ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅವನ ದೂರುಗಾರರಿಗೆ ಉತ್ತರ ನೀಡುವದು

ಅವನ ದೂರುಗಾರರಿಗೆ ಉತ್ತರ ನೀಡುವದು

ಅಧ್ಯಾಯ 30

ಅವನ ದೂರುಗಾರರಿಗೆ ಉತ್ತರ ನೀಡುವದು

ಯೆಹೂದ್ಯ ಧಾರ್ಮಿಕ ಮುಖಂಡರು ಸಬ್ಬತ್ತನ್ನು ಮುರಿದ ಅಪವಾದವನ್ನು ಅವನ ಮೇಲೆ ಹೊರಿಸಿದಾಗ, ಯೇಸುವು ಉತ್ತರಿಸುವದು “ನನ್ನ ತಂದೆಯು ಇಂದಿನ ವರೆಗೂ ಕೆಲಸ ಮಾಡುತ್ತಾನೆ, ನಾನೂ ಕೆಲಸ ಮಾಡುತ್ತೇನೆ.”

ಫರಿಸಾಯರ ವಾದವೇನಾಗಿದ್ದರೂ, ಯೇಸುವಿನ ಕೆಲಸವು ಸಬ್ಬತ್‌ ನಿಯಮದಿಂದ ನಿಷೇಧಿಸಲ್ಪಟ್ಟಂಥಾದಲ್ಲ. ಸಾರುವ ಮತ್ತು ವಾಸಿ ಮಾಡುವ ಅವನ ಕೆಲಸವು ದೇವರಿಂದ ನೇಮಕವಾಗಿದ್ದು, ದೇವರ ಮಾದರಿಯ ಅನುಕರಣೆಯಲ್ಲಿ, ಅವನು ಅದನ್ನು ದಿನಂಪ್ರತಿ ಮಾಡುತ್ತಿದ್ದನು. ಆದಾಗ್ಯೂ, ಅವನ ಉತ್ತರವು, ಯೆಹೂದ್ಯರ ಕೋಪವನ್ನು ಇನ್ನಷ್ಟು ಹೆಚ್ಚಿಸಿತು, ಮತ್ತು ಅವರು ಅವನನ್ನು ಕೊಲ್ಲಲು ಹುಡುಕಿದರು. ಯಾಕೆ?

ಯಾಕಂದರೆ, ಯೇಸುವು ಸಬ್ಬತ್ತನ್ನು ಮುರಿಯುವದು ಮಾತ್ರವಲ್ಲ, ಇನ್ನು ಹೆಚ್ಚಾಗಿ ತಾನು ದೇವರ ಸ್ವಂತ ಮಗನೆಂದು ಅವನು ಹೇಳುವದು ದೇವದೂಷಣೆಯಾಗಿದೆ ಎಂದು ಅವರು ಎಣಿಸಿದರು. ಆದಾಗ್ಯೂ, ಯೇಸುವು ನಿರ್ಭೀತನಾಗಿ, ದೇವರೊಂದಿಗಿನ ಮೆಚ್ಚಿಕೆಯ ತನ್ನ ಸಂಬಂಧದ ಕುರಿತು ಇನ್ನಷ್ಟು ತಿಳಿಸುತ್ತಾನೆ. “ತಂದೆಯು ಮಗನ ಮೇಲೆ ಮಮತೆಯಿಟ್ಟು ತಾನು ಮಾಡುವವುಗಳನ್ನೆಲ್ಲಾ ಅವನಿಗೆ ತೋರಿಸುತ್ತಾನೆ,” ಎಂದವನು ಹೇಳುತ್ತಾನೆ.

ಯೇಸುವು ಮುಂದುವರಿಸುವದು: “ತಂದೆಯು ಹೇಗೆ ಸತ್ತವರನ್ನು ಎಬ್ಬಿಸಿ ಬದುಕಿಸುತ್ತಾನೋ ಹಾಗೆಯೇ ಮಗನು ಸಹ ತನಗೆ ಬೇಕಾದವರನ್ನು ಬದುಕಿಸುತ್ತಾನೆ.” ನಿಜವಾಗಿಯೂ ಮಗನು ಈಗಾಗಲೇ ಆತ್ಮಿಕ ರೀತಿಯಲ್ಲಿ ಸತ್ತವರನ್ನು ಎಬ್ಬಿಸುತ್ತಾ ಇದ್ದನು! “ನನ್ನ ವಾಕ್ಯವನ್ನು ಕೇಳಿ ನನ್ನನ್ನು ಕಳುಹಿಸಿದಾತನನ್ನು ನಂಬುವವನು,” ಯೇಸುವು ಹೇಳುವದು, “ಮರಣದಿಂದ ಪಾರಾಗಿ ಜೀವಕ್ಕೆ ಸೇರಿದ್ದಾನೆ.” ಹೌದು, ಅವನು ಮುಂದುವರಿಸಿದ್ದು: “ಸತ್ತವರು ದೇವ ಕುಮಾರನ ಧ್ವನಿಯನ್ನು ಕೇಳುವ ಕಾಲ ಬರುತ್ತದೆ, ಈಗಲೇ ಬಂದಿದೆ, ಕೇಳಿದವರು ಬದುಕುವರು.”

ಈ ಸಮಯದ ತನಕ ದೈಹಿಕವಾಗಿ ಸತ್ತವರನ್ನು ಯೇಸುವು ಎಬ್ಬಿಸಿದ ಯಾವುದೇ ದಾಖಲೆ ಇಲ್ಲದಿರುವದಾದರೂ, ಅಂತಹ ಸತ್ತವರ ಅಕ್ಷರಶಃ ಪುನರುತ್ಥಾನವೊಂದು ಆಗಲಿದೆ ಎಂದು ದೂರುಗಾರರಿಗೆ ಅವನು ಹೇಳುತ್ತಾನೆ. “ಅದಕ್ಕೆ ಆಶ್ಚರ್ಯ ಪಡಬೇಡಿರಿ,” ಅವನಂದದ್ದು, “ಜ್ಞಾಪಕದ ಸಮಾಧಿಗಳಲ್ಲಿರುವವರೆಲ್ಲರೂ ಆತನ ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ.”

ಇಷ್ಟರ ತನಕ ಅಂಥ ನಿಖರವಾದ ಮತ್ತು ನಿಶ್ಚಿತವಾದ ರೀತಿಯಲ್ಲಿ ದೇವರ ಉದ್ದೇಶದಲ್ಲಿ ತನ್ನ ಪ್ರಮುಖ ಪಾತ್ರದ ಕುರಿತು ಬಹಿರಂಗವಾಗಿ ಎಂದೂ ಯೇಸುವು ವಿವರಿಸಿರಲಿಲ್ಲವೆಂಬದು ವ್ಯಕ್ತ. ಆದರೆ ಯೇಸುವಿನ ದೂರುಗಾರರಿಗೆ ಈ ವಿಷಯಗಳ ಕುರಿತು ಅವನ ಸ್ವಂತ ಸಾಕ್ಷಿಗಿಂತಲೂ ಅಧಿಕವಾದದ್ದು ಇತ್ತು. ಯೇಸುವು ಅವರ ಜ್ಞಾಪಕಕ್ಕೆ ತಂದದ್ದು: “ನೀವು ಯೋಹಾನನ ಬಳಿಯಲ್ಲಿ ಕೇಳಿಕೊಂಡು ಬರುವದಕ್ಕೆ ಕಳುಹಿಸಿದಿರಿ; ಅವನು ಸತ್ಯಕ್ಕೆ ಸಾಕ್ಷಿ ಹೇಳಿದನು.”

ಕೇವಲ ಎರಡು ವರ್ಷಗಳ ಹಿಂದೆ, ಸ್ನಾನಿಕನಾದ ಯೋಹಾನನು ತನ್ನ ಹಿಂದೆ ಬರುವವನ ಕುರಿತು ಈ ಯೆಹೂದಿ ಧಾರ್ಮಿಕ ಮುಂದಾಳುಗಳಿಗೆ ತಿಳಿಸಿದ್ದನು. ಈಗ ಸೆರೆಯಲ್ಲಿರುವ, ಆದರೆ ಹಿಂದೊಮ್ಮೆ ಅವನೆಡೆಗೆ ಅತೀ ಗೌರವವಿದ್ದ ಯೋಹಾನನ ಕುರಿತು ಜ್ಞಾಪಕ ಹುಟ್ಟಿಸುತ್ತಾ, ಯೇಸುವು ಹೇಳಿದ್ದು: “ಅವನು ಕೊಡುವ ಬೆಳಕಿನಲ್ಲಿ ಸ್ವಲ್ಪಕಾಲ ವಿನೋದಗೊಳ್ಳುವದಕ್ಕೆ ಮನಸ್ಸು ಮಾಡಿದಿರಿ.” ಅವರಿಗೆ ಸಹಾಯ, ಹೌದು, ಅವರನ್ನು ರಕ್ಷಿಸ ಬೇಕೆಂಬ ನಿರೀಕ್ಷೆಯಿಂದ ಯೇಸುವು ಈ ಸಂಗತಿಗಳನ್ನು ಅವರ ಮನಸ್ಸಿಗೆ ಪುನಃ ತರುತ್ತಾನೆ. ಆದರೂ ಯೋಹಾನನ ಸಾಕ್ಷಿಯ ಮೇಲೆ ಆತನು ಹೊಂದಿಕೊಂಡಿರಲಿಲ್ಲ.

“ನಾನು ಮಾಡುವ ಕೆಲಸಗಳೇ [ಈಗಾಗಲೇ ಅವನು ಮಾಡಿದ ಮಹತ್ಕಾರ್ಯವನ್ನು ಕೂಡಿಸಿ] ತಂದೆಯು ನನ್ನನ್ನು ಕಳುಹಿಸಿಕೊಟ್ಟನೆಂಬದಾಗಿ ನನ್ನ ವಿಷಯದಲ್ಲಿ ಸಾಕ್ಷಿ ಕೊಡುತ್ತವೆ.” ಆದರೆ ಇದರ ಹೊರತಾಗಿ, ಯೇಸುವು ಮುಂದುವರಿಸಿದ್ದು: “ನನ್ನನ್ನು ಕಳುಹಿಸಿಕೊಟ್ಟ ತಂದೆಯು ನನ್ನ ವಿಷಯವಾಗಿ ಸಾಕ್ಷಿ ಕೊಟ್ಟಿದ್ದಾನೆ.” ಉದಾಹರಣೆಗಾಗಿ, ಅವನ ದೀಕ್ಷಾಸ್ನಾನದಲ್ಲಿ “ಈತನು ಪ್ರಿಯನಾಗಿರುವ ನನ್ನ ಮಗನು” ಎಂದು ದೇವರು ಯೇಸುವಿನ ಕುರಿತಾಗಿ ಸಾಕ್ಷಿಯನ್ನಿತ್ತಿದ್ದಾನೆ.

ಅವನನ್ನು ನಿರಾಕರಿಸಲಿಕ್ಕಾಗಿ ನಿಜವಾಗಿ ಯೇಸುವಿನ ದೂರುಗಾರರಿಗೆ ಯಾವುದೇ ನೆವನವಿರಲಿಲ್ಲ. ಅವರು ಶೋಧಿಸುತ್ತಾರೆಂದು ಹೇಳಿಕೊಳ್ಳುವ ಆ ಶಾಸ್ತ್ರಗಳೇ ಅವನ ಕುರಿತಾಗಿ ಸಾಕ್ಷಿ ಕೊಡುತ್ತಿದ್ದವು! “ನೀವು ಮೋಶೆಯ ಮಾತನ್ನು ನಂಬುವವರಾಗಿದ್ದರೆ ನನ್ನ ಮಾತನ್ನು ನಂಬುತ್ತಿದ್ದಿರಿ. ಅವನು ನನ್ನ ವಿಷಯವಾಗಿ ಬರೆದನು. ಅವನು ಬರೆದ ಮಾತುಗಳನ್ನು ನೀವು ನಂಬದಿದ್ದರೆ ನಾನು ಹೇಳುವ ಮಾತುಗಳನ್ನು ಹೇಗೆ ನಂಬುವಿರಿ?” ಎಂದು ಹೇಳಿ ಯೇಸುವು ಮುಕ್ತಾಯಗೊಳಿಸುತ್ತಾನೆ. ಯೋಹಾನ 5:17-47; 1:19-27; ಮತ್ತಾಯ 3:17.

▪ ಯೇಸುವಿನ ಕೆಲಸವು ಸಬ್ಬತ್‌ನ ಮುರಿಯುವಿಕೆಯಾಗಿರಲಿಲ್ಲ ಏಕೆ?

▪ ದೇವರ ಉದ್ದೇಶದಲ್ಲಿ ತನ್ನ ಪ್ರಮುಖ ಪಾತ್ರವನ್ನು ಯೇಸುವು ಹೇಗೆ ವಿವರಿಸಿದನು?

▪ ತಾನು ದೇವಕುಮಾರನೆಂದು ರುಜುಪಡಿಸಲು ಯೇಸುವು ಯಾರ ಸಾಕ್ಷ್ಯಗಳ ಕಡೆಗೆ ತೋರಿಸಿದನು?