ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆತನು ಹುಟ್ಟುವ ಮೊದಲೇ ಗೌರವಿಸಲ್ಪಟ್ಟನು

ಆತನು ಹುಟ್ಟುವ ಮೊದಲೇ ಗೌರವಿಸಲ್ಪಟ್ಟನು

ಅಧ್ಯಾಯ 2

ಆತನು ಹುಟ್ಟುವ ಮೊದಲೇ ಗೌರವಿಸಲ್ಪಟ್ಟನು

ಗಬ್ರಿಯೇಲ್‌ ದೇವದೂತನು ಯುವ ಕನ್ಯೆಯಾದ ಮರಿಯಳಿಗೆ, ಅವಳು ಸದಾಕಾಲ ರಾಜನಾಗಲಿರುವ ಗಂಡುಮಗುವಿಗೆ ಜನನವನ್ನೀಯುವಳೆಂದು ಹೇಳಿದ ನಂತರ, ಮರಿಯಳು ಕೇಳಿದ್ದು: “ನನಗೆ ಪುರುಷನೊಬ್ಬನೊಡನೆ ಸಂಭೋಗ ಇಲ್ಲದಿರುವದರಿಂದ, ಇದು ಹೇಗಾದೀತು?”

“ಪವಿತ್ರಾತ್ಮವು ನಿನ್ನ ಮೇಲೆ ಬರುವುದು,” ಗಬ್ರಿಯೇಲನು ವಿವರಿಸುತ್ತಾನೆ, “ಮತ್ತು ಪರಾತ್ಪರನ ಶಕ್ತಿಯ ನೆರಳು ನಿನ್ನ ಮೇಲೆ ಬೀಳುವದು. ಆದದರಿಂದ ಹುಟ್ಟುವ ಆ ಶಿಶುವು ಪವಿತ್ರವೂ, ದೇವರ ಮಗನೂ ಎಣಿಸಲ್ಪಡುವುದು.”

ಅವನ ಸಂದೇಶವನ್ನು ಮರಿಯಳು ನಂಬಲು ಸಹಾಯವಾಗುವಂತೆ, ಗಬ್ರಿಯೇಲನು ಮುಂದುವರಿಸುವದು: “ಮತ್ತು ನೋಡು, ನಿನ್ನ ಬಂಧುವಾದ ಎಲಿಸಬೇತಳಿದ್ದಾಳಲ್ಲಾ, ಆಕೆ ಮುಪ್ಪಿನವಳಾದರೂ ಒಂದು ಗಂಡು ಮಗುವಿನ ಗರ್ಭಿಣಿಯಾಗಿದ್ದಾಳೆ; ಬಂಜೆಯೆನಿಸಿಕೊಂಡಿದ್ದ ಆಕೆಗೆ ಇದು ಆರನೆಯ ತಿಂಗಳು. ದೇವರಿಂದ ಬರುವ ಯಾವ ಮಾತಾದರೂ ಅಸಾಧ್ಯದ್ದಾಗುವದಿಲ್ಲ.”

ಮರಿಯಳು ಗಬ್ರಿಯೇಲನ ಮಾತನ್ನು ಅಂಗೀಕರಿಸುತ್ತಾಳೆ. ಮತ್ತು ಅವಳ ಪ್ರತಿಕ್ರಿಯೆಯೇನು? “ಇಗೋ, ಯೆಹೋವನ ದಾಸಿ!” ಎಂದವಳು ಉದ್ಗರಿಸುತ್ತಾಳೆ. “ನಿನ್ನ ಮಾತಿನಂತೆ ನನ್ನಲ್ಲಿ ಸಂಭವಿಸಲಿ.”

ಗಬ್ರಿಯೇಲನು ಹೊರಟು ಹೋದ ಕೂಡಲೇ, ಮರಿಯಳು ತನ್ನನ್ನು ಸಿದ್ಧಪಡಿಸಿಕೊಂಡು ಯೂದಾಯದ ಮಲೆನಾಡಿನಲ್ಲಿ ತನ್ನ ಗಂಡನಾದ ಜಕರೀಯನೊಂದಿಗೆ ವಾಸಿಸುತ್ತಿದ್ದ ಎಲಿಸಬೇತಳನ್ನು ಸಂದರ್ಶಿಸಲು ಹೋಗುತ್ತಾಳೆ. ನಜರೇತಿನ ಮರಿಯಳ ಮನೆಯಿಂದ ಇದು ಮೂರು ಯಾ ನಾಲ್ಕು ದಿನಗಳ ಒಂದು ದೀರ್ಘ ಪ್ರಯಾಣವಾಗಿತ್ತು.

ಮರಿಯಳು ಕೊನೆಗೂ ಜಕರೀಯನ ಮನೆಗೆ ಆಗಮಿಸಿ, ಒಳಪ್ರವೇಶಿಸಿ, ವಂದಿಸುತ್ತಾಳೆ. ಆಗ, ಎಲಿಸಬೇತಳು ಪವಿತ್ರಾತ್ಮಭರಿತಳಾಗಿ, ಮರಿಯಳಿಗೆ ಹೇಳುವದು: “ನೀನು ಸ್ತ್ರೀಯರೊಳಗೆ ಆಶೀರ್ವಾದ ಹೊಂದಿದವಳು, ಮತ್ತು ನಿನ್ನ ಗರ್ಭದ ಫಲವು ಆಶೀರ್ವಾದ ಹೊಂದಿದ್ದು! ನನ್ನ ಸ್ವಾಮಿಯ ತಾಯಿಯು ನನ್ನ ಬಳಿಗೆ ಬರುವಷ್ಟು ಭಾಗ್ಯ ನನಗೆ ಎಲ್ಲಿಂದಾಯಿತು? ಇಗೋ! ನಿನ್ನ ವಂದನೆಯು ನನ್ನ ಕಿವಿಗೆ ಬೀಳುತ್ತಲೇ ಕೂಸು ನನ್ನ ಗರ್ಭದಲ್ಲಿ ಉಲ್ಲಾಸದಿಂದ ಹಾರಾಡಿತು.”

ಇದನ್ನು ಕೇಳಿದ ಮರಿಯಳು ಹೃದಯಪೂರ್ವಕ ಕೃತಜ್ಞತೆಯಿಂದ ಹೀಗೆ ಪ್ರತಿವರ್ತಿಸುತ್ತಾಳೆ: “ನನ್ನ ಪ್ರಾಣವು ಯೆಹೋವನನ್ನು ಕೊಂಡಾಡುತ್ತದೆ. ನನ್ನ ಆತ್ಮವು ನನ್ನ ರಕ್ಷಕನಾದ ದೇವರಲ್ಲಿ ಉಲ್ಲಾಸಪಡದೇ ಇರಲು ಸಾಧ್ಯವಿಲ್ಲವಾಗಿದೆ; ಯಾಕಂದರೆ ಆತನು ತನ್ನ ದಾಸಿಯ ದೀನಸ್ಥಿತಿಯ ಮೇಲೆ ಲಕ್ಷ್ಯವಿಟ್ಟಿದ್ದಾನೆ. ಇಗೋ! ಇಂದಿನಿಂದ ತಲತಲಾಂತರದವರೆಲ್ಲಾ ನನ್ನನ್ನು ಧನ್ಯಳೆಂದು ಹೊಗಳುವರು; ಯಾಕಂದರೆ ಶಕ್ತನಾಗಿರುವಾತನು ನನಗೆ ಮಹತ್ತಾದ ಕೃತ್ಯಗಳನ್ನು ಮಾಡಿದ್ದಾನೆ.” ಆದರೂ, ತನ್ನೆಡೆಗೆ ಮೆಚ್ಚಿಕೆಯು ತೋರಿಸಲ್ಪಟ್ಟಿದ್ದರೂ, ಮರಿಯಳು ಎಲ್ಲಾ ಗೌರವವನ್ನು ದೇವರ ಕಡೆಗೆ ನಿರ್ದೇಶಿಸುತ್ತಾಳೆ. “ಆತನ ನಾಮವು ಪರಿಶುದ್ಧವಾದದ್ದು,” ಎಂದವಳು ಹೇಳುತ್ತಾಳೆ, “ಮತ್ತು ಆತನಲ್ಲಿ ಭಯಭಕ್ತಿಯುಳ್ಳವರ ಮೇಲೆ ಆತನ ದಯವು ತಲತಲಾಂತರದ ವರೆಗೂ ಇರುವದು.”

ಪ್ರೇರಿತ ಪ್ರವಾದನಾ ಸಂಗೀತದಲ್ಲಿ ಮರಿಯಳು ದೇವರನ್ನು ಸ್ತುತಿಸುವುದನ್ನು ಮುಂದುವರಿಸುತ್ತಾ, ಹೇಳುವದು: “ಆತನು ತನ್ನ ಭುಜಪರಾಕ್ರಮವನ್ನು ತೋರಿಸಿ ಸೊಕ್ಕಿದ ಮನಸ್ಸುಳ್ಳವರನ್ನು ಚದರಿಸಿಬಿಟ್ಟಿದ್ದಾನೆ. ಪ್ರಭುಗಳನ್ನು ಸಿಂಹಾಸನಗಳಿಂದ ದೊಬ್ಬಿ ದೀನಸ್ಥಿತಿಯವರನ್ನು ಉನ್ನತಸ್ಥಿತಿಗೆ ತಂದಿದ್ದಾನೆ. ಹಸಿದವರನ್ನು ಮೃಷ್ಟಾನದಿಂದ ತೃಪ್ತಿಪಡಿಸಿ ಸ್ಥಿತಿವಂತರನ್ನು ಬರಿಗೈಯಲ್ಲಿ ಕಳುಹಿಸಿಬಿಟ್ಟಿದ್ದಾನೆ. ಆತನು ನಮ್ಮ ಪೂರ್ವಿಕರಿಗೆ ಹೇಳಿದ್ದಕ್ಕೆ ಸರಿಯಾಗಿ ಅಬ್ರಹಾಮನಿಗೂ ಅವನ ವಂಶದವರಿಗೂ ಯಾವಾಗಲೂ ದಯೆ ತೋರಿಸಬೇಕೆಂಬದನ್ನು ನೆನಸಿಕೊಂಡು ತನ್ನ ಸೇವಕನಾದ ಇಸ್ರಾಯೇಲನನ್ನು ಕೈಹಿಡಿದಿದ್ದಾನೆ.”

ಮರಿಯಳು ಎಲಿಸಬೇತಳೊಡನೆ ಹೆಚ್ಚು ಕಡಿಮೆ ಮೂರು ತಿಂಗಳು ಇದ್ದಳು ಮತ್ತು ಎಲಿಸಬೇತಳು ಗರ್ಭಿಣಿಯಾಗಿದ್ದ ಈ ಕೊನೆಯ ವಾರಗಳಲ್ಲಿ ಬಹಳ ಸಹಾಯಕಾರಿಯಾಗಿದ್ದಳು ಎನ್ನುವದರಲ್ಲಿ ಯಾವದೇ ಸಂದೇಹವಿಲ್ಲ. ಈ ನಂಬಿಗಸ್ತ ಇಬ್ಬರು ಸ್ತ್ರೀಯರು, ದೇವರ ಸಹಾಯದಿಂದ ಮಕ್ಕಳನ್ನು ಹೊತ್ತುಕೊಂಡಿದ್ದ ಅವರ ಜೀವಿತಗಳ ಆಶೀರ್ವಾದಭರಿತ ಸಮಯದಲ್ಲಿ ಒಟ್ಟಿಗೆ ಕೂಡಿ ಇರುವದು ಖಂಡಿತವಾಗಿಯೂ ಉತ್ತಮವಾಗಿದೆ!

ಆತನು ಹುಟ್ಟುವ ಮೊದಲೇ ಯೇಸುವಿಗೆ ಕೊಡಲ್ಪಟ್ಟ ಗೌರವವನ್ನು ನೀವು ಗಮನಿಸಿದೀರೋ? ಎಲಿಸಬೇತಳು ಅವನನ್ನು “ನನ್ನ ಸ್ವಾಮೀ,” ಎಂದು ಕರೆದಳು ಮತ್ತು ಮರಿಯಳು ಮೊದಲು ಕಾಣಿಸಿಕೊಂಡಾಗ, ಅವಳ ಅಜನಿತ ಕೂಸು ಉಲ್ಲಾಸದಿಂದ ಹಾರಾಡಿತು. ಇನ್ನೊಂದು ಪಕ್ಕದಲ್ಲಿ, ಮರಿಯಳನ್ನೂ, ಅವಳ ಇನ್ನೂ ಹುಟ್ಟಲಿರುವ ಮಗುವನ್ನೂ ಇತರರು ಕೊಂಚವೇ ಗೌರವದಿಂದ ಉಪಚರಿಸಿದ್ದನ್ನು, ನಾವೀಗ ನೋಡೋಣ. ಲೂಕ 1:26-56.

▪ ಮರಿಯಳು ಹೇಗೆ ಗರ್ಭವತಿಯಾಗುವಳು ಎಂದು ತಿಳಿಯಲು ಸಹಾಯವಾಗುವಂತೆ ಗಬ್ರಿಯೇಲನು ಏನು ಹೇಳಿದನು?

▪ ಯೇಸುವು ಹುಟ್ಟುವ ಮೊದಲೇ ಹೇಗೆ ಗೌರವಿಸಲ್ಪಟ್ಟನು?

▪ ದೇವರನ್ನು ಸ್ತುತಿಸುವ ಒಂದು ಪ್ರವಾದನಾ ಸಂಗೀತವೊಂದರಲ್ಲಿ ಮರಿಯಳು ಏನನ್ನು ಹೇಳಿದಳು?

▪ ಎಷ್ಟು ಕಾಲದ ತನಕ ಮರಿಯಳು ಎಲಿಸಬೇತಳೊಂದಿಗೆ ಇದ್ದಳು, ಮತ್ತು ಈ ಸಮಯದಲ್ಲಿ ಎಲಿಸಬೇತಳೊಂದಿಗೆ ಮರಿಯಳು ಇರುವದು ಯಾಕೆ ಸೂಕ್ತವಾಗಿತ್ತು?