ಜೀವಿತಕ್ಕೆ ಒಂದು ಉದ್ದೇಶವಿದೆಯೆ?
ಭಾಗ 1
ಜೀವಿತಕ್ಕೆ ಒಂದು ಉದ್ದೇಶವಿದೆಯೆ?
1. ಜೀವಿತದ ಉದ್ದೇಶದ ಕುರಿತು ಅನೇಕ ವೇಳೆ ಏನು ಕೇಳಲ್ಪಡುತ್ತದೆ, ಮತ್ತು ಒಬ್ಬ ವ್ಯಕ್ತಿ ಅದರ ವಿಷಯದಲ್ಲಿ ಯಾವ ಹೇಳಿಕೆ ಕೊಟ್ಟನು?
ಇಂದೋ ಮುಂದೋ, ಬಹುಮಟ್ಟಿಗೆ ಪ್ರತಿಯೊಬ್ಬರೂ ಜೀವಿತದ ಉದ್ದೇಶವೇನೆಂದು ತಿಳಿಯಲು ಕುತೂಹಲವುಳ್ಳವರಾಗುತ್ತಾರೆ. ನಾವು ಜೀವಿಸುವ ಪರಿಸ್ಥಿತಿಗಳನ್ನು ಉತ್ತಮಗೊಳಿಸುವ ಉದ್ದೇಶದಿಂದ ಕಷ್ಟಪಟ್ಟು ಕೆಲಸ ಮಾಡುವುದು, ನಮ್ಮ ಕುಟುಂಬಗಳಿಗೆ ಒದಗಿಸುವುದು, ಬಹುಶಃ 70 ಅಥವಾ 80 ವರ್ಷ ಬದುಕಿ ಆ ಬಳಿಕ ಸಾಯುವುದು, ಮತ್ತು ಅನಂತರ ಎಂದೆಂದಿಗೂ ಅಸ್ತಿತ್ವದಲ್ಲಿಲ್ಲದೆ ಹೋಗುವುದು ಅದಾಗಿರುವುದೊ? ಹೀಗೆ ಅಭಿಪ್ರಯಿಸಿದ ಒಬ್ಬ ಯುವ ವ್ಯಕ್ತಿಯು, “ಜೀವಿಸುವುದು, ಮಕ್ಕಳನ್ನು ಪಡೆಯುವುದು, ಸಂತೋಷದಿಂದಿರುವುದು, ಆ ಬಳಿಕ ಸಾಯುವುದಲ್ಲದೆ” ಜೀವನದಲ್ಲಿ ಇನ್ನಾವ ಉದ್ದೇಶವೂ ಇಲ್ಲ ಎಂದು ಹೇಳಿದನು. ಆದರೆ ಅದು ಸತ್ಯವೊ? ಮರಣವು ಸಕಲ ಚಟುವಟಿಕೆಯನ್ನು ನಿಜವಾಗಿಯೂ ಅಂತ್ಯಗೊಳಿಸುತ್ತದೆಯೆ?
2, 3. ಪ್ರಾಪಂಚಿಕ ಐಶ್ವರ್ಯವನ್ನು ಸಂಪಾದಿಸುವುದು ಜೀವಿತದ ಸಾಕಷ್ಟು ತೃಪ್ತಿಕರವಾದ ಉದ್ದೇಶವಾಗಿರುವುದಿಲ್ಲವೇಕೆ?
2 ಪ್ರಾಚ್ಯ ಮತ್ತು ಪಾಶ್ಚಾತ್ಯ ದೇಶಗಳೆರಡರಲ್ಲಿಯೂ ಅನೇಕರು ಪ್ರಾಪಂಚಿಕ ಸಂಪತ್ತನ್ನು ಗಳಿಸುವುದು ಜೀವಿತದ ಮುಖ್ಯ ಉದ್ದೇಶವೆಂದು ಅಭಿಪ್ರಯಿಸುತ್ತಾರೆ. ಇದು ಒಂದು ಸಂತುಷ್ಟವಾದ, ಅರ್ಥಭರಿತ ಜೀವಿತಕ್ಕೆ ನಡೆಸಬಲ್ಲದೆಂದು ಅವರ ನಂಬಿಕೆ. ಆದರೆ ಈಗಾಗಲೇ ಪ್ರಾಪಂಚಿಕ ಸಂಪತ್ತಿರುವ ಜನರ ಕುರಿತೇನು? ಕೆನಡದ ಲೇಖಕ ಹ್ಯಾರಿ ಬ್ರೂಸ್ ಹೇಳಿದ್ದು: “ಐಶ್ವರ್ಯವಂತರಲ್ಲಿ ಗಾಬರಿಗೊಳಿಸುವ ಸಂಖ್ಯೆಯು ತಾವು ಸಂತುಷ್ಟರಲ್ಲವೆಂದು ಒತ್ತಿ ಹೇಳುತ್ತಾರೆ.” ಅವರು ಮುಂದುವರಿಸಿದ್ದು: “ಉತ್ತರ ಅಮೆರಿಕವನ್ನು ಒಂದು ಭಯಂಕರ ನಿರಾಶಾವಾದ ಸೋಂಕಿದೆಯೆಂದು ಮತಸಂಖ್ಯೆಗಳು ಸೂಚಿಸುತ್ತವೆ. . . . ಈ ಲೋಕದಲ್ಲಿ ಯಾವನಾದರೂ ಸಂತೋಷದಿಂದಿದ್ದಾನೊ? ಇರುವಲ್ಲಿ, ರಹಸ್ಯವೇನು?”
3 ಅಮೆರಿಕದ ಮಾಜಿ ಅಧ್ಯಕ್ಷ ಜಿಮಿ ಕಾರ್ಟರ್ ಹೇಳಿದ್ದು: “ಸ್ವತ್ತುಗಳ ಸ್ವಾಮ್ಯ ಪಡೆದು ಅವುಗಳನ್ನು ಬಳಸುವುದು, ಅರ್ಥವೇನು ಎಂಬುದಕ್ಕಿರುವ ನಮ್ಮ ಹಾರೈಕೆಯನ್ನು ತೃಪ್ತಿಪಡಿಸುವುದಿಲ್ಲವೆಂದು ನಾವು ಕಂಡುಹಿಡಿದಿದ್ದೇವೆ. ಪ್ರಾಪಂಚಿಕ ವಸ್ತುಗಳ ಶೇಖರಣೆ, ಯಾವ ಭರವಸೆಯಾಗಲಿ ಉದ್ದೇಶವಾಗಲಿ ಇಲ್ಲದ ಜೀವಿತಗಳ ಶೂನ್ಯತೆಯನ್ನು ತುಂಬಿಸಲಾರದು.” ಮತ್ತು ಇನ್ನೊಬ್ಬ ರಾಜಕೀಯ ನೇತಾರರು ಹೇಳಿದ್ದು: “ನಾನೀಗ ಹಲವಾರು ವರ್ಷಗಳಿಂದ ನನ್ನ ಮತ್ತು ನನ್ನ ಜೀವನದ ಬಗೆಗೆ ಸತ್ಯವನ್ನು ಕಂಡುಹಿಡಿಯುವ ತೀಕ್ಷ್ಣ ಅನ್ವೇಷಣೆಯಲ್ಲಿ ನಿರತನಾಗಿದ್ದೇನೆ; ನನಗೆ ಪರಿಚಯವಿರುವ ಅನೇಕ ಇತರ ಜನರು ಅದನ್ನೇ ಮಾಡುತ್ತಿದ್ದಾರೆ. ಹಿಂದೆಂದಿಗಿಂತಲೂ ಹೆಚ್ಚು ಜನರು ಈಗ, ‘ನಾವು ಯಾರು? ನಮ್ಮ ಉದ್ದೇಶವೇನು?’ ಎಂದು ಕೇಳುತ್ತಿದ್ದಾರೆ.”
ಹೆಚ್ಚು ಕಷ್ಟಕರವಾದ ಪರಿಸ್ಥಿತಿಗಳು
4. ಜೀವಿತಕ್ಕೆ ಯಾವುದೇ ಉದ್ದೇಶವಿದೆಯೆಂದು ಕೆಲವರು ಸಂದೇಹಿಸುವುದೇಕೆ?
4 ಜೀವಿಸುವ ಪರಿಸ್ಥಿತಿಗಳು ಹೆಚ್ಚು ಕಷ್ಟಕರವಾಗುವುದನ್ನು ನೋಡುವಾಗ ಜೀವಿತಕ್ಕೆ ಒಂದು ಉದ್ದೇಶವಿದೆಯೆಂಬ ವಿಷಯದಲ್ಲಿ ಅನೇಕರು ಸಂಶಯಪಡುತ್ತಾರೆ. ಲೋಕಾದ್ಯಂತ 100 ಕೋಟಿಗಳಿಗಿಂತಲೂ ಹೆಚ್ಚು ಜನರು ಗುರುತರವಾದ ಕಾಯಿಲೆಯುಳ್ಳವರು ಅಥವಾ ನ್ಯೂನಪೋಷಿತರು ಆಗಿದ್ದಾರೆ. ಈ ಕಾರಣದಿಂದ ಕೇವಲ ಆಫ್ರಿಕದಲ್ಲಿಯೇ ಸುಮಾರು ಒಂದು ಕೋಟಿ ಮಕ್ಕಳು ಪ್ರತಿ ವರ್ಷ ಸಾಯುತ್ತಾರೆ. ಆರುನೂರು ಕೋಟಿಯನ್ನು ಸಮೀಪಿಸುತ್ತಿರುವ ಭೂಮಿಯ ಜನಸಂಖ್ಯೆ ಪ್ರತಿ ವರ್ಷ 9 ಕೋಟಿಗೂ ಹೆಚ್ಚು ಬೆಳೆಯುತ್ತಾ ಹೋಗುತ್ತದೆ. ಆ ಬೆಳವಣಿಗೆಯಲ್ಲಿ 90 ಕ್ಕಿಂತಲೂ ಹೆಚ್ಚಿನ ಪ್ರತಿಶತವು ವಿಕಾಸಶೀಲ ರಾಷ್ಟ್ರಗಳಲ್ಲಿ ನಡೆಯುತ್ತದೆ. ಈ ಸಂತತವಾಗಿ ವಿಕಾಸಗೊಳ್ಳುತ್ತಿರುವ ಜನಸಂಖ್ಯೆಯು ಆಹಾರ, ವಸತಿ, ಮತ್ತು ಉದ್ಯಮಗಳ ಆವಶ್ಯಕತೆಯನ್ನು ಹೆಚ್ಚಿಸುವುದರಿಂದ, ಇದು ನೆಲ, ಜಲ, ಮತ್ತು ಗಾಳಿಗೆ ಔದ್ಯಮಿಕ ಮತ್ತು ಇತರ ಮಲಿನಕಾರಕ ವಸ್ತುಗಳಿಂದಾಗಿ ಇನ್ನೂ ಹೆಚ್ಚಿನ ಹಾನಿಯನ್ನು ತರುತ್ತದೆ.
5. ಭೂಮಿಯ ಮೇಲಿರುವ ಸಸ್ಯಗಳಿಗೆ ಏನಾಗುತ್ತಿದೆ?
5ವರ್ಲ್ಡ್ ಮಿಲಿಟರಿ ಆ್ಯಂಡ್ ಸೋಷಲ್ ಎಕ್ಸ್‌ಪೆಂಡಿಚರ್ಸ್ 1991 ಎಂಬ ಪ್ರಕಾಶನವು ವರದಿ ಮಾಡುವುದು: “ಪ್ರತಿ ವರ್ಷ ಇಡೀ [ಗ್ರೇಟ್ ಬ್ರಿಟನಿನ] ಗಾತ್ರಕ್ಕೆ ಸಮಾನವಾದ ಕಾಡು ಪ್ರದೇಶ ನಾಶಮಾಡಲ್ಪಡುತ್ತದೆ. (ಕಾಡು ಕಡಿತದ) ಈಗಿನ ಪ್ರಮಾಣಗಳ ದೃಷ್ಟಿಯಲ್ಲಿ, 2,000 ನೆಯ ಇಸವಿಯೊಳಗೆ, ನಾವು ಆರ್ದ್ರತೆಯುಳ್ಳ ಉಷ್ಣವಲಯಗಳಲ್ಲಿರುವ ಕಾಡುಗಳಲ್ಲಿ 65 ಪ್ರತಿಶತವನ್ನು ಕಡಿದು ಬಿಟ್ಟಿರುವೆವು.” ಆ ಪ್ರದೇಶಗಳಲ್ಲಿ, ಒಂದು ಯುಎನ್ ಏಜನ್ಸಿಗನುಸಾರ, ನೆಡಲ್ಪಡುವ ಪ್ರತಿ ಒಂದು ಮರಕ್ಕೆ 10 ಮರಗಳನ್ನು ಕಡಿಯಲಾಗುತ್ತದೆ; ಆಫ್ರಿಕದಲ್ಲಿ ಪ್ರಮಾಣವು 1 ಕ್ಕೆ 20 ಕ್ಕೂ ಹೆಚ್ಚು. ಹೀಗೆ, ಮರುಭೂಮಿಯ ಪ್ರದೇಶಗಳು ಹೆಚ್ಚುತ್ತವೆ, ಮತ್ತು ಪ್ರತಿ ವರ್ಷ ಬೆಲ್ಚಿಯಮ್ ದೇಶದ ಗಾತ್ರದಷ್ಟು ಪ್ರದೇಶವು ವ್ಯವಸಾಯದ ಬಳಸುವಿಕೆಯ ಪಾಲಾಗುತ್ತದೆ.
6, 7. ಮಾನವ ನಾಯಕರಿಗೆ ಪರಿಹರಿಸಸಾಧ್ಯವಿಲ್ಲದ ಸಮಸ್ಯೆಗಳಲ್ಲಿ ಕೆಲವು ಯಾವುವು, ಆದುದರಿಂದ ಯಾವ ಪ್ರಶ್ನೆಗಳು ಉತ್ತರಿಸಲ್ಪಡುವುದು ಅಗತ್ಯ?
6 ಅಲ್ಲದೆ, ಈ 20 ನೆಯ ಶತಮಾನದಲ್ಲಿ ಯುದ್ಧದಿಂದಾಗಿ, ಹಿಂದಿನ ನಾಲ್ಕು ಶತಮಾನಗಳಲ್ಲಿ ಸತ್ತವರ ಒಟ್ಟು ಸಂಖ್ಯೆಗಿಂತ ನಾಲ್ಕು ಪಾಲು ಹೆಚ್ಚು ಮರಣಗಳಾಗಿವೆ. ಎಲ್ಲೆಲ್ಲಿಯೂ ಪಾತಕಗಳಲ್ಲಿ, ವಿಶೇಷವಾಗಿ ಹಿಂಸಾತ್ಮಕ ಪಾತಕಗಳಲ್ಲಿ ಉನ್ನತಿಯಿದೆ. ಕುಟುಂಬದ ಒಡೆತ, ಮಾದಕ ದ್ರವ್ಯಗಳ ದುರುಪಯೋಗ, ಏಯ್ಡ್ಸ್, ರತಿ ರವಾನಿತ ರೋಗಗಳು, ಮತ್ತು ಇತರ ನಕಾರಾತ್ಮಕ ಸಂಗತಿಗಳು ಸಹ ಜೀವನವನ್ನು ಹೆಚ್ಚು ಕಷ್ಟಕರವಾಗಿ ಮಾಡುತ್ತಿವೆ. ಮತ್ತು ಮಾನವ ಕುಟುಂಬವನ್ನು ಬಾಧಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸಲು ಲೋಕನಾಯಕರು ಶಕ್ತರಾಗಿರುವುದಿಲ್ಲ. ಆದುದರಿಂದ, ಜೀವಿತದ ಉದ್ದೇಶವೇನೆಂದು ಜನರು ಕೇಳುವುದು ಗ್ರಾಹ್ಯವಾದ ಸಂಗತಿ.
7 ಆ ಪ್ರಶ್ನೆಯು ವಿದ್ವಾಂಸರಿಂದ ಮತ್ತು ಧಾರ್ಮಿಕ ನಾಯಕರಿಂದ ಹೇಗೆ ಸಂಬೋಧಿಸಲ್ಪಟ್ಟಿದೆ? ಈ ಅನೇಕ ಶತಮಾನಗಳ ಅವಧಿಯ ಅನಂತರ, ಅವರು ಒಂದು ತೃಪ್ತಿಕರವಾದ ಉತ್ತರವನ್ನು ಒದಗಿಸಿದ್ದಾರೆಯೆ?
ಅವರು ಹೇಳುವ ಸಂಗತಿಗಳು
8, 9. (ಎ) ಜೀವಿತದ ಉದ್ದೇಶದ ಕುರಿತು ಒಬ್ಬ ಚೈನೀಸ್ ವಿದ್ವಾಂಸರು ಏನು ಹೇಳಿದರು? (ಬಿ) ನಾಜಿ ಮರಣ ಶಿಬಿರವನ್ನು ಪಾರಾದವರೊಬ್ಬರು ಏನು ಹೇಳಿದರು?
8 ಕನ್ಫ್ಯೂಷಿಯನ್ ವಿದ್ವಾಂಸ ಡೂ ವೇಮಿಂಗ್ ಹೇಳಿದ್ದು: “ಜೀವನದ ಅಂತಿಮ ಅರ್ಥವು ನಮ್ಮ ಸಾಮಾನ್ಯವಾದ ಮಾನವ ಅಸ್ತಿತ್ವದಲ್ಲಿ ಕಂಡುಕೊಳ್ಳಲ್ಪಡುತ್ತದೆ.” ಈ ವೀಕ್ಷಣಾನುಸಾರ, ಮಾನವರು ಹುಟ್ಟುತ್ತಾ, ಅಸ್ತಿತ್ವಕ್ಕಾಗಿ ಹೋರಾಡುತ್ತಾ, ಮತ್ತು ಸಾಯುತ್ತಾ ಹೋಗುವರು. ಇಂತಹ ಹೊರನೋಟದಲ್ಲಿ ಇರುವ ನಿರೀಕ್ಷೆ ಕೊಂಚವೇ. ಮತ್ತು ಅದು ಸತ್ಯವಾದರೂ ಆಗಿದೆಯೆ?
9 ಲೋಕ ಯುದ್ಧ II ರ, ನಾಜಿ ಮರಣ ಶಿಬಿರಗಳನ್ನು ಪಾರಾದ ಎಲೀ ವೀಸೆಲ್ ಎಂಬವರು ಅವಲೋಕಿಸಿದ್ದು: “‘ನಾವೇಕೆ ಇಲ್ಲಿದ್ದೇವೆ?’ ಎಂಬುದು ಒಬ್ಬ ಮಾನವ ಜೀವಿಯು ಎದುರಿಸಬೇಕಾದ ಅತಿ ಪ್ರಾಮುಖ್ಯ ಪ್ರಶ್ನೆ. . . . ನಾನು ಅರ್ಥಹೀನ ಮರಣಗಳನ್ನು ನೋಡಿರುವುದಾದರೂ ಜೀವಿತಕ್ಕೆ ಅರ್ಥವಿದೆ ಎಂದು ನನ್ನ ನಂಬಿಕೆ.” ಆದರೆ ಜೀವಿತದ ಅರ್ಥವೇನೆಂದು ಅವರಿಗೆ ಹೇಳಸಾಧ್ಯವಾಗಲ್ಲಿಲ.
10, 11. (ಎ) ಮನುಷ್ಯನಲ್ಲಿ ಉತ್ತರಗಳಿಲ್ಲವೆಂದು ಒಬ್ಬ ಸಂಪಾದಕರು ಹೇಗೆ ತೋರಿಸಿದರು? (ಬಿ) ಒಬ್ಬ ವಿಕಾಸ ವಿಜ್ಞಾನಿಯ ವೀಕ್ಷಣ ಏಕೆ ತೃಪ್ತಿಕರವಲ್ಲ?
10 ಸಂಪಾದಕ ವರ್ಮಾಂಟ್ ರಾಯ್‌ಸ್ಟರ್ ಹೇಳಿದ್ದು: “ಮನುಷ್ಯನನ್ನೇ ಕುರಿತ, . . . ವಿಶ್ವದಲ್ಲಿ ಅವನ ಸ್ಥಾನದ ಕುರಿತ ಅವಲೋಕನದಲ್ಲಿ, ಸಮಯವು ಆರಂಭವಾದಾಗಿನಿಂದ ನಾವು ಸ್ವಲ್ಪವೇ ಮುಂದುವರಿದಿದ್ದೇವೆ. ನಾವು ಯಾರು, ಏಕೆ ಇಲ್ಲಿದ್ದೇವೆ ಮತ್ತು ನಾವೆಲ್ಲಿಗೆ ಹೋಗುತ್ತಿದ್ದೇವೆ ಎಂಬ ಪ್ರಶ್ನೆಗಳು ನಮ್ಮಲ್ಲಿ ಇನ್ನೂ ಉಳಿದಿವೆ.”
11 ವಿಕಾಸ ವಿಜ್ಞಾನಿ ಸ್ಟೀವನ್ ಜೇ ಗೂಲ್ಡ್ ಗಮನಿಸಿದ್ದು: “ನಾವು ‘ಹೆಚ್ಚು ಉನ್ನತವಾದ’ ಉತ್ತರಕ್ಕಾಗಿ ಹಾತೊರೆಯಬಹುದು—ಆದರೆ ಯಾವುದೂ ಅಸ್ತಿತ್ವದಲ್ಲಿಲ್ಲ.” ಇಂಥ ವಿಕಾಸವಾದಿಗಳಿಗೆ, ಜೀವನವೆಂದರೆ ಅತಿ ಯೋಗ್ಯವಾದದ್ದು ಬದುಕಿ ಉಳಿಯಲಿಕ್ಕಾಗಿರುವ ಹೋರಾಟ, ಮರಣವು ಎಲ್ಲವನ್ನು ಅಂತ್ಯಗೊಳಿಸುತ್ತದೆ. ಆ ವೀಕ್ಷಣದಲ್ಲಿ ಸಹ ನಿರೀಕ್ಷೆ ಇರುವುದಿಲ್ಲ. ಮತ್ತು, ಪುನಃ, ಅದು ಸತ್ಯವೊ?
12, 13. ಚರ್ಚ್ ನಾಯಕರುಗಳ ವೀಕ್ಷಣಗಳೇನು, ಮತ್ತು ಇವು ಲೌಕಿಕ ವೀಕ್ಷಕರದ್ದಕ್ಕಿಂತ ಹೆಚ್ಚು ತೃಪ್ತಿಕರವೊ?
12 ಅನೇಕ ಧಾರ್ಮಿಕ ನಾಯಕರುಗಳ ಹೇಳಿಕೆಯೇನಂದರೆ ಮರಣದಲ್ಲಿ ಒಬ್ಬ ವ್ಯಕ್ತಿಯ ಆತ್ಮವು ಸ್ವರ್ಗಕ್ಕೆ ಹೋಗಿ ಶಾಶ್ವತತೆಯನ್ನು ಅಲ್ಲಿ ಕಳೆಯಲಿಕ್ಕಾಗುವಂತೆ ಒಂದು ಉತ್ತಮ ಬಾಳ್ವೆಯನ್ನು ನಡೆಸುವುದೇ ಜೀವಿತದ ಉದ್ದೇಶವಾಗಿದೆ. ದುಷ್ಟ ಜನರಿಗೆ ನೀಡಲ್ಪಟ್ಟಿರುವ ಅನ್ಯ ಮಾರ್ಗವು ನರಕಾಗ್ನಿಯಲ್ಲಿ ನಿತ್ಯ ಯಾತನೆಯೇ. ಆದರೂ, ಈ ನಂಬಿಕೆಗನುಸಾರ, ಇತಿಹಾಸದಾದ್ಯಂತ ಚಾಲ್ತಿಯಲ್ಲಿದ್ದ ರೀತಿಯದ್ದೇ ಆದ ಅಸಂತೃಪ್ತಿಕರವಾದ ಹೆಚ್ಚಿನ ಅಸ್ತಿತ್ವವು ಈ ಭೂಮಿಯಲ್ಲಿರುತ್ತಾ ಮುಂದುವರಿಯುವುದು. ಆದರೆ, ಜನರು ಸ್ವರ್ಗದಲ್ಲಿ ದೇವದೂತರಂತೆ ಜೀವಿಸುವುದು ದೇವರ ಉದ್ದೇಶವಾಗಿದ್ದ ಪಕ್ಷಕ್ಕೆ, ಆತನು ದೇವದೂತರನ್ನು ಸೃಷ್ಟಿಸಿದಂತೆ ಪ್ರಪ್ರಥಮವಾಗಿ ಅವರನ್ನು ಹಾಗೇಕೆ ಸೃಷ್ಟಿಸಲ್ಲಿಲ?
13 ಇಂತಹ ವೀಕ್ಷಣಗಳ ಸಂಬಂಧದಲ್ಲಿ ಪುರೋಹಿತರಿಗೂ ಪ್ರಯಾಸವಿದೆ. ಲಂಡನಿನ ಸೆಂಟ್ ಪೌಲ್ಸ್ ಕತೀಡ್ರಲಿನ ಒಬ್ಬ ಮಾಜಿ ಮುಖ್ಯ ಪಾದ್ರಿಯಾಗಿದ್ದ ಡಾ. ಡಬ್ಲ್ಯೂ. ಆರ್. ಇಂಗ್ ಒಮ್ಮೆ ಹೇಳಿದ್ದು: “ನನ್ನ ಜೀವಮಾನವಿಡೀ ಜೀವಿಸುವುದರ ಉದ್ದೇಶವನ್ನು ಕಂಡುಹಿಡಿಯಲು
ನಾನು ಹೋರಾಡಿದ್ದೇನೆ. ಮೂಲಭೂತವೆಂದು ಯಾವಾಗಲೂ ನನಗೆ ತೋರಿಬಂದ ಮೂರು ಸಮಸ್ಯೆಗಳನ್ನು ಉತ್ತರಿಸಲು ನಾನು ಪ್ರಯತ್ನಿಸಿದ್ದೇನೆ: ಶಾಶ್ವತತೆಯ ಸಮಸ್ಯೆ; ಮಾನವ ವ್ಯಕ್ತಿತ್ವದ ಸಮಸ್ಯೆ; ಮತ್ತು ಕೆಡುಕಿನ ಸಮಸ್ಯೆ. ನಾನು ವಿಫಲಗೊಂಡಿದ್ದೇನೆ. ನಾನು ಅವುಗಳಲ್ಲಿ ಒಂದನ್ನೂ ಬಗೆಹರಿಸಿರುವುದಿಲ್ಲ.”ಪರಿಣಾಮ
14, 15. ಈ ಪರಸ್ಪರ ವಿರುದ್ಧ ವೀಕ್ಷಣಗಳು ಅನೇಕ ಜನರ ಮೇಲೆ ಯಾವ ಪರಿಣಾಮವನ್ನು ಬೀರುತ್ತವೆ?
14 ಜೀವಿತದ ಉದ್ದೇಶದ ಕುರಿತ ಈ ಪ್ರಶ್ನೆಯ ಬಗೆಗೆ ವಿದ್ವಾಂಸರೂ ಧಾರ್ಮಿಕ ನಾಯಕರೂ ಕೊಡುವ ಇಷ್ಟೊಂದು ವಿಭಿನ್ನ ವಿಚಾರಗಳ ಪರಿಣಾಮವೇನು? ಅನೇಕರು ಒಬ್ಬ ವೃದ್ಧನು ಹೇಳಿದಂತೆಯೇ ಪ್ರತ್ಯುತ್ತರಿಸುತ್ತಾರೆ: “ನನ್ನ ಜೀವನದಲ್ಲಿ ಅಧಿಕಾಂಶ ಭಾಗ ನಾನು ಏಕೆ ಇಲ್ಲಿದ್ದೇನೆಂದು ಕೇಳಿದ್ದೇನೆ. ಒಂದು ಉದ್ದೇಶವಿದ್ದರೆ, ನಾನು ಇನ್ನು ಮುಂದೆ ಎಳ್ಳಷ್ಟೂ ಲಕ್ಷ್ಯ ಮಾಡುವುದಿಲ್ಲ.”
15 ಲೋಕದ ಧರ್ಮಗಳಲ್ಲಿರುವ ವೀಕ್ಷಣಗಳ ವಿಪುಲತೆಯನ್ನು ಅವಲೋಕಿಸುವ ಅನೇಕರು, ಒಬ್ಬನು ಏನು ನಂಬುತ್ತಾನೋ ಅದು ನಿಜವಾಗಿಯೂ ಪ್ರಾಮುಖ್ಯವಲ್ಲವೆಂದು ತೀರ್ಮಾನಿಸುತ್ತಾರೆ. ಧರ್ಮವು ಮನಸ್ಸಿಗೆ ಕೇವಲ ಒಂದು ತಿರುಗುದಾರಿ, ಒಬ್ಬನು ಜೀವನದ ಸಮಸ್ಯೆಗಳನ್ನು ನಿಭಾಯಿಸಶಕ್ತನಾಗುವರೆ ತುಸು ಮನಶ್ಶಾಂತಿ ಮತ್ತು ದುಃಖಶಮನವನ್ನು ಒದಗಿಸುವ ಒಂದು ವಸ್ತು ಎಂದು ಅವರು ಅಭಿಪ್ರಯಿಸುತ್ತಾರೆ. ಧರ್ಮವು ಅಂಧ ವಿಶ್ವಾಸಕ್ಕಿಂತ ಹೆಚ್ಚಿನದ್ದೇನೂ ಅಲ್ಲವೆಂಬುದು ಇತರರ ಅನಿಸಿಕೆ. ಶತಮಾನಗಳ ಧಾರ್ಮಿಕ ಊಹಾಪೋಹ ಜೀವನದ ಉದ್ದೇಶದ ಕುರಿತ ಪ್ರಶ್ನೆಯನ್ನು ಉತ್ತರಿಸಿದ್ದೂ ಇಲ್ಲ, ಜನಸಾಮಾನ್ಯರ ಜೀವನವನ್ನು ಉತ್ತಮಗೊಳಿಸಿದ್ದೂ ಇಲ್ಲವೆಂದು ಅವರು ಅಭಿಪ್ರಯಿಸುತ್ತಾರೆ. ಈ ಲೋಕದ ಧರ್ಮಗಳು ಅನೇಕ ವೇಳೆ ಮಾನವ ಸಂತತಿಯನ್ನು ಪ್ರಗತಿ ಮಾಡುವುದರಿಂದ ತಡೆದು ಹಿಡಿದಿರುವುದು ಮತ್ತು ದ್ವೇಷಗಳಿಗೆ ಮತ್ತು ಯುದ್ಧಗಳಿಗೆ ಕಾರಣಭೂತವಾಗಿರುವುದು ನಿಶ್ಚಯವೆಂದು ಇತಿಹಾಸವು ವ್ಯಕ್ತಪಡಿಸುತ್ತದೆ.
16. ಜೀವಿತದ ಉದ್ದೇಶವನ್ನು ಕಂಡುಹಿಡಿಯುವುದು ಎಷ್ಟು ಪ್ರಾಮುಖ್ಯವಾಗಿರಬಲ್ಲದು?
16 ಹೀಗಿದ್ದರೂ, ಜೀವಿತದ ಉದ್ದೇಶದ ಬಗೆಗೆ ಸತ್ಯವನ್ನು ಕಂಡುಹಿಡಿಯುವುದು ಪ್ರಾಮುಖ್ಯವೊ? ಮಾನಸಿಕ ಆರೋಗ್ಯ ಕಸಬುದಾರ ವಿಕರ್ಟ್ ಫ್ರಾಂಕಲ್ ಉತ್ತರ ಕೊಟ್ಟದ್ದು: “ಒಬ್ಬನ ಜೀವಿತದ ಅರ್ಥವನ್ನು ಕಂಡುಹಿಡಿಯುವ ಪ್ರಯತ್ನವು ಮನುಷ್ಯನ ಪ್ರಧಾನ ಪ್ರಚೋದನಾ ಶಕ್ತಿ. . . . ಒಬ್ಬನ ಜೀವಿತಕ್ಕೆ ಒಂದು ಅರ್ಥವಿದೆ ಎಂಬ ಅರಿವಿನಷ್ಟು ಕಾರ್ಯಸಾಧಕವಾಗಿ ಅತಿ ಕೆಡುಕಾದ ಪರಿಸ್ಥಿತಿಯಲ್ಲಿಯೂ ಅವನು ಬದುಕಿ ಉಳಿಯುವಂತೆ ಸಹಾಯ ಮಾಡುವ ಸಂಗತಿಯು ಲೋಕದಲ್ಲಿಯೇ ಇಲ್ಲವೆಂದು ಹೇಳಲು ನಾನು ಧೈರ್ಯಮಾಡುತ್ತೇನೆ.”
17. ನಾವೀಗ ಯಾವ ಪ್ರಶ್ನೆಗಳನ್ನು ಕೇಳುವುದು ಅಗತ್ಯ?
17 ಮಾನವ ತತ್ವಜ್ಞಾನಗಳು ಮತ್ತು ಧರ್ಮಗಳು ಜೀವಿತದ ಉದ್ದೇಶವನ್ನು ತೃಪ್ತಿಕರವಾಗಿ ವಿವರಿಸಿಲ್ಲದಿರುವುದರಿಂದ, ಅದೇನೆಂದು ಕಂಡುಹಿಡಿಯಲು ನಾವೆಲ್ಲಿಗೆ ಹೋಗಬಲ್ಲೆವು? ಈ ವಿಷಯದ ಬಗೆಗೆ ಸತ್ಯವನ್ನು ನಮಗೆ ಹೇಳಬಲ್ಲ ಶ್ರೇಷ್ಠ ವಿವೇಕದ ಮೂಲನೊಬ್ಬನು ಇದ್ದಾನೊ?
ಬೇರೆ ರೀತಿಯಲ್ಲಿ ಸೂಚಿಸಲ್ಪಡದಿರುವಲ್ಲಿ, ಉಪಯೋಗಿಸಲ್ಪಟ್ಟಿರುವ ಬೈಬಲ್ ಭಾಷಾಂತರವು ‘ಇಂಡಿಯಾ ಸಿಲೋನ್ ದೇಶಗಳ ಸತ್ಯವೇದ ಸಂಘದ ಕನ್ನಡ ಬೈಬಲ್’ ಆಗಿದೆ.
[ಅಧ್ಯಯನ ಪ್ರಶ್ನೆಗಳು]
[ಪುಟ 5 ರಲ್ಲಿರುವ ಚಿತ್ರ]
“ಪ್ರತಿ ವರ್ಷ ಇಡೀ [ಗ್ರೇಟ್ ಬ್ರಿಟನಿನ] ಗಾತ್ರಕ್ಕೆ ಸಮಾನವಾದ ಕಾಡು ಪ್ರದೇಶ ನಾಶ ಮಾಡಲ್ಪಡುತ್ತದೆ”
[ಪುಟ 6 ರಲ್ಲಿರುವ ಚಿತ್ರ]
“ನನ್ನ ಜೀವನದಲ್ಲಿ ಅಧಿಕಾಂಶ ಭಾಗ ನಾನು ಏಕೆ ಇಲ್ಲಿದ್ದೇನೆಂದು ಕೇಳಿದ್ದೇನೆ”