ಇಷ್ಟೊಂದು ಕಷ್ಟಾನುಭವ ಮತ್ತು ಅನ್ಯಾಯವೇಕೆ?
ಭಾಗ 6
ಇಷ್ಟೊಂದು ಕಷ್ಟಾನುಭವ ಮತ್ತು ಅನ್ಯಾಯವೇಕೆ?
1, 2. ಮಾನವ ಅನುಭವದ ದೃಷ್ಟಿಯಲ್ಲಿ, ಯಾವ ಪ್ರಶ್ನೆಗಳು ಕೇಳಲ್ಪಡಬಹುದು?
1 ಆದರೂ, ಪರಿಪೂರ್ಣರಾದ ಜನರು ಪ್ರಮೋದವನದ ಪರಿಸ್ಥಿತಿಗಳ ಮಧ್ಯೆ ಭೂಮಿಯಲ್ಲಿ ಶಾಶ್ವತವಾಗಿ ಜೀವಿಸಬೇಕೆಂದು ಪರಮಾತ್ಮನು ಉದ್ದೇಶಿಸಿದ್ದರೆ ಮತ್ತು ಅದು ಇನ್ನೂ ಆತನ ಉದ್ದೇಶವಾಗಿದ್ದರೆ, ಈಗ ಏಕೆ ಆ ಪ್ರಮೋದವನವಿಲ್ಲ? ಬದಲಿಗೆ, ಮಾನವಕುಲವು ಅನೇಕ ಶತಮಾನಗಳ ಕಷ್ಟಾನುಭವ ಮತ್ತು ಅನ್ಯಾಯವನ್ನು ಏಕೆ ಅನುಭವಿಸಿದೆ?
2 ಮಾನವ ಇತಿಹಾಸವು ಯುದ್ಧದ ಕಾರಣದಿಂದ ಕ್ಲೇಶ, ಸಾಮ್ರಾಜ್ಯ ಶಾಹಿ ಗೆಲವು, ಸ್ವಪ್ರಯೋಜನ, ಅನ್ಯಾಯ, ದಾರಿದ್ರ್ಯ, ವಿಪತ್ತು, ರೋಗ ಮತ್ತು ಮರಣದಿಂದ ತುಂಬಿದೆಯೆಂಬುದು ನಿಸ್ಸಂದೇಹ. ನಿರ್ದೋಷಿಗಳಾದ ಎಷ್ಟೋ ಬಲಿಪಶುಗಳಿಗೆ ಅಷ್ಟೊಂದು ಕೆಟ್ಟ ಸಂಗತಿಗಳು ಏಕೆ ಸಂಭವಿಸಿವೆ? ದೇವರು ಸರ್ವಶಕ್ತಿಯುಳ್ಳವನಾಗಿದ್ದರೆ, ಈ ಭಾರಿ ಮೊತ್ತದ ಕಷ್ಟಾನುಭವವನ್ನು ಆತನು ಸಾವಿರಾರು ವರ್ಷಗಳ ತನಕ ಏಕೆ ಅನುಮತಿಸಿದ್ದಾನೆ? ದೇವರು ವಿಶ್ವವನ್ನು ಅಷ್ಟು ಉತ್ತಮವಾಗಿ ವಿನ್ಯಾಸಿಸಿ, ಕ್ರಮಗೊಳಿಸಿರುವಾಗ, ಭೂಮಿಯಲ್ಲಿ ಅವ್ಯವಸ್ಥೆ ಮತ್ತು ನಾಶನವನ್ನು ಆತನೇಕೆ ಬಿಡುವನು?
ಒಂದು ದೃಷ್ಟಾಂತ
3-5 (ಎ) ವ್ಯವಸ್ಥೆಯ ಒಬ್ಬ ದೇವರು ಭೂಮಿಯಲ್ಲಿ ಅವ್ಯವಸ್ಥೆಯನ್ನು ಏಕೆ ಅನುಮತಿಸಿಯಾನು ಎಂಬುದನ್ನು ಗ್ರಹಿಸಲು ಯಾವ ದೃಷ್ಟಾಂತವು ಸಹಾಯ ಮಾಡಸಾಧ್ಯವಿದೆ? (ಬಿ) ಅನೇಕ ಅನ್ಯಮಾರ್ಗಗಳಲ್ಲಿ ಯಾವುದು ಭೂಮಿಯ ಕುರಿತಾದ ಸನ್ನಿವೇಶವನ್ನು ಹೋಲುತ್ತದೆ?
3 ವ್ಯವಸ್ಥೆಯ ಒಬ್ಬ ದೇವರು ಭೂಮಿಯಲ್ಲಿ ಅವ್ಯವಸ್ಥೆಯನ್ನು ಏಕೆ ಅನುಮತಿಸುವನೆಂಬುದನ್ನು ಚಿತ್ರಿಸಲು ನಾವು ಒಂದು ದೃಷ್ಟಾಂತವನ್ನು ಉಪಯೋಗಿಸೋಣ. ನೀವು ಒಂದು ಕಾಡಿನೊಳಗೆ ನಡೆದಾಗ ಅಲ್ಲಿ ಒಂದು ಮನೆ ಕಾಣಸಿಗುತ್ತದೆಂದು ದಯೆಯಿಟ್ಟು ಭಾವಿಸಿರಿ. ನೀವು ಮನೆಯನ್ನು ಪರೀಕ್ಷಿಸುವಾಗ, ಅದು ಅವ್ಯವಸ್ಥಿತವಾಗಿದೆ ಎಂದು ನೋಡುತ್ತೀರಿ. ಕಿಟಿಕಿಗಳು ಮುರಿದಿವೆ, ಚಾವಣಿಗೆ ಗುರುತರವಾಗಿ ಹಾನಿಯಾಗಿದೆ, ಮರದ ದ್ವಾರಮಂಟಪದಲ್ಲಿ ತುಂಬ ತೂತುಗಳಿವೆ, ಬಾಗಿಲು ಒಂದು ಕೀಲಿನಲ್ಲಿ ತೂಗಾಡುತ್ತಿದೆ, ಮತ್ತು ನಳ್ಳಿಗಳು ಕೆಲಸ ಮಾಡುವುದಿಲ್ಲ.
4 ಈ ಎಲ್ಲ ನ್ಯೂನತೆಗಳು ತೋರಿಬರುವಾಗ, ಆ ಮನೆಯನ್ನು ಯಾವ ಬುದ್ಧಿಶಕ್ತಿಯ ವಿನ್ಯಾಸಕಾರನೂ ವಿನ್ಯಾಸಿಸಿರಲಿಕ್ಕಿಲ್ಲವೆಂದು ನೀವು ತೀರ್ಮಾನಿಸುವಿರೊ? ಆ ಅವ್ಯವಸ್ಥೆಯು, ಒಂದು ಆಕಸ್ಮಿಕ
ಘಟನೆಯು ಮಾತ್ರ ಆ ಮನೆಯನ್ನು ಉತ್ಪನ್ನಮಾಡಸಾಧ್ಯವಿತ್ತೆಂದು ನೀವು ದೃಢವಾಗಿ ನಂಬುವಂತೆ ಮಾಡುವುದೊ? ಅಥವಾ, ಯಾವನೋ ಒಬ್ಬನು ಅದನ್ನು ವಿನ್ಯಾಸಿಸಿದನು ಮತ್ತು ಕಟ್ಟಿದನು ಎಂದು ನೀವು ತೀರ್ಮಾನಿಸಿದರೆ, ಆ ವ್ಯಕ್ತಿ ನುರಿತವನೂ ವಿಚಾರಪರನೂ ಅಲ್ಲವೆಂದು ನಿಮಗನಿಸುವುದೊ?5 ನೀವು ಆ ಕಟ್ಟಡವನ್ನು ಹೆಚ್ಚು ಸಮಗ್ರವಾಗಿ ಪರೀಕ್ಷಿಸುವಾಗ, ಅದನ್ನು ಆದಿಯಲ್ಲಿ ಉತ್ತಮವಾಗಿ ಜೋಡಿಸಲಾಗಿತ್ತು ಮತ್ತು ಅದು ಬಹಳ ವಿಚಾರಪರ ಚಿಂತನೆಯ ರುಜುವಾತನ್ನು ಕೊಡುತ್ತದೆ ಎಂದು ನೋಡುತ್ತೀರಿ. ಆದರೆ ಈಗ ಅದು ಕೇವಲ ನಾದುರಸ್ತಾಗಿದ್ದು ಧ್ವಂಸವಾಗುವ ದಾರಿಯಲ್ಲಿದೆ. ಅದರ ನ್ಯೂನತೆಗಳೂ ಸಮಸ್ಯೆಗಳೂ ಏನು ಸೂಚಿಸಬಲ್ಲವು? ಏನಂದರೆ, (1) ಒಡೆಯನು ಸತ್ತನು; (2) ಅವನು ಸಮರ್ಥ ಕಟ್ಟುವವನಾದರೂ ಅವನಿಗೆ ಆ ಮನೆಯಲ್ಲಿ ಇನ್ನು ಮುಂದೆ ಆಸಕ್ತಿಯಿಲ್ಲ; ಅಥವಾ (3) ಅವನು ತನ್ನ ಸ್ವತ್ತನ್ನು ಗಣ್ಯಮಾಡದಿದ್ದ ಬಾಡಿಗೆದಾರರಿಗೆ ತಾತ್ಕಾಲಿಕವಾಗಿ ಗೇಣಿಗೆ ಕೊಟ್ಟನು. ಈ ಕೊನೆಯ ಸಂಗತಿಯು ಈ ಭೂಮಿಯ ಸನ್ನಿವೇಶಕ್ಕೆ ಸದೃಶವಾಗಿದೆ.
ತಪ್ಪಾದದ್ದೇನು
6, 7. ದೇವರ ನಿಯಮವನ್ನು ಮುರಿದಾಗ ಆದಾಮ ಮತ್ತು ಹವ್ವಳಿಗೆ ಏನು ಸಂಭವಿಸಿತು?
6 ಬೈಬಲಿನ ಆದಿ ದಾಖಲೆಯಿಂದ, ಜನರು ಕಷ್ಟಾನುಭವಿಸುವುದು ಅಥವಾ ಸಾಯುವುದು ದೇವರ ಉದ್ದೇಶವಾಗಿರಲ್ಲಿಲವೆಂದು ನಾವು ತಿಳಿಯುತ್ತೇವೆ. ನಮ್ಮ ಪ್ರಥಮ ಹೆತ್ತವರಾದ ಆದಾಮ ಮತ್ತು ಹವ್ವ, ದೇವರಿಗೆ ಅವಿಧೇಯತೆ ತೋರಿಸಿದ ಕಾರಣದಿಂದ ಮಾತ್ರ ಸತ್ತರು. (ಆದಿಕಾಂಡ 2 ಮತ್ತು 3 ನೆಯ ಅಧ್ಯಾಯಗಳು) ಅವಿಧೇಯರಾದಾಗ, ಅವರು ಹಿಂದಿನಂತೆ ದೇವರ ಚಿತ್ತವನ್ನು ಮಾಡಲ್ಲಿಲ. ಅವರು ದೇವರ ಪರಾಮರಿಕೆಯಿಂದ ತಮ್ಮನ್ನು ಹಿಂತೆಗೆದುಕೊಂಡರು. ಕಾರ್ಯತಃ, ಅವರು “ಜೀವದ ಬುಗ್ಗೆ” ಯಾದ ದೇವರಿಂದ ತಮ್ಮ ಸಂಬಂಧವನ್ನು ಕಳಚಿಕೊಂಡರು.—ಕೀರ್ತನೆ 36:9.
7 ಶಕ್ತಿಯ ಮೂಲದಿಂದ ಸಂಬಂಧ ತಪ್ಪಿಸಿದಾಗ ಒಂದು ಯಂತ್ರವು ಹೇಗೆ ನಿಧಾನಿಸುತ್ತಾ ನಿಲ್ಲುತ್ತದೋ ಹಾಗೆಯೇ ಅವರ ಶರೀರಗಳು ಮತ್ತು ಮನಸ್ಸುಗಳು ಅವನತಿ ಹೊಂದಿದವು. ಇದರ ಫಲವಾಗಿ ಆದಾಮ ಮತ್ತು ಹವ್ವ ಕ್ಷಯಿಸುತ್ತಾ, ವೃದ್ಧರಾಗಿ ಬೆಳೆಯುತ್ತಾ, ಅಂತಿಮವಾಗಿ ಸತ್ತರು. ಆಗ ಏನಾಯಿತು? ಅವರು ಎಲ್ಲಿಂದ ಬಂದಿದ್ದರೋ ಅಲ್ಲಿಗೆ ಅವರು ಹಿಂದಿರುಗಿದರು: “ನೀನು ಮಣ್ಣೇ; ಪುನಃ ಮಣ್ಣಿಗೆ ಸೇರತಕ್ಕವನಾಗಿದ್ದೀ.” ತನ್ನ ನಿಯಮಗಳಿಗೆ ಅವಿಧೇಯತೆಯ ಪರಿಣಾಮವು ಮರಣವೆಂದು ದೇವರು ಅವರನ್ನು ಎಚ್ಚರಿಸಿದ್ದನು: “ಸತ್ತೇ ಹೋಗುವಿ.”—ಆದಿಕಾಂಡ 2:17; 3:19.
8. ನಮ್ಮ ಪ್ರಥಮ ಹೆತ್ತವರ ಪಾಪವು ಮಾನವ ಕುಟುಂಬವನ್ನು ಹೇಗೆ ಬಾಧಿಸಿತು?
8 ನಮ್ಮ ಪ್ರಥಮ ಹೆತ್ತವರು ಮಾತ್ರವಲ್ಲ, ಅವರ ಸಂತಾನವೆಲ್ಲ, ಇಡೀ ಮಾನವಕುಲವು ಸಹ ಮರಣಕ್ಕೆ ಅಧೀನವಾಯಿತು. ಏಕೆ? ಏಕೆಂದರೆ ತಳಿಶಾಸ್ತ್ರ ನಿಯಮಗಳಿಗನುಸಾರ, ಮಕ್ಕಳು ತಮ್ಮ ಹೆತ್ತವರ ವೈಲಕ್ಷಣ್ಯಗಳನ್ನು ವಂಶಾನುಕ್ರಮವಾಗಿ ಪಡೆಯುತ್ತಾರೆ. ಮತ್ತು ನಮ್ಮ ಪ್ರಥಮ ಹೆತ್ತವರ ಸಕಲ ಮಕ್ಕಳೂ ವಂಶಾನುಕ್ರಮವಾಗಿ ಪಡೆದಿರುವುದು ಅಪೂರ್ಣತೆ ಮತ್ತು ಮರಣವನ್ನೇ. ರೋಮಾಪುರ 5:12 ನಮಗೆ ಹೇಳುವುದು: “ಒಬ್ಬ ಮನುಷ್ಯ [ಮಾನವಕುಲದ ಪಿತೃವಾದ ಆದಾಮ] ನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು; ಎಲ್ಲರು ಪಾಪ ಮಾಡಿದ್ದರಿಂದ [ವಂಶಾನುಕ್ರಮವಾಗಿ ಬಂದ ಅಪೂರ್ಣತೆ, ಅಂದರೆ ಪಾಪ ಪ್ರವೃತ್ತಿಯ ಮೂಲಕ] ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು.” ಮತ್ತು ಪಾಪ, ಅಪೂರ್ಣತೆ ಮತ್ತು ಮರಣಗಳನ್ನೇ ಜನರು ತಿಳಿದಿರುವುದರಿಂದ, ಕೆಲವರು ಅವನ್ನು ಪ್ರಾಕೃತಿಕವೆಂದೂ ಅನಿವಾರ್ಯವೆಂದೂ ವೀಕ್ಷಿಸುತ್ತಾರೆ. ಆದರೂ, ಆದಿ ಮಾನವರು ಶಾಶ್ವತವಾಗಿ ಬದುಕುವ ಸಾಮರ್ಥ್ಯವೂ ಬಯಕೆಯೂ ಉಳ್ಳವರಾಗಿ ಸೃಷ್ಟಿಸಲ್ಪಟ್ಟಿದ್ದರು. ಮರಣವು ತಮ್ಮ ಜೀವವನ್ನು ಮುಗಿಸುತ್ತದೆಂಬ ಪ್ರತೀಕ್ಷೆ ಅಧಿಕಾಂಶ ಜನರಿಗೆ ಹತಾಶೆಯನ್ನು ತರುವುದು ಈ ಕಾರಣದಿಂದಲೇ.
ಇಷ್ಟು ದೀರ್ಘಕಾಲವೇಕೆ?
9. ಕಷ್ಟಾನುಭವವು ಇಷ್ಟು ದೀರ್ಘಕಾಲ ಮುಂದುವರಿಯಲು ದೇವರು ಏಕೆ ಬಿಟ್ಟಿದ್ದಾನೆ?
9 ಮನುಷ್ಯರು ತಮ್ಮ ಸ್ವತಂತ್ರ ಮಾರ್ಗವನ್ನು ಅನುಸರಿಸುವಂತೆ ದೇವರು ಇಷ್ಟು ದೀರ್ಘಕಾಲ ಬಿಟ್ಟಿರುವುದೇಕೆ? ಈ ಅನೇಕ ಶತಮಾನಗಳಲ್ಲಿ ಕಷ್ಟಾನುಭವವು ಅಸ್ತಿತ್ವದಲ್ಲಿರುವಂತೆ ಆತನು ಏಕೆ ಅನುಮತಿಸಿದ್ದಾನೆ? ಒಂದು ಅತಿ ಪ್ರಾಮುಖ್ಯವಾದ ವಿವಾದಾಂಶವು ಎತ್ತಲ್ಪಟ್ಟದ್ದೇ ಇದಕ್ಕಿದ್ದ ಒಂದು ಮಹತ್ವದ ಕಾರಣವಾಗಿತ್ತು: ಆಳುವ ಹಕ್ಕು ಯಾರಿಗಿದೆ? ದೇವರು ಮಾನವರನ್ನು ಆಳಬೇಕೊ, ಅಥವಾ ಅವರು ಆತನನ್ನು ಬಿಟ್ಟು ತಾವೇ ತಮ್ಮನ್ನು ಯಶಸ್ವಿಯಾಗಿ ಆಳಿಕೊಳ್ಳಶಕ್ತರೊ?
10. ಮಾನವರಿಗೆ ಯಾವ ಸಾಮರ್ಥ್ಯವನ್ನು ಕೊಡಲಾಗಿತ್ತು, ಯಾವ ಜವಾಬ್ದಾರಿಯೊಂದಿಗೆ?
10 ಮಾನವರು ಇಚ್ಫಾ ಸ್ವಾತಂತ್ರ್ಯವುಳ್ಳವರಾಗಿ, ಅಂದರೆ, ಆಯ್ದುಕೊಳ್ಳುವ ಸಾಮರ್ಥ್ಯವುಳ್ಳವರಾಗಿ ಸೃಷ್ಟಿಸಲ್ಪಟ್ಟರು. ಅವರು ಯಂತ್ರ ಮಾನವರಂತಾಗಲಿ ಪ್ರಧಾನವಾಗಿ ಸಹಜ ಪ್ರವೃತ್ತಿಯಿಂದ ನಡೆಸಲ್ಪಡುವ ಪ್ರಾಣಿಗಳಂತಾಗಲಿ ಸೃಷ್ಟಿಸಲ್ಪಡಲ್ಲಿಲ. ಹೀಗೆ, ತಾವು ಯಾರನ್ನು ಸೇವಿಸುವೆವೆಂದು ಮಾನವರು ಆಯ್ದುಕೊಳ್ಳಬಲ್ಲರು. (ಧರ್ಮೋಪದೇಶಕಾಂಡ 30:19; 2 ಕೊರಿಂಥ 3:17) ಆದುದರಿಂದ, ದೇವರ ವಾಕ್ಯ ಬುದ್ಧಿ ನೀಡುವುದು: “ಸ್ವತಂತ್ರರಂತೆ ನಡೆದುಕೊಳ್ಳಿರಿ; ಆದರೆ ಕೆಟ್ಟತನವನ್ನು ಮರೆಮಾಜುವದಕ್ಕೆ ನಿಮ್ಮ ಸ್ವಾತಂತ್ರ್ಯವನ್ನು ಉಪಯೋಗಿಸಬೇಡಿರಿ; ನೀವು ದೇವರ ದಾಸರಾಗಿದ್ದೀರಲ್ಲಾ.” (1 ಪೇತ್ರ 2:16) ಆದರೆ, ಮಾನವರಿಗೆ ಆಯ್ದುಕೊಳ್ಳುವ ಅದ್ಭುತಕರವಾದ ಕೊಡುಗೆ ಇರುವುದಾದರೂ, ಅವರು ತಮ್ಮ ಆಯ್ಕೆಯ ಕಾರ್ಯ ಫಲಗಳನ್ನು ಅಂಗೀಕರಿಸಲೇ ಬೇಕು.
11. ದೇವರಿಂದ ಸ್ವತಂತ್ರವಾಗಿರುವ ಮಾರ್ಗವು ಸಫಲಗೊಳ್ಳಸಾಧ್ಯವೋ ಎಂದು ಕಂಡುಹಿಡಿಯುವ ಒಂದೇ ವಿಧವು ಯಾವುದಾಗಿರುವುದು?
11 ನಮ್ಮ ಪ್ರಥಮ ಹೆತ್ತವರು ತಪ್ಪಾದ ಆಯ್ಕೆಯನ್ನು ಮಾಡಿದರು. ಅವರು ದೇವರಿಂದ ಸ್ವತಂತ್ರರಾಗುವ ಮಾರ್ಗವನ್ನು ಆರಿಸಿಕೊಂಡರು. ನಿಜ, ತಮ್ಮ ಇಚ್ಫಾ ಸ್ವಾತಂತ್ರ್ಯವನ್ನು ದುರುಪಯೋಗಿಸಿದೊಡನೆಯೇ ದೇವರು ಆ ದಂಗೆಯೆದ್ದ ಪ್ರಥಮ ಜೊತೆಯನ್ನು ಸಾಯಿಸಸಾಧ್ಯವಿತ್ತು. ಆದರೆ ಮಾನವರನ್ನು ಆಳಲು ದೇವರಿಗಿರುವ ಹಕ್ಕಿನ ಸಂಬಂಧವಾದ ಪ್ರಶ್ನೆಯನ್ನು ಅದು ಇತ್ಯರ್ಥ ಮಾಡುತ್ತಿರಲ್ಲಿಲ. ಪ್ರಥಮ ಜೊತೆಗೆ ದೇವರಿಂದ ಸ್ವತಂತ್ರರಾಗುವ ಅಪೇಕ್ಷೆ ಇದುದ್ದರಿಂದ, ಈ ಪ್ರಶ್ನೆ ಉತ್ತರಿಸಲ್ಪಡಲೇ ಬೇಕು: ಆ ಮಾರ್ಗವು ಒಂದು ಸಂತುಷ್ಟವಾದ, ಯಶಸ್ವೀ ಜೀವಿತವನ್ನು ಫಲಿಸಬಲ್ಲದೊ? ಇದನ್ನು ಕಂಡುಹಿಡಿಯುವ ಒಂದೇ ಮಾರ್ಗವು, ನಮ್ಮ ಪ್ರಥಮ ಹೆತ್ತವರು ಮತ್ತು ಅವರ ಸಂತತಿ ತಮ್ಮ ಸ್ವಂತ ದಾರಿಯಲ್ಲಿ—ಅದು ಅವರ ಆಯ್ಕೆಯಾಗಿದ್ದ ಕಾರಣ—ಹೋಗುವಂತೆ ಬಿಡುವುದೇ ಆಗಿತ್ತು. ಮಾನವರು ತಮ್ಮ ಸೃಷ್ಟಿಕರ್ತನ ಹೊರತಾಗಿ ತಮ್ಮನ್ನು ತಾವೇ ಆಳಿಕೊಳ್ಳುವುದರಲ್ಲಿ ಸಾಫಲ್ಯ ಹೊಂದುವಂತೆ ಸೃಷ್ಟಿಸಲ್ಪಟ್ಟಿದ್ದಾರೋ ಇಲ್ಲವೋ ಎಂದು ಕಾಲವೇ ಪ್ರದರ್ಶಿಸಲಿಕ್ಕಿತ್ತು.
12. ಮಾನವಾಳಿಕೆಯನ್ನು ಯೆರೆಮೀಯನು ಹೇಗೆ ಮೌಲ್ಯಮಾಪನ ಮಾಡಿದನು, ಮತ್ತು ಇದು ಹೀಗೇಕೆ?
12 ಫಲಿತಾಂಶವೇನಾಗುವುದೆಂದು ಬೈಬಲ್ ಲೇಖಕ ಯೆರೆಮೀಯನಿಗೆ ತಿಳಿದಿತ್ತು. ದೇವರ ಬಲಾಢ್ಯವಾದ ಪವಿತ್ರಾತ್ಮ ಯಾ ಕಾರ್ಯಕಾರಿ ಶಕ್ತಿಯಿಂದ ನಡಿಸಲ್ಪಟ್ಟವನಾಗಿ ಅವನು ನಿಜ ಹೇಳುತ್ತಾ ಬರೆದುದು: “ಯೆಹೋವನೇ, ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು. ಯೆಹೋವನೇ, ನನ್ನನ್ನು ಶಿಕ್ಷಿಸು.” (ಯೆರೆಮೀಯ 10:23, 24) ದೇವರ ಸ್ವರ್ಗೀಯ ವಿವೇಕದ ಮಾರ್ಗದರ್ಶನ ಮಾನವರಿಗೆ ಅಗತ್ಯವೆಂಬುದು ಅವನಿಗೆ ಗೊತ್ತಿತ್ತು. ಏಕೆ? ತನ್ನ ಮಾರ್ಗದರ್ಶನವನ್ನು ಬಿಟ್ಟು ಸಾಫಲ್ಯ ಪಡೆಯುವಂತೆ ದೇವರು ಮಾನವರನ್ನು ಸೃಷ್ಟಿಸದೆ ಇದ್ದ ಕಾರಣವೇ.
13. ಮಾನವಾಳಿಕೆಯ ಸಾವಿರಾರು ವರ್ಷಗಳ ಫಲಿತಾಂಶಗಳು ಸಂದೇಹವೇ ಇಲ್ಲದ ರೀತಿಯಲ್ಲಿ ಏನು ತೋರಿಸಿವೆ?
13 ಮಾನವಾಳಿಕೆಯ ಸಾವಿರಾರು ವರ್ಷಗಳ ಫಲಿತಾಂಶವು, ಸೃಷ್ಟಿಕರ್ತನನ್ನು ಬಿಟ್ಟು ತಮ್ಮ ಸ್ವಂತ ವಿಚಾರಗಳನ್ನು ನಡೆಸುವ ಸಾಮರ್ಥ್ಯವು ಮಾನವರಲ್ಲಿಲ್ಲವೆಂಬುದನ್ನು ಯಾವುದೇ ಸಂದೇಹವಿಲ್ಲದೆ ತೋರಿಸಿದೆ. ಅದನ್ನು ಮಾಡಿ ನೋಡಿದ್ದರಿಂದ, ಬಂದಿರುವ ಮಹಾ ದುರಂತದ ಫಲಿತಾಂಶಕ್ಕೆ ಅವರೇ ಹೊಣೆಗಾರರು. ಬೈಬಲು ಇದನ್ನು ಸ್ಪಷ್ಟಪಡಿಸುತ್ತದೆ: “ನಮಗೆ ಶರಣನಾದ ದೇವರು ಮಾಡುವ ಕಾರ್ಯದಲ್ಲಿ ಯಾವ ಕುಂದೂ ಇಲ್ಲ; ಆತನು ನಡಿಸುವದೆಲ್ಲಾ ನ್ಯಾಯ; ಆತನು ನಿರ್ವಂಚಕನಾದ ನಂಬಿಗಸ್ತ ದೇವರು, ನೀತಿಯುಳ್ಳವನೂ ಯಥಾರ್ಥನೂ ಆಗಿದ್ದಾನೆ. ಆದರೆ ಅವರು ದ್ರೋಹಿಗಳೇ, ಮಕ್ಕಳಲ್ಲ; ಇದು ಅವರ ದೋಷವು.”—ಧರ್ಮೋಪದೇಶಕಾಂಡ 32:4, 5.
ದೇವರು ಬೇಗನೆ ಅಡ್ಡಬರಲಿದ್ದಾನೆ
14. ಮಾನವ ವಿಚಾರಗಳಲ್ಲಿ ತನ್ನ ಅಡ್ಡಬರುವಿಕೆಯನ್ನು ದೇವರು ಇನ್ನು ಮುಂದೆ ಏಕೆ ವಿಳಂಬಿಸುವುದಿಲ್ಲ?
14 ಶತಮಾನಗಳ ಕಾಲದಲ್ಲಿ ಮಾನವಾಳಿಕೆಯ ಪರಾಜಯದ ವಿಪುಲ ಪ್ರದರ್ಶನಕ್ಕೆ ಅವಕಾಶ ಕೊಟ್ಟ ಬಳಿಕ, ದೇವರು ಈಗ ಮಾನವ
ವಿಚಾರಗಳಲ್ಲಿ ಅಡ್ಡಬಂದು, ಕಷ್ಟಾನುಭವ, ದುಃಖ, ರೋಗ, ಮತ್ತು ಮರಣಕ್ಕೆ ತಡೆಯನ್ನು ತರಬಲ್ಲನು. ವಿಜ್ಞಾನ, ಉದ್ಯಮ, ವೈದ್ಯಕೀಯ ಶಾಸ್ತ್ರ ಮತ್ತು ಇತರ ಕ್ಷೇತ್ರಗಳಲ್ಲಿ ಮಾನವರು ತಮ್ಮ ಸಾಧನೆಗಳ ಪರಮಾವಧಿಗೇರುವಂತೆ ಬಿಟ್ಟದ್ದರಿಂದ, ತಮ್ಮ ಸೃಷ್ಟಿಕರ್ತನಿಂದ ಸ್ವತಂತ್ರರಾಗಿರುವ ಮಾನವರು ಶಾಂತಿಭರಿತವಾದ, ಪ್ರಮೋದವನಸದೃಶವಾದ ಲೋಕವನ್ನು ಬರಮಾಡಶಕ್ತರೋ ಎಂದು ನೋಡಲು ಇನ್ನೂ ಹೆಚ್ಚು ಶತಮಾನಗಳ ಕಾಲವನ್ನು, ಬಿಡುವ ಅಗತ್ಯ ಇನ್ನು ಮುಂದೆ ದೇವರಿಗಿರುವುದಿಲ್ಲ. ಅವರು ಅದನ್ನು ಮಾಡಿರುವುದೂ ಇಲ್ಲ, ಅದು ಅವರಿಗೆ ಸಾಧ್ಯವಿರುವುದೂ ಇಲ್ಲ. ದೇವರಿಂದ ಸ್ವಾತಂತ್ರ್ಯವು ಒಂದು ಅತಿ ಭಯಾನಕವಾದ, ಹಗೆ ತುಂಬಿದ, ಮಾರಕವಾದ ಜಗತ್ತನ್ನು ಫಲಿಸಿದೆ.15. ನಾವು ಯಾವ ಬೈಬಲ್ ಸಲಹೆಗೆ ಗಮನ ಕೊಡತಕ್ಕದ್ದು?
15 ಮಾನವರಿಗೆ ಸಹಾಯ ಮಾಡಲು ಅಪೇಕ್ಷಿಸಿರುವ ಯಥಾರ್ಥರಾದ ಕೆಲವು ಪ್ರಭುಗಳು ಇದ್ದದ್ದು ನಿಜವಾದರೂ, ಅವರ ಪ್ರಯತ್ನಗಳು ಸಫಲಗೊಂಡಿರುವುದಿಲ್ಲ. ಇಂದು ಎಲ್ಲೆಲ್ಲಿಯೂ ಮಾನವಾಡಳಿತದ ಕುಸಿತಕ್ಕೆ ಸಾಕ್ಷ್ಯವಿದೆ. ಈ ಕಾರಣದಿಂದಲೇ ಬೈಬಲು ಸಲಹೆ ನೀಡುವುದು: “ಪ್ರಭುಗಳಲ್ಲಿ ಭರವಸವಿಡಬೇಡಿರಿ; ಮಾನವನನ್ನು ನೆಚ್ಚಬೇಡಿರಿ, ಅವನು ಸಹಾಯ ಮಾಡ ಶಕ್ತನಲ್ಲ.”—ಕೀರ್ತನೆ 146:3.
[ಅಧ್ಯಯನ ಪ್ರಶ್ನೆಗಳು]
[Picture on page 24, 25]
ಯಥಾರ್ಥವಂತರಾದ ಲೋಕ ಪ್ರಭುಗಳು ಸಹ ಶಾಂತಿಭರಿತವಾದ, ಪ್ರಮೋದವನಸದೃಶವಾದ ಜಗತ್ತನ್ನು ತರಶಕ್ತರಾಗಿರುವುದಿಲ್ಲ