ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಪ್ಪಿಸಲ್ಪಟ್ಟು, ಕೊಂಡೊಯ್ಯಲ್ಪಟ್ಟನು

ಒಪ್ಪಿಸಲ್ಪಟ್ಟು, ಕೊಂಡೊಯ್ಯಲ್ಪಟ್ಟನು

ಅಧ್ಯಾಯ 124

ಒಪ್ಪಿಸಲ್ಪಟ್ಟು, ಕೊಂಡೊಯ್ಯಲ್ಪಟ್ಟನು

ಪಿಲಾತನು ಕ್ರೂರ ಯಾತನೆಗೊಳಪಟ್ಟ ಯೇಸುವಿನ ಶಾಂತ ಘನತೆಯಿಂದ ಕನಿಕರ ಹೊಂದಿ, ಅವನನ್ನು ಬಿಡುಗಡೆಗೊಳಿಸಲು ಪುನಃ ಪ್ರಯತ್ನಿಸಿದಾಗ, ಮಹಾ ಯಾಜಕರೂ ಇನ್ನಷ್ಟು ಕೋಪಗೊಂಡರು. ಅವರ ದುಷ್ಟ ಉದ್ದೇಶದೊಂದಿಗೆ ಯಾವುದೂ ಮಧ್ಯೆ ಪ್ರವೇಶಿಸಿದಂತೆ ಅವರು ದೃಢ ಮನಸ್ಕರಾಗಿದ್ದರು. ಆದುದರಿಂದ ಅವರು ತಮ್ಮ ಕೂಗಾಟವನ್ನು ಪುನಃ ಪುನಃ ಮಾಡುತ್ತಿದ್ದರು: “ಅವನನ್ನು ವಧಾಸ್ತಂಭಕ್ಕೇರಿಸು! ಅವನನ್ನು ವಧಾಸ್ತಂಭಕ್ಕೇರಿಸು!”

“ಬೇಕಾದರೆ ನೀವೇ ಅವನನ್ನು ತಕ್ಕೊಂಡು ಹೋಗಿ ವಧಾಸ್ತಂಭಕ್ಕೇರಿಸಿರಿ,” ಪಿಲಾತನು ಪ್ರತಿಕ್ರಿಯಿಸುತ್ತಾನೆ. (ಅವರು ಈ ಮೊದಲು ಹೇಳಿದ್ದಕ್ಕೆ ಪ್ರತಿ ವಿರುದ್ಧವಾಗಿ, ಸಾಕಷ್ಟು ಗಂಭೀರತೆಯ ಧಾರ್ಮಿಕ ಆರೋಪಗಳಿಗಾಗಿ ದುಷ್ಕರ್ಮಿಗಳನ್ನು ಕೊಲ್ಲಿಸಲು ಯೆಹೂದ್ಯರಿಗೆ ಅಧಿಕಾರವಿದ್ದರಬಹುದು.) ಅನಂತರ, ಕಡಿಮೆ ಪಕ್ಷ ಐದನೆಯ ಬಾರಿಗೆ, ಯೇಸುವು ನಿರಪರಾಧಿಯೆಂದು ಪಿಲಾತನು ಹೇಳುತ್ತಾನೆ: “ನನಗೆ ಅವನಲ್ಲಿ ಅಪರಾಧವು ಕಾಣಿಸಲಿಲ್ಲ.”

ಅವರ ರಾಜಕೀಯ ಆರೋಪವು ಫಲಿತಾಂಶವನ್ನು ತರಲು ತಪ್ಪಿಹೋಗುವದನ್ನು ಯೆಹೂದ್ಯರು ಕಂಡು, ಸನ್ಹೇದ್ರಿನ್‌ನ ಮುಂದೆ ಯೇಸುವಿನ ವಿಚಾರಣೆಯ ಸಮಯದಲ್ಲಿ ಕೆಲವು ತಾಸುಗಳ ಮುಂಚೆ ತಂದಂಥ ದೇವದೂಷಣೆಯ ಧಾರ್ಮಿಕ ಆಪಾದನೆಯನ್ನು ಪುನಃ ತರುತ್ತಾರೆ. “ನಮಗೆ ಒಂದು ನೇಮ ಉಂಟು,” ಅವರನ್ನುತ್ತಾರೆ, “ಆ ನೇಮದ ಪ್ರಕಾರ ಇವನು ಸಾಯತಕ್ಕವನು; ಯಾಕಂದರೆ ಅವನು ತನ್ನನ್ನು ದೇವರ ಮಗನಾಗಿ ಮಾಡಿಕೊಂಡಿದ್ದಾನೆ.”

ಈ ಆಪಾದನೆಯು ಪಿಲಾತನಿಗೆ ಹೊಸತು ಮತ್ತು ಇದು ಅವನನ್ನು ಮತ್ತಷ್ಟು ಹೆದರುವಂತೆ ಮಾಡಿತು. ಅವನ ಹೆಂಡತಿಯ ಕನಸು ಮತ್ತು ಯೇಸುವಿನ ವ್ಯಕ್ತಿತ್ವದ ಗಮನಾರ್ಹವಾದ ಬಲವು ಕೂಡ, ಯೇಸುವು ಒಬ್ಬ ಸಾಧಾರಣ ಮನುಷ್ಯನಲ್ಲವೆಂದು ಇಷ್ಟರೊಳಗೆ ಅವನು ತಿಳಿದಿದ್ದನು. ಆದರೆ “ದೇವರ ಮಗನು”? ಯೇಸುವು ಗಲಿಲಾಯದವನು ಎಂದು ಪಿಲಾತನಿಗೆ ಗೊತ್ತಿತ್ತು. ಆದರೂ, ಅವನು ಮೊದಲು ಎಲ್ಲಿಯಾದರೂ ಜೀವಿಸಿರಬಹುದೇ? ಪುನಃ ಅರಮನೆಯೊಳಗೆ ಅವನನ್ನು ಕೊಂಡುಹೋಗಿ, ಪಿಲಾತನು ವಿಚಾರಿಸುವದು: “ನೀನು ಎಲ್ಲಿಂದ ಬಂದವನು?”

ಯೇಸುವು ಉತ್ತರ ಕೊಡುವದಿಲ್ಲ. ಅವನೊಬ್ಬ ರಾಜನೆಂದೂ, ಅವನ ರಾಜ್ಯವು ಈ ಲೋಕದ ಭಾಗವಾಗಿಲ್ಲವೆಂದೂ ಅವನು ಈ ಮುಂಚೆ ಪಿಲಾತನಿಗೆ ಹೇಳಿದ್ದನು. ಯಾವುದೇ ಉಪಯುಕ್ತ ಉದ್ದೇಶವು ಇನ್ನೂ ಹೆಚ್ಚಿನ ವಿವರಣೆಯಿಂದ ಲಭಿಸಲಾರದು. ಆದಾಗ್ಯೂ, ಉತ್ತರ ಕೊಡಲು ನಿರಾಕರಿಸಿದ್ದರಿಂದ ಪಿಲಾತನ ಹೆಮ್ಮೆಗೆ ಪೆಟ್ಟು ಬಿದ್ದಿತ್ತು ಮತ್ತು ಯೇಸುವಿನೆಡೆಗೆ ಅವನು ಕೋಪಗೊಂಡು ಹೀಗನ್ನುತ್ತಾನೆ: “ನನ್ನ ಸಂಗಡಲೂ ನೀನು ಮಾತಾಡುವದಿಲ್ಲವೋ? ನಿನ್ನನ್ನು ಬಿಡಿಸುವ ಅಧಿಕಾರವೂ ನಿನ್ನನ್ನು ವಧಾಸ್ತಂಭಕ್ಕೇರಿಸುವ ಅಧಿಕಾರವೂ ನನಗೆ ಉಂಟೆಂದು ನಿನಗೆ ಗೊತ್ತಿಲ್ಲವೋ?”

“ಮೇಲಣಿಂದ ನಿನಗೆ ಕೊಡಲ್ಪಡದಿದ್ದರೆ ನನ್ನ ಮೇಲೆ ನಿನಗೆ ಯಾವ ಅಧಿಕಾರವೂ ಇರುತ್ತಿರಲಿಲ್ಲ,” ಯೇಸುವು ಗೌರವಪೂರ್ಣತೆಯಿಂದ ಪ್ರತ್ಯುತ್ತರ ಕೊಡುತ್ತಾನೆ. ಐಹಿಕ ವ್ಯವಹಾರಗಳನ್ನು ನೋಡಿಕೊಳ್ಳಲು ಮಾನವ ಅಧಿಪತಿಗಳಿಗೆ ದೇವರಿಂದ ಕೊಡಲ್ಪಟ್ಟ ಅಧಿಕಾರದ ಕುರಿತು ಅವನು ನಿರ್ದೇಶಿಸುತ್ತಾನೆ. ಯೇಸುವು ಕೂಡಿಸುವದು: “ಆದಕಾರಣ ನನ್ನನ್ನು ನಿನಗೆ ಒಪ್ಪಿಸಿದವನಿಗೆ ಹೆಚ್ಚಿನ ಪಾಪ ಉಂಟು.” ಖಂಡಿತವಾಗಿಯೂ, ಯೇಸುವಿಗೆ ನೀಡಿದ ಅನ್ಯಾಯದ ಉಪಚಾರಕ್ಕಾಗಿ, ಮಹಾ ಯಾಜಕನಾದ ಕಾಯಫನಿಗೆ ಮತ್ತು ಅವನ ಸಹಾಯಕರಿಗೆ ಮತ್ತು ಇಸ್ಕರಿಯೋತ ಯೂದನಿಗೆ, ಪಿಲಾತನಿಗಿಂತ ಹೆಚ್ಚಿನ ಜವಾಬ್ದಾರಿಕೆಯ ಹೊರೆಯನ್ನು ಹೊರಲಿಕ್ಕಿದೆ.

ಯೇಸುವಿನಿಂದ ಇನ್ನಷ್ಟು ಪ್ರಭಾವಿತನಾಗಿ ಮತ್ತು ದೈವಿಕ ಮೂಲವೊಂದು ಯೇಸುವಿಗೆ ಇರಬಹುದು ಎಂಬದರಿಂದ ಭಯಭೀತನಾಗಿ, ಅವನನ್ನು ಬಿಡಿಸಲು ಪಿಲಾತನು ಪುನಃ ತನ್ನ ಪ್ರಯತ್ನವನ್ನು ಮಾಡುತ್ತಾನೆ. ಆದಾಗ್ಯೂ, ಯೆಹೂದ್ಯರಿಂದ ಪಿಲಾತನು ಧಿಕ್ಕಾರವನ್ನು ಪಡೆಯುತ್ತಾನೆ. ಅವರು ರಾಜಕೀಯ ಆರೋಪವನ್ನು ಪುನರುಚ್ಛರಿಸಿ, ಕುತಂತ್ರದಿಂದ ಬೆದರಿಕೆಯನ್ನೂಡ್ಡುತ್ತಾರೆ: “ನೀನು ಇವನನ್ನು ಬಿಡಿಸಿದರೆ ನೀನು ಕೈಸರನಿಗೆ ಮಿತ್ರನಲ್ಲ; ತನ್ನನ್ನು ಅರಸನನ್ನಾಗಿ ಮಾಡಿ ಕೊಳ್ಳುವವನು ಕೈಸರನಿಗೆ ವಿರೋಧಿ.”

ಇಂಥ ವಿಪತ್ಕಾರಕ ಪರಿಣಾಮಗಳು ಒಳಗೂಡಿರುವದಾದರೂ, ಪಿಲಾತನು ಯೇಸುವನ್ನು ಪುನೊಮ್ಮೆ ಹೊರಗೆ ತರಿಸುತ್ತಾನೆ. “ಇಗೋ, ನಿಮ್ಮ ಅರಸನು!” ಎಂದು ಪುನಃ ಅವರಿಗೆ ವಿನಂತಿಸುತ್ತಾನೆ.

“ಅವನನ್ನು ಕೊಲ್ಲಿಸು! ಅವನನ್ನು ಕೊಲ್ಲಿಸು! ವಧಾಸ್ತಂಭಕ್ಕೇರಿಸು!”

“ನಿಮ್ಮ ಅರಸನನ್ನು ವಧಾಸ್ತಂಭಕ್ಕೇರಿಸಲೋ?” ಪಿಲಾತನು ಹತಾಶೆಯಿಂದ ಕೇಳುತ್ತಾನೆ.

ರೋಮನರ ಆಳಿಕೆಯ ಕೆಳಗೆ ಯೆಹೂದ್ಯರು ಒತ್ತಡಕ್ಕೊಳಗಾಗಿದ್ದರು. ಖಂಡಿತವಾಗಿಯೂ ಅವರು ರೋಮನರ ಪ್ರಭುತ್ವವನ್ನು ಹೇಸುತ್ತಿದ್ದರು! ಆದರೂ, ಕಪಟತನದಿಂದ, ಮಹಾ ಯಾಜಕರು ಹೇಳುತ್ತಾರೆ: “ಕೈಸರನೇ ಹೊರತು ನಮಗೆ ಬೇರೆ ಅರಸನಿಲ್ಲ.”

ತನ್ನ ರಾಜಕೀಯ ಹುದ್ದೆ ಮತ್ತು ಕೀರ್ತಿಗಾಗಿ ಹೆದರಿಕೊಂಡು, ಯೆಹೂದ್ಯರು ಪಟ್ಟುಬಿಡದೆ ಮಾಡಿದ ಕೇಳಿಕೆಗಳಿಗೆ ಕೊನೆಗೂ ಪಿಲಾತನು ಮಣಿಯುತ್ತಾನೆ. ಅವನು ಯೇಸುವನ್ನು ಅವರ ವಶಕ್ಕೆ ಒಪ್ಪಿಸುತ್ತಾನೆ. ಸಿಪಾಯಿಗಳು ಅವನ ಕೆಂಪು ಒಲ್ಲಿಯ ಮೇಲಂಗಿಯನ್ನು ತೆಗೆಯುತ್ತಾರೆ ಮತ್ತು ಅವನ ಮೇಲುಹೊದಿಕೆಯನ್ನು ಹೊದಿಸುತ್ತಾರೆ. ವಧಾಸ್ತಂಭಕ್ಕೇರಿಸಲ್ಪಡಲು ಅವನನ್ನು ಕೊಂಡೊಯ್ದಾಗ, ಆತನು ತನ್ನ ಸ್ವಂತ ಯಾತನಾ ಸ್ತಂಭವನ್ನು ತಾನೇ ಹೊತ್ತುಕೊಂಡು ಹೋಗುವಂತೆ ಮಾಡಿದರು.

ಇಷ್ಟರೊಳಗೆ ನೈಸಾನ್‌ 14, ಶುಕ್ರವಾರ ಮಧ್ಯೆ ಬೆಳಗ್ಗಿನ ಸಮಯವಾಗಿತ್ತು; ಪ್ರಾಯಶಃ ಮಧ್ಯಾಹ್ನಕ್ಕೆ ಹತ್ತರಿಸುತ್ತಿರಬಹುದು. ಗುರುವಾರ ಮುಂಜಾನೆಯಿಂದಲೇ ಯೇಸು ಎಚ್ಚರದಿಂದ ಇದ್ದನು ಮತ್ತು ಒಂದರ ನಂತರ ಇನ್ನೊಂದು ಮರಣ ಸಂಕಟದ ಅನುಭವಗಳಿಂದ ಬಾಧೆ ಪಡುತ್ತಾ ಇದ್ದನು. ಕಂಭದ ಭಾರದ ಕೆಳಗೆ ಅವನ ಶಕ್ತಿಯು ತಾಳಿಕೊಳ್ಳಲಾರದು ಎಂಬದನ್ನು ಅರ್ಥೈಸಬಹುದು. ಆದುದರಿಂದ ಅಲ್ಲಿಂದ ಹಾದುಹೋಗುತ್ತಿದ್ದ ಆಫ್ರಿಕದ ಕುರೇನೆ ಪಟ್ಟಣದ ಸೀಮೋನನೆಂಬವನನ್ನು ಅವನಿಗಾಗಿ ಹೊರುವದಕ್ಕೆ ಬಿಟ್ಟೀಹಿಡಿದರು. ಅವರು ಮುಂದಕ್ಕೆ ಹೋಗುತ್ತಾ ಇರುವಾಗ, ಎದೆಬಡುಕೊಳ್ಳುತ್ತಾ, ಯೇಸುವಿನ ವಿಷಯದಲ್ಲಿ ಗೋಳಾಡುತ್ತಾ ಇರುವ ಸ್ತ್ರೀಯರ ಸಹಿತ ಅನೇಕ ಜನರು ಅವನನ್ನು ಹಿಂಬಾಲಿಸುತ್ತಿದ್ದರು.

ಸ್ತ್ರೀಯರೆಡೆಗೆ ತಿರುಗುತ್ತಾ, ಯೇಸುವು ಹೇಳುವದು: “ಯೆರೂಸಲೇಮಿನ ಸ್ತ್ರೀಯರೇ, ನನಗೋಸ್ಕರ ಅಳಬೇಡಿರಿ, ನಿಮಗೋಸ್ಕರವೂ ನಿಮ್ಮ ಮಕ್ಕಳಿಗೋಸ್ಕರವೂ ಅಳಿರಿ. ಯಾಕಂದರೆ ಬಂಜೆಯರೂ ಬಸುರಾಗದವರೂ ಮೊಲೆಕುಡಿಸದವರೂ ಧನ್ಯರು ಎಂದು ಜನರು ಹೇಳುವ ದಿವಸಗಳು ಬರುತ್ತವೆ. . . . ಮರ ಹಸಿಯಾಗಿರುವಾಗ ಇಷ್ಟೆಲ್ಲಾ ಮಾಡಿದರೆ ಮರ ಒಣಗಿರುವಾಗ ಏನಾಗಬಹುದು?”

ಯೆಹೂದಿ ಜನಾಂಗದ ಮರಕ್ಕೆ ಸೂಚಿಸಿ ಯೇಸುವು ಮಾತಾಡುತ್ತಾನೆ, ಯೇಸುವು ಇನ್ನು ಇದ್ದುದರಿಂದ ಮತ್ತು ಅವನಲ್ಲಿ ನಂಬಿಕೆ ಇಡುವ ಉಳಿಕೆಯವರು ಇದ್ದುದರಿಂದ ಅದು ಇನ್ನು ಸ್ವಲ್ಪ ಹಸಿಯಾಗಿತ್ತು. ಆದರೆ ಇವರು ಆ ಜನಾಂಗದಿಂದ ತೆಗೆಯಲ್ಪಟ್ಟ ನಂತರ, ಕೇವಲ ಆತ್ಮಿಕವಾಗಿ ಸತ್ತಿರುವ ಮರವು ಉಳಿಯುವದು, ಹೌದು, ಒಣಗಿ ಹೋದ ರಾಷ್ಟ್ರೀಯ ಸಂಸ್ಥಾಪನೆಯೊಂದು ಇರುತ್ತದೆ. ಓ, ದೇವರ ಹತ್ಯಕಾರಿಗಳಾಗಿ ವರ್ತಿಸುತ್ತಾ, ರೋಮನರ ಸೇನೆಗಳು ಯೆಹೂದಿ ಜನಾಂಗವನ್ನು ಧ್ವಂಸ ಮಾಡುವಾಗ ಅಲ್ಲಿ ಗೋಳಾಡಲು ಎಂಥಾ ಒಂದು ಕಾರಣವಿರುವದು! ಯೋಹಾನ 19:6-17; 18:31; ಲೂಕ 23:24-31; ಮತ್ತಾಯ 27:31, 32; ಮಾರ್ಕ 15:20, 21.

▪ ಅವರ ರಾಜಕೀಯ ಆರೋಪಗಳು ನಿರೀಕ್ಷಿತ ಫಲಿತಾಂಶಗಳನ್ನು ತರದಿದ್ದಾಗ ಧಾರ್ಮಿಕ ಮುಖಂಡರು ಯೇಸುವಿನ ವಿರುದ್ಧ ಯಾವ ಆಪಾದನೆಗಳನ್ನು ಹೊರಿಸಿದರು?

▪ ಪಿಲಾತನು ಇನ್ನಷ್ಟು ಭಯಭರಿತನಾದದ್ದು ಯಾಕೆ?

▪ ಯೇಸುವಿಗೆ ಏನು ಸಂಭವಿಸುತ್ತದೋ, ಅದಕ್ಕೆ ಯಾರು ಹೆಚ್ಚು ಪಾಪವನ್ನು ಹೊರುತ್ತಾರೆ?

▪ ಕೊನೆಗೆ, ಕೊಲ್ಲುವಂತೆ ಯೇಸುವನ್ನು ಪಿಲಾತನು ಅವರ ವಶಕ್ಕೆ ಒಪ್ಪಿಸಲು ಯಾಜಕರು ಹೇಗೆ ಶಕ್ತರಾದರು?

▪ ಅವನಿಗಾಗಿ ಗೋಳಾಡುವ ಸ್ತ್ರೀಯರಿಗೆ ಯೇಸುವು ಏನು ಹೇಳುತ್ತಾನೆ ಮತ್ತು ಮರವು “ಹಸಿಯಾಗಿರುವ” ಮತ್ತು ನಂತರ “ಒಣಗಿರುವಾಗ” ಎಂದು ಸೂಚಿಸಿ ಅವನು ಮಾತಾಡಿದ್ದು ಯಾವ ಅರ್ಥದಲ್ಲಿ?