ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎಂದೆಂದಿಗೂ ಕೊಡಲ್ಪಟ್ಟ ಅತಿ ಪ್ರಖ್ಯಾತ ಪ್ರಸಂಗ

ಎಂದೆಂದಿಗೂ ಕೊಡಲ್ಪಟ್ಟ ಅತಿ ಪ್ರಖ್ಯಾತ ಪ್ರಸಂಗ

ಅಧ್ಯಾಯ 35

ಎಂದೆಂದಿಗೂ ಕೊಡಲ್ಪಟ್ಟ ಅತಿ ಪ್ರಖ್ಯಾತ ಪ್ರಸಂಗ

ಈ ದೃಶ್ಯವು ಬೈಬಲ್‌ ಇತಿಹಾಸದಲ್ಲಿಯೇ ಅತ್ಯಂತ ಸ್ಮರಣೀಯವು: ಯೇಸು ಪರ್ವತದ ಪಕ್ಕದಲ್ಲಿ ಆಸೀನನಾಗಿದ್ದು, ತನ್ನ ಪ್ರಖ್ಯಾತ ಪರ್ವತ ಪ್ರಸಂಗವನ್ನು ನೀಡುವದು. ಸ್ಥಳವು ಪ್ರಾಯಶಃ ಕಪೆರ್ನೌಮಿಗೆ ಹತ್ತಿರದಲ್ಲೇ ಇರುವ ಗಲಿಲಾಯ ಸಮುದ್ರದ ಪಕ್ಕದಲ್ಲಿರಬೇಕು. ಯೇಸುವು ಇಡೀ ರಾತ್ರಿಯನ್ನು ದೇವರೊಂದಿಗೆ ಪ್ರಾರ್ಥನೆಯಲ್ಲಿ ಕಳೆದ ನಂತರ, ಆವಾಗಲೇ ತನ್ನ ಶಿಷ್ಯರುಗಳಲ್ಲಿ 12 ಮಂದಿಯನ್ನು ಅಪೊಸ್ತಲರನ್ನಾಗಿ ಆರಿಸಿದ್ದನು. ಅನಂತರ, ಅವರೆಲ್ಲರೊಂದಿಗೆ ಅವನು ಈ ಪರ್ವತದಲ್ಲಿದ್ದ ಸಮತಟ್ಟಾದ ಸ್ಥಳಕ್ಕೆ ಆಗಮಿಸಿದ್ದನು.

ಇಷ್ಟರೊಳಗೆ ಯೇಸುವು ತುಂಬಾ ದಣಿದಿದ್ದುದರಿಂದ, ತುಸು ನಿದ್ರಿಸಲು ಅವನು ಬಯಸುತ್ತಾನೆಂದು ನೀವೆಣಿಸೀರಿ. ಆದರೆ ಜನರ ಮಹಾ ಗುಂಪುಗಳು ಬಂದಿದ್ದವು, ಕೆಲವರು ಸುಮಾರು 96 ರಿಂದ 112 ಕಿಲೊಮೀಟರುಗಳಷ್ಟು ದೂರದ ಯೂದಾಯ ಮತ್ತು ಯೆರೂಸಲೇಮಿನಿಂದ ಬಂದಿದ್ದರು. ಇನ್ನಿತರರು ತೂರ್‌ ಸಮುದ್ರ ತೀರದಿಂದಲೂ, ಬೇರೆ ಕೆಲವರು ಉತ್ತರದ ಸಿದೋನ್‌ನಿಂದಲೂ ಆಗಮಿಸಿದ್ದರು. ಅವರು ಯೇಸುವಿನ ಮಾತುಗಳನ್ನು ಆಲಿಸಲು ಮತ್ತು ತಮ್ಮ ಅಸ್ವಸ್ಥತೆಗಳನ್ನು ಗುಣಪಡಿಸಿಕೊಳ್ಳಲು ಬಂದಿದ್ದರು. ಸೈತಾನನ ದುಷ್ಟ ದೂತರಾದ ದೆವ್ವಗಳ ಪೀಡನೆಗೆ ಒಳಗಾದ ವ್ಯಕ್ತಿಗಳೂ ಅಲ್ಲಿದ್ದರು.

ಯೇಸುವು ಕೆಳಕ್ಕೆ ಬಂದಾಗ, ರೋಗಿಗಳು ಅವನನ್ನು ಮುಟ್ಟಲು ಹತ್ತಿರ ಬರುತ್ತಿದ್ದರು ಮತ್ತು ಅವನು ಅವರೆಲ್ಲರನ್ನು ವಾಸಿಮಾಡುತ್ತಾನೆ. ತದನಂತರ, ಯೇಸುವು ಪರ್ವತದ ಒಂದು ಎತ್ತರದ ಜಾಗವನ್ನೇರಿದನೆಂಬದು ವ್ಯಕ್ತ. ಅಲ್ಲಿ ಅವನು ಕುಳಿತುಕೊಂಡು, ತನ್ನ ಮುಂದೆ ಸಮಭೂಮಿಯಲ್ಲಿ ನೆರೆದು ಬಂದಿರುವ ಜನಸಮೂಹಗಳಿಗೆ ಉಪದೇಶಿಸಲಾರಂಭಿಸುತ್ತಾನೆ. ಮತ್ತು ಯೋಚಿಸಿರಿ! ಗಂಭೀರವಾದ ಅಸ್ವಸ್ಥತೆಯಿಂದ ನರಳುವ ಒಬ್ಬನೇ ಒಬ್ಬ ವ್ಯಕ್ತಿಯು ಈಗ ಆ ಇಡೀ ಸಭಿಕರ ಸಮೂಹದಲ್ಲೇ ಇರಲಿಲ್ಲ!

ಈ ಬೆರಗುಗೊಳಿಸುವ ಅದ್ಭುತಗಳನ್ನು ಮಾಡಶಕ್ತನಾದ ಉಪದೇಶಕನನ್ನು ಆಲಿಸಲು ಜನರು ಈಗ ಆಸಕ್ತರಾಗಿದ್ದರು. ಆದಾಗ್ಯೂ, ಯೇಸುವು, ಆತನ ಸಮೀಪದಲ್ಲಿ ಸುತ್ತಲೂ ಪ್ರಾಯಶಃ ಕುಳಿತಿದ್ದ ತನ್ನ ಶಿಷ್ಯರ ಪ್ರಯೋಜನಕ್ಕಾಗಿ, ಮುಖ್ಯವಾಗಿ ತನ್ನ ಪ್ರಸಂಗವನ್ನು ನೀಡಲಾರಂಭಿಸಿದನು. ನಾವೂ ಅದರಿಂದ ಪ್ರಯೋಜನ ಪಡೆಯುವಂತೆ, ಮತ್ತಾಯ ಮತ್ತು ಲೂಕರಿಬ್ಬರೂ ಅದನ್ನು ದಾಖಲೆ ಮಾಡಿದ್ದಾರೆ.

ಪ್ರಸಂಗದ ಮತ್ತಾಯನ ದಾಖಲೆಯು ಲೂಕನ ದಾಖಲೆಗಿಂತ ನಾಲ್ಕುಪಟ್ಟು ದೀರ್ಘದ್ದಾಗಿರುತ್ತದೆ. ಅಷ್ಟಲ್ಲದೆ, ಮತ್ತಾಯನು ದಾಖಲಿಸಿದ ಕೆಲವು ಭಾಗಗಳನ್ನು, ತನ್ನ ಶುಶ್ರೂಷೆಯ ಇನ್ನೊಂದು ಸಂದರ್ಭದಲ್ಲಿ ಯೇಸುವು ಹೇಳಿದಂತಹ ರೀತಿಯಲ್ಲಿ ಲೂಕನು ಸಾದರಪಡಿಸುತ್ತಾನೆ. ಇದನ್ನು ಮತ್ತಾಯ 6:9-13ನ್ನು ಲೂಕ 11:1-4 ಮತ್ತು ಮತ್ತಾಯ 6:25-34ನ್ನು ಲೂಕ 12:22-31 ರೊಟ್ಟಿಗೆ ತುಲನೆ ಮಾಡುವದರಿಂದ ಕಾಣಬಹುದು. ಆದರೂ, ಇದು ನಮ್ಮನ್ನು ಆಶ್ಚರ್ಯಗೊಳಿಸಬಾರದು. ಯೇಸುವು ಅದೇ ಸಂಗತಿಗಳನ್ನು ಒಂದಕ್ಕಿಂತ ಹೆಚ್ಚು ಬಾರಿ ಕಲಿಸಿದ್ದಾನೆಂದು ವಿದಿತವಾಗುತ್ತದೆ, ಮತ್ತು ಲೂಕನು ಈ ಉಪದೇಶಗಳಲ್ಲಿ ಕೆಲವನ್ನು ಇನ್ನೊಂದು ಸನ್ನಿವೇಶದಲ್ಲಿ ದಾಖಲೆ ಮಾಡಲು ಆರಿಸಿದನು.

ಯೇಸುವಿನ ಈ ಪ್ರಸಂಗವನ್ನು ಅಷ್ಟೊಂದು ಅಮೂಲ್ಯದ್ದಾಗಿ ಮಾಡುವದು, ಕೇವಲ ಅದರ ಆತ್ಮಿಕ ವಿಷಯಗಳ ಗಹನತೆ ಮಾತ್ರವಲ್ಲ, ಆ ಸತ್ಯತೆಗಳನ್ನು ಸರಳತೆಯಿಂದಲೂ, ಸ್ಪಷ್ಟತೆಯಿಂದಲೂ ಆತನು ಸಾದರಪಡಿಸಿದ ರೀತಿಯೇ. ಅವನು ಸಾಮಾನ್ಯ ಅನುಭವಗಳನ್ನು ಮತ್ತು ಜನರಿಗೆ ಪರಿಚಿತವಿರುವ ಸಂಗತಿಗಳನ್ನು ಬಳಸಿದ ಮೂಲಕ, ದೇವರ ಮಾರ್ಗದಲ್ಲಿ ಉತ್ತಮ ಜೀವಿತವನ್ನು ಹುಡುಕುವವರೆಲ್ಲರಿಗೆ ತನ್ನ ಯೋಚನೆಗಳು ಸುಲಭವಾಗಿ ಅರ್ಥೈಸುವಂತೆ ಮಾಡಿದನು.

ನಿಜವಾಗಿಯೂ ಧನ್ಯರು ಯಾರು?

ಪ್ರತಿಯೊಬ್ಬನು ಸಂತೋಷಿಯಾಗಿರಲು ಬಯಸುತ್ತಾನೆ. ಇದನ್ನು ಅರಿತವನಾಗಿ, ಯಾರು ನಿಜವಾಗಿಯೂ ಸಂತೋಷಿತರು ಎಂದು ವರ್ಣಿಸುವದರ ಮೂಲಕ ಯೇಸುವು ಪರ್ವತಪ್ರಸಂಗವನ್ನು ಆರಂಭಿಸುತ್ತಾನೆ. ನಾವು ಊಹಿಸುವಂತೆ, ಅವನ ಅಧಿಕ ಸಂಖ್ಯಾತ ಸಭಿಕರ ಗಮನವನ್ನು ಅದು ಕೂಡಲೇ ಸೆಳೆಯುತ್ತದೆ. ಆದರೂ, ಅವನ ಆರಂಭಿಕ ಮಾತುಗಳು ಅನೇಕರಿಗೆ ಪರಸ್ಪರ ವಿರೋಧೋಕ್ತಿಗಳಾಗಿ ಕಾಣಿಸಬಹುದು.

ತನ್ನ ಶಿಷ್ಯರೆಡೆಗೆ ಅವನ ಹೇಳಿಕೆಗಳನ್ನು ನೀಡುತ್ತಾ ಯೇಸುವು ಆರಂಭಿಸಿದ್ದು: “ಬಡವರಾದ ನೀವು ಧನ್ಯರು (ಸಂತೋಷಿತರು), ಯಾಕಂದರೆ ದೇವರ ರಾಜ್ಯವು ನಿಮ್ಮದೇ. ಈಗ ಹಸಿದಿರುವವರಾದ ನೀವು ಧನ್ಯರು, ಯಾಕಂದರೆ ನಿಮಗೆ ತೃಪ್ತಿಯಾಗುವದು. ಈಗ ಅಳುವವರಾದ ನೀವು ಧನ್ಯರು, ಯಾಕಂದರೆ ನೀವು ನಗುವಿರಿ. ಜನರು ನಿಮ್ಮನ್ನು ಹಗೆಮಾಡಿ ನಿಂದಿಸಿದರೆ ನೀವು ಧನ್ಯರು. . . . ಆ ದಿನದಲ್ಲಿ ಸಂತೋಷ ಪಡಿರಿ, ಕುಣಿದಾಡಿರಿ, ಪರಲೋಕದಲ್ಲಿ ನಿಮಗೆ ಬಹಳ ಫಲ ಸಿಕ್ಕುವದು ಎಂದು ತಿಳುಕೊಳ್ಳಿರಿ.”

ಯೇಸುವಿನ ಪ್ರಸಂಗದ ಪೀಠಿಕೆಯ ಲೂಕನ ದಾಖಲೆಯು ಇದಾಗಿದೆ. ಆದರೆ ಮತ್ತಾಯನ ದಾಖಲೆಗನುಸಾರ, ನಮ್ರತೆಯವರು, ಕರುಣಾಭರಿತರು, ಹೃದಯದಲ್ಲಿ ನಿರ್ಮಲರು ಮತ್ತು ಸಮಾಧಾನಪಡಿಸುವವರು ಧನ್ಯರು ಎಂದು ಕೂಡಾ ಯೇಸುವು ಹೇಳುತ್ತಾನೆ. ಇವರು ಧನ್ಯರು ಯಾಕಂದರೆ ಅವರು ಭೂಮಿಗೆ ಬಾಧ್ಯರಾಗುವರು, ಅವರು ಕರುಣೆ ಹೊಂದುವರು, ಅವರು ದೇವರನ್ನು ಕಾಣುವರು ಮತ್ತು ಅವರು ದೇವರ ಮಕ್ಕಳೆಣಿಸಿಕೊಳ್ಳುವರು ಎಂದು ಯೇಸುವು ಹೇಳುತ್ತಾನೆ.

ಧನ್ಯರಾಗಿರುವದು ಎಂದು ಯೇಸು ಹೇಳಿದ್ದು ಉಲ್ಲಾಸ ಚೆಲ್ಲಾಟದಲ್ಲಿ ಅಲ್ಲ, ಇಲ್ಲವೇ ವಿನೋದಮಯ ಅರ್ಥದಲ್ಲಲ್ಲ. ನಿಜವಾದ ಧನ್ಯತೆಯು (ಸಂತೋಷ) ಆಳವಾಗಿದ್ದು, ಅದರಲ್ಲಿ ಸಂತೃಪ್ತಿ, ಜೀವನದಲ್ಲಿ ನೆಮ್ಮದಿ ಮತ್ತು ಪೂರೈಕೆಯ ಭಾವವು ಕೂಡಿರುತ್ತದೆ.

ಆದುದರಿಂದ, ಯೇಸುವು ತೋರಿಸಿರುವಂತೆ, ಅವರ ಆತ್ಮಿಕ ಆವಶ್ಯಕತೆಯನ್ನು ತಿಳಿದವರಾಗಿರುವ ಜನರು ಅವರ ಪಾಪಪೂರಿತ ಸ್ಥಿತಿಯಿಂದ ದುಃಖಿತರಾಗಿರುತ್ತಾರೆ ತ್ತು ದೇವರನ್ನು ಅರಿತುಕೊಂಡು, ಅವನನ್ನು ಸೇವಿಸಲು ಬಯಸುವವರಾಗಿರುವದರಿಂದ, ಅವರು ನಿಜವಾಗಿಯೂ ಧನ್ಯರಾಗಿರುತ್ತಾರೆ. ಆಗ ದೇವರ ಚಿತ್ತವನ್ನು ಮಾಡುವದರಿಂದ ಹಗೆಮಾಡಲ್ಪಟ್ಟರೂ, ಯಾ ಹಿಂಸಿಸಲ್ಪಟ್ಟರೂ ಅವರು ಧನ್ಯರಾಗಿರುತ್ತಾರೆ ಯಾಕಂದರೆ ತಾವು ದೇವರನ್ನು ಮೆಚ್ಚಿಸುತ್ತೇವೆ ಮತ್ತು ಅವನಿಂದ ಬಹುಮಾನವಾಗಿ ನಿತ್ಯ ಜೀವವನ್ನು ಪಡೆಯಿದ್ದೇವೆ ಎಂದವರು ತಿಳಿದಿರುತ್ತಾರೆ.

ಆದಾಗ್ಯೂ, ಇಂದಿನ ಕೆಲವು ಜನರು ಎಣಿಸುವಂತೆ, ಪ್ರಾಪಂಚಿಕವಾಗಿ ಅಭ್ಯುದಯ ಹೊಂದುವದು ಮತ್ತು ಇಂದ್ರಿಯಭೋಗದಲ್ಲಿ ಸಂತೋಷಿಸುವದೇ ಒಬ್ಬ ವ್ಯಕ್ತಿಯನ್ನು ಧನ್ಯನನ್ನಾಗಿ ಮಾಡುತ್ತದೆ ಎಂದು ಯೇಸುವಿನ ಅನೇಕ ಆಲಿಸುವವರು ನಂಬುತ್ತಾರೆ. ಆದರೆ ಯೇಸುವಿನ ಅರ್ಥ ಬೇರೆ. ಅವನ ಅನೇಕ ಕಿವಿಗೊಡುವವರಿಗೆ ಅಚ್ಚರಿಯನ್ನುಂಟುಮಾಡುವ ಭಿನ್ನತೆಯನ್ನು ಹೇಳುತ್ತಾ, ಅವನಂದದ್ದು:

“ಆದರೆ ಐಶ್ವರ್ಯವಂತರೇ, ನಿಮ್ಮ ಗತಿಯನ್ನು ಏನು ಹೇಳಲಿ! ನಿಮ್ಮ ಸುಖ ನಿಮಗೆ ಬಂದದೆ. ಈಗ ಹೊಟ್ಟೆ ತುಂಬಿದವರೇ, ನಿಮ್ಮ ಗತಿಯನ್ನು ಏನು ಹೇಳಲಿ! ನೀವು ಹಸಿಯುವಿರಿ. ಈಗ ನಗುವವರೇ, ನಿಮ್ಮ ಗತಿಯನ್ನು ಏನು ಹೇಳಲಿ! ನೀವು ದುಃಖಪಟ್ಟು ಅಳುವಿರಿ. ಜನರೆಲ್ಲಾ ನಿಮ್ಮನ್ನು ಹೊಗಳಿದರೆ ನಿಮ್ಮ ಗತಿಯನ್ನು ಏನು ಹೇಳಲಿ! ಅವರ ಪಿತೃಗಳು ಸುಳ್ಳು ಪ್ರವಾದಿಗಳನ್ನು ಹಾಗೆಯೇ ಹೊಗಳಿದರು.”

ಯೇಸುವಂದ ಮಾತುಗಳ ಅರ್ಥವೇನು? ಐಶ್ವರ್ಯವು ಇದ್ದರೆ, ಆನಂದಮಯವಾದ, ನಗಾಡುವ ಜೀವಿತ ನಡಿಸಿದರೆ ಮತ್ತು ಜನರ ಹೊಗಳಿಕೆಯಲ್ಲಿ ಆನಂದಿಸಿದರೆ ತಾನೇ ದುರ್ಗತಿಯನ್ನು ತರುತ್ತದೋ? ಇದು ಹಾಗೆ ಸಂಭವಿಸುವದು ಯಾವಾಗವೆಂದರೆ, ಈ ವಿಷಯಗಳು ಇದ್ದು, ಅದರಲ್ಲಿ ವ್ಯಕ್ತಿಯೊಬ್ಬನು ಆನಂದಿಸುವಾಗ, ನಿಜ ಸಂತೋಷವನ್ನು ತರಸಾಧ್ಯವಾದ ದೇವರ ಸೇವೆಯನ್ನು ಮಾತ್ರ ಒಬ್ಬನು ತನ್ನ ಜೀವಿತದಲ್ಲಿ ತ್ಯಜಿಸುವಾಗಲೇ. ಅದೇ ಸಮಯದಲ್ಲಿ ಕೇವಲ ಬಡವರೂ, ಹಸಿದವರೂ, ಮತ್ತು ಅಳುವವರೂ ಆಗಿರುವದರಿಂದ ವ್ಯಕ್ತಿಯೊಬ್ಬನು ಸಂತೋಷ ಪಡುತ್ತಾನೆಂದು ಯೇಸುವು ಅರ್ಥೈಸಲಿಲ್ಲ. ಆದಾಗ್ಯೂ, ಕೆಲವು ಸಾರಿ ಅಂತಹ ದುರ್ದೆಶೆಯಲ್ಲಿರುವ ವ್ಯಕ್ತಿಗಳು ಯೇಸುವಿನ ಉಪದೇಶಕ್ಕೆ ಪ್ರತಿವರ್ತಿಸಬಹುದು. ಮತ್ತು ಆ ಕಾರಣದಿಂದಾಗಿ ನಿಜ ಸಂತೋಷದಿಂದ ಆಶೀರ್ವದಿಸಲ್ಪಡಬಹುದು.

ತನ್ನ ಶಿಷ್ಯರಿಗೆ ಉದ್ದೇಶಿಸಿ, ನಂತರ ಯೇಸುವು ಅಂದದ್ದು: “ನೀವು ಭೂಮಿಗೆ ಉಪ್ಪಾಗಿದ್ದೀರಿ.” ವಾಸ್ತವತೆಯಲ್ಲಿ, ಅವರು ಉಪ್ಪಾಗಿದ್ದಾರೆಂದು ಅವನ ಅರ್ಥವಾಗಿರಲಿಲ್ಲ. ಬದಲು ಉಪ್ಪಿಗೆ ಸಂರಕ್ಷಕ ಶಕ್ತಿಯಿರುತ್ತದೆ. ಯೆಹೋವನ ಆಲಯದಲ್ಲಿ ವೇದಿಕೆಯ ಹತ್ತಿರ ಅದರ ಒಂದು ದೊಡ್ಡ ರಾಶಿಯು ಇರುತ್ತಿತ್ತು ಮತ್ತು ಕಾಣಿಕೆಗಳಿಗೆ ಉಪ್ಪು ಬೆರಸಿ, ಅದರ ಬಳಕೆಯನ್ನು ಪೌರೋಹಿತ್ಯದ ಯಾಜಕರು ಮಾಡುತ್ತಿದ್ದರು.

ಯೇಸುವಿನ ಶಿಷ್ಯರು “ಭೂಮಿಗೆ ಉಪ್ಪಾಗಿದ್ದರು,” ಹೇಗಂದರೆ ಜನರ ಮೇಲೆ ಸಂರಕ್ಷಣೆಯ ಪ್ರಭಾವ ಅವರಿಗಿತ್ತು. ಅವರು ತಿಳಿಸುವ ಸಂದೇಶಕ್ಕೆ ಪ್ರತಿವರ್ತನೆ ತೋರಿಸುವ ವ್ಯಕ್ತಿಗಳ ಜೀವಗಳು ಖಂಡಿತವಾಗಿಯೂ ಸಂರಕ್ಷಿಸಲ್ಪಡಲಿದ್ದವು. ಅದು ಅಂಥ ವ್ಯಕ್ತಿಗಳ ಜೀವಿತದಲ್ಲಿ ಶಾಶ್ವತೆಯ, ನಿಷ್ಠತೆಯ ಮತ್ತು ನಂಬಿಗಸ್ತಿಕೆಯ ಗುಣಗಳನ್ನು ತಂದು, ಅವರಲ್ಲಿ ಯಾವುದೇ ಆತ್ಮಿಕ ಮತ್ತು ನೈತಿಕ ಕೊಳೆಯುವಿಕೆಯನ್ನು ತಡೆಯುತ್ತಿತ್ತು.

“ನೀವು ಲೋಕಕ್ಕೆ ಬೆಳಕಾಗಿದ್ದೀರಿ,” ಎಂದು ಯೇಸುವು ಅವನ ಶಿಷ್ಯರಿಗನ್ನುತ್ತಾನೆ. ದೀಪವನ್ನು ಕೊಳಗದೊಳಗೆ ಇಡದೇ, ದೀಪಸ್ತಂಭದ ಮೇಲೆ ಇಡುತ್ತಾರೆಂದು ಯೇಸುವು ಮುಂದುವರಿಸಿ ಅಂದದ್ದು: “ಅದರಂತೆ ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ.” ತಮ್ಮ ಬಹಿರಂಗ ಸಾಕ್ಷಿ ಕಾರ್ಯದ ಮೂಲಕ ಹಾಗೂ ಬೈಬಲ್‌ ಸೂತ್ರಗಳಿಗನುಸಾರವಾದ ನಡತೆಯ ಬೆಳಗುವ ಮಾದರಿಗಳೋಪಾದಿ ಸೇವೆ ಸಲ್ಲಿಸುವುದರಿಂದಲೂ ಯೇಸುವಿನ ಶಿಷ್ಯರು ಇದನ್ನು ಮಾಡುತ್ತಾರೆ.

ಅವನ ಶಿಷ್ಯರಿಗೆ ಒಂದು ಉನ್ನತ ಮಟ್ಟ

ಯೇಸುವು ದೇವರ ನಿಯಮಗಳನ್ನು ಉಲ್ಲಂಘಿಸುತ್ತಾನೆಂದು ಧಾರ್ಮಿಕ ಮುಂದಾಳುಗಳು ನೆನಸಿ, ಇತ್ತೇಜೆಗೆ ಅವನನ್ನು ಕೊಲ್ಲಲೂ ಸಂಚುಹೂಡಿದ್ದರು. ಆದುದರಿಂದ ಯೇಸುವು ತನ್ನ ಪರ್ವತ ಪ್ರಸಂಗವನ್ನು ಮುಂದುವರಿಸುತ್ತಾ, ಅವನು ವಿವರಿಸಿದ್ದು: “ಮೋಶೆಯ ಧರ್ಮ ಶಾಸ್ತ್ರವನ್ನಾಗಲಿ, ಪ್ರವಾದಿಗಳ ವಚನಗಳನ್ನಾಗಲಿ, ತೆಗೆದುಹಾಕುವದಕ್ಕೆ ನಾನು ಬಂದೆನೆಂದು ನೆನಸಬೇಡಿರಿ. ತೆಗೆದು ಹಾಕುವದಕ್ಕೆ ಬಂದಿಲ್ಲ, ನೆರವೇರಿಸುವದಕ್ಕೆ ಬಂದಿದ್ದೇನೆ.”

ಯೇಸುವಿಗೆ ದೇವರ ನಿಯಮಗಳೆಡೆಗೆ ಉಚ್ಛ ಗೌರವವಿತ್ತು ಮತ್ತು ಇತರರಲ್ಲೂ ಹಾಗೆ ಇರಬೇಕೆಂದು ಅವನು ಪ್ರೋತ್ಸಾಹಿಸಿದನು. ವಾಸ್ತವದಲ್ಲಿ, ಅವನಂದದ್ದು: “ಆದುದರಿಂದ ಈ ಸಣ್ಣ ಸಣ್ಣ ಆಜ್ಞೆಗಳಲ್ಲಿಯಾದರೂ ಒಂದನ್ನು ಮೀರಿ ಜನರಿಗೂ ಹಾಗೆ ಮೀರುವದಕ್ಕೆ ಬೋಧಿಸುವವನು ಪರಲೋಕ ರಾಜ್ಯದಲ್ಲಿ ಬಹಳ ‘ಚಿಕ್ಕವ’ನೆನಿಸಿಕೊಳ್ಳುವನು.” ಅಂದರೆ ಅಂಥ ವ್ಯಕ್ತಿಯು ರಾಜ್ಯದೊಳಗೆ ಪ್ರವೇಶಿಸುವದೇ ಇಲ್ಲ ಎಂದರ್ಥ.

ದೇವರ ನಿಯಮಗಳನ್ನು ಅಗೌರವಿಸುವದರ ಬದಲು, ಅದನ್ನು ಉಲ್ಲಂಘಿಸಲು ನೆರವಾಗುವ ಮನೋಭಾವಗಳನ್ನು ಕೂಡಾ ಯೇಸುವು ಖಂಡಿಸುತ್ತಾನೆ. “ನರಹತ್ಯ ಮಾಡಬಾರದು” ಎಂದು ಶಾಸ್ತ್ರ ಹೇಳುವದನ್ನು ಗಮನಿಸಿ, ಯೇಸು ಕೂಡಿಸಿದ್ದು: “ತನ್ನ ಸಹೋದರನ ಮೇಲೆ ಸಿಟ್ಟಾಗಿರುವದನ್ನು ಮುಂದುವರಿಸುವ ಪ್ರತಿ ಮನುಷ್ಯನು ನ್ಯಾಯವಿಚಾರಣೆಗೆ ಗುರಿಯಾಗುವನು.”

ಸಹವಾಸಿಯೊಂದಿಗೆ ಸಿಟ್ಟಾಗಿರುವದನ್ನು ಮುಂದುವರಿಸುವದು ಎಷ್ಟೊಂದು ಗಂಭೀರವಾಗಿದೆಯೆಂದರೆ, ಪ್ರಾಯಶಃ ನರಹತ್ಯೆಗೆ ನಡಿಸಬಲ್ಲದು. ಆದುದರಿಂದ ಸಮಾಧಾನವನ್ನು ಪಡೆಯಲು ಒಬ್ಬನು ಏನು ಮಾಡಬೇಕೆಂದು ಯೇಸುವು ಉದಾಹರಿಸುತ್ತಾನೆ. ಅವನು ಉಪದೇಶಿಸುವದು: “ಆದಕಾರಣ, ನೀನು, ನಿನ್ನ [ಯಜ್ಞಾರ್ಪಣೆಯ] ಕಾಣಿಕೆಯನ್ನು ಯಜ್ಞವೇದಿಯ ಹತ್ತಿರಕ್ಕೆ ತಂದಾಗ, ನಿನ್ನ ಸಹೋದರನ ಮನಸ್ಸಿನಲ್ಲಿ ನಿನ್ನ ಮೇಲೆ ಏನೋ ವಿರೋಧವಿದೆ ಎಂಬುದು ನಿನ್ನ ನೆನಪಿಗೆ ಬಂದರೆ, ನಿನ್ನ ಕಾಣಿಕೆಯನ್ನು ಆ ಯಜ್ಞವೇದಿಯ ಮುಂದೆಯೇ ಬಿಟ್ಟುಹೋಗಿ ಮೊದಲು ನಿನ್ನ ಸಹೋದರನ ಸಂಗಡ ಒಂದಾಗು; ಆ ಮೇಲೆ ಬಂದು, ನಿನ್ನ ಕಾಣಿಕೆಯನ್ನು ಕೊಡು.”

ದಶಾಜ್ಞೆಯ ಏಳನೆಯದಕ್ಕೆ ಗಮನಹರಿಸುತ್ತಾ, ಯೇಸುವು ಮುಂದುವರಿಸಿದ್ದು: “ವ್ಯಭಿಚಾರ ಮಾಡಬಾರದೆಂದು ಹೇಳಿಯದೆ ಎಂಬುದಾಗಿ ನೀವು ಕೇಳಿದೀರ್ದಷ್ಟೇ”. ಆದಾಗ್ಯೂ, ವ್ಯಭಿಚಾರದ ಕಡೆಗೆ ಏಕಪ್ರಕಾರದ ಮನೋಭಾವವನ್ನು ಕೂಡಾ ಯೇಸುವು ಖಂಡಿಸುತ್ತಾನೆ. “ಆದರೆ ನಾನು ನಿಮಗೆ ಹೇಳುವದೇನಂದರೆ—ಪರ ಸ್ತ್ರೀಯನ್ನು ನೋಡುವದನ್ನು ಮುಂದುವರಿಸುತ್ತಾ ಮೋಹಿಸುವ ಪ್ರತಿ ಮನುಷ್ಯನು ಆಗಲೇ ತನ್ನ ಹೃದಯದಲ್ಲಿ ಆಕೆಯ ಕೂಡ ವ್ಯಭಿಚಾರ ಮಾಡಿದವನಾದನು.”

ಯೇಸುವು ಇಲ್ಲಿ ಕ್ಷಣಿಕವಾದ ಅನೈತಿಕ ಯೋಚನೆಯ ಕುರಿತು ಮಾತಾಡುವದಲ್ಲ, ಬದಲು ‘ನೋಡುವದನ್ನು ಮುಂದುವರಿಸುತ್ತಾ ಇರುವದನ್ನು’ ಹೇಳುತ್ತಾನೆ. ಆ ರೀತಿ ನೋಡುವದನ್ನು ಮುಂದುವರಿಸುವದು, ಮೋಹಕ ಆಶೆಯನ್ನು ಎಬ್ಬಿಸುತ್ತದೆ, ಹಾಗೂ ಸಂದರ್ಭಗಳು ಪರವಾಗಿ ಇರುವದಾದರೆ, ವ್ಯಭಿಚಾರದಲ್ಲಿ ಅಂತ್ಯಗೊಳ್ಳಸಾಧ್ಯವಿದೆ. ಇದು ಸಂಭವಿಸುವದನ್ನು, ವ್ಯಕ್ತಿಯೊಬ್ಬನು ಹೇಗೆ ತಡೆಯ ಸಾಧ್ಯವಿದೆ? ಕೆಲವೊಮ್ಮೆ ಉಗ್ರ ಕ್ರಮದ ಆವಶ್ಯಕತೆಯಿರುವದನ್ನು ಉದಾಹರಿಸುತ್ತಾ ಯೇಸುವಂದದ್ದು: “ನಿನ್ನ ಬಲಗಣ್ಣು ನಿನ್ನನ್ನು ಪಾಪದಲ್ಲಿ ಸಿಕ್ಕಿಸುವದಾದರೆ, ಅದನ್ನು ಕಿತ್ತು ಬಿಸಾಟುಬಿಡು, . . . ನಿನ್ನ ಬಲಗೈ ನಿನ್ನನ್ನು ಪಾಪದಲ್ಲಿ ಸಿಕ್ಕಿಸುವದಾದರೆ ಅದನ್ನು ಕಡಿದು ಬಿಸಾಟುಬಿಡು.”

ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ಕೆಲವು ಸಾರಿ ಜನರು ರೋಗಪೀಡಿತ ಅಂಗಗಳನ್ನು ಕಡಿಸಿಕೊಳ್ಳಲು ಸಿದ್ಧರಿರುತ್ತಾರೆ. ಆದರೆ, ಯೇಸುವಿಗನುಸಾರ, ಅನೈತಿಕ ಯೋಚನೆ ಮತ್ತು ಕೃತ್ಯಗಳನ್ನು ಹೋಗಲಾಡಿಸಲು, ಕಣ್ಣು ಯಾ ಕೈಯಂಥಾ ಅಂಗಗಳಷ್ಟು ಅಮೂಲ್ಯವಾಗಿರುವ ಯಾವುದೇ ವಸ್ತುವನ್ನು ‘ಬಿಸಾಟು ಬಿಡಲು’ ಸಿದ್ಧರಿರುವದು ಎಷ್ಟೋ ಹೆಚ್ಚು ಆವಶ್ಯಕವಾಗಿದೆ. ಇಲ್ಲದಿದ್ದರೆ, ಅಂಥಾ ವ್ಯಕ್ತಿಗಳು ನಿತ್ಯನಾಶನವನ್ನು ಸೂಚಿಸುವ ಗೆಹೆನ್ನಾದೊಳಗೆ (ಯೆರೂಸಲೇಮಿನ ಉರಿಯುತ್ತಿರುವ ಕಸದ ಕೊಂಪೆ) ಹಾಕಲ್ಪಡುವರು.

ನೋವು ಯಾ ಅಪರಾಧಗಳಿಗೆ ಕಾರಣರಾಗುವ ವ್ಯಕ್ತಿಗಳೊಂದಿಗೆ ವ್ಯವಹರಿಸುವ ವಿಧವನ್ನೂ ಯೇಸುವು ಚರ್ಚಿಸುತ್ತಾನೆ. “ಕೆಡುಕನನ್ನು ಎದುರಿಸಬೇಡ,” ಎಂಬುದು ಅವನ ಬುದ್ಧಿವಾದವಾಗಿದೆ. “ಒಬ್ಬನು ನಿನ್ನ ಬಲಗೆನ್ನೆಯ ಮೇಲೆ ಹೊಡೆದರೆ ಅವನಿಗೆ ಮತ್ತೊಂದು ಕೆನ್ನೆಯನ್ನು ಒಡ್ಡು.” ಆಕ್ರಮಿಸಲ್ಪಟ್ಟಾಗ ತನ್ನನ್ನು, ತನ್ನ ಕುಟುಂಬವನ್ನು ಒಬ್ಬ ವ್ಯಕ್ತಿಯು ಸಂರಕ್ಷಿಸಬಾರದು ಎಂದು ಯೇಸುವಿನ ಅರ್ಥವಲ್ಲ. ಕೆನ್ನೆಗೆ ಬಾರಿಸುವಿಕೆಯು ದೈಹಿಕವಾಗಿ ನೋವುಂಟುಮಾಡಲು ಅಲ್ಲ, ಬದಲು ಅವಮಾನಿಸಲು ಮಾಡುವದಾಗಿದೆ. ಆದುದರಿಂದ, ಅಕ್ಷರಶಃ ಅಂಗೈಯಿಂದ ಕೆನ್ನೆಗೆ ಹೊಡೆಯುವ ಮೂಲಕ ಯಾ ಅವಮಾನಕರ ಮಾತುಗಳಿಂದ ಚುಚ್ಚುವ ಮೂಲಕ ಯಾರಾದರೂ ಜಗಳ ಯಾ ವಾಗ್ವಾದವನ್ನು ಎಬ್ಬಿಸಲು ಪ್ರಯತ್ನಿಸಿದರೆ ಅದಕ್ಕೆ ಪ್ರತೀಕಾರ ಕೊಡುವುದು ತಪ್ಪೆಂದು ಯೇಸು ಹೇಳಿದ ಮಾತಿನರ್ಥ.

ಒಬ್ಬನು ತನ್ನ ನೆರೆಯವನನ್ನು ಪ್ರೀತಿಸಬೇಕೆಂಬ ದೇವರ ನಿಯಮಕ್ಕೆ ಗಮನ ಸೆಳೆದಾದ ನಂತರ, ಯೇಸುವು ಹೇಳಿದ್ದು: “ಆದರೆ ನಾನು ನಿಮಗೆ ಹೇಳುವುದೇನಂದರೆ—ನಿಮ್ಮ ವೈರಿಗಳನ್ನು ಪ್ರೀತಿಸಿರಿ. ನಿಮ್ಮನ್ನು ಹಿಂಸೆ ಪಡಿಸುವವರಿಗೋಸ್ಕರ ದೇವರನ್ನು ಪ್ರಾರ್ಥಿಸಿರಿ.” ಹಾಗೆ ಮಾಡಲು ಒಂದು ಬಲವಾದ ಕಾರಣವನ್ನು ಕೊಡುತ್ತಾ, ಯೇಸುವು ಕೂಡಿಸಿದ್ದು: “ಹೀಗೆ ಮಾಡಿದರೆ, ನೀವು ಪರಲೋಕದಲ್ಲಿರುವ ನಿಮ್ಮ ತಂದೆಗೆ ಮಕ್ಕಳೆಂದು ರುಜುಪಡಿಸಬಹುದು, ಯಾಕಂದರೆ ಆತನು ಕೆಟ್ಟವರ ಮೇಲೆಯೂ, ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಮೂಡುವಂತೆ ಮಾಡುತ್ತಾನೆ.”

ಯೇಸು ತನ್ನ ಪ್ರಸಂಗದ ಈ ಭಾಗವನ್ನು, ಈ ಬುದ್ಧಿವಾದದಿಂದ ಕೊನೆಗೊಳಿಸುತ್ತಾನೆ: “ಆದುದರಿಂದ ಪರಲೋಕದಲ್ಲಿರುವ ನಿಮ್ಮ ತಂದೆಯು ಪರಿಪೂರ್ಣನಾಗಿರುವಂತೆ, ನೀವೂ ಪರಿಪೂರ್ಣರಾಗಿರಬೇಕು.” ಸಮಗ್ರ ಅರ್ಥದಲ್ಲಿ ಜನರು ಪರಿಪೂರ್ಣರಾಗ ಸಾಧ್ಯವಿದೆಯೆಂದು ಯೇಸುವು ಅರ್ಥೈಸಲಿಲ್ಲ. ಬದಲು, ದೇವರನ್ನು ಅನುಕರಿಸುವದರ ಮೂಲಕ ಅವರ ಪ್ರೀತಿಯು ಅವರ ವೈರಿಗಳನ್ನು ಕೂಡಾ ಆವರಿಸುವಷ್ಟು ವಿಸ್ತರಿಸಸಾಧ್ಯವಿದೆ. ಲೂಕನ ಸಮಾನಾಂತರ ವರದಿಯು ಯೇಸುವಿನ ಮಾತುಗಳನ್ನು ಹೀಗೆ ದಾಖಲಿಸುತ್ತದೆ: “ನಿಮ್ಮ ತಂದೆಯು ಕರುಣೆಯುಳ್ಳವನಾಗಿರುವ ಪ್ರಕಾರವೇ, ನೀವೂ ಕರುಣೆಯುಳ್ಳವರಾಗಿರಿ.”

ಪ್ರಾರ್ಥನೆ, ಮತ್ತು ದೇವರಲ್ಲಿ ಭರವಸ

ಯೇಸುವು ತನ್ನ ಪ್ರಸಂಗವನ್ನು ಮುಂದುವರಿಸುತ್ತಾ, ತಮ್ಮ ದೇವಭಕ್ತಿಯ ಸೋಗನ್ನು ಪ್ರದರ್ಶಿಸುವ ಜನರ ಕಪಟತನವನ್ನು ಖಂಡಿಸಿದನು. “ನೀನು ಧರ್ಮಕೊಡುವಾಗ ನಿನ್ನ ಮುಂದೆ ಕೊಂಬೂದಿಸಬೇಡ. ಕಪಟಿಗಳು ಹಾಗೆ ಮಾಡುತ್ತಾರೆ” ಎಂದನಾತನು.

“ಮತ್ತು ನೀವು ಪ್ರಾರ್ಥನೆ ಮಾಡುವಾಗ ಕಪಟಿಗಳ ಹಾಗೆ ಮಾಡಬೇಡಿರಿ. ಜನರು ನೋಡಬೇಕೆಂದು ಅವರು ಸಭಾ ಮಂದಿರದಲ್ಲಿಯೂ ಬೀದಿಗಳಲ್ಲಿಯೂ ಹಾಗೆ ಮಾಡುತ್ತಾರೆ,” ಯೇಸು ಮುಂದರಿಸುತ್ತಾ ಅಂದನು. ಬದಲಾಗಿ, ಅವನು ಹೀಗೆ ಮಾಡುವಂತೆ ಉಪದೇಶಿಸಿದನು: “ನೀನು ಪ್ರಾರ್ಥನೆ ಮಾಡಬೇಕಾದರೆ ನಿನ್ನ ಏಕಾಂತವಾದ ಕೋಣೆಯೊಳಗೆ ಹೋಗಿ, ಬಾಗಿಲನ್ನು ಮುಚ್ಚಿ ಅಂತರಂಗದಲ್ಲಿರುವ ನಿನ್ನ ತಂದೆಗೆ ಪ್ರಾರ್ಥನೆ ಮಾಡು.” ಯೇಸು ತಾನೇ ಬಹಿರಂಗವಾಗಿ ಪ್ರಾರ್ಥನೆ ಮಾಡಿದ್ದನು. ಆತನು ಅದನ್ನು ಖಂಡಿಸಿರಲಿಲ್ಲ. ಕೇಳುವವರ ಮೇಲೆ ಪ್ರಭಾವ ಹಾಕುವ ಉದ್ದೇಶದಿಂದ ಮತ್ತು ಅವರಿಂದ ಹೊಗಳಿಸಿಕೊಳ್ಳುವದಕ್ಕಾಗಿ ಮಾಡಲ್ಪಡುವ ಪ್ರಾರ್ಥನೆಗಳನ್ನು ಮಾತ್ರ ಅವನು ಖಂಡಿಸಿದ್ದನು.

ಯೇಸು ಮತ್ತೂ ಸಲಹೆಯನ್ನಿತ್ತದ್ದು: “ಆದರೆ ಪ್ರಾರ್ಥನೆ ಮಾಡುವಾಗ ಜನಾಂಗಗಳ ಜನರ ಹಾಗೆ ಹೇಳಿದ್ದನ್ನೇ ಸುಮ್ಮಸುಮ್ಮನೆ ಹೇಳಬೇಡ.” ಪುನರುಚ್ಛಾರಣೆಯು ತಾನೇ ತಪ್ಪೆಂಬ ಅರ್ಥದಲ್ಲಿ ಅವನಿದನ್ನು ಹೇಳಲಿಲ್ಲ. ಒಮ್ಮೆ ಅವನು ತಾನೇ ಪ್ರಾರ್ಥನೆ ಮಾಡುವಾಗ “ಅದೇ ಶಬ್ದವನ್ನು” ಪದೇ ಪದೇ ಉಪಯೋಗಿಸಿದ್ದನು. ಬಾಯಿಪಾಠ ಮಾಡಲ್ಪಟ್ಟ ವಾಕ್ಯಗಳನ್ನು “ಪದೇ ಪದೇ ಹೇಳುವದನ್ನು,” ತಮ್ಮ ಪ್ರಾರ್ಥನೆಗಳನ್ನು ಕಂಠಪಾಠ ಮಾಡುವಾಗ ಬೆರಳು ಮಣಿಗಳನ್ನು ಲೆಕ್ಕಿಸುತ್ತಾ ಇರುವಂತಹ ಜನರ ವಿಷಯದಲ್ಲಿ ಆತನು ಅಸಮ್ಮತಿ ಸೂಚಿಸಿದ್ದಾಗಿದೆ.

ತನ್ನನ್ನು ಆಲೈಸುವವರು ಪ್ರಾರ್ಥಿಸುವಂತೆ ಸಹಾಯ ಮಾಡಲು ಯೇಸುವು ಏಳು ವಿಜ್ಞಾಪನೆಗಳುಳ್ಳ ಒಂದು ಮಾದರಿ ಪ್ರಾರ್ಥನೆಯನ್ನು ಒದಗಿಸುತ್ತಾನೆ. ಮೊದಲನೆಯ ಮೂರು ಯೋಗ್ಯವಾಗಿಯೇ ದೇವರ ಸಾರ್ವಭೌಮತೆ ಮತ್ತು ಅವನ ಉದ್ದೇಶಗಳ ಅಂಗೀಕಾರವನ್ನು ಮಾಡುತ್ತವೆ. ದೇವರ ನಾಮವು ಪವಿತ್ರೀಕರಿಸಲ್ಪಡುವಂತೆ, ಆತನ ರಾಜ್ಯವು ಬರುವಂತೆ, ಮತ್ತು ಆತನ ಚಿತ್ತವು ನೆರವೇರುವಂತೆ ಅವು ವಿನಂತಿಯನ್ನು ಮಾಡುತ್ತವೆ. ಉಳಿದ ನಾಲ್ಕು, ವೈಯಕ್ತಿಕ ವಿನಂತಿಗಳಾಗಿವೆ. ಅವು ಯಾವುವೆಂದರೆ ದಿನನಿತ್ಯದ ಆಹಾರಕ್ಕಾಗಿ, ಪಾಪಗಳ ಕ್ಷಮೆಗಾಗಿ, ಸಹನೆಗೆ ಮೀರಿದ ರೀತಿಯಲ್ಲಿ ಶೋಧಿಸಲ್ಪಡದಂತೆ, ಮತ್ತು ಕೆಡುಕನಿಂದ ತಪ್ಪಿಸುವಂತೆಯೇ.

ಪ್ರಾಪಂಚಿಕ ಸೊತ್ತುಗಳ ಮೇಲೆ ಅನುಚಿತ ಮಹತ್ವವನ್ನು ಇಡುವ ಪಾಶದ ಕುರಿತು, ಯೇಸುವು ಮುಂದರಿಸುತ್ತಾ ಬೋಧಿಸುತ್ತಾನೆ. “ಭೂಮಿಯಲ್ಲಿ ಗಂಟು ಮಾಡಿ ಇಟ್ಟುಕೊಳ್ಳಬೇಡಿರಿ. ಇಲ್ಲಿ ಅಂತೂ ಅದು ನುಸಿಹಿಡಿದು ಕಿಲುಬು ಹತ್ತಿ ಕೆಟ್ಟು ಹೋಗುವದು. ಇಲ್ಲಿ ಕಳ್ಳರು ಕನ್ನಾ ಕೊರೆದು ಕದಿಯುವರು,” ಎಂದು ಆತನು ಪ್ರೇರಿಸುತ್ತಾನೆ. ಅಂತಹ ನಿಕ್ಷೇಪಗಳು ನಶಿಸಿ ಹೋಗುತ್ತವೆ ಮಾತ್ರವೇ ಅಲ್ಲ, ಅವು ದೇವರೊಂದಿಗೆ ಯಾವದೇ ಯೋಗ್ಯತೆಯನ್ನು ಕಟ್ಟುವದಿಲ್ಲ.

ಆದುದರಿಂದ ಯೇಸುವಂದದ್ದು: “ಬದಲಾಗಿ ಪರಲೋಕದಲ್ಲಿ ಗಂಟುಮಾಡಿ ಇಟ್ಟುಕೊಳ್ಳಿರಿ.” ದೇವರ ಸೇವೆಯನ್ನು ಜೀವಿತದಲ್ಲಿ ಪ್ರಥಮವಾಗಿಡುವ ಮೂಲಕ ಇದನ್ನು ನಾವು ಮಾಡುತ್ತೇವೆ. ಹೀಗೆ ದೇವರೊಂದಿಗೆ ಸಂಚಯವಾಗುವ ಯೋಗ್ಯತೆಯನ್ನು ಅಥವಾ ಅದರ ಮಹಾ ಬಹುಮಾನವನ್ನು ಯಾರೂ ಅಪಹರಿಸಶಕ್ತರಲ್ಲ. ಅನಂತರ ಯೇಸು ಅಂದದ್ದು: “ನಿನ್ನ ಗಂಟು ಇದ್ದಲ್ಲಿ ನಿನ್ನ ಮನಸ್ಸು ಇರುವದಷ್ಟೇ.”

ಪ್ರಾಪಂಚಿಕತೆಯ ಪಾಶದ ಕುರಿತಾಗಿ ಇನ್ನೂ ಮಾತಾಡುತ್ತಾ, ಯೇಸು ಒಂದು ದೃಷ್ಟಾಂತವನ್ನು ಕೊಡುತ್ತಾನೆ: “ಕಣ್ಣು ದೇಹಕ್ಕೆ ದೀಪವಾಗಿದೆ. ಹೀಗಿರುವಲ್ಲಿ ನಿನ್ನ ಕಣ್ಣು ಸರಳವಾಗಿದ್ದರೆ, ನಿನ್ನ ದೇಹವೆಲ್ಲಾ ಬೆಳಕಾಗಿರುವದು. ನಿನ್ನ ಕಣ್ಣು ಕೆಟ್ಟದ್ದಾಗಿದ್ದರೆ, ನಿನ್ನ ದೇಹವೆಲ್ಲಾ ಕತ್ತಲಾಗಿರುವದು.” ಸರಿಯಾಗಿ ಕಾಣುವ ಕಣ್ಣು ದೇಹಕ್ಕೆ, ಒಂದು ಕತ್ತಲೆಯ ಸ್ಥಳದಲ್ಲಿರುವ ದೀಪದಂತಿದೆ. ಆದರೆ ಸರಿಯಾಗಿ ಕಾಣಿಸುವದಕ್ಕೆ ನಮ್ಮ ಕಣ್ಣು ಸರಳವಾಗಿರಬೇಕು, ಅಂದರೆ ಅದು ಒಂದು ವಿಷಯದ ಮೇಲೆ ಕೇಂದ್ರೀಕರಿಸಬೇಕು. ಕೇಂದ್ರಿಕೃತವಾಗಿಲ್ಲದಿದ್ದಲ್ಲಿ, ವಿಷಯಗಳ ತಪ್ಪು ಅಂದಾಜಿಗೆ ಕಣ್ಣು ನಡಿಸಿ, ಪ್ರಾಪಂಚಿಕ ಬೆನ್ನಟ್ಟುವಿಕೆಗಳನ್ನು ದೇವರ ಸೇವೆಗಿಂತ ಮುಂದಿಟ್ಟು, ಫಲಿತಾಂಶವಾಗಿ “ದೇಹವೆಲ್ಲಾ” ಕತ್ತಲಾಗುತ್ತದೆ.

ಯೇಸು ಈ ವಿಷಯವನ್ನು ಇನ್ನೊಂದು ಪ್ರಬಲ ದೃಷ್ಟಾಂತದಿಂದ ಉನ್ನತ ಬಿಂದುವಿಗೆ ಏರಿಸುತ್ತಾನೆ: “ಯಾವನೂ ಇಬ್ಬರು ಯಜಮಾನರಿಗೆ ಸೇವೆ ಮಾಡಲಾರನು. ಅವನು ಒಬ್ಬನನ್ನು ದ್ವೇಷಿಸಿ, ಮತ್ತೊಬ್ಬನನ್ನು ಪ್ರೀತಿಸುವನು. ಇಲ್ಲವೇ ಒಬ್ಬನನ್ನು ಹೊಂದಿಕೊಂಡು, ಮತ್ತೊಬ್ಬನನ್ನು ತಾತ್ಸಾರ ಮಾಡುವನು. ನೀವು ದೇವರನ್ನೂ ಮತ್ತು ಧನವನ್ನೂ ಕೂಡಾ ಸೇವಿಸಲಾರಿರಿ.”

ಈ ಬುದ್ಧಿವಾದವನ್ನು ಕೊಟ್ಟಾದ ಮೇಲೆ, ದೇವರ ಸೇವೆಯನ್ನು ಪ್ರಥಮವಾಗಿಟ್ಟಲ್ಲಿ, ಅವರು ಶಾರೀರಿಕ ಅಗತ್ಯತೆಗಳ ಬಗ್ಗೆ ಚಿಂತೆಮಾಡುವ ಆವಶ್ಯವಿಲ್ಲವೆಂದು ಯೇಸುವು ತನ್ನನ್ನು ಆಲಿಸುವ ಜನರಿಗೆ ಆಶ್ವಾಸನೆಯನ್ನೀಯುತ್ತಾನೆ. “ಆಕಾಶದಲ್ಲಿ ಹಾರಾಡುವ ಹಕ್ಕಿಗಳನ್ನು ನೋಡಿರಿ,” ಎನ್ನುತ್ತಾನೆ ಆತನು, “ಅವು ಬಿತ್ತುವದಿಲ್ಲ, ಕೊಯ್ಯುವದಿಲ್ಲ, ಕಣಜಗಳಲ್ಲಿ ತುಂಬಿಟ್ಟುಕೊಳ್ಳುವದಿಲ್ಲ; ಆದಾಗ್ಯೂ, ಪರಲೋಕದಲ್ಲಿರುವ ನಿಮ್ಮ ತಂದೆಯು ಅವುಗಳನ್ನು ಸಾಕಿ ಸಲಹುತ್ತಾನೆ.” ಅನಂತರ ಅವನು ಕೇಳಿದ್ದು: “ಅವುಗಳಿಗಿಂತ ನೀವು ಹೆಚ್ಚಿನವರಲ್ಲವೋ?”

ಅನಂತರ ಅಡವಿಯ ಹೂವುಗಳನ್ನು ತೋರಿಸುತ್ತಾ, “ಈ ಹೂವುಗಳಲ್ಲಿ ಒಂದಕ್ಕಿರುವಷ್ಟು ಅಲಂಕಾರವು ಅರಸನಾದ ಸೊಲೊಮೋನನಿಗೆ ಸಹಾ ಇರಲಿಲ್ಲ” ಎಂದನು ಯೇಸು. ಮುಂದರಿಸುತ್ತಾ ಆತನಂದದ್ದು: “ಎಲೈ ಅಲ್ಪ ವಿಶ್ವಾಸಿಗಳೇ, ಅಡವಿಯ ಹುಲ್ಲಿಗೆ ದೇವರು ಹೀಗೆ ಉಡಿಸಿದರೆ, ಅದಕ್ಕಿಂತ ಎಷ್ಟೋ ಹೆಚ್ಚಾಗಿ ನಿಮಗೆ ಉಡಿಸಿ, ತೊಡಿಸುವನಲ್ಲವೇ?” ಹೀಗೆ ಯೇಸುವು ಕೊನೆಗೊಳಿಸಿದ್ದು: “ಏನು ಊಟಮಾಡಬೇಕು, ಏನು ಕುಡಿಯಬೇಕು, ಏನು ಹೊದ್ದುಕೊಳ್ಳಬೇಕು ಎಂದು ಚಿಂತೆ ಮಾಡಬೇಡಿರಿ. . . . . ಇವೆಲ್ಲಾ ನಿಮಗೆ ಬೇಕಾಗಿದೆ ಎಂದು ಪರಲೋಕದ ನಿಮ್ಮ ತಂದೆಗೆ ತಿಳಿದದೆಯಷ್ಟೇ. ಹೀಗಿರುವದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ಆತನ ನೀತಿಗಾಗಿಯೂ ಹುಡುಕಿರಿ, ಇವುಗಳ ಕೂಡಾ ಅವೆಲ್ಲವೂ ನಿಮಗೆ ದೊರಕುವವು.”

ಜೀವದ ದಾರಿ

ಯೇಸುವಿನ ಉಪದೇಶಗಳನ್ನು ಅನುಸರಿಸುವದು ಜೀವದ ದಾರಿಯಾಗಿದೆ. ಆದರೆ ಇದನ್ನು ಮಾಡುವದು ಸುಲಭವಾಗಿರಲಿಲ್ಲ. ಉದಾಹರಣೆಗೆ, ಫರಿಸಾಯರು ಇತರರನ್ನು ನಿಷ್ಠುರತೆಯಿಂದ ತೀರ್ಪು ಮಾಡುವ ಪ್ರವೃತ್ತಿಯವರಾಗಿದ್ದರು. ಮತ್ತು ಅನೇಕರು ಅವರ ಅನುಕರಣೆ ಮಾಡುತ್ತಿದ್ದರು. ಆದುದರಿಂದ, ಯೇಸುವು ತನ್ನ ಪರ್ವತ ಪ್ರಸಂಗವನ್ನು ಮುಂದುವರಿಸಿದಂತೆ, ಈ ಎಚ್ಚರಿಕೆಯನ್ನು ಅವನು ಕೊಡುತ್ತಾನೆ: “ತೀರ್ಪು ಮಾಡಬೇಡಿರಿ; ಹಾಗೆ ನಿಮಗೂ ತೀರ್ಪಾಗುವದಿಲ್ಲ. ನೀವು ಮಾಡುವ ತೀರ್ಪಿಗೆ ಸರಿಯಾಗಿ ನಿಮಗೂ ತೀರ್ಪಾಗುವದು.”

ಅತಿ ಠೀಕಿಸುವ ಫರಿಸಾಯರ ನಾಯಕತ್ವವನ್ನು ಹಿಂಬಾಲಿಸುವದು ಅಪಾಯಕಾರಿ. ಲೂಕನ ದಾಖಲೆಗನುಸಾರ, ಈ ಅಪಾಯವನ್ನು ಯೇಸುವು ಉದಾಹರಿಸುತ್ತಾ, ಅನ್ನುವದು: “ಕುರುಡನು ಕುರುಡನಿಗೆ ದಾರಿ ತೋರಿಸುವದಕ್ಕಾದೀತೇ? ಅವರಿಬ್ಬರೂ ಕುಣಿಯಲ್ಲಿ ಬೀಳುವರಲ್ಲವೇ?”

ಇತರರನ್ನು ಕಠಿಣವಾಗಿ ಠೀಕಿಸುವದು, ಅವರ ತಪ್ಪುಗಳನ್ನು ದೊಡ್ಡದು ಮಾಡುವದು ಮತ್ತು ಅವರನ್ನು ಚುಚ್ಚುವದು ಒಂದು ಗಂಭೀರ ಅಪರಾಧವಾಗಿದೆ. ಆದುದರಿಂದ ಯೇಸುವು ಪ್ರಶ್ನಿಸುವದು: “ನೀನು ನಿನ್ನ ಸಹೋದರನಿಗೆ—ನಿನ್ನ ಕಣ್ಣಿನೊಳಗಿಂದ ರವೆಯನ್ನು ತೆಗೆಯುತ್ತೇನೆ, ಬಾ ಎಂದು ಹೇಳುವದು ಹೇಗೆ? ನಿನ್ನ ಕಣ್ಣಿನಲ್ಲಿ ತೊಲೆಯದೆಯಲ್ಲಾ. ಕಪಟಿಯೇ, ಮೊದಲು ನಿನ್ನ ಕಣ್ಣಿನೊಳಗಿಂದ ತೊಲೆಯನ್ನು ತೆಗೆದು ಹಾಕಿಕೋ; ಆ ಮೇಲೆ ನಿನ್ನ ಸಹೋದರನ ಕಣ್ಣಿನೊಳಗಿಂದ ರವೆಯನ್ನು ತೆಗೆಯುವದಕ್ಕೆ ಚೆನ್ನಾಗಿ ಕಾಣಿಸುವದು.”

ಇತರ ಜನರ ಸಂಬಂಧದಲ್ಲಿ ಯೇಸುವಿನ ಶಿಷ್ಯರು ವಿವೇಚನೆಯನ್ನು ಉಪಯೋಗಿಸಬಾರದೆಂದರ್ಥವಲ್ಲ, ಯಾಕಂದರೆ ಅವನನ್ನುವದು: “ಪವಿತ್ರವಾದವುಗಳನ್ನು ನಾಯಿಗಳಿಗೆ ಹಾಕಬೇಡಿರಿ; ನಿಮ್ಮ ಮುತ್ತುಗಳನ್ನು ಹಂದಿಗಳ ಮುಂದೆ ಚೆಲ್ಲಬೇಡಿರಿ.” ದೇವರ ವಾಕ್ಯದ ಸತ್ಯತೆಗಳು ಪವಿತ್ರವಾದವುಗಳು. ಅವು ಸಾಂಕೇತಿಕ ಮುತ್ತುಗಳಂತಿವೆ. ಆದರೆ ನಾಯಿ ಅಥವಾ ಹಂದಿಗಳಂಥಹ ಕೆಲವು ವ್ಯಕ್ತಿಗಳು ಈ ಬಹುಮೂಲ್ಯ ಸತ್ಯತೆಗಳಿಗೆ ಗಣ್ಯತೆ ತೋರಿಸದಿರುವದಾದರೆ, ಯೇಸುವಿನ ಶಿಷ್ಯರು ಅಂಥ ಜನರನ್ನು ಬಿಟ್ಟು, ಹೆಚ್ಚು ಆಲಿಸುವ ಕಿವಿಗಳುಳ್ಳವರನ್ನು ಹುಡುಕಬೇಕಿತ್ತು.

ತನ್ನ ಪ್ರಸಂಗದಲ್ಲಿ ಯೇಸುವು ಈ ಮುಂಚೆ ಪ್ರಾರ್ಥನೆಯ ಕುರಿತು ಚರ್ಚಿಸಿದ್ದರೂ, ಅವನು ಅದರಲ್ಲಿ ನಿರತನಾಗಿರುವ ಆವಶ್ಯಕತೆಯನ್ನು ಈಗ ಒತ್ತಿಹೇಳುತ್ತಾನೆ. ಅವನು ಒತ್ತಾಯಿಸುವದು: “ಬೇಡುತ್ತಾ ಇರ್ರಿ, ನಿಮಗೆ ದೊರೆಯುವದು.” ಪ್ರಾರ್ಥನೆಗೆ ಉತ್ತರಿಸಲು ದೇವರು ಸಿದ್ಧನಾಗಿರುವದನ್ನು ಉದಾಹರಿಸಲು ಯೇಸುವು ಕೇಳಿದ್ದು: “ನಿಮ್ಮಲ್ಲಿ ಯಾವನಾದರೂ ರೊಟ್ಟಿ ಕೇಳುವ ಮಗನಿಗೆ ಕಲ್ಲನ್ನು ಕೊಡುವನೇ? . . . ಹಾಗಾದರೆ, ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೆಯ ಪದಾರ್ಥಗಳನ್ನು ಕೊಡಬಲ್ಲವರಾದರೆ, ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಒಳ್ಳೆಯ ವರಗಳನ್ನು ಕೊಡುವನಲ್ಲವೇ?”

ಅನಂತರ, ಯೇಸುವು ಪ್ರಖ್ಯಾತವಾಗಿರುವ ಒಂದು ಸ್ವದರ್ತನೆಯ, ಸಾಮಾನ್ಯವಾಗಿ ಸುವರ್ಣ ನಿಯಮವೆಂದು ಕರೆಯಲ್ಪಡುವದನ್ನು ಒದಗಿಸುತ್ತಾನೆ. ಅವನನ್ನುವದು: “ಅಂತು ಜನರು ನಿಮಗೆ ಏನೇನು ಮಾಡಬೇಕೆಂದು ನೀವು ಬಯಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ.” ಈ ನಿಯಮದಿಂದ ಜೀವಿಸುವದೆಂದರೆ ಇತರರಿಗೆ ಒಳ್ಳಿತನ್ನು ಮಾಡುವ ನಿರ್ಧಾರಾತ್ಮಕ ಕ್ರಿಯೆಗಳಲ್ಲಿ ಒಳಗೂಡುವದೂ ಮತ್ತು ನಿಮ್ಮನ್ನು ಹೇಗೆ ಸತ್ಕರಿಸಬೇಕೆಂದು ಬಯಸುವಂಥ ರೀತಿಯಲ್ಲಿ ಅವರನ್ನು ಸತ್ಕರಿಸುವದೂ ಸೇರಿರುತ್ತದೆ.

ಆದುದರಿಂದ ಜೀವದ ದಾರಿಯು ಸುಲಭವಲ್ಲವೆಂದು ಯೇಸುವಿನ ಉಪದೇಶದಿಂದ ಪ್ರಕಟವಾಗುತ್ತದೆ: “ಇಕ್ಕಟ್ಟಾದ ಬಾಗಲಿನಿಂದ ಒಳಕ್ಕೆ ಹೋಗಿರಿ. ನಾಶಕ್ಕೆ ಹೋಗುವ ದಾರಿಯು ಅಗಲವು; ಅದರಲ್ಲಿ ಹೋಗುವವರು ಬಹುಜನ; ನಿತ್ಯಜೀವಕ್ಕೆ ಹೋಗುವ ಬಾಗಲು ಇಕ್ಕಟ್ಟು, ದಾರಿ ಬಿಕ್ಕಟ್ಟು; ಅದನ್ನು ಕಂಡುಹಿಡಿಯುವವರು ಸ್ವಲ್ಪ ಜನ.”

ಮೋಸಗೊಳಿಸಲ್ಪಡುವ ಅಪಾಯವು ಬಹಳವಾಗಿದ್ದುದರಿಂದ ಯೇಸು ಎಚ್ಚರಿಸಿದ್ದು: “ಸುಳ್ಳು ಪ್ರವಾದಿಗಳ ವಿಷಯದಲ್ಲಿ ಎಚ್ಚರವಾಗಿರ್ರಿ. ಅವರು ಕುರೀ ವೇಷ ಹಾಕಿಕೊಂಡು ನಿಮ್ಮ ಬಳಿಗೆ ಬರುತ್ತಾರೆ; ಆದರೆ ಒಳಗೆ ನೋಡಿದರೆ ಅವರು ಹಿಡುಕೊಂಡು ಹೋಗುವ ತೋಳಗಳೇ.” ಒಳ್ಳೇ ಮತ್ತು ಕೆಟ್ಟ ಮರಗಳನ್ನು ಅವುಗಳ ಫಲಗಳಿಂದ ಗುರುತಿಸಲ್ಪಡುವಂತೆ, ಅವರ ನಡತೆ ಮತ್ತು ಉಪದೇಶಗಳಿಂದ ಸುಳ್ಳು ಪ್ರವಾದಿಗಳನ್ನು ಗುರುತಿಸಸಾಧ್ಯವಿದೆ ಎಂದು ಯೇಸುವು ತಿಳಿಸಿದ್ದಾನೆ.

ಮುಂದುವರಿಸುತ್ತಾ ಯೇಸುವು ವ್ಯಕ್ತಿಯೊಬ್ಬನು ಏನನ್ನು ಹೇಳುತ್ತಾನೋ ಅದು ಅವನನ್ನು ಆತನ ಶಿಷ್ಯನನ್ನಾಗಿ ಮಾಡದೇ, ಅವನೇನು ಮಾಡುತ್ತಾನೋ ಅದರಿಂದಲೇ ಶಿಷ್ಯನಾಗಿ ಮಾಡುತ್ತದೆ ಅಂದನು. ಕೆಲವು ಜನರು, ಯೇಸುವು ತಮ್ಮ ಸ್ವಾಮಿ ಎಂದು ಹೇಳುತ್ತಾರೆ, ಆದರೆ ಅವರು ಅವನ ತಂದೆಯ ಚಿತ್ತವನ್ನು ಮಾಡದೇ ಇರುವದಾದರೆ ಅವನು ಹೇಳುವದು: “ನಾನು ಅವರಿಗೆ—ನಾನೆಂದೂ ನಿಮ್ಮ ಗುರುತು ಕಾಣೆನು; ಧರ್ಮವನ್ನು ಮೀರಿ ನಡೆಯುವವರೇ ನನ್ನಿಂದ ತೊಲಗಿ ಹೋಗಿರಿ ಎಂದು ಎಲ್ಲರ ಮುಂದೆ ಹೇಳಿ ಬಿಡುವೆನು.”

ಕೊನೆಯಲ್ಲಿ, ಯೇಸುವು ಸ್ಮರಣೀಯ ಸಮಾಪ್ತಿಯನ್ನು ತನ್ನ ಪ್ರಸಂಗಕ್ಕೆ ನೀಡುತ್ತಾನೆ. ಅವನಂದದ್ದು: “ಆದುದರಿಂದ, ಈ ನನ್ನ ಮಾತುಗಳನ್ನು ಕೇಳಿ ಅವುಗಳಂತೆ ನಡೆಯುವವನು ಬಂಡೆಯ ಮೇಲೆ ಮನೆಯನ್ನು ಕಟ್ಟಿಕೊಂಡ ಬುದ್ಧಿಯುಳ್ಳ ಮನುಷ್ಯನನ್ನು ಹೋಲುವನು. ಕಟ್ಟಿದ ಮೇಲೆ ಮಳೆ ಸುರಿಯಿತು; ಹಳ್ಳಗಳು ಬಂದವು; ನಾಲ್ಕು ಕಡೆಯಿಂದ ಗಾಳಿ ಬೀಸಿ ಆ ಮನೆಗೆ ಬಡಿಯಿತು. ಆದಾಗ್ಯೂ, ಅದರ ಅಸ್ತಿವಾರವು ಬಂಡೆಯ ಮೇಲಿದದ್ದರಿಂದ ಅದು ಬೀಳಲಿಲ್ಲ.”

ಇನ್ನೊಂದು ಪಕ್ಕದಲ್ಲಿ ಯೇಸುವು ಘೋಷಿಸಿದ್ದು: “ಆದರೆ ಈ ನನ್ನ ಮಾತನ್ನು ಕೇಳಿಯೂ ಅವುಗಳಂತೆ ನಡೆಯದ ಪ್ರತಿಯೊಬ್ಬನು ಉಸುಬಿನ ಮೇಲೆ ಮನೆಯನ್ನು ಕಟ್ಟಿಕೊಂಡ ಬುದ್ಧಿಹೀನ ಮನುಷ್ಯನನ್ನು ಹೋಲುವನು. ಕಟ್ಟಿದ ಮೇಲೆ ಮಳೆ ಸುರಿಯಿತು; ಹಳ್ಳಗಳು ಬಂದವು; ನಾಲ್ಕು ಕಡೆಗಳಿಂದ ಗಾಳಿ ಬೀಸಿ ಆ ಮನೆಗೆ ಹೊಡೆಯಿತು. ಆಗ ಅದು ಧಡಮ್ಮನೆ ಕಡುಕೊಂಡು ಬಿತ್ತು.”

ಯೇಸುವು ತನ್ನ ಪ್ರಸಂಗವನ್ನು ಅಂತ್ಯಗೊಳಿಸಿದಾಗ, ಆ ಜನರ ಗುಂಪುಗಳು ಆತನ ಉಪದೇಶಕ್ಕೆ ಅತ್ಯಾಶ್ಚರ್ಯಪಟ್ಟವು. ಯಾಕಂದರೆ ಆತನು ಅವರ ಧಾರ್ಮಿಕ ಮುಂದಾಳುಗಳಂತೆ “ಉಪದೇಶ ಮಾಡದೆ ಅಧಿಕಾರವಿದ್ದವನಂತೆ ಅವರಿಗೆ ಉಪದೇಶಿಸುತ್ತಿದ್ದನು.” ಲೂಕ 6: 12-23; ಮತ್ತಾಯ 5:1-12; ಲೂಕ 6:24-26; ಮತ್ತಾಯ 5:13-48; 6:1-34; 26:36-45; 7:1-29; ಲೂಕ 6:27-49.

▪ ತನ್ನ ಅತ್ಯಂತ ಸ್ಮರಣೀಯ ಪ್ರಸಂಗವನ್ನು ಕೊಡುವಾಗ ಯೇಸುವು ಎಲ್ಲಿದ್ದನು, ಯಾರು ಹಾಜರಿದ್ದರು, ಮತ್ತು ಅವನು ಅದನ್ನು ಕೊಡುವ ಮೊದಲು ಏನು ಸಂಭವಿಸಿತ್ತು?

▪ ಪ್ರಸಂಗದ ಕೆಲವು ಉಪದೇಶಗಳನ್ನು ಲೂಕನು ಇನ್ನೊಂದು ಸನ್ನಿವೇಶದಲ್ಲಿ ದಾಖಲೆ ಮಾಡಿದ್ದು ಯಾಕೆ ಆಶ್ಚರ್ಯವಲ್ಲ?

▪ ಯೇಸುವಿನ ಪ್ರಸಂಗವನ್ನು ಅಷ್ಟು ಬೆಲೆಯುಳ್ಳದ್ದಾಗಿ ಮಾಡುವದು ಯಾವದು?

▪ ನಿಜವಾಗಿ ಧನ್ಯರು ಯಾರು, ಮತ್ತು ಯಾಕೆ?

▪ ದುರ್ಗತಿಯನ್ನು ಪಡೆಯುವವರು ಯಾರು, ಮತ್ತು ಯಾಕೆ?

▪ ಯೇಸುವಿನ ಶಿಷ್ಯರು “ಭೂಮಿಗೆ ಉಪ್ಪು” ಮತ್ತು “ಲೋಕಕ್ಕೆ ಬೆಳಕು” ಆಗಿರುವದು ಹೇಗೆ?

▪ ದೇವರ ನಿಯಮಕ್ಕೆ ಯೇಸುವು ಉನ್ನತ ಗೌರವ ತೋರಿಸಿದ್ದು ಹೇಗೆ?

▪ ನರಹತ್ಯೆ ಮತ್ತು ವ್ಯಭಿಚಾರ ಕಾರಣಗಳನ್ನು ನಿರ್ಮೂಲಗೊಳಿಸಲು ಯೇಸುವು ಯಾವ ಉಪದೇಶವನ್ನಿತನ್ತು?

▪ ಇನ್ನೊಂದು ಕೆನ್ನೆಯನ್ನು ಒಡ್ಡುವದು ಎಂದು ಯೇಸು ಹೇಳಿರುವದರ ಅರ್ಥವೇನು?

▪ ದೇವರು ಪರಿಪೂರ್ಣನಾಗಿದ್ದಂತೆಯೇ ನಾವು ಹೇಗೆ ಪರಿಪೂರ್ಣರಾಗಿರಸಾಧ್ಯವಿದೆ?

▪ ಪ್ರಾರ್ಥನೆಯ ವಿಷಯದಲ್ಲಿ ಯಾವ ಉಪದೇಶವನ್ನು ಯೇಸುವು ಕೊಟ್ಟನು?

▪ ಸ್ವರ್ಗೀಯ ನಿಕ್ಷೇಪಗಳು ಶ್ರೇಷ್ಠವೇಕೆ, ಮತ್ತು ಅವನ್ನು ಗಳಿಸುವದು ಹೇಗೆ?

▪ ಪ್ರಾಪಂಚಿಕತೆಯನ್ನು ಹೋಗಲಾಡಿಸಲು ಒಬ್ಬನ ಸಹಾಯಕ್ಕಾಗಿ ಯಾವ ದೃಷ್ಟಾಂತಗಳು ಕೊಡಲ್ಪಟ್ಟಿವೆ?

▪ ಚಿಂತೆ ಮಾಡುವ ಆವಶ್ಯಕತೆಯಿಲ್ಲವೆಂದು ಯೇಸುವು ಹೇಳಿದ್ದು ಯಾಕೆ?

▪ ಇತರರಿಗೆ ತೀರ್ಪು ಮಾಡುವದರ ಕುರಿತು ಯೇಸುವಂದದ್ದೇನು, ಆದರೂ ಜನರ ವಿಷಯ ವಿವೇಚನೆಯನ್ನು ಬಳಸುವಂತೆ ತನ್ನ ಶಿಷ್ಯರಿಗೆ ಅವನು ಹೇಗೆ ತೋರಿಸಿದನು?

▪ ಪ್ರಾರ್ಥನೆಯನ್ನು ಕುರಿತು ಯೇಸುವು ಇನ್ನೇನು ಹೇಳಿದನು, ಮತ್ತು ಯಾವ ನಡಾವಳಿಯ ನಿಯಮವೊಂದನ್ನು ಅವನು ಒದಗಿಸಿದನು?

▪ ಜೀವದ ದಾರಿಯು ಸುಲಭವಲ್ಲವೆಂದೂ, ಮೋಸಗೊಳಿಸಲ್ಪಡುವ ಅಪಾಯವಿದೆಯೆಂದೂ ಯೇಸುವು ಹೇಗೆ ತೋರಿಸಿದನು?

▪ ಯೇಸುವು ತನ್ನ ಪ್ರಸಂಗವನ್ನು ಹೇಗೆ ಕೊನೆಗೊಳಿಸಿದನು ಮತ್ತು ಅದು ಯಾವ ಪರಿಣಾಮಗಳನ್ನು ತಂದಿತು?