ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅವನನ್ನು ಸೆರೆಹಿಡಿಯಲು ಅಸಫಲರಾದರು

ಅವನನ್ನು ಸೆರೆಹಿಡಿಯಲು ಅಸಫಲರಾದರು

ಅಧ್ಯಾಯ 67

ಅವನನ್ನು ಸೆರೆಹಿಡಿಯಲು ಅಸಫಲರಾದರು

ಪರ್ಣಶಾಲೆಗಳ ಜಾತ್ರೆಯು ಇನ್ನೂ ನಡೆಯುತ್ತಿರುವಾಗಲೇ, ಧಾರ್ಮಿಕ ಮುಖಂಡರು ಯೇಸುವನ್ನು ಸೆರೆಹಿಡಿಯಲು ಪೊಲೀಸ್‌ ಅಧಿಕಾರಿಗಳನ್ನು ಕಳುಹಿಸಿದರು. ಅವನು ಅಡಗಿಕೊಳ್ಳಲು ಪ್ರಯತ್ನಿಸಲಿಲ್ಲ. ಬದಲು, ಯೇಸುವು ಬಹಿರಂಗವಾಗಿ ಬೋಧಿಸುವದನ್ನು ಮುಂದುವರಿಸುತ್ತಾ ಅಂದದ್ದು: “ಇನ್ನು ಸ್ವಲ್ಪ ಕಾಲ ನಾನು ನಿಮ್ಮಲ್ಲಿ ಇದ್ದು ಆ ಮೇಲೆ ನನ್ನನ್ನು ಕಳುಹಿಸಿದಾತನ ಬಳಿಗ ಹೊರಟು ಹೋಗುತ್ತೇನೆ. ನೀವು ನನ್ನನ್ನು ಹುಡುಕುವಿರಿ, ಆದರೆ ನನ್ನನ್ನು ಕಂಡುಕೊಳ್ಳದೆ ಹೋಗುವಿರಿ, ನಾನು ಇರುವಲ್ಲಿಗೆ ನೀವು ಬರಲಾರಿರಿ.”

ಯೆಹೂದ್ಯರಿಗೆ ಇದರ ಅರ್ಥ ತಿಳಿಯಲಿಲ್ಲ, ಆದ್ದರಿಂದ ಅವರು ತಮ್ಮೊಳಗೆ ಮಾತಾಡಿಕೊಳ್ಳುವದು: “ಇವನು ನಮಗೆ ಸಿಕ್ಕದ ಹಾಗೆ ಎಲ್ಲಿಗೆ ಹೋಗಬೇಕೆಂದಿರುತ್ತಾನೆ? ಗ್ರೀಕರೊಳಗೆ ಚದರಿಕೊಂಡಿರುವ ಯೆಹೂದ್ಯರ ಬಳಿಗೆ ಹೋಗಿ ಆ ಗ್ರೀಕರಿಗೆ ಉಪದೇಶ ಮಾಡಬೇಕೆಂದಿರುತ್ತಾನೋ? ‘ನನ್ನನ್ನು ಹುಡುಕುವಿರಿ, ಆದರೆ ನನ್ನನ್ನು ಕಂಡುಕೊಳ್ಳದೆ ಹೋಗುವಿರಿ, ನಾನು ಇರುವಲ್ಲಿಗೆ ನೀವು ಬರಲಾರಿರಿ’ ಎಂದು ಅವನು ಹೇಳಿದ ಮಾತು ಏನಿದ್ದೀತು?” ವಾಸ್ತವದಲ್ಲಿ ಯೇಸುವು ಬರಲಿರುವ ಅವನ ಮರಣ ಮತ್ತು ಪರಲೋಕದ ಜೀವಿತಕ್ಕೆ ಪುನರುತ್ಥಾನದ ಕುರಿತಾಗಿ ಮಾತಾಡುತ್ತಿದ್ದನು, ಅಲ್ಲಿಗೆ ಅವನ ವೈರಿಗಳು ಹಿಂಬಾಲಿಸಿ ಬರಲು ಸಾಧ್ಯವಿರಲಿಲ್ಲ.

ಈಗ ಜಾತ್ರೆಯ ಏಳನೆಯ ಹಾಗೂ ಕೊನೆಯ ದಿನ ಆಗಮಿಸಿತು. ಜಾತ್ರೆಯ ಪ್ರತಿ ದಿನ ಬೆಳಿಗ್ಗೆ, ಯಾಜಕನೊಬ್ಬನು ಸಿಲೋವ ಕೊಳದಿಂದ ನೀರನ್ನು ತಂದು, ಅದು ವೇದಿಕೆಯ ತಳಭಾಗಕ್ಕೆ ಹರಿಯುವಂತೆ ಸುರಿಯುತ್ತಿದ್ದನು. ಈ ದೈನಂದಿನ ಆಚರಣೆಯನ್ನು ಜನರಿಗೆ ನೆನಪಿಸುತ್ತಾ, ಯೇಸುವು ಕೂಗಿ ಹೇಳಿದ್ದು: “ಯಾವನಿಗಾದರೂ ನೀರಡಿಕೆಯಾಗಿದ್ದರೆ ಅವನು ನನ್ನ ಬಳಿಗೆ ಬಂದು ಕುಡಿಯಲಿ. ನನ್ನನ್ನು ನಂಬಿದವನ ಹೊಟ್ಟೆಯೊಳಗಿಂದ ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಜೀವಕರವಾದ ನೀರಿನ ಹೊಳೆಗಳು ಹರಿಯುವವು.”

ವಾಸ್ತವದಲ್ಲಿ, ಯೇಸುವು ಇಲ್ಲಿ ಪವಿತ್ರಾತ್ಮವನ್ನು ಸುರಿದಾದ ಬಳಿಕ ಆಗುವ ಪರಿಣಾಮಗಳ ಕುರಿತಾಗಿ ಮಾತಾಡುತ್ತಾನೆ. ಮುಂದಿನ ವರ್ಷ ಪವಿತ್ರಾತ್ಮದ ಈ ಸುರಿಯುವಿಕೆಯು ಸಂಭವಿಸಲಿಕ್ಕಿತ್ತು. ಆಗ ಅಲ್ಲಿ 120 ಶಿಷ್ಯರು ಜನರ ಶುಶ್ರೂಷೆಯನ್ನು ಮಾಡಲು ಆರಂಭಿಸಿದಾಗ, ಜೀವಕರವಾದ ನೀರಿನ ಹೊಳೆಗಳು ಹರಿಯಲ್ಲಿದ್ದವು. ಆದರೆ ಅಷ್ಟರ ತನಕ ಅಲ್ಲಿ ಆತ್ಮ ಇರಲಿಲ್ಲ ಅಂದರೆ ಕ್ರಿಸ್ತನ ಶಿಷ್ಯರಲ್ಲಿ ಆ ತನಕ ಯಾರೂ ಪವಿತ್ರಾತ್ಮದಿಂದ ಅಭಿಷಿಕ್ತರಾಗಿರಲಿಲ್ಲ, ಮತ್ತು ಸ್ವರ್ಗೀಯ ಜೀವಿತಕ್ಕೆ ಕರೆಯಲ್ಪಟ್ಟಿರಲಿಲ್ಲ ಎಂಬರ್ಥದಲ್ಲಿತ್ತು.

ಯೇಸುವಿನ ಬೋಧನೆಗೆ ಪ್ರತಿವರ್ತನೆ ತೋರಿಸಿದ ಕೆಲವರು, ಹೀಗನ್ನಲು ಆರಂಭಿಸಿದರು: “ನಿಜವಾಗಿ ಈತನು ಬರಬೇಕಾದ ಪ್ರವಾದಿ,” ಮೋಶೆಗಿಂತಲೂ ದೊಡ್ಡವನಾದ ಒಬ್ಬ ಪ್ರವಾದಿ ಬರಲಿರುವನು ಎಂದು ವಾಗ್ದಾನಿಸಿದ್ದನ್ನು ಅವರು ಸೂಚಿಸುತ್ತಿದ್ದಿರಬೇಕು. ಇನ್ನಿತರರು ಹೇಳಿದ್ದು: “ಇವನು ಕ್ರಿಸ್ತನು.” ಆದರೆ ಇತರರು ಪ್ರತಿಭಟಿಸಿದ್ದು: “ಕ್ರಿಸ್ತನು ಗಲಿಲಾಯದಿಂದ ಬರುವದು ಹೇಗೆ? ದಾವೀದನ ಸಂತಾನದಿಂದಲೂ ದಾವೀದನು ಇದ್ದ ಬೇತ್ಲೆಹೇಮೆಂಬ ಗ್ರಾಮದಿಂದಲೂ ಕ್ರಿಸ್ತನು ಬರುವನು ಎಂಬದಾಗಿ ಶಾಸ್ತ್ರದಲ್ಲಿ ಉಂಟಲ್ಲವೇ?”

ಹೀಗೆ ಜನರ ಗುಂಪಿನಲ್ಲಿ ಭೇದ ಉಂಟಾಯಿತು. ಕೆಲವರು ಯೇಸುವನ್ನು ಹಿಡಿಯಬೇಕೆಂದು ಬಯಸಿದರು, ಆದರೆ ಒಬ್ಬರೂ ಅವನ ಮೇಲೆ ಕೈ ಹಾಕಲಿಲ್ಲ. ಯೇಸುವಿಲ್ಲದೆ ಪೊಲೀಸ್‌ ಅಧಿಕಾರಿಗಳು ಹಿಂತೆರಳಿದಾಗ, ಮಹಾಯಾಜಕರೂ, ಫರಿಸಾಯರೂ ಕೇಳುವದು: “ನೀವು ಅವನನ್ನು ಯಾಕೆ ಹಿಡಿದು ತರಲಿಲ್ಲ?”

“ಈ ಮನುಷ್ಯನು ಮಾತಾಡುವ ರೀತಿಯಲ್ಲಿ ಯಾರೂ ಎಂದು ಮಾತಾಡಿದ್ದಿಲ್ಲ,” ಎಂದು ಅಧಿಕಾರಿಗಳು ಉತ್ತರಿಸಿದರು.

ಕೋಪಭರಿತರಾಗಿ, ಧಾರ್ಮಿಕ ಮುಖಂಡರು ಕುಚೋದ್ಯ, ಮಿಥ್ಯಾಪವಾದ ಮತ್ತು ಅವಹೇಳನದ ಹೆಸರು ಹೇಳುವಷ್ಟು ಅಧೋಗತಿಗೆ ಇಳಿದರು. ಅವರು ಗೇಲಿಮಾಡುವದು: “ನೀವೂ ಮರುಳಾದಿರಾ? ಹಿರೀಸಭೆಯವರಲ್ಲಿಯಾಗಲಿ ಫರಿಸಾಯರಲ್ಲಿಯಾಗಲಿ ಯಾರಾದರೂ ಅವನನ್ನು ನಂಬಿದ್ದಾರೋ? ಧರ್ಮಶಾಸ್ತ್ರವನ್ನರಿಯದಂಥ ಈ ಹಿಂಡು ಶಾಪಗ್ರಸ್ತವಾದದ್ದೇ.”

ಆಗ ಒಬ್ಬ ಫರಿಸಾಯನೂ, ಯೆಹೂದ್ಯರ ಒಬ್ಬ ಅಧಿಪತಿಯೂ ಆದ (ಅಂದರೆ ಸನ್ಹೇದ್ರೀನ್‌ನ ಒಬ್ಬ ಸದಸ್ಯ) ನಿಕೊದೇಮನು ಯೇಸುವಿನ ಪರವಾಗಿ ಮಾತಾಡಲು ಧೈರ್ಯ ಪಡೆದನು. ಸುಮಾರು ಎರಡೂವರೆ ವರ್ಷಗಳ ಹಿಂದೆ ರಾತ್ರಿ ಸಮಯದಲ್ಲಿ ಯೇಸುವಿನ ಬಳಿಗೆ ಬಂದು ಅವನಲ್ಲಿ ನಂಬಿಕೆಯನ್ನು ನಿಕೊದೇಮನು ವ್ಯಕ್ತ ಪಡಿಸಿದ್ದನ್ನು ನೀವು ನೆನಪಿಗೆ ತರಬಹುದು. ಈಗ ನಿಕೊದೇಮನು ಹೇಳುವದು: “ನಮ್ಮ ಧರ್ಮಶಾಸ್ತ್ರವು ಮೊದಲು ಒಬ್ಬನನ್ನು ವಿಚಾರಿಸಿ ಅವನು ಮಾಡುವದೇನೆಂದು ತಿಳುಕೊಳ್ಳದೆ ಅವನು ವಿಷಯವಾಗಿ ತೀರ್ಪುಮಾಡುವದುಂಟೇ?”

ಈಗ ಅವರಲ್ಲಯೇ ಒಬ್ಬನು ಎದ್ದು ಯೇಸುವಿನ ಪರವಾಗಿ ವಾದಿಸುವದನ್ನು ನೋಡಿ ಫರಿಸಾಯರು ಇನ್ನಷ್ಟು ಕೋಪಗೊಳ್ಳುತ್ತಾರೆ. “ನೀನು ಗಲಿಲಾಯದವನೋ?” ಎಂದವರು ಖಾರವಾಗಿ ಠೀಕಿಸುತ್ತಾರೆ. “ಗಲಿಲಾಯದಲ್ಲಿ ಪ್ರವಾದಿ ಹುಟ್ಟುವದೇ ಇಲ್ಲ, ವಿಚಾರಿಸಿ ನೋಡು.”

ಗಲಿಲಾಯದಿಂದ ಪ್ರವಾದಿಯು ಬರಲಿರುವನು ಎಂದು ಧರ್ಮಶಾಸ್ತ್ರವು ನೇರವಾಗಿ ಹೇಳದಿರುವದಾದರೂ, ಆ ಪ್ರಾಂತ್ಯದಿಂದ ಒಂದು “ದೊಡ್ಡ ಬೆಳಕು” ಕಾಣಿಸಲಿರುವದು ಎಂದು ಹೇಳುವದರಿಂದ ಕ್ರಿಸ್ತನು ಅಲ್ಲಿಂದ ಆಗಮಿಸಲಿದ್ದಾನೆ ಎಂದು ಅವು ತೋರಿಸುತ್ತವೆ. ಇನ್ನೂ ಹೆಚ್ಚಾಗಿ, ಯೇಸುವು ಹಟ್ಟಿದ್ದು ಬೇತ್ಲೆಹೇಮಿನಲ್ಲಿ ಮತ್ತು ಅವನು ದಾವೀದನ ಸಂತಾನದವನಾಗಿದ್ದನು. ಫರಿಸಾಯರಿಗೆ ಇದೆಲ್ಲಾ ಪ್ರಾಯಶಃ ತಿಳಿದಿರುವದಾದರೂ, ಯೇಸುವಿನ ಕುರಿತು ಜನರಲ್ಲಿ ಹಬ್ಬಿರುವ ತಪ್ಪು ಕಲ್ಪನೆಗಳಿಗೆ ಅವರು ಪ್ರಾಯಶಃ ಜವಾಬ್ದಾರರಾಗಿದ್ದರು. ಯೋಹಾನ 7:32-52; ಯೆಶಾಯ 9:1, 2; ಮತ್ತಾಯ 4:13-17.

▪ ಜಾತ್ರೆಯ ಪ್ರತಿ ದಿನ ಬೆಳಿಗ್ಗೆ ಏನು ಮಾಡಲಾಗುತ್ತಿತ್ತು, ಮತ್ತು ಯೇಸುವು ಇದಕ್ಕೆ ಹೇಗೆ ಗಮನ ಸೆಳೆಯುತ್ತಿರಬಹುದು?

▪ ಯೇಸುವನ್ನು ಸೆರೆಹಿಡಿಯಲು ಬಂದ ಅಧಿಕಾರಿಗಳು ಅಸಫಲರಾದದ್ದು ಯಾಕೆ, ಮತ್ತು ಧಾರ್ಮಿಕ ಮುಖಂಡರು ಹೇಗೆ ಪ್ರತಿಕ್ರಿಯೆ ತೋರಿಸುತ್ತಾರೆ?

▪ ನಿಕೊದೇಮನು ಯಾರು, ಯೇಸುವಿನ ಕಡೆಗೆ ಅವನ ಮನೋಭಾವ ಏನು, ಮತ್ತು ಅವನ ಜತೆ ಫರಿಸಾಯರು ಅವನೊಂದಿಗೆ ಹೇಗೆ ವರ್ತಿಸಿದರು?

▪ ಗಲಿಲಾಯದಿಂದ ಕ್ರಿಸ್ತನು ಬರುವನು ಎಂಬುದಕ್ಕೆ ಯಾವ ರುಜುವಾತು ಇದೆ?