ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಶ್ನೆ 2

ಜೀವ ನಿಜವಾಗಲೂ ಸರಳವಾಗಿದೆಯಾ?

ನಮ್ಮ ದೇಹದಲ್ಲಿ 200ಕ್ಕಿಂತಲೂ ಹೆಚ್ಚು ರೀತಿಯ ಜೀವಕೋಶಗಳಿವೆ. ಇವು ತನ್ನಿಂದ ತಾನೇ ಬರೋಕೆ ಸಾಧ್ಯನಾ?

ಜೀವ ನಿಜವಾಗಲೂ ಸರಳವಾಗಿದೆಯಾ?

ಇಡೀ ವಿಶ್ವದಲ್ಲಿರುವ ಜಟಿಲವಾದ ರಚನೆಗಳಲ್ಲಿ ನಮ್ಮ ದೇಹ ಕೂಡ ಒಂದು. ನಮ್ಮ ದೇಹದಲ್ಲಿ 100 ಲಕ್ಷ ಕೋಟಿ ಚಿಕ್ಕ-ಚಿಕ್ಕ ಜೀವಕೋಶಗಳಿವೆ. ಇವುಗಳಲ್ಲಿ ಕೆಲವು ಮೂಳೆಗಳಲ್ಲಿರುವ ಜೀವಕೋಶಗಳು, ರಕ್ತದಲ್ಲಿರುವ ಜೀವಕೋಶಗಳು, ಮೆದುಳಿನಲ್ಲಿರುವ ಜೀವಕೋಶಗಳು.7 ನಿಜ ಹೇಳಬೇಕೆಂದರೆ, ನಮ್ಮ ದೇಹದಲ್ಲಿ 200ಕ್ಕಿಂತಲೂ ಹೆಚ್ಚು ರೀತಿಯ ಜೀವಕೋಶಗಳಿವೆ.8

ಪ್ರತಿಯೊಂದು ಜೀವಕೋಶ ಬೇರೆ-ಬೇರೆ ರೀತಿಯ ಆಕಾರ ಹೊಂದಿರುತ್ತೆ ಮತ್ತು ಬೇರೆ-ಬೇರೆ ರೀತಿಯ ಕೆಲಸಗಳನ್ನ ಮಾಡುತ್ತೆ. ಹಾಗಿದ್ದರೂ ಈ ಎಲ್ಲಾ ಜೀವಕೋಶಗಳು ಒಂದಕ್ಕೊಂದು ಹೊಂದಿಕೊಂಡು ಜೊತೆಯಾಗಿ ಒಂದು ನೆಟ್‌ವರ್ಕ್‌ ತರ ಕೆಲಸ ಮಾಡುತ್ತವೆ. ಅವು ಎಷ್ಟು ವೇಗವಾಗಿ ಕೆಲಸ ಮಾಡುತ್ತವೆ ಅಂದರೆ, ಲಕ್ಷಾಂತರ ಕಂಪ್ಯೂಟರ್‌ಗೆ ಸೇರಿರುವ ಇಂಟರನೆಟ್‌ ಅಥವಾ ಹೈಸ್ಪೀಡ್‌ ಕೇಬಲ್‌ಗಳು ಇದರ ಮುಂದೆ ಏನೂ ಅಲ್ಲ. ಮನುಷ್ಯ ಏನೇನೋ ಪ್ರಯೋಗ ಮಾಡಿ ಅನೇಕ ವಿಷಯಗಳನ್ನ ಕಂಡು ಹಿಡಿದಿದ್ದಾನೆ. ಆದರೆ ಅದು ಯಾವುದು ಈ ಸರಳವಾದ ಜೀವಕೋಶ ಮಾಡುವ ಕೆಲಸವನ್ನ ಮಾಡೋದಕ್ಕೆ ಆಗಲ್ಲ. ಅಷ್ಟು ಅದ್ಭುತವಾಗಿ ಈ ಜೀವಕೋಶ ರಚನೆ ಆಗಿದೆ. ಒಂದು ಮನುಷ್ಯನ ದೇಹದ ರಚನೆ ಆಗಬೇಕೆಂದರೆ ಈ ಜೀವಕೋಶಗಳು ಹೇಗೆ ಕೆಲಸ ಮಾಡುತ್ತವೆ?

ಅನೇಕ ವಿಜ್ಞಾನಿಗಳು ಏನು ಹೇಳ್ತಾರೆ? ಜೀವಕೋಶಗಳಲ್ಲಿ ಎರಡು ರೀತಿ ಇದೆ. ಒಂದು ನ್ಯುಕ್ಲಿಯಸ್‌ ಇರುವಂಥದ್ದು ಇನ್ನೊಂದು ನ್ಯುಕ್ಲಿಯಸ್‌ ಇಲ್ಲದಿರುವಂಥದ್ದು. ಮನುಷ್ಯ, ಪ್ರಾಣಿ, ಗಿಡ-ಮರಗಳಲ್ಲಿ ನ್ಯುಕ್ಲಿಯಸ್‌ ಇದೆ. ಆದರೆ ಬ್ಯಾಕ್ಟೀರಿಯ ಜೀವಕೋಶಗಳಲ್ಲಿ ಇರಲ್ಲ. ನ್ಯುಕ್ಲಿಯಸ್‌ ಇರುವ ಜೀವಕೋಶಗಳನ್ನ ಯುಕ್ಯಾರಿಯೋಟಿಕ್‌ (Eukaryotic) ಅಂತ ಕರಿತಾರೆ, ನ್ಯುಕ್ಲಿಯಸ್‌ ಇಲ್ಲದೆ ಇರುವ ಜೀವಕೋಶಗಳನ್ನ ಪ್ರೊಕ್ಯಾರಿಯೋಟಿಕ್‌ (Prokaryotic) ಅಂತ ಕರಿತಾರೆ. ಯುಕ್ಯಾರಿಯೋಟಿಕ್‌ ಜೀವಕೋಶಗಳು ಪ್ರೊಕ್ಯಾರಿಯೋಟಿಕ್‌ ಜೀವಕೋಶಗಳಿಗಿಂತ ಜಟಿಲವಾಗಿವೆ. ಪ್ರಾಣಿಗಳು ಮತ್ತು ಗಿಡಮರಗಳ ಜೀವಕೋಶಗಳು, ಬ್ಯಾಕ್ಟಿರಿಯಾ ಜೀವಕೋಶಗಳಿಂದ ವಿಕಾಸ ಆಯಿತು ಅಂತ ಅನೇಕರು ನಂಬುತ್ತಾರೆ.

ತುಂಬ ಜನ ಹೀಗೆ ಹೇಳುತ್ತಾರೆ, ‘ಮಿಲ್ಯಾಂತರ ವರ್ಷಗಳಿಂದ ಕೆಲವು ಸರಳವಾದ ಪ್ರೊಕ್ಯಾರಿಯೋಟಿಕ್‌ ಜೀವಕೋಶಗಳು, ಬೇರೆ ಜೀವಕೋಶಗಳನ್ನ ನುಂಗಿಬಿಡ್ತು. ಆದರೆ ಅದನ್ನ ಜೀರ್ಣಿಸಿಕೊಳ್ಳೋಕೆ ಆಗಲಿಲ್ಲ.’ ಈ ಸಿದ್ಧಾಂತವನ್ನ ಸಮರ್ಥಿಸುವವರು, ಬುದ್ಧಿಹೀನ “ಪ್ರಕೃತಿ” ಅಂದರೆ ಪ್ರೊಕ್ಯಾರಿಯೋಟಿಕ್‌ ಜೀವಕೋಶಗಳು ಇದಕ್ಕೊಂದು ಬೇರೆ ದಾರಿ ಹುಡುಕಿಕೊಂಡಿತು. ತಾನು ನುಂಗಿದ ಜೀವಕೋಶಗಳ ಕೆಲಸದಲ್ಲಿ ಬದಲಾವಣೆ ಮಾಡಿದ್ದಲ್ಲದೆ, ತಾನೂ ವಿಭಜನೆಗೊಂಡು ಜೊತೆಗೆ ತನ್ನಲ್ಲೇ ಇಟ್ಟುಕೊಂಡಿರುವ ಜೀವಕೋಶಗಳನ್ನೂ ವಿಭಜನೆ ಮಾಡಿತು ಅಂತಾರೆ.9 a

ಬೈಬಲ್‌ ಏನು ಹೇಳುತ್ತೆ? ಭೂಮಿಯಲ್ಲಿರುವ ಎಲ್ಲಾ ಸೃಷ್ಟಿ ಜೀವಿಗಳ ಹಿಂದೆ ಒಬ್ಬ ಬುದ್ಧಿವಂತನ ಕೈಕೆಲಸ ಇದೆ ಅಂತ ಬೈಬಲ್‌ ಹೇಳುತ್ತೆ. ಇದರ ಬಗ್ಗೆ ಅದು ಸ್ಪಷ್ಟವಾಗಿ ಹೇಳೋದು: “ನಿಜ ಹೇಳಬೇಕಂದ್ರೆ, ಪ್ರತಿಯೊಂದು ಮನೆಯನ್ನ ಯಾರಾದ್ರೂ ಒಬ್ರು ಕಟ್ಟಿರ್ತಾರೆ. ಆದ್ರೆ ಎಲ್ಲವನ್ನೂ ಸೃಷ್ಟಿಸಿದ್ದು ದೇವರೇ.” (ಇಬ್ರಿಯ 3:4) ಬೈಬಲಿನ ಇನ್ನೊಂದು ವಚನ ಹೇಳೋದು: “ಯೆಹೋವನೇ, ನಿನ್ನ ಕೆಲಸಗಳಿಗೆ ಲೆಕ್ಕಾನೇ ಇಲ್ಲ! ಅವನ್ನೆಲ್ಲ ನೀನು ನಿನ್ನ ವಿವೇಕದಿಂದ ಮಾಡಿದ್ದೀಯ. ಭೂಮಿ ನೀನು ಸೃಷ್ಟಿಸಿರೋ ವಿಷ್ಯಗಳಿಂದ ತುಂಬಿಹೋಗಿದೆ. ಸಮುದ್ರ ವಿಶಾಲವಾಗಿದೆ, ದೂರದೂರದ ತನಕ ಹರಡ್ಕೊಂಡಿದೆ, ಲೆಕ್ಕ ಇಲ್ಲದಷ್ಟು ಚಿಕ್ಕದೊಡ್ಡ ಜೀವಿಗಳು ಅದ್ರಲ್ಲಿ ತುಂಬಿಕೊಂಡಿವೆ.”—ಕೀರ್ತನೆ 104:24, 25.

ಒಂದು “ಸರಳವಾದ” ಜೀವಕೋಶ, ಜೀವವಿಲ್ಲದ ರಾಸಾಯನಿಕ ವಸ್ತುಗಳಿಂದ ಬರೋಕೆ ಸಾಧ್ಯನಾ?

ಆಧಾರಗಳಿಂದ ಏನು ಗೊತ್ತಾಗುತ್ತೆ? ಸೂಕ್ಷ್ಮ ಜೀವಶಾಸ್ತ್ರ (Microbiology) ಎಷ್ಟು ಪ್ರಗತಿಯಾಗಿದೆ ಅಂದರೆ, ಒಂದು ಸರಳವಾದ ಮತ್ತು ಜೀವಂತವಾಗಿರೋ ಪ್ರೊಕ್ಯಾರಿಯೋಟಿಕ್‌ ಜೀವಕೋಶದ ಒಳಗೆ ಹೋಗಿ, ಅದರಲ್ಲಿ ಇರುವಂಥ ವಿಸ್ಮಯಗಳನ್ನ ನೋಡೋಕ್ಕೆ ಸಾಧ್ಯವಾಗಿದೆ. ವಿಕಾಸವಾದವನ್ನ ನಂಬುವಂತ ವಿಜ್ಞಾನಿಗಳು ಪ್ರೊಕ್ಯಾರಿಯೋಟಿಕ್‌ ಜೀವಕೋಶದ ತರಾನೇ ಮೊದಲು ಸೃಷ್ಟಿಯಾದ ಜೀವಕೋಶನೂ ಇತ್ತು ಅಂತ ಹೇಳುತ್ತಾರೆ.10

ಒಂದುವೇಳೆ ವಿಕಾಸವಾದ ನಿಜಾನೇ ಆಗಿರೋದಾದರೆ, ಒಂದು ‘ಸರಳವಾದ’ ಜೀವಕೋಶ ಹೇಗೆ ಉತ್ಪತ್ತಿ ಆಯಿತು ಅನ್ನೋದರ ಬಗ್ಗೆ ಸರಿಯಾದ ಆಧಾರವನ್ನ ಅವರು ಕೊಡಬೇಕಾಗುತ್ತೆ. ಒಂದುವೇಳೆ ಜೀವ ಸೃಷ್ಟಿಯಾಗಿದ್ದರೆ, ಅತಿ ಸೂಕ್ಷ್ಮ ಜೀವಿಗಳ ಹಿಂದೆನೂ ಒಬ್ಬ ಬುದ್ಧಿವಂತನ ಕೈಕೆಲಸ ಇದೆ ಅನ್ನೋದಕ್ಕೂ, ಆಧಾರ ಬೇಕಾಗುತ್ತೆ. ಬನ್ನಿ, ಒಂದು ಪ್ರೊಕ್ಯಾರಿಯೋಟಿಕ್‌ ಜೀವಕೋಶದ ಒಳಗೆ ಏನೆಲ್ಲಾ ಕೆಲಸಗಳು ನಡೆಯುತ್ತೆ ಅಂತ, ಒಂದು ಟೂರ್‌ ಮಾಡಿ ನೋಡೋಣ. ಇದರ ಬಗ್ಗೆ ತಿಳಿದುಕೊಳ್ಳುವಾಗ, ಒಂದು ಜೀವಕೋಶ ತನ್ನಿಂದ ತಾನೇ ಬರೋದಕ್ಕೆ ಸಾಧ್ಯ ಇದೆಯಾ, ಅನ್ನೋದರ ಬಗ್ಗೆನೂ ಯೋಚನೆ ಮಾಡಿ.

ಜೀವಕೋಶವನ್ನ ರಕ್ಷಿಸುವ ಗೋಡೆ

ನೀವು ಪ್ರೊಕ್ಯಾರಿಯೋಟಿಕ್‌ ಜೀವಕೋಶದ ಒಳಗೆ ಹೋಗಬೇಕಂದ್ರೆ, ಈ ವಾಕ್ಯದ ಕೊನೆಯಲ್ಲಿರುವ ವಿರಾಮ ಚಿಹ್ನೆಯನ್ನ (ಫುಲ್‌ಸ್ಟಾಪ್‌) ನೂರು ಸಲ ವಿಭಾಗಿಸಿದರೆ ಎಷ್ಟು ಚಿಕ್ಕದಾಗುತ್ತೋ ಅಷ್ಟು ಚಿಕ್ಕವರಾಗಬೇಕು. ಒಂದು ಫ್ಯಾಕ್ಟರಿಯ ಸುರಕ್ಷತೆಗಾಗಿ ಹೇಗೆ ಗೋಡೆ ಕಟ್ಟಿರುತ್ತಾರೋ ಅದೇ ರೀತಿ ಕೋಶಕೇಂದ್ರ, ಜೀವಕೋಶದ ರಕ್ಷಣೆಯ ಗೋಡೆಯಾಗಿ ಕೆಲಸ ಮಾಡುತ್ತೆ. ಇದು ಗಡುಸಾಗಿದ್ದರೂ ಸುಲಭವಾಗಿ ಹೊಂದಿಕೊಳ್ಳುತ್ತೆ. ಇದು ಎಷ್ಟು ತೆಳ್ಳಗಿರುತ್ತೆ ಅಂದರೆ, ಇದು ಒಂದು ಹಾಳೆಯಷ್ಟು ದಪ್ಪ ಆಗಬೇಕೆಂದರೆ ಆ ಪೊರೆಯನ್ನ ಒಂದರ ಮೇಲೆ ಒಂದರಂತೆ, ಹತ್ತು ಸಾವಿರ ಸಲ ಹಾಕಬೇಕು. ಈ ಕೋಶಪೊರೆಯ (Membrane) ರಚನೆ ಎಷ್ಟು ಚೆನ್ನಾಗಿದೆ ಅಂದರೆ, ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಕಟ್ಟಿದಂತ ಯಾವ ಗೋಡೆಗೂ ಇದನ್ನ ಹೋಲಿಸೋಕಾಗಲ್ಲ. ಇದು ಯಾವ ರೀತಿ ಕೆಲಸ ಮಾಡುತ್ತೆ?

ಒಂದು ಗೋಡೆ, ಫ್ಯಾಕ್ಟರಿಯನ್ನ ಹೇಗೆ ಸಂರಕ್ಷಿಸುತ್ತೋ, ಅದೇ ತರ ಜೀವಕೋಶದ ಪೊರೆ ಹೊರಗಿಂದ ಬರುವ ಅಪಾಯಕಾರಿ ವಾತಾವರಣದಿಂದ ಜೀವಕೋಶವನ್ನ ಕಾಪಾಡುತ್ತೆ. ಆದರೆ ಈ ಕೋಶಪೊರೆ ಗಟ್ಟಿಯಾಗಿಲ್ಲ. ಇದು ಜೀವಕೋಶ ‘ಉಸಿರಾಡೋಕೆ’ ಸಹಾಯ ಮಾಡುತ್ತೆ. ಆಮ್ಲಜನಕದಂಥ ಸಣ್ಣ-ಸಣ್ಣ ಅಣುಗಳು ಒಳಗೆ ಅಥವಾ ಹೊರಗೆ ಹೋಗಕ್ಕೆ ಅನುಮತಿ ಕೊಡುತ್ತೆ. ಆದರೆ ಈ ಪೊರೆ ಜಟಿಲವಾದ ಅಥವಾ ಹಾನಿಕಾರಕ ಅಣುಗಳು ಜೀವಕೋಶದ ಅನುಮತಿ ಇಲ್ಲದೆ ಒಳಗೆ ಹೋಗಕ್ಕೆ ಬಿಡಲ್ಲ. ಅಷ್ಟೇ ಅಲ್ಲ, ಈ ಪೊರೆ ಉಪಯುಕ್ತ ಅಣುಗಳು ಜೀವಕೋಶವನ್ನ ಬಿಟ್ಟು ಹೊರಗೆ ಹೋಗದಿರೋ ತರ ನೋಡಿಕೊಳ್ಳುತ್ತೆ. ಇಂಥ ಜಟಿಲವಾದ ಕೆಲಸವನ್ನ ಅದು ಹೇಗೆ ಮಾಡುತ್ತೆ? ಈ ಪೊರೆ ಇಷ್ಟು ಚೆನ್ನಾಗಿ, ಅದ್ಭುತವಾಗಿ ಹೇಗೆ ಕೆಲಸ ಮಾಡುತ್ತೆ?

ಇನ್ನೊಮ್ಮೆ ಆ ಫ್ಯಾಕ್ಟರಿ ಉದಾಹರಣೆಯನ್ನ ತೆಗೆದುಕೊಳ್ಳೋಣ. ಒಂದು ಫ್ಯಾಕ್ಟರಿ ಒಳಗಡೆ ಯಾವ ವಸ್ತುವನ್ನ ತಗೊಂಡು ಹೋಗುತ್ತಾರೆ, ಯಾವುದನ್ನ ಹೊರಗೆ ತಗೊಂಡು ಬರುತ್ತಾರೆ ಅಂತ ಗೇಟಿನಲ್ಲಿರೋ ಸೆಕ್ಯುರಿಟಿ ಗಾರ್ಡ್‌ಗಳು ಮೇಲ್ವಿಚಾರಣೆ ಮಾಡುತ್ತಾರೆ. ಅದೇ ತರ, ಜೀವಕೋಶದ ಮೇಲೆ ಒಂದು ವಿಶೇಷ ರೀತಿಯ ಪ್ರೋಟೀನ್‌ ಅಣುಗಳಿರುತ್ತೆ. ಈ ಅಣುಗಳು ಕೋಶಕ್ಕೆ ಬಾಗಿಲು ಮತ್ತು ಸೆಕ್ಯುರಿಟಿ ಗಾರ್ಡ್‌ಗಳ ತರ ಕೆಲಸ ಮಾಡ್ತವೆ. ಈ ಪ್ರೋಟೀನ್‌ಗಳು ಬೇರೆ-ಬೇರೆ ರೂಪದಲ್ಲಿದ್ದು ಬೇರೆ-ಬೇರೆ ಕೆಲಸ ಮಾಡುತ್ತವೆ.

ಜೀವಕೋಶದ ಹೊರಗಿನ ಪದರ ಅಥವಾ ಗೋಡೆ “ಸೆಕ್ಯುರಿಟಿ ಗಾರ್ಡ್‌” ತರ ಕೆಲಸ ಮಾಡುತ್ತೆ. ಕೆಲವು ವಸ್ತುಗಳು ಮಾತ್ರ ಒಳಗೆ ಹೋಗೋಕೆ ಮತ್ತು ಹೊರಗೆ ಬರೋಕೆ ಅದು ಅನುಮತಿ ನೀಡುತ್ತೆ

ಕೆಲವು ಪ್ರೋಟೀನ್‌ಗಳು (1) ಮಧ್ಯದಲ್ಲಿ ರಂಧ್ರವನ್ನ ಹೊಂದಿದ್ದು, ಅದು ಜೀವಕೋಶದ ಒಳಗೆ ಮತ್ತು ಹೊರಗೆ ಕೆಲವು ನಿರ್ದಿಷ್ಟವಾದ ಅಣುಗಳು ಹೋಗೋದಕ್ಕೆ ಮಾತ್ರ ಅನುಮತಿ ಕೊಡುತ್ತೆ. ಬೇರೆ ಪ್ರೋಟೀನ್‌ಗಳು ಜೀವಕೋಶ ಪೊರೆಯ ಒಂದು ಕಡೆಯಲ್ಲಿ ತೆರೆದಿರುತ್ತೆ (2) ಇನ್ನೊಂದು ಕಡೆಯಲ್ಲಿ ಮುಚ್ಚಿರುತ್ತೆ. ಒಂದು ನಿರ್ದಿಷ್ಟ ಆಕಾರದ ಪದಾರ್ಥಗಳು ಬಂದು ನಿಲ್ಲೋಕೆ (3) ಒಂದು ನಿರ್ದಿಷ್ಟ ಜಾಗ ಇರುತ್ತೆ. ಪ್ರೋಟೀನ್‌ ಒಂದು ಕಡೆ ತೆರೆದಾಗ ಅದರೊಳಗೆ ಪದಾರ್ಥಗಳು ಹೋಗೋಕೆ ಬಿಡುತ್ತೆ (4). ಇಷ್ಟೆಲ್ಲಾ ಕೆಲಸಗಳು ಒಂದು ಸರಳವಾದ ಜೀವಕೋಶದ ಪೊರೆಯ ಮೇಲೆ ನಡಿತಿದೆ.

ಜೀವಕೋಶದೊಳಗೆ ಏನೆಲ್ಲಾ ನಡಿತಿದೆ?

ಮೇಲೆ ನೋಡಿದ ಹಾಗೆ, ನೀವು ಈಗ ‘ಸೆಕ್ಯುರಿಟಿಗಾರ್ಡ್‌ನ’ ಅನುಮತಿ ತಗೊಂಡು ಜೀವಕೋಶದ ಒಳಗಡೆ ಇದ್ದೀರಾ ಅಂತ ಊಹಿಸಿ. ಪ್ರೊಕ್ಯಾರಿಯೋಟಿಕ್‌ ಜೀವಕೋಶದಲ್ಲಿ ಒಂದು ದ್ರವರೂಪದ ಪದಾರ್ಥ ಇರುತ್ತೆ. ಅದರಲ್ಲಿ ಪೋಷಕಾಂಶ ಮತ್ತು ಉಪ್ಪುಗಳಂಥ ಬೇರೆ-ಬೇರೆ ಪದಾರ್ಥಗಳು ಇರುತ್ತವೆ. ಇವುಗಳನ್ನ ಬಳಸಿಕೊಂಡು ಜೀವಕೋಶವು ಅದಕ್ಕೆ ಬೇಕಾಗಿರುವುದನ್ನು ತಯಾರಿಸುತ್ತೆ. ಈ ಕೆಲಸ ಅಸ್ತವ್ಯಸ್ತವಾಗಿ ಅಲ್ಲ ಬದಲಿಗೆ, ಕ್ರಮಬದ್ಧವಾಗಿ ನಡೆಯುತ್ತೆ. ಒಂದು ಫ್ಯಾಕ್ಟರಿ ಹೇಗೆ ವ್ಯವಸ್ಥಿತವಾಗಿ ನಡಿಯುತ್ತೋ ಅದೇ ತರ ಜೀವಕೋಶವು ಸಾವಿರಾರು ರಾಸಾಯನಿಕ ಪ್ರಕ್ರಿಯೆಗಳನ್ನ ಸರಿಯಾದ ಸಮಯಕ್ಕೆ ಮತ್ತು ತುಂಬಾ ವ್ಯವಸ್ಥಿತವಾಗಿ ಮಾಡುತ್ತೆ.

ಒಂದು ಜೀವಕೋಶ, ಪ್ರೋಟೀನನ್ನ ತಯಾರಿಸೋಕೆ ತುಂಬಾ ಸಮಯವನ್ನ ಕಳೆಯುತ್ತೆ. ಅದನ್ನ ಹೇಗೆ ಮಾಡುತ್ತೆ? ಮೊದಲು ನೀವು ನೋಡ್ತಿರಾ, ಜೀವಕೋಶವು 20 ಬೇರೆ-ಬೇರೆ ರೀತಿಯ ಅಮಿನೋ ಆಸಿಡ್‌ನ ತಯಾರಿಸಿ ರೈಬೋಸೊಮ್ಸ್‌ಗೆ ತಲಪಿಸುತ್ತೆ. ಮೊದಲು ನೀವು, ಜೀವಕೋಶವು 20 ಬೇರೆ-ಬೇರೆ ರೀತಿಯ ಅಮಿನೋ ಆಸಿಡ್‌ನ ತಯಾರಿಸಿ ರೈಬೋಸೊಮ್ಸ್‌ಗೆ ತಲಪಿಸುವುದನ್ನು ನೋಡುತ್ತೀರ. (5) ಈ ರೈಬೋಸೊಮ್ಸ್‌ (Ribosomes) ಒಂದು ಅಟೋಮ್ಯಾಟಿಕ್‌ ಮಷೀನ್‌ ತರ ಕೆಲಸ ಮಾಡುತ್ತೆ. ಕಳಿಸಿದ ಆ ಅಮಿನೋ ಆಸಿಡ್‌ಗಳನ್ನ ಕ್ರಮವಾಗಿ ಜೋಡಣೆ ಮಾಡುತ್ತೆ. ಹೇಗೆ ಒಂದು ಫ್ಯಾಕ್ಟರಿಯ ಎಲ್ಲಾ ಕೆಲಸವನ್ನ ಒಂದು ಕಂಪ್ಯೂಟರ್‌ ನೋಡಿಕೊಳ್ಳುತ್ತೋ ಅದೇ ತರ ಜೀವಕೋಶದಲ್ಲಿ ನಡೆಯುವ ಎಲ್ಲಾ ಕೆಲಸವನ್ನ, ಡಿ.ಎನ್‌.ಎ ನೋಡಿಕೊಳ್ಳುತ್ತೆ. (6) ಯಾವ ಪ್ರೋಟೀನ್‌ ಮಾಡಬೇಕು ಹೇಗೆ ಮಾಡಬೇಕು ಅನ್ನೋ ಮಾಹಿತಿಯನ್ನ ಡಿ.ಎನ್‌.ಎ ರೈಬೋಸೊಮ್ಸ್‌ಗೆ ಕಳಿಸುತ್ತೆ (7).

ಮುಂದೆ ನಾವು ಪ್ರೋಟೀನ್‌ ತಯಾರಾಗೋದನ್ನ ನೋಡುವಾಗ, ನಮ್ಮ ಮೈಜುಂ ಅನಿಸುತ್ತೆ. ಈ ಪ್ರೋಟೀನ್‌ 3ಡಿ ಆಕಾರದಲ್ಲಿ ತನ್ನಷ್ಟಕ್ಕೆ ತಾನೇ ಮಡಚಿಕೊಳ್ಳುತ್ತೆ (8). ಈ ಆಕಾರ ಇರುವುರಿಂದನೇ ಅದಕ್ಕೆ ಒಂದು ನಿರ್ದಿಷ್ಟ ಕೆಲಸವನ್ನ ಮಾಡೋಕೆ ಸಹಾಯ ಆಗುತ್ತೆ. b ಒಂದು ಫ್ಯಾಕ್ಟರಿಯಲ್ಲಿ ಇಂಜಿನ್‌ಗಳು ಬೇರೆ-ಬೇರೆ ಭಾಗಗಳನ್ನ ಜೋಡಣೆ ಮಾಡೋದನ್ನ ಊಹಿಸಿಕೊಳ್ಳಿ. ಇಂಜಿನ್‌ ಸರಿಯಾಗಿ ಕೆಲಸ ಮಾಡಬೇಕೆಂದರೆ ಅದರ ಭಾಗಗಳನ್ನ ಸರಿಯಾಗಿ ಜೋಡಣೆ ಮಾಡಿರಬೇಕು. ಅದೇ ತರ ಪ್ರೋಟೀನ್‌ ಅದರ ಕೆಲಸವನ್ನ ಸರಿಯಾಗಿ ಮಾಡಬೇಕೆಂದರೆ, ಸರಿಯಾದ ಆಕಾರದಲ್ಲಿ ಅದನ್ನ ಮಡಚಿರಬೇಕು. ಇಲ್ಲ ಅಂದರೆ ಅದು ಜೀವಕೋಶಕ್ಕೆ ಹಾನಿ ಮಾಡಬಹುದು.

ಪ್ರೋಟೀನ್‌ಗಳ ತಯಾರಿ ಹೇಗೆ ಆಗುತ್ತೆ—ಒಂದು ಜೀವಕೋಶ ತನ್ನಿಂದ ತಾನೇ ಕೆಲಸ ಮಾಡೋ ಒಂದು ಫ್ಯಾಕ್ಟರಿಯಂತೆ ಇದೆ. ಜಟಿಲವಾದ ಅಂಶಗಳನ್ನ ತಾನೇ ತಯಾರಿಸಿ ವಿತರಣೆ ಮಾಡೋ ಕೆಲಸವನ್ನ ಜೀವಕೋಶ ಮಾಡುತ್ತೆ

ಪ್ರೋಟೀನ್‌ಗಳು ತಯಾರಿಸಿದ ಸ್ಥಳದಿಂದ ಎಲ್ಲಿಗೆ ಹೋಗಬೇಕು ಅಂತ ಅದಕ್ಕೆ ಹೇಗೆ ಗೊತ್ತಾಗುತ್ತೆ? ಪ್ರೋಟೀನ್‌ ತಯಾರಿ ಆಗುತ್ತಿರುವಾಗಲೇ ಜೀವಕೋಶ ಈ ಪ್ರೋಟೀನ್‌ ಎಲ್ಲಿಗೆ ಹೋಗಬೇಕು ಅಂತ ಅದರಲ್ಲೇ “ವಿಳಾಸ” ಹಾಕಿ ಬಿಡುತ್ತೆ. ಒಂದೇ ನಿಮಿಷದಲ್ಲಿ ಸಾವಿರಾರು ಪ್ರೋಟೀನ್‌ಗಳನ್ನ ತಯಾರಿ ಮಾಡಿ ಕಳಿಸಲಾಗುತ್ತೆ. ಪ್ರತಿ ಪ್ರೋಟೀನ್‌ ಅದರದರ ಸರಿಯಾದ ಜಾಗಕ್ಕೆ ಹೋಗಿ ತಲುಪುತ್ತೆ.

ಆಧಾರಗಳು ಏನು ಹೇಳುತ್ತೆ? ಒಂದು ಸರಳ ಜೀವಿಯಲ್ಲಿರುವ ಜಟಿಲವಾದ ಅಣುಗಳು ತನ್ನಷ್ಟಕ್ಕೆ ತಾನೇ ಉತ್ಪತ್ತಿ ಆಗೋಕೆ ಸಾಧ್ಯವಿಲ್ಲ. ಜೀವಕೋಶದ ಹೊರಗೆ ಬಂದ ತಕ್ಷಣ ಅವು ಸತ್ತು ಹೋಗುತ್ತವೆ. ಈ ಅಣುಗಳು ಜೀವಕೋಶದ ಒಳಗೆ ಉತ್ಪತ್ತಿ ಆಗಬೇಕೆಂದರೆ, ಬೇರೆ ಅಣುಗಳ ಸಹಾಯ ಬೇಕೇ ಬೇಕು. ಉದಾಹರಣೆಗೆ, ಎ.ಟಿ.ಪಿ. ಒಂದು ವಿಶೇಷ ಅಣು. ಈ ಅಣು ತಯಾರಾಗೋಕೆ ಎನ್‌ಜೈಮ್ಸ್‌ ಬೇಕು. ಎನ್‌ಜೈಮ್ಸ್‌ ತಯಾರಾಗೋಕೆ ಎ.ಟಿ.ಪಿ. ಬೇಕು. ಅದೇ ತರ ಡಿ.ಎನ್‌.ಎ ತಯಾರಾಗೋಕೆ ಎನ್‌ಜೈಮ್ಸ್‌ ಬೇಕು. ಎನ್‌ಜೈಮ್ಸ್‌ ತಯಾರಾಗೋಕೆ ಡಿ.ಎನ್‌.ಎ ಬೇಕು. ಅಷ್ಟೇ ಅಲ್ಲ, ಪ್ರೋಟೀನ್‌ ತಯಾರಾಗೋಕೆ ಜೀವಕೋಶ ಬೇಕು. ಜೀವಕೋಶ ತಯಾರಾಗೋಕೆ ಪ್ರೋಟೀನ್‌ಗಳು ಬೇಕು. c

ಸೂಕ್ಷ್ಮಜೀವ ವಿಜ್ಞಾನಿಯಾದ ರಾಡು ಪೋಪಾ, ಬೈಬಲಿನಲ್ಲಿರುವ ಸೃಷ್ಟಿಯನ್ನ ನಂಬಲ್ಲ. ಆದರೂ 2004ರಲ್ಲಿ ಅವರು ಹೇಳಿದ್ದು: “ಪ್ರಕೃತಿ ತನ್ನಿಂದ ತಾನೇ ಹೇಗೆ ಬರಲಿಕ್ಕೆ ಸಾಧ್ಯ? ನಾವು ಇದರ ಬಗ್ಗೆ ತುಂಬ ಪ್ರಯೋಗಗಳನ್ನ ಮಾಡಿದರೂ ಇದು ತನ್ನಿಂದ ತಾನೇ ಬಂತು ಅಂತ ತೋರಿಸೋಕೆ ನಮ್ಮಿಂದ ಸಾಧ್ಯ ಆಗುತ್ತಿಲ್ಲ.”13 ಅವರು ಮುಂದುವರಿಸಿ ಹೇಳಿದ್ದು: “ಒಂದು ಜೀವಕೋಶ ಇಷ್ಟೊಂದು ಜಟಿಲವಾಗಿ ಹೇಗೆ ಕೆಲಸ ಮಾಡುತ್ತೆ? ಅವು ಒಂದಕ್ಕೊಂದು ಜೋಡಿಸಿಕೊಂಡು ಕೆಲಸ ಮಾಡುವುದನ್ನ ನೋಡಿದರೆ, ಇದೆಲ್ಲಾ ತನ್ನಿಂದ ತಾನೇ ಬರೋಕೆ ಅಸಾಧ್ಯವಾಗಿದೆ.”14

ಒಂದು ದೊಡ್ಡ ಕಟ್ಟಡಕ್ಕೆ ಅಡಿಪಾಯ ಇಲ್ಲವಂದರೆ ಅದು ಖಂಡಿತ ಬಿದ್ದು ಹೋಗುತ್ತೆ. ಅದೇ ತರ, ವಿಕಾಸವಾದದ ಸಿದ್ಧಾಂತದಲ್ಲಿ ಜೀವ ಹೇಗೆ ಶುರುವಾಯಿತು ಅಂತ ಹೇಳೋಕೆ ಆಧಾರ ಇಲ್ಲಾ ಅಂದಮೇಲೆ ಅದು ಖಂಡಿತ ಬಿದ್ದುಹೋಗುತ್ತೆ.

ನಿಮಗೇನನಿಸುತ್ತೆ? ದೇವರ ಸಹಾಯ ಇಲ್ಲದೇ ಈ ಭೂಮಿ ಮೇಲೆ ಜೀವ ಬಂತು ಅಂತ ವಿಕಾಸವಾದದ ಸಿದ್ಧಾಂತ ಹೇಳುತ್ತೆ. ಆದರೆ ವಿಜ್ಞಾನಿಗಳು ಜೀವದ ಬಗ್ಗೆ ಎಷ್ಟು ಸಂಶೋಧನೆ ಮಾಡುತ್ತಿದ್ದಾರೋ ಅಷ್ಟು ನಮಗೆ ಜೀವ ತನ್ನಿಂದ ತಾನೇ ಬಂದಿಲ್ಲ ಅನ್ನೋದಕ್ಕೆ ಆಧಾರಗಳು ಸಿಗುತ್ತನೇ ಇವೆ. ವಿಕಾಸವಾದವನ್ನ ನಂಬುವ ಕೆಲವು ವಿಜ್ಞಾನಿಗಳು ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳೋಕೆ ವಿಕಾಸವಾದದ ಸಿದ್ಧಾಂತನೇ ಬೇರೆ, ಜೀವದ ಆರಂಭದ ಬಗ್ಗೆ ಇರುವ ಪ್ರಶ್ನೆನೇ ಬೇರೆ ಅಂತ ಹೇಳುತ್ತಾರೆ. ಈ ಮಾತನ್ನ ನೀವು ಒಪ್ಪುತ್ತೀರ?

ವಿಕಾಸವಾದದ ಪ್ರಕಾರ, ಒಂದಾದ ಮೇಲೆ ಒಂದು ಘಟನೆಗಳು ನಡೆದು ಜೀವ ತನ್ನಿಂದ ತಾನೇ ಶುರು ಆಯಿತು. ಇದೇ ತರ ಒಂದರ ಮೇಲೆ ಒಂದು ಘಟನೆಗಳು ನಡೆದು ಭೂಮಿಯ ಎಲ್ಲಾ ಕಡೆ ಈ ಜಟಿಲ ಜೀವಿಗಳ ಉತ್ಪತ್ತಿ ಆಯಿತು ಅಂತಾರೆ. ಆದರೆ ಈ ಸಿದ್ಧಾಂತಕ್ಕೆ ಯಾವುದೇ ಆಧಾರ ಇಲ್ಲಾ ಅಂದಮೇಲೆ ಇದರ ನಂತರ ಬಂದ ಸಿದ್ಧಾಂತಗಳನ್ನು ಹೇಗೆ ನಂಬೋದು? ಒಂದು ದೊಡ್ಡ ಕಟ್ಟಡಕ್ಕೆ ಅಡಿಪಾಯ ಇಲ್ಲವೆಂದರೆ ಅದು ಖಂಡಿತ ಬಿದ್ದು ಹೋಗುತ್ತೆ. ಹಾಗೇ, ವಿಕಾಸವಾದದ ಸಿದ್ಧಾಂತದಲ್ಲಿ ಜೀವ ಹೇಗೆ ಆರಂಭವಾಯಿತು ಅಂತ ಹೇಳೋಕೆ ಆಧಾರ ಇಲ್ಲಾ ಅಂದಮೇಲೆ ಅದು ಖಂಡಿತ ಬಿದ್ದುಹೋಗುತ್ತೆ.

ಇಲ್ಲಿವರೆಗೂ ನಾವು ಒಂದು “ಸರಳವಾದ” ಜೀವಕೋಶ ಹೇಗೆ ಕೆಲಸ ಮಾಡುತ್ತೆ ಅಂತ ನೋಡಿದೆವು. ಇದರಿಂದ ನಿಮಗೇನು ಗೊತ್ತಾಯಿತು? ಜೀವ ತನ್ನಿಂದ ತಾನೇ ಬಂತಾ ಅಥವಾ ಇದರ ಹಿಂದೆ ಒಬ್ಬ ಸೃಷ್ಟಿಕರ್ತನ ಕೈ ಕೆಲಸ ಇದೆಯಾ? ಇದನ್ನ ನಂಬೋಕೆ ಇನ್ನೂ ಕಷ್ಟ ಅನಿಸಿದರೆ, ಎಲ್ಲಾ ಜೀವಕೋಶಗಳ ಕೆಲಸವನ್ನ ಯಾವುದು ನಿಯಂತ್ರಿಸುತ್ತೆ ಅಂತ ಮುಂದೆ ನೋಡೋಣ.

a ಹೀಗೆ ನಡೆದಿದೆ ಅಂತ ತೋರಿಸುವ ಯಾವ ಪ್ರಯೋಗನೂ ಇಲ್ಲಿವರೆಗೆ ಮಾಡೋಕಾಗಿಲ್ಲ.

b ಪ್ರೋಟೀನ್‌ಗಳಲ್ಲಿ ಬೇರೆ-ಬೇರೆ ವಿಧಗಳಿವೆ. ಅದರಲ್ಲಿ ಒಂದು ಎನ್‌ಜೈಮ್‌ (ಕಿಣ್ವ). ಒಂದು ನಿರ್ದಿಷ್ಟ ರಾಸಾಯನಿಕ ಪ್ರಕ್ರಿಯೆಯನ್ನ ಮಾಡಲಿಕ್ಕೆ, ಪ್ರತಿಯೊಂದು ಎನ್‌ಜೈಮ್‌ ವಿಶೇಷ ರೀತಿಯಲ್ಲಿ ಮಡಚಲಾಗಿರುತ್ತೆ. ಇದರಿಂದ, ಜೀವಕೋಶಗಳು ಸರಿಯಾಗಿ ಕೆಲಸ ಮಾಡೋಕೆ ನೂರಾರು ಎನ್‌ಜೈಮ್‌ ಒಟ್ಟಿಗೆ ಸೇರಿ ಕೆಲಸ ಮಾಡುತ್ತೆ.

c ಮಾನವ ದೇಹದಲ್ಲಿರುವ ಕೆಲವು ಜೀವಕೋಶಗಳು ಸುಮಾರು ಸಾವಿರಕೋಟಿ ಪ್ರೋಟೀನ್‌ಗಳಿಂದ ಮಾಡಲ್ಪಟ್ಟಿವೆ.11 ಇದರಲ್ಲಿ ಸಾವಿರಾರು ಬೇರೆ-ಬೇರೆ ತರದ ಪ್ರೋಟೀನ್‌ಗಳಿವೆ.12