ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇನ್ನಷ್ಟು ಗೋಚರಿಸುವಿಕೆಗಳು

ಇನ್ನಷ್ಟು ಗೋಚರಿಸುವಿಕೆಗಳು

ಅಧ್ಯಾಯ 129

ಇನ್ನಷ್ಟು ಗೋಚರಿಸುವಿಕೆಗಳು

ಶಿಷ್ಯರು ಇನ್ನೂ ಎದೆಗುಂದಿದವರಾಗಿದ್ದರು. ಸಮಾಧಿಯು ಖಾಲಿಯಾಗಿರುವದರ ಸೂಚಿತಾರ್ಥವನ್ನು ಅವರು ಗ್ರಹಿಸುವದಿಲ್ಲ, ಇಲ್ಲವೇ ಸ್ತ್ರೀಯರ ವರದಿಗಳನ್ನು ಅವರು ನಂಬುವದಿಲ್ಲ. ಆದುದರಿಂದ, ಅನಂತರ ಆದಿತ್ಯವಾರ, ಕೆಯ್ಲೊಫ ಮತ್ತು ಇನ್ನೊಬ್ಬ ಶಿಷ್ಯನು ಸುಮಾರು 11 ಕಿಲೊಮೀಟರ್‌ ದೂರದಲ್ಲಿರುವ ಎಮ್ಮಾಹುಗೆ ಹೋಗಲು ಯೆರೂಸಲೇಮಿನಿಂದ ಹೊರಡುತ್ತಾರೆ.

ದಾರಿಯಲ್ಲಿ ದಿನದ ಘಟನೆಗಳನ್ನು ಚರ್ಚಿಸುತ್ತಿರುವಾಗ, ಒಬ್ಬ ಅಪರಿಚಿತನು ಅವರೊಂದಿಗೆ ಜೊತೆಗೂಡುತ್ತಾನೆ. “ನೀವು ಮಾರ್ಗದಲ್ಲಿ ಹೋಗುತ್ತಾ ಚರ್ಚಿಸಿ ಮಾತಾಡಿಕೊಳ್ಳುವ ಆ ಸಂಗತಿಗಳೇನು?” ಅವನು ವಿಚಾರಿಸುತ್ತಾನೆ.

ಶಿಷ್ಯರು ದುಃಖದ ಮುಖವುಳ್ಳವರಾಗಿ ನಿಂತರು, ಮತ್ತು ಕೆಯ್ಲೊಫನು ಉತ್ತರಿಸುವದು: “ಯೆರೂಸಲೇಮಿಗೆ ಬಂದ ಪರಸ್ಥಳದವರೆಲ್ಲರಿಗೂ ಈ ದಿವಸಗಳಲ್ಲಿ ಅದರೊಳಗೆ ನಡೆದಿರುವ ಸಂಗತಿಗಳು ಗೊತ್ತಿರಲಾಗಿ ನಿನಗೆ ಮಾತ್ರ ಗೊತ್ತಿಲ್ಲವೋ?” ಅವನು ಕೇಳುವದು: “ಯಾವ ಸಂಗತಿಗಳು?”

“ನಜರೇತಿನವನಾದ ಯೇಸುವಿನ ಸಂಗತಿಗಳೇ,” ಅವರು ಉತ್ತರಿಸುತ್ತಾರೆ. “ಆತನನ್ನು ಮಹಾ ಯಾಜಕರೂ ನಮ್ಮ ಅಧಿಕಾರಿಗಳೂ ಮರಣ ದಂಡನೆಗೆ ಒಪ್ಪಿಸಿ ವಧಾಸ್ತಂಭಕ್ಕೇರಿಸಿದರು. ನಾವಾದರೋ ಇಸ್ರಾಯೇಲ್‌ ಜನವನ್ನು ಬಿಡಿಸತಕ್ಕವನು ಆತನೇ ಎಂದು ನಿರೀಕ್ಷಿಸಿಕೊಂಡಿದ್ದೆವು.”

ಕೆಯ್ಲೋಫನು ಮತ್ತು ಅವನ ಸಂಗಾತಿಯು ಆ ದಿನದ ಆಶ್ಚರ್ಯಕರ ಘಟನೆಗಳನ್ನು ವಿವರಿಸಿದರು—ದೇವದೂತರುಗಳ ಅಲೌಕಿಕ ದೃಶ್ಯಗಳ ವರದಿ ಮತ್ತು ಖಾಲಿ ಸಮಾಧಿ—ಆದರೆ ಈ ಸಂಗತಿಗಳ ಅರ್ಥದ ಕುರಿತು ತಮ್ಮಲ್ಲುಂಟಾದ ದಿಗ್‌ಭ್ರಮೆಯನ್ನು ಒಪ್ಪಿಕೊಳ್ಳುತ್ತಾರೆ. ಅಪರಿಚಿತನು ಅವರನ್ನು ಗದರಿಸುತ್ತಾನೆ: “ಎಲಾ, ಬುದ್ಧಿಯಿಲ್ಲದವರೇ, ಪ್ರವಾದಿಗಳು ಹೇಳಿದ್ದೆಲ್ಲವನ್ನು ನಂಬುವದರಲ್ಲಿ ಮಂದ ಹೃದಯರೇ, ಕ್ರಿಸ್ತನು ಇಂಥ ಶ್ರಮಗಳನ್ನು ಅನುಭವಿಸಿ ತನ್ನ ಮಹಾ ಪದವಿಗೆ ಸೇರುವದು ಅಗತ್ಯವಾಗಿತ್ತಲ್ಲವೇ?” ಅನಂತರ ಅವನು ಪವಿತ್ರ ಶಾಸ್ತ್ರದಿಂದ ಕ್ರಿಸ್ತನ ಕುರಿತಾದ ಉಲ್ಲೇಖಗಳ ಅರ್ಥ ವಿವರಿಸುತ್ತಾನೆ.

ಕೊನೆಗೆ ಅವರು ಎಮ್ಮಾಹುಗೆ ಸಮೀಪಿಸಿದಾಗ, ಈ ಅಪರಿಚಿತನು ಇನ್ನೂ ಮುಂದಕ್ಕೆ ಹೋಗುವವನಂತೆ ಕಾಣಿಸಿದನು. ಅವನಿಂದ ಇನ್ನಷ್ಟು ಕೇಳಲು ಬಯಸಿ, ಶಿಷ್ಯರು ಒತ್ತಾಯಿಸುವದು: “ನಮ್ಮ ಸಂಗಡ ಇರು, ಸಂಜೆಯಾಯಿತು, ಹೊತ್ತು ಇಳಿಯುತ್ತಾ ಬಂತು.” ಆಗ ಆತನು ಅವರೊಂದಿಗೆ ಊಟಕ್ಕೆ ನಿಲ್ಲುತ್ತಾನೆ. ಅವನು ಪ್ರಾರ್ಥನೆಯನ್ನು ಹೇಳಿ, ರೊಟ್ಟಿ ಮುರಿದು ಅವರಿಗೆ ಕೊಡುವಾಗ, ಅವನು ನಿಜವಾಗಿಯೂ ಮಾನವ ರೂಪಾಂತರಗೊಂಡ ಯೇಸುವು ಎಂದು ಅವರಿಗೆ ಗುರುತು ಸಿಕ್ಕಿತು. ಆದರೆ ಅವನು ಆಗ ಮಾಯವಾದನು.

ಒಬ್ಬ ಅಪರಿಚಿತನು ಅಷ್ಟೊಂದು ಸಂಗತಿಗಳನ್ನು ತಿಳಿದದ್ದು ಹೇಗೆ ಎಂದು ಈಗ ಅವರಿಗೆ ತಿಳಿದು ಬಂತು! “ಆತನು ದಾರಿಯಲ್ಲಿ ಮಾತಾಡಿದಾಗಲೂ,” ಅವರು ಕೇಳುವದು “ಗ್ರಂಥಗಳ ಅರ್ಥವನ್ನು ನಮಗೆ ಬಿಚ್ಚಿಹೇಳಿದಾಗಲೂ ನಮ್ಮ ಹೃದಯವು ನಮ್ಮಲ್ಲಿ ಕುದಿಯಿತಲ್ಲವೇ?” ತಡಮಾಡದೆ, ಅವರು ಎದ್ದು ಯೆರೂಸಲೇಮಿಗೆ ಹಿಂತಿರುಗಿ ಹೋದರು, ಅಲ್ಲಿ ಅವರು ಅಪೊಸ್ತಲರನ್ನೂ, ಅವರೊಂದಿಗೆ ಒಟ್ಟುಗೂಡಿದವರನ್ನು ಕಂಡರು. ಕೆಯ್ಲೊಫನು ಮತ್ತು ಅವನ ಸಂಗಾತಿಯು ಒಂದು ವಿಷಯವನ್ನು ಹೇಳುವ ಮೊದಲೇ, ಇತರರೂ, ಹುರುಪಿನಿಂದ ಹೇಳುತ್ತಿದ್ದರು: “ಸ್ವಾಮಿಯು ಎದ್ದದ್ದು ನಿಜ, ಸೀಮೋನನಿಗೆ ಕಾಣಿಸಿಕೊಂಡನು.” ಅನಂತರ ಯೇಸುವು ಅವರಿಗೆ ಕಾಣಿಸಿಕೊಂಡ ವಿಧವನ್ನು ಅವರಿಬ್ಬರು ವಿವರಿಸಿದರು. ಇದು ಅವನ ಶಿಷ್ಯರಲ್ಲಿ ಬೇರೆಬೇರೆಯವರಿಗೆ ಒಂದು ದಿನದಲ್ಲಿ ನಾಲ್ಕು ಬಾರಿ ಕಾಣಿಸಿಕೊಂಡಂತೆ ಆಯಿತು.

ಯೇಸುವು ಫಕ್ಕನೆ ಐದನೆಯ ಬಾರಿ ಕಾಣಿಸಿಕೊಂಡನು. ಯೆಹೂದ್ಯರ ಹೆದರಿಕೆಯ ಕಾರಣ ಶಿಷ್ಯರು ಬಾಗಲುಗಳಿಗೆ ಬೀಗ ಹಾಕಿದ್ದರೂ, ಅವನು ಪ್ರವೇಶಿಸಿ, ಅವರ ನಡುವೆ ನಿಲ್ಲುತ್ತಾನೆ ಮತ್ತು ಹೀಗನ್ನುತ್ತಾನೆ: “ಮನಶ್ಶಾಂತಿಯಾಗಲಿ.” ತಾವು ಕಂಡದ್ದನ್ನು ಭೂತವೆಂದು ಭಾವಿಸಿ, ಅವರು ದಿಗಿಲುಬಿದ್ದು ಭಯಪಟ್ಟರು. ಆದುದರಿಂದ ತಾನು ಭೂತವಲ್ಲವೆಂದು ವಿವರಿಸುತ್ತಾ, ಯೇಸುವಂದದ್ದು: “ಯಾಕೆ ಕಳವಳಗೊಳ್ಳುತ್ತೀರಿ? ನಿಮ್ಮ ಹೃದಯದಲ್ಲಿ ಅನುಮಾನಗಳು ಹುಟ್ಟುವದೇಕೆ? ನನ್ನ ಕೈಗಳನ್ನೂ, ನನ್ನ ಕಾಲುಗಳನ್ನೂ ನೋಡಿರಿ, ನಾನೇ ಅಲ್ಲವೇ. ನನ್ನನ್ನು ಮುಟ್ಟಿ ನೋಡಿರಿ, ನಿಮಗೆ ಕಾಣುವ ಪ್ರಕಾರ ನನಗೆ ಮಾಂಸವೂ ಎಲುಬುಗಳೂ ಉಂಟು; ಅವು ಭೂತಕ್ಕಿಲ್ಲ.” ಆದರೂ, ಅವರು ನಂಬಲು ಹಿಂಜರಿದರು.

ನಿಜವಾಗಿ ತಾನು ಯೇಸುವೇ ಆಗಿದ್ದೇನೆ ಎಂದು ತಿಳಿದು ಕೊಳ್ಳಲು ಅವರಿಗೆ ಸಹಾಯವಾಗುವಂತೆ, ಅವನು ಕೇಳುವದು: “ತಿನ್ನತಕ್ಕ ಪದಾರ್ಥವೇನಾದರೂ ಇಲ್ಲಿ ನಿಮಗುಂಟೋ?” ಸುಟ್ಟ ಮೀನಿನ ಒಂದು ತುಂಡನ್ನು ಅವರಿಂದ ಸ್ವೀಕರಿಸಿ, ಅವನು ತಿನ್ನುತ್ತಾ, ಹೇಳುವದು: “ನಾನು ಇನ್ನೂ ನಿಮ್ಮ ಸಂಗಡ ಇದ್ದಾಗ [ನನ್ನ ಮರಣದ ಮುಂಚೆ] ಇದೆಲ್ಲಾ ನಿಮಗೆ ತಿಳಿಸಿದೆನು. ನನ್ನ ವಿಷಯವಾಗಿ ಮೋಶೆಯ ಧರ್ಮಶಾಸ್ತ್ರದಲ್ಲಿಯೂ ಪ್ರವಾದಿಗಳ ಗ್ರಂಥಗಳಲ್ಲಿಯೂ ಕೀರ್ತನೆಗಳಲ್ಲಿಯೂ ಬರೆದಿರುವದೆಲ್ಲಾ ನೆರವೇರುವದು ಅಗತ್ಯವೆಂದು ನಿಮಗೆ ಹೇಳಿದೆನು.”

ಮುಂದುವರಿಸುತ್ತಾ, ಅವರೊಂದಿಗಿನ ಒಂದು ಬೈಬಲ್‌ ಅಧ್ಯಯನದೋಪಾದಿ, ಯೇಸುವು ಕಲಿಸುವದು: “ಕ್ರಿಸ್ತನು ಶ್ರಮೆ ಪಟ್ಟು ಸತ್ತ ಮೂರನೆಯ ದಿನದಲ್ಲಿ ಜೀವಿತನಾಗಿ ಎದ್ದು ಬರುವನೆಂತಲೂ ಪಾಪ ಪರಿಹಾರಕ್ಕೋಸ್ಕರ ದೇವರ ಕಡೆಗೆ ತಿರುಗಿಕೊಳ್ಳಬೇಕೆಂಬ ಮಾತು ಯೆರೂಸಲೇಮ್‌ ಮೊದಲುಗೊಂಡು ಸಮಸ್ತ ದೇಶದವರಿಗೂ ಆತನ ಹೆಸರಿನಲ್ಲಿ ಸಾರಲ್ಪಡುವದೆಂತಲೂ ಬರೆದದೆ.”

ಈ ಪ್ರಾಮುಖ್ಯವಾದ ಆದಿತ್ಯವಾರದ ಸಾಯಂಕಾಲದ ಕೂಟದಲ್ಲಿ ಏನೋ ಕಾರಣದಿಂದ ತೋಮನು ಇರಲಿಲ್ಲ. ಹಿಂಬಾಲಿಸಿ ಬಂದ ದಿನಗಳಲ್ಲಿ ಇತರರು ಸಂತೋಷದಿಂದ ಅವನಿಗೆ ಹೇಳಿದ್ದು: “ನಾವು ಸ್ವಾಮಿಯನ್ನು ನೋಡಿದ್ದೇವೆ!”

“ನಾನು ಆತನ ಕೈಗಳಲ್ಲಿ ಮೊಳೆಗಳಿಂದಾದ ಘಾಯವನ್ನು ನೋಡಿ,” ತೋಮನು ಪ್ರತಿರೋಧಿಸುವದು, “ಆ ಮೊಳೆಯ ಘಾಯದಲ್ಲಿ ನನ್ನ ಬೆರಳನ್ನು ಇಟ್ಟು ಆತನ ಪಕ್ಕೆಯಲ್ಲಿ ನನ್ನ ಕೈಯನ್ನು ಹಾಕಿದರೆ ಹೊರತು ನಿಮ್ಮ ಮಾತನ್ನು ನಂಬುವದೇ ಇಲ್ಲ.”

ಒಳ್ಳೇದು, ಎಂಟು ದಿವಸಗಳಾದ ನಂತರ, ಶಿಷ್ಯರು ಒಳಗಿನ ಕೋಣೆಯಲ್ಲಿ ಪುನಃ ಕೂಟವಾಗಿ ಕೂಡಿಬಂದಿದ್ದರು. ಈ ಸಾರಿ ತೋಮನೂ ಅವರೊಂದಿಗೆ ಇದ್ದನು. ಬಾಗಲುಗಳು ಬೀಗಹಾಕಿ ಮುಚ್ಚಿದ್ದರೂ, ಯೇಸುವು ಇನ್ನೊಮ್ಮೆ ಅವರ ನಡುವೆ ನಿಂತು, ಹೇಳಿದ್ದು: “ನಿಮಗೆ ಸಮಾಧಾನವಿರಲಿ.” ಅನಂತರ, ತೋಮನ ಕಡೆಗೆ ತಿರುಗಿ, ಅವನಿಗೆ ಆಮಂತ್ರಿಸುವದು: “ನಿನ್ನ ಬೆರಳನ್ನು ಈ ಕಡೆ ಚಾಚಿ ನನ್ನ ಕೈಗಳನ್ನು ಮುಟ್ಟಿ ನೋಡು; ನಿನ್ನ ಕೈ ಚಾಚಿ ನನ್ನ ಪಕ್ಕೆಯಲ್ಲಿ ಹಾಕು; ನಂಬದವನಾಗಿರಬೇಡ, ನಂಬುವವನಾಗು.”

“ನನ್ನ ಸ್ವಾಮಿ, ನನ್ನ ದೇವರು!” ತೋಮನು ಉದ್ಗಾರವೆತ್ತುತ್ತಾನೆ.

“ನೀನು ನೋಡಿದರ್ದಿಂದ ನಂಬಿದ್ದೀ?” ಯೇಸುವು ಕೇಳುತ್ತಾನೆ. “ನೋಡದೆ ನಂಬಿದವರು ಧನ್ಯರು.” ಲೂಕ 24:11, 13-48; ಯೋಹಾನ 20:19-29.

▪ ಎಮ್ಮಾಹುಗೆ ಹೋಗುವ ದಾರಿಯಲ್ಲಿ ಇಬ್ಬರು ಶಿಷ್ಯರೊಂದಿಗೆ ಅಪರಿಚಿತನೊಬ್ಬನು ಯಾವ ವಿಚಾರಣೆ ಮಾಡುತ್ತಾನೆ?

▪ ಶಿಷ್ಯರ ಹೃದಯವು ಕುದಿಯುವಂತೆ ಮಾಡುವ ಯಾವದನ್ನು ಅಪರಿಚಿತನು ಹೇಳಿದನು?

▪ ಅಪರಿಚಿತನು ಯಾರೆಂದು ಶಿಷ್ಯರು ವಿವೇಚಿಸಿದ್ದು ಹೇಗೆ?

▪ ಕೆಯ್ಲೊಫನು ಮತ್ತು ಅವನ ಸಂಗಡಿಗನು ಯೆರೂಸಲೇಮಿಗೆ ಹಿಂದಿರುಗಿದಾಗ, ಯಾವ ಹುರುಪಿನ ಒಂದು ವರದಿಯನ್ನು ಅವರು ಕೇಳುತ್ತಾರೆ?

▪ ತನ್ನ ಶಿಷ್ಯರಿಗೆ ಯೇಸುವು ಐದನೆಯ ಸಲ ಗೋಚರಸಿದ್ದು ಹೇಗೆ ಮತ್ತು ಆ ಸಂದರ್ಭದಲ್ಲಿ ಏನು ಸಂಭವಿಸಿತು?

▪ ಯೇಸುವಿನ ಐದನೆಯ ಗೋಚರಿಸುವಿಕೆಯ ಎಂಟು ದಿನಗಳ ನಂತರ ಏನು ಸಂಭವಿಸುತ್ತದೆ ಮತ್ತು ಯೇಸುವು ಜೀವಂತವಿದ್ದಾನೆ ಎಂದು ಕೊನೆಗೂ ತೋಮನಿಗೆ ಮನವರಿಕೆ ಆದದ್ದು ಹೇಗೆ?