ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ ಹದಿನೈದು

ನಮ್ಮ ವೃದ್ಧ ಹೆತ್ತವರನ್ನು ಸನ್ಮಾನಿಸುವುದು

ನಮ್ಮ ವೃದ್ಧ ಹೆತ್ತವರನ್ನು ಸನ್ಮಾನಿಸುವುದು

1. ನಾವು ನಮ್ಮ ಹೆತ್ತವರಿಗೆ ಯಾವ ಋಣವನ್ನು ಸಲ್ಲಿಸುವ ಹಂಗಿಗರಾಗಿದ್ದೇವೆ, ಆದುದರಿಂದ ಅವರೆಡೆಗೆ ಯಾವ ಭಾವನೆ ಮತ್ತು ಕ್ರಿಯೆಯನ್ನು ನಾವು ತೋರಿಸಬೇಕು?

 “ಹೆತ್ತ ತಂದೆಯ ಮಾತಿಗೆ ಕಿವಿಗೊಡು; ಮುಪ್ಪಿನಲ್ಲಿಯೂ ತಾಯಿಯನ್ನು ಅಸಡ್ಡೆಮಾಡಬೇಡ,” ಎಂದು ಸಲಹೆಯಿತ್ತನು ಪುರಾತನ ಕಾಲದ ವಿವೇಕಿಯು. (ಜ್ಞಾನೋಕ್ತಿ 23:22) ‘ನಾನದನ್ನು ಎಂದೂ ಮಾಡೆನು!’ ಎಂದು ನೀವನ್ನಬಹುದು. ನಮ್ಮ ತಾಯಂದಿರನ್ನು—ಅಥವಾ ನಮ್ಮ ತಂದೆಯರನ್ನು ಅಸಡ್ಡೆಮಾಡುವ ಬದಲಾಗಿ—ನಮ್ಮಲ್ಲಿ ಹೆಚ್ಚಿನವರಿಗೆ ಅವರ ಕಡೆಗೆ ಆಳವಾದ ಪ್ರೀತಿಯ ಅನಿಸಿಕೆಯಿದೆ. ಅವರಿಗೆ ಅತಿಯಾಗಿ ಋಣಿಯಾಗಿರುವ ಗ್ರಹಿಕೆಯು ನಮಗಿದೆ. ಮೊತ್ತಮೊದಲಾಗಿ, ನಮ್ಮ ಹೆತ್ತವರು ನಮಗೆ ಜೀವ ಕೊಟ್ಟರು. ಯೆಹೋವನು ಜೀವದ ಬುಗ್ಗೆಯಾಗಿರುವುದಾದರೂ, ನಮ್ಮ ಹೆತ್ತವರ ಹೊರತು ನಾವು ಅಸ್ತಿತ್ವಕ್ಕೇ ಬರುತ್ತಿರಲಿಲ್ಲ. ನಾವು ನಮ್ಮ ಹೆತ್ತವರಿಗೆ ಕೊಡಸಾಧ್ಯವಿರುವ ಯಾವುದೇ ವಿಷಯವು ಸ್ವತಃ ಜೀವದಷ್ಟು ಅಮೂಲ್ಯವಾಗಿರುವುದಿಲ್ಲ. ಅದಲ್ಲದೆ, ಶೈಶವಾವಸ್ಥೆಯಿಂದ ವಯಸ್ಕತನದ ಪಥದುದ್ದಕ್ಕೂ ಒಂದು ಮಗುವಿಗೆ ನೆರವಾಗುವುದರಲ್ಲಿ ಒಳಗೂಡಿರುವ ಸ್ವತ್ಯಾಗ, ಚಿಂತಾಭರಿತ ಆರೈಕೆ, ಖರ್ಚು, ಮತ್ತು ಪ್ರೀತಿಯ ಗಮನವನ್ನು ಕುರಿತು ತುಸು ಆಲೋಚಿಸಿರಿ. ಆದುದರಿಂದ ದೇವರ ವಾಕ್ಯವು ಹೀಗೆ ಸಲಹೆ ನೀಡುವುದು ಅದೆಷ್ಟು ನ್ಯಾಯಸಮ್ಮತ: “ನಿನ್ನ ತಂದೆತಾಯಿಗಳನ್ನೂ ಸನ್ಮಾನಿಸಬೇಕು. ಸನ್ಮಾನಿಸಿದರೆ ನಿನಗೆ ಮೇಲಾಗುವದು, ನೀನು ಭೂಮಿಯ ಮೇಲೆ ಬಹುಕಾಲ ಬದುಕುವಿ”!—ಎಫೆಸ 6:2, 3.

ಭಾವಾತ್ಮಕ ಅಗತ್ಯಗಳನ್ನು ಗ್ರಹಿಸಿಕೊಳ್ಳುವುದು

2. ಬೆಳೆದ ಮಕ್ಕಳು ತಮ್ಮ ಹೆತ್ತವರಿಗೆ ಸಲ್ಲತಕ್ಕ “ಪ್ರತ್ಯುಪಕಾರವನ್ನು” ಮಾಡಸಾಧ್ಯವಿರುವುದು ಹೇಗೆ?

2 ಅಪೊಸ್ತಲ ಪೌಲನು ಕ್ರೈಸ್ತರಿಗೆ ಬರೆದುದು: “ಮಕ್ಕಳಾಗಲಿ ಮೊಮ್ಮಕ್ಕಳಾಗಲಿ ಇದ್ದರೆ ಅವರೇ ಮೊದಲು ತಮ್ಮ ಮನೆಯವರಿಗೆ [“ಮನೆವಾರ್ತೆಯಲ್ಲಿ,” NW] ಭಕ್ತಿತೋರಿಸುವದಕ್ಕೂ ತಂದೆತಾಯಿಗಳಿಗೆ ಪ್ರತ್ಯುಪಕಾರ ಮಾಡುವದಕ್ಕೂ ಕಲಿತುಕೊಳ್ಳಲಿ; ಇದು ದೇವರ ದೃಷ್ಟಿಯಲ್ಲಿ ಮೆಚ್ಚಿಕೆಯಾದದ್ದು.” (1 ತಿಮೊಥೆಯ 5:4) ತಮ್ಮ ಹೆತ್ತವರು ಮತ್ತು ಅಜ್ಜಅಜ್ಜಿಯರು ತಮಗೆ ಕೊಟ್ಟ ವರ್ಷಗಳುದ್ದದ ಪ್ರೀತಿ, ಶ್ರಮೆ, ಹಾಗೂ ಆರೈಕೆಗಾಗಿ ಗಣ್ಯತೆಯನ್ನು ತೋರಿಸುವುದರ ಮೂಲಕ, ಬೆಳೆದ ಮಕ್ಕಳು ಈ “ಸಲ್ಲತಕ್ಕ ಪ್ರತ್ಯುಪಕಾರ”ವನ್ನು ಕೊಡುವರು. ಇದನ್ನು ಮಕ್ಕಳು ಮಾಡಬಲ್ಲ ಒಂದು ವಿಧವು, ಬೇರೆ ಎಲ್ಲರ ಹಾಗೆ ವೃದ್ಧರಿಗೆ ಪ್ರೀತಿ ಮತ್ತು ಅಭಯವು—ಕೆಲವೊಮ್ಮೆ ಅತಿಹೆಚ್ಚಾಗಿ ಅಗತ್ಯವಿದೆಯೆಂದು ಗ್ರಹಿಸಿಕೊಳ್ಳುವ ಮೂಲಕವಾಗಿದೆ. ಆದುದರಿಂದ, ನಮ್ಮೆಲ್ಲರಂತೆ, ಅವರು ಅಮೂಲ್ಯರೆಂದೆಣಿಸಲ್ಪಡುವ ಅಗತ್ಯವಿದೆ. ತಮ್ಮ ಜೀವನಗಳು ಸಾರ್ಥಕವೆಂದು ಭಾವಿಸುವ ಅಗತ್ಯವು ಅವರಿಗಿದೆ.

3. ಹೆತ್ತವರನ್ನು ಮತ್ತು ಅಜ್ಜಅಜ್ಜಿಯರನ್ನು ನಾವು ಹೇಗೆ ಸನ್ಮಾನಿಸಬಲ್ಲೆವು?

3 ಆದುದರಿಂದ, ನಾವು ಅವರನ್ನು ಪ್ರೀತಿಸುತ್ತೇವೆಂದು ಅವರು ತಿಳಿದುಕೊಳ್ಳುವಂತೆ ಬಿಡುವ ಮೂಲಕ, ನಮ್ಮ ಹೆತ್ತವರನ್ನು ಮತ್ತು ಅಜ್ಜಅಜ್ಜಿಯರನ್ನು ನಾವು ಸನ್ಮಾನಿಸಬಲ್ಲೆವು. (1 ಕೊರಿಂಥ 16:14) ನಮ್ಮ ಹೆತ್ತವರು ನಮ್ಮೊಂದಿಗೆ ಜೀವಿಸುತ್ತಿಲ್ಲವಾದರೆ, ನಮ್ಮಿಂದ ವರ್ತಮಾನವನ್ನು ಕೇಳುವುದು ಅವರಿಗೆ ಬಹಳ ಮುಖ್ಯವೆಂಬುದನ್ನು ನಾವು ನೆನಪಿನಲ್ಲಿಡತಕ್ಕದ್ದು. ಒಂದು ಉಲ್ಲಾಸಭರಿತ ಪತ್ರ, ಒಂದು ಫೋನ್‌ ಕರೆ, ಅಥವಾ ಒಂದು ಭೇಟಿಯು ಅವರ ಸಂತೋಷಕ್ಕೆ ಹೆಚ್ಚನ್ನು ಕೂಡಿಸಬಲ್ಲದು. ಜಪಾನಿನಲ್ಲಿ ಜೀವಿಸುವ ಮಿಯೊ, ತಾನು 82 ವರ್ಷ ವಯಸ್ಸಿನವಳಾಗಿದ್ದಾಗ ಬರೆದುದು: “ನನ್ನ ಮಗಳು [ಅವಳ ಗಂಡ ಸಂಚಾರ ಶುಶ್ರೂಷಕನು] ನನಗೆ ಹೇಳುವುದು: ‘ದಯವಿಟ್ಟು ನಮ್ಮೊಂದಿಗೆ “ಸಂಚಾರ” ಮಾಡಮ್ಮಾ.’ ಅವರ ಪ್ರಯಾಣದ ವಿವರಪಟ್ಟಿಯನ್ನು ಮತ್ತು ಪ್ರತಿ ವಾರದ ಟೆಲಿಫೋನ್‌ ನಂಬರನ್ನು ಅವಳು ನನಗೆ ಕಳುಹಿಸುತ್ತಾಳೆ. ನಾನು ನನ್ನ ನಕ್ಷೆಯನ್ನು ತೆರೆದು, ‘ಹಾ, ಅವರೀಗ ಇಲ್ಲಿದ್ದಾರೆ!’ ಎಂದು ಹೇಳಬಲ್ಲೆ. ಅಂತಹ ಒಬ್ಬ ಮಗಳನ್ನು ಹೊಂದಿರುವ ಆಶೀರ್ವಾದಕ್ಕಾಗಿ ನಾನು ಯಾವಾಗಲೂ ಯೆಹೋವನಿಗೆ ಉಪಕಾರ ಹೇಳುತ್ತೇನೆ.”

ಪ್ರಾಪಂಚಿಕ ಅಗತ್ಯಗಳಲ್ಲಿ ಸಹಾಯಕೊಡುವುದು

4. ಯೆಹೂದಿ ಧಾರ್ಮಿಕ ಸಂಪ್ರದಾಯವು ವೃದ್ಧ ಹೆತ್ತವರೆಡೆಗೆ ನಿರ್ದಯತೆಯನ್ನು ಹೇಗೆ ಉತ್ತೇಜಿಸಿತು?

4 ಹೆತ್ತವರನ್ನು ಸನ್ಮಾನಿಸುವುದರಲ್ಲಿ ಅವರ ಪ್ರಾಪಂಚಿಕ ಅಗತ್ಯಗಳನ್ನು ನೋಡಿಕೊಳ್ಳುವುದು ಸಹ ಸೇರಿರಸಾಧ್ಯವಿದೆಯೇ? ಹೌದು. ಅದು ಆಗಾಗ ಸೇರಿರುತ್ತದೆ. ಯೇಸುವಿನ ದಿನದಲ್ಲಿ ಯೆಹೂದಿ ಧಾರ್ಮಿಕ ನಾಯಕರು, ಒಬ್ಬನು ತನ್ನ ಹಣ ಅಥವಾ ಆಸ್ತಿಯನ್ನು “ದೇವರಿಗಾಗಿ ಇಟ್ಟಿದ್ದೇನೆ” ಎಂದು ಘೋಷಿಸುವುದಾದರೆ, ತನ್ನ ಹೆತ್ತವರ ಪರಾಮರಿಕೆಗಾಗಿ ಅದನ್ನು ಉಪಯೋಗಿಸುವ ಜವಾಬ್ದಾರಿಯಿಂದ ಮುಕ್ತನಾಗುತ್ತಾನೆಂಬ ಸಂಪ್ರದಾಯವನ್ನು ಎತ್ತಿಹಿಡಿದರು. (ಮತ್ತಾಯ 15:3-6) ಎಂತಹ ನಿರ್ದಯತೆ! ಕಾರ್ಯತಃ ಜನರು ತಮ್ಮ ಹೆತ್ತವರನ್ನು ಸನ್ಮಾನಿಸುವ ಬದಲಿಗೆ ಸ್ವಾರ್ಥದಿಂದ ಅವರ ಅಗತ್ಯಗಳನ್ನು ಅಲ್ಲಗಳೆದು, ಅವರನ್ನು ಧಿಕ್ಕರಿಸುವಂತೆ ಆ ಧಾರ್ಮಿಕ ನಾಯಕರು ಅವರನ್ನು ಪ್ರೋತ್ಸಾಹಿಸುತ್ತಿದ್ದರು. ನಾವೆಂದೂ ಅದನ್ನು ಮಾಡಬಯಸದಿರೋಣ!—ಧರ್ಮೋಪದೇಶಕಾಂಡ 27:16.

5. ಕೆಲವು ದೇಶಗಳ ಸರಕಾರಗಳಿಂದ ಮಾಡಲ್ಪಟ್ಟ ಒದಗಿಸುವಿಕೆಗಳ ಹೊರತೂ, ಒಬ್ಬನ ಹೆತ್ತವರನ್ನು ಸನ್ಮಾನಿಸುವುದು ಕೆಲವು ಸಲ ಹಣಕಾಸಿನ ಸಹಾಯವನ್ನು ಕೊಡುವುದನ್ನು ಒಳಗೊಳ್ಳುತ್ತದೆಯೇಕೆ?

5 ಇಂದು ಅನೇಕ ದೇಶಗಳಲ್ಲಿ, ಸರಕಾರಿ ಬೆಂಬಲದ ಸಾಮಾಜಿಕ ಪರಿಹಾರ ಕೇಂದ್ರಗಳು ಆಹಾರ, ಬಟ್ಟೆಬರೆ, ಮತ್ತು ಆಶ್ರಯದಂತಹ ವೃದ್ಧರ ಕೆಲವು ಪ್ರಾಪಂಚಿಕ ಅಗತ್ಯಗಳನ್ನು ಒದಗಿಸುತ್ತವೆ. ಅದಕ್ಕೆ ಕೂಡಿಸಿ, ವೃದ್ಧರು ಸ್ವತಃ ತಮ್ಮ ವೃದ್ಧಾಪ್ಯಕ್ಕಾಗಿ ಸ್ವಲ್ಪ ಒದಗಿಸುವಿಕೆಯನ್ನು ಬದಿಗಿಡಲು ಶಕ್ತರಾಗಿದ್ದಿರಬಹುದು. ಆದರೆ ಈ ಒದಗಿಸುವಿಕೆಗಳು ಮುಗಿದುಹೋಗುವುದಾದರೆ ಅಥವಾ ಸಾಲದಿದ್ದರೆ ಹೆತ್ತವರ ಅಗತ್ಯಗಳನ್ನು ಪೂರೈಸಲು ತಮಗೆ ಮಾಡಸಾಧ್ಯವಿರುವುದನ್ನು ಮಾಡುವ ಮೂಲಕ ಮಕ್ಕಳು ತಮ್ಮ ಹೆತ್ತವರನ್ನು ಸನ್ಮಾನಿಸುತ್ತಾರೆ. ವಾಸ್ತವಿಕವಾಗಿ, ಮುಪ್ಪಿನ ಹೆತ್ತವರ ಆರೈಕೆಮಾಡುವುದು ದಿವ್ಯ ಭಕ್ತಿಯ ಅಂದರೆ, ಕುಟುಂಬದೇರ್ಪಾಡಿನ ಮೂಲಕರ್ತನಾದ ಯೆಹೋವ ದೇವರಿಗೆ ಒಬ್ಬನ ಭಕ್ತಿಯ ಒಂದು ಪುರಾವೆಯಾಗಿರುತ್ತದೆ.

ಪ್ರೀತಿ ಮತ್ತು ಸ್ವತ್ಯಾಗ

6. ತಮ್ಮ ಹೆತ್ತವರ ಅಗತ್ಯಗಳನ್ನು ನೋಡಿಕೊಳ್ಳುವುದಕ್ಕಾಗಿ ವಾಸದ ಯಾವ ಏರ್ಪಾಡುಗಳನ್ನು ಕೆಲವರು ಮಾಡಿದ್ದಾರೆ?

6 ಅನೇಕ ವಯಸ್ಕ ಮಕ್ಕಳು, ತಮ್ಮ ನಿರ್ಬಲ ಹೆತ್ತವರ ಅಗತ್ಯಗಳಿಗೆ ಪ್ರೀತಿ ಮತ್ತು ಸ್ವತ್ಯಾಗದ ಭಾವದಿಂದ ಪ್ರತಿಕ್ರಿಯಿಸಿದ್ದಾರೆ. ಕೆಲವರು ತಮ್ಮ ಹೆತ್ತವರನ್ನು ತಮ್ಮ ಸ್ವಂತ ಮನೆಗಳೊಳಗೆ ಸೇರಿಸಿಕೊಂಡಿದ್ದಾರೆ ಅಥವಾ ಅವರ ಸಮೀಪ ಇರುವುದಕ್ಕಾಗಿ ಸ್ಥಳ ಬದಲಾಯಿಸಿದ್ದಾರೆ. ಇತರರು ತಮ್ಮ ಹೆತ್ತವರೊಂದಿಗೆ ವಾಸಿಸಲು ಹೋಗಿದ್ದಾರೆ. ಆಗಾಗ ಅಂತಹ ಏರ್ಪಾಡುಗಳು ಹೆತ್ತವರಿಗೆ ಮತ್ತು ಮಕ್ಕಳಿಗೆ ಇಬ್ಬರಿಗೂ ಒಂದು ಆಶೀರ್ವಾದವಾಗಿ ಪರಿಣಮಿಸಿರುತ್ತವೆ.

7. ವೃದ್ಧ ಹೆತ್ತವರ ವಿಷಯವಾಗಿ ನಿರ್ಣಯಗಳನ್ನು ಮಾಡುವಾಗ ಅವಸರ ಮಾಡದಿರುವುದು ಯಾಕೆ ಒಳ್ಳೆಯದು?

7 ಕೆಲವು ಸಲವಾದರೊ ಅಂತಹ ಏರ್ಪಾಡುಗಳು ಒಳ್ಳೇದಾಗಿ ಪರಿಣಮಿಸುವುದಿಲ್ಲ. ಯಾಕೆ? ನಿರ್ಣಯಗಳನ್ನು ತೀರ ಅವಸರದಿಂದ ಮಾಡುವುದರಿಂದ, ಇಲ್ಲವೆ ಅವು ಬರೇ ಭಾವಾವೇಶದ ಮೇಲೆ ಆಧಾರಿಸಿರುವುದರಿಂದಾಗಿರಬಹುದು. “ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು” ಎಂದು ಬೈಬಲು ವಿವೇಕಯುತವಾಗಿ ಎಚ್ಚರಿಸುತ್ತದೆ. (ಜ್ಞಾನೋಕ್ತಿ 14:15) ಉದಾಹರಣೆಗಾಗಿ, ನಿಮ್ಮ ಮುದಿ ತಾಯಿಗೆ ಒಬ್ಬಂಟಿಗರಾಗಿ ಜೀವಿಸುವುದಕ್ಕೆ ಕಷ್ಟವಾಗುತ್ತದೆಂದು ಮತ್ತು ನಿಮ್ಮೊಂದಿಗೆ ಜೀವಿಸುವುದಾದರೆ ಅವರಿಗೆ ಪ್ರಯೋಜನವಾದೀತೆಂದು ನೀವು ನೆನಸುತ್ತೀರೆಂದು ಭಾವಿಸೋಣ. ನಿಮ್ಮ ಹೆಜ್ಜೆಗಳನ್ನು ಜಾಣತನದಿಂದ ಪರಿಗಣಿಸುವುದರಲ್ಲಿ ಈ ಕೆಳಗಿನವುಗಳನ್ನು ನೀವು ಪರಿಗಣಿಸಬಹುದು: ಅವರ ವಾಸ್ತವಿಕ ಆವಶ್ಯಕತೆಗಳು ಯಾವುವು? ಸ್ವೀಕಾರಯೋಗ್ಯವಾದ ಬದಲಿ ಪರಿಹಾರವನ್ನು ನೀಡುವ ಖಾಸಗಿ ಅಥವಾ ಸರಕಾರ ಪ್ರಾಯೋಜಿತ ಸಾಮಾಜಿಕ ಸೇವೆಗಳು ಇವೆಯೊ? ಅವರಿಗೆ ಸ್ಥಳಬದಲಾಯಿಸಲು ಮನಸ್ಸಿದೆಯೆ? ಇರುವುದಾದರೆ, ಅವರ ಜೀವನವು ಯಾವ ರೀತಿಗಳಲ್ಲಿ ಪರಿಣಾಮಕ್ಕೆ ಒಳಗಾಗಲಿದೆ? ಅವರಿಗೆ ಸ್ನೇಹಿತರನ್ನು ಬಿಟ್ಟು ಬರಬೇಕಾದೀತೊ? ಭಾವನಾತ್ಮಕವಾಗಿ ಇದು ಅವರನ್ನು ಹೇಗೆ ಬಾಧಿಸೀತು? ನೀವು ಅವರೊಂದಿಗೆ ಈ ವಿಷಯಗಳನ್ನು ಮಾತಾಡಿನೋಡಿದ್ದೀರೊ? ಅಂತಹ ಒಂದು ಬದಲಾವಣೆ ನಿಮ್ಮನ್ನು, ನಿಮ್ಮ ಸಂಗಾತಿಯನ್ನು, ಮತ್ತು ನಿಮ್ಮ ಸ್ವಂತ ಮಕ್ಕಳನ್ನು ಹೇಗೆ ಪ್ರಭಾವಿಸೀತು? ನಿಮ್ಮ ತಾಯಿಗೆ ಆರೈಕೆ ಅಗತ್ಯವಿದ್ದರೆ ಅದನ್ನು ಒದಗಿಸುವವರು ಯಾರು? ಆ ಜವಾಬ್ದಾರಿಯನ್ನು ಹಂಚಿಕೊಳ್ಳಸಾಧ್ಯವೊ? ನೇರವಾಗಿ ಒಳಗೂಡಿರುವವರೆಲ್ಲರೊಂದಿಗೆ ಆ ವಿಷಯವನ್ನು ನೀವು ಚರ್ಚಿಸಿದ್ದೀರೊ?

8. ನಿಮ್ಮ ವೃದ್ಧ ಹೆತ್ತವರಿಗೆ ಸಹಾಯ ಮಾಡುವ ವಿಧವನ್ನು ನಿರ್ಣಯಿಸುವಾಗ, ಯಾರನ್ನು ಸಂಪರ್ಕಿಸಲು ನೀವು ಶಕ್ತರಾಗಬಹುದು?

8 ಆರೈಕೆಯ ಜವಾಬ್ದಾರಿಯು ಒಂದು ಕುಟುಂಬದ ಮಕ್ಕಳೆಲ್ಲರ ಮೇಲೆ ಆಧಾರಿಸುತ್ತದೆಯಾದ್ದರಿಂದ, ನಿರ್ಣಯಗಳನ್ನು ಮಾಡುವುದರಲ್ಲಿ ಎಲ್ಲರೂ ಪಾಲುಗಾರರಾಗುವಂತೆ ಒಂದು ಕುಟುಂಬ ಸಮಾಲೋಚನೆಯನ್ನು ನಡೆಸುವುದು ವಿವೇಕಪ್ರದವಾದೀತು. ಕ್ರೈಸ್ತ ಸಭೆಯ ಹಿರಿಯರೊಂದಿಗೆ ಅಥವಾ ತದ್ರೀತಿಯ ಸನ್ನಿವೇಶವನ್ನು ಎದುರಿಸಿರುವ ಸ್ನೇಹಿತರೊಂದಿಗೆ ಮಾತನಾಡುವುದು ಸಹ ಸಹಾಯಕರವಾಗಿರಬಹುದು. “ಯೋಚನೆ ಹೇಳುವವರಿಲ್ಲದೆ ಉದ್ದೇಶಗಳು ನೆರವೇರವು,” ಎಂದು ಎಚ್ಚರಿಸುತ್ತದೆ ಬೈಬಲು, “ಬಹು ಮಂದಿ ಆಲೋಚನಾಪರರಿರುವಲ್ಲಿ ಈಡೇರುವವು.”—ಜ್ಞಾನೋಕ್ತಿ 15:22.

ಅನುಭೂತಿ ಮತ್ತು ಗ್ರಹಿಕೆಯುಳ್ಳವರಾಗಿರಿ

9, 10. (ಎ) ಮುಪ್ಪಿನವರಾಗಿದ್ದಾಗ್ಯೂ, ವಯೋವೃದ್ಧರಿಗೆ ಯಾವ ಪರಿಗಣನೆಯನ್ನು ಕೊಡತಕ್ಕದ್ದು? (ಬಿ) ಬೆಳೆದ ಮಗನು ತನ್ನ ಹೆತ್ತವರ ಸಲುವಾಗಿ ಯಾವುದೇ ಹೆಜ್ಜೆಗಳನ್ನು ತೆಗೆದುಕೊಳ್ಳಲಿ, ಅವನು ಅವರಿಗೆ ಯಾವಾಗಲೂ ಏನನ್ನು ಕೊಡಬೇಕು?

9 ನಮ್ಮ ವೃದ್ಧ ಹೆತ್ತವರನ್ನು ಸನ್ಮಾನಿಸುವುದು ಅನುಭೂತಿ ಮತ್ತು ಗ್ರಹಿಕೆಯನ್ನು ಅವಶ್ಯಪಡಿಸುತ್ತದೆ. ಸಂದ ವರ್ಷಗಳು ತಮ್ಮ ಪಾವತಿಯನ್ನು ತೆಗೆದುಕೊಳ್ಳುವಂತೆ, ನಡೆಯಲು, ತಿನ್ನಲು, ಮತ್ತು ಜ್ಞಾಪಿಸಿಕೊಳ್ಳಲು ಅಧಿಕಾಧಿಕ ಕಷ್ಟವಾಗುವುದನ್ನು ವೃದ್ಧರು ಕಂಡುಕೊಳ್ಳಬಹುದು. ಅವರಿಗೆ ಸಹಾಯವು ಬೇಕಾದೀತು. ಅನೇಕ ಸಲ ಮಕ್ಕಳು ತಮ್ಮ ಹೆತ್ತವರ ಸುರಕ್ಷೆಯಲ್ಲಿ ಅತಿರೇಕ ಕಾಳಜಿ ವಹಿಸುವವರಾಗುತ್ತಾ ಮಾರ್ಗದರ್ಶನವನ್ನು ನೀಡಲು ಪ್ರಯತ್ನಿಸುತ್ತಾರೆ. ಆದರೆ ವೃದ್ಧರು ಜ್ಞಾನ ಮತ್ತು ಅನುಭವ ಸಂಚಯದಲ್ಲಿ ಜೀವಮಾನವನ್ನು, ತಮ್ಮ ಸ್ವಂತ ಪರಾಮರಿಕೆಯಲ್ಲಿ ಮತ್ತು ತಮ್ಮ ಸ್ವಂತ ನಿರ್ಣಯಗಳನ್ನು ಮಾಡುವುದರಲ್ಲಿ ತಮ್ಮ ಜೀವಮಾನವನ್ನು ಕಳೆದ ವಯಸ್ಕರಾಗಿದ್ದಾರೆ. ಅವರ ವ್ಯಕ್ತಿತ್ವ ಮತ್ತು ಸ್ವಗೌರವವು, ಹೆತ್ತವರು ಮತ್ತು ವಯಸ್ಕರೋಪಾದಿ ಅವರ ಪಾತ್ರದ ಮೇಲೆ ಕೇಂದ್ರಿತವಾಗಿರಬಹುದು. ತಮ್ಮ ಜೀವಿತಗಳ ನಿಯಂತ್ರಣವನ್ನು ತಮ್ಮ ಮಕ್ಕಳಿಗೆ ಬಿಟ್ಟುಕೊಡಬೇಕಾಗಿದೆ ಎಂದು ಭಾವಿಸುವ ಹೆತ್ತವರು, ಖಿನ್ನರು ಅಥವಾ ಕುಪಿತರು ಆಗಬಹುದು. ತಮ್ಮ ಸ್ವಾತಂತ್ರ್ಯವನ್ನು ಅಪಹರಿಸುವ ಪ್ರಯತ್ನಗಳಾಗಿ ಅವರು ಕಾಣಬಹುದಾದ ಇವುಗಳಿಂದಾಗಿ ಕೆಲವರು ತೀವ್ರ ಅಸಮಾಧಾನಪಟ್ಟು, ಅವನ್ನು ಪ್ರತಿಭಟಿಸುತ್ತಾರೆ.

10 ಅಂತಹ ಸಮಸ್ಯೆಗಳಿಗೆ ಸುಲಭ ಪರಿಹಾರಗಳು ಇರುವುದಿಲ್ಲ, ಆದರೆ ವೃದ್ಧ ಹೆತ್ತವರು ಸಾಧ್ಯವಾದಷ್ಟು ಮಟ್ಟಿಗೆ ತಮ್ಮ ಪರಾಮರಿಕೆಯನ್ನು ಮಾಡಿಕೊಂಡು ತಮ್ಮ ಸ್ವಂತ ನಿರ್ಣಯಗಳನ್ನು ಮಾಡುವಂತೆ ಬಿಡುವುದು ದಯೆಯಾಗಿದೆ. ನಿಮ್ಮ ಹೆತ್ತವರೊಂದಿಗೆ ಮೊದಲಾಗಿ ಮಾತಾಡುವ ಹೊರತು ಅವರಿಗೆ ಯಾವುದು ಅತ್ಯುತ್ತಮ ಎಂಬ ನಿರ್ಣಯಗಳನ್ನು ಮಾಡದಿರುವುದು ವಿವೇಕಪ್ರದವಾದದ್ದು. ಅವರು ಹೆಚ್ಚನ್ನು ಕಳೆದುಕೊಂಡಿರಬಹುದು. ಅವರಿಗೆ ಯಾವುದು ಇನ್ನೂ ಇದೆಯೊ ಅದನ್ನು ಅವರು ಇಟ್ಟುಕೊಳ್ಳುವಂತೆ ಬಿಡಿರಿ. ನಿಮ್ಮ ಹೆತ್ತವರ ಜೀವಿತಗಳನ್ನು ನಿಯಂತ್ರಿಸಲು ನೀವು ಎಷ್ಟು ಕಡಿಮೆ ಪ್ರಯತ್ನಿಸುತ್ತೀರೊ ಅಷ್ಟು ಹೆಚ್ಚಾಗಿ ಅವರೊಂದಿಗಿನ ನಿಮ್ಮ ಸಂಬಂಧವು ಉತ್ತಮಗೊಳ್ಳುವುದನ್ನು ನೀವು ಕಾಣಬಹುದು. ಅವರು ಹೆಚ್ಚು ಸಂತೋಷಿತರಾಗುವರು, ನೀವೂ ಸಂತೋಷಿಸುವಿರಿ. ಅವರ ಹಿತಕ್ಕಾಗಿ ನಿರ್ದಿಷ್ಟ ವಿಷಯಗಳನ್ನು ಒತ್ತಾಯಿಸುವುದು ಆವಶ್ಯಕವಾದರೂ, ನಿಮ್ಮ ಹೆತ್ತವರನ್ನು ಸನ್ಮಾನಿಸುವುದು, ನೀವು ಅವರಿಗೆ ಅರ್ಹವಾದ ಗೌರವ ಮತ್ತು ಆದರವನ್ನು ತೋರಿಸುವುದನ್ನು ಅವಶ್ಯಪಡಿಸುತ್ತದೆ. ದೇವರ ವಾಕ್ಯವು ಸಲಹೆಯನ್ನೀಯುವುದು: “ತಲೆನರೆತ ವೃದ್ಧರ ಮುಂದೆ ಎದ್ದು ನಿಂತು ಅವರನ್ನು ಸನ್ಮಾನಿಸಬೇಕು.”—ಯಾಜಕಕಾಂಡ 19:32.

ಯೋಗ್ಯ ಮನೋಭಾವವನ್ನು ಕಾಪಾಡಿಕೊಳ್ಳುವುದು

11-13. ಗತಸಮಯದಲ್ಲಿ, ತನ್ನ ಹೆತ್ತವರೊಂದಿಗಿನ ಒಬ್ಬ ವಯಸ್ಕ ಮಗನ ಸಂಬಂಧವು ಒಳ್ಳೇದಾಗಿ ಇರದಿದ್ದಲ್ಲಿ, ಮುಪ್ಪಿನ ವಯಸ್ಸಿನಲ್ಲಿ ಅವರ ಆರೈಕೆಯನ್ನು ಮಾಡುವ ಪಂಥಾಹ್ವಾನವನ್ನು ಅವನು ಇನ್ನೂ ಹೇಗೆ ನಿರ್ವಹಿಸಬಲ್ಲನು?

11 ತಮ್ಮ ವೃದ್ಧ ಹೆತ್ತವರನ್ನು ಸನ್ಮಾನಿಸುವುದರಲ್ಲಿ ವಯಸ್ಕ ಮಕ್ಕಳು ಕೆಲವೊಮ್ಮೆ ಎದುರಿಸುವ ಒಂದು ಸಮಸ್ಯೆಯು, ಆರಂಭದ ಸಮಯಗಳಲ್ಲಿ ತಮ್ಮ ಹೆತ್ತವರೊಂದಿಗೆ ಅವರಿಗಿದ್ದ ಸಂಬಂಧವನ್ನು ಒಳಗೂಡುತ್ತದೆ. ಪ್ರಾಯಶಃ ನಿಮ್ಮ ತಂದೆಯು ಸ್ನೇಹರಹಿತರೂ ಪ್ರೀತಿರಹಿತರೂ, ನಿಮ್ಮ ತಾಯಿ ದಬ್ಬಾಳಿಕೆಯವರೂ ನಿಷ್ಠುರರೂ ಆಗಿದ್ದಿರಬಹುದು. ನೀವು ಬಯಸಿದ್ದಂತಹ ಹೆತ್ತವರು ಅವರು ಆಗಿರದಿದ್ದುದಕ್ಕೆ ನೀವಿನ್ನೂ ಹತಾಶರೂ, ಕುಪಿತರೂ, ಅಥವಾ ನೊಂದವರೂ ಆಗಿರಬಹುದು. ನೀವು ಅಂತಹ ಅನಿಸಿಕೆಗಳನ್ನು ಜಯಿಸಬಲ್ಲಿರೊ? *

12 ಫಿನ್‌ಲೆಂಡ್‌ನಲ್ಲಿ ಬೆಳೆದ ಬಾಸ ಎಂಬವನು ಹೇಳುವುದು: “ನನ್ನ ಮಲತಂದೆ ನಾಸಿ ಜರ್ಮನಿಯಲ್ಲಿ ಒಬ್ಬ ಎಸ್‌ಎಸ್‌ ಅಧಿಕಾರಿಯಾಗಿದ್ದರು. ಅವರು ಸುಲಭವಾಗಿ ಕೋಪಗೊಳ್ಳುತ್ತಿದ್ದರು ಮತ್ತು ಆಗ ಅಪಾಯಕಾರಿಯಾಗಿದ್ದರು. ಅವರು ನನ್ನ ಕಣ್ಣೆದುರಿನಲ್ಲೇ ಅನೇಕ ಸಲ ನನ್ನ ತಾಯಿಗೆ ಹೊಡೆದರು. ಒಮ್ಮೆ ನನ್ನ ಮೇಲೆ ಅವರು ಸಿಟ್ಟುಗೊಂಡಿದ್ದಾಗ, ತನ್ನ ಬೆಲ್ಟನ್ನು ಬೀಸಿ ಬಕ್‌ಲ್‌ನಿಂದ ನನ್ನ ಮುಖಕ್ಕೆ ಹೊಡೆದರು. ಅದು ನನಗೆಷ್ಟು ಬಲವಾಗಿ ಬಡಿಯಿತೆಂದರೆ ನಾನು ಹಾಸಿಗೆಯ ಮೇಲೆ ಮುಗ್ಗರಿಸಿಬಿದ್ದೆ.”

13 ಆದರೂ, ಅವರ ಚಾರಿತ್ರ್ಯದ ಬೇರೆ ಅಂಶಗಳೂ ಇದ್ದವು. ಬಾಸ ಕೂಡಿಸುವುದು: “ಇನ್ನೊಂದು ಕಡೆ ಅವರು ಬಹಳ ಶ್ರಮಪಟ್ಟು ದುಡಿದರು ಮತ್ತು ಕುಟುಂಬ ಪಾಲನೆ ಪೋಷಣೆಯಲ್ಲಿ ತನ್ನನ್ನು ಮಿತವ್ಯಯಿಸಿಕೊಳ್ಳುತ್ತಿರಲಿಲ್ಲ. ತಂದೆಯ ಮಮತೆಯನ್ನು ಅವರು ನನಗೆಂದೂ ತೋರಿಸಲಿಲ್ಲ, ಆದರೆ ಅವರು ಭಾವಾತ್ಮಕವಾಗಿ ಗಾಯಗೊಂಡಿದ್ದರೆಂದು ನನಗೆ ಗೊತ್ತಿತ್ತು. ಅವರು ಚಿಕ್ಕ ಹುಡುಗರಾಗಿದ್ದಾಗ ಅವರ ತಾಯಿಯು ಅವರನ್ನು ಮನೆಯಿಂದ ಹೊರಗಟ್ಟಿದ್ದರು. ಅವರು ಮುಷ್ಟಿಬಲದಿಂದಲೇ ಬೆಳೆದು ತಮ್ಮ ಯೌವನದಲ್ಲಿ ಯುದ್ಧಕ್ಕೆ ಸೇರಿದರು. ಸ್ವಲ್ಪಮಟ್ಟಿಗೆ ನನಗೆ ಅವರನ್ನು ತಿಳಿದುಕೊಳ್ಳಸಾಧ್ಯವಿತ್ತು ಮತ್ತು ನಾನು ಅವರನ್ನು ದೂರಲಿಲ್ಲ. ನಾನು ವಯಸ್ಕನಾದಾಗ, ಅವರ ಮರಣದ ತನಕ ನನ್ನಿಂದಾದಷ್ಟು ಸಹಾಯವನ್ನು ನಾನು ಮಾಡಬಯಸಿದೆ. ಅದು ಸುಲಭವಾಗಿರಲಿಲ್ಲ, ಆದರೆ ನನ್ನಿಂದ ಸಾಧ್ಯವಿರುವುದೆಲ್ಲವನ್ನೂ ನಾನು ಮಾಡಿದೆ. ಅಂತ್ಯದ ತನಕ ನಾನು ಒಬ್ಬ ಸುಪುತ್ರನಾಗಿರಲು ಪ್ರಯತ್ನಿಸಿದೆ, ಮತ್ತು ಅವರು ನನ್ನನ್ನು ಹಾಗೆಯೇ ಸ್ವೀಕರಿಸಿದರೆಂದು ನಾನು ಎಣಿಸುತ್ತೇನೆ.”

14. ವೃದ್ಧ ಹೆತ್ತವರ ಆರೈಕೆಯಲ್ಲಿ ಏಳುವವುಗಳನ್ನೂ ಸೇರಿಸಿ, ಎಲ್ಲಾ ಸನ್ನಿವೇಶಗಳಲ್ಲಿ ಯಾವ ಶಾಸ್ತ್ರವಚನವು ಅನ್ವಯವಾಗುತ್ತದೆ?

14 ಬೇರೆ ವಿಷಯಗಳಲ್ಲಿರುವಂತೆಯೆ, ಕುಟುಂಬ ಸನ್ನಿವೇಶಗಳಲ್ಲಿ, ಬೈಬಲ್‌ ಸಲಹೆಯು ಅನ್ವಯವಾಗುತ್ತದೆ: “ಕನಿಕರ ದಯೆ ದೀನಭಾವ ಸಾತ್ವಿಕತ್ವ ದೀರ್ಘಶಾಂತಿ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ. ಮತ್ತೊಬ್ಬನ ಮೇಲೆ ತಪ್ಪುಹೊರಿಸುವದಕ್ಕೆ ಕಾರಣವಿದ್ದರೂ ತಪ್ಪುಹೊರಿಸದೆ ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸಿರಿ. ಕರ್ತನು ನಿಮ್ಮನ್ನು ಕ್ಷಮಿಸಿದಂತೆಯೇ ನೀವೂ ಕ್ಷಮಿಸಿರಿ.”—ಕೊಲೊಸ್ಸೆ 3:12, 13.

ಆರೈಕೆಮಾಡುವವರಿಗೂ ಆರೈಕೆ ಬೇಕು

15. ಹೆತ್ತವರ ಆರೈಕೆಯು ಕೆಲವು ಸಲ ಸಂಕಟಕರವಾಗಿದೆಯೇಕೆ?

15 ಒಬ್ಬ ನಿರ್ಬಲ ಹೆತ್ತವರ ಆರೈಕೆ ಮಾಡುವುದು ಕಷ್ಟದ ಕೆಲಸವಾಗಿದೆ, ಅದರಲ್ಲಿ ಅನೇಕ ಹೊರೆಗಳು, ಅಧಿಕ ಜವಾಬ್ದಾರಿ, ಮತ್ತು ಹೊತ್ತುಮೀರಿದ ಕೆಲಸವು ಸೇರಿರುತ್ತದೆ. ಆದರೆ ಭಾವಾತ್ಮಕ ವಿಷಯವು ಅತ್ಯಂತ ಕಷ್ಟದ ಭಾಗ. ನಿಮ್ಮ ಹೆತ್ತವರು ತಮ್ಮ ಆರೋಗ್ಯ, ಸ್ಮರಣಶಕ್ತಿ, ಮತ್ತು ಸ್ವಾವಲಂಬನೆಯನ್ನು ಕಳೆದುಕೊಳ್ಳುವುದನ್ನು ನೋಡುವುದು ಸಂಕಟಕರ. ಪೋರ್ಟ ರೀಕೊದಿಂದ ಬರುವ ಸ್ಯಾಂಡಿ ಹೇಳುವುದು: “ನನ್ನ ತಾಯಿ ನಮ್ಮ ಕುಟುಂಬದ ಕೇಂದ್ರಬಿಂದುವಾಗಿದ್ದರು. ಅವರ ಆರೈಕೆಯನ್ನು ಮಾಡುವುದು ಅತಿ ವೇದನಾಮಯವಾಗಿತ್ತು. ಆರಂಭದಲ್ಲಿ ಅವರು ಕುಂಟತೊಡಗಿದರು; ಅನಂತರ ಕೈಕೋಲು ಅವರಿಗೆ ಬೇಕಾಯಿತು, ಆಮೇಲೆ ನಡೆಗಾಡಿ, ಬಳಿಕ ಗಾಲಿಕುರ್ಚಿ. ತದನಂತರ ಮತ್ತೂ ಕೆಡುತ್ತಾ ಬಂದು ಅವರು ತೀರಿಕೊಂಡರು. ಅವರಿಗೆ ಎಲುಬಿನ ಕ್ಯಾನ್ಸರ್‌ ತಗಲಿತು ಮತ್ತು ಸತತವಾಗಿ—ಹಗಲಿರುಳು ಆರೈಕೆ ಬೇಕಾಯಿತು. ನಾವು ಅವರನ್ನು ಮೀಯಿಸಿದೆವು, ಅವರಿಗೆ ಉಣಿಸಿದೆವು, ಓದಿಹೇಳಿದೆವು. ಇದು ಬಹಳ ಕಷ್ಟಕರವಾಗಿತ್ತು—ವಿಶೇಷವಾಗಿ ಭಾವನಾತ್ಮಕವಾಗಿ. ನನ್ನ ತಾಯಿ ಸಾಯುತ್ತಿರುವುದನ್ನು ನಾನು ಗ್ರಹಿಸಿಕೊಂಡಾಗ, ನಾನು ಅತ್ತೆ, ಯಾಕಂದರೆ ನಾನು ಅವರನ್ನು ಬಹಳವಾಗಿ ಪ್ರೀತಿಸಿದ್ದೆ.”

16, 17. ಆರೈಕೆಗಾರನು ವಿಷಯದ ಒಂದು ಸಮತೆಯ ವೀಕ್ಷಣವನ್ನು ಇಟ್ಟುಕೊಳ್ಳಲು ಯಾವ ಬುದ್ಧಿವಾದವು ಸಹಾಯ ಮಾಡಬಹುದು?

16 ತದ್ರೀತಿಯ ಒಂದು ಸನ್ನಿವೇಶದಲ್ಲಿ ನೀವು ನಿಮ್ಮನ್ನು ಕಂಡುಕೊಂಡರೆ, ನಿಭಾಯಿಸಲಿಕ್ಕೆ ನೀವೇನು ಮಾಡಬಲ್ಲಿರಿ? ಬೈಬಲ್‌ ವಾಚನದ ಮೂಲಕ ಯೆಹೋವನಿಗೆ ಕಿವಿಗೊಡುವುದು ಮತ್ತು ಪ್ರಾರ್ಥನೆಯ ಮೂಲಕ ಆತನೊಂದಿಗೆ ಮಾತಾಡುವುದು ನಿಮಗೆ ಬಹಳವಾಗಿ ಸಹಾಯ ಮಾಡುವುದು. (ಫಿಲಿಪ್ಪಿ 4:6, 7) ಒಂದು ಪ್ರಾಯೋಗಿಕ ರೀತಿಯಲ್ಲಿ, ನೀವು ಸಮತೂಕದ ಊಟಗಳನ್ನು ಉಣ್ಣಲು ನಿಶ್ಚಯಮಾಡಿಕೊಳ್ಳಿರಿ ಮತ್ತು ಸಾಕಷ್ಟು ನಿದ್ರೆಯನ್ನು ಪಡೆದುಕೊಳ್ಳಲು ಪ್ರಯತ್ನಿಸಿರಿ. ಇದನ್ನು ಮಾಡುವ ಮೂಲಕ, ನಿಮ್ಮ ಪ್ರಿಯರ ಆರೈಕೆ ಮಾಡಲು ನೀವು ಭಾವನಾತ್ಮಕವಾಗಿ ಮತ್ತು ಶಾರೀರಿಕವಾಗಿ ಉತ್ತಮ ಸ್ಥಿತಿಯಲ್ಲಿರುವಿರಿ. ಪ್ರಾಯಶಃ ಆಗಾಗ ನಿಮ್ಮ ಆ ದಿನಚರ್ಯೆಯಿಂದ ತುಸು ವಿರಾಮವನ್ನು ನೀವು ಏರ್ಪಡಿಸಿಕೊಳ್ಳಸಾಧ್ಯವಿದೆ. ರಜೆಯು ಅಶಕ್ಯವಾಗಿರುವುದಾದರೂ, ವಿಶ್ರಾಂತಿಗಾಗಿ ಸ್ವಲ್ಪ ಸಮಯವನ್ನು ಬದಿಗಿಡುವುದು ಮತ್ತೂ ವಿವೇಕಪ್ರದವಾಗಿದೆ. ಅಸ್ವಸ್ಥರಾದ ನಿಮ್ಮ ಹೆತ್ತವರೊಂದಿಗೆ ಯಾರಾದರೂ ಇರುವಂತೆ ಏರ್ಪಡಿಸುವ ಮೂಲಕ ನೀವು ಸ್ವಲ್ಪ ಸಮಯ ಅವರಿಂದ ದೂರವಿರಲೂ ಶಕ್ತರಾಗಬಹುದು.

17 ವಯಸ್ಕ ಆರೈಕೆಗಾರರಿಗೆ ತಮ್ಮ ವಿಷಯವಾಗಿ ಅಯುಕ್ತವಾದ ನಿರೀಕ್ಷಣೆಗಳಿರುವುದೇನೂ ಅಸಾಮಾನ್ಯವಲ್ಲ. ಆದರೆ ನಿಮಗೇನು ಮಾಡಸಾಧ್ಯವಿಲ್ಲವೊ ಅದಕ್ಕಾಗಿ ದೋಷಿಭಾವವನ್ನು ತಾಳಬೇಡಿ. ಕೆಲವು ಪರಿಸ್ಥಿತಿಗಳಲ್ಲಿ ನಿಮಗೆ ನಿಮ್ಮ ಪ್ರಿಯರನ್ನು ಒಂದು ರೋಗೋಪಚಾರ ಗೃಹಕ್ಕೆ ವಹಿಸಿಕೊಡುವ ಅಗತ್ಯಬಿದ್ದೀತು. ಆರೈಕೆಗಾರರು ನೀವಾಗಿರುವುದಾದರೆ, ನಿಮಗಾಗಿ ಸಮಂಜಸವಾದ ನಿರೀಕ್ಷಣೆಗಳನ್ನಿಡಿರಿ. ನಿಮ್ಮ ಹೆತ್ತವರ ಅಗತ್ಯಗಳನ್ನು ಮಾತ್ರವಲ್ಲ ನಿಮ್ಮ ಮಕ್ಕಳ, ನಿಮ್ಮ ಜೊತೆಗಾರರ ಹಾಗೂ ನಿಮ್ಮ ಅಗತ್ಯಗಳನ್ನು ನೀವು ಸರಿದೂಗಿಸಬೇಕು.

ಸಾಮಾನ್ಯವಾಗಿರುವುದನ್ನು ಮೀರುವ ಬಲ

18, 19. ಬೆಂಬಲದ ಯಾವ ವಾಗ್ದಾನವನ್ನು ಯೆಹೋವನು ಮಾಡಿದ್ದಾನೆ, ಮತ್ತು ಆತನು ಈ ವಾಗ್ದಾನವನ್ನು ನೆರವೇರಿಸುತ್ತಾನೆಂದು ಯಾವ ಅನುಭವವು ತೋರಿಸುತ್ತದೆ?

18 ವೃದ್ಧ ಹೆತ್ತವರ ಆರೈಕೆ ಮಾಡುವುದರಲ್ಲಿ ಒಬ್ಬ ವ್ಯಕ್ತಿಗೆ ಬಹಳವಾಗಿ ಸಹಾಯ ಮಾಡಬಲ್ಲ ಮಾರ್ಗದರ್ಶನವನ್ನು ಯೆಹೋವನು ತನ್ನ ವಾಕ್ಯವಾದ ಬೈಬಲಿನ ಮೂಲಕ ಪ್ರೀತಿಯಿಂದ ಒದಗಿಸುತ್ತಾನೆ, ಆದರೆ ಆತನು ಒದಗಿಸುವಂತಹ ಸಹಾಯವು ಅದು ಮಾತ್ರವೇ ಅಲ್ಲ. “ಯೆಹೋವನಿಗೆ ಮೊರೆಯಿಡುವವರು ಯಥಾರ್ಥವಾಗಿ ಮೊರೆಯಿಡುವದಾದರೆ ಆತನು ಹತ್ತಿರವಾಗಿಯೇ ಇದ್ದಾನೆ,” ಎಂದು ಕೀರ್ತನೆಗಾರನು ಪ್ರೇರಿತನಾಗಿ ಬರೆದನು. “ಅವರ ಕೂಗನ್ನು ಕೇಳಿ ರಕ್ಷಿಸುತ್ತಾನೆ.” ಅತ್ಯಂತ ಕಷ್ಟದ ಸನ್ನಿವೇಶಗಳಿಂದ ಕೂಡ ಯೆಹೋವನು ತನ್ನ ನಂಬಿಗಸ್ತರನ್ನು ರಕ್ಷಿಸುವನು ಅಥವಾ ಕಾಪಾಡಿ ಉಳಿಸುವನು.—ಕೀರ್ತನೆ 145:18, 19.

19 ಫಿಲಿಪ್ಪೀನ್ಸ್‌ನ ಮರ್ನಳಿಗೆ, ಲಕ್ವಾ ಹೊಡೆತದಿಂದಾಗಿ ಅಸಹಾಯಕಳಾಗಿ ಮಾಡಲ್ಪಟ್ಟ ತನ್ನ ತಾಯಿಯ ಆರೈಕೆ ಮಾಡುತ್ತಿದ್ದಾಗ, ಇದು ತಿಳಿದುಬಂತು. “ಎಲ್ಲಿ ನೋಯುತ್ತದೆಂದು ಹೇಳಶಕ್ತರಾಗದೆ ನಮ್ಮ ಪ್ರಿಯರು ನರಳುವುದನ್ನು ನೋಡುವುದಕ್ಕಿಂತ ಹೆಚ್ಚಿನ ಕೊರಗು ಬೇರೊಂದಿಲ್ಲ,” ಎಂದು ಬರೆಯುತ್ತಾಳೆ ಮರ್ನ. “ಅದು ಅವರು ಸ್ವಲ್ಪ ಸ್ವಲ್ಪವಾಗಿಯೆ ಮುಳುಗುತ್ತಾ ಸಾಯುವುದನ್ನು ಕಾಣುವಂತಿತ್ತು ಮತ್ತು ನನಗೇನೂ ಮಾಡಸಾಧ್ಯವಿರಲಿಲ್ಲ. ಅನೇಕಸಲ ನಾನು ಮೊಣಕಾಲೂರಿ, ನಾನೆಷ್ಟು ಬಳಲಿದ್ದೇನೆಂಬುದರ ಕುರಿತು ಯೆಹೋವನಿಗೆ ಹೇಳುತ್ತಿದ್ದೆ. ತನ್ನ ಕಣ್ಣೀರನ್ನು ಬುದ್ದಲಿಯಲ್ಲಿ ತುಂಬಿಸಿ ತನ್ನನ್ನು ಜ್ಞಾಪಿಸಿಕೊಳ್ಳುವಂತೆ ಯೆಹೋವನಿಗೆ ಮೊರೆಯಿಟ್ಟ ದಾವೀದನಂತೆ ನಾನು ಅತ್ತೆ. [ಕೀರ್ತನೆ 56:8] ಮತ್ತು ಯೆಹೋವನು ವಚನವಿತ್ತ ಪ್ರಕಾರವೇ, ನನಗೆ ಅಗತ್ಯವಾದ ಬಲವನ್ನು ಆತನು ಕೊಟ್ಟನು. ‘ಯೆಹೋವನು ನನಗೆ ಉದ್ಧಾರಕನಾದನು.’”—ಕೀರ್ತನೆ 18:18.

20. ತಾವು ಯಾರನ್ನು ಆರೈಕೆಮಾಡುತ್ತಾರೊ ಅವರು ಸತ್ತರೂ, ಆರೈಕೆಗಾರರಿಗೆ ಆಶಾವಾದಿಗಳಾಗಿ ಉಳಿಯಲು ಯಾವ ಬೈಬಲ್‌ ವಾಗ್ದಾನಗಳು ಸಹಾಯ ಮಾಡುತ್ತವೆ?

20 ವೃದ್ಧ ಹೆತ್ತವರನ್ನು ಪರಾಮರಿಸುವುದು “ಶುಭಸಮಾಪ್ತಿಯಿರದ ಕಥೆ” ಎಂದು ಹೇಳಲ್ಪಡುತ್ತದೆ. ಆರೈಕೆ ಕೊಡುವ ಅತ್ಯುತ್ತಮ ಪ್ರಯತ್ನಗಳ ಹೊರತೂ, ಮರ್ನಳ ತಾಯಿಯಂತೆ, ಮುದಿಪ್ರಾಯದವರು ಸಾಯಬಹುದು. ಆದರೆ ಮರಣವು ವಿಷಯದ ಅಶುಭ ಸಮಾಪ್ತಿಯಾಗಿರುವುದಿಲ್ಲವೆಂದು ಯೆಹೋವನಲ್ಲಿ ಭರವಸವಿಡುವವರಿಗೆ ತಿಳಿದದೆ. ಅಪೊಸ್ತಲ ಪೌಲನು ಹೇಳಿದ್ದು: “ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವದೆಂದು . . . ನಾನೂ ನಿರೀಕ್ಷೆಯುಳ್ಳವನಾಗಿದ್ದೇನೆ.” (ಅ. ಕೃತ್ಯಗಳು 24:15) ವೃದ್ಧ ಹೆತ್ತವರನ್ನು ಮರಣದಲ್ಲಿ ಕಳೆದುಕೊಂಡವರು, ‘ಇನ್ನು ಮರಣವಿಲ್ಲದ’ ದೇವನಿರ್ಮಿತ ಹೊಸ ಲೋಕವೊಂದರ ಉಲ್ಲಾಸಕರ ವಾಗ್ದಾನದೊಂದಿಗೆ, ಪುನರುತ್ಥಾನದ ನಿರೀಕ್ಷೆಯಲ್ಲಿ ಸಾಂತ್ವನವನ್ನು ಪಡೆದುಕೊಳ್ಳುವರು.—ಪ್ರಕಟನೆ 21:4.

21. ವೃದ್ಧ ಹೆತ್ತವರನ್ನು ಸನ್ಮಾನಿಸುವುದರಿಂದ ಯಾವ ಸತ್ಪರಿಣಾಮಗಳು ಬರುತ್ತವೆ?

21 ದೇವರ ಸೇವಕರಿಗೆ ತಮ್ಮ ಹೆತ್ತವರ ಮೇಲೆ, ಅವರು ಮುಪ್ಪಿಗೆ ತಲಪಿರಬಹುದಾದರೂ, ಆಳವಾದ ಆದರವಿರುತ್ತದೆ. (ಜ್ಞಾನೋಕ್ತಿ 23:22-24) ಅವರು ಅವರನ್ನು ಸನ್ಮಾನಿಸುತ್ತಾರೆ. ಹಾಗೆ ಮಾಡುವುದರಲ್ಲಿ ಪ್ರೇರಿತ ಜ್ಞಾನೋಕ್ತಿ ಏನು ಹೇಳುತ್ತದೊ ಅದನ್ನು ಅವರು ಅನುಭವಿಸುತ್ತಾರೆ: “ನಿನ್ನ ತಂದೆತಾಯಿಗಳು ಉಲ್ಲಾಸಗೊಳ್ಳಲಿ, ನಿನ್ನನ್ನು ಹೆತ್ತವಳು ಆನಂದಪಡಲಿ.” (ಜ್ಞಾನೋಕ್ತಿ 23:25) ಮತ್ತು ಎಲ್ಲದಕ್ಕಿಂತ ಹೆಚ್ಚಾಗಿ, ತಮ್ಮ ವೃದ್ಧ ಹೆತ್ತವರನ್ನು ಸನ್ಮಾನಿಸುವವರು ಯೆಹೋವ ದೇವರನ್ನು ಸಹ ಮೆಚ್ಚಿಸಿ ಸನ್ಮಾನಿಸುತ್ತಾರೆ.

^ ನಾವಿಲ್ಲಿ, ಯಾವುದರಲ್ಲಿ ಹೆತ್ತವರು ತಮ್ಮ ಶಕ್ತಿ ಮತ್ತು ಭರವಸೆಯ ಅತಿರೇಕ ದುರುಪಯೋಗಕ್ಕೆ ದೋಷಿಗಳಾಗಿದ್ದರೊ, ಯಾವುದನ್ನು ಪಾತಕ ಪ್ರಮಾಣವಾಗಿ ವೀಕ್ಷಿಸಬಹುದೊ ಆ ಸನ್ನಿವೇಶಗಳನ್ನು ಚರ್ಚಿಸುತ್ತಿಲ್ಲ.