ್ಸಿನ ಒಬ್ಬ ಹೆಂಗಸು ವಿವರಿಸುತ್ತಾಳೆ. “ನನ್ನ ಗಂಡ ಒಬ್ಬ ಒಳ್ಳೆಯ ಕೇಳುಗನಾಗಿದ್ದನು. ನಾವು ಸಭೆಯ ಕುರಿತು ಮತ್ತು ಕ್ರೈಸ್ತ ಶುಶ್ರೂಷೆಯಲ್ಲಿ ನಮ್ಮ ಪಾಲಿನ ಕುರಿತು ಮಾತಾಡುತ್ತಿದ್ದೆವು.” ಇನ್ನೊಬ್ಬ ವಿಧವೆಯು ಹೇಳುವುದು: “ಕಾಲವು ವಾಸಿಮಾಡುತ್ತದಾದರೂ, ಒಬ್ಬನು ತನ್ನ ಸಮಯದೊಂದಿಗೆ ಏನು ಮಾಡುತ್ತಾನೋ ಅದು ವಾಸಿಯಾಗಲು ಒಬ್ಬನಿಗೆ ಸಹಾಯ ಮಾಡುತ್ತದೆಂದು ಹೇಳುವುದು ಹೆಚ್ಚು ಸರಿಯೆಂದು ನಾನು ಕಂಡುಕೊಂಡಿದ್ದೇನೆ. ಇತರರಿಗೆ ಸಹಾಯ ಮಾಡುವುದಕ್ಕೆ ನೀವು ಒಂದು ಹೆಚ್ಚು ಉತ್ತಮ ಸ್ಥಾನದಲ್ಲಿರುತ್ತೀರಿ.” 67 ವರ್ಷ ವಯಸ್ಸಿನ ವಿಧುರನೊಬ್ಬನು ಒಪ್ಪಿಕೊಳ್ಳುತ್ತಾ ಹೇಳುವುದು: “ಸಾವಿನಿಂದಾದ ಅಗಲಿಕೆಯನ್ನು ನಿಭಾಯಿಸುವ ಸೋಜಿಗದ ವಿಧಾನವು ಇತರರನ್ನು ಸಂತೈಸುವುದಕ್ಕೆ ನಮ್ಮನ್ನು ಕೊಟ್ಟುಕೊಳ್ಳುವುದೇ.”

ಮುಪ್ಪಿನಲ್ಲಿ ದೇವರಿಂದ ಅಮೂಲ್ಯವೆಂದೆಣಿಸಲ್ಪಡುವುದು

23, 24. ವೃದ್ಧರಿಗೆ, ವಿಶೇಷವಾಗಿ ವಿಧವೆಯರಿಗೆ ಅಥವಾ ವಿಧುರರಿಗೆ, ಬೈಬಲು ಯಾವ ಮಹಾ ಸಾಂತ್ವನವನ್ನು ಕೊಡುತ್ತದೆ?

23 ಒಬ್ಬ ಪ್ರಿಯನಾದ ಸಂಗಾತಿಯನ್ನು ಸಾವು ಅಗಲಿಸುತ್ತದಾದರೂ, ಯೆಹೋವನು ಸದಾ ನಂಬಿಗಸ್ತನೂ ಭರವಸಯೋಗ್ಯನೂ ಆಗಿರುತ್ತಾನೆ. ಪುರಾತನ ಅರಸನಾದ ದಾವೀದನು ಹಾಡಿದ್ದು: “ನನ್ನ ಜೀವಮಾನದಲ್ಲೆಲ್ಲಾ ಯೆಹೋವನ ಮನೆಯಲ್ಲಿ ವಾಸಮಾಡುತ್ತಾ ಆತನ ಪ್ರಸನ್ನತೆಯನ್ನು ನೋಡುವದಕ್ಕೂ ಆತನ ಮಂದಿರದಲ್ಲಿ ಧ್ಯಾನಮಾಡುವದಕ್ಕೂ ನನಗೆ ಅಪ್ಪಣೆಯಾಗಬೇಕೆಂಬ ಒಂದೇ ವರವನ್ನು ಯೆಹೋವನಿಂದ ಕೇಳಿಕೊಂಡು ಅದನ್ನೇ ಎದುರುನೋಡುತ್ತಿರುವೆನು.”—ಕೀರ್ತನೆ 27:4.

24 “ದಿಕ್ಕಿಲ್ಲದ ವಿಧವೆಯರನ್ನು ಸಂರಕ್ಷಿಸು [“ಸನ್ಮಾನಿಸು,” NW]” ಎಂದು ಪ್ರೋತ್ಸಾಹಿಸುತ್ತಾನೆ ಅಪೊಸ್ತಲ ಪೌಲನು. (1 ತಿಮೊಥೆಯ 5:3) ಈ ಉಪದೇಶವನ್ನು ಹಿಂಬಾಲಿಸುವ ಸಲಹೆಯು, ಹತ್ತಿರ ಸಂಬಂಧಿಕರಿಲ್ಲದ ಅರ್ಹರಾದ ವಿಧವೆಯರಿಗೆ, ಸಭೆಯಿಂದ ಭೌತಿಕ ಬೆಂಬಲದ ಅಗತ್ಯವಿದ್ದಿದ್ದಿರಬಹುದೆಂಬುದನ್ನು ಸೂಚಿಸುತ್ತದೆ. ಆದರೂ, “ಸನ್ಮಾನಿಸು” ಎಂಬ ಉಪದೇಶದ ಅರ್ಥವು, ಅವರನ್ನು ಅಮೂಲ್ಯರಾಗಿ ಎಣಿಸುವುದನ್ನು ಒಳಗೂಡುತ್ತದೆ. ಯೆಹೋವನು ತಮ್ಮನ್ನು ಅಮೂಲ್ಯರೆಂದೆಣಿಸುತ್ತಾನೆ ಮತ್ತು ಬೆಂಬಲಿಸುವನು ಎಂಬ ಅರಿವಿನಿಂದ ದೇವಭಕ್ತ ವಿಧವೆಯರು ಮತ್ತು ವಿಧುರರು ಎಂತಹ ಸಾಂತ್ವನವನ್ನು ಪಡೆದುಕೊಳ್ಳಬಲ್ಲರು!—ಯಾಕೋಬ 1:27.

25. ವೃದ್ಧರಿಗಾಗಿ ಇನ್ನೂ ಯಾವ ಗುರಿಯು ಉಳಿದಿರುತ್ತದೆ?

25 “ಮುದುಕರಿಗೆ ನರೆಯು ಒಡವೆ,” ಎಂದು ಘೋಷಿಸುತ್ತದೆ ದೇವರ ಪ್ರೇರಿತ ವಾಕ್ಯ. “ನರೆಗೂದಲೇ ಸುಂದರ ಕಿರೀಟವು, ಅದು ಧರ್ಮಮಾರ್ಗದಲ್ಲಿ ದೊರಕುವದು.” (ಜ್ಞಾನೋಕ್ತಿ 16:31; 20:29) ಆದುದರಿಂದ, ವಿವಾಹಿತರಾಗಿದ್ದರೂ ಅಥವಾ ಪುನಃ ಒಂಟಿಗರಾದರೂ, ಯೆಹೋವನ ಸೇವೆಯನ್ನು ನಿಮ್ಮ ಜೀವನದಲ್ಲಿ ಪ್ರಥಮವಾಗಿಡುವುದನ್ನು ಮುಂದುವರಿಸಿರಿ. ಹೀಗೆ ದೇವರೊಂದಿಗೆ ಈಗ ನಿಮಗೆ ಒಂದು ಒಳ್ಳೆಯ ಹೆಸರನ್ನು ನೀವು ಪಡೆದಿರುವಿರಿ ಮತ್ತು ಎಲ್ಲಿ ವೃದ್ಧಾಪ್ಯದ ವೇದನೆಗಳು ಇನ್ನಿರಲಾರವೊ ಆ ಒಂದು ಲೋಕದಲ್ಲಿ ನಿತ್ಯಜೀವದ ಪ್ರತೀಕ್ಷೆಯುಳ್ಳವರಾಗುವಿರಿ.—ಕೀರ್ತನೆ 37:3-5; ಯೆಶಾಯ 65:20.

^ ಈ ವಿಷಯದ ಕುರಿತಾದ ಇನ್ನೂ ಹೆಚ್ಚಿನ ಸವಿಸ್ತಾರ ಚರ್ಚೆಗಾಗಿ, ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿ ಆಫ್‌ ಇಂಡಿಯದಿಂದ ಪ್ರಕಾಶಿಸಲ್ಪಟ್ಟಿರುವ, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ ಎಂಬ ಬ್ರೋಷರನ್ನು ನೋಡಿರಿ.