ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಶ್ನೆ  1

ಜೀವ ಹೇಗೆ ಶುರುವಾಯ್ತು?

ಜೀವ ಹೇಗೆ ಶುರುವಾಯ್ತು?

ನೀವು ಚಿಕ್ಕವರಾಗಿದ್ದಾಗ ನಿಮ್ಮ ಅಪ್ಪಅಮ್ಮಾಗೆ “ನಾವು ಹೇಗೆ ಬಂದ್ವಿ” ಅಂತ ಯಾವತ್ತಾದರೂ ಕೇಳಿದ್ದೀರಾ? ಇದನ್ನ ಕೇಳಿ ಅವರಿಗೆ ಹೇಗನಿಸ್ತು? ನಿಮ್ಮ ಪ್ರಶ್ನೆಗೆ ಅವರು ಏನಂತ ಉತ್ತರ ಕೊಟ್ಟರು? ನೀವು ಚಿಕ್ಕವರಾಗಿ ಇರೋದ್ರಿಂದ ನಿಮಗೆ ಎಲ್ಲಾ ಅರ್ಥ ಆಗಲ್ಲ ಅಂತ ಏನೋ ಒಂದು ಹೇಳಿರಬಹುದು. ಅಥವಾ ನಿಮ್ಮ ಅಪ್ಪಅಮ್ಮ ಸಂಕೋಚ ಸ್ವಭಾವದವರು ಆಗಿರೋದರಿಂದ ನೀವು ಕೇಳಿದ ಪ್ರಶ್ನೆನ ತಲೆಗೆ ಹಾಕಿಕೊಳ್ಳದೇ ಉತ್ತರ ಕೊಡದೇನೂ ಇರಬಹುದು. ಅಥವಾ ಏನೋ ಒಂದು ಕಥೆ ಹೇಳಿ ನಿಮ್ಮನ್ನ ಸಮಾಧಾನ ಮಾಡಿರಬಹುದು. ಆದರೆ ಅವರು ಹೇಳಿದ್ದು ನಿಜ ಅಲ್ಲ ಅಂತ ನೀವು ದೊಡ್ಡವರಾದ ಮೇಲೆ ಗೊತ್ತಾಗುತ್ತೆ. ಮಕ್ಕಳು ದೊಡ್ಡವರಾಗಿ ಮದುವೆ ವಯಸ್ಸಿಗೆ ಬಂದ ಮೇಲೆ ಸಂತಾನೋತ್ಪತ್ತಿಯ ಬಗ್ಗೆ ಸರಿಯಾದ ಜ್ಞಾನ ಪಡಕೊಳ್ಳಬೇಕು.

ಕೆಲವು ತಂದೆತಾಯಿ ಅವರ ಮಕ್ಕಳ ಹತ್ರ ಮಗು ಹೇಗೆ ಹುಟ್ಟುತ್ತೆ ಅನ್ನೋ ವಿಷ್ಯದ ಬಗ್ಗೆ ಮಾತಾಡೋಕೆ ಇಷ್ಟಪಡಲ್ಲ. ಅದೇ ತರ, ಕೆಲವು ವಿಜ್ಞಾನಿಗಳು ಪ್ರಾಮುಖ್ಯವಾದ ವಿಷ್ಯಗಳ ಬಗ್ಗೆ ಉತ್ತರ ತಿಳಿದುಕೊಳ್ಳೋಕೆ ಇಷ್ಟಪಡಲ್ಲ. ಉದಾಹರಣೆಗೆ, ಜೀವ ಹೇಗೆ ಶುರುವಾಯ್ತು ಅನ್ನೋ ಪ್ರಶ್ನೆಗೆ ಒಬ್ಬ ವ್ಯಕ್ತಿ ಉತ್ತರ ತಿಳಿದುಕೊಂಡರೆ ಅವನ ಜೀವನದಲ್ಲಿ ಒಂದು ದೊಡ್ಡ ಬದಲಾವಣೆನೇ ಆಗಿಬಿಡುತ್ತೆ. ಬನ್ನಿ, ಈ ಪ್ರಶ್ನೆಗೆ ಉತ್ತರ ತಿಳಿಯೋಣ.

ಮನುಷ್ಯನ ಫಲವತ್ತಾದ ಅಂಡಾಣುವನ್ನು ಅದರ ನಿಜ ಆಕಾರಕ್ಕಿಂತ 800 ಪಟ್ಟು ದೊಡ್ಡದಾಗಿ ತೋರಿಸಲಾಗಿದೆ

ಅನೇಕ ವಿಜ್ಞಾನಿಗಳು ಏನು ಹೇಳುತ್ತಾರೆ? ವಿಕಾಸವಾದ ನಂಬುವ ಅನೇಕ ವಿಜ್ಞಾನಿಗಳು ಹೇಳೋದು ಏನಂದರೆ ಕೋಟ್ಯಾನುಕೋಟಿ ವರ್ಷಗಳ ಹಿಂದೆ ಒಂದು ಕೆರೆಯ ತುದಿಯಲ್ಲಿ ಅಥವಾ ಸಮುದ್ರದ ಆಳದಲ್ಲಿ ಜೀವದ ಉಗಮ ಆಯಿತು ಅಂತ ಹೇಳುತ್ತಾರೆ. ಅಂತ ಸ್ಥಳದಲ್ಲಿ ರಾಸಾಯನಿಕಗಳು ಒಂದಕ್ಕೊಂದು ಸೇರಿ ಗುಳ್ಳೆಯಂಥ (Bubble) ರೂಪದಲ್ಲಿ ಜೋಡಣೆ ಆಗಿ ತುಂಬಾ ಜಟಿಲವಾದ ಅಣುಗಳು ಸೃಷ್ಟಿಯಾದವು. ಆಮೇಲೆ ಅದು ತನ್ನಷ್ಟಕ್ಕೆ ತಾನೇ ಜಾಸ್ತಿ ಆಗುತ್ತಾ ಹೋಯಿತು ಅಂತ ಅವರು ಹೇಳುತ್ತಾರೆ. ಭೂಮಿ ಮೇಲೆ ಇರೋ ಎಲ್ಲಾ ಜೀವಿಗಳು “ಸರಳವಾದ” ಒಂದು ಅಥವಾ ಹೆಚ್ಚು ಜೀವಕೋಶಗಳಿಂದ ಆಕಸ್ಮಿಕವಾಗಿ ಹುಟ್ಟಿಕೊಳ್ತು ಅಂತ ಅವರು ನಂಬುತ್ತಾರೆ.

ಆದರೆ ವಿಕಾಸವಾದ ನಂಬುವ ಬೇರೆ ವಿಜ್ಞಾನಿಗಳು ಈ ಸಿದ್ಧಾಂತವನ್ನ ಒಪ್ಪಲ್ಲ. ಅವರ ಪ್ರಕಾರ ಮೊದಲ ಜೀವಕೋಶ ಅಥವಾ ಅದರಲ್ಲಿರೋ ಪ್ರಮುಖ ಅಂಶಗಳು ಅಂತರಿಕ್ಷದಿಂದ ಭೂಮಿಗೆ ಬಂದವು ಅಂತ ಹೇಳುತ್ತಾರೆ. ಹೀಗೆ ಹೇಳೋದಕ್ಕೆ ಏನು ಕಾರಣ? ವಿಜ್ಞಾನಿಗಳು ಎಷ್ಟೇ ಪ್ರಯತ್ನ ಪಟ್ಟರೂ ನಿರ್ಜೀವ ವಸ್ತುಗಳಿಂದ ಜೀವ ಬರೋಕೆ ಸಾಧ್ಯನೇ ಇಲ್ಲ ಅಂತ ಅವರು ಒಪ್ಪಿಕೊಳ್ಳುತ್ತಾರೆ. 2008ರಲ್ಲಿ ಜೀವಶಾಸ್ತ್ರದ (Biology) ಫ್ರೊಫೆಸರ್‌ ಆದ ಅಲೆಕ್ಸಾಂಡ್ರಾ ಮಿನೇಸ್‌ ಈ ಸಿದ್ಧಾಂತದಲ್ಲಿರೋ ಸಮಸ್ಯೆಯನ್ನ ಎತ್ತಿ ತೋರಿಸಿದರು. ಅವರು ಹೇಳಿದ್ದು: 50 ವರ್ಷಗಳಿಂದ “ನಾವು ಎಷ್ಟೋ ಪ್ರಯೋಗಗಳನ್ನ ಮಾಡಿದ್ದೀವಿ, ಆದರೆ ಕೆರೆಯ ತುದಿಯಲ್ಲಿ ಜೀವದ ಆರಂಭ ಆಯಿತು ಅಂತ ಹೇಳೋದಕ್ಕೆ ಯಾವುದೇ ಆಧಾರ ನಮಗೆ ಸಿಕ್ಕಿಲ್ಲ ಮತ್ತೆ ಯಾವ ಪ್ರಯೋಗದಲ್ಲೂ ಇದನ್ನ ಮಾಡೋಕಾಗಿಲ್ಲ.”1

ಆಧಾರಗಳಿಂದ ಏನು ಗೊತ್ತಾಗುತ್ತೆ? ಮಗು ಹೇಗೆ ಹುಟ್ಟುತ್ತೆ ಅಂತ ಎಲ್ಲರಿಗೂ ಗೊತ್ತು. ಯಾಕಂದರೆ ಇದಕ್ಕೆ ಸಾಕಷ್ಟು ಆಧಾರಗಳಿವೆ. ಹಾಗಾಗಿ ಈ ವಿಷಯದ ಬಗ್ಗೆ ಯಾರೂ ಪ್ರಶ್ನೆ ಮಾಡಲ್ಲ. ಒಂದು ಜೀವ ಸೃಷ್ಟಿ ಆಗಬೇಕು ಅಂದರೆ ಮತ್ತೊಂದು ಜೀವ ಬೇಕು ಅನ್ನೋ ನಿಯಮ ಎಲ್ಲರಿಗೂ ಗೊತ್ತು. ಕೋಟ್ಯಾನು ಕೋಟಿ ವರ್ಷಗಳ ಹಿಂದೆ ಈ ನಿಯಮದ ಅನ್ವಯ ಆಗಿರಲಿಲ್ಲ ಅಂತ ಹೇಳಬಹುದಾ? ನಿರ್ಜೀವ ರಾಸಾಯನಿಕಗಳಿಂದ ಜೀವ ತನ್ನಿಂದ ತಾನೇ ಬರೋಕೆ ಆಗುತ್ತಾ? ಈ ತರ ಆಗೋದಕ್ಕೆ ಸಾಧ್ಯನಾ?

ಸಂಶೋಧಕರ ಪ್ರಕಾರ ಒಂದು ಜೀವಕೋಶ ಬದುಕಬೇಕಾದರೆ ಅದರಲ್ಲಿ ತುಂಬಾ ಪ್ರಾಮುಖ್ಯವಾದ ಮೂರು ಅಣುಗಳು ಒಟ್ಟಿಗೆ ಸೇರಿ ಕೆಲಸ ಮಾಡಬೇಕು. ಅದೇ ಡಿ.ಎನ್‌.ಎ (ಡಿಯಾಕ್ಸಿರೈಬೋನ್ಯುಕ್ಲಿಕ್‌ ಆಸಿಡ್‌-Deoxyribonucleic acid), ಆರ್‌.ಎನ್‌.ಎ (ರೈಬೋನ್ಯುಕ್ಲಿಕ್‌ ಆಸಿಡ್‌-Ribonucleic acid) ಮತ್ತು ಪ್ರೋಟೀನ್‌ಗಳು. ಆದರೆ ಕೆಲವು ವಿಜ್ಞಾನಿಗಳು ಒಂದು ಜೀವಕೋಶ, ನಿರ್ಜೀವ ರಾಸಾಯನಿಕಗಳಿಂದ ಇದ್ದಕ್ಕಿದ್ದಂತೆ ಬಂತು ಅಂತಾರೆ. a

ಸ್ಟ್ಯಾನ್ಲಿ ಮಿಲ್ಲರ್‌, 1953

1953ರಲ್ಲಿ ನಡೆದ ಒಂದು ಸಂಶೋಧನೆಯಿಂದಾಗಿ ಅನೇಕ ವಿಜ್ಞಾನಿಗಳು ಜೀವ ರಾಸಾಯನಿಕ ವಸ್ತುಗಳಿಂದ ಬಂತು ಅಂತ ನಂಬುತ್ತಾರೆ. ಆ ವರ್ಷದಲ್ಲಿ ಸ್ಟಾನ್ಲಿ .ಎಲ್‌. ಮಿಲ್ಲರ್‌ ಅನ್ನೋ ವಿಜ್ಞಾನಿ ಪ್ರೋಟೀನ್‌ ಮಾಡಲಿಕ್ಕೆ ಬೇಕಾಗಿರೋ ಆಮಿನೊ ಆಸಿಡ್‌ ತಯಾರಿಸಿದ. ಹೇಗೆ ಅಂದರೆ, ಕೊಟ್ಯಾನು ಕೋಟಿ ವರ್ಷಗಳ ಹಿಂದೆ ಭೂಮಿಯ ವಾತಾವರಣ ಹೇಗಿತ್ತೋ ಆ ರೀತಿಯ ವಾತಾವರಣ ಸೃಷ್ಟಿಸಿದ. ಆಮೇಲೆ ಅನಿಲಗಳ ಒಂದು ಮಿಶ್ರಣಕ್ಕೆ ಕರೆಂಟ್‌ ಹಾಯಿಸಿ ಆಮಿನೊ ಆಸಿಡ್‌ ತಯಾರಿಸಿದ. ಈ ಆಮಿನೊ ಆಸಿಡ್‌ ಉಲ್ಕೆಗಳಲ್ಲೂ ಇದೆ ಅಂತ ಅವನಿಗೆ ಆಮೇಲೆ ಗೊತ್ತಾಯಿತು. ಇವನು ಮಾಡಿದ ಈ ಸಂಶೋಧನೆಯಿಂದ ಜೀವಕ್ಕೆ ಬೇಕಾದ ಅಂಶಗಳು ತನ್ನಿಂದ ತಾನೇ ಬಂದವು ಅಂತ ಹೇಳೋಕ್ಕಾಗುತ್ತಾ?

ನ್ಯೂಯಾರ್ಕ್‌ ಯುನಿವರ್ಸಿಟಿಯಲ್ಲಿ ರಾಸಾಯನಶಾಸ್ತ್ರ (Chemistry) ಪ್ರೊಫೆಸರ್‌ ಆಗಿ ನಿವೃತ್ತರಾಗಿರುವ ರಾಬರ್ಟ್‌ ಶಾಫಿರೊ ಹೀಗೆ ಹೇಳ್ತಾರೆ: “ಕೆಲವು ಬರಹಗಾರರ ಪ್ರಕಾರ ಜೀವಕ್ಕೆ ಬೇಕಾಗಿರೋ ಎಲ್ಲಾ ಅಂಶಗಳನ್ನ ಮಿಲ್ಲರ್‌ ಮಾಡಿರುವ ಪ್ರಯೋಗಗಳಿಂದ ತುಂಬಾ ಸುಲಭವಾಗಿ ತಯಾರಿಸಬಹುದು. ಯಾಕೆಂದರೆ ಆ ಎಲ್ಲಾ ಅಂಶಗಳು ಉಲ್ಕೆಗಳಲ್ಲೂ ಕಂಡು ಬಂದಿದೆ. ಆದರೆ ಅದು ಹೇಳಿದಷ್ಟು ಸುಲಭ ಅಲ್ಲ.”2 b

ಈಗ ನಾವು ಆರ್‌.ಎನ್‌.ಎ ಅಣು ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ. ಇದು ನ್ಯುಕ್ಲಿಯೊಟೈಡ್‌ ಅಣುಗಳಿಂದ ರಚನೆ ಆಗಿದೆ. ನ್ಯುಕ್ಲಿಯೊಟೈಡ್‌ ಅಣು ಆಮಿನೊ ಆಸಿಡ್‌ಗಿಂತ ಸ್ವಲ್ಪ ಜಟಿಲವಾಗಿದೆ. ಶಾಫಿರೊ ಹೇಳೋದು: “ಯಾವ ಪ್ರಯೋಗಗಳಿಂದಾನೂ ನ್ಯುಕ್ಲಿಯೊಟೈಡ್‌ಗಳನ್ನ ತಯಾರಿಸೋಕೆ ಆಗಲ್ಲ ಅವು ಉಲ್ಕೆಗಳಲ್ಲೂ ಇಲ್ಲ.”3 ಇದಕ್ಕೆ ಸೇರಿಸಿ ರಾಸಾಯನಿಕಗಳು ಕೂಡಿದ ಕೆರೆಯ ತುದಿಯಲ್ಲಿ ಆರ್‌.ಎನ್‌.ಎ ಅಣುಗಳು ಒಂದಕ್ಕೊಂದು ಜೋಡಿಸಿಕೊಂಡು ತನ್ನಿಂದ ತಾನೇ ಉತ್ಪತ್ತಿ ಆಗೋದಕ್ಕೆ ಎಷ್ಟು ಸಾಧ್ಯತೆ ಇದೇ ಅಂದರೆ “ಇಡೀ ವಿಶ್ವದಲ್ಲಿ ಒಂದೇ ಒಂದು ಸಲ ಆದರೂ ಅದು ಅದೃಷ್ಟಾನೇ” ಅಂತ ಶಾಫಿರೊ ಹೇಳುತ್ತಾರೆ.4

ಆರ್‌.ಎನ್‌.ಎ ಸೃಷ್ಟಿ ಆಗಬೇಕು ಅಂದರೆ (1) ಪ್ರೋಟೀನ್‌ ಬೇಕು, ಅದೇ ತರ, (2) ಪ್ರೋಟೀನ್‌ ಇದ್ರೆನೇ ಆರ್‌.ಎನ್‌.ಎ ಸೃಷ್ಟಿ ಆಗೋದು. ಹಾಗಿರುವಾಗ ಇವೆರಡೂ ಇದ್ದಕ್ಕಿದ್ದಂತೆ ಬರೋಕೆ ಸಾಧ್ಯಾನಾ? (3) ರೈಬೋಸೋಮ್‌ ಬಗ್ಗೆ ಭಾಗ 2ರಲ್ಲಿ ಚರ್ಚೆ ಮಾಡೋಣ.

ಹಾಗಾದರೆ ಪ್ರೋಟೀನ್‌ ಅಣುಗಳು ಹೇಗೆ ರಚನೆ ಆಗುತ್ತೆ? 50ರಿಂದ ಹಿಡಿದು ಸಾವಿರಾರು ಆಮಿನೊ ಆಸಿಡ್‌ಗಳು ಒಂದು ನಿರ್ದಿಷ್ಟ ಕ್ರಮದಲ್ಲಿ ಜೋಡಣೆ ಆದರೆ ಮಾತ್ರ ಪ್ರೋಟೀನ್‌ಗಳ ರಚನೆ ಆಗುತ್ತೆ. ಒಂದು “ಸರಳವಾದ” ಜೀವಕೋಶದ ಪ್ರೋಟೀನ್‌ನಲ್ಲಿ ಸುಮಾರು 200 ಆಮಿನೊ ಆಸಿಡ್‌ಗಳು ಮತ್ತು ಸಾವಿರಾರು ಬೇರೆಬೇರೆ ಪ್ರೋಟೀನ್‌ಗಳು ಇರುತ್ತವೆ. 100 ಆಮಿನೊ ಆಸಿಡ್‌ಗಳು ಇರುವ ಒಂದು ಪ್ರೋಟೀನ್‌ ಇದ್ದಕ್ಕಿದ್ದಂತೆ ಉತ್ಪತ್ತಿ ಆಗಲ್ಲ, ಒಂದುವೇಳೆ ಆದರೂ ಲಕ್ಷಾಂತರ ಕೋಟ್ಯಾಂತರ ವರ್ಷಗಳಲ್ಲಿ ಒಂದು ಸಲ ಆಗಬಹುದು.

ಜಟಿಲವಾದ ಅಣುಗಳನ್ನ ಲ್ಯಾಬ್‌ಗಳಲ್ಲಿ ಸೃಷ್ಟಿ ಮಾಡೋಕೆ ಒಬ್ಬ ವಿಜ್ಞಾನಿಯ ಪ್ರಯತ್ನ ಇರುತ್ತೆ. ಹಾಗಿರುವಾಗ ಒಂದು ಜೀವಕೋಶ ಇದ್ದಕ್ಕಿದ್ದಂತೆ ಬರೋಕೆ ಆಗುತ್ತಾ?

ವಿಕಾಸವಾದವನ್ನ ಬೆಂಬಲಿಸೋ ಸಂಶೋಧಕ ಹರ್ಬಟ್‌ ಪಿ. ಯೋಕಿ ಹೇಳೋದು: “ಪ್ರೋಟೀನ್‌ ಮೊದಲು ಸೃಷ್ಟಿಯಾಗಿ ಅದರಿಂದ ಜೀವ ಬರಲಿಕ್ಕೆ ಸಾಧ್ಯಾನೇ ಇಲ್ಲ.”5 ಯಾಕೆಂದರೆ ಪ್ರೋಟೀನ್‌ ನಿರ್ಮಾಣ ಆಗೋದಕ್ಕೆ ಆರ್‌.ಎನ್‌.ಎ ಬೇಕು ಮತ್ತು ಪ್ರೋಟೀನ್‌ ಇದ್ರೆನೇ ಆರ್‌.ಎನ್‌.ಎ ಉತ್ಪತ್ತಿ ಆಗೋದು. ಪ್ರೋಟೀನ್‌ ಮತ್ತು ಆರ್‌.ಎನ್‌.ಎ ಒಂದೇ ಜಾಗದಲ್ಲಿ ಒಂದೇ ಸಮಯದಲ್ಲಿ ಉತ್ಪತ್ತಿ ಆಯಿತು ಅಂತನೇ ಇಟ್ಟುಕೊಳ್ಳಿ, ಅವೆರಡೂ ಸೇರಿ ಒಟ್ಟಿಗೆ ಕೆಲಸ ಮಾಡಿ ತನ್ನ ಹಾಗೇ ಇರೋ ಅಣುಗಳನ್ನ ಸೃಷ್ಟಿ ಮಾಡ್ತಾ ಅದೇ ಸಮಯದಲ್ಲಿ ಒಂದು ಜೀವ ಉಳಿಯೋಕೆ ಏನೆಲ್ಲಾ ಬೇಕೊ ಆ ಎಲ್ಲಾ ಅಂಶಗಳನ್ನ ಪೂರೈಸಲು ಆಗುತ್ತಾ? ಈ ವಿಷಯದ ಬಗ್ಗೆ ನ್ಯಾಷನಲ್‌ ಎರೊನಾಟಿಕ್ಸ್‌ ಮತ್ತು ಸ್ಪೇಸ್‌ ಅಡಮಿನಸ್ಟ್ರೇಷನ್‌ ಆಸ್ಟ್ರೋ ಬಯೋಲಾಜಿ ಇನಸ್ಟಿಟ್ಯುಟ್‌ನ (National Aeronautics and Space Administration’s Astrobiology Institute) ಸದಸ್ಯರಾದ ಡಾಕ್ಟರ್‌ ಕ್ಯಾರಲ್‌ ಕ್ಲಿಲೆಂಡ್‌ c ಹೇಳೋದು: “ಈ ರೀತಿ ಆಗೋ ಸಾಧ್ಯತೆ ತುಂಬಾ ಕಡಿಮೆ. ಅನೇಕ ಸಂಶೋಧಕರ ಊಹೆ ಏನೆಂದರೆ, ಪ್ರೋಟೀನ್‌ ಮತ್ತು ಆರ್‌.ಎನ್‌.ಎ ತನ್ನಷ್ಟಕ್ಕೆ ತಾನೇ ಸೃಷ್ಟಿ ಆಗುತ್ತೆ ಅಂದ ಮೇಲೆ ಅವುಗಳಿಗೆ ತಮ್ಮನ್ನ ತಾವೇ ನೋಡಿಕೊಳ್ಳೋಕ್ಕೂ ಆಗುತ್ತೆ. ಆದರೆ ಜೀವ ಇದ್ದಕ್ಕಿದ್ದಂತೆ ಬಂತು ಅಂತ ಹೇಳುತ್ತಿರೋ ಯಾವ ಸಿದ್ಧಾಂತವೂ ಇದು ಹೇಗೆ ಆಗುತ್ತೆ ಅನ್ನೋದಕ್ಕೆ ತೃಪ್ತಿಕರ ಉತ್ತರ ಕೊಟ್ಟಿಲ್ಲ.”6

ಜೀವ ಇಲ್ಲದೇ ಇರೋ ರೋಬೋಟನ್ನ ಸೃಷ್ಟಿ ಮಾಡಿ ಅದನ್ನ ಪ್ರೋಗ್ರಾಮ್‌ ಮಾಡೋಕೆ ಒಬ್ಬ ಬುದ್ಧಿಶಾಲಿ ವ್ಯಕ್ತಿ ಬೇಕೇ ಬೇಕು. ಹಾಗಿರುವಾಗ ಜೀವ ಇರೋ ಒಂದು ಜೀವಕೋಶ ತನ್ನಿಂದ ತಾನೇ ಬಂದುಬಿಡುತ್ತಾ? ಒಂದು ಜೀವಕೋಶನೇ ಬರೋಕಾಗಲ್ಲ ಅಂದಮೇಲೆ ಇನ್ನೂ ಇಡೀ ಮನುಷ್ಯ ಇದ್ದಕ್ಕಿದ್ದಂತೆ ಬಂದು ಬಿಡೋಕೆ ಸಾಧ್ಯನಾ?

ಇದನ್ನ ತಿಳಿದುಕೊಳ್ಳೋದು ಯಾಕೆ ಪ್ರಾಮುಖ್ಯ? ಜೀವ ಇದ್ದಕ್ಕಿದ್ದಂತೆ ಬಂತು ಅಂತ ಹೇಳುವ ಸಂಶೋಧಕರ ಕೆಲವು ಸವಾಲುಗಳ ಬಗ್ಗೆ ನೋಡೋಣ. ಅವರು ತಮ್ಮ ಲ್ಯಾಬ್‌ಗಳಲ್ಲಿ ಜೀವಕೋಶದ ಒಳಗಿರುವ ಕೆಲವು ಆಮಿನೊ ಆಸಿಡ್‌ಗಳನ್ನ ಕಂಡುಹಿಡಿದಿದ್ದಾರೆ. ಈ ಜಟಿಲವಾದ ಅಣುಗಳನ್ನ ಹುಷಾರಾಗಿ, ಗಮನಕೊಟ್ಟು ತಯಾರಿಸಿದ್ದಾರೆ. ಈ “ಸರಳವಾದ” ಜೀವಕೋಶವನ್ನ ಸೃಷ್ಟಿ ಮಾಡೋಕೆ ಅವರು ಇಷ್ಟೆಲ್ಲಾ ಕಷ್ಟಪಟ್ಟಿದ್ದಾರೆ. ಇದನ್ನ ಯಾವುದಕ್ಕೆ ಹೋಲಿಸಬಹುದು ಅಂದರೆ, ಒಬ್ಬ ವಿಜ್ಞಾನಿ ಪಕೃತಿಯಲ್ಲಿ ಸಿಗುವಂಥ ನೈಸರ್ಗಿಕ ವಸ್ತುಗಳನ್ನ ತಗೊಂಡು ಅವನ್ನ ಸ್ಟೀಲ್‌, ಪ್ಲಾಸ್ಟಿಕ್‌, ಸಿಲಿಕಾನ್‌ ಮತ್ತು ವಯರ್‌ಗಳಾಗಿ ಪರಿವರ್ತಿಸುವುದಕ್ಕೆ ಹೋಲಿಸಬಹುದು. ಆಮೇಲೆ ಅದರಿಂದ ಒಂದು ರೋಬೋಟ್‌ ತಯಾರಿಸ್ತಾನೆ. ಇದರ ಒಳಗೆ ತನ್ನ ಹಾಗೇ ಇರುವ ಬೇರೆ ರೋಬೋಟ್‌ ತಯಾರಿಮಾಡುವ ಪ್ರೋಗ್ರಾಮ್‌ ಹಾಕ್ತಾನೆ. ಹೀಗೆ ಮಾಡೋದರಿಂದ ಅವನು ಏನು ಸಾಧಿಸಿದ? ಈ ಅದ್ಭುತ ರೋಬೋಟ್‌ನ ಹಿಂದೆ ಒಬ್ಬ ಬುದ್ಧಿವಂತನ ಕೈಕೆಲಸ ಇದೆ ಅಂತ ರುಜುಪಡಿಸಿದ.

ಇದೇ ರೀತಿ ವಿಜ್ಞಾನಿಗಳು ಒಂದು ಜೀವಕೋಶವನ್ನ ತಯಾರಿಸಿದರು ಅಂತ ಇಟ್ಟುಕೊಳ್ಳಿ. ಅದು ನಿಜವಾಗಿಯೂ ಅದ್ಭುತವೇ ಆಗಿರುತ್ತೆ. ಈ ಜೀವಕೋಶ ಇದ್ದಕ್ಕಿದ್ದಂತೆ ಬಂತು ಅಂತ ಅವರು ಹೇಳಿದರೆ ನಂಬಕ್ಕಾಗುತ್ತಾ? ಖಂಡಿತ ಇಲ್ಲ. ಒಂದು ಜೀವಕೋಶ ಸೃಷ್ಟಿ ಆಗಬೇಕೆಂದರೆ ಒಬ್ಬ ಬುದ್ಧಿವಂತ ಇರಲೇಬೇಕು ಅಂತ ಅವರು ಸಾಬೀತುಪಡಿಸ್ತಾರೆ.

ನಿಮಗೇನನಿಸುತ್ತೆ? ಇಲ್ಲಿ ವರೆಗೂ ಎಲ್ಲಾ ವಿಜ್ಞಾನಿಗಳು ಕೊಟ್ಟಿರೋ ಆಧಾರ ನೋಡಿದರೆ, ಒಂದು ಜೀವದಿಂದಲೇ ಇನ್ನೊಂದು ಜೀವ ಬರಕ್ಕಾಗುತ್ತೆ ಅಂತ ನಾವು ತಿಳಿದುಕೊಳ್ಳಬಹುದು. ಇಷ್ಟೆಲ್ಲಾ ಆಧಾರಗಳು ಇರುವಾಗ, ಒಂದು “ಸರಳವಾದ” ಜೀವಕೋಶ ಇದ್ದಕ್ಕಿದ್ದಂತೆ, ಜೀವ ಇಲ್ಲದಿರುವ ರಾಸಾಯನಿಕ ವಸ್ತುಗಳಿಂದ ಬಂತು ಅಂತ ಹೇಳಿದರೆ ನಂಬೋಕೆ ತುಂಬ ಕಷ್ಟ ಆಗುತ್ತೆ.

ಈ ಎಲ್ಲಾ ಸತ್ಯಗಳನ್ನು ತಿಳಿದುಕೊಂಡ ಮೇಲೆ ಜೀವ ತನ್ನಿಂದ ತಾನೇ ಬಂತು ಅಂದರೆ ನೀವು ನಂಬುತ್ತೀರಾ? ಈ ಪ್ರಶ್ನೆಗೆ ಉತ್ತರ ತಿಳಿಯುವುದಕ್ಕೆ ಮುಂಚೆ ಒಂದು ಜೀವಕೋಶದ ರಚನೆ ಹೇಗೆ ಆಗುತ್ತೆ ಅನ್ನೋದರ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಬೇಕು. ಇದನ್ನ ತಿಳಿದುಕೊಂಡರೆ ಜೀವ ಹೇಗೆ ಬಂತು ಅಂತ ವಿಜ್ಞಾನಿಗಳು ಹೇಳೋ ಸಿದ್ಧಾಂತಗಳು ಸರಿನಾ ಅಥವಾ ಮಕ್ಕಳು ಅಪ್ಪ ಅಮ್ಮ ಹತ್ರ ನಾವು ಹೇಗೆ ಬಂದ್ವಿ ಅಂತ ಕೇಳಿದಾಗ ಅವರು ಹೇಳೋ ಕಥೆ ತರನೇ ವಿಜ್ಞಾನಿಗಳು ಹೇಳೋದು ಕಟ್ಟುಕಥೆನಾ ಅಂತ ಗೊತ್ತಾಗುತ್ತೆ.

a ಡಿ.ಎನ್‌.ಎ ಇದ್ದಕ್ಕಿದ್ದಂತೆ ಬರೋಕೆ ಸಾಧ್ಯನಾ? ಇದರ ಬಗ್ಗೆ ಭಾಗ 3ರಲ್ಲಿ ನಾವು ನೋಡೋಣ. ಅದರ ವಿಷಯ, “ನಿರ್ದೇಶನಗಳು ಎಲ್ಲಿಂದ ಬರುತ್ತವೆ?

b ಪ್ರೊಫೆಸರ್‌ ಶಾಫಿರೊ ಜೀವ ಸೃಷ್ಟಿ ಆಯ್ತು ಅಂತ ನಂಬಲ್ಲ. ಜೀವ ಇದ್ದಕ್ಕಿದ್ದಂತೆ ಬಂತು ಆದರೆ ಅದು ಹೇಗೆ ಅನ್ನೋದನ್ನ ಮಾತ್ರ ಅರ್ಥ ಮಾಡಿಕೊಳ್ಳಕಾಗಲ್ಲ ಅಂತ ಅವರು ಹೇಳುತ್ತಾರೆ. 2009ರಲ್ಲಿ ಇಂಗ್ಲೆಂಡ್‌ನ ಯುನಿವರ್ಸಿಟಿ ಆಫ್‌ ಮ್ಯಾನ್‌ಚೇಸ್ಟರ್‌ನ (University of Manchester) ವಿಜ್ಞಾನಿಗಳು ಡಿ.ಎನ್‌.ಎಯ ಮೂಲ ಅಂಶವಾದ ನ್ಯುಕ್ಲಿಯೊಟೈಡ್‌ಗಳನ್ನ (Nucleotides) ತಮ್ಮ ಲ್ಯಾಬ್‌ನಲ್ಲೇ ತಯಾರಿಸಿದರು. ಇದರ ಬಗ್ಗೆ ಶಾಫಿರೊ ಹೇಳೋದು, “ನನ್ನ ಪ್ರಕಾರ” ವಿಜ್ಞಾನಿಗಳ ಪ್ರಯೋಗದಿಂದ “ಆರ್‌.ಎನ್‌.ಎಯನ್ನ ತಯಾರಿಸೋಕೆ ಸಾಧ್ಯ ಅಂತ ನಾನು ನಂಬಲ್ಲ.”

c ಡಾಕ್ಟರ್‌ ಕ್ಲಿಲೆಂಡ್‌ ಸೃಷ್ಟಿಯನ್ನ ನಂಬಲ್ಲ. ಜೀವ ಇದ್ದಕ್ಕಿದ್ದಂತೆ ಬಂತು ಆದರೆ ಅದು ಹೇಗೆ ಬಂತು ಅನ್ನೋದು ಅರ್ಥ ಆಗದೆ ಇರೋ ವಿಷಯ ಅಂತ ಹೇಳುತ್ತಾರೆ.