ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಂದು ಹುಟ್ಟು ಹಬ್ಬದಂದು ಕೊಲೆ

ಒಂದು ಹುಟ್ಟು ಹಬ್ಬದಂದು ಕೊಲೆ

ಅಧ್ಯಾಯ 51

ಒಂದು ಹುಟ್ಟು ಹಬ್ಬದಂದು ಕೊಲೆ

ಯೇಸು ತನ್ನ ಅಪೊಸ್ತಲರಿಗೆ ಸೂಚನೆ ಕೊಟ್ಟಾದ ಮೇಲೆ, ಅವರನ್ನು ಇಬ್ಬಿಬ್ಬರಾಗಿ ಕ್ಷೇತ್ರಕ್ಕೆ ಕಳುಹಿಸುತ್ತಾನೆ. ಸಹೋದರರಾದ ಪೇತ್ರ ಮತ್ತು ಅಂದ್ರೆಯ ಪ್ರಾಯಶಃ ಒಟ್ಟಿಗೆ ಹೋಗಿರಬಹುದು. ಯಾಕೋಬ ಮತ್ತು ಯೋಹಾನ, ಫಿಲಿಪ್ಪ ಮತ್ತು ಬಾರ್ತಲೊಮಾಯ, ತೋಮ ಮತ್ತು ಮತ್ತಾಯ, ಯಾಕೋಬ ಮತ್ತು ತದ್ದಾಯ, ಸೀಮೋನ್‌ ಮತ್ತು ಇಸ್ಕಾರಿಯೋತ ಯೂದನು ಸಹಾ ಹಾಗೆಯೇ ಹೋಗಿದ್ದಿರಬೇಕು. ಆ ಆರು ಜತೆ ಸುವಾರ್ತಿಕರು ತಾವು ಹೋದಲ್ಲಿಲ್ಲಾ ರಾಜ್ಯದ ಸುವಾರ್ತೆಯನ್ನು ಸಾರುತ್ತಾರೆ ಮತ್ತು ಅದ್ಭುತಕೃತ್ಯಗಳನ್ನು ನಡಿಸುತ್ತಾರೆ.

ಈ ಮಧ್ಯೆ, ಸ್ನಾನಿಕನಾದ ಯೋಹಾನನು ಇನ್ನೂ ಸೆರೆಮನೆಯಲ್ಲಿದ್ದಾನೆ. ಈಗ ಸುಮಾರು ಎರಡು ವರ್ಷದಿಂದ ಅವನು ಅಲ್ಲಿದ್ದಾನೆ. ಹೆರೋದ ಅಂತಿಪ್ಪನು ಅವನ ಅಣ್ಣನಾದ ಫಿಲಿಪ್ಪನ ಹೆಂಡತಿ ಹೆರೋದ್ಯಳನ್ನು ತನಗಾಗಿ ಇಟ್ಟುಕೊಳ್ಳುವದು ತಪ್ಪು ಎಂದು ಯೋಹಾನನು ಬಹಿರಂಗವಾಗಿ ಘೋಷಿಸಿದ್ದು ನಿಮಗೆ ನೆನಪಿರಬಹುದು. ಹೆರೋದ ಅಂತಿಪ್ಪನು ಮೋಶೆಯ ಧರ್ಮಶಾಸ್ತ್ರವನ್ನು ಪಾಲಿಸುವದಾಗಿ ಹೇಳುತ್ತಿದ್ದರಿಂದ, ಯೋಗ್ಯವಾಗಿಯೇ, ಯೋಹಾನನು ಈ ವ್ಯಭಿಚಾರ ಸಂಯೋಗವನ್ನು ಖಂಡಿಸಿದ್ದನು. ಈ ಕಾರಣಕ್ಕಾಗಿಯೇ ಹೆರೋದನು ಯೋಹಾನನನ್ನು ಸೆರೆಮನೆಗೆ ಹಾಕಿಸಿದ್ದನು, ಪ್ರಾಯಶಃ ಹೆರೋದ್ಯಳ ಒತ್ತಾಯದಿಂದಾಗಿ.

ಯೋಹಾನನು ನೀತಿವಂತ ಪುರುಷನೆಂದು ಹೆರೋದ ಅಂತಿಪ್ಪನಿಗೆ ತಿಳಿಯುತ್ತದೆ ಮತ್ತು ಸಂತೋಷದಿಂದ ಅವನ ಮಾತುಗಳನ್ನು ಆಲಿಸುತ್ತಿದ್ದನು ಕೂಡ. ಆದಕಾರಣ, ಅವನನ್ನು ಏನು ಮಾಡಲಿ ಎಂಬ ಪೇಚಾಟಕ್ಕೆ ಬೀಳುತ್ತಾನೆ. ಆದರೆ ಹೆರೋದ್ಯಳಾದರೋ, ಯೋಹಾನನನ್ನು ಹಗೆ ಮಾಡುತ್ತಾಳೆ ಮತ್ತು ಅವನನ್ನು ಕೊಲ್ಲಿಸಲು ಸಂದರ್ಭ ಹುಡುಕುತ್ತಾ ಇರುತ್ತಾಳೆ. ಕಟ್ಟ ಕಡೆಗೆ, ಅವಳು ಕಾಯುತ್ತಿದ್ದ ಸಂದರ್ಭ ಬರುತ್ತದೆ.

ಸಾ.ಶ. 32ರ ಪಸ್ಕಕ್ಕೆ ಮುಂಚಿತವಾಗಿ ಹೆರೋದನು ತನ್ನ ಹುಟ್ಟುಹಬ್ಬದ ಒಂದು ದೊಡ್ಡ ಅಚರಣೆಯನ್ನು ಏರ್ಪಡಿಸುತ್ತಾನೆ. ಆ ಸತ್ಕಾರ ಗೋಷ್ಠಿಗಾಗಿ ಹೆರೋದನ ಅರಮನೆಯ ಉಚ್ಛ ಅಧಿಕಾರಿಗಳು, ಸೇನಾಪತಿಗಳು ಹಾಗೂ ಗಲಿಲಾಯದ ಪ್ರಮುಖ ನಾಗರಿಕರು ಒಟ್ಟು ಸೇರಿದರು. ಸಂಜೆಯಾದಾಗ, ಮಾಜಿ ಗಂಡ ಫಿಲಿಪ್ಪನಿಂದ, ಹೆರೋದ್ಯಳಿಗೆ ಹುಟ್ಟಿದ ಎಳೇ ಮಗಳು, ಸಲೋಮಿ, ಅತಿಥಿಗಳ ಮುಂದೆ ನಾಟ್ಯವಾಡುವಂತೆ ಕಳುಹಿಸಲ್ಪಟ್ಟಳು. ಸಭಿಕ ಗಂಡಸರು ಅವಳ ನಾಟ್ಯದಿಂದ ಮುಗ್ಧರಾದರು.

ಹೆರೋದನು ಸಲೋಮಿಯನ್ನು ಬಲು ಮೆಚ್ಚಿದನು. “ಬೇಕಾದದ್ದನ್ನು ಕೇಳಿಕೋ, ನಾನು ಕೊಡುತ್ತೇನೆ” ಎನ್ನುತ್ತಾನೆ. “ನೀನು ಏನು ಕೇಳಿ ಕೊಂಡರೂ ಸರಿ, ನನ್ನ ರಾಜ್ಯದಲ್ಲಿ ಅರ್ಧರಾಜ್ಯವನ್ನು ಕೇಳಿದರೂ ಕೊಡುತ್ತೇನೆ” ಎಂದು ಆಣೆಯಿಟ್ಟು ಘೋಷಿಸುತ್ತಾನೆ.

ಉತ್ತರ ಕೊಡುವ ಮುಂಚೆ, ಸಲೋಮಿ ತನ್ನ ತಾಯಿಯನ್ನು ಸಂಪರ್ಕಿಸಲು ಹೊರಗೆ ಹೋಗುತ್ತಾಳೆ. “ನಾನು ಏನು ಕೇಳಿ ಕೊಳ್ಳಲಿ?” ಎಂದು ವಿಚಾರಿಸುತ್ತಾಳೆ.

ಕಟ್ಟಕಡೆಗೆ ಸಂದರ್ಭ ಸಿಕ್ಕಿತು! “ಸ್ನಾನಿಕನಾದ ಯೋಹಾನನ ತಲೆ,” ಎನ್ನುತ್ತಾಳೆ ಹೆರೋದ್ಯಳು, ಹಿಂಜರಿಯದೇ.

ಕೂಡಲೇ ಸಲೋಮಿಯು ಹೆರೋದನ ಬಳಿಗೆ ಹಿಂತಿರುಗಿ, “ಈ ಕ್ಷಣದಲ್ಲೇ ಸ್ನಾನಿಕನಾದ ಯೋಹಾನನ ತಲೆಯನ್ನು ಪರಾತಿನಲ್ಲಿ ನನಗೆ ತರಿಸಿ ಕೊಡಬೇಕು” ಎಂದು ವಿನಂತಿಸುತ್ತಾಳೆ.

ಹೆರೋದನು ಬಹು ದುಃಖ ಪಟ್ಟನು. ಆದರೂ, ಅವನ ಅತಿಥಿಗಳು ಅವನು ಮಾಡಿದ್ದ ಆಣೆಯನ್ನು ಕೇಳಿದ್ದರಿಂದ, ಅದನ್ನು ಪಾಲಿಸದೆ ಇರಲು ಪೇಚಾಟಕ್ಕೆ ಬಿದ್ದನು, ಇದು ಒಬ್ಬ ನಿರ್ದೋಷಿ ಮನುಷ್ಯನನ್ನು ಕೊಲ್ಲುವ ಅರ್ಥದಲ್ಲಿದ್ದಾಗ್ಯೂ ಅವನದನ್ನು ನಡಿಸಿದನು. ಒಬ್ಬ ಸಂಹಾರಕನನ್ನು ಈ ಭಯಾನಕ ಅಪ್ಪಣೆಯೊಂದಿಗೆ ಕೂಡಲೇ ಸೆರೆಮನೆಗೆ ಕಳುಹಿಸಲಾಯಿತು. ಅವನು ತುಸುಹೊತ್ತಿನಲ್ಲೇ ತಲೆಯನ್ನು ಪರಾತಿನಲ್ಲಿ ತಂದು ಸಲೋಮಿಗೆ ಕೊಡುತ್ತಾನೆ. ಅವಳು ಹೋಗಿ ಅದನ್ನು ತಾಯಿಗೆ ಕೊಡುತ್ತಾಳೆ. ಯೋಹಾನನ ಶಿಷ್ಯರು ಇದನ್ನು ಕೇಳಿದಾಗ, ಬಂದು, ಅವನ ಶವವನ್ನು ತೆಗೆದು ಸಮಾಧಿ ಮಾಡುತ್ತಾರೆ. ಅನಂತರ ಅವರು ಆ ಸಂಗತಿಯನ್ನು ಯೇಸುವಿಗೆ ತಿಳಿಸುತ್ತಾರೆ.

ತದನಂತರ, ಯೇಸು ಜನರನ್ನು ವಾಸಿಮಾಡುವದನ್ನೂ ಮತ್ತು ದೆವ್ವಗಳನ್ನು ಬಿಡಿಸುವುದನ್ನೂ ಹೆರೋದನು ಕೇಳಿದಾಗ, ಅವನು ಹೆದರಿ ಹೋದನು. ಯೇಸು ನಿಜವಾಗಿ ಸತ್ತವರೊಳಗಿಂದ ಎಬ್ಬಿಸಲ್ಪಟ್ಟ, ಯೋಹಾನನೋ ಎಂದವನ ಹೆದರಿಕೆಗೆ ಕಾರಣವಾಗಿತ್ತು. ಯೇಸುವನ್ನು ನೋಡಲು ಅವನು ಬಲು ಅಪೇಕ್ಷೆ ಪಡುತ್ತಾನೆ. ಆತನ ಸಾರುವಿಕೆಯನ್ನು ಕೇಳಲಿಕ್ಕಾಗಿ ಅಲ್ಲ, ತನ್ನ ಭಯಕ್ಕೆ ನಿಜ ಕಾರಣವದೆಯೋ ಎಂದು ದೃಢೀಕರಿಸಲಿಕ್ಕಾಗಿಯೇ. ಮತ್ತಾಯ 10:1-5; 11:1; 14:1-12; ಮಾರ್ಕ 6:14-29; ಲೂಕ 9:7-9.

▪ ಯೋಹಾನನು ಸೆರೆಮನೆಯಲ್ಲಿದ್ದದ್ದೇಕೆ, ಮತ್ತು ಹೆರೋದನು ಅವನನ್ನು ಕೊಲ್ಲಲು ಏಕೆ ಬಯಸಲಿಲ್ಲ?

▪ ಯೋಹಾನನನ್ನು ಹೆರೋದ್ಯಳು ಕಟ್ಟಕಡೆಗೆ ಕೊಲ್ಲಲು ಶಕ್ತಳಾದದ್ದು ಹೇಗೆ?

▪ ಯೋಹಾನನ ಮರಣಾನಂತರ, ಹೆರೋದನು ಯೇಸುವನ್ನು ನೋಡಲು ಬಯಸಿದ್ದು ಏಕೆ?