ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಹಂಕಾರಿಗಳು ಮತ್ತು ದೀನರು

ಅಹಂಕಾರಿಗಳು ಮತ್ತು ದೀನರು

ಅಧ್ಯಾಯ 39

ಅಹಂಕಾರಿಗಳು ಮತ್ತು ದೀನರು

ಸ್ನಾನಿಕನಾದ ಯೋಹಾನನ ಉತ್ತಮ ಗುಣಗಳನ್ನು ಪ್ರಸ್ತಾಪಿಸಿದ ಮೇಲೆ ಯೇಸು ತನ್ನ ಸುತ್ತಲಿರುವ ಅಹಂಕಾರಿ ಹಾಗೂ ಚಂಚಲ ಸ್ವಭಾವದ ಜನರ ಕಡೆಗೆ ತನ್ನ ಗಮನವನ್ನು ತಿರುಗಿಸುತ್ತಾನೆ. “ಈ ಸಂತತಿಯು” ಆತನು ಘೋಷಿಸಿದ್ದು: “ಪೇಟೆಗಳಲ್ಲಿ ಕೂತುಕೊಂಡು ನಿಮಗೋಸ್ಕರ ಕೊಳಲೂದಿದೆವು, ನೀವು ಕುಣಿಯಲಿಲ್ಲ. ಗೋಳಾಡಿದೆವು, ನೀವು ಅಳಲಿಲ್ಲ ಎಂದು ಒಬ್ಬರಿಗೊಬ್ಬರು ಕೂಗಿಹೇಳುವಂಥ ಹುಡುಗರನ್ನು ಹೋಲುತ್ತಾರೆ.”

ಯೇಸುವಿನ ಮಾತಿನ ಅರ್ಥವೇನು? ಅವನು ವಿವರಿಸುವದು: “ಸ್ನಾನಿಕನಾದ ಯೋಹಾನನು ಬಂದನು. ಅವನು ಅನ್ನಪಾನಗಳನ್ನು ತೆಗೆದು ಕೊಳ್ಳದವನಾಗಿದ್ದಾನೆ. ಅವರು ಅವನಿಗೆ—ದೆವ್ವ ಹಿಡಿದದೆ ಅನ್ನುತ್ತಾರೆ. ಮನುಷ್ಯಕುಮಾರನು ಬಂದನು, ಅವನು ಅನ್ನಪಾನಗಳನ್ನು ತೆಗೆದುಕೊಳ್ಳುವವನಾಗಿದ್ದಾನೆ; ಅವರು—ಇಗೋ, ಇವನು ಹೊಟ್ಟೆಬಾಕನು, ಕುಡುಕನು, ಭ್ರಷ್ಟರ ಮತ್ತು ಪಾಪಿಷ್ಠರ ಗೆಳೆಯನು ಅನ್ನುತ್ತಾರೆ.”

ಜನರನ್ನು ತೃಪ್ತಿಪಡಿಸುವದು ಅಸಾಧ್ಯ. ಯಾವದೂ ಅವರನ್ನು ಮೆಚ್ಚಿಸುವದಿಲ್ಲ. “ದ್ರಾಕ್ಷಾರಸವನ್ನಾಗಲಿ ಮದ್ಯವನ್ನಾಗಲಿ ಕುಡಿಯಬಾರದೆಂದು” ದೇವದೂತನ ಘೋಷಣೆಗೆ ಸಹಮತದಲ್ಲಿ, ಒಬ್ಬ ನಾಜೀರನೋಪಾದಿ ಸ್ವ-ತ್ಯಾಗದ ಸರಳವಾದ ನೀತಿಬದ್ಧ ಜೀವಿತವನ್ನು ಯೋಹಾನನು ಜೀವಿಸಿದನು. ಆದರೂ ಜನರು ಅವನನ್ನು ದೆವ್ವ ಹಿಡಿದವನೆಂದು ಹೇಳುತ್ತಿದ್ದರು. ಇನ್ನೊಂದು ಕಡೆ, ಯೇಸುವು ಯಾವುದೇ ವಿರಕತ್ತೆಯನ್ನು ಪಾಲಿಸದೆ ಸಾಮಾನ್ಯ ಜನರಂತೆ ಜೀವಿಸಿದ್ದರೂ, ಅವನನ್ನು ಅತಿರೇಕಕ್ಕಾಗಿ ಆಪಾದಿಸಿದರು.

ಜನರನ್ನು ಮೆಚ್ಚಿಸುವದು ಎಷ್ಟು ಕಷ್ಟ! ಬೇರೆ ಮಕ್ಕಳು ಕೊಳಲನ್ನೂದುವಾಗ ಕುಣಿಯಲು ತಪ್ಪುವ ಅಥವಾ ಸಹಚರರು ಗೋಳಾಡುವಾಗ ಅಳುವ ಪ್ರತಿಕ್ರಿಯೆಯನ್ನು ತೋರಿಸದ, ಒಡನಾಡಿಗಳಂತೆ ಇವರಿದ್ದಾರೆ. ಆದಾಗ್ಯೂ ಯೇಸುವಂದದ್ದು: “ವಿವೇಕವು ತನ್ನ ಕೆಲಸಗಳಿಂದ ವಿವೇಕವೇ ಎಂದು ಗೊತ್ತಾಗುವದು.” ಹೌದು, ರುಜುವಾತು—ಕ್ರಿಯೆಗಳು—ಯೋಹಾನ ಮತ್ತು ಯೇಸುವಿನ ಮೇಲಿನ ಆರೋಪಗಳು ಸುಳ್ಳೆಂದು ಸ್ಪಷ್ಟಗೊಳಿಸುತ್ತವೆ.

ಖೊರಾಜಿನ್‌, ಬೆತ್ಸಾಯಿದಾ ಮತ್ತು ಕಪೆರ್ನೌಮ್‌ ಮೂರು ನಗರಗಳಲ್ಲಿ ತನ್ನ ಮಹತ್ಕಾರ್ಯಗಳಲ್ಲಿ ಹೆಚ್ಚಿನವುಗಳನ್ನು ಯೇಸುವು ನಡಿಸಿದ್ದು, ಅವುಗಳನ್ನು ಖಂಡಿಸಲು ಒಂದೊಂದಾಗಿ ಪ್ರತ್ಯೇಕಿಸುತ್ತಾನೆ. ಒಂದುವೇಳೆ ಆತನು ತೂರ್‌ ಮತ್ತು ಸೀದೋನ್‌ನ ಫೊನಿಶಿಯನ್‌ ನಗರಗಳಲ್ಲಿ ಈ ಮಹತ್ಕಾರ್ಯಗಳನ್ನು ನಡಿಸಿದ್ದರೆ, ಅಲ್ಲಿಯವರು ಆಗಲೇ ಗೋಣಿತಟ್ಟು ಹೊದ್ದುಕೊಂಡು ಬೂದಿಯಲ್ಲಿ ಕೂತುಕೊಂಡು ಪಶ್ಚಾತ್ತಾಪ ಪಡುತ್ತಿದ್ದರು. ಅವನ ಶುಶ್ರೂಷೆಯ ಕಾಲದಲ್ಲಿ ಒಂದು ಕಾರ್ಯಕೇಂದ್ರವಾಗಿತ್ತೆಂದು ತೋರುವ ಕಪೆರ್ನೌಮ್‌ನ್ನು ಖಂಡಿಸುತ್ತಾ, ಯೇಸು ಘೋಷಿಸುವದು: “ನ್ಯಾಯ ವಿಚಾರಣೆಯ ದಿನದಲ್ಲಿ ನಿನಗಿಂತಲೂ ಸೋದೋಮ್‌ ಸೀಮೆಯ ಗತಿಯು ಮೇಲಾಗಿರುವದು.”

ಅನಂತರ ಯೇಸುವು ಬಹಿರಂಗವಾಗಿ ತನ್ನ ಸ್ವರ್ಗೀಯ ತಂದೆಯನ್ನು ಸ್ತುತಿಸುತ್ತಾನೆ. ಅವನಿದನ್ನು ಮಾಡಲು ಪ್ರೇರಿಸಲ್ಪಟ್ಟನು ಏಕೆಂದರೆ ದೇವರು ಬೆಲೆಯುಳ್ಳ ಆತ್ಮಿಕ ಸತ್ಯತೆಗಳನ್ನು ವಿವೇಕಿಗಳಿಗೂ ಬುದ್ಧಿವಂತರಿಗೂ ಮರೆ ಮಾಡಿ, ಬಾಲಕರೋ ಎಂಬಂತಿರುವ ದೀನರಿಗೆ ಈ ಅದ್ಭುತ ಸಂಗತಿಗಳನ್ನು ಪ್ರಕಟಿಸುತ್ತಾನೆ.

ಕೊನೆಯಲ್ಲಿ, ಯೇಸುವು ಈ ಚಿತ್ತಾಕರ್ಷಕ ಆಮಂತ್ರಣವನ್ನೀಯುತ್ತಾನೆ: “ಎಲೈ ಕಷ್ಟಪಡುವವರೇ, ಹೊರೆ ಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ. ನಾನು ನಿಮಗೆ ವಿಶ್ರಾಂತಿ ಕೊಡುವೆನು. ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತು ಕೊಳ್ಳಿರಿ. ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿ ಸಿಕ್ಕುವದು ಯಾಕಂದರೆ ನನ್ನ ನೊಗವು ಮೃದುವಾದದ್ದು. ನನ್ನ ಹೊರೆಯು ಹೌರವಾದದ್ದು.”

ಯೇಸುವು ಇಂಥ ವಿಶ್ರಾಂತಿಯನ್ನು ಹೇಗೆ ನೀಡುತ್ತಾನೆ? ಧಾರ್ಮಿಕ ಮುಂದಾಳುಗಳು ಜನರ ಮೇಲೆ ಹೊರಿಸಿದ ಭಾರವಾದ ಸಂಪ್ರದಾಯಗಳ ದಾಸ್ಯದಿಂದ, ಉದಾಹರಣೆಗೆ, ಸಬ್ಬತ್ತಾಚರಣೆಯ ನಿಬಂರ್ಧಕ ಕಟ್ಟುಪಾಡಿನಿಂದ ಬಿಡುಗಡೆ ಮಾಡುವ ಮೂಲಕ ಅದನ್ನು ಮಾಡಿದನು. ರಾಜಕೀಯ ಅಧಿಕಾರಿಗಳ ದಬ್ಬಾಳಿಕೆಯ ಭಾರದಿಂದ ಜಜ್ಜಲ್ಪಟ್ಟವರಿಗೆ ಮತ್ತು ತಮ್ಮ ಪಾಪಗಳ ದೆಸೆಯಿಂದ ಬಾಧಿತವಾದ ಮನಸ್ಸಾಕ್ಷಿಯ ಭಾರದಿಂದ ಬಳಲುವವರಿಗೆ ಕೂಡಾ ಬಿಡುಗಡೆಯನ್ನು ಅವನು ತೋರಿಸಿದನು. ಈ ರೀತಿಯಲ್ಲಿ ಬಾಧಿತರಾಗಿರುವವರು ತಮ್ಮ ಪಾಪಗಳಿಂದ ಹೇಗೆ ಕ್ಷಮೆಯನ್ನು ಪಡೆಯಬಹುದು ಮತ್ತು ದೇವರೊಂದಿಗೆ ಒಂದು ಶ್ರೇಷ್ಠ ಸಂಬಂಧದಲ್ಲಿ ಹೇಗೆ ಆನಂದಿಸಬಹುದೆಂದು ಅವನು ಪ್ರಕಟಿಸಿದನು.

ಯೇಸುವು ನೀಡಿದ ದಯಾಭರಿತ ನೊಗವು ದೇವರಿಗೆ ಒಂದು ಪೂರ್ಣವಾದ ಸಮರ್ಪಣೆಯಾಗಿದ್ದು, ನಮ್ಮ ಕರುಣಾಭರಿತ ದೇವರನ್ನು ಸೇವಿಸಲು ನಮಗೆ ಸಾಧ್ಯತೆಯನ್ನುಂಟು ಮಾಡುತ್ತದೆ. ಯೇಸುವು ತನ್ನ ಬಳಿಗೆ ಬರುವವರಿಗೆ ನೀಡುವಂತಹ ಹಗುರವಾದ ಹೊರೆಯೆಂದರೆ ಜೀವಕ್ಕಾಗಿ ದೇವರ ಆವಶ್ಯಕತೆಗಳಿಗೆ—ಅವು ಬೈಬಲಿನಲ್ಲಿ ದಾಖಲೆಯಾಗಿರುವ ಅವನ ಆಜ್ಞೆಗಳಿಗೆ ವಿಧೇಯರಾಗುವದೇ ಆಗಿರುತ್ತದೆ. ಮತ್ತು ಇವುಗಳಿಗೆ ವಿಧೇಯರಾಗುವುದು ಭಾರವಾದದ್ದಲ್ಲ. ಮತ್ತಾಯ 11:16-30; ಲೂಕ 1:15; 7:31-35; 1 ಯೋಹಾನ 5:3.

▪ ಯೇಸುವಿನ ಸಂತತಿಯ ಅಹಂಕಾರಿಗಳೂ, ಚಂಚಲ ಮನಸ್ಕರೂ ಆದ ಜನರು ಬಾಲಕರಂತಿರುವದು ಹೇಗೆ?

▪ ಯೇಸುವು ತನ್ನ ಪರಲೋಕದ ತಂದೆಯನ್ನು ಸ್ತುತಿಸುವಂತೆ ಪ್ರೇರಿಸಲ್ಪಟ್ಟದ್ದು ಏಕೆ?

▪ ಯಾವ ವಿಧಗಳಲ್ಲಿ ಜನರ ಮೇಲೆ ಭಾರ ಹೊರಿಸಲಾಗಿದೆ, ಮತ್ತು ಯೇಸುವು ಯಾವ ಪರಿಹಾರವನ್ನು ಒದಗಿಸುತ್ತಾನೆ?