ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಪೆರ್ನೌಮಿನಲ್ಲಿ ಇನ್ನೂ ಹೆಚ್ಚು ಅದ್ಭುತಗಳು

ಕಪೆರ್ನೌಮಿನಲ್ಲಿ ಇನ್ನೂ ಹೆಚ್ಚು ಅದ್ಭುತಗಳು

ಅಧ್ಯಾಯ 23

ಕಪೆರ್ನೌಮಿನಲ್ಲಿ ಇನ್ನೂ ಹೆಚ್ಚು ಅದ್ಭುತಗಳು

ಯೇಸು ತನ್ನ ಪ್ರಥಮ ನಾಲ್ವರು ಶಿಷ್ಯರುಗಳಾದ ಪೇತ್ರ, ಅಂದ್ರೆಯ, ಯಾಕೋಬ ಮತ್ತು ಯೋಹಾನರನ್ನು ಕರೆದ ಬಳಿಕ ಸಬ್ಬತ್‌ ದಿನದಲ್ಲಿ ಅವರೆಲ್ಲರೂ ಕಪೆರ್ನೌಮಿನ ಸ್ಥಳೀಯ ಸಭಾಮಂದಿರಕ್ಕೆ ಹೋಗುತ್ತಾರೆ. ಅಲ್ಲಿ ಯೇಸು ಕಲಿಸತೊಡಗುತ್ತಾನೆ, ಮತ್ತು ಇದು ಜನರನ್ನು ಆಶ್ಚರ್ಯಗೊಳಿಸುತ್ತದೆ, ಏಕಂದರೆ ಅವನು ಶಾಸ್ತ್ರಿಗಳಂತೆ ಅಲ್ಲ, ಅಧಿಕಾರವಿದ್ದವನಂತೆ ಕಲಿಸುತ್ತಾನೆ.

ಈ ಸಬ್ಬತ್‌ ದಿನದಲ್ಲಿ ದೆವ್ವ ಹಿಡಿದ ಮನುಷ್ಯನೊಬ್ಬನು ಅಲ್ಲಿದ್ದಾನೆ. ಸ್ವಲ್ಪ ಸಮಯದ ನಂತರ ಅವನು ಗಟ್ಟಿಯಾದ ಶಬ್ದದಿಂದ ಹೀಗೆ ಕೂಗುತ್ತಾನೆ: “ನಜರೇತಿನ ಯೇಸುವೇ, ನಮ್ಮ ಗೊಡವೆ ನಿನಗೇಕೆ? ನಮ್ಮನ್ನು ನಾಶ ಮಾಡುವದಕ್ಕೆ ಬಂದೆಯಾ? ನಿನ್ನನ್ನು ಬಲ್ಲೆನು; ನೀನು ದೇವರು ಪ್ರತಿಷ್ಠಿಸಿದವನೇ.”

ಈ ಮನುಷ್ಯನನ್ನು ವಶಮಾಡಿಕೊಂಡಿದ್ದ ದೆವ್ವವು ನಿಜವಾಗಿಯೂ ಸೈತಾನನ ದೂತರಲ್ಲಿ ಒಬ್ಬನಾಗಿದ್ದನು. ಯೇಸು ದೆವ್ವವನ್ನು ಗದರಿಸಿ, ಹೇಳಿದ್ದು: “ಸುಮ್ಮನಿರು, ಇವನನ್ನು ಬಿಟ್ಟುಹೋಗು!”

ಒಳ್ಳೇದು, ದೆವ್ವವು ಆ ಮನುಷ್ಯನನ್ನು ಒದ್ದಾಡಿಸಿ ಅಬ್ಬರಿಸಿ ಕೂಗುತ್ತದೆ. ಆದರೆ ಅವನಿಗೆ ಹಾನಿಯನ್ನುಂಟುಮಾಡದೆ ಅದು ಹೊರಗೆ ಬರುತ್ತದೆ. ಎಲ್ಲರೂ ಆಶ್ಚರ್ಯಗೊಳ್ಳುತ್ತಾರೆ! “ಇದೇನಿರಬಹುದು?” ಅವರು ಪ್ರಶ್ನಿಸುತ್ತಾರೆ. “ಈತನು ಅಧಿಕಾರದಿಂದ ದುಷ್ಟಾತ್ಮಗಳಿಗೂ ಅಪ್ಪಣೆ ಕೊಡುತ್ತಾನೆ; ಅವು ಆತನ ಮಾತನ್ನು ಕೇಳುತ್ತವೆ.” ಇದರ ಕುರಿತಾದ ವಾರ್ತೆಯು ಸುತ್ತಮುತ್ತಲಿನ ಪ್ರದೇಶದಲ್ಲೆಲ್ಲಾ ಹರಡುತ್ತದೆ.

ಸಭಾಮಂದಿರವನ್ನು ಬಿಟ್ಟು ಯೇಸು ಮತ್ತು ಅವನ ಶಿಷ್ಯರು ಸೀಮೋನನ ಅಥವಾ ಪೇತ್ರನ ಮನೆಗೆ ಹೋಗುತ್ತಾರೆ. ಅಲ್ಲಿ ಪೇತ್ರನ ಅತೆಯ್ತು ತುಂಬಾ ಜ್ವರದಿಂದ ತೀರಾ ಕಾಯಿಲೆ ಬಿದ್ದಿದ್ದಾಳೆ. ‘ಅವಳಿಗೆ ದಯವಿಟ್ಟು ಸಹಾಯ ಮಾಡು’ ಎಂದು ಅವರು ಬೇಡುತ್ತಾರೆ. ಆಗ ಯೇಸು ಹೋಗಿ ಆಕೆಯ ಕೈಯನ್ನು ಹಿಡಿದು ಎಬ್ಬಿಸುತ್ತಾನೆ. ಒಡನೆ ಅವಳು ಸ್ವಸ್ಥಳಾಗಿ ಅವರಿಗೆ ಊಟ ಸಿದ್ಧ ಮಾಡುತ್ತಾಳೆ!

ಆ ಬಳಿಕ, ಸೂರ್ಯನು ಅಸ್ತಮಿಸಿದ ಮೇಲೆ ಜನರು ಎಲ್ಲಾ ಕಡೆಗಳಿಂದ ರೋಗಿಗಳೊಂದಿಗೆ ಪೇತ್ರನ ಮನೆಗೆ ಬರಲಾರಂಭಿಸುತ್ತಾರೆ. ಸ್ವಲ್ಪದರಲ್ಲಿ ಇಡೀ ಊರೇ ಮನೆಯ ಮುಂದೆ ಒಟ್ಟಾಗುತ್ತದೆ! ಮತ್ತು ಯೇಸು, ಅವರ ಕಾಯಿಲೆಗಳು ಯಾವುದೇ ಆಗಿರಲಿ, ಎಲ್ಲಾ ರೋಗಿಗಳನ್ನೂ ವಾಸಿಮಾಡುತ್ತಾನೆ. ದೆವ್ವ ಹಿಡಿದಿದ್ದವರನ್ನು ಸಹ ಅವನು ಬಿಡಿಸುತ್ತಾನೆ. ಅವನು ಹೊರಗೆ ಹಾಕಿದ ದೆವ್ವಗಳು ಹೊರಗೆ ಬರುವಾಗ, ಅರಚುವದು: “ನೀನು ದೇವರ ಕುಮಾರನು.” ಆದರೆ ಯೇಸು ಅವುಗಳನ್ನು ಗದರಿಸಿ ಮಾತಾಡಲು ಬಿಡುವುದಿಲ್ಲ ಯಾಕಂದರೆ ಅವನು ಕ್ರಿಸ್ತನೆಂದು ಅವುಗಳಿಗೆ ಗೊತ್ತಿದೆ. ಮಾರ್ಕ 1:21-34; ಲೂಕ 4:31-41; ಮತ್ತಾಯ 8:14-17.

▪ ಯೇಸು ತನ್ನ ನಾಲ್ವರು ಶಿಷ್ಯರನ್ನು ಕರೆದ ನಂತರದ ಸಬ್ಬತ್‌ನಲ್ಲಿ ಸಭಾಮಂದಿರದಲ್ಲಿ ಏನಾಗುತ್ತದೆ?

▪ ಸಭಾಮಂದಿರವನ್ನು ಬಿಟ್ಟು ಹೋದ ಯೇಸು ಎಲ್ಲಿಗೆ ಹೋಗುತ್ತಾನೆ, ಮತ್ತು ಅಲ್ಲಿ ಅವನು ಯಾವ ಅದ್ಭುತವನ್ನು ನಡಿಸುತ್ತಾನೆ?

▪ ಆ ಬಳಿಕ ಅದೇ ಸಾಯಂಕಾಲ ಏನು ಸಂಭವಿಸುತ್ತದೆ?