ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕುರೀಹಟ್ಟಿಗಳು ಮತ್ತು ಕುರುಬನು

ಕುರೀಹಟ್ಟಿಗಳು ಮತ್ತು ಕುರುಬನು

ಅಧ್ಯಾಯ 80

ಕುರೀಹಟ್ಟಿಗಳು ಮತ್ತು ಕುರುಬನು

ಯೇಸುವು ಯೆರೂಸಲೇಮಿಗೆ ಪ್ರತಿಷ್ಠೆಯ ಹಬ್ಬಕ್ಕೆ ಯಾ ಹನುಕ್ಕಹ ಅಂದರೆ ದೇವಾಲಯವನ್ನು ಯೆಹೋವನಿಗೆ ಪುನಃ ಪ್ರತಿಷ್ಠಾಪನೆಯನ್ನು ಆಚರಿಸುವ ಹಬ್ಬಕ್ಕೆ ಬಂದಿದ್ದನು. ಸಾ.ಶ.ಪೂ. 168ರಲ್ಲಿ, ಸುಮಾರು 200 ವರ್ಷಗಳಷ್ಟು ಮೊದಲು, ಅಂಟಿಯೋಕಸ್‌ ಎಪಿಫಾನಸ್‌ನು ಯೆರೂಸಲೇಮನ್ನು ಸೆರೆಹಿಡಿದು, ದೇವಾಲಯವನ್ನು ಮತ್ತು ಅದರ ಯಜ್ಞವೇದಿಯನ್ನು ಹಾಳುಗೆಡವಿದನು. ಆದಾಗ್ಯೂ, ಮೂರು ವರ್ಷಗಳ ನಂತರ ಯೆರೂಸಲೇಮನ್ನು ಪುನಃ ಹಿಂದಕ್ಕೆ ವಶಪಡಿಸಿಕೊಳ್ಳಲಾಯಿತು ಮತ್ತು ದೇವಾಲಯವನ್ನು ಪುನಃ ಪ್ರತಿಷ್ಠಾಪಿಸಲಾಯಿತು. ಅದರ ನಂತರ, ವಾರ್ಷಿಕವಾಗಿ ಮರುಪ್ರತಿಷ್ಠೆಯ ಆಚರಣೆಯು ನಡಿಸಲ್ಪಡುತ್ತಿತ್ತು.

ಈ ಪ್ರತಿಷ್ಠೆಯ ಹಬ್ಬವು ಚಿಸ್ಲೆವ್‌ 25ರಲ್ಲಿ ಜರುಗುತ್ತಿತ್ತು, ಅದು ನಮ್ಮ ಆಧುನಿಕ ಕ್ಯಾಲೆಂಡರಿನಲ್ಲಿ ನವಂಬರ ತಿಂಗಳ ಕೊನೆಭಾಗ ಮತ್ತು ದಶಂಬರದ ಆರಂಭದ ಭಾಗಕ್ಕೆ ಸರಿದೂಗುತ್ತದೆ. ಈ ರೀತಿಯಲ್ಲಿ, ಸಾ.ಶ. 33ರ ಬಹುಮುಖ್ಯವಾದ ಪಸ್ಕಹಬ್ಬದ ತನಕ ನೂರು ದಿನಗಳಿಗಿಂತ ಸ್ವಲ್ಪ ಹೆಚ್ಚು ಸಮಯ ಮಾತ್ರ ಇತ್ತು. ಇದು ಚಳಿ ಹವಾಮಾನದ ಋತುವಾಗಿದ್ದುದರಿಂದ, ಅಪೊಸ್ತಲ ಯೋಹಾನನು ಅದನ್ನು “ಚಳಿಕಾಲ” ಎಂದು ಕರೆದಿರುವನು.

ಯೇಸುವು ಈಗ ಒಂದು ದೃಷ್ಟಾಂತವನ್ನು ಉಪಯೋಗಿಸುತ್ತಾನೆ. ಅದರಲ್ಲಿ ಅವನು ಮೂರು ಕುರೀಹಟ್ಟಿಗಳ ಮತ್ತು ಒಬ್ಬ ಒಳ್ಳೇ ಕುರುಬನೋಪಾದಿ ತನ್ನ ಪಾತ್ರದ ಕುರಿತು ಹೇಳುತ್ತಾನೆ. ಅವನು ತಿಳಿಸುವ ಮೊದಲ ಕುರೀಹಟ್ಟಿಯು ಮೋಶೆಯ ನಿಯಮದೊಡಂಬಡಿಕೆಯ ಏರ್ಪಾಡಿನೊಂದಿಗೆ ಗುರುತಿಸಲ್ಪಟ್ಟಿದೆ. ನಿಯಮಶಾಸ್ತ್ರವು ಒಂದು ಬೇಲಿಯೋಪಾದಿ ಇದ್ದು, ದೇವರೊಂದಿಗೆ ಈ ವಿಶೇಷ ಒಡಂಬಡಿಕೆಯಲ್ಲಿರದಂತಹ ಜನರ ಭೃಷ್ಟಗೊಳಿಸುವ ಆಚಾರಗಳಿಂದ ಯೆಹೂದ್ಯರನ್ನು ಪ್ರತ್ಯೇಕಿಸುತ್ತಿತ್ತು. ಯೇಸುವು ವಿವರಿಸುವದು: “ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಕುರೀಹಟ್ಟಿಯೊಳಗೆ ಬಾಗಲಿಂದ ಬಾರದೆ ಮತ್ತೆಲ್ಲಿಂದಾದರೂ ಹತ್ತಿಬರುವವನು ಕಳ್ಳನೂ ಸುಲುಕೊಳ್ಳುವವನೂ ಆಗಿದ್ದಾನೆ. ಬಾಗಲಿಂದ ಒಳಗೆ ಬರುವವನು ಆ ಕುರೀಗಳ ಕುರುಬನು.”

ಇತರರು ಬಂದು ತಾವೇ ಆ ಮೆಸ್ಸೀಯನು ಯಾ ಕ್ರಿಸ್ತನೆಂದು ವಾದಿಸಿದ್ದರು, ಆದರೆ ಅವರು ನಿಜ ಕುರುಬರಾಗಿರಲಿಲ್ಲ, ಅವರ ಕುರಿತು ಯೇಸುವು ಮುಂದರಿಸುತ್ತಾ ಅನ್ನುವುದು: “ಬಾಗಲು ಕಾಯುವವನು ಅವನಿಗೆ ಬಾಗಲನ್ನು ತೆರೆಯುತ್ತಾನೆ, ಕುರಿಗಳು ಅವನ ಸ್ವರಕ್ಕೆ ಕಿವಿಗೊಡುತ್ತವೆ. ಅವನು ಸ್ವಂತ ಕುರಿಗಳನ್ನು ಹೆಸರು ಹೇಳಿ ಕರೆದು ಹೊರಗೆ ಬಿಟ್ಟಮೇಲೆ ತಾನು ಅವುಗಳ ಮುಂದೆ ಹೋಗುತ್ತಾನೆ. . . . ಅವು ಅನ್ಯರ ಸ್ವರವನ್ನು ತಿಳಿಯುವದಿಲ್ಲ; ಅನ್ಯನ ಹಿಂದೆ ಹೋಗದೆ ಅವನ ಬಳಿಯಿಂದ ಓಡಿಹೋಗುತ್ತವೆ.”

ಮೊದಲನೆಯ ಕುರೀಹಟ್ಟಿಯ “ಬಾಗಲು ಕಾಯುವವನು” ಸ್ನಾನಿಕನಾದ ಯೋಹಾನನಾಗಿದ್ದನು. ದ್ವಾರಪಾಲಕನೋಪಾದಿ ಯೋಹಾನನು ಯೇಸುವಿಗೆ ಬಾಗಲನ್ನು ‘ತೆರೆದದ್ದು’ ಆತನು ಹುಲ್ಲುಗಾವಲಿಗೆ ನಡಿಸಲಿಕ್ಕಿದ್ದ ಆ ಸಾಂಕೇತಿಕ ಕುರಿಗಳಿಗೆ ಅವನ ಗುರುತನ್ನು ಮಾಡಿಸಿದ ಮೂಲಕವೇ. ಯೇಸುವು ಹೆಸರು ಹಿಡಿದು ಕರೆಯುವ ಮತ್ತು ಹೊರಗೆ ನಡಿಸಿಕೊಂಡು ಹೋಗುವ ಈ ಕುರಿಗಳು ಇನ್ನೊಂದು ಕುರೀಹಟ್ಟಿಯೊಳಗೆ ಸೇರಿಸಲ್ಪಡುತ್ತವೆ, ಅವನು ವಿವರಿಸುವದು: “ನಾನು ನಿಜನಿಜವಾಗಿ ನಿಮಗೆ ಹೇಳುತ್ತೇನೆ, ಕುರಿಗಳಿಗೆ ನಾನೇ ಬಾಗಲಾಗಿದ್ದೇನೆ,” ಅಂದರೆ ಒಂದು ಹೊಸ ಕುರೀಹಟ್ಟಿಯ ಬಾಗಲು. ಯೇಸುವು ಹೊಸ ಒಡಂಬಡಿಕೆಯನ್ನು ತನ್ನ ಶಿಷ್ಯರೊಂದಿಗೆ ಸ್ಥಾಪಿಸಿದಾಗ ಮತ್ತು ಪಂಚಾಶತಮ ದಿನದಲ್ಲಿ ಪರಲೋಕದಿಂದ ಪವಿತ್ರಾತ್ಮವನ್ನು ಸುರಿಸಿದಾಗ, ಅವರು ಈ ಹೊಸ ಕುರೀಹಟ್ಟಿಯೊಳಗೆ ಸೇರಿಸಲ್ಪಟ್ಟರು.

ತನ್ನ ಪಾತ್ರವನ್ನು ಇನ್ನಷ್ಟು ವಿವರಿಸುತ್ತಾ, ಯೇಸುವು ಹೇಳುವದು: “ನಾನೇ ಆ ಬಾಗಲು; ನನ್ನ ಮುಖಾಂತರವಾಗಿ ಯಾವನಾದರೂ ಒಳಗೆ ಹೋದರೆ ಸುರಕ್ಷಿತವಾಗಿದ್ದು ಒಳಗೆ ಹೋಗುವನು, ಹೊರಗೆ ಬರುವನು, ಮೇವನ್ನು ಕಂಡುಕೊಳ್ಳುವನು. . . . ನಾನಾದರೋ ಅವುಗಳಿಗೆ ಜೀವವು ಇರಬೇಕೆಂತಲೂ ಅದು ಸಮೃದ್ಧಿಯಾಗಿ ಇರಬೇಕೆಂತಲೂ ಬಂದೆನು. . . . ನಾನೇ ಒಳ್ಳೇ ಕುರುಬನು; ತಂದೆಯು ನನ್ನನ್ನು ತಿಳಿದಿರುವಂತೆಯೇ ನಾನು ನನ್ನ ಕುರಿಗಳನ್ನು ತಿಳಿದಿದ್ದೇನೆ, ನನ್ನ ಕುರಿಗಳು ನನ್ನನ್ನು ತಿಳಿದವೆ; ಮತ್ತು ಕುರಿಗಳಿಗೋಸ್ಕರ ನನ್ನ ಪ್ರಾಣವನ್ನು ಕೊಡುತ್ತೇನೆ.”

ಇತ್ತೇಚೆಗೆ, ಯೇಸುವು ಅವನ ಹಿಂಬಾಲಕರನ್ನು ಹೀಗನ್ನುತ್ತಾ ಸಂತೈಸಿದನು: “ಚಿಕ್ಕ ಹಿಂಡೇ, ಹೆದರಬೇಡ; ಆ ರಾಜ್ಯವನ್ನು ನಿಮಗೆ ದಯಪಾಲಿಸುವದಕ್ಕೆ ನಿಮ್ಮ ತಂದೆಯು ಸಂತೋಷವುಳ್ಳವನಾಗಿದ್ದಾನೆ.” ಕಟ್ಟಕಡೆಗೆ 1,44,000 ಮಂದಿ ಸಂಖ್ಯೆಗೆ ತಲುಪುವ ಈ ಚಿಕ್ಕ ಹಿಂಡು ಈ ಹೊಸ ಇಲ್ಲವೆ ಎರಡನೆಯ ಕುರೀಹಟ್ಟಿಯೊಳಗೆ ಬರುತ್ತದೆ. ಆದರೆ ಯೇಸುವು ಮುಂದರಿಸುತ್ತಾ ಅವಲೋಕಿಸಿದ್ದು: “ಇದಲ್ಲದೆ ಈ ಹಟ್ಟಿಗೆ ಸೇರದಿರುವ ಇನ್ನು ಬೇರೆ ಕುರಿಗಳು ನನಗೆ ಅವೆ, ಅವುಗಳನ್ನೂ ನಾನು ತರಬೇಕು; ಅವು ನನ್ನ ಸ್ವರಕ್ಕೆ ಕಿವಿಗೊಡುವವು; ಆಗ ಒಂದೇ ಹಿಂಡು ಆಗುವದು, ಒಬ್ಬನೇ ಕುರುಬನಿರುವನು.”

“ಬೇರೆ ಕುರಿಗಳು” “ಈ ಹಟ್ಟಿಗೆ ಸೇರದಿರುವ”ದರಿಂದ, ಅವು ಇನ್ನೊಂದು ಹಟ್ಟಿಯವುಗಳಾಗಿರಬೇಕು, ಮೂರನೆಯದ್ದು. ಈ ಕೊನೆಯ ಎರಡು ಹಟ್ಟಿಗಳು ಇಲ್ಲವೆ ಕುರಿಗಳ ದೊಡ್ಡಿಗಳು ಬೇರೆ ಬೇರೆ ಅಂತ್ಯಫಲಗಳುಳ್ಳವುಗಳು. ಒಂದು ಹಟ್ಟಿಯಲ್ಲಿರುವ “ಚಿಕ್ಕ ಹಿಂಡು” ಕ್ರಿಸ್ತನೊಂದಿಗೆ ಪರಲೋಕದಲ್ಲಿ ಆಳಲಿರುವರು ಮತ್ತು ಇನ್ನೊಂದು ಹಟ್ಟಯ “ಬೇರೆ ಕುರಿಗಳು” ಪರದೈಸ ಭೂಮಿಯ ಮೇಲೆ ಜೀವಿಸಲಿರುವರು. ಬೇರೆ ಬೇರೆ ಎರಡು ಹಟ್ಟಿಗಳಲ್ಲಿರುವದಾದರೂ, ಈ ಕುರಿಗಳಿಗೆ ಯಾವುದೇ ಮತ್ಸರ ಇಲ್ಲ ಯಾ ತಾವು ಪ್ರತ್ಯೇಕಿಸಲ್ಪಟ್ಟಿದ್ದೇವೆ ಎಂಬ ಭಾವನೆ ಕೂಡ ಇಲ್ಲ, ಯಾಕಂದರೆ ಯೇಸುವು ಹೇಳಿದಂತೆ, ಅವರು “ಒಂದೇ ಕುರುಬನ” ಕೆಳಗೆ “ಒಂದೇ ಹಿಂಡು” ಆಗುವರು.

ಒಳ್ಳೇ ಕುರುಬನಾದ ಯೇಸುಕ್ರಿಸ್ತನು ಎರಡೂ ಹಟ್ಟಿಗಳ ಕುರಿಗಳಿಗಾಗಿ ಸ್ವಇಷ್ಟದಿಂದ ತನ್ನ ಪ್ರಾಣವನ್ನು ಕೊಡುತ್ತಾನೆ. “ನನ್ನಷ್ಟಕ್ಕೆ ನಾನೇ ಅದನ್ನು ಕೊಡುತ್ತೇನೆ,” ಅವನನ್ನುವದು. “ಅದನ್ನು ಕೊಡುವದಕ್ಕೆ ನನಗೆ ಅಧಿಕಾರ ಉಂಟು, ಅದನ್ನು ತಿರಿಗಿ ಪಡೆದುಕೊಳ್ಳುವದಕ್ಕೆ ನನಗೆ ಅಧಿಕಾರ ಉಂಟು; ಈ ಅಪ್ಪಣೆಯನ್ನು ನನ್ನ ತಂದೆಯಿಂದ ಹೊಂದಿದ್ದೇನೆ.” ಯೇಸುವು ಇದನ್ನು ಹೇಳಿದಾಗ ಯೆಹೂದ್ಯರಲ್ಲಿ ಪುನಃ ಭೇದವುಂಟಾಯಿತು.

ಅವರಲ್ಲಿ ಅನೇಕರು ಹೇಳಿದ್ದು: “ಅವನಿಗೆ ದೆವ್ವಹಿಡಿದದೆ, ಹುಚ್ಚುಹಿಡಿದದೆ. ಯಾಕೆ ಅವನ ಮಾತು ಕೇಳುತ್ತೀರಿ?” ಇತರರು ಪ್ರತಿಕ್ರಿಯಿಸಿದ್ದು: “ಇವು ದೆವ್ವ ಹಿಡಿದವನ ಮಾತುಗಳಲ್ಲ.” ಅನಂತರ ಕೆಲವು ತಿಂಗಳುಗಳ ಹಿಂದೆ ಒಬ್ಬ ಹುಟ್ಟುಕುರುಡನನ್ನು ಗುಣಮಾಡಿದ ವಿಷಯವನ್ನು ಪ್ರಾಯಶಃ ಸೂಚಿಸುತ್ತಾ, ಅವರು ಕೂಡಿಸಿದ್ದು: “ದೆವ್ವವು ಕುರುಡರಿಗೆ ಕಣ್ಣು ಕೊಡಬಲ್ಲದೇ?” ಯೋಹಾನ 10:1-22; 9:1-7; ಲೂಕ 12:32; ಪ್ರಕಟನೆ 14:1, 3; 21:3, 4; ಕೀರ್ತನೆ 37:29.

▪ ಪ್ರತಿಷ್ಠೆಯ ಹಬ್ಬ ಯಾವುದು, ಮತ್ತು ಅದು ಯಾವಾಗ ಆಚರಿಸಲ್ಪಡುತ್ತದೆ?

▪ ಮೊದಲನೆಯ ಕುರೀಹಟ್ಟಿ ಯಾವುದು, ಮತ್ತು ಅದರ ಬಾಗಲು ಕಾಯುವವನು ಯಾರು?

▪ ಕುರುಬನಿಗೆ ದ್ವಾರಪಾಲಕನು ಹೇಗೆ ತೆರೆಯುತ್ತಾನೆ, ಮತ್ತು ಅನಂತರ ಕುರಿಗಳು ಯಾವುದರಲ್ಲಿ ಸೇರಿಸಲ್ಪಡುವವು?

▪ ಒಳ್ಳೇ ಕುರುಬನ ಎರಡು ಹಟ್ಟಿಗಳಲ್ಲಿ ಯಾರೆಲ್ಲಾ ಕೂಡಿದ್ದಾರೆ ಮತ್ತು ಅವರು ಎಷ್ಟು ಹಿಂಡುಗಳಾಗುತ್ತಾರೆ?