ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅವನ ಅಗಲುವಿಕೆಗೆ ಅಪೊಸ್ತಲರನ್ನು ಸನ್ನದ್ಧಗೊಸುವದು

ಅವನ ಅಗಲುವಿಕೆಗೆ ಅಪೊಸ್ತಲರನ್ನು ಸನ್ನದ್ಧಗೊಸುವದು

ಅಧ್ಯಾಯ 116

ಅವನ ಅಗಲುವಿಕೆಗೆ ಅಪೊಸ್ತಲರನ್ನು ಸನ್ನದ್ಧಗೊಸುವದು

ಜ್ಞಾಪಕದ ಊಟವು ಮುಗಿದದೆ, ಆದರೆ ಯೇಸುವೂ, ಅವನ ಅಪೊಸ್ತಲರೂ ಇನ್ನೂ ಮೇಲಂತಸ್ತಿನ ಕೋಣೆಯಲ್ಲಿ ಇದ್ದಾರೆ. ಬೇಗನೇ ಯೇಸುವು ಬಿಟ್ಟು ಹೋಗಲಿರುವದಾದರೂ, ಅವನಿಗೆ ಇನ್ನೂ ಅನೇಕ ಸಂಗತಿಗಳನ್ನು ಹೇಳಲಿಕ್ಕಿತ್ತು. “ನಿಮ್ಮ ಹೃದಯಗಳು ಕಳವಳಗೊಳ್ಳದೆ ಇರಲಿ,“ ಅವನು ಅವರನ್ನು ಸಂತೈಸುತ್ತಾನೆ. “ದೇವರನ್ನು ನಂಬಿರಿ.” ಆದರೆ ಅವನು ಕೂಡಿಸುವದು: “ನನ್ನನ್ನೂ ನಂಬಿರಿ.”

“ನನ್ನ ತಂದೆಯ ಮನೆಯಲ್ಲಿ ಬಹಳ ಬಿಡಾರಗಳಿವೆ,” ಯೇಸುವು ಮುಂದುವರಿಸುವದು. “ನಿಮಗೆ ಸ್ಥಳವನ್ನು ಸಿದ್ಧಮಾಡುವದಕ್ಕೆ ಹೋಗುತ್ತೇನಲ್ಲಾ. . . . ನಾನಿರುವ ಸ್ಥಳದಲ್ಲಿ ನೀವು ಸಹ ಇರಬೇಕು. ಮತ್ತು ನಾನು ಹೋಗುವ ಸ್ಥಳದ ಮಾರ್ಗವು ನಿಮಗೆ ತಿಳಿದದೆ.” ಪರಲೋಕಕ್ಕೆ ಯೇಸುವು ಹೋಗಲಿದ್ದಾನೆಂಬುದನ್ನು ಅಪೊಸ್ತಲರು ಗ್ರಹಿಸಲು ಶಕ್ತರಾಗಿರಲಿಲ್ಲ, ಆದುದರಿಂದ ತೋಮನು ಕೇಳುವದು: “ಸ್ವಾಮೀ, ನೀನು ಎಲ್ಲಿಗೆ ಹೋಗುತ್ತೀಯೋ ನಮಗೆ ತಿಳಿಯದು; ಮಾರ್ಗವು ಹೇಗೆ ತಿಳಿದೀತು?”

“ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ,” ಯೇಸುವು ಉತ್ತರಿಸುತ್ತಾನೆ. ಹೌದು, ಅವನ ತಂದೆಯ ಪರಲೋಕದ ಮನೆಗೆ ಯಾರಾದರೂ ಪ್ರವೇಶಿಸಬೇಕಾದರೆ, ಅವನನ್ನು ಸ್ವೀಕರಿಸಿ, ಅವನ ಜೀವಿತದ ನಮೂನೆಯನ್ನು ಅನುಕರಿಸುವದರ ಮೂಲಕ ಮಾತ್ರವೇ ಇದು ಸಾಧ್ಯ, ಯಾಕಂದರೆ ಯೇಸುವು ಹೇಳುವದು: “ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರುವದಿಲ್ಲ.”

“ಸ್ವಾಮೀ, ನಮಗೆ ತಂದೆಯನ್ನು ತೋರಿಸು,” ಫಿಲಿಪ್ಪನು ವಿನಂತಿಸುತ್ತಾನೆ, “ನಮಗೆ ಅಷ್ಟೇ ಸಾಕು.” ಪುರಾತನ ಕಾಲಗಳಲ್ಲಿ ಮೋಶೆ, ಎಲೀಯ ಮತ್ತು ಯೆಶಾಯರಿಗೆ ದರ್ಶನಗಳಲ್ಲಿ ತೋರಿಸಿಕೊಂಡಂತೆ ದೇವರ ದೃಶ್ಯ ಕಾಣಿಸಿಕೊಳ್ಳುವಿಕೆಯೊಂದನ್ನು ಯೇಸುವು ಒದಗಿಸುವಂತೆ, ಪ್ರಾಯಶಃ ಫಿಲಿಪ್ಪನು ಬಯಸಿರಬೇಕು. ಆದರೆ ಅಂಥ ದರ್ಶನಗಳಿಗಿಂತಲೂ ಎಷ್ಟೋ ಉತ್ತಮವಾಗಿರುವಂಥಾದ್ದು, ನಿಜವಾಗಿ ಅಪೊಸ್ತಲರಿಗೆ ಇತ್ತು, ಯೇಸುವು ಅವಲೋಕಿಸುವದು: “ಫಿಲಿಪ್ಪನೇ, ನಾನು ಇಷ್ಟು ದಿವಸ ನಿಮ್ಮ ಸಂಗಡ ಇದ್ದರೂ ನೀನು ಇನ್ನೂ ಅರಿತುಕೊಳ್ಳಲಿಲ್ಲವೇ? ನನ್ನನ್ನು ನೋಡಿದವನು ತಂದೆಯನ್ನು ನೋಡಿದ್ದಾನೆ.”

ಯೇಸುವು ಅವನ ತಂದೆಯ ವ್ಯಕ್ತಿತ್ವವನ್ನು ಎಷ್ಟೊಂದು ಪರಿಪೂರ್ಣವಾಗಿ ಪ್ರತಿಬಿಂಬಿಸುತ್ತಿದ್ದನೆಂದರೆ, ತತ್ಪರಿಣಾಮವಾಗಿ ನೈಜತೆಯಲ್ಲಿ ತಂದೆಯನ್ನು ನೋಡುವದಕ್ಕೆ ಸಮಾನವಾಗಿತ್ತು. ಆದರೂ, ತಂದೆಯು ಮಗನಿಗಿಂತಲೂ ಶ್ರೇಷ್ಠನು, ಇದನ್ನು ಯೇಸುವು ಅಂಗೀಕರಿಸಿದ್ದಾನೆ: “ನಾನು ನಿಮಗೆ ಹೇಳುವ ಮಾತುಗಳನ್ನು ನನ್ನಷ್ಟಕ್ಕೆ ನಾನೇ ಆಡುವದಿಲ್ಲ.” ತನ್ನ ಕಲಿಸುವಿಕೆಗಳಿಗೆ ಎಲ್ಲಾ ಗೌರವವನ್ನು ಯೇಸು ಯೋಗ್ಯವಾಗಿಯೇ ಅವನ ಪರಲೋಕದ ತಂದೆಗೆ ಕೊಡುತ್ತಾನೆ.

ಈಗ ಯೇಸುವು ಇದನ್ನು ಹೇಳುವದನ್ನು ಕೇಳಲು ಅಪೊಸ್ತಲರಿಗೆ ಎಷ್ಟೊಂದು ಉತ್ತೇಜಕವಾಗಿರಬೇಕು: “ನನ್ನನ್ನು ನಂಬುವವನು ನಾನು ನಡಿಸುವ ಕ್ರಿಯೆಗಳನ್ನು ತಾನೂ ನಡಿಸುವನು; ಮತ್ತು ಅವುಗಳಿಗಿಂತ ಮಹತ್ತಾದ ಕ್ರಿಯೆಗಳನ್ನು ನಡಿಸುವನು”! ಅವನು ಮಾಡಿದ್ದಕ್ಕಿಂತಲೂ ಹೆಚ್ಚಿನ ಅದ್ಭುತಕರ ಶಕ್ತಿಯು ಅವನ ಹಿಂಬಾಲಕರಲ್ಲಿ ಇರುವದು ಎಂಬರ್ಥದಲ್ಲಿ ಯೇಸುವು ಇದನ್ನು ಹೇಳಿರಲಿಲ್ಲ. ಇಲ್ಲ, ಆದರೆ ಅವರು ಶುಶ್ರೂಷೆಯ ಕೆಲಸವನ್ನು ಹೆಚ್ಚು ದೀರ್ಘ ಸಮಯದ ತನಕ, ಹೆಚ್ಚು ವಿಸ್ತಾರವಾದ ಕ್ಷೇತ್ರಕ್ಕೆ ಮತ್ತು ಬಹಳ ಅಧಿಕ ಜನರಿಗೆ ಮಾಡುವರು ಎಂಬದು ಅವನ ಅರ್ಥವಾಗಿತ್ತು.

ತನ್ನ ಅಗಲುವಿಕೆಯ ನಂತರ, ಯೇಸುವು ತನ್ನ ಶಿಷ್ಯರನ್ನು ತೊರೆಯುವುದಿಲ್ಲ. “ನೀವು ನನ್ನ ಹೆಸರಿನಲ್ಲಿ ಏನೇನು ಬೇಡಿಕೊಳ್ಳುವಿರೋ,” ಅವನು ಆಶ್ವಾಸನೆಯನ್ನೀಯುವದು, “ಅದನ್ನು ನೆರವೇರಿಸುವೆನು.” ಅವನು ಮತ್ತೂ ಹೇಳುವದು: “ನಾನು ನನ್ನ ತಂದೆಯನ್ನು ಕೇಳಿಕೊಳ್ಳುವೆನು; ಆತನು ನಿಮಗೆ ಬೇರೊಬ್ಬ ಸಹಾಯಕನನ್ನು ಸದಾಕಾಲ ನಿಮ್ಮ ಸಂಗಡ ಇರುವದಕ್ಕೆ ಕೊಡುವನು. ಆ ಸಹಾಯಕನು ಯಾರಂದರೆ ಸತ್ಯದ ಆತ್ಮನೇ.” ಅವನು ಪರಲೋಕಕ್ಕೆ ಏರಿಹೋದ ನಂತರ ಆ ಬೇರೊಬ್ಬ ಸಹಾಯಕನಾದ ಪವಿತ್ರಾತ್ಮವನ್ನು ಅವನ ಶಿಷ್ಯರ ಮೇಲೆ ಯೇಸುವು ಸುರಿಸುತ್ತಾನೆ.

ಯೇಸುವಿನ ಅಗಲಿಹೋಗುವಿಕೆಯು ಹತ್ತರಿಸಿತ್ತು, ಅವನು ಹೇಳುವದು: “ಇನ್ನು ಸ್ವಲ್ಪ ಕಾಲವಾದ ಮೇಲೆ ಲೋಕವು ನನ್ನನ್ನು ನೋಡುವದಿಲ್ಲ.” ಯೇಸುವು ಯಾವನೇ ಮಾನವನು ನೋಡಲು ಅಸಾಧ್ಯವಾಗಿರುವ ಒಬ್ಬ ಆತ್ಮಿಕ ಜೀವಿಯಾಗಲಿರುವನು. ಆದರೆ ತನ್ನ ನಂಬಿಗಸ್ತ ಅಪೊಸ್ತಲರಿಗೆ ಯೇಸುವು ಪುನಃ ವಾಗ್ದಾನಿಸುವದು: “ಆದರೆ ನೀವು ನನ್ನನ್ನು ನೋಡುವಿರಿ; ನಾನು ಬದುಕುವದರಿಂದ ನೀವೂ ಬದುಕುವಿರಿ.” ಹೌದು, ಅವನ ಪುನರುತ್ಥಾನದ ನಂತರ ಮಾನವ ರೂಪದಲ್ಲಿ ಅವರಿಗೆ ಯೇಸುವು ಕಾಣಿಸಿಕೊಳ್ಳುವದು ಮಾತ್ರವಲ್ಲ, ತಕ್ಕ ಸಮಯದಲ್ಲಿ ಅವನು ಅವರನ್ನು ಆತ್ಮ ಜೀವಿಗಳನ್ನಾಗಿ ಸ್ವರ್ಗದಲ್ಲಿ ತನ್ನೊಂದಿಗಿನ ಜೀವಿತಕ್ಕೆ ಪುನರುತ್ಥಾನಗೊಳಿಸಲಿರುವನು.

ಈಗ ಯೇಸುವು ಒಂದು ಸರಳ ಸೂತ್ರವನ್ನು ಹೇಳುತ್ತಾನೆ: “ನನ್ನ ಆಜ್ಞೆಗಳನ್ನು ಹೊಂದಿ ಅವುಗಳನ್ನು ಕೈಕೊಂಡು ನಡೆಯುವವನೇ ನನ್ನನ್ನು ಪ್ರೀತಿಸುವವನು. ನನ್ನನ್ನು ಪ್ರೀತಿಸುವವನು ನನ್ನ ತಂದೆಗೆ ಪ್ರಿಯನಾಗಿರುವನು; ನಾನೂ ಅವನನ್ನು ಪ್ರೀತಿಸಿ ಅವನಿಗೆ ಕಾಣಿಸಿಕೊಳ್ಳುವೆನು.”

ಈ ಸಂದರ್ಭದಲ್ಲಿ ತದ್ದಾಯನೆಂದೂ ಕರೆಯಲ್ಪಡುತ್ತಿದ್ದ ಅಪೊಸ್ತಲ ಯೂದನು ಮಧ್ಯದಲ್ಲಿ ಕೇಳುತ್ತಾನೆ: “ಸ್ವಾಮೀ ನೀನು ಲೋಕಕ್ಕೆ ಕಾಣಿಸಿಕೊಳ್ಳದೆ ನಮಗೆ ಮಾತ್ರ ಕಾಣಿಸಿಕೊಳ್ಳುವದಕ್ಕೆ ಏನು ಸಂಭವಿಸಿತು?”

“ಯಾರಾದರೂ ನನ್ನನ್ನು ಪ್ರೀತಿಸುವವನಾದರೆ,” ಯೇಸುವು ಉತ್ತರಿಸುವದು, “ನನ್ನ ಮಾತನ್ನು ಕೈಕೊಂಡು ನಡೆಯುವನು; ಅವನನ್ನು ನನ್ನ ತಂದೆಯು ಪ್ರೀತಿಸುವನು. . . . ನನ್ನನ್ನು ಪ್ರೀತಿಸದೆ ಇರುವವನು ನನ್ನ ಮಾತುಗಳನ್ನು ಕೈಕೊಂಡು ನಡೆಯುವದಿಲ್ಲ.” ಅವನ ವಿಧೇಯ ಹಿಂಬಾಲಕರಿಗೆ ತದ್ವಿರುದ್ಧವಾಗಿ ಲೋಕವು ಕ್ರಿಸ್ತನ ಬೋಧನೆಗಳನ್ನು ಅಲಕ್ಷ್ಯಿಸುವದು. ಆದುದರಿಂದ ಅವನು ಅವರಿಗೆ ತನ್ನನ್ನು ಪ್ರಕಟಿಸಿಕೊಳ್ಳುವದಿಲ್ಲ.

ಅವನ ಐಹಿಕ ಶುಶ್ರೂಷೆಯ ಸಮಯದಲ್ಲಿ, ಯೇಸುವು ಅವನ ಅಪೊಸ್ತಲರಿಗೆ ಅನೇಕ ಸಂಗತಿಗಳನ್ನು ಕಲಿಸಿದ್ದನು. ಅವೆಲ್ಲವುಗಳನ್ನು, ವಿಶೇಷವಾಗಿ ಈ ಗಳಿಗೆಯ ತನಕ, ಅವರು ಗ್ರಹಿಸಿ ಕೊಳ್ಳಲು ಅಷ್ಟೊಂದು ತಪ್ಪಿಹೋಗಿರುವಾಗ, ಅವನ್ನೆಲ್ಲಾ ಅವರು ಹೇಗೆ ನೆನಪಿನಲ್ಲಿಡಶಕ್ತರು? ಸಂತಸಕರವಾಗಿಯೇ, ಯೇಸುವು ಆಶ್ವಾಸನೆಯನ್ನೀಯುವದು: “ಆ ಸಹಾಯಕನು ಅಂದರೆ ನನ್ನ ಹೆಸರಿನಲ್ಲಿ ತಂದೆಯು ಕಳುಹಿಸಿ ಕೊಡುವ ಪವಿತ್ರಾತ್ಮನೇ ನಿಮಗೆ ಎಲ್ಲವನ್ನು ಉಪದೇಶಿಸಿ ನಾನು ನಿಮಗೆ ಹೇಳಿದ್ದನ್ನೆಲ್ಲಾ ನಿಮ್ಮ ನೆನಪಿಗೆ ತರುವನು.”

ಇನ್ನೊಮ್ಮೆ ಅವರನ್ನು ಸಂತೈಸುತ್ತಾ, ಯೇಸುವಂದದ್ದು: “ಶಾಂತಿಯನ್ನು ನಾನು ಬಿಟ್ಟು ಹೋಗುತ್ತೇನೆ, ನನ್ನಲ್ಲಿರುವಂಥ ಶಾಂತಿಯನ್ನು ನಿಮಗೆ ಕೊಡುತ್ತೇನೆ. . . . ನಿಮ್ಮ ಹೃದಯವು ಕಳವಳಗೊಳ್ಳದಿರಲಿ.” ಯೇಸುವು ಅಗಲಿಹೋಗುವದು ಸತ್ಯ, ಆದರೆ ಅವನು ವಿವರಿಸುವದು: “ನೀವು ನನ್ನನ್ನು ಪ್ರೀತಿಸುವವರಾಗಿದ್ದರೆ ನಾನು ತಂದೆಯ ಬಳಿಗೆ ಹೋಗುವ ವಿಷಯದಲ್ಲಿ ಸಂತೋಷಪಡುತ್ತಿದ್ದಿರಿ; ಯಾಕಂದರೆ ತಂದೆಯು ನನಗಿಂತ ದೊಡ್ಡವನು.”

ಅವರೊಂದಿಗೆ ಇನ್ನು ಯೇಸುವು ಇರುವ ಸಮಯವು ಕೊಂಚ. “ಇನ್ನು ನಾನು ನಿಮ್ಮ ಸಂಗಡ ಬಹಳ ಮಾತುಗಳನ್ನಾಡುವದಿಲ್ಲ,” ಅವನು ಹೇಳುವದು, “ಯಾಕಂದರೆ ಇಹಲೋಕಾಧಿಪತಿಯು ಬರುತ್ತಾನೆ. ಅವನಿಗೆ ಸಂಬಂಧಪಟ್ಟದ್ದು ಯಾವದೊಂದು ನನ್ನಲ್ಲಿಲ್ಲ.” ಯೂದನೊಳಗೆ ಪ್ರವೇಶಿಸಿ, ಅವನ ಮೇಲೆ ತನ್ನ ಪ್ರಭುತ್ವವನ್ನು ಸ್ಥಾಪಿಸಿದ ಪಿಶಾಚನಾದ ಸೈತಾನನು ಇಹಲೋಕದ ಅಧಿಪತಿಯಾಗಿರುತ್ತಾನೆ. ಆದರೆ ದೇವರನ್ನು ಸೇವಿಸುವದರಿಂದ ಯೇಸುವನ್ನು ದೂರಕ್ಕೆ ತಿರುಗಿಸಲು ಸೈತಾನನು ಹೂಡಬಹುದಾಗಿದ್ದ ಯಾವುದೇ ಪಾಪಪೂರಿತ ನಿರ್ಬಲತೆ ಯೇಸುವಿನಲ್ಲಿರಲಿಲ್ಲ.

ಆಪತ್ತೆಯ ಒಂದು ಸಂಬಂಧದಲ್ಲಿ ಆನಂದಿಸುವದು

ಜ್ಞಾಪಕಾರ್ಥದ ಊಟದ ನಂತರ, ಅವಿಧಿಯಾಗಿ ಹೃದಯ ಬಿಚ್ಚಿ ಮಾತಾಡುವಾಗ ಯೇಸುವು ತನ್ನ ಅಪೊಸ್ತಲರನ್ನು ಉತ್ತೇಜಿಸುತ್ತಾನೆ. ಈಗ ಮಧ್ಯ ರಾತ್ರಿ ಕಳೆದಿರಬಹುದು. ಆದುದರಿಂದ ಯೇಸುವು ಒತ್ತಾಯಿಸುವದು: “ಏಳಿರಿ, ಇಲ್ಲಿಂದ ಹೋಗೋಣ.” ಆದಾಗ್ಯೂ, ಅವರು ಬಿಟ್ಟು ಹೋಗುವ ಮೊದಲು, ಅವರಿಗಾಗಿ ಅವನಿಗಿರುವ ಪ್ರೀತಿಯಿಂದ ಪ್ರಚೋದಿತನಾಗಿ, ಯೇಸುವು ಮಾತಾಡುತ್ತಾ, ಅವರಿಗೆ ಒಂದು ಪ್ರೇರಕವಾದ ದೃಷ್ಟಾಂತವನ್ನು ಒದಗಿಸುತ್ತಾನೆ.

“ನಾನೇ ನಿಜವಾದ ದ್ರಾಕ್ಷೇಬಳ್ಳಿ. ನನ್ನ ತಂದೆಯು ತೋಟಗಾರನು,” ಅವನು ಆರಂಭಿಸುತ್ತಾನೆ. ಮಹಾ ತೋಟಗಾರನಾದ ಯೆಹೋವ ದೇವರು ಈ ಸಾಂಕೇತಿಕ ದ್ರಾಕ್ಷೇಬಳ್ಳಿಯನ್ನು, ಸಾ.ಶ. 29ರ ಮಾಗಿಕಾಲದಲ್ಲಿ ಅವನ ದೀಕ್ಷಾಸ್ನಾನವಾಗುವ ವೇಳೆ ಯೇಸುವನ್ನು ಪವಿತ್ರಾತ್ಮದಿಂದ ಅಭಿಷೇಕಿಸಿದಾಗ ನೆಟ್ಟನು. ಆದರೆ ದ್ರಾಕ್ಷೇಬಳ್ಳಿಯು ತನ್ನೊಬ್ಬನನ್ನು ಮಾತ್ರವಲ್ಲದೆ ಹೆಚ್ಚಿನದ್ದನ್ನು ಸೂಚಿಸುತ್ತದೆ ಎಂದು ತೋರಿಸುತ್ತಾ, ಯೇಸುವು ಅವಲೋಕಿಸಿದ್ದು: “ನನ್ನಲ್ಲಿದ್ದು ಫಲಕೊಡದಿರುವ ಪ್ರತಿಯೊಂದು ಕೊಂಬೆಯನ್ನು ಆತನು ತೆಗೆದು ಹಾಕುತ್ತಾನೆ; ಫಲಕೊಡುವ ಪ್ರತಿಯೊಂದು ಕೊಂಬೆಯು ಹೆಚ್ಚು ಫಲಕೊಡುವ ಹಾಗೆ ಅದನ್ನು ಶುದ್ಧಿಮಾಡುತ್ತಾನೆ. . . . ಕೊಂಬೆಯು ಬಳ್ಳಿಯಲ್ಲಿ ನೆಲೆಗೊಂಡಿರದಿದ್ದರೆ ಹೇಗೆ ತನ್ನಷ್ಟಕ್ಕೆ ತಾನೇ ಫಲ ಕೊಡಲಾರದೋ ಹಾಗೆಯೇ ನೀವು ನನ್ನಲ್ಲಿ ನೆಲೆಗೊಂಡಿರದಿದ್ದರೆ ಫಲಕೊಡಲಾರಿರಿ. ನಾನು ದ್ರಾಕ್ಷೇಬಳ್ಳಿ, ನೀವು ಕೊಂಬೆಗಳು.”

51 ದಿವಸಗಳ ನಂತರ, ಪಂಚಾಶತ್ತಮದಲ್ಲಿ, ಪವಿತ್ರಾತ್ಮವು ಅವರ ಮೇಲೆ ಸುರಿಸಲ್ಪಟ್ಟಾಗ, ಅಪೊಸ್ತಲರೂ, ಇತರರೂ ದ್ರಾಕ್ಷೇಬಳ್ಳಿಯ ಕೊಂಬೆಗಳಾದರು. ಕ್ರಮೇಣ, 1,44,000 ಮಂದಿಗಳು ಸಾಂಕೇತಿಕ ದ್ರಾಕ್ಷೇಬಳ್ಳಿಯ ಕೊಂಬೆಗಳಾದರು. ದೇವರ ರಾಜ್ಯದ ಫಲಗಳನ್ನು ಉತ್ಪಾದಿಸುವ ಸಾಂಕೇತಿಕ ದ್ರಾಕ್ಷೇಬಳ್ಳಿಯಲ್ಲಿ, ಕಾಂಡವಾದ ಯೇಸು ಕ್ರಿಸ್ತನೊಂದಿಗೆ ಇವರೆಲ್ಲರೂ ಸೇರಿರುತ್ತಾರೆ.

ಫಲಗಳನ್ನು ಕೊಡುವ ಕೀಲಿಕೈಯನ್ನು ಯೇಸುವು ವಿವರಿಸುತ್ತಾನೆ: “ಒಬ್ಬನು ನನ್ನಲ್ಲಿಯೂ ನಾನು ಅವನಲ್ಲಿಯೂ ನೆಲೆಗೊಂಡಿದ್ದರೆ ಅವನೇ ಬಹಳ ಫಲಕೊಡುವನು; ನೀವು ನನ್ನನ್ನು ಬಿಟ್ಟು ಏನೂ ಮಾಡಲಾರಿರಿ.” ಆದರೂ, ಒಂದು ವೇಳೆ, ಒಬ್ಬ ವ್ಯಕ್ತಿಯು ಫಲವನ್ನು ಕೊಡಲು ತಪ್ಪುವುದಾದರೆ, ಯೇಸುವು ಹೇಳುವದು: “ಅವನು ಆ ಕೊಂಬೆಯಂತೆ ಹೊರಕ್ಕೆ ಬಿಸಾಡಲ್ಪಟ್ಟು ಒಣಗಿಹೋಗುವನು; ಅಂಥ ಕೊಂಬೆಗಳನ್ನು ಕೂಡಿಸಿ ಬೆಂಕಿಯಲ್ಲಿ ಹಾಕುತ್ತಾರೆ, ಅವು ಸುಟ್ಟು ಹೋಗುತ್ತವೆ.” ಇನ್ನೊಂದು ಪಕ್ಕದಲ್ಲಿ ಯೇಸುವು ವಾಗ್ದಾನಿಸುವದು: “ನೀವು ನನ್ನಲ್ಲಿಯೂ ನನ್ನ ವಾಕ್ಯಗಳು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ಏನು ಬೇಕಾದರೂ ಬೇಡಿಕೊಳ್ಳಿರಿ, ಅದು ನಿಮಗೆ ದೊರೆಯುವದು.”

ಇನ್ನೂ ತನ್ನ ಅಪೊಸ್ತಲರಿಗೆ ಯೇಸುವು ಹೇಳುವದು: “ನೀವು ಬಹಳ ಫಲ ಕೊಡುವುದರಿಂದಲೇ ನನ್ನ ತಂದೆಗೆ ಮಹಿಮೆ ಉಂಟಾಗುವದು; ಮತ್ತು ನನ್ನ ಶಿಷ್ಯರಾಗುವಿರಿ.” ಕೊಂಬೆಗಳಿಂದ ದೇವರು ಬಯಸುವ ಫಲವು ಕ್ರಿಸ್ತನಂಥ ಗುಣಗಳ, ವಿಶೇಷವಾಗಿ ಪ್ರೀತಿಯ ವ್ಯಕ್ತಪಡಿಸುವಿಕೆಯೇ ಆಗಿರುತ್ತದೆ. ಇನ್ನೂ ಹೆಚ್ಚಾಗಿ, ಕ್ರಿಸ್ತನು ದೇವರ ರಾಜ್ಯದ ಘೋಷಕನಾಗಿದ್ದಂತೆಯೇ, ಅಪೇಕ್ಷಿತ ಫಲಗಳಲ್ಲಿ, ಅವನು ಮಾಡಿದಂತೆ, ಶಿಷ್ಯರನ್ನಾಗಿ ಮಾಡುವ ಅವರ ಚಟುವಟಿಕೆಯೂ ಒಳಗೂಡಿರುತ್ತದೆ.

“ನನ್ನ ಪ್ರೀತಿಯಲ್ಲಿ ನೆಲೆಗೊಂಡಿರ್ರಿ,” ಎಂದು ಯೇಸುವು ಈಗ ಒತ್ತಾಯಿಸುತ್ತಾನೆ. ಆದರೂ, ಅಪೊಸ್ತಲರು ಇದನ್ನು ಹೇಗೆ ಮಾಡಸಾಧ್ಯವಿದೆ? “ನೀವು ನನ್ನ ಆಜ್ಞೆಗಳನ್ನು ಕೈಕೊಂಡು ನಡೆದರೆ,” ಅವನು ಹೇಳುವದು, “ನನ್ನ ಪ್ರೀತಿಯಲ್ಲಿ ನೆಲೆಗೊಂಡಿರುವಿರಿ.” ಮುಂದುವರಿಸುತ್ತಾ ಯೇಸುವು ವಿವರಿಸುವದು: “ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ನಾನು ಕೊಡುವ ಆಜ್ಞೆಯಾಗಿದೆ. ಪ್ರಾಣವನ್ನೇ ಸ್ನೇಹಿತರಿಗೋಸ್ಕರ ಕೊಡುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯು ಯಾವದೂ ಇಲ್ಲ.”

ಇನ್ನು ಕೆಲವೇ ತಾಸುಗಳಲ್ಲಿ, ಅವನ ಅಪೊಸ್ತಲರ ಮತ್ತು ಯಾರು ಅವನಲ್ಲಿ ನಂಬಿಕೆಯನ್ನಿಡುತ್ತಾರೋ ಅವರೆಲ್ಲರ ಪರವಾಗಿ ತನ್ನ ಜೀವವನ್ನು ಕೊಡುವದರ ಮೂಲಕ ಯೇಸುವು ಈ ಅತಿ ಶ್ರೇಷ್ಠವಾದ ಪ್ರೀತಿಯನ್ನು ಪ್ರದರ್ಶಿಸಲಿಕ್ಕಿದ್ದನು. ಒಬ್ಬರನ್ನೊಬ್ಬರ ಕಡೆಗೆ ತದ್ರೀತಿಯ ಸ್ವ-ತ್ಯಾಗದ ಪ್ರೀತಿಯು ಇರುವಂತೆ ಅವನ ಮಾದರಿಯು ಅವನ ಹಿಂಬಾಲಕರನ್ನು ಪ್ರೇರಿಸತಕ್ಕದ್ದು. ಈ ಪ್ರೀತಿಯು, ಯೇಸುವು ಇದರ ಮುಂಚೆ ತಿಳಿಸಿದಂತೆ, ಅವರನ್ನು ಗುರುತಿಸುತ್ತದೆ: “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.”

ಅವನ ಸ್ನೇಹಿತರನ್ನು ಗುರುತಿಸುತ್ತಾ, ಯೇಸುವು ಹೇಳುವದು: “ನಾನು ನಿಮಗೆ ಕೊಟ್ಟ ಆಜ್ಞೆಗಳಿಗೆ ಸರಿಯಾಗಿ ನಡೆದರೆ ನೀವು ನನ್ನ ಸ್ನೇಹಿತರು. ಇನ್ನು ಮೇಲೆ ನಾನು ನಿಮ್ಮನ್ನು ಆಳುಗಳನ್ನುವದಿಲ್ಲ; ಯಜಮಾನನು ಮಾಡುವಂಥದು ಆಳಿಗೆ ತಿಳಿಯುವದಿಲ್ಲ. ನಿಮ್ಮನ್ನು ಸ್ನೇಹಿತರೆಂದು ಹೇಳಿದ್ದೇನೆ; ತಂದೆಯ ಕಡೆಯಿಂದ ನಾನು ಕೇಳಿದ್ದನ್ನೆಲ್ಲಾ ನಿಮಗೆ ತಿಳಿಸಿದ್ದೇನೆ.”

ಎಂಥಾ ಬಹುಮೂಲ್ಯ ಸಂಬಂಧವಿದು—ಯೇಸುವಿನ ಆಪ್ತ ಸ್ನೇಹಿತರಾಗಿರುವದು! ಆದರೆ ಈ ಸಂಬಂಧದಲ್ಲಿ ಆನಂದಿಸುವದನ್ನು ಮುಂದುವರಿಸಬೇಕಾದರೆ, ಅವನ ಹಿಂಬಾಲಕರು “ಫಲಕೊಡುತ್ತಾ” ಇರತಕ್ಕದ್ದು. ಹಾಗೆ ಮಾಡುವದಾದರೆ, ಯೇಸುವು ಹೇಳುವದು, “ಹೀಗಿರಲಾಗಿ ನನ್ನ ಹೆಸರಿನಲ್ಲಿ ತಂದೆಯನ್ನು ಏನೇನು ಬೇಡಿಕೊಳ್ಳುವಿರೋ ಅದನ್ನು ಆತನು ನಿಮಗೆ ಕೊಡುವನು.” ಅದು ಖಂಡಿತವಾಗಿಯೂ ರಾಜ್ಯದ ಫಲಗಳನ್ನು ಕೊಡುವದಕ್ಕಾಗಿ ಸಿಗುವ ಮಹತ್ತಾದ ಬಹುಮಾನವಾಗಿದೆ! “ಒಬ್ಬರು ಇನ್ನೊಬ್ಬರನ್ನು ಪ್ರೀತಿಸಬೇಕೆಂದು” ಅಪೊಸ್ತಲರಿಗೆ ಪುನೊಮ್ಮೆ ಪ್ರೇರಿಸಿದ ನಂತರ, ಲೋಕವು ಅವರನ್ನು ದ್ವೇಷಿಸಲಿರುವದು ಎಂದು ಯೇಸುವು ವಿವರಿಸಿದನು. ಆದರೂ, ಅವನು ಅವರನ್ನು ಸಂತೈಸುವದು: “ಲೋಕವು ನಿಮ್ಮನ್ನು ದ್ವೇಷ ಮಾಡುವದಾದರೆ, ಅದು ಮೊದಲು ನನ್ನ ಮೇಲೆ ದ್ವೇಷ ಮಾಡಿತೆಂದು ತಿಳುಕೊಳ್ಳಿರಿ.” ಯೇಸುವು ಅನಂತರ ಲೋಕವು ಅವನ ಹಿಂಬಾಲಕರನ್ನು ಯಾಕೆ ದ್ವೇಷಿಸುತ್ತದೆ ಎಂದು ಪ್ರಕಟಿಸುತ್ತಾನೆ. “ಆದರೆ ನೀವು ಲೋಕದ ಕಡೆಯವರಲ್ಲದೆ ಇರುವದರಿಂದಲೂ ನಾನು ನಿಮ್ಮನ್ನು ಲೋಕದಿಂದ ಆರಿಸಿ ತೆಗೆದು ಕೊಂಡಿರುವದರಿಂದಲೂ ಲೋಕವು ನಿಮ್ಮ ಮೇಲೆ ದ್ವೇಷ ಮಾಡುತ್ತದೆ.”

ಲೋಕದ ದ್ವೇಷಕ್ಕೆ ಇನ್ನೂ ಹೆಚ್ಚಿನ ಕಾರಣವನ್ನು ವಿವರಿಸುತ್ತಾ, ಯೇಸುವು ಮುಂದುವರಿಸುವದು: “ಆದರೆ ಅವರು ನನ್ನನ್ನು ಕಳುಹಿಸಿ ಕೊಟ್ಟಾತನನ್ನು [ಯೆಹೋವ ದೇವರು] ತಿಳಿಯದವರಾದದರಿಂದ ಇದನ್ನೆಲ್ಲಾ ನನ್ನ ಹೆಸರಿನ ನಿಮಿತ್ತ ಮಾಡುವರು.” ಯೇಸುವಿನ ಅದ್ಭುತಕರವಾದ ಕಾರ್ಯಗಳು, ತತ್ಪರಿಣಾಮವಾಗಿ, ಅವನನ್ನು ದ್ವೇಷಿಸುವವರನ್ನು ಅಪರಾಧಿಗಳೆಂದು ತೀರ್ಪುಮಾಡುತ್ತವೆ, ಅವನು ಗಮನಿಸಿದ್ದು: “ಮತ್ತಾರೂ ನಡಿಸದ ಕ್ರಿಯೆಗಳನ್ನು ನಾನು ಅವರಲ್ಲಿ ನಡಿಸದೆ ಇದ್ದರೆ ಅವರಿಗೆ ಪಾಪವು ಇರುತ್ತಿದ್ದಿಲ್ಲ; ಆದರೆ ಈಗ ಅವರು ನೋಡಿದ್ದಾರೆ, ಆದರೂ ನನ್ನ ಮೇಲೆಯೂ ನನ್ನ ತಂದೆಯ ಮೇಲೆಯೂ ದ್ವೇಷ ಮಾಡಿದ್ದಾರೆ.” ಆದಕಾರಣ, ಯೇಸುವು ಹೇಳುವದು, “ಅವರು ನನ್ನನ್ನು ನಿಷ್ಕಾರಣವಾಗಿ ದ್ವೇಷಿಸಿದರು” ಎಂಬ ಧರ್ಮಶಾಸ್ತ್ರದ ಮಾತು ನೆರವೇರಿತು.

ಈ ಹಿಂದೆ ಅವನು ಮಾಡಿದಂತೆ, ಸಹಾಯಕನನ್ನು ಅಂದರೆ ದೇವರ ಬಲವಾದ ಕಾರ್ಯಕಾರಿ ಶಕ್ತಿಯನ್ನು ಅಂದರೆ ಪವಿತ್ರಾತ್ಮವನ್ನು ಕಳುಹಿಸುತ್ತೇನೆಂದು ವಚನಿಸುವದರ ಮೂಲಕ, ಯೇಸುವು ಪುನಃ ಅವರನ್ನು ಸಂತೈಸುತ್ತಾನೆ. “ಆತನು ನನ್ನನ್ನು ಕುರಿತು ಸಾಕ್ಷಿ ಹೇಳುವನು. ನೀವೂ ಸಾಕ್ಷಿಗಳಾಗಿದ್ದೀರಿ.”

ಅಗಲುವಿಕೆಯ ಇನ್ನು ಹೆಚ್ಚಿನ ಎಚ್ಚರಿಕೆ

ಮೇಲಂತಸ್ತಿನ ಕೋಣೆಯಿಂದ ಯೇಸು ಮತ್ತು ಅವನ ಅಪೊಸ್ತಲರು ಹೊರಟು ನಿಂತಿದ್ದಾರೆ. “ನೀವು ಧೈರ್ಯಗೆಟ್ಟು ಹಿಂಜರಿಯಬಾರದೆಂದು ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ,” ಅವನು ಮುಂದರಿಸುವದು. ತದನಂತರ, ಅವನು ಒಂದು ಗಂಭೀರವಾದ ಎಚ್ಚರಿಕೆಯನ್ನು ಕೊಡುತ್ತಾನೆ: “ನಿಮಗೆ ಬಹಿಷ್ಕಾರ ಹಾಕುವರು; ಅದಲ್ಲದೆ ನಿಮ್ಮನ್ನು ಕೊಲ್ಲುವವನು ತಾನು ದೇವರಿಗೆ ಯಜ್ಞವನ್ನು ಮಾಡಿದ್ದೇನೆಂದು ನೆನಸುವ ಕಾಲ ಬರುತ್ತದೆ.”

ಈ ಎಚ್ಚರಿಕೆಯಿಂದ ಅಪೊಸ್ತಲರು ಬಹಳಷ್ಟು ಕ್ಷೋಭೆಗೊಳಗಾದರೆಂದು ತಿಳಿಯುತ್ತದೆ. ಲೋಕವು ಅವರನ್ನು ದ್ವೇಷಿಸುತ್ತದೆಂದು ಯೇಸುವು ಈ ಮೊದಲು ಹೇಳಿದ್ದರೂ, ಅವರು ಕೊಲ್ಲಲ್ಪಡುವರು ಎಂದು ಅವನು ಇಷ್ಟು ನೇರವಾಗಿ ಹೇಳಿರಲಿಲ್ಲ. “ನಾನು ನಿಮ್ಮ ಸಂಗಡ ಇದ್ದದರಿಂದ,” ಯೇಸುವು ವಿವರಿಸುವದು, “ಮೊದಲು ಇವುಗಳನ್ನು ಹೇಳಲಿಲ್ಲ.” ಆದರೂ, ಅವನು ಅವರನ್ನು ಅಗಲಿಹೋಗುವ ಮೊದಲು ಈ ವಿವರಗಳನ್ನು ಕೊಡುವದರಿಂದ ಅವರನ್ನು ಮೊದಲೇ ಸನ್ನದ್ಧರನ್ನಾಗಿ ಮಾಡುವದು ಎಷ್ಟೊಂದು ಉತ್ತಮ!

“ಆದರೆ ಈಗ,” ಯೇಸುವು ಮುಂದುವರಿಸುವದು, “ನಾನು ನನ್ನನ್ನು ಕಳುಹಿಸಿಕೊಟ್ಟಾತನ ಬಳಿಗೆ ಹೋಗುತ್ತೇನೆ. ನೀನು ಎಲ್ಲಿಗೆ ಹೋಗುತ್ತೀ ಎಂದು ನಿಮ್ಮಲ್ಲಿ ಒಬ್ಬನಾದರೂ ನನ್ನನ್ನು ಕೇಳುವದಿಲ್ಲ.” ಸಾಯಂಕಾಲದ ಮೊದಲಲ್ಲಿ ಅವನು ಎಲ್ಲಿಗೆ ಹೋಗುತ್ತಾನೆ ಎಂದು ಅವರು ವಿಚಾರಿಸಿದ್ದರು, ಆದರೆ ಈಗ ಅವನು ಅವರಿಗೆ ಏನನ್ನು ಹೇಳಿದನೋ ಅದರಿಂದ ಅವರು ಎಷ್ಟು ತತ್ತರಗೊಂಡರೆಂದರೆ, ಇದರ ಕುರಿತು ಹೆಚ್ಚನ್ನು ಕೇಳಲಾರದೆ ಹೋದರು. ಯೇಸುವು ಹೇಳುವದು: “ಆದರೆ ನಾನು ಈ ಮಾತುಗಳನ್ನು ನಿಮಗೆ ಹೇಳಿದ್ದರಿಂದ ನಿಮ್ಮ ಹೃದಯವು ದುಃಖದಿಂದ ತುಂಬಿಯದೆ.” ಅವರು ಭಯಂಕರವಾದ ಹಿಂಸೆಯಿಂದ ಬಾಧಿಸಲ್ಪಡುವರು ಮತ್ತು ಕೊಲ್ಲಲ್ಪಡುವರು ಎಂಬ ಕಾರಣದಿಂದ ಮಾತ್ರವಲ್ಲ, ಬದಲು ಅವರ ಧಣಿಯು ಅವರನ್ನು ಬಿಟ್ಟು ಹೋಗಲಿರುವನು ಎಂಬದರಿಂದಲೂ ಅಪೊಸ್ತಲರು ಬಹಳಷ್ಟು ದುಃಖಿತರಾಗಿದ್ದರು.

ಆದುದರಿಂದ ಯೇಸುವು ವಿವರಿಸುವದು: “ನಾನು ಹೋಗುವದು ನಿಮಗೆ ಹಿತಕರವಾಗಿದೆ; ಹೇಗಂದರೆ ನಾನು ಹೋಗದಿದ್ದರೆ ಆ ಸಹಾಯಕನು ನಿಮ್ಮ ಬಳಿಗೆ ಬರುವದಿಲ್ಲ. ನಾನು ಹೋದರೆ ಆತನನ್ನು ನಿಮ್ಮ ಬಳಿಗೆ ಕಳುಹಿಸಿ ಕೊಡುತ್ತೇನೆ.” ಮಾನವನೋಪಾದಿ ಯೇಸು ಒಂದು ಸಮಯದಲ್ಲಿ ಒಂದೇ ಸ್ಥಳದಲ್ಲಿ ಇರಸಾಧ್ಯವಿತ್ತು, ಆದರೆ ಅವನು ಪರಲೋಕದಲ್ಲಿರುವಾಗ, ಭೂಮಿಯ ಯಾವುದೇ ಕಡೆಯಲ್ಲಿ ಅವರಿದ್ದರೂ, ಸಹಾಯಕನನ್ನು, ದೇವರ ಪವಿತ್ರಾತ್ಮವನ್ನು, ಅವನ ಹಿಂಬಾಲಕರಿಗೆ ಕಳುಹಿಸಶಕ್ತನಾಗಿದ್ದಾನೆ. ಆದುದರಿಂದ ಯೇಸುವು ಹೋಗುವದು ಹಿತಕರವಾಗಲಿಕ್ಕಿತ್ತು.

ಪವಿತ್ರಾತ್ಮವು, ಯೇಸುವು ಹೇಳುವದು, “ಬಂದು ಪಾಪ ನೀತಿ ನ್ಯಾಯತೀರ್ವಿಕೆ ಈ ವಿಷಯಗಳಲ್ಲಿ ಲೋಕಕ್ಕೆ ಅರುಹನ್ನು ಹುಟ್ಟಿಸುವನು.” ಲೋಕದ ಪಾಪ, ದೇವರ ಮಗನ ಮೇಲೆ ನಂಬಿಕೆಯನ್ನು ಪ್ರದರ್ಶಿಸಲು ಅದರ ತಪ್ಪುವಿಕೆಯು ಬಯಲುಗೊಳಿಸಲ್ಪಡುವದು. ಇದಕ್ಕೆ ಕೂಡಿಸಿ, ಯೇಸುವಿನ ನೀತಿಯ ಖಾತರಿದಾಯಕ ರುಜುವಾತು ತಂದೆಯ ಬಳಿಗೆ ಏರಿಹೋಗುವದರಿಂದ ಪ್ರದರ್ಶಿಸಲ್ಪಡುವದು. ಮತ್ತು ಯೇಸುವಿನ ಯಥಾರ್ಥತೆಯನ್ನು ಮುರಿಯಲು ಸೈತಾನನ ಮತ್ತು ಅವನ ದುಷ್ಟ ಲೋಕದ ಸೋಲು, ಇಹಲೋಕಾಧಿಪತಿಯು ಪ್ರತಿಕೂಲ ರೀತಿಯಲ್ಲಿ ತೀರ್ಪು ಹೊಂದಿರುತ್ತಾನೆ ಎಂಬುದರ ಖಾತರಿದಾಯಕ ಸಾಕ್ಷ್ಯವನ್ನು ನೀಡುವದು.

“ನಾನು ನಿಮಗೆ ಹೇಳಬೇಕಾದದ್ದು ಇನ್ನೂ ಬಹಳ ಉಂಟು,” ಯೇಸುವು ಮುಂದುವರಿಸುವದು, “ಆದರೆ ಸದ್ಯಕ್ಕೆ ಅದನ್ನು ಹೊರಲಾರಿರಿ.” ಆದಕಾರಣ, ಯೇಸುವು ವಾಗ್ದಾನಿಸಿದಂತೆ, ಪವಿತ್ರಾತ್ಮವನ್ನು, ಅಂದರೆ ದೇವರ ಕಾರ್ಯಕಾರಿ ಶಕ್ತಿಯನ್ನು ಸುರಿಸುವಾಗ, ಅವನ್ನು ಗ್ರಹಿಸಿ ಕೊಳ್ಳುವ ಅವರ ಸಾಮರ್ಥ್ಯಕ್ಕನುಸಾರ ಈ ವಿಷಯಗಳನ್ನು ತಿಳಿದುಕೊಳ್ಳುವಂತೆ, ಅದು ಅವರನ್ನು ಮಾರ್ಗದರ್ಶಿಸುವದು.

ಯೇಸುವು ಸಾಯಲಿಕ್ಕಿದ್ದಾನೆ ಮತ್ತು ಅವನು ಪುನರುತ್ಥಾನಗೊಂಡ ನಂತರ ಅವರಿಗೆ ಗೋಚರಿಸುವನು ಎಂದು ಹೇಳಿದ್ದನ್ನು ಅರ್ಥೈಸಿಕೊಳ್ಳಲು ಅಪೊಸ್ತಲರು ವಿಶೇಷವಾಗಿ ತಪ್ಪಿಹೋಗುತ್ತಾರೆ. ಆದುದರಿಂದ ಅವರು ತಮ್ಮತಮ್ಮೊಳಗೆ ವಿಚಾರಿಸಿಕೊಳ್ಳುವದು: “ಇದೇನು ಈತನು ಹೇಳುವ ಮಾತು? ಸ್ವಲ್ಪ ಕಾಲವಾದ ಮೇಲೆ ನಾನು ನಿಮಗೆ ಕಾಣುವದಿಲ್ಲ, ಅನಂತರ ಸ್ವಲ್ಪ ಕಾಲವಾದ ಮೇಲೆ ನನ್ನನ್ನು ನೋಡುವಿರಿ ಅನ್ನುತ್ತಾನೆ; ಮತ್ತು ನಾನು ತಂದೆಯ ಬಳಿಗೆ ಹೋಗುವದರಿಂದ ಅನ್ನುತ್ತಾನೆ.”

ಅವರು ಅವನನ್ನು ಪ್ರಶ್ನಿಸಲು ಬಯಸುತ್ತಾರೆಂದು ಅರಿತುಕೊಂಡು, ಯೇಸುವು ವಿವರಿಸುವದು: “ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನೀವು ಅಳುತ್ತಾ ಗೋಳಾಡುತ್ತಾ ಇರುವಿರಿ, ಆದರೆ ಲೋಕವು ಸಂತೋಷಿಸುವದು; ನಿಮಗೆ ದುಃಖವಾಗುವದು, ಆದರೆ ನಿಮ್ಮ ದುಃಖವು ಹೋಗಿ ಆನಂದ ಬರುವದು.” ಆ ದಿನದಲ್ಲಿ ಅನಂತರ, ಮಧ್ಯಾಹ್ನದಲ್ಲಿ ಯೇಸುವು ಕೊಲ್ಲಲ್ಪಟ್ಟಾಗ, ಲೋಕದ ಧಾರ್ಮಿಕ ಮುಖಂಡರು ಆನಂದ ಪಟ್ಟರು, ಆದರೆ ಶಿಷ್ಯರು ದುಃಖ ಪಟ್ಟರು. ಆದಾಗ್ಯೂ, ಯೇಸುವು ಪುನರುತ್ಥಾನಗೊಂಡಾಗ ಅವರ ದುಃಖವು ಆನಂದವಾಗಿ ಪರಿವರ್ತಿತವಾಯಿತು! ಅವರ ಮೇಲೆ ದೇವರ ಪವಿತ್ರಾತ್ಮವನ್ನು ಸುರಿಸಿ, ಅವನ ಸಾಕ್ಷಿಗಳಾಗುವಂತೆ ಪಂಚಾಶತ್ತಮದಲ್ಲಿ ಅವರನ್ನು ನೇಮಕ ಮಾಡಿದ್ದರಿಂದ ಅವರ ಆನಂದವು ಮುಂದುವರಿಯಿತು!

ಸ್ತ್ರೀಯ ಹೆರುವ ಸಮಯದ ಬೇನೆಯನ್ನು ಅಪೊಸ್ತಲರ ಸನ್ನಿವೇಶಕ್ಕೆ ಹೋಲಿಸುತ್ತಾ ಯೇಸುವು ಹೇಳುವದು: “ಒಬ್ಬ ಸ್ತ್ರೀಯು ಹೆರುವಾಗ ತನ್ನ ಬೇನೆಯ ಕಾಲ ಬಂತೆಂದು ಆಕೆಗೆ ದುಃಖವಾಗುತ್ತದೆ.” ಆದರೆ ಒಮ್ಮೆ ಕೂಸನ್ನು ಹೆತ್ತಾದ ಮೇಲೆ ಅವಳ ಸಂಕಟವನ್ನು ಅವಳು ನೆನಸುವದಿಲ್ಲ ಎಂದು ಯೇಸುವು ಅವಲೋಕಿಸುತ್ತಾನೆ, ಮತ್ತು ಹೀಗನ್ನುತ್ತಾ, ಅವನ ಅಪೊಸ್ತಲರನ್ನು ಹುರಿದುಂಬಿಸುತ್ತಾನೆ: “ಹಾಗೆಯೇ ನಿಮಗೂ ಈಗ ದುಃಖವಿದ್ದರೂ ನಾನು ನಿಮ್ಮನ್ನು ತಿರಿಗಿ ನೋಡುವೆನು [ನಾನು ಪುನರುತ್ಥಾನಗೊಂಡಾಗ] ಮತ್ತು ಆಗ ನಿಮ್ಮ ಹೃದಯಕ್ಕೆ ಆನಂದವಾಗುವದು; ಮತ್ತು ನಿಮ್ಮ ಆನಂದವನ್ನು ಯಾರೂ ನಿಮ್ಮಿಂದ ತೆಗೆಯುವದಿಲ್ಲ.”

ಈ ಸಮಯದ ತನಕ, ಅಪೊಸ್ತಲರು ಯೇಸುವಿನ ಹೆಸರಿನ ಮೇಲೆ ಯಾವುದನ್ನೂ ಬೇಡಿರಲಿಲ್ಲ. ಆದರೆ ಈಗ ಅವನು ಹೇಳುವದು: “ನೀವು ತಂದೆಯನ್ನು ಏನಾದರೂ ಬೇಡಿಕೊಂಡರೆ ಅದನ್ನು ಆತನು ನನ್ನ ಹೆಸರಿನ ಮೇಲೆ ನಿಮಗೆ ಕೊಡುವನು. . . . ನೀವು ನನ್ನ ಮೇಲೆ ಮಮತೆಯಿಟ್ಟು ನನ್ನನ್ನು ತಂದೆಯ ಬಳಿಯಿಂದ ಹೊರಟುಬಂದವನೆಂದು ನಂಬಿದ್ದರಿಂದ ತಂದೆಯು ತಾನೇ ನಿಮ್ಮ ಮೇಲೆ ಮಮತೆ ಇಡುತ್ತಾನಲ್ಲವೇ. ತಂದೆಯ ಬಳಿಯಿಂದ ಹೊರಟು ಲೋಕಕ್ಕೆ ಬಂದಿದ್ದೇನೆ; ಇನ್ನು ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗುತ್ತೇನೆ.”

ಅಪೊಸ್ತಲರಿಗೆ ಯೇಸುವಿನ ಮಾತುಗಳು ಬಹಳ ಉತ್ತೇಜಕವಾಗಿದ್ದವು. “ಇದರಿಂದ ನಿನ್ನನ್ನು ದೇವರ ಬಳಿಯಿಂದ ಬಂದವನೆಂದು ನಂಬುತ್ತೇವೆ,” ಎಂದವರು ಹೇಳುತ್ತಾರೆ. “ಈಗ ನಂಬುತ್ತೀರೋ?” ಯೇಸುವು ವಿಚಾರಿಸುತ್ತಾನೆ. “ನೋಡಿರಿ, ನಿಮ್ಮಲ್ಲಿ ಒಬ್ಬೊಬ್ಬನು ತನ್ನ ತನ್ನ ಸ್ಥಳಕ್ಕೆ ಚದರಿಹೋಗಿ ನನ್ನನ್ನು ಒಂಟಿಗನಾಗಿ ಬಿಡುವ ಕಾಲ ಬರುವದು, ಈಗ ಬಂದಿದೆ.” ಅದನ್ನು ನಂಬಲು ಅಶಕ್ಯವೆಂದು ತೋರಬಹುದಾದರೂ, ಆ ರಾತ್ರಿಯು ತೀರುವದರ ಮೊದಲೇ ಅದು ಸಂಭವಿಸುತ್ತದೆ!

“ನೀವು ನನ್ನಲ್ಲಿದ್ದು ಮನಶ್ಶಾಂತಿಯನ್ನು ಹೊಂದಿದವರಾಗಿರಬೇಕೆಂದು ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ,” ಯೇಸುವು ಸಮಾಪ್ತಿಗೊಳಿಸುತ್ತಾನೆ. “ಲೋಕದಲ್ಲಿ ನಿಮಗೆ ಸಂಕಟ ಉಂಟು; ಧೈರ್ಯವಾಗಿರ್ರಿ, ನಾನು ಲೋಕವನ್ನು ಜಯಿಸಿದ್ದೇನೆ.” ಯೇಸುವಿನ ಯಥಾರ್ಥತೆಯನ್ನು ಮುರಿಯಲು ಸೈತಾನನು ಮತ್ತು ಅವನ ಲೋಕವು ಎಲ್ಲಾ ಪ್ರಯತ್ನಗಳನ್ನು ಮಾಡಿದರೂ, ದೇವರ ಚಿತ್ತವನ್ನು ನಂಬಿಗಸ್ತಿಕೆಯಿಂದ ಪೂರೈಸುವದರ ಮೂಲಕ ಯೇಸುವು ಲೋಕವನ್ನು ಜಯಿಸಿದನು.

ಮೇಲಂತಸ್ತಿನ ಕೋಣೆಯಲ್ಲಿ ಕೊನೆಯ ಪ್ರಾರ್ಥನೆ

ಅವನ ಅಪೊಸ್ತಲರ ಕಡೆಗಿನ ಆಳವಾದ ಪ್ರೀತಿಯಿಂದ ಪ್ರಚೋದಿತನಾಗಿ, ಬರಲಿರುವ ಅವನ ಅಗಲುವಿಕೆಗಾಗಿ ಅವರನ್ನು ಯೇಸುವು ಅಣಿಗೊಳಿಸುತ್ತಿದ್ದನು. ಈಗ ವಿವರವಾದ ಎಚ್ಚರಿಕೆ ಮತ್ತು ಸಂತೈಸುವಿಕೆಯನ್ನು ಕೊಟ್ಟಾದ ಮೇಲೆ ಅವನು ಆಕಾಶದ ಕಡೆಗೆ ತನ್ನ ಕಣ್ಣುಗಳನ್ನು ಎತ್ತಿ ಅವನ ತಂದೆಗೆ ವಿಜ್ಞಾಪನೆಗಳನ್ನು ಮಾಡುತ್ತಾನೆ: “ತಂದೆಯೇ, ಕಾಲ ಬಂದದೆ; ನಿನ್ನ ಮಗನನ್ನು ಮಹಿಮೆಪಡಿಸು, ಆಗ ಮಗನು ನಿನ್ನನ್ನು ಮಹಿಮೆ ಪಡಿಸುವದಕ್ಕಾಗುವದು. ನೀನು ಯಾರಾರನ್ನು ಕೊಟ್ಟಿದ್ದೀಯೋ ಅವರೆಲ್ಲರಿಗೆ ಅವನು ನಿತ್ಯ ಜೀವವನ್ನು ಕೊಡಬೇಕೆಂದು ಅವನಿಗೆ ಎಲ್ಲಾ ಮನುಷ್ಯರ ಮೇಲೆ ಅಧಿಕಾರವನ್ನು ಕೊಟ್ಟಿಯಲ್ಲಾ.”

ಎಂಥಾ ಒಂದು ಪ್ರಚೋದಕ ವಿಷಯವನ್ನು ಯೇಸುವು ಪ್ರಸ್ತಾಪಿಸುತ್ತಾನೆ—ನಿತ್ಯ ಜೀವ! “ಎಲ್ಲಾ ಮನುಷ್ಯರ ಮೇಲೆ ಅಧಿಕಾರ” ಕೊಟ್ಟಿರುವದರಿಂದ, ಸಾಯುವ ಎಲ್ಲಾ ಮಾನವ ಕುಲಕ್ಕೆ ಅವನ ವಿಮೋಚನಾ ಯಜ್ಞದ ಪ್ರಯೋಜನಗಳನ್ನು ಯೇಸುವು ನೀಡಲು ಶಕ್ತನಾಗಿದ್ದಾನೆ. ಆದರೂ, ಅವನ ತಂದೆಯ ಒಪ್ಪಿಗೆಯಿರುವವರಿಗೆ ಮಾತ್ರ ಅವನು “ನಿತ್ಯ ಜೀವವನ್ನು” ನೀಡುತ್ತಾನೆ. ನಿತ್ಯ ಜೀವದ ಈ ವಿಷಯದ ಮೇಲೆ ಆಧರಿಸುತ್ತಾ, ಯೇಸುವು ಅವನ ಪ್ರಾರ್ಥನೆಯನ್ನು ಮುಂದುವರಿಸುತ್ತಾನೆ:

“ಒಬ್ಬನೇ ಸತ್ಯ ದೇವರಾದ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯ ಜೀವವು.” ಹೌದು, ದೇವರ ಮತ್ತು ಅವನ ಮಗನ, ಇಬ್ಬರ ಜ್ಞಾನವನ್ನು ಪಡೆದುಕೊಳ್ಳುವದರಲ್ಲಿ ರಕ್ಷಣೆಯು ಆಧರಿತವಾಗಿದೆ. ಆದರೆ ಇದು ಕೇವಲ ತಲೇಜ್ಞಾನಕ್ಕಿಂತ ಹೆಚ್ಚಿನದ್ದಾಗಿದೆ.

ಅವರನ್ನು ಒಬ್ಬ ವ್ಯಕ್ತಿಯು ಆಪ್ತವಾಗಿ ತಿಳಿದುಕೊಂಡು, ಅವರೊಡನೆ ಒಂದು ತಿಳುವಳಿಕೆಯ ಮಿತ್ರತ್ವವನ್ನು ಬೆಳಸತಕ್ಕದ್ದು. ವಿಷಯಗಳನ್ನು ಅವರು ಮಾಡುವಂತೆ ಮತ್ತು ಅವರ ಕಣ್ಣಿನಿಂದ ವಿಷಯಗಳನ್ನು ನೋಡುವಂತೆ, ಒಬ್ಬನ ಭಾವನೆಗಳು ಇರತಕ್ಕದ್ದು. ಮತ್ತು ಎಲ್ಲದಕ್ಕಿಂತ ಹೆಚ್ಚಾಗಿ, ಇತರರೊಡನೆ ಒಬ್ಬನು ವ್ಯವಹರಿಸುವಾಗ, ಅವರ ಎಣೆಯಿಲ್ಲದ ಗುಣಗಳನ್ನು ಅನುಕರಿಸಲು ಒಬ್ಬ ವ್ಯಕ್ತಿಯು ಶ್ರಮಿಸತಕ್ಕದ್ದು.

ಯೇಸುವು ನಂತರ ಪ್ರಾರ್ಥಿಸುವದು: “ಮಾಡಬೇಕೆಂದು ನೀನು ನನಗೆ ಕೊಟ್ಟ ಕೆಲಸವನ್ನು ನಾನು ನೆರವೇರಿಸಿ ನಿನ್ನನ್ನು ಭೂಲೋಕದಲ್ಲಿ ಮಹಿಮೆ ಪಡಿಸಿದೆನು.” ಈ ಬಿಂದುವಿನ ತನಕ ತನ್ನ ನೇಮಕವನ್ನು ಪೂರೈಸಿದ್ದರಿಂದ ಮತ್ತು ತನ್ನ ಭಾವಿ ಯಶಸ್ಸಿನ ಕುರಿತು ಭರವಸ ಇದ್ದುದರಿಂದ, ಅವನು ವಿಜ್ಞಾಪಿಸುವದು: “ಈಗ ತಂದೆಯೇ, ಲೋಕ ಉಂಟಾಗುವದಕ್ಕಿಂತ ಮುಂಚೆ ನಿನ್ನ ಬಳಿಯಲ್ಲಿ ನನಗಿದ್ದ ಮಹಿಮೆಯಿಂದಲೇ ನನ್ನನ್ನು ಮಹಿಮೆಪಡಿಸು.” ಹೌದು, ಪುನರುತ್ಥಾನವೊಂದರ ಮೂಲಕ ಅವನ ಮುಂಚಿನ ಸ್ವರ್ಗೀಯ ಮಹಿಮೆಗೆ ಪುನಃ ಸ್ಥಾಪಿಸಲ್ಪಡುವಂತೆ ಅವನು ಈಗ ವಿನಂತಿಸುತ್ತಾನೆ.

ಭೂಮಿಯ ಮೇಲಿನ ಅವನ ಪ್ರಧಾನ ಕೆಲಸವನ್ನು ಸಾರಾಂಶಿಸುತ್ತಾ, ಯೇಸುವು ಹೇಳುವದು: “ಲೋಕದೊಳಗಿಂದ ನೀನು ನನಗೆ ಕೊಟ್ಟ ಮನುಷ್ಯರಿಗೆ ನಿನ್ನ ಹೆಸರನ್ನು ತಿಳಿಯ ಪಡಿಸಿದೆನು. ಇವರು ನಿನ್ನವರಾಗಿದ್ದರು, ನೀನು ಇವರನ್ನು ನನಗೆ ಕೊಟ್ಟಿ; ಮತ್ತು ಇವರು ನಿನ್ನ ವಾಕ್ಯವನ್ನು ಕೈಕೊಂಡು ನಡೆದಿದ್ದಾರೆ.” ಯೆಹೋವ ಎಂಬ ದೇವರ ಹೆಸರನ್ನು ಯೇಸುವು ತನ್ನ ಶುಶ್ರೂಷೆಯಲ್ಲಿ ಉಪಯೋಗಿಸಿದನು ಮತ್ತು ಅದರ ಸರಿಯಾದ ಉಚ್ಛಾರವನ್ನು ಅವನು ಪ್ರದರ್ಶಿಸಿದನು, ಆದರೆ ಅವನ ಅಪೊಸ್ತಲರಿಗೆ ದೇವರ ಹೆಸರನ್ನು ತಿಳಿಸುವದಕ್ಕಿಂತಲೂ ಹೆಚ್ಚಿನದ್ದನ್ನು ಮಾಡಿದನು. ಯೆಹೋವನ, ಅವನ ವ್ಯಕ್ತಿತ್ವದ ಮತ್ತು ಅವನ ಉದ್ದೇಶಗಳ ಕುರಿತಾದ ಅವರ ಜ್ಞಾನವನ್ನು ಮತ್ತು ಗಣ್ಯತೆಯನ್ನು ಕೂಡ ಅವನು ವಿಸ್ತರಿಸಿದನು.

ಯೆಹೋವನು ತನಗಿಂತ ಶ್ರೇಷ್ಠನು, ಅವನ ಅಧೀನದಲ್ಲಿ ತಾನು ಸೇವೆ ಸಲ್ಲಿಸುವವನು ಎಂಬ ಗೌರವವನ್ನು ಯೆಹೋವನಿಗೆ ಸಲ್ಲಿಸುತ್ತಾ, ಯೇಸುವು ದೀನತೆಯಿಂದ ಅಂಗೀಕರಿಸುವದು: “ಹೇಗಂದರೆ ನೀನು ನನಗೆ ಕೊಟ್ಟ ಮಾತುಗಳನ್ನು ನಾನು ಇವರಿಗೆ ಕೊಟ್ಟಿದ್ದೇನೆ; ಇವರು ಆ ಮಾತುಗಳನ್ನು ಕೈಕೊಂಡು ನನ್ನನ್ನು ನಿನ್ನ ಬಳಿಯಿಂದ ಹೊರಟು ಬಂದವನೆಂದು ನಿಜವಾಗಿ ತಿಳಿದು ನೀನೇ ನನ್ನನ್ನು ಕಳುಹಿಸಿ ಕೊಟ್ಟಿರುವದಾಗಿ ನಂಬಿದ್ದಾರೆ.”

ಅವನ ಹಿಂಬಾಲಕರ ಮತ್ತು ಮಾನವ ಕುಲದ ಉಳಿದವರ ನಡುವೆ ಒಂದು ಭಿನ್ನತೆಯನ್ನು ಮಾಡುತ್ತಾ, ಯೇಸುವು ನಂತರ ಪ್ರಾರ್ಥಿಸುವದು: “ಲೋಕಕ್ಕೋಸ್ಕರ ಕೇಳಿಕೊಳ್ಳದೆ ನೀನು ನನಗೆ ಕೊಟ್ಟವರಿಗೋಸ್ಕರವೇ ಕೇಳಿಕೊಳ್ಳುತ್ತೇನೆ. . . . ನಾನು ಇವರ ಸಂಗಡ ಇದ್ದಾಗ . . . ಇವರನ್ನು ಕಾಯುತ್ತಾ ಬಂದೆನು, ಇವರನ್ನು ಕಾಪಾಡಿದೆನು; ಶಾಸ್ತ್ರದ ಮಾತು ನೆರವೇರುವಂತೆ ನಾಶಕ್ಕೆ ಗುರಿಯಾದ ಆ ಮನುಷ್ಯನೇ ಹೊರತು ಇವರಲ್ಲಿ ಮತ್ತಾರೂ ನಾಶವಾಗಲಿಲ್ಲ.” ಆ ಮನುಷ್ಯನು ಇಸ್ಕರಿಯೋತ ಯೂದನಾಗಿದ್ದನು. ಅದೇ ಕ್ಷಣದಲ್ಲಿ, ಯೂದನು ಯೇಸುವನ್ನು ಹಿಡುಕೊಡುವ ತನ್ನ ದುಷ್ಟ ನಿಯೋಗವನ್ನು ಕೈಕೊಳ್ಳಲಿದ್ದನು. ಹೀಗೆ, ತಿಳಿಯದೇ ಯೂದನು ಶಾಸ್ತ್ರವಚನಗಳನ್ನು ನೆರವೇರಿಸುತ್ತಿದ್ದನು.

“ಲೋಕವು ಇವರ ಮೇಲೆ ದ್ವೇಷ ಮಾಡಿ ಅದೆ,” ಯೇಸುವು ಪ್ರಾರ್ಥಿಸುವದನ್ನು ಮುಂದುವರಿಸುತ್ತಾನೆ, “ಇವರನ್ನು ಲೋಕದೊಳಗಿಂದ ತೆಗೆದು ಕೊಂಡು ಹೋಗಬೇಕೆಂದು ನಾನು ಕೇಳಿಕೊಳ್ಳುವದಿಲ್ಲ; ಕೆಡುಕನಿಂದ ತಪ್ಪಿಸಿ ಕಾಪಾಡಬೇಕೆಂದು ಕೇಳಿಕೊಳ್ಳುತ್ತೇನೆ. ನಾನು ಲೋಕದವನಲ್ಲದೆ ಇರುವ ಪ್ರಕಾರ ಇವರು ಲೋಕದವರಲ್ಲ.” ಯೇಸುವಿನ ಹಿಂಬಾಲಕರು ಲೋಕದಲ್ಲಿ, ಸೈತಾನನಿಂದ ಆಳಲ್ಪಡುವ ಈ ಸಂಸ್ಥಾಪಿತ ಮಾನವ ಸಮಾಜದೊಳಗೆ ಇದ್ದಾರೆ, ಆದರೆ ಅದರಿಂದ ಮತ್ತು ಅದರ ದುಷ್ಟತನದಿಂದ ಅವರು ಯಾವಾಗಲೂ ಪ್ರತ್ಯೇಕರಾಗಿದ್ದಾರೆ ಮತ್ತು ಪ್ರತ್ಯೇಕರಾಗಿ ಇರಲೇ ಬೇಕು.

“ಇವರನ್ನು ಸತ್ಯದಲ್ಲಿ ಸೇರಿಸಿ ಪ್ರತಿಷ್ಠೆ ಪಡಿಸು,” ಯೇಸುವು ಮುಂದುವರಿಸುವದು, “ನಿನ್ನ ವಾಕ್ಯವೇ ಸತ್ಯವು.” ಇಲ್ಲಿ ಯೇಸುವು ಪ್ರೇರಿತ ಇಬ್ರಿಯ ಶಾಸ್ತ್ರಗಳನ್ನು “ಸತ್ಯ”ವೆಂದು ಕರೆದಿರುತ್ತಾನೆ, ಅವನು ಅದರಿಂದ ಯಾವಾಗಲೂ ಉಲ್ಲೇಖಿಸುತ್ತಿದ್ದನು. ಆದರೆ, ಅವನು ತನ್ನ ಶಿಷ್ಯರಿಗೆ ಏನನ್ನು ಕಲಿಸಿದನೋ ಮತ್ತು ಅವರು ತದನಂತರ ದೇವ ಪ್ರೇರಣೆಯ ಕೆಳಗೆ ಏನನ್ನು ಬರೆದರೋ ಆ ಕ್ರೈಸ್ತ ಗ್ರೀಕ್‌ ಶಾಸ್ತ್ರವೂ, ತದ್ರೀತಿಯಲ್ಲಿ “ಸತ್ಯ”ವಾಗಿದೆ. ಈ ಸತ್ಯವು ವ್ಯಕ್ತಿಯೊಬ್ಬನನ್ನು ಪವಿತ್ರಗೊಳಿಸಬಲ್ಲದು, ಅವನ ಜೀವನವನ್ನು ಸಮಗ್ರವಾಗಿ ಪರಿವರ್ತಿಸಬಲ್ಲದು ಮತ್ತು ಲೋಕದಿಂದ ಪ್ರತ್ಯೇಕನಾದ ಒಬ್ಬ ವ್ಯಕ್ತಿಯನ್ನಾಗಿ ಮಾಡಬಹುದು.

ಯೇಸುವು ಈಗ “ಇವರಿಗೋಸ್ಕರ ಮಾತ್ರವಲ್ಲದೆ ಇವರ ವಾಕ್ಯದಿಂದ ನನ್ನನ್ನು ನಂಬುವವರಿಗೋಸ್ಕರ ಸಹ ಕೇಳಿಕೊಳ್ಳುತ್ತೇನೆ” ಎಂದು ಪ್ರಾರ್ಥಿಸುತ್ತಾನೆ. ಆದುದರಿಂದ ಯೇಸುವು ಅವನ ಅಭಿಷಿಕ್ತರಾಗಲಿರುವವರ ಮೇಲೆ ಮತ್ತು “ಒಂದು ಹಿಂಡು” ಆಗುವಂತೆ ಒಟ್ಟುಗೂಡಿಸಲ್ಪಡುವ ಇತರ ಭಾವಿ ಶಿಷ್ಯರ ಮೇಲೆಯೂ ಪ್ರಾರ್ಥಿಸುತ್ತಾನೆ. ಇವರೆಲ್ಲರಿಗಾಗಿ ಅವನು ಯಾವ ವಿನಂತಿಯನ್ನು ಮಾಡುತ್ತಾನೆ?

“ಅವರೆಲ್ಲರೂ ಒಂದಾಗಿರಬೇಕೆಂತಲೂ ತಂದೆಯೇ, ನೀನು ನನ್ನಲ್ಲಿಯೂ ನಾನು ನಿನ್ನಲ್ಲಿಯೂ ಇರುವ ಪ್ರಕಾರ . . . ಅವರು ಒಂದಾಗಿರಬೇಕೆಂದು ಕೇಳಿಕೊಳ್ಳುತ್ತೇನೆ.” ಯೇಸುವು ಮತ್ತು ಅವನ ತಂದೆಯು ಅಕ್ಷರಶಃ ಒಬ್ಬ ವ್ಯಕ್ತಿಯಾಗಿರುವದಿಲ್ಲ, ಆದರೆ ಅವರು ಎಲ್ಲಾ ಸಂಗತಿಗಳಲ್ಲಿ ಐಕ್ಯತೆಯಲ್ಲಿದ್ದಾರೆ. ಅಂಥಾ ಐಕ್ಯತೆಯಲ್ಲಿ ಅವನ ಶಿಷ್ಯರು ಆನಂದಿಸುವಂತೆ ಯೇಸುವು ಪ್ರಾರ್ಥಿಸುತ್ತಾನೆ, ಆ ಮೂಲಕ “ನೀನು ನನ್ನನ್ನು ಕಳುಹಿಸಿಕೊಟ್ಟಿದ್ದೀ ಎಂದೂ ನೀನು ನನ್ನನ್ನು ಪ್ರೀತಿಸಿದಂತೆ ಅವರನ್ನೂ ಪ್ರೀತಿಸಿದ್ದೀ ಎಂದೂ ಲೋಕಕ್ಕೆ ತಿಳಿದು ಬರುವದು.”

ಅವನ ಅಭಿಷಿಕ್ತ ಹಿಂಬಾಲಕರಾಗುವವರ ಪರವಾಗಿ ಯೇಸುವು ತನ್ನ ಸ್ವರ್ಗೀಯ ತಂದೆಗೆ ಈ ರೀತಿಯ ವಿನಂತಿಯೊಂದನ್ನು ಮಾಡುತ್ತಾನೆ. ಯಾವುದಕ್ಕೆ? “ಅವರು ನಾನಿರುವ ಸ್ಥಳದಲ್ಲಿ ನನ್ನ ಕೂಡ ಇದ್ದುಕೊಂಡು ಲೋಕವು ಹುಟ್ಟುವದಕ್ಕಿಂತ ಮುಂಚೆಯೇ [ಅದು ಆದಾಮ ಹವ್ವರು ಸಂತಾನವನ್ನು ಪಡೆಯುವ ಮೊದಲು] ನೀನು ನನ್ನನ್ನು ಪ್ರೀತಿಸಿ ನನಗೆ ಕೊಟ್ಟಿರುವ ಮಹಿಮೆಯನ್ನು ನೋಡಬೇಕೆಂದು ಇಚ್ಛೈಸುತ್ತೇನೆ.” ಅದಕ್ಕಿಂತ ಎಷ್ಟೋ ಮೊದಲೇ, ಯೇಸು ಕ್ರಿಸ್ತನಾಗಿ ಬಂದ, ತನ್ನ ಒಬ್ಬನೇ ಜನಿತ ಪುತ್ರನನ್ನು ದೇವರು ಪ್ರೀತಿಸಿದ್ದನು.

ಅವನ ಪ್ರಾರ್ಥನೆಯನ್ನು ಕೊನೆಗೊಳಿಸುತ್ತಾ, ಯೇಸುವು ಪುನಃ ಒತ್ತರವನ್ನು ಹಾಕುತ್ತಾನೆ: “ನಾನು ಅವರಿಗೆ ನಿನ್ನ ಹೆಸರನ್ನು ತಿಳಿಸಿದ್ದೇನೆ, ಇನ್ನೂ ತಿಳಿಸುವೆನು. ನೀನು ನನ್ನ ಮೇಲೆ ಇಟ್ಟ ಪ್ರೀತಿಯು ಅವರಲ್ಲಿ ಇರಬೇಕೆಂದೂ ನಾನೂ ಅವರಲ್ಲಿ ಇರಬೇಕೆಂದೂ ಪ್ರಾರ್ಥಿಸುತ್ತೇನೆ.” ಅಪೊಸ್ತಲರಿಗೆ ದೇವರ ಹೆಸರನ್ನು ಕಲಿಯುವದು ಅಂದರೆ ದೇವರ ಪ್ರೀತಿಯನ್ನು ಅವರು ವೈಯಕ್ತಿಕವಾಗಿ ತಿಳಿಯುವಂಥದು ಒಳಗೂಡಿರುತ್ತದೆ. ಯೋಹಾನ 14:1—17:26; 13:27, 35, 36; 10:16; ಲೂಕ 22:3, 4; ವಿಮೋಚನಕಾಂಡ 24:10; 1 ಅರಸುಗಳು 19:9-13; ಯೆಶಾಯ 6:1-5; ಗಲಾತ್ಯ 6:16; ಕೀರ್ತನೆ 35:19; 69:4; ಜ್ಞಾನೋಕ್ತಿ 8:22, 30.

▪ ಯೇಸುವು ಎಲ್ಲಿಗೆ ಹೋಗಲಿದ್ದನು, ಮತ್ತು ಅಲ್ಲಿಗೆ ಹೋಗುವ ಮಾರ್ಗದ ಕುರಿತು ತೋಮನು ಯಾವ ಉತ್ತರವನ್ನು ಪಡೆದನು?

▪ ಅವನ ವಿನಂತಿಯಿಂದ, ಯೇಸುವು ಏನನ್ನು ಒದಗಿಸುವಂತೆ ಫಿಲಿಪ್ಪನು ಪ್ರಾಯಶಃ ಬಯಸಿದ್ದನು?

▪ ಯೇಸುವನ್ನು ನೋಡಿದವನು ತಂದೆಯನ್ನೂ ಕೂಡ ನೋಡಿದ್ದಾನೆ ಯಾಕೆ?

▪ ಅವನು ಮಾಡಿರುವದಕ್ಕಿಂತಲೂ ಮಹತ್ತಾದ ಕ್ರಿಯೆಗಳನ್ನು ಯೇಸುವಿನ ಶಿಷ್ಯರು ಹೇಗೆ ಮಾಡುತ್ತಾರೆ?

▪ ಯೇಸುವಿನ ಮೇಲೆ ಸೈತಾನನಿಗೆ ಯಾವುದೇ ಹಿಡಿತವಿಲ್ಲ ಎಂಬದು ಯಾವ ಅರ್ಥದಲ್ಲಿ?

▪ ಸಾಂಕೇತಿಕ ದ್ರಾಕ್ಷೇಬಳ್ಳಿಯನ್ನು ಯೆಹೋವನು ಯಾವಾಗ ನೆಟ್ಟನು, ಮತ್ತು ಆ ದ್ರಾಕ್ಷೇಬಳ್ಳಿಯ ಭಾಗವಾಗಿ ಇತರರು ಯಾವಾಗ ಮತ್ತು ಹೇಗೆ ಬಂದರು?

▪ ಕಟ್ಟಕಡೆಗೆ ಸಾಂಕೇತಿಕ ದ್ರಾಕ್ಷೇಬಳ್ಳಿಗೆ ಎಷ್ಟು ಕೊಂಬೆಗಳಿರುತ್ತವೆ?

▪ ಕೊಂಬೆಗಳಿಂದ ದೇವರು ಯಾವ ಫಲವನ್ನು ಅಪೇಕ್ಷಿಸುತ್ತಾನೆ?

▪ ನಾವು ಯೇಸುವಿನ ಸ್ನೇಹಿತರಾಗುವದು ಹೇಗೆ?

▪ ಯೇಸುವಿನ ಹಿಂಬಾಲಕರನ್ನು ಲೋಕವು ಯಾಕೆ ದ್ವೇಷಿಸುತ್ತದೆ?

▪ ಯೇಸುವಿನ ಯಾವ ಎಚ್ಚರಿಕೆಯು ಅವನ ಅಪೊಸ್ತಲರನ್ನು ಕ್ಷೋಭೆಗೊಳಪಡಿಸುತ್ತದೆ?

▪ ಅವನು ಎಲ್ಲಿಗೆ ಹೋಗುತ್ತಾನೆಂದು ಕೇಳಲು ಅಪೊಸ್ತಲರು ತಪ್ಪಿಹೋದದ್ದು ಯಾಕೆ?

▪ ವಿಶೇಷವಾಗಿ ಯಾವುದನ್ನು ಅರ್ಥೈಸಿಕೊಳ್ಳಲು ಅಪೊಸ್ತಲರು ತಪ್ಪುತ್ತಾರೆ?

▪ ದುಃಖದಿಂದ ಆನಂದಕ್ಕೆ ಅಪೊಸ್ತಲರ ಸನ್ನಿವೇಶವು ಬದಲಾಗುತ್ತದೆ ಎಂದು ಯೇಸುವು ಹೇಗೆ ದೃಷ್ಟಾಂತಿಸುತ್ತಾನೆ?

▪ ಬಲುಬೇಗನೆ ಅಪೊಸ್ತಲರು ಏನು ಮಾಡಲಿದ್ದರೆಂದು ಯೇಸು ಹೇಳಿದನು?

▪ ಯೇಸುವು ಲೋಕವನ್ನು ಜಯಿಸಿದ್ದು ಹೇಗೆ?

▪ “ಎಲ್ಲಾ ಮನುಷ್ಯರ ಮೇಲೆ ಅಧಿಕಾರ” ಯೇಸುವಿಗೆ ಕೊಡಲ್ಪಟ್ಟಿದೆ ಎಂಬುದು ಯಾವ ಅರ್ಥದಲ್ಲಿ?

▪ ದೇವರ ಮತ್ತು ಅವನ ಮಗನ ಜ್ಞಾನವನ್ನು ತೆಗೆದು ಕೊಳ್ಳುವದು ಅಂದರೆ ಯಾವ ಅರ್ಥದಲ್ಲಿರುತ್ತದೆ?

▪ ದೇವರ ಹೆಸರನ್ನು ಯೇಸುವು ಪ್ರಕಟಪಡಿಸಿದ್ದು ಯಾವ ರೀತಿಗಳಲ್ಲಿ?

▪ “ಸತ್ಯ” ಏನು, ಮತ್ತು ಕ್ರೈಸ್ತನೊಬ್ಬನನ್ನು ಅದು ಹೇಗೆ ಪವಿತ್ರಗೊಳಿಸುತ್ತದೆ?

▪ ದೇವರು, ಅವನ ಮಗನು ಮತ್ತು ಎಲ್ಲಾ ಸತ್ಯಾರಾಧಕರು ಒಂದಾಗಿದ್ದಾರೆ ಹೇಗೆ?

▪ “ಲೋಕವು ಹುಟ್ಟುವದಕ್ಕಿಂತ ಮುಂಚೆ” ಅಂದರೆ ಯಾವಾಗ?