ಮಾಹಿತಿ ಇರುವಲ್ಲಿ ಹೋಗಲು

ಜಹನ್ನುಮ್‌ ದೈವಿಕ ನ್ಯಾಯದ ಒಂದು ಭಾಗವೊ?

ಜಹನ್ನುಮ್‌ ದೈವಿಕ ನ್ಯಾಯದ ಒಂದು ಭಾಗವೊ?

ಜಹನ್ನುಮ್‌ ದೈವಿಕ ನ್ಯಾಯದ ಒಂದು ಭಾಗವೊ?

ಯಾರಿಗಾದರೂ ಚಿತ್ರಹಿಂಸೆ ಕೊಡುತ್ತಿರುವುದನ್ನು ನೀವು ಎಂದಾದರೂ ನೋಡಿದ್ದೀರೊ? ನೋಡದೇ ಇರುವುದಾದರೆ ಒಳ್ಳೇದು ಎಂದು ನಾವು ನೆನಸುತ್ತೇವೆ. ಏಕೆಂದರೆ ಉದ್ದೇಶಪೂರ್ವಕವಾದ ಚಿತ್ರಹಿಂಸೆಯು ಹೇಸಿಗೆಯನ್ನು ಹುಟ್ಟಿಸಿ, ಜಿಗುಪ್ಸೆಯನ್ನು ಉಂಟುಮಾಡುತ್ತದೆ. ಹಾಗಾದರೆ ಖುದಾ ಕೊಡುವ ಚಿತ್ರಹಿಂಸೆಯ ಕುರಿತಾಗಿ ಏನು? ಇದನ್ನು ನೀವು ಊಹಿಸಿಕೊಳ್ಳಬಲ್ಲಿರೊ? ಆದರೂ, ಅನೇಕ ಧರ್ಮಗಳಲ್ಲಿ ಅಧಿಕೃತ ಸಿದ್ಧಾಂತವಾಗಿರುವ ಜಹನ್ನುಮ್‌ ಬೋಧನೆಯು ಇದನ್ನೇ ಸೂಚಿಸುತ್ತದೆ.

ಒಂದು ಕ್ಷಣ ಈ ಕೆಳಗಿನ ಭೀಕರ ದೃಶ್ಯವನ್ನು ಊಹಿಸಿಕೊಳ್ಳಿರಿ: ಬಿಸಿಯಾದ ಒಂದು ಕಬ್ಬಿಣದ ಕಾವಲಿಯ ಮೇಲೆ ಒಬ್ಬ ವ್ಯಕ್ತಿಯನ್ನು ಸುಡಲಾಗುತ್ತಿದೆ. ಅತಿಯಾದ ಯಾತನೆಯಿಂದ ಅವನು ಕರುಣೆ ತೋರಿಸಿರೆಂದು ಆಕ್ರಂದಿಸುತ್ತಿದ್ದಾನೆ, ಆದರೆ ಅದನ್ನು ಯಾರೂ ಕೇಳಿಸಿಕೊಳ್ಳುತ್ತಿಲ್ಲ. ಈ ಚಿತ್ರಹಿಂಸೆಯು ಮುಂದುವರಿಯುತ್ತಾ ಹೋಗುತ್ತದೆ. ಪ್ರತಿ ಗಂಟೆ, ಪ್ರತಿ ದಿನ, ನಿರಂತರವಾಗಿ ನಡೆಯುತ್ತಾ ಇರುತ್ತದೆ!

ಆ ವ್ಯಕ್ತಿಯು ಎಷ್ಟೇ ಘೋರವಾದ ದುಷ್ಕೃತ್ಯವನ್ನು ಮಾಡಿರಲಿ, ನಿಮಗೆ ಅವನ ಮೇಲೆ ಕರುಣೆಯುಂಟಾಗುವುದಿಲ್ಲವೊ? ಈ ಚಿತ್ರಹಿಂಸೆಯನ್ನು ಕೊಡುವಂತೆ ಆಜ್ಞಾಪಿಸಿದವನ ಕುರಿತಾಗಿ ಏನು? ಅವನು ಒಬ್ಬ ಪ್ರೀತಿಪರ ವ್ಯಕ್ತಿಯಾಗಿರಸಾಧ್ಯವೊ? ಖಂಡಿತವಾಗಿಯೂ ಇಲ್ಲ! ಪ್ರೀತಿಯು ಕರುಣಾಭರಿತವಾಗಿದ್ದು, ಮರುಕವನ್ನು ತೋರಿಸುತ್ತದೆ. ಪ್ರೀತಿಯುಳ್ಳ ಒಬ್ಬ ಅಬ್ಬ ತನ್ನ ಮಕ್ಕಳಿಗೆ ಶಿಕ್ಷೆ ವಿಧಿಸಬಹುದು, ಆದರೆ ಅವನು ಎಂದೂ ತನ್ನ ಮಕ್ಕಳಿಗೆ ಚಿತ್ರಹಿಂಸೆ ಕೊಡಲಾರನು!

ಆದರೂ, ನಿತ್ಯವಾದ ಜಹನ್ನುಮ್‌ನಲ್ಲಿ ಖುದಾ ಪಾಪಿಗಳಿಗೆ ಚಿತ್ರಹಿಂಸೆ ಕೊಡುತ್ತಾನೆ ಎಂದು ಅನೇಕ ಧರ್ಮಗಳು ಕಲಿಸುತ್ತವೆ. ಇದು ದೈವಿಕ ನ್ಯಾಯವಾಗಿದೆ ಎಂದು ವಾದಿಸಲಾಗುತ್ತದೆ. ಒಂದುವೇಳೆ ಇದು ಸತ್ಯವಾಗಿರುವಲ್ಲಿ, ನಿತ್ಯವಾದ ಚಿತ್ರಹಿಂಸೆಯ ಭೀಕರ ಸ್ಥಳವನ್ನು ಯಾರು ಸೃಷ್ಟಿಸಿದರು? ಮತ್ತು ಅಲ್ಲಿ ಕೊಡಲ್ಪಡುವ ಅತಿಯಾದ ಯಾತನೆಗೆ ಯಾರು ಜವಾಬ್ದಾರರು? ಉತ್ತರಗಳು ಸ್ಪಷ್ಟವಾಗಿವೆ. ಇಂತಹ ಒಂದು ಸ್ಥಳವು ನಿಜವಾಗಿಯೂ ಅಸ್ತಿತ್ವದಲ್ಲಿರುವುದಾದರೆ, ಅದನ್ನು ಸೃಷ್ಟಿಸಿದ್ದೇ ಖುದಾ ಮತ್ತು ಅಲ್ಲಿ ಏನು ನಡೆಯುತ್ತದೋ ಅದಕ್ಕೆ ಖುದಾನೇ ಕಾರಣನಾಗಿರಬೇಕು.

ನೀವು ಇದನ್ನು ಒಪ್ಪಿಕೊಳ್ಳಬಲ್ಲಿರೊ? ಬೈಬಲ್‌ * ಹೇಳುವುದು: “ದೇವರು ಪ್ರೀತಿಸ್ವರೂಪಿಯು.” (1 ಯೋಹಾನ 4:8) ಒಂದಿಷ್ಟು ದಯಾಪರರಾಗಿರುವ ಸಾಮಾನ್ಯ ಮನುಷ್ಯರೇ ನೋಡಿ ಹೇಸುವ ಚಿತ್ರಹಿಂಸೆಯನ್ನು, ಪ್ರೀತಿಸ್ವರೂಪಿಯಾಗಿರುವ ಒಬ್ಬ ಖುದಾ ಕೊಡಸಾಧ್ಯವಿದೆಯೊ? ಖಂಡಿತವಾಗಿಯೂ ಇಲ್ಲ!

ವಿಚಾರಹೀನ ಬೋಧನೆ

ಆದರೂ, ದುಷ್ಟ ಜನರು ಜಹನ್ನುಮ್‌ಗೆ ಹೋಗುತ್ತಾರೆ ಮತ್ತು ಅಲ್ಲಿ ಸದಾಕಾಲ ಚಿತ್ರಹಿಂಸೆಗೆ ಒಳಗಾಗುತ್ತಾರೆ ಎಂದು ಅನೇಕರು ನಂಬುತ್ತಾರೆ. ಈ ಬೋಧನೆಯು ತರ್ಕಸಮ್ಮತವಾಗಿದೆಯೊ? ಮಾನವ ಜೀವನಾಯುಷ್ಯವು 70 ಅಥವಾ 80 ವರ್ಷಗಳಿಗೆ ಸೀಮಿತವಾಗಿದೆ. ಯಾರಾದರೊಬ್ಬರು ತಮ್ಮ ಜೀವಮಾನದಾದ್ಯಂತ ವಿಪರೀತ ದುಷ್ಟತನವನ್ನು ನಡೆಸಿರುವುದಾದರೂ, ನಿತ್ಯ ಯಾತನೆಯೇ ಅವನಿಗೆ ನ್ಯಾಯವಾದ ಶಿಕ್ಷೆಯಾಗಿರಸಾಧ್ಯವಿದೆಯೊ? ಇಲ್ಲ. ಒಬ್ಬ ವ್ಯಕ್ತಿಯು ತನ್ನ ಜೀವಮಾನ ಕಾಲದಲ್ಲಿ ಮಾಡಿರುವ ಕೆಲವೇ ಪಾಪಗಳಿಗಾಗಿ, ಅವನಿಗೆ ಸದಾಕಾಲಕ್ಕೂ ಚಿತ್ರಹಿಂಸೆ ಕೊಡುವುದು ಸಂಪೂರ್ಣವಾಗಿ ಅನ್ಯಾಯವಾಗಿದೆ.

ನಾವು ಸತ್ತ ಬಳಿಕ ನಮಗೆ ಏನು ಸಂಭವಿಸುತ್ತದೆ ಎಂಬುದರ ಕುರಿತಾದ ಸತ್ಯವು ಯಾರಿಗೆ ಗೊತ್ತು? ಖುದಾ ಮಾತ್ರ ಈ ಮಾಹಿತಿಯನ್ನು ಪ್ರಕಟಪಡಿಸಬಲ್ಲನು, ಮತ್ತು ಆತನು ತನ್ನ ಲಿಖಿತ ವಾಕ್ಯವಾದ ಬೈಬಲಿನಲ್ಲಿ ಇದನ್ನು ಪ್ರಕಟಪಡಿಸಿದ್ದಾನೆ. ಬೈಬಲು ಏನು ಹೇಳುತ್ತದೋ ಅದು ಇಲ್ಲಿ ಕೊಡಲ್ಪಟ್ಟಿದೆ: “ಪಶುವಿಗೆ ಸಾವು ಬರುವ ಹಾಗೆ ಮನುಷ್ಯನಿಗೂ ಬರುವದು; ಎಲ್ಲಕ್ಕೂ ಪ್ರಾಣ ಒಂದೇ; . . . ಎಲ್ಲಾ ಪ್ರಾಣಿಗಳು ಒಂದೇ ಸ್ಥಳಕ್ಕೆ ಹೋಗುವವು; ಎಲ್ಲಾ ಮಣ್ಣಿನಿಂದಾದವು, ಎಲ್ಲಾ ಮಣ್ಣಿಗೆ ಪುನಃ ಸೇರುವವು.” (ಪ್ರಸಂಗಿ 3:19, 20) ಇಲ್ಲಿ ಜಹನ್ನುಮ್‌ನ ಬಗ್ಗೆ ತಿಳಿಸಲಾಗಿಲ್ಲ. ಮಾನವರು ಸತ್ತಾಗ, ಅವರು ಮಣ್ಣಿಗೆ ಸೇರುತ್ತಾರೆ, ಅಂದರೆ ಅಸ್ತಿತ್ವದಲ್ಲಿಲ್ಲದೆ ಹೋಗುತ್ತಾರೆ.

ಒಬ್ಬ ವ್ಯಕ್ತಿಗೆ ಚಿತ್ರಹಿಂಸೆ ಕೊಡಬೇಕಾದರೆ, ಅವನಿಗೆ ಪ್ರಜ್ಞೆಯಿರಬೇಕು. ಮೃತರಿಗೆ ಪ್ರಜ್ಞೆಯಿದೆಯೊ? ಇಲ್ಲ. “ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯು ಉಂಟಷ್ಟೆ; ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ; ಅವರಿಗೆ ಇನ್ನು ಮೇಲೆ ಪ್ರತಿಫಲವೇನೂ ಇಲ್ಲ, ಅವರ ಜ್ಞಾಪಕವೇ ಹೋಯಿತಲ್ಲವೆ.” (ಪ್ರಸಂಗಿ 9:5) ‘ಯಾವ ತಿಳುವಳಿಕೆಯೂ ಇಲ್ಲದ’ ಮೃತರು, ಜಹನ್ನುಮ್‌ನಲ್ಲಿ ಬೆಂದು ನೋವನ್ನು ಅನುಭವಿಸುವುದು ಅಸಾಧ್ಯ.

ಹಾನಿಕರ ಸಿದ್ಧಾಂತ

ಜಹನ್ನುಮ್‌ನ ಬೋಧನೆಯು ಸತ್ಯವಾಗಿರಲಿ ಅಥವಾ ಸುಳ್ಳಾಗಿರಲಿ, ಅದು ಪ್ರಯೋಜನಾರ್ಹವಾಗಿದೆ ಎಂದು ಕೆಲವರು ಹೇಳುತ್ತಾರೆ. ಏಕೆ? ಇದು ತಪ್ಪು ಕೆಲಸವನ್ನು ಮಾಡದಂತೆ ತಡೆಯುತ್ತದೆ ಎಂದು ಅವರು ಹೇಳುತ್ತಾರೆ. ಇದು ನಿಜವೊ? ಹಾಗಾದರೆ, ಎಲ್ಲಿ ಜನರು ಜಹನ್ನುಮ್‌ನ ಸಿದ್ಧಾಂತದಲ್ಲಿ ನಂಬಿಕೆಯಿಡುತ್ತಾರೋ ಆ ಸ್ಥಳಗಳಲ್ಲಿ ದುಷ್ಕೃತ್ಯದ ಪ್ರಮಾಣವು ಇನ್ನಿತರ ಸ್ಥಳಗಳಿಗಿಂತ ಕಡಿಮೆಯಾಗಿದೆಯೊ? ಇಲ್ಲವೇ ಇಲ್ಲ! ವಾಸ್ತವದಲ್ಲಿ, ಜಹನ್ನುಮ್‌ನ ಸಿದ್ಧಾಂತವು ತುಂಬ ಹಾನಿಕರವಾಗಿದೆ. ಖುದಾ ಜನರಿಗೆ ಚಿತ್ರಹಿಂಸೆ ಕೊಡುತ್ತಾನೆ ಎಂದು ನಂಬುವ ವ್ಯಕ್ತಿಯೊಬ್ಬನು, ಚಿತ್ರಹಿಂಸೆಯನ್ನು ಅಸಹ್ಯ ಭಾವದಿಂದ ಪರಿಗಣಿಸುತ್ತಾನೊ? ಅವನೇಕೆ ಹಾಗೆ ಪರಿಗಣಿಸಬೇಕು? ಒಬ್ಬ ಕ್ರೂರ ಖುದಾನಲ್ಲಿ ನಂಬಿಕೆಯಿಡುವವರು, ಅನೇಕವೇಳೆ ತಮ್ಮ ಖುದಾನಂತೆ ಕ್ರೂರರಾಗಿ ಪರಿಣಮಿಸುತ್ತಾರೆ.

ಒಬ್ಬ ವಿವೇಚನಾಶೀಲ ವ್ಯಕ್ತಿಯು ಈ ವಿಚಾರವನ್ನು ಯಾವುದೇ ದೃಷ್ಟಿಯಿಂದ ಪರೀಕ್ಷಿಸಲಿ, ಚಿತ್ರಹಿಂಸೆ ಕೊಡುವ ಜಹನ್ನುಮ್‌ನ ಅಸ್ತಿತ್ವವನ್ನು ಅವನು ಒಪ್ಪಿಕೊಳ್ಳಸಾಧ್ಯವಿಲ್ಲ. ಇದು ತಾರ್ಕಿಕ ವಿಚಾರಕ್ಕೆ ವಿರುದ್ಧವಾಗಿದೆ. ಮಾನವ ಸ್ವಭಾವವು ಇದಕ್ಕೆ ಆಸ್ಪದ ಕೊಡುವುದಿಲ್ಲ. ಎಲ್ಲಕ್ಕಿಂತಲೂ ಮಿಗಿಲಾಗಿ, ಅಂತಹ ಒಂದು ಸ್ಥಳವು ಅಸ್ತಿತ್ವದಲ್ಲಿದೆ ಎಂದು ಖುದಾನ ವಾಕ್ಯವು ಹೇಳುವುದಿಲ್ಲ. ವ್ಯಕ್ತಿಯೊಬ್ಬನು ಸತ್ತಾಗ, “ಮಣ್ಣಿಗೆ ಸೇರುತ್ತಾನೆ; ಅವನ ಸಂಕಲ್ಪಗಳೆಲ್ಲಾ ಅದೇ ದಿನದಲ್ಲಿ ಹಾಳಾಗುವವು.”—ಕೀರ್ತನೆ 146:4.

ಪಾಪಕ್ಕೆ ಯಾವ ಶಿಕ್ಷೆ?

ನಮ್ಮ ಪಾಪಗಳಿಗೆ ಶಿಕ್ಷೆಯೇ ಕೊಡಲ್ಪಡುವುದಿಲ್ಲ ಎಂಬುದು ಇದರ ಅರ್ಥವೊ? ಇಲ್ಲ. ಈ ಕಲ್ಪನೆ ತಪ್ಪಾಗಿದೆ. ನಮ್ಮ ಪವಿತ್ರ ಖುದಾ ಪಾಪಿಗಳನ್ನು ಶಿಕ್ಷಿಸುತ್ತಾನೆ, ಆದರೆ ಅವರಿಗೆ ಚಿತ್ರಹಿಂಸೆ ಕೊಡುವುದಿಲ್ಲ. ಮತ್ತು ಪಾಪಿಗಳು ತೌಬಾ ತೋರಿಸುವಾಗ, ಆತನು ಅವರನ್ನು ಕ್ಷಮಿಸುತ್ತಾನೆ. ಹಾಗಾದರೆ ಪಾಪಕ್ಕೆ ಯಾವ ಶಿಕ್ಷೆ ದೊರೆಯುತ್ತದೆ? ಬೈಬಲು ನೇರವಾದ ಉತ್ತರವನ್ನು ಕೊಡುತ್ತದೆ: “ಪಾಪವು ಕೊಡುವ ಸಂಬಳ ಮರಣ.” (ರೋಮಾಪುರ 6:23) ಜೀವವು ಖುದಾನಿಂದ ಬಂದ ವರದಾನವಾಗಿದೆ. ನಾವು ಪಾಪಮಾಡುವಾಗ, ಅದಕ್ಕೆ ಅರ್ಹರಾಗಿರುವುದಿಲ್ಲ, ಮತ್ತು ನಾವು ಸಾಯುತ್ತೇವೆ.

ನೀವು ಹೀಗೆ ಕೇಳಬಹುದು: ‘ಇದು ನ್ಯಾಯವೊ? ಪ್ರತಿಯೊಬ್ಬರೂ ಸಾಯುತ್ತಾರಲ್ಲಾ!’ ಇದು ನಿಜ, ಏಕೆಂದರೆ ನಾವೆಲ್ಲರೂ ಪಾಪಿಗಳಾಗಿದ್ದೇವೆ. ನಿಜವಾಗಿ ಹೇಳಬೇಕಾದರೆ, ಯಾರೊಬ್ಬರೂ ಜೀವಕ್ಕೆ ಅರ್ಹರಲ್ಲ. “ಒಬ್ಬ ಮನುಷ್ಯನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು; ಎಲ್ಲರು ಪಾಪ ಮಾಡಿದ್ದರಿಂದ ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು.”—ರೋಮಾಪುರ 5:12.

ಈ ಹಂತದಲ್ಲಿ ನೀವು ಹೀಗೆ ಆಲೋಚಿಸುತ್ತಿರಬಹುದು: ‘ನಾವೆಲ್ಲರೂ ಪಾಪಮಾಡಿ ಸಾಯುತ್ತೇವಾದರೆ, ನಾವೇಕೆ ಸದ್ಗುಣಿಗಳಾಗಿರಲು ಪ್ರಯತ್ನಿಸಬೇಕು? ಖುದಾನ ಸೇವೆ ಮಾಡಲು ಪ್ರಯತ್ನಿಸುವ ವ್ಯಕ್ತಿಗೂ ದುಷ್ಟ ವ್ಯಕ್ತಿಗೂ ಒಂದೇ ರೀತಿಯ ಪ್ರತಿಫಲ ಸಿಗುತ್ತದಲ್ಲಾ.’ ಆದರೆ ವಿಚಾರವು ಹಾಗಿರುವುದಿಲ್ಲ. ನಾವೆಲ್ಲರೂ ಪಾಪಿಗಳಾಗಿರುವುದಾದರೂ, ಯಾರು ಪ್ರಾಮಾಣಿಕವಾಗಿ ತೌಬಾ ತೋರಿಸುತ್ತಾರೋ ಹಾಗೂ ತಮ್ಮ ಮಾರ್ಗಗಳನ್ನು ಬದಲಾಯಿಸಲು ಪ್ರಯತ್ನಿಸುತ್ತಾರೋ ಅವರನ್ನು ಖುದಾ ಕ್ಷಮಿಸುತ್ತಾನೆ. ನಾವು ‘ನೂತನ ಮನಸ್ಸನ್ನು ಹೊಂದಿಕೊಳ್ಳಲು’ ಹಾಗೂ ಒಳ್ಳೇದನ್ನು ಮಾಡಲು ಪ್ರಯತ್ನಿಸುವಾಗ, ಆತನು ಪ್ರತಿಫಲ ನೀಡುತ್ತಾನೆ. (ರೋಮಾಪುರ 12:2) ಈ ಸತ್ಯಗಳು, ಅದ್ಭುತಕರವಾದ ಒಂದು ನಿರೀಕ್ಷೆಗೆ ಆಧಾರವಾಗಿವೆ.

ಒಳ್ಳೇದರ ಪ್ರತಿಫಲ

ನಾವು ಸತ್ತಾಗ, ಅಸ್ತಿತ್ವದಲ್ಲಿಲ್ಲದೆ ಹೋಗುತ್ತೇವೆ. ಆದರೆ, ತದನಂತರ ಯಾವುದೇ ನಿರೀಕ್ಷೆಯಿಲ್ಲ ಎಂದು ಇದರ ಅರ್ಥವಲ್ಲ. ತಾನು ಸತ್ತಾಗ ಖಬ್ರಸ್ತಾನ್‌ (ಷಿಯೋಲ್‌)ಗೆ ಸೇರುತ್ತೇನೆ ಎಂಬುದು ನಂಬಿಗಸ್ತನಾದ ಯೋಬನಿಗೆ ಗೊತ್ತಿತ್ತು. ಆದರೆ ಅವನು ಖುದಾನಿಗೆ ಮಾಡಿದ ಪ್ರಾರ್ಥನೆಗೆ ಕಿವಿಗೊಡಿರಿ: “ನೀನು ನನ್ನನ್ನು ಪಾತಾಳದಲ್ಲಿ [“ಷಿಯೋಲ್‌ನಲ್ಲಿ,” NW] ಬಚ್ಚಿಟ್ಟು ನಿನ್ನ ಕೋಪವು ಇಳಿಯುವ ಪರ್ಯಂತ ನನ್ನನ್ನು ಮರೆಮಾಡಿ ನನಗೆ ಅವಧಿಯನ್ನು ಗೊತ್ತುಮಾಡಿ [ಕಡೆಯಲ್ಲಿ] ನನ್ನನ್ನು ಜ್ಞಾಪಿಸಿಕೊಂಡರೆ ಎಷ್ಟೋ ಒಳ್ಳೇದು! ಒಬ್ಬ ಮನುಷ್ಯನು ಸತ್ತು ಪುನಃ ಬದುಕಾನೇ? . . . ನೀನು ಕರೆದರೆ ಉತ್ತರಕೊಡುವೆನು.”—ಯೋಬ 14:13-15.

ತಾನು ಜೀವನಪರ್ಯಂತ ನಂಬಿಗಸ್ತನಾಗಿ ಉಳಿಯುವಲ್ಲಿ, ಖುದಾ ತನ್ನನ್ನು ಜ್ಞಾಪಿಸಿಕೊಳ್ಳುವನು ಹಾಗೂ ಪುನರುತ್ಥಾನಗೊಳಿಸುವನು ಎಂದು ಯೋಬನು ನಂಬಿದ್ದನು. ಪುರಾತನ ಸಮಯಗಳಲ್ಲಿ ಖುದಾನ ಎಲ್ಲ ಸೇವಕರ ನಂಬಿಕೆಯೂ ಇದೇ ಆಗಿತ್ತು. ಈಸಾ ಮಸ್ಸೀ ತಾನೇ ಈ ನಿರೀಕ್ಷೆಯನ್ನು ದೃಢಪಡಿಸಿದನು. ಅವನು ಹೇಳಿದ್ದು: “ಸಮಾಧಿಗಳಲ್ಲಿರುವವರೆಲ್ಲರು ಆತನ ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ. ಒಳ್ಳೇದನ್ನು ಮಾಡಿದವರಿಗೆ ಜೀವಕ್ಕಾಗಿ ಪುನರುತ್ಥಾನವಾಗುವದು; ಕೆಟ್ಟದ್ದನ್ನು ನಡಿಸಿದವರಿಗೆ ತೀರ್ಪಿಗಾಗಿ ಪುನರುತ್ಥಾನವಾಗುವದು.”—ಯೋಹಾನ 5:28, 29.

ಪುನರುತ್ಥಾನವು ಯಾವಾಗ ಆರಂಭವಾಗುವುದು? ಬೈಬಲಿಗನುಸಾರ, ಬೇಗನೆ ಅದು ಆರಂಭವಾಗುವುದು. 1914ರಲ್ಲಿ ಈ ಲೋಕವು “ಕಡೆಯ ದಿವಸ”ಗಳನ್ನು ಪ್ರವೇಶಿಸಿತು ಎಂದು ಬೈಬಲ್‌ ಪ್ರವಾದನೆಯು ಸೂಚಿಸುತ್ತದೆ. (2 ತಿಮೊಥೆಯ 3:1) ಯಾವುದನ್ನು ಅನೇಕರು ‘ಲೋಕದ ಅಂತ್ಯ’ ಎಂದು ಕರೆಯುತ್ತಾರೋ ಅದು ಸಂಭವಿಸುವಾಗ, ಖುದಾ ದುಷ್ಟತನವನ್ನು ತೆಗೆದುಹಾಕಿ, ಸ್ವರ್ಗೀಯ ಆಳ್ವಿಕೆಯ ಕೆಳಗೆ ಒಂದು ಹೊಸ ಲೋಕವನ್ನು ಸ್ಥಾಪಿಸುವನು.—ಮತ್ತಾಯ 24ನೆಯ ಅಧ್ಯಾಯ; ಮಾರ್ಕ 13ನೆಯ ಅಧ್ಯಾಯ; ಲೂಕ 21ನೆಯ ಅಧ್ಯಾಯ; ಪ್ರಕಟನೆ 16:14.

ಇದರ ಫಲಿತಾಂಶವಾಗಿ ಇಡೀ ಭೂಮಿಯಲ್ಲಿ ಫಿರ್‌ದೌಸ್‌ ಸ್ಥಾಪಿತವಾಗುವುದು ಮತ್ತು ಯಾರು ಪ್ರಾಮಾಣಿಕವಾಗಿ ಖುದಾನಿಗೆ ಸೇವೆ ಸಲ್ಲಿಸಲು ಪ್ರಯತ್ನಿಸುತ್ತಾರೋ ಅವರು ಅದರಲ್ಲಿ ನಿವಾಸಿಸುವರು. ದುಷ್ಟರು ಜಹನ್ನುಮ್‌ನಲ್ಲಿ ಸುಡಲ್ಪಡುವುದಿಲ್ಲವಾದರೂ, ಬರಲಿರುವ ಪರದೈಸದಲ್ಲಿ ಅವರಿಗೆ ಪ್ರವೇಶವಿರದು. ಕೀರ್ತನೆ 37:10, 11ರಲ್ಲಿ ನಾವು ಹೀಗೆ ಓದುತ್ತೇವೆ: “ಇನ್ನು ಸ್ವಲ್ಪಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು; ಅವನಿದ್ದ ಸ್ಥಳದಲ್ಲಿ ಎಷ್ಟು ವಿಚಾರಿಸಿದರೂ ಅವನು ಸಿಕ್ಕುವದೇ ಇಲ್ಲ. ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.”

ಇದೆಲ್ಲವೂ ಕೇವಲ ಒಂದು ಕನಸಾಗಿದೆಯೊ? ಇಲ್ಲ. ಇದು ಖುದಾನ ವಾಗ್ದಾನವಾಗಿದೆ. ಬೈಬಲಿನಲ್ಲಿ ನಾವು ಹೀಗೆ ಓದುತ್ತೇವೆ: “ಇಗೋ, ದೇವರ ನಿವಾಸವು ಮನುಷ್ಯರಲ್ಲಿ ಅದೆ; ಆತನು ಅವರೊಡನೆ ವಾಸಮಾಡುವನು, ಅವರು ಆತನಿಗೆ ಪ್ರಜೆಗಳಾಗಿರುವರು; ದೇವರು ತಾನೇ ಅವರ ಸಂಗಡ ಇರುವನು, ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.”—ಪ್ರಕಟನೆ 21:3, 4.

ನೀವು ಈ ಮಾತುಗಳಲ್ಲಿ ನಂಬಿಕೆಯಿಡುತ್ತೀರೊ? ಖಂಡಿತವಾಗಿಯೂ ಇಡಲೇಬೇಕು. ಖುದಾನ ವಾಕ್ಯವು ಯಾವಾಗಲೂ ಸತ್ಯವಾಗುತ್ತದೆ. (ಯೆಶಾಯ 55:11) ಮಾನವಕುಲಕ್ಕಾಗಿರುವ ಖುದಾನ ಉದ್ದೇಶಗಳ ಕುರಿತು ಇನ್ನೂ ಹೆಚ್ಚಿನ ವಿಷಯಗಳನ್ನು ನೀವು ಕಲಿತುಕೊಳ್ಳುವಂತೆ ನಾವು ಉತ್ತೇಜಿಸುತ್ತೇವೆ. ನಿಮಗೆ ಸಹಾಯ ಮಾಡಲು ಯೆಹೋವನ ಸಾಕ್ಷಿಗಳು ಸಂತೋಷಿಸುತ್ತಾರೆ. ನೀವು ಅವರ ಸಹಾಯವನ್ನು ಪಡೆದುಕೊಳ್ಳಲು ಇಷ್ಟಪಡುವಲ್ಲಿ, ಈ ಕೆಳಗೆ ಕೊಡಲ್ಪಟ್ಟಿರುವ ವಿಳಾಸಗಳಲ್ಲಿ ಒಂದಕ್ಕೆ ಪತ್ರವನ್ನು ಬರೆಯುವಂತೆ ನಾವು ನಿಮಗೆ ಕರೆಕೊಡುತ್ತೇವೆ.

[ಅಧ್ಯಯನ ಪ್ರಶ್ನೆಗಳು]

^ ಪ್ಯಾರ. 6 ಇಸ್ಲಾಮ್‌ ಜಗತ್ತಿನಲ್ಲಿ, ತೌರಾತ್‌, ಜಬೂರ್‌, ಮತ್ತು ಇಂಜೀಲ್‌ ಎಂದು ಪ್ರಸಿದ್ಧವಾಗಿರುವ ಪುಸ್ತಕಗಳು ಬೈಬಲಿನಲ್ಲಿವೆಯೆಂದು ಹೇಳಲಾಗುತ್ತದೆ. ಈ ಪುಸ್ತಕಗಳು ಖುದಾನ ವಾಕ್ಯವಾಗಿವೆ ಎಂದು ಕುರಾನ್‌ನಲ್ಲಿ ಕಡಿಮೆಪಕ್ಷ 64 ವಚನಗಳು ಹೇಳುತ್ತಾ, ಅವುಗಳನ್ನು ಓದುವ ಹಾಗೂ ಅವುಗಳ ಆಜ್ಞೆಗಳನ್ನು ಪಾಲಿಸುವ ಆವಶ್ಯಕತೆಯನ್ನು ಒತ್ತಿಹೇಳುತ್ತವೆ. ತೌರಾತ್‌, ಜಬೂರ್‌, ಮತ್ತು ಇಂಜೀಲ್‌ನ ಪುಸ್ತಕಗಳು ಬದಲಾಯಿಸಲ್ಪಟ್ಟಿವೆಯೆಂದು ಕೆಲವರು ವಾದಿಸುತ್ತಾರೆ. ಆದರೂ, ಹೀಗೆ ಹೇಳುವುದು ಕುರಾನಿನ ಮಾತುಗಳನ್ನು ಅಲಕ್ಷಿಸುವುದಕ್ಕೆ ಹಾಗೂ ಖುದಾ ತನ್ನ ವಾಕ್ಯವನ್ನು ಸಂರಕ್ಷಿಸಲಾರನು ಎಂದು ಹೇಳುವುದಕ್ಕೆ ಸಮವಾಗಿದೆ.

ಬೇರೆ ರೀತಿಯಲ್ಲಿ ಸೂಚಿಸಲ್ಪಡದಿರುವಲ್ಲಿ, ಉಪಯೋಗಿಸಲ್ಪಟ್ಟ ಬೈಬಲ್‌ ಭಾಷಾಂತರ ‘ಸತ್ಯವೇದವು’ ಆಗಿದೆ. NW ಎಂದು ಬರೆದಿರುವಲ್ಲಿ ಭಾಷಾಂತರವು ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ಆಫ್‌ ದ ಹೋಲಿ ಸ್ಕ್ರಿಪ್ಚರ್ಸ್‌—ವಿದ್‌ ರೆಫರೆನ್ಸಸ್‌ನಿಂದ ತೆಗೆಯಲ್ಪಟ್ಟಿದೆ.

ಬೇರೆ ರೀತಿಯಲ್ಲಿ ಸೂಚಿಸಲ್ಪಡದಿರುವಲ್ಲಿ, ಕುರಾನಿನ ಉಲ್ಲೇಖಗಳು ದಿವ್ಯ ಕುರ್‌ಆನ್‌—ಅರಬೀ ಮೂಲ ಸಹಿತ ಕನ್ನಡಾನುವಾದದಿಂದ ತೆಗೆಯಲ್ಪಟ್ಟಿವೆ.