ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಉದ್ದೇಶವು ಬೇಗನೆ ಕೈಗೂಡಲಿದೆ

ದೇವರ ಉದ್ದೇಶವು ಬೇಗನೆ ಕೈಗೂಡಲಿದೆ

ಭಾಗ 7

ದೇವರ ಉದ್ದೇಶವು ಬೇಗನೆ ಕೈಗೂಡಲಿದೆ

1, 2. ದುಷ್ಟತ್ವ ಮತ್ತು ಕಷ್ಟಾನುಭವಕ್ಕೆ ಅಂತ್ಯ ತರಲು ದೇವರು ಕ್ರಮ ಕೈಕೊಳ್ಳುವನೆಂದು ನಾವೇಕೆ ಖಾತ್ರಿಯಿಂದಿರಬಲ್ಲೆವು?

1 ದೇವರು ಅಪೂರ್ಣತೆ ಮತ್ತು ಕಷ್ಟಾನುಭವವನ್ನು, ಮಾನವ ದೃಷ್ಟಿಕೋನದಿಂದ ನೋಡುವಾಗ ದೀರ್ಘಕಾಲದ ವರೆಗೆ ಅನುಮತಿಸಿರುವುದಾದರೂ, ದುಷ್ಟ ಪರಿಸ್ಥಿತಿಗಳು ಅನಿಶ್ಚಿತ ಸಮಯದ ತನಕ ಮುಂದುವರಿಯುವಂತೆ ಬಿಡನು. ಇವು ಸಂಭವಿಸುವಂತೆ ಬಿಡಲು ದೇವರಿಗೆ ಒಂದು ನಿಶ್ಚಿತ ಸಮಯವಿದೆಯೆಂದು ಬೈಬಲು ನಮಗೆ ತಿಳಿಸ್ತುತದೆ.

2 “ಪ್ರತಿಯೊಂದು ಕಾರ್ಯಕ್ಕೂ ಕಾಲವು ಕ್ಲುಪ್ತವಾಗಿದೆ.” (ಪ್ರಸಂಗಿ 3:1) ದುಷ್ಟತ್ವ ಮತ್ತು ಕಷ್ಟಾನುಭವಕ್ಕೆ ಅನುಮತಿಸಿರುವ ದೇವರ ನಿಯಮಿತ ಸಮಯವು ಮುಕ್ತಾಯಗೊಳ್ಳುವಾಗ, ಆತನು ಮಾನವ ವಿಚಾರಗಳಲ್ಲಿ ಅಡ್ಡಬರುವನು. ಆತನು ದುಷ್ಟತ್ವ ಮತ್ತು ಕಷ್ಟಾನುಭವಕ್ಕೆ ಅಂತ್ಯವನ್ನು ತಂದು, ಪ್ರಮೋದವನೀಯ ಪರಿಸ್ಥಿತಿಗಳ ಮಧ್ಯೆ ಪೂರ್ತಿ ಶಾಂತಿ ಮತ್ತು ಆರ್ಥಿಕ ಭದ್ರತೆಯನ್ನು ಅನುಭವಿಸುವ ಪರಿಪೂರ್ಣ, ಸಂತುಷ್ಟ ಮಾನವ ಕುಟುಂಬದಿಂದ ಭೂಮಿಯನ್ನು ತುಂಬುವ ತನ್ನ ಮೂಲ ಉದ್ದೇಶವನ್ನು ನೆರವೇರಿಸುವನು.

ದೇವರ ನ್ಯಾಯತೀರ್ಪುಗಳು

3, 4. ದೇವರ ಅಡ್ಡಬರುವಿಕೆಯ ಫಲಿತಾಂಶಗಳನ್ನು ಜ್ಞಾನೋಕ್ತಿಗಳ ಪುಸ್ತಕವು ಹೇಗೆ ವರ್ಣಿಸುತ್ತದೆ?

3 ದೇವರ ಅಡ್ಡಬರುವಿಕೆ, ಅಂದರೆ, ಆತನ ನ್ಯಾಯತೀರ್ಪುಗಳ ಫಲಗಳು, ಮಾನವ ಕುಟುಂಬಕ್ಕೆ ಬೇಗನೆ ಯಾವ ಅರ್ಥದಲ್ಲಿರುವುದೆಂಬುದನ್ನು ಹೇಳುವ ಅನೇಕ ಬೈಬಲ್‌ ಪ್ರವಾದನೆಗಳಲ್ಲಿ ಕೆಲವನ್ನು ಗಮನಿಸಿರಿ:

4 “ಯಥಾರ್ಥವಂತರು ದೇಶದಲ್ಲಿ ಸ್ವತಂತ್ರರಾಗಿರುವರು, ನಿರ್ದೋಷಿಗಳು ಅದರಲ್ಲಿ ನೆಲೆಯಾಗಿರುವರು. ದುಷ್ಟರಾದರೋ ದೇಶದೊಳಗಿಂದ ಕೀಳಲ್ಪಡುವರು, ದ್ರೋಹಿಗಳು ನಿರ್ಮೂಲರಾಗುವರು.”—ಜ್ಞಾನೋಕ್ತಿ 2:21, 22.

5, 6. ದೇವರು ಅಡ್ಡಬರುವಾಗ ಏನು ಸಂಭವಿಸುವುದೆಂದು ಕೀರ್ತನೆ 37 ಹೇಗೆ ತೋರಿಸುತ್ತದೆ?

5 “ಕೆಡುಕರು ತೆಗೆದು ಹಾಕಲ್ಪಡುವರು; ಯೆಹೋವನನ್ನು ನಿರೀಕ್ಷಿಸುವವರೇ ದೇಶವನ್ನು ಅನುಭವಿಸುವರು. ಇನ್ನು ಸ್ವಲ್ಪಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು; . . . ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.”—ಕೀರ್ತನೆ 37:9-11.

6 “ಯೆಹೋವನನ್ನು ನಿರೀಕ್ಷಿಸುವವನಾಗಿ ಆತನ ಮಾರ್ಗವನ್ನೇ ಅನುಸರಿಸು; ಆಗ ಆತನು ನಿನ್ನನ್ನು ಮುಂದಕ್ಕೆ ತಂದು ದೇಶವನ್ನು ಅನುಭವಿಸುವಂತೆ ಮಾಡುವನು; ದುಷ್ಟರು ತೆಗೆದುಹಾಕಲ್ಪಡುವದನ್ನು ನೀನು ನೋಡುವಿ. ಒಳ್ಳೇ ನಡತೆಯುಳ್ಳವನನ್ನು ನೋಡು, ಯಥಾರ್ಥನನ್ನು ಲಕ್ಷಿಸು; ಶಾಂತನಿಗೆ ಸಂತಾನವೃದ್ಧಿಯಾಗುವದು [ಆ ಮನುಷ್ಯನ ಭವಿಷ್ಯತ್ತು ಶಾಂತಿಮಯವಾಗಿರುವುದು, NW]. ದ್ರೋಹಿಗಳೆಲ್ಲರೂ ನಾಶವಾಗುವರು; ದುಷ್ಟರ ಸಂತಾನವು ತೆಗೆದುಹಾಕಲ್ಪಡುವದು.”—ಕೀರ್ತನೆ 37:34, 37, 38.

7. ದೇವರ ವಾಕ್ಯವು ನಮಗೆ ಯಾವ ಸ್ವಸ್ಥ ಬುದ್ಧಿವಾದವನ್ನು ಕೊಡುತ್ತದೆ?

7 ಆದುದರಿಂದ, ನಮ್ಮನ್ನು ಆಳಲು ಸರ್ವಶಕ್ತನಾದ ಸೃಷ್ಟಿಕರ್ತನಿಗಿರುವ ಹಕ್ಕನ್ನು ಅಂಗೀಕರಿಸುವವರಿಗೆ ಬರುವ ಅದ್ಭುತಕರವಾದ ಭವಿಷ್ಯತ್ತಿನ ದೃಷ್ಟಿಯಲ್ಲಿ, ನಾವು ಪ್ರೋತ್ಸಾಹಿಸಲ್ಪಡುವುದು: “ನನ್ನ ಆಜ್ಞೆಗಳನ್ನು ಮನಃಪೂರ್ವಕವಾಗಿ ನಡಿಸು. ಅವು ನಿನ್ನ ದಿನಗಳನ್ನು ಹೆಚ್ಚಿಸಿ ನಿನ್ನ ಆಯುಷ್ಯವನ್ನು ವೃದ್ಧಿಗೊಳಿಸಿ ನಿನಗೆ ಸುಕ್ಷೇಮವನ್ನುಂಟುಮಾಡುವವು.” ವಾಸ್ತವವಾಗಿ, ದೇವರ ಇಷ್ಟವನ್ನು ಮಾಡಲು ಆಯ್ದುಕೊಳ್ಳುವವರಿಗೆ ನಿತ್ಯಜೀವವು ಕೂಡಿಸಲ್ಪಡುವುದು! ಹೀಗೆ, ದೇವರ ವಾಕ್ಯವು ನಮಗೆ ಬುದ್ಧಿ ಹೇಳುವುದು: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣ ಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗ ಮಾಡುವನು.”—ಜ್ಞಾನೋಕ್ತಿ 3:1, 2, 5, 6.

ಸ್ವರ್ಗದಿಂದ ದೇವರ ಆಳಿಕೆ

8, 9. ದೇವರು ಈ ಭೂಮಿಯನ್ನು ಯಾವುದರ ಮೂಲಕ ಶುಚಿಗೊಳಿಸುವನು?

8 ದೇವರು ಭೂಮಿಯನ್ನು ಶುಚಿಗೊಳಿಸುವ ಈ ಕಾರ್ಯವನ್ನು ಮಾನವಕುಲಕ್ಕೆ ದೊರೆಯಸಾಧ್ಯವಿರುವ ಸರಕಾರಗಳಲ್ಲಿ ಸರ್ವೋತ್ತಮವಾದ ಸರಕಾರದ ಮೂಲಕ ಮಾಡುವನು. ಅದು ಸ್ವರ್ಗೀಯ ವಿವೇಕವನ್ನು ಪ್ರತಿಬಿಂಬಿಸುವ ಒಂದು ಸರಕಾರ, ಏಕೆಂದರೆ ಅದು ಸ್ವರ್ಗದಿಂದ ದೇವರ ನಿರ್ದೇಶನದಲ್ಲಿ ಆಳುತ್ತದೆ. ಮತ್ತು ಆ ಸ್ವರ್ಗೀಯ ಸರಕಾರವು ಭೂಮಿಯ ಮೇಲಿಂದ ಸಕಲ ರೂಪಗಳ ಮಾನವಾಳಿಕೆಯನ್ನೂ ತೊಲಗಿಸುವುದು. ದೇವರಿಂದ ಸ್ವತಂತ್ರರಾಗಿ ಆಳಲು ಪ್ರಯತ್ನಿಸುವ ಯಾವ ಆಯ್ಕೆಯೂ ಮಾನವರಿಗೆ ಮತ್ತೆ ಎಂದಿಗೂ ಇರದು.

9 ಈ ಸಂಬಂಧದಲ್ಲಿ ದಾನಿಯೇಲ 2:44 ರ ಪ್ರವಾದನೆಯು ಹೇಳುವುದು: “ಆ ರಾಜರ [ಇಂದಿನ ಸರಕಾರಗಳು] ಕಾಲದಲ್ಲಿ ಪರಲೋಕದೇವರು [ಸ್ವರ್ಗದಲ್ಲಿ] ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ [ಮಾನವರು, ದೇವರಿಂದ ಸ್ವತಂತ್ರರಾಗಿ ಇನ್ನೆಂದಿಗೂ ಆಳುವಂತೆ ಬಿಡಲ್ಪಡರು] ಕದಲಿಹೋಗದು, ಆ [ಈಗ ಅಸ್ತಿತ್ವದಲ್ಲಿರುವ] ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮ ಮಾಡಿ ಶಾಶ್ವತವಾಗಿ ನಿಲ್ಲುವದು.”—ಪ್ರಕಟನೆ 19:11-21; 20:4-6 ಸಹ ನೋಡಿ.

10. ದೇವರ ಸ್ವರ್ಗೀಯ ರಾಜ್ಯದ ಪ್ರಭುತ್ವದಲ್ಲಿ ಇನ್ನು ಮುಂದೆ ಎಂದಿಗೂ ಭ್ರಷ್ಟಾಚಾರವಿರದು ಎಂದು ನಾವೇಕೆ ಖಾತ್ರಿಯಿಂದಿರಬಲ್ಲೆವು?

10 ಹೀಗೆ, ಭ್ರಷ್ಟ ಆಳಿಕೆಯ ರೂಪಗಳನ್ನು ಮಾನವಕುಲವು ಇನ್ನೆಂದಿಗೂ ಪುನಃ ಪಡೆಯದು. ಏಕೆಂದರೆ ದೇವರು ಈ ವ್ಯವಸ್ಥೆಯನ್ನು ಅಂತ್ಯಗೊಳಿಸಿದ ಬಳಿಕ, ಆತನನ್ನು ಬಿಟ್ಟು ಸ್ವತಂತ್ರವಾಗಿರುವ ಮಾನವಾಳಿಕೆ ಪುನಃ ಎಂದಿಗೂ ಅಸ್ತಿತ್ವದಲ್ಲಿರದು. ಮತ್ತು ಸ್ವರ್ಗದಿಂದ ಆಳುವ ಆ ರಾಜ್ಯವು, ದೇವರು ಅದರ ಉಗಮವೂ ಸಂರಕ್ಷಕನೂ ಆಗಿರುವುದರಿಂದ, ಭ್ರಷ್ಟಗೊಳ್ಳದು. ಬದಲಾಗಿ, ಅದು ಅದರ ಮಾನವ ಪ್ರಜೆಗಳ ಅತ್ಯುತ್ತಮ ಹಿತಕ್ಕಾಗಿ ಕಾರ್ಯ ನಡೆಸುವುದು. ಆಗ ದೇವರ ಚಿತ್ತ ಸ್ವರ್ಗದಲ್ಲಿ ಆಗುವಂತೆಯೇ ಭೂಮಿಯಲ್ಲೆಲ್ಲಾ ಆಗಲಿರುವುದು. ಈ ಕಾರಣದಿಂದಲೇ, ತನ್ನ ಶಿಷ್ಯರು ದೇವರಿಗೆ ಹೀಗೆ ಪ್ರಾರ್ಥಿಸುವಂತೆ ಯೇಸು ಕಲಿಸಶಕ್ತನಾದನು: “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.”—ಮತ್ತಾಯ 6:10.

ನಾವೆಷ್ಟು ಹತ್ತಿರದಲ್ಲಿದ್ದೇವೆ?

11. ಈ ವ್ಯವಸ್ಥೆಯ ಅಂತ್ಯಕ್ಕೆ ನಾವೆಷ್ಟು ಹತ್ತಿರದಲ್ಲಿದ್ದೇವೆಂದು ನಿರ್ಣಯಿಸಲು ನಮಗೆ ಸಹಾಯಿಸುವ ಪ್ರವಾದನೆಗಳನ್ನು ಬೈಬಲಿನಲ್ಲಿ ನಾವೆಲ್ಲಿ ಕಂಡುಕೊಳ್ಳುತ್ತೇವೆ?

11 ಈ ಅಸಂತೃಪ್ತಿಕರವಾದ ವಿಷಯಗಳ ವ್ಯವಸ್ಥೆಯ ಅಂತ್ಯ ಮತ್ತು ದೇವರ ನೂತನ ಜಗತ್ತಿನ ಆರಂಭಕ್ಕೆ ನಾವೆಷ್ಟು ಹತ್ತಿರದಲ್ಲಿದ್ದೇವೆ? ಬೈಬಲ್‌ ಪ್ರವಾದನೆ ನಮಗೆ ಸ್ಪಷ್ಟವಾಗಿ ಉತ್ತರವನ್ನು ಕೊಡುತ್ತದೆ. ಉದಾಹರಣೆಗೆ, ನಾವು ನಮ್ಮ ಸ್ಥಾನವನ್ನು, “ವಿಷಯಗಳ ವ್ಯವಸ್ಥೆಯ ಸಮಾಪ್ತಿ” ಎಂದು ಬೈಬಲು ಕರೆಯುವ ಸಂಗತಿಯ ಸಂಬಂಧದಲ್ಲಿ ನಿರ್ಧರಿಸುವಂತೆ ಏನನ್ನು ಎದುರು ನೋಡಬೇಕೆಂದು ಯೇಸು ತಾನೇ ಮುಂತಿಳಿಸಿದನು. ಇದು ಮತ್ತಾಯ 24 ಮತ್ತು 25, ಮಾರ್ಕ 13, ಮತ್ತು ಲೂಕ 21 ನೆಯ ಅಧ್ಯಾಯಗಳಲ್ಲಿ ದಾಖಲೆಯಾಗಿದೆ. ಅಲ್ಲದೆ, 2 ತಿಮೊಥೆಯ 3 ನೆಯ ಅಧ್ಯಾಯದಲ್ಲಿ ದಾಖಲೆಯಾಗಿರುವಂತೆ, “ಕಡೇ ದಿವಸಗಳು” ಎಂದು ಕರೆಯಲಾಗುವ ಕಾಲಾವಧಿ ಇರುವುದೆಂದು ಅಪೊಸ್ತಲ ಪೌಲನು ಮುಂತಿಳಿಸಿದನು. ಆಗ ನಡೆಯುವ ವಿವಿಧ ಘಟನೆಗಳು ನಾವು ಕಾಲದ ಪ್ರವಾಹದಲ್ಲಿ ಎಲ್ಲಿದ್ದೇವೆಂಬುದನ್ನು ಇನ್ನೂ ದೃಢಪಡಿಸುವುದು.

12, 13. ಅಂತ್ಯಕಾಲದ ಕುರಿತು ಯೇಸುವೂ ಪೌಲನೂ ಏನು ಹೇಳಿದರು?

12 ಈ ಕಾಲಾವಧಿ ಈ ಘಟನೆಗಳಿಂದ ಆರಂಭಗೊಳ್ಳುವುದೆಂದು ಯೇಸು ಹೇಳಿದನು: “ಜನಕ್ಕೆ ವಿರೋಧವಾಗಿ ಜನವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು; ಮತ್ತು ಅಲ್ಲಲ್ಲಿ ಬರಗಳು ಬರುವವು, ಭೂಕಂಪಗಳು ಆಗುವವು.” (ಮತ್ತಾಯ 24:7) ಲೂಕ 21:11 (NW), “ಒಂದಾದ ಮೇಲೆ ಇನ್ನೊಂದು ಸ್ಥಳದಲ್ಲಿ ಅಂಟುರೋಗಗಳು” ಎಂದೂ ಅವನು ಹೇಳಿದನೆಂದು ತೋರಿಸುತ್ತದೆ. ಮತ್ತು “ಅಧರ್ಮವು ಹೆಚ್ಚಾಗು” ವುದೆಂದೂ ಅವನು ಎಚ್ಚರಿಸಿದನು.—ಮತ್ತಾಯ 24:12.

13 ಅಪೊಸ್ತಲ ಪೌಲನು ಮುಂತಿಳಿಸಿದ್ದು: “ಆದರೆ ಕಡೇ ದಿವಸಗಳಲ್ಲಿ ಕಠಿನ ಕಾಲಗಳು ಬರುವವೆಂಬದನ್ನು ತಿಳಿದುಕೋ. ಮನುಷ್ಯರು ಸ್ವಾರ್ಥಚಿಂತಕರೂ ಹಣದಾಸೆಯವರೂ ಬಡಾಯಿ ಕೊಚ್ಚುವವರೂ ಅಹಂಕಾರಿಗಳೂ ದೂಷಕರೂ ತಂದೆತಾಯಿಗಳಿಗೆ ಅವಿಧೇಯರೂ ಉಪಕಾರನೆನಸದವರೂ ದೇವಭಯವಿಲ್ಲದವರೂ ಮಮತೆಯಿಲ್ಲದವರೂ ಚಾಡಿಹೇಳುವವರೂ ದಮೆಯಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೇದನ್ನು ಪ್ರೀತಿಸದವರೂ ದ್ರೋಹಿಗಳೂ ದುಡುಕಿನವರೂ ಉಬ್ಬಿಕೊಂಡವರೂ ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವರೂ ಭಕ್ತಿಯ ವೇಷವಿದ್ದು ಅದರ ಬಲವನ್ನು ಬೇಡವೆನ್ನುವವರೂ ಆಗಿರುವರು. . . . ಆದರೆ ದುಷ್ಟರೂ ವಂಚಕರೂ ಇತರರನ್ನು ಮೋಸಮಾಡುತ್ತಾ ತಾವೇ ಮೋಸಹೋಗುತ್ತಾ ಹೆಚ್ಚಾದ ಕೆಟ್ಟತನಕ್ಕೆ ಹೋಗುವರು.”—2 ತಿಮೊಥೆಯ 3:1-5, 13.

14, 15. ಈ 20 ನೆಯ ಶತಮಾನದ ಘಟನೆಗಳು, ನಾವು ನಿಶ್ಚಯವಾಗಿಯೂ ಕೊನೆಯ ದಿವಸಗಳಲ್ಲಿ ಬದುಕುತ್ತಿದ್ದೇವೆಂದು ಹೇಗೆ ಪ್ರಮಾಣೀಕರಿಸುತ್ತವೆ?

14 ಯೇಸು ಮತ್ತು ಪೌಲನು ಮುಂತಿಳಿಸಿದ ಆ ವಿಷಯಗಳು ನಮ್ಮ ದಿನಗಳಲ್ಲಿ ಸಂಭವಿಸಿವೆಯೆ? ಹೌದು, ನಿಶ್ಚಯವಾಗಿ. I ನೆಯ ಲೋಕ ಯುದ್ಧವು, ಆ ದಿನಗಳ ವರೆಗಿನ ಯುದ್ಧಗಳಲ್ಲಿ ಅತಿ ಕೆಡುಕಾದ ಯುದ್ಧವಾಗಿತ್ತು. ಅದು ಒಂದನೆಯ ಜಾಗತಿಕ ಯುದ್ಧವಾಗಿದ್ದು ಆಧುನಿಕ ಇತಿಹಾಸದಲ್ಲಿ ಒಂದು ಸಂಧಿಕಾಲವಾಗಿತ್ತು. ಆ ಯುದ್ಧದೊಂದಿಗೆ ಆಹಾರದ ಅಭಾವಗಳು, ಸಾಂಕ್ರಾಮಿಕ ರೋಗಗಳು, ಮತ್ತು ಇತರ ವಿಪತ್ತುಗಳು ಜೊತೆಯಾಗಿ ಹೋದವು. ಇಸವಿ 1914 ರಂದಿನಿಂದ, ನಡೆದ ಆ ಘಟನೆಗಳು, ಯೇಸು ಹೇಳಿದಂತೆ, “ಪ್ರಸವವೇದನೆಯ ಪ್ರಾರಂಭ” ವಾಗಿದ್ದವು. (ಮತ್ತಾಯ 24:8) ಅವು “ಕಡೇ ದಿವಸಗಳು” ಎಂದು ಮುಂತಿಳಿಸಲ್ಪಟ್ಟಿದ್ದ ಸಮಯಾವಧಿಯನ್ನು, ದೇವರು ದುಷ್ಟತ್ವ ಮತ್ತು ಕಷ್ಟಾನುಭವಕ್ಕೆ ಅನುಮತಿ ಕೊಡುವ ಕೊನೆಯ ಸಂತತಿಯನ್ನು ಆರಂಭಿಸಿದವು.

15 ನಿಮಗೆ ಈ ಇಪ್ಪತ್ತನೆಯ ಶತಮಾನದ ಘಟನೆಗಳು ಪರಿಚಿತವಾಗಿರುವುದು ಸಂಭವನೀಯ. ಎದ್ದು ಬಂದಿರುವ ಅಸ್ತವ್ಯಸತ್ತೆ ನಿಮಗೆ ಗೊತ್ತಿದೆ. ಸುಮಾರು 10 ಕೋಟಿ ಜನರು ಯುದ್ಧಗಳಲ್ಲಿ ಕೊಲ್ಲಲ್ಪಟ್ಟಿದ್ದಾರೆ. ಇನ್ನಿತರ ಕೋಟಿಗಟ್ಟಲೆ ಜನರು ಹಸಿವೆ ಮತ್ತು ರೋಗಗಳಿಂದ ಸತ್ತಿದ್ದಾರೆ. ಭೂಕಂಪಗಳು ಅಸಂಖ್ಯಾತ ಪ್ರಾಣಗಳನ್ನು ಆಹುತಿ ತೆಗೆದುಕೊಂಡಿವೆ. ಜೀವ ಮತ್ತು ಸ್ವತ್ತಿಗೆ ತಾತ್ಸಾರ ಭಾವವು ಬೆಳೆಯುತ್ತದೆ. ಪಾತಕದ ಭಯವು ಪ್ರತಿದಿನದ ಜೀವನದ ಭಾಗವಾಗಿದೆ. ನೈತಿಕ ಮಟ್ಟಗಳು ತಳ್ಳಿಹಾಕಲ್ಪಟ್ಟಿವೆ. ಜನಸಂಖ್ಯಾ ಸ್ಫೋಟನ ಬಗೆಹರಿಸಲ್ಪಡದೆ ಇರುವ ಸಮಸ್ಯೆಗಳನ್ನು ಮುಂದಿಡುತ್ತದೆ. ಮಾಲಿನ್ಯವು ಜೀವದ ಗುಣಮಟ್ಟವನ್ನು ಹಾಳುಮಾಡಿ, ಅದನ್ನು ಅಪಾಯಕ್ಕೂ ಒಳಪಡಿಸುತ್ತಿದೆ. ನಾವು 1914 ರಿಂದ ನಿಜವಾಗಿಯೂ ಕಡೇ ದಿವಸಗಳಲ್ಲಿದ್ದೇವೆ ಮತ್ತು ನಮ್ಮ ಸಮಯಗಳಿಗೆ ಸಂಬಂಧಿಸಿರುವ ಬೈಬಲ್‌ ಪ್ರವಾದನೆಗಳ ಪರಾಕಾಷ್ಠೆಯನ್ನು ಸಮೀಪಿಸುತ್ತಿದ್ದೇವೆ.

16. ಕಡೆಯ ದಿವಸಗಳು ಎಷ್ಟು ದೀರ್ಘಾವಧಿಯುಳ್ಳದ್ದಾಗಿವೆ?

16 ಈ ಕಡೇ ದಿವಸಗಳು ಎಷ್ಟು ದೀರ್ಘವಿರುವ ಸಮಯಾವಧಿಯಾಗಿ ಪರಿಣಮಿಸಿಯಾವು? “ಪ್ರಸವವೇದನೆಯ ಪ್ರಾರಂಭ” ವನ್ನು 1914 ರಿಂದ ಹಿಡಿದು ಅನುಭವಿಸಲಿದ್ದ ಆ ಯುಗದ ಸಂಬಂಧದಲ್ಲಿ ಯೇಸು ನುಡಿದದ್ದು: “ಇದೆಲ್ಲಾ ಆಗುವ ತನಕ ಈ ಸಂತತಿಯು ಅಳಿದು ಹೋಗುವದೇ ಇಲ್ಲ.” (ಮತ್ತಾಯ 24:8, 34-36) ಹೀಗೆ, ಕಡೇ ದಿವಸಗಳ ಸಕಲ ಲಕ್ಷಣಗಳು, ಒಂದು ಸಂತತಿಯ, 1914 ರ ಸಂತತಿಯ ಜೀವಮಾನದಲ್ಲಿ ನಡೆಯಲೇ ಬೇಕು. ಹೀಗೆ, 1914 ರಲ್ಲಿ ಜೀವಿಸಿದ್ದ ಕೆಲವರು, ಈ ವ್ಯವಸ್ಥೆಯು ತನ್ನ ಅಂತ್ಯಕ್ಕೆ ಬರುವಾಗ ಇನ್ನೂ ಜೀವಿಸುತ್ತಿರುವರು. ಜನರ ಆ ಸಂತತಿಗೆ ಈಗ ತೀರಾ ವಯಸ್ಸಾಗಿದೆ. ದೇವರು ಈ ಪ್ರಸ್ತುತದ ವಿಷಯಗಳ ವ್ಯವಸ್ಥೆಗೆ ಅಂತ್ಯವನ್ನು ತರುವ ಮೊದಲು ಹೆಚ್ಚು ಸಮಯವು ಉಳಿದಿಲ್ಲವೆಂದು ಇದು ಸೂಚಿಸುತ್ತದೆ.

17, 18. ಈ ಲೋಕದ ಅಂತ್ಯಕ್ಕೆ ನಾವು ಅತಿ ಸಮೀಪದಲ್ಲಿದ್ದೇವೆಂದು ಯಾವ ಪ್ರವಾದನೆ ತೋರಿಸುತ್ತದೆ?

17 ಈ ವ್ಯವಸ್ಥೆಯ ಅಂತ್ಯ ಅತಿ ಸಮೀಪದಲ್ಲಿದೆಯೆಂದು ತೋರಿಸುವ ಇನ್ನೊಂದು ಪ್ರವಾದನೆಯು ಅಪೊಸ್ತಲ ಪೌಲನಿಂದ ಕೊಡಲ್ಪಟ್ಟಿತು. ಅವನು ಮುಂತಿಳಿಸಿದ್ದು: “ಯೆಹೋವನ ದಿನವು ರಾತ್ರಿಯಲ್ಲಿ ಬರುವ ಕಳ್ಳನಂತೆಯೇ ಬರುತ್ತದೆ. ಅವರು ಯಾವಾಗ, ‘ಶಾಂತಿ ಮತ್ತು ಭದ್ರತೆ!’ ಎಂದು ಹೇಳುತ್ತಾರೋ ಆಗ . . ., ತೀವ್ರ ನಾಶನವು ತತ್‌ಕ್ಷಣವೇ ಅವರ ಮೇಲೆ ಬರಲಿರುವುದು ಮತ್ತು ಅವರು ಖಂಡಿತವಾಗಿಯೂ ತಪ್ಪಿಸಿಕೊಳ್ಳರು.”—1 ಥೆಸಲೊನೀಕ 5:2, 3, NW; ನೋಡಿ ಲೂಕ 21:34, 35 ಸಹ.

18 ಇಂದು ಶೀತಲ ಯುದ್ಧ ಮುಗಿದಿದೆ, ಮತ್ತು ಅಂತಾರಾಷ್ಟ್ರೀಯ ಯುದ್ಧ ಇನ್ನು ಮುಂದೆ ಒಂದು ಪ್ರಮುಖ ಬೆದರಿಕೆಯಾಗಿರಲಿಕ್ಕಿಲ್ಲ. ಆದುದರಿಂದ ತಾವು ಒಂದು ಹೊಸ ಲೋಕ ವ್ಯವಸ್ಥೆಗೆ ಅತಿ ಸಮೀಪದಲ್ಲಿದ್ದೇವೆಂದು ರಾಷ್ಟ್ರಗಳಿಗೆ ಅನಿಸಬಹುದು. ಆದರೆ ಅವರ ಪ್ರಯತ್ನಗಳು ಸಫಲಗೊಳ್ಳುತ್ತಿವೆಯೆಂದು ಅವುಗಳಿಗೆ ಅನಿಸುವಾಗ, ಅವುಗಳು ಯೋಚಿಸುವುದಕ್ಕೆ ವ್ಯತಿರಿಕ್ತವಾದದ್ದು ಸಂಭವಿಸುತ್ತದೆಂದು ಅರ್ಥ, ಏಕೆಂದರೆ ದೇವರಿಂದ ಈ ವ್ಯವಸ್ಥೆಯ ಅಂತ್ಯ ಸನ್ನಿಹಿತವೆಂಬುದಕ್ಕೆ ಅದು ಅಂತಿಮ ಸಂಕೇತವಾಗಿರುವುದು. ರಾಜಕೀಯ ಮಾತುಕತೆಗಳು ಮತ್ತು ಒಪ್ಪಂದಗಳು ಜನರಲ್ಲಿ ನಿಜ ಬದಲಾವಣೆಗಳನ್ನು ಮಾಡುತ್ತಾ ಇಲ್ಲವೆಂಬುದು ನೆನಪಿರಲಿ. ಜನರು ಪರಸ್ಪರವಾಗಿ ಪ್ರೀತಿಸುವಂತೆ ಅವು ಮಾಡುವುದಿಲ್ಲ. ಮತ್ತು ಲೋಕ ನಾಯಕರು ಪಾತಕಗಳನ್ನು ನಿಲ್ಲಿಸುವುದೂ ಇಲ್ಲ, ರೋಗ ಮತ್ತು ಮರಣವನ್ನು ನಿವಾರಿಸುವುದೂ ಇಲ್ಲ. ಆದುದರಿಂದ ಮಾನವ ಶಾಂತಿ ಮತ್ತು ಭದ್ರತೆಯ ಯಾವುದೇ ವಿಕಾಸದಲ್ಲಿ ಭರವಸೆಯಿಟ್ಟು, ಈ ಲೋಕ ತನ್ನ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಸಫಲಗೊಳ್ಳುತ್ತಾ ಇದೆ ಎಂದು ನೆನಸಬೇಡಿರಿ. (ಕೀರ್ತನೆ 146:3) ಅಂಥ ಕೂಗಿನ ನಿಜಾರ್ಥವು, ಈ ಜಗತ್ತು ಅದರ ಅಂತ್ಯಕ್ಕೆ ಅತಿ ಸಮೀಪದಲ್ಲಿದೆ ಎಂದಾಗಿರುವುದು.

ಸುವಾರ್ತೆ ಸಾರುವುದು

19, 20. ಕಡೆಯ ದಿವಸಗಳಲ್ಲಿ ಸಾರುವುದನ್ನು ಒಳಗೊಂಡಿರುವ ಯಾವ ಪ್ರವಾದನೆಯು ನೆರವೇರುತ್ತಿರುವುದನ್ನು ನಾವು ನೋಡುತ್ತೇವೆ?

19 ಇಸವಿ 1914 ರಿಂದ ನಾವು ಕೊನೆಯ ದಿವಸಗಳಲ್ಲಿದ್ದೇವೆಂದು ತೋರಿಸುವ ಇನ್ನೊಂದು ಪ್ರವಾದನೆಯು ಯೇಸು ಕೊಟ್ಟ ಪ್ರವಾದನೆ: “ಮೊದಲು ಎಲ್ಲಾ ಜನಾಂಗಗಳಿಗೆ ಸುವಾರ್ತೆಯು ಸಾರಲ್ಪಡಬೇಕು.” (ಮಾರ್ಕ 13:10) ಅಥವಾ, ಮತ್ತಾಯ 24:14 ಹೇಳುವಂತೆ: “ಇದಲ್ಲದೆ ಪರಲೋಕರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.”

20 ಇತಿಹಾಸದಲ್ಲಿ ಹಿಂದೆಂದೂ ಆಗಿಲ್ಲದ ರೀತಿಯಲ್ಲಿ ಇಂದು, ಈ ಲೋಕದ ಅಂತ್ಯದ ಮತ್ತು ದೇವರ ರಾಜ್ಯದ ಕೆಳಗೆ ಒಳಬರಲಿರುವ ಪ್ರಮೋದವನವಾದ ನೂತನ ಲೋಕದ ಸುವಾರ್ತೆಯು ಭೂಮಿಯಲ್ಲೆಲ್ಲಾ ಸಾರಲ್ಪಡುತ್ತಿದೆ. ಯಾರಿಂದ? ಲಕ್ಷಗಟ್ಟಲೆ ಯೆಹೋವನ ಸಾಕ್ಷಿಗಳಿಂದ. ಅವರು ಲೋಕದ ಪ್ರತಿಯೊಂದು ದೇಶದಲ್ಲಿಯೂ ಸಾರುತ್ತಿದ್ದಾರೆ.

21, 22. ಯೆಹೋವನ ಸಾಕ್ಷಿಗಳು ನಿಜ ಕ್ರೈಸ್ತರೆಂಬುದನ್ನು ವಿಶೇಷವಾಗಿ, ಯಾವುದು ಗುರುತಿಸುತ್ತದೆ?

21 ದೇವರ ರಾಜ್ಯದ ವಿಷಯ ಸಾರುವುದಕ್ಕೆ ಕೂಡಿಸಿ, ತಮ್ಮನ್ನು ಕ್ರಿಸ್ತನ ನಿಜ ಹಿಂಬಾಲಕರೆಂದು ಗುರುತಿಸುವ ರೀತಿಯಲ್ಲಿ ಯೆಹೋವನ ಸಾಕ್ಷಿಗಳು ವರ್ತಿಸುತ್ತಾರೆ, ಏಕೆಂದರೆ ಅವನು ಪ್ರಕಟಿಸಿದ್ದು: “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.” ಹೀಗೆ, ಯೆಹೋವನ ಸಾಕ್ಷಿಗಳು ಒಂದು ಮುರಿಯಲಾಗದ ಪ್ರೀತಿಯ ಬಂಧದ ಮೂಲಕ ಒಂದು ಭೌಗೋಲಿಕ ಸಹೋದರತ್ವದಲ್ಲಿ ಐಕ್ಯವಾಗಿದ್ದಾರೆ.—ಯೋಹಾನ 13:35; ನೋಡಿ ಯೆಶಾಯ 2:2-4; ಕೊಲೊಸ್ಸೆ 3:14; ಯೋಹಾನ 15:12-14; 1 ಯೋಹಾನ 3:10-12; 4:20, 21; ಪ್ರಕಟನೆ 7:9, 10, ಸಹ.

22 ಯೆಹೋವನ ಸಾಕ್ಷಿಗಳು ಬೈಬಲು ಹೇಳುವುದನ್ನು ನಂಬುತ್ತಾರೆ: “ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆ.” (ಅ. ಕೃತ್ಯಗಳು 10:34, 35) ಅವರು ಎಲ್ಲ ದೇಶಗಳ ತಮ್ಮ ಜೊತೆ ಸಾಕ್ಷಿಗಳನ್ನು, ಕುಲ ಯಾ ವರ್ಣವನ್ನು ಗಣನೆಗೆ ತೆಗೆದುಕೊಳ್ಳದೆ, ಆತ್ಮಿಕ ಸೋದರ ಸೋದರಿಯರಾಗಿ ವೀಕ್ಷಿಸುತ್ತಾರೆ. (ಮತ್ತಾಯ 23:8) ಮತ್ತು ಇಂತಹ ಭೌಗೋಲಿಕ ಸಹೋದರತ್ವವೊಂದು ಇಂದು ಲೋಕದಲ್ಲಿ ಅಸ್ತಿತ್ವದಲ್ಲಿದೆಯೆಂಬ ನಿಜತ್ವವು, ದೇವರ ಉದ್ದೇಶವು ಬೇಗನೆ ಕೈಗೂಡಲಿದೆಯೆಂಬ ರುಜುವಾತಿಗೆ ಕೂಡಿಸುತ್ತದೆ.

[ಅಧ್ಯಯನ ಪ್ರಶ್ನೆಗಳು]

[ಪುಟ 37 ರಲ್ಲಿರುವ ಚಿತ್ರ]

ನೂತನ ಲೋಕದಲ್ಲಿ ದೇವರ ಪರಿಪೂರ್ಣ ಸ್ವರ್ಗೀಯ ರಾಜ್ಯವು ಮಾನವಕುಲದ ಏಕಮಾತ್ರ ಪ್ರಭುತ್ವವಾಗಿರುವುದು