ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಪೆರ್ನೌಮಿನ ಮನೆಗೆ ಹಿಂತೆರಳುವಿಕೆ

ಕಪೆರ್ನೌಮಿನ ಮನೆಗೆ ಹಿಂತೆರಳುವಿಕೆ

ಅಧ್ಯಾಯ 26

ಕಪೆರ್ನೌಮಿನ ಮನೆಗೆ ಹಿಂತೆರಳುವಿಕೆ

ಇಷ್ಟರೊಳಗೆ ಯೇಸುವಿನ ಪ್ರಖ್ಯಾತಿಯು ಉದ್ದಗಲಗಳಲ್ಲಿ ಬಹಳಷ್ಟು ಹಬ್ಬಿತ್ತು ಮತ್ತು ಅನೇಕ ಜನರು ಅವನು ವಾಸಿಸುತ್ತಿದ್ದ ದೂರದ ಏಕಾಂತ ಸ್ಥಳಗಳಿಗೆ ಪಯಣಿಸುತ್ತಿದ್ದರು. ಆದಾಗ್ಯೂ ಕೆಲವು ದಿನಗಳ ನಂತರ, ಗಲಿಲಾಯ ಸಮುದ್ರದ ಪಕ್ಕದ ಕಪೆರ್ನೌಮಿಗೆ ಅವನು ಹಿಂತೆರಳುತ್ತಾನೆ. ಅವನು ಮನೆಗೆ ಹಿಂತೆರಳಿದ್ದಾನೆಂಬ ಸುದ್ದಿಯು ಬಲುಬೇಗನೇ ನಗರದಲ್ಲೆಲ್ಲಾ ಹಬ್ಬುತ್ತದೆ ಮತ್ತು ಅವನಿದ್ದ ಮನೆಗೆ ಅನೇಕರು ಬರುತ್ತಾರೆ. ಫರಿಸಾಯರೂ, ನ್ಯಾಯಶಾಸ್ತ್ರಿಗಳೂ ಯೆರೂಸಲೇಮಿನಷ್ಟು ದೂರದಿಂದ ಬರುತ್ತಾರೆ.

ಗುಂಪು ಬಹಳ ಹೆಚ್ಚಾದುದರಿಂದ ಅವರೆಲ್ಲರೂ ಬಾಗಿಲಿನಲ್ಲಿ ಜಮಾಯಿಸಿದ್ದರು ಮತ್ತು ಒಳಗೆ ಪ್ರವೇಶಿಸಲು ಬೇರೆ ಯಾರಿಗೂ ಸ್ಥಳವಿರಲಿಲ್ಲ. ನಿಜವಾಗಿಯೂ ಒಂದು ಗಮನಾರ್ಹವಾದ ಘಟನೆಗಾಗಿ ಆ ವೇದಿಕೆ ಸಿದ್ಧವಾಗಿತ್ತು. ಆ ಸಂದರ್ಭದಲ್ಲಿ ಏನು ನಡೆಯಿತೋ ಅದು ಬಹಳ ಪ್ರಾಮುಖ್ಯತೆಯದ್ದು ಯಾಕಂದರೆ ಮಾನವ ನರಳುವಿಕೆಗೆ ಕಾರಣವಾದದ್ದನ್ನು ತೆಗೆದು ತಾನು ಬಯಸುವ ಎಲ್ಲರಿಗೆ ಆರೋಗ್ಯವನ್ನು ಪುನಃ ಸ್ಥಾಪಿಸುವ ಶಕ್ತಿಯು ಯೇಸುವಿಗಿತ್ತೆಂಬದನ್ನು ಗಣ್ಯಮಾಡಲು ಅದು ನಮಗೆ ಸಹಾಯ ಮಾಡುತ್ತದೆ.

ಯೇಸುವು ಗುಂಪಿಗೆ ಬೋಧಿಸುತ್ತಿರುವಾಗಲೇ, ಪಾರ್ಶ್ವವಾಯು ರೋಗಿಯನ್ನು ದೋಲಿಯಲ್ಲಿ ನಾಲ್ವರು ಮನೆಗೆ ತರುತ್ತಾರೆ. ಅವರ ಸ್ನೇಹಿತನನ್ನು ಯೇಸುವು ಗುಣಪಡಿಸುವಂತೆ ಅವರು ಬಯಸುತ್ತಿದ್ದರಾದರೂ, ಗುಂಪಿನ ದೆಸೆಯಿಂದ ಅವರಿಗೆ ಒಳ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಎಷ್ಟೊಂದು ನಿರಾಶೆ! ಆದರೂ, ಅವರು ಸುಲಭದಲ್ಲಿ ಬಿಡಲಿಲ್ಲ. ಚಪ್ಪಟೆಯ ಮಾಡಿನ ಮೇಲೆ ಹತ್ತಿ, ತೂತು ಮಾಡಿ ಯೇಸುವಿನ ಪಕ್ಕದಲ್ಲಿಯೇ ಪಾರ್ಶ್ವವಾಯು ರೋಗಿಯ ಮಂಚವನ್ನು ಇಳಿಸುತ್ತಾರೆ.

ಅಡ್ಡ ಬಂದದ್ದಕ್ಕಾಗಿ ಯೇಸುವು ರೇಗಿದನೋ? ಎಂದಿಗೂ ಇಲ್ಲ! ಬದಲಾಗಿ, ಅವರ ನಂಬಿಕೆಯಿಂದ ಅವನು ಆಳವಾಗಿ ಪ್ರಭಾವಿತನಾದನು. ಅವನು ಪಾರ್ಶ್ವವಾಯು ರೋಗಿಗೆ ಅಂದದ್ದು: “ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ.” ಆದರೆ ಯೇಸುವು ನಿಜವಾಗಿಯೂ ಪಾಪಗಳನ್ನು ಕ್ಷಮಿಸಶಕ್ತನೋ? ಶಾಸ್ತ್ರಿಗಳು ಮತ್ತು ಫರಿಸಾಯರು ಹಾಗೆಂದು ಎಣಿಸುವದಿಲ್ಲ. ಅವರು ಹೃದಯಗಳಲ್ಲಿ ಯೋಚಿಸುವದು: “ಇವನು ಯಾಕೆ ಮಾತಾಡುತ್ತಾನೆ? ಇದು ದೇವದೂಷಣೆ. ದೇವರೊಬ್ಬನೇ ಹೊರತು ಮತ್ತಾರು ಪಾಪಗಳನ್ನು ಕ್ಷಮಿಸಬಲ್ಲರು?”

ಅವರ ಯೋಚನೆಗಳನ್ನು ಬಲ್ಲವನಾಗಿ, ಯೇಸುವು ಅವರಿಗಂದದ್ದು: “ನೀವು ನಿಮ್ಮ ಹೃದಯಗಳಲ್ಲಿ ಯಾಕೆ ಹೀಗೆ ಅಂದುಕೊಳ್ಳುತ್ತೀರಿ? ಯಾವದು ಸುಲಭ? ನಿನ್ನ ಪಾಪಗಳನ್ನು ಕ್ಷಮಿಸಲ್ಪಟ್ಟಿವೆ ಅನ್ನುವದೋ? ಯಾ ಎದ್ದು ನಿನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆ ಅನ್ನುವದೋ?”

ಅನಂತರ, ಭೂಮಿಯ ಮೇಲೆ ಪಾಪಗಳನ್ನು ಕ್ಷಮಿಸಲು ತನಗೆ ಅಧಿಕಾರವಿದೆ ಮತ್ತು ಭೂಮಿಯ ಮೇಲೆ ಜೀವಿಸಿದ ಮನುಷ್ಯರಲ್ಲಿ ಖಂಡಿತವಾಗಿ ತಾನು ಒಬ್ಬನೇ ಮಹಾ ವ್ಯಕ್ತಿ ಎಂಬದನ್ನು ಜನರ ಗುಂಪಿಗೆ ಮತ್ತು ತನ್ನ ಠೀಕಾಕಾರರಿಗೆ ಸಹಾ ಪ್ರಕಟಪಡಿಸುವ ಒಂದು ಗಮನಾರ್ಹ ಪ್ರದರ್ಶನವನ್ನು ಮಾಡುತ್ತಾನೆ. ಅವನು ಪಾರ್ಶ್ವವಾಯು ಪೀಡಿತನ ಕಡೆಗೆ ತಿರುಗಿ, ಅಪ್ಪಣೆ ಕೊಟ್ಟದ್ದು: “ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು.” ಅವನು ಹೇಳಿದ ತಕ್ಷಣವೇ ಏಳುತ್ತಾನೆ, ಅವನ ಮಂಚವನ್ನು ಅವರೆಲ್ಲರ ಮುಂದೆ ಎತ್ತಿಕೊಂಡು ಹೋಗುತ್ತಾನೆ! ಜನರೆಲ್ಲರೂ ಬೆರಗಾಗಿ ದೇವರನ್ನು ಹೊಗಳುತ್ತಾರೆ ಮತ್ತು ಉದ್ಗರಿಸುವದು: “ಇದು ವರೆಗೆ ನಾವು ಇಂಥದ್ದನ್ನು ಎಂದಿಗೂ ನೋಡಿದ್ದೇ ಇಲ್ಲ”!

ರೋಗದೊಂದಿಗೆ ಪಾಪವನ್ನೂ, ಪಾಪಗಳ ಕ್ಷಮಾಪಣೆಯು ದೈಹಿಕ ಆರೋಗ್ಯ ಪಡೆಯುವಿಕೆಗೆ ಸಂಬಂಧಿಸಿರುವದನ್ನೂ ಯೇಸು ಹೇಳಿದ್ದನ್ನು ನೀವು ಗಮನಿಸಿದಿರೋ? ನಮ್ಮ ಮೊತ್ತಮೊದಲ ಹೆತ್ತವನಾದ ಆದಾಮನು ಪಾಪ ಮಾಡಿದನು ಮತ್ತು ಅವನಿಂದ ಬಾಧ್ಯತೆಯಾಗಿ ಪಡೆದ ಪಾಪದ ಪರಿಣಾಮವಾಗಿ ರೋಗ ಮತ್ತು ಮರಣವು ಬಂದಿದೆ ಎಂದು ಬೈಬಲು ವಿವರಿಸುತ್ತದೆ. ಆದರೆ, ದೇವರ ರಾಜ್ಯದ ಆಳಿಕ್ವೆಯ ಕೆಳಗೆ, ದೇವರನ್ನು ಪ್ರೀತಿಸುವ ಮತ್ತು ಸೇವಿಸುವ ಎಲ್ಲರ ಪಾಪಗಳನ್ನು ಯೇಸುವು ಕ್ಷಮಿಸುವನು, ತದನಂತರ ಎಲ್ಲಾ ರೋಗಗಳನ್ನು ನಿರ್ಮೂಲಿಸಲಾಗುವದು. ಅದು ಎಷ್ಟೊಂದು ಉತ್ತಮವಾಗಲಿದೆ! ಮಾರ್ಕ 2:1-12; ಲೂಕ 5:17-26; ಮತ್ತಾಯ 9:1-8; ರೋಮಾಪುರ 5:12, 17-19.

▪ ನಿಜವಾಗಿಯೂ ಒಂದು ಗಮನಾರ್ಹವಾದ ಘಟನೆಗೆ ಯಾವ ವೇದಿಕೆ ತಯಾರಾಗಿತ್ತು?

▪ ಯೇಸುವನ್ನು ಪಾರ್ಶ್ವವಾಯು ರೋಗಿಯು ತಲುಪಿದ್ದು ಹೇಗೆ?

▪ ನಾವೆಲ್ಲರೂ ಯಾಕೆ ಪಾಪಿಗಳಾಗಿದ್ದೇವೆ, ಆದರೆ ನಮ್ಮ ಪಾಪಗಳ ಕ್ಷಮಾಪಣೆ ಮತ್ತು ಪರಿಪೂರ್ಣ ಆರೋಗ್ಯದ ಪುನಃಸ್ಥಾಪನೆ ಸಾಧ್ಯವೆಂಬುದಕ್ಕೆ ಯೇಸು ಹೇಗೆ ನಿರೀಕ್ಷೆಯನ್ನೊದಗಿಸಿದನು?