ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಬ್ಬ ಅಸಂಭಾವ್ಯ ಶಿಷ್ಯ

ಒಬ್ಬ ಅಸಂಭಾವ್ಯ ಶಿಷ್ಯ

ಅಧ್ಯಾಯ 45

ಒಬ್ಬ ಅಸಂಭಾವ್ಯ ಶಿಷ್ಯ

ಯೇಸು ತೀರಕ್ಕೆ ಬಂದಿಳಿದಾಗ ಎಂಥ ಭಯಂಕರ ನೋಟ! ಇಬ್ಬರು ಅಸಾಧಾರಣ ಭಯಂಕರವಾಗಿದ್ದ ಪುರುಷರು ಸ್ಮಶಾನದಿಂದ ಅವನ ಬಳಿಗೆ ಓಡಿ ಬರುತ್ತಾರೆ. ಇವರು ದೆವ್ವ ಹಿಡಿದವರು. ಇವರಲ್ಲಿ ಒಬ್ಬನು ಇನ್ನೊಬ್ಬನಿಗಿಂತ ಹೆಚ್ಚು ಹಿಂಸಾತ್ಮಕನೂ ಹೆಚ್ಚು ಕಾಲ ದೆವ್ವ ಪೀಡಿತನೂ ಆಗಿರಬಹುದಾಗಿದ್ದುದರಿಂದ ಅವನು ಹೆಚ್ಚು ಗಮನದ ಕೇಂದ್ರವಾಗುತ್ತಾನೆ.

ಮರುಕ ಹುಟ್ಟಿಸುವ ಈ ಮನುಷ್ಯನು ದೀರ್ಘ ಸಮಯದಿಂದ ನಗ್ನನಾಗಿ ಸಮಾಧಿಗಳ ನಡುವೆ ಜೀವಿಸುತ್ತಿದ್ದನು. ನಿರಂತರವಾಗಿ ಅವನು ರಾತ್ರಿಹಗಲು ಅರಚುತ್ತಾನೆ ಮತ್ತು ಕಲ್ಲಿನಿಂದ ತನ್ನನ್ನು ಸೀಳಿಕೊಳ್ಳುತ್ತಾ ಇದ್ದಾನೆ. ಅವನು ಎಷ್ಟು ಹಿಂಸಾ ಪ್ರವೃತ್ತಿಯವನೆಂದರೆ ಆ ದಾರಿಯಾಗಿ ಹೋಗಲು ಯಾರಿಗೂ ಧೈರ್ಯವಿರಲಿಲ್ಲ. ಅವನನ್ನು ಕಟ್ಟಿಹಾಕಲು ಪ್ರಯತ್ನಗಳು ನಡೆದಿವೆ, ಆದರೆ ಅವನು ಸರಪಣಿ ಮುರಿದು ಕಾಲಿಗೆ ಹಾಕಿದ ಬೇಡಿಗಳನ್ನು ಕಿತ್ತು ಬಿಡುತ್ತಾನೆ. ಅವನನ್ನು ಅಂಕೆಯಲ್ಲಿಡುವ ಶಕ್ತಿ ಯಾರಿಗೂ ಇರಲಿಲ್ಲ.

ಆ ಮನುಷ್ಯನು ಯೇಸುವನ್ನು ಸಮೀಪಿಸಿ ಪಾದಗಳ ಬಳಿ ಬೀಳುವಾಗ ಅವನನ್ನು ಹಿಡಿದಿರುವ ದೆವ್ವಗಳು ಅವನು ಹೀಗೆ ಆರ್ಭಟಿಸುವಂತೆ ಮಾಡುತ್ತವೆ: “ಯೇಸುವೇ, ಪರಾತ್ಪರನಾದ ದೇವರ ಮಗನೇ, ನನ್ನ ಗೊಡವೆ ನಿನಗೇಕೆ? ದೇವರಾಣೆ, ನನ್ನನ್ನು ಕಾಡಬೇಡ.”

“ಎಲಾ ದೆವ್ವಾ, ಇವನನ್ನು ಬಿಟ್ಟುಹೋಗು” ಎಂದು ಯೇಸು ಹೇಳುತ್ತಾ ಇದ್ದಾನೆ. ಬಳಿಕ ಯೇಸು “ನಿನ್ನ ಹೆಸರೇನು?” ಎಂದು ಕೇಳುತ್ತಾನೆ.

“ನನ್ನ ಹೆಸರು ದಂಡು; ಯಾಕಂದರೆ ನಾವು ಬಹು ಮಂದಿ ಇದ್ದೇವೆ” ಎಂದು ಉತ್ತರ ಬರುತ್ತದೆ. ತಾವು ಸ್ವಾಧೀನ ಪಡಿಸ ಸಾಧ್ಯವಿರುವವರ ಕಷ್ಟಾನುಭವವನ್ನು ನೋಡುವದು ದೆವ್ವಗಳಿಗೆ ಅತಿ ಇಷ್ಟ. ಇಂಥವರ ಮೇಲೆ ತಂಡವಾಗಿ ಬಿದ್ದು ಉಪದ್ರವಕೊಡುವ ಭಾವದಿಂದ ಕಾಡಿಸುವುದು ಅವುಗಳಿಗೆ ಬಹಳ ಉಲ್ಲಾಸವೆಂಬದು ವ್ಯಕ್ತ. ಆದರೆ ಯೇಸುವಿನಿಂದ ಎದುರಿಸಲ್ಪಟ್ಟಾಗ, ಅವು ತಮ್ಮನ್ನು ಅಧೋಲೋಕಕ್ಕೆ ಕಳುಹಿಸಬಾರದೆಂದು ಬೇಡಿಕೊಳ್ಳುತ್ತವೆ. ಇಂಥ ಕ್ರೂರ ದೆವ್ವಗಳನ್ನು ಸಹಾ ಜಯಿಸಲು ಯೇಸುವಿಗಿರುವ ಮಹಾ ಶಕ್ತಿಯನ್ನು ನಾವು ಪುನಃ ನೋಡುತ್ತೇವೆ. ತಮ್ಮ ನಾಯಕನಾದ ಪಿಶಾಚ ಸೈತಾನನೊಂದಿಗೆ ಅಧೋಲೋಕಕ್ಕೆ ತಳ್ಳಲ್ಪಡುವದೇ ತಮಗಿರುವ ದೇವರ ಅಂತಿಮ ತೀರ್ಪು ಎಂಬುದನ್ನು ದೆವ್ವಗಳು ತಿಳಿದಿವೆ ಎಂದೂ ಇದು ತೋರಿಸುತ್ತದೆ.

ಹತ್ತಿರದ ಬೆಟ್ಟದಲ್ಲಿ ಸುಮಾರು ಎರಡು ಸಾವಿರ ಹಂದಿಗಳು ಮೇಯುತ್ತಿದ್ದವು. ಆಗ ದೆವ್ವಗಳು “ಆ ಹಂದಿಗಳೊಳಗೆ ಸೇರಿ ಕೊಳ್ಳುವದಕ್ಕೆ ನಮ್ಮನ್ನು ಕಳುಹಿಸಿಕೊಡು” ಎಂದು ಕೇಳಿಕೊಳ್ಳುತ್ತವೆ. ಮಾಂಸಿಕ ಪ್ರಾಣಿಗಳ ಶರೀರವನ್ನು ಆಕ್ರಮಿಸುವದರಲ್ಲಿ ದೆವ್ವಗಳಿಗೆ ಅಸ್ವಾಭಾವಿಕವಾದ ವಿಕಾರೋಲ್ಲಾಸ ದೊರೆಯುತ್ತದೆಂದು ಇದು ಸ್ಪಷ್ಟ ಪಡಿಸುತ್ತದೆ. ಹಂದಿಗಳನ್ನು ಸೇರಿಕೊಳ್ಳಲು ಯೇಸು ಅನುಮತಿಸಿದಾಗ, 2,000 ಹಂದಿಗಳೂ ದಿಕ್ಕುಪಾಲಾಗಿ ಓಡಿ ಬೆಟ್ಟದ ತುದಿಯಿಂದ ಸಮುದ್ರಕ್ಕೆ ಹಾರಿ ಮುಳುಗಿ ಸಾಯುತ್ತವೆ.

ಹಂದಿ ಮೇಯಿಸುವವರು ಇದನ್ನು ನೋಡಿದಾಗ ಪಟ್ಟಣಕ್ಕೆ ಮತ್ತು ಗ್ರಾಮ ಪ್ರದೇಶಕ್ಕೆ ಧಾವಿಸಿ ಈ ಸುದ್ದಿಯನ್ನು ತಿಳಿಸುತ್ತಾರೆ. ಆಗ ಅಲ್ಲಿಯ ಜನರು ನಡೆದದ್ದೇನೆಂದು ನೋಡಲು ಅಲ್ಲಿಗೆ ಬರುತ್ತಾರೆ. ಅವರು ಬಂದಾಗ, ದೆವ್ವ ಬಿಟ್ಟು ಹೋಗಿದ್ದ ಆ ಮನುಷ್ಯನು ಬಟ್ಟೆ ತೊಟ್ಟವನೂ ಸ್ವಸ್ಥಬುದ್ಧಿಯವನೂ ಆಗಿ ಯೇಸುವಿನ ಪಾದಗಳ ಬಳಿ ಕೂತಿರುವದನ್ನು ನೋಡುತ್ತಾರೆ!

ಪ್ರತ್ಯಕ್ಷ ಸಾಕ್ಷಿಗಳು ಆ ಮನುಷ್ಯನು ಹೇಗೆ ಸ್ವಸ್ಥನಾದನೆಂದು ಜನರಿಗೆ ತಿಳಿಸುತ್ತಾರೆ. ಹಂದಿಗಳ ವಿಲಕ್ಷಣ ರೀತಿಯ ಸಾವನ್ನೂ ಅವರು ತಿಳಿಸುತ್ತಾರೆ. ಇದನ್ನು ಕೇಳಿದ ಜನರಿಗೆ ಮಹಾ ಭಯ ಹಿಡಿಯುವದರಿಂದ, ಯೇಸು ಆ ಪ್ರದೇಶವನ್ನು ಬಿಟ್ಟು ಹೋಗುವಂತೆ ಅವರು ಮನಃಪೂರ್ವಕವಾಗಿ ಕೇಳಿಕೊಳ್ಳುತ್ತಾರೆ. ಅವನು ಒಪ್ಪಿ ದೋಣಿ ಹತ್ತುತ್ತಾನೆ. ಮಾಜಿ ಉನ್ಮತ್ತನು ತಾನೂ ಯೇಸುವಿನ ಸಂಗಡ ಬರಲು ಬಿಡಬೇಕೆಂದು ಕೇಳಿಕೊಳ್ಳುತ್ತಾನೆ. ಆದರೆ ಯೇಸು ಹೇಳುವದು: “ನೀನು ನಿನ್ನ ಮನೆಗೂ ನಿನ್ನ ಜನರ ಬಳಿಗೂ ಹೋಗಿ ಸ್ವಾಮಿಯು (ಯೆಹೋವ NW) ನಿನ್ನಲ್ಲಿ ಕರುಣೆ ಇಟ್ಟು ನಿನಗೆ ಎಂಥೆಂಥ ಉಪಕಾರಗಳನ್ನು ಮಾಡಿದ್ದಾನೋ ಅದನ್ನು ಹೇಳು.”

ಯೇಸು ಸಾಧಾರಣವಾಗಿ ತಾನು ಗುಣಪಡಿಸಿದವರನ್ನು ಅವರು ಅದನ್ನು ಯಾರಿಗೂ ತಿಳಿಸಬಾರದೆಂದು ಹೇಳುವದುಂಟು. ಏಕೆಂದರೆ ಜನರು ಭಾವೋದ್ರೇಕಕಾರಿ ವರದಿಗಳಿಂದಾಗಿ ನಿರ್ಣಯ ಮಾಡುವುದು ಅವನಿಗೆ ಇಷ್ಟವಿಲ್ಲ. ಆದರೆ ಇಲ್ಲಿ ಇವನಿಗೆ ವಿನಾಯಿತಿ ಸಮಂಜಸ, ಏಕೆಂದರೆ ಈ ಮಾಜಿ ದೆವ್ವೋನ್ಮತ್ತನು ಸಾಕ್ಷಿ ನೀಡಬಲ್ಲ ಜನರನ್ನು ತಲಪಲು ಯೇಸುವಿಗೆ ಪ್ರಾಯಶಃ ಸಂದರ್ಭವಿರಲಿಕ್ಕಿಲ್ಲ. ಇದಲ್ಲದೆ, ಆ ಮನುಷ್ಯನ ಹಾಜರಿಯು ಒಳ್ಳೆಯದನ್ನು ಮಾಡಲು ಯೇಸುವಿಗಿರುವ ಶಕ್ತಿಗೆ ಸಾಕ್ಷಿ ನೀಡುವದು ಮತ್ತು ಹಂದಿಗಳ ನಷ್ಟದ ಕಾರಣ ಹರಡಬಹುದಾಗಿದ್ದ ಅಹಿತಕರ ವರದಿಯನ್ನು ಅದು ಹಿಮ್ಮೆಟ್ಟಿಸುವದು.

ಯೇಸುವಿನ ಹೇಳಿಕೆಯಂತೆ ಆ ಮಾಜಿ ದೆವ್ವೋನ್ಮತ್ತನು ಹೊರಟು ಹೋಗುತ್ತಾನೆ. ಅವನು ದೆಕಪೊಲಿ ಪ್ರದೇಶದಲ್ಲೆಲ್ಲಾ ಯೇಸು ತನಗೆ ಮಾಡಿದ ವಿಷಯಗಳನ್ನೆಲ್ಲಾ ತಿಳಿಸಲಾರಂಭಿಸುತ್ತಾನೆ, ಮತ್ತು ಜನರು ಆಶ್ಚರ್ಯ ಪಡುತ್ತಾರೆ. ಮತ್ತಾಯ 8:28-34; ಮಾರ್ಕ 5:1-20; ಲೂಕ 8:26-39; ಪ್ರಕಟನೆ 20:1-3.

▪ ಇಬ್ಬರು ದೆವ್ವ ಹಿಡಿದವರು ಅಲ್ಲಿದ್ದಾಗ ಒಬ್ಬನ ಮೇಲೆ ಪ್ರಾಯಶಃ ಹೆಚ್ಚು ಗಮನವು ಏಕೆ ಕೇಂದ್ರಿಸಲ್ಪಟ್ಟಿದೆ?

▪ ದೆವ್ವಗಳಿಗೆ ಭಾವೀ ಅಧೋಲೋಕ ವಾಸದ ಕುರಿತು ತಿಳಿದಿದೆಯೆಂದು ಯಾವುದು ತೋರಿಸುತ್ತದೆ?

▪ ದೆವ್ವಗಳು ಮನುಷ್ಯರನ್ನೂ ಪ್ರಾಣಿಗಳನ್ನೂ ಹೊಗ್ಗಲು ಇಷ್ಟಪಡುವದು ಏಕೆಂದು ವ್ಯಕ್ತವಾಗುತ್ತದೆ?

▪ ಯೇಸು ತಾನು ಮಾಡಿದ್ದನ್ನು ಇತರರಿಗೆ ತಿಳಿಸುವಂತೆ ಹೇಳಿದ ಮೂಲಕ ಆ ಮಾಜಿ ದೆವ್ವೋನ್ಮತ್ತನ ವಿಷಯದಲ್ಲಿ ವಿನಾಯಿತಿ ಮಾಡಿದ್ದೇಕೆ?