ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಂಭದ ಮೇಲೆ ಯಾತನೆ

ಕಂಭದ ಮೇಲೆ ಯಾತನೆ

ಅಧ್ಯಾಯ 125

ಕಂಭದ ಮೇಲೆ ಯಾತನೆ

ಯೇಸುವಿನೊಂದಿಗೆ ಇಬ್ಬರು ಕಳ್ಳರನ್ನು ಕೊಲ್ಲುವದಕ್ಕಾಗಿ ಕೊಂಡೊಯ್ದರು. ಪಟ್ಟಣದಿಂದ ಅನತಿ ದೂರದಲ್ಲಿ, ಗೊಲ್ಗೊಥಾ ಯಾ ಕಪಾಲಸ್ಥಳವೆಂದು ಕರೆಯಲ್ಪಡುವಲ್ಲಿ ಮೆರವಣಿಗೆಯು ನಿಂತಿತು.

ಅಲ್ಲಿ ಸೆರೆಹಿಡಿದವರ ಬಟ್ಟೆಗಳನ್ನು ತೆಗೆಯಲಾಯಿತು. ಅನಂತರ ರಕ್ತಬೋಳ ಬೆರಸಿದ ದ್ರಾಕ್ಷಾರಸವನ್ನು ಕೊಟ್ಟರು. ಇದು ಯೆರೂಸಲೇಮಿನ ಸ್ತ್ರೀಯರು ತಯಾರಿಸಿದ್ದಿರಬೇಕು, ಮತ್ತು ವಧಾಸ್ತಂಭಕ್ಕೆ ಏರಲಿರುವವರಿಗೆ ಈ ನೋವು-ನಿವಾರಕ ಮಿಶ್ರಣವನ್ನು ಕೊಡುವದನ್ನು ರೋಮನರು ನಿರಾಕರಿಸತ್ತಿರಲಿಲ್ಲ. ಆದಾಗ್ಯೂ, ಯೇಸುವು ರುಚಿ ನೋಡಿ ಕುಡಿಯಲು ನಿರಾಕರಿಸಿದನು. ಯಾಕೆ? ಅವನ ನಂಬಿಕೆಯ ಈ ಅತಿ ಶ್ರೇಷ್ಠ ಪರೀಕ್ಷೆಯ ಸಮಯದಲ್ಲಿ, ಅವನ ಎಲ್ಲಾ ಸಹಜ ಮನ ಶಕ್ತಿಗಳು ಅವನ ಪೂರ್ಣ ಸ್ವಾಧೀನದಲ್ಲಿರುವಂತೆ ಅವನು ಬಯಸಿದನು.

ಅವನ ತಲೆಯ ಮೇಲೆ ಎಳೆಯಲ್ಪಟ್ಟ ಕೈಗಳಿದ್ದು ಕಂಭದ ಮೇಲೆ ಈಗ ಯೇಸುವು ತೂಗುತ್ತಿದ್ದನು. ಸಿಪಾಯಿಗಳು ಈಗ ಅವನ ಹಸ್ತಗಳೊಳಗೆ ಮತ್ತು ಅವನ ಕಾಲುಗಳೊಳಗೆ ದೊಡ್ಡ ಮೊಳೆಗಳನ್ನು ಜಡಿಯುತ್ತಾರೆ. ಅವನ ಮಾಂಸ ಮತ್ತು ತಂತುಕಟ್ಟುಗಳನ್ನು [ಲಿಗಾಮೆಂಟ್ಸ್‌] ಮೊಳೆಗಳು ತೂರಿಹೋದಾಗ ಅವನು ನೋವಿನಿಂದ ನರಳುತ್ತಾನೆ. ಕಂಭವನ್ನು ಮೇಲ್ಮುಖವಾಗಿ ನೇರಗೊಳಿಸಿದಾಗ, ದೇಹದ ಭಾರವು ಮೊಳೆಗಳ ಗಾಯಗಳನ್ನು ಬಗಿದು ಹಾಕುವುದರಿಂದ ತಾಳಲಾರದ ನೋವು. ಆದರೂ, ಬೆದರಿಕೆಯನ್ನೊಡ್ಡುವ ಬದಲು, ಯೇಸುವು ರೋಮನ್‌ ಸಿಪಾಯಿಗಳಿಗೋಸ್ಕರ ಪ್ರಾರ್ಥಿಸುತ್ತಾನೆ: “ತಂದೆಯೇ, ಅವರಿಗೆ ಕ್ಷಮಿಸು; ತಾವು ಏನು ಮಾಡುತ್ತೇವೆಂಬದನ್ನು ಅರಿಯರು.”

ಪಿಲಾತನು ಈ ರೀತಿ ಓದಲ್ಪಡುವ ಒಂದು ಸೂಚಿಕೆಯನ್ನು ಬರೆದು ಕಂಭದ ಮೇಲ್ಗಡೆ ಹಚ್ಚಿದನು: “ನಜರೇತಿನ ಯೇಸು, ಯೆಹೂದ್ಯರ ಅರಸನು.” ಇದನ್ನು ಆತನು ಬರೆದದ್ದು ಯಾಕಂದರೆ ಅವನು ಯೇಸುವನ್ನು ಗೌರವಿಸಿದರಿಂದ ಮಾತ್ರವಲ್ಲ, ಅವನಿಂದ ಯೇಸುವಿನ ಮರಣವನ್ನು ಅವರು ಹಿಂಡಿಪಡೆದದ್ದರಿಂದಲೂ ಅವನು ಯೆಹೂದಿ ಯಾಜಕರನ್ನು ಹೇಸುತ್ತಿದ್ದನು. ಎಲ್ಲರೂ ಫಲಕವನ್ನು ಓದಲಾಗುವಂತೆ ಪಿಲಾತನು ಅದನ್ನು ಮೂರು ಭಾಷೆಗಳಲ್ಲಿ ಬರಸಿದನು—ಇಬ್ರಿಯ, ಅಧಿಕೃತ ಲಾತೀನ್‌ ಮತ್ತು ಸಾಮಾನ್ಯ ಗ್ರೀಕ್‌.

ಕಾಯಫ ಮತ್ತು ಅನ್ನನ ಸಹಿತ ಮಹಾ ಯಾಜಕರು ಇದರಿಂದ ನಿರುತ್ಸಾಹಗೊಂಡರು. ಅವರ ವಿಜಯದ ಗಳಿಗೆಯನ್ನು ಈ ನಿರ್ಧಾರಕ ಘೋಷಣೆಯು ಹಾಳುಗೆಡವಿತು. ಆದಕಾರಣ ಅವರು ಪ್ರತಿಭಟಿಸುವದು: “ಯೆಹೂದ್ಯರ ಅರಸನು ಎಂದು ಬರೆಯದೆ ನಾನು ಯೆಹೂದ್ಯರ ಅರಸನೆಂದು ಹೇಳಿದವನು ಎಂಬದಾಗಿ ಬರೆಯಬೇಕು.” ಯಾಜಕರ ಒತ್ತೆಯೋಪಾದಿ ಸಿಕ್ಕಿಬಿದ್ದು ಕಾರ್ಯ ನಡಿಸಿದ್ದರಿಂದ ಹೊರಬಂದು, ದೃಢ ತಿರಸ್ಕಾರದಿಂದ ಪಿಲಾತನು ಉತ್ತರಿಸುವದು: “ನಾನು ಬರೆದದ್ದು ಬರೆದಾಯಿತು.”

ವಧಿಸಲ್ಪಟ್ಟ ಸ್ಥಳದಲ್ಲಿ ಈಗ ಜನರ ದೊಡ್ಡ ಗುಂಪಿನೊಟ್ಟಿಗೆ ಯಾಜಕರು ಒಟ್ಟಾಗಿ ಸೇರಿದರು ಮತ್ತು ಯಾಜಕರು ಫಲಕ ಸಾಕ್ಷ್ಯವನ್ನು ಅಲ್ಲಗಳೆಯುತ್ತಿದ್ದರು. ಮೊದಲು ಸನ್ಹೇದ್ರಿನ್‌ನ ವಿಚಾರಣೆಗಳಲ್ಲಿ ಕೊಡಲ್ಪಟ್ಟ ಸುಳ್ಳು ಸಾಕ್ಷ್ಯಗಳನ್ನು ಅವರು ಪುನರುಚ್ಛರಿಸುತ್ತಿದ್ದರು. ಆದಕಾರಣ, ಹಾದುಹೋಗುವವರು ಹಂಗಿಸಿ ಮಾತಾಡುತ್ತಾ, ತಲೇ ಆಡಿಸುತ್ತಾ, ಹೀಗೆ ಹೇಳಿದ್ದರಲ್ಲಿ ಆಶ್ಚರ್ಯವೇನೂ ಇರಲಿಲ್ಲ: “ಆಹಾ, ದೇವಾಲಯವನ್ನು ಕೆಡವಿ ಮೂರು ದಿನಗಳಲ್ಲಿ ಕಟ್ಟುವವನೇ, ನಿನ್ನನ್ನು ರಕ್ಷಿಸಿಕೋ; ದೇವರ ಮಗನು ಆಗಿದ್ದರೆ ಯಾತನೆಯ ಕಂಭದಿಂದ ಇಳಿದು ಬಾ!”

“ಅವನು ಮತ್ತೊಬ್ಬರನ್ನು ರಕ್ಷಿಸಿದನು, ತನ್ನನ್ನು ರಕ್ಷಿಸಿಕೊಳ್ಳಲಾರನು!” ಮಹಾ ಯಾಜಕರೂ ಅವರ ಧಾರ್ಮಿಕ ಗೆಳೆಯರೂ ಅದಕ್ಕೆ ಧ್ವನಿಗೂಡಿಸಿದರು. “ಅವನು ಇಸ್ರಾಯೇಲಿನ ಅರಸನಲ್ಲವೇ. ಈಗ ಯಾತನೆಯ ಕಂಭದಿಂದ ಇಳಿದು ಬರಲಿ, ಇಳಿದು ಬಂದರೆ ಅವನಲ್ಲಿ ಭರವಸಯಿಟ್ಟೀವು. ದೇವರಲ್ಲಿ ಭರವಸವಿಟ್ಟಿದ್ದಾನೆ, ದೇವರು ಅವನಲ್ಲಿ ಇಷ್ಟ ಪಟ್ಟರೆ ಈಗ ಅವನನ್ನು ಬಿಡಿಸಲಿ; ತಾನು ದೇವರ ಮಗನಾಗಿದ್ದೇನೆಂದು ಹೇಳಿದನಲ್ಲಾ.”

ಈ ಆತ್ಮದಲ್ಲಿ ಸಿಪಾಯಿಗಳೂ ಸೇರ್ಪಡೆಗೊಂಡು, ಯೇಸುವನ್ನು ಗೇಲಿ ಮಾಡಲಾರಂಭಿಸಿದರು. ಅವರು ಆತನಿಗೆ ಹಾಸ್ಯಮಾಡುವ ರೀತಿಯಲ್ಲಿ ಹುಳಿಮದ್ಯವನ್ನು, ಪ್ರಾಯಶಃ ಅದನ್ನು ಅವನ ಒಣಗಿದ ತುಟಿಗಳಿಂದ ಸ್ವಲ್ಪ ದೂರದಲ್ಲಿ ಹಿಡಿದುಕೊಂಡು ಅವನಿಗೆ ನೀಡಿದರು. “ನೀನು ಯೆಹೂದ್ಯರ ಅರಸನಾಗಿದ್ದರೆ,” ಅವರು ಅಣಕಿಸುವದು, “ನಿನ್ನನ್ನು ರಕ್ಷಿಸಿಕೋ.” ಕಳ್ಳರು ಕೂಡ—ಒಬ್ಬನು ಯೇಸುವಿನ ಬಲಗಡೆಯಲ್ಲಿ ಮತ್ತು ಇನ್ನೊಬ್ಬನು ಎಡಗಡೆಯಲ್ಲಿ ತೂಗಹಾಕಲ್ಪಟ್ಟಿದ್ದು—ಅವನನ್ನು ದೂಷಿಸಿದರು. ಅದರ ಕುರಿತು ಯೋಚಿಸಿರಿ! ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ ಪುರುಷನು, ಹೌದು, ಎಲ್ಲಾ ವಸ್ತುಗಳನ್ನು ಸೃಷ್ಟಿಸುವದರಲ್ಲಿ ಯೆಹೋವ ದೇವರೊಂದಿಗೆ ಸಹಭಾಗಿಯಾದವನು, ನಿರ್ಧಾರಾತ್ಮದಿಂದ ಈ ಎಲ್ಲಾ ದೂಷಣೆಗಳನ್ನು ಅನುಭವಿಸುತ್ತಾನೆ!

ಯೇಸುವಿನ ಮೇಲುಹೊದಿಕೆಯನ್ನು ಸಿಪಾಯಿಗಳು ತಕ್ಕೊಂಡು ತಮ್ಮೊಳಗೆ ನಾಲ್ಕು ಪಾಲು ಮಾಡಿಕೊಂಡು ಹಂಚುತ್ತಾರೆ. ಯಾರ್ಯಾರಿಗೆ ಯಾವ ಯಾವ ಪಾಲು ಬರುವಂತೆ ನೋಡಲು ಅವರು ಚೀಟುಹಾಕಿದರು. ಆದರೆ, ಒಳಂಗಿಯು ಯಾವುದೇ ಹೊಲಿಗೆಯಿರದೆ ಅಖಂಡವಾಗಿದ್ದು, ಶ್ರೇಷ್ಠ ಗುಣ ಮಟ್ಟದ್ದಾಗಿತ್ತು. ಆದುದರಿಂದ ಸಿಪಾಯಿಗಳು ತಮ್ಮೊಳಗೆ ಮಾತಾಡಿಕೊಂಡರು: “ನಾವು ಇದನ್ನು ಹರಿಯಬಾರದು; ಚೀಟು ಹಾಕಿ ಯಾರಿಗೆ ಬರುವದೋ ನೋಡೋಣ.” ಈ ರೀತಿಯಲ್ಲಿ ಅವರಿಗೆ ತಿಳಿಯದೇ, ಶಾಸ್ತ್ರದ ಮಾತನ್ನು ಅವರು ನೆರವೇರಿಸುತ್ತಾರೆ: “ನನ್ನ ಮೇಲುಹೊದಿಕೆಯನ್ನು ತಮ್ಮಲ್ಲಿ ಪಾಲುಮಾಡಿಕೊಂಡರು, ಮತ್ತು ನನ್ನ ಅಂಗಿಗೋಸ್ಕರ ಚೀಟುಹಾಕಿದರು.”(NW)

ತಕ್ಕ ಸಮಯದಲ್ಲಿ ಒಬ್ಬ ಕಳ್ಳನು ಯೇಸುವು ನಿಜವಾಗಿಯೂ ಒಬ್ಬ ಅರಸನೆಂದು ಗಣ್ಯ ಮಾಡಲಾರಂಭಿಸಿದನು. ಆದಕಾರಣ, ಅವನ ಜತೆಯವನಿಗೆ ಗದರಿಸುತ್ತಾ ಅವನು ಹೇಳುವದು: “ನೀನು ಇದೇ ದಂಡನೆಯಲ್ಲಿರುವಾಗಲೂ ದೇವರಿಗೆ ಹೆದರುವದಿಲ್ಲವೋ? ನಾವಂತೂ ನ್ಯಾಯವಾಗಿ ದಂಡನೆಯಲ್ಲಿದ್ದೇವೆ, ನಾವು ಮಾಡಿದ್ದಕ್ಕೆ ತಕ್ಕ ಪ್ರತಿಫಲವನ್ನು ಹೊಂದುತ್ತಾ ಇದ್ದೇವೆ; ಈತನಾದರೋ ಅಲ್ಲದದ್ದೇನೂ ಮಾಡಲಿಲ್ಲ.” ಅನಂತರ ಯೇಸುವಿಗೆ ಸಂಬೋಧಿಸುತ್ತಾ ಅವನು ವಿನಂತಿಸುವದು: “ನೀನು ನಿನ್ನ ರಾಜ್ಯವನ್ನು ಪಡೆದವನಾಗಿ ಬರುವಾಗ ನನ್ನನ್ನು ನೆನಸಿಕೋ.”

“ಈ ಹೊತ್ತೇ ನಿನಗೆ ಸತ್ಯವಾಗಿ ನಾನು ಹೇಳುತ್ತೇನೆ,” ಯೇಸುವು ಉತ್ತರಿಸುವದು, “ನನ್ನ ಸಂಗಡ ಪರದೈಸದಲ್ಲಿರುವಿ.” ಪರಲೋಕದಲ್ಲಿ ಯೇಸುವು ರಾಜನಾಗಿ ಆಳುತ್ತಿರುವಾಗ, ಅರ್ಮಗೆದ್ದೋನ್‌ ಪಾರಾದವರು ಮತ್ತು ಅವರ ಸಂಗಡಿಗರು ವ್ಯವಸಾಯ ಮಾಡಲಿರುವ ಪರದೈಸದಲ್ಲಿ ಭೂಮಿಯ ಮೇಲಿನ ಜೀವಿತಕ್ಕೆ, ಈ ಪಶ್ಚಾತ್ತಾಪ ಪಟ್ಟ ದುಷ್ಕರ್ಮಿಯು ಪುನರುತ್ಥಾನಗೊಳಿಸಲ್ಪಡುವಾಗ, ಈ ವಾಗ್ದಾನವು ನೆರವೇರಲ್ಪಡಲಿರುವದು. ಮತ್ತಾಯ 27:33-44; ಮಾರ್ಕ 15:22-32; ಲೂಕ 23:27, 32-43; ಯೋಹಾನ 19:17-24.

▪ ರಕ್ತಬೋಳ ಮಿಶ್ರಿತ ದ್ರಾಕ್ಷಾರಸವನ್ನು ಕುಡಿಯಲು ಯೇಸುವು ನಿರಾಕರಿಸಿದ್ದು ಯಾಕೆ?

▪ ಯೇಸುವಿನ ಕಂಭದ ಮೇಲೆ ಸೂಚಿಕೆ ಯಾಕೆ ಹಚ್ಚಿರಬಹುದೆಂದು ಸ್ಪಷ್ಟವಾಗಿಗುತ್ತದೆ ಮತ್ತು ಅದು ಪಿಲಾತ ಮತ್ತು ಮಹಾ ಯಾಜಕರುಗಳ ನಡುವೆ ಯಾವ ವಿನಿಮಯಕ್ಕೆ ನಡಿಸಿತು?

▪ ಕಂಭದಲ್ಲಿರುವಾಗ ಇನ್ನು ಹೆಚ್ಚಿನ ಯಾವ ದೂಷಣೆಗಳನ್ನು ಯೇಸುವು ಪಡೆದನು, ಮತ್ತು ಇದನ್ನು ಪ್ರೇರಿಸಿದ್ದು ಯಾವದೆಂದು ತೋಚುತ್ತದೆ?

▪ ಯೇಸುವಿನ ಬಟ್ಟೆಗಳಿಗೆ ಏನು ಮಾಡಲಾಯಿತೋ, ಅದರಿಂದ ಪ್ರವಾದನೆಯು ಹೇಗೆ ನೆರವೇರಿಸಲ್ಪಟ್ಟಿತು?

▪ ಕಳ್ಳರಲ್ಲಿ ಒಬ್ಬನು ಯಾವ ಪರಿವರ್ತನೆ ಮಾಡಿದನು, ಮತ್ತು ಯೇಸುವು ಅವನ ವಿನಂತಿಯನ್ನು ಹೇಗೆ ನೆರವೇರಿಸಲಿರುವನು?