ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಉಪವಾಸದ ಕುರಿತು ಪ್ರಶ್ನಿಸಲ್ಪಟ್ಟದ್ದು

ಉಪವಾಸದ ಕುರಿತು ಪ್ರಶ್ನಿಸಲ್ಪಟ್ಟದ್ದು

ಅಧ್ಯಾಯ 28

ಉಪವಾಸದ ಕುರಿತು ಪ್ರಶ್ನಿಸಲ್ಪಟ್ಟದ್ದು

ಸಾ.ಶ. 30ರ ಪಸ್ಕವನ್ನು ಯೇಸು ಹಾಜರಾಗಿ ಸುಮಾರು ಒಂದು ವರ್ಷ ಗತಿಸಿದೆ. ಈಗಾಗಲೇ, ಕೆಲವು ತಿಂಗಳುಗಳಿಂದ ಸ್ನಾನಿಕನಾದ ಯೋಹಾನನು ಸೆರೆಮನೆಯೊಳಗೆ ಹಾಕಲ್ಪಟ್ಟಿದ್ದನು. ಅವನ ಶಿಷ್ಯರು ಯೇಸುವಿನ ಶಿಷ್ಯರಾಗಬೇಕೆಂದು ಅವನು ಬಯಸಿದ್ದನಾದರೂ, ಎಲ್ಲರೂ ಅನುಯಾಯಿಗಳಾಗಿರಲಿಲ್ಲ.

ಈಗ ಸೆರೆಮನೆ ವಾಸಿಯಾದ ಯೋಹಾನನ ಈ ಶಿಷ್ಯರಲ್ಲಿ ಕೆಲವರು ಯೇಸುವಿನ ಬಳಿಗೆ ಬಂದು, ಕೇಳಿದ್ದು: “ಫರಿಸಾಯರೂ, ನಾವೂ ಉಪವಾಸ ಮಾಡುತ್ತಿರುವಾಗ, ನಿನ್ನ ಶಿಷ್ಯರು ಯಾಕೆ ಮಾಡುವುದಿಲ್ಲ?” ಫರಿಸಾಯರು, ಅವರ ಮತದ ಸಂಪ್ರದಾಯಕ್ಕನುಸಾರ ವಾರಕ್ಕೆ ಎರಡಾವರ್ತಿ ಉಪವಾಸ ಮಾಡುತ್ತಿದ್ದರು. ಮತ್ತು ಯೋಹಾನನ ಶಿಷ್ಯರು ಪ್ರಾಯಶಃ ಅದೇ ಕಟ್ಟಳೆಯನ್ನು ಅನುಸರಿಸುತ್ತಿದ್ದಿರಬೇಕು. ಯೋಹಾನನ ಸೆರೆಮನೆ ವಾಸಕ್ಕಾಗಿ ದುಃಖಸೂಚಕವಾಗಿ ಒಂದುವೇಳೆ ಅವರು ಉಪವಾಸ ಆಚರಿಸುತ್ತಿದ್ದಿರಲೂಬಹುದು ಮತ್ತು ಅವರ ದುಃಖದ ವ್ಯಕ್ತ ಪಡಿಸುವಿಕೆಯಾಗಿ ಯೇಸುವಿನ ಶಿಷ್ಯರು ಯಾಕೆ ತಮ್ಮೊಂದಿಗೆ ಸೇರುವದಿಲ್ಲ ಎಂದು ಯೋಚಿಸುತ್ತಿದ್ದಿರಬೇಕು.

ಉತ್ತರವಾಗಿ ಯೇಸುವು ವಿವರಿಸಿದ್ದು: “ಮದುವೆಯ ಜನರು ತಮ್ಮ ಸಂಗಡ ಮದಲಿಂಗನು ಇರುವ ತನಕ ದುಃಖಪಟ್ಟಾರೋ? ಆದರೆ ಮದಲಿಂಗನನ್ನು ಅವರ ಬಳಿಯಿಂದ ತೆಗೆದುಕೊಂಡು ಹೋಗುವ ಕಾಲ ಬರುತ್ತದೆ, ಆಗ ಅವರು ಉಪವಾಸ ಮಾಡುವರು.”

ಯೇಸುವೇ ಮದಲಿಂಗನೆಂದು ಯೋಹಾನನು ತಾನೇ ಹೇಳಿದ್ದನ್ನು ಯೋಹಾನನ ಶಿಷ್ಯರು ನೆನಪಿಸಬೇಕಿತ್ತು. ಆದುದರಿಂದ, ಯೇಸುವು ಹಾಜರಿದ್ದಾಗ, ಉಪವಾಸ ಮಾಡುವದು ಸರಿಯೆಂದು ಯೋಹಾನನು ಯಾ ಯೇಸುವಿನ ಶಿಷ್ಯರು ಎಣಿಸುತ್ತಿರಲಿಲ್ಲ. ಕೊನೆಯಲ್ಲಿ ಯೇಸು ಸತ್ತಾಗ, ಅವನ ಶಿಷ್ಯರು ಗೋಳಾಡುವರು ಮತ್ತು ಉಪವಾಸ ಮಾಡುವರು. ಆದರೆ ಆತನು ಪುನರುತ್ಥಾನಗೊಂಡು, ಪರಲೋಕಕ್ಕೇರಿದಾಗ, ಗೋಳಾಡಿ ಉಪವಾಸ ಮಾಡುವ ಅಧಿಕ ಕಾರಣವೇನೂ ಅವರಿಗೆ ಇರುವದಿಲ್ಲ.

ಅನಂತರ, ಯೇಸುವು ಈ ದೃಷ್ಟಾಂತಗಳನ್ನು ಕೊಡುತ್ತಾನೆ: “ಯಾರೂ ಹೊಸ ಬಟ್ಟೆಯ ತುಂಡನ್ನು ಹಳೆಯ ವಸ್ತ್ರಕ್ಕೆ ತ್ಯಾಪೆ ಹಚ್ಚುವದಿಲ್ಲ; ಹಚ್ಚಿದರೆ ಆ ತ್ಯಾಪೆಯು ವಸ್ತ್ರವನ್ನು ಹಿಂಜುವದರಿಂದ ಹರಕು ಹೆಚ್ಚಾಗುವದು. ಇದಲ್ಲದೆ, ಹಳೆಯ ಬುದ್ದಲಿಗಳಲ್ಲಿ ಹೊಸ ದ್ರಾಕ್ಷಾರಸವನ್ನು ಹಾಕಿಡುವದಿಲ್ಲ; ಇಟ್ಟರೆ ಬುದ್ದಲಿಗಳು ಒಡೆದು ದ್ರಾಕ್ಷಾರಸವು ಚೆಲ್ಲಿ ಹೋಗುವದು, ಬುದ್ದಲಿಗಳು ಕೆಟ್ಟು ಹೋಗುವವು; ಆದರೆ ಹೊಸ ದ್ರಾಕ್ಷಾರಸವನ್ನು ಹೊಸ ಬುದ್ದಲಿಗಳಲ್ಲಿ ಹಾಕಿಡುತ್ತಾರೆ.” ಉಪವಾಸದೊಂದಿಗೆ ಈ ದೃಷ್ಟಾಂತಗಳಿಗೆ ಏನು ಸಂಬಂಧ ಇದೆ?

ಸಂಪ್ರದಾಯದ ಉಪವಾಸದಂತಹ ಯೆಹೂದ್ಯ ಮತದ ಹಳೆಯ ಆಚರಣೆಗಳಿಗೆ ತನ್ನ ಹಿಂಬಾಲಕರು ಬದ್ಧರಾಗಿರಬೇಕೆಂದು ಯಾರೂ ನಿರೀಕ್ಷಿಸಕೂಡದು ಎನ್ನುವದನ್ನು ಯೋಹಾನನ ಶಿಷ್ಯರು ಮನವರಿಕೆ ಮಾಡಿಕೊಳ್ಳುವಂತೆ ಯೇಸುವು ಸಹಾಯ ಮಾಡುತ್ತಿದ್ದನು. ತ್ಯಜಿಸಲ್ಪಡಲಿರುವ ಆರಾಧನೆಯ ಹರಕು ವ್ಯವಸ್ಥೆಗಳನ್ನು ತ್ಯಾಪೆಹಚ್ಚಿ ಮುಂದುವರಿಸಲು ಅವನು ಬಂದಿರುವದಿಲ್ಲ. ಮನುಷ್ಯರ ಸಂಪ್ರದಾಯಗಳಿಂದೊಡಗೂಡಿದ್ದ ಆ ಕಾಲದ ಯೆಹೂದ್ಯರ ಮತಕ್ಕೆ ಕ್ರೈಸ್ತತ್ವವು ಅನುಬದ್ಧವಾಗಿರಲಿಕ್ಕೆ ಇರಲಿಲ್ಲ. ಇಲ್ಲ, ಹಳೆಯ ವಸ್ತ್ರದ ಮೇಲೆ ಹೊಸ ಬಟ್ಟೆಯ ತ್ಯಾಪೆಯಂತೆ ಅದಿಲ್ಲ, ಅಥವಾ ಹಳೆಯ ಬುದ್ದಲಿಗಳಲ್ಲಿನ ಹೊಸ ದ್ರಾಕ್ಷಾರಸದಂತೆಯೂ ಇಲ್ಲ. ಮತ್ತಾಯ 9: 14-17; ಮಾರ್ಕ 2:18-22; ಲೂಕ 5:33-39; ಯೋಹಾನ 3:27-29.

▪ ಯಾರು ಉಪವಾಸ ಆಚರಿಸುತ್ತಿದ್ದರು, ಮತ್ತು ಯಾವ ಉದ್ದೇಶಕ್ಕೋಸ್ಕರ?

▪ ಯೇಸುವಿನ ಶಿಷ್ಯರು, ಅವನು ಅವರೊಂದಿಗಿರುವಾಗ ಯಾಕೆ ಉಪವಾಸ ಆಚರಿಸಲಿಲ್ಲ, ಮತ್ತು ಉಪವಾಸದ ಕಾರಣವು ಅನಂತರ ಬಹು ಬೇಗನೆ ಹೇಗೆ ಮಾಯವಾಗಲಿಕ್ಕಿತ್ತು?

▪ ಯೇಸುವು ಯಾವ ದೃಷ್ಟಾಂತಗಳನ್ನು ತಿಳಿಸಿದನು, ಮತ್ತು ಅವುಗಳ ಅರ್ಥವೇನು?