ನಮಗೆ ಯಾವನು ತಿಳಿಸಬಲ್ಲನು?
ಭಾಗ 2
ನಮಗೆ ಯಾವನು ತಿಳಿಸಬಲ್ಲನು?
1, 2. ವಿನ್ಯಾಸಿಸಲ್ಪಟ್ಟ ಯಾವುದೋ ಒಂದು ವಸ್ತುವಿನ ಉದ್ದೇಶವನ್ನು ಕಂಡುಹಿಡಿಯುವ ಅತ್ಯುತ್ತಮ ದಾರಿ ಯಾವುದು?
1 ಜೀವಿತದ ಉದ್ದೇಶವು ನಿಜವಾಗಿಯೂ ಏನೆಂದು ನಮಗೆ ಯಾವನು ತಿಳಿಸಬಲ್ಲನು? ಒಳ್ಳೆಯದು, ನೀವು ಒಬ್ಬ ಯಂತ್ರ ವಿನ್ಯಾಸಕನಿಗೆ ಭೇಟಿಕೊಟ್ಟು ಅವನು ಒಂದು ಜಟಿಲವಾದ, ನೀವು ಗುರುತಿಸದ ಯಂತ್ರದ ಕೆಲಸವನ್ನು ಮಾಡುತ್ತಿದ್ದಾನೆಂದು ನೋಡುವಲ್ಲಿ, ಅದು ಏತಕ್ಕಾಗಿದೆ ಎಂದು ನೀವು ಹೇಗೆ ಕಂಡುಹಿಡಿಯಬಲ್ಲಿರಿ? ಆ ವಿನ್ಯಾಸಕನನ್ನು ಕೇಳುವುದೇ ನಿಮಗೆ ಅತ್ಯುತ್ತಮ ಮಾರ್ಗವಾಗಿರುವುದು.
2 ಹಾಗಾದರೆ, ಭೂಮಿಯಲ್ಲಿ ನಮ್ಮ ಸುತ್ತಲೂ ನಾವು ನೋಡುವ, ಎಲ್ಲ ಜೀವಿಗಳಲ್ಲಿರುವಂತೆ, ಅತಿ ಚಿಕ್ಕದಾದ ಜೀವಕಣದ ವರೆಗೂ ಇರುವ ಉಜ್ವಲ ವಿನ್ಯಾಸದ ವಿಷಯದಲ್ಲೇನು? ಆ ಜೀವಕಣದ ಒಳಗಿರುವ ಇನ್ನೂ ಎಷ್ಟೋ ಚಿಕ್ಕ ಸೂಕ್ಷ್ಮಾಣು ಮತ್ತು ಪರಮಾಣುಗಳು ಸಹ ಆಶ್ಚರ್ಯಕರವಾಗಿ ವಿನ್ಯಾಸಿಸಲ್ಪಟ್ಟಿವೆ ಮತ್ತು ಸುವ್ಯವಸ್ಥಿತವಾಗಿವೆ. ಬೆರಗುಗೊಳಿಸುವಂತೆ ವಿನ್ಯಾಸಿಸಲ್ಪಟ್ಟ ಮಾನವ ಮನಸ್ಸಿನ ಕುರಿತೂ ಏನು? ಮತ್ತು ನಮ್ಮ ಸೌರವ್ಯೂಹ, ನಮ್ಮ ಕ್ಷೀರಪಥ ಆಕಾಶಗಂಗೆ, ಮತ್ತು ನಮ್ಮ ವಿಶ್ವದ ಕುರಿತೇನು? ಈ ಸಕಲ ಭಯಭಕ್ತಿ ಹುಟ್ಟಿಸುವ ವಿನ್ಯಾಸಗಳಿಗೆ ಒಬ್ಬ ವಿನ್ಯಾಸಕಾರನ ಆವಶ್ಯಕತೆಯಿಲ್ಲವೆ? ಇಂಥ ವಸ್ತುಗಳನ್ನು ಏಕೆ ರಚಿಸಿದನೆಂದು ಆತನು ನಿಶ್ಚಯವಾಗಿ ನಮಗೆ ಹೇಳಬಲ್ಲನು.
ಜೀವವು ಆಕಸ್ಮಿಕವಾಗಿ ಹುಟ್ಟಿಬಂತೊ?
3, 4. ಜೀವವು ಆಕಸ್ಮಿಕವಾಗಿ ಎದ್ದುಬಂತೆಂಬದಕ್ಕೆ ಯಾವ ಸಂಭವನೀಯತೆಯಿದೆ?
3 “ಜೀವಿಸುವ ಪ್ರಾಣಿಗಳಲ್ಲಿರುವ ಅಸಾಧಾರಣ ಪ್ರಮಾಣದ ಜಟಿಲತೆ ಮತ್ತು ಸುವ್ಯವಸ್ಥೆಯನ್ನು” ಗಮನಿಸಿ ದಿ ಎನ್‌ಸೈಕ್ಲೊಪೀಡಿಯ ಅಮೆರಿಕಾನ ಹೇಳಿದ್ದು: “ಹೂವುಗಳು, ಕೀಟಗಳು, ಯಾ ಸಸ್ತನಿ ಪ್ರಾಣಿಗಳ ಒತ್ತಾದ ಪರೀಕ್ಷೆಯು ಅಧಿಕಾಂಶ ನಂಬಲಾಗದಷ್ಟು ನಿಷ್ಕೃಷ್ಟವಾದ ಅಂಗಗಳ ಏರ್ಪಾಡನ್ನು ತೋರಿಸುತ್ತದೆ.” ಬ್ರಿಟಿಷ್ ಖಗೋಳಶಾಸ್ತ್ರಜ್ಞ ಸರ್ ಬರ್ನರ್ಡ್ ಲವೆಲ್, ಜೀವಿಸುವ ವ್ಯವಸ್ಥಿತ ದೇಹಗಳ ರಾಸಾಯನಿಕ ಸಂಯೋಜನೆಯನ್ನು ಸೂಚಿಸುತ್ತ ಬರೆದುದು: “ಅತಿ ಸಣ್ಣದಾದ ಸಸಾರಜನಕ ಕಣಗಳಲ್ಲಿ ಒಂದರ ರಚನೆಯಾಗಲು ನಡೆಸುವ ಆಕಸ್ಮಿಕ ಸಂಭವದ . . . ಸಂಭವನೀಯತೆಯು ಭಾವಿಸಲಾಗದಷ್ಟು ಚಿಕ್ಕದು. . . . ಕಾರ್ಯತಃ ಇದು ಸೊನ್ನೆಯೇ.”
4 ತದ್ರೀತಿ, ಖಗೋಳಶಾಸ್ತ್ರಜ್ಞ ಫ್ರೆಡ್ ಹಾಯ್ಲ್ ಹೇಳಿದ್ದು: “ಸಾಂಪ್ರದಾಯಿಕ ಜೀವಶಾಸ್ತ್ರದ ಇಡೀ ಚೌಕಟ್ಟೇ ಜೀವವು ಗೊತ್ತುಗುರಿಯಿಲ್ಲದೆ ಎದ್ದು ಬಂತು ಎಂದು ಇನ್ನೂ ನಂಬುತ್ತದೆ. ಆದರೂ ಜೀವ ರಸಾಯನ ವಿಜ್ಞಾನಿಗಳು ಜೀವದ ಭಕ್ತಿ ಉತ್ಪಾದಕ ಜಟಿಲತೆಯನ್ನು ಹೆಚ್ಚೆಚ್ಚಾಗಿ ಕಂಡುಹಿಡಿಯುವಂತೆ, ಅದು ಆಕಸ್ಮಿಕವಾಗಿ ಹುಟ್ಟಿ ಬರುವ ಸಂಭವವು ಎಷ್ಟು ಅಲ್ಪವೆಂದರೆ ಅದನ್ನು ಅನರ್ಹವೆಂದು ತಳ್ಳಿಹಾಕಸಾಧ್ಯವಿದೆ. ಜೀವವು ಆಕಸ್ಮಿಕವಾಗಿ ಎದ್ದು ಬಂದಿರುವುದು ಅಸಾಧ್ಯ.”
5-7. ಜೀವಿಸುವ ಪ್ರಾಣಿಗಳು ಆಕಸ್ಮಿಕವಾಗಿ ಎದ್ದು ಬರುವುದು ಅಸಾಧ್ಯವೆಂದು ಅಣವ ಜೀವಶಾಸ್ತ್ರವು ಹೇಗೆ ದೃಢಪಡಿಸುತ್ತದೆ?
5 ವಿಜ್ಞಾನದ ಹೆಚ್ಚು ಇತ್ತೀಚಿನ ಕ್ಷೇತ್ರಗಳಲ್ಲಿ ಒಂದಾದ ಅಣವ ಜೀವಶಾಸ್ತ್ರವು ವಂಶವಾಹಿಗಳು, ಅಣುಗಳು, ಮತ್ತು ಪರಮಾಣುಗಳ ಮಟ್ಟದಲ್ಲಿ ಜೀವಿಸುವ ವಸ್ತುಗಳ ಅಧ್ಯಯನವಾಗಿದೆ. ಅಣವ ಜೀವಶಾಸ್ತ್ರಜ್ಞ ಮೈಕಲ್ ಡೆಂಟನ್ ಕಂಡುಹಿಡಿಯಲ್ಪಟ್ಟ ವಿಷಯಗಳ ಬಗ್ಗೆ ಹೇಳುತ್ತಾರೆ: “ತಿಳಿಯಲ್ಪಟ್ಟಿರುವ ಅತಿ ಸರಳ ರೀತಿಯ ಜೀವಕಣದ ಜಟಿಲತೆ ಎಷ್ಟು ಭಾರಿಯೆಂದರೆ, ಇಂತಹ ಒಂದು ವಸ್ತುವನ್ನು ಯಾವುದೋ ಒಂದು ವಿಲಕ್ಷಣವಾದ, ತೀರಾ ಅಸಂಭವನೀಯವಾದ ಘಟನೆಯು ಥಟ್ಟನೆ ಉಂಟುಮಾಡಿದೆಯೆಂಬುದನ್ನು ಒಪ್ಪುವುದು ಅಸಾಧ್ಯ.” “ಆದರೆ ಕೇವಲ ಜೀವಿಸುವ ವ್ಯವಸ್ಥೆಗಳ ಜಟಿಲತೆಯೇ ಅಷ್ಟು ಅಗಾಧವಾದ ಪಂಥಾಹ್ವಾನವನ್ನು ಕೊಡುವುದಲ್ಲ, ಅವುಗಳ ವಿನ್ಯಾಸದಲ್ಲಿ ಅನೇಕ ವೇಳೆ ಕಂಡುಬರುವ ನಂಬಲಾಗದ ಕಲ್ಪನಾ ಚಾತುರ್ಯವೂ ಇದನ್ನು ಕೊಡುತ್ತದೆ.” “ಅಣವ ಮಟ್ಟದಲ್ಲಿಯೇ . . . ಜೀವ ಶಾಸ್ತ್ರೀಯ ವಿನ್ಯಾಸದ ಕಲ್ಪನಾ ಚಾತುರ್ಯ ಮತ್ತು ಸಾಧಿಸಲ್ಪಟ್ಟ ಗುರಿಗಳ ಪರಿಪೂರ್ಣತೆಗಳು ಅತಿ ಹೆಚ್ಚು ಎದ್ದು ಕಾಣುತ್ತವೆ.”
6 ಡೆಂಟನ್ ಇನ್ನೂ ಹೇಳುವುದು: “ನಾವು ಸರ್ವ ಕಡೆಗಳಲ್ಲಿ ನೋಡುವುದಾದರೂ, ಎಪ್ಟೇ ಆಳಕ್ಕೆ ನೋಡುವುದಾದರೂ, ಪೂರ್ತಿ ಅತಿಶಯಿಸುವ ಗುಣಮಟ್ಟದ ಮತ್ತು ಆಕಸ್ಮಿಕ ಸಂಭವದ ವಿಚಾರವನ್ನೇ ದುರ್ಬಲಗೊಳಿಸುವ ನೀಟುಗಾರಿಕೆ ಮತ್ತು ಕಲ್ಪನಾ ಚಾತುರ್ಯವನ್ನು ಕಂಡುಕೊಳ್ಳುತ್ತೇವೆ. ಗೊತ್ತುಗುರಿಯಿಲ್ಲದ ಕಾರ್ಯವಿಧಾನಗಳು, ಯಾವುದರ ಒಂದು ಅತಿ ಚಿಕ್ಕ ಘಟಕಾಂಶ—ಒಂದು ಕಾರ್ಯನಡೆಸಬಲ್ಲ ಸಸಾರಜನಕ ಯಾ ವಂಶವಾಹಿ—ಸಹ ನಮ್ಮ ಸ್ವಂತ ಕಲ್ಪನಾತ್ಮಕ ಸಾಮರ್ಥ್ಯಕ್ಕೆ ಮೀರುವ ರೀತಿಯಲ್ಲಿ ಜಟಿಲವಾಗಿದೆಯೋ ಅಂತಹ, ಆಕಸ್ಮಿಕ ಘಟನೆಯ ತೀರಾ ವಿರೋಧಾಲಂಕಾರವಾದ, ಬುದ್ಧಿಶಕ್ತಿಯ ಮನುಷ್ಯನು ಉತ್ಪನ್ನ ಮಾಡುವ ಯಾವುದನ್ನೂ ಸಕಲಾರ್ಥಗಳಲ್ಲಿ ಮೀರಿಸುವ ವಾಸ್ತವಿಕತೆಯನ್ನು ರಚಿಸಬಲ್ಲದೆಂಬುದು ನಿಜವಾಗಿಯೂ ನಂಬಸಾಧ್ಯವಿರುವ ವಿಷಯವೊ?” ಅವರು ಹೀಗೆ ಸಹ ಹೇಳುತ್ತಾರೆ: “ಒಂದು ಜೀವಿಸುವ ಕಣ ಮತ್ತು ಸ್ಫಟಿಕ ಯಾ ಹಿಮದ ಹಳುಕಿನಂತಹ ಅತಿ ಉನ್ನತ ರೀತಿಯಲ್ಲಿ ವ್ಯವಸ್ಥಿತವಾದ ಅಜೀವಶಾಸ್ತ್ರೀಯ ವ್ಯವಸ್ಥೆಯ ಮಧ್ಯೆ ಭಾವಿಸಸಾಧ್ಯವಾಗುವಷ್ಟು ವಿಶಾಲವೂ ಸಮಗ್ರವೂ ಆದ ಕಂದರವಿದೆ.” ಮತ್ತು ಭೌತ ವಿಜ್ಞಾನದ ಒಬ್ಬ ಪ್ರೊಫೆಸರರಾದ ಚೆಟ್ ರೇಮೊ ಹೇಳುವುದು: “ನನ್ನ ಮೇಲೆ ಆಳವಾದ ಪರಿಣಾಮವಾಗಿಯದೆ. . . . ಪ್ರತಿಯೊಂದು ಅಣುವನ್ನು ಅದರ ಕೆಲಸಕ್ಕಾಗಿಯೇ ಅದ್ಭುತಕರವಾಗಿ ರಚಿಸಿದಂತೆ ಕಾಣುತ್ತದೆ.”
7 “ಈ ಎಲ್ಲ ಹೊಸ ವಾಸ್ತವಿಕತೆಯು ಶುದ್ಧ ಆಕಸ್ಮಿಕ ಘಟನೆಯ ಫಲಿತಾಂಶವಾಗಿದೆ ಎಂದು ಇನ್ನೂ ಔದ್ಧತ್ಯದಿಂದ ಸಮರ್ಥಿಸುವವರು” ಒಂದು ಕಲ್ಪನಾ ಕಥೆಯನ್ನು ನಂಬುತ್ತಾರೆ ಎಂದು ಹೇಳಿ ಅಣವ ಜೀವ ವಿಜ್ಞಾನಿ ಡೆಂಟನ್ ಮುಕ್ತಾಯಗೊಳಿಸುತ್ತಾರೆ. ವಾಸ್ತವವೇನಂದರೆ, ಆಕಸ್ಮಿಕ ಘಟನೆಯ ಮೂಲಕ ಜೀವಿಸುವ ಪ್ರಾಣಿಗಳು ಎದ್ದು ಬರುವ ವಿಷಯವಾದ ಡಾರ್ವಿನ್ ವಾದದ ನಂಬಿಕೆಯನ್ನು ಅವರು, “ಇಪ್ಪತ್ತನೆಯ ಶತಮಾನದ ಮಹಾ ವಿಶ್ವವಿಕಸನಕ್ಕೆ ಸೇರಿದ ಮಿಥ್ಯೆಯಾಗಿದೆ” ಎಂದು ಕರೆಯುತ್ತಾರೆ.
ವಿನ್ಯಾಸ ಒಬ್ಬ ವಿನ್ಯಾಸಕಾರನನ್ನು ಅಪೇಕ್ಷಿಸುತ್ತದೆ
8, 9. ವಿನ್ಯಾಸಿಸಲ್ಪಡುವ ಪ್ರತಿಯೊಂದಕ್ಕೂ ಒಬ್ಬ ವಿನ್ಯಾಸಕಾರನು ಅಗತ್ಯವೆಂದು ತೋರಿಸುವ ಒಂದು ದೃಷ್ಟಾಂತ ಕೊಡಿರಿ.
8 ಅಜೀವಿಯಾದ ಪದಾರ್ಥವು ಆಕಸ್ಮಿಕವಾಗಿ, ಯಾವುದೋ ಅನಿರೀಕ್ಷಿತ ಅಪಘಾತದಿಂದಾಗಿ ಜೀವಿಸಿತು ಎಂಬ ವಿಚಾರವು ಅಸಾಧ್ಯವಾಗುವಷ್ಟು ಅಸಂಭವನೀಯ. ಇಲ್ಲ, ಭೂಮಿಯಲ್ಲಿರುವ ಎಲ್ಲ ಉತ್ಕೃಷ್ಟವಾಗಿ ವಿನ್ಯಾಸಿಸಲ್ಪಟ್ಟ ಜೀವಿಸುವ ಪ್ರಾಣಿಗಳು ಆಕಸ್ಮಿಕ ಘಟನೆಯ ಮೂಲಕ ಬರಸಾಧ್ಯವಿರಲಿಲ್ಲ, ಏಕೆಂದರೆ ವಿನ್ಯಾಸಿಸಲ್ಪಟ್ಟ ಪ್ರತಿಯೊಂದು ವಸ್ತುವಿಗೆ ಒಬ್ಬ ವಿನ್ಯಾಸಕಾರನು ಇರಲೇ ಬೇಕು. ಇದಕ್ಕೆ ಯಾವುದೇ ಅಪವಾದಗಳು ನಿಮಗೆ ಗೊತ್ತಿದೆಯೆ? ಅಪವಾದಗಳೇ ಇಲ್ಲ. ಮತ್ತು ವಿನ್ಯಾಸವು ಎಷ್ಟು ಜಟಿಲವೋ, ವಿನ್ಯಾಸಕಾರನೂ ಅಷ್ಟೇ ಹೆಚ್ಚು ಸಾಮರ್ಥ್ಯವುಳ್ಳವನಾಗಿರಬೇಕು.
9 ಈ ವಿಷಯವನ್ನು ನಾವು ಹೀಗೆಯೂ ಚಿತ್ರಿಸಬಹುದು: ಒಂದು ವರ್ಣಚಿತ್ರವನ್ನು ನಾವು ನೋಡುವಾಗ, ನಾವು ಅದನ್ನು ಒಬ್ಬ ವರ್ಣಚಿತ್ರಗಾರನು ಅಸ್ತಿತ್ವದಲ್ಲಿದ್ದಾನೆಂಬುದಕ್ಕೆ ರುಜುವಾತಾಗಿ ಅಂಗೀಕರಿಸುತ್ತೇವೆ. ಒಂದು ಪುಸ್ತಕವನ್ನು ಓದುವಾಗ, ಒಬ್ಬ ಲೇಖಕನಿದ್ದಾನೆಂದು ನಾವು ಒಪ್ಪಿಕೊಳ್ಳುತ್ತೇವೆ. ಒಂದು ಮನೆಯನ್ನು ನೋಡುವಾಗ ಒಬ್ಬ ಕಟ್ಟುವವನು ಇದ್ದಾನೆಂದು ನಾವು ಒಪ್ಪಿಕೊಳ್ಳುತ್ತೇವೆ. ವಾಹನಗಳ ಸಂಜ್ಞಾ ದೀಪವನ್ನು ಕಂಡಾಗ ಒಂದು ಕಾನೂನನ್ನು ನಿರ್ಮಿಸುವ ಮಂಡಲಿಯಿದೆಯೆಂದು ನಮಗೆ ಗೊತ್ತು. ಆ ಎಲ್ಲ ವಿಷಯಗಳು, ಅದನ್ನು ಮಾಡಿದವರಿಂದ ಒಂದು ಉದ್ದೇಶಕ್ಕಾಗಿ ಮಾಡಲ್ಪಟ್ಟವು. ಮತ್ತು ಅವುಗಳನ್ನು ರಚಿಸಿದ ಜನರ ಬಗೆಗೆ ನಮಗೆ ಎಲ್ಲವೂ ತಿಳಿಯಲಿಕ್ಕಿಲ್ಲವಾದರೂ, ಆ ಜನರು ಅಸ್ತಿತ್ವದಲ್ಲಿದ್ದಾರೆಂಬುದನ್ನು ನಾವು ಸಂದೇಹಿಸುವುದಿಲ್ಲ.
10. ಒಬ್ಬ ಪರಮ ವಿನ್ಯಾಸಕಾರನ ಯಾವ ರುಜುವಾತನ್ನು ನೋಡಸಾಧ್ಯವಿದೆ?
10 ತದ್ರೀತಿ, ಒಬ್ಬ ಪರಮ ವಿನ್ಯಾಸಕಾರನ ಅಸ್ತಿತ್ವದ ರುಜುವಾತನ್ನು ಭೂಮಿಯ ಮೇಲಿರುವ ಜೀವಿಸುವ ಪ್ರಾಣಿಗಳ ವಿನ್ಯಾಸ, ವ್ಯವಸ್ಥೆ, ಮತ್ತು ಜಟಿಲತೆಯಿಂದ ನೋಡಸಾಧ್ಯವಿದೆ. ಅವೆಲ್ಲವೂ ಒಬ್ಬ ಪರಮ ಬುದ್ಧಿಶಕ್ತಿಯ ಗುರುತನ್ನು ಪಡೆದಿರುತ್ತವೆ. ಕೋಟಿಗಟ್ಟಲೆ ಆಕಾಶಗಂಗೆಗಳು, ಅವುಗಳಲ್ಲಿ ಪ್ರತಿಯೊಂದರಲ್ಲಿ ಕೋಟಿಗಟ್ಟಲೆ ನಕ್ಷತ್ರಗಳಿರುವ ವಿಶ್ವದ ವಿನ್ಯಾಸ, ಕ್ರಮ, ಮತ್ತು ಜಟಿಲತೆಯ ವಿಷಯದಲ್ಲಿಯೂ ಇದು ಸತ್ಯವಾಗಿದೆ. ಮತ್ತು ಸಕಲ ಆಕಾಶಸ್ಥ ಕಾಯಗಳೂ, ಚಲನೆ, ತಾಪ, ಬೆಳಕು, ಶಬ್ದ, ವಿದ್ಯುತ್ಕಾಂತತೆ, ಮತ್ತು ಗುರುತ್ವಾಕರ್ಷಣದಂತಹ ನಿಶ್ಚಿತ ನಿಯಮಗಳಿಂದ ನಿಯಂತ್ರಿಸಲ್ಪಡುತ್ತವೆ. ಶಾಸನಕಾರನು ಇಲ್ಲದಿರುವಲ್ಲಿ ನಿಯಮಗಳು ಇರುವುದು ಸಾಧ್ಯವೊ? ರಾಕೆಟ್ ಪರಿಣತ ಡಾ. ವರ್ನ್‌ಹರ್ ಫಾನ್ ಬ್ರಾನ್ ಹೇಳಿದ್ದು: “ವಿಶ್ವದ ಪ್ರಾಕೃತಿಕ ನಿಯಮಗಳು ಎಷ್ಟು ನಿಷ್ಕೃಷ್ಟವಾಗಿವೆಯೆಂದರೆ, ಚಂದ್ರನಲ್ಲಿಗೆ ಹಾರಲಿಕ್ಕಾಗಿ ಒಂದು ಆಕಾಶನಾವೆಯನ್ನು ಕಟ್ಟಲಿಕ್ಕೆ ನಮಗೆ ಯಾವ ಕಷ್ಟವೂ ಇಲ್ಲ, ಮತ್ತು ಆ ಹಾರಾಟವನ್ನು ಒಂದು ಸೆಕೆಂಡಿನ ಅಂಶದಷ್ಟೂ ನಿಷ್ಕೃಷ್ಟವಾಗಿ ಲೆಕ್ಕ ಮಾಡಬಲ್ಲೆವು. ಈ ನಿಯಮಗಳನ್ನು ಯಾವನೋ ಸ್ಥಾಪಿಸಿದ್ದಿರಬೇಕು.”
11. ನಾವು ನೋಡಲು ಅಸಾಧ್ಯವಾಗಿರುವ ಕಾರಣ ಮಾತ್ರಕ್ಕೆ, ಒಬ್ಬ ಪರಮ ವಿನ್ಯಾಸಕಾರನ ಅಸ್ತಿತ್ವವನ್ನು ನಾವು ಏಕೆ ಅಲ್ಲಗಳೆಯಬಾರದು?
11 ನಿಜ, ಆ ಪರಮ ವಿನ್ಯಾಸಕಾರನನ್ನು ಮತ್ತು ನ್ಯಾಯದಾತನನ್ನು ನಮ್ಮ ಅಕ್ಷರಾರ್ಥ ನೇತ್ರಗಳಿಂದ ನಾವು ನೋಡಲಾರೆವು. ಆದರೆ, ಗುರುತ್ವಾಕರ್ಷಣ, ಕಾಂತತೆ, ವಿದ್ಯುಚ್ಫಕ್ತಿ, ಅಥವಾ ರೇಡಿಯೊ ತರಂಗಗಳ ಅಸ್ತಿತ್ವವನ್ನು, ಕೇವಲ ಅವುಗಳನ್ನು ನೋಡದಿರುವ ಕಾರಣ ನಾವು ಅಲ್ಲಗಳೆಯುತ್ತೇವೆಯೆ? ಇಲ್ಲ, ಅಲ್ಲಗಳೆಯುವುದಿಲ್ಲ, ಏಕೆಂದರೆ ನಾವು ಅವುಗಳ ಪರಿಣಾಮಗಳನ್ನು ಅವಲೋಕಿಸಬಲ್ಲೆವು. ಹಾಗಾದರೆ, ಒಬ್ಬ ಪರಮ ವಿನ್ಯಾಸಕಾರನ ಮತ್ತು ನ್ಯಾಯದಾತನ ವಿಸ್ಮಯಕಾರಕ ಕೈಕೆಲಸದ ಪರಿಣಾಮಗಳನ್ನು ನಾವು ಅವಲೋಕಿಸಸಾಧ್ಯವಿರುವಾಗ, ಆತನನ್ನು ಕೇವಲ ನೋಡಸಾಧ್ಯವಿಲ್ಲದ ಕಾರಣ ಆತನ ಅಸ್ತಿತ್ವವನ್ನು ಏಕೆ ಅಲ್ಲಗಳೆಯಬೇಕು?
12, 13. ಸೃಷ್ಟಿಕರ್ತನ ಅಸ್ತಿತ್ವದ ಬಗ್ಗೆ ರುಜುವಾತು ಏನು ಹೇಳುತ್ತದೆ?
12 ಭೌತ ವಿಜ್ಞಾನದ ಒಬ್ಬ ಪ್ರೊಫೆಸರರಾದ ಪೌಲ್ ಡೇವೀಸ್, ಮನುಷ್ಯನ ಅಸ್ತಿತ್ವವು ಕೇವಲ ವಿಧಿಯ ಚಳಕವಲ್ಲವೆಂದು ತೀರ್ಮಾನಿಸಿದ್ದಾರೆ. ಅವರು ಹೇಳುವುದು: “ನಾವು ನಿಜವಾಗಿಯೂ ಇಲ್ಲಿ ಇರುವಂತೆ ಉದ್ದೇಶಿಸಲ್ಪಟ್ಟಿದ್ದೇವೆ.” ಮತ್ತು ವಿಶ್ವದ ಕುರಿತು ಅವರು ಹೇಳುವುದು: “ನನ್ನ ವೈಜ್ಞಾನಿಕ ಕೆಲಸದ ಮುಖೇನ, ಭೌತ ವಿಶ್ವವು ಎಷ್ಟೊಂದು ಅದ್ಭುತಕರವಾದ ಕಲ್ಪನಾ ಚಾತುರ್ಯದಿಂದ ಮಾಡಲ್ಪಟ್ಟಿದೆಯೆಂದು ನಾನು ಎಷ್ಟು ಹೆಚ್ಚೆಚ್ಚು ಬಲವಾಗಿ ನಂಬುವವನಾಗಿದ್ದೇನೆಂದರೆ, ಇದೊಂದು ಬುದ್ಧಿಯಿಲ್ಲದ ನಿಜತ್ವವೆಂಬುದನ್ನು ನಾನು ಅಂಗೀಕರಿಸಲಾರೆ. ಒಂದು ಹೆಚ್ಚು ಅಗಾಧ ಮಟ್ಟದ ಸ್ಪಷ್ಟೀಕರಣವು ಇರಬೇಕೆಂದು ನನಗೆ ತೋರುತ್ತದೆ.”
13 ಹೀಗೆ, ವಿಶ್ವ, ಭೂಮಿ, ಮತ್ತು ಭೂಮಿಯ ಮೇಲಿರುವ ಜೀವಿಸುವ ಪ್ರಾಣಿಗಳು ಕೇವಲ ಆಕಸ್ಮಿಕ ಘಟನೆಯಿಂದಾಗಿ ಬರಸಾಧ್ಯವಿಲ್ಲವೆಂದು ಪುರಾವೆಯು ನಮಗೆ ತಿಳಿಸುತ್ತದೆ. ಅವೆಲ್ಲವೂ ಅತಿಶಯ ಬುದ್ಧಿಶಕ್ತಿಯುಳ್ಳ, ಒಬ್ಬ ಬಲಾಢ್ಯನಾದ ಸೃಷ್ಟಿಕರ್ತನಿಗೆ ಮೌನವಾದ ಸಾಕ್ಷಿಯನ್ನು ಕೊಡುತ್ತವೆ.
ಬೈಬಲು ಹೇಳುವಂತಹ ವಿಷಯ
14. ಸೃಷ್ಟಿಕರ್ತನ ವಿಷಯದಲ್ಲಿ ಬೈಬಲು ಏನು ತೀರ್ಮಾನಿಸುತ್ತದೆ?
14 ಮಾನವ ಸಂತತಿಯ ಅತಿ ಹಳೆಯ ಪುಸ್ತಕವಾದ ಬೈಬಲು ಇದೇ ತೀರ್ಮಾನಕ್ಕೆ ಬರುತ್ತದೆ. ಉದಾಹರಣೆಗೆ, ಬೈಬಲಿನ, ಅಪೊಸ್ತಲ ಪೌಲನು ಬರೆದ ಇಬ್ರಿಯ ಪುಸ್ತಕದಲ್ಲಿ, ನಮಗೆ ಹೇಳಲ್ಪಡುವುದು: “ಪ್ರತಿ ಮನೆಯನ್ನು ಯಾರೋ ಒಬ್ಬನು ಕಟ್ಟಿರುವನು; ಸಮಸ್ತವನ್ನು ಕಟ್ಟಿದಾತನು ದೇವರೇ.” (ಇಬ್ರಿಯ 3:4) ಅಪೊಸ್ತಲ ಯೋಹಾನನು ಬರೆದ, ಬೈಬಲಿನ ಕೊನೆಯ ಪುಸ್ತಕವು ಸಹ ಹೇಳುವುದು: “ಕರ್ತನೇ [ಯೆಹೋವ, NW], ನಮ್ಮ ದೇವರೇ, ನೀನು ಪ್ರಭಾವ ಮಾನ ಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ; ಸಮಸ್ತವನ್ನು ಸೃಪ್ಟಿಸಿದಾತನು ನೀನೇ; ಎಲ್ಲವು ನಿನ್ನ ಚಿತ್ತದಿಂದಲೇ ಇದ್ದವು, ನಿನ್ನ ಚಿತ್ತದಿಂದಲೇ ನಿರ್ಮಿತವಾದವು.”—ಪ್ರಕಟನೆ 4:11.
15. ದೇವರ ಕೆಲವು ಗುಣಲಕ್ಷಣಗಳನ್ನು ನಾವು ಹೇಗೆ ಗ್ರಹಿಸಬಲ್ಲೆವು?
15 ದೇವರನ್ನು ನೋಡಸಾಧ್ಯವಿಲ್ಲದಿದ್ದರೂ, ಆತನು ಯಾವ ವಿಧದ ದೇವರೆಂಬುದನ್ನು ಆತನು ಮಾಡಿದ ವಿಷಯಗಳ ಮೂಲಕ ಗ್ರಹಿಸಸಾಧ್ಯವಿದೆ ಎಂದು ಬೈಬಲು ತೋರಿಸುತ್ತದೆ. ಅದು ಹೇಳುವುದು: “[ಸೃಷ್ಟಿಕರ್ತನ] ಅದೃಶ್ಯ ಗುಣಲಕ್ಷಣಗಳು, ಅಂದರೆ ಆತನ ನಿತ್ಯಶಕ್ತಿ ಮತ್ತು ದೇವತ್ವವು, ಲೋಕವು ಆರಂಭಗೊಂಡಂದಿನಿಂದ, ವಿವೇಚನೆಯ ದೃಷ್ಟಿಗೆ, ಆತನು ಮಾಡಿರುವ ವಸ್ತುಗಳ ಮೂಲಕ ಗೋಚರವಾಗಿವೆ.”—ರೋಮಾಪುರ 1:20, ದ ನ್ಯೂ ಇಂಗ್ಲಿಷ್ ಬೈಬಲ್.
16. ಮಾನವರಿಗೆ ದೇವರನ್ನು ನೋಡಲು ಸಾಧ್ಯವಿಲ್ಲದಿರುವುದಕ್ಕೆ ನಾವೇಕೆ ಸಂತೋಷಪಡಬೇಕು?
16 ಹೀಗೆ ಬೈಬಲು ನಮ್ಮನ್ನು ಕಾರ್ಯದಿಂದ ಕಾರಣಕ್ಕೆ ಕೊಂಡೊಯ್ಯುತ್ತದೆ. ಕಾರ್ಯವು—ನಿರ್ಮಿಸಲ್ಪಟ್ಟ ಭಯಭಕ್ತಿ ಹುಟ್ಟಿಸುವ ವಸ್ತುಗಳು—ಬುದ್ಧಿ ಶಕ್ತಿಯುಳ್ಳ, ಬಲಾಢ್ಯ ಕಾರಣ—ದೇವರು—ಇದ್ದಾನೆಂಬುದಕ್ಕೆ ರುಜುವಾತು. ಅಲ್ಲದೆ, ಆತನು ಅದೃಶ್ಯನಾಗಿರುವುದಕ್ಕೆ ನಾವು ಕೃತಜ್ಞರಾಗಿರಬಲ್ಲೆವು, ಏಕೆಂದರೆ ಸರ್ವ ವಿಶ್ವದ ಸೃಷ್ಟಿಕರ್ತನೋಪಾದಿ, ರಕ್ತ ಮಾಂಸಗಳ ಮಾನವರು ಆತನನ್ನು ನೋಡಿ ಪಾರಾಗಿ ಉಳಿಯಲಾರದಷ್ಟು ಅಪರಿಮಿತವಾದ ಶಕ್ತಿ ಆತನಿಗಿರುವುದು ನಿಸ್ಸಂದೇಹ. ಮತ್ತು ಬೈಬಲು ಇದನ್ನೇ ಹೇಳುತ್ತದೆ: “ಮನುಷ್ಯರಲ್ಲಿ ಯಾವನೂ [ದೇವರನ್ನು] ನೋಡಿ ಜೀವಿಸಲಾರನು.”—17, 18. ಒಬ್ಬ ಸೃಷ್ಟಿಕರ್ತನ ಕಲ್ಪನೆ ನಮಗೇಕೆ ಪ್ರಾಮುಖ್ಯವಾಗಿರಬೇಕು?
17 ಒಬ್ಬ ಮಹಾ ವಿನ್ಯಾಸಕಾರ, ಒಬ್ಬ ಪರಮಾತ್ಮ—ದೇವರು—ಇದ್ದಾನೆಂಬ ಕಲ್ಪನೆ ನಮಗೆ ಅತಿ ಪ್ರಾಮುಖ್ಯವಾಗಿರಬೇಕು. ಒಬ್ಬ ಸೃಷ್ಟಿಕರ್ತನಿಂದ ನಾವು ಮಾಡಲ್ಪಟ್ಟಿರುವಲ್ಲಿ, ನಮ್ಮನ್ನು ಸೃಷ್ಟಿಸಿದ್ದರಲ್ಲಿ ಆತನಿಗೆ ಒಂದು ಕಾರಣ, ಒಂದು ಉದ್ದೇಶ ಇದ್ದಿರಬೇಕೆಂಬುದು ನಿಶ್ಚಯ. ಜೀವಿತದಲ್ಲಿ ಒಂದು ಉದ್ದೇಶವಿರುವರೆ ನಾವು ಸೃಷ್ಟಿಸಲ್ಪಟ್ಟಿರುವಲ್ಲಿ, ನಮಗಾಗಿ ಭವಿಷ್ಯತ್ತಿನಲ್ಲಿ ಸಂಗತಿಗಳು ಉತ್ತಮಗೊಳ್ಳುವುವು ಎಂದು ನಿರೀಕ್ಷಿಸಲು ಕಾರಣವಿರುವುದು. ಇಲ್ಲದಿದ್ದರೆ, ನಾವು ಕೇವಲ ಜೀವಿಸಿ, ಆಶಾರಹಿತರಾಗಿ ಸಾಯುತ್ತೇವೆ. ಆದುದರಿಂದ ನಮಗಾಗಿ ದೇವರ ಉದ್ದೇಶವನ್ನು ನಾವು ಕಂಡುಕೊಳ್ಳುವುದು ಅತಿ ಪ್ರಾಮುಖ್ಯ. ಆಗ, ನಾವು ಅದಕ್ಕೆ ಹೊಂದಿಕೆಯಾಗಿ ಜೀವಿಸಲಿಚ್ಫಿಸುತ್ತೇವೋ ಇಲ್ಲವೋ ಎಂದು ಆಯ್ದುಕೊಳ್ಳಬಲ್ಲೆವು.
18 ಅಲ್ಲದೆ, ಸೃಷ್ಟಿಕರ್ತನು ನಮ್ಮ ವಿಷಯ ಅತಿಯಾಗಿ ಚಿಂತಿಸುವ ಪ್ರೀತಿಯ ದೇವರಾಗಿದ್ದಾನೆಂದು ಬೈಬಲು ಹೇಳುತ್ತದೆ. ಅಪೊಸ್ತಲ ಪೇತ್ರನು ಹೇಳಿದ್ದು: “ಆತನು ನಿಮಗೋಸ್ಕರ ಚಿಂತಿಸುತ್ತಾನೆ.” (1 ಪೇತ್ರ 5:7; ಅಲ್ಲದೆ ಯೋಹಾನ 3:16 ಮತ್ತು 1 ಯೋಹಾನ 4:8, 16 ನೋಡಿ.) ದೇವರು ನಮ್ಮ ವಿಷಯದಲ್ಲಿ ಎಷ್ಟು ಚಿಂತಿಸುತ್ತಾನೆಂದು ನಾವು ನೋಡಬಲ್ಲ ಒಂದು ದಾರಿಯು, ಆತನು ನಮ್ಮನ್ನು, ಮಾನಸಿಕವಾಗಿಯೂ ಶಾರೀರಿಕವಾಗಿಯೂ ಆಶ್ಚರ್ಯಕರವಾಗಿ ಮಾಡಿರುವ ವಿಧವನ್ನು ಪರಿಗಣಿಸುವ ಮೂಲಕವೇ.
“ಅದ್ಭುತಕರವಾಗಿ” ಮಾಡಲ್ಪಟ್ಟಿರುವುದು
19. ಕೀರ್ತನೆಗಾರನು ಯಾವ ಸತ್ಯವನ್ನು ನಮ್ಮ ಗಮನಕ್ಕೆ ತರುತ್ತಾನೆ?
19 ಬೈಬಲಿನಲ್ಲಿ ಕೀರ್ತನೆಗಾರ ದಾವೀದನು ಒಪ್ಪಿಕೊಂಡದ್ದು: “ಭಯ ಭಕ್ತಿ ಹುಟ್ಟಿಸುವ ವಿಧದಲ್ಲಿ ನಾನು ಅದ್ಭುತಕರವಾಗಿ ಮಾಡಲ್ಪಟ್ಟಿದ್ದೇನೆ.” (ಕೀರ್ತನೆ 139:14, NW) ಇದು ಸತ್ಯವೆಂಬುದೇನೋ ನಿಶ್ಚಯ, ಏಕೆಂದರೆ ಮಾನವ ಮಿದುಳು ಮತ್ತು ದೇಹವು ಒಬ್ಬ ಪರಮ ವಿನ್ಯಾಸಕಾರನಿಂದ ಅದ್ಭುತಕರವಾಗಿ ರಚಿಸಲ್ಪಟ್ಟಿದೆ.
20. ಒಂದು ಎನ್‌ಸೈಕ್ಲೊಪೀಡಿಯ ಮಾನವ ಮಿದುಳನ್ನು ಹೇಗೆ ವರ್ಣಿಸುತ್ತದೆ?
20 ಉದಾಹರಣೆಗೆ, ನಿಮ್ಮ ಮಿದುಳು ಯಾವದೇ ಕಂಪ್ಯೂಟರ್‌ಗಿಂತ ಎಷ್ಟೋ ಹೆಚ್ಚು ಜಟಿಲವಾಗಿದೆ. ದ ನ್ಯೂ ಎನ್‌ಸೈಕ್ಲೊಪೀಡಿಯ ಬ್ರಿಟ್ಯಾನಿಕ ಗಮನಿಸುವುದು: “ನರವ್ಯೂಹದೊಳಗೆ ನಡೆಯುವ ಮಾಹಿತಿ ಪ್ರಸಾರವು ಅತಿ ದೊಡ್ಡ ದೂರವಾಣಿ ವಿನಿಮಯ ಕೇಂದ್ರಗಳಿಗಿಂತ ಹೆಚ್ಚು ಜಟಿಲವಾಗಿದೆ; ಮಾನವ ಮಿದುಳಿನ ಮೂಲಕ ನಡೆಯುವ ಸಮಸ್ಯೆಗಳ ಪರಿಹಾರಕಾರ್ಯವು ಅತಿ ಶಕ್ತಿಯುತವಾದ ಕಂಪ್ಯೂಟರ್‌ಗಳ ಸಾಮರ್ಥ್ಯವನ್ನು ತೀರಾ ಅತಿಶಯಿಸುತ್ತದೆ.”
21. ಮಿದುಳು ಏನು ಮಾಡುತ್ತದೋ ಅದನ್ನು ನೋಡುವಾಗ, ನಾವೇನು ತೀರ್ಮಾನಿಸಬೇಕು?
21 ನಿಮ್ಮ ಮಿದುಳಲ್ಲಿ ಕೋಟಿಗಟ್ಟಲೆ ನಿಜತ್ವಗಳು ಮತ್ತು ಮಾನಸಿಕ ಚಿತ್ರಗಳು ಶೇಖರಿಸಲ್ಪಟ್ಟಿವೆ, ಆದರೆ ಅದು ನಿಜತ್ವಗಳ ಕೇವಲ ಒಂದು ಉಗ್ರಾಣವಲ್ಲ. ಅದರ ಮೂಲಕ ಸೀಟಿ ಹೊಡೆಯುವುದು, ರೊಟ್ಟಿ ಸುಡುವುದು, ವಿದೇಶೀ ಭಾಷೆಗಳನ್ನಾಡುವುದು, ಒಂದು ಕಂಪ್ಯೂಟರನ್ನು ಬಳಸುವುದು, ಅಥವಾ ಒಂದು ವಿಮಾನವನ್ನು ನಡೆಸುವುದು ಹೇಗೆಂದು ನೀವು ಕಲಿಯಬಲ್ಲಿರಿ. ಒಂದು ರಜಾಕಾಲ ಹೇಗಿರಬಹುದೆಂದು ಅಥವಾ ಒಂದು ಹಣ್ಣು ಎಷ್ಟು ಸವಿಯಾಗಿರಬಹುದೆಂದು ನೀವು ಭಾವಿಸಬಲ್ಲಿರಿ. ನೀವು ವಿಶ್ಲೇಷಿಸಿ, ವಸ್ತುಗಳನ್ನು ಮಾಡಬಲ್ಲಿರಿ. ನೀವು ಯೋಜಿಸಿ, ಗಣ್ಯ ಮಾಡಿ, ಪ್ರೀತಿಸಲೂ ಬಲ್ಲಿರಿ, ಮತ್ತು ನಿಮ್ಮ ಆಲೋಚನೆಗಳನ್ನು ಭೂತ, ವರ್ತಮಾನ, ಮತ್ತು ಭವಿಷ್ಯತ್ಕಾಲಗಳಿಗೆ ಸಂಬಂಧಿಸಬಲ್ಲಿರಿ ಸಹ. ಮಾನವರಾದ ನಮಗೆ ಭಯ ಭಕ್ತಿ ಹುಟ್ಟಿಸುವ ಮಾನವ ಮಿದುಳಿನಂತಹ ಒಂದು ವಸ್ತುವನ್ನು ವಿನ್ಯಾಸಿಸಸಾಧ್ಯವಿಲ್ಲದಿರುವುದರಿಂದ, ಅದನ್ನು ವಿನ್ಯಾಸಿಸಿದಾತನಿಗೆ ಯಾವನೇ ಮಾನವನಿಗಿಂತ ಹೆಚ್ಚು ವಿವೇಕವೂ ಸಾಮರ್ಥ್ಯವೂ ಇದೆಯೆಂಬುದು ಸ್ಪಷ್ಟ.
22. ಮಾನವ ಮಿದುಳಿನ ವಿಷಯದಲ್ಲಿ ವಿಜ್ಞಾನಿಗಳು ಏನು ಒಪ್ಪಿಕೊಳ್ಳುತ್ತಾರೆ?
22 ಮಿದುಳಿನ ವಿಷಯದಲ್ಲಿ ವಿಜ್ಞಾನಿಗಳು ಒಪ್ಪಿಕೊಳ್ಳುವುದು: “ಈ ಭವ್ಯವಾಗಿ ರೂಪಿಸಿರುವ, ವ್ಯವಸ್ಥಿತವೂ ವಿಚಿತ್ರವಾಗಿ ಜಟಿಲವೂ ಆಗಿರುವ ಯಂತ್ರದಿಂದ ಈ ಕಾರ್ಯಗಳು ಹೇಗೆ ಸಾಧಿಸಲ್ಪಡುತ್ತವೆಂಬುದು ತೀರ ಅಸ್ಪಷ್ಟ. . . . ಮಿದುಳು ನೀಡುವ ಪ್ರತ್ಯೇಕ ಪ್ರತ್ಯೇಕವಾದ ಸಮಸ್ಯೆಗಳನ್ನು ಮಾನವ ಜೀವಿಗಳು ಎಂದಿಗೂ ಬಗೆಹರಿಸಲಿಕ್ಕಿಲ್ಲ.” (ಸೈಎಂಟಿಫಿಕ್ ಅಮೆರಿಕನ್) ಮತ್ತು ಭೌತ ವಿಜ್ಞಾನದ ಪ್ರೊಫೆಸರ್ ರೇಮೋ ಹೇಳುವುದು: “ಸತ್ಯವನ್ನು ಹೇಳಬೇಕಾದರೆ, ಮಾನವ ಮಿದುಳು ಮಾಹಿತಿಯನ್ನು
ಹೇಗೆ ಶೇಖರಿಸುತ್ತದೆಂಬುದರ, ಯಾ ಇಷ್ಟ ಬಂದಂತೆ ಅದು ಸ್ಮರಣೆಗಳನ್ನು ಹೇಗೆ ಮೇಲಕ್ಕೆ ಕರೆಯಬಲ್ಲದೆಂಬುದರ ಬಗ್ಗೆ ಹೆಚ್ಚಿನದ್ದು ನಮಗಿನ್ನೂ ತಿಳಿದಿರುವುದಿಲ್ಲ. . . . ಮಾನವ ಮಿದುಳಲ್ಲಿ 10 ಸಾವಿರ ಕೋಟಿಗಳಷ್ಟೂ ನರಕಣಗಳಿವೆ. ಪ್ರತಿಯೊಂದು ಕಣವು, ಸಾವಿರಾರು ಇತರ ಕಣಗಳೊಂದಿಗೆ ಸಿನ್ಯಾಪ್ಸೀಸ್ (Synapses) ಗಳ ಮರಸದೃಶವಾದ ಪಂಕ್ತಿಗಳ ಮೂಲಕ ಸಂಪರ್ಕದಲ್ಲಿದೆ. ಅಂತರ್ಜೋಡಣೆಯ ಸಾಧ್ಯತೆಗಳು ತಡಬಡಾಯಿಸುವಷ್ಟು ಜಟಿಲವಾಗಿವೆ.”23, 24. ಅದ್ಭುತಕರವಾದ ರೀತಿಯಲ್ಲಿ ವಿನ್ಯಾಸಿಸಲ್ಪಟ್ಟಿರುವ ಕೆಲವು ದೇಹದ ಅಂಗಗಳನ್ನು ಹೆಸರಿಸಿರಿ, ಮತ್ತು ಒಬ್ಬ ಎಂಜಿನಿಯರನು ಯಾವ ಹೇಳಿಕೆಯನ್ನು ಮಾಡಿದನು?
23 ನಿಮ್ಮ ಕಣ್ಣುಗಳು ಯಾವುದೇ ಕ್ಯಾಮರಕ್ಕಿಂತಲೂ ಹೆಚ್ಚು ನಿಷ್ಕೃಷ್ಟವೂ ಹೊಂದಿಸಿಕೊಳ್ಳಬಲ್ಲವುಗಳೂ ಆಗಿವೆ; ಕಾರ್ಯತಃ ಅವು ಪೂರ್ಣ ಸ್ವಯಂಚಲಿಯಾದ, ತಾನೇ ಕೇಂದ್ರೀಕರಿಸಿಕೊಳ್ಳುವ, ವರ್ಣ ಚಲನ ಚಿತ್ರ ಕ್ಯಾಮರಗಳಾಗಿವೆ. ನಿಮ್ಮ ಕಿವಿಗಳು ವಿವಿಧ ಶಬ್ದಗಳನ್ನು ಗೊತ್ತುಹಚ್ಚಿ ನಿಮಗೆ ದಿಕ್ಕಿನ ಮತ್ತು ಸಮತೆಯ ಪ್ರಜ್ಞೆಯನ್ನು ಕೊಡಬಲ್ಲವು. ನಿಮ್ಮ ಹೃದಯವು, ಅತ್ಯುತ್ತಮ ಎಂಜಿನಿಯರುಗಳು ನಕಲು ಮಾಡಶಕ್ತರಾಗದ ಸಾಮರ್ಥ್ಯಗಳುಳ್ಳ ರೇಚಕ ಯಂತ್ರ. ಕೇವಲ ಕೆಲವನ್ನು ಹೆಸರಿಸುವುದಾದರೆ ಉಜ್ವಲವಾಗಿರುವ ಇತರ ದೇಹಾಂಗಗಳೂ ಯಾವುವೆಂದರೆ: ನಿಮ್ಮ ಮೂಗು, ನಾಲಗೆ ಮತ್ತು ಕೈಗಳು, ಹಾಗೂ ನಿಮ್ಮ ರಕ್ತಪರಿಚಲನೆಯ ಮತ್ತು ಜೀರ್ಣಶಕ್ತಿಯ ವ್ಯೂಹಗಳು.
24 ಹೀಗೆ, ಒಂದು ದೊಡ್ಡ ಕಂಪ್ಯೂಟರನ್ನು ವಿನ್ಯಾಸಿಸಿ ಕಟ್ಟಲು ಕೆಲಸಕ್ಕೆ ಹಿಡಿಯಲ್ಪಟ್ಟ ಒಬ್ಬ ಎಂಜಿನಿಯರನು ತರ್ಕಿಸಿದ್ದು: “ನನ್ನ ಕಂಪ್ಯೂಟರಿಗೆ ಒಬ್ಬ ವಿನ್ಯಾಸಕನ ಆವಶ್ಯಕತೆಯಿದ್ದಲ್ಲಿ, ನನ್ನ ಮಾನವ ದೇಹವಾಗಿರುವ ಆ ಜಟಿಲವಾದ ಪ್ರಾಕೃತಿಕ-ರಾಸಾಯನಿಕ-ಜೀವಶಾಸ್ತ್ರೀಯ ಯಂತ್ರ—ಸರದಿಯಾಗಿ, ಬಹು ಮಟ್ಟಿಗೆ ಅಪಾರ ವಿಶ್ವದ ತೀರ ಅತಿಸೂಕ್ಷ್ಮ ಭಾಗ—ಕ್ಕೆ ಒಬ್ಬ ವಿನ್ಯಾಸಕನು ಎಷ್ಟು ಹೆಚ್ಚಾಗಿ ಬೇಕಾಗಿರುವನು?”
25, 26. ಮಹಾ ವಿನ್ಯಾಸಕಾರನು ನಮಗೆ ಏನು ಹೇಳಲು ಶಕ್ತನಾಗಿರಬೇಕು?
25 ಜನರು ವಿಮಾನಗಳನ್ನು, ಕಂಪ್ಯೂಟರ್‌ಗಳನ್ನು, ಸೈಕಲುಗಳನ್ನು ಮತ್ತು ಇತರ ಉಪಕರಣಗಳನ್ನು ಮಾಡುವಾಗ ಅವರ ಮನಸ್ಸಿನಲ್ಲಿ ಹೇಗೆ ಒಂದು ಉದ್ದೇಶವಿರುತ್ತದೆಯೋ ಹಾಗೆಯೇ ಮಾನವರ ಮಿದುಳು ಮತ್ತು ದೇಹದ ವಿನ್ಯಾಸಕಾರನಿಗೂ ನಮ್ಮನ್ನು ವಿನ್ಯಾಸಿಸಿದುದರಲ್ಲಿ ಒಂದು ಉದ್ದೇಶವಿದ್ದಿರಲೇ ಬೇಕು. ಮತ್ತು ನಮ್ಮಲ್ಲಿ ಯಾವನಿಗೂ ಆ ವಿನ್ಯಾಸಕಾರನ ವಿನ್ಯಾಸಗಳನ್ನು ನಕಲು ಮಾಡಲು ಅಸಾಧ್ಯವಾಗಿರುವುದರಿಂದ ಆತನಿಗೆ ಮಾನವರಿಗಿಂತ ಶ್ರೇಷ್ಠವಾದ ವಿವೇಕವಿರಲೇ ಬೇಕು. ಆದುದರಿಂದ, ಆತನು ನಮ್ಮನ್ನೇಕೆ ವಿನ್ಯಾಸಿಸಿದನು, ನಮ್ಮನ್ನೇಕೆ ಭೂಮಿಯಲ್ಲಿಟ್ಟನು, ಮತ್ತು ನಾವೆಲ್ಲಿಗೆ ಹೋಗುತ್ತೇವೆ ಎಂದು ಹೇಳಬಲ್ಲವನು ಆತನೇ ಎಂಬುದು ನ್ಯಾಯಸಮ್ಮತ.
26 ನಾವು ಆ ಸಂಗತಿಗಳನ್ನು ಕಲಿಯುವಾಗ, ದೇವರು ನಮಗೆ ಕೊಟ್ಟ ಆಶ್ಚರ್ಯಕರವಾದ ಮಿದುಳು ಮತ್ತು ದೇಹವನ್ನು ಜೀವನದ ನಮ್ಮ ಉದ್ದೇಶವನ್ನು ನೆರವೇರಿಸುವುದರ ಕಡೆಗೆ ಉಪಯೋಗಿಸಸಾಧ್ಯವಿದೆ. ಆದರೆ ಆತನ ಉದ್ದೇಶಗಳ ಬಗೆಗೆ ನಾವೆಲ್ಲಿ ಕಲಿಯಬಲ್ಲೆವು? ಆ ಮಾಹಿತಿಯನ್ನು ಆತನು ನಮಗೆಲ್ಲಿ ಕೊಡುತ್ತಾನೆ?
[ಅಧ್ಯಯನ ಪ್ರಶ್ನೆಗಳು]
[ಪುಟ 8 ರಲ್ಲಿರುವ ಚಿತ್ರ]
ಒಂದು ವಸ್ತು ಏಕೆ ವಿನ್ಯಾಸಿಸಲ್ಪಟ್ಟಿತೆಂದು ಕಂಡುಹಿಡಿಯುವ ಅತ್ಯುತ್ತಮ ಮಾರ್ಗವು ವಿನ್ಯಾಸಕಾರನನ್ನು ಕೇಳುವುದೇ
[ಪುಟ 9 ರಲ್ಲಿರುವ ಚಿತ್ರ]
ಜೀವಿಸುವ ಪ್ರಾಣಿಗಳ ಜಟಿಲತೆ ಮತ್ತು ವಿನ್ಯಾಸವನ್ನು ಡಿಎನ್‌ಎ ಅಣುವಿನಲ್ಲಿ ನೋಡಸಾಧ್ಯವಿದೆ
[ಪುಟ 10 ರಲ್ಲಿರುವ ಚಿತ್ರ]
“ಮಾನವ ಮಿದುಳಿನ ಮೂಲಕ ನಡೆಯುವ ಸಮಸ್ಯೆ ಪರಿಹಾರಕಾರ್ಯವು ಅತಿ ಶಕ್ತಿಯುತವಾದ ಮಾನವ ಕಂಪ್ಯೂಟರ್‌ಗಳ ಸಾಮರ್ಥ್ಯವನ್ನು ತೀರಾ ಅತಿಶಯಿಸುತ್ತದೆ”